ಶುಕ್ರವಾರ, ಜೂನ್ 30, 2017

ಭಕ್ತ ಮತ್ತು ದೇವರು ಮುಖಾಮುಖಿಯ ಮಜಲುಗಳು


ಕಳೆದ ಭಾನುವಾರ ಅಂದರೆ, 25-6-17   ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಎಷ್ಟು ಮಂದಿ ಓದುಗರು ಗಮನಿಸಿದರೋ ಗೊತ್ತಿಲ್ಲ. ಆದರೆ, ಮೊದಲ ನೋಟಕ್ಕೆ ಕಣ್ಣಿಗೆ ಬಿದ್ದ ಪುಟ್ಟ ವರದಿಯನ್ನು ಓದಿದ ತಕ್ಷಣ ನಾನು ಅರ್ಧ ಗಂಟೆಯ ಕಾಲ ಪತ್ರಿಕೆಯನ್ನು ಬದಿಗಿಟ್ಟು ತಣ್ಣಗೆ ಕುಳಿತು ಯೋಚಿಸತೊಡಗಿದೆ. ದೇವರು ಮತ್ತು ಭಕ್ತನ ನಡುವಿನ ಸಂಬಂಧಕ್ಕೆ ಏಷ್ಟೋಂದು ಮುಖಗಳಿವೆ ಎಂದು ಆಶ್ಚರ್ಯವಾಯಿತು.
ಪಾಕಿಸ್ತಾನದ ದಕ್ಷಿಣ ಪಂಜಾಬ್ ಪ್ರಾಂತ್ಯದ ಖಾನೆವಾಲ್ ಜಿಲ್ಲಾ ಕೇಂದ್ರದಲ್ಲಿರುವ ಜಾಮಿಚಿ ಮಸೀದಿಯಲ್ಲಿ ದಿನಾಂಕ 23-6-17 ಶುಕ್ರವಾರ ರಾತ್ರಿ ಭಕ್ರರು ದೇಣಿಗೆ ನೀಡುವ ಹುಂಡಿಯಿಂದ ಐವತ್ತು ಸಾವಿರ ರೂಪಾಯಿಗಳು ಕಳುವಾಯಿತು. ರಂಜಾನ್ ಮಾಸದ ಆಚರಣೆಯ ಸಂದರ್ಭದಲ್ಲಿ ಶ್ರೀಮಂತ ಮುಸ್ಲಿಂರು ಉಧಾರವಾಗಿ ದೇಣಿಗೆ ನೀಡುವುದರಿಂದ ಮಸೀದಿಗೆ ವಿದ್ಯುತ್ ಇಲ್ಲದ ಸಮಯದಲ್ಲಿ ವಿದ್ಯುತ್ ಒದಗಿಸುವ ಉದ್ದೇಶದಿಂದ ಜನರೇಟರ್ ಕೊಳ್ಳಲು ಹುಂಡಿಯೊಂದನ್ನು ಸ್ಥಾಪಿಸಲಾಗಿತ್ತು. ಕಳ್ಳತನ ಮಾಡಿದ ವ್ಯಕ್ತಿಯು ಹುಂಡಿಯಲ್ಲಿ ಹಣವನ್ನು ತೆಗೆದುಕೊಂಡು ಹೋಗುವುದರ ಜೊತೆಗೆ ಒಂದು ಚೀಟಿಯನ್ನು ಬರೆದಿಟ್ಟು ಹೋಗಿದ್ದಾನೆ.
ಚೀಟಿಯಲ್ಲಿ ಅವನು ಬರೆದಿರುವ ಕೆಲವು ಮುಖ್ಯಾಂಶಗಳು ಇವು. “ ಮಾನ್ಯರೇ, ಹಣವನ್ನು ಕದ್ದವನು ಯಾರು ಎಂದು ಹುಡುಕಲು ಹೋಗಬೇಡಿ. ಇದು ನನ್ನ ಮತ್ತು ದೇವರ ನಡುವಿನ ವ್ಯವಹಾರ. ಮುಂದಿನ ವಾರ ರಂಜಾನ್ ಹಬ್ಬವಿದೆ. ಸಮಾಜದಲ್ಲಿ ನಾನು ಸಾಲಕ್ಕಾಗಿ ಬೇಡದೇ ಇರುವ ಮನೆಗಳಿಲ್ಲ, ವ್ಯಕ್ತಿಗಳಿಲ್ಲ. ಅಂತಿಮವಾಗಿ  ದೇವರಿಗೆ ನನ್ನ ಕಷ್ಟವನ್ನು ವಿವರಿಸಿ, ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೀನಿ. ನಮಸ್ಕಾರ. ಇದನ್ನು ಓದುತ್ತಿದ್ದಂತೆ ಹಿಂದೆ ನಾನು ಅನುವಾದಿಸಿದ್ದ ಹನ್ರ್ನೆಂದನೆಯ ಶತಮಾನದ ಪರ್ಷಿಯನ್ ಸೂಫಿಕವಿ ಉಮರ್ ಖಯಾಮನ ರುಬಾಯಿವೊಂದರ ಸಾಲುಗಳು ನೆನಪಾದವು.
ನಿಜ ಹೇಳಬೇಕೆಂದರೆ,
ನಾನು ಮಸೀದಿಗೆ ಬಂದದ್ದು
ದೇವರ ಪ್ರಾರ್ಥನೆಗಲ್ಲ,
ಇಲ್ಲಿಂದ ಕದ್ದೊಯ್ದ ಹಾಸುಗಂಬಳಿ
ಹಳತಾಗಿದೆ ಅದಕೆ.
ನಿಜವಾದ ಪ್ರಶ್ನೆ ಇರುವುದೇ ಇಲ್ಲಿ. ದೇವರ ಪವಾಡವನ್ನು ಅಥವಾ ಮಹಿಮೆಯನ್ನು ನಂಬುವ ವ್ಯಕ್ತಿಗಳಿಗೆ ಇದು ಹೇಗನ್ನಿಸಬಹುದು? ನಮ್ಮಲ್ಲಿಯೂ ಕೂಡ ದಿನ ನಿತ್ಯ ದೇವಸ್ಥಾನಗಳ ಹುಂಡಿಗಳನ್ನು ದೋಚುವುದು ಇಲ್ಲವೆ, ದೇವರ ವಿU್ಪ್ರಹಗಳನ್ನು ಕದ್ದೊಯ್ಯುವುದು ಸಾಮಾನ್ಯ ಸಂಗತಿಯಾಗಿದೆ. ಹಾಗಾದರೇ, ಭಕ್ತರು ನಂಬುವ ಅಥವಾ ಆಸ್ತಿಕರು ಆರಾಧಿಸುವ ದೇವರುಗಳು ಎಲ್ಲಿ ಹೋದರು? ಅವರ ಶಕ್ತಿ ಅಥವಾ ಮಹಿಮೆಗಳು ಕಳ್ಳತನ ನಡೆಯುವಾಗ ಏನಾಗಿದ್ದವು? ಪ್ರಶ್ನೆಯು ಬಾಲ್ಯದಿಂದಲೂ ನನ್ನನ್ನು ಕಾಡುತ್ತಾ ಬಂದಿರುವ ಪ್ರಶ್ನೆಯಾಗಿದೆನನ್ನ ಹನ್ನೊಂದನೆಯ ವಯಸ್ಸಿನಲ್ಲಿ ನನ್ನೂರು ಕೊಪ್ಪದ ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಪುಟ್ಬಾಲ್ ಆಡುತ್ತಿರುವಾಗ, ಚೆಂಡಿಗೆ ಪೋಣಿಸಿದ್ದ ದಾರವು ಕಿತ್ತು ಹೋಯಿತು. ಕ್ಷಣದಲ್ಲಿ ನನ್ನ ಸೊಂಟದಲ್ಲಿದ್ದ ಉಡುದಾರವನ್ನು ಬಿಚ್ಚಿಕೊಟ್ಟ ನಾನು, ಈವರೆಗೆ ಮತ್ತೇ ಅದನ್ನು ಧರಿಸಲಿಲ್ಲ. ಅಷ್ಟೆ ಅಲ್ಲ, ನನ್ನ ಮಗನಿಗೆ ಎಂದೂ ಉಡುದಾರವನ್ನು ಹಾಕಲಿಲ್ಲ. ಮಗ ಮತ್ತು ಮಗಳು ಇಬ್ಬರನ್ನೂ ಎಂದಿಗೂ ದೇವಸ್ಥಾನಗಳಿಗೆ ಕರೆದೊಯ್ಯಲಿಲ್ಲ ಮತ್ತು ಅವರಿಗೆ ದೇವರು, ಧರ್ಮ, ಜಾತಿ ಕುರಿತಂತೆ ಏನನ್ನೂ ನಾನಾಗಲಿ ಅಥವಾ ನನ್ನ ಪತ್ನಿಯಾಗಲಿ ಬೋಧಿಸಲಿಲ್ಲ. ಜೀವನದಲ್ಲಿ ಎಂದೂ ಸುಳ್ಳು ಹೇಳಬಾರದು ಮತ್ತು ನಡುವಳಿಕೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಬೇಕುಇವುಗಳನ್ನು ಮಾತ್ರ ನಾನು ನನ್ನ ಪತ್ನಿ  ಅವರಿಗೆ ಬೋಧಿಸುತ್ತಾ ಬಂದೆವು.
 ಆದರೆ,  ದೇವರ ಅಸ್ತಿತ್ವದ ಬಗ್ಗೆ ಲೇವಡಿ ಮಾಡುವುದಾಗಲಿ, ಆಸ್ತಿಕರನ್ನು ಬೈಯ್ಯುವುದಾಗಲಿ ಎಂದೂ ನನ್ನ ಹವ್ಯಾಸವಾಗಿರಲಿಲ್ಲ. ಅದು ಅವರವರ ನಂಬಿಕೆ. ಅದರಲ್ಲಿ ಅವರಿಗೆ ನೆಮ್ಮದಿ ಸಿಗುವುದಾರೆ ನನ್ನ ಅಪಸ್ವರ ಏಕೆ? ಇದು ನನ್ನ ಬದುಕಿನ ನಿಯಮವಾಗಿತ್ತು. ಅದೇ ರೀತಿ ನನ್ನ ನಂಬಿಕೆಯನ್ನು ಪ್ರಶ್ನಿಸಲು ಯಾರಿಗೂ ಅವಕಾಶ ನೀಡಿದವನಲ್ಲ.  ಜೊತೆಗೆ ಕುವೆಂಪು ವಿಚಾರಧಾರೆಯಲ್ಲಿ ಬಾಲ್ಯದಿಂದಲೂ ಬೆಳದ ಕಾರಣಕ್ಕಾಗಿ ಪುರೋಹಿತಶಾಹಿ ಮತ್ತು ಮೌಡ್ಯಗಳಿಂದ ಅಂತರವನ್ನು ಕಾಪಾಡಿಕೊಂಡು ಬಂದವನು. ಕಳೆದ ಮುವತ್ತೇಳು ವರ್ಷಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ, ಇಡೀ ದೇಶದುದ್ದಕ್ಕೂ ಹಲವಾರು ಬಾರಿ ಸುತ್ತಾಡಿದ್ದೀನಿ. ಈಗಲೂ ಸಹ ಅದನ್ನು ಮುಂದುವರಿಸಿದ್ದೀನಿ.  ಕುತೂಹಲಕ್ಕಾಗಿ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಮಸೀದಿ, ಮಂದಿರ, ದೇವಸ್ಥಾನಗಳಿಗೆ  ಭೇಟಿ ನೀಡಿದ್ದಿನಿ. ಅಮೃತಸರದ ಸ್ವರ್ಣ ದೇವಾಲಯದ ಪ್ರಶಾಂತತೆ, ಸಿಖ್ಖರ ಧಾರ್ಮಿಕ ಭಕ್ತಿಯ ಪರವಶತೆ ಮತ್ತು  ಅಲ್ಲಿ£ ನಿರಂತರವಾಗಿ ಪ್ರಸ್ತುತ ಪಡಿಸುವ ಗುರುವಾಣಿಯನ್ನು ಕೇಳಿ ಅಚ್ಚರಿಗೊಂಡಿದ್ದೀನಿ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ನಾಗಪಟ್ಟಣಂ ಬಳಿ ಕಡಲ ತೀರದಲ್ಲಿರುವ ವೇಲಾಂಕಣಿ ಎಂಬ ಊರಿನಲ್ಲಿ ಇರುವ ಏಸು ಮಾತೆಯ ಬೃಹತ್ ಇಗರ್ಜಿಗಳು ಮತ್ತು ಅವುಗಳ ಒಳಗೆ ಇರುವಂತಹ ಪ್ರಶಾಂvವಾದÀ ವಾತಾವರಣ ಮತ್ತು  ಭಕ್ತರ ಮೌನ ಪ್ರಾರ್ಥನೆ, ಶುದ್ಧವಾದ ಅಸ್ಖಲಿತ ತಮಿಳು ಉಚ್ಚಾರಣೆಯಿಂದ ಕೂಡಿದ ಪಾದ್ರಿಗಳ ಉಪದೇಶ ಇವೆಲ್ಲವೂ ಕೇಳುವುದು ನನ್ನ ಇಷ್ಟದ ಸಂಗತಿಗಳಾಗಿವೆ.  ಮೇಲಿಂದ ಮೇಲೆ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಅದೇ ರೀತಿಯಲ್ಲಿ ತಿರುಪತಿ, ಕೊಲ್ಲೂರು, ಧರ್ಮಸ್ಥಳ, ಮಂತ್ರಾಲಯ, ಶಿರಡಿ, ಪಂಡರಾಪುರ, ಮುಂಬೈ ನಗರದ ಸಿದ್ಧಿವಿನಾಯಕನ ದೇವಸ್ಥಾನ, ಜೈಪುರ ಸಮೀಪದ  ಅಜ್ಮೀರ್ ದರ್ಗಾ, ಸವದತ್ತಿಯ ಎಲ್ಲಮ್ಮನ ಜಾತ್ರೆ, ಪುರಿಯ ಜಗನ್ನಾಥ ದೇವಸ್ಥಾನ, ಕೊಲ್ಕತ್ತನಗರದ ಕಾಳಿಘಾಟ್ನಲ್ಲಿ ಇರುವ ಕಾಳಿಮಾತೆ ಮಂದಿರ, ಮಧುರೈನ ಮೀನಾಕ್ಷಿ ದೇಗುಲ, ಚಿಂದಂಬರಂನ ನಟರಾಜ ದೇಗುಲ, ಪಳನಿಯ ಸುಬ್ರಮಣ್ಯನ ದೇವಸ್ಥಾನ, ಕುಂಭಕೋಣಂನ ಆದಿ ಕುಂಭೇಶ್ವರ, ಸಾರಂಗಪಾಣಿ, ತಿರುವನಂತಪುರದ ಅನಂತಪದ್ಮನಾಭನ ದೇಗುಲಗಳು ಹೀಗೆ ನೂರಾರು ಪವಿತ್ರ ಕ್ಷೇತ್ರ ಎನ್ನುವ ಸ್ಳಳಗಳಿಗೆ ಭೇಟಿ ನೀಡಿ, ಭಕ್ತರ ಉನ್ಮಾದವನ್ನು, ಭಕ್ತಿಯ ಪರಾಕಾಷ್ಟೆಯನ್ನು ಮತ್ತು ಅಲ್ಲಿನ  ನೂಕು ನುಗ್ಗುಲು,  ಹಾಗೂ ದೇವಸ್ಥಾನದ ಸುತ್ತ ಮುತ್ತಲಿನ ಆವರಣದಲ್ಲಿರುವ ಕೊಳಕು,  ಶೋಷಿಸುವ ಪೂಜಾರಿಗಳ ಹಪಾಹಪಿತನ  ಇವುಗಳನ್ನು ನೋಡಿ ವಿಶ್ಲೇಷಿಸಲಾರದೆ ಕೈ ಬಿಟ್ಟಿದ್ದೀನಿ. ಏಕೆಂದರೆ, ಅದು ನನ್ನದಲ್ಲದ ಒಂದು ಜಗತ್ತು ಎಂಬ ನಂಬಿಕೆ ನನ್ನೊಳಗೆ ಬಲವಾಗಿ ಬೇರೂರಿದೆ.
ಬಹುಮುಖಿ ಸಂಸ್ಸøತಿಯ ಭಾರತದಲ್ಲಿ ಸಮಾಜದಲ್ಲಿ ವರ್ಗ ವ್ಯವಸ್ಥೆ ಇರುವಂತೆ ದೇವರುಗಳಲ್ಲಿಯೂ ಮೇಲ್ವರ್ಗದ ದೇವರು, ಕೆಳವರ್ಗದ ದೇವರು ಇರುವ ವ್ಯವಸ್ಥೆಯನ್ನು ನೋಡಿ ಬೆರಗಾಗಿದ್ದೀನಿ. ತಿರುಪತಿಯ ವೆಂಕಟೇಶ್ವರ, ಮಂತ್ರಾಲಯದ ರಾಘವೇಂದ್ರ, ಶಿರಡಿಯ ಸಾಯಿಬಾಬಾ, ಕೊಲ್ಲೂರು ಮೂಕಾಂಬಿಕೆ, ಮುಧುರೈ ಮೀನಾಕ್ಷಿ, ಪಂಡರಾಪುರದ ವಿಠಲ, ಮುಂಬೈನ ಸಿದ್ದಿವಿನಾಯಕ ಹೀಗೆ ಅನೇಕ ದೇವರುಗಳು ಶ್ರೀಮಂತ ದೇವರಾಗಿದ್ದಾರೆ. ಇವರುಗಳು ಒಂದು ರೀತಿಯಲ್ಲಿ ನಮ್ಮ ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ಗಳಿದ್ದಂತೆ.
ಆದರೆ, ಇಂತಹ ಸೂಪರ್ ಸ್ಟಾರ್ ದೇವರುಗಳಿಗಿಂತ, ನಮ್ಮ ಗ್ರಾಮೀಣ ಪ್ರದೇಶದ ಗ್ರಾಮ ದೇವ- ದೇವತೆಗಳು ನಿಜವಾದ ದೇವರು ಎಂದು ನನ್ನ ಬಲವಾದ ನಂಬಿಕೆ. ಏಕೆಂದರೆ, ಇವರಿಗೆ ಎಣ್ಣೆ ಮಜ್ಜನ, ಹಾಲು ತುಪ್ಪ, ಗಂಧÀ, ಎಳನೀರು, ಇತ್ಯಾದಿ ಮಜ್ಜನಗಳ ಸೇವೆಯಿಲ್ಲ. ತೂಗೂಯ್ಯಾಲೆಯ ಸೇವೆಯೂ ಇಲ್ಲ, ಸಹಸ್ರನಾಮಾವಳಿಯ ಅರ್ಚನೆ ಮೊದಲೇ ಇಲ್ಲ. ಇವೆಲ್ಲಕ್ಕಿಂತ ದೇವರುಗಳು ತಮ್ಮ ಭಕ್ತರಿಂದ ಸಾವಿರಾರು ರೂಪಾಯಿುಗಳನ್ನು ವಿಶೇಷ ದರ್ಶನ ವ್ಯವಸ್ಥೆಯಡಿ ದೋಚುವುದಿಲ್ಲ, ದರ್ಶನ ನೀಡುವುದಕ್ಕೆ ಗಂಟಗಂಟೆಲೆ ದಿನಗಟ್ಟಲೆ ಕಾಯಿಸುವುದಿಲ್ಲ. ಕಾರಣಕ್ಕಾಗಿ ನಮ್ಮ ಜನಪದರಿಗೆ ದೇವರುಗಳೆಂದರೆ, ಎಲ್ಲಿಲ್ಲದ ಪ್ರೀತಿ ಮತ್ತು ನಂಬಿಕೆ.
ಇಂತಹ ಕಾರಣಗಳಿಂದಾಗಿ ಗ್ರಾಮದೇವತೆಗಳನ್ನು ನಮ್ಮ ಜನಪದರು ದೇವತೆಗಳು ಎಮಬುವುದಕ್ಕಿಂತ ತಮ್ಮ ಆತ್ಮ ಸಂಗಾತಿಗಳು ಎಂದು ನಂಬುತ್ತಾರೆ. ಅವನ/ ಜೊತೆ ಏಕವಚನದಲ್ಲಿ ಸಂವಾದದಲ್ಲಿ ತೊಡಗುತ್ತರೆ. ಗರ್ಭ ಗುಡಿಯಲ್ಲಿ ಕೂತಿರುವ ದೇವರನ್ನು ಎಬ್ಬಿಸಿ, ವರ್ಷಕ್ಕೊಮ್ಮೆ ರಾಶಿ ರಾಶಿ ಕೆಂಡಗಳ ನಡುವೆ ಕೊಂಡ ಹಾಯಿಸಿ, ಅವರನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಾರೆ. ಹೆಗಲಮೇಲೆ ಹೊತ್ತು ಮನೆಮನೆಗೆ ಹೊತ್ತೊಯ್ದು ಭಕ್ತರ ಪ್ರಶ್ನೆ ಉತ್ತರ ನೀಡು ಎಂದು ಒತ್ತಾಯಿಸುತ್ತಾರೆ. ದೇವರು ನೀಡಿದ ಅಭಯ ಅಥವಾ ಹಾರೈಕೆ ನಿಜವಾಗದಿದ್ದರೆ, ಗುಡಿಯ ಮುಂದೆ ಹಾಯ್ದು ಹೋಗುವಾಗಲೆಲ್ಲಾ “  ನಿನ್ನನ್ನ ನಂಬಿ ನಂಬಿ ಎಕ್ಕುಟ್ಟು ಹೋಗ್ ಬುಟ್ಟೆ ಎಂದು ಹೇಳುತ್ತಾ ಹಿಡಿ ಶಾಪ ಹಾಕುತ್ತಾರೆ. ಸಾರಿ ನೀ ಹೇಳಂದಂಗೆ ನಡೀದೆ ಇರಲಿ, ಆಗ ನಿನಗೆ ಮಾಡದುಮಗನೆ”.ಎಂದು ಎಲ್ಲರಿಗೂ ಕೇಳಿಸುವಂತೆ ಹೊಸ ಹರಕೆಯನ್ನು ಕಟ್ಟಿಕೊಳ್ಳುತ್ತಾರೆಏಕೆಂದರೆ, ಅವರ ಪಾಲಿಗೆ ದೇವರೆಂದರೆ ಅತೀತರಲ್ಲ, ಅವರ ಆತ್ಮ ಸಂಗಾತಿಗಳು. ಇದೇ ಅಲ್ಲವೆದೇವರು ಮತ್ತು ಭಕ್ರನ ನಡುವಿನ ನಿಜವಾದ ಸಂಬಂಧ? ಇಂತಹ ಅವಿನಾಭಾವ ಸಂಬಂಧವನ್ನು ಪಾಕಿಸ್ತಾನದ ಬಡ ಮುಸ್ಲಿಂನು ಅಲ್ಲಾನ ಜೊತೆ ಹೊಂದಿರಬೇಕೆಂದು ನನ್ನ ಊಹೆ.


ಶುಕ್ರವಾರ, ಜೂನ್ 23, 2017

ಮಾತೃ ಭಾಷೆಯ ಶಿಕ್ಷಣದ ಅವಸಾನದ ಅಂಚಿನಲ್ಲಿ ನಿಂತು…


ನಮ್ಮೆಲ್ಲರ ಮಾತೃಭಾಷೆಯಾದ ಕನ್ನಡ ಈಗ ಯಾರಿಗೂ ಬೇಡವಾಗಿದೆ. ಇದನ್ನು ಪ್ರಾಥಮಿಕ ಶಿಕ್ಷಣದ ಮೂಲಕ ಪೋಷಿಸಿ ಬೆಳಸಬೇಕಾದ ಸರ್ಕಾರಗಳು ಇತಿಹಾಸದುದ್ದಕ್ಕೂ ತಮ್ಮ ದಿವ್ಯ ನಿರ್ಲಕ್ಷ್ಯವನ್ನು ತೋರಿಸುತ್ತಾ ಬಂದಿವೆ. ಇನ್ನು ಕನ್ನಡ ಸಾಹಿತ್ಯ, ಸಂಸ್ಕೃತಿ,, ಭಾಷೆ ಇವುಗಳ ಕುರಿತಾಗಿ ಧ್ವನಿ ಎತ್ತಬೇಕಾದ ನಾಡಿನ ಹಿರಿಯ ಸಾಹಿತಿಗಳೆಲ್ಲಾ ಮೌನಕ್ಕೆ ಶರಣು ಹೋಗಿದ್ದಾರೆ. ತಮಗೆ ಅರವತ್ತು ವರ್ಷ ತುಂಬುತ್ತಿದ್ದಂತೆ, ಪಂಪ, ನೃಪತುಂಗ, ಬಸವ, ಕನಕ,  ಹೀಗೆ ಹಲವು ಪ್ರಶಸ್ತಿಗಳನ್ನು ಕನವರಿಸುತ್ತಾ, ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ, ಪ್ರಶಸ್ತಿ ಕೈ ತಪ್ಪಿ ಹೋಗುವ ಭಯ ಅವರನ್ನು ಆವರಿಸಿಕೊಂಡಿದೆ..
ಇವೆಲ್ಲವುಗಳ ಮೇಲೆ ಗಾಯದ ಮೇಲೆಬರೆ ಎಳೆದಂತೆ. ದೇಶದ ಸರ್ವೋಚ್ಚ ನ್ಯಾಯಾಲಯ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯ ಶಿಕ್ಷಣ ಕಡ್ಡಾಯವಲ್ಲ ಎಂಬ ತಪ್ಪು ತೀರ್ಪು ನೀಡುವುದರ ಮೂಲಕ ಖಾಸಾಗಿ ಶಿಕ್ಷಣ ಸಂಸ್ಥೆಗಳು ಇಂಗ್ಲೀಷ್ ಶಿಕ್ಷಣದ ಹೆಸರಿನಲ್ಲಿ ಅಂಗಡಿಗಳನ್ನು ತೆರದಿಟ್ಟು ಪೋಷಕರನ್ನು ದೋಚಲು ಅವಕಾಶ ಮಾಡಿಕೊಟ್ಟಿದೆ. ಮಗು ತಾನು ಬೆಳೆದಂತೆ ತನ್ನ ಸುತ್ತ ಮುತ್ತಲಿನ ಜಗತ್ತನ್ನು ಗ್ರಹಿಸುವುದು ಮತ್ತು ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಮಾತೃಭಾಷೆಯ ಮೂಲಕ ಎಂಬ ಮಕ್ಕಳ ತಜ್ಞರ ಹಾಗೂ ಶಿಕ್ಷಣ ತಜ್ಞರ. ಮಾನಸಿಕ ತಜ್ಞರ ಸಲಹೆಗಳನ್ನು ಈ ದೇಶದಲ್ಲಿ ಯಾವೊಂದು ನ್ಯಾಯಾಲಯವಾಗಲಿ ಅಥವಾ ಸರ್ಕಾರವಾಗಲಿ ಅರ್ಥಮಾಡಿಕೊಳ್ಳಲಿಲ್ಲ. ಇದು ಭಾರತದ ದೇಶಿ ಭಾಷೆ ಮತ್ತು ಸಂಸ್ಕೃತಿಗೆ ಒದಗಿ ಬಂದ ಆಪತ್ತು.
ಮಕ್ಕಳಿಗೆ ನೀಡಬೇಕಾದ ಶಿಕ್ಷಣದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶ ಮಾಡದಂತೆ ರಾಜ್ಯಗಳ ವಿಧಾನ ಸಭೆಯಲ್ಲಿ ಅಥವಾ ಲೋಕ ಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿ, ಶಿಕ್ಷಣದಲ್ಲಿ  ಮಾತೃಭಾಷೆಯನ್ನು ಪ್ರಥಮ ಭಾಷೆಯಾಗಿ ಬೋಧಿಸುವುದು ಕಡ್ಡಾಯ ಎಂಬ ಕಾನೂನನ್ನು ಜಾರಿಗೆ ತರಬಹುದಾದ ಅವಕಾಶಗಳಿವೆ. ಆದರೆ, ಅಂತಹ ಇಚ್ಚಾಶಕ್ತಿ ಯಾವೊಬ್ಬ ಜನಪ್ರತಿನಿಧಿಗೆ ಅಥವಾ ಸರ್ಕಾರಕ್ಕೆ ಇಲ್ಲವಾಗಿದೆ. ನಮ್ಮ ನೆರೆಯ ತಮಿಳುನಾಡಿನಲ್ಲಿ ಇಂದಿಗೂ ಶಿಕ್ಷಣದಲ್ಲಿ ಮೂರನೆಯ ಭಾಷೆಯಾಗಿ ಹಿಂದಿ ಭಾಷೆಯು ಬಳಕೆಯಲ್ಲಿಲ್ಲ. ಅಲ್ಲಿ ಪ್ರಥಮ ಭಾಷೆಯಾಗಿ ತಮಿಳನ್ನು ಕಡ್ಡಾಯ ಮಾಡಲಾಗಿದೆ. ದ್ವಿತೀಯ ಭಾಷೆಯನ್ನಾಗಿ ಯಾವ ಭಾಷೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ ಅಲ್ಲಿನ ಇಂಗ್ಲೀಷ್ ಶಿಕ್ಷಣ ಸಂಸ್ಥೆಗಳಲ್ಲಿ ತಮಿಳು ಭಾಷೆಯನ್ನು ಅಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳು ಕಲಿಯುತ್ತಿದ್ದಾರೆ.
ತಮಿಳುನಾಡಿನ ಮಾದರಿಯಲ್ಲಿ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕಾದ ಕರ್ನಾಟಕ ಸರ್ಕಾರ  ತನ್ನ ಪಂಚೇಂದ್ರಿಯಗಳನ್ನು ಕಳೆದುಕೊಂಡಂತೆ ವರ್ತಿಸುತ್ತಿದೆ. ಇದರ ಜೊತೆಗೆ ಇಲ್ಲಿನ ದಲಿತರು, ಹಿಂದುಳಿದ ವರ್ಗದವರು ಮತ್ತು ಶೂದ್ರರಿಗೆ ಇಂಗ್ಲೀಷ್ ಶಿಕ್ಷಣದಿಂದ ಮಾತ್ರ ನಮ್ಮ ಮಕ್ಕಳಿಗೆ ಮುಕ್ತಿ ಮತ್ತು ಮೋಕ್ಷ ಎಂದು ನಂಬಿರುವುದು. ಬಹು ದೊಡ್ಡ ದುರಂತ.ಕರ್ನಾಟಕ ಸರ್ಕಾರವು ಶಿಕ್ಷಣದ ಹಕ್ಕು ಕಾಯ್ದೆಯಡಿ ( ಆರ್.ಟಿ.ಇ.) ಖಾಸಾಗಿ ಇಂಗ್ಲೀಷ್ ಶಿಕ್ಷಣ ಸಂಸ್ಥೆಗಳಿಗೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳನ್ನು ಬಲವಂತವಾಗಿ ನೂಕುತ್ತಿದೆ. ಜೊತೆಗೆ ವಾರ್ಷಿಕವಾಗಿ ಸುಮಾರು ಮುನ್ನೂರು ಕೋಟಿ ರೂಪಾಯಿ ಹಣವನ್ನು ಶುಲ್ಕದ ರೂಪದಲ್ಲಿ ಖಾಸಾಗಿ ಸಂಸ್ಥೆಗಳಿಗೆ ಪಾವತಿಸುತ್ತಾ ಬಂದಿದೆ. ಮಾತೃ ಭಾಷೆಯ ಕುರಿತು ಜ್ಞಾನ ವಿರುವ, ಅಥವಾ ಕನಿಷ್ಠ ವಿವೇಕವಿರುವ ಯಾವೊಬ್ಬ ವ್ಯಕ್ತಿಯೂ ಮಾಡುವ ಕೆಲಸ ಇದಲ್ಲ.
2013 ರಿಂದ 2017 ರವರೆಗೆ ಕರ್ನಾಟಕ ರಾಜ್ಯದಲ್ಲಿ ಎಂಟು ಲಕ್ಷ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ವಲಸೆ ಹೋಗಿದ್ದಾರೆ. ಅಂದರೆ, ಸರಾಸರಿ ವರ್ಷವೊಂದಕ್ಕೆ ಎರಡು ಲಕ್ಷ ಮಕಳ್ಳು ಕನ್ನಡ ಶಾಲೆಯನ್ನು ತೊರೆಯುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ, ಇನ್ನೊಂದು ದಶಕದಲ್ಲಿ ಕನ್ನಡ ಶಾಲೆಗಳು ಸಂಪೂರ್ಣ ಮುಚ್ಚಿ ಹೋದರೂ ಆಶ್ಚರ್ಯವಿಲ್ಲ. ಇತ್ತೀಚೆಗೆ ಕನ್ನಡ ಅಬಿವೃದ್ಧಿ ಪ್ರಾಧಿಕಾರ ನಡೆಸಿದ ಅಧ್ಯಯನ ವರದಿಯ ಪ್ರಕಾರ ಒಂದು ವರ್ಷದ ಅವಧಿಯಲ್ಲಿ  ಸರಿಸುಮಾರು ಹತ್ತು ಸಾವಿರ ಕನ್ನಡ ಶಾಲೆಗಳು ಮುಚ್ಚಿ ಹೋಗಿದ್ದರೆ, ಅಷ್ಟೇ  ಸಂಖ್ಯೆಯಲ್ಲಿ ಇಂಗ್ಲೀಷ್ ಶಾಲೆಗಳು ಆರಂಭಗೊಂಡಿವೆ. ಸರ್ಕಾರವೇ ನಡೆಸಿರುವ ಈ ಅಧಿಕೃತ ವರದಿಯು, ನಮ್ಮ ಪೋಷಕರ ಮನಸ್ಥಿತಿಗೆ ಮತ್ತು ಸರ್ಕಾರಗಳ ಇಚ್ಚಾಶಕ್ತಿಯ ಕೊರತೆಗೆ ಕನ್ನಡಿ ಹಿಡಿದಂತಿದೆ. ಕನ್ನಡ ಶಾಲೆಯಿಂದ ಹೋಗುವ ಮಕ್ಕಳ ವಲಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಒಂದನೆಯ ತರಗತಿಯಿಂದ ಇಂಗ್ಲೀಷ್ ಕಲಿಸಲಾಗುವುದು ಎಂಬ ಅವಿವೇಕದ ಮಾತನ್ನು ಸರ್ಕಾರ ಆಡುತ್ತಿದೆ. ಈಗ ಇರುವ ಶಿಕ್ಷಕರಿಗೆ ಮಾತೃಭಾಷೆಯನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಬರುವುದಿಲ್ಲ, ಇನ್ನೂಇಂಗ್ಲೀಷ್ ಭಾಷೆಯನ್ನು ಹೇಗೆ ಕಲಿಸುತ್ತಾರೆ. ಇಂಗ್ಲೀಷ್ ನಲ್ಲಿ ಪದವಿ, ಮತ್ತು ಬಿ.ಎಡ್. ಮಾಡಿರುವ ಶಿಕ್ಷಕರು ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಲು ಬರುತ್ತಾರಾ? ಹೋಗಲಿ ಅವರು ಬರಲು ಸಿದ್ದರಿದ್ದರೂ ಸಹ ಅವರ ಶಿಕ್ಷಣದ ಅರ್ಹತೆಗೆ ತಕ್ಕಂತೆ ಸರ್ಕಾರ ವೇತನ ನೀಡಲು ಸಿದ್ಧವಿದೆಯಾ? ಕಳೆದ ಐದಾರು ವರ್ಷಗಳಿಂದ ಕರ್ನಾಟಕದ ಪ್ರಾಥಮಿಕ ಶಾಲೆಗಳು ಹದಿನಾರು ಸಾವಿರ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಹತ್ತು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಈ ಸರ್ಕಾರ ಕಳೆದ ಒಂದು ವರ್ಷದಿಂದ ಹೇಳುತ್ತಲೇ ಬಂದಿದೆ. ಆದರೆ ಅದು ಇನ್ನೂ ಜಾರಿಯಾಗಿಲ್ಲ. ಇನ್ನುಇಂಗ್ಲೀಷ್ ಭಾಷೆಯನ್ನು ಕಲಿಸುತ್ತೇವೆ ಎಂಬ ಮಾತು ಕನ್ನಡಿಗರ ಕಿವಿಯ ಮೇಲೆ ಹೂವು ಇಡುವ ಪ್ರಸ್ತಾಪದಂತೆ ಕೇಳಿಸುತ್ತಿದೆ.
ಮಾತೃಭಾಷೆ  ಕುರಿತಂತೆ ಸರ್ಕಾರದ ಅಥವಾ ಸಮಾಜದ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ,ಭವಿಷ್ಯದ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯ ಅಸ್ತಿತ್ವದ ಪ್ರಶ್ನೆಯನ್ನು ನಾವು ಎದುರಿಸಬೇಕಾಗುತ್ತದೆ. ಈಗಾಗಲೇ ಕನ್ನಡ ಮಾಧ್ಯಮ ಶಿಕ್ಷಣ ಕುರಿತಂತೆ ಈ ನಾಡಿನ ಶಿಕ್ಷಣ ತಜ್ಞರು ಹಾಗೂ ಚಿಂತಕರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಶ್ರೀ ಚಂದ್ರಶೇಖರ್ ದಾಮ್ಲೆ, ಶ್ರೀ ವೆಂಕಟೇಶ್ ಮಾಚಕನೂರು ಹಾಗೂ ಕವಿ ಜಿ.ಎಸ್.ಶಿವರುದ್ರಪ್ಪನವರ ಪುತ್ರರಾದ ಜಯದೇವ್ ಹಾಗೂ ಡಿ.ಎಸ್.ನಾಗಭೂಷಣ್, ದೇವನೂರು ಮಹಾದೇವ ಹೀಗೆ ಹಲವಾರು ಚಿಂತಕರು ಕಳೆದ ಎರಡು –ಮೂರು ವರ್ಷಗಳಿಂದ ನಿರಂತರವಾಗಿ ಪತ್ರಿಕೆಗಳಲ್ಲಿ ಬರೆಯುತ್ತಾ, ಮಾತನಾಡುತ್ತಾ ಬಂದಿದ್ದಾರೆ. ಇವರುಗಳ ಜೊತೆಗೆ ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ಬನವಾಸಿ ಬಳಗ ಎಂಬ ತಂಡವನ್ನು ರಚಿಸಿಕೊಂಡು ಕನ್ನಡದ ಅಸ್ಮಿತೆ ಯನ್ನು ಉಳಿಸಿಕೊಳ್ಳಲು ವಸಂತ್ ಶೆಟ್ಟಿ, ಜಿ.ಆನಂದ್ ಮತ್ತು ಕಿರಣ್ ಹಾಗೂ ಗೆಳೆಯ ಶ್ರಮವನ್ನು ನೋಡಿದರೆ  ಆಶ್ಚರ್ಯವಾಗುತ್ತದೆ.
 ಕನ್ನಡ ಪರ ಹೋರಾಟವೆಂದರೆ,  ದಂಧೆಯಾಗಿರುವ, ವಸೂಲಿವೀರರ ಉದ್ಯಮವಾಗಿರುವ ಈ ದಿನಗಳಲ್ಲಿ ತಮ್ಮ ದಿನನಿತ್ಯದ ವೃತ್ತಿ ಹಾಗೂ ವ್ಯವಹಾರಗಳ ಜೊತೆ ಅವರು ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ಅವರು ಶ್ರಮಿಸುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ. 2007 ರಿಂದ ಸತತವಾಗಿ “ ಏನ್ ಗುರು? ಕಾಫಿ ಆಯ್ತಾ? ಎಂಬ ಹೆಸರಿನಲ್ಲಿ ಬ್ಲಾಗ್ ಆರಂಭಿಸಿ ಕನ್ನಡದ ಬಗ್ಗೆ ಬರೆಯುತ್ತಾ ಬಂದಿರುವ ಈ ಗೆಳೆಯರು  ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ.
                                                  ಜಿ.ಆನಂದ್
ಜಿ.ಆನಂದ್ ಬರೆದಿರುವ “ ಬಾರಿಸು ಕನ್ನಡ ಡಿಂಡಿಮ” ಶೀರ್ಷಿಕೆಯಡಿ ಐದು ಕೃತಿಗಳನ್ನು ಹೊರತಂದಿದ್ದು ಕನ್ನಡ ನಾಡು ನುಡಿ ಕುರಿತು ದಾಖಲಿಸಿರುವ ಅನೇಕ ಚಿಂತನೆಗಳು ಕನ್ನಡಿಗರನ್ನು ಉದ್ದೀಪಿಸುವಂತಿವೆ. ಹಿಂದಿ ಹೇರಿಕೆ ಕುರಿತಂತೆ ಬರೆದಿರುವ ಕೃತಿಯು ಭಾಷೆ ಕುರಿತಂತೆ ಸರ್ಕಾರದ ಎಡವಟ್ಟುಗಳನ್ನು ನಮ್ಮ ಮುಂದೆ ತೆರದಿಡುತ್ತದೆ.
                                                       ವಸಂತ್  ಶೆಟ್ಟಿ
ವಸಂತ ಶೆಟ್ಟಿಯವರು ತಮ್ಮ ಬ್ಲಾಗಿನಲ್ಲಿ, ಒನ್ ಇಂಡಿಯಾ, ಅಂತರ್ಜಾಲ ಪತ್ರಿಕೆಯಲ್ಲಿ ಮತ್ತು ಕನ್ನಡದ ಸಂಜೆ ದಿನಪತ್ರಿಕೆಯೊಂದರಲ್ಲಿ ಬರೆದ ಅಂಕಣ ಬರಹವು “ ಏನ್ ಗುರು ಕಾಫಿ ಆಯ್ತಾ? ಹೆಸರಿನಲ್ಲಿ ಕೃತಿಯ ರೂಪದಲ್ಲಿ ಪ್ರಕಟವಾಗಿದೆ. 420 ಪುಟಗಳಷ್ಟಿರುವ ಈ ಕೃತಿಯ ಬರಹಗಳು  ಕನ್ನಡ ಭಾಷೆಯ ಹಲವಾರು ಮಗ್ಗಲುಗಳನ್ನು ಗಂಭೀರವಾಗಿ ಚರ್ಚಿಸಿವೆ. ವಸಂತ್ ಶೆಟ್ಟಿಯವರು ಕನ್ನಡ –ಸಂಸ್ಕೃತ ನಡುವಿನ ಸಂಬಂಧ, ಆಡು ಭಾಷೆಯ ಕನ್ನಡ, ವ್ಯಾಕರಣ ಇತ್ಯಾದಿಗಳ ಕುರಿತು ವಿದ್ವತ್ ಪೂರ್ಣವಾಗಿ ಚರ್ಚಿಸಿದ್ದಾರೆ.

ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇರಬೇಕು ಎಂದು ಶ್ರಮಿಸುತ್ತಿರುವ ಈ ಗೆಳೆಯರ ಪ್ರೀತಿಯು  ನಮ್ಮ ಕನ್ನಡ ನಾಡಿನ ಮಕ್ಕಳ ಪೋಷಕರಿಗೆ ಮತ್ತು ಸರ್ಕಾರಕ್ಕೆ  ಹಾಗೂ ಜನಪ್ರತಿನಿಧಿಗಳಿಗೆ  ಏಕಿಲ್ಲ ಎಂಬ ಪ್ರಶ್ನೆಯು ನಿರಂತರವಾಗಿ ನನನ್ನು ಕಾಡುತ್ತಿದೆ. ಜೊತೆಗೆ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಾಸವಾಗಿರುವ ಸರ್ಕಾರಿ ಕನ್ನಡ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಬಿಟ್ಟು ನಂತರ ಮೋಟಾರ್ ಬೈಕ್ ಏರಿ ಹಳ್ಳಿಗಳ ಶಾಲೆಯತ್ತ ಹೋಗುವುದನ್ನು ನೋಡಿದಾಗ ಮನಸ್ಸು ಮುದುಡಿ ಹೋಗುತ್ತದೆ. ಏಕೆಂದರೆ, ಹರ ಕೊಲ್ಲಲ್ ಪರ ಕಾಯ್ವನೆ? ಎಂಬಂತಿದೆ ಕನ್ನಡದ ಸ್ಥಿತಿ.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣ ಬರಹ)

ಶುಕ್ರವಾರ, ಜೂನ್ 16, 2017

ವಿಶ್ವವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಟ್ರಂಪ್ ಎಂಬ ಮಹಾಶಯ


ಜಾಗತಿಕ ಹವಾಮಾನ ವೈಪರಿತ್ಯ ತಡೆ ಕುರಿತ ಒಪ್ಪಂಧಕ್ಕೆ ಸಹಿ ಹಾಕಿದ್ದ ಅಮೇರಿಕಾ ದೇಶವು ಇದೀಗ ಒಪ್ಪಂಧದಿಂದ ಹಿಂದೆ ಸರಿದಿದೆ. ಕಳೆದ ತಿಂಗಳು ಸಿಯಾಟಲ್ ನಗರದಲ್ಲಿ ನಡೆದ  ಪ್ಯಾರಿಸ್ ಒಪ್ಪಂಧ ಕುರಿತ ನಡೆದ ಮಾತುಕತೆಯ ಸಂದರ್ಭದಲ್ಲಿ ಈಗಿನ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ತನ್ನ ತಿಕ್ಕಲುತನದ  ನಡೆಯನ್ನು ಅನಾವರಣಗೊಳಿಸುವುದರ ಮೂಲಕ ಇಡೀ ಜಗತ್ತಿನ ಜೀವಸಂಕುಲಗಳಿಗೆ ಅಪಾಯ ತಂದೊಡ್ಡಿದ್ದಾನೆ.
2015 ರ ಡಿಸಂಬರ್ ತಿಂಗಳಿನಲ್ಲಿ ಪ್ರಾರಿಸ್ ನಗರದಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ಅಂದಿನ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ, ಭಾರತದ ಪ್ರಧಾನಿ ನರೇಂಧ್ರಮೋದಿ ಮತ್ತು ಚೀನಾ ಅಧ್ಯಕ್ಷ ಜಿಯಾಂಗ್  ಸೇರಿದಂತೆ ಜಗತ್ತಿನ 196 ರಾಷ್ಟ್ರಗಳು  ಒಪ್ಪಂಧಕ್ಕೆ ಸಹಿ ಹಾಕಿದ್ದವು. ಈ ಐತಿಹಾಸಿಕ ನಿರ್ಣಯದ ಮೂಲಕ ಜಾಗತಿಕ ತಾಪಮಾನವು ಮುಂದಿನ ಐವತ್ತು ವರ್ಷಗಳಲ್ಲಿ ಎರಡು ಡಿಗ್ರಿ ಸೆಲ್ಸಿಯಸ್ ಗಿಂತ ಮೀರಬಾರದು ಮತ್ತು  ಸಾಂಪ್ರದಾಯಕ ಇಂಧನಗಳಿಗೆ (ಕಲ್ಲಿದ್ದಲು, ಪೆಟ್ರೋಲಿಯಂ ಇತ್ಯಾದಿ) ಪರ್ಯಾಯವಾಗಿ ನವೀಕರಿಸಬಹುದಾದ ಮತ್ತು ನೈಸರ್ಗಿಕವಾಗಿ ದೊರೆಯುವ ಇಂಧನಗಳನ್ನು ( ಸೂರ್ಯನ ಶಾಖದಿಂದ ಮತ್ತು ಗಾಳಿಯಿಂದ ವಿದ್ಯುತ್ ಇತ್ಯಾದಿ) ಬಳಸುವುದರ ಮೂಲಕ ವಾತಾವಾರಣಕ್ಕೆ ಉಗುಳುವ ಕಾರ್ಬನ್ ಡೈ ಆಕ್ಸೈಡ್ (ಇಂಗಾಲಾಮ್ಲ) ಇದರ ಪರಿಣಾಮವನ್ನು ಕಡಿತಗೊಳಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ವೃತ್ತಿಯಲ್ಲಿ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದುಕೊಂಡು, ಬಂಡವಾಳಶಾಹಿ ಜಗತ್ತಿನ ಪ್ರತಿನಿಧಿಯಂತೆ ಕಾಣುವ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಂಬ ಮಹಾಶಯನಿಗೆ  ಯಾವುದೇ ರಾಜಕೀಯ ಮುತ್ಸದಿತನ ಇದ್ದಂತಿಲ್ಲ. ಜಾಗತೀಕಮಟ್ಟದಲ್ಲಾಗಲಿ ಅಥವಾ ರಾಷ್ಟ್ರಮಟ್ಟದಲ್ಲಾಗಲಿ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅವುಗಳಿಂಧಾಗುವ ರಾಜಕೀಯ , ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಕುರಿತಂತೆ ಯೋಚಿಸುವ ಜ್ಞಾನವಿಲ್ಲ. ಈತ ಅಮೇರಿಕಾ ಅದ್ಯಕ್ಷನಾದ ಮೇಲೆ ತೆಗೆದುಕೊಂಡ ನಿಲುವುಗಳಿಂದಾಗಿ ಭಾರತದ ಮಾಹಿತಿ ತಂತ್ರಜ್ಞಾನದ ಮೇಲೆ ಬಿದ್ದಿರುವ ಹೊಡೆತ, ಹಾಗೂ ರಷ್ಯಾ ಮತ್ತು ಚೀನಾಗಳಂತಹ ರಾಷ್ಟ್ರಗಳ ಜೊತೆ ವ್ಯವಹರಿಸುತ್ತಿರುವ ವೈಖರಿ ಹಾಗೂ ಅರಬ್ ರಾಷ್ಟ್ರಗಳ ಜೊತೆಗಿನ ಸಂಬಂಧ ಇವೆಲ್ಲವೂ ಗೊಂದಲದ ಗೂಡಾಗಿವೆ. 2012 ರ ಸಮಯದಲ್ಲಿ ಜಾಗತಿಕ ಹವಾಮಾನ ವೈಪರಿತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರಾಷ್ಟ್ರಿಯ ಮಟ್ಟದಲ್ಲಿ ಒಪ್ಪಂಧಕ್ಕೆ ಬರಬೇಕು ಎಂಬ ಒತ್ತಡಗಳು ಕೇಳಿಬಂದ ಸಂದರ್ಭದಲ್ಲಿ “ಇದೊಂದು ಸುಳ್ಳು ವದಂತಿ” ಎಂದು ಈತ ಪ್ರತಿಕ್ರಿಯೆ ನೀಡಿದ್ದ. ಅದರಂತೆ ಈಗ ಅಧ್ಯಕ್ಷನಾದ ನಂತರ ಮನುಕುಲವಷ್ಟೇ ಅಲ್ಲದೆ, ಜೀವಸಂಕುಲಕ್ಕೆ ನೆರವಾಗಬಹುದಾದ ಪ್ಯಾರಿಸ್ ಒಪ್ಪಂಧವನ್ನು ವದಂತಿಯ ರೂಪದಲ್ಲಿ ತಳ್ಳಿಹಾಕಿದ್ದಾನೆ. ತಲೆತುಂಬಾ ಲಾಭಕೋರತನವನ್ನು ತುಂಬಿಕೊಂಡು, ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಕೊಡುಗೆಗಳನ್ನು ಮಾರಣಹೋಮ ಮಾಡುತ್ತಿರುವ ಇಂತಹ ದುರಹಂಕಾರಿಗಳು ಮತ್ತು ಅಭಿವೃದ್ಧಿ ಹೊಂದಿದ ಶ್ರೀಮಂತ ಕೈಗಾರಿಕಾ ರಾಷ್ಟ್ರಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ. ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ  ಹೊಗೆ ಉಗುಳುತ್ತಿರುವ ರಾಷ್ಟ್ರಗಳಲ್ಲಿ ಅಮೇರಿಕಾ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾವು ದ್ವಿತೀಯ ಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆನಿಸಿದ ಭಾರತವು ಮೂರನೇಯ ಸ್ಥಾನದಲ್ಲಿದೆ.
ಹಲವು ವರ್ಷಗಳ ಕಾಲ ನೆನಗುದಿಗೆ ಬಿದ್ದಿದ್ದ ಹವಾಮಾನ ವೈಪರಿತ್ಯ ತಡೆಯ ಒಪ್ಪಂಧದಲ್ಲಿ ಇರುವ ಪ್ರಮುಖ ವಿಷಯಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು. ವಾತಾವರಣದಲ್ಲಿ ಹಸಿರು ಮನೆಯ ಅನಿಲಗಳು ಎಂದು ಕರೆಸಿಕೊಳ್ಳುವ ಒಜೋನ್  ಅಥವಾ ನೀರಿನ ಆವಿ (02) ಇಂಗಾಲಮ್ಲ ( CH2) ಮಿಥೇನ್(CH4) ನೈಟ್ರಸ್ ಆಕ್ಷೈಡ್(N2O) ಇವೆಲ್ಲವೂ ಸಹಜವಾಗಿ ನೀರಿನಿಂದ, ಜಾನುವಾರುಗಳು ಮತ್ತು ಕೃಷಿ ತ್ಯಾಜ್ಯದಿಂದ ಮತ್ತು  ನಿಸರ್ಗ ಅಥವಾ ವಾತಾವರಣ  ಇವುಗಳಿಂದ ಉತ್ಪತ್ತಿಯಾಗಿ ಭೂಮಿಯ ಮೇಲಿನ ಉಷ್ಣತೆಯನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿದ್ದವು.  ಆದರೆ, ಇಪ್ಪತ್ತನೇಯ ಶತಮಾನದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ಆದ ಬದಲಾವಣೆಯಿಂದಾಗಿ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲುಗಳ ಬಳಕೆ ಮತ್ತು ಸಾರಿಗೆ ಕ್ಷೇತ್ರದ ವಾಹನಗಳು ಮತ್ತು ಕೈಗಾರಿಕೆಗಳಲ್ಲಿ ಬಳಸುವ ಪೆಟ್ರೋಲಿಯಂ ಉತ್ಪನ್ನಗಳ ಮಿತಿಮೀರಿದ ಬಳಕೆಯಿಂದಾಗಿ ವಾತಾವರಣಕ್ಕೆ ಸೇರುತ್ತಿರುವ ಕಾರ್ಬನ್ ಡೈ ಆಕ್ಷೈಡ್ ಮತ್ತು ನೈಟ್ರಸ್ ಆಕ್ಷೈಡ್ ಇವುಗಳಿಂದಾಗ ಹವಾಗುಣದಲ್ಲಿ ಏರುಪೇರಾಗುತ್ತಿದೆ. ಭೂಮಿಯ ಮೇಲಿನ ಉಷ್ಣತೆ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ರಸಾಯಿನಿಕ ಗೊಬ್ಬರಗಳು ಮತ್ತು ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಮಿಥೇನ್ ಅನಿಲವು ಹವಾಮಾನ ವೈಪರಿತ್ಯಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕಾರಿಯಾಗಿದೆ. ಇದು ಕಾರ್ಬನ್ ಡೈ ಆಕ್ಷೈಡ್ ಗಿಂತ ಶೇಕಡ 21 %ರಷ್ಟು ಮತ್ತು ನೈಟ್ರಸ್ ಆಕ್ಷೈಡ್ ಗಿಂತ ಶೇಕಡ 30% ರಷ್ಟು ಹೆಚ್ಚು ಪ್ರಭಾವಶಾಲಿಯಾಗಿದೆ.
2005 ರಿಂದ 2015 ರ ಅವಧಿಯ ನಡುವೆ ನೈಟ್ರಸ್ ಆಕ್ಷೈಡ್ ಪ್ರಮಾಣವು ಜಾಗತಿಕವಾಗಿ ಹೆಚ್ಚಾಗಿರುವುದನ್ನು ನಾಸಾ ಉಪಗ್ರಹಗಳು ಸೆರೆ ಹಿಡಿದಿರುವ ಭೂಮಿಯ ಚಿತ್ರಗಳಿಂದ ದೃಢಪಟ್ಟಿದೆ. ವಾಹನಗಳು, ಕೈಗಾರಿಕೆಗಳು ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ಹೊರಸೂಸುವ ಹೊಗೆಯಲ್ಲಿ ಹಳದಿಮಿಶ್ರಿತ ಕಂದು ಬಣ್ಣದ ಹೊಗೆಯಿಂದಾಗಿ ಗಂಧಕಾಮ್ಲವು ವಾತಾವರಣವನ್ನು ಮಲೀನಗೊಳಿಸುತ್ತಿದೆ. ಜಗತ್ತಿನ ಒಟ್ಟು 195 ದೇಶಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಬಂಗ್ಲಾ ದೇಶದ ರಾಜಧಾನಿ ಢಾಕ್ಕಾ ನಗರವು ಜಗತ್ತಿನಲ್ಲಿ ಅತಿ ಹೆಚ್ಚು ನೈಟ್ರೋಜನ್ ಡೈ ಆಕ್ಷೈಡ್ ಅನ್ನು ಹೊರಸುಸುತ್ತಿರುವ ನಗರವಾಗಿದೆ. ಕಯಗಾರಿಕೆಗಳು ಹೆಚ್ಚಾಗಿರುವ ನಗರದಲ್ಲಿ ನಯಟ್ರೋಜನ್ ಡೈ ಆಕ್ಸೈಡ್ ಪ್ರಮಾಣವು ಶೇಕಡ 20 ರಿಂದ ಶೇಕಡ 50 ರಷ್ಟು ಹೆಚ್ಚಾಗಿದ್ದರೆ, ಢಾಕ್ಕಾ ನಗರದಲ್ಲಿ ಶೇಕಡ 79 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿರುವ ಛತ್ತಿಸ್ ಗಡದ   ವಲಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಸ್ಕರಿಸುವ  ಗುಜರಾತಿನ ಜಾಮ್ ನಗರವನ್ನು ಮಾಲಿನ್ಯ ಪ್ರದೇಶಗಳೆಂದು ಗುರುತಿಸಲಾಗಿದೆ. ಜಗತ್ತಿನಾದ್ಯಂತ ಕಲ್ಲಿದ್ದಲು ಮತ್ತು ತೈಲ ಇವುಗಳ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಇಡೀ ಮನುಕುಲ ಅಪಾಯದ ಅಂಚಿಗೆ ತಲುಪಿದೆ.
ಈ ಕುರಿತು ಕಳೆದ ಮೂರು ದಶಕಗಳಿಂದ ವಿಶ್ವ ಸಂಸ್ಥೆಯೂ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ವಿಜ್ಞಾನಿಗಳು ಹವಾಮಾನ ವೈಪರಿತ್ಯ ಕುರಿತು ಜಗತ್ತಿನ ಗಮನ ಸೆಳದಿದ್ದರು. ಭೂಮಿಯ ಮೇಲಿನ ಉಷ್ಣತೆಯಿಂದಾಗಿ ಉತ್ತರ ಮತ್ತು ದಕ್ಷಿಣದ ದ್ರುವ ಪ್ರದೇಶಗಳೂ ಸೇರಿದಂತೆ ಹಿಮಾಲಯದಲ್ಲಿನ ಹಿಮಪರ್ವತಗಳು ಕರಗುತ್ತಿದ್ದು, ಸಮುದ್ರದ ನೀರಿನ ಮಟ್ಟ ಈಗಾಗಲೇ ಹದಿನೇಳು ಸೆಂಟಿಮೀಟರ್ ಏರಿಕೆಯಾಗಿದೆ. ಜೊತೆಗೆ ಋತುಮಾನಗಳಲ್ಲಿ ಏರು ಪೇರು, ಅಕಾಲಿಕ ಮಳೆ, ಚಂಡಮಾರುತಗಳು ಇವುಗಳಿಂದಾಗಿ ಜಾಗತೀಕ ಮಟ್ಟದಲ್ಲಿ ಕೃಷಿ ರಂಗದ ಮೇಲೆ ಅಗಾಧವಾಗಿ ದುಷ್ಪರಿಣಾಮ ಬೀರಿದೆ. ಇಂತಹ ಪ್ರಕೃತಿ ವಿಕೋಪವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರಗಳು ಸಾಂಪ್ರದಾಯಿಕ ಇಂಧನಗಳ ಬದಲಾಗಿ ನವೀಕರಿಸಬಹುದಾದ ಇಂಧನಗಳಿಗೆ ಆದ್ಯತೆ ನೀಡಬೇಕೆಂದು  ಒಪ್ಪಂಧಕ್ಕೆ ಬರಲಾಗಿತ್ತು.
ಒಪ್ಪಂಧದ ಪ್ರಕಾರ ಜಗತ್ತಿನ ಮುಂದುವರಿದ ಕೈಗಾರಿಕಾ ರಾಷ್ಟ್ರಗಳು ಇತರೆ ಹಿಂದುಳಿದ ರಾಷ್ಟ್ರಗಳಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳಲು ಒಟ್ಟು ಆರು ಲಕ್ಷ, ಅರವತ್ತು ಕೋಟಿ ಡಾಲರ್ ಹಣವನ್ನು ಸಹಾಯಧನವನ್ನಾಗಿ ನೀಡಬೇಕೆಂದು ನಿರ್ಧರಿಸಲಾಗಿತ್ತು.2030 ರ ವೇಳೆಗೆ ಜಗತ್ತಿನಾದ್ಯಂತ ಗಿಡ ಮರಗಳನ್ನು ಬೆಳಸುವುದು ಮತ್ತು ನವೀಕರಿಸಬಹುದಾನ ಇಂಧನಗಳನ್ನುಬಳಸುವುದರ ಮೂಲಕ ಸುಮಾರು ಇನ್ನೂರರಿಂದ ಮುನ್ನೂರು ಕೋಟಿ ಟನ್ ಪ್ರಮಾಣದಷ್ಟು ಇಂಗಾಲಮ್ಲಗಳ ಹೊರಸೂಸುವಿಕೆಯನ್ನು ತಗ್ಗಿಸಬೇಕೆಂದು ಗುರಿ ಹಾಕಿಕೊಳ್ಳಲಾಗಿತ್ತು. ಇದೀಗ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಹಾಶಯನಿಂದಾಗಿ ಜಗತ್ತಿನ ಸುಮಾರು ಏಳನೂರು ಕೋಟಿ ಜನಸಂಖ್ಯೆಗೆ ಮಾತ್ರವಲ್ಲದೆ, ಅಸಂಖ್ಯಾತ ಜೀವಸಂಕುಲಗಳ ಉಳುವಿಗೂ ಕುತ್ತು ಬಂದಿದೆ.
ಈಭೂಮಿಗೆ ಅಥವಾ ಈ ಜಗತ್ತಿಗೆ ನಾವು ಹಕ್ಕುದಾರರಲ್ಲ, ಕೇವಲ ವಾರಸುದಾರರು , ಇಲ್ಲಿ ಉಚಿತವಾಗಿ ದೊರೆಯುವ ನೈಸರ್ಗಿಕ ಕೊಡುಗೆಗಳನ್ನು ಮಿತವಾಗಿ ಬಳಸಿ, ಮುಂದಿನ ತಲೆಮಾರಿಗೆ ಉಳಿಸಿಹೋಗಬೇಕೆಂಬ ವಿವೇಕ ನಮ್ಮಗಳ ತಲೆಯಿಂದ ಅಳಿಸಿಹೋಗಿದೆ. ಇಂತಹ ಅವಿವೇಕ ಅಥವಾ ಅಜ್ಞಾನಕ್ಕೆ ಬೇರೆ ಯಾರಿಂದಲೂ ಬುದ್ದಿ ಕಲಿಸಲು ಸಾಧ್ಯವಿಲ್ಲ. ಆದರೆ,  ಪ್ರಕೃತಿಗೆ ಅಂತಹ ಶಕ್ತಿಯಿದೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಕಾಡಿದ ಸತತ ಬರದಿಂದಾಗಿ ಮನುಷ್ಯ ಮರೆತು ಹೋಗಿದ್ದ ಕೆರೆ, ಕಟ್ಟೆ, ಬಾವಿಗಳು ಈ ವರ್ಷ ಆತನ ಜ್ಞಾಪಕಕ್ಕೆ ಬಂದವು. ನೀರನ್ನು ಹಿಡಿದಿಡಬೇಕು, ಮಿತವಾಗಿ ಬಳಸಬೇಕು ಎಂಬ ಅರಿವು ಮೂಡತೊಡಗಿತು. ಇದರ ಪರಿಣಾಮವೆಂಬಂತೆ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಜನತೆ ಸರಕಾರದ ಸಹಾಯಕ್ಕೆ ಕಾಯದೆ ತಾವೇ ಹೂಳೆತ್ತಿ ದರು. ಅಂತಹದೊಂದು ಅವಘಡ ಸಧ್ಯದಲ್ಲಿ ಈ ಜಗತ್ತಿಗೆ ಅಪ್ಪಳಿಸಿದರೆ ಆಶ್ಚರ್ಯವಿಲ್ಲ. ಈಗಾಗಲೇ  ಭಾರತದ ಹಲವು ಪ್ರದೇಶಗಳಲ್ಲಿ ಶೇಕಡ 40 ರಿಂದ 45 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಈ ವರ್ಷ 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದು ಎಚ್ಚರಿಕೆಯ ಗಂಟೆಯಲ್ಲದೆ ಬೇರೇನೂ ಅಲ್ಲ.


( ಕರಾವಳಿ ಮುಂಜಾವು ದಿನಪತ್ರಿಕೆಯ : ಜಗದಗಲ” ಅಂಕಣ ಬರಹ)