ಮಂಗಳವಾರ, ಜುಲೈ 31, 2018

ಹರಿಲಾಲ್ ಕಥನ-ಐದು : ಪುತ್ರ ಹರಿಲಾಲ್ ಗೆ ಬಾಪುವಿನ ಕಣ್ಣೀರಿನ ವಿದಾಯ


ಮಕ್ಕಳ ವಿದ್ಯಾಭ್ಯಾಸಕ್ಕೆ  ಸಂಬಂಧಪಟ್ಟಂತೆ  ಗಾಂಧಿಜಿಯವರು ತಳೆದಿದ್ದ ಧೋರಣೆಗಳು  ಹರಿಲಾಲ್ ಮತ್ತು  ಗಾಂಧೀಜಿಯವರ ನಡುವಿನ ಭಿನ್ನಾಭಿಪ್ರಾಯಕ್ಕೆ ಮುಖ್ಯ ಕಾರಣವಾದವು.. ನ್ಶೆತಿಕತೆಯನ್ನು ಒಳಗೊಂಡಿರುವ ಭಾರತೀಯ ಶಿಕ್ಷಣ ಪದ್ಧತಿ ಕುರಿತು ಅಪಾರ ಕಾಳಜಿ ಇದ್ದ ಗಾಂಧೀಜಿಯವರಿಗೆ ಪಾಶ್ಚಿಮಾತ್ಯ ಶಿಕ್ಷಣ ನೀತಿ ಕುರಿತಂತೆ ಒಲವಿರಲಿಲ್ಲ. ಜೊತೆಗೆ ಶಿಕ್ಷಣ ಪದ್ಧತಿಯಲ್ಲಿ ಪಾಶ್ಚಿಮಾತ್ಯ ದೇಶಗಳು ತೋರುತ್ತಿದ್ದ ವರ್ಣ ಬೇಧ ನೀತಿಯಿಂದಾಗಿ ಮಕ್ಕಳು ಬೆಳೆದಂತೆ ಕೀಳರಿಮೆಯಲ್ಲಿ ನಲುಗಿ ಹೋಗುತ್ತಾರೆ ಎಂದು ಅವರು ನಂಬಿದ್ದರು. ( ಕಾಲಘಟ್ಟದ ಇಂತಹ ಅನುಭವಕ್ಕೆ ಗಾಂಧೀಜಿಯವರು ಸಾಕ್ಷಿಯಾಗುವುದರ ಜೊತೆಗೆ ಇಂಗ್ಲೇಂಡ್ ನಲ್ಲಿ ವಿದ್ಯಾಭ್ಯಾಸ ಮಾಡುವಾಗ ಸ್ವತಃ ಅನುಭವಿಸಿದ್ದರು) ನನ್ನ ಮಕ್ಕಳು   ಅಂತಹ ಶಿಕ್ಷಣ ಪಡೆಯುವ ಬದಲು ಅನಕ್ಷಸ್ಥರನಾಗಿ ಇರುವುದು ಒಳಿತು ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಆದರೆ, ಪಾಶ್ಚಿಮಾತ್ಯ ಜಗತ್ತಿನಲ್ಲಿ ಉನ್ನತ ಶಿಕ್ಷಣ ಪಡೆದು ಮಕ್ಕಳ ವಿಷಯದಲ್ಲಿ  ತೋರುತ್ತಿರುವ ಅಸಹಕಾರ  ಕುರಿತು ಹರಿಲಾಲ್ ಗೆ ಗಾಂಧೀಜಿಯವರ ಮಾತುಗಳು ಹಾಗೂ ಧೋರಣೆ ಕುರಿತು ನಂಬಿಕೆ ಇರಲಿಲ್ಲ.  ಗಾಂಧೀಜಿಯವರು ಸದಾ ಸಾಮಾಜಿಕ ಸೇವೆಯ ಕುರಿತು ಹಾಗೂ ಸರಳವಾದ ಮತ್ತು ಮಿತವಾದ ಜೀವನ ಕುರಿತು ಮಾತನಾಡುತ್ತಿದ್ದರು. ಜೊತೆಗೆ ಅದರಂತೆ ಬದುಕುತ್ತಿದ್ದರು. ಪಾಶ್ಚಿಮಾತ್ಯ ಪ್ರೇರಿತ ಶಿಕ್ಷಣ ಪಡೆದರೆ ಮಕ್ಕಳು ಹಾಳಾಗುತ್ತಾರೆ ಎಂದು ನಂಬಿರುವ ನನ್ನ ತಂದೆಯವರು ಪಾಶ್ಚಿಮಾತ್ಯ ದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರಲ್ಲ! ಸರಳವಾದ ಜೀವನ ನಡೆಸುತ್ತಾ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರಲ್ಲ! ಇದು ಹರಿಲಾಲ್ ಪಾಲಿಗೆ ಒಗಟಿನ ವಿಷಯವಾಗಿತ್ತು. ತಾನೂ ಸಹ ತಂದೆಯಂತೆ ಬ್ಯಾರಿಸ್ಟರ್ ಆಗಬೇಕೆಂಬ ಕನಸುಕೊಂಡಿದ್ದ ಹರಿಲಾಲ್ಗೆ ತನ್ನ ಕುಟುಂಬದ ಒಬ್ಬ ಸದಸ್ಯನಿಗೆ ಶಿಷ್ಯವೇತನದಂತಹ ಅವಕಾಶ ದೊರೆತಾಗಲೂ ಸಹ ಗಾಂಧೀಜಿಯವರು ನೀರಾಕರಿಸಿದ್ದರಿಂದ ತಂದೆಯ ಜೊತೆಗಿನ ಭಿನ್ನಾಭಿಪ್ರಾಯ ಬೆಳೆಯತೊಡಗಿತು. ವಿಷಯದಲ್ಲಿ ಗಾಂಧೀಜಿಯವರ ಕುಟುಂಬದಲ್ಲಿ ಅನೇಕ ಬಾರಿ ಬಿಸಿ ಬಿಸಿ ಚರ್ಚೆ ನಡೆದು ಸದಸ್ಯರ ನಡುವೆ ಮುನಿಸಿಗೆ ಕಾರಣವಾಯಿತು. ಕಸ್ತೂರಬಾ ಮತ್ತು ಪುತ್ರರೆಲ್ಲರೂ ಗಾಂಧೀಜಿಯವರ ಧೋರಣೆ ವಿರುದ್ಧ ಸಿಡಿದು ನಿಂತರು. ಒಮ್ಮೆ ಕಸ್ತೂರಬಾ ರವರು ತಾಳ್ಮೆ ಕಳೆದುಕೊಂಡು ಗಾಂಧಿಯವರ ಮುಂದೆ ನಿಂತುನಿಮ್ಮ ಮನಸ್ಸಿನಲ್ಲಿ ಏನಿದೆ? ಮಕ್ಕಳ ಭವಿಷ್ಯವನ್ನು ಹೇಗೆ ರೂಪಿಸಬೇಕೆಂದು ಯೋಚಿಸಿದ್ದೀರಿ? ಅವರನ್ನು ಅನಕ್ಷರಸ್ಥರನ್ನಾಗಿ ಮತ್ತು ಭಿಕ್ಷುಕರನ್ನಾಗಿ ಮಾಡಲು ನಿರ್ಧರಿಸಿದ್ದೀರಾ?” ಎಂದು ತೀಕ್ಷ್ಣವಾಗಿ ಪ್ರಸ್ನಿಸಿದ್ದರು.
ಗಾಂಧೀಜಿಯವರಿಗೆ ತನ್ನ ಇತರೆ ಮಕ್ಕಳಿಗಿಂತ ಹೆಚ್ಚಾಗಿ ಹರಿಲಾಲ್ ಕುರಿತು ವಿಶೇಷ ಕಾಳಜಿಯಿತ್ತು. ಹರಿಲಾಲ್ ವಯಸ್ಕನಾಗಿರುವುದರ ಜೊತೆಗೆ  ಗೃಹಸ್ಥನಾಗಿದ್ದ ಕಾರಣ ಹೆಚ್ಚು ಆಸಕ್ತಿ ತೋರುತ್ತಿದ್ದರು. ಆದರೂ ಸಹ  ಗಾಂಧೀಜಿಯವರ  ಕೆಲವು ಆಸಕ್ತಿ ಮತ್ತು ತಾಳುತ್ತಿದ್ದ ಧೋರಣೆಗಳು ಕುಟುಂಬದ ಸದಸ್ಯರಿಗೆ ಮಾತ್ರವಲ್ಲದೆ ಅವರ ಮಿತ್ರರಿಗೂ ಧ್ವಂಧ್ವ ನಿಲುವುಗಳಂತೆ ಕಾಣುತ್ತಿದ್ದವು.  ಕುರಿತಂತೆ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆತ್ಮೀಯ ಗೆಳೆಯರಾಗಿದ್ದ ಪೊಲ್ಲಾಕ್ ಮತ್ತು ಕಲ್ಲೆನ್ ಬಚ್ ಇಬ್ಬರೂ ಕಳವ್ಯಕ್ತಪಡಿಸುವುದರ ಮೂಲಕ ಮಕ್ಕಳ ಶಿಕ್ಷಣ ಕುರಿತಂತೆ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರು. ಇವರ ಜೊತೆಗೆ  ಗಾಂಧೀಜಿಯವರು ತಮ್ಮ ಮಕ್ಕಳ ಕುರಿತಂತೆ ಕಠಿಣ ನಿಲುವನ್ನು ಹೊಂದುತ್ತಿದ್ದಾರೆ ಎಂದು ಅನೇಕ ಮಿತ್ರರು ಅಸಮಧಾನ ವ್ಯಕ್ತ ಪಡಿಸಿದರು. ಆದರೆ, ಗಾಂಧೀಜಿಯವರ ನಿಲುವಿನಲ್ಲಿ ಕಿಂಚಿತ್ತೂ ಬದಲಾವಣೆಯಾಗಲಿಲ್ಲ. ತನ್ನ ಮಕ್ಕಳೆಲ್ಲರೂ ಅಸವiಧಾನಗೊಂಡಿದ್ದಾರೆ ಎಂದು ಗೊತ್ತಿದ್ದರೂ ಸಹ ತಾನು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ತಾನು ಹಾಕಿಕೊಂಡಿರುವ ಯೋಜನೆ ಮತ್ತು ರೂಪು ರೇಷೆಗಳಿಗೆ ಅನುಗುಣವಾಗಿ ತಮ್ಮ ಮಕ್ಕಳ ಶಿಕ್ಷಣ ನಡಿಯಬೇಕು ಎಂದು ಅವರು ಪಣ ತೊಟ್ಟವರಂತೆ ನಡೆದುಕೊಳ್ಳುತ್ತಿದ್ದರು. ಅವರ ಪುತ್ರರಲ್ಲಿ ಇಪ್ಪತ್ತೊಂದು ವಯಸ್ಸಿನ ಹರಿಲಾಲ್ ನಂತರ ಹತ್ತೊಂಬತ್ತು ವರ್ಷದ ಮಣಿಲಾಲ್ ತನ್ನ ತಂದೆಯನ್ನು ಪ್ರಶ್ನಿಸಬಹುದಿತ್ತು. ಆದರೆ, ತಂದೆಯ ನಿರ್ಧಾರಗಳನ್ನು ಅವರೆಂದೂ ಪ್ರಶ್ನಿಸಲಿಲ್ಲ.
ಮಹಾತ್ಮಗಾಂಧಿಯವರು ಇಂಗ್ಲೇಂಡಿನಲ್ಲಿ ಶಿಕ್ಷಣಕ್ಕಾಗಿ ಆಯ್ಕೆ ಮಾಡಿದ್ದ ಛಗನ್ ಲಾಲ್ ಅಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳಲಾರದೆ, ಕೇವಲ ಹದಿನೈದು ದಿನಗಳಲ್ಲಿ ವಾಪಸ್ ಭಾರತಕ್ಕೆ ಬಂದ ನಂತರ, ಡಾ. ಪ್ರಂಜೀವನ್ ದಾಸ್ ಮೆಹತಾ ಅವರು ನಿಮ್ಮ ಪುತ್ರರಾದ ಹರಿಲಾಲ್ ಅಥವಾ ಮಣಿಲಾಲ್ ಇವರಲ್ಲಿ ಒಬ್ಬರನ್ನು ಇಂಗ್ಲೇಂಡಿಗೆ ಕಳಿಸಿಕೊಡಿ ಎಂದು ಗಾಂಧೀಜಿಯವರಿಗೆ ಪತ್ರ ಬರೆದಾಗಲೂ ಸಹ  ಗಾಂಧೀಜಿ ಆಹ್ವಾನವನ್ನು ತಿರಸ್ಕರಿಸಿದರು. ಹರಿಲಾಲ್ ಗೆ ತನ್ನ ಬದಲಿಗೆ ಕಿರಿಯ ಸಹೋದರ ಮಣಿಲಾಲ್ ಅವರನ್ನು ಕಳಿಸಿದ್ದರೂ ಸಹ   ಖುಷಿ ಪಡುವ ಸ್ಥಿತಿಯಲ್ಲಿದ್ದರು. ಆದರೆ, ಎರಡನೆಯ ಬಾರಿಯು ಗಾಂಧೀಜಿಯವರು ತಮ್ಮ ಪುತ್ರರ ಬದಲಾಗಿ  ಸೊರಾಬ್ಜಿ ಸಪ್ರುಜಿ ಎಂಬ ಪಾರ್ಸಿ ಸಮುದಾಯದ ವಿದ್ಯಾರ್ಥಿಯನ್ನು ಆಯ್ಕೆ ಮಾಡಿದರು. ಇಂದು ಅಂತಿಮವಾಗಿ ಹರಿಲಾಲ್ ಗೆ ಕುಟುಂಬ ತೊರೆಯಲು ಪ್ರೇರಣೆಯಾಯಿತು. ನಂತರ ಅದು ತನ್ನ ಪತ್ನಿ ಗರ್ಭಿಣಿ ಪತ್ನಿ ಗುಲಾಬ್ಬೆಹನ್  ಜೊತೆ ಭಾರತಕ್ಕೆ ಪ್ರಯಾಣಿಸಲು ನಿರ್ಧರಿಸಿದಾಗ ಅನುಮತಿ ನಿರಾಕರಿಸಿದ ತನ್ನ  ತಂದೆ ಬಗ್ಗೆ ಸಿಡಿಮಿಡಿಗೊಂಡಿದ್ದ ಹರಿಲಾಲ್ ಅಂತಿಮವಾಗಿ  ತಂದೆಯ ವಿರುದ್ಧ ಸ್ಪೋಟಗೊಳ್ಳಲು ಕಾರಣವಾಯಿತು.
ಹರಿಲಾಲ್ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ತನ್ನ ತಂದೆಯ ಮನೆಯನ್ನು ತೊರೆದ ಸಂದರ್ಭದಲ್ಲಿ ಇತ್ತ ಭಾರತದಲ್ಲಿ ಅವರ ಪತ್ನಿ ಗುಲಾಬ್ ಬೆಹನ್ ಗಂಡು ಮಗುವಿಗೆ ಜನ್ಮವಿತ್ತರು.  ಸುದ್ದಿ ತಿಳಿದ ನಂತರ ಹರಿಲಾಲ್ರವರು ಭಾರತಕ್ಕೆ ಹಿಂತಿರುಗಲು ಚಡಪಡಿಸಿದರು. ಆದರೆ, ಅವರ ಬಳಿ ಹಣವಿರಲಿಲ್ಲ. ಹರಿಲಾಲ್ಗೆ ತನ್ನ ಪತ್ನಿ ಹಾಗೂ ಪುತ್ರನನ್ನು ನೋಡುವುದರ ಜೊತೆಗೆ ಭಾರತಕ್ಕೆ ಹಿಂತಿರುಗಿ ಶಿಕ್ಷಣವನ್ನು ಮುಂದುವರಿಸಿ ತಂದೆಗೆ ತಕ್ಕ ಉತ್ತರ ನೀಡಬೇಕೆಂಬ ಚಡಪಡಿಕೆ ಸಹ ಮನದೊಳಗೆ ಬಲವಾಗಿ ಬೇರೂರಿತ್ತು. ಏಕೆಂದರೆ, ಯಾವ ಕಾರಣಕ್ಕೂ ತಾನು, ಪತ್ನಿ ಮತ್ತು ಮಕ್ಕಳು ತನ್ನ ತಂದೆಯ ಆಶ್ರಯದಲ್ಲಿ ಬದುಕಬಾರದು ಎಂದು ಅವರು ನಿಶ್ಚಯಿಸಿದ್ದರು. ಹಿಂದೆ   ಗಾಂಧೀಜಿಯವರು  ಸಾರ್ವಜನಿಕವಾಗಿ ಉಡುಗೊರೆಯಾಗಿ ಪಡೆದಿದ್ದ ಆಭರಣಗಳನ್ನು ವೈಯಕ್ತಿಕವಾಗಿ ಬಳಸಿಕೊಳ್ಳಲು ನಿರಾಕರಿಸಿದ ಸಂದರ್ಭದಲ್ಲಿ ಹರಿಲಾಲ್ ತಂದೆಯ ನಿಲುವನ್ನು ಬೆಂಬಲಿಸಿದ್ದರು ಹಾಗಾಗಿ ದುಡಿದು ಜೀವನ ಮಾಡುವುದು ಶ್ರೇಷ್ಠವಾದ ಕಾಯಕ ಎಂಬುದರಲ್ಲಿ ನಂಬಿಕೆಯಿಟ್ಟುಕೊಂಡಿದ್ದ ಹರಿಲಾಲ್ ಗೆ ಯಾವುದೇ ರೀತಿಯಲ್ಲಿ  ತಂದೆಯ ಆಶ್ರಯ ಬೇಡ ಎನಿಸಿತ್ತು.   ಕುಟುಂಬದ ಯಾರೊಬ್ಬರಿಗೂ ತಿಳಿಸದೆ ರಹಸ್ಯವಾಗಿ ಭಾರತಕ್ಕೆ ಹಿಂತಿರುಗಲು ಹರಿಲಾಲ್ ನಿರ್ಧರಿಸಿದರು.  ನಿರ್ಧಾರವನ್ನು ಅವರು ಸೆರೆಮನೆವಾಸದಲ್ಲಿ ದ್ದಾಗÀ ನಿರ್ಧರಿಸಿದ್ದರು.
ಗಾಂಧೀಜಿಯವರಿಗೆ ಆತ್ಮೀಯರಾಗಿದ್ದ ಜೋಸೆಫ್ ರಾಯಪ್ಪನ್ ಎಂಬುವರ ಜೊತೆ ಮೊದಲ ಬಾರಿಗೆ ವಿಷಯವನ್ನು ಹರಿಲಾಲ್ ಪ್ರಸ್ತಾಪ ಮಾಡಿದರು. ಜೋಸೆಫ್ ರಾಯಪ್ಪನ್ರವರು ದಕ್ಷಿಣ ಆಫ್ರಿಕಾದ ನಟಾಲ್  ನಗರದ ಕಾಲೋನಿಯಲ್ಲಿ ಜನಿಸಿ, ಇಂಗ್ಲೆಂಡ್ ನಲ್ಲಿ ಒಂಬತ್ತು ವರ್ಷಗಳ ಕಾಲ ಉನ್ನತ ವ್ಯಾಸಂಗದಲ್ಲಿ ತೊಡಗಿಕೊಂಡು ಬ್ಯಾರಿಸ್ಟರ್ ಪದವಿ ಪಡೆದು ತಾಯ್ನಾಡಿಗೆ ಹಿಂತಿರುಗಿದ್ದರು. ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲ್ ನಗರದಲ್ಲಿ ಗಾಂಧೀಜಿಯವರು ನಡೆಸುತ್ತಿದ್ದ ಸತ್ಯಾಗ್ರಹದಲ್ಲಿ ಸ್ವಯಣ ಪ್ರೇರಿತರಾಗಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ್ದರು.  ಸತ್ಯಾಗ್ರಹದ ಮೂಲಕ ಜೋಸೆಫ್ ರಾಯಪ್ಪನ್  ಗಾಂಧೀಜಿ ಕುಟುಂಬಕ್ಕೆ ಹತ್ತಿರವಾಗಿದ್ದರು. ಇದಲ್ಲದೆ ಹರಿಲಾಲ್ ಮತ್ತು ರಾಯಪ್ಪನ್ ಒಟ್ಟಿಗೆ ಸೆರೆಮನೆ ವಾಸ ಅನುಭವಿಸಿದ್ದರಿಂದ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.
ಜೋಸೆಫ್ ರಾಯಪ್ಪನ್ ರವರು 1911 ಮೇ 20 ರಂದು ಡರ್ಬಾನ್ ನಗರದಿಂದ ಟ್ರಾನ್ಸ್ ವಾಲ್ ನಗರಕ್ಕೆ  ಸತ್ಯಾಗ್ರಹಕ್ಕಾಗಿ ಹೊರಡುವ ಮುನ್ನ, ಹರಿಲಾಲ್ ಅವರನ್ನು ಜೋಹಾನ್ಸ್ ನಗರದಲ್ಲಿ ಭೇಟಿ ಮಾಡಿ ವಿಷಯವನ್ನು ತಿಳಿಸಿದ್ದರು. ಸಾಧ್ಯವಾದರೆ, ತನ್ನ ನಿರ್ಧಾರವನ್ನು ತನ್ನ ತಂದೆಯವರಿಗೆ ತಿಳಿಸುವಂತೆ ವಿನಂತಿಸಿಕೊಂಡರು. ಘಟನೆಗಳು ಜರುಗುವ ಮುನ್ನವೇ ಹರಿಲಾಲ್ ಅವರು 1911 ಮೇ 8 ರಂದು ತನಗೆ ಸಂಬಂಧಿಸಿದ ವಸ್ತುಗಳನ್ನು ಕಲೆ ಹಾಕಿಕೊಂಡು ಹೊರಡಲು ಅಣಿಯಾಗಿದ್ದರು. ಅವರು ಸಂಗ್ರಹಿಸಿಕೊಂಡಿದ್ದ ಕೆಲವು ಪುಸ್ತಕಗಳು ಮತ್ತು ವಸ್ತುಗಳ ಜೊತೆ ತನ್ನ ತಂದೆಯ ಭಾವ ಚಿತ್ರವೂ ಇದ್ದುದ್ದು ವಿಶೇಷವಾಗಿತ್ತು. ಮನೆಯನ್ನು ತೊರೆಯುವ ಮುನ್ನ ಗಾಂಧೀಜಿಯವರಿಗೆ ಹರಿಲಾಲ್ ಪತ್ರವೊಂದನ್ನು ಬರೆದಿಟ್ಟರು.  ಪತ್ರವನ್ನು  ಗಾಂಧೀಜಿಯವರು  ಓದಿದಾಗ ನೊಂದುಕೊಂಡ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತು. ಹರಿಲಾಲ್ ತನ್ನ ಪತ್ರದಲ್ಲಿ ತನ್ನ ನಿರ್ಧಾರಕ್ಕೆ ತಾನು ಓದಿಕೊಂಡಸರಸ್ವತಿ ಚಂದ್ರಎಂಬ ಕಾದಂಬರಿ ಮೂಲ ಪ್ರೇರಣೆಯಾಯಿತು ಎಂದು ದಾಖಲಿಸಿದ್ದರು. ( ಗುಜರಾತಿ ಭಾಷೆಯ ಗೋವರ್ಧನ್ ಮಹಾವರ್ಮ ತ್ರಿಪಾಠಿ ಎಂಬುವರ ಕಾದಂಬರಿ) ಹರಿಲಾಲ್ ಮನೆ ತೊರೆದ  ವಿಷಯ ತಿಳಿದ ನಂತರ  ಸುರೇಂದ್ರ ಮೇಧ್ ಮತ್ತು ಪ್ರಾಗ್ಜಿ ಎಂಬುವರು ಜೋಹಾನ್ಸ್ ನಗರಕ್ಕೆ ತೆರಳಿ ಹರಿಲಾಲ್ ಗಾಗಿ ಹುಡುಕಾಟ ನಡೆಸಿದರು. ಆದರೆ, ಹರಿಲಾಲ್  ತನಗೆ ಪರಿಚಯವಿದ್ದ ಮಿತ್ರರಿಂದ ಇಪ್ಪತ್ತು ಪೌಂಡ್ ಹಣವನ್ನು ಸಾಲವಾಗಿ ಪಡೆದು ಅಲ್ಲಿಂದ ಕಾಣೆಯಾಗಿದ್ದರು.
ಗಾಂಧಿಯವರ ಪುತ್ರ ಹರಿಲಾಲ್ ಮನೆ ತೊರೆದು ಹೋಗಿದ್ದಾನೆ  ಎಂಬ ಸುದ್ದಿಯು ದಕ್ಷಿಣ ಆಫ್ರಿಕಾದಲ್ಲಿದ್ದ ಭಾರತೀಯ ನಿವಾಸಿಗಳ ನಡುವೆ ಕಾಡ್ಗಿಚ್ಚಿನಂತೆ ಹರಡಿತು.  ಅನೇಕ ಮುಸ್ಲಿಂ ಸಮುದಾಯದ ಭಾರತೀಯ ವ್ಯಾಪಾರಿಗಳು ಗಾಂಧಿ ಕುಟುಂಬದ ನೆರವಿಗೆ ಆಗಮಿಸಿದರು. ಕೆಲವರುನೀವು ನಿಮ್ಮ ಪುತ್ರರನನ್ನು ಇಂಗ್ಲೇಂಡಿಗೆ ಕಳಿಸಬೇಕಿತ್ತುಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಂದರ್ಭದಲ್ಲಿ ಅಸಹಾಯಕರಂತಿದ್ದ ಗಾಂಧೀಜಿಯವರು ತಮ್ಮ ಸೋದರ ಸಂಬಂಧಿ ಮಗನ್ ಲಾಲ್ ರವರಿಗೆ ಖಾಸಾಗಿಯಾಗಿ ಪತ್ರ ಬರೆದುಹರಿಲಾಲ್ ದುಡುಕುವುದರ ಮೂಲಕ ಅತಿರೇಕದ ನಿರ್ಧಾರ ತೆಗೆದುಕೊಂಡಿದ್ದಾನೆ. ಇದರಲ್ಲಿ ಅವನದು  ತಪ್ಪಿಲ್ಲ. ಅವನ ನಿರ್ಧಾರದ ಹಿಂದೆ ನನ್ನ ಹೊಣೆಗೇಡಿತನದ ನಡುವಳಿಕೆಯಿದೆಎಂದು ತಮ್ಮ ಪಶ್ಚಾತಾಪದ ಭಾವನೆಯನ್ನು ಹೊರಹಾಕಿದರು. ಅದೇ ದಿನ ಅಂದರೆ, ಮೇ 8 ರಂದು ಗಾಂಧೀಜಿಯವರು ತಮ್ಮ ಜೋಹಾನ್ಸ್ ಬರ್ಗ್  ಕಚೇರಿಯಿಂದ ಹೊರಟು ಟಾಲ್ಸ್ ಟಾಯ್ ಫಾರಂ ತಲುಪಿದರು. ಅಲ್ಲಿನ ಸಹವರ್ತಿಗಳ ಜೊತೆ ಮಾತನಾಡುತ್ತಾ, ಹರಿಲಾಲ್ ಮನೆ ತ್ಯಜಿಸಿರುವ ವಿಷಯವನ್ನು  ಕಸ್ತೂರಬಾ ಅವರಿಗೆ ತಿಳಿಸದೆ ರಹಸ್ಯವಾಗಿಡುವಂತೆ ಮನವಿ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಸಂದರ್ಭವನ್ನು ನೋಡಿ ನಾನು ನನ್ನದೇ ಆದ ಮಾರ್ಗದಲ್ಲಿ ಆಕೆಗೆ ವಿಷಯ ಮುಟ್ಟಿಸುತ್ತೀನಿ ಎಂದು ನುಡಿದರು.

ಇತ್ತ ಹರಿಲಾಲ್ ಜೋಹಾನ್ಸ್ ಬರ್ಗ್ನಗರದಿಂದ ರೈಲಿನಲ್ಲಿ ಹೊರಟು ದಕ್ಷಿಣ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿದ್ದ ಪೋರ್ಚುಗೀಸರ ವಸಾಹಿತು ಪ್ರದೇಶ ಹಾಗೂ ಬಂದರು ನಗರವಾದ  ಲೌರೆಂಕೊ ಮಾಕ್ರ್ವೆಸ್ ಎಂಬಲ್ಲಿಗೆ ಬಂದಿಳಿದರು. ( ನಗರಕ್ಕೆ ಡೆಲಾನ್  ಬೇ ಎಂದು ಸಹ  ಕರೆಯಲಾಗುತ್ತದೆ.) ತಾನು ಗಾಂಧೀಜಿ ಪುತ್ರನೆಂದು ಎಲ್ಲಿಯೂ ತೋರಿಸಿಕೊಳ್ಳಲು ಇಚ್ಚಿಸಿದೆ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ನಂತರ ಅಲ್ಲಿನ ಇಂಗ್ಲೇಂಡ್ ರಾಯಭಾರಿ ಕಚೇರಿಗೆ ತೆರಳಿ ತಾನೊಬ್ಬ ಭಾರತೀಯ ನಿರಾಶ್ರಿತನೆಂದು ಹೆಳಿಕೊಂಡು ಭಾರತಕ್ಕೆ ಹಿಂತಿರುಗಲು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು. ಆದರೆ, ಅಲ್ಲಿನ ಅಧಿಕಾರಿಗಳು ಈತ ಗಾಂಧೀಜಿಯವರ ಪುತ್ರನೆಂಬುದನ್ನು ಗುರುತಿಸಿ, ಹರಿಲಾಲ್ ಗೆ ತಾತ್ಕಾಲಿಕ ಆಶ್ರಯವನ್ನು ನೀಡುವುದರ ಜೊತೆಗೆ ಗಾಂಧೀಜಿಯವರಿಗೆ ವಿಷಯವನ್ನು ಮುಟ್ಟಿಸಿದರು. ಗಾಂಧೀಜಿಯವರ ಮಿತ್ರ ಕಲ್ಲೆನ್ಬಚ್ ಹರಿಲಾಲ್ ನನ್ನು ಕರೆದುಕೊಂಡು ಬರಲು ಸಿದ್ಧರಾದಾಗ ಅವರನ್ನು ಗಾಂಧಿ ತಡೆ ಹಿಡಿದರು. ನಂತರ ತನ್ನ ಪುತ್ರನಿಗೆ ಎರಡು ಟೆಲಿಗ್ರಾಂ ಸಂದೇಶಗಳನ್ನು ಕಳಿಸಿ ವಾಪಸ್ ಬರುವಂತೆ ವಿನಂತಿಸಿಕೊಂಡರು. ತಂದೆಯ ಕರೆಗೆ ಓಗೊಟ್ಟು ಹರಿಲಾಲ್ ವಾಪಸ್ ಜೋಹಾನ್ಸ್ ನಗರಕ್ಕೆ ಹಿಂತಿರುಗಿದರು. 1911 ಮೇ 15 ರಂದು ವಾಪಸ್ ಬಂದ ಹರಿಲಾಲ್ ಹಾಗೂ ಗಾಂಧೀಜಿ ನಡುವೆ ಎರಡು ದಿನಗಳ ಕಾಲ ಸತತ ಮಾತುಕತೆಗಳು ಸುಧೀರ್ಘವಾಗಿ ನಡೆದೆವು. ( ವಿಷಯವನ್ನು ಗಾಂಧೀಜಿಯವರು ಮಗನ್ ಲಾಲ್ ರವರಿಗೆ ಬರೆದಿರುವ ಪತ್ರದಲ್ಲಿ ಸವಿವರವಾಗಿ ದಾಖಲಿಸಿದ್ದಾರೆ)
ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸದೆ, ಅವರನ್ನು ಗುಲಾಮರಂತೆ, ಬೆಳೆಸುವ ಗಾಂಧೀಜಿಯವ ನಿಲುವನ್ನು ಕಟುವಾಗಿ ಟೀಕಿಸಿದ ಹರಿಲಾಲ್, “ನಿಮ್ಮ ಮಕ್ಕಳ ಅಭಿಲಾಸೆ ಏನು ಎಂಬುದನ್ನು ಕೇಳಿ ತಿಳಿದುಕೊಳ್ಳಲಾದಷ್ಟು ಸ್ಥಿತಿಯಲ್ಲಿರುವ ನೀವು ನನ್ನ ದೃಷ್ಟಿಯಲ್ಲಿ ಓರ್ವ ಸರ್ವಾüಕಾರಿಎಂದು ತರಾಟೆಗೆ ತೆಗೆದುಕೊಂಡರು. ಗಾಂಧೀಜಿಯವರು ತಮ್ಮ ಪುತ್ರನ ಕೋಪ ತಾಪಗಳನ್ನು ಸಹಿಸಿಕೊಂಡು ಸಂತೈಸಲು ಪ್ರಯತ್ನಿಸಿದರು. ಅಂತಿಮವಾಗಿ ವಿಫಲರಾದ ಅವರು, ಮೇ 16 ರಂದು ಹರಿಲಾಲ್ ಜೊತೆ ಉಪಹಾರ ಸೇವಿಸಿ, ನಾಳೆ ಬೆಳಿಗ್ಗೆ ಹರಿಲಾಲ್ ಭಾರತಕ್ಕೆ ಹೊರಡುತ್ತಾನೆ ಎಂದು ಘೋಷಿಸಿದರು. ಮೇ 17 ರಂದು ಜೋಹಾನ್ಸ್ ಬರ್ಗ್ ನಗರದಿಂದ ಪುತ್ರನನ್ನು ಬೀಳ್ಕೊಡುವಾಗ ತುಂಬಾ ಭಾವುಕರಾಗಿದ್ದ ಗಾಂಧೀಜಿಯವರು ರೈಲು ನಿಲ್ದಾಣದಲ್ಲಿ ರೈಲು ಹೊರಡುವ ಮುನ್ನ ಹರಿಲಾಲ್ ಕೈ ಗಳನ್ನು ಹಿಡಿದುಕೊಂಡು ಗದ್ಗದಿತರಾಗಿನಿನ್ನ  ತಂದೆ ತಪ್ಪು ಎಸಗಿದ್ದಾನೆ ಎಂಬುವುದು ನಿನ್ನ ಭಾವನೆಯಾಗಿದ್ದರೆ, ಅಸಹಾಯಕ ತಂದೆಯನ್ನು ಕ್ಷಮಿಸಿಬಿಡುಎಂದು ನುಡಿದರು. ಮಾತುಗಳು ಅವರ ಬಾಯಿಂದ ಹೊರ ಬರುತ್ತಿದ್ದಂತೆ ಅವರು ತಡೆ ಹಿಡಿದಿದ್ದ ಕಣ್ಣೀರು ಅವರ ಕೆನ್ನೆಗಳ ಮೇಲೆ ಪ್ರವಾಹದ ರೀತಿಯಲ್ಲಿ ಉಕ್ಕಿ ಹರಿಯತೊಡಗಿತು. ಅಲ್ಲಿ ನೆರೆದಿದ್ದ ಗಾಂಧೀಜಿಯವರ ಸಹವರ್ತಿಗಳು ಅಪ್ಪ-ಮಗನ ವಿದಾಯದ ಕ್ಷಣಕ್ಕೆ ಸಾಕ್ಷಿಯಾಗುತ್ತಾ ಮೌನಕ್ಕೆ ಶರಣಾಗುವುದರ ಮೂಲಕ  ಕಣ್ಣೀರು ಹಾಕುತ್ತಾ ಮೂಕ ಪ್ರಾಣಿಗಳಂತೆ ನಿಂತಿದ್ದರು.
ಹರಿಲಾಲ್ ಗೆ ಭಾರತಕ್ಕೆ ಹಿಂತಿರುಗುವ ಪ್ರಯಾಣದ ವೆಚ್ಚದ ಜೊತೆಗೆ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿ ಬರುವ ತನಕ ನಾಲ್ಕು ವರ್ಷಗಳ ಕಾಲ ( 1911 ರಿಮದ 1915 ರವರೆಗೆ) ಶಿಕ್ಷಣ ವೆಚ್ಚವನ್ನು ಭರಿಸಿದರು. ತನ್ನ ಪುತ್ರ ಹರಿಲಾಲ್ ಕುಟುಂಬದಿಂದ ಸಿಡಿದು ದೂರ ಹೋದ ನಂತರ ಗಾಂಧೀಜಿಯವರ ಮನದಲ್ಲಿ ಅಲ್ಲೋಲ ಕಲ್ಲೋಲವೇರ್ಪಟ್ಟಿತು. ತಮ್ಮ ನಿಲುವುಗಳು ಹಾಗೂ ನಿರ್ಧಾರಗಳನ್ನು ಮರು ವಿಮರ್ಶೆಗೆ ಒಳಪಡಿಸಿದರು. ಅವರ ಆತ್ಮಸಾಕ್ಷಿಗೆ ಗೆ ಅವುಗಳು ಕಠಿಣವೆನಿಸಿದರೂ ಸಹ ಸರಿಯಾದ ನಿರ್ಧಾರ ಎನಿಸಿದ ನಂತರ ನಿರುಮ್ಮಳರಾದರು. ಕುರಿತು ತನ್ನ ಸಂಬಂಧಿ ಮಗನ್ ಲಾಲ್  ಗೆ ಒಂದು ಸುಧೀರ್ಘ ಪತ್ರ ಬರೆದು ಎದೆಯ ಭಾರವನ್ನು ಇಳಿಸಿಕೊಂಡರು
( ಮುಂದುವರಿಯುವುದು)
ಮೇಲುಕೋಟೆಯ ಜನಪದ ಟ್ರಸ್ಟ್ ವತಿಯಿಂದ ಪ್ರಕಟವಾಗುವ “ ಜನಪದ ವಿಚಾರ” ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಸರಣಿ ಲೇಖನ )