Thursday, 30 October 2014

ಬಿಳಿ ಸಾಹೇಬನ ಭಾರತ- ಒಂದು ನೋಟ


ಡಾ.ಎನ್. ಜಗದೀಶ್ ಕೊಪ್ಪ ಅವರಬಿಳಿ ಸಾಹೇಬನ ಭಾರತಪುಸ್ತಕವು ಜಿಮ್ ಕಾರ್ಬೆಟ್ ಅದ್ಭುತ ಬೇಟೆ ಕೇವಲ ರೋಮಾಂಚನ ಕಥೆ ಮಾತ್ರವಲ್ಲ ಆತನೊಬ್ಬ ನಿಸರ್ಗಪ್ರೇಮಿ, ಮಾನವತಾವಾದಿ, ಬ್ರಿಟಿಷ್ ರಾಜ್ಯಕ್ಕೆ ಬೇಕಾಗಿದ್ದ ಅಡವಿತಜ್ಞ ಎಂಬ ಮಾಹಿತಿಗಳನ್ನು ಒದಗಿಸುತ್ತದೆ. ಕನ್ನಡ ಭರತ ಭೂಮಿಯ ಆಧ್ಯಾತ್ಮವನ್ನು ನಿಸರ್ಗವನ್ನು ಕುವೆಂಪು ಹೇಗೆ ಔನ್ನತ್ಯದಲ್ಲಿ ಲೇಖಿಸಿದರೋ ಹಾಗೆ ಅವರ ಮಗ ತೇಜಸ್ವಿ ಜಿಮ್ ಕಾರ್ಬೆಟ್ನಂತಹ ವಿಶ್ವಕೌತುಕಗಳನ್ನು ಕನ್ನಡಕ್ಷರಗಳಲ್ಲಿ ತಂದು ವಿಸ್ಮಯ ಮೂಡಿಸಿದರು. ಆಗ ಲಂಕೇಶ ಪತ್ರಿಕೆ ಓದುವ ನಮಗೆಲ್ಲಾ ಹಿಮಾಲಯದೊಳಗೆ ಬರೀ ಜಗದಚ್ಚರಿಯ ಬಿಳಿನೊರೆಯಿಲ್ಲ ನರಬೇಟೆಯ ಕ್ರೌರ್ಯಗಳಿವೆ; ಕ್ರೌರ್ಯವನ್ನು ಹದಗೊಳಿಸುವ ಜಿಮ್ಕಾರ್ಬೆಟ್ನಂತವರಿದ್ದರು ಎಂಬರಿವಾಗಿತ್ತು. ಜಿಮ್ಕಾರ್ಬೆಟ್ನನ್ನು ಮತ್ತಷ್ಟು ತಿಳಿದುಕೊಂಡಿದ್ದ ಲಂಕೇಶ್; ಕಾರ್ಬೆಟ್ ಕೇವಲ ಬೇಟೆಗಾರನಲ್ಲ ಅವನೊಬ್ಬ ನಿಸರ್ಗಪ್ರೇಮಿ ಎಂಬ ಉಪದೇಶ ಜಾಡು ಹಿಡಿದು ಸ್ಥಳ ಸಂಶೋಧನೆ ಮಾಡುತ್ತಾ ಕೊಪ್ಪ ಅವರು ಒಂದು ಕೃತಿಯನ್ನು ತಂದು ಬಿಳಿಸಾಹೇಬನನ್ನು ಕನ್ನಡಕ್ಕೆ ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಾರೆ. ಕರ್ನಾಟಕದ ಪಶ್ಚಿಮ ತೀರದ ಅಡವಿಯ ಲೋಕದೊಳಗಿನ ತಲ್ಲಣಗಳಿಗೆ ಕೋವಿ ಹಿಡಿದು ಹಿಂಸೆಯನ್ನು ನಿಯಂತ್ರಿಸಿ ಅಹಿಂಸೆಯ ದಾರಿತೋರಿದವನು ಕೆನಿತ್ ಅಂಡರ್ಸನ್. ಹಿಮಾಲಯದೊಳಗಿನ ತಲ್ಲಣಗಳಿಗೆ ಕೋವಿ ಹಿಡಿದು ಜನರಿಗೆ ಸಾಂತ್ವನ ನೀಡಿದವನು ಜಿಮ್ಕಾರ್ಬೆಟ್. ಪಶ್ಚಿಮದ ಬಿಳಿಯರು ಸಾಹಸಿಗಳು, ರೋಮಾಂಚನಕಾರಿ ಬದುಕು ನಿರ್ವಹಿಸಿದವರು. ಅವರ ಆಳ್ವಿಕೆಯ ಹೃದಯದೊಳಗೆ ಅನುಕಂಪದ ಅಲೆಗಳೂ ಸಹಾ ಇವೆ ಎಂಬುದನ್ನರಿಯಲು ಜಿಮ್ಕಾರ್ಬೆಟ್ ಜೀವನಗಾಥೆ ಓದಬೇಕು. ಜಗದೀಶ ಕೊಪ್ಪ ಅವರು ಸಹಾ ಕಾರ್ಬೆಟ್ ತಿರುಗಾಡಿದ ನೆಲೆಸಿದ ನೆಲಮನೆ ಜಾಡು ಹಿಡಿದ ಕಥನ ಕೂಡ ಕಾರ್ಬೆಟನಿಗೆ ಸಂದ ಗೌರವೇ ಸರಿ!
                ಭಾರತದ ಸ್ವತಂತ್ರ ಹೆಜ್ಜೆ ಗುರುತಗಳಲ್ಲಿ ತಮ್ಮವರ ಜೀವಕ್ಕೆ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗಬಾರದು ಎಂಬ ಷರತ್ತುಗಳನ್ನಿರಿಸಿಕೊಂಡು ಸ್ವತಂತ್ರ ನೀಡುವ ಹೆಜ್ಜೆಗಳನ್ನು ಅವರು ಇರಿಸುವಾಗ ಭಾರತದ ಗಿರಿಶಿಖರ ಅಡವಿಯೊಳಗಿದ್ದ ಬಹುತೇಕ ವಿದೇಶಿಗಳು ಇಲ್ಲೆ ಉಳಿಯಲು ಮನಸ್ಸು ಮಾಡಲಿಲ್ಲ. ಕರ್ನಾಟಕದ ಮಲೆನಾಡಿನಲ್ಲಿ ಸಹಾ ಅದು ಸಾಕಮ್ಮನ ತೋಟವಿರಬಹುದು, ಕಾಡುಮನೆ ತೋಟವಿರಬಹುದು. ನೀಲಗಿರಿ ಬೆಟ್ಟಗಳಲ್ಲಿರಬಹುದು, ಬಾಬಾಬುಡನ್ಗಿರಿ ಕೊಡೈಕೆನಾಲ್, ಏರ್ಕಾಡ್, ಸಿಮ್ಲಾ, ಮಸೂರಿ, ಡಾರ್ಜಲಿಂಗ್, ನೈನಿತಾಲ್, ಕುಲು, ಮನಾಲಿ ಅನ್ವೇಷಣೆಯ ಗಿರಿಧಾಮ ತೋಟಗಳಿರಬಹುದು ಬಹಳಷ್ಟು ಮಾಲೀಕರು ತೋಟ ಮಾರಿದರು. ಬೆಂಗಳೂರಿನ ದಂಡು ಪ್ರದೇಶದಲ್ಲಿ ಮನೆಮಠ ಮಾರಿದರು, ಆಳುಕಾಳುಗಳಿಗೆ ಬಿಟ್ಟು ಹೊರಟರು. ಇದು ಅಲ್ಲಿವರೆಗೆ ತಮ್ಮದೇ ಭಾರತದಲ್ಲಿದ್ದ ಇಲ್ಲಿನ ವಿದೇಶಿಗಳು ಸ್ವತಂತ್ರ ಭಾರತ ತಮ್ಮದಲ್ಲ ಎಂದೇ ತಿಳಿದರು. ಅದಕ್ಕೆ ಕಾರಣ ಸ್ವತಂತ್ರ ಪಡೆಯುವಾಗ ಆಗುತ್ತಿದ್ದ ದಂಗೆಗಳು ಕಥನದಲ್ಲಿ ಸಿಗುತ್ತವೆ. ಕೊಪ್ಪ ಅವರು ಕಾರ್ಬೆಟ್ ಕುರಿತ ಜೀವನ ಹಾಗೂ ಕೃತಿಗಳನ್ನಿಟ್ಟುಕೊಂಡು ಕಾರ್ಬೆಟ್ನನ್ನು ಕನ್ನಡದಲ್ಲಿ ಮರುಸೃಷ್ಟಿ ಮಾಡಿಕೊಡುತ್ತಾರೆ.


 ಜಿಮ್ಕಾರ್ಬೆಟ್ (ಎಡ್ವರ್ಡ್ ಜೇಮ್ ಕಾರ್ಬೆಟ್) 1875ರಲ್ಲಿ ನೈನಿತಾಲ್ ಗಿರಿಧಾಮದಲ್ಲಿ ತನ್ನ ತಾಯಿ ಮೇರಿಗೆ ಹನ್ನೊಂದನೇ ಹೆರಿಗೆಯಲ್ಲಿ ಭಾರತದ ಗಿರಿ ನೆಲದ ಮೇಲೆ ಕಣ್ಣು ಬಿಡುತ್ತಾನೆ. ಆಕೆಗೆ ಮೊದಲ ಗಂಡನ ನಾಲ್ಕು ಮಕ್ಕಳೂ ಸೇರಿದಂತೆ ಅವರೊಳಗೆ ಬೆಳೆಯುತ್ತಾನೆ. ತಂದೆ ಕ್ರಿಸ್ಟೋಫರ್ ವಿಲಿಯಮ್ಸ್. ತಾಯಿ ಇಷ್ಟು ಮಕ್ಕಳನ್ನು ಸಾಕುವ ಛಲಗಾತಿ. ನೈನಿತಾಲ್ ಗಿರಿಧಾಮದಲ್ಲಿ ಎಸ್ಟೇಟ್ ವ್ಯವಹಾರಕ್ಕಿಳಿಯುತ್ತಾಳೆ. ತಂದೆ ಪುರಸಭೆ ಸದಸ್ಯನಾಗಿ ಅಧ್ಯಕ್ಷನಾಗಿ ಕಾಲಕ್ಕಾಗಲೇ ಒಳಚರಂಡಿ ಸೇರಿದಂತೆ ನಿರ್ಮಲ ಪಟ್ಟಣವಾಗಿಸುವತ್ತ ಕಾರ್ಯ ನಿರ್ವಹಿಸುತ್ತಾನೆ. ಮುಂದೆ ಮಗ ಸಹಾ ಇದೇ ದಾರಿ ಹಿಡಿಯುತ್ತಾನೆ. ಕಾರ್ಬೆಟ್ ಅಕ್ಕ ಮ್ಯಾಗಿ(ಮಾರ್ಗರೇಟ್) ಹಾಗೂ ಕಾರ್ಬೆಟ್; ಆತನ ತಾಯಿ ಹೇಳುವಂತೆ ಬ್ರೆಡ್ ಅಂಡ್ ಜಾಮ್ ರೀತಿ ಬದುಕಿದವರು. ಕಾರ್ಬೆಟ್ ಬದುಕಿನ ಕಡೆಯಲ್ಲಿ ಕೀನ್ಯಾದಲ್ಲಿ ಅಕ್ಕನ ತೊಡೆಯ ಮೇಲೆಯೇ ಪ್ರಾಣಬಿಟ್ಟವನು. ಇಬ್ಬರೂ ಅವಿವಾಹಿತರಾಗಿಯೇ ಇದ್ದವರು. ಕಾರ್ಬೆಟ್ ಮಗುವಾಗಿದ್ದಾಗ ಪೋಷಣೆ ಮಾಡುವ ಬಡ ಹೆಣ್ಣುಮಕ್ಕಳೊಡನೆ ಬೆಳೆದವನು. ಕುಮಾವನ್ ಸ್ಥಳೀಯ ಭಾಷೆಯಲ್ಲಿ ಜೋಗುಳ ಕೇಳಿದವನು. ಅವರಿಂದಲೇ ಅಂಡು ತೊಳೆಸಿಕೊಂಡವನು, ಬಿಸಿನೀರು ಸ್ನಾನ ಮಾಡಿಸಿಕೊಂಡವನು, ಸ್ಥಳೀಯ ಸಂಸ್ಕøತಿ ರೂಢಿಸಿಕೊಂಡವನು, ತನಗರಿವಿಲ್ಲದಂತೆ ಅಲ್ಲಿನ ಬಡಹೆಣ್ಣುಮಕ್ಕಳ ಎದೆಯಾಳದಲ್ಲಿ ಶಾಶ್ವತವಾಗಿ ಉಳಿದವನು, ಬದುಕಿನುದ್ದಕ್ಕೂ ಬಡವರ ಬದುಕಿನ ನೆರವಾದವನು, ತನ್ನ ಮನೆಯಲ್ಲಿ ಕುಳಿತು ಇಂತಹದೇ ಪಕ್ಷಿಯ ಧ್ವನಿ, ಪ್ರಾಣಿಯ ಕೂಗು ಎಂದು ನಿಖರವಾಗಿ ಹೇಳಬಲ್ಲವನು, ನೆಲದ ಮೇಲಿನ ತರಗಲೆ ಸದ್ದಿನೊಳಗೆ ಕದಲುವಿಕೆಯಲ್ಲಿ ಏನಿದೆ ಎಂಬ ಜ್ಞಾನದ ಅರಿವಿದ್ದವನು. ಆರಂಭದಲ್ಲಿ ಅವನೂ ಸಹಾ ಅರಣ್ಯ ಹಾಗೂ ಅರಣ್ಯದೊಳಗಿನ ಪ್ರಾಣಿಪಕ್ಷಿಗಳು ಇರುವುದೇ ಭೇಟೆಗಾಗಿ ಎಂದು ತಿಳಿದಿದ್ದವನು. ಬೆಳೆಬೆಳೆಯುತ್ತಾ ಉರುಳುವ ಮರಗಳನ್ನು ಕಂಡು ಬರಿದಾಗುವ ಜೀವಿಗಳ ಕಂಡು ತನಗರಿವಿಲ್ಲದಂತೆ ಪರಿಸರ ರಕ್ಷಣೆಯ ಜಾಗೃತ ಪ್ರಜ್ಞೆಗೆ ಎಚ್ಚರಾದವನು. ಮರಬಿದ್ದಾಗ ಚೆಲ್ಲಾಡುವ ಹಕ್ಕಿ ಪಕ್ಷಿಗಳ ಗೂಡು ಅಲ್ಲಿನ ಮರಿಹಕ್ಕಿಗಳು ಬಾಯ್ಬಿಡುವ ಗೋಳಾಟಕ್ಕೆ ಮನಕರಗಿದವನು. ಕಾಲು ಮುರಿದುಕೊಂಡ ಪುಟ್ಟ ಸಾರಂಗ ತಂದು ಸಾಕಿದವನು, ಹಳ್ಳಿಯ ಜಾನುವಾರಿನ ಮುರಿದ ಕಾಲನ್ನು ಸರಿಪಡಿಸಿದವನು.
    ಬಿಹಾರ ರಾಜ್ಯಕ್ಕೆ ಹೊಂದಿಕೊಂಡಿರುವ ಗಂಗಾನದಿಯ ದಕ್ಷಿಣ ಭಾಗಕ್ಕೆ ಮೊಕಮೆಘಾಟ್ ಎಂತಲೂ ಉತ್ತರ ಭಾಗಕ್ಕೆ ಸಮಾರಿಯ ಘಾಟ್ ಎಂದು ಹೆಸರು. ಅಲ್ಲಿ ರೇಲ್ವೆ ಸಾಗಣಿಕೆಯ ಉಸ್ತುವಾರಿಗೆ ಕಾರ್ಬೆಟ್ ಸೇರಿಕೊಂಡ. ಬಡ ಕಾರ್ಮಿಕರ ಆಗುಹೋಗುಗಳಿಗೆ ನೇತಾರನಾಗಿ ನಿಂತ. ತಾತ್ಕಾಲಿಕ ಷೆಡ್ ನಿರ್ಮಿಸಿ ಎರಡು ವರ್ಷಗಳಲ್ಲಿ 270 ಮಕ್ಕಳ ಏಳು ಮಂದಿ ಶಿಕ್ಷಕರ ಶಾಲೆ ತೆರೆದವನು. ಕಷ್ಟ ಕಾಲದಲ್ಲಿ ಸಂಬಳ ತಡವಾಗಿದ್ದಾಗ ತನ್ನಲ್ಲಿದ್ದ ಹಣವನ್ನೆಲ್ಲಾ ಅವರ ಬಡತನಕ್ಕೆ ವಿನಿಯೋಗಿಸಿ ಬೆಳಿಗ್ಗೆ ಸಾಯಂಕಾಲ ಒಂದೊಂದು ಚಪಾತಿ ಮಾತ್ರ ತಿಂದು ಬದುಕಿದ್ದವನು. ಒಬ್ಬ ಮುಸ್ಲಿಂ ವೃದ್ಧ ವಿಷಯ ತಿಳಿದುಹಸಿವಿನಲ್ಲೆ ಸಾಯುವ ಮಂದಿ ನಾವು ಇದು ಹೊಸದಲ್ಲಇದರಲ್ಲಿ ಹೆಂಡತಿಯ ಒಡವೆಗಳಿವೆ ಮಾರಿ ಮನೆಗೆ ಸಾಮಾನು ತಂದು ಕೊಳ್ಳಿ ಎಂದು ಕಾಲುಬಳಿ ಕಣ್ಣೀರಿಡುತ್ತ ಬೇಡಿನಿಂತ ವಿಚಾರ ಬರುತ್ತದೆ (ಪು. 38) ಕಾರ್ಬೆಟ್ ದಿನ ಕಳೆದಂತೆಲ್ಲಾ ಭಾರತದ ಬಡತನಕ್ಕೆ  ಸ್ಪಂದಿಸುತ್ತಾನೆ. ಆಳುವ ದೊರೆಗಳಿಗೆ ತಿಳಿಸಿ ಹೇಳುತ್ತಾನೆ. ತನ್ನ ಕೈಲಾದ ಸಹಾಯ ಮಾಡುವಾಗ ಗೇದುಣ್ಣುವವರ ನೆರವಿಗೆ ಬರುತ್ತಾನೆ. “ ನನ್ನ ಭಾರತದಲ್ಲಿ ಬಡತನವಿದೆ ನಿಜ, ಆದರೆ ಬಡವರಲ್ಲಿ ಹೃದಯ ಶ್ರೀಮಂತಿಕೆಯೂ ಇದೆ ಎಂಬುದನ್ನು ನನ್ನ ಬಿಳಿಯರ ಜಗತ್ತಿಗೆ ಹೇಗೆ ಸಾಬೀತುಪಡಿಸಲಿ (ಪು 40) ಎಂದು ಖಿನ್ನನಾಗಿ ಸಿಗರೇಟ್ ಹಚ್ಚುತ್ತಿದ್ದುದುಂಟು. ಕಾರ್ಬೆಟ್ ಬದುಕಿನಲ್ಲಿ ಒಂದು ಮಾದರಿಯಾಗಿದ್ದ. ಪ್ರಾಮಾಣಿಕತೆಗೆ ಬೆಲೆ ಕೊಡುತ್ತಿದ್ದ. ಒಬ್ಬ ಅಸ್ಪøಶ್ಯ ಅವನ ಹೆಸರು ಚಮರಿ. ಅವನ ಪ್ರಾಮಾಣಿಕತೆಗೆ ಮೆಚ್ಚಿ ಸಂಬಳವನ್ನು 15 ರಿಂದ 40ಕ್ಕೆ ಏರಿಸುತ್ತಾನೆ. ಅವನು ಹಳೆಯ ಸಂಬಳದ 15ರೂ.ಗಳನ್ನು ತಾನು ತನ್ನ ಹೆಂಡತಿ ಜೀವನ ನಿರ್ವಹಣೆಗೆ ಇಟ್ಟುಕೊಂಡು ಉಳಿದದ್ದನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದ್ದ. ಇದನ್ನು ತಿಳಿದ ಕಾರ್ಬೆಟ್ ಒಳ್ಳೆ ಬಟ್ಟೆ ಧರಿಸಲು ಹಣ ಉಳಿಸಲು ಹೇಳುತ್ತಾನೆ. “ಮಹಾರಾಜ್ ಮಕ್ಕಳಿಲ್ಲದ ನನ್ನ ಕುಟುಂಬಕ್ಕೆ ಹದಿನೈದು ರೂಪಾಯಿ ಸಾಕು. ಉಳಿತಾಯ ಮಾಡಿ ಏನು ಮಾಡಲಿ? ನಿಮ್ಮ ದಯೆಯಿಂದ ನಾಲ್ಕಾರು ಜನಕ್ಕೆ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪುಣ್ಯ (ಪು 43) ಎಂದು ಹೇಳುವಲ್ಲಿ ಆಗಿನ ಗಾಂಧಿಭಾರತ ತತ್ವಗಳು ವಿದೇಶಿ ಚರ್ಮ ಹೊದ್ದ ಕಾರ್ಬೆಟನಂತವರ ಮಾರ್ಗದಲ್ಲೂ ಇತ್ತು ಎಂಬುದು ಮಾರ್ಗ ಕಾಣುತ್ತದೆ. ಇದೇ ಚಮರಿಯ ಅಂತ್ಯಕ್ರಿಯೆಯಲ್ಲಿ ಇಡೀ ಪಟ್ಟಣ ಬಂದ್ ಆಚರಿಸಿತ್ತಂತೆ. ಇದು ಕಾರ್ಬೆಟ್ ಬದುಕಿನ ಮಾರ್ಗ.
       ಗಯಾ ಪಟ್ಟಣದಲ್ಲಿ ಲಾಲಾಜಿ ಎಂಬ ವ್ಯಾಪಾರಿಯಿದ್ದ. ಅವನ ಗೆಳೆಯ ವ್ಯಾಪಾರದಲ್ಲಿ ಅವನಿಗೆ ಮೋಸ ಮಾಡಿದ. ಗಂಗಾನದಿಗೆ ಹಾರಲು ಯತ್ನಿಸುತ್ತಿದ್ದ ಲಾಲಾಜಿಯನ್ನು ಕಾರ್ಬೆಟ್ ನೋಡಿ ಉಳಿಸಿದ. ವಿಷಯ ತಿಳಿದು ಐನೂರು ರೂಪಾಯಿ ಸಾಲ ನೀಡಿ ಮತ್ತೆ ವ್ಯಾಪಾರ ಮಾಡಲು ಪ್ರೇರೇಪಿಸಿದ. ಎಷ್ಟೋ ದಿನಗಳಾದ ಮೇಲೆ ಅದೇ ಲಾಲಾಜಿ ಬಂದ. ವ್ಯಾಪಾರ ಭರ್ಜರಿಯಾಗಿ ಪುನಃ ಬಂಡವಾಳಗಾರನಾಗಿದ್ದ. ಹಣ ಮತ್ತು ಬಡ್ಡಿ ಲೆಕ್ಕ ಹಾಕಿ ನೀಡಲು ಹೋದ. ಲಾಲಾಜಿಯಿಂದ ಕೇವಲ ಅಸಲು ಪಡೆದು ಹರಸಿದ. ಇದು ಜಿಮ್ ಕಾರ್ಬೆಟ್ ಸಾಮಾಜಿಕ ನೆರವು. ಕಾರ್ಬೆಟ್ ಪ್ರಾಮಾಣಿಕವಾಗಿ ದುಡಿಯುತ್ತಿದ್ದ. ದುಡಿದದ್ದನ್ನೆಲ್ಲಾ ಹಂಚಿಯೂ ಬಿಡುತ್ತಿದ್ದ. “ಕಲದೊಂಗಿ ಹಾಗೂ ಚೋಟಿ ಹಲ್ದವಾನಿ ಹಳ್ಳಿಯಲ್ಲಿ ತಾನು ಖರೀದಿಸಿದ್ದ ಸಾವಿರಾರು ಎಕರೆ ಭೂಮಿಯನ್ನು ಬಡರೈತರಿಗೆ ಉಚಿತವಾಗಿ (ಪು 47) ಹಂಚಲು ಪರೋಕ್ಷ ಕಾರಣಗಳು ಒದಗಿದವು. ತನ್ನ ಮದುವೆ ಮಕ್ಕಳ ವಿಚಾರಗಳಿಗೆಲ್ಲಾ ತಿಲಾಂಜಲಿ ನೀಡಿದ. ಪ್ರಾಣಿ ಹಾಗೂ ಪರಿಸರ ಅನನ್ಯ ಪ್ರೀತಿ ಬೆಳೆಸಿಕೊಂಡ.
               

  ಬಡಜನತೆಯ ಉದ್ಧಾರಕ್ಕಾಗಿ ಇಡೀ ಒಂದು ಹಳ್ಳಿಯನ್ನು ಖರೀದಿಸಿ ಅದನ್ನು ಹಳ್ಳಿಗರಿಗೆ ದಾನ ಮಾಡಿದ ಭಾರತದ ಏಕೈಕ ಹೃದಯವಂತ (ಐರಿಷ್) ಮೂಲದ ವ್ಯಕ್ತಿಯೆಂದರೆ ಅದು ಜಿಮ್ ಕಾರ್ಬೆಟ್ ಮಾತ್ರ (ಪು 59) ತಲಾ ಎರಡರಿಂದ ಐದು ಎಕರೆ ಭೂಮಿ ಹಂಚುತ್ತಾನೆ. ಕಾಡು ಪ್ರಾಣಿಗಳ ಕಾಟಕ್ಕೆ ತಡೆಗೋಡೆಯಾಗಿ ಇಡೀ ಗ್ರಾಮಕ್ಕೆ ನಾಲ್ಕು ಅಡಿ ದಪ್ಪದ ಆರು ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸುತ್ತಾನೆ. ಅಲ್ಲಿ ಈಗ ಒಂದು ಮಾವಿನ ಮರ ಹೆಮ್ಮರವಾಗಿ ಅವನ ಹೆಸರು ಹೇಳುತ್ತಿದೆ. ಆಗ ಬೆಳೆಗೆ ಬೆನ್ನೆಲುಬಾಗಿ ನೈನಿತಾಲ್ನಲ್ಲಿ ಮಾರುಕಟ್ಟೆ ಸ್ಥಾಪಿಸುತ್ತಾನೆ. ಮಧ್ಯವರ್ತಿಗಳ ಕಾಟ ತಪ್ಪಿಸುತ್ತಾನೆ. ಹೀಗೆ ಅವನು ಮುಂದೆ ಬರುವ ಸ್ವತಂತ್ರ ಭಾರತಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾನೆ. “ಅವನ ಬದುಕು ನಡವಳಿಕೆ ಎಲ್ಲವೂ ಸ್ಥಳೀಯ ಜನರಿಗೆ ಮಾದರಿಯಾಗಿದ್ದವು. ಅಷ್ಟೇ ಅಲ್ಲದೆ ಕಾರ್ಬೆಟ್ ಮಾತುಗಳನ್ನು ದೇವರ ಅಪ್ಪಣೆ ಎಂಬಂತೆ ಅಲ್ಲಿನ ಜನತೆ ಪಾಲಿಸುತ್ತಿದ್ದರು. (ಪು 61). ವಿಚಾರಗಳನ್ನೆಲ್ಲಾ ಕಲೆಹಾಕುತ್ತ ಕ್ಷೇತ್ರ ಕಾರ್ಯ ಮಾಡುತ್ತ ಹೋಗುವ ಜಗದೀಶ ಕೊಪ್ಪ ಅವರನ್ನು ಅಲ್ಲಿ ಒಬ್ಬ ಮುಸ್ಲಿಂ ಹೆಣ್ಣು ಮಗಳು ಮನೆಗೆ ಕರೆದು ತನ್ನ ತಾತ ಬಹದ್ದೂರ್ಖಾನ್ ಕಾರ್ಬೆಟ್ನೊಡನೆ ಮೂವತ್ತು ವರ್ಷ ಆತನ ಬಂಟನಾಗಿದ್ದ ಎಂಬ ವಿಚಾರ ಹೇಳಿ ಭಾರತದ ವೈಸರಾಯ್ ಹಾಗೂ ಕಾರ್ಬೆಟ್ನೊಡನೆ ತನ್ನ ತಾತ ನಿಂತಿರುವ ಫೋಟೋ ತೋರಿಸುತ್ತಾಳೆ. (ಪು 62) ಈಗ ಚೋಟಿ ಹಲ್ದವಾನಿ ಯುವಕರು ಒಗ್ಗೂಡಿ ಕಾರ್ಬೆಟ್ ಹೆಸರಿನಲ್ಲಿ ಎಕೋಟೂರಿಸಂ ರೆಸಾರ್ಟ್ ಮಾಡಿಕೊಂಡಿದ್ದಾರಂತೆ. ಇದು ಒಬ್ಬ ಮನುಷ್ಯ ನೆಲದಲ್ಲಿ ಬದುಕಿ ಹೋದ ಮಾರ್ಗ.
                ಇಷ್ಟಾದರೂ ಅಪ್ಪಟ ಭಾರತೀಯನಾಗಿ ಬದುಕಿದರೂ ಭಾರತವನ್ನು ತೊರೆದು ಕೀನ್ಯಾದಲ್ಲಿ ಏಕೆ ಅನಾಮಿಕನಂತೆ ನಿಧನ ಹೊಂದಿದ ಎಂಬುದಕ್ಕೆ ಅವನ ತಾಯಿ ಮೇರಿಯಲ್ಲಿ ಅಡಗಿದ್ದ ಒಳಗಿನ ಭಯ ಎಂದು ಕಾಣುತ್ತದೆ. 1857 ಸಿಪಾಯಿ ದಂಗೆಯನ್ನು ಕಂಡವಳು. ಬ್ರಿಟಿಷರ ಆಳ್ವಿಕೆ ನಂತರ ಭಾರತದಲ್ಲಿ ವಿದೇಶಿಯರಿಗೆ ಬದುಕಿಲ್ಲ ಎಂದು ಎಳೆಯ ಹರದಯದಲ್ಲಿ ಆಕೆ ಪಿಸುಗುಟ್ಟಿದ್ದಳು. ಅದು ಕಾರ್ಬೆಟ್ ಎದೆಯೊಳಗೆ ಹೆಮ್ಮರವಾಗಿ ಬೆಳೆದಂತಿದೆ ಎಂದು ಕೃತಿಕಾರರು ಹೇಳುತ್ತಾರೆ (ಪು 119) ಕಾರ್ಬೆಟ್ ಅವನ ಗಿರಿಧಾಮದ ಮನೆಗಳನ್ನು ಮಾರಾಟ ಮಾಡುತ್ತಾನೆ. ಗಾರ್ನಿಹೌಸ್; ಎಂಬ ಬೃಹತ್ ಬಂಗಲೆ ಕೊಂಡ ಸಕ್ಕರೆ ವ್ಯಾಪಾರಿ ಶರ್ಮಸ್ವರ್ಗದ ಮೇಲೆ ಭೂಮಿಯ ತುಣುಕೊಂದನ್ನು ಖರೀದಿಸಿದ್ದೀನಿಎಂದು ಬಂದುಮಿತ್ರರೊಡನೆ ಸಂತಸ ಹಂಚಿಕೊಂಡಿದ್ದನಂತೆ.
        ಕೃತಿಯಲ್ಲಿ ಕಾರ್ಬೆಟ್ ಶಿಕಾರಿ ನೆನಪುಗಳ ಕಿರು ಪರಿಚಯಗಳಿವೆ. ಪಾಲಿ ಎಂಬ ಹಳ್ಳಿಯಲ್ಲಿ 1907ರಲ್ಲಿ ಪ್ರಥಮವಾಗಿ ನರಭಕ್ಷಕ ಹುಲಿ ಬೇಟೆಯಾಡುತ್ತಾನೆ. ಅದು ಇಲ್ಲಿ 200 ಜನರನ್ನು ತಿಂದು ಹಾಕಿದ್ದ ನೇಪಾಲದಿಂದ ತಪ್ಪಿಸಿಕೊಂಡು ಬಂದಿದ್ದ ಹೆಣ್ಣು ಹುಲಿ. ಜಿಲ್ಲಾಧಿಕಾರಿ ಕೋರಿಕೆಯಂತೆ ಕೊಲ್ಲಲು ಒಪ್ಪಿರುತ್ತಾನೆ. ಸರ್ಕಾರ ಬಹುಮಾನ ಘೋಷಿಸಬಾರದು ಹಾಗೂ ಇತರೆ ಬೇಟೆಗಾರರು ಅಲ್ಲಿ ಸುಳಿಯಬಾರದು ಎಂಬುದು ಇವನ ಷರತ್ತು. ಅದಕ್ಕೆ ಕಾರಣ ಅಮಾಯಕ ಇನ್ನಿತರೆ ಪ್ರಾಣಿಗಳನ್ನು ಬಹುಮಾನದಾಸೆಗೆ ಇತರರು ಕೊಲ್ಲುತ್ತಾರೆಂಬ ಇವನ ಭಯ. ಕಾರ್ಬೆಟ್ ಹುಲಿ ಹೆಜ್ಜೆ ಗುರುತುಗಳಲ್ಲಿ ಹುಲಿ ವಯಸ್ಸು ಹಾಗೂ ಅದರ ಆರೋಗ್ಯ ಗುರುತಿಸುವ ಸೂಕ್ಷ್ಮಜ್ಞ. ನರಭಕ್ಷಕ ಹುಲಿಯ ಕೊಂದ ಅಂದು ಕಥೆ ಜಗತ್ತಿನ ರೋಮಾಂಚನಕಾರಿ ಅನುಭವ. ಆಗ ಇದು ಬ್ರಿಟಿಷ್ ಪಾರ್ಲಿಮೆಂಟನ್ನು ಚಿಂತೆಗೀಡು ಮಾಡಿತ್ತು. ಮತ್ತೊಂದು ಹುಲಿ 24 ಮಂದಿ ಕೊಂದಿತ್ತು. ಮುಕ್ತೇಶ್ವರ ಎಂಬ ಹಳ್ಳಿಯ ಸತ್ಯ ಕತೆಯಿದು. ಅಕ್ಷರಶಃ ಆಗ ಜೀವಂತ ಶವವಾಗಬೇಕಿದ್ದ ಕಾರ್ಬೆಟನು ಕರಾಳ ರಾತ್ರಿಯಲ್ಲಿ ಮಳೆ ಚಳಿಯಲ್ಲಿ ಮರಗಟ್ಟಿ ಹೋಗಿದ್ದ. ಮತ್ತೊಂದು ರುದ್ರಪ್ರಯಾಗದ ನರಭಕ್ಷಕ ಚಿರತೆ ಕೊಂದ ಕತೆಯು ಜಗತ್ತಿನ ಭಯಾನಕ ಅನುಭವಗಳಲ್ಲೊಂದು. ಭಾರತದ ವೈಸರಾಯ್ ಇವನ ಅತಿಥಿಯಾಗಿ ಬಂದು ಕಾರ್ಯಕ್ಕೆ ಶ್ಲಾಘಿಸಿದ್ದ. “ ಸೋಜಿಗದ ಸಂಗತಿ ಎಂದರೆ ... ಅಲ್ಲಿನ ಕಾಡು ದಾರಿಯಲ್ಲಿ ಪುಟ್ಟದಾದ ಹನುಮಾನ್ ದೇವಾಲಯಗಳಿವೆ. ಜೊತೆಗೆ ಕೆಲವು ದೇವಸ್ಥಾನಗಳಲ್ಲಿ ಜಿಮ್ ಕಾರ್ಬೆಟನ ಕಪ್ಪು ಬಿಳುಪಿನ ಚಿತ್ರಗಳಿವೆ. ಕಾಡು ಪ್ರಾಣಿಗಳಿಂದ ಹನುಮಾನ್ ಮತ್ತು ಕಾರ್ಬೆಟ್ ಸಾಹೇಬ್ ನಮ್ಮನ್ನು ರಕ್ಷಿಸುತ್ತಾರೆ ಎಂದು ಅಲ್ಲಿನ ಜನ ನಂಬಿಕೊಂಡಿರುವುದನ್ನು ನಾವು ಕಾಣಬಹುದು. (ಪು 78) ಇದು ಕೃತಿಕಾರನ ಮಾತಿನ ಸಂಶೋಧನೆ. ಇದು ಪವಾಡದಂತೆ ಬದುಕಿದÀ  ಚಾರಿತ್ರಿಕ ಪುರುಷರ ಬಗೆಯ ನಂಬಿಕೆ. ಜನಪದವೆಂದರೆ ಒಂದು ನಂಬಿಕಾವಿಧಾನ. ಬದುಕಿನ ಮಾರ್ಗಕಾರನ ಅಭಿಮಾನ. ಮನುಷ್ಯ ಪೂಜಿತನಾಗುವುದು ಹೀಗೆ.
   ಜಿಮ್ ಕಾರ್ಬೆಟ್ ತಾನು ನರಭಕ್ಷಕ ಹುಲಿ, ಚಿರತೆ ಕೊಂದ ಕತೆಗಳು ಕೇವಲ ಭಾರತದಲ್ಲಿ ಅಷ್ಟೇ ಅಲ್ಲ. ಅಂದು ವಿಶ್ವದ ಎಲ್ಲಾ ಬ್ರಿಟಿಷ್ ಸಾಮ್ರಾಜ್ಯದಲ್ಲೆಲ್ಲಾ ಹರಡಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಚರ್ಚೆಯಾಗುತ್ತದೆ. ಇವನು ಭಾರತಕ್ಕೆ ಅಷ್ಟೇ ಏಕೆ ಜಗತ್ತಿಗೆ ಬೇಕಾದ ಮನುಷ್ಯನಾಗುತ್ತಾನೆ. ಅವನ ಶಿಕಾರಿ ಚತುರತೆಯೊಡನೆ ಸ್ಥಳೀಯ ಜನರಿಗೆ ಬೇಕಾದ ಬಿಳಿ ಸಾಹೇಬನಾಗಿ ಸಮಾಜದ ನೋವು ನಲಿವಿಗೆ ಬೇಕಾದ ಸಂಪನ್ಮೂಲ ವ್ಯಕ್ತಿಯಾಗಿ ರೂಪಿತಗೊಳ್ಳುತ್ತಾನೆ. ಭಾರತದ ವೈಸರಾಯ್ ಗೆಳೆಯನಾಗುತ್ತಾನೆ. ಜಿಲ್ಲಾಧಿಕಾರಿಗಳ ಸಂಸಾರಿ ಗೆಳೆಯನಾಗುತ್ತಾನೆ. “ಹಸಿವು ಮತ್ತು ಕಾಮವನ್ನು ಗೆಲ್ಲುವುದು ಸುಲಭದ ಮಾತಲ್ಲ. ಕೃತಿಯಲ್ಲಿ ಕೊಪ್ಪ ಅವರು ಹೇಳುವಂತೆ ಜಿಲ್ಲಾಧಿಕಾರಿ ಇಬೊಟ್ಟನ್ ಪತ್ನಿ ಜೀನ್ ಜೊತೆ ಸಂಬಂಧವಿತ್ತು ಎಂಬ ದಾಖಲೆಗಳಿವೆ. ಅರಣ್ಯಾಧಿಕಾರಿ ಸ್ನೇಹಿತನೊಬ್ಬನ ನಾದಿನಿ ಹೆಲೆನ್ ಎಂಬುವಳಿಗೆ ಹತ್ತೊಂಭತ್ತು ವರ್ಷ. ಆದರೆ ಕಾರ್ಬೆಟ್ಗೆ ಆಗಲೇ ಇಳಿವಯಸ್ಸು. ಆಕೆಯ ಮತ್ತು ಕಾರ್ಬೆಟ್ ಪ್ರೀತಿಗೆ ಅವರ ಪೋಷಕರು ಸಹಕರಿಸಲಿಲ್ಲ. ಇಂಗ್ಲೆಂಡಿಗೂ ಹೋಗಿ ಒಪ್ಪಿಸಲು ನೋಡಿದ. ಆಗಲಿಲ್ಲ. ಹಲವು ತಿಂಗಳು ಮೌನಿಯಾದ. ಆಗಿನ ಕಾಲದ ಭಾರತದ ಬ್ರಿಟಿಷ್ ಕುಟುಂಬಗಳಲ್ಲಿ ವಿಧವೆ ಅಥವಾ ವಿಚ್ಛೇದಿತಳನ್ನು ಮದುವೆ ಆಗಬಹುದಿತ್ತು. ಯಾವುದಕ್ಕೂ ಒಪ್ಪಲಿಲ್ಲ. ‘ಭಾರತವೇ ನನ್ನ ಕುಟುಂಬಎಂದುಬಿಟ್ಟ. ‘ಆಡಂಬರದ ಬದುಕು ಅವನದಲ್ಲ. ಮನೆಯಲ್ಲಿ ಸಾಕಿಕೊಂಡಿದ್ದ ಆನೆ, ಕುದುರೆ, ನಾಯಿ ಬಗೆಬಗೆಯ ಪಕ್ಷಿಗಳು ಇವುಗಳೆಲ್ಲದರ ಮೇಲ್ವಿಚಾರಕರು ಇವರೆಲ್ಲ ಸೇರಿ ಅವನ ಮನೆ ಮಿನಿ ಭಾರತವಾಗಿತು್ತ. (ಪು 113).
                ಪ್ರಥಮವಾಗಿ 1931ರಲ್ಲಿ ಪತ್ರಿಕೆಯೊಂದಕ್ಕೆಪಿಪಾಲ್ ಪಾನಿ ಟೈಗರ್ಪ್ರಸಂಗ ಬರೆದ. ಅನೇಕ ಬ್ರಿಟಿಷ್ ಅಧಿಕಾರಿಗಳು ಪತ್ರಿಕೆಯ ಚಂದಾದಾರರು. ಅನಂತರ ಅನುಭವಗಳನ್ನೆಲ್ಲಾ ಬರೆಯುತ್ತಾ ಹೋದ. ಬರವಣಿಗೆಯನ್ನು ಹಾಗೂ ಸ್ನೇಹವನ್ನು ಬಯಸಿದ ಭಾರತದ ವೈಸರಾಯ್ ಲಿನ್ಲಿಥ್ ಗೌ ತಾನು ಆಸಕ್ತಿ ವಹಿಸುತ್ತಿದ್ದಲ್ಲದೆ ಕುಟುಂಬದೊಡನೆ ಇದ್ದು ಹೋಗುತ್ತಿದ್ದ. ಮುಂದೆ ಕಾರ್ಬೆಟ್ ತನ್ನ ಆಸ್ತಿ ಮಾರಾಟದ ಹಣವನ್ನು ಸೇರಿಸಿ ಇನ್ಸೂರೆನ್ಸ್ ಕಂಪೆನಿ ಪ್ರಾರಂಭಿಸಿದ. ಜೈಪುರದ ಮಹಾರಾಜನಿಗೆ ಸಾಲ ನೀಡಿದ್ದ. ಸ್ನೇಹಿತರೊಡಗೂಡಿ ಕೀನ್ಯಾದಲ್ಲಿ ಅಪಾರ ಆಸ್ತಿ ಮಾಡಿದ. ಎರಡನೇ ಮಹಾಯುದ್ಧದಲ್ಲಿ ಬರ್ಮಾದಲ್ಲಿ ಭಾರತ ಸೈನ್ಯವು ಇವನಿಂದ ಅಡವಿಜ್ಞಾನ ಪ್ರಾಣಿಜ್ಞಾನ ನೆರವು ಪಡೆಯಿತು. ಬ್ರಿಟಿಷ್ ಸರ್ಕಾರ ಇವನಿಗೆಕಂಪಾನಿಯನ್ ಆಪ್ ಬಿ ಇಂಡಿಯನ್ ಎಂಪೈರ್ಎಂಬ ಬಿರುದು ನೀಡಿತು. ಇವನಜಂಗಲ್ ಸ್ಟೋರೀಸ್ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ಲ್ಲಿ ಯಶಸ್ಸು ಪಡೆದು ಆಗಿನ ಕಾಲಕ್ಕೆ 5 ಲಕ್ಷ ಪ್ರತಿಗಳು ಖರ್ಚಾದವು. ‘ಮ್ಯಾನ್ ಈಟರ್ ಆಪ್ ಕುಮಾವನ್ಚಲನಚಿತ್ರವೂ ಆಯಿತು. ‘ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರ ಪ್ರಯಾಗ್ಹೊರಬಂದಿತು. ಹೀಗೆ ಎಲ್ಲವೂ ಜಗದ್ವಿಖ್ಯಾತವಾದವು.
  


  ಅವನುಗಾರ್ನಿಹೌಸ್ಬಿಡುವುದನ್ನು ಗುಟ್ಟಾಗಿಟ್ಟಿದ್ದ. ಮನೆ ತೊರೆದು ಹೊರಟಾಗ ಇಡೀ ಹಳ್ಳಿಗೆ ಆಘಾತವಾಯಿತು. ಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಕಣ್ಣೀರು ಕರೆದರು. ಅವನ ನೆಚ್ಚಿನ ಸೇವಕ ರಾಮಸಿಂಗ್ಲಕ್ನೋ ರೇಲ್ವೆ ನಿಲ್ದಾಣದಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅತ್ತ. ಅತ್ತ ಕಾರ್ಬೆಟ್ ಕೀನ್ಯಾದಲ್ಲಿ ನೈನಿತಾಲ್ ಗಿರಿಧಾಮದಂತಹ ಜಾಗ ಸ್ಥಿರಗೊಳಿಸಲು ಹೆಣಗಾಡಿದ. ಅಲ್ಲಿಯೂಸಫಾರಿ ಲ್ಯಾಂಡ್ಎಂಬ ಸಂಸ್ಥೆ ಪ್ರಾರಂಭಿಸಿದ. ಅಲ್ಲಿ ಅವನಜಂಗಲ್ ಲೋರ್ಕೃತಿ ದಾಖಲೆ ಮಾರಾಟ ಸೃಷ್ಟಿಸಿತು. ಕೀನ್ಯಾ ಪ್ರವಾಸದಲ್ಲಿ ಎಲಿಜಬತ್ ರಾಣಿಗೆ ಮಚ್ಚಾನಿ ಮೇಲೆ ವನಮೃಗ ವೀಕ್ಷಣೆ ಸೃಷ್ಟಿಸಿದ. ಇದೆಲ್ಲಾ ಬಿಳಿಸಾಹೇಬನ ಸಾಹಸ.
                1955ರಲ್ಲಿ ಹೃದಯಾಘಾತದಿಂದ ಅಕ್ಕನ ತೊಡೆ ಮೇಲೆ ಪ್ರಾಣಬಿಟ್ಟ. ಆಕೆ ಅವನ ಆಸೆಯಂತೆ ಭಾರತದ ಚೋಟಿ ಹಲ್ದವಾನಿ ಹಳ್ಳಿಯ ಕಂದಾಯವನ್ನು ರೈತರ ಪರವಾಗಿ ಭರಿಸುತ್ತ ಬಂದಳು. ಭಾರತ ಸರ್ಕಾರ ಅಲ್ಲಿನ ಭೂಮಿ ಮತ್ತು ನಿವೇಶನಗಳನ್ನು ರೈತರ ಹೆಸರಿಗೆ ವರ್ಗಾಯಿಸಿತು. ಬಂಗಲೆಕೊಂಡಿದ್ದ ಚಿರಂಜಿಲಾಲ್ ಷಾ ಕುಟುಂಬದವನ್ನು ಒಪ್ಪಿಸಿ ಇಪ್ಪತ್ತು ಸಾವಿರಕ್ಕೆ ಕೊಂಡು ಸ್ಮಾರಕ ಮಾಡಿತು. ಅಲ್ಲಿನ ಅರಣ್ಯವನ್ನುಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ಎಂದು ಘೋಷಿಸಿತು. ಇದು ಒಬ್ಬ ವಿದೇಶಿ ಪ್ರಜೆಯ ಬದುಕಿಗೆ ಭಾರತ ನೀಡಿದ ಗೌರವ. ಇವತ್ತಿಗೂ ಉತ್ತರ ಭಾರತದ ಜನತೆ ನೈನಿತಾಲ್ ಗಿರಿಧಾಮವನ್ನು ಕಾರ್ಬೆಟ್ ನೈನಿತಾಲ್ ಎಂದು ಕರೆಯುತ್ತಾರೆ. ಆದರೆ ನೈನಿತಾಲ್ ಗಿರಿಧಾಮದ ಜನತೆಗೆ ತನ್ನ ನೆಲದ ಒಬ್ಬ ಇತಿಹಾಸ ಪುರುಷನ ಬಗ್ಗೆ ಮಾಹಿತಿ ಇಲ್ಲದಿರುವುದು ನಿಜಕ್ಕೂ ನೋವಿನ ಸಂಗತಿ. ತಾವು ಬದುಕುತ್ತಿರುವ ವರ್ತಮಾನ ಬದುಕಿಗೆ ಇತಿಹಾಸದ ಹಂಗು ಬೇಕಿಲ್ಲ ಎಂಬಂತೆ ಅಲ್ಲಿನ ಜನತೆ ಬದುಕುತ್ತಿದ್ದಾರೆ.” ಇದು ಕೃತಿಕಾರ ಜಗದೀಶ ಕೊಪ್ಪ ಅವರ ಬರಹದ ಅಂತಿಮ ನುಡಿಗಳು (ಪು 131) ಆದರೆ ಕೃತಿಯ ಆರಂಭದಲ್ಲಿ ಬರುವ ಮಾತುಗಳಂತೆ ಅವನು ಬಾಳಿದ ಗಿರಿಧಾಮ ಸಮೀಪದ ಕಲದೊಂಗಿ ಮತ್ತು ಚೋಟಿಹಲ್ದವಾನಿ ಮನೆ ಅವನು ಹಿಂದಿರುಗಿ ಬರುತ್ತಾನೆಂದು ಕಾಯುತ್ತಿದೆ.
               


  ‘ಕಾರ್ಪೆಟ್ ಸಾಹೇಬ್ಎಂಬುದು ಬ್ರಿಟಿಷ್ ಪತ್ರಕರ್ತ ಮಾರ್ಟಿನ್ ಭೂತ್ ಬರೆದ ಕೃತಿ. ಕಾರ್ಬೆಟ್ ಸಾಕ್ಷ್ಯಚಿತ್ರ ತೆಗೆಯಲು ಚಿತ್ರತಂಡ ಬ್ರಿಟನ್ನಿನಿಂದ ಬಂದಿತ್ತು. ದಿನ ವೃದ್ಧನೊಬ್ಬ ಕಾಲ್ನಡಿಗೆಯಲ್ಲಿ 90 ಕಿಮೀ ದೂರದೂರಿನಿಂದ ಗುಡ್ಡ ಹತ್ತಿ ಇಳಿದು ಬಂದಿದ್ದ. ಕಾರ್ಬೆಟ್ ಪಾತ್ರದಾರಿಯನ್ನೆ ಕುರಿತು ಅಲ್ಲಿನ ಗಢವಾಲ್ ಭಾಷೆಯಲ್ಲಿಸಾಹೇಬ್ ನಮ್ಮನ್ನು ಇಷ್ಟು ವರ್ಷ ಅನಾಥರನ್ನಾಗಿ ಮಾಡಿ ಎಲ್ಲಿ ಹೋಗದ್ದಿರಿ? ದಯಮಾಡಿ ನೀವು ಪುನಃ ನಮ್ಮನ್ನು ತೊರೆದು ಹೋಗಬೇಡಿ ಎಂದು ಅಂಗಲಾಚ ತೊಡಗಿದ್ದ. ( ಪು 2) ಕಾರ್ಬೆಟ್ ತೀರಿ ಹೋಗಿ ಅವನ ಸಾಕ್ಷ್ಯಚಿತ್ರ ತಯಾರಿ ಇದಾಗಿದೆಯೆಂದು ಚಿತ್ರತಂಡ ಟೊಂಗೆ ಊರಿ ಬಂದಿದ್ದ ಮುದುಕನಿಗೆ ಹೇಳುವ ಮಾತುಗಳು ಆತನಿಗೆ ಹೇಗೆ ಅರ್ಥವಾದೀತು! ಇದು ಕಾರ್ಬೆಟ್ನೊಡನೆ ಜನತೆ ಹೊಂದಿದ್ದ ಅವಿನಾವ ಸಂಬಂಧ ಬದುಕು. ಈಗ ಅವನದೊಂದು ದಂತ ಕಥೆ. ಸಾಹಸಿಗಳೇ ಹೀಗೆ! ಅವರದೊಂದು ಚಲನೆ. ಅವರದೊ ಅವಧೂತ ಮಾರ್ಗ, ಅವರದೊಂದು ಸಂತರ, ಸೂಫಿಗಳ ಬದುಕು, ಒಂಟಿಯಾಗಿದ್ದರೂ ಸಂಸಾರದೊಳಗಿದ್ದ ಕಾರ್ಬೆಟ್ ಭಾರತವೆಂಬ ಸಂಸಾರಕ್ಕೆ ಕಥನವಾದ ಬಗೆ. ಇವನು ದೇಶ ಯಾಕೆ ತೊರೆದ. ತೊರೆಯುದಿದ್ದರೇನಾಗುತ್ತಿತ್ತು ಎಂಬುದಕ್ಕೆ ಉತ್ತರಗಳಿಲ್ಲ. ವಿಶ್ವದ ಚಲನೆಯೇ ಹೀಗಲ್ಲವೆ! ಕೊಪ್ಪ ಅವರ ಕೃತಿ ಇಂತಹ ವಿಶ್ವಮಾನವನ ಪರಿಚಯ ಮಾಡಿಕೊಡುತ್ತದೆ. ಭಾರತದ ಬಿಳಿಸಾಹೇಬನ ಹುಡುಕುತ್ತ ಹೋಗುವ ಕೃತಿ ಶ್ಲಾಘನೀಯ ಕಾರ್ಯದ ಸಂಶೋಧನೆಯದು.
                                                    ಡಾ|| ರಾಜೇಗೌಡ ಹೊಸಹಳ್ಳಿ
                                                 413, ಒಂದನೇ ತಿರುವು, ಟೀಚರ್ಸ್ ಕಾಲನಿ, ನಾಗರಭಾವಿ, ಬೆಂಗಳೂರು - 72
                                           ಮೊಬೈಲ್ : 9980066070