ಸೋಮವಾರ, ಮೇ 25, 2015

ಮೋದಿಮಯ ಭಾರತದ ಭ್ರಮೆ ಮತ್ತು ವಾಸ್ತವಗಳು




ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದ ಭಾರತದ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರು ಇದೇ ಮೇ 26 ರಂದು ಪ್ರಧಾನಿಯಾಗಿ ಒಂದು ವರ್ಷ ಪೂರೈಸುತ್ತಿದ್ದಾರೆ. ಗುಜರಾತಿನ ಹಿಂದುಳಿದ ಸಮುದಾಯದಿಂದ ಬಂದ ಹಾಗೂ ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ಶ್ರೀ ಸಾಮಾನ್ಯನೊಬ್ಬ ದೇಶದ ಅತ್ಯುನ್ನುತ ಹುದ್ದೆಯನ್ನು ಅಲಂಕರಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟವರಲ್ಲಿ ಮೋದಿ ಪ್ರಮುಖರು. ಕಳೆದ ವರ್ಷ  ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ  ನರೇಂದ್ರಮೋದಿಯವರ ಬಗ್ಗೆ ಭಾರತದ ನಾಗರೀಕರಲ್ಲಿ ಹಲವಾರು ನಿರೀಕ್ಷೆಗಳಿವೆ. ಮೋದಿಯವರ ಒಂದು ವರ್ಷದ ಆಳ್ವಿಕೆಯಲ್ಲಿ ಅವರ ಸಾಧನೆಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದಾಗ ಎನ್.ಡಿ.. ಸರ್ಕಾರದ ಅನೇಕ ಏಳು ಬೀಳಿನ ಸಂಗತಿಗಳು ನಮ್ಮೆದುರು ತೆರೆದುಕೊಳ್ಳುತ್ತಿವೆ. ಕೇವಲ ಒಂದು ವರ್ಷದ ಆಳ್ವಿಕೆಯಲ್ಲಿ ಒಬ್ಬ ಜನನಾಯಕನ ಅಥವಾ ಒಂದು ಸರ್ಕಾರದ ಹಣೆಬರಹವನ್ನಾಗಲಿ, ಭವಿಷ್ಯವನ್ನಾಗಲಿ ನಿರ್ಧರಿಸುವುದು ಆತುರದ ಕ್ರಮವಾಗುತ್ತದೆ ನಿಜ. ಆದರೆ, ಸರ್ಕಾರವು ಸಾಗುತ್ತಿರುವ ಹಾದಿಯನ್ನು ಹಾಗೂ ಇಡುತ್ತಿರುವ ಹೆಜ್ಜೆ ಗುರುತುಗಳನ್ನು ಗುರುತಿಸಿ ವಿಶ್ಲೇಷಿಸಲು ಒಂದು ವರ್ಷದ ಆಡಳಿತದ ಅವಧಿ ಸಾಕು.

ಹಿಂದೆ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯು.ಪಿ.. ಸರ್ಕಾರzಲ್ಲಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ರವರು ತಮ್ಮ  ಅಧಿಕಾರದ ಎರಡನೆಯ ಅವಧಿಯಲ್ಲಿ ತಾಳಿದ ದಿವ್ಯ ನಿರ್ಲಕ್ಷ್ಯ ಮತ್ತು ಮೌನಗಳ ಜೊತೆಗೆ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗದ ಅಸಹಾಯಕತೆಗೆ ದೂಡಲ್ಪಟ್ಟಿದ್ದರು. ಇದರ ಪರಿಣಾಮವೆಂಬಂತೆ ಕಳೆದ ವರ್ಷ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದೂಳಿಪಟವಾಯಿತುಲೋಕಸಭೆಯ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಪಡೆಯಬೇಕಾದ ಕನಿಷ್ಟ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾದ ಕಾಂಗ್ರೇಸ್ ಪಕ್ಷವು ತನ್ನ 125 ವರ್ಷಗಳ ಸುಧೀರ್ಘ ಇತಿಹಾಸದಲ್ಲಿ ಅಪಮಾನಕಾರಿಯಾದ ಸೋಲನ್ನು ಅನುಭವಿಸಿತು. ನರೇಂದ್ರ ಮೋದಿಯವರು ಮತ್ತು ಅವರ ತಂಡದ ವ್ಯವಸ್ಥಿತ ಪ್ರಚಾರದಿಂದ  ಭಾರತೀಯ ಜನತಾ ಪಕ್ಷವು ಅಭೂತ ಪೂರ್ವ ಗೆಲುವವನ್ನು ಸಾಧಿಸಿತು. ವಾಸ್ತವವಾಗಿ ಗೆಲುವಿನ ಕೀರ್ತಿ ಸಂಪೂರ್ಣವಾಗಿ ನರೇಂದ್ರ ಮೋದಿ ಮತ್ತು ಅವರ ತಂಡದ ಕ್ಯಾಪ್ಟನ್ ಅಮಿತ್ ಶಾ ಅವರಿಗೆ ಸಲ್ಲುವುದಿಲ್ಲ. ಕಾಂಗ್ರೆಸ್ ಹಾಗೂ ಮೈತ್ರಿ ಕೂಟದ ಪಕ್ಷಗಳು ವರ್ತಮಾನ ಭಾರತದ ಮತದಾರರ ನಾಡಿ ಮಿಡಿತವನ್ನು ಗ್ರಹಿಸುವಲ್ಲಿ ವಿಫಲವಾದ ಕಾರಣ ಬಿ.ಜೆ.ಪಿ. ಗೆಲುವಿನಲ್ಲಿ ಅವುಗಳ ಪರೋಕ್ಷವಾದ  ಪಾತ್ರವಿದೆ ಎಂಬುದನ್ನು ನಾವು ಮರೆಯಲಾಗದು.

ಓಭಿರಾಯನ ಕಾಲದ ಚುನಾವಣಾ ತಂತ್ರಗಳನ್ನು ಮತ್ತು ಪ್ರಣಾಳಿಕೆಗಳನ್ನು ಇಪ್ಪತ್ತೊಂದನೆಯ ಶತಮಾನದ ಅಧುನಿಕ ತಂತ್ರಜ್ಞಾನದ ಕಾಲದಲ್ಲಿಯೂ ನಂಬಿಕೊಂಡು ಪ್ರಯೋಗಿಸಲು ಹೊರಟ ಕಾಂಗ್ರೆಸ್, ಆರ್,ಜೆ.ಡಿ, ಜೆ.ಡಿ.ಎಸ್. ಡಿ.ಎಂ.ಕೆ, ಹಾಗೂ ಸಮಾಜವಾದಿ ಪಕ್ಷಗಳು ಮತ್ತು  ಎಡ ಪಕ್ಷಗಳು ಯುವ ತಲೆಮಾರಿನ ಭಾವನೆ ಮತ್ತು ಅವರ ಆಕಾಂಕ್ಷೆಗಳನ್ನು ಅರಿಯುವಲ್ಲಿ ವಿಫಲವಾದವುಪ್ರತಿ ಚುನಾವಣೆಯಲ್ಲಿ ಹೊಸ ತಲೆಮಾರೊಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದೆ ಎಂಬ ಅಂಶವನ್ನು ಗ್ರಹಿಸುವಲ್ಲಿ ಸೋತ ಯು.ಪಿ.. ಮೈತ್ರಿಕೂಟವು, ತನ್ನ ಆಡಳಿತಾವಧಿಯಲ್ಲಿ ನಡೆಸಿದ ದೂರಸಂಪರ್ಕ ಇಲಾಖೆಯ 2 ಜಿ. ತರಂಗಾಂತರ ಹಗರಣ, ಕಲ್ಲಿದ್ದಲು ಹಗರಣ ಮತ್ತು ವಿದೇಶದಲ್ಲಿ ಬಚ್ಚಿಟ್ಟ ಕಪ್ಪು ಹಣ ಕುರಿತಂತೆ ತಾಳಿದ ದ್ವಂದ್ವ ನೀತಿ ಇವುಗಳ ಫಲವನ್ನು ಚುನಾವಣೆಯಲ್ಲಿ ಅನುಭವಿಸಬೇಕಾಯಿತು. ಜೊತೆಗೆ ದೂರಸಂಪರ್ಕ ಮತ್ತು ಮಾಧ್ಯಮ ಕ್ಷೇತ್ರದಲ್ಲಾಗಿರುವ ತಂತ್ರಜ್ಞಾನದ ಕ್ರಾಂತಿಯ ಫಲವಾದ ಸಾಮಾಜಿಕ ತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುವಜನರ ಮತ್ತು ನಗರವಾಸಿಗಳ ಮನಗೆಲ್ಲುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ವ್ಯಯಕ್ತಿಕ ನೆಲೆಯಲ್ಲಿ ಭ್ರಷ್ಟರಲ್ಲದ ಹಾಗೂ ದಿನದ ಹದಿನೆಂಟು ಗಂಟೆಗಳ ಕಾಲ ಸದಾ ಕ್ರಿಯಾ ಶೀಲರಾಗಿರುವ ನರೇಂದ್ರಮೋದಿಯವರು ಅವಕಾಶವನ್ನು ಸದುಪಯೋಗಪಡಿಸಿಕೊಂಡರು.

ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಸತತ ಮೂರು ಬಾರಿ ಆಡಳಿತ ನಡೆಸಿದ ಮೋದಿಯವರು, ಅನೇಕ ವಿವಾದಗಳ ನಡುವೆಯೂ ಅದನ್ನು ಮಾದರಿ ರಾಜ್ಯವನ್ನಾಗಿ ಮಾಡಿದರು. ವಿಷಯದಲ್ಲಿ ಎರಡು ಮಾತಿಲ್ಲ. ತಮ್ಮ ಆಡಳಿತ ವೈಖರಿ ಮತ್ತು ಸಂಘಟನಾ ಚತುರತೆ ಇವುಗಳನ್ನು ಚಿಮ್ಮು ಹಲಗೆಯನ್ನಾಗಿ ಬಳಸಿಕೊಂಡು, ಬಿ,ಜೆ,ಪಿ. ಪಕ್ಷವನ್ನು ವಿಜಯದತ್ತ ಕೊಂಡೊಯ್ದು, ಹಿರಿಯರನ್ನು ಹಿಂದಿಕ್ಕಿ ಅನಾಯಾಸವಾಗಿ ಪ್ರಧಾನಿ ಹುದ್ದೆಗೇರಿದರು. ಅವರ ವಾಕ್ ಚಾತುರ್ಯ ಹಾಗೂ ಚುನಾವಣೆ ಮತ್ತು ನಂತರದ ದಿನಗಳಲ್ಲಿ ತಮ್ಮ ಆಡಳಿತವನ್ನು ಬಿಂಬಿಸಲು ಬಳಸಿಕೊಂಡ ಜಾಹಿರಾತು ಮತ್ತು ಮಾರುಕಟ್ಟೆಯ ತಂತ್ರಜ್ಞರ ಸೇವೆಯು ಮೋದಿಯವರನ್ನು ಜಾಗತಿಕ ಮಟ್ಟದ ನಾಯಕರ ಸ್ಥಾನದಲ್ಲಿ ತಂದು ಕೂರಿಸಿತು. ಆದರೆ, ಕಳೆದ ಒಂದು ವರ್ಷದಿಂದ ಅವರ ಮಾತುಗಳನ್ನು ಕೇಳಿದ ಭಾರತದ ನಾಗರೀಕನಿಗೆ ಮಾತು ಮತ್ತು ಕೃತಿಗಳ ನಡುವಿನ ಅಂತರ ಈಗ ಅರ್ಥವಾಗ ತೊಡಗಿದೆ. ಕಳೆದ ಯು.ಪಿ.. ಸರ್ಕಾರದ ಪ್ರಧಾನಿ ಮನಮೋಹನ ಸಿಂಗ್ ರವರು ಮಾತನಾಡದೆ ಕೆಟ್ಟರು, ಈಗ ನರೇಂದ್ರ ಮೊದಿಯವರು ಮಾತನಾಡುತ್ತಾ ಕೆಡುತ್ತಿದ್ದಾರೆ ಎಂಬ ಗುಮಾನಿ  ಮೂಡುತ್ತಿದೆ. ಇದಕ್ಕೆ ಉದಾಹರಣೆಯಾಗಿ ಮೋದಿಯವರು ಇತ್ತೀಚೆಗೆ ಕೈಗೊಂಡಿದ್ದ ಚೀನಾ, ಮುಂಗೋಲಿಯಾ ಮತ್ತು ದಕ್ಷಿಣಾ ಕೋರಿಯಾ ಪ್ರವಾಸದ ಅವಧಿಯಲ್ಲಿ ಆಡಿದ ಮಾತುಗಳನ್ನು ನಾವು ಗಮನಿಸಬಹುದು. ಮೋದಿಯವರ ಮಾತುಗಳು ಮಂತ್ರವಾಗುವುದಿಲ್ಲ ಮತ್ತು ಮಂತ್ರದಿಂದ ಮಾವಿನಕಾಯಿಯೂ ಸಹ ಉದುರುವುದಿಲ್ಲ ಎಂಬುದು ಎಲ್ಲರಿಗೂ ಮನದಟ್ಟಾಗಿದೆ.. ವಿದೇಶದಿಂದ ಕಪ್ಪು ಹಣ ವಾಪಸ್ ತರುವ ಕುರಿತು ಮೋದಿಯವರು ಆಡಿದ ವಿರಾವೇಶದ ಮಾತುಗಳು ಈಗ ಅವರ ಕೊರಳ ಕಂಠದಲ್ಲಿ ಹೂತು ಹೋಗಿವೆ. ಒಂದು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದಕ್ಕೂ, ಬಹು ಸಂಸ್ಕತಿಯ ಭಾರತದ ಆಡಳಿತದ ಚುಕ್ಕಾಣಿ ಹಿಡಿಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಅವರಿಗೆ ಅರ್ಥವಾಗಿದೆ. ಕಾರಣಕ್ಕಾಗಿ ಅವರು ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬದಲಾಗಿ ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ.

ಮೋದಿಯವರು ಕನಸಿದ ಮೇಕಿಂಗ್ ಇಂಡಿಯಾ ಪರಿಕಲ್ಪನೆಯಾಗಲಿ, ಪರಿಪೂರ್ಣ ನಗರ ( ಸ್ಮಾರ್ಟ್ ಸಿಟಿ) ಮತ್ತು ಗಂಗಾ ನದಿಯ ಶುದ್ಧೀಕರಣ ಯೋಜನೆಗಳು ಇವೆಲ್ಲವೂ ಆದರ್ಶದ ಮಾತುಗಳಂತೆ ನಮಗೆ ಕೇಳುತ್ತವೆಯೆ ಹೊರತು ಸಾಕಾರಗೊಳ್ಳಲು ಅನೇಕ ಅಡೆತಡೆಗಳಿವೆ ಎಂಬ ವಾಸ್ತವ ಅಂಶ ಅವರಿಗೆ ತಿಳಿದಿಲ್ಲ. ಮೋದಿಯವರ ಬಳಿ ಜಾಹಿರಾತು ಮತ್ತು ಪ್ರಚಾರದ ಸಲಹೆಗಾರರಿದ್ದಾರೆ ಆದರೆ, ವಿವಿಧ ರಂಗಗಳ ತಜ್ಞರಿಲ್ಲ ಎಂಬುದನ್ನು ಅವರ ಮಾತುಗಳು ಪುಷ್ಟೀಕರಿಸುತ್ತವೆ. ಅವರದೇ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್ ಶೌರಿಯವರು ನರೇಂದ್ರ ಮೋದಿಯವರ ಆಡಳಿತವನ್ನು ಕಟುಮಾತುಗಳಲ್ಲಿ ಟೀಕಿಸುತ್ತಾ, “ ಮೋದಿ ನೇತೃತ್ವದ ಎನ್.ಡಿ.. ಪಕ್ಷದ ಸಾಧನೆಗಳು ಘೋಷಣೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿವೆ; ವಾಸ್ತವವಾಗಿ ಅನುಷ್ಟಾನಗೊಂಡಿಲ್ಲಎಂದರು. ಶೌರಿಯವರ ಟೀಕೆಗೆ ಉತ್ತರ ನೀಡಲಾರದಷ್ಟು ಕಟು ವಾಸ್ತವ ಸಂಗತಿಗಳು ನಿಧಾನವಾಗಿ ಮೋದಿ ಮತ್ತು ಅವರ ತಂಡಕ್ಕೆ ಮನವರಿಕೆಯಾಗತೊಡಗಿವೆ. ಇದಕ್ಕೆ ಪೂರಕವಾಗಿ ರಿಸರ್ವ್ ಬ್ಯಾಂಕಿನ ಗೌರ್ನರ್ ರಘುರಾಂ ರಾಜನ್ರವರು ಇದೇ ಮೇ 19 ರಂದು ನ್ಯೂಯಾರ್ಕ್ ನಗರದಲ್ಲಿ ಮಾತನಾಡುತ್ತಾ, “ಭಾರತದಲ್ಲಿನ ಮೋದಿ ನೇತೃತ್ವದ ಸರ್ಕಾರ ಹಮ್ಮಿಕೊಂಡಿರುವ ಅನೇಕ ಯೋಜನೆಗಳು ವಾಸ್ತವಕ್ಕೆ ದೂರವಾಗಿವೆಎಂಬ ಎಚ್ಚರಿಕೆಯ ಮಾತುಗಳು ಸಹ ಮೋದಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಮೋದಿಯವರನ್ನು ನಾವು ಗೋದ್ರಾ ಘಟನೆಯ ಹಿನ್ನಲೆಯಲ್ಲಿ ನೋಡುವುದನ್ನು ಮತ್ತು ಗ್ರಹಿಸುವುದನ್ನು ಬಿಟ್ಟು ಮುಕ್ತ ಮನಸ್ಸಿನಿಂದ ಅವರ ವ್ಯಕ್ತಿತ್ವವನ್ನು ಅವಲೋಕಿಸುವಾಗ; ಅವರೊಳಗೊಬ್ಬ ಪ್ರಾಮಾಣಿಕ ಹಾಗೂ ಅಭಿವೃದ್ಧಿಗಾಗಿ ತುಡಿಯುವ ಜನನಾಯಕ ಗೋಚರಿಸುತ್ತಾನೆ. ಅವರ ವಿಚಾರಧಾರೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಗಾಂಧಿ ಮತ್ತು ಅವರ ಚಿಂತನೆಗಳ ಕುರಿತಂತೆ ಇತರೆ ಬಲಪಂಥೀಯ ನಾಯಕರಿಗಿಂತ ನರೇಂದ್ರ ಮೋದಿ ಸಾಕಷ್ಟು ಮುಕ್ತವಾಗಿದ್ದಾರೆ. ಒಬ್ಬ ನಾಯಕ ಜಾತ್ಯಾತೀತವಾಗಿ ಮತ್ತು ಧರ್ಮಾತೀತವಾಗಿ ಯೋಚಿಸಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು ಎಂಬುದನ್ನು ಮನನ ಮಾಡಿಕೊಂಡಿದ್ದಾರೆ.


ತಮ್ಮ ಕ್ರಿಯಾಶೀಲ ಚಟುವಟಿಕೆಯ ಮೂಲಕ ಜಿಡ್ಡುಗಟ್ಟಿ ನಿದ್ರಾವಸ್ಥೆಯಲ್ಲಿದ್ದ ಆಡಳಿತಶಾಹಿಗೆ ಚುರುಕು ಮುಟ್ಟಿಸಿದ್ದಾರೆ. ಅದೇರೀತಿ ಮಾಧ್ಯಮಗಳ ಮುಂದೆ ಬೇಕಾಬಿಟ್ಟಿ ಮಾತನಾಡದಂತೆ ತಮ್ಮ ಪಕ್ಷದ ನಾಯಕರಿಗೆ ಮತ್ತು ಸಂಸದರಿಗೆ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಕಡಿವಾಣ ಹಾಕಿದ್ದಾರೆಅವರು ಅನುಷ್ಠಾನಕ್ಕೆ ತರುತ್ತಿರುವ ಯೋಜನೆಗಳ ಕುರಿತಂತೆ ಏನೇ ವಿವಾದಗಳಿರಲಿ, ಅವುಗಳನ್ನು ಮುಚ್ಚು ಮರೆಯಿಲ್ಲದೆ ಚರ್ಚೆಯ ಮೂಲಕ ಜನತೆಯ ಹಾಗೂ ಸಂಸತ್ತಿನ ಮುಂದಿಡುವ ಮೂಲಕ ಪಾರದರ್ಶಕತೆಯನ್ನು ಕಾಪಾಡಿಕೊಂಡಿದ್ದಾರೆ. ಒಂದು ವರ್ಷದ ಅವರ ಆಡಳಿತದಲ್ಲಿ ಸರ್ಕಾರಕ್ಕೆ ಮುಜಗರವನ್ನುಂಟುಮಾಡುವ ಯಾವುದೇ ಹಗರಣಗಳಾಗಲಿ, ಭ್ರಷ್ಟಾಚಾರ ಪ್ರಕರಣಗಳಾಗಲಿ ನಡೆದಿಲ್ಲ. ಇದು ಸಮಾಧಾನಕರ ಸಂಗತಿ. ಜನಸಾಮಾನ್ಯರಿಗಾಗಿ ಮೋದಿ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಜೀವನ್ ಭೀಮಾ ವಿಮಾ ಯೋಜನೆ, ಸುರಕ್ಷ ಜೀವನ್ ಭೀಮಾ ಯೋಜನೆ ಎಂಬ ಅಪಘಾತ ವಿಮೆ ಇವುಗಳು ಬಡವರ ಪರವಾದ ಕಾಳಜಿಗಳಾಗಿವೆ ನಿಜ. ಆದರೆ ಬಡವರ ಪಾಲಿನ ಅನ್ನದ ಬಟ್ಟಲಿನಂತಿರುವ ಕೃಷಿ ಜಮೀನುಗಳನ್ನು ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಚಟುವಟಿಕೆಗಳಿಗೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿಯ ಯೋಜನೆಗಳಿಗೆ ಬಳಸಿಕೊಳ್ಳಲು ಜಾರಿಗೆ ತರುತ್ತಿರುವ ಭೂ ಮಸೂದೆಯನ್ನು ಮೋದಿ ಸರ್ಕಾರ  ಮತ್ತೊಮ್ಮೆ ಮರು ವಿಮರ್ಶೆಗೆ ಒಳಪಡಿಸುವ ಅಗತ್ಯವಿದೆ.
ಮೋದಿಯವರ ಸರ್ಕಾರಕ್ಕೆ ಒಂದು ವರ್ಷದ ಅವಧಿ ತುಂಬುತ್ತಿದ್ದಂತೆ ಕೆಲವು ಆತಂಕದ ಘಟನೆಗಳು ಸಹ ಸಂಭವಿಸುತ್ತಿವೆ. ಸಂಘಪರಿವಾರಲ್ಲಿದ್ದ ಕೆಲವು ಹೈಡನ್ ಅಜೆಂಡಾಗಳು ಇದೀಗ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ವಿಶೇಷವಾಗಿ ಶಿಕ್ಷಣ, ಇತಿಹಾಸಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ನಿಧಾನವಾಗಿ ತಲೆ ಎತ್ತುತ್ತಿವೆ. ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ ಸದಸ್ಯರಾಗಿದ್ದ; ದೇಶದ ಖ್ಯಾತ ಇತಿಹಾಸ ತಜ್ಞರಾಗಿರುವ ರೋಮಿಲಾ ಥಾಪರ್ ಮತ್ತು ಇರ್ಫಾನ್ ಹಬೀಬ್ ಅವರನ್ನು ಸಂಸ್ಥೆಯಿಂದ ಹೊರಗಿಡುವ ದೃಷ್ಟಿಯಿಂದ ಇಡೀ ತಜ್ಞರ ಮಂಡಳಿಯನ್ನು ವಿಸರ್ಜಿಸಲಾಗಿದೆ. ಅದೇ ರೀತಿ ರಾಷ್ಟ್ರೀಯ ಪಠ್ಯ ಪುಸ್ತಕ ಮಂಡಳಿಯ ಮೂಲಕ ಪಠ್ಯ ಪುಸ್ತಕಗಳಲ್ಲಿ ಬಲಪಂಥೀಯ ಅತಾರ್ಕಿಕ ಚಿಂತನೆಗಳನ್ನು ಭಾರತೀಯ ಸಂಸ್ಕøತಿಯ ಹೆಸರಿನಲ್ಲಿ ತುಂಬುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಇದು ಮೋದಿಯವರ ಪಾಲಿಗೆ ಮುಳುವಾಗಬಹುದು.

ಮೋದಿಯವರು ಅಧಿಕಾರಕ್ಕೆ ಬರುತ್ತಿದ್ದಂತೆ ನಿಸ್ತೇಜನಗೊಂಡಿದ್ದ  ಭಾರತದ ಷೇರುಮಾರುಕಟ್ಟೆಯಲ್ಲಿ ಚೈತನ್ಯ ಕಂಡು ಬರುತ್ತಿದೆ. ಆದರೆ, ಮೋದಿಯವರ ನಡೆಯಲ್ಲಿ ವಿಶೇಷವಾಗಿ ಅಭಿವೃದ್ದಿ ಕುರಿತ ವಿಷಯದಲ್ಲಿ ಸಮತೋಲನದ ಕಾಳಜಿ ಕಂಡು ಬರುವುದಿಲ್ಲ. ಖಾಸಾಗೀಕರಣಕ್ಕೆ ವಿಶೇಷ ಪ್ರಾಶಸ್ತ್ಯ ಮತ್ತು  ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿನ ಸಡಿಲಿಕೆ ಇವುಗಳು ಮಾನವೀಯ ಮುಖವಿಲ್ಲದ, ಲಾಭಕೋರತನವನ್ನು ಗುರಿಯಾಗಿಟ್ಟುಕೊಂಡ ಜಾಗತೀಕರಣದ ಪರಿಕಲ್ಪನೆಗಳಾಗಿವೆ.

ದೇಶದಲ್ಲಿ ಕೈಗೊಳ್ಳುವ  ಯಾವುದೇ ಯೋಜನೆಗಳಿರಬಹುದು. ಅವುಗಳಿಗೆ ಹಲವು ಆಯಾಮಗಳಿರುತ್ತವೆ. ಆದರೆ, ಅಬಿವೃದ್ಧಿಯ ನೆಪದಲ್ಲಿ ಯೋಜನೆಗಳಿಂದಾಗುವ ಸಾಂಸ್ಕøತಿಕ ಪಲ್ಲಟಗಳು, ಪರಿಸರ ಅಸಮತೋಲನ ಹಾಗೂ ಸ್ಥಳಿಯ ನಿವಾಸಿಗಳ ಒಕ್ಕಲೆಬ್ಬಿಸುವಿಕೆ ಇವುಗಳನ್ನು ಗಣನೆಗೆ ತೆಗೆದುಕೊಳ್ಳುವುದರ ಜೊತೆಗೆ ಯೋಜನೆಯ ಗುರಿ ಮತ್ತು ಫಲಗಳನ್ನು ನಿರ್ಧಿಷ್ಟವಾಗಿ ಗುರುತಿಸಬೇಕಾಗುತ್ತದೆ. ಆದರೆ, ಮೋದಿಯ ಸರ್ಕಾರದಲ್ಲಿ ಇಂತಹ ಗುಣಾತ್ಮಕ ಅಂಶಗಳು ಕಾಣ ಬರುತ್ತಿಲ್ಲ ಎಂಬುದಕ್ಕೆ ಅವರು ಹಮ್ಮಿಕೊಂಡಿರುವ ಗಂಗಾ ನದಿಯ ಶುದ್ಧೀಕರಣ ಯೋಜನೆ ಮತ್ತು ಸ್ಮಾರ್ಟ್ ಸಿಟಿ ಗಳೆಂಬ ಪರಿಪೂರ್ಣ ನಗರಗಳ ಯೋಜನೆಗಳು ಸಾಕ್ಷಿಯಾಗಿವೆ.


ಭಾರತದ ಜೀವ ನದಿಯೆಂದು ಹೆಸರಾದ ಗಂಗಾ ನದಿಯು ಮಲೀನಗೊಂಡು ಎಷ್ಟೋ ದಶಕಗಳು ಕಳೆದಿವೆ. ಮೋದಿಯವರು ವಾರಣಾಸಿ ಕ್ರೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಕಾರಣ, ವಾರಣಾಸಿಯಲ್ಲಿ ಕಸ ಮತ್ತು ಕೊಳೆತ ಶವಗಳ ಕೂಪವಾಗಿರುವ ಅಲ್ಲಿನ ಘಾಟ್ ಗಳ ನವೀಕರಣದ ಜೊತೆಗೆ ಗಂಗಾ ನದಿಯ ಹೂಳೆತ್ತುವಿಕೆ ಹಾಗೂ ಶುದ್ಧೀಕರಣದ ಮಹತ್ವಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಐದು ವರ್ಷದ ಯೋಜನೆಗೆ ಸುಮಾರು ಇಪ್ಪತ್ತು ಸಾವಿರ ಕೋಟಿ ಖರ್ಚಾಗಬಹುದೆಂದು ಅಂದಾಜಿಸಿದ್ದಾರೆಜೊತೆಗೆ ಕನಸಿನ ಯೋಜನೆಗೆ ನೆರವಾಗಬೇಕೆಂದು ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಮೋದಿಯವರು ವಾರಣಾಸಿಯ ಸುತ್ತ ಮುತ್ತ ಅಥವಾ ಅಲಹಾಬಾದ್ ನಗರದಿಂದ ವಾರಣಾಸಿಯವರೆಗೆ ಹರಿಯುವ ಗಂಗಾ ನದಿಯನ್ನು ಶುದ್ಧೀಕರಿಸಬಹುದು. ಆದರೆ, ಗಂಗಾ ನದಿಗೆ ಕೂಡಿಕೊಳ್ಳುವ ಅದರ ಉಪನದಿಗಳ ಕಲ್ಮಶವನ್ನು ಹೇಗೆ ತಡೆಗಟ್ಟಬೇಕೆಂದೂ ಸಹ ಅವರು ಯೋಚಿಸಬೇಕಿದೆ. ದೆಹಲಿಯಿಂದ ಸಾವಿರಾರು ಟನ್ ಕೊಳಚೆಯನ್ನು ಗಂಗಾ ನದಿಗೆ ಸೇರಿಸುತ್ತಿರುವ ಯಮುನಾ ನದಿ ಮತ್ತು ಕಾನ್ಪರ ನಗರದ ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಹರಿಯುವ ವಿಷಯುಕ್ತ ಕೊಳಚೆ ನೀರು ಇವುಗಳ ತಡೆಗೆ ಯಾವುದೇ ನೀಲ ನಕಾಶೆಗಳು ಗಂಗಾ ನದಿ ಶುದ್ಧೀಕರಣ ಯೋಜನೆಯಲ್ಲಿ ಕಂಡು ಬರುತ್ತಿಲ್ಲ. ಹಿಂದೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಅಧಿಕಾರಾವಧಿಯಲ್ಲಿ ಗಂಗಾ ಕ್ರಿಯಾ ಯೋಜನೆ (ಗಂಗಾ ಆಕ್ಷನ್ ಪ್ಲಾನ್ಎಂಬ ಹೆಸರಿನಲ್ಲಿ ಗಂಗಾ ನದಿಯ ಶುದ್ಧೀಕರಣಕ್ಕೆ ಬರೊಬ್ಬರಿ ಇಪ್ಪತ್ತಾರು ಸಾವಿರ ಕೋಟಿ ರೂಪಾಯಿಗಳನ್ನು ಸುರಿದು ವಿಫಲವಾಗಿರುವ ಇತಿಹಾಸವನ್ನು ಮೋದಿಯವರು ಗಮನಿಸಬೇಕು. ಇಲ್ಲದಿದ್ದರೆಗಂಗಾ ನದಿ ಶುದ್ಧೀಕರಣ ಯೋಜನೆಯು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಪಾಲಿಗೆ ಒಂದು ಲಾಬದಾಯಕ ದಂಧೆಯಾಗುವ ಅಪಾಯವಿದೆ.

ಇನ್ನು ದೇಶಾದ್ಯಂತ ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಹೊರಟಿರುವ ಮೋದಿ ಸರ್ಕಾರ, ನಿರ್ಮಾಣಕ್ಕೆ ಮುನ್ನ ನಗರಗಳಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ಕಸ ವಿಲೆವಾರಿಗೆ ಏನು ಯೊಜನೆ ಹಾಕಿಕೊಳ್ಳಲಾಗಿದೆ ಎಂದು ಭಾರತದ ಜನತೆಗೆ ವಿವರಿಸಬೇಕಾಗಿದೆ. ಜನತೆಯ ಕೊಳ್ಳುಬಾಕುತನದ ಸಂಸ್ಕøತಿಯಿಂದಾಗಿ ದೇಶದ ಮಹಾನ್ ನಗರಗಳು ಕಸ ವಿಲೆವಾರಿಗೆ ದಿಕ್ಕು ಕಾಣದೆ ಕಸದ ತೊಟ್ಟಿಗಳಾಗಿರುವುದಕ್ಕೆ ನಾವು ಈಗಾಗಲೇ ಸಾಕ್ಷಿಯಾಗಿದ್ದಿವಿ.

ದೇಶದ ಅಭಿವೃದ್ಧಿಯ ಪರ ಕನಸು ಕಾಣುವ ಮತ್ತು ಆಕರ್ಷಕವಾಗಿ ಮಾತನಾಡಬಲ್ಲ ನರೇಂದ್ರ ಮೋದಿಯವರು ಅವುಗಳ ವಾಸ್ತವಿಕ ನೆಲೆಗಟ್ಟುಗಳನ್ನು ಸೂಕ್ಷ್ಮವಾಗಿ ಅರಿತು ಮಾತನಾಡುವುದು ಒಳಿತು. ನೆರೆಯ ರಾಷ್ಟ್ರಗಳಿಗೆ ಸ್ನೇಹದ ಹಸ್ತ ಚಾಚುವುದರ ಮೂಲಕ ಹಾಗೂ ಪಾಶ್ಚಿಮಾತ್ಯ ಜಗತ್ತಿಗೆ ಪರ್ಯಾಯವಾಗಿ ಶಕ್ತಿಯುತವಾದ ಪೂರ್ವಜಗತ್ತನ್ನು ಕಟ್ಟುವ ಮೋದಿಯವರ ಆಕಾಂಕ್ಷೆ ನಿಜಕ್ಕೂ ಮೆಚ್ಚುವಂತಹದ್ದು. ಇಂತಹ ಕನಸುಗಳ ಜೊತೆ ಬಲಿಷ್ಟ ಭಾರತವನ್ನು ನಿರ್ಮಾಣ ಮಾಡುವ ಗುರಿಗಳು ಅವರ ಸರ್ಕಾರಕ್ಕೆ ಬರಲಿ ಎಂಬುದು ದೇಶದ ಎಲ್ಲಾ ಪ್ರಜ್ಞಾವಂತ ನಾಗರೀಕರ ಹಂಬಲ. ಈಗಾಗಲೇ ಭಾರತದಾದ್ಯಂತ ಬಿ.ಜೆ.ಪಿ. ದ್ವಿಗ್ವಿಜಯದ ಆಸೆ ಹೊತ್ತು ಹೊರಟಿದ್ದ ಮೋದಿ ಮತ್ತು ಅವರ ಭಂಟ ಅಮಿತ್ ಷಾ ಅವರ ಕನಸಿನ ಕುದುರೆಗೆ ದೆಹಲಿಯ ಜನತೆ ಕಡಿವಾಣ ಹಾಕಿರುವುದನ್ನು ನಾವಿಲ್ಲಿ ಸ್ಮರಿಸಬಹುದು.