Sunday, 20 April 2014

ದೇಶ ವಿಭಜನೆಯ ಕಥೆಗಳು- ರಕ್ಷಕ                                       ರಕ್ಷಕ

ದಿನ ಮತ್ತೇ ನಿನ್ನ ಕುರಿತು ಯೋಚಿಸುತ್ತಿದ್ದೇನೆ. ಯಾವಾಗಲೂ ನೀನು ಅನಿರೀಕ್ಷಿತವಾಗಿ ಹೀಗೆ ನನಗೆ ನೆನಪಾಗುತ್ತೀಯ. ನನ್ನ ಬದುಕಿನಲ್ಲಿ ಸಂಭವಿಸುವ ಪ್ರತಿ ಘಟನೆಗಳ ನಡುವೆ ನಿನ್ನನ್ನು ಪದೇ ಪದೇ ನೆನಪಿಸಿಕೊಳ್ಳುತ್ತೇನೆ. ನನ್ನ ಬದುಕಿನ ಬಾಂದಳದಲ್ಲಿ  ಸೂರ್ಯನ ಹೊಂಬೆಳಕು ಬಿದ್ದು, ಕತ್ತಲು ಮರೆಗೆ ಸರಿಯುವಾಗ, ನನ್ನ ಬದುಕೆಂಬ ಹೂವಿನ ಕಣಿವೆಯಲ್ಲಿ ತಂಗಾಳಿ ಬೀಸುವಾಗ, ಸೂರ್ಯಕಾಂತಿಯ ಹೂವುಗಳು ಸೂರ್ಯನಿಗೆ ಮುಖಮಾಡಿ ನಗುವಾಗ, ನನ್ನ ಮಗ ತನ್ನ ಶಾಲೆಯ ಚರ್ಚಾಸ್ಪರ್ಧೆಯಲ್ಲಿ ವಿಜೇತನಾಗಿ ಕೈಯಲ್ಲಿ ಪಾರಿತೋಷಕ ಹಿಡಿದು ಜಿಂಕೆ ಮರಿಯಂತೆ  ಕುಪ್ಪಳಿಸುತ್ತಾ ಮನೆಯತ್ತ ಓಡಿ ಬರುವಾಗ, ನನ್ನ ಮಗಳು, ಜಪಾನಿನ ಇಕಬಾನೆ ಕಲೆಯಲ್ಲಿ ಹೊಸದೊಂದು ಮಾದರಿಯನ್ನು ಸೃಷ್ಟಿಸಿ, ಕಿಲ ಕಿಲನೆ ನಗುವಾಗ, ನನ್ನ ಪತ್ನಿ ನನಗೆ ಇಷ್ಟವಾದ ಹಸಿ ಬಟಾಣಿ ಮತ್ತು ಆಲೂಗೆಡ್ಡೆಯ ಪಲಾವ್ ಮಾಡಿ, ನನ್ನೆದುರು ತಂದಿಟ್ಟು ತನ್ನ ಸೀರೆಯ ಸೆರಗಿನ ತುದಿಯಲ್ಲಿ ಹಣೆಯ ಬೆವರನ್ನು ಒರೆಸಿಕೊಳ್ಳುತ್ತಾ ನನ್ನತ್ತ ನೋಡಿ ಮುಗುಳು ನಗೆ ಬೀರಿದಾಗ ನೀನು ನೆನಪಾಗುತ್ತೀಯ. ನನ್ನ ಜೀವನದ ಪ್ರತಿ ಸುಖದ ಕ್ಷಣಗಳಲ್ಲಿ ನಿನ್ನನ್ನು ಹೃದಯ ತುಂಬಿ ನೆನೆಯುತ್ತೀನಿ. ಏಕೆಂದರೆ, ನಾನೀಗ ಬದುಕುತ್ತಿರುವ ಸುಂದರ ಬದುಕು ನೀನಿತ್ತ ಉಡುಗೊರೆ.
ದಿನ ನಿನ್ನನ್ನು ನೆನಪಿಸಿಕೊಳ್ಳಲು ಒಂದು ಕಾರಣವಿತ್ತು. ನನ್ನ ಮಗಳಿಗೆ ಸದಾ ಕೆಲವು ಜೋಕ್ ಗಳನ್ನು ಹೇಳಿ ಕುಟುಂಬದ ಸದಸ್ಯರನ್ನು ನಗಿಸುವ ಹವ್ಯಾಸ. ಯಾವಾಗಲೂ ಮನೆಯಲ್ಲಿ ವೈದ್ಯರ ಜೋಕುಗಳು, ವಕೀಲರ ಜೋಕುಗಳು, ಗಂಡ ಹೆಂಡತಿಯರ ನಡುವಿನ ಜೋಕುಗಳು ಹೀಗೆ ನೂರಾರು ಜೋಕುಗಳನ್ನು ನೆನಪಿನಲ್ಲಿಟ್ಟುಕೊಂಡು ಹೇಳುತ್ತಿರುತ್ತಾಳೆ. ದಿನ ಲಾರಿ ಚಾಲಕರ ಜೋಕುಗಳನ್ನು ಆಕೆ ಹೇಳಲು ಆರಂಭಿಸುತ್ತಿದ್ದಂತೆ ನನಗೆ ನಿನ್ನ ನೆನಪಾಯಿತು. ಕಣ್ಣುಗಳು ಹನಿಗೂಡಿದವು. ಅದನ್ನು ಅವಳಿಗೆ ತೋರ್ಪಡಿಸದೆ ನನ್ನ ಕೊಠಡಿಗೆ ಬಂದು ಕುಳಿತೆ. ಹಾಲ್ ನಲ್ಲಿ ತನ್ನ ಅಮ್ಮ ಮತ್ತು ಅಣ್ಣನಿಗೆ ಜೋಕುಗಳನ್ನು ಹೇಳುತ್ತಾ, ದಿನ ಪಪ್ಪಾ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಕಥೆ ಬರೆಯುತ್ತಾರೆ ಎನ್ನುವ  ಅವಳ ಮಾತು ನನ್ನ ಕಿವಿಗೆ ಬಿದ್ದಿತು. ನನ್ನ  ಮುದ್ದಿನ ಮಗಳ  ಮಾತಿನಿಂದ ಸ್ಪೂರ್ತಿಗೊಂಡವನಂತೆ ಕಥೆ ಬರೆಯಲು ಆರಂಭಿಸಿದ್ದೇನೆ. ಎದೆಯಲ್ಲಿ ಮಡುವುಗಟ್ಟಿರುವ ನಿನ್ನ ಕುರಿತಾದ  ನೆನಪುಗಳು ಒಂದೊಂದಾಗಿ ಅಕ್ಷರ ರೂಪ ತಾಳುತ್ತಿವೆ. ಮುವತ್ತಾರು ವರ್ಷಗಳ ಹಿಂದಿನ ಘಟನೆ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚ ಹಸುರಾಗಿದೆ. ಹಾಗಾಗಿ ನಿನ್ನ ಕುರಿತು  ನಾನೇಕೆ ಕಥೆ ಬರೆಯಬಾರದು?
1947 ಸೆಪ್ಟಂಬರ್ ತಿಂಗಳ ಮೋಡ ಮುಸುಕಿದ ದಿನ ನನಗಿನ್ನೂ ನೆನಪಿದೆ. ಅಂದು ಬೆಳಗಿನ ಜಾವ ನಾವೆಲ್ಲಾ ತಲ್ಲಣದಿಂದ ನಿನ್ನ ಲಾರಿಯನ್ನೇರಿ ಕುಳಿತಿದ್ದೆವು. ನೀನು ಲಾರಿಯ ಚಾಲಕನ ಸ್ಥಾನದಲ್ಲಿ ಕುಳಿತಿದ್ದೆ. ಲಾರಿ ಬದಿಯ ಕನ್ನಡಿಯಲ್ಲಿ ಒಮ್ಮೆ ನಿನ್ನನ್ನು ನೋಡಿದಾಗ ಪಠಾಣನಂತೆ ಕಾಣುತ್ತಿದ್ದೆ. ನಿನ್ನ ತಲೆಯ ಮೇಲೆ ಕಪ್ಪು ವಸ್ತ್ರದಲ್ಲಿ ಸುತ್ತಿದ ಟೋಪಿಯಂತಹ ರುಮಾಲಿತ್ತು. ಹೊರಗೆ ಮಂಜು ಮುಸುಕಿದ ವಾತಾವರಣದಲ್ಲಿ ಆಗಸ ಮೋಡಗಳಿಂದ ಕವಿದಿತ್ತು. ಲಾರಿಯ ಒಳಗೆ ಕುಳಿತಿದ್ದ ಪ್ರಯಾಣಿಕರು ಚಳಿಯಲ್ಲೂ ಬೆವರುತ್ತಿದ್ದರು. ಎಲ್ಲರ ಹೃದಯಗಳು ಜೀವ ಭಯದಿಂದ ಅವರವರ ಬಾಯಿಗೆ ಬಂದಿದ್ದವು. ಭಯದ ವಾತಾವರಣದಲ್ಲಿ ನಾನು ನನ್ನ ಭವಿಷ್ಯವನ್ನು ನಿನ್ನ ಕೈಗೆ ಒಪ್ಪಿಸಿದ್ದೆ.  ಗ್ರೀಕ್ ಯೋಧ ಮತ್ತು ಆಪ್ಘನ್ ಪಠಾಣ್ ಇವರುಗಳ ಮಿಶ್ರಣದಿಂದ ಎರಕ ಹೊಯ್ದಂತೆ ಕಾಣುತ್ತಿದ್ದ ನಿನ್ನ ಸುಂದರವಾದ ಮುಖದಲ್ಲಿ ಭಾರತದ ವಾಯುವ್ಯ ಭಾಗದ ಆಪ್ಘನ್ ಗುಡ್ಡಗಾಡು ಪ್ರದೇಶವೇ ಪತ್ರಿಬಿಂಬಿಸುತ್ತಿತ್ತು.
ಇದ್ದಕ್ಕಿಂದ್ದಂತೆ ನಾವು ಕುಳಿತಿದ್ದ ಲಾರಿಯೊಳಗಿನ ಪ್ರಯಾಣಿಕನೊಬ್ಬನಿಂದನೋಡಿ ಅಲ್ಲಿ ಬೆಳಿಗ್ಗೆ ಹೊರಟಿದ್ದ ಲಾರಿಯೊಂದು ಮತ್ತೇ ವಾಪಸ್ ಬಂದಿದೆಎಂಬ ಮಾತು ತೂರಿ ಬಂತು.
ನಾವೆಲ್ಲವೂ ಕುತೂಹಲದಿಂದ ವಾಪಸ್ ಬಂದ ಲಾರಿಯತ್ತ ಮುಖ ಮಾಡಿದೆವು. ಬೆಳಗಿನ ಜಾವ ಆರು ಗಂಟೆಗೆ ಪ್ರಯಾಣಿಕರನ್ನು ಹೊತ್ತು ರಾವಲ್ಪಿಂಡಿಯಿಂದ ಶ್ರೀನಗರಕ್ಕೆ ಹೊರಟಿದ್ದ ಲಾರಿ, ವಾಪಸ್ ಬಂದಿತ್ತು. ಭಯ ಮತ್ತು ಭೀತಿಯಿಂದ ನರಳುತ್ತಿದ್ದ ಲಾರಿಯೊಳಗಿನ ಪ್ರಯಾಣಿಕರ ಬಾಯಲ್ಲಿ ಮಾತುಗಳು ಹೂತು ಹೋಗಿದ್ದವು. ಆದರೆ ಲಾರಿ ಚಾಲಕನಾದ ಮುಸ್ಲಿಂ ವ್ಯಕ್ತಿ ನಡೆದ ಘಟನೆಯನ್ನು ನಮಗೆ ವಿವರಿಸಿದ. ರಾವಲ್ಪಿಂಡಿಯಿಂದ ಶ್ರೀನಗರಕ್ಕೆ ಹೊರಟ ಲಾರಿಯನ್ನು ಗೋರಾಗಲ್ಲಿಯ ಬಳಿ ತಡೆದು ಲಾರಿಯ ಚಕ್ರಗಳಿಗೆ  ಗುಂಡು ಹಾರಿಸಿದ ದುಷ್ಕರ್ಮಿಗಳ ಕೃತ್ಯವನ್ನು ವಿವರಿಸಿದ. ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಿವರ್ಸ್ ಗೇರ್ ನಲ್ಲಿ ಅತ್ಯಂತ ವೇಗವಾಗಿ ಲಾರಿಯನ್ನು ಹಿಮ್ಮುಖವಾಗಿ ನಾಲ್ಕು ಫರ್ಲಾಂಗ್ ಗಳ ದೂರ ಓಡಿಸಿಕೊಂಡು ಬಂದುದನ್ನು ನಮಗೆ ವಿವರಿಸಿದ. ಲಾರಿಯೊಳಗೆ ಬದುಕಿಳಿದು ಬಂದ ಪ್ರಯಾಣಿಕರ ಮುಖದಲ್ಲಿ ಜೀವಕಳೆಯಾಗಲಿ ಅಥವಾ ಸಂತೋಷವಾಗಲಿ ಇರಲಿಲ್ಲ. ರಾವಲ್ಪಿಂಡಿಯಿಂದ ಭಾರತದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳು ಬಂದಾಗಿದ್ದವು. ರೈಲಿನಲ್ಲಿ ಭಾರತದತ್ತ ಪ್ರಯಾಣಿಸುತ್ತಿದ್ದ ಜನರು ಜೇಲಂ ನದಿಯ ಸೇತುವೆಯನ್ನು ದಾಟುವ ಮೊದಲೇ ವಜೀರಾಬಾದ್ ಪಟ್ಟಣದ ಬಳಿ ಸಾಮೂಹಿಕ ಹತ್ಯೆಗೆ ಒಳಗಾಗಿದ್ದರು. ರಸ್ತೆಯಲ್ಲಿ, ರೈಲ್ವೆ ನಿಲ್ದಾಣದಲ್ಲಿ, ಹೊಲದಲ್ಲಿ ಎಲ್ಲೆಂದರಲ್ಲಿ ಮನುಷ್ಯರ ರುಂಡ ಮುಂಡಗಳು ಚೆಲ್ಲಾಡಿ ಬೀದಿ ನಾಯಿಗಳು ಮತ್ತು ರಣ ಹದ್ದುಗಳಿಗೆ ಆಹಾರವಾಗಿದ್ದವು. ಕಳೆದ ಹತ್ತು ದಿನಗಳಿಂದ ಯಾವೊಂದು ರೈಲೂ ಲಾಹೋರ್ ನಗರವನ್ನು ದಾಟಿ ಭಾರತದ ಅಮೃತ್ಸರದತ್ತ ಪ್ರಯಾಣ ಬೆಳಸಿರಲಿಲ್ಲ. ಸ್ಥಿತಿಯಲ್ಲಿ ನಮಗೆ ಜೀವ ಉಳಿಸಿಕೊಳ್ಳಲು ರಸ್ತೆ ಮಾರ್ಗವೇ ಏಕೈಕ ಪರಿಹಾರವಾಗಿತ್ತು. ಆದರೆ ರಸ್ತೆ ಬದಿಯುದ್ದಕ್ಕೂ  ಪೊದೆಗಳಲ್ಲಿ ಅಡಗಿ ಕುಳಿತಿದ್ದ ಬುಟಕಟ್ಟು ಜನಾಂಗದ ದ್ವೇಷದ ದಳ್ಳುರಿಗೆ ಸಿಲುಕುವ ಅಪಾಯ ನಮಗೆ ಎದುರಾಗಿತ್ತು. ರಾವಲ್ಪಿಂಡಿ ನಗರವೊಂದರಲ್ಲೇ ಚೂರಿ ಇರಿತಕ್ಕೆ ಸಾವಿರಾರು ಜನ ಬಲಿಯಾಗಿದ್ದರು. ಸಾವಿನ ಪ್ರಮಾಣ ದಿನೇ ದಿನೇ ಏರುತ್ತಿತ್ತು.

ಲಾರಿಯ ತುಂಬೆಲ್ಲಾ ಆವರಿಸಿದ ನೀರವ ಮೌನದ ನಡುವೆ ನೀನೊಮ್ಮೆ ಹಿಂತಿರುಗಿ ಕುಳಿತಿದ್ದ ನಮ್ಮತ್ತ ತಿರುಗಿ ನೋಡಿದೆ. ಎಲ್ಲರ ಮುಖದಲ್ಲಿನ ನಿಸ್ತೇಜ ಕಳೆ, ಬಾಡಿ ಹೋದ ಜೀವದ ಆಸೆ ನಮ್ಮೆಲ್ಲರ ಕಣ್ಣುಗಳಲ್ಲಿ ವ್ಯಕ್ತವಾಗುತ್ತಿತ್ತು. ಸುತ್ತಲಿನ ಭಯದ ವಾತಾವರಣ  ನಮ್ಮೆಲ್ಲರ ಎದೆಯನ್ನು ಆಕ್ರಮಿಸಿಕೊಂಡಿತ್ತು. ನೇರವಾಗಿ ನಮ್ಮನ್ನು ದೃಷ್ಟಿಸಿ ನೋಡುತ್ತಿದ್ದ ನಿನ್ನ ಕಪ್ಪಗಿನ ಕಣ್ಣ ಗುಡ್ಡೆಗಳಲ್ಲಿದ್ದ ಆತ್ಮ ವಿಶ್ವಾಸ ಎದೆಗೆ ಹರಿದು ಮಾತಾಗಿ ಹೊರಹೊಮ್ಮಿದವು.
ನನ್ನ ಜೀವವನ್ನು ಪಣಕ್ಕಿಟ್ಟು ನಿಮ್ಮನ್ನು ಶ್ರೀನಗರಕ್ಕೆ ತಲುಪಿಸುತ್ತೀನಿ ನೀವು ನನ್ನೊಡನೆ ಬರಲು ಸಿದ್ಧರಿದ್ದೀರಾ? ನಿನ್ನ ಧೈರ್ಯದ ಮಾತುಗಳಿಗೆ ನಾವ್ಯಾರು ಉತ್ತರ ನೀಡುವ ಸ್ಥಿತಿಯಲ್ಲಿರಲಿಲ್ಲ. ಓರ್ವ ಮುಸ್ಲಿಂ ವ್ಯಕ್ತಿಯಾಗಿ, ನೀನು ಚಾಚಿದ ಸಹಾಯ ಹಸ್ತಕ್ಕೆ ಉತ್ತರಿಸಲು  ಸಾವು ಬದುಕಿನ ತೂಗುಕತ್ತಿಯ ಕೆಳೆಗೆ ಕುಳಿತ ಹಿಂದೂ- ಸಿಖ್ ಪ್ರಯಾಣಿಕರಾದ ನಮ್ಮ ಬಳಿ ಏನಿತ್ತ್ತು ಹೇಳು? ನಮಗೆ ರಾವಲ್ಪಿಂಡಿಯಲ್ಲಿದ್ದು ಸಾಯುವ ಬದಲು ನಿನ್ನ ಜೊತೆ ನಮ್ಮ ಪ್ರಾಣವನ್ನು ಪಣಕ್ಕೆ ಒಡ್ಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿತ್ತು. ಕೂಡಲೇ ನಾವೆಲ್ಲಾ ಒಪ್ಪಿಗೆ ಸೂಚಿಸಿದೆವು.
ನಿನ್ನ ದೃಢ ನಿರ್ಧಾರ ಕೇಳಿ ಆತಂಕಗೊಂಡ ಮೊದಲ ಲಾರಿಯ ಚಾಲಕಬೇಡ ಹುಸೇನ್ ಹೋಗಬೇಡ, ನಿನಗೆ ವೃದ್ಧ ತಾಯಿಯಿದ್ದಾಳೆ, ವಿವಾಹವಾಗದ ತಂಗಿಯಿದ್ದಾಳೆಎಂದು ಎಚ್ಚರಿಸಿದ. ಆದರೆ ಅವನ ಮಾತನ್ನು ಕೇಳುವ ಸ್ಥಿತಿಯಲ್ಲಿ ನೀನಿರಲಿಲ್ಲ. ಲಾರಿಯ ಆಕ್ಸಲೇಟರ್ ಅನ್ನು ನಿನ್ನ ಪಾದ ದೃಢವಿಶ್ವಾಸದಿಂದ ತುಳಿಯತೊಡಗಿತು. ನಮ್ಮನ್ನು ಹೊತ್ತ ಲಾರಿ ಶ್ರೀನಗರದತ್ತ ಚಲಿಸತೊಡಗಿತು.
ನೂರ್ಪುರ್, ಕೊಹಮ್ರೀ, ನಾಥಿಯಗಲ್ಲಿ, ಗೋರಾಗಲ್ಲಿ, ಹೀಗೆ ಅನೇಕ ಪ್ರದೇಶಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಾವು ದಾಟಿದೆವು. ಕೊಹಲ್ಲಾ ಎಂಬ ಊರು ಗೋರಾಗಲ್ಲಿಯಿಂದ ಇಪ್ಪತ್ತೈದು ಮೈಲಿ ದೂರವಿತ್ತು. ಕೊಹಲ್ಲಾ ಬಳಿ ಇದ್ದ ಜೇಲಂ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಸಮೀಪ ನೂತನವಾಗಿ ಉದಯವಾಗಿದ್ದ ಪಾಕಿಸ್ಥಾನ ಗಡಿಪ್ರದೇಶ ಮುಕ್ತಾಯವಾಗುತ್ತಿತ್ತು. ಸೇತುವೆಯ ಆಚೆಗಿನ ಭೂ ಪ್ರದೇಶದಿಂದ ಭಾರತದ ಜಮ್ಮು ಕಾಶ್ಮೀರ ರಾಜ್ಯದ ಶ್ರೀನಗರದ ಗಡಿ ಪ್ರದೇಶ ಆರಂಭವಾಗುತ್ತಿತ್ತು. ಗೋರಾಗಲ್ಲಿಯಿಂದ ಕೊಹಲ್ಲಾ ವರೆಗಿನ ರಸ್ತೆ ಇಳಿಮುಖವಾಗಿದ್ದರಿಂದ ನಾವು ಕುಳಿತ್ತಿದ್ದ ಲಾರಿಯು  ವೇಗವಾಗಿ ಚಲಿಸುತ್ತಿತ್ತು. ಲಾರಿಯ ಒಳಗಿದ್ದ ಪ್ರಯಾಣಿಕರ ಮನದಲ್ಲಿ ಮೂಡಿದ್ದ ಭಯ ಪ್ರತಿ ಕ್ಷಣವು ನಮ್ಮನ್ನು ಕುತೂಹಲ ಮತ್ತು ಅತಂಕದ ತುತ್ತ ತುದಿಯಲ್ಲಿ ಕೂರಿಸಿತ್ತು. ಗಾಂಧಿ, ನೆಹರೂರವರ ಭಾರತಕ್ಕೆ ನಾವು ಕಾಲಿಡಬಹುದೆ?ಅಥವಾ ಆಗುಂತಕರ ಗುಂಡಿಗೆ ಬಲಿಯಾಗಿ, ಗುಡ್ಡಗಾಡಿನ ಇಳಿಜಾರಿನ ಬಯಲಿನಲ್ಲಿ, ಕರುಣೆಯಿಲ್ಲದ ಆಕಾಶದ ಕೆಳೆಗೆ ರಣಹದ್ದುಗಳಿಗೆ ಆಹಾರವಾಗಬಹುದೆ? ಎಂಬ ಅತಂಕ ನಮ್ಮ ಉಸಿರನ್ನು ಬಿಗಿಯಾಗಿ ಹಿಡಿದಿಟ್ಟಿತ್ತು. ಲಾರಿ ಚಲಿಸುತ್ತಿದ್ದಂತೆ ನಮ್ಮ ಕಣ್ಣುಗಳು ರಸ್ತೆ ಬದಿಯಲ್ಲಿ ನೆಟ್ಟಿದ್ದ ಮೈಲಿಗಲ್ಲುಗಳ ಮೇಲಿದ್ದವು. ಕೊಹಲ್ಲಾ ಇನ್ನೂ ಹದಿನೇಳು ಮೈಲಿಗಳ ದೂರವಿತ್ತು.
ಇದಕ್ಕಿದ್ದಂತೆ ಗುಂಡಿನ ಸದ್ದು ನಮಗೆ ಕೇಳಿ ಬಂತು. ನಾವು ನಿನ್ನತ್ತ ನೋಡುತ್ತಿದ್ದಂತೆ ಗುಂಡೇಟು ನಿನ್ನ ಎಡತೋಳಿಗೆ ತಾಕಿ, ತೋಳಿನಿಂದ ರಕ್ತ ಸೋರುತ್ತಿತ್ತು. ನೀನು ಛಲಬಿಡದವನಂತೆ ಲಾರಿಯನ್ನು ಮತ್ತಷ್ಟು ವೇಗದಲ್ಲಿ ಚಲಾಯಿಸುತ್ತಿದ್ದೆ, ನನ್ನ ಹಿಂಬದಿಯ ಸಿಟಿನಲ್ಲಿ ಕುಳಿತಿದ್ದ ಪ್ರೀತಂ ಸಿಂಗ್ ಚೌದುರಿ ಎಂಬಾತ ಕೂಡಲೆ ನಿನ್ನ ಬಳಿ ಬಂದ. ಆತ ರಾವಲ್ಪಿಂಡಿಯ ಸಿಂಗ್ ಸಭಾ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕಾರ್ಯನಿರ್ವಸಿದವನು. ತನ್ನ ಕೈ ಚೀಲದಲ್ಲಿದ್ದ ಹತ್ತಿ, ಒಂದಿಷ್ಟು ಔಷಧ ತೆಗೆದು ನಿನ್ನ ತೋಳಿಗೆ ಹಚ್ಚಿ, ರಕ್ತ ಸೋರದಂತೆ ಬ್ಯಾಂಡೇಜ್ ಸುತ್ತಿದ. ಬಂದೂಕಿನ ಗುಂಡು ನಿನ್ನ ತೋಳನ್ನು ಸವರಿಕೊಂಡು  ಕಿಟಕಿಯಲ್ಲಿ ಹಾಯ್ದು ಹೋಗಿದ್ದರಿಂದ ಹೆಚ್ಚಿನ ಗಾಯವೇನೂ ಆಗಿರಲಿಲ್ಲ. ನಿನ್ನೊಳಗಿನ ಆತ್ಮ ವಿಶ್ವಾಸ ಗುಂಡೇಟಿನಿಂದ ಕುಸಿದಂತೆ ಕಾಣುತ್ತಿದ್ದರೂ, ನಿನ್ನ ಮುಖದಲ್ಲಿ ನಮ್ಮನ್ನು ಗುರಿ ತಲುಪಿಸುವ ಛಲವಿತ್ತು.
ಕೊಹಲ್ಲ ಇನ್ನು ಹನ್ನೆರೆಡು ಮೈಲುಗಳ ದೂರವಿರುವಾಗ ಮತ್ತೇ ಗುಂಡಿನ ಮೊರೆತ ಕೇಳಿಬಂತು. ಲಾರಿಯ ಹಿಂಬದಿಯತ್ತ ನೋಡಿದಾಗ, ರಸ್ತೆಯಲ್ಲಿ ನಿಂತಿದ್ದ ನಾಲ್ವರು ದುಷ್ಕರ್ಮಿಗಳು, ಲಾರಿಯ ಚಕ್ರಗಳನ್ನು ಗುರಿಯಾಗಿಟ್ಟು ಗುಂಡು ಹಾರಿಸುತ್ತಿದ್ದರು
ವೇಗವಾಗಿ ಲಾರಿಯನ್ನು ಚಲಾಯಿಸುತ್ತಿದ್ದ ನೀನು ರಸ್ತೆ ಮೇಲೆ ನೆಟ್ಟಿದ್ದ  ಕಣ್ಣನ್ನು ಕೀಳದೆ, ನಿಮ್ಮಲ್ಲಿ ಯಾರಾದರೂ ಡ್ರೈವರ್ ಇದ್ದೀರಾ? ಎಂದು ಕೇಳಿದೆ. ಇದ್ದರೆ ನನ್ನ ಬಳಿ ಬೇಗ ಬನ್ನಿ ಎಂದೂ ಸಹ ಕೂಗಿದೆ.
ನಮ್ಮ ನಡುವೆ ಇದ್ದ ಜೋದ್ ಸಿಂಗ್ ಎಂಬಾತ, “ನನಗೆ ರಾವಲ್ಪಿಂಡಿ- ಲಾಹೋರ್ ನಡೆವೆ ಬಸ್ ಗಳನ್ನು ಓಡಿಸಿ ಅನುಭವವಿದೆ ಆದರೆ ಗುಡ್ಡ ಗಾಡು ಪ್ರದೇಶಗಳಲ್ಲಿ ಅನುಭವವಿಲ್ಲಎಂದ. ಪರವಾಗಿಲ್ಲ ಬಾ ಎಂದು ಆತನನ್ನು ಕರೆದು , ಅವನ ಕೈಗೆ ಸ್ಟಿಯರಿಂಗ್ ಚಕ್ರವನ್ನು ಕೊಟ್ಟು, ಇಡೀ ರಸ್ತೆ ಇಳಿಜಾರಾಗಿದೆ, ಎಲ್ಲಿಯೂ ತಿರುವುಗಳಿಲ್ಲ, ಬ್ರೇಕ್ ಮೇಲೆ ಸದಾ ನಿನ್ನ ಕಾಲಿರಲಿಎಂದು ಆತನಿಗೆ ನೀನು ಸಲಹೆಗಳನ್ನಿತ್ತೆ.. ಎಲ್ಲಿಯೂ ಯಾವ ಕಾರಣಕ್ಕೂ ವಾಹನ ನಿಲ್ಲಿಸಬೇಡ ಎಂದು ಸೂಚನೆ ನೀಡಿದೆ. ನಮ್ಮತ್ತ ತಿರುಗಿನಿಮ್ಮ  ಗುರುನಾನಕ್ ನಿಮ್ಮನ್ನು ಕಾಪಾಡುತ್ತಾನೆ” ಎಂದೆ. ಕೊಹಲ್ಲಾ ಬಳಿಯ ಜೇಲಂ ನದಿಯ ಸೇತುವೆ ಕೇವಲ ನಾಲ್ಕು ಮೈಲುಗಳ ಅಂತರದಲ್ಲಿತ್ತು.
ನೀನು ನಾವು ಕುಳಿತಿದ್ದ ಸ್ಥಳಕ್ಕೆ ಬಂದು, ಸರ್ದಾಜಿ ನಿಮ್ಮ ಖಡ್ಗವನ್ನು ನನಗೆ ಕೊಡುವಿರಾ? ಎಂದು ಪ್ರಯಾಣಿಕರೊಬ್ಬರನ್ನು ಕೇಳಿದೆ. ಸರ್ದಾರ್ ಶಂಷೀರ್ ಸಿಂಗ್ ಹಿಂದೆ ಮುಂದೆ ಯೋಚಿಸದೆ, ತನ್ನ ಕೈಯಲ್ಲಿದ್ದ ಮೂರು ಅಡಿ ಉದ್ದದ ಖಡ್ಗವನ್ನು ನಿನಗೆ ನೀಡಿದರು. ನೀನು ತಡಮಾಡದೆ ಲಾರಿಯ ಹಿಂಬದಿಯ ಮೆಟ್ಟಿಲ ಮೇಲೆ ನಿಂತು, “ನಿಮ್ಮ ಜೊತೆ ದೇವರಿದ್ದಾನೆ ಚಿಂತಿಸಬೇಡಿ” ಎನ್ನುತ್ತಾ, ಚಲಿಸುತ್ತಿದ್ದ ಲಾರಿಯಿಂದ ಕೆಳಕ್ಕೆ ದುಮುಕಿದೆ.  ನಿನ್ನ ಕ್ರಿಯೆಯಲ್ಲಿ ನಮ್ಮನ್ನು ಸುರಕ್ಷಿತವಾಗಿ ಗುರಿಮುಟ್ಟಿಸಿದ ಸಂತೃಪ್ತ ಭಾವನೆ ಎದ್ದು ಕಾಣುತ್ತಿತ್ತು.  ನೀನು ಲಾರಿಯಿಂದ ಇಳಿದು ಸೂರ್ಯನ ಬೆಳಕಿಗೆ ಹೊಳೆಯುತ್ತಿದ್ದ ಖಡ್ಗವನ್ನು ಕೈಯಲ್ಲಿ  ಹಿಡಿದು ನಡೆಯುತ್ತಿದ್ದಾಗ, ಖಡ್ಗವೆಂಬ ಆಯುಧ ಸೂಕ್ತವಾದ ವ್ಯಕ್ತಿಯ ಕೈ ಸೇರಿದೆ ಎಂಬ ತೃಪ್ತಿ ನಮ್ಮದಾಗಿತ್ತು. ಗುರುಗೋವಿಂದ ಸಿಂಗ್ ರು  ಪ್ರತಿಯೊಬ್ಬ ಸಿಖ್ ಪ್ರಜೆಯ ಕೈಗೆ  ಖಡ್ಗ ನೀಡುವಾಗ, ಇದು ನಿಮ್ಮ ಆತ್ಮ ರಕ್ಷಣೆಗೆ ಮಾತ್ರವಲ್ಲ, ದೀನ ದಲಿತರ ರಕ್ಷಣೆಗೂ ಬಳಕೆಯಾಗಬೇಕು ಎಂದಿದ್ದರು. ದಿನ ಮನುಷ್ಯತ್ವವನ್ನು ರಕ್ಷಿಸಲು ಹೊರಟ ನಿನ್ನ ಕೈಲಿ ನನ್ನ ಜನಾಂಗದ ಖಡ್ಗ ಸೇರಿದ್ದು  ಮನಸ್ಸಿನಲ್ಲಿ ಸಾರ್ಥಕ ಭಾವನೆಯನ್ನು ಮೂಡಿಸಿತು

ಲಾರಿಯು ಜೇಲಂ ಸೇತುಗೆ ಹತ್ತಿರವಾಗುತ್ತಿದ್ದಂತೆ ಮತ್ತೇ ಮೂರು ಗುಂಡಿನ ಶಬ್ದ ಕೇಳಿಬಂತು. ಅದೃಷ್ಟವಶಾತ್ ನಮ್ಮ ವಾಹನಕ್ಕೆ ಏನೂ ಆಗಿರಲಿಲ್ಲ.  ಆದರೆ, ಖಡ್ಗ ಹಿಡಿದು ಹೊರಟ ನಿನ್ನ ಸ್ಥಿತಿ ಏನಾಯಿತೊ? ನಮಗೆ ತಿಳಿಯಲಿಲ್ಲ. ಪೊದೆಯ ಹಿಂದೆ ಅವಿತು ಗುಂಡು ಹಾರಿಸುತ್ತಿದ್ದ ಆಗುಂತಕರ ಗುಂಡಿಗೆ ನೀನು ಬಲಿಯಾದೆಯಾ? ಅಥವಾ ಸುರಕ್ಷಿತವಾಗಿ ನಿನ್ನ ಮನೆ ಸೇರಿದೆಯಾ? ಇದು ನಮ್ಮ ಪಾಲಿಗೆ ಪ್ರಶ್ನೆಯಾಗಿ ಉಳಿಯಿತು. ನೀನು ಲಾರಿಯಿಂದ ನೆಗೆಯುವಾಗ, ಅಲ್ಲಾ ಎಂಬ  ದೇವರು ನಿನ್ನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಿ ಎಂದು ನಾವೆಲ್ಲಾ ಮನದೊಳಗೆ ನಿನಗಾಗಿ ಪ್ರಾರ್ಥಿಸುತಿದ್ದೆವು.
ನಮ್ಮ ದಿನದ ನಮ್ಮ  ಪ್ರಾರ್ಥನೆ ದೇವರಿಗೆ ತಲುಪಿತೊ? , ಇಲ್ಲವೊ? ಇವೊತ್ತಿಗೂ ನನಗೆ ತಿಳಿಯಲಿಲ್ಲ, ನೀನು ಬದುಕಿದ್ದೀಯಾ ಗೆಳೆಯಾ? ನಿನ್ನ ವೃದ್ಧ ತಾಯಿ ಏನಾದಳು? ನಿನ್ನ ಸಹೋದರಿಗೆ ವಿವಾಹವಾಯಿತೆ? ಇದು ನನ್ನ ಪಾಲಿಗೆ ಉತ್ತರವಿಲ್ಲದ ಒಗಟಿನ ಪ್ರಶ್ನೆಗಳಾಗಿ ಉಳಿದುಬಿಟ್ಟಿವೆ.
ಆದರೂ ಹುಸೇನ್,  ಯಾವಾಗಲೂ ನೀನು ನೆನಪಾಗುತ್ತಿಯಾ. ನಿನ್ನ ನೆನಪಾದಾಗಲೆಲ್ಲಾ, ನಿನ್ನ ಅರೋಗ್ಯಕ್ಕಾಗಿ, ನಿನ್ನ ತಾಯಿಯ ಧೀರ್ಘಾಯಸ್ಸಿಗಾಗಿ ಮತ್ತು  ನಿನ್ನ ಸಹೋದರಿಯ ಒಳಿತಿಗಾಗಿ ನೂರಾರು ಪ್ರಾರ್ಥನೆಗಳು ಒಮ್ಮೆಲೆ ನನ್ನ  ಹೃದಯದಿಂದ ಹೊರಡುತ್ತವೆ. ನೀನಿನ್ನು ಜೀವಂತವಾಗಿ ಪಾಕಿಸ್ಥಾನದಲ್ಲಿ ಬದುಕಿದ್ದೀಯಾ ಎಂದು ನಂಬಿಕೊಂಡಿದ್ದೇನೆ. ಅಕಸ್ಮಾತ್ ನೀನು ಮರಣ ಹೊಂದಿದ್ದರೆ, ದೇವರು ನಿನಗೆ ಸ್ವರ್ಗದಲ್ಲಿ ಸ್ಥಾನ ಕಲ್ಪಿಸಿದ್ದಾನೆ ಎಂದುಕೊಳ್ಳುತ್ತೇನೆ.  ನೀನು ಬದುಕಿದ್ದರೆ, ದೇವರು ನಿನ್ನನ್ನು ಸುಖವಾಗಿರಿಸಲಿ ಎಂದು ಪ್ರಾರ್ಥಿಸುವುದು ನನ್ನ  ಪಾಲಿನ ದಿನಚರಿಯಾಗಿದೆ ಏಕೆಂದರೆ, ದಿನ ಭಾರತದಲ್ಲಿ ನಾನು ಬದುಕುತ್ತಿರುವ ಸುಖದ ಬದುಕು ನೀನು ಕೊಟ್ಟ ಅಮೂಲ್ಯ ಕಾಣಿಕೆಯಲ್ಲದೆ ಮತ್ತೇನು?
                                                   ( ಮೋಹಿಂದರ್ ಸಿಂಗ್ ಸೆರಾನ 1983 ರಲ್ಲಿ ಬರೆದ ಕತೆ.)