ಬುಧವಾರ, ಮೇ 27, 2020

ಆಹಾರ ಸಂಸ್ಕೃತಿಗೆ ಅಂಟಿದ ಜಾತಿಯತೆಯ ಜಾಡ್ಯ



ಈ ಇಪ್ಪತ್ತೊದನೆಯ ಶತಮಾನದಲ್ಲಿ ಆಧುನಿಕ ತಂತ್ರಜ್ಞಾನಗಳ ನಡುವೆ ಬದುಕುತ್ತಿರುವ ಭಾರತೀಯರಿಗೆ  ಕ್ರಿಶ್ತ ಪೂರ್ವದ ವೇದ ಉಪನಿಷತ್ತುಗಳ ಕಾಲದಲ್ಲಿ  ಅಂಟಿದ ಜಾತಿಯ ಸೊಂಕು   ಎರಡೂವರೆ ಸಾವಿರ ಕಳೆದರೂ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಇತ್ತೀಚೆಗೆ  ಸಾಮಾಜಿಕ ಜಾಲತಾಣದಲ್ಲಿ  ಬ್ರಾಹ್ಮಣ ಮಹಿಳೆಯೊಬ್ಬಳು  “ ಬ್ರಾಹ್ಮಣರಿಂದ ತಯಾರಾದ ಶುದ್ಧವಾದ ಸಾಂಬಾರ್ ಪುಡಿ” ಎಂಬ  ಶೀರ್ಷಿಕೆಯಡಿ ಹಾಕಿದ ಚಿತ್ರವು ಹಲವು ಬಗೆಯ ಹೇಳಿಕೆ, ಟೀಕೆ, ವಾದ, ಪ್ರತಿ ವಾದಕ್ಕೆ ಕಾರಣವಾಗುವುದರ ಜೊತೆಗೆ ಬ್ರಾಹ್ಣಣರ ಸಂಘಟನೆಗೆ ಪರೋಕ್ಷವಾಗಿ ಕಾರಣವಾಯಿತು. ಇಷ್ಟು ಮಾತ್ರ ಸಾಲದೆಂಬಂತೆ ಕೆಲವು ಮಹಾ ಬ್ರಾಹ್ಮಣರು  “ ಬ್ರಾಹ್ಮಣರಿಂದ ತಯಾರಾಗುವ ಆಹಾರ ಪದಾರ್ಥಗಳನ್ನು  ( ಹಪ್ಪಳ, ುಪ್ಪಿನ ಕಾಯಿ, ಸಂಡಿಗೆ, ಸಾಂಬಾರ್ ಪುಡಿ ಇತ್ಯಾದಿ) ಖರೀದಿಸುವಂತೆ ಫರ್ಮಾನು ಹೊರಡಿಸಿದರು.
ಭಾರತದ ನೆಲಮೂಲ ಸಂಸ್ಕೃತಿಯ ಬೇರು ತಿಳಿಯಲಾರದ ಮೂರ್ಖರು ಮಾತ್ರ ಇಂತಹ ಅವಿವೇಕದ ನಡೆಗಳನ್ನು ಸಮರ್ಥಿಸಿಕೊಳ್ಳಬಲ್ಲರು. ನಮ್ಮಲ್ಲಿ ಐವತ್ತು ವರ್ಷಗಳ ಹಿಂದೆ ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ,  ಐಯ್ಯಂಗಾರ್ ಬೇಕರಿ, ವೀರಶೈವರ ಖಾನಾವಳಿ ಎಂಬ ಹೆಸರಿನಲ್ಲಿ ಜಾತಿ ಸೂಚಕ ಹೊಟೇಲ್ ಮತ್ತು ಬೇಕರಿಗಳಿದ್ದುದು ನಿಜ.. ಜಾತಿಯತೆ, ಅಸ್ಪೃಶ್ಯತೆ ಜಾರಿಯಲ್ಲಿದ್ದ ಕಾಲಘಟ್ಟದಲ್ಲಿ ಇಂತಹ ವ್ಯವಸ್ಥೆಯನ್ನು ಅಂದಿನ ಸಮಾಜ ಿಪ್ಪಿಕೊಂಡಿತ್ತು.  ಈ ಆಧುನಿಕತೆಯ ಕಾಲಘಟ್ಟದಲ್ಲಿ  ಎಲ್ಲಾ ಬಗೆಯ ಗಡಿ ರೇಖೆಗಳು ಅಳಿಸುತ್ತಾ, ವಿಶ್ವವೇ ಒಂದು ಹಳ್ಳಿಯಾಗುತ್ತಿರುವಾಗ  ಗೌಡರ ಮಿಲಿಟರಿ ಹೋಟೆಲ್, ಬ್ರಾಹ್ಮಣರ ಶೂದ್ಧ ಸಸ್ಯಹಾರಿ ಫಲಹಾರ ಮಂದಿರ, ಲಿಂಗಾಯತರ ಖಾನಾವಳಿ ಎಂಬ ಹೆಸರಿಡುವುದು ನಿಜಕ್ಕೂ ಮೂರ್ಖತನದ ಪರಮಾವಧಿ.
ಭಾರತದಲ್ಲಿ ಪ್ರಾದೇಶಿಕತೆಗೆ ಅನುಗುಣವಾಗಿ ನಮ್ಮ ಆಹಾರ ಸಂಸ್ಕೃತಿ  ಇತ್ತೇ ಹೊರತು ಜಾತಿಗೆ ಅನುಗುಣವಾಗಿ ಇರಲಿಲ್ಲ. ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ  ಬಯಲುಸೀಮೆಯ ಪ್ರದೇಶಗಳಲ್ಲಿ ರಾಗಿ ಮುದ್ದೆ, ಸೊಪ್ಪಿನ ಸಾರಿನ ಊಟ  ಕೇವಲ ಒಕ್ಕಲಿಗರ ಆಹಾರವಾಗಿಲ್ಲ. ಅದರ ಮೇಲೆ ಯಾವ ಗೌಡನ ಹೆಸರನ್ನು ಛಾಪಿಸಿಲ್ಲ. ಬಯಲುಸೀಮೆಯಲ್ಲಿ ಬದುಕುವ ಒಕ್ಕಲಿಗ, ಬಣಜಿಗ, ದಲಿತರೂ ಸೇರಿದಂತೆ ಬ್ರಾಹ್ಮಣರ ಮನೆಗಳಲ್ಲಿ ಮುದ್ದೆ ಊಟ ಸಾಮಾನ್ಯವಾಗಿದೆ
.
ಇದೇ ರೀತಿಯಲ್ಲಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕದ ಜೋಳದ ರೊಟ್ಟಿ, ಫಲ್ಯ, ಶೇಂಗಾ ಚೆಟ್ನಿ, ಪುಂಡಿ ಪಲ್ಯ, ಮೊಸರು ಇಂತಹ ಆಹಾರ ಕೇವಲ ಲಿಂಗಾಯತರ ಆಹಾರ ಪದ್ಧತಿಯಾಗಿ  ಉಳಿದಿಲ್ಲ. ಅಲ್ಲಿನ ಪ್ರತಿಯೊಂದು ಜಾತಿಯ ಆಹಾರ ಸಂಸ್ಕೃತಿಯಾಗಿದೆ, ಕೆಲವು ವಿಶೇಷ ಸಿಹಿ ತಿಂಡಿಗಳು  ಆಯಾ ಊರಿನ ಜೊತೆ ಪ್ರಸಿದ್ಧಿ ಪಡೆದಿವೆಯೇ ಹೊರತು, ಜಾತಿಯ ಜೊತೆ ಅಲ್ಲ. ಧಾರವಾಡ ಪೇಡ, ಬೆಳಗಾವಿ ಕುಂದಾ, ಮೈಸೂರು ಪಾಕ್, ದಾವಣಗೆರೆಯ ಬೆಣ್ಣೆ ದೋಸೆ, , ಕರಾವಳಿಯ ಪ್ರದೇಶಗಳ ಮೀನು ಊಟ, ಹೈದರಾಬಾದ್ ಬಿರಿಯಾನಿ ಹೀಗೆ  ಈ ಆಹಾರ ಪದಾರ್ಥಗಳನ್ನು ಯಾರೂ ಬೇಕಾದರೂ ತಯಾರಿಸಬಹುದು. ಇವುಗಳನ್ನು ತಯಾರಿಸುವವರ ಜಾತಿ ಯಾವುದೆಂದು ಯಾರೂ ಈವರೆಗೆ ಪ್ರಶ್ನಿಸಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಜಾತಿಯತೆಯ ಶ್ರೇಷ್ಠತೆಯ ವ್ಯಸನ ಏಕೆ ಮೂಡಿಬಂದಿತು? ಅರ್ಥವಾಗುತ್ತಿಲ್ಲ. ಬ್ರಾಹ್ಮಣರಿಂದ ತಯಾರಾದ ಸಾಂಬಾರ್ ಪುಡಿಗೆ ಬ್ರಾಹ್ಣ್ಯದ  ಶ್ರೇಷ್ಠತೆ ಹೇಗೆ ಬಂದಿತು?  ಸಾಂಬಾರ್ ಪುಡಿಗೆ ಬಳಸಿದ ಮೆಣಸಿನಕಾಯಿ, ಮೆಣಸು, ಬೇಳೆಕಾಳು ಇತ್ಯಾಧಿಗಳನ್ನು ಬೆಳೆದವನು  ರೈತ, ಅದನ್ನು ಕುಯ್ಲು ಮಾಡಿ, ಶುದ್ದೀಕರಿಸಿದವರು ದಲಿತ ಹಾಗೂ ಹಿಂದುಳಿದ ವರ್ಗಗಳ ಕೂಲಿ ಕಾರ್ಮಿಕರು. ಅವರೆಲ್ಲಾ ತಮ್ಮ ನೆತ್ತರನ್ನು ಬೆವರಾಗಿ ಹರಿಸಿದ ಪರಿಣಾಮ ಸಾಂಬಾರು ಪದಾರ್ಥಗಳು ಬ್ರಾಹ್ಮಣರ ಕೈಗೆ ನಿಲುಕಿದವು. ನೈಜ ಸ್ಥಿತಿ ಹೀಗಿರುವಾಗ  ಇದನ್ನು ಬ್ರಾಹ್ಮಣರ ಪರಿಶುದ್ಧ ಸಾಂಬಾರ್ ಪುಡಿ  ಹೇಗೆ  ಕರೆಯುವುದು? ಸಾಂಬಾರ್ ಗೆ ಬಳಸುವ ಅಡುಗೆ ಉಪ್ಪನ್ನು ತಯಾರಿಸುವವರು ತಮಿಳುನಾಡು ಹಾಗೂ ಗುಜರಾತಿನ ಕಡಲ ತೀರದ ದಲಿತರು. ಅವರ ಬೆವರಿನ  ಶ್ರಮದ ಉತ್ಪಾದನೆಗಳ ಮೇಲೆ ಬ್ರಾಹ್ಮಣ್ಯದ ಹೆಸರು ಟಂಕಿಸುವ ಕ್ರಿಯೆಯನ್ನು ಮುಠಾಳತನ ಎನ್ನಬಹುದೇ ಹೊರತು, ಪರಮ ಶ್ರೇಷ್ಠ ಕಾರ್ಯ ಎಂದು ಕರೆಯಲಾಗದು.
.
ಭಾರತೀಯ ಸಂಸ್ಕೃತಿ ಕುರಿತು ಪುಂಖಾನು ಪುಂಖವಾಗಿ ಬೊಗಳೆ ಬಿಡುವ ಹಾಗೂ ಬ್ರಾಹ್ಮಣ್ಯದ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಮಾನಸಿಕ ರೋಗಿಗಳಿಗೆ ಈ ಚಾರಿತ್ರಿಕ ಸತ್ಯದ ಅರಿವಿರಲಿ. ಭಾರತದಲ್ಲಿ ವ್ಯಕ್ತಿಯೊಬ್ಬ ಯಾವ ಜಾತಿಗೆ ಸೇರಿರಲಿ, ಅವನು ಬದುಕಿನಲ್ಲಿ ಸೋತಾಗ ಅಥವಾ ವಿಮುಕ್ತನಾದಾಗ ಇಲ್ಲವೇ ವೈರಾಗಿಯಾದಾಗ  ಅವನಿಗೆ ಬದುಕಲು ಇದ್ದ ಏಕೈಕ ಮಾರ್ಗ ಭಿಕ್ಷಾನ್ನ ಅಥವಾ ಭಿಕ್ಷಯಾಗಿತ್ತು..  ಅವನು ಮನೆಯ ಮುಂದೆ ನಿಂತು ಕರೆದದ್ದು ಅಮ್ಮಾ ಎಂಬ ಶಬ್ದವೇ ಹೊತು ಅಯ್ಯಾ, ಅಥವಾ ಅಪ್ಪಾ ಎಂಬ ಶಬ್ದವಲ್ಲ. ಏಕೆಂದರೆ, ಭಾರತೀಯ ಸಂಸ್ಕೃತಿಯಲ್ಲಿ ಅಮ್ಮಾ ಎಂಬ ಶಬ್ದಕ್ಕೆ ಜಾತಿಯ, ಧರ್ಮದ ಸೋಂಕು ಅಂಟಿಲ್ಲ. ಭಾರತದ ಎಲ್ಲಾ ಭಾಷೆಗಳಲ್ಲಿಯೂ ಹೆತ್ತೊಡಲಿಗೆ ಅಮಾ ಎಂಬ ಹೆಸರು ಹೊರತು ಪಡಿಸಿದರೆ ಬೇರೆ ಶಬ್ದವಿಲ್ಲ ಹಾಗಾಗಿ ಯಾವೊಬ್ಬ ಭಿಕ್ಷಕನೂ ತನಗೆ ಭಿಕ್ಷೆ ನೀಡುವವರು ಯಾವ ಜಾತಿಯವರು ಎಂದು ಪ್ರಶ್ನೆ ಕೇಳುವುದಿಲ್ಲ. ಅವನ ಅನ್ನದ ಬಟ್ಟಲಿಗೆ ಆಹಾರ ಅಥವಾ ಆತನ ಹೆಗಲ ಮೇಲಿನ ಜೋಳಿಗೆಗೆ ಅಕ್ಕಿ, ಜೋಳ, ರಾಗಿ  ಹಾಕುವವಳು ಒಬ್ಬ ತಾಯಿಯಾಗಿರುತ್ತಾಳೆ.  ತಾಯಿ ಜಾತಿಯ ಸೂತಕದಿಂದ ಹೊರಗಾದವಳು. ಅದೇ ರೀತಿ ನಾವು ಸೇವಿಸುವ ಆಹಾರವು ಜಾತಿ ಮತ್ತು ಧರ್ಮದ ಸೋಂಕಿನಿಂದ ಹೊರತಾದುದು..
ಈ ನೆಲಮೂಲ ಸಂಸ್ಕೃತಿ ಕಲಿಯಲು ವ್ಯಕ್ತಿಯೊಬ್ಬನಿಗೆ  ಯಾವ ಬ್ರಾಹ್ಮಣ್ಯ ಅಥವಾ ಪಾಂಡಿತ್ಯ ಬೇಕಾಗಿಲ್ಲ. ನಾವು ಉಸಿರಾಡುವ ಗಾಳಿಗೆ, ಹರಿಯುವ ನೀರಿಗೆ ಮತ್ತು ಉರಿಯುವ  ಅಗ್ನಿಗೆ ಜಾತಿ,  ಧರ್ಮದ ಹಂಗಿಲ್ಲ ಎಂಬ ಕನಿಷ್ಠ  ಜ್ಞಾನವಿದ್ದರೆ ಸಾಕು.  ಅಂತಹವನು ಬ್ರಾಹ್ಮಣ, ಲಿಂಗಾಯುತ, ಒಕ್ಕಲಿಗೆ, ಕುರುಬ ಇತ್ಯಾದಿ  ಜಾತಿಗಳನ್ನು ಮೀರಿದ ಅಪ್ಪಟ ಮನುಷ್ಯನಾಗಿ ಬಾಳಲು ಸಾಧ್ಯವಿದೆ. ಅಂತಹ ಬದುಕನ್ನು ಬದುಕಿ ತೋರಿಸಿದ ಬುದ್ದ, ರಾಮಾನುಜ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ನಮಗೆ ಇಂದಿಗೂ ಮಾದರಿಯಾಗಿದ್ದಾರೆ.

ಮಂಗಳವಾರ, ಮೇ 5, 2020

ಮೋದಿ ಎಕನಾಮಿಕ್ಸ್



ಖಾಲಿ ತಲೆ ಹಾಗೂ ಮಾತುಗಳನ್ನು ಬಂಡವಾಳವಾಗಿಸಿಕೊಂಡ ಒಬ್ಬ ವ್ಯಕ್ತಿ ದೇಶದ ಆಡಳಿತದ ಚುಕ್ಕಾಣಿ ಹಿಡಿದರೆ. ಆರ್ಥಿಕತೆ ಹೇಗೆ ತಳಹಿಡಿಯಬಹುದು ಎಂಬುದಕ್ಕೆ ವರ್ತಮಾನದ ಭಾರತ ಈಗ ಸಾಕ್ಷಿಯಾಗಿದೆ.
ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆ, ಓಡಿ ಹೋದವರನ್ನು ಹಿಡಿದು ತರುತ್ತೇನೆ ಎಂಬ ಅಫೀಮಿಗೆ ಸಮನಾದ ಮಾತುಗಳನ್ನು ಆಡುತ್ತಾ, ಭಕ್ತರನ್ನು ಸದಾ ಅಮಲಿನಲ್ಲಿ ಇಡುವ ಕ್ರಿಯೆಯಲ್ಲಿ ತೊಡಗಿರುವ ಪ್ರಧಾನಿ ಮೋದಿಗೆ ಶತಮಾನದಲ್ಲಿ ಭಾರತದ ಆರ್ಥಿಕತೆ ಅರ್ಥವಾಗುವ ಸಂಭವ ಕಡಿಮೆ.
ನೋಟು ನಿಷೇದದ ಪ್ರಕರಣ ಮತ್ತು ಕೊರನಾ ಪ್ರಯುಕ್ತ ದಿಢೀರನೆ ತೆಗೆದುಕೊಂಡ ತೀರ್ಮಾನದಿಂದ ದುಡಿಯುವ ವರ್ಗವನ್ನು ಕತ್ತಲೆಗೆ ನೂಕಿದ ಘಟನೆ ಎರಡೂ ಸಂಗತಿಗಳು ಭಾರತದ ಆರ್ಥಿಕತೆ ಮತ್ತು ಬೆಳವಣಿಗೆಯನ್ನು ಎರಡು ದಶಕಗಳ ಹಿಂದಕ್ಕೆ ನೂಕಿವೆ.
ಇದೀಗ ೬೮ ಸಾವಿರ ಕೋಟಿ ಹಿಂತಿರುಗಿ ಬರಲಾಗದ ಸಾಲವನ್ನು ಚುಕ್ತಮಾಡಲಾಗಿದೆ. ಇದೆಲ್ಲವೂ ಕಳ್ಳ ಕೈಗಾರಿಕೋದ್ಯಮಿಗಳ ಸಾಲವಾಗಿರುವುದು ವಿಶೇಷ. ಇದರಲ್ಲಿ ಬಾಬಾ ರಾಮ್ದೇವ್ ಇತ್ತೀಚೆಗೆ ವಶಪಡಿಸಿಕೊಂಡಿರುವ ರುಚಿಅಂಡ್ ಸೋಯಾ ಕಂಪನಿಯ .೨೦೦ ಕೋಟಿ ಸಾಲವೂ ಸೇರಿದೆ. ಬಾಬಾ ರಾಮ್ ದೇವ್ ನೇತೃತ್ವದ ಪತಾಂಜಲಿ ಕಂಪನಿ ಕಳೆದ ವರ್ಷ .೫೦೦ ಕೋಟಿ ಲಾಭ ಗಳಿಸಿದೆ.
Loan waive ಅಂದರೆ ಸಾಲಮನ್ನಾ ಬೇರೆ, Loan Write off ಅಂದರೆ, ಸಾಲದ ಲೆಕ್ಕ ಪತ್ರದಿಂದ ಅಮಾನತ್ತುಗೊಳಿಸುವ ಕ್ರಿಯೆ ಬೇರೆ. ಎಂದು ಭಕ್ತರು ವಾದಿಸುವುದುಂಟು.
ಇದು ಅಳಿಯ ಅಲ್ಲ, ಮಗಳ ಗಂಡ ಎಂದಂತೆ. ಇಲ್ಲಿ ಸಾಲ ಮನ್ನಾ ಎದ್ದು ಕಾಣದಿದ್ದರೂ, ಅನುತ್ಪಾದಕ ಆಸ್ತಿ ಎಂದು ಕರೆಯಲಾಗುವ ವಸೂಲಿಯಾಗದ ಸಾಲವನ್ನು ವಾರ್ಷಿಕ ಲೆಕ್ಕ ಪತ್ರದಿಂದ ಹೊರಗಿಡಲಾಗುತ್ತದೆ. ರೀತಿಯಲ್ಲಿ ೨೦೧೪ ರಿಂದ ಇಲ್ಲಿಯವರೆ ಅಂದರೆ, ಮೋದಿ ಆಡಳಿತದಲ್ಲಿ ಒಟ್ಟು ಲಕ್ಷದ ೨೦ ಸಾವಿರ ಕೋಟಿ ಸಾಲದ ಹಣವನ್ನು ಲೆಕ್ಕ ಪತ್ರದಿಂದ ಅಳಿಸಿಹಾಕಿ ಅಮಾನತ್ತಿನಲ್ಲಿ ಇಡಲಾಗಿದೆ.
ಕಳೆದ ವರ್ಷ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಮಾಹಿತಿ ಹಕ್ಕಿನಡಿ ಅರ್ಜಿಸಲ್ಲಿಸಿದಾಗ ರಿಸರ್ವ್ ಬ್ಯಾಂಕ್ ಒಟ್ಟು ಲಕ್ಷದ ೫೫ ಸಾವಿರ ಕೋಟಿ ಸಾಲವನ್ನು ಅಮಾನತ್ತಿನಲ್ಲಿ ಇಡಲಾಗಿದೆ ಎಂದು ತಿಳಿಸಿತ್ತು.ಜೊತೆಗೆ ೨೦೧೮-೧೯
ಸಾಲಿನಲ್ಲಿ ೨ಲಕ್ಷದ ೫೦ ಸಾವಿರ ಹಣವನ್ನು ಮನ್ನಾ ಅಂದರೆ ಅಮಾನತ್ತು ಮಾಡಿರುವುದಾಗಿ ತಿಳಿಸಿತ್ತು.
ಇಲ್ಲಿ ಅಮಾನತ್ತು ಅಥವಾ Loan Write Off ಎಂದರೆ, ಸಾಲವನ್ನ ಬ್ಯಾಂಕುಗಳು ತಮ್ಮ ವಾರ್ಷಿಕ ವರದಿಯಲ್ಲಿ ತೋರಿಸುವುದಿಲ್ಲ. ಇದರಿಂದಾಗಿ ಅವುಗಳು ಹಿಂತಿರುಗಿ ಬರಲಾಗದ ಸಾಲ ನಮ್ಮ ಬ್ಯಾಂಕ್ ನಲ್ಲಿ ಕಡಿಮೆ ಎಂದು ವಾರ್ಷಿಕ ವರದಿಯಲ್ಲಿ ತೋರಿಸಿಕೊಳ್ಳುತ್ತವೆ.
ಸುಸ್ತಿದಾರರಿಂದ ಹಣ ವಸೂಲಿ ಮಾಡುತ್ತೇವೆ ಎಂದು ಹೇಳುತ್ತಾ ಹೋಗುತ್ತವೆ. ಅವರ ಸಾವಿನ ನಂತರ ಮನ್ನಾ ಮಾಡುತ್ತವೆ.
ಇದು ವಂಚನೆಗಾಗಿ ಮತ್ತು ಜನಸಾಮಾನ್ಯರನ್ನು ಮರಳು ಮಾಡುವುದಕ್ಕೆ ಕಂಡುಕೊಂಡ ಹೊಸ ವಿಧಾನ.
ವಿಶ್ವ ಬ್ಯಾಂಕ್ ಸಮೀಕ್ಷೆಯ ಪ್ರಕಾರ ೨೦೦೮ ರಲ್ಲಿ ಭಾರತದ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿ ಶೇಕಡ. ರಷ್ಟಿತ್ತು. ೨೦೧೯ ರಲ್ಲಿ ಪ್ರಮಾಣ ಶೇಕಡ . ರಷ್ಟಿದೆ. ಇದು ತೀರಾ ಅಪಾಯಕಾರಿ ಸಂಗತಿ ಎಂದು ಎಚ್ಚರಿಸಿದೆ.
ಬ್ಯಾಂಕಿಂಗ್ ಪರಿಭಾಷೆಯಲ್ಲಿ ವಿಂಡೋ ಡ್ರೆಸ್ಸಿಂಗ್ ಎಂಬ ಶಬ್ದವಿದೆ. ಅಂದರೆ ಕಿಟಿಯಲ್ಲಿ ಕಾಣುವ ದೇಹವನ್ನು ಮಾತ್ರ ಶೃಂಗಾರ ಮಾಡುವುದು ಎಂದರ್ಥ.
ನಿಮಗೆಲ್ಲಾ ತಿಳಿದಿರುವಂತೆ ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಲ್ಲಿ ಬ್ಯಾಂಕುಗಳು ನಮ್ಮ ಖಾತೆಯಲ್ಲಿ ಇರುವ ಹಣವನ್ನು ತೆಗೆಯದಂತೆ ಮನವೊಲಿಸುತ್ತವೆ. ಜೊತೆಗೆ ವ್ಯಾಪಾರಸ್ಥರಿಂದ ಎರಡು ದಿನದ ಮಟ್ಟಿಗೆ ಅವರ ಖಾತೆಯಲ್ಲಿ ಅಪಾರ ಪ್ರಮಾಣದ ಹಣ ಇರುವಂತೆ ನೋಡಿಕೊಳ್ಳುತ್ತವೆ.
ಏಕೆಂದರೆ, ವಾರ್ಷಿಕ ಲೆಕ್ಕ ಪತ್ರ ದಲ್ಲಿ ಮಾರ್ಚ್ ೩೦ ಕ್ಕೆ ಕೊನೆಗೊಂಡ ಲೆಕ್ಕ ಪತ್ರದ ಪ್ರಕಾರ ನೀಡಿರುವ ಸಾಲದ ಪ್ರಮಾಣದ ಹತ್ತು ಪಟ್ಟು ಹೆಚ್ಚು ಹಣ ಠೇವಣಿ ರೂಪದಲ್ಲಿ ಬ್ಯಾಂಕಿನಲ್ಲಿದೆ ಎಂದು ತೋರಿಸುವ ಹುನ್ನಾರ ತಂತ್ರದಲ್ಲಿ ಅಡಗಿದೆ.
ಇಂತಹ ಸೂಕ್ಷ್ಮ ಸಂಗತಿಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಇನ್ನೂ ದೇಶಭಕ್ತರಿಗೆ ಅವರ ಜನ್ಮದಲ್ಲಿ ಅರ್ಥವಾಗುವುದಿಲ್ಲ.
ಭಾರತಕ್ಕೆ ಆವರಿಸುವ ಕೊರನಾ ಖಾಯಿಲೆಯಿಂದ ಆರ್ಥಿಕತೆಗೆ ಈಗ ಬಿದ್ದಿರುವ ಹೊಡೆತ ನನ್ನ ದೃಷ್ಟಿಯಲ್ಲಿ ತೀರಾ ಕಡಿಮೆ. ಮುಂದೈತೆ ಮಾರಿ ಹಬ್ಬ. ಕೊರನಾ ಸಮಸ್ಯೆಯ ನಂತರದ ಭಾರತದ ಆರ್ಥಿಕತೆ‌‌ ಸುಧಾರಿಸಲು ಕನಿಷ್ಟ ಇಪ್ಪತ್ತು ವರ್ಷ ಬೇಕಾಗಬಹುದು.
ಕೊನೆಯ ಮಾತು - ಕಳೆದ ಒಂದು ದಶಕದಲ್ಲಿ ಒಟ್ಟು ಎಂಟು ಲಕ್ಷ ಕೋಟಿ ಅನುತ್ಪಾದಕ ಸಾಲವನ್ನು ಭಾರತದಲ್ಲಿ ಅಮಾನತ್ತು ಮಾಡಲಾಗಿದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಸಹ ಒಟ್ಟು ಒಂದು ಲಕ್ಷದ ಎಂಬತ್ತು ಸಾವಿರ ಕೋಟಿ ಹಣವನ್ನು ಚುಕ್ತಾ ಮಾಡಿದೆ. ಹಣ ವಸೂಲಿಯಾಗುವ ಅಥವಾ ವಾಪಸ್ ಬರುವ ಸಂಭವವಿಲ್ಲ.
ಸ್ಮಶಾನಕ್ಕೆ ಹೋದ ಹೆಣ ಮತ್ತು ತಿರುಪತಿ ಹುಂಡಿಗೆ ಹಾಕಿದ ಹಣ ವಾಪಸ್ ಬರುವುದುಂಟೆ?