Sunday, 29 September 2013

ನಾ ಕಂಡ ಸಬರಮತಿ ಆಶ್ರಮ


                                                           
 ಗುಜರಾತ್ ಗಾಂಧಿ ಹುಟ್ಟಿದ ನಾಡು. ಅಷ್ಟೇ ಅಲ್ಲ, ದ್ವೇಷ, ದಳ್ಳುರಿ, ಅಸೂಯೆಗಳ ಬೀಡು ಕೂಡ ಹೌದು.ಹಿಂದೊಮ್ಮೆ ಗುಜರಾತ್ ನರಾಜಧಾನಿಯಾಗಿದ್ದ, ಇಂಡಿಯಾದ ಲಂಕಾ ಫೈರ್ ಎಂದು ಹೆಸರಾಗಿದ್ದ ಅಹಮದಾಬಾದ್ ನಗರ ಈಗ ದ್ವೇಷ ಹಾಗು ಧರ್ಮ-ಕೋಮುಗಳ ನಡುವಿನ ಸಂಘರ್ಷಕ್ಕೆ ಪ್ರತೀಕವಾಗಿ ನಿಂತಿದೆ. ಸುಮಾರು 218 ಬಟ್ಟೆ ಮಿಲ್‍ಗಳಿರುವ ಈ ನಗರದಲ್ಲಿ ಕೇವಲ ಮಿಲ್‍ಗಳ ಚಿಮಣಿಯಿಂದ ಮಾತ್ರ ಹೊಗೆಯೇಳುವುದಿಲ್ಲ. ಇಲ್ಲಿನ ಜನರ ಎದೆಯೊಳಗೂ ಕೂಡ ಕೋಮು ಜ್ವಾಲೆಯ ಹೊಗೆಯಾಡುತ್ತಲೇ ಇರುತ್ತದೆ. ಇಂದಿಗೂ ನೀವು ಈ ನಗರದ ಮುಖ್ಯ ರಸ್ತೆಗಳಲ್ಲಿ ಒಂದಾದ ರಿಲೀಪ್ ರಸ್ತೆಯಲ್ಲಿ ಅರೆಸುಟ್ಟ ವಾಹನಗಳು, ಮುರಿದುಹೋದ ಸೈಕಲ್‍ಗಳು, ಕಿತ್ತುಹೋದ ಬಾಗಿಲುಗಳು, ಹಜ್ಜೆ ಹೆಜ್ಜೆಗೂ ಬಂದೂಕು ಹಿಡಿದು ನಿಂತ ಪೋಲೀಸರು, ರಸ್ತೆಯ ನಡುವೆಯೇ ಎದ್ದು ನಿಂತಿರುವ ದೇವಾಲಯಹಾಗು ಮಸೀದಿಗಳು, ಮನೆ ಮನೆಯ ಮೇಲೂ ಹಾರಾಡುವ ಕೇಸರಿ ಹಾಗು ಹಸಿರು ಬಾವುಟಗಳನ್ನು ಕಾಣಬಹುದು.ಇವೆಲ್ಲವೂ ಈ ನಾಡಿನ ನೋವಿನ ಕಥೆಯನ್ನು ಪ್ರವಾಸಿಗರಿಗೆ ಹೇಳುತ್ತಾ ಮೂಕ ಸಾಕ್ಷಿಗಳಾಗಿ ನಿಂತಿವೆ.
                        ಇಡೀ ಭಾರತದಲ್ಲೇ ಅತ್ಯಂತ ಕೆಟ್ಟ ಸಾರಿಗೆ ವ್ಯವಸ್ಥೆ ಹಾಗು ಪರಿಸರ ಮಾಲಿನ್ಯಕ್ಕೆ ಉದಾಹರಣೆಯಾಗಿರುವಈ ನಗರ, ಒಮ್ಮೆ ಗಾಂಧೀಜಿಯವರ ನೆಲೆಬೀಡಾಗಿತ್ತು ಎಂದರೆ ನೀವು ನಂಬುತ್ತೀರಾ ? ಹೌದು ನಂಬಲೇಬೇಕು. ಗಾಂಧಿಯವರು  ಸಬರಮತಿ ಆಶ್ರಮವನ್ನು ಸ್ಥಾಪಿಸಿ, ಹರಿಜನ ಮತ್ತು ಯಂಗ್ ಇಂಡಿಯಾ ಎಂಬ ಪತ್ರಿಕೆಗಳನ್ನು ತಂದಿದ್ದು ಈನಗರದಲ್ಲೇ. ಅಹಮದಾಬಾದ್‍ನ ಮಡಿಲಲ್ಲಿ ಹರಿಯುವ ಸಬರಮತಿ ನದಿತೀರದಲ್ಲಿ 1915 ರಲ್ಲಿ ಗಾಂಧೀಜಿ ಸ್ಥಾಪಿಸಿದ ಸಬರಮತಿ ಆಶ್ರಮ ಸುಮಾರು 15 ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟಗಾರರ ಚಟುವಟಿಕೆಯ ಕೇಂದ್ರ ಬಿಂದು ವಾಗಿತ್ತು. ಇಂದೂ ಕೂಡ ಈ ಆಶ್ರಮ ಗತ ವೈಭವವನ್ನು ಹೊತ್ತು, ಗಾಂಧೀಜಿಯವರ ಬದುಕಿನ ಕುರುಹುಗಳನ್ನುತನ್ನ ಒಡಲಲ್ಲಿರಿಸಿಕೊಂಡು ನಿಂತಿದೆ. ಆದರೆ ಆಶ್ರಮದ ಮಡಿಲಲ್ಲಿ ತುಂಬಿ ಹರಿದಿದ್ದ ಸಬರಮತಿ ಇಂದು ಬರಿದಾಗಿದ್ದಾಳೆ.ಈಗ ಅಲ್ಲಿ ಹರಿಯುವುದು ನೀರಲ್ಲ, ಮಿಲ್ಲುಗಳಿಂದ ಹೊರಬಂದ ರಾಸಾಯನಿಕಗಳ ಬಣ್ಣದ ದ್ರವ ಮಾತ್ರ. ಆದರೂ ಇಲ್ಲಿನ ಜನರಿಗೆ ಈ ನದಿಯ ಬಗ್ಗೆ ಅಪಾರ ಮೋಹ ಮತ್ತು ಹೆಮ್ಮೆ. ನೀವು ಕೇಳಲು ಸಿದ್ಧರಿದ್ದರೆ ಸಾಕು, ರಾಜಸ್ಥಾನದಲ್ಲಿ ಹುಟ್ಟಿ ಗುಜರಾತಿನಲ್ಲಿ ಹರಿಯುವ ಸಬರಮತಿಯ ಬಗ್ಗೆ ನೂರಾರು ಕಥೆ ಹೇಳುತ್ತಾರೆ. ನಮ್ಮ ಹಿರಿಯರು ತಾವು ಕಾಣದಿದ್ದರೂ ನಮಗೆ ಗಂಡಬೇರುಂಡ ಪಕ್ಷಿಯ ಬಗ್ಗೆ ಬಣ್ಣ ಬಣ್ಣದ ಕಥೆ ಹೇಳುವುದಿಲ್ಲವೆ? ಹಾಗೆ.

ಈ ನಗರಕ್ಕೆ ನೀವು ಕಾಲಿಟ್ಟ ತಕ್ಷಣ ಇಲ್ಲಿನ ವಾಹನಗಳು ಉಗುಳುವ ಮತ್ತು ಮಿಲ್ಲುಗಳಿಂದ ಹೊಬರುವ ಕಪ್ಪು ಹೊಗೆಯಿಂದ ನಿಮಗೆ ಉಸಿರು ಕಟ್ಟುವ ಅನುಭವವಾದರೆ ಆಶ್ಚರ್ಯವಿಲ್ಲ. ಒಂದು ಕಿ.ಮೀ.ದೂರವನ್ನು ಆಟೋದಲ್ಲಿ ಕ್ರಮಿಸಲು ಬೇಕಾದ ಸಮಯ ಸುಮಾರು 40 ನಿಮಿಷಗಳು.ಅಂದರೆ ಇಲ್ಲಿನ ಸಂಚಾರಿ ವ್ಯವಸ್ಥೆಯನ್ನು ನೀವೇಊಹಿಸಿ. ಇವೆಲ್ಲವುಗಳಿಂದ ಹಾಯ್ದು ಈ ನಗರದ ಮುಖ್ಯ ಸ್ಥಳವಾದ ಲಾಲ್ ದರ್ವಾಜದಿಂದ ಸುಮಾರು 7 ಕಿ.ಮೀ.ದೂರದ ಆಶ್ರಮಕ್ಕೆ ಸಿಟಿ ಬಸ್‍ನಲ್ಲಿ ತಲುಪಿದಾಕ್ಷಣ ಉರಿಯುವ ಬಿಸಿಲಲ್ಲೂ ತಂಪೆರೆಯುವ ಬೇವಿನ ಮರಗಳು, ಮರದ ಮರೆಯಲ್ಲಿ ಕುಳಿತು ಕೂಗುವ ಕಾಜಾಣಗಳು ಸ್ವಚ್ಛಂದವಾಗಿ ಓಡಾಡುತ್ತಾ ನಲಿಯುವ ನವಿಲುಗಳು, ಈ ಆಶ್ರಮದ ಪಕ್ಕದಲ್ಲೆ ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆಯವರು ನಡೆಸುತ್ತಿರುವ ಗೋಶಾಲೆಗಳಿಂದ ಕರುಗಳು ಕೂಗುವ ಅಂಬಾಎಂಬ ಧ್ವನಿ ನಮ್ಮನ್ನು ಹೆಜ್ಜೆ ಹೆಜ್ಜೆಗೂ ರೋಮಾಂಚನಗೊಳಿಸಿತ್ತಿದ್ದರೆ, ಆಶ್ರಮದ ವಸ್ತು ಸಂಗ್ರಹಾಲಯದಿಂದ ಅಲೆಅಲೆಯಾಗಿ ಕೇಳಿ ಬರುವ ಮೀರಾ ಭಜನೆ ಗೀತೆಗಳು, ಗೀತಾ ಗೋವಿಂದದ ಭಕ್ತಿ ಗೀತೆಗಳು ಭಾವಪರವಶಗೊಳಿಸುತ್ತವೆ.
                        ಈ ಸಬರಮತಿ ಆಶ್ರಮ ರೂಪುಗೊಂಡದ್ದೇ ಒಂದು ಅವಿಸ್ಮರಣೀಯ ಸಂಗತಿ. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದ ಗಾಂಧೀಜಿ ಇಡೀ ದೇಶದ ಆಗು-ಹೋಗುಗಳ ಬಗೆಗಿನ ಅಧ್ಯಯನಕ್ಕೆ ಭಾರತದ ಪ್ರವಾಸ ಕೈಗೊಂಡಾಗ `ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡುವ ಮೊದಲು, ಹೋರಾಟಗಾರರಿಗೆ ಶಿಸ್ತು,ಶ್ರದ್ಧೆ, ಸಂಯಮ ಹಾಗು ಪ್ರಾಮಾಣಿಕತೆ ಅವಶ್ಯಕ ಎಂದು, ಇಂತಹ ಹೋರಾಟಗಾರರನ್ನು, ಸ್ವಾತಂತ್ರ್ಯದ ಕನಸುಗಾರರನ್ನು ರೂಪಿಸಲು ಒಂದು ವಿದ್ಯಾಲಯ ಅಗತ್ಯವೆಂದು' ಮನಗಂಡ ಗಾಂಧೀಜಿ ಅದಕ್ಕಾಗಿ ಅವರು ಆರಿಸಿಕೊಂಡ ಸ್ಥಳ ಅಹಮದಾಬಾದಿನ ಸಬರಮತಿ ನದಿತೀರದಒಂದು ಸ್ಮಶಾನದ ಜಾಗ. 1915 ರಲ್ಲಿ ಪಟ್ಕರ್ ಎಂಬುವವರಿಂದ 8 ಎಕರೆ ಜಮೀನನ್ನು 2,500 ರೂಗಳಿಗೆ ಆಶ್ರಮಕ್ಕಾಗಿ ಕೊಂಡಾಗ ಗಾಂಧೀಜಿಯವರನ್ನು ಹುಚ್ಚಪ್ಪ ಎಂದು ಕರೆದವರುಂಟು

                        ಕೆಲವೇ ಕೆಲವು ಹಿಂಬಾಲಕರೊಂದಿಗೆ ಪ್ರಾರಂಭವಾದ ಈ ಆಶ್ರಮ ಕ್ರಮೇಣ ನೂರಾರು ಹೋರಾಟಗಾರರಿಗೆ ಆಶ್ರಯ ತಾಣವಾಯಿತು. ಮಗನ್‍ಲಾಲ್ ಎಂಬಾತನನ್ನು ಈ ಆಶ್ರಮದ ಶಿಲ್ಪಿಯೆಂದು ಕರೆದರೆ ತಪ್ಪಾಗಲಾರದು. ಕೇವಲಸ್ಮಶಾನವಾಗಿದ್ದ ಈ ಜಾಗದಲ್ಲಿ ಗಿಡ ಮರಗಳನ್ನು ಪ್ರೀತಿಯಿಂದ ಬೆಳೆಸಿ ಇಡೀ ಆಶ್ರಮವನ್ನು ನದಿತೀರದ ನಂದನವನವನ್ನಾಗಿ ಮಾಡಿದ ಕೀರ್ತಿ ಮಗನ್‍ಲಾಲ್‍ನದು. ಅದಕ್ಕೆಂದೇ ಈತ ಗಾಂಧೀಜಿಗೆ ಪ್ರಿಯವಾಗಿದ್ದ. ಈತ ಸತ್ತಾಗ `ಮಗನ್‍ಲಾಲ್ ಇಲ್ಲದ ನನ್ನ ಬದುಕು ಗಂಡನಿಲ್ಲದ ವಿಧವೆಯಂತೆ' ಎಂದು ಗಾಂಧೀಜಿ ರೋಧಿಸಿದರು. ಗಾಂಧೀಜಿಗೆ ಬದುಕಿನ ವಾಸ್ತವಿಕತೆಯನ್ನು ಅದರಲ್ಲೂ ಭಾರತ ದೇಶದಲ್ಲಿನ ಅಸ್ಪøಶ್ಯತೆಯನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಟ್ಟದ್ದು ಕೂಡ ಈ ಆಶ್ರಮ.
                        ಹೀಗೆ ನೂರಾರು ಕನಸುಗಾರರ ಪಾಲಿಗೆ ಹದಿನೈದು ವರ್ಷಗಳ ಕಾಲ ಚಟುವಟಿಕೆಯ ಕೇಂದ್ರ ಬಿಂದು ವಾಗಿದ್ದ ಈ ಆಶ್ರಮದ ಕಾರ್ಯ ಕಲಾಪ ಕೊನೆಗೊಂಡಿದ್ದು 1930 ರಲ್ಲಿ. ಅಹಮದಾಬಾದಿನಿಂದ ಸುಮಾರು 240 ಕಿ.ಮೀ.ದೂರದ ಸೂರತ್ ಬಳಿಯ ದಂಡಿಗೆ ಉಪ್ಪಿನ ಸತ್ಯಾಗ್ರಹಕ್ಕೆ ಗಾಂಧಿ ಪಾದಯಾತ್ರೆ ಕೈಗೊಂಡಾಗ, ಈ ದೇಶಕ್ಕೆಸ್ವಾತಂತ್ರ್ಯ ಬರುವವರೆಗೂ ಈ ಆಶ್ರಮಕ್ಕೆ ಕಾಲಿಡುವುದಿಲ್ಲವೆಂದು ಹೇಳಿ ಅಲ್ಲಿಂದ ಹೊರಟರು. ಅವರು ಆಶ್ರಮದಿಂದ ಹೊರಟ ದಿನವನ್ನು ಇಂದಿಗೂ `ಸಿದ್ಧಾರ್ಥ ವಿಯೋಗ' ಎಂದು ಕರೆಯುವುದುಂಟು
            
          
ಗಾಂಧೀಜಿ ಆಶ್ರಮ ಬಿಟ್ಟ ನಂತರವೂ ಕೆಲ ಆಶ್ರಮವಾಸಿಗಳಿಂದ ನಡೆದುಕೊಂಡು ಬಂದಿದ್ದ ಈ ಆಶ್ರಮವನ್ನು1933 ರಲ್ಲಿ ಗಾಂಧೀಜಿಯವರೇ ಹರಿಜನ ಟ್ರಸ್ಟ್ ಒಂದಕ್ಕೆ ದಾನವಾಗಿ ನೀಡಿದ್ದರು. 1948 ರಲ್ಲಿ ಅವರ ಮರಣಾನಂತರಅವರ ಬದುಕಿನ ಎಲ್ಲಾ ದಾಖಲೆ ಮತ್ತು ವಸ್ತುಗಳನ್ನು ಇಲ್ಲಿರಿಸಿ ಆಶ್ರಮವನ್ನು ಸಾರ್ವಜನಿಕ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ, ಗುಜರಾತ್ ಸರಕಾರದ ಮೇಲ್ವಿಚಾರಣೆಯಲ್ಲಿ ಕೇಂದ್ರ ಸರಕಾರ ನೋಡಿಕೊಳ್ಳುತ್ತಿದೆ. ಇಂದಿಗೂ ನೀವುಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ ಎಡಭಾಗದ ಕುಟೀರದಲ್ಲಿ ಗಾಂಧೀಜಿಯವರ ಎಲ್ಲಾ ದಾಖಲೆಗಳು, ಅವರ ಬದುಕಿನಎಲ್ಲಾ ಛಾಯಾ ಚಿತ್ರಗಳು, ಅವರು ಬರೆದ ಪತ್ರಗಳು, ಅವರ ಚಿಂತನೆಗಳು, ಗಾಂಧಿಯವರ ಬಗ್ಗೆ ಇತರರು ನುಡಿದಮಾತುಗಳು ಇವೆಲ್ಲವನ್ನೂ ಕಾಣಬಹುದು. ಅವುಗಳಲ್ಲಿ ನಮಗೆ ಎದ್ದು ಕಾಣುವದಾಖಲೆಗಳೆಂದರೆ ಗಾಂಧೀಜಿಯವರುದಿನಾಂಕ 23-9-39 ರಂದು ಜರ್ಮನಿಯ ಹಿಟ್ಲರ್‍ಗೆ ಬರೆದ ಪತ್ರ, ಪತ್ರದ ಕೆಲವು ಸಾಲುಗಳು `ಪ್ರಿಯ ಗೆಳೆಯಾ ಕೆಲವು ಮಂದಿ ಸ್ನೇಹಿತರು ನಿನಗೆ ಪತ್ರ ಬರೆಯಲು ಒತ್ತಾಯಿಸುತ್ತಲೇ ಇದ್ದರು. ಯಾರಿಗೆ ಏನೇ ಬರೆದರೂ ಅದಕ್ಕೆ ಬೆಲೆ ಇರಬೇಕು ಎಂದು ನಂಬುವವನು ನಾನು. ಈ ಪತ್ರಕ್ಕೆ ನೀನು ಬೆಲೆ ಕೊಡುತ್ತೀಯೊ ಇಲ್ಲವೋ ಗೊತ್ತಿಲ್ಲ. ಆದರೂ ನನ್ನ ಈ ಪತ್ರಕ್ಕೆ ಮಹತ್ವ ನೀಡುತ್ತೀಯ ಎಂದು ಭಾವಿಸಿದ್ದೀನಿ. ಇಂದು ಜಗತ್ತಿನಲ್ಲಿ ಯುದ್ಧವನ್ನೇ ಬಲವಾಗಿ ನಂಬಿರುವ ಏಕೈಕ ವ್ಯಕ್ತಿ ನೀನೊಬ್ಬನೆ, ನಿನಗೆ ಗೊತ್ತಾ? ಯುದ್ಧ ಮನುಷ್ಯತ್ವವನ್ನು ಕೊಂದುಹಾಕುವ, ರಾಜ್ಯಗಳನ್ನು ಸರ್ವನಾಶ ಮಾಡುವ ಅಸ್ತ್ರವೇ ಹೊರತು ಬೇರೇನೂ ಅಲ್ಲ. ಈ ಯುದ್ಧವನ್ನೇ ನೀನು ಬಲವಾಗಿ ನಂಬಿದ್ದೀಯಾ.ಮುಂದೊಂದು ದಿನ ನೀನು ಇದಕ್ಕೆ ತಲೆಬಾಗ ಬೇಕಾಗುವುದು. ಇನ್ನಾದರು ನಿನ್ನ ಹೆಜ್ಜೆಗಳನ್ನು ಬದಲಾಯಿಸಿ ಹೊಸಹಾದಿ ಸೃಷ್ಟಿಸಲಾರೆಯಾ?'. ಗಾಂಧೀಜಿ ನುಡಿದ ಹಾಗೆ ಮುಂದಿನ ದಿನಗಳಲ್ಲಿ ಹಿಟ್ಲರ್ ಬೆಲೆ ತೆರಲೇಬೇಕಾಯಿತು.

    ಅದೇ ರೀತಿ ಜಲಿಯನ್ ವಾಲಾಬಾಗ್‍ನ ಹತ್ಯಾಕಾಂಡಕ್ಕೆ ಕಾರಣವಾದ ಜನರಲ್ ಡಯರನು ತನ್ನ ಕೊನೆಯದಿನಗಳಲ್ಲಿ ಇಂಗ್ಲೆಂಡಿನಲ್ಲಿ ಅಲ್ಲಿನ ಜನರ ಪಾಲಿಗೆ ಹೀರೊ ಆಗಿ ಮೆರೆಯುತ್ತಿದ್ದಂತೆ, ಒಮ್ಮೆ ಮನೆಯ ಮೆಟ್ಟಿಲುಗಳಿಂದಜಾರಿ ಬಿದ್ದು ತಲೆ ಕೆಟ್ಟು ಹುಚ್ಚನಾಗಿ ಆಸ್ಪತ್ರೆಯಲ್ಲಿ ಸಾವಿನ ಹಾದಿಯಲ್ಲಿದ್ದಾಗ ಗಾಂಧೀಜಿ ಆಡಿದ ಮಾತುಗಳಿವು.
          
            
`ನಾನು, ಅವನು ಇಲ್ಲಿ ಮಾಡಿದ ತಪ್ಪುಗಳನ್ನು ಕ್ಷಮಿಸಲಾರೆ. ಇಂಗ್ಲೆಂಡಿನ ಜನ ತಮ್ಮ ತಪ್ಪು ನಿರ್ಣಯದಿಂದ ಅವನನ್ನು ಒಬ್ಬ ನಾಯಕನನ್ನಾಗಿ ಮೆರೆಸಿದರು. ಅವನ ಇಂದಿನ ಸ್ಥಿತಿಯಲ್ಲಿ ನನಗೆ ಅವಕಾಶ ಸಿಕ್ಕರೆ ಅವನಿಗೆ ಪ್ರೀತಿಯಿಂದ ಶುಶ್ರೂಷೆ ಮಾಡಬೇಕು ಎನಿಸುತ್ತಿದೆ. ಅಂದ ಮಾತ್ರಕ್ಕೆ ಅವರ ದುಖ: ನೋವುಗಳನ್ನು ಹಂಚಿಕೊಳ್ಳುವುದಿಲ್ಲ'. ಪ್ರಾಯಶ: ಇಂತಹ ಚಿಂತನೆಗಳೇ ಗಾಂಧೀಜಿಯವರನ್ನು ಮಹಾತ್ಮನ ಮಟ್ಟಕ್ಕೆ ಏರಿಸಿದ್ದು. ಈ ದಾಖಲೆಗಳ ಜೊತೆಯಲ್ಲಿ ಎರಡು ಅಪರೂಪದ ಚಿತ್ರಗಳು ನಿಮ್ಮ ಗಮನ ಸೆಳೆಯಬಲ್ಲವು.
                        ಚಿತ್ರ ಒಂದರಲ್ಲಿ ಗಾಂಧಿಜಿ ಚಪ್ಪಲಿ ಹೊಲಿಯುತ್ತಾ `ಇತ್ತೀಚೆಗೆ ನನಗೆ ಚಪ್ಪಲಿ ಹೊಲಿಯುವುದೇ ತುಂಬಾಖುಷಿ ಕೊಡುವ ಕೆಲಸ, ನಿಮಗೆ ಚಪ್ಪಲಿ ಬೇಕಿದ್ದರೆ ನಿಮ್ಮ ಕಾಲಿನ ಅಳತೆ ಕೊಡಿ ಸಿದ್ಧಪಡಿಸುತ್ತೇನೆ' ಎನ್ನುವ ಮಾತು ಹಾಗು ಅವರು ದುಂಡು ಮೇಜಿನ ಪರಿಷತ್ತಿಗೆ ಇಂಗ್ಲೆಂಡಿಗೆ ಹೋದಾಗ ಅವರಿಗಾಗಿ ಸಂತೋಷ ಕೂಟ ಏರ್ಪಡಿಸಿ, ಅಲ್ಲಿನ ಜನರೆಲ್ಲಾ ಗಂಡು ಹೆಣ್ಣು ಒಟ್ಟಾಗಿ ಸಮೂಹ ಗಾನ ಹಾಡುತ್ತಾ ನೃತ್ಯ ಪ್ರಾರಂಭಿಸಿದಾಗನೃತ್ಯಕ್ಕೆ ನಿನಗೊಬ್ಬ ಸಂಗಾತಿ ಬೇಕಾಗಿದ್ದಾಳೆ ಅಲ್ಲವೇ ? ಎಂದು ಹೆಣ್ಣೊಬ್ಬಳು ಪ್ರಶ್ನಿಸಿದಾಗ, ಇಲ್ಲ ನನಗೆ ಈ ಕೋಲೇ ಸಾಕು ಎಂದು ಕೋಲು ಹಿಡಿದು ಗಾಂಧಿ ನೃತ್ಯ ಮಾಡುತ್ತಿರುವ ದೃಶ್ಯ, ನೋವಿನಲ್ಲೂ ನಗು ತರುವಂತಹದ್ದು. ಕುಟೀರದಿಂದ ಸ್ವಲ್ಪ ದೂರದಲ್ಲೇ ಗಾಂಧೀಜಿ ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುತ್ತಿದ್ದ ಸಬರಮತಿ ನದಿಯಸೋಪಾನ, ಅವರ ಪ್ರಾರ್ಥನಾ ಮಂದಿರ, ನದಿಗೆ ಅಭಿಮುಖವಾಗಿ ನಿಂತಿರುವ ಅವರು ವಾಸವಾಗಿದ್ದ ಹೃದಯಕುಂಜನಿವಾಸ. ಈ ನಿವಾಸದಲ್ಲಿ ಗಾಂಧೀಜಿಯವರು ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ಹಾಗೇ ಇಡಲಾಗಿದೆ. ಈ ನಿವಾಸದೊಳಗೆ ಕಸ್ತೂರಿಬಾರವರ ಕೊಠಡಿ, ಗಾಂಧೀಜಿಯವರ ಮಲಗುವ ಕೋಣೆ, ಅಡುಗೆ ಮನೆಯ ಎಲ್ಲಾ ವಸ್ತುಗಳನ್ನು ಹಾಗೇ ಇಡಲಾಗಿದೆ. ಹೃದಯಕುಂಜ ನಿವಾಸದ ಮುಂಭಾಗಕ್ಕೆ ವಿನೋಬಾರವರು ವಾಸವಾಗಿದ್ದ ಪಾರಿವಾಳದ ಗೂಡಿನಂತಹ ಪುಟ್ಟ ಮನೆ, ಬಲಭಾಗಕ್ಕೆ ಅತಿಥಿಗಳ ನಿವಾಸ ಮತ್ತು ಅವರ ಗುಡಿ ಕೈಗಾರಿಕೆಗಳ ವಸ್ತುಗಳನ್ನು ಇಂದಿಗೂ ನಾವು ಕಾಣಬಹುದು. ಗಾಂಧೀಜಿ ಆಶ್ರಮ ಬಿಡುವ ಮುನ್ನ ಅಲ್ಲಿಗೆ ಬಂದ ಹುಡುಗ,ಇಂದು ಗಾಂಧೀಜಿಯವರ ನಿವಾಸದ ಮೇಲ್ವಿಚಾರಣೆಯ ಹೊಣೆಹೊತ್ತು, ಚರಕದಲ್ಲಿ ನೂಲುತ್ತಾ ,ಆಶ್ರಮದ ಜೀವಂತ ಪಳೆಯುಳಿಕೆಗಳ ಕೊಂಡಿಯಂತಿರುವ ವೃದ್ಧ ದಾದಾಬಾಯ್ ಅದೇ ಮನೆಯಲ್ಲಿದ್ದಾರೆ.
                        
                        .
ಪ್ರತಿ ದಿನ ಸಂಜೆಯ ನಂತರ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖಘಟನೆಗಳನ್ನು ನಾವು ಕೇಳಬಹುದು. ಇಂಗ್ಲೀಷ್ ಹಾಗು ಗುಜರಾತಿ ಭಾಷೆಗಳಲ್ಲಿನ 90 ನಿಮಿಷದ ಈ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಬಾಲ್ಯ ಹಾಗು ಶಾಲಾ ದಿನಚರಿ, ಆಫ್ರಿಕಾದ ಹೋರಾಟ, ಭಾರತದಲ್ಲಿ ನಡೆಸಿದ ಪ್ರಮುಖ ಹೋರಾಟ ಆಶ್ರಮದ ದಿನಚರಿ ಮತ್ತು ಕಸ್ತೂರಿಬಾ ನಿಧನರಾದಾಗ ಗಾಂಧಿ ರೋಧಿಸಿದ ಆ ನೀರವ ಮೌನ, ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ಸಂಘರ್ಷದಿಂದ ನೊಂದು ಗಾಂಧಿಯವರಾಡಿದ ಮಾತುಗಳು, ಇವಲ್ಲದೆಗಾಂಧೀಜಿ ನಿಧನರಾದಾಗ ಅಂದಿನ ಪ್ರಧಾನಿ ನೆಹರು ಸೇರಿದಂತೆ ಅನೇಕ ನಾಯಕರು ಗದ್ಗದಿತರಾಗಿ ನುಡಿದ ನಮನಗಳು ಎಲ್ಲವೂ ಇಲ್ಲಿ ದಾಖಲಾಗಿವೆ.
                        ಇಡೀ ದಿನ ಈ ಆಶ್ರಮದಲ್ಲಿದ್ದರೂ ಕಾಲ ಕಳೆದದ್ದು ತಿಳಿಯುವುದೇ ಇಲ್ಲ. ಅಂತಹ ಸುಂದರ ಪರಿಸರಇಲ್ಲಿಯದು. ಅಷ್ಟೇ ಅಲ್ಲ, ಈ ಆಶ್ರಮ ಇಂದಿನ ಸುಳ್ಳು ರಾಜಕಾರಣಿಗಳ ಮಾತಿನ ಮಂಟಪದಿಂದ ಅಂದಿನ ಸ್ವಾತಂತ್ರ್ಯಪೂರ್ವ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.
                         
                        (4-10-1987 ಸುದ್ಧಿ ಸಂಗಾತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

Monday, 23 September 2013

ಬೇಸಾಯವೆಂಬ ಬವಣೆಯ ಬದುಕು- ಅಂತಿಮ ಭಾಗ


1970 ದಶಕದಿಂದ ಭಾರತದ ಕೃಷಿರಂಗದಲ್ಲಾದ ಅನೇಕ ಪಲ್ಲಟಗಳು, ರೈತರ ಪಾಲಿಗೆ ಕೆಲವು ವಿಷಯಗಳಲ್ಲಿ ವರದಾನವಾಗಿ, ಮತ್ತೇ ಹಲವು ವಿಷಯಗಳಲ್ಲಿ ಶಾಪವಾಗಿ ಪರಿಗಣಿಸಿವೆ. ಇದಕ್ಕೊಂದು ಸುಧೀರ್ಘ ಇತಿಹಾಸ ಕೂಡ ಇದೆ. ದೇಶಿ ಬಿತ್ತನೆ ಬೀಜಗಳ ಮೂಲಕ ಕಡಿಮೆ ಇಳುವರಿ ನೀಡುತ್ತಿದ್ದ ಸಮಯದಲ್ಲಿ ಭಾರತಕ್ಕೆ 1968 ರಲ್ಲಿ ಅಮೇರಿಕಾದ ಕೃಷಿ ತಜ್ಙ ನಾರ್ಮನ್ ಬೋರ್ಲಾಗ್ ಅವಿಷ್ಕರಿಸಿದ ಹೈಬ್ರಿಡ್ ಗೋಧಿ ಬರುತ್ತಿದ್ದಂತೆ, ಕೃಷಿಯ ಚಿತ್ರಣವೇ ಬದಲಾಯಿತು. 1947 ಸಮಯದಲ್ಲಿ ಹೆಕ್ಟೇರ್ ಒಂದಕ್ಕೆ ಕೇವಲ 800 ಕೆ.ಜಿ. ಗೋಧಿ ಬೆಳೆಯುತ್ತಿದ್ದ ರೈತರು, ಹೈಬ್ರಿಡ್ ಗೋಧಿ ತಳಿಯಿಂದಾಗಿ ಅದೇ ಭೂಮಿಯಲ್ಲಿ 48 ಕ್ವಿಂಟಾಲ್ ಗೋಧಿ ಬೆಳೆಯಲು  ಶಕ್ತರಾದರು.  ಅಧಿಕ ಗೋಧಿ ಇಳುವರಿಯಿಂದ ಉತ್ತೇಜಿತರಾದ ನಮ್ಮ ರೈತರು, ಭಾರತದ ಖ್ಯಾತ ಕೃಷಿ ವಿಜ್ಙಾನಿ ಹಾಗೂ ತಮಿಳುನಾಡಿನ ಎಂ.ಎಸ್. ಸ್ವಾಮಿನಾಥನ್ ಮೂಲಕ ಪಿಲಿಫೈನ್ಸ್ ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ ಭತ್ತದ ತಳಿಗಳನ್ನು ಆಮದು ಮಾಡಿಕೊಂಡು, ಅಧಿಕ ಇಳುವರಿ   ಭತ್ತ ಬೆಳೆಯಲ್ಲಿ ತೊಡಗಿಕೊಂಡರು. ಹೀಗೆ, ಪಂಜಾಬ್, ಹರ್ಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ, ಗೋಧಿ, ಹಾಗೂ  ಬಿಹಾರ್, ಮಧ್ಯಪ್ರದೇಶ ರಾಜ್ಯಗಳು ಸೇರಿದಂತೆ, ದಕ್ಷಿಣ ಭಾರತದ ತಮಿಳುನಾಡು, ಆಂಧ್ರ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಭತ್ತವನ್ನು ಬೆಳೆಯಲಾಯಿತು. ಏರುತ್ತಿದ್ದ ಜನಸಂಖ್ಯೆಯ ಅನುಗುಣವಾಗಿ ಆಹಾರ ಪೂರೈಸಲಾಗದ ಅಸಹಾಯಕತೆಯಲ್ಲಿದ್ದ ಭಾರತ ದೇಶ ಹಸಿರು ಕ್ರಾಂತಿಯ ಪರಿಣಾಮವಾಗಿ ಆಹಾರ ಉತ್ಪಾದನೆಯಲ್ಲಿ  ಸ್ವಾವಲಂಬನೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಪಂಚವಾರ್ಷಿಕ ಯೋಜನೆಗಳಲ್ಲಿ ವಿಶೇಷ ಪ್ರಾಶಸ್ತ್ಯ ನೀಡಿದ ಕಾರಣದಿಂದಾಗಿ ಲಕ್ಷಾಂತರ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿತು


2011 ವೇಳೆಗೆ ಅಮೇರಿಕಾ ನಂತರ ಜಗತ್ತಿನ ಎರಡನೇ ಅತಿ ದೊಡ್ಡ ಕೃಷಿ ಉತ್ಪಾದನೆಯ ರಾಷ್ಟ್ರ ಎನಿಸಿಕೊಂಡ  ಬಾರತದಲ್ಲಿ ಒಟ್ಟು 39 ಕೋಟಿ, 46 ಲಕ್ಷ ಎಕರೆ ಪ್ರದೇಶ ಭೂಮಿ ಕೃಷಿ ಚಟುವಟಿಕೆಗೆ ಒಳಗೊಂಡಿತ್ತು. ಇದರಲ್ಲಿ 21 ಕೋಟಿ, 46 ಲಕ್ಷ ಎಕರೆ ಪ್ರದೇಶ, ಮಳೆ ಆಧಾರಿತ ಕೃಷಿಗೆ ಒಳಪಟ್ಟಿದ್ದರೆ, 21 ಕೊಟಿ, 56 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿತ್ತು. 1970 ದಶಕದಲ್ಲಿ ಭಾರತದ ಒಟ್ಟು ಆಂತರೀಕ ಉತ್ಪನ್ನದ ಪ್ರಮಾಣದಲ್ಲಿ( G.D.P.) ಶೇಕಡ 46 ರಷ್ಟು ಪಾಲು ಕೃಷಿ ಉತ್ಪನ್ನದ್ದಾಗಿತ್ತು. 2011 ವೇಳೆಗೆ ಭಾರತದ ಜಿ..ಡಿ.ಪಿ.ಯಲ್ಲಿ ಕೃಷಿಯ ಪಾಲು ಕೇವಲ ಶೇಕಡ 16 ರಷ್ಟು ಪ್ರಮಾಣಕ್ಕೆ ಕುಸಿಯಿತು.. ಇದರಲ್ಲಿ ಭಾರತದಿಂದ ವಿದೇಶಕ್ಕೆ ರಫ್ತಾಗುವ, ಹಣ್ಣು, ತರಕಾರಿ, ಹೂವು, ಇವುಗಳ ಪ್ರಮಾಣವೇ ಶೇಕಡ ಹತ್ತರಷ್ಟಿತ್ತು..
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಆಧಾರವಾಗಿದ್ದ ಭಾರತದ ಕೃಷಿ ರಂಗ 1991 ರಲ್ಲಿ ಭಾರತಕ್ಕೆ ಕಾಲಿಟ್ಟ ಜಾಗತೀಕರಣದ ಫಲವಾಗಿ ಅನಾದರಕ್ಕೆ ಒಳಪಟ್ಟಿತು. ಆರಂಭದ ದಿನಗಳಲ್ಲಿ ಪಂಚವಾರ್ಷಿಕ ಯೋಜನೆಗಳಲ್ಲಿ ಶೇಕಡ ಮುವತ್ತರಷ್ಟು ಪಾಲು ಪಡೆಯುತ್ತಿದ್ದ ಭಾರತದ ಕೃಷಿರಂಗ  2011 ವೇಳೆಗೆ ಶೇಕಡ ಹತ್ತು ಇಲ್ಲವೇ ಹನ್ನೊಂದರಷ್ಟು ಪಾಲಿಗೆ ಸೀಮಿತವಾಯಿತುಆಳುವ ಸರ್ಕಾರಗಳು, ಸೇವಾ ವಲಯ, ಮಾಹಿತಿ ತಂತ್ರಜ್ಞಾನ, ನಗರಾಭಿವೃದ್ಧಿ, ವಸತಿ ಕ್ಷೇತ್ರ, ಪ್ರವಾಸೋದ್ಯಮ ಹೀಗೆ ಉದಾರೀಕರಣ ಪ್ರೇರಿತ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಾ ಬಂದು, ಕೃಷಿ ಕ್ರೇತ್ರ ಹಾಗೂ  ಭಾರತದ ಹಳ್ಳಿಗಳ ಮೂಲಬೂತ ಸೌಕರ್ಯಗಳನ್ನು ಕಡೆಗಣಿಸುತ್ತಾ ಬಂದಿತು.
ಆಧುನಿಕ ಅಭಿವೃದ್ಧಿ ಎಂದರೆ, ನಗರಗಳು ಮತ್ತು ಮಾಹಿತಿ ತಂತ್ರಜ್ಙಾನ ಎಂದು ನಂಬಿರುವ ಭಾರತದ ಆಡಳಿತ ಚುಕ್ಕಾಣಿ ಹಿಡಿದ ನಾಯಕರು ಅರಿಯಬೇಕಾದ ಕಟು ಸತ್ಯವೊಂದಿದೆ. ಭಾರತದಲ್ಲೀಗ ಉದ್ಯೋಗ ಸೃಷ್ಟಿಸುತ್ತಿದ್ದ ಸಾರ್ವಜನಿಕ ಉದ್ದಿಮೆಗಳು ಮತ್ತು ಖಾಸಾಗಿ ಉದ್ದಿಮೆಗಳು ಸಂಕಷ್ಟದಲ್ಲಿವೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ 2012ರಿಂದ 2022 ವರೆಗೆ ಪ್ರತಿ ವರ್ಷ 80 ರಿಂದ 90 ಲಕ್ಷ ಯುವಕರು ಉದ್ಯೋಗಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಉದ್ಯೋಗ ಸೃಷ್ಟಿ ಮಾಡುತ್ತಿದ್ದ ಕೃಷಿರಂಗದ ಬಗ್ಗೆ ವ್ಯಾಮೋಹ ಕಡಿಮೆಯಾಗಿ ಎಲ್ಲರೂ ನಗರಗಳತ್ತ ಮುಖ ಮಾಡುತ್ತಿದ್ದಾರೆ. 2022 ವೇಳೆಗೆ 20 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸ ಬೇಕಾದ ಹೊಣೆ ನಮ್ಮನ್ನಾಳುವ ಸರ್ಕಾರಗಳ ಮೇಲಿದೆ. ಈವರೆಗೆ ಆಶಾದಾಯಕವಾಗಿದ್ದ ಮಾಹಿತಿ ತಂತ್ರಜ್ಙಾನ ಕ್ರೇತ್ರಕ್ಕೆ ಎದುರಾಗಿರುವ ಜಾಗತಿಕ ಪೈಪೋಟಿ ಮತ್ತು ಅನಿಶ್ಚತತೆಯಿಂದಾಗಿ ಉದ್ಯೋಗ ಸೃಷ್ಟಿಯ ಅವಕಾಶಗಳು ಕ್ಷೀಣಿಸುತ್ತಿವೆ. ಅತ್ತ ಭಾರತದ ಕೈಗಾರಿಕೆಗಳ ಬೆಳವಣಿಗೆಯೂ ಆಶಾದಾಯಕವಾಗಿಲ್ಲ.
ನಗರಗಳ ಬೆಳವಣಿಗೆ ಆದ್ಯತೆ ನೀಡಿ, ಅವುಗಳನ್ನು ನರಕಗಳನ್ನಾಗಿ ಪರಿವರ್ತಿಸುವ ಮುನ್ನ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಹಸಿದ ಹೊಟ್ಟೆಗೆ ಅನ್ನ , ವಸತಿ , ಶಿಕ್ಷಣ ಇವುಗಳ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ. ಕಡೆಗಣಿಸಲ್ಪಟ್ಟ ಕೃಷಿ ಮತ್ತು ರೈತರ ಬವಣೆಗಳನ್ನು ಆಲಿಸಿ, ಕೃಷಿ ಕ್ಷೇತ್ರವನ್ನು ಪುನರ್ ರೂಪಿಸಬೇಕಾಗಿದೆ. ಇಂದಿನ ಕೃಷಿ ಕ್ರೇತ್ರದ ದುರಂತಕ್ಕೆ , ರೈತನೂ ಒಳಗೊಂಡಂತೆ, ವಿಜ್ಙಾನಿಗಳು, ನಮ್ಮನ್ನಾಳುವ ಸರ್ಕಾರಗಳು ಎಲ್ಲರೂ ಭಾಗಿಯಾಗಿದ್ದಾರೆ. ಹಸಿರು ಕ್ರಾಂತಿಯ ಭ್ರಮೆ ಕಳಚಿಬಿದ್ದಿದ್ದರೂ ಕೂಡ  ಎರಡನೇ ಹಸಿರು ಕ್ರಾತಿಯ ಬಗ್ಗೆ ಮಾತನಾಡುವ ಮೂರ್ಖರು ನಮ್ಮಲ್ಲಿದ್ದಾರೆ
ಸ್ವತಃ ಭಾರತದ ಕೃಷಿ ಸಚಿವನಾಗಿರುವ ಶರದ್ ಪವಾರ್ ಎಂಬ ವ್ಯಕ್ತಿ ಕಳೆದ ಐದು ವರ್ಷಗಳಲ್ಲಿ ಆತ ಕೃಷಿ ಖಾತೆ ಯನ್ನು ನಿಭಾಯಿಸಿದ್ದಕ್ಕಿಂತ ಹೆಚ್ಚಾಗಿ ಭಾರತದ ಕ್ರಿಕೇಟ್ ನಿಯಂತ್ರಣ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಹಣ ಸಿಗುವ ವೃತ್ತಿ ಯಾವುದಾದರೂ ಸರಿಯೆ,, ವೈಶ್ಯಾವೃತ್ತಿಯ ದಳ್ಳಾಳಿತನಕ್ಕೆ ಸಿದ್ಧನಾಗಿರುವ ವ್ಯಕ್ತಿ ಇದೀಗ, ಮಾನ್ಸಂಟೊ ಕಂಪನಿಯ ಕುಲಾಂತರಿ ತಳಿಗಳನ್ನು ಭಾರತದಲ್ಲಿ ಪರಿಚಯಿಸಲು ಕೇಂದ್ರದಲ್ಲಿ ಲಾಭಿ ಮಾಡುತ್ತಿದ್ದಾನೆ. ಇಂತಹ ಅಯೋಗ್ಯರ ಕೈಗೆ ಭಾರತದ ಕೃಷಿ ಕ್ರೇತ್ರದ ಸೂತ್ರಗಳನ್ನು ನೀಡಲಾಗಿದೆ ಎಂದರೆ, ಇದಕ್ಕಿಂತ ದುರಂತ ಇನ್ನೊಂದು ಬೇಕೆ?

ಬೀಜ ಉತ್ಪಾದನೆ , ವಿನಿಮಯ. ಸೇರಿದಂತೆ ತನಗೆ ಬೇಕಾದ ಬೆಳೆಯನ್ನು ಬೆಳೆಯುತ್ತಿದ್ದ ರೈತ ಇಂದು ಬೀಜ ಕಂಪನಿಗಳ ಗುಲಾಮನಾಗಿ ತನ್ನ ಸಾರ್ವಭೌಮ ಹಕ್ಕನ್ನು ಕಳೆದುಕೊಂಡಿದ್ದಾನೆರೈತನ ತಲೆಯೊಳಕ್ಕೆ ಬಿತ್ತಿದ ಹಣದ ಥೈಲಿಯ ಕನಸುಗಳು ಇಂದು ಅವನನ್ನು ವಾಣಿಜ್ಯ ಬೆಳೆಗಳ ಮೂಲಕ ಬೀದಿಗೆ ತಂದು ನಿಲ್ಲಿಸಿವೆ, ಕಬ್ಬು, ಹತ್ತಿ, ಮೆಣಸಿನಕಾಯಿ, ಈರುಳ್ಳಿ , ಭತ್ತ, ತೆಂಗು, ಗೋಧಿ, ರಾಗಿ ಬೆಳೆದ ಯಾವೊಬ್ಬ ರೈತನೂ ಇಂದು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲವಾಗಿದೆ. ಪಲ್ಲಟಗಳನ್ನು ಲೇಖಕ ನರೇಂದ್ರ ರೈ ದೇರ್ಲ ಅವರು ತಮ್ಮ ಕೃತಿಯಲ್ಲಿ( ಹಸಿರು ಕೃಷಿಯ ನಿಟ್ಟುಸಿರುಗಳು) ಮಾರ್ಮಿಕವಾಗಿ, ರೂಪಕದ ಭಾಷೆಯಲ್ಲಿ ಹೀಗೆ ಬಣ್ಣಿಸಿದ್ದಾರೆ. “ ತುಳುನಾಡಿನ  ನಾಟಿ ಜನರು ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಒಂದು ಬಾಳಲೆಯ ಮೇಲೆ ಮುಷ್ಟಿ ಅಕ್ಕಿ ಇಲ್ಲವೆ ಭತ್ತ , ಅದರ ಮೇಲೆ ಒಂದು ತೆಂಗಿನಕಾಯಿ ಇಟ್ಟು ಅಕ್ಕ ಪಕ್ಕದಲ್ಲಿ ಕೆಂಪು ಅಡಿಕೆ ಮತ್ತು ವೀಳ್ಯದ ಎಲೆ ಇಡುತ್ತಾರೆ. ಗಣಪನ ಹಾಗೆ ಕಾಣುವ ಐದು ಬೆಳೆಗಳು ಮುಂಚೆ ದುಡ್ಡಿನ ಬೆಳೆಗಳಾಗಿರಲಿಲ್ಲ. ಜನರ ಬದುಕಿಗೆ ಬೇಕಿದ್ದ ಮೂಲದ ಬೆಳೆಗಳಾಗಿದ್ದವು. ಯಾವಾಗ ಬಾಳಲೆಯ ಮೇಲೆ ಒಂದು ಕಾಲು ರೂಪಾಯಿ ಬಿತ್ತೋ, ತುಳುನಾಡಿನ ಕೃಷಿ ಪಲ್ಲಟಕ್ಕೆ ಒಳಗಾಯಿತು. ಎಲ್ಲವೂ ದುಡ್ಡಿಗೆ ಆದಾಗ, ಗದ್ದೆಯ ಮೇಲೆ ಅಡಿಕೆ ಬಂತು, ಈಗ ಅಡಿಕೆಯ ಮೇಲೆ ರಬ್ಬರ್ ಕೂತಿದೆಇದು ನರೇಂದ್ರ ರೈ ಹೇಳುತ್ತಿರುವ ತುಳುನಾಡಿನ ದುರಂತ ಕಥೆಯಷ್ಟೇ ಅಲ್ಲ, ಭಾರತದ ಕೃಷಿಯ ದುರಂತವೂ ಕೂಡ ಹೌದು.


ಅಧಿಕ ಇಳುವರಿ ತೆಗೆಯುವ ಭರಾಟೆಯಲ್ಲಿ ನಮ್ಮ ಭೂಮಿಗೆ ಮಿತಿಯಿಲ್ಲದೆ ಸುರಿದ ರಸಾಯನಿಕ ಗೊಬ್ಬರದಿಂದಾಗಿ ಭೂಮಿಯ ಫಲವತ್ತತೆ ನಾಶವಾಯಿತು, ಹೈಬ್ರಿಡ್ ತಳಿಗಳ ಜೊತೆ ಹಲವಾರು ದೈತ್ಯ ಕಳೆಗಳೂ ಸಹ ದೇಶಕ್ಕೆ ಕಾಲಿಟ್ಟವು, ಕೀಟ ಮತ್ತು ಕಳೆ ನಾಶಕ್ಕೆ ಸಿಂಪಡಿಸಿದ ರಸಾಯನಿಕ ಔಷದಿಗಳ ಫಲದಿಂದಾಗಿ ನೀರು ವಿಷಮಯವಾಗುವುದರ ಜೊತೆಗೆ ಕೃಷಿಯ ಜೊತೆ ತಳಕು ಹಾಕಿಕೊಂಡಿದ್ದ ಜೀವ ಜಾಲಕ್ಕೂ ನಾವು ಎರೆವಾದವು. ಇಷ್ಟೇಲ್ಲಾ ಸಾಧನೆಯ ನಡುವೆ ರೈತ ಸುಖವಾಗಿದ್ದಾನಾ? ಅದೂ ಇಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ.ಯೊಂದಕ್ಕೆ 60 ರೂಪಾಯಿನಿಂದ 70 ರೂಪಾಯಿವರೆಗೆ ಇದೆ. ಕಳೆದ ಶುಕ್ರವಾರ ( ಸೆಪ್ಟಂಬರ್20) ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದ ಈರುಳ್ಳಿ ಗೆ ವರ್ತಕರು ಕೇಜಿ ಒಂದಕ್ಕೆ 18 ರೂಪಾಯಿನಿಂದ 20 ರೂಪಾಯಿ ಬೆಲೆ ನಿರ್ಧರಿಸಿದರು. 20 ರೂಪಾಯಿಗೆ ಕೊಂಡ ಈರುಳ್ಳಿ , ಗ್ರಾಹಕನಿಗೆ ಮಾರುಕಟ್ಟೆಯಲ್ಲಿ 70 ರೂಪಾಯಿಗೆ ಮಾರಾಟವಾಗುತ್ತದೆ. ಇದರಲ್ಲಿ ದಕ್ಕಿದ 50 ರೂಪಾಯಿ ಲಾಭ ಯಾರಿಗೆ ಸೇರುತ್ತದೆ ಎಂಬ ಸತ್ಯವನ್ನು ಗ್ರಹಿಸಲಾರದಷ್ಟು ನಮ್ಮ ವ್ಯವಸ್ಥೆ ತನ್ನ ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆಯಾ? ಇಂತಹ ಸ್ಥಿತಿಯಲ್ಲಿ ಕೃಷಿ ವೃತ್ತಿ ಯಾರಿಗೆ ತಾನೆ ಬೇಕಾಗಿದೆ.
                                                             ( ಮುಗಿಯಿತು)