ಬುಧವಾರ, ಆಗಸ್ಟ್ 27, 2014

ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ



ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಯು.ಆರ್. ಅನಂತಮೂರ್ತಿಯವರ ಸಾವು ಕಳೆದ ಶುಕ್ರವಾರದಿಂದ ಸೃಷ್ಟಿಸಿರುವ ಶೂನ್ಯತೆ ಮತ್ತು ಸೂತಕ ಛಾಯೆಯನ್ನು ಕನ್ನಡದ ಸಾಂಸ್ಕøತಿಕ ಜಗತ್ತು ಜೀರ್ಣಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಬಹುದು. ಮಾತಿಗೆ ಮಾಂತ್ರಿಕತೆಯನ್ನು ಮತ್ತು ಕನ್ನಡ ಭಾಷೆಗೆ ಬೆರಗು ಮತ್ತು ಭವ್ಯತೆಯನ್ನು ತಂದುಕೊಟ್ಟ ಯು.ಆರ್.ಅನಂತಮೂರ್ತಿಯವರ ಹೆಸರು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹದ್ದು. ತಮ್ಮ ಬದುಕಿನುದ್ದಕ್ಕೂ ಚರ್ಚೆ ಮತ್ತು ವಾಗ್ವಾದಗಳ ಮೂಲಕ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕದ ಸರಹದ್ದನ್ನು ವಿಸ್ತರಿಸಿದ ಅನಂತಮೂರ್ತಿಯವರು ಇದಕ್ಕಾಗಿ  ಹಲವಾರು ವಿವಾದ ಗುರಿಯಾಗಬೇಕಾಯಿತು.
ಬೇಂದ್ರೆ, ಕುವೆಂಪು, ಶಿವರಾಮ ಕಾರಂತ ಮತ್ತು ಮಾಸ್ತಿ ಮುಂತಾದವರು ಇಪ್ಪತ್ತನೆಯ  ಶತಮಾನದ ಆದಿಭಾಗದಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರೆ, ನಂತರ ಬಂದ ಎರಡನೆಯ ತಲೆಮಾರಿನ  ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಡಿ.ಆರ್. ನಾಗರಾಜ್, ಕೀರಂ ರಂತಹ ಪ್ರತಿಭೆಗಳು ಅದಕ್ಕೆ ವೈಚಾರಿಕತೆಯ ಸ್ಪರ್ಶ ನೀಡುವುದರ ಮೂಲಕ  ಭಾರತೀಯ  ಇತರೆ ಭಾಷೆಗಳಲ್ಲದೆ, ಜಗತ್ತು ಕನ್ನಡದತ್ತ ತಿರುಗಿ ನೋಡಿವಂತೆ ಮಾಡಿದರು. ಇದೀಗ ಇವರೆನ್ನೆಲ್ಲಾ ಕಳೆದು ಕೊಂಡಿರುವ ಕನ್ನಡ ಸಾಹಿತ್ಯ ಬಡವಾಯಿತು ಎಂಬ ಮಾತು ಕ್ಲೀಷೆಯಾಗಿ ತೋರುತ್ತದೆ. ಆದರೆ ಮಹಾನಿಯರಿಂದ ಪ್ರಭಾವಿತಗೊಂಡಿದ್ದ ನನ್ನ ತಲೆಮಾರು ಈಗ ಅಕ್ಷರಶಃ ಅನಾಥ ಪ್ರಜ್ಞೆಯನ್ನ, ತಬ್ಬಲಿತನವನ್ನು ಅನುಭವಿಸುತ್ತಿದೆ. ನಮ್ಮ ತಲೆಯೊಳಗಿನ ಕಸ ಮತ್ತು ಎದೆಯೊಳಗಿನ ವಿಷವನ್ನು ತೆಗೆದು ಹಾಕಿದ ಲಂಕೇಶ್, ತೇಜಸ್ವಿ, ಅನಂತಮೂರ್ತಿಯವರಿಲ್ಲದ ಕನ್ನಡದ ಸಾಂಸ್ಕತಿಕ ಜಗತುದಿನ್ನು ಮುಂದೆ ಲಂಗು ಲಗಾಮಿಲ್ಲದ ಕುದುರೆಯಾಗಬಹುದು ಎಂಬ ಆತಂಕ ಮನದೊಳಗೆ ಮಡುವುಗಟ್ಟುತ್ತಿದೆ.
ಲಂಕೇಶ್ ಮತ್ತು ತೇಜಸ್ವಿಯವರಿಗೆ ಹೋಲಿಕೆ ಮಾಡಿದಾಗ ಅನಂತಮೂರ್ತಿಯವರು ಅವರಿಗಿಂತ ಭಿನ್ನವಾಗಿ ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡವರಾಗಿದ್ದರು. ಲಂಕೇಶ್ ಮತ್ತು ತೇಜಸ್ವಿಯವರು ಅದ್ಭುತ ಬರಹಗಾರರಾಗಿದ್ದರೆ ಹೊರತು, ಮಾತುಗಾರರಾಗಿರಲ್ಲ. ಆದರೆ ಅನಂತಮೂರ್ತಿಯವರು ಅದು ಖಾಸಾಗಿ ಚರ್ಚೆಯಾಗಿರಲಿ, ಉಪನ್ಯಾಸವಾಗಿರಲಿ ಅಥವಾ ಸಾರ್ವಜನಿಕ ಭಾಷಣವಾಗಿರಲಿ ಅಲ್ಲಿ ತಮ್ಮ ಮಾತು ಮತ್ತು ವಿಚಾರಧಾರೆಗಳ ಮೂಲಕ ಮಾಂತ್ರಿಕಲೋಕವನ್ನು ಸೃಷ್ಟಿಸಿಬಿಡುತ್ತಿದ್ದರು. ಎಂದೂ ಖಾಸಾಗಿತನವನ್ನಾಗಲಿ ಅಥವಾ ಏಕಾಂಗಿತನವನ್ನಾಗಲಿ ಬಯಸದ ಅನಂತಮೂರ್ತಿಯವರು ಸದಾ ದೇಶ ವಿದೇಶಗಳನ್ನು ಸುತ್ತುತ್ತಾ ಸುದ್ಧಿಯಲ್ಲಿರುತ್ತಿದ್ದರು.

ಕಳೆದ ಮೂರು ದಶಕಗಳಲ್ಲಿ ಅಂದರೆ ನವ್ಯದ ಸಾಹಿತ್ಯ ಉತ್ತುಂಗದಲ್ಲಿದ್ದ ಕಾಲದಿಂದ ಅದರ ಉಗ್ರ ಪ್ರತಿಪಾದಕರಾಗಿದ್ದ ಅನಂತಮೂರ್ತಿಯವರ ಜೊತೆ  ಜಗಳವಾಡದೆ ಇರುವವರನ್ನು ಕರ್ನಾಟಕದಲ್ಲಿ ದುರ್ಬೀನು ಹಾಕಿ ಹುಡುಕಬೇಕಾಗುತ್ತದೆ. ಏಕೆಂದರೆ, ಅದು ಸಾಹಿತ್ಯಕವಾಗಿರಲಿ, ಸಾಮಾಜಿಕ ಸಂಗತಿಯಾಗಿರಲಿ ಅಥವಾ ರಾಜಕೀಯವಾಗಿರಲಿ ಹೊಸ ವಾಗ್ವದಗಳನ್ನು ಹುಟ್ಟು ಹಾಕುತ್ತಿದ್ದ ಅನಂತಮೂರ್ತಿಯವರು, ತಮ್ಮ ಕೃತಿಗಳು ಅಥವಾ ತಾವು ಮಂಡಿಸಿದ ವಿಷಯಗಳ ಕುರಿತು ಯಾರು ಎಷ್ಟೇ ಕಟುವಾಗಿ ಟೀಕಿಸಲಿ ಅಥವಾ ವಿರೋಧಿಸಲಿ ಅವರ ಜೊತೆ ತಾತ್ವಿಕವಾಗಿ ಜಗಳವಾಡುತ್ತಿದ್ದರೆ ಹೊರತು, ಎಂದೂ ತಮನ್ನ್ಮು ವಿರೋಧಿಸಿದವರ ಬಗ್ಗೆ ಮತ್ಸರವನ್ನಾಗಲಿ, ವಿಷವನ್ನಾಗಲಿ ತಮ್ಮ ಎದೆಯಲ್ಲಿ ಬಚ್ಚಿಟ್ಟುಕೊಂಡವರಲ್ಲ. ಅವರನ್ನು ಕಳೆದುಕೊಂಡ ಸಮಯದಲ್ಲಿ ಹಲವಾರು ನೆನಪುಗಳು ನನ್ನನ್ನು ನಿರಂತರವಾಗಿ ಕಾಡುತ್ತಿವೆ.
ಅದು 1980 ಇಸವಿ. ನಾನಾಗ ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿ ಓದುತ್ತಿದ್ದೆ. ಆಗಿನ ಮಲ್ಲಿಗೆ ಎಂಬ ಮಾಸಪತ್ರಿಕೆ ಸಂಪಾದಕರಾಗಿದ್ದ ಎಸ್.ದಿವಾಕರ್ ಮೂಲಕ ಬೆಂಗಳೂರಿನ ಬಹುತೇಕ ಲೇಖಕರ ಸಂಪರ್ಕಕ್ಕೆ ಬಂದಿದ್ದೆ. ಇದೇ ವೇಳೆಯಲ್ಲಿ ಗಿರಿ ಎಂಬುವವರ ಗತಿಸ್ಥಿತಿ ಎಂಬ ಕೆಟ್ಟ ಕಾದಂಬರಿಯೊಂದು ಬಿಡುಗಡೆಯಾಗಿತ್ತು. ನವ್ಯ ಸಾಹಿತ್ಯ ಕನ್ನಡವನ್ನು ಆವರಿಸಿಕೊಂಡಿದ್ದಾಗ ಅನಂತಮೂತಿಯವರು ಒಳಗೊಂಡಂತೆ ಕಾದಂಬರಿಯನ್ನು ಶತಮಾನದ ಕಾದಂಬರಿಯಂತೆ ಎಲ್ಲರೂ ಇನ್ನಿಲ್ಲದಂತೆ ಬಣ್ಣಿಸುತ್ತಿದ್ದರು. ಕಾದಂಬರಿಯನ್ನು ಓದಿದ್ದ ನನಗೆ  ತಲೆ ಕೆಟ್ಟು ಕೆರಹಿಡಿದು ಹೋಗಿತ್ತುಯಾವುದೇ ರೀತಿಯ ಪ್ರಬುದ್ಧತೆಯಲ್ಲದೆ ಹುಂಬನಂತಿದ್ದ ನಾನು ಒಂದು ದಿನ ಸೆಂಟ್ರಿಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ನಡೆದ ಸಾಹಿತ್ಯ ಕುರಿತಾದ ಕಾರ್ಯಕ್ರಮದ ನಂತರ ಅನಂತಮೂತಿಯವರನ್ನು ಅಡ್ಡ ಹಾಕಿಕೊಂಡು ಗತಿಸ್ಥಿತಿ ಕಾದಂಬರಿಯ ಬಗ್ಗೆ ಜಗಳವಾಡಿದ್ದೆ. ಸುಮಾರು ಹತ್ತು ನಿಮಿಷಗಳ ಕಾಲ ನನ್ನ ಹೆಗಲ ಮೇಲೆ ಕೈ ಹಾಕಿ ಕಾಲೇಜಿನ ಕಾರಿಡಾರ್ ಬಳಿ ತಿರುಗಾಡುತ್ತಾ ಉಪನ್ಯಾಸ ಮಾಡಿದ ಅವರುಕಾಮು ಮತ್ತು ಕಾಪ್ಕ ಇವರನ್ನು ಓದುವ ಕುರಿತಂತೆ ಹಾಗೂ ಒಳ್ಳೆಯ ಕಾದಂಬರಿಗಳನ್ನು ಹೇಗೆ ಗ್ರಹಿಸಬೇಕು ಎಂಬುದರ ಕುರಿತು ನನಗೆ ಮನನ ಮಾಡಿಕೊಟ್ಟಿದ್ದರು. ಆದರೆ, ಆಲ್ಬರ್ಟ್ಕಾಮೂವಿನ ಕಾದಂಬರಿಗಳು ನನ್ನ ಎದೆಯನ್ನು ತಟ್ಟಿದ ಹಾಗೆ ಕಾಪ್ಕ ಮತ್ತು ಗಿರಿಯವರ ಕಾದಂಬರಿಗಳು ಕಥೆಗಳು ಯಾವ ಕಾಲಕ್ಕೂ ನನ್ನದೆಗೆ ತಾಕಲಿಲ್ಲ.
ಇನ್ನೊಂದು ಘಟನೆ 1992 ಅಕ್ಟೋಬರ್ ತಿಂಗಳಿನಲ್ಲಿ ನಡೆದದ್ದು. ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ಮತ್ತು ನನ್ನ ನಡುವಿನ ಸಂಬಂಧ  ಒಂದು ರೀತಿಯಲ್ಲಿ ತಂದೆ-ಮಗನ ಸಂಬಂಧ. 1980 ದಶಕದಲ್ಲಿ ಮುದ್ರಣರಂಗಕ್ಕೆ ಕಾಲಿಟ್ಟ ಡಿ.ಟಿ.ಪಿ. ಮತ್ತು ಆಫ್ ಸೆಟ್ ಮುದ್ರಣ ಇವುಗಳ ಆಗಮನದಿಂದಾಗಿ ಪುಸ್ತಕಗಳ ಮುದ್ರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಆದರೆ ಸುಬ್ಬಣ್ಣನವರು ಮಾತ್ರ ಇವುಗಳಿಗೆ ತೆರೆದುಕೊಳ್ಳದೆ ತಮ್ಮ ಅಕ್ಷರ ಪ್ರಕಾಶನದ ಎಲ್ಲಾ ಕೃತಿಗಳನ್ನು ಹೆಗ್ಗೋಡಿನಲ್ಲಿದ್ದ ತಮ್ಮ ಮುದ್ರಾಣಾಲಯದಲ್ಲಿ ಅಕ್ಷರದ ಮೊಳೆಗಳನ್ನು ಜೋಡಿಸಿ, ಕಾಲದ ಪ್ರಿಂಟಿಂಗ್ ಪ್ರೆಸ್ ಮೆಷಿನ್ ನಲ್ಲಿ ಮುದ್ರಿಸಿ ಪ್ರಕಟಿಸುತ್ತಿದ್ದರು. ನಾನು ಹೊಸ ತಂತ್ರ ಜ್ಞಾನ ಕುರಿತು ಅವರಿಗೆ ಮನವರಿಕೆ ಮಾಡಿಕೊಡುವಾಗಲೆಲ್ಲಾ ಅವರು ನಿರಾಕರಿಸುತ್ತಿದ್ದರು. ಅವರ ಮುದ್ರಣಾಲಯದಲ್ಲಿ ಮಹಿಳೆಯರೂ ಒಳಗೊಂಡಂತೆ ಹತ್ತು ಅಥವಾ ಹನ್ನೆರೆಡು ಮಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ತಾನು ಆಫ್ ಸೆಟ್ ಮುದ್ರಣಕ್ಕೆ ಹೋದರೆ ಕೆಲಸಗಾರರ ಅನ್ನ ಕಿತ್ತುಕೊಂಡಂತಾಗುತ್ತದೆ ಎಂಬ ಸಂಕಟ ಅವರನ್ನು ಬಾಧಿಸುತ್ತಿತ್ತು, ಒಮ್ಮೆ ನನ್ನ ಒತ್ತಾಯದ ಮೇರೆಗೆ ಬೆಂಗಳೂರಿಗೆ ಬಂದು ಆಫ್ ಸೆಟ್ ಮುದ್ರಣದಲ್ಲಿ ತ್ವರಿತ ಗತಿಯಲ್ಲಿ ಪುಸ್ತಕಗಳು ಪ್ರಿಂಟಾಗುವುದು, ಬಹು ವರ್ಣಗಳಲ್ಲಿ ಮುಖಪುಟಗಳು ಸಿದ್ಧವಾಗುವುದು ಇವುಗಳನ್ನು ನೋಡಿ ನಂತರದ ದಿನಗಳಲ್ಲಿ ಅರೆ ಮನಸ್ಸಿನಿಂದ ಒಪ್ಪಿಗೆ ನೀಡಿದ್ದರು. ಆನಂತರ 1993 ಅಥವಾ 94 ರಲ್ಲಿ ಅನಂತಮೂರ್ತಿಯವರ ಭವ ಎಂಬ ಕಾದಂಬರಿಯನ್ನು ಮುದ್ರಿಸಿ, ನನ್ನೂರಾದ ಕೊಪ್ಪದಲ್ಲಿ ವಾಸವಾಗಿದ್ದ ನನಗೂ ಒಂದು ಪ್ರತಿಯನ್ನು ರವಾನಿಸಿದ್ದರು.
ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹೆಗ್ಗೋಡಿನಲ್ಲಿ ನಡೆಯುತ್ತಿದ್ದ ನಿನಾಸಂ ಸಂಸ್ಕøತಿ ಶಿಬಿರಕ್ಕೆ ಪಾಲ್ಗೊಂಡಿದ್ದೆ. ಒಂದು ದಿನ ಬೆಳಿಗ್ಗೆ ಹೆಗ್ಗೋಡಿನ ಅವರ ಕಚೇರಿಯ ಮುಂದಿದ್ದ ಮೂರು ಅಡಿ ಎತ್ತರದ ಮೋಟು ಗೋಡೆಯ ಮೇಲೆ  ಗೋಡೆಗೆ ಒರಗಿ ಎಲೆ ಅಡಿಕೆ ಹಾಕಿಕೊಂಡು ಕುಳಿತಿದ್ದ  ಸುಬ್ಬಣ್ಣನವರು ನನ್ನನ್ನು ಕರೆದು ಭವ ಕಾದಂಬರಿಯನ್ನು ಓದಿದೆಯಾ ಕೊಪ್ಪ? ಎಂದರುಓದಿದೆ ಎಂದು ನಾನು ಉತ್ತರಿಸಿದೆ. ಏನನಿಸಿತು? ಎಂದು ಕುತೂಹಲದಿಂದ ಕೇಳಿದರು. ಸುತ್ತ ಮುತ್ತ ಶಿಬಿರಾರ್ಥಿಗಳು ಚಹಾ ಮತ್ತು ಕಾಫಿ ಕುಡಿಯುತ್ತಾ ನಿಂತಿದ್ದರಿಂದ ಮೆಲ್ಲನೆ ಅವರ ಕಿವಿಯ ಬಳಿ  ತೆರಳಿ, “ನಾನು ಓದಿದ ಕೆಟ್ಟ ಕಾದಂಬರಿಗಳಲ್ಲಿ ಅದು ಕೂಡ ಒಂದುಎಂದು ಉತ್ತರಿಸಿದೆ. ನನ್ನ ಮಾತು ಕೇಳಿ ಸ್ವಲ್ಪ ಕಾಲ ಮೌನಕ್ಕೆ ಶರಣಾದ ಅವರು, ಸ್ವಗತದ ಧ್ವನಿಯಲ್ಲಿ ಸಂಸ್ಕಾರ, ಭಾರತೀಪುರ ಮತ್ತು ಅವಸ್ಥೆ ಇವುಗಳು ಮಾತ್ರ ಅನಂತಮೂರ್ತಿಯ ಹೆಸರನ್ನು ಶಾಸ್ವತಗೊಳಿಸುವ ಕಾದಂಬರಿಗಳು ಎಂದರು. ಮಧ್ಯಾಹ್ನ ಊಟದ ಸಮಯದ ವೇಳೆಗೆ ಸರಿಯಾಗಿ ನಾನು ಹೇಳಿದ್ದ ಮಾತನ್ನು ಸುಬ್ಬಣ್ಣನವರು ಅನಂತಮೂರ್ತಿಗೆ ದಾಟಿಸಿಬಿಟ್ಟಿದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ  ನನ್ನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡ ಅನಂತಮೂರ್ತಿಯವರು,  “ಏನಯ್ಯಾ ಕೊಪ್ಪ? ನೇಪಾಳಕ್ಕೆ ಹೋಗಿ ತಿಂಗಳು ಕಾಲ ಧ್ಯಾನಸ್ಥ ಮನಸ್ಸಿನಲ್ಲಿ ಕುಳಿತು ಬರೆದ  ಕಾದಂಬರಿಯನ್ನು ನೀನು ರೀತಿನಾ  ಟೀಕಿಸೋದು?” ಎಂದು ಪ್ರೀತಿಯಿಂದ ಗದರುತ್ತಾ ಕಾದಂಬರಿ ಕುರಿತು ಮಾತನಾಡಿದರು. ಹಿರಿಯ ಅಥವಾ ಕಿರಿಯ ಎನ್ನುವ ಬೇಧ ಭಾವವಿಲ್ಲದೆ ತಮ್ಮ ಮನಸ್ಸಿನ ಅನಿಸಿಕೆಗಳನ್ನು ಇನ್ನೊಬ್ಬರಿಗೆ ಮುಟ್ಟಿಸುವ ತವಕ ಅನಂತ ಮೂರ್ತಿಯವರಿಗೆ ಇದ್ದ ಹಾಗೆ ಬೇರೊಬ್ಬ ಲೇಖಕರಿಗೆ ಇದ್ದುದನ್ನು ನಾನು ಕಾಣಲೇ ಇಲ್ಲ. ಅದು ಪ್ರೀತಿಯಿರಲಿ, ಸಿಟ್ಟಿರಲಿ ಅವುಗಳನ್ನು ಹೊರ ಹಾಕಿದರೆ ಮಾತ್ರ ಅವರ ಆತ್ಮ ತೃಪ್ತಿಗೊಳ್ಳುತ್ತಿತ್ತು.

ಅನಂತಮೂತಿಯವರ ಬಹು ದೊಡ್ಡಗುಣವೆಂದರೆ, ಅವರೆಂದೂ ತಮ್ಮ ಜೀವಿತದಲ್ಲಿ ತಮ್ಮ ಕಟು ವಿರೋಧಗಳ ಬಗ್ಗೆಯಾಗಲಿ, ಟೀಕಿಸುವವರ ವಿರುದ್ಧ ಎಂದು ವೈರತ್ವವನ್ನು ಸಾಧಿಸಲಿಲ್ಲ. ಕಾರಣಕ್ಕಾಗಿ ಅವರಿಗೆ ತಮ್ಮ ಜೀವೀತಾವಧಿಯಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕದಿದ್ದರೂ ಸಹ ಅವರಿಗೆ ಪ್ರಶಸ್ತಿ ತಪ್ಪಿಸಿದವರ ಬಗ್ಗೆ ಎಂದೂ ಬೇಸರಗೊಳ್ಳಲಿಲ್ಲ. ನನಗಿನ್ನೂ ನೆನಪಿದೆಹತ್ತು ವರ್ಷಗಳ ಹಿಂದೆ ಇದೇ ಅಗ್ನಿ ವಾರಪತ್ರಿಕೆಯಲ್ಲಿ ಅನಂತಮೂರ್ತಿಯವರ ನಡೆ ನುಡಿ ಕುರಿತಾದ ಒಂದು ಲೇಖನ ಪ್ರಕಟವಾಯಿತು. ಲೇಖನದಿಂದ ಘಾಸಿಗೊಂಡ ಅವರು ಮರುದಿನ ತಮ್ಮ ಪತ್ನಿ, ಪುತ್ರ, ಸೊಸೆ ಸಮೇತರಾಗಿ ಅಗ್ನಿ ವಾರಪತ್ರಿಕೆ ಕಛೇರಿ ಎದುರು ಧರಣಿ ಕೂತು ಸಂಪಾದಕರಾಗಿದ್ದ ಶ್ರೀಧರ್, ಮತ್ತು ಅವರ ಬಳಗಕ್ಕೆ ಮುಜುಗರವನ್ನುವನ್ನುಂಟು ಮಾಡಿ, ತಾವೂ ಸಹ ಮಾಧ್ಯಮಗಳ ಎದುರು ಮುಜುಗರಕ್ಕೆ ಒಳಗಾದರು. ಘಟನೆ ನಡೆದ ಕೆಲವೇ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಅಗ್ನಿ ಶ್ರೀಧರ್ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು. ಕ್ಷಣಕ್ಕೆ ತಮ್ಮ ಎದೆಯೊಳಗೆ ಹುಟ್ಟುವ  ಸಿಟ್ಟು ಅಥವಾ ಪ್ರೀತಿಯನ್ನು ಅವರು ಎಂದೂ ಕಾಪಿಟ್ಟುಕೊಂಡವರಲ್ಲ, ಹಾಗಾಗಿ ಅವರು ತಮ್ಮ ಹೇಳಿಕೆಗಳಿಂದ ನಿರಂತರವಾಗಿ ವಿವಾದಗಳಿಗೆ ಬಲಿಯಾದರು. ನಿರಂತರವಾಗಿ ಚಲನಶೀಲ ಸಮಾಜದಲ್ಲಿ  ಚಾಲ್ತಿಯಲ್ಲಿರುವುದು ಅವರ ಪಾಲಿಗೆ ಒಂದು ರೀತಿಯಲ್ಲಿ ವ್ಯಸನವಾಗಿ ಮಾರ್ಪಟ್ಟಿತ್ತು.
ನಿಜ ಹೇಳಬೇಕೆಂದರೆ, ಅನಂತಮೂರ್ತಿಯವರ ಬರೆವಣಿಗೆಯ ಕಸುವು 1990 ವೇಳೆಗೆ ತೀರಿಹೋಗಿತ್ತು, ಸಮಯದಲ್ಲಿ ಬಂದ ಅವರ ಭವ ಮತ್ತು ದಿವ್ಯ ಎಂಬ ಎರಡು ಕಾದಂಬರಿಗಳನ್ನು ಕನ್ನಡ ಸಾರಸ್ವತಲೋಕ ಸಾರಾಸಗಟಾಗಿ ತಿರಸ್ಕರಿಸಿತ್ತು. ಹಾಗಾಗಿ ನಂತರದ ದಿನಗಳಲ್ಲಿ ಅವರು ತಮ್ಮ ಸೃಜನಶೀಲ ಬರೆವಣಿಗೆಗೆ ಕೈ ಹಾಕದೆ ಹೆಚ್ಚು ಹೆಚ್ಚು ಮಾತನಾಡತೊಡಗಿದರು. ಅವರ ಪಾಲಿಗೆ ಮಾತೆಂಬುದು ಮಂತ್ರವಾಯಿತು. 1990 ನಂತರ ಕೆಲವು ವಿಷಯಗಳ ಕುರಿತಾಗಿ ಬರೆದ ಲೇಖನಗಳು ಮತ್ತು ಹಲವು ಕೃತಿಗಳಿಗೆ ಬರೆದ ಮುನ್ನುಡಿ ಇಲ್ಲವೆ ಬೆನ್ನುಡಿ ಅವರ ಪಾಲಿನ ಸಾಹಿತ್ಯದ ಕೃಷಿಯಾಯಿತು. ಕನ್ನಡದ ಅತ್ಯಂತ ಪ್ರಸಿದ್ಧ ಪಡೆದ ಹಾಗೂ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದ ಅನಂತಮೂರ್ತಿಯವರು ಓರ್ವ ಪ್ರಸಿದ್ಧ ಲೇಖಕನಾಗಿ ತಾನು ಬದುಕುತ್ತಿದ್ದ ಸಮಾಜದೊಡನೆ ಕಾಯ್ದುಕೊಳ್ಳಬೇಕಾದ ಅಂತರವನ್ನು ಕಾಯ್ದುಕೊಳ್ಳಲಾರದೆ ಒಮ್ಮೊಮ್ಮೆ ತಮ್ಮ ಪ್ರತಿಷ್ಟೆ ಮತ್ತು ಘನತೆಯನ್ನು ಎಲ್ಲರದೆರು ಪಣಕ್ಕೊಡ್ಡಿ ಘಾಸಿಗೊಂಡರು ಜೊತೆಗೆ ಅಪಮಾನಿತರಾದರು. ತನ್ನ ಸುತ್ತ ಮುತ್ತಲಿನ ಜನ ಮತ್ತು ತಾನು ಬದುಕುತ್ತಿದ್ದ ವರ್ತಮಾನ ಜಗತ್ತಿನ  ಕ್ಷುದ್ರ ಸಮಾಜವನ್ನು ಕಂಡು ವ್ಯಗ್ರರಾಗುತ್ತಿದ್ದ ಲಂಕೇಶರ ಗುಣವಾಗಲಿ ಅಥವಾ ದಿವ್ಯ ನಿರ್ಲಕ್ಷ್ಯತೆಯಿಂದ ಇದೇ ಸಮಾಜವನ್ನು ನೋಡುತ್ತಿದ್ದ ತೇಜಸ್ವಿಯವರ ನಿರ್ಭಾವುಕತನವಾಗಲಿ ಅನಂತಮೂರ್ತಿಯವರಿಗೆ ದಕ್ಕಲಿಲ್ಲ. ಹಾಗಾಗಿ  ಕುಮಾರಸ್ವಾಮಿಯಂತಹ ಒಬ್ಬ ಆಕಸ್ಮಿಕ ಮುಖ್ಯಮಂತ್ರಿಯೊಬ್ಬ ಅಪ್ರಬುದ್ದವಾಗಿ  “ ಯಾರ್ರೀ ಅವನು ಅನಂತ ಮೂರ್ತಿಎಂದು ಸಾರ್ವಜನಿಕವಾಗಿ ಪ್ರಶ್ನಿಸಿದಾಗ, “ಕರ್ನಾಟಕದ ಮೂಲೆ ಮೂಲೆಗೆ ಹೋಗಿ ಬೀದಿಯಲ್ಲಿ ನಿಂತು ಪ್ರಶ್ನೆಯನ್ನು ಕೇಳುಎಂದು ನಾಡಿನ ಮುಖ್ಯಮಂತ್ರಿಯೊಬ್ಬನಿಗೆ ಉತ್ತರ ಹೇಳುವ ಸಾತ್ವಿಕ ಸಿಟ್ಟನ್ನು ಅವರು ಬೆಳಸಿಕೊಳ್ಳಲಿಲ್ಲ. ಅದೇ ಕುಮಾರಸ್ವಾಮಿ ಯಾವುದೋ ಒಂದು ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಕುಳಿತಾಗ ವ್ಯಕ್ತಿಗೆ ನಿಂಬೆ ರಸ ಕುಡಿಸಲು ಇವರು ಮುಂದಾದರು. ಸಿನಿಮಾ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯಗಳ ಚಟುವಟಿಕೆಗಳು  ಅವರ ಪಾಲಿಗೆ ಅನುಸಂಧಾನದ ಪ್ರಕ್ರಿಯೆಗಳಾದವು. ಹಾಗಾಗಿ ರಾಜಕೀಯವ್ಯಕ್ತಿಗಳಾಗಲಿ, ಪಕ್ಷಗಳಾಗಲಿ ಅವರ ಪಾಲಿಗೆ ಎಂದೂ ಮೈಲಿಗೆ ಅನಿಸಲಿಲ್ಲ. ಕಾರಣಕ್ಕಾಗಿ ಅವರು ನನ್ನ ತಲೆಮಾರಿನ ಬಹುತೇಕ ಜನರ ಸಿಟ್ಟು ಮತ್ತು ಪ್ರೀತಿ ಎರಡಕ್ಕೂ ಕಾರಣರಾದ ಅಪರೂಪದ ವ್ಯಕ್ತಿಯಾದರು.

ಅನಂತಮೂರ್ತಿಯವರ ಕುರಿತು ನಮ್ಮ ತಕರಾರುಗಳು ಏನೇ ಇರಲಿ, ಕನ್ನಡದ ಜಗತ್ತನ್ನು ಜಗತ್ತಿಗೆ ವಿಸ್ತರಿಸಿದವರಲ್ಲಿ ಅವರು ಅಗ್ರಗಣ್ಯರು. ಭಾರತೀಯ ಕಾದಂಬರಿಗಳೆಂದರೆ, ಮುಲ್ಕ್ ರಾಜ್ ಆನಂದ್   ಕೂಲಿಅನ್ ಟಚ್ ಬಲ್, ಹಾಸನದ ರಾಜಾರಾವ್ ಅವರ ಕಾಂತಾಪುರ, ಆರ್.ಕೆ. ನಾರಾಯಣ್ ಅವರ ಗೈಡ್ ಇವುಗಳಷ್ಟೇ ಎಂದು ಜಗತ್ತು ನಂಬಿಕೊಂಡು ನಿರ್ವಚಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಸಂಸ್ಕಾರ ಕಾದಂಬರಿಯತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದರು
              ( ಸಂಸ್ಕಾರ ಕಾದಂಬರಿಯನ್ನು .ಕೆ. ರಾಮಾನುಜಂ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ)
ಕೊನೆಯ ಮಾತು. ಕಳೆದ ಶನಿವಾರ ಸಂಜೆ ಬೆಂಗಳೂರಿನಲ್ಲಿ ಅನಂತಮೂರ್ತಿಯವರ ಅಂತ್ಯಕ್ರಿಯೆ ಮುಗಿಸಿಕೊಂಡು ತಿಪಟೂರಿಗೆ ಹೊರಟಿದ್ದ ನಮ್ಮ ನಡುವಿನ ಕತೆಗಾರ, ಅನುವಾದಕ ಹಾಗೂ ಗೆಳಯ ಗಂಗಾಧರಯ್ಯನವರಿಗೆ ಪುನಃ ಯಾವಾಗ ಬೇಟಿಯಾಗೊಣ ಎಂದೆ. ಕ್ಷಣಕ್ಕೆ ಭಾವುಕರಾದ ಗಂಗಾಧರಯ್ಯ, ಇವೊತ್ತಿನಿಂದ ಬೆಂಗಳೂರು ನನ್ನದಲ್ಲ ಅನಿಸಿದೆ ಕೊಪ್ಪ, ಲಂಕೇಶರಿಲ್ಲದ, ಅನಂತಮೂರ್ತಿಯಿಲ್ಲದ, ಕೀರಂ ಇಲ್ಲದ, ಡಿ.ಆರ್ ನಾಗರಾಜ್ ಇಲ್ಲದ ಬೆಂಗಳೂರು ನಗರ ಯಾರಿಗೆ ಬೇಕು? ಇಲ್ಲಿಗೆ ಬಂದು ಯಾರ ಮಾತನ್ನು ಕೇಳೊಣ? ಎನ್ನುತ್ತಿದ್ದಂತೆ ಅವರ ಕೊರಳು ಕಟ್ಟಿಕೊಂಡಿತು. ಅವರ   ಮಾತುಗಳನ್ನು ಕೇಳಿಸಿಕೊಂಡ ನನ್ನ ಕಣ್ಣುಗಳು ಒದ್ದೆಯಾದವು. ಇವು ಕೇವಲ ಗಂಗಾಧರಯ್ಯನವರೊಬ್ಬರÀ ಹತಾಶೆಯ ಮಾತುಗಳಂತೆ ನನಗೆ ಕೇಳಿಸದೆಕನ್ನಡದ ಜಗತ್ತಿಗೆ ಶೂನ್ಯ ತುಂಬಿಕೊಂಡಿರುವಾಗ ಆಡಬಹುದಾದ ನನ್ನ ತಲೆಮಾರಿನ ಒಕ್ಕೊರಲಿನ ನೋವಿನ ದನಿಯಾಗಿ ಕೇಳಿಸಿತು.

                                                            (ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸೋಮವಾರ, ಆಗಸ್ಟ್ 18, 2014

ನಲ್ಮೆಗೆ ಮತ್ತೊಂದು ಹೆಸರು ನಲ್ಲೂರ್ ಪ್ರಸಾದ್.

                 

                       ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ?
                       ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು?
                       ಭ್ರಮೆಯಳಿದ ನಿಜವು ಸಾಧ್ಯವಾದ ಬಳಿಕ
                       ಅರಿವುದಿನ್ನಾರನು ಗುಹೇಶ್ವರಾ?
                                                     :- ಅಲ್ಲಮ ಪ್ರಭು

ಅವು 1970 ದಶಕದ ದಿನಗಳು. ಬಾಲ್ಯದ ಹಸಿವು, ಬಡತನ ಮತ್ತು ಅಪಮಾನಗಳಿಂದ ಘಾಸಿಗೊಂಡಿದ್ದ ನಾನು ನರಕದಿಂದ ಪಾರಾಗಲು ಇರುವ ಏಕೈಕ ಮಾರ್ಗ ಅಕ್ಷರ ಎಂದು ನಂಬಿಕೊಂಡಿದ್ದಕಾಲ. 1972 ರಲ್ಲಿ ಪ್ರಕಟವಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ  ನಂತರ ನನ್ನನ್ನು ಓದಿಸಲಾಗದೆ ಅಸಹಾಯಕಾಗಿದ್ದ ನನ್ನಪ್ಪ, ಎರಡು ವರ್ಷಗಳ ಕಾಲ ನನ್ನನ್ನು ಹಸು ಮತ್ತು ಕುರಿ ಮೇಯಿಸಲು ಹಾಕಿದ್ದ. (ನನ್ನೂರು ಕೊಪ್ಪದಿಂದ ಎಂಟು ಕಿಲೋಮೀಟರ್ ದೂರದ ಬೆಸಗರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಪ್ರತಿದಿನ ಹದಿನಾರು ಕಿ.ಮಿ. ಬರಿಗಾಲಲ್ಲಿ ನಡೆದು ಹೈಸ್ಕೂಲ್ ಮುಗಿಸಿದ್ದೆ.) ಎರಡು ವರ್ಷಗಳಲ್ಲಿ ನಮ್ಮ ತೋಟದಲ್ಲಿ ಒಣಗಿ ಬೀಳುತ್ತಿದ್ದ ತೆಂಗಿನ ಗರಿಗಳನ್ನು ಹಳ್ಳದ ನೀರಿನಲ್ಲಿ ನೆನೆ ಹಾಕಿ ನಂತರ ಎಣೆದು, ನನ್ನೂರಿನ ಭಾನುವಾರದ ಸಂತೆಯಲ್ಲಿ ಒಂದು ರೂಪಾಯಿಗೆ ನಾಲ್ಕು ಉಂಡೆಯಂತೆ ದಲಿತರಿಗೆ ಮಾರಾಟ ಮಾಡುತ್ತಿದ್ದೆ. (ಒಂದು ಉಂಡೆಯೆಂದರೆ ಎರಡು ಹೆಣೆದ ಗರಿಗಳು) ಹೀಗೆ ಉಳಿಸಿದ ಹಣದಲ್ಲಿ ಮತ್ತೇ ಬೆಸಗರಹಳ್ಳಿಯ ಸರ್ಕಾರಿ ಕಾಲೇಜಿಗೆ 1976 ರಲ್ಲಿ ಪಿ.ಯು.ಸಿ. ಗೆ ಸೇರ್ಪಡೆಯಾಗಿ 1978 ರಲ್ಲಿ ತೇರ್ಗಡೆಯಾಗಿದ್ದೆ.
ಪದವಿ ಓದಲು ಮತ್ತೇ ನನ್ನ ಬಡತನ ಅಡ್ಡಿಯಾದಾಗ ಬೆಂಗಳೂರಿನ ಚಾಮರಾಜಪೆಟೆಯಲ್ಲಿದ್ದ ನನ್ನ ದೊಡ್ಡಮ್ಮನ ಮಗಳು ಮನೆ ಹೊಕ್ಕು ಅಕ್ಕ ಮತ್ತು ಭಾವನ ಬಳಿ ಒಂದು ಹಿಡಿ ಅನ್ನ ಮತ್ತು ಒಂದಿಷ್ಟು ಅಕ್ಷರಕ್ಕಾಗಿ ಅಕ್ಷರಶಃ ಅಂಗಲಾಚಿದ್ದೆ. ಅವರು ತೋರಿದ ಕರುಣೆ, ಪ್ರೀತಿ ಮತ್ತು  ವಿಶ್ವಾಸದಿಂದ ಮನೆಯಿಂದ (ಮಕ್ಕಳ ಕೂಟದ ಬಳಿ) ಕೂಗಳತೆಯಲ್ಲಿದ್ದ ವಿ.ವಿ.ಪುರಂ ಸಂಜೆ ಕಾಲೇಜಿಗೆ 1978 ಜುಲೈ ತಿಂಗಳಿನಲ್ಲಿ ಸೇರ್ಪಡೆಯಾಗಿದ್ದೆ. ನನ್ನ ಭಾವನವರು ತಮ್ಮ ಸ್ನಹಿತರ ಮೂಲಕ ಗಾಂಧಿನಗರದ ಕಿಸಾನ್ ಸೀಡ್ಸ್ ಕಾರ್ಪೊರೇಶನ್ ಎಂಬ ಸಂಸ್ಥೆಯಲ್ಲಿ ಒಂದು ಕೆಲಸವನ್ನು ಕೊಡಿಸಿಕೊಟ್ಟಿದ್ದರು. ಹೀಗೆ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ತಬ್ಬಲಿಯಂತೆ ಅನಾಥನಾಗಿ, ಬಡತನವೆಂಬ ನರಕದ ಬಾಗಿಲು ದಾಟಲು ವಿದ್ಯೆಯೊಂದೇ ಅಂತಿಮ ಎಂದು ನಾನು ನಂಬಿಕೊಂಡಿದ್ದ ಕಾಲದಲ್ಲಿ ನನಗೆ ನಲ್ಲೂರು ಪ್ರಸಾದ್ ಎಂಬ ವಿಸ್ಮಯಕಾರಿ ಅಧ್ಯಾಪಕನೊಬ್ಬನ  ದರ್ಶನವಾಯಿತು. ಜಾನಪದ ತಜ್ಞರೆಂದು ಹೆಸರಾದ ಮಂಡ್ಯ ಜಿಲ್ಲೆಯ  ಡಿ.ಲಿಂಗಯ್ಯನವರು ಪ್ರಾಂಶುಪಾಲರಾಗಿದ್ದ ಸಂಜೆ ಕಾಲೇಜಿನ ತರಗತಿಗೆ ನಾನು ಹಾಜರಾಗುವ ವೇಳೆ ಅದೇ ಕಲಾ ಮತ್ತು ವಿಜ್ಞಾನ ಕಾಲೇಜಿನ ಮುಂದೆ ಜುಬ್ಬ ಪೈಜಾಮ ಧರಿಸಿದ ಎತ್ತರ ಹಾಗೂ ಬಲಿಷ್ಟ ಕಾಯದ ನಲ್ಲೂರು ಪ್ರಸಾದ್ರವರು ಸಿಗರೇಟ್ ಸೇದುತ್ತಾ ತಮ್ಮ ಮುಂದೆ ಜಮಾಯಿಸಿದ ಶಿಷ್ಯ ಕೋಟಿಯ ಎದೆಗೆ  ತಮ್ಮ ಎತ್ತರದ ಗಡಸು ಧ್ವನಿಯಲ್ಲಿ ವೈಚಾರಿಕತೆಯ ಬೀಜವನ್ನು ಬಿತ್ತುತ್ತಿದ್ದರು. ಹಳ್ಳಿಗಾಡಿನಿಂದ ಬಂದು ಕೀಳರಿಮೆಯಿಂದ ಬಳಲುತ್ತಿದ್ದ ಹುಡುಗರಿಗೆ ಅಪ್ಪಟ ಗ್ರಾಮೀಣ ಭಾಷೆಯಲ್ಲಿ ಪ್ರೀತಿಯಿಂದ ಗದರುತ್ತಾ, ಬೈಯುತ್ತಾ ಆತ್ಮ ವಿಶ್ವಾಸ ತುಂಬುತ್ತಿದ್ದರು. ವಿ.ವಿ. ಪುರಂ ಕಲಾ ಮತ್ತು ವಿಜ್ಞಾನ  ಕಾಲೇಜಿನಲ್ಲಿ ತಿಂಗಳಿಗೆ ಕನಿಷ್ಟ ಎರಡಾದರೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಟಕ, ಸಂಗೀತ, ಜಾನಪದ ಹಾಡುಗಳು, ಕನ್ನಡ ಸಾಹಿತ್ಯ ಕುರಿತಂತೆ ಚರ್ಚೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಕಾಲದಲ್ಲಿ ಸಂಜೆ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮ ಜಾರಿಯಲ್ಲಿ ಇರದಿದ್ದ ಕಾರಣ ನಾನು, ನನಗೆ ಅರ್ಥವಾಗದ ಅರ್ಥಶಾಸ್ತ್ರ, ಸಮಾಜ ಶಾಸ್ತ್ರ ತರಗತಿಗಳಿಂದ ತಪ್ಪಿಸಿಕೊಂಡು   ನಲ್ಲೂರ್ ಪ್ರಸಾದ್ ಅವರ ಸಾಂಸ್ಕøತಿಕ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿದ್ದೆನೇರ ಪರಿಚಯವಿಲ್ಲದ ನಲ್ಲೂರ್ ಪ್ರಸಾದ್ ಅವರನ್ನು ನಾನು ಆರಂಭದ ಕಂಡ  ದಿನಗಳ ನೆನಪುಗಳಿವು.

ದಶಕದ ನಂತರ ಒಬ್ಬ ಪತ್ರಕರ್ತನಾಗಿ, ಕವಿಯಾಗಿ ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಅವರ ಸ್ನೇಹ ವಲಯಕ್ಕೆ ನಾನೂ ಸಹ ಸೇರ್ಪಡೆಯಾದೆ. ಸದಾ ತಾಯಿ ಕೊಳಿಯೊಂದು ತನ್ನ ಮರಿಗಳನ್ನು ಜೊತೆಯಲ್ಲಿ ಕರೆದುಕೊಂಡು ತಿರುಗುವ ಹಾಗೆ ಶಿಷ್ಯರನ್ನು ಕಟ್ಟಿಕೊಂಡು ಓಡಾಡುತ್ತಿದ್ದ ನಲ್ಲೂರ್ ಪ್ರಸಾದ್, ನಾಡಿನ ಮೂಲೆ ಮೂಲೆಯಿಂದ ಬೆಂಗಳೂರು ನಗರಕ್ಕೆ ಬಂದು ದಿಕ್ಕೆಟ್ಟವರಂತೆ ಕಾಣುತ್ತಿದ್ದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅಪ್ಪಟ ಹಳ್ಳಿ ಭಾಷೆಯಲ್ಲಿ ಬೈಯುತ್ತಾ, ಆತ್ಮವಿಶ್ವಾಸ ತುಂಬುತ್ತಾ ಬದುಕುವ ಬಗೆಯನ್ನು ಹೇಳಿಕೊಡುತ್ತಿದ್ದರು. ಕಾರಣಕ್ಕಾಗಿ ಅವರ ಹೃದಯ ವೈಶಾಲ್ಯತೆಗೆ ಮಾರುಹೋಗಿದ್ದೆ. ಮೇಲುನೋಟಕ್ಕೆ ಅಪ್ಪಟ ಗೌಡನಂತೆ ಕಾಣುವ ನಲ್ಲೂರ್ಪ್ರಸಾದ್  ಅವರ ನಡೆ ಮತ್ತು ನುಡಿಯಲ್ಲಿ ನಾನು ತಾಯ್ತನದ ಹೆಂಗರುಳನ್ನು ನಾನು ಕಂಡುಕೊಂಡಿದ್ದೆ.
 ನನಗಿಂತ ಒಂಬತ್ತು ವರ್ಷ ದೊಡ್ಡವರಾದ ನಲ್ಲೂರ್ ಪ್ರಸಾದ್ ಅವರನ್ನು ಸಾರ್ ಎಂದು ಕರೆಯುತ್ತಿದ್ದ ನನಗೆ ಮುಂದಿನ ದಿನಗಳಲ್ಲಿ ಅಣ್ಣಾ ಎಂದು ಕರೆಯುವ ಸಂದರ್ಭವೂ ಒದಗಿ ಬಂದಿತು. ಕನ್ನಡ ಕಥಾಲೋಕದ ದಿಗ್ಗಜ ಎನಿಸಿಕೊಂಡ ನನ್ನ ಮಂಡ್ಯ ಜಿಲ್ಲೆಯ ಕಥೆಗಾರ ಡಾ.ಬೆಸಗರಹಳ್ಳಿ  ರಾಮಣ್ಣನವರು ನನ್ನನ್ನು ಒಳಗೊಂಡಂತೆ ಅನೇಕ ಗೆಳೆಯರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೈ ಹಿಡಿದು ನಡೆಸಿಕೊಂಡು ಬಂದವರು. ಅವರು ಮಾತ್ರ ನಮ್ಮೆಲ್ಲರನ್ನೂ ಪ್ರೀತಿಯಿಂದಕಂದಾಎಂದು ಕರೆಯುತ್ತಿದ್ದರು. ಇದೇ ರೀತಿಯ ಸಂಬೋಧನೆಯನ್ನು ನಾನು ನಲ್ಲೂರ್ ಅವರಲ್ಲಿ ಕಂಡಾಗ, ನನ್ನ ಪಾಲಿಗೆ ಇಲ್ಲವಾಗಿರುವ ರಾಮಣ್ಣ, ಪ್ರಸಾದ್ ಎಂಬ ಅಣ್ಣನ ರೂಪದಲ್ಲಿ  ಸ್ಥಾನ  ತುಂಬಿದರಲ್ಲ ಎಂಬ ಸಂತೋಷ ಮತ್ತು  ತೃಪ್ತಿ ನನ್ನದಾಯಿತು.
ವಚನಕಾರ್ತಿ ಅಕ್ಕ ಮಹಾದೇವಿ ತನ್ನ ವಚನವೊಂದರಲ್ಲಿನೊಂದವರ ನೋವ ನೋಯದವರೆತ್ತ ಬಲ್ಲರೊಎಂದು ಹೇಳುವ ಹಾಗೆ ಗ್ರಾಮೀಣ ಸಂಸ್ಕತಿಯಿಂದ ಬಂದು ಅಕ್ಷರ ಲೋಕಕ್ಕೆ ಪ್ರಥಮವಾಗಿ ತರೆದುಕೊಂಡ ನನ್ನ ತಲೆಮಾರಿನ ತಲ್ಲಣ ಮತ್ತು ತಳಮಳಗಳನ್ನು ಒಡಲಲ್ಲಿ ಒತ್ತು ತಿರುಗುವಂತೆ ಕಾಣುವ ನಲ್ಲೂರ್ ಅವರು, ತಾನು ಬೇರು ಕತ್ತರಿಸಿಕೊಂಡು ಬಂದ ತನ್ನ ಗ್ರಾಮಸಂಸ್ಕøತಿ ಮತ್ತು ಅದರ ಮೇಲಿನ ಪ್ರೀತಿಯನ್ನು ತೊರೆಯಲಾರದೆ, ಇತ್ತ ನಗರ ಸಂಸ್ಕøತಿಗೆ ಸಂಪೂರ್ಣ ತೆರೆದುಕೊಳ್ಳಲಾಗದೆ ಒದ್ದಾಡಿದವರು, ತನ್ನೊಳಗಿನ ಧರ್ಮ ಸಂಕಟಕ್ಕೆ ಒಳಗೊಳಗೆ ಅತ್ತವರು. ಅವರ ಇಂತಹ ಮಾನಸಿಕ ತಾಕಲಾಟಗಳು ಅವರನ್ನು ಮಾನವೀಯ ಮುಖವುಳ್ಳ ಒಬ್ಬ ಶ್ರೇಷ್ಠ ಜಾನಪದ ವಿಧ್ವಾಂಸನಾಗಿ, ಶ್ರೇಷ್ಠ ಕವಿಯಾಗಿ, ಅಧ್ಯಾಪಕನಾಗಿ ಮತ್ತು ನಾಡು ಕಂಡ ಅತ್ಯುತ್ತಮ ವಾಗ್ಮಿ ಹಾಗೂ ಸಾಂಸ್ಕøತಿಕ ಸಂಘಟಕಕಾರನಾಗಿ  ರೂಪಿಸಿದವು.

ನಲ್ಲೂರು ಪ್ರಸಾದ್ ಅವರ ವ್ಯಕ್ತಿತ್ವದ ವಿಶೇಷವೆಂದರೆ, ಅವರಲ್ಲಿರುವ ನಾಯಕತ್ವದ ಗುಣ. ಒಂದು ಚಳುವಳಿಯಾಗಲಿ ಅಥವಾ ಸಂಘಟನೆಯಾಗಲಿ ಅದರ ನಾಯಕತ್ವ ವಹಿಸಿಕೊಂಡವನಿಗೆ ಪ್ರಾಥಮಿಕವಾಗಿ ತನ್ನ ಒಡನಾಡಿಗಳ ಸಲಹೆ ಮತ್ತು ಸೂಚನೆಗಳನ್ನು ಹಾಗೂ ಟೀಕೆ ಟಿಪ್ಪಣಿಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳವ ಗುಣವಿರಬೇಕು. ವರ್ತಮಾನದ ಸಾಮಾಜಿಕ ಚಳುವಳಿಗಳ ವಿಫಲತೆಯ ಹಿಂದೆ ಇರುವ ಬಹು ಮುಖ್ಯ ಅಂಶ ಇದೇ ಆಗಿದೆ. ಕನಾಟಕದ ರೈತ ಮತ್ತು ದಲಿತ ಚಳುವಳಿಗಳ ವಿಫಲತೆ ವಿಶಾಲ ಮನೋಭಾವದ ನಾಯಕರ ಕೊರತೆ ಕಾರಣವಾದುದನ್ನು ನಾವು ಅಲ್ಲಗೆಳೆಯಲಾಗದು. ಒಂದು ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಪರಿಭಾವಿಸುವ ವ್ಯಕ್ತಿ ಮಾತ್ರ ನಾಯಕನಾಗಬಲ್ಲ. ಇಂತಹ ಗುಣ ನಮ್ಮ ನೆಲದಲ್ಲಿ ಬಸವಣ್ಣನಿಗಿತ್ತು, ಭಾರತದಲ್ಲಿ ಗಾಂಧೀಜಿಯವರಿಗೆ ಇತ್ತು. ಇಂತಹ ಉದಾತ್ತ ಪರಂಪರೆಯನ್ನು ತನ್ನದಾಗಿಸಿಕೊಂಡು ಮೈಗೂಡಿಸಿಕೊಂಡಿರುವ ನಲ್ಲೂರ್ ಪ್ರಸಾದ್ ಅವರಲ್ಲಿ ಎಲ್ಲರ ಧ್ವನಿಗೆ ಕಿವಿಯಾಗುವ, ಕಣ್ಣೀರಿಗೆ ಕರವಸ್ತ್ರವಾಗುವ ಗುಣಗಳಿವೆ ಕಾರಣಕ್ಕಾಗಿ ಅವರಿಗೆ ನಾಡಿನುದ್ದಕ್ಕೂ ಪ್ರೀತಿಸಬಲ್ಲ ಗೆಳೆಯರಿದ್ದಾರೆ, ಶಿಷ್ಯ ಸಮುದಾಯವಿದೆ. ವಿಧ್ವಾಂಸರ ಒಡನಾಟವಿದೆ. ವರ್ತಮಾನದ ಜಗತ್ತಿನಲ್ಲಿ ಕನ್ನಡ ಭಾಷೆ, ರೈತ ಸಮುದಾಯದ ಬವಣೆ ಮತ್ತು ದಲಿತ ಹಾಗೂ ಹಿಂದುಳಿದವರ ರಕ್ಷಣೆ ಇವೆಲ್ಲವೂ ಹೋರಾಟವೆಂಬ ನೆಪದಲ್ಲಿ ಹಲವರಿಗೆ ಉದ್ಯೋಗ ಹಾಗೂ ಉದ್ಯಮವಾಗಿರುವ ಸಂದರ್ಭದಲ್ಲಿ ಗಂಭೀರವಾಗಿ ಯೋಚಿಸಬಲ್ಲ, ನಾಡನ್ನು ಮುನ್ನಡೆಸಬಲ್ಲ ನಿಜವಾದ ಸಾಂಸ್ಕøತಿಕ ಮತ್ತು ಸಾಮಾಜಿಕ ನಾಯಕರ ಅಗತ್ಯವಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಂಡ್ಯ ಗಡಿ ಭಾಗದ ಕೊನೆಯ ಹಳ್ಳಿಗಳಲ್ಲಿ ಒಂದಾದ ನಲ್ಲೂರಿನ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿ ಜನಿಸಿರುವ ಪ್ರಸಾದ್ ಅವರಲ್ಲಿ ಗಾಂಧಿಜಿಯವರಿಗೆ ಇದ್ದ  ಕಠೋರ ನಿಯಮ, ಸತ್ಯವನ್ನು ನೇರವಾಗಿ ಹೇಳುವ ಎದೆಗಾರಿಕೆ ಮತ್ತು ತಾಯ್ತನದ ಗುಣಗಳಿವೆ. ಕಾರಣಕ್ಕಾಗಿ ಅವರು ಕನ್ನಡದ ಶಕ್ತಿ ಕೇಂದ್ರವೆನಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಯಿತು.
ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಚಂದ್ರಶೇಖರಪಾಟಿಲರ ವಿರುದ್ಧ ಸೋಲಪ್ಪಿದಾಗ, ತಮ್ಮ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ ಪ್ರಸಾದ್, ತಮ್ಮ ತೆರೆದ ಮನಸ್ಸಿನಿಂದ ಚಂದ್ರಶೇಖರ ಪಾಟೀಲರ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದರು. ನಲ್ಲೂರ್ ಪ್ರಸಾದ್ ಅವರ ನಡೆ ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯಾದ್ಯಂತ ಅಪಾರ ಗೆಳೆಯರನ್ನು ಸಂಪಾದಿಸಿಕೊಟ್ಟಿತಲ್ಲದೆ, ನಂತರದ ಅವಧಿಗೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪರೋಕ್ಷವಾಗಿ ನೆರವಾಯಿತು.


ಗ್ರಾಮೀಣ ಸಂಸ್ಕøತಿಯ ಹಿನ್ನಲೆಯಿಂದ ಬಂದ   ಹಳ್ಳಿಗಾಡಿನ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆ ಮತ್ತು ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಕಲಿಯುವ ಸಂದರ್ಭದಲ್ಲಿ ಅನುಭವಿಸಬೇಕಾದ ಕೀಳರಿಮೆ, ಅನಾಥ ಪ್ರಜ್ಞೆ ಇವೆಲ್ಲವನ್ನೂ ಸ್ವತಃ ಅನುಭವಿಸಿ ಬೆಳೆದಿರುವ ನಲ್ಲೂರ್ ತಮ್ಮ ಬದುಕಿನುದ್ದಕ್ಕೂ ತಮಗಿದ್ದ ಆತ್ಮವಿಶ್ವಾಸದ ಮೂಲಕ ಎಲ್ಲಾ ಅಪಮಾನ ಮತ್ತು ಕೀಳರಿಮೆಗಳನ್ನು ಮೆಟ್ಟಿನಿಂತವರು. ಹಾಗಾಗಿ ಶಾಲಾ ಕಾಲೇಜು ದಿನಗಳಲ್ಲಿ ಅವರೊಳಗೊಬ್ಬ ನಾಯಕ ರೂಪುಗೊಂಡಿದ್ದ. ನಾಯಕನೊಳಗೆ ಕೇವಲ ನಾಯಕತ್ವ ವಹಿಸುವ ಗುಣವಲ್ಲದೆ ನಾಟಕ, ಸಂಗೀತ, ಕಲೆ, ಸಾಹಿತ್ಯವನ್ನು ಆಸ್ವಾದಿಸುವ ಮತ್ತು ಸೃಷ್ಟಿಸುವ ಸೃಜನಶೀಲತೆಯೂ ಮನೆ ಮಾಡಿತ್ತು. ಕರ್ನಾಟಕದ ಬಲಿಷ್ಟ ಜಾತಿ ಸಮುದಾಯದಲ್ಲಿ ಹುಟ್ಟಿ ಬೆಳದರೂ ಅವರೊಳಗೆ ಜಾತಿ ಮತ್ತು ಧರ್ಮವನ್ನು ಮೀರುವ ಗುಣಗಳಿದ್ದವು. ತನ್ನದೇ ಆದ ಹಾಸನ ಜಿಲ್ಲೆಯ ಪ್ರತಿಭಾವಂತ ದಲಿತ ಕವಿಯಾಗಿರುವ ಸುಬ್ಬು ಹೊಲೆಯಾರ್ ಅವರನ್ನು ಉದ್ದೇಶಿಸಿ ತಮ್ಮ ರೆಕ್ಕೆ ಬಡಿಯುವ ಮುನ್ನಕವನ ಸಂಕಲನದ ಕವಿತೆಯೊಂದರಲ್ಲಿ  ಹೀಗೆ ಬರೆದುಕೊಂಡಿದ್ದಾರೆ.
                    ಹೇಗಿದ್ದಿ ಸುಬ್ಬು?
                    ಕೇಳಲು ಕಷ್ಟವಾಗಿದೆ ನನಗೆ
                    ಶೂದ್ರ ತ್ರಿಶೂಲ ತಿವಿದ
                    ಗೌಡ ಪರಂಪರೆಯ
                    ಪರದೇಸಿಯ ಕೂಸು ನಾನು.
                    ನಿನ್ನ ನೋವಿಗೆ ನನ್ನ ನಿಟ್ಟುಸಿರು
                    ನಿನ್ನ ಅವಮಾನಕ್ಕೆ ನನ್ನ ತಗ್ಗಿದ ತಲೆ.
ಸಾಲುಗಳು ನಲ್ಲೂರು ಪ್ರಸಾದ್ ಅವರ ಆತ್ಮ ಸಾಕ್ಷಿಯ ಪ್ರಜ್ಞೆಗೆ ಸಾಕ್ಷಿಯಂತಿವೆ. ಶತ ಶತ ಮಾನಗಳ ಕಾಲ ಪುರೊಹಿತಶಾಹಿಯ ಕಾಲಲ್ಲಿ ತುಳಿಸಿಕೊಂಡ ಅಪಮಾನದ ಮತ್ತು ನೋವಿನ ಚರಿತ್ರೆಯನ್ನು ಬೆನ್ನಿಗೆ ಕಟ್ಟಿಕೊಂಡು ಬಂದಿರುವ ಶೂದ್ರ ಜಾತಿಯ ಸಮುದಾಯದಲ್ಲಿ  ಜನಿಸಿದ್ದರೂ ಕೂಡತನ್ನ ಒಡಲೊಳಗೆ  ಅಪಮಾನದ ಹಾಡಗಳನ್ನು ಬಚ್ಚಿಟ್ಟುಕೊಂಡು ಇನ್ನೊಬ್ಬರ ನೋವಿನ ಹಾಡಿಗೆ ದನಿಯಾಗುವ ನಲ್ಲೂರ್ ಪ್ರಸಾದ್ ಅವರ ಪರಿ ನಿಜಕ್ಕೂ  ಅಚ್ಚರಿ ಪಡುವಂತಹದ್ದು. ಮಾನವಿಯತೆಯ ನೆಲೆಯಲ್ಲಿ ಒಬ್ಬ ಅಪ್ಪಟ ಮನುಷ್ಯನೊಬ್ಬ ಬದುಕಬಹುದಾದ ಶ್ರೇಷ್ಠವಾದ ಬದುಕಿನ ದಾರಿ  ಇದು ಎಂದು ನನಗನಿಸಿದೆ. ಇದು ಒಂದು ರೀತಿಯಲ್ಲಿ ಅಲ್ಲಮ ಪ್ರಭು ಹೇಳುವ ಕಂಗಳಲಿ ನಟ್ಟ ಗಾಯವನಾರಿಗೆ ತೋರಬಹುದಯ್ಯಾ?” ಎನ್ನುವ ಸ್ಥಿತಿ.
ಜಗದ ನೀತಿ ನಿಯಮಗಳು ಏನೇ  ಇರಲಿ, ತಾನು ನಡೆದದ್ದು ದಾರಿ ಎಂಬಂತೆ ಕುವೆಂಪು ವಿಚಾರಧಾರೆಯಲ್ಲಿ ಬೆಳೆದು,  “ ಯಾವ ಶಾಸ್ತ್ರ ಏನು ಹೇಳಿದರೇನು? ಎದೆಗಿಂತ ಮಿಗಿಲಾದ ದನಿ ಇಹುದೇನು? ಎಂಬ ಅವರ ಕವಿತೆಯ ಸಾಲಿನಂತೆ ಬದುಕುತ್ತಿರುವ ನಲ್ಲೂರು ಪ್ರಸಾದ್, ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ  “ಆನು ಒಲಿದಂತೆ ಹಾಡುವೆ ನಿನಗೆ ಕೇಡಿಲ್ಲವಾಗಿಎಂಬ ಬಸವಣ್ಣನ ವಚನದಂತೆ ನಡೆಯುತ್ತಿರುವವರುಕಳೆದ ಕಾಲು ಶತಮಾನದಿಂದ ಇಂತಹ ಒಬ್ಬ ಅಣ್ಣನ ಜೊತೆ ಕಿರಿಯ ಗೆಳಯನಾಗಿ, ತಮ್ಮನಾಗಿ  ಬದುಕುತ್ತಿರುವ ನನಗೆ  ಇವೆಲ್ಲವೂ   ಬದುಕಿನ ಅವಿಸ್ಮರಣೀಯ ಕ್ಷಣಗಳು ಎನಿಸಿವೆ.
                         ( ಡಾ. ನಲ್ಲೂರ್ ಪ್ರಸಾದ್ ಅವರ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನ)