Sunday, 20 March 2016

ಕೊಂಡಪಲ್ಲಿ ಸೀತಾರಾಮಯ್ಯನವರ ಪತ್ನಿಯ ಆತ್ಮಕಥೆ


ಮಾವೋವಾದಿ ನಕ್ಸಲ್ ಸಂಘಟನೆಯ ನಾಯಕನಾಗಿ ಆಂಧ್ರದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟು ಹಾಕಿ ಆಳುವ ಸರ್ಕಾರಗಳಿಗೆ ದುಸ್ವಪ್ನದಂತೆ ಬದುಕಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಪತ್ನಿ ಕೋಟೇಶ್ವರಮ್ಮನವರ ಆತ್ಮ ಕಥೆ “ ದ ಶಾರ್ಪ್ ನೀಪ್ ಆಫ್ ಮೆಮೋರಿ” ಕೃತಿಯನ್ನು ಓದುತ್ತಿದ್ದೆ. 1920 ರ ದಶಕದಲ್ಲಿ ಕೃಷ್ಣ ಜಿಲ್ಲೆಯ ಶ್ರೀಮಂತ ಕುಟುಂಬದಲ್ಲಿ ಜನಿಸಿ, ನಾಲ್ಕನೆಯ ವಯಸ್ಸಿಗೆ ಬಾಲ್ಯ ವಿವಾಹವಾಗಿ ಆರನೇ ವಯಸ್ಸಿಗೆ ವಿಧವೆಯಾಗಿ ವಿದ್ಯಾಭ್ಯಾಸ ಮುಂದುವರಿಸಿದ ಕೋಟೇಶ್ವರಮ್ಮ 1930 ರಲ್ಲಿ ಉತ್ತರ ಆಂಧ್ರದ ಗೋದಾವರಿ ಪ್ರದೇಶಕ್ಕೆ ಗಾಂಧೀಜಿ ಬೇಟಿ ನೀಡಿದಾಗ ಮೈ ಮೇಲಿದ್ದ ಒಡವೆಗಳನ್ನು ಗಾಂಧೀಜಿಯವರ ಹರಿಜನ ನಿಧಿಗೆ ನೀಡಿ, ಚರಕವನ್ನು ಕೈಗೆತ್ತಿಕೊಂಡವರು.ಆ ನಂತರ ಪ್ರಗತಿ ಪರ ಬರಹಗಾರಗಾರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರಯತ್ನದಿಂದಾಗಿ ತಮ್ಮ ಹರೆಯದ ದಿನಗಳಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ಕೈ ಹಿಡಿದು, ಆದಿವಾಸಿಗಳು, ಹರಿಜನರು, ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳಿಗೆ ಹೋರಾಡುತ್ತಾ, ಸೀತಾರಾಮಯ್ಯನವರ ಜೊತೆಯಲ್ಲಿ ಕಾಡು ಮೇಡು ಅಲೆಯುತ್ತಾ, ಪೊಲೀಸರ ಕಣ್ಣು ತಪ್ಪಿಸಲು ವೇಷ ಮರೆಸಿಕೊಂಡು ಹಲವು ರಾಜ್ಯಗಳನ್ನು ಸುತ್ತಾಡಿದರು. ಮಕ್ಕಳಾದ ನಂತರ ಸೀತಾರಾಮಯ್ಯನವರಿಂದ ಪರಿತ್ಯಕ್ತರಾಗಿ ಒಬ್ಬಂಟಿಯಾಗಿ ಜೀವನ ನಡೆಸುತ್ತಾ ಮಕ್ಕಳು ಸಾಕಿ ಬೆಳಸಿದರು. 2012 ರಲ್ಲಿ ತಮ್ಮ 92 ನೆಯ ವಯಸ್ಸಿನಲ್ಲಿ ತೆಲುಗು ಭಾಷೆಯಲ್ಲಿ “ ನಿರ್ಜನ ವಾರಧಿ” ಹೆಸರಿನಲ್ಲಿ ಪ್ರಕಟವಾಗಿದ್ದ  ಈ ಕೃತಿ 2015 ರಲ್ಲಿ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿದೆ. 

ಅವರ ತಮ್ಮ ಮೊದಲ ಅಧ್ಯಾಯಕ್ಕೆ “ಶಿಥಿಲಗೊಂಡ ಸೇತುವೆ” ಎಂಬ ಹೆಸರಿಟ್ಟು, ಆರಂಭದಲ್ಲಿ ಒಂದು ಕವಿತೆಯನ್ನು ದಾಖಲಿಸಿದ್ದಾರೆ. ಆ ಕವಿತೆ ಕನ್ನಡ ಅನುವಾದ  ಹೀಗಿದೆ.

ನೆನಪುಗಳು
ಕೆಲವು ನೆನಪುಗಳೇ ಹಾಗೆ
ಮೊಗ್ಗಿನಂತೆ ಅರಳುತ್ತವೆ
ಸುವಾಸೆನೆಗಳ ಮೂಲಕ
ಹೃದಯವನ್ನು ಆವರಿಸುತ್ತವೆ
ಸಂತೋಷದ ಕಣ್ಣಿರಲ್ಲಿ ತೋಯಿಸುತ್ತವೆ
ಅಂಗೈನಲ್ಲಿರುವ ಮುತ್ತಿನ ಹಾಗೆ
ಪಳ ಪಳ ಹೊಳೆಯುತ್ತವೆ.

ಕೆಲವು ನೆನಪುಗಳು
ಮುಳ್ಳಿನಂತೆ ಚುಚ್ಚುತ್ತವೆ
ವಿಷಾಧ ಮತ್ತು ದುಃಖಗಳೊಡನೆ
ಮನದೊಳಗೆ ಮನೆ ಮಾಡುತ್ತವೆ
ನಮ್ಮನ್ನು ಉಸಿರುಗಟ್ಟಿಸುತ್ತವೆ
ಎದೆಗೆ ನಾಟಿದ ಚೂಪುಗತ್ತಿಯ
ಕೊನೆಯಿರದ ನೋವಿನ ಹಾಗೆ.

ಕನಸು ಮತ್ತು ಆಕಾಂಕ್ಷೆಗಳು ಅಳಿಸಿ ಹೋಗಿವೆ
ಬೇಡದ ಸಂಗತಿಗಳು ಮೈ ಮೇಲೆ ಬಿದ್ದು
ಬದುಕು ಛಿದ್ರಗೊಂಡಿದೆ. ಮನಸು ಮಾತ್ರ
ನೆನಪುಗಳ ಶಿಕಾರಿಗೆ ಹೊರಟಿದೆ
ನನ್ನ ಹೃದಯವೆಂಬುದು ಒಡೆದ ಕನ್ನಡಿ ಚೂರು.
ನೆನಪುಗಳು ಪುಡಿ ಪುಡಿಯಾದ ಹೆಂಚುಗಳ ರಾಶಿ,

Friday, 4 March 2016

ಭಾರತೀಯ ಸಂಸ್ಕೃತಿಯ ಅಂತಃಶಕ್ತಿಯ ಅನಾವರಣ- ನವಜೀವನ ಕೃತಿ


ಇದೇ ಅಲ್ಲವಾ? ಒಂದು ಕೃತಿ ಅಥವಾ ಒಂದು ಅಧ್ಯಯನ ನಮ್ಮ ಮುಂದೆ ಒಡ್ಡ ಬಲ್ಲ ಸವಾಲುಗಳು ಎನ್ನುವುದು? ಭಾರತದಲ್ಲಿ ಹುಟ್ಟಿ ಬೆಳೆದು ಇಲ್ಲಿನ ಬಹುಮುಖಿ ಸಂಸ್ಕತಿ ಕುರಿತಂತೆ ಅಧಿಕೃತವಾಗಿ ಮಾತನಾಡಬಲ್ಲೆವು ಮತ್ತು ಇಲ್ಲಿನ ಜಾತಿ, ಧರ್ಮ, ಕುಲ ಕಸುಬುಗಳನ್ನು ವಿಮರ್ಶೆಯ ಒರೆಗಲ್ಲಿಗೆ ಒಡ್ಡಬಲ್ಲೆವು ಎಂದು ಬೀಗುತ್ತಿರುವ ನಾವು ದೇಶಭಕ್ತ ಯಾರು? ದೇಶದ್ರೋಹಿ ಯಾರು ಎಂದು ಪ್ರಶ್ನಿಸಿಕೊಳ್ಳುತ್ತಾ, ಕೂಗುಮಾರಿ ಸಂಸ್ಕತಿಗೆ ಬಲಿಯಾಗಿದ್ದೆವೆ. ಇಂತಹ ಗೊಂದಲದ ಗೂಡಿನ ನಡುವೆ ನಿಮ್ಮ ಧರ್ಮ, ಜಾತಿ, ದೇಶಭಕ್ತಿ ಅಥವಾ ವೈಚಾರಿಕತೆಗಿಂತ ಮಿಗಿಲಾಗಿ ಭಾರತೀಯ ಸಂಸ್ಕತಿಯ ಒಡಲೊಳಗೆ ಗುಪ್ತ ನದಿಯಂತೆ ಹರಿಯುತ್ತಿರುವ ಮತ್ತೊಂದು ಪ್ರತಿ ಸಂಸ್ಕøತಿ ಅಥವಾ ಪರ್ಯರ್ಯವಾದ ಅಲೌಕಿಕ ಸಂಸ್ಕತಿಯೊಂದು ಇದೆ ಎಂಬುದನ್ನ ಸ್ಕಾಟ್ಲೆಂಡ್ ಮೂಲದ  ಲೇಖಕ ವಿಲಿಯಂ ಡಾಲ್ರಿಂಪೆಲ್ ನಮ್ಮೆದುರು ಅನಾವರಣಗೊಳಿಸಿದ್ದಾನೆ.
ಕಳೆದ ಮುವತ್ತು ವರ್ಷಗಳಿಂದ ಒಬ್ಬ ಪತ್ರಕರ್ತನಾಗಿ, ಲೇಖಕನಾಗಿ, ಇತಿಹಾಸಕಾರನಾಗಿ ಭಾರತದ ಉದ್ದಗಲಕ್ಕೂ ಓಡಾಡುತ್ತಾ, ಇಲ್ಲಿನ ವಿವಿಧ ಸಂಸ್ಸøತಿ, ಧರ್ಮ, ಜಾತಿಯ ಜನರೊಡನೆ ಒಡಾಡುತ್ತಾ, ತನ್ನ ಅನುಭವವನ್ನು ಇಂಗ್ಲೀಷ್ ಭಾಷೆಯಲ್ಲಿ ನೈನ್ ಲಿವ್ಸ್ ಎಂಬ ಹೆಸರಿನಲ್ಲಿ ಡಾಲಿಂಪ್ರೆಲ್  2009 ರಲ್ಲಿ ಬರೆದಿದ್ದ ಕೃತಿಯು ಇದೀಗ ವಸುಧೇಂದ್ರ ಛಂದ ಪ್ರಕಾಶನದ ಮೂಲಕನವ ಜೀವಗಳುಶೀರ್ಷಿಕೆಯಡಿ ಪ್ರಕಟವಾಗಿದೆ. ಇಂತಹದೊಂದು ಅಪರೂಪದ ಹಾಗೂ ಅನನ್ಯವಾದ ಕೃತಿಯನ್ನು ಕನ್ನಡಕ್ಕೆ ತರಲು ಆಯ್ದುಕೊಂಡ ಕಥೆಗಾರ ವಸುಧೇಂದ್ರರ ಅಭಿರುಚಿ ಮತ್ತು ಸಮರ್ಥವಾಗಿ ಅನುವಾದಿಸಿರುವ ನವೀನ್ಗಂಗೋತ್ರಿ ಅವರನ್ನು ಕನ್ನಡದ ಓದುಗರಾದ ನಾವು  ಅಭಿನಂದಿಸಲೇಬೇಕು.
ದೇಶಕ್ಕೆ ಪತ್ರಕರ್ತರಾಗಿ ಕಾಲಿಟ್ಟ ಬಹುತೇಕ ವಿದೇಶಿ ಪತ್ರಕರ್ತರು ಇಲ್ಲಿನ ಜನರನ್ನು, ಇಲ್ಲಿನ ಬಹುಮುಖಿ ಸಂಸ್ಕøತಿಯನ್ನು ಹಾಗೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಬಗೆಯ ಹೋರಾಟ ಹಾಗೂ ಪರ-ವಿರೋಧಗಳ ನಡುವಿನ ಅತಿರೇಕಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ತಮಗರಿವಿಲ್ಲದಂತೆ ಇಲ್ಲಿನ ಬದುಕಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಬಿ.ಬಿ.ಸಿ. ಛಾನಲ್ ಗೆ ವರದಿಗಾರನಾಗಿ ಬಂದು ಭಾರತವನ್ನು ಕುರಿತಂತೆ ನೊ ಪುಲ್ ಸ್ಟಾಪ್ ಇನ್ ಇಂಡಿಯ, ಇಂಡಿಯಾ ಇನ್ ಸ್ಲೊ ಮೋಷನ್, ಹಾರ್ಟ್ ಆಫ್ ಇಂಡಿಯಾ, ಇಂಡಿಯಾ ಅನ್ಎಂಡಿಂಗ್ ಜರ್ನಿ ಮುಂತಾದ  ಕೃತಿಗಳನ್ನು ಬರೆದು, ಇದೀಗ ಭಾರತೀಯ ನಾಗರೀಕನಾಗಿ ಕೊಲ್ಕತ್ತ ನಗರದಲ್ಲಿ ವಾಸಿಸುತ್ತಿರುವ ಮಾರ್ಕ್ ಟುಲಿಪ್ರಾನ್ಸ್ ಮೂಲದ ಲೇಖಕನಾಗಿದ್ದುಕೊಂಡು, ಭಾರತ ಸ್ವಾತಂತ್ರ್ಯ ಹೋರಾಟದ ಬಗ್ಗೆಫ್ರೀಡಂ ಅಟ್ ಮಿಡ್ ನೈಟ್ಮತ್ತು ಐತಿಹಾಸಿಕ ಕೊಲ್ಕತ್ತ ನಗರ ಕುರಿತುಸಿಟಿ ಆಫ್ ಜಾಯ್ಎನ್ನುವಂತಹ ಪ್ರಸಿದ್ಧ ಕೃತಿಗಳನ್ನು ಬರೆದು ನಮ್ಮವನೇ ಎಂಬಂತಿರುವ ಡಾಮಿನಿಕ್ಯೂ ಲೆಪಿಯರ್ರೆ ಇಂತಹವರ ಸಾಲಿಗೆ ಸೇರುವ ಲೇಖಕರಲ್ಲಿ ವಿಲಿಯಂ ಡಾಲ್ರಿಂಪೆಲ್ ಕೂಡ ಮುಖ್ಯನಾದವನು. ಲೇಖಕನಿಗೆ ಇರುವ ಒಳನೋಟ, ಒಂದು ವಿಷಯವನ್ನು ಬೆನ್ನತ್ತಿ ಅದನ್ನು ಸಮಗ್ರವಾಗಿ ಪರಿಶೀಲಿಸಿ, ಅಧ್ಯಯನ ಮಾಡುವ ಪರಿ ಹಾಗೂ ಆತನ ಚಿತ್ರಣ ಶಕ್ತಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಒಂದು ವಿಷಯದ ಅಧ್ಯಯನದಲ್ಲಿ ಯಾವುದೇ ಪೂರ್ವಾಗ್ರಹಪೀಡಿತ ಮನಸ್ಸನ್ನು ಇಟ್ಟುಕೊಳ್ಳದೆ ಅದನ್ನು ಬದಿಗಿಟ್ಟು ನಿರ್ಲಿಪ್ತತೆ ಮತ್ತು ಧ್ಯಾನಸ್ಥ ಮನಸ್ಸಿನಿಂದ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಭಾರತೀಯ ಲೇಖಕರಿಗೆ ಡಾಲ್ರಿಂಪೆಲ್ ಮಾದರಿಯಾಗಿದ್ದಾನೆ. ಕಾರಣಕ್ಕೆ ಭಾರತದ ಇತಿಹಾಸ ಮತ್ತು ವರ್ತಮಾನ ಭಾರತದ ತಲ್ಲಣಗಳನ್ನು ದಾಖಲಿಸುವುದರಲ್ಲಿ ವಿಲಿಯಂ ಡಾಲ್ರಿಂಪೆಲ್ ನಮ್ಮವರೇ ಆದ ಹಾಗೂ ರುಯಿನ್ಸ್ ಆಫ್ ಎಂಪೈರ್ ಮತ್ತು ಎಂಡ್ ಆಫ್ ಸಫರಿಂಗ್ ಕೃತಿಗಳನ್ನು  ಬರೆದ ಪಂಕಜ್ ಮಿಶ್ರಾ ಅವರ ಸಾಲಿನಲ್ಲಿ ನಿಲ್ಲುತ್ತಾನೆ. ವಿಲಿಯಂ ಡಾಲ್ರಿಂಪೆಲ್ ಬರೆದ  ಮೊಗಲ್ ಸಾಮ್ರಾಜ್ಯದ ಇತಿಹಾಸ ಕುರಿತಾದ ವೈಟ್ ಮೊಗಲ್ಸ್, ಲಾಸ್ಟ್ ಮೊಗಲ್ ಹಾಗೂ  ಸಿಟಿ ಆಫ್ ಜಿನ್ನ್ಸ್, ಫ್ರಂ ಹೊಲಿ ಮೌಂಟೆನ್  ಕೃತಿಗಳ ಮೂಲಕ ಭಾರತದ ಇತಿಹಾಸ ಕುರಿತು  ಅಧಿಕೃತವಾಗಿ ಮಾತನಾಡುವ ಮತ್ತು ಬರೆಯಬಲ್ಲ ಲೇಖಕ ಎಂದು  ಜಾಗತಿಕ ಮಟ್ಟದಲ್ಲಿ ಹೆಸರಾಗಿದ್ದಾನೆ.
 “ನವ ಜೀವಗಳುಕೃತಿಯಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ( ಇದರಲ್ಲಿ ಒಂದು ಲೇಖನ ಪಾಕಿಸ್ತಾನ್ ಸಿಂಧ್ ಪ್ರಾಂತ್ಯದ ಸೂಫಿ ಸಂತರ ದರ್ಗಾ ಹಾಗೂ ಸೂಫಿಗಳ ಕುರಿತಂತೆ ಇರುವುದು ವಿಶೇಷ) ಇಂದಿಗೂ ಜೀವಂತವಿರುವ ವಿವಿಧ ಕಸುಬುಗಳು ಸೇರಿದಂತೆ, ಹಾಡು, ನೃತ್ಯ, ಪ್ರತಿಮೆಗಳ ತಯಾರಿ, ದೇವದಾಸಿಯರ ವೇಶ್ಯಾವಾಟಿಕೆ ವೃತ್ತಿ, ಅಲೆಮಾರಿ ಗಾಯಕರು, ಜೈನ ಧರ್ಮ ಹಾಗೂ ಬೌದ್ಧ ಧರ್ಮದ ಅನುಯಾಯಿಗಳ ಬದುಕು, ಅವರ ಪೂರ್ವಾಶ್ರಮದ ವಿವರಗಳು ಹಾಗೂ ಅಂತರಂಗದ ತಾಕಲಾಟ ಇವುಗಳನ್ನು ಲೇಖಕ ಪರಿಣಾಮಕಾರಿಯಾಗಿ ಕೃತಿಯುದ್ದಕ್ಕೂ ಕಟ್ಟಿಕೊಟ್ಟಿದ್ದಾನೆಆಯಾ ಕಥೆಗಳಲ್ಲಿ ಅಲ್ಲಿನ ಪ್ರಾದೇಶಿಕ ಬದುಕು ಮತ್ತು  ಭೌಗೂಳಿಕ ಪರಿಸರವನ್ನು ಗ್ರಹಿಸಿ ಅವುಗಳನ್ನು ಬಣ್ಣಿಸುವ ಲೇಖಕನ ಬರೆವಣಿಗೆಯ ಸಾಮಥ್ರ್ಯ ಆಶ್ಚರ್ಯ ಪಡುವಂತಹದ್ದು.


ಕೃತಿಗೆ ಪ್ರಸ್ತಾವನೆಯ ರೂಪದಲ್ಲಿ ವಿಲಿಯಂ ಡಾಲಿಂಪ್ರೆಲ್ ಬರೆದಿರುವ ಮಾತುಗಳು, ಲೇಖಕನ ಗ್ರಹಿಕೆಯ ನೆಲೆಗಳು ಎಷ್ಟು ಸ್ಪಷ್ಟವಾಗಿವೆ ಮತ್ತು ಗಟ್ಟಿಯಾಗಿವೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತವೆ. “ ಭಾರತ ಉಪ ಖಂಡವು ಜಾಗತಿಕ ಮಾರುಕಟ್ಟೆಯ ಹೃದಯ ಭಾಗದಲ್ಲಿ ಸಾಂಪ್ರದಾಯಿಕವಾಗಿ ತನಗಿದ್ದ ಸ್ಥಾನವನ್ನು ಮರು ಗಳಿಸಿಕೊಳ್ಳುವತ್ತ ಧಾವಿಸುತ್ತಿರುವ ಬಗ್ಗೆ ಸಾಕಷ್ಟನ್ನು ಈಗಾಗಲೇ ಬರೆದದ್ದಾಗಿದೆ. ಆದರೆ ಮಹಾ ಭೂಕಂಪಗಳು ದಕ್ಷಿಣ ಏಷ್ಯಾದ ವಿವಿಧ ಧಾರ್ಮಿಕ ಸಂಪ್ರದಾಯಗಳನ್ನು ಕಲಕಿದ ಬಗೆಯನ್ನು ಕುರಿತು ಈವರೆಗೆ ಹೇಳಲಾಗಿದ್ದು ತುಂಬಾ ಕಡಿಮೆ.
ಸುತ್ತ ಸುಳಿಯುತ್ತಿರುವ ಸುಳಿಗಾಳಿಯ ಮಧ್ಯೆಯೂ ತಮ್ಮದೇ ಶಾಂತ ನೆಲೆಯನ್ನು ಕಂಡುಕೊಂಡು ಶ್ರೀಮಂತವಾದ ಪರಂಪರೆಯೊಂದಿಗೆ ಬದುಕುತ್ತಿರುವವರ ಬಗ್ಗೆ ತುಂಬಾ ಕಡಿಮೆಯೆಂಬಷ್ಟನ್ನು ಮಾತ್ರ ಅನ್ವೇಷಣೆ ಮಾಡಲಾಗಿದೆ. ನಾವು ಪಾಶ್ಚಿಮಾತ್ಯರು ಪೂರ್ವದ ರಿಲಿಜಿನ್ ಗಳ ಬಗ್ಗೆ ಅಂದುಕೊಂಡಂತೆ ಆಳವಾದ ಪ್ರಾಚೀನ ಬಾವಿಗಳಂತೆ. ಬದಲಾಗದ ಜ್ಞಾನದ ಖನಿಗಳಿದ್ದಂತೆ ವಾಸ್ತವದೆಲ್ಲೇನೂ ಇಲ್ಲ. ನಿಜವೆಂದರೆ ಭಾರತದ ಹೆಚ್ಚಿನ ಧಾರ್ಮಿಕ ಗುರುತುಗಳೆಲ್ಲ ನಿರ್ಧಿಷ್ಟವಾದ ಸಾಮಾಜಿಕ ವೃಂದಗಳೊಂದಿಗೆ, ಜಾತೀಯ ಆಚರಣೆಗಳೊಂದಿಗೆ ಮತ್ತು ಅಪ್ಪನಿಂದ ಮಗನಿಗೆ ಹರಿದು ಬಂದಂತಹ ಪರಂಪರೆಗೆ ಸಂಬಂದ್ಧವಾಗಿವೆ; ಮತ್ತು ಭಾರತದ ಸಮಾಜವು ವೇಗವಾಗಿ ಬದಲಾಗುತ್ತಿರುವಂತೆ ಇವೆಲ್ಲವೂ ಅಷ್ಟೇ ಮಹಾವೇಗದಿಂದ ಬದಲಾಗುತ್ತಿವೆ.
ಇವೆಲ್ಲವೂ ಬಲು ಆಸಕ್ತಿದಾಯಕವಾದ ಹಲವಾರು ಪ್ರಶ್ನೆಗಳನ್ನೆತ್ತುತ್ತವೆ. ನಿಜಕ್ಕೂ ಪುಣ್ಯ ಪುರುಷನಾಗಿರುವುದು ಮತ್ತು ಜೈನ ಸನ್ಯಾಸಿನಿಯಾಗಿರುವುದು ಅಂದರೆ ಏನು? ಜ್ಞಾನಿಯಾಗಿರುವುದು ಮತ್ತು ಟಾಟಾ ಕಂಪನಿಯಿಂದ ತಯಾರಾದ ಲಾರಿಗಳು ಭರದಿಂದ ಶಬ್ದ ಮಾಡುತ್ತಾ ಹೋಗುವ ಭವ್ಯ ಭಾರತದ ರಸ್ತೆಗಳಲ್ಲಿ ತಾಂತ್ರಿಕನೊಬ್ಬ ಮೋಕ್ಷದ ಅನ್ವೇóಣೆಗೆ ತೊಡಗುವುದಂದರೇನು? ವ್ಯಕ್ತಿಯೊಬ್ಬ ದಿವ್ಯವೇ ತನ್ನನ್ನು ಕರೆದು ಕೆಲಸಕ್ಕೆ ಹಚ್ಚಿದಂತೆ ಆಯುಧಗಳನ್ನೆತ್ತಿಕೊಂಡು ರಕ್ಷಣೆಯ ಯುದ್ಧಕ್ಕೆ ನಿಂತಿರುವುದೇಕೆ? ಮತ್ತು ಅದೇ ಹೊತ್ತಿಗೆ ಇನ್ನೊಬ್ಬ ಪರಮ ಅಹಿಂಸೆಯನ್ನೇ ಆಚರಿಸುತ್ತಿರುವುದೇಕೆ? ಓರ್ವನು ತಾನು ದೇವರನ್ನು ನಿರ್ಮಿಸಬಲ್ಲೆ ಅಂತ ಚಿಂತಿಸುವುದಾಗಲಿ, ಇನ್ನೊಬ್ಬ ತಾನು ದೇವರಿಗೆ ತನ್ನೊಳಗೆ ನೆಲೆ ಕೊಡಬಲ್ಲೆ ಅಂದುಕೊಳ್ಳುವುದಾಗಲೀ ಏತಕ್ಕೆ? ಪ್ರತಿಯೊಂದು ಧಾರ್ಮಿಕ ಪಂಥವು ಭಾರೀ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಭಾರತದ ವಾತಾವರಣದಲ್ಲಿ ತನ್ನ ಉಳಿಯುವಿಕೆಯನ್ನು ಅದು ಹೇಗೆ ಕಂಡುಕೊಳ್ಳುತ್ತಿದೆ? ಬದಲಾಗುವುದು ಯಾವುದು? ಬದಲಾಗದೆ ಇರುವುದು ಯಾವುದು? ಆಧುನಿಕ ಭೌತವಾದಕ್ಕೆ ಭಾರತವು ನಿಜಕ್ಕೂ ಪರ್ಯಾಯವಾದ ನೈಜ ಅಧ್ಯಾತ್ಮವನ್ನು ಇವತ್ತಿಗೂ ಕೊಡಬಲ್ಲದೆ?” ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ಭಾರತ ಸಂಸ್ಕøತಿಯ ಅಸ್ಮಿತೆಯ ಹುಡುಕಾಟದ ಸಂದರ್ಭದಲ್ಲಿ ತಾನು ಕಂಡು ಕೊಂಡ ಅನುಭವವನ್ನು ವಿಲಿಯಂ ಡಾಲಿಂಪ್ರೆಲ್ ಮನೋಜ್ಞವಾಗಿ ಕೃತಿಯಲ್ಲಿ ದಾಖಲಿಸಿದ್ದಾನೆ.

  ಕೃತಿಯಲ್ಲಿನ ಮೊದಲ ಲೇಖನಸನ್ಯಾಸಿನಿಯೊಬ್ಬಳ ಕಥೆಒಬ್ಬ ಜೈನ ಸನ್ಯಾಸಿನಿಯ ಅಂತರಂಗದ ತಾಕಲಾಟಗಳನ್ನು ತೆರೆದಿಟ್ಟರೆ, ಎರಡನೆಯ ಲೇಖನಕಣ್ಣೂರಿನ ಕುಣಿತದವನುಕೇರಳದ ತೆಯ್ಯಮ್ ನೃತ್ಯವನ್ನು ವೃತ್ತಿಯಾಗಿಸಿಕೊಂಡು ಅದರಲ್ಲಿ ತೃಪ್ತಿ ಕಾಣುವ ದಲಿತ ಕಲಾವಿದ ಹರಿದಾಸನ ಬದುಕನ್ನು ತೆರೆದಿಡುತ್ತದೆ. ವರ್ಷದ ಹತ್ತು ತಿಂಗಳು ಬಾವಿ ತೋಡುವುದರಲ್ಲಿ ಮತ್ತು ಸೆರೆಮನೆಯ ಕೂಲಿಕಾರನಾಗಿ ಬದುಕು ಸೆವೆಸುವ ಹರಿದಾಸ ಉಳಿದ ಎರಡು ತಿಂಗಳಿನಲ್ಲಿ ಕೇರಳದ ಕಣ್ಣೂರು ಪ್ರಾಂತ್ಯದಲ್ಲಿ ಆಚರಣೆಯಲ್ಲಿರುವ ತೆಯ್ಯಮ್ ನೃತ್ಯದಲ್ಲಿ ದೇವರಾಗಿ ಖುಷಿ ಪಡುವ ಸಂಗತಿಯನ್ನು ಆತ್ಮೀಯವಾಗಿ ಕಟ್ಟಿಕೊಡಲಾಗಿದೆ. ಜೊತೆಗೆ ಕೀಳರಿಮೆಬಡತನ ಹಾಗೂ ಶೋಷಣೆಗಳ ನಡುವೆ ಬದುಕುತ್ತಿರುವ ಭಾರತದ ತಳ ಸಮುದಾಯಕ್ಕೆ ಇಲ್ಲಿನ ಸಂಸ್ಕøತಿಯು ಮೇಲ್ಜಾತಿಯ ಜನರನ್ನು ದೇವರಾಗಿ ಆಶೀರ್ವಚನ ನೀಡುವುದಕ್ಕೆ ಕಲ್ಪಿಸಿರುವ ಅವಕಾಶ ಹಾಗೂ ಬೇರೆ ದಿನಗಳಲ್ಲಿ ಮುಟ್ಟಿಸಿಕೊಳ್ಳುವುದು ಇರಲಿ, ನೀರು ಕೊಡಲು ಹಿಂದೇಟು ಹಾಕುವ ಬ್ರಾಹ್ಮಣರು ದೇವರನ್ನು ಆವಾಹಿಸಿಕೊಂಡಿರುವ ದಲಿತನೊಬ್ಬನ ಕಾಲು ಮುಟ್ಟಿ ನಮಸ್ಕರಿಸುವ ಬಗೆಯನ್ನು ಲೇಖಕ ತುಂಬಾ ಅರ್ಥಪೂರ್ಣವಾಗಿ ವಿವೇಚಿಸಿದ್ದಾನೆ.
ಕೃತಿಯಲ್ಲಿನಕಾವ್ಯ ಗಾಯಕಕಥನದಲ್ಲಿ ರಾಜಸ್ಥಾನದ ಸ್ಥಳಿಯ ಜನಪದ ನಾಯಕನಾದ  ಪ್ರಭುಜಿ ಕುರಿತಾದ ಮೌಖಿಕ ಕಾವ್ಯದ ಬಗ್ಗೆ ದಟ್ಟವಾದ ವಿವರಗಳಿವೆ ಕಾವ್ಯವನ್ನು ಹಾಡುವ ಗಾಯಕರು ಹಾಗೂ ಅಲ್ಲಿನ ಪಾಡ್ ಎಂಬ ಬೃಹತ್ತಾದ ಕಥನದ ಭಿತ್ತಿ ಚಿತ್ರಗಳುಳ್ಳ ಪರೆದೆ ಇವುಗಳನ್ನು ಹಿನ್ನಲೆಯಾಗಿ ಇಟ್ಟುಕೊಂಡು, ವಿಲಿಯಂ ಡಾಲಿಂಪ್ರೆಲ್ ಜಗತ್ತಿನ ಬಹುತೇಕ ಮೌಖಿಕ ಕಾವ್ಯಗಳನ್ನು ವಿಸ್ತ್ರುತವಾಗಿ ಚರ್ಚೆ ಮಾಡಿದ್ದಾನೆ. ಅವನ  ಆಳವಾದ ಅಧ್ಯಯನದಲ್ಲಿ ನಮ್ಮ ಮಹಾಭಾರತ, ರಾಮಾಯಣವನ್ನೂ ಒಳಗೊಂಡು, ಪ್ರಾಚೀನ ನಾಗರೀಕತೆಯ ಇಲಿಯಡ್, ಒಡಿಸ್ಸಿ ಹಾಗೂ ಇಸ್ಲಾಂ ಧರ್ಮದದಸ್ತನ್ ಅಮಿರ್ ಹಮ್ಜಾಕಾವ್ಯದ ಬಗ್ಗೆ ಹೀಗೆ ಜಗತ್ತಿನ ಅಲಿಖಿತ ಪಠ್ಯಗಳ ಕುರಿತು ಲೇಖಕ ನೀಡುವ ವಿವರಣೆಯು ಆತನ ವಿದ್ವತ್ ಗೆ ಸಾಕ್ಷಿಯಾಗಿದೆ. ಅದೇ ರೀತಿ ಪಾಕಿಸ್ತಾನದ ಸಿಂದ್ ಪ್ರಾಂತ್ಯದ ಸೂಫಿ ದರ್ಗಾ ಮತ್ತು ಸೂಫಿಗಳ ಕುರಿತು ಬರೆಯುವಾಗ ಸೂಫಿ ತತ್ವ ಅದರೊಳಗೆ ಅಡಗಿದ್ದ ಪರಧರ್ಮ ಸಹಿಷ್ಣುತೆಗಳನ್ನು ಗುರುತಿಸುತ್ತಾ ಇಸ್ಲಾಂ ಧರ್ಮದ ಉದಾರ ತತ್ವಗಳ ಪಲ್ಲಟಗಳನ್ನು ವಿವರಿಸಿದ್ದಾನೆಅರಬ್ ರಾಷ್ಟ್ರಗಳಿಂದ ಆಮದಾದ ಆಧುನಿಕ ಇಸ್ಲಾಂ ಧರ್ಮದ ನಂಬಿಕೆಗಳು ಪ್ರಾಚೀನ ಇಸ್ಲಾಂ ಧರ್ಮವನ್ನು ಅಸಹಿಷ್ಣುತೆಯತ್ತ ದೂಡಿದ್ದನ್ನು ವಿಲಿಯಂ ಡಾಲಿಂಪ್ರೆಲ್ ನಿಖರವಾಗಿ ಗುರುತಿಸಿದ್ದಾನೆ,

ಇವುಗಳಲ್ಲದೆ, ಕೃತಿಯಲ್ಲಿರುವ ಸವದತ್ತಿ ಎಲ್ಲಮ್ಮನ ಹೆಣ್ಣು ಮಕ್ಕಳ ದುರಂತ ಕಥೆ, ಪಶ್ಚಿಮ ಬಂಗಾಳದ ಬೌವ್ಲ್ ಗಾಯಕರ ಕಥೆ ಕೂಡ ಓದುಗರನ್ನು ಗಾಡವಾಗಿ ತಟ್ಟುತ್ತವೆ. ದೇವರ ಕಂಚಿನ ಪ್ರತಿಮೆಯನ್ನು ತಯಾರಿಸುವುದರಲ್ಲಿ ಏಳು ಶತಮಾನಗಳ ಇತಿಹಾಸದ ಪರಂಪರೆಯುಳ್ಳ ತಮಿಳುನಾಡಿನ ತಂಜಾವೂರು ಜಿಲ್ಲೆಯ ಸ್ವಾಮಿಮಲೈ ( ಊರು ಮುರುಗ ಎಂದು ಕರೆಸಿಕೊಳ್ಳುವ ಸುಬ್ರಮಣ್ಯ ಸ್ವಾಮಿ ದೇಗುಲವಿರುವ ಜಾಗ) ಎಂಬ ಊರಿನ ಶ್ರೀಕಂಠ ಸ್ಥಪತಿ ಎಂಬ ವ್ಯಕ್ತಿಯ ಕಥನ ಹಾಗೂ ದೇವರು ಮತ್ತು ಮನುಷ್ಯನ ನಡುವೆ ಇರಬಹುದಾದ ಅಗೋಚರ ಹಾಗೂ ಅಘೋಷಿತ ಸಂಬಂಧಗಳನ್ನು ಹುಡುಕಾಟ ನಡೆಸುತ್ತದೆ. ಜೊತೆಗೆ ಓದುಗರ ಮನದಲ್ಲಿ ಶ್ರೀಕಂಠ ಸ್ಥಪತಿಯ ಮಾತುಗಳು ಬಹುಕಾಲ ನಿಲ್ಲುತ್ತವೆ. ಒಂದು ವೃತ್ತಿ ಅಥವಾ ಕಸುಬು  ದೇವರ ಜೊತೆ ನಡೆಸುವ ಇಲ್ಲವೆ ನಡೆಸಬಹುದಾದ ಅನುಸಂಧಾನದ ಪ್ರಕ್ರಿಯೆ ಎಂಬಂತೆ ಇಲ್ಲಿನ ಕಥನಗಳು ನಮಗೆ ಕಾಣುತ್ತವೆತನ್ನಲ್ಲದ ನೆಲದ ಹಾಗೂ ಸಂಸ್ಕತಿಯ ವಿದೇಶಿ ಮೂಲದ ಲೇಖಕನೊಬ್ಬ ನಮ್ಮ ಭಾರತೀಯ ಸಂಸ್ಕತಿಯ ಅಂತಃಸತ್ವಗಳನ್ನು ಹೀಗೂ ಅನಾವರಣಗೊಳಿಸಲು ಸಾದ್ಯವೆ? ಎಂಬ ವಿಸ್ಮಯ ಕೃತಿಯನ್ನು ಓದಿದ ನಂತರವೂ ಓದುಗನನ್ನು ಕಾಡುತ್ತದೆ. ಜೊತೆಗೆ ಭಾರತದ ವಿಭಿನ್ನ ಸಂಸ್ಕøತಿಯೊಳಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಬದುಕುತ್ತಾ, ಆಯ್ದುಕೊಂಡ ಮಾರ್ಗದಲ್ಲಿ ಸಂತೃಪ್ತಿ ಕಾಣುವ ಇಲ್ಲಿನ ಅನಾಮಿಕ ಜೀವಗಳ ಬಗ್ಗೆ ಮನದಲ್ಲಿ ಗೌರವ ಭಾವನೆ ಮೂಡುತ್ತದೆ.
ಇನ್ನು ಕೊನೆಯದಾಗಿ  ಕೃತಿಯಲ್ಲಿ ಕ್ಲಿಷ್ಟ ಎನ್ನಬಹುದಾದ ಭಾಗಗಳನ್ನು ಅದ್ಭುತವಾಗಿ ಅನುವಾದಿಸಿರುವ ನವೀನ್ ಗಂಗೋತ್ರಿಯವರು ಕೆಲವೆಡೆ ತೀರಾ ಸರಳ ಶಬ್ದಗಳನ್ನು ಕನ್ನಡಕ್ಕೆ ತರುವಲ್ಲಿ ಅಲ್ಲಲ್ಲಿ ಎಡವಿದ್ದಾರೆ. ಉದಾಹರಣೆಗೆ ಮೊದಲ ಕಥೆ ಸನ್ಯಾಸಿನಿಯೊಬ್ಬಳ ಕಥೆಯ ಮೊದಲ ಪುಟದಲ್ಲಿ ಶ್ರವಣಬೆಳಗೂಳ ಯಾತ್ರ ಸ್ಥಳವನ್ನು ಬಣ್ಣಿಸುವಾಗ ರಸ್ತೆಗಳೆಲ್ಲಾ ಆಯತಾಕಾರದ ಟ್ಯಾಂಕ್ ಬಳಿಯಲ್ಲಿ ಒಂದಾಗುತ್ತವೆಎಂದಿದ್ದಾರೆ. ಟ್ಯಾಂಕ್ ಶಬ್ದಕ್ಕೆ ಪರ್ಯಾಯವಾಗಿ ಕೊಳ ಅಥವಾ ಸರೋವರ ಶಬ್ದ ಸೂಕ್ತವಾಗಿತ್ತು. ಅದೇ ರೀತಿ ಕೆಂಬಣ್ಣದ ಯಕ್ಷಿ ಕಥೆಯ ಪುಟ 179 ರಲ್ಲಿ ಕಥಾನಾಯಕಿ ಲಾಲ್ ಪೇರಿ ತಾನು  ಬಂಗ್ಲಾ ದೇಶದಿಂದ ಪಶ್ಚಿಮ ಭಾಗದ ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ವಲಸೆ ಬಂದ ಬಗೆಯನ್ನು ವಿವರಿಸುವಾಗಮೀನು ಮತ್ತು ಅಕ್ಕಿ ನಮ್ಮ ಆಹಾರವಾಗಿತ್ತು, ಇಲ್ಲಿಗೆ ಬಂದ ಮೇಲೆ ರೊಟ್ಟಿ ಮತ್ತು ಮಾಂಸಕ್ಕೆ ಒಗ್ಗಿಕೊಳ್ಳಬೇಕಾಯಿತುಎಂಬ ಮಾತಿದೆ. ಇಲ್ಲಿ  ಫಿಶ್ ಅಂಡ್ ರೈಸ್ ಎಂಬ ಶಬ್ದ ಮೀನು ಮತ್ತು ಅನ್ನವಾಗಬೇಕಿತ್ತು. ರೈಸ್ ಎಂಬ ಶಬ್ದ  ಅಕ್ಕಿಯೂ ಆಗುತ್ತದೆ, ಅನ್ನವೂ ಆಗುತ್ತದೆ. ಇಂತಹ  ತೀರಾ ಸಣ್ಣ ಕೊರತೆಗಳನ್ನು ಹೊರತು ಪಡಿಸಿದರೆ, “ನವಜೀವಗಳುಕೃತಿಯು ಕನ್ನಡಕ್ಕೆ ಬಂದಿರುವ ಶ್ರೇಷ್ಠ ಕೃತಿಗಳ ಸಾಲಿನಲ್ಲಿ ನಿಲ್ಲುವಂತಹದ್ದು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.


-*-*-