Thursday, 30 August 2018

ಅಭಿವ್ಯಕಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯ ಕಪ್ಪು ಇತಿಹಾಸದಿನಾಂಕ 28-8-18 ರ ಬುಧವಾರ ಮಹಾರಾಷ್ಟ್ರ, ದೆಹಲಿ  ಸೇರಿದಂತೆ ದೇಶದ ಹಲವೆಡೆ  ಮಾನವ ಹಕ್ಕು ಹಾಗೂ ಸಾಮಾಜಿಕ ಹೋರಾಟಗಾರ ನಿವಾಸದ ಮೇಲೆ ನಡೆದ ಪೊಲೀಸರ ದಾಳಿ ಹಾಗೂ ಕಾರ್ಯಕರ್ತರ ಬಂಧನ ಭಾರತದ ಪ್ರಜ್ಞಾವಂತ ನಾಗರೀಕರನ್ನು ಬೆಚ್ಚಿ ಬೀಳಿಸಿದೆ.  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. ನಮ್ಮನನ್ನಾಳುವ ಸರ್ಕಾರಗಳು ಪಕ್ಷಬೇಧ ವಿಲ್ಲದೆ, ಇಂತಹ ದುಷ್ಕೃತ್ಯಗಳಿಗೆ ಕೈ ಹಾಕುತ್ತಲೇ ಬಂದಿವೆ.
ಇಂದಿರಾಗಾಂಧೀಯವರು1975 ರಲ್ಲಿ ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರೀಕ ಹಕ್ಕುಗಳನ್ನು ಮೊಟಕುಗೊಳಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಾಯಿಗೆ ಬೀಗ ಜಡಿದು, ಬರೆಯುವ ಕೈಗಳಿಗೆ ಕೋಳ ತೊಡಗಿಸಲಾಗಿತ್ತು. 2011 ಮತ್ತು 12 ರ ಡಾ.ಮನಮೋಹನ್ ಸಿಂಗ್ ನೇತೃತ್ವದ ಅವಧಿಯಲ್ಲಿಯೂ ಸಹ ಛತ್ತೀಸ್ ಗಡದ  ಡಾ.ಬಿಯಾಂಕ್ ಸೇನ್ ಮತ್ತು ಮಹಾರಾಷ್ಟ್ರದ ಮೂಲದ ಅರುಣ್ ಫೆರಿರಾ ಮುಂತಾದ ಸಾಮಾಜಿಕ ಹೋರಾಟಗಾರರನ್ನು ಸೆರೆಮನೆಗೆ ತಳ್ಳಿ ಇನ್ನಿಲ್ಲದಂತಹ ಚಿತ್ರ ಹಿಂಸೆ ನೀಡಲಾಗಿತ್ತು. ಇದೀಗ ಜಾಗತಿಕ ಮಟ್ಟದಲ್ಲಿ ಯುಗ ಪುರುಷ ಎಂದು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರ ಅವಧಿಯಲ್ಲಿ  ಪೊಲೀಸರು   ಅದೇ ಹೀನ ಕೃತ್ಯಕ್ಕೆ ಕೈ ಹಾಕಿ ಸುಪ್ರೀಂ ಕೋರ್ಟಿನಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರೆ.
2012 ರಲ್ಲಿ ಡಾ.ಬಿಯಾಂಕ್ ಸೇನ್ ಅವರನ್ನು ಬಿಡುಗಡೆ ಮಾಡುವ ಸಮಯದಲ್ಲಿ ಅವರ ಮೇಲೆ ಹೊರಿಸಲಾಗಿದ್ದ ಆರೋಪ ಪಟ್ಟಿಯಲ್ಲಿ, ಬಿಯಾಂಕ್ ಅವರ ನಿವಾಸದಲ್ಲಿ  ನಕ್ಸಲ್ ಸಾಹಿತ್ಯ ಹಾಗೂ ಕರಪತ್ರಗಳಿದ್ದವು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್ “ ಗಾಂಧೀಜಿ ಕೃತಿ ಓದುವನನ್ನು ಗಾಂಧಿವಾದಿ ಎಂದು ಏಕೆ ಹಣೆಪಟ್ಟಿ ಕಟ್ಟುತ್ತೀರಿ? ಮಾಕ್ಕ್ಸ್ ಓದುವವನು ಮಾರ್ಕ್ಸ್ ವಾದಿಯಲ್ಲ, ಗಾಂಧಿ ಓದುವವನು ಗಾಂಧಿವಾದಿಯಲ್ಲ” ಎಂದು ಪೊಲೀಸರಿಗೆ ಚಾಟಿ ಏಟು ಬೀಸಿತ್ತು. ಇದೀಗ  ಅದೇ ಸರ್ವೋಚ್ಚ ನ್ಯಾಯಾಲಯ “ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳು ಇರಬಾದೆ? ಇಂತಹ ಭಿನ್ನತೆ ಪ್ರಜಾಪ್ರಭುತ್ವಕ್ಕೆ ಸುರಕ್ಷಾ ಕವಚ ಇದ್ದಂತೆ” ಎಂಬ ಮಹತ್ವದ  ಅಭಿಪ್ರಾಯವನ್ನು ನೀಡುವುದರ ಮೂಲಕ  ಆಳುವ ಸರ್ಕಾರಗಳಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ. ಬಂಧಿತರಾಗಿದ್ದ ಐವರು ಕಾರ್ಯಕರ್ತರನ್ನು ಅವರ ನಿವಾಸದಲ್ಲಿ ಮುಂದಿನ ವಿಚಾರಣೆಯ ತನಕ ( 6-9-18 ರವರೆಗೆ) ಗೃಹಬಂಧನದಲ್ಲಿ ಇರಿಸಬೇಕೆಂದು ಆದೇಶ ನೀಡಿದೆ.
ಆದಿವಾಸಿ ಹಕ್ಕುಗಳಿಗಾಗಿ, ದಮನಿತರ ಪರವಾಗಿ ಹಾಗೂ ಪರಿಸರ ರಕ್ಷಣೆಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು  ವ್ಯವಸ್ಥಿತ ಹುನ್ನಾರ ಹಗೂ   ಕ್ಷುಲ್ಲಕ ಆರೋಪಗಳಿಂದ  ಸದೆಬಡಿಯಲು ಹೊರಟ ಜಗತ್ತಿನ ಎಲ್ಲಾ ಸರ್ಕಾರಗಳು ಮತ್ತು ಸರ್ವಾಧಿಕಾರಿಗಳು ಅಂತಿಮವಾಗಿ ಮಣ್ಣು ಮುಕ್ಕಿದ್ದಾರೆ.  ಇಂತಹ ಸಾರ್ವಕಾಲಿಕ ಸತ್ಯವನ್ನು ನಮ್ಮನ್ನಾಳುವ ದೊರೆಗಳಿಗೆ ಮತ್ತು ಅವರ ಗುಲಾಮರಂತೆ ವರ್ತಿಸುತ್ತಿರುವ ಪೊಲೀಸರಿಗೆ ಮುಟ್ಟಿಸುವ  ಕೆಲಸವನ್ನು  ಈ ದೇಶದ ಪ್ರಜ್ಞಾವಂತ ನಾಗರೀಕರು ಮಾಡಬೇಕಿದೆ. ಇಂತಹ ಕಾರ್ಯವನ್ನು ಡಾ.ಬಿಯಾಂಕ್ ಸೇನ್ ಮತ್ತು ಅರುಣ್ ಫೆರಿರಾ ತಮ್ಮ ಹೋರಾಟಗಳ ಮೂಲಕ ವರ್ತಮಾನದ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅರುಣ್ ಫೆರಿರಾ ಅವರು ತಮ್ಮ ಬಂಧನದ ಅವಧಿಯಲ್ಲಿ ಅನುಭವಿಸಿದ ಚಿತ್ರಹಿಂಸೆಯನ್ನು ಅತ್ಯಂತ ನಿರ್ಭಾವುಕ ಶೈಲಿಯಲ್ಲಿ ದಾಖಲಿಸಿರುವ “ ಕಲರ್ಸ್ ಆಫ್ ದ ಕೇಜ್ “ ( ಪಂಜರದ ಬಣ್ಣಗಳು) ಕೃತಿ ಓದುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕಣ್ಣಲ್ಲಿ ನೀರು ತರಿಸುತ್ತದೆ.

ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಅರುಣ್ ಫೆರಿರಾ  ಅಲ್ಲಿನ ಪ್ರತಿಷ್ಠಿತ ಸೆಂಟ್ ಕ್ಷೇವಿಯರ್ ಕಾಲೇಜಿನಲ್ಲಿ ಪದವಿ ಪಡೆದು, ವ್ಯಂಗ್ಯ ಚಿತ್ರಗಾರರಾಗಿ ವೃತ್ತಿಯನ್ನು ಆರಂಭಿಸಿದ್ದರು.  ಮಹಾರಾಷ್ಟ್ರದ ಎಲ್ಲಾ ಪ್ರಗತಿ ಪರ ಸಂಘಟನೆಗಳ ಜೊತೆ ಗುರುತಿಸಿಕೊಂಡವರು. ಜೊತೆಗೆ ಸಂಘಟನೆಗಳ ಸಮಾವೇಶಕ್ಕೆ ಭಿತ್ತಿ ಪತ್ರ, ಕರ ಪತ್ರ, ಬ್ಯಾನರ್ ಇತ್ಯಾದಿಗಳಿಗೆ ಚಿತ್ರ ಬರೆಯುತ್ತಾ, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 2007 ರಲ್ಲಿ ಸಮಾವೇಶವೊಂದನ್ನು ಮುಗಿಸಿಕೊಂಡು ಮುಂಬೈ ನಗರಕ್ಕೆ ಹಿಂತಿರುಗಲು ನಾಗಪುರ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಅರುಣ್ ಅವರನ್ನು ಸಂಗಡಿಗರೊಂದಿಗೆ ಬಂಧಿಸಿದ ಮಹಾರಾಷ್ಟ್ರ ಪೊಲೀಸರು ಅರುಣ್ ಫೆರಿರಾಗೆ ನಕ್ಸಲ್ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಪಟ್ಟ ಕಟ್ಟಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ನಾಗಪುರದ ಜೈಲಿಗೆ ತಳ್ಳಿದರು.  ಜೈಲಿನಲ್ಲಿ ಇದ್ದುಕೊಂಡು, ಕಾನೂನು ಪದವಿಗಾಗಿ ಶಿಕ್ಷಣ ಪಡೆಯುತ್ತಾ, ಬೇಸಿಗೆಯ ದಿನಗಳಲ್ಲಿ 47 ಡಿಗ್ರಿ ಉಷ್ಣಾಂಶ  ಇರುವ ನಾಗಪುರದಲ್ಲಿ ಕೇವಲ ಒಂದು ಸಣ್ಣ ಕಿಟಿಕಿ ಇದ್ದಅಂಡಾ ಶೆಲ್ ಎಂದು ಕರೆಯಲಾಗುವ ಮೊಟ್ಟೆ ಆಕಾರದ ಕೊಠಡಿಯೊಳಗೆ ಬದುಕಿದ್ದ ಮಾತ್ರವಲ್ಲದೆ, , ಅಲ್ಲಿನ ಕ್ರಿಮಿನಲ್ ಅಪರಾಧಿಗಳ ವರ್ತನೆ, ಪೊಲೀಸ್ ಅಧಿಕಾರಿಗಳ ಲಂಚಾವತಾರ , ಕ್ರೌರ್ಯ ಎಲ್ಲವನ್ನೂ ಈ ಕೃತಿಯಲ್ಲಿ  ತಾವೇ ಸೃಷ್ಟಿಸಿದ ಚಿತ್ರಗಳ ಸಮೇತ ಬಣ್ಣಿಸಿದ್ದಾರೆ. 2011 ರ ಸೆಪ್ಟಂಬರ್ ತಿಂಗಳಿನಲ್ಲಿ ಎಲ್ಲಾ ಆರೋಪಗಳಿಂದ ಖುಲಾಸೆಗೊಂಡು , ಕಾನೂನು ಪದವಿಯ ಜೊತೆ ಜೈಲಿನ ಮುಖ್ಯ ದ್ವಾರದಿಂದ ಹೊರಬಂದು,  ತನಗಾಗಿ ಕಾಯುತ್ತಿದ್ದ ತನ್ನ ತಂದೆ, ತಾಯಿ, ಪತ್ನಿ ಮತ್ತು ಮಗು ಇವರನ್ನು ಭೇಟಿ ಮಾಡುವಷ್ಟರಲ್ಲಿ ಸಾದಾ ಉಡುಗೆಯಲ್ಲಿದ್ದ ಪೊಲೀಸರು ಮತ್ತೇ ಅವರನ್ನು ಬಂಧಿಸಿ, ಹೊಸ ಆರೋಪಗಳನ್ನು ಹೊರಿಸುವುದರ ಮೂಲಕ ಮತ್ತೇ ಅವರನ್ನು ಸೆರೆಮನೆಗೆ ನೂಕಿದರು. ಪೊಲೀಸರ ಎಲ್ಲಾ ಆರೋಪಗಳಿಂದ ಮುಕ್ತವಾಗಲು ಪುನಃ ಒಂದು ವರ್ಷದ ಅವಧಿ ಹಿಡಿಯಿತು. ಯಾವುದೇ ಹುರುಳಿಲ್ಲದ ಆರೋಪಗಳಿಗೆ ಬಲಿಯಾದ ಅರುಣ್ ಫೆರಿರಾ  ಅವರ ಯವ್ವನದ ಐದು ವರ್ಷಗಳು ಸೆರೆಮನೆಯ ಕತ್ತಲ ಕೂಪದಲ್ಲಿ ಕಳೆದು ಹೋದವು. ಇತ್ತ ಮುಂಬೈ ನಗರದಲ್ಲಿ ಅವರ ಕುಟುಂಬದ ಸದಸ್ಯರು ಸಮಾಜದ ಕ್ರೂರ ಕಣ್ಣಿಗೆ ತುತ್ತಾಗಿ ಅಪಮಾನದ ಬೇಗುದಿಯಲ್ಲಿ ಬೆಂದು ಹೋದರು. ಇದು  ಪ್ರಜ್ಞಾವಂತ ನಾಗರೀಕರನ್ನು  ನಮ್ಮನ್ನು ಆಳಿದ ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತಾವೆ ಎಂಬುದಕ್ಕೆ ಒಮದು ಉದಾಹರಣೆ. ಮೊನ್ನೆ ಬಂಧಿತರಾದ ಐವರು ಸಾಮಾಜಿಕ ಕಾರ್ತರಲ್ಲಿ ಅರುಣ್ ಫೆರಿರಾ ಕೂಡ ಒಬ್ಬರಾಗಿದ್ದಾರೆ. ಛತ್ತೀಸ್ ಗಡದಲ್ಲಿ ಮಾನವ ಹಕ್ಕುಗಳ ಪರವಾಗಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಯಥಾ ಪ್ರಕಾರ ಅವರ ಮೇಲೆ ದೇಶ ದ್ರೋಹದ ಆರೋಪ ಹೊರಿಸಲಾಗಿದೆ.

ಅರುಣ್ ಫೆರಿರಾ ಅವರಿಗಿಂತ ಭಿನ್ನವಾದ ಕಥೆ ಡಾ.ಬಿಯಾಂಕ್ ಸೇನ್ ಅವರದು. ಪಶ್ಚಿಮ ಬಂಗಾಳ ಮೂಲದ ಸೇನ್ ಅವರು ದೆಹಲಿಯಲ್ಲಿ ಎಂ.ಬಿ. ಬಿ.ಎಸ್. ಪದವಿ ಹಾಗೂ ಸ್ನಾತಕೋತ್ತರ ಪಡವಿ ಪಡೆದು ಮಕ್ಕಳ ತಜ್ಞರಾಗಿ ಹೊರಬಂದ ಅವರು, ಲಕ್ಷಾಂತರ ರೂಪಾಯಿಗಳ ಸಂಬಳ ತೊರೆದು ಮೂರು ದಶಕಗಳ ಹಿಂದೆ ತಮ್ಮ ಪತ್ನಿ ಪ್ರೊ.ಇಲ್ಲಿಯಾ ಸೇನ್ ಜೊತೆ ಛತ್ತೀಸ್ ಗಡದ ರಾಯ್ ಪುರ ನಗರಕ್ಕೆ ಬಂದು ನೆಲೆಸಿದರು. ಆ ಕಾಲದಲ್ಲಿ  ಮಧ್ಯ ಪ್ರದೇಶದ ಭಾಗವಾಗಿದ್ದ ರಾಯ್ ಪುರ್ ಪ್ರದೇಶದ ಸುತ್ತ ಮುತ್ತಲಿನ  ಅರಣ್ಯದ ಆದಿವಾಸಿ ಹಳ್ಳಿಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದನ್ನು ನೋಡಿದ ಡಾ.ಬಿಯಾಂಕ ಸೇನ್, ಹಳ್ಳಿಗಳಲ್ಲಿ ಸಂಚರಿಸುತ್ತಾ ಮಕ್ಕಳ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದರು. ಅವರ ಪತ್ನಿ ಇಲ್ಲಿಯಾ ಸೇನ್ ರವರು ದೆಹಲಿಯ ಜವಹರ್ ಲಾಲ್ ನೆಹರೂ ವಿ.ವಿ. ಹಾಗೂ ಕೊಲ್ಕತ್ತ ನಗರದಲ್ಲಿ ಶಿಕ್ಷಣ ಪಡೆದು ವಾರ್ಧಾ ದಲ್ಲಿರುವ ಮಹಾತ್ಮ ಗಾಂಧಿ ಅಂತರಾಷ್ಟ್ರೀಯ ಹಿಂದಿ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾ, ಪತಿಯ ಜೊತೆ ಛತ್ತಿಸ್ ಗಡ ಅರಣ್ಯದ ಮಹಿಳಾ ಆದಿವಾಸಿಗಳ ಶ್ರೇಯೋಭಿವೃದ್ಧಿಗಾಗಿ ದುಡಿದರು.
2007 ರಲ್ಲಿ ಅರುಣ್ ಫೆರಿರಾ ಬಂಧನವಾದ ಒಂದು ವಾರದ ನಂತರ ಡಾ.ಬಿಯಾಂಕ ಸೇನರನ್ನು ರಾಯಪುರ ನಗರದಲ್ಲಿ ಛತ್ತೀಸ್ ಗಡ ಪೊಲೀಸರು ಬಂಧಿಸಿದರು.  ಸೆರೆಮನೆಯಲ್ಲಿರುವ ನಕ್ಸಲ್ ನಾಯಕರು ಮತ್ತು ಅರಣ್ಯದೊಳಗೆ ಇರುವ ನಕ್ಸಲರು ಇವರ ನಡುವೆ ಸಂವಹನ ದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದಡಿ ಬಿಯಾಂಕ್ ಸೇನರನ್ನು ಬಂಧಿಸಿದ ಪೋಲಿಸರು ಅವರಿಗೆ ಛತ್ತೀಸ್ ಗಡ ಹೈ ಕೋರ್ಟಿನಲ್ಲಿ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದರು. ಈ ಸುದ್ಧಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ವಿಶ್ವ ಪ್ರಸಿದ್ಧ ಭಾಷಾ ತಜ್ಞ ನೋಮ್ ಚಾಮ್ ಸ್ಕಿ ಅವರಿಂದ ಹಿಡಿದು, ಅಮಾರ್ತ್ಯ ಸೇನ್, ವಿಶ್ವ ಮಾನವ ಹಕ್ಕುಗಳ ಸಂಘಟನೆ ಹೀಗೆ ಹಲವು ಗಣ್ಯರಿಂದ  ಜಾಗತಿಕ ಮಟ್ಟದಲ್ಲಿತೀವ್ರವಾದ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ನಾಲ್ಕು ವರ್ಷಗಳ ನಂತರ 2011 ರಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದಾಗಿ  ಡಾ,ಬಿಯಾಂಕ್ ಸೇನ್ ಹೊರಬರಲು ಸಾಧ್ಯವಾಯಿತು.

ಅವರ ಪತ್ನಿ ಇಲ್ಲಿಯಾ ಸೇನ್ ಅವರು ತಮ್ಮ ಪತಿಯ ಬಂಧನ ಹೋರಾಟ ಹಾಗೂ ತಾವಿಬ್ಬರೂ ಛತ್ತೀಸ್ ಗಡದಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿದ ನಿಸ್ವಾರ್ಥ ಸೇವೆಯ ಅನುಭವಗಳನ್ನು ತಮ್ಮ “ ಇನ್ ಸೈಡ್ ದ ಛತ್ತೀಸ್ ಗಡ್” ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.  ಇಡೀ ಕೃತಿಯಲ್ಲಿ ಆರಂಭದ ಅಧ್ಯಾಯಗಳಲ್ಲಿ ತಮ್ಮ ಪತಿಯ ಬಿಡುಗಡೆಗಾಗಿ ನಡೆಸಿದ ಹೋರಾಟವನ್ನು ದಾಖಲಿಸಿರುವ ಅವರು, ನಂತರ ಅಧ್ಯಾಯಗಳಲ್ಲಿ ಆದಿವಾಸಿ ಮಹಿಳಾ ಸಮುದಾಯದಲ್ಲಿ ತಾವು ತಂದ ಬದಲಾವಣೆ ಹಾಗೂ ಸುಧಾರಣೆಗಳನ್ನು ದಾಖಲಿಸಿದ್ದಾರೆ. ಈ ಎರಡು ಕೃತಿಗಳು ಆಳುವ ಸರ್ಕಾರಗಳ ಮೊತ್ತೊಂದು ಮುಖವನ್ನು ಸಮರ್ಥವಾಗಿ ಅನಾವರಣಗೊಳಿಸುವುದರ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಹೇಗೆ ದಮನಗೊಳಿಸಲಾಗುತ್ತಿದೆ ಎಂಬುದನ್ನು ತಿಳಿಸಿಕೊಡುತ್ತವೆ.
ನೊಂದವರು, ಬಡವರು, ಆದಿವಾಸಿಗಳು, ಕೂಲಿಕಾರ್ಮಿಕರ ಪರವಾಗಿ ದುಡಿಯವವರಿಗೆ “ನಗರದ ನಕ್ಸಲರು” ಎಂಬ ಹೊಸ ಹಣೆ ಪಟ್ಟಿ ಕಟ್ಟುವವರು ಒಮ್ಮೆ ತಮ್ಮ ಒಳಗಣ್ಣನ್ನು ತೆರೆದು ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.
(ಚಿತ್ರಗಳು ಸೌಜನ್ಯ ಟೈಮ್ಸ್ ಆಫ್ ಇಂಡಿಯ ಮತ್ತು ಇಂಡಿಯಾ ಟುಡೆ)

Saturday, 25 August 2018

ಮಾರ್ಕ್ಸ್ ರವರ ರಾಜಕೀಯ ಅರ್ಥಶಾಸ್ತ್ರ
ಕಾರ್ಲ್ ಮಾರ್ಕ್ಸ್ ರವರ ಇನ್ನೂರನೆಯ ಜನ್ಮ ಶತಾಬ್ದಿ ಹಾಗೂ  ಅವರು ರಚಿಸಿದ " ದಾಸ್ ಕ್ಯಾಪಿಟಲ್" ಕೃತಿಗೆ ನೂರ ಐವತ್ತು ವರ್ಷ ತುಂಬಿದ ಅಂಗವಾಗಿ ನಾಡಿನ ಪ್ರಸಿದ್ಧ  ನವಕರ್ನಾಟಕ ಪ್ರಕಾಶನ ಸಂಸ್ಥೆಯು "ದಾಸ್ ಕ್ಯಾಪಿಟಲ್" ಸೇರಿದಂತೆ,  ಮಾಕ್ರ್ಸ್ ರವರ ಇನ್ನಿತರೆ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸುವ ಮಹತ್ವದ ಯೋಜನೆಯನ್ನು ಆರಂಭಿಸಿದೆ. ಈಗಾಗಲೆ ಈ ಯೋಜನೆಯ ಅಂಗವಾಗಿ ಮೂರು ಕೃತಿಗಳು ಬಿಡುಗಡೆಯಾಗುವುದರ ಮೂಲಕ ಮಾರ್ಕ್ಸ್ ರವರ ಪ್ರಖರ ಪ್ರತಿಭೆಯ ಜೊತೆಗೆ ಅವರ ಅರ್ಥಶಾಸ್ತ್ರದ ಚಿಂತನೆಗಳು ಕನ್ನಡಿಗರಿಗೆ ಪರಿಚಯವಾಗುತ್ತಿವೆ.
ಕಾರ್ಲ್ ಮಾರ್ಕ್ಸ್ ಕೇವಲ ಪ್ರಸಿದ್ಧ ರಾಜಕೀಯ ಮತ್ತು ತತ್ವಶಾಸ್ತ್ರದ ತಜ್ಞ ಎಂದು ಭಾವಿಸಿರುವ ಬಹುತೇಕ ಮಂದಿಗೆ ಅವರೊಳಗೊಬ್ಬ ಅರ್ಥಶಾಸ್ತ್ರದ ಅದ್ಭುತ ವಿಶ್ಲೇಷಕ ಹಾಗೂ ತಜ್ಞ ಕೂಡ ಜೀವಂತವಾಗಿದ್ದ ಎಂಬುದಕ್ಕೆ ಅವರ " ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ" "ಭಾರತವನ್ನು ಕುರಿತ ಮಾರ್ಕ್ಸ್" ಹಾಗೂ ತತ್ವಶಾಸ್ತ್ರದ ಬಡತನ ಅಥವಾ ದಾರಿದ್ರ್ಯ" ಎಂಬ ಮೂರು ಕೃತಿಗಳು ಸಾಕ್ಷಿಯಾಗಿವೆ. ಮನುಷ್ಯನ ಜಗತ್ತಿನ ಆರ್ಥಿಕ ಚಟುವಟಿಕೆಗಳನ್ನು ವಿಶ್ಲೇಷಿಸುವ ಅರ್ಥಶಾಸ್ತ್ರವು ಮನುಕು¯ದ ನಾಗರೀಕತೆಯ ಕಾಲದಿಂದಲೂ ರಾಜಕೀಯಶಾಸ್ತ್ರದ ಜೊತೆ ಜೊತೆಯಲ್ಲಿ ಒಂದು ಜ್ಞಾನ ಶಿಸ್ತುವಾಗಿ ಬೆಳೆದು ಬಂದಿದೆ. ಬೆಬಿಲೋನಿಯಾ, ಮೆಸಪಟೋಮಿಯಾ, ಗ್ರೀಸ್ ನಾಗರೀಕತೆಗಳ ಜೊತೆಗೆ ಪರ್ಷಿಯಾ, ಚೀನಾ ಮತ್ತು ಭಾರತದಲ್ಲಿ  ಅರ್ಥಶಾಸ್ತವ್ರು  ಹಲವು ರೂಪಗಳಲ್ಲಿ ವಿಸ್ತರಿಸುತ್ತಾ ಬೆಳೆದು ಬಂದಿರುವುದು ಈಗ ಇತಿಹಾಸ.  ಅರಿಸ್ಟಾಟಲ್, ಚೀನಾದ ಚೀನ್ ಶಿ ಹ್ಯಾಂಗ್, ಮತ್ತು ಇಬೆನ್ ಕಾಲ್ಡನ್, ಭಾರತದ  ಕೌಟಿಲ್ಯ ಇವರುಗಳು ಅರ್ಥಶಾಸ್ತ್ರಕ್ಕೆ ಭದ್ರವಾದ ಅಡಿಪಾಯ ಹಾಕಿದವರಲ್ಲಿ ಪ್ರಮುಖರು.  ಆದರೆ, 1776 ರಲ್ಲಿ ಇಂಗ್ಲೇಂಡಿನ ಆಡಂ ಸ್ಮಿತ್ ಎಂಬುವನು ತನ್ನ " ವೆಲ್ತ್ ಆಫ್ ನೇಷನ್" ಕೃತಿಯಲ್ಲಿ ಪ್ರಕೃತಿ ನಿಯಮದ ದೃಷ್ಟಿಕೋನದಲ್ಲಿ ಅರ್ಥಶಾಸ್ತ್ರವನ್ನು ವಿಶ್ಲೇಷಿಸುವುದರ ಮೂಲಕ  ಭೂಮಿ, ಬಂಡವಾಳ ಮತ್ತು ಕಾರ್ಮಿಕರು ಇವರನ್ನು ಒಂದು ರಾಷ್ಟ್ರದ ಸಂಪತ್ತು ಎಂದು ಕರೆದನು. ಒಂದು ರಾಷ್ಟ್ರದ ಸಂಪತ್ತಿನ ಹಂಚಿಕೆ ಮತ್ತು ವಿನಿಯೋU,ಸರಕುಗಳ ವಿನಿಮಯ, ನಾಣ್ಯ ಪದ್ಧತಿ ಮತ್ತು ಚಲಾವಣೆÀ  ಕುರಿತು ವ್ಯವಸ್ಥಿತ ರೀತಿಯಲ್ಲಿ ಆರ್ಥಿಕ ಚಿಂತನೆಗೆ ಹೊಸ ರೂಪ ಕೊಟ್ಟು ಇವುಗಳನ್ನು ವಾಣಿಜ್ಯ, ವ್ಯಾಪಾರಗಳ ಸಿದ್ಧಾಂತ ಎಂದು ವ್ಯಾಖ್ಯಾನಿಸಿದನು, ಹಾಗಾಗಿ  ಆತನನ್ನು ಅರ್ಥಶಾಸ್ತ್ರದ ಪಿತಾಮಹಾ ಎಂದು ಗುರುತಿಸಲಾಗಿದೆ. ನಂತರದ ದಿನಗಳಲ್ಲಿ ಥಾಮಸ್ ಮಾಲ್ತಸ್, ಡೆವಿಡ್ ರಿಕಾರ್ಡೊ ಮುಂತಾದವರು ಅರ್ಥಶಾಸ್ತ್ರದ ಚಿಂತನೆಗಳನ್ನು ಮತ್ತಷ್ಟು ವಿಸ್ತರಿಸಿದರು. ಮಾಲ್ತಸ್ ನ ಜನಸಂಖ್ಯಾ ಸಿದ್ಧಾಂತ, ಡೆವಿಡ್ ರಿಕಾರ್ಡೊವಿನ ಗೇಣಿ ಸಿದ್ಧಾಂತಗಳು ಭೂಮಿ, ಬಂಡವಾಳ, ಕಾರ್ಮಿಕರು, ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆ, ಕೆಳವರ್ಗದ ಜನರ ಜೀವನ ಮಟ್ಟದ ಸುಧಾರಣೆ ಇಂತಹ ಅಂಶಗಳು ಇವರುಗಳ ಸಿದ್ಧಾಂತದಲ್ಲಿ ಒಳಗೊಂಡಿದ್ದವು.

ನಂತರದ ದಿನಗಳಲ್ಲಿ  ಕಾರ್ಲ್ ಮಾರ್ಕ್ಸ್ ರವರ "ಮೂಲಕ  ನಿಯೊ ಕ್ಲಾಸಿಕಲ್ ಸಿದ್ಧಾಂತ" ಎಂಬ ಹೊಸ ಚಿಂತನೆಯೊಂದು ಬೆಳೆದು ಬಂದಿತು. ಕಾರ್ಮಿಕರ ಶ್ರಮ ಕುರಿತ ಚಿಂತನೆಯನ್ನು ಇದು ಒಳಗೊಂಡಿತ್ತು. ಕೈಗಾರಿಕಾ ಕ್ರಾಂತಿಯ ಪರಿಣಾಮವನ್ನು ಬಲ್ಲವರಾಗಿದ್ದ ಮಾರ್ಕ್ಸ್ ರವರು ತಮ್ಮ ಚಿಂತನೆಗನ್ನು ಪ್ರಕೃತಿ ವಿಜ್ಞಾನದಲ್ಲಿ ಬಳಸಲಾಗುವ ಗಣಿತ ಶಾಸ್ತ್ರದ ವಿಧಾನಗಳನ್ನು ಬಳಸಿ ಸಿದ್ಧಾಂತವನ್ನು ಮಂಡಿಸಿದ್ದರು. ನವಶಾಸ್ತ್ರೀಯ ಅರ್ಥಶಾಸ್ತ್ರ ಎಂದು ಕರೆಯಲಾದ ಈ ಸಿದ್ಧಾಂತದಲ್ಲಿ ಬೇಡಿಕೆ, ಪೂರೈಕೆಯ ಜೊತೆಗೆ ಮಾರುಕಟ್ಟೆಯ ಪ್ರಭಾವ ಕುರಿತು ಅವರು ವಿಶ್ಲೇಷಣೆ ಮಾಡಿದ್ದರು. 1930 ರಲ್ಲಿ ಇಡೀ ವಿಶ್ವವು ಆರ್ಥಿಕ ಹಿಂಜರಿತಕ್ಕೆ ಒಳಗಾದ ನಂತರ ಅರ್ಥಶಾಸ್ತ್ರದಲ್ಲಿ ಹೊಸಮಾದರಿಯ ಚಿಂತನೆಗಳು ಆರಂಭಗೊಂಡವು. ಜಾನ್ ಮೇನಾರ್ಡ್ ಕೇನ್ಸ್ ಅವರ ಸಿದ್ಧಾಂತದ ಜೊತೆಗೆ ಹಲವು ಚಿಂತನೆಯ ಶಾಖೆಗಳು ಹುಟ್ಟಿಕೊಂಡವು. ಸ್ಕೂಲ್ ಆಫ್ ಥಾಟ್ಸ್ ಎಂದು ಕರೆಯಲಾಗುವ ವಿವಿಧ ಜ್ಞಾನಶಾಖೆಗಳಲ್ಲಿ ಮಾರುಕಟ್ಟೆಯ ಪ್ರಭಾವ, ಪ್ರಭುತ್ವದ ಪಾತ್ರ, ಹಣಕಾಸು ನಿರ್ವಹಣೆಯಲ್ಲಿ ಸರ್ಕಾರಗಳು ಕೈಗೊಳ್ಳಬೇಕಾದ ಜವಬ್ದಾರಿಯ ಅಂಶಗಳು ಒಳಗೊಂಡಿದ್ದವು. 1990 ರವರೆಗೆ ಬೆಳೆದು ಬಂದ ಈ ರೀತಿಯ ಚಿಂತನೆಗಳು 1990 ರ  ವೇಳೆಗೆ ಹಿನ್ನಲೆಗೆ ಸರಿದವು. ಜಾಗತೀಕರಣವೆಂಬ ಹೊಸ ಪರಿಕಲ್ಪನೆ  ಮತ್ತು ಮಾರುಕಟ್ಟೆಯ ವ್ಯವಸ್ಥೆ ಹುಟ್ಟಿಕೊಂಡ ಪರಿಣಾಮವಾಗಿ ತಮ್ಮ ಮಹತ್ವವನ್ನು ಕಳೆದುಕೊಂಡವು. ಜೊತೆಗೆ ಅರ್ಥಶಾಸ್ತ್ರದ ವಾಖ್ಯಾನವೂ ಕೂಡ ಬದಲಾಯಿತು. ಅಭಿವೃದ್ಧಿ ಅರ್ಥಶಾಸ್ತ್ರ, ಗ್ರಾಹಕರ ನಡುವಳಿಕೆಯ ಅರ್ಥಶಾಸ್ತ್ರ ( ಬಿಹೇವಿಯರ್ ಎಕನಾಮಿಕ್ಸ್) ಕೃಷಿ ಅರ್ಥಶಾಸ್ತ್ರ, ಮಾರುಕಟ್ಟೆಯ ಅರ್ಥಶಾಸ್ತ್ರ ಹೀಗೆ ಹಲವು ಶಾಖೆಗಳು ಜನ್ಮ ತಾಳಿದವು. ಇವುಗಳಲ್ಲಿ ಅಭಿವೃದ್ಧಿ ಶಾಸ್ತ್ರದಲ್ಲಿ ಬಡತನ, ಹಸಿವು, ನಿರುದ್ಯೋಗ, ಆರೋಗ್ಯ, ಶಿಕ್ಷಣ ಇವುಗಳಿಗೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ಸ್ವೀಡನ್ನಿನ ಗುನ್ನಾರ್ ಮಿರ್ಡಲ್, ಅಮೇರಿಕಾದ ಜೋಸೆಫ್ ಸ್ಲಿಗ್ಲಿಟ್ಜ್ ಭಾರತದ ಅಮಾತ್ರ್ಯಸೇನ್, ಬಂಗ್ಲಾ ದೇಶದ ಮಹಮ್ಮದ್ ಯೂನಸ್ ಮುಂತಾದ ಮಾನವೀಯ ಮುಖವಳ್ಳ ಅರ್ಥಶಾಸ್ತ್ರಜ್ಞರಾಗಿ ಹೊರಹೊಮ್ಮಿದರು.  ಈ ಎಲ್ಲಾ ಮಹಾನುಭಾವರ ಚಿಂತನೆ ಹಾಗೂ ಕೃತಿಗಳಲ್ಲಿ ಜೀವಪರವಾದ  ನಿಲುವುಗಳು ಮಾರ್ಕ್ಸ್ ರವರ ಚಿಂತನೆಗಳಿಂದ ಪ್ರಭಾವಿತವಾಗಿವೆ. ಗುನ್ನಾರ್ ಮಿರ್ಡಲ್ ರವರ " ದ ಏಷಿಯನ್ ಡ್ರಾಮ" ಜೋಸೆಫ್ ಸ್ಲಿಗ್ಲಿಟ್ಜ್ ರವರ " ದ ಗ್ಲೋಬಲೇಜಷನ್ ಅಂಡ್ ಇಟ್ಸ್  ಡಿಸ್‍ಕಂಟೆಂಟ್ಸ್" ಅಮಾತ್ರ್ಯ ಸೇನ್ ರವರ " ಐಡಿಯಾ ವಿತ್ ಜಸ್ಟೀಸ್" ಮಹಮ್ಮದ್ ಯೂನಸ್ ರವರ " ಬ್ಯಾಂಕರ್ ಆಫ್ ಪೂರ್" ಈ ಎಲ್ಲಾ ಕೃತಿಗಳು ಮಾರ್ಕ್ಸ್  ಪ್ರತಿಪಾದಿಸಿದ ಮನುಷ್ಯಪರವಾದ ನಿಲುವುಗಳನ್ನು ಪುಷ್ಟೀಕರಿಸುತ್ತವೆ. ಈ ಕಾರಣಕ್ಕಾಗಿ ಇವರೆಲ್ಲರೂ ಅರ್ಥಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಂದಿನ ಜಗತ್ತು ಮಾರ್ಕ್ಸ್ ರವರ " ನವಶಾಸ್ತ್ರೀಯ ಅರ್ಥಶಾಸ್ತ್ರವನ್ನು" ಪಕ್ಕಕ್ಕೆ ಸರಿಸಿ ಮುಂದೆ ಚಲಿಸಲು ಸಾಧ್ಯವಾಗದ ರೀತಿಯಲ್ಲಿ ಅವರು ಒಬ್ಬ ಪ್ರಭಾವಿ ಅರ್ಥಶಾಸ್ತ್ರಜ್ಞರಾಗಿರುವುದು ವಿಶೇಷವಾಗಿದೆ. ವಿಸ್ಮಯದ ಸಂಗತಿಯೆಂದರೆ, ಮಾರ್ಕ್ಸ್ರರವರು ಜರ್ಮನಿಯನ್ನು ತ್ಯೆಜಿಸಿದ ನಂತರ ಜೀವನ ನಿರ್ವಹಣೆಗಾಗಿ ಲಂಡನ್ ನಗರದಲ್ಲಿ ಅವರು ಪತ್ರಿಕೆಗಾಗಿ ಬರೆದ ಲೇಖನಗಳು ಅರ್ಥಶಾಸ್ತ್ರದ ಚಿಂತನೆಗಳಾಗಿ ರೂಪ ಪಡೆದಿವೆ. ಅವರ ಭಾರತವನ್ನು ಕುರಿತ  ಬರೆದ ಕೃತಿಯಲ್ಲಿ " ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರ, ಇಲ್ಲಿನ ತೆರಿಗೆ ಪದ್ಧತಿ ಕುರಿತಂತೆ  ಚಿಂತನೆಗಳಿದ್ದರೆ, ತತ್ವಶಾಸ್ತ್ರದ ಬಡತನ ಕುರಿತ ಕೃತಿಯು ಪ್ರೊಧಾನ್ ಎಂಬುವರ ಬಡತನ ತತ್ವಶಾಸ್ತ್ರ ಎಂಬ ಕೃತಿಗೆ ಪತ್ರದ ರೂಪದಲ್ಲಿ ಬರೆದ ಚಿಂತನೆಗಳಾಗಿವೆ. ಹಣದ ವಿನಿಮಯ ಮೌಲ್ಯ, ಹಣ, ದುಡಿಮೆಯಿಂದ ಉಳಿತಾಯವಾಗುವ ಹಣ, ಶ್ರಮ ಮತ್ತು ವಿಭಜನೆ, ಯಂತ್ರಗಳು ಹಾಗೂ ಆಸ್ತಿ ಮತ್ತು ಗೇಣಿ, ಪೈಪೋಟಿ ಮತ್ತು ಏಕಸ್ವಾಮ್ಯತೆ ಹೀಗೆ ಹಲವಾರು ವಿಷಯಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಎರಡು ಕೃತಿಗಳ ಮುಂದುವರಿದ ಚಿಂತನೆಗಳು ಎನ್ನುವ ಹಾಗೆ ಅವರು ತಮ್ಮ " ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ" ಕೃತಿಯಲ್ಲಿ ಬಂಡವಾಳ, ಸರಕು, ಹಣದ ಚಲಾವಣೆ, ವಿನಿಮಯದ ಮೌಲ್ಯ, ನಾಣ್ಯಗಳು ಹಾಗೂ ಅವುಗಳ ಮೌಲ್ಯದ ಸಂಕೇತ ಇವುಗಳು ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ.

ಉತ್ಪಾದನೆ, ಬಳಕೆ, ವಿತರಣೆ ಕುರಿತು ದಾಖಲಿಸಿರುವ ಮಾಕ್ರ್ಸ್ ರವರು, ಬಂಡವಾಳವು ಕೆಲವೇ ಮಂದಿಯ ಕೈಯಲ್ಲಿ ಶೇಖರಗೊಳ್ಳುವುದರ ಮೂಲಕ ಒಂದೆಡೆ ಕೇಂದ್ರೀಕೃತಗೊಂಡು ಉತ್ಪಾದನೆಯ ಸಾಮಾಥ್ರ್ಯದ ಪರಿಣಾಮ ಬೀರುತ್ತದೆ. ಇಂತಹ ಬಂಡವಾಳವು ರೈತರು ಮತ್ತು ಕಾರ್ಮಿಕರಿಂದ ಬಂಡವಾಳಶಾಹಿ ಜಗತ್ತು ಕಸಿದುಕೊಂಡ ಸಂಪತ್ತು ಎಂದು ವಿಶ್ಲೇಷಿಸುತ್ತಾರೆ.  ಮಾನವ ಶ್ರಮವನ್ನು ಸಾರ್ವಜನಿಕ ಶ್ರಮ ಎಂದು ಕರೆದ ಮಾರ್ಕ್ಸ್. ಅದಕ್ಕೆ ಬಂಡವಾಳದಷ್ಟೇ ಮಾನ್ಯತೆಯನ್ನು ತಂದುಕೊಟ್ಟು ಮಹಾನ್ ಮಾನತಾವಾದಿ ಎಂದು ಬಣ್ಣಿಸಬಹುದು.ಈ ಮೂರು ಕೃತಿಗಳು ಉತ್ತಮವಾದ ಭಾಷೆಯಲ್ಲಿ ಕನ್ನಡಕ್ಕೆ ಅನುವಾದಗೊಂಡಿದ್ದರೂ ಸಹ ಇಲ್ಲಿನ ವಿಷಯಗಳು ಮಾಕ್ಸ್ ್ ರವರ ಚಿಂತನೆಗಳ ಆಸಕ್ತರಿಗೆ ಮತ್ತು ಅರ್ಥಶಾಸ್ತ್ರದ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಹೆಚ್ಚಿನ ಉಪಯೋಗವಾಗುವದರಲ್ಲಿ ಸಂಶಯವಿಲ್ಲ. ಆದರೆ, ಸಾಮಾನ್ಯ ಓದುಗರಿಗೆ ಇಂತಹ ವಿಷಯಗಳನ್ನು ಓದಿ ಜೀರ್ಣಿಸಿಕೊಳ್ಳುವುದು ಕೊಂಚ ಮಟ್ಟಿಗೆ ತ್ರಾಸದಾಯಕ. ಆದರೆ, ಕನ್ನಡದ ಸಾಹಿತ್ಯ ಮತ್ತು ಸಾಂಸ್ಕøತಿಕ ಜಗತ್ತಿಗೆ ಕನ್ನಡದ ಭಾಷೆಯಲ್ಲಿ ಮಾರ್ಕ್ಸ್ ರವರ ಚಿಂತನೆಗಳು ಕೃತಿಯ ರೂಪದಲ್ಲಿ ಪ್ರಕಟವಾಗುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಹಾಗೂ ಸ್ತುತಾರ್ಹ ಕಾರ್ಯವಾಗಿದೆ.
( ಹೊಸತು ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

Monday, 13 August 2018

ಅನಾಥ ಪ್ರಜ್ಞೆಯ ಮಹಾತ್ಮನಿಗೆ ಆಸರೆಯಾಗಿದ್ದ ಲೋಹಿಯಾ
ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ರಾಜಕೀಯ ಇತಿಹಾಸದಲ್ಲಿ ಮಹಾತ್ಮಗಾಂಧೀಜಿ ಮತ್ತು ಡಾ. ರಾಮಮನೋಹರ ಲೋಹಿಯಾರವರದ್ದು ಗುರು-ಶಿಷ್ಯರ ಸಂಬಂಧವಾದರೂ ಸಹ ಅದು ತಂದೆ ಮಗನ ಹಾಗೂ  ಸಮಾನ ಮನಸ್ಕ ಇಬ್ಬರ ಗೆಳೆಯರ ಸಂಬಂಧದ ಹಾಗೆ ಅನ್ಯೋನ್ಯತೆಯಿಂದ ಕೂಡಿತ್ತು. ಸೈದ್ಧಾಂತಿಕ ಭಿನ್ನಭಿಪ್ರಾಯಗಳಿದ್ದರೂ ಸಹ ಅಭಿಪ್ರಾಯಗಳಿಗೆ ಮನ್ನಣೆ ನೀಡುವ, ಅದನ್ನು ಸ್ವೀಕರಿಸಿ, ವಿಶ್ಲೇಷಿಸಿ  ಯಾವುದೇ ಮುಚ್ಚು ಮರೆಯಲ್ಲದೆ ಅದರ ಒಳಿತು ಕೆಡುಕುಗಳನ್ನು ಹೇಳಿಕೊಳ್ಳುವ ಮುಕ್ತ ಮನಸ್ಸು ಗಾಂಧಿ ಮತ್ತು ಲೋಹಿಯಾ ಇಬ್ಬರಿಗೂ ಇದ್ದ ಕಾರಣ ಅವರ ನಡುವೆ ಭಾವನಾತ್ಮಕ ಸಂಬಂಧವೊಂದು ಬೆಳೆದು ಬಂದಿತ್ತು. ಲೋಹಿಯಾ ಅವರು ಗಾಂಧಿಯವರ ಇತರೆ ಶಿಷ್ಯರ ಹಾಗೆ ಹಲವಾರು ದಶಕಗಳ ಕಾಲ ಅವರ ಜೊತೆ ಸುಧೀರ್ಘವಾಗಿ ಒಡನಾಡಿದವರಲ್ಲ. ಗಾಂಧಿಯವರ ಜೊತೆ ಅವರ ಒಡನಾಟ ಕೇವಲ ಹದಿಮೂರು ವರ್ಷದ ಅವಧಿಯದಾಗಿತ್ತು. ಆದರೆ, ತಮ್ಮ ಪ್ರಖರ ಚಿಂತನೆಗಳ ಮೂಲಕ ಮಹಾತ್ಮನ ಮೇಲೆ ಪ್ರಭಾವ ಬೀರಿದ ಲೋಹಿಯಾರವರು ಗಾಂಧಿ ಯುಗದ ನಂತರ ಭಾರತ ಕಂಡ ಶ್ರೇಷ್ಠ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕøತಿಕ ಚಿಂತಕರಲ್ಲಿ ಒಬ್ಬರಾಗಿ ದೇಶದುದ್ದಕ್ಕೂ ಹಲವು ತಲೆಮಾರುಗಳನ್ನು ಪ್ರೇರೇಪಿಸಿದವರಲ್ಲಿ ಪ್ರಮುಖರಾಗಿದ್ದಾರೆ. ತಮ್ಮ ಸಮಾಜವಾದಿ ಚಿಂತನೆಗಳಲ್ಲಿ ಅಥವಾ ಜಾತಿ ವಿನಾಶದಂತಹ ಪ್ರಜ್ಞೆಯಲ್ಲಿ ಗಾಂಧೀಜಿ ಚಿಂತನೆಗಳ ಬೇರುಗಳನ್ನು ಉಳಿಸಿಕೊಂಡು ಅವುಗಳಿಗೆ ತಮ್ಮ ವೈಚಾರಿಕತೆಯನ್ನು ಕಸಿ ಮಾಡಿ ಭಾರತದ ಬೌದ್ಧಿಕ ದಾರಿದ್ರ್ಯವನ್ನು ಹೋಗಲಾಡಿಸುವಲ್ಲಿ ಸತತವಾಗಿ ಶ್ರಮಿಸಿದವರಲ್ಲಿ ಲೋಹಿಯಾ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ.
ಮಹಾತ್ಮ ಗಾಂಧೀಜಿಯವರ ಅಂತಿಮ  ದಿನಗಳಲ್ಲಿ ವಿಶೇಷವಾಗಿ ಭಾರತ ವಿಭಜನೆಗೊಂಡು ಕೋಮುದಳ್ಮ್ಳರಿಯಲ್ಲಿ ಹತ್ತಿ ಉರಿಯುತ್ತಿದ್ದಾಗ ಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದ ಗಾಂಧಿಯವರಿಗೆ ಆಸರೆಯಾಗಿ ನಿಂತುಕೊಂಡು ಮಾನಸಿಕ ಸ್ಥೈರ್ಯ ತುಂಬಿದ ಲೋಹಿಯಾರವರು ಮಹಾತ್ಮನ ಪಾಲಿಗೆ  ಅಕ್ಷರಶಃ ಊರುಗೋಲಾಗಿದ್ದರು. ಏಕೆಂದರೆ, 1942 ರಲ್ಲಿ ಒಮ್ಮೆಲೆ ತನ್ನ ಆತ್ಮೀಯ ಶಿಷ್ಯರಾಗಿದ್ದ ಮಹಾದೇವ ದೇಸಾಯಿ ಹಾಗೂ ಜಮ್ನಾಲಾಲ್ ಬಜಾಜ್ ಅವರನ್ನು ಕಳೆದುಕೊಂಡು ಏಕಾಂಗಿಯಂತೆ ಇದ್ದ ಗಾಂಧೀಜಿಯವರು 1944 ರಲ್ಲಿ ತಮ್ಮ ಜೀವನ ಸಂಗಾತಿ ಕಸ್ತೂರ ಬಾ ಅವರನ್ನು ಕಳೆದುಕೊಂq ಮೇಲೆ ಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದರು. ಭಾರತ-ಪಾಕ್ ವಿಭಜನೆಯ ಸಂದರ್ಭದಲ್ಲಿ ಅವರು ಮಾತುಗಳನ್ನು ವೃದ್ಧನೊಬ್ಬನ  ವ್ಯಸನ ಎಂಬಂತೆ ನೆಹರೂ ಮತ್ತು ಸರ್ದಾರ್ ವಲ್ಲಬಾಯ್ ಪಟೇಲ್ ತಿರಸ್ಕರಿಸಿದ ನಂತರ ಅವರು ಚೇತರಿಸಿಕೊಳ್ಳಲಾರದ ರೀತಿಯಲ್ಲಿ ಘಾಸಿಗೊಂಡರು. ಇಂತಹ ಸಂದರ್ಭದಲ್ಲಿ ಅವರು ಲೋಹಿಯಾ ಅವರ ಸಾನಿಧ್ಯದಲ್ಲಿ ನೆಮ್ಮದಿಯನ್ನು ಹುಡುಕಿದ್ದು ಮಹಾತ್ಮನೊಬ್ಬನ  ನೋವಿನ ಅಧ್ಯಾಯ ಎಂದು ಬಣ್ಣಿಸಬಹುದು.

 ಗಾಂಧೀಜಿಯವರಿಗೆ ಲೋಹಿಯಾ ಮೇಲೆ ವಿಶೇಷ ಮಮತೆ ಬರಲು ಮುಖ್ಯ ಕಾರಣ ಅವರಲ್ಲಿದ್ದ ಚಿಕಿತ್ಸಾ ಮನೋಭಾವ. ಲೋಹಿಯಾ ಅವರು  ಇತರೆ ಶಿಷ್ಯರ ಹಾಗೆ ಅವರನ್ನು ಆರಾಧನೆಯ ನೆಲೆಯಲ್ಲಿ ನೋಡದೆ, ಗಾಂಧಿಯವರ  ಪ್ರತಿಯೊಂದು ನಡೆ ಮತ್ತು ನುಡಿಯನ್ನು  ಒರೆಗಲ್ಲಿಗೆ ಹಚ್ಚುವುದರ ಮೂಲಕ ಅವರನ್ನು ಮಹಾತ್ಮನ ಸ್ಥಾನದಲ್ಲಿ ನಿಲ್ಲಿಸುವುದರಲ್ಲಿ ಲೋಹಿಯಾ ಪಾತ್ರವೂ ಸಹ ಮುಖ್ಯವಾದದ್ದು. ಕಾಂಗ್ರೇಸ್ ನಿಂದ ಹೊರಬಂದು ತಮ್ಮ ದೇ ಆದ ಪ್ರಜಾ ಸೋಷಲಿಷ್ಟ್ ಪಕ್ಷವನ್ನು ಕಟ್ಟಿಕೊಂಡು, ನೆಹರೂ ಅವರ ಚಿಂತನೆ ಮತ್ತು  ಮಾದರಿಗಳ ಕಡು ವಿರೋಧಿಯಾಗಿದ್ದ ಲೋಹಿಯಾರವರು ತಮ್ಮ ಜೀವಿತಾವಧಿಯ ಉದ್ದಕ್ಕೂ ನಾನೊಬ್ಬ ಗಾಂಧಿವಾದಿ ಎಂದು ಹೇಳಿಕೊಳ್ಳುತ್ತಾ ಮಹಾತ್ಮನ ಚಿಂತನೆಗಳಿಗೆ  ಉಸಿರು ತುಂಬಿ ಅವುಗಳಿಗೆ ಜೀವ ಮಾತ್ರವಲ್ಲದೆ  ಗೌರವವನ್ನು ಸಹ ತಂದಿತ್ತರು. ಗಾಂಧೀಜಿಯವರು 1948 ರಲ್ಲಿ ಹತ್ಯೆಯಾದ ಹನ್ನೇರಡು ವರ್ಷಗಳ  ನಂತರ 1960 ರಲ್ಲಿ ಡಾ. ರಾಮ ಮನೋಹರ ಲೋಹಿಯಾ ಅವರು ಗಾಂಧೀಜಿಯವರ ಜೊತೆಗಿನ ಒಡನಾಟವನ್ನು ತಮ್ಮ ಒಂದು ಸುಧೀರ್ಘವಾದ ಲೇಖನವೊಂದರಲ್ಲಿ ಭಾವನಾತ್ಮಕವಾಗಿ ಸ್ಮರಿಸಿಕೊಂಡಿದ್ದಾರೆ. ( ಮಾಜಿ ಮುಖ್ಯಮಂತ್ರಿ ಜೆ.ಹೆಚ್,ಪಟೇಲ್ ಮತ್ತು ಮಾಜಿ ಸಚಿವರಾದ  ಎಂ.ಪಿ. ಪ್ರಕಾಶ್ ಅವರ ಕಾಳಜಿಯಿಂದಾಗಿ ಕರ್ನಾಟಕ ಸರ್ಕಾರವು  ಡಾ.ಕಾಳೇಗೌಡ ನಾಗವಾರ ಇವರ ನೇತೃತ್ವದಲ್ಲಿ ಹೊರತಂದ ಲೋಹಿಯಾ ಬರಹಗಳ ಸಂಪುಟಗಳನ್ನು ಹೊರತಂದಿದೆ.  ಮೊದಲ ಸಂಪುಟವಾಗಿ 1996ರಲ್ಲಿ ಪ್ರಕಟವಾದ  ಸ್ವಾತಂತ್ರ್ಯದ ಅಂತರ್ಜಲಎಂಬ ಕೃತಿಯಲ್ಲಿ ಬಿ..ಸನದಿಯವರು ಲೋಹಿಯಾರವರ ಲೇಖನವನ್ನು ಹಿಂದಿಯಿಂದ ಕನ್ನಡಕ್ಕೆ  ಅನುವಾದಿಸಿದ್ದಾರೆ.) ಗಾಂಧಿ ಲೋಹಿಯಾ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿರುವ ಲೇಖನವು  ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆ ಮನುಷ್ಯರ ನಡುವಿನ ಸಂಬಂಧ ಎಷ್ಟು ಗಾಢವಾದುದು ಮತ್ತು ಗೌರವಯುತವಾದದು ಎಂಬುದಕ್ಕೆ ಸಾಕ್ಷಿಯಂತಿದೆ.

ರಾಮಮನೋಹರ ಲೋಹಿಯಾ ಅವರು ಉತ್ತರ ಪ್ರದೇಶದ ಪ್ಶೆಜಾಪುರ್ ಜಿಲ್ಲೆಯ ಅಕ್ಬರ್ ಪುರ್ ಎಂಬಲ್ಲಿ 1910 ಮಾರ್ಚ್ 23 ರಂದು ಜನಿಸಿದರು. ಅವರ ತಂದೆ ಹಿರಾಲಾಲ್  ಪ್ರಸಿದ್ಧ ವ್ಯಾಪಾರಸ್ಥ ಕುಟುಂಬದಿಂದ ಬಂದವರಾಗಿದ್ದ ಕಾರಣ ತಮ್ಮ ಪುತ್ರ ಲೋಹಿಯಾಗೆ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಹಾಗಾಗಿ ಲೋಹಿಯಾ ಅವರು ಬಾಂಬೆ, ಕೊಲ್ಕತ್ತ, ಕಾಶಿ ಯಲ್ಲಿ ಶಿಕ್ಷಣ ಪೂರೈಸಿ, ಆನಂತರ ಜರ್ಮನಿಗೆ ತೆರಳಿ ಅಲ್ಲಿನ ಬಿರ್ಲಿನ್ ವಿಶ್ವ ವಿದ್ಯಾನಿಲಯದಲ್ಲಿಭಾರತದ ಉಪ್ಪಿನ ಸತ್ಯಾಗ್ರಹಕುರಿತು ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ. ಪಡೆದು ಭಾರತಕ್ಕೆ ಹಿಂತಿರುಗಿದರು. ಜರ್ಮನಿಯಲ್ಲಿದ್ದಾಗ ತಮ್ಮ ವಿದ್ಯಾಭ್ಯಾಸದ ಜೊತೆಗೆ ಹೆಗಲ್ ಮತ್ತು ಕಾರ್ಲ್ ಮಾಕ್ರ್ಸ್ ಪ್ರತಿಪಾದಿಸಿದ ಚಿಂತನೆಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿದ್ದ ಲೋಹಿಯಾ ಅವರು ಪಾಶ್ಚಿಮಾತ್ಯ ಜಗತ್ತಿನ ಇಬ್ಬರು ಚಿಂತಕರು ಗ್ರಹಿಸಿರುವ ಇತಿಹಾಸಕ್ಕಿಂತ ಭಿನ್ನವಾದ ಚರಿತ್ರೆ ಪೌರಾತ್ಯ ರಾಷ್ರಗಳಲ್ಲಿದ್ದು ಅದನ್ನು ಕಟ್ಟಿಕೊಡುವ ಅಗತ್ಯತೆ ಇದೆ ಎಂಬುದನ್ನು ಮನಗಂಡಿದ್ದರು. ಹಾಗಾಗಿ ಅವರು ಭಾರತಕ್ಕೆ ಹಿಂತಿರುಗಿದ ನಂತರ ತಮ್ಮ ರಾಜಕೀಯ ಚಟುವಟಿಕೆಯ ನಡೆವೆಯೂ ಭಾರತದ ಬಹುಮುಖಿ ಸಂಸ್ಕøತಿ ಮತ್ತು ಇತಿಹಾಸ ಕುರಿತು ಚಿಂತಿಸುತ್ತಾ ತಮ್ಮ ಬರಹಗಳಲ್ಲಿ ದಾಖಲಿಸಿದರು. ಲೋಹಿಯಾ ಅವರಿಗೆ ಗಾಂಧೀಜಿಯವರ ಜೊತೆ ನೇರ ಸಂಪರ್ಕ ಏರ್ಪಟ್ಟಿದ್ದು 1934 ರಲ್ಲಿ. ಅದಕ್ಕೂ ಮುನ್ನ ಎರಡು ಬಾರಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದು ಹಾಗೂ ಜರ್ಮನಿಯ ರೈಲು ನಿಲ್ದಾಣದಲ್ಲಿ ಗಾಂಧಿಯವರನ್ನು ಭೇಟಿ ಮಾಡಲು ಯೋಜನೆ ರೂಪಿಸಿಕೊಂಡು, ಬೆಳಗಿನ ಜಾವ ತಡವಾಗಿ ಎದ್ದ ಕಾರಣ ಅವರನ್ನು ಕಾಣುವ ಅವಕಾಶವನ್ನು ತಪ್ಪಿಸಿಕೊಂಡಿದ್ದು ಎಲ್ಲವನ್ನೂ ಲೋಹಿಯಾರವರು ತಮ್ಮಮಹಾತ್ಮ ಗಾಂದಿ”ü ಎಂಬ ಲೇಖನದಲ್ಲಿ ಸ್ಮರಿಸಿದ್ದಾರೆ.
1919-20 ಸಮಯದಲ್ಲಿ ದೇಶಾದ್ಯಂತ ನಡೆಯುತ್ತಿದ್ದ ಅಸºಕಾರ ಚಳುವಳಿಯ ಸಂದರ್ಭದಲ್ಲಿ ತಮ್ಮ ಹತ್ತನೆಯ ವಯಸ್ಸಿನಲ್ಲಿ   ಶಾಲೆಗೆ ಗೈರುಹಾಜರಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಮೆರವಣಿಯಲ್ಲಿ ಪಾಲ್ಗೊಂಡಿದ್ದು ಹಾಗೂ ಒಮ್ಮೆ ಅವರ ತಂದೆಯವರು ಬಾಲಕನಾಗಿದ್ದ ಲೋಹಿಯಾ ಅವರನ್ನು ಗಾಂಧೀಜಿಯವರ ಬಳಿ ಕರೆದುಕೊಂಡು ಹೋಗಿದ್ದಾಗ ಅವರ ಕಾಲು ಮುಟ್ಟಿ ನಮಸ್ಕರಿಸಿ ಪುಳಕಗೊಂಡಿದ್ದನ್ನು ಬಣ್ಣಿಸಿದ್ದಾರೆ. ಅವರು ಜರ್ಮನಿಯಿಂದ ಭಾರತಕ್ಕೆ ವಾಪಸ್ ಬಂದ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿ ಕಾಂಗ್ರೇಸ್ ಪಕ್ಷವನ್ನು ಸೇರಲು ಬಯಸಿದರು. ಅವರಿಗೆ ಕಾಶಿಯಲ್ಲಿ ಪರಿಚಯವಾಗಿದ್ದ ಪಂಡಿತ್ ಮದನ್ ಮೋಹನ್ ಮಾಳವೀಯರವರ ಪತ್ನಿ ಪ್ರಭಾವತಿಯವರ ಮೂಲಕ ಒಮ್ಮೆ ಗಾಂಧಿ ಹಾಗೂ ಮಾಳವೀಚಿ ಹಾಗೂ ಇತರೆ ನಾಯಕರೊಡನೆ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ದಿನ ಗಾಂಧೀಜಿಯವರನ್ನು ಪರಿಚಯಿಸಿಕೊಳ್ಳಲು ಹಿಂಜರಿದ ಲೋಹಿಯಾರವರು ಪ್ರಭಾವತಿಯವರಿಗೆನಾನು ನಿಮ್ಮ ಬೆನ್ನ ಹಿಂದೆ ಬಂದು ನಿಮ್ಮನ್ನು ಗುರಾಣಿಮಾಡಿಕೊಂಡು ಚರ್ಚೆಯಲ್ಲಿ ಭಾಗವಹಿಸುತ್ತೇನೆ. ಮಹಾತ್ಮರಿಗೆ ನನ್ನನ್ನು ಪರಿಚಯಿಸುವುದು ಬೇಡಎಂದು ಪ್ರಾರ್ಥಿಸಿಕೊಂಡಿದ್ದರು. ಅದರಂತೆ 1934 ಆರಂಭದ ದಿನಗಳಲ್ಲಿ ಕೊಲ್ಕತ್ತ ನಗರದಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಲೋಹಿಯಾ ಅವರು ಆಲಿಸಿದರು. ಸಭೆಯಲ್ಲಿ ಬಹುತೇಕ ನಾಯಕರು ಬ್ರಿಟೀಷರಿಂದ ಹೋರಾಟದ ಮೂಲಕ  ಸ್ವಾತಂತ್ರ್ಯ ಪಡೆಯುವುದು ಕಷ್ಟ. ಹಾಗಾಗಿ ಲಂಡÀನ್ನಿಗೆ  ಕಾಂಗ್ರೇಸ್ ಪ್ರತಿನಿಧಿಗಳ ನಿಯೋಗವೊಂದನ್ನು ಕಳಿಸಿ ವಿನಂತಿಸಿಕೊಳ್ಳುವುದು ಒಳಿತು ಎಂಬುದನ್ನು ಗಾಂಧಿಯೆದುರು ಪ್ರತಿಪಾದಿಸಿದರು. ಅತ್ಯಂತ ತಾಳ್ಮೆಯಿಂದ ಹಾಗೂ ಶಾಂತ ಚಿತ್ತದಿಂದ ಎಲ್ಲವನ್ನೂ ಕೇಳಿಸಿಕೊಂಡು ಬಾಪು ಅವರ ಮನವಿಯನ್ನು ನಿರಾಕರಿಸುತ್ತಾ, “ ಎಂತಹ ಮಾತನಾಡುತ್ತಿದ್ದೀರಿ? ಇದು ನಮ್ಮ ಅಸಹಾಯಕತೆಯ ಸ್ಥಿತಿ ಎಂದು ನಿಮಗನಿಸುವುದಿಲ್ಲವೆ?” ಎನ್ನುತ್ತಾ ಅತ್ಯಂತ ತಣ್ಣನೆಯ ಧ್ವನಿಯಲ್ಲಿ ಖಚಿತವಾಗಿ  ನಿರಾಕರಿಸಿದರು. ಇದು ಲೋಹಿಯಾ ಅವರ ಮೇಲೆ ಮಹಾತ್ಮನ ದೃಢ ಚಿತ್ತ ಹಾಗೂ ಖಚಿತತೆ ಕುರಿತು ಗೌರವ ಉಂಟಾಗಲು ಪ್ರಥಮಬಾರಿಗೆ ಪ್ರೇರಣೆಯಾಯಿತು.

ಘಟನೆ ನಡೆದ ಕೆಲವು ದಿನಗಳ ನಂತರ ವಾರ್ಧಾ ಬಳಿಯ ಸೇವಾ ಆಶ್ರಮದ ಬಳಿಯ ಅತಿಥಿ ಗೃಹದಲ್ಲಿ ತಂಗಿದ್ದ ಲೋಹಿಯಾ ಅವರನ್ನು ಒಂದು ಬೆಳಗಿನ ಜಾವ ಜಮ್ನಾಲಾಲ್ ಬಜಾಜರು ಏಕಾ ಏಕಿ ಎಬ್ಬಿಸಿ ಕರೆದುಕೊಂಡು ಹೋಗಿ ಗಾಂಧೀಜಿಯವರ ಮುಂದೆ ನಿಲ್ಲಿಸಿ ಲೋಹಿಯಾ ಅವರನ್ನು ಪರಿಚಯ ಮಾಡಿಕೊಟ್ಟರು. ಉಪ್ಪಿನ ಸತ್ಯಾಗ್ರಹದ ಕುರಿತು ಜರ್ಮನಿಯ ವಿ.ವಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ವಿಚಾರ ಹಾಗೂ ಲೋಹಿಯಾ ಅವರಿಗೆ  ಕಾಂಗ್ರೇಸ್ ಸೇರಲು ಆಸಕ್ತಿ ಇರುವ ವಿಚಾರವನ್ನು ತಿಳಿಸಿದರು. ಗಾಂಧೀಯವರು ಲೋಹಿಯಾ ಅವರನ್ನು ಹತ್ತಿರಕ್ಕೆ ಕರೆದುಕೊಂಡು, ಅವರ ಹಿನ್ನಲೆ, ಆಸಕ್ತಿ ಎಲ್ಲವನ್ನೂ ಕೇಳಿ ತಿಳಿದುಕೊಂಡರು. ಒಬ್ಬ ಪ್ರತಿಭಾವಂತ ಯುವಕನೊಬ್ಬ ಕಾಂಗ್ರೇಸ್ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮೊಡನೆ ಕೈ ಜೋಡಿಸಲು ಮುಂದೆ ಬಂದದ್ದು ವ್ಯಯಕ್ತಿಕವಾಗಿ ಗಾಂಧೀಜಿಯವರಿಗೆ ಸಂತೋಷದ ವಿಷಯವಾಗಿತ್ತು. ಹಾಗಾಗಿ ಅವರು ಲೋಹಿಯಾ ಅವರನ್ನು ರಾಷ್ಟ್ರೀಯ ಕಾಂಗ್ರೇಸ್ ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ಮಾಡಿದರು. 1935 ರಲ್ಲಿ ನೆಹರೂರವರು ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ  ಅವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಸಂಬಂಧಗಳ ಕುರಿತ ಕಾಂಗ್ರೇಸ್ ಘಟಕದ ಜವಬ್ದಾರಿಯನ್ನು  ಲೋಹಿಯಾರವರಿಗೆ ವಹಿಸಿದ್ದರು. ಕಾರಣದಿಂದಾಗಿ ಗಾಂಧಿ ಮತ್ತು ಲೋಹಿಯಾ ಇಬ್ಬರೂ ಸದಾ ಮುಖಾಮುಖಿಯಾಗಿ ಹಲವಾರು ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಹಲವಾರು ಸಂದರ್ಭಗಳಲ್ಲಿ ಲೋಹಿಯಾ ಅವರು ಗಾಂಧೀಜಿಗೆ ಮಾತ್ರವಲ್ಲದೆ, ರಾಷ್ಟ್ರೀಯ ಕಾಂಗ್ರೇಸ್ ಕಾರ್ಯಕಾರಿ ಮಂಡಳಿಗೆ ನೀಡುತ್ತಿದ್ದ ಸಲಹೆಗಳನ್ನು ಗಮನಿಸುತ್ತಿದ್ದ ಬಾಪೂರವರು ಲೋಹಿಯಾ ಅವರ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿ ವಹಿಸಿದ್ದರು. ಗಾಂಧೀಜಿಯವರು ದುಡಿಯುವ ಕೈಗಳಿಗೆ ಉದ್ಯೋಗ ಎಂಬ ಅವರ ಕನಸಿನ ಯೋಜನೆಯಾದ ಗುಡಿ ಕೈಗಾರಿಕೆಗಳಿಗೆ ಚಿಹ್ನೆಯಾಗಿ ಚರಕವನ್ನು ಆಯ್ದುಕೊಂಡಾಗ, ಲೋಹಿಯಾ ಅವರು ಚರಕಕ್ಕಿಂತ ಗ್ರಾಮಭಾರತಕ್ಕೆ ಗುದ್ದಲಿಯು ಸೂಕ್ತ ಚಿಹ್ನೆಯಾಗಬಲ್ಲದು. ದುಡಿಯುವ ಕೈಗಳಲ್ಲಿ ಗುದ್ದಲಿ ಇದ್ದರೆ, ದೇಶದ ಜನರಿಗೆ ಅನ್ನ, ಉದ್ಯೋಗ, ವಸತಿ ಮಾತ್ರವಲ್ಲದೆ, ಗ್ರಾಮಭಾರತದ ಕೆರೆ, ಕಟ್ಟೆಗಳು ಮತ್ತು ಕೃಷಿ ಭೂಮಿ  ಹೀಗೆ ಎಲ್ಲವೂ ಜೀವಂತವಾಗಿರುತ್ತವೆ ಎಂದು ಪ್ರತಿ ಪಾದಿಸಿದ್ದರು.
ಲೋಹಿಯಾ ಅವರಲ್ಲಿದ್ದ ಆಳವಾದ ಒಳನೋಟಗಳು ಮತ್ತು ದೂರದೃಷ್ಟಿಯ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಗಾಂಧೀಜಿಯವರು ಎಷ್ಟೋ ಸಂದರ್ಭಗಳಲ್ಲಿ ಶಿಷ್ಯನಿಂದ ಹೊಸ ಹೊಸ ಆಲೋಚನೆಗಳನ್ನು ಸ್ವೀಕರಿಸಿದ್ದುಂಟು. 1936 ರಲ್ಲಿ ಲೋಹಿಯಾ ಅವರು ಸೋಷಲಿಸ್ಟ್ ಕಾಂಗ್ರೇಸ್ ವಿಭಾಗದ ವತಿಯಿಂದ ಪತ್ರಿಕೆಯನ್ನು ಆರಂಭಿಸಿದಾಗ ಪತ್ರಿಕೆಗೆ ಲೇಖನವನ್ನು ಬರೆಯುತ್ತಿದ್ದ ಗಾಂಧೀಜಿಯವರು, ಲೋಹಿಯಾ ಅವರ ಲೇಖನಗಳನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಹಲವಾರು ಬಾರಿ ಬ್ರಿಟೀಷ್ ಸರ್ಕಾರದ ಕುರಿತಂತೆ ಅಥವಾ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯುವ ಕುರಿತಂತೆ ಗಾಂಧೀಜಿಯವರ ನಡಾವಳಿಗಳನ್ನು ಟೀಕಿಸಿ ಲೋಹಿಯಾರವರು ಲೇಖನಗಳನ್ನು ಬರೆದು ಪ್ರಕಟಿಸಿದಾಗ, ಅವುಗಳಿಗೆ ಪತ್ರದ ಮೂಲಕ ಉತ್ತರ ನೀಡುತ್ತಿದ್ದ ಗಾಂಧೀಜಿ, ಕೆಲವೊಮ್ಮೆ ಲೋಹಿಯಾ ಅವರನ್ನು ಕರೆಸಿಕೊಂಡು ಮುಕ್ತವಾಗಿ ಚರ್ಚೆ ಮಾಡುತ್ತಿದ್ದರು. ಕಠಿಣವಾದ ಮಾತು ಮತ್ತು ಬರಹಕ್ಕೆ ಹೆಸರಾಗಿದ್ದ ಲೋಹಿಯ ಅವರ ಪ್ರಚಂಡ ವಾದಕ್ಕೆ ಮರುಳಾಗುತ್ತಿದ್ದ ಗಾಂಧೀಯವರುರಾವಣನಿಂದ ರಾಮನು ಸಾಕಷ್ಟು ಕಲಿಯುವುದು ಇದೆಎಂದು ಹೇಳುತ್ತಾ ಹಲ್ಲುಗಳಿಲ್ಲದ ತಮ್ಮ ಬೊಚ್ಚು ಬಾಯಿಯಲ್ಲಿ ಬಾಯ್ತುಂಬಾ ನಗುತ್ತಿದ್ದರು. ಲೋಹಿಯಾ ಕೂಡಗಾಂಧೀಜಿಯವರ ಬಳಿ ಮಾತ್ರ ಮುಕ್ತ ಮನಸ್ಸಿನ ಚರ್ಚೆ ಸಾಧ್ಯಎಂದು ಹೇಳಿಕೊಳ್ಳುತ್ತಿದ್ದರು.

ರಾಮಮನೋಹರ ಲೋಹಿಯಾ ಮೇಲೆ ಬ್ರಿಟೀಷ್ ಸರ್ಕಾರ ದೇಶ ದ್ರೋಹದ ಆಪಾದನೆ ಹೊರಿಸಿ ಸರೆಮನೆ ವಾಸ ವಿಧಿಸಿದಾಗ, “ ನನ್ನ ಆತ್ಮ ಬಂಧು ಲೋಹಿಯಾ ಜೈಲಿನಲ್ಲಿರುವಾಗ ನಾನು ಇಲ್ಲಿ ಸುಮ್ಮನೆ ಕುಳಿತಿರಲಾರೆ. ಲೋಹಿಯಾ ಅವರು ಎಂದೂ ಬ್ರಿಟೀಷ್ ಸರ್ಕಾರದ ವಿರುದ್ಧ ಯುದ್ಧಕ್ಕೆ ಕರೆ ಕೊಡುವ ಮಾತನಾಡುವುದಿಲ್ಲ. ನಾನು ನನ್ನ ಜೀವನದಲ್ಲಿ ಲೋಹಿಯಾ ಅವರಂತಹ ಸರಳ ಹಾಗೂ ಧೀಮಂತ ವ್ಯಕ್ತಿಯನ್ನು ಮತ್ತೊಮ್ಮೆ ನೋಡಲಾರೆ. ಅವರು ಭಾಷಣದಲ್ಲಿ ಏನೇ ಮಾತನಾಡಿದ್ದರೂ ಸಹ ಅದು ಅವರಿಗೆ ತನ್ನ ತಾಯ್ನಾಡಿನ ಕುರಿತು ಇರುವ ಉಜ್ವಲ ಪ್ರೀತಿ ಮಾತ್ರವಲ್ಲದೆ ಬೇರೇನೂ ಅಲ್ಲಎಂದು ಗಾಂಧೀಜಿಯವರು ಬಹಿರಂಗವಾಗಿ ಘೋಷಿಸಿದರಲ್ಲದೆ ಅವರನ್ನು ಬಿಡುಗೊಡೆಗೊಳಿಸಿದ್ದರು. ಮತ್ತೊಮ್ಮೆ 1944 ರಲ್ಲಿ ತಲೆ ಮರೆಸಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಮಗ್ನರಾಗಿದ್ದ ಲೋಹಿಯಾ ಅವರನ್ನು ಬಂಧಿಸಿದ ಬ್ರಿಟೀಷ್ ಸರ್ಕಾರ ಅವರಿಗೆ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಿ, ಲಾಹೋರ್ ಜೈಲಿನಲ್ಲಿಟ್ಟು ಚಿತ್ರ ಹಿಂಸೆ ನೀಡಿದಾಗ ಮಧ್ಯ ಪ್ರವೇಶಿಸಿದ ಗಾಂಧೀಜಿಯವರು ವೈಸ್ ರಾಯ್ ಮೇಲೆ ಒತ್ತಡ ಹೇರಿ ಲೋಹಿಯಾ ಅವರನ್ನು ಬಿಡುಗಡೆ ಗೊಳಿಸಿದ್ದರು. ಬೇರೇ ಯಾವೊಬ್ಬ ಶಿಷ್ಯ ಅಥವಾ ಅನುಯಾಯಿಗೆ ತೋರದ ಕಾಳಜಿಯನ್ನು ಗಾಂಧೀಜಿಯವರು ಲೋಹಿಯಾ ಅವರಿಗೆ ತೋರುತ್ತಿದ್ದರು. ಅವರ ದೃಷ್ಟಿಯಲ್ಲಿ ಲೋಹಿಯಾ ಒಬ್ಬ ಶಿಷ್ಯ ಮಾತ್ರ ಆಗಿರದೆ, ತಪ್ಪು ಹೆಜ್ಜೆ ಇಟ್ಟಾಗ ತಿದ್ದುವ ಮಾರ್ಗದರ್ಶಿ ಎಂದು ನಂಬಿದ್ದರು. ಸ್ವಾತಂತ್ರ್ಯ ಹೋರಾಟ ನಿರ್ಣಾಯಕ ಹಂತ ತಲುಪಿ, ಬ್ರಿಟೀಷ್ ಸರ್ಕಾರವು ಭಾರತ ಉಪಖಂಡವನ್ನು ಭಾರತ ಮತ್ತು ಪಾಕ್ ಎಂದು ವಿಭಜಿಸುವುದರ ಮೂಲಕ ಸ್ವಾತಂತ್ರ್ಯವನ್ನು ನೀಡಲು ಹೊರಟಾಗ ಗಾಂಧೀಜಿಯವರು ಇದನ್ನು ವಿರೋಧಿಸಿದರು. ಅಂತಹ ¸Àದರ್ಭದಲ್ಲಿ ಗಾಂಧೀಜಿವರಿಗೆ ನೈತಿಕವಾಗಿ ಬೆಂಬಲ ಸೂಚಿಸಿದವರಲ್ಲಿ ಲೋಹಿಯಾ ಮತ್ತು ಜೆ.ಪಿ. ( ಜಯಪ್ರಕಾಶ್ ನಾರಾಯಣ್) ಮೌಲನಾ ಅಜಾದ್ ಪ್ರಮುಖರಾಗಿದ್ದರು. ಆದರೆ, ವಿಭಜನೆಗಿಂತ ಮುಖ್ಯವಾಗಿ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ನೆಹರೂ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಪಟೇಲ್ ಇವರ ಹಠಮಾರಿತ£À ನಿಲುವು ಗಾಂಧೀಜಿಯ ವಿರುದ್ಧ ಗೆದ್ದಾಗ, ಗಾಂಧಿಯವರು ಮೌನಕ್ಕೆ ಶರಣಾದರೆ, ಲೋಹಿಯಾ ಮತ್ತು ಸಂಗಡಿಗರು ವಿಶೇಷವಾಗಿ ಸೋಷಲಿಷ್ಟ್ ಕಾಂಗ್ರೇಸ್ ಸದಸ್ಯರು ಕಾಂಗ್ರೇಸ್ ಪಕ್ಷದಿಂದ ಮಾನಸಿಕವಾಗಿ ದೂರ ಉಳಿದರು.
ಲಾಹೋರ್ ಸೆರಮನೆಯಲ್ಲಿ ಚಿತ್ರ ಹಿಂಸೆಗೆ ಗುರಿಯಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲಿದ್ದ ಲೋಹಿಯಾ ಅವರನ್ನು 1946 ಕೊನೆಯ ದಿನಗಳಲ್ಲಿ  ಆತ್ಮೀಯ ಮಿತ್ರರಾದ ಜೂಲಿಯೊ ಮೇನೇಜರ್ ಎಂಬುವರು ಗೋವಾದ ತಮ್ಮ ನಿವಾಸಕ್ಕೆ ಆಗಮಿಸಿ ವಿಶ್ರಾಂತಿ ಪಡೆಯಲು ಆಹ್ವಾನಿಸಿದರು. ಸಂದರ್ಭದಲ್ಲಿ ಪೋರ್ಚುಗೀಸರ ಆಡಳಿತವಿದ್ದ ಗೋವಾ ರಾಜ್ಯದಲ್ಲಿ ಸ್ಥಳಿಯ ನಾಗರೀಕರಿಗೆ ಯಾವುದೇ ರೀತಿಯ ನಾಗರೀಕ ಹಕ್ಕುಗಳಾಗಲಿ, ಸ್ವಾತಂತ್ರ್ಯವಾಗಲಿ ಇರಲಿಲ್ಲ. ತಮ್ಮ ಮಕ್ಕಳ ವಿವಾಹದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲು ಪೋರ್ಚುಗೀಸ್ ಸರ್ಕಾರದ ಅನುಮತಿ ಪಡೆಯಬೇಕಿತ್ತು. ರಾಮಮನೋಹರ ಲೋಹಿಯಾ ಅವರು ಗೋವಾಕ್ಕೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ವಿಷಯ ತಿಳಿದ ಸ್ಥಳೀಯ ನಾಗರೀಕರರು  ಪೋರ್ಚ್ಗೀಸ್ ಸರ್ಕಾರದ ಅಮಾನವೀಯ ಆಡಳಿತ ವೈಖರಿಯನ್ನು ಲೋಹಿಯಾ ಅವರ ಗಮನಕ್ಕೆ ತಂದರು. ಭಾರತ  ಬ್ರಿಟೀಷರಿಂದ ಸ್ವಾvಂತ್ರ್ಯ ಪಡೆಯುವುದರ ಜೊತೆಗೆ ಗೋವಾ ರಾಜ್ಯವೂ ಸಹ ಪೋರ್ಚುಗೀಸರಿಂದ ಮುಕ್ತಿ ಪಡೆಯಲಿ ಎಂದು ನಿರ್ಧರಿಸಿದ ಲೋಹಿಯಾ, 1947 ಆರಂಭದಲ್ಲಿ  ಗೋವಾ ವಿಮೋಚನಾ ಹೋರಾಟಹೆಸರಿನಲ್ಲಿ ಚಳುವಳಿಗೆ ನಾಂದಿ ಹಾಡಿದರು. ಹೋರಾಟಕ್ಕಿಳಿದ ಲೋಹಿಯಾ ಅವರನ್ನು ಪೋರ್ಚುಗೀಸ್ ಸರ್ಕಾರ ಬಂಧಿಸಿದ ಎರಡು ತಾಸುಗಳ ಅವಧಿಯಲ್ಲಿ ವಿಷಯ ಗಾಂಧೀಜಿಯವರಿಗೆ ಮುಟ್ಟಿತು. ಸಂದರ್ಭದಲ್ಲಿಯೂ ಕೂಡ ತಮ್ಮ ಶಿಷ್ಯ ಯಾವ ವಿಷಯಕ್ಕೆ ಬಂಧನಕ್ಕೆ ಒಳಗಾಗಿದ್ದಾನೆ ಎಂಬುದನ್ನು ತಿಳಿಯುವ ಯಾವ ಕುತೂಹಲವೂ ಇಲ್ಲದ ಗಾಂಧೀಜಿಲೋಹಿಯಾ ಅವರ ಬಂಧನವನ್ನು ಖಂಡಿಸಿ, ಬ್ರಿಟೀಷ್ ಸರ್ಕಾರದ ಮೂಲಕ ಪೋರ್ಚುಗೀಸ್ ಆಡಳಿತಕ್ಕೆ ಬಿಸಿ ಮುಟ್ಟಿಸುವುದರ ಜೊತೆಗೆ ತಕ್ಷಣ ಲೋಹಿಯಾ ಬಿಡುಗಡೆಯಾಗದಿದ್ದರೆ ನಾನು ಗೋವಾಕ್ಕೆ ತೆರಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು. ಆನಂತರ ಲೋಹಿಯಾ ಅವರನ್ನು ಬಿಡುಗಡೆ ಮಾಡಿದ ಗೋವಾ ಸರ್ಕಾರವು  ರಾಜ್ಯ ಪ್ರವೇಶ ಮಾಡದಂತೆ  ಅವರ ಮೇಲೆ ನಿರ್ಬಂಧ ಹೇರಿತು. ಅದರಂತೆ ಗೋವಾ ರಾಜ್ಯದಿಂದ ಹೊರ ನಡೆದ ಲೋಹಿಯಾರವರು ಬೆಳಗಾವಿಯನ್ನು ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು, ಗೋವಾ ವಿಮೋಚನೆಗಾಗಿ ಹೋರಾಟಗಾರರನ್ನು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಇತ್ತ ದೆಹಲಿಯಲ್ಲಿ ಭಾರತ-ಪಾಕಿಸ್ತಾನ ಎಂಬ ಹೆಸರಿನಲ್ಲಿ ನವರಾಷ್ರಗಳು ಉದಯವಾಗುವುದು ಖಚಿತವಾಗುತ್ತಿದ್ದಂತೆ, ಗಡಿ ರೇಖೆಗಳನ್ನು ಗುರುತಿಸುವ ಕಾರ್ಯ ಆರಂಭಗೊಂಡಿತು. ಹಿಂದು- ಮುಸ್ಲಿಂ ಸಮುದಾಯದ ನಡುವೆ ಉದ್ಭವವಾದ ಅಪನಂಬಿಕೆಯ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಲಕ್ಷಾಂತರ ಮುಸ್ಲಿಂ ಕುಟುಂಬಗಳು ಉತ್ತರ ಭಾರತದ ರಾಜ್ಯಗಳಿಂದ ಪಾಕಿಸ್ತಾನದತ್ತ ವಲಸೆ ಹೊರಟರೆ, ಅಷ್ಟೇ ಪ್ರಮಾಣದ ಹಿಂದೂ ಕುಟುಂಬಗಳು ಪಾಕಿಸ್ತಾನದಿಂದ ತಮ್ಮ ಮನೆ ಗಳನ್ನು ತೊರೆದು ಭಾರತದತ್ತ ಧಾವಿಸಿದವು. ಸ್ವಾತಂತ್ರ್ಯದ ದಿನ ಹತ್ತಿರವಾಗುತ್ತಿದ್ದಂತೆ ಸ್ಪೋಟಗೊಂಡ ಅಗ್ನಿ ಪರ್ವತದಂತೆ ಕೋಮು ಗಲಭೆ ಎಲ್ಲೆಡ ಹರಡತೊಡಗಿತು. ಪೂರ್ವ ಭಾರತದ ಕೊಲ್ಕತ್ತ ಸೇರಿದಂತೆ ಬಂಗಾಳದ ನೌಕಾಲಿ ಪ್ರದೇಶ ಹಾಗೂ ಪಶ್ಚಿಮ ಭಾರತದ ಪಂಜಾಬ್, ಲಾಹೋರ್ ಪ್ರಾಂತ್ಯಗಳು ಅಕ್ಷರಶಃ ಅಗ್ನಿಕುಂಡಗಳಾಗಿ ಪರಿವರ್ತನೆಗೊಂಡವು. ಜಾತ್ಯಾತೀತ ಹಾಗೂ ಧರ್ಮಾತೀತ ನೆಲೆಯಲ್ಲಿ ನವ ಸಮಾಜ ಹಾಗೂ ನವರಾಷ್ಟ್ರದ ಕನಸು ಕಂಡಿದ್ದ ಗಾಂಧೀಜಿಯವರು ಭಗ್ನ ಪ್ರೇಮಿಯಂತೆ ನಿರಾಶೆಗೊಂಡು ಮೌನಕ್ಕೆ ಶರಣಾಗಿದ್ದ ಸಂದರ್ಭದಲ್ಲಿ ಜೊತೆಗೆ ತಮ್ಮ ಎಪ್ಪತ್ತೆಂಟನೆಯ ವಯಸ್ಸಿನ ಇಳಿವಯಸ್ಸಿನಲ್ಲಿ ಹೊಸ ಸವಾಲನ್ನು ಎದುರಿಸಬೇಕಾಯಿತು. ಕೂಡಲೇ ತಮ್ಮ ಶಿಷ್ಯ ಲೋಹಿಯಾ ಅವರಿಗೆ ಟೆಲಿಗ್ರಾಂ ಕಳುಹಿಸಿ ದೆಹಲಿಗೆ ಕರೆಸಿಕೊಂಡ ಗಾಂಧೀಯವರು, ಶಿಷ್ಯನ ಜೊತೆ ಕೊಲ್ಕತ್ತ ಮತ್ತು ನೌಕಾಲಿಯತ್ತ ತೆರಳಿದರು.
ಕೋಮು ಸಂಘರ್ಷದಲ್ಲಿ ಯುದ್ಧಭೂಮಿಯಾಗಿದ್ದ ಕೊಲ್ಕತ್ತ ನಗರದ ಹಿಂಸೆಯ ನಿಯಂತ್ರಣಕ್ಕೆ ಲೋಹಿಯಾ ಅವರನ್ನು ನಿಯೋಜಿಸಿದ ಗಾಂಧೀಜಿಯವರು ರಕ್ತ ಸಿಕ್ತವಾದ ಕೋಮು ದಳ್ಳುರಿಯನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಲೋಹಿಯಾರವರು ಇಡೀ ನಗರದಲ್ಲಿ ಸಂಚರಿಸಿ, ಹಿಂದೂ-ಮುಸ್ಲಿಂ ಸಮುದಾಯದ ನಾಯಕರ ಜೊತೆಗೂಡಿ ಗಲಭೆಯನ್ನು ನಿಯಂತ್ರಣಕ್ಕೆ ತಂದರಲ್ಲದೆ, ಮನೆ ಮನೆಗಳಲ್ಲಿ ಅಡಗಿಸಿಟ್ಟಿದ್ದ ಆಯುಧಗಳು, ಬಂದೂಕು ಮತ್ತು ನಾಡಬಾಂಬ್ ಗಳನ್ನು ಗಲಭೆಕೋರರ ಮನವೊಲಿಸಿ ಎಲ್ಲವನ್ನೂ ಸಂಗ್ರಹಿಸಿಕೊಂಡು  ಬಂದು ತಮ್ಮ ಗುರುವಿನ ಎದುರು ರಾಶಿ ಹಾಕಿ, ಅವರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾದರು. ನಂತರ  ದೆಹಲಿ ನಗರದಲ್ಲಿಯೂ ಸಹ ತಮ್ಮ ಅದ್ಭುತ ಸಂಘಟನಾ ಚಾತುರ್ಯದಿಂದ ಗಲಭೆಯನ್ನು ನಿಯಂತ್ರಣಕ್ಕೆ ತಂದರಲ್ಲದೆ, ಹಿಂದು ಮುಸ್ಲಿಂ ಬಾಂಧವರ ಮೆರವಣಿಗೆಯನ್ನು ಏರ್ಪಡಿಸಿ, ಕೋಮು ಸೌಹಾರ್ಧತೆಗೆ ನಾಂದಿ ಹಾಡಿದರು. ಧರ್ಮದ ಹೆಸರಿನಲ್ಲಿ ದೇಶ ಹತ್ತಿ ಉರಿಯುವಾಗ ಅನಾಥ ಪ್ರಜ್ಞೆಯಿಂದ ಬಳಲುತ್ತಾ, ತಮ್ಮೊಳಗಿನ ನೈತಿಕ ಸಿಟ್ಟು ಮತ್ತು ಶಕ್ತಿ ಎರಡನ್ನೂ ಕಳೆದುಕೊಂಡಿದ್ದ ಗಾಂಧೀಜಿಯವರ ಪಾಲಿಗೆ ಲೋಹಿಯಾ ಭವಿಷ್ಯದ ಭಾರತದ ಬೆಳಕು ಎಂಬುವುದು ಮನದಟ್ಟಾಗಿ ಹೋಯಿತು. ಕಾರಣದಿಂದಾಗಿ ಸ್ವಾತಂತ್ರ್ಯಾನಂತರದ ಭಾರತದ ಸರ್ಕಾರದ ಮಂತ್ರಿ ಮಂಡಲದಲ್ಲಿ ಲೋಹಿಯಾ ಮತ್ತು ಅಂಬೇಡ್ಕರ್ ಇರಬೇಕು ಎಂದು ತೀರ್ಮಾನಿಸಿದ ಗಾಂಧೀಜಿಯವರು ಲೋಹಿಯಾ ಅವರನ್ನು ನೆಹರೂ ಮಂತ್ರಿ ಮಂಡಲ ಸೇರಲು ಒತ್ತಾಯಿಸಿದಾಗ, ನೆಹರೂ ಜೊತೆಗಿನ ಸೈದ್ಧಾಂತಿಕ ಭಿನ್ನಭಿಪ್ರಾಯದಿಂದಾಗಿ ನಿರಾಕರಿಸಿದ ಲೋಹಿಯಾರವರು  ಗಾಂಧಿಯವರನ್ನು ಉದ್ದೇಶಿಸಿನಾನು ಕೇವಲ  ಗಾಂಧಿವಾದಿ ಮತ್ತು ಅವರ ನಿಷ್ಠಾವಂತ ಶಿಷ್ಯನೇ ಹೊರತು, ಕಾಂಗ್ರೇಸ್ ಕಾರ್ಯಕರ್ತನಲ್ಲಎಂದು ಉತ್ತರಿಸಿದ್ದರು.
ಸ್ವಾತಂತ್ರ್ಯ ಪಡೆದ ನಂತರ ದಿನಗಳಲ್ಲಿ ಗಾಂಧೀಜಿಯವರ ಪಾಲಿಗೆ ಎಲ್ಲವೂ ಆಗಿದ್ದ ಲೋಹಿಯಾ ಅವರನ್ನು ಗಾಂಧೀಜಿ ಹೆಚ್ಚು ಹೆಚ್ಚು ಪ್ರೀತಿಸುತ್ತಾ, ಸದಾ ತಮ್ಮ ಬಳಿ ಇರುವಂತೆ ನೋಡಿಕೊಂಡರು. ಲೋಹಿಯಾ ಅವರಿಗೆ ಇದ್ದ ಸಿಗರೇಟ್, ಕಾಫಿ ಮತ್ತು  ಚಹಾ ಸೇವನೆಯ ಹವ್ಯಾಸಗಳ ಕುರಿತು ಮಾಹಿತಿ ಇದ್ದ ಗಾಂಧೀಜಿಯವರು ಎಂದೂ ಅವುಗಳ ಕುರಿತು ಪ್ರಸ್ತಾಪ ಮಾಡಿರಲಿಲ್ಲ. ಆದರೆ, 1948 ಜನವರಿ ತಿಂಗಳಿನಲ್ಲಿ ನೆಹರೂ ನಂತರ ಭಾರತಕ್ಕೆ ಲೋಹಿಯಾ ಸಮರ್ಥನಾದ ಉತ್ತರಾಧಿಕಾರಿ ಎಂದು ನಿರ್ಧರಿಸಿದ ಗಾಂಧೀಜಿಯವರು ಲೋಹಿಯಾ ಅವರ ಆರೋಗ್ಯ ಕುರಿತು ಕಾಳಜಿ ವಹಿಸತೊಡಗಿದರು. ಒಂದು ದಿನ ತಮ್ಮ ಬಳಿ ಇದ್ದ  ಎಲ್ಲರನ್ನೂ ದೂರ ಕಳಿಸಿ; ಲೋಹಿಯಾ   ಹೆಗಲ ಮೇಲೆ ಕೈಯನ್ನಿರಿಸಿ  ಸುಧೀರ್ಘ ಐವತ್ತೈದು ನಿಮಿಷಗಳ ಕಾಲ ಮಾತನಾಡಿದರು. ಸಿಗರೇಟ್, ಚಹಾ ಸೇವನೆ ತ್ಯೆಜಿಸಲು ಸಲಹೆ ನೀಡುವುದರ ಜೊತೆಗೆ ಅದಕ್ಕಾಗಿ ಇರುವ ಚೀನಾ ಹಾಗು ಜಪಾನಿನ ಪದ್ಧತಿಯನ್ನು ವಿವರಿಸಿದರು.  ಮೂರು ದಿನಗಳ ಅವಕಾಶ ಕೇಳಿದ್ದ ಲೋಹಿಯಾ ಅವರು ನಂತರ ಸಿಗರೇಟ್ ಅನ್ನು ತ್ಯೆಜಿಸಿದ್ದರು. ಜನವರಿ ಕೊನೆಯ ವಾರದಲ್ಲಿ ಗಾಂಧೀಜಿಯವರುನಿಮ್ಮ  ಜೊತೆ ಖಾಸಾಗಿಯಾಗಿ ಮಾತನಾಡುವುದಿದೆ ಬಿರ್ಲಾ ಮಂದಿರಕ್ಕೆ ಬನ್ನಿಎಂದು ಲೋಹಿಯಾರವರನ್ನು ಆಹ್ವಾನಿಸಿದ್ದರು. ಜನವರಿ 28 ಅಥವಾ 29 ಎರಡು ದಿನಗಳಲ್ಲಿ ಒಮ್ಮೆ ಬರುತ್ತೇನೆ ಆಶ್ವಾಸನೆ ನೀಡಿದ ಲೋಹಿಯಾರವರು ತಮ್ಮ ಇತರೆ ಕಾರ್ಯದ ಒತ್ತಡದಿಂದ ದಿನಗಳಲ್ಲಿ ಹೋಗಲಾರದೆ, ಜನವರಿ 30 ರಂದು ಬಿರ್ಲಾ ಭವನದತ್ತ ಹೊರಟರು ಆದರೆ, ಅಂದು ಭಾರತದ ಹಾಗೂ ಲೋಹಿಯಾ ಅವರ ದುರಾದೃಷ್ಟವೆಂಬಂತೆ ಗಾಂಧೀಜಿ ಹಂತಕನ ಗುಂಡಿಗೆ ಬಲಿಯಾಗಿ ನೆಲದ ಮೇಲೆ ಅಂಗಾತರಾಗಿ ಮಲಗಿದ್ದರು.

ಗಾಂಧೀಜಿ ಹತ್ಯೆ ಕುರಿತು ಲೋಹಿಯಾ ಅವರ ಮಾತುಗಳಲ್ಲಿ ಹೇಳುವುದಾದರೆ, “ ನಿಜವಾದ ಅರ್ಥದಲ್ಲಿ ಇಂದು ನಾನು ಅನಾಥನಾದೆ. ಇದುವರೆಗೆ ನನ್ನ ಮಾತು ಮತ್ತು ಚಿಂತನೆಗಳಿಗೆ ಲಗಾಮು ಹಾಕುವ ಜೀವವೊಂದು ನೆಲದ ಮೇಲಿತ್ತು. ಇನ್ನು ಮುಂದೆ ನನಗೆ ಯಾರಿದ್ದಾರೆ? ”  ಇಂತಹ ಪ್ರಶ್ನೆಗಳ ಜೊತೆ ತೀವ್ರ ಭಾವೋದ್ರೇಕಕ್ಕೆ ಒಳಗಾದ ಲೊಹಿಯಾ ಅವರು ತ್ಯೆಜಿಸಿದ್ದ ಸಿಗರೇಟನ್ನು ಮತ್ತೆ ತಮ್ಮ ಬಾಯಿಗಿಟ್ಟು   ಹೊಗೆ ಉಗುಳತೊಡಗಿದರು. ಅಂದು ಅವರ ಬಾಯಿಂದ ಹೊರಟ ಹೊಗೆ ಸಿಗರೇಟಿನ ಹೊಗೆ ಮಾತ್ರವಾಗಿರದೆ, ಅದು ಅವರ ಹೃದಯದಲ್ಲಿ ಎದ್ದ ಬೆಂಕಿಯ ಹೊಗೆ ಕೂಡ ಆಗಿತ್ತು.

ಕೊನೆಯ ಮಾತು- ದೆಹಲಿಯಲ್ಲಿ ಗಾಂಧೀಜಿಯವರ ಅOತ್ಯ ಸಂಸ್ಕಾರ ನೆರವೇರಿದ ಮೇಲೆ ಅವರ ಚಿತಾಭಸ್ಮವನ್ನು ಅಲಹಬಾದಿನ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲು ಕಾಂಗ್ರೇಸ್ ನಾಯಕರು ನಿರ್ಧರಿಸಿದರು. ಇದಕ್ಕಾಗ ನಾಲ್ಕು ವಿಶೇಷ ಬೋಗಿಗಳನ್ನು ಒಳಗೊಂಡ ರೈಲನ್ನು ಹೂವಿನ ಹಾರಗಳ ಮೂಲಕ ಸಿಂಗರಿಸಲಾಗಿತ್ತು. ನೆಹರೂ, ಪಟೇಲ್ ಒಳಗೊಂಡತೆ ಬಹುತೇಕ ನಾಯಕರು ರೈಲಿನಲ್ಲಿದ್ದರು. ಅವರ ನಡುವೆ ಲೋಹಿಯಾ ಇದ್ದರೂ ಸಹ ಮಾತು ಕಳೆದ ಕೊಂಡ ಮೂಕನ ಹಾಗೆ ಕಿಟಕಿ ಬಳಿ ಕುಳಿತು ಹೊರಗಿನ ದೃಶ್ಯ ನೋಡುತ್ತಾ ಮೌನಕ್ಕೆ ಜಾರಿದ್ದರು. ವಿಶೇಷ ರೈಲು ಉತ್ತರ ಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಹಾಯ್ದು ಹೋಗುತ್ತಿರುವಾಗ ಸೂರ್ಯಕಾಂತಿ ಬೆಳೆದ ಹೊಲದಲ್ಲಿ ನಿಂತಿದ್ದ ರೈತನೊಬ್ಬ ಚಲಿಸುತ್ತಿದ್ದ ರೈಲಿನತ್ತ ಹೂಗಳನ್ನು ತೂರಿ ಕೈ ಮುಗಿಯುತ್ತಾ ನಿಂತಿರುವುದನ್ನು ನೋಡಿದ ಲೋಹಿಯಾ ಕಣ್ಣಲ್ಲಿ ನೀರು ಜಿನುಗತೊಡಗಿತು. ಮಹಾತ್ಮ ಗಾಂಧಿ ಕೇವಲ ಅಕ್ಷರ ಲೋಕದ ಜನರಿಗಷ್ಟೇ ಅಲ್ಲದೆ, ಭಾರತದ ಮೂಲೆ ಮೂಲೆಯ ಅನಕ್ಷರಸüರಿಗೆ ತಲುಪಿರುವ ಬಗೆಯನ್ನು ನೆನೆದು ಭಾವುಕರಾದರು. ಇದರ ಪರಿಣಾಮವೆಂಬಂತೆ  ನಂತರದ ದಿನಗಳಲ್ಲಿ ಅವರ ಬಹುತೇಕ ಎಲ್ಲಾ  ಹೋರಾಟ ಹಾಗೂ ಚಿಂತನೆಗಳಲ್ಲಿ ಗಾಂಧೀಜಿಯವರ ಚಿಂತನೆಗಳ ಸ್ಪರ್ಶ ಅಂತರ್ಗತವಾಗಿರುತ್ತಿತ್ತು.

(ಸಪ್ನ ಬುಕ್ ಹೌಸ್ ಸಂಸ್ಥೆಯಿಂದ ಪ್ರಕಟಣೆಯಾಗುತ್ತಿರುವ “ ಗಾಂಧಿಗಿರಿಯ ಫಸಲುಗಳು” ಕೃತಿಯಿಂದ ಆಯ್ದ ಲೇಖನ. ಹಾಗೂ ಆಗಸ್ಟ್ ತಿಂಗಳ “ ಒಕ್ಕಲ ಒನಪು” ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)