Thursday, 4 August 2016

ಸಾವನ್ನು ಸಂಭ್ರಮಿಸುವ ಸಂಸ್ಕೃತಿ ನಮ್ಮದಲ್ಲ


ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಹಾಗೂ ಅವರ ವೈಯಕ್ತಿಕ ಚಾರಿತ್ರ್ಯವನ್ನು ಹತ್ತಿರದಿಂದ ಬಲ್ಲ ನನಗೆ ಅವರು ತೀರಾ ಪರಿಚಿತರೇನಲ್ಲ. ಆದರೆ ಎದುರು ಸಿಕ್ಕಾಗ ಗುರುತು ಹಿಡಿದು ಮಾತನಾಡಿಸುವಷ್ಟು ಸಂಬಂಧ ಮಾತ್ರ ಈಗಲೂ ಉಳಿದಿದೆ. ನನ್ನೂರಿನ ಬಾಲ್ಯದ ಸಹಪಾಠಿ ಮತ್ತು ಸಂಬಂಧದಲ್ಲಿ ಸೋದರತ್ತೆಯ ಮಗನಾಗಿರುವ ಹಾಗೂ ಮೈಸೂರು ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಎರಡನೆಯ ಬಾರಿ ಆಯ್ಕೆಯಾಗಿರುವ ಕೆ.ಟಿ.ಶ್ರೀಕಂಠೇಗೌಡನ ಮೂಲಕ 23 ವರ್ಷಗಳ ಹಿಂದೆ ನನಗೆ ಅವರು ಪರಿಚಿತರಾದವರು. ತಮ್ಮ ರಾಜಕೀಯ ಬದುಕಿನಲ್ಲಿ ಸೈದ್ಧಾಂತಿಕ ಅಥವಾ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಎಂದಿಗೂ ವೈಯಕ್ತಿಕ ದ್ವೇಷಕ್ಕೆ ಇಳಿಸದೆ, ಅಪ್ಪಟ ನೆಲಮೂಲ ಸಂಸ್ಕೃತಿಯ ವಾರಸುದಾರನಂತೆ ಬದುಕಿದ ಹಳ್ಳಿಗಾಡಿನ ವ್ಯಕ್ತಿತ್ವದ ಮನುಷ್ಯ. ಸಿದ್ಧರಾಮಯ್ಯ ಇದರಲ್ಲಿ ಎರಡು ಮಾತಿಲ್ಲ. ಅವರ ಆಡಳಿತದ ಅನೇಕ ವೈಫಲ್ಯಗಳ ನಡುವೆಯೂ ನಾನು ವೈಯಕ್ತಿಕ ನೆಲೆಯಲ್ಲಿ ಗೌರವಿಸುವ ಕರ್ನಾಟಕದ ರಾಜಕಾರಣಿಗಳಲ್ಲಿ ಅವರೂ ಒಬ್ಬರು.
ಕಳೆದ ಸೋಮವಾರ  ರಾತ್ರಿ 8 ಗಂಟೆಯಿಂದ 8-15 ನಡುವೆ ಕನ್ನಡದ ಸುದ್ಧಿ ಛಾನಲ್ ಗಳಲ್ಲಿ ಅವರ ಪುತ್ರನ ಅಂತ್ಯ ಕ್ರಿಯೆಯ ಕೊನೆಯ ದೃಶ್ಯಗಳನ್ನು ನೋಡುತ್ತಿದ್ದೆ. ಅವರ ಪುತ್ರ ರಾಕೇಶ್ ನಿಧನದಿಂದಾಗಿ ಅವರು ಅನುಭವಿಸಿದ ಸಂಕಟ ಮತ್ತು ಯಾತನೆಗಳು ಹಾಗೂ ಸಾವಿನ ಸಂದರ್ಭದಲ್ಲಿ  ನಮ್ಮ ವಿರೋಧ ಪಕ್ಷಗಳ ನಾಯಕರು ತಮ್ಮ ಭಿನ್ನಾಭಿಪ್ರಾಯಗಳೆಲ್ಲವನ್ನು ಮರೆತು ಘನತೆಯಿಂದ ನಡೆದುಕೊಳ್ಳುತ್ತಾ ಸಿದ್ದರಾಮಯ್ಯನವರನ್ನು ಸಂತೈಸಿದ ಪರಿ ನಿಜಕ್ಕೂ ನನ್ನನ್ನು ಕ್ಷಣ ಕಾಲ ಅಲುಗಾಡಿಸಿದವು, ಕೆಲವು ಕ್ಷಣ ಕಣ್ಣುಗಳು ಒದ್ದೆಯಾದವು..
ಸಚಿವ ಸಂಪುಟದ ಸಹೋದ್ಯೋಗಿ ಡಿ.ಕೆ. ಶಿವಕುಮಾರ್  ಅವರ ಎದೆಯ ಮೇಲೆ ಮುಖವಿಟ್ಟು ಕಣ್ಣೀರು ಹಾಕಿದ್ದು, ಜಿ,ಪರಮೇಶ್ವರ್ ಸಿದ್ಧರಾಮಯ್ಯನವರನ್ನು ಸಂತೈಸಲು ಮಾತುಗಳು ಸಿಗದೆ, ತಲೆ ಬಗ್ಗಿಸಿ ಅವರ ಬಳಿ ನಿಂತು ಪರದಾಡಿದ್ದು  ಹೀಗೆ ಒಂದೇ? ಎರಡೇ? ಎಲ್ಲಾ ದೃಶ್ಯಗಳು ಮನಸ್ಸನ್ನು ಕಲಕುವಂತಿದ್ದವು. ಇವುಗಳ ಜೊತೆಗೆ  ಬಿ.ಜೆ.ಪಿ. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದಗೌಡರು ಸಿದ್ಧರಾಮಯ್ಯನವರನ್ನು ಕೊರಳು ತಬ್ಬಿಕೊಂಡು ಸಂತೈಸಿದ ಪರಿ ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು.   ಇತ್ತೀಚೆಗೆ ತಾನೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಪರಸ್ವರ  ಕಿತ್ತಾಡಿಕೊಂಡು ಕೆಸರು ಎರೆಚಿಕೊಂಡು ಹರಿ ಹಾಯ್ದಿದ್ದ ಕೆ.ಎಸ್. ಈಶ್ವರಪ್ಪ, ಹೆಚ್.ಡಿ. ಕುಮಾರಸ್ವಾಮಿ ಮುಂತಾದವರು ಹಳೆಯದನ್ನೆಲ್ಲಾ ಮರೆತು ಹಿರಿಯಣ್ಣನ ದುಃಖದಲ್ಲಿ ಪಾಲ್ಗೊಳ್ಳುವುದು ನಮ್ಮ ನೈತಿಕ ಕರ್ತವ್ಯ ಎಂಬಂತೆ ಭಾಗವಹಿಸಿದ್ದನ್ನು ನೋಡಿದಾಗ ನೆಲದಲ್ಲಿ ಮನುಷ್ಯ ಸಂಸ್ಕೃತಿ ಎನ್ನುವುದು ಇನ್ನೂ ಜೀವಂತವಾಗಿದೆ ಎಂದು ಮನಸ್ಸಿಗೆ ಸಮಧಾನವಾಯಿತು. ಇದರ ಜೊತೆಗೆ ಬರೋಬ್ಬರಿ ನಲವತ್ತು ವರ್ಷಗಳ ಹಿಂದೆ ಅಂದರೆ 1976 ರಲ್ಲಿ ನಾನು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿದ್ದಾಗ ನನಗೆ ಪಠ್ಯವಾಗಿದ್ದ ರನ್ನನ ಗಧಾಯುದ್ಧ ಹಳೆಗನ್ನಡ ಕಾವ್ಯದದುರ್ಯೋಧನನ ವಿಲಾಪಂಭಾಗವುನೆನಪಾಯಿತು. ಆ ಕಾವ್ಯದ ಪಠ್ಯ ಹೀಗಿದೆ.

ಕುರುಕ್ಷೇತ್ರದ ಯುದ್ಧದಲ್ಲಿ ಪಾಂಡವರ. ವಿರುದ್ಧ ತನ್ನವರೆನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾದ ದುರ್ಯೋಧನನು ಅಂತಿಮವಾಗಿ ತನ್ನ ಕಣ್ಣೀರಿನಲ್ಲಿ ತಾನೇ ಸ್ವತಃ ಸೈನ್ಯಾಧಿಕಾರಿಯ ಪಟ್ಟವನ್ನು ಕಟ್ಟಿಕೊಂಡು ಯುದ್ಧರಂಗವನ್ನು ಪ್ರವೇಶ ಮಾಡುತ್ತಾನೆ. ಸ್ಮಶಾನ ಸದೃಶ್ಯವಾದ ರಣರಂಗದಲ್ಲಿ ತನ್ನ ಒಡಹುಟ್ಟಿದ ಸಹೋದರ ದುಶ್ಯಾಶನ, ತನ್ನೊಡಲ ಕುಡಿಯಾಗಿ ಜನಿಸಿದ ಪುತ್ರ ಲಕ್ಷಣಕುಮಾರನ ಶವ,  ಅವನ ಪಕ್ಕದಲ್ಲಿ ಪಾಂಡವರ ಪ್ರೀತಿಯ ಪುತ್ರನಾಗಿ ಜನಿಸಿ ಕುರುಕ್ರೇತ್ರದಲ್ಲಿ ಏಕಾಂಗಿಯಾಗಿ ಚಕ್ರವ್ಯೂಹವನ್ನು ಬೇಧಿಸಿ ಕೌರವ ಸೇನೆಯಿಂದ ವೀರ ಮರಣವನ್ನಪ್ಪಿದ  ಅಭಿಮನ್ಯು ಹೀಗೆ ಎಲ್ಲರೂ ಮರಣ ಹೊಂದಿ ಸಾಲಾಗಿ ಮಲಗಿರುತ್ತಾರೆ. ಮೊದಲು ತನ್ನ ಸಹೋದರ ದುಶ್ಯಾಸನ ಶವದ ಬಳಿ ತರಳುವ ದುರ್ಯೋಧನ, ತನಗೆ  ಜೀವನಪೂರ್ತಿ ನಿಷ್ಟೆಯಿಂದ ಇದ್ದು  ಪ್ರಾಣ ಬಿಟ್ಟ ತಮ್ಮನ ವ್ಯಕ್ತಿತ್ವವನ್ನು ಗುಣಗಾನವನ್ನು ಮಾಡುತ್ತಾನೆ. ಆನಂತರ ತನ್ನ ಪುತ್ರ ಲಕ್ಷಣ ಕುಮಾರನ ಬಳಿ ತೆರಳಿ ಅವನ ಮೃತ ದೇಹವನ್ನು ತನ್ನ ತೊಡೆಯ ಮೇಲಿರಿಸಿಕೊಂಡು. “ಅಯ್ಯೋ ಮಗನೆ, ಪುತ್ರನು ತಂದೆ ಮರಣ ಹೊಂದಿದಾಗ ಉತ್ತರ ಕ್ರಿಯಾದಿ ಮಾಡುವುದು ಸಂಪ್ರದಾಯ, ಆದರೆ ನೀನು  ಈ ಕ್ರಿಯೆಯನ್ನು ನನಗೆ ಮಾಡುವ ಸಂಕಷ್ಟವನ್ನು ತಂದಿತ್ತೆಯಲ್ಲಾಎಂದು ಗೋಳಾಡುತ್ತಾನೆ.ನಿಧಾನವಾಗಿ ಚೇತರಿಸಿಕೊಳ್ಳುವ ದುರ್ಯೋಧನನು ನಂತರ ತಾನೇ ಸ್ವತಃ ನಿಂತು ಚಕ್ರವ್ಯೂಹದಲ್ಲಿ ಕೊಲ್ಲಿಸಿದ ಅಭಿಮನ್ಯು ಶವದ ಬಳಿ ಹೋಗಿ  ಆಡುವ ಒಂದೊಂದು ಮಾತು ರನ್ನನು ತನ್ನ ಕಾವ್ಯದಲ್ಲಿ  ಸೃಜನಶೀಲತೆಯ ಪರಾಕಾಷ್ಟೆಯನ್ನು ಮುಟ್ಟಿದ್ದಾನೆ ಎಂದು ಹೇಳಬಹುದು. ಅಭಿಮನ್ಯುವಿನ ಶೌರ್ಯ ಮತ್ತು ಸಾಹಸವನ್ನು ಯಾವುದೇ ಮುಚ್ಚು ಮರೆಯಿಲ್ಲದೆ ತೆರದ ಹೃದಯದಿಂದ ಬಣ್ಣಿಸುವ ಕೌರವ ಸಾರ್ವಭೌಮನು,. ಅಭಿಮನ್ಯುವಿನ ಕಳೇಬರದ ಪಾದದ ಬಳಿ ನಿಂತುಅಭಿಮನ್ಯು ನೀನು ಆ ದಿನ ರಣರಂಗದಲ್ಲಿ  ಚಕ್ರವ್ಯೂಹವನ್ನು ಬೇಧಿಸಿದ ಕ್ಷಣದಲ್ಲಿ ನಿನಗಿದ್ದ  ಆ ಧೈರ್ಯದ ಒಂದು ಅಣುವಿನಷ್ಟು ಧೈರ್ಯವು ಕ್ಷಣದಲ್ಲಿ ನನಗೆ ಬರಲಿ ಕಂದಾ ಎಂದು ಪ್ರಾರ್ಥಿಸುತ್ತಾನೆ.
ದಿನ ಸಂಜೆ ಸಿದ್ಧರಾಮಯ್ಯನವರನ್ನು ನೋಡುತ್ತಿದ್ದಾಗ ತನ್ನ ಪುತ್ರ ಲಕ್ಷಣಕುಮಾರನ ಶವದ ಮುಂದೆ ನಿಂತು ಕಣ್ಣೀರು ಹಾಕಿದ ದುರಂತ ನಾಯಕ ದುರ್ಯೋಧನನು ನೆನಪಾದನು.. ಅದೇ ರೀತಿ ವಿರೋಧ ಪಕ್ಷದ ನಾಯಕರನ್ನು ಗಮನಿಸಿದಾಗ ಶತೃಪಾಳೆಯದ ವೀರ ಎಂಬುದನ್ನು ಮರೆತು ಅಭಿಮನ್ಯುವನ್ನು ಗುಣಗಾನ ಮಾಡಿದ ಮಾನವೀಯ ಮುಖವುಳ್ಳ ಮತ್ತೊಬ್ಬ ದುರ್ಯೋಧನ ಸಹ ನೆನಪಾದನು.. ಇದೇ ಅಲ್ಲವೆ? ನಿಜವಾದ ನಮ್ಮ ನೆಲದ ಸಂಸ್ಕೃತಿ?  ನಮ್ಮ ಗ್ರಾಮೀಣ ಬದುಕಿನ ಜನಪದರು ಎಂದೂ ಸಾವಿನ ಸಂದರ್ಭದಲ್ಲಿ ಹಗೆತನವನ್ನು ಸಾಧಿಸಲಿಲ್ಲ. ಸಾವಿನಲ್ಲಿ ಸಂಬ್ರಮಿಸಬಾರದು ಮತ್ತು ಶತೃವಿನ ಸೋಲನ್ನು ಅಪಮಾನಿಸಿದೆ ಕರುಣೆಯ ಕಣ್ಣಲ್ಲಿ ನೋಡಬೇಕು ಎಂಬ ವಿವೇಕ ನಮ್ಮ ಜನಪದರು ನಮ್ಮಗಳ ಎದೆಗೆ ದಾಟಿಸಿ ಹೋಗಿದ್ದಾರೆ. ಏಕೆಂದರೆ, ಅವರೆಲ್ಲಾ ಅನಕ್ಷರತೆ, ಅಜ್ಞಾನಗಳ ನಡುವೆಯೂ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಅಣ್ಣ ತಮ್ಮಂದಿರಂತೆ ಬದುಕಿದ್ದರು. ನೆರೆಮನೆಯ ಒಲೆಯ ಕೆಂಡವನ್ನು, ತಮ್ಮ ಮನೆಯ ಅನ್ನ ಇಲ್ಲವೆ ಮುದ್ದೆಗೆ ಸಾರನ್ನು ಹಂಚಿಕೊಂಡು ಬದುಕಿ ಬಾಳಿದವರು.
ಒಂದು ಗ್ರಾಮದ ಒಂದು ಕುಟುಂಬದ ಸದಸ್ಯನ ಸಾವು ಕೇವಲ ಕುಟುಂಬವೊಂದರ ಸಾವಾಗಿರದೆ, ಇಡೀ ಊರಿನ ಸಾವು ಎಂಬಂತೆ ತೋರುತ್ತಿತ್ತು. ಸಾವಿನ ಮನೆಯ ಕುಟುಂಬದವರಿಗೆ  ಬಿಸಿ ನೀರು ಕಾಯಿಸಿ ಸ್ನಾನ ಮಾಡಿಸುವುದರಿಂದ ಹಿಡಿದು ಅವರಿಗೆ ಅಡುಗೆ ಮಾಡಿ ಬಡಿಸುವ ಸಂಪ್ರದಾಯ ಈಗಲೂ ನಮ್ಮ ಗ್ರಾಮಗಳಲ್ಲಿ ಉಳಿದುಕೊಂಡಿದೆ. ಈ ಕಾರಣಕ್ಕಾಗಿ ದಶಕಗಳಿಂದ ಮುನಿಸಿಕೊಂಡಿದ್ದ ಹಾಗೂ ಒಂದು ಕಾಲದಲ್ಲಿ ಸಿದ್ಧರಾಮಯ್ಯನವರ ನಾಯಕರಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು ತಮ್ಮ ಹಳೆಯ ಕಹಿ ನೆನಪುಗಳನ್ನು ಮರೆತು ಸಿದ್ಧರಾಮಯ್ಯನವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿಬಂದರು. ಇದು ಇಂದಿನ ಕೂಗು ಮಾರಿ ಸಂಸ್ಕೃತಿಯ ಜಗತ್ತಿಗೆ ಅತ್ಯಾವಶ್ಯಕವಷ್ಟೇ ಅಲ್ಲದೆ ಮಾದರಿಯಾಗಿದೆ. ಏಕೆಂದರೆ, ಅಪಘಾತ ಅಥವಾ ಇನ್ನಿತರೆ ದುರಂತ ಘಟನೆಗಳಲ್ಲಿ ಗಾಯಗೊಂಡು, ಸಹಾಯಕ್ಕೆ ಅಂಗಲಾಚುವ ವ್ಯಕ್ತಿಗಳ ನೆರವಿಗೆ ಧಾವಿಸುವ ಬದಲು ಅವರ ಧಾರುಣ ಸ್ಥಿತಿಯನ್ನು ಮೊಬೈಲ್ ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮನುಷ್ಯರೆಂಬ  ಮೃಗಗಳನ್ನು ನಾವೀಗ ಕಾಣುತ್ತಿದ್ದೇವೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪುತ್ರ ರಾಖೇಶ್ ಸಾವಿನಲ್ಲೂ ಇಂತಹದ್ದೇ ವಿಕೃತಿ ಸಾಮಾಜಿಕ ತಾಣಗಳಲ್ಲಿ  ಕಾಣಿಸಿಕೊಂಡಿತು. ಕೆಲವು ಅವಿವೇಕಿಗಳು ಸಿದ್ಧರಾಮಯ್ಯನವರಿಗೆ ದೇವರು ತಕ್ಕ ಪಾಠ ಕಲಿಸಿದ ಎಂದು ವಿಷ ಕಕ್ಕುತ್ತಾ ಸಂಭ್ರಮಿಸಿದರು. ಮತ್ತೆ ಕೆಲವರು ಯಾರೋ ಒಬ್ಬ ಗೋವಾದ ಉದ್ಯಮಿ ತನ್ನ ನೌಕರರನ್ನು ಬೂಟುಗಾಲಿನಿಂದ ಥಳಿಸಿ, ಜೈಲುಪಾಲಾದ ಘಟನೆಯ ಚಿತ್ರಗಳಲ್ಲಿ ಥಳಿಸುತ್ತಿರುವ ವ್ಯಕ್ತಿ ರಾಖೇಶ್ ಎಂಬಂತೆ ಬಿಂಬಿಸಿ ವಿಕೃತವಾದ ಆನಂದವನ್ನು ಅನುಭವಿಸಿದರು. ಇದರಲ್ಲಿ ಭಾರತೀಯ ಸಂಸ್ಕೃತಿಯ ಪರಮ ಪ್ರತಿ ಪಾದಕರು ಎನ್ನುವ ಹಾಗೂ ನನ್ನಂತಹವನ ಪಾಲಿಗೆ    ಸಗಣಿ ಹುಳುಗಳಂತೆ ಕಾಣುವ ವ್ಯಕ್ತಿ ಪಾತ್ರ ಗಮನಾರ್ಹವಾಗಿತ್ತು. ಆದರೆ ಒಂದು ಸತ್ಯ ಸಂಗತಿಯನ್ನು ಈ ಅವಿವೇಕಿಗಳು ಅರಿಯುವ ಅಗತ್ಯವಿದೆ.  ಭೂಮಿಗೆ ಬಿದ್ದ ಜಾನುವಾರುಗಳ ಸಗಣಿಯು  ಬಿಸಿಲಿಗೆ ಒಣಗುತ್ತಿದ್ದಂತೆ ಅದರೊಳಗಿನ ಸಗಣಿ ಹುಳುಗಳ ಸಹ ಸಾವನ್ನಪ್ಪತ್ತವೆ.. ಮನುಷ್ಯನ ಆಯಸ್ಸು ಮತ್ತು ವಿಕೃತಿಯ ಮನಸ್ಸು ಇವೆರೆಡರ ಮಿತಿಯನ್ನು ಅರಿತು ಘನತೆಯಿಂದ ಸಮಾಜದಲ್ಲಿ  ಬದುಕುವುದನ್ನು ಇಂತಹವರು ಕಲಿಯುವುದು ಅಗತ್ಯವಾಗಿದೆ.