ಬುಧವಾರ, ಮಾರ್ಚ್ 25, 2020

ಬಡತನಕ್ಕೆ ಬಾಯಿಲ್ಲವಾಗಿ



ಕಳೆದ ಮೂವತ್ತು ವರ್ಷಗಳಿಂದ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಎಂದೂ ಕೇಳರಿಯದ ರೋಗರುಜಿನಗಳು ಮತ್ತು ವೈರಸ್ ಗಳು ಆಧುನಿಕ ಜಗತ್ತನ್ನು ಕಾಡುತ್ತಿವೆ. ಇದರಿಂದಾಗಿ, ಭೂಮಂಡಲದ ಮನುಕುಲ ಮಾತ್ರವಲ್ಲದೆ, ನಾವು ಬೆಳೆಯುತ್ತಿರುವ ಬೆಳೆಗಳು ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಅಗಾಧವಾದ ಪರಿಣಾವುಂಟಾಗಿದೆ. ಇದರ ಮೂಲ ಕಾರಣ ಮನುಷ್ಯನ ಅಪರಿತ ಆಸೆ ಮತ್ತು ಭೋಗ ಜಗತ್ತಿನ ಮೋಹ ಎಂಬ ವಾಸ್ತವ ಸತ್ಯವನ್ನು ಅರಿಯಲಾರದ ವಿಸ್ಮೃತಿಗೆ ನಾವು ದೂಡಲ್ಪಟ್ಟಿದ್ದೇವೆ.
ಮಹಾತ್ಮ ಗಾಂಧೀಜಿಯವರು “ಪ್ರಕೃತಿ ಇರುವುದು ಮನುಷ್ಯನ ಮಿತವಾದ ಬೇಡಿಕೆಗಳನ್ನು ಪೂರೈಸುವುದಕ್ಕೆ ಮಾತ್ರ, ದುರಾಸೆಗಳನ್ನು ಈಡೇರಿಸುವುದಕ್ಕೆ ಅಲ್ಲ” ಎಂದು ಶತಮಾನದ ಹಿಂದೆ ಹೇಳಿದ ಮಾತನ್ನು ಮರೆತು ನಾವು ವಿನಾಶದತ್ತ ದಾಪುಗಾಲು ಇಡುತ್ತಿದ್ದೇವೆ.
ಈಗ ಭಾರತವನ್ನು ಮಾತ್ರವಲ್ಲದೆ, ವಿಶ್ವವನ್ನು ಕಾಡುತ್ತಿರುವ ಕೊರನಾ ಅಥವಾ ಕೋವಿಡ್ 19 ಎಂಬ ವೈರಸ್ ನ ಸಮಸ್ಯೆಗೆ ಕಾರಣ ಮನುಷ್ಯನೇ ಹೊರತು ಪ್ರಕೃತಿಯಲ್ಲ. ಇದರ ನಿರ್ಮೂಲನೆ ಸ್ವಯಂ ನಿಯಂತ್ರಣ ಅತ್ಯಗತ್ಯ. ಆದರೆ, ಭಾರತದಲ್ಲಿ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದರು ಎಂಬಂತೆ ಹೇರಲಾಗುತ್ತಿರುವ ಸರ್ಕಾರಿ ಪ್ರಾಯೋಜಿತ ನಿರ್ಬಂಧಗಳು ಬಡವರನ್ನು, ದೀನ ದಲಿತರನ್ನು ಸಂಕಷ್ಟಕ್ಕೆ ಗುರಿಮಾಡಿವೆ.
ಈ ದೇಶದ ಪ್ರಧಾನಿ, ನಡುರಾತ್ರಿ  ಪಾಕಿಸ್ತಾನದ ಮೇಲೆನಡೆಸಿದ ಸರ್ಜಿಕಲ್ ದಾಳಿಯ ಮಾದರಿಯಲ್ಲಿ ಮತ್ತು ರಾತ್ರೋರಾತ್ರಿ ನೋಟು ನಿಷೇಧ ಹೇರಿದ ರೀರಿಯಲ್ಲಿ ಕೊರನಾ ನಿಯಂತ್ರಣಕ್ಕೆ ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರದಲ್ಲಿ ಗಣ ರಾಜ್ಯಗಳ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರ ಸಲಹೆ ಕೇಳದೆ, ಅವತಾರ ಪುರುಷನ ಹಾಗೆ ದಿಡೀರ್ ಟಿ.ವಿ ಯಲ್ಲಿ ಕಾಣಿಸಿಕೊಂಡು ಉಪದೇಶ ಮತ್ತು ನಿರ್ದೇಶನಗಳನ್ನು ಜಾರಿ ಮಾಡುತ್ತಿದ್ದಾರೆ.
ಯಾವುದೇ ಮುನ್ಸೂಚನೆ ನೀಡದೆ ದೇಶಾದ್ಯಂತ ರೈಲು ಮತ್ತು ವಿಮಾನ ಸಂಚಾರ ರದ್ದುಪಡಿಸಿದ್ದು ಅಲ್ಲದೆ, ರಾಜ್ಯಗಳ ನಡುವಿನ ಗಡಿಗಳನ್ನು ಬಂದ್ ಮಾಡಿ ಸಾರಿಗೆ ಸಂಚಾರವನ್ನು ರದ್ದುಗೊಳಿಸಲಾಯಿತು. ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಮತ್ತು ಉತ್ತರದಿಂದ ದಕ್ಷಿಣ ಭಾರತದ ತೀರ್ಥಕ್ಷೇತ್ರಗಳಿಗೆ ಪ್ರವಾಸ ಹೋದ ಯಾತ್ರಿಕರು, ಪ್ರವಾಸಿಗರು ಇದೀಗ ಊಟ, ವಸತಿ ಇಲ್ಲದೆ ಅತಂತ್ರರಾಗಿ ಹಲವು ನಗರಗಳ ಬಸ್ ಮತ್ತು ರೈಲು ನಿಲ್ದಾಣದಲ್ಲಿ ಅಲೆಮಾರಿಗಳಂತೆ, ನಿರ್ಗತಿಕರಂತೆ ಜೀವಿಸುವಂತಾಗಿದೆ.
ಪ್ರದಾನಿ ನರೇಂದ್ರ ಮೋದಿಯವರು ಕೈ ಚಪ್ಪಾಳೆ ತಟ್ಟಿ  ಕೋರನಾ ವೈರಸ್ ನಿರ್ಮೂಲಕ್ಕೆ ಶ್ರಮಿಸುತ್ತರಿವ  ವೈದ್ಯರನ್ನು ಮತ್ತು ಸ್ವಯಂ ಸೇವಕರಿಗೆ ಗೌರವ ಸೂಚಿಸಿ ಎಂದು ಕರೆ ನೀಡಿದರೆ, ಈ ದೇಶದ ಪ್ರಜ್ಞಾವಂತ ನಾಗರೀಕರೆನಿಸಿಕೊಂಡ ಜನ ಗಂಟೆ, ಜಾಗಟೆ, ತಟ್ಟೆ, ಲೋಟ ಬಾರಿಸುತ್ತಾ ಬೀದಿಗಳಿದರು.ಇಂತಹ ಅನಾಗರೀಕರ ಭಾರತವನ್ನು ಏನೆಂದು ಕರೆಯೋಣ? ಬಾಯಿ ಬಡಿದುಕೊಳ್ಳಿ ಎಂದರೆ, ತಿಕ ಬಡಿದುಕೊಳ್ಳುವ ನಾಗರೀಕರನ್ನು ತಿದ್ದಲು 21 ನೇ ಶತಮಾನವಲ್ಲ, 71 ನೇ ಶತಮಾನ ಬಂದರೂ ಸಾಧ್ಯವಿಲ್ಲ.

ನಾಗರೀಕರಲ್ಲಿ ಅನಗತ್ಯ ಭಯ ಉಂಟು ಮಾಡಿ, ಬೀದಿಯಲ್ಲಿ ಓಡಾಡಿದರೆ, ಕೇಸ್ ಹಾಕುವುದು, ಲಾಠಿ ಪ್ರಯೋಗ ಮಾಡುವುದು, ಅಗತ್ಯ ವಸ್ತುಗಳು ದೊರೆಯದ ಹಾಗೆ ಮಾಡಿ, ಕಾಳಸಂತೆಯ ದರೋಡೆಕೋರರಿಗೆ ಅನುವು ಮಾಡಿಕೊಡುವುದು ಯಾವ ನ್ಯಾಯ?
ಭಾರತಕ್ಕೆ ಅಥವಾ ಪೂರ್ವ ಜಗತ್ತಿನ ರಾಷ್ಟ್ರಗಳಿಗೆ ಇಂತಹ ಪಿಡುಗುಗಳು ಹೊಸತೇನಲ್ಲ. ಈ ದೇಶದಲ್ಲಿ ರೋಗಕ್ಕೆ ಬಲಿಯಾದವರಿಗಿಂತ ಹಸಿವಿನಿಂದ ಸತ್ತ ಬಡವರ ಅಧಿಕವಾಗಿದೆ. ಆದರೆ, ಬಡವರ ಸಾವು, ನೋವು ಇಲ್ಲಿ ಯಾವುದಕ್ಕೂ ಲೆಕ್ಕವಿಲ್ಲ. ಬಡವರು ಈ ದೇಶದಲ್ಲಿ ಬದುಕಿರುವುದು ಓಟು ಒತ್ತುವ ಮತಯಂತ್ರಗಳಾಗಿ ಮಾತ್ರ. ಇದು ಪ್ರತಿಯೊಂದ ರಾಜಕೀಯ ಪಕ್ಷದ ಅಥವಾ ನೇತಾರನ ದೃಢ ನಂಬಿಕೆಯಾಗಿದೆ.
1943 ರಲ್ಲಿ ಬಂಗಾಳ ಪ್ರಾಂತ್ಯದಲ್ಲಿ ಅಂದರೆ, ಈಗಿನ ಪಶ್ಚಿಮ ಬಂಗಾಳ, ಬಂಗ್ಲಾ ದೇಶ ಮತ್ತು ಬಿಹಾರ ರಾಜ್ಯಗಳನ್ನು ಒಳಗೊಂಡ ಪ್ರದೇಶದ ಒಟ್ಟು ಆರು ಕೋಟಿ ಜನಸಂಖ್ಯೆಯಲ್ಲಿ ಮುವತ್ತು ಲಕ್ಷ ಜನತೆ ಹಸಿವು ಮತ್ತು ಸಾಂಕ್ರಾಮಿಕ ರೋಗದಿಂದ ಸತ್ತರು. ಎರಡನೆಯ ಮಹಾಯುದ್ಧ ನಡೆಯುತ್ತಿದ್ದ ಆ ಸಂದರ್ಭದಲ್ಲಿ ಜಪಾನ್ ಸೇನೆ ನಮ್ಮ ನೆರೆಯ ಬರ್ಮಾ ದೇಶಕ್ಕೆ ಕಾಲಿಟ್ಟಿತ್ತು. ಬಿಟೀಷ್ ಆಧಿಪತ್ಯಕ್ಕೆ ಒಳಪಟ್ಟಿದ್ದ ಭಾರತದ ಮೇಲೆ ಅಂದಿನ ಬ್ರಿಟನ್ ಪ್ರಧಾನಿ ಚರ್ಚಿ ಕೆಲವು ಅಮಾನವೀಯ ನಿರ್ಧಾರಗಳನ್ನು ಕೈ ಗೊಂಡನು. ಅವುಗಳಲ್ಲಿ ಪ್ರಮುಖವಾದ ನಿರ್ಧಾರವೆಂದರೆ, ಬರ್ಮಾ ದೇಶಕ್ಕೆ ಯಾವುದೇ ಪಡಿತರ ಹೋಗಭಾರದೆಂದು ಕೊಲ್ಕತ್ತ ನಗರದ ಎಲ್ಲಾ ಸಗಟು ದಿನಿಸಿ ಮಾರಾಟದ ಅಂಗಡಿಗಳನ್ನು ಬಂದ್ ಮಾಡಿಸಿದನು. ಜೊತೆಗೆ ಬಂಗಾಳದ ಗೋದಾಮುಗಳಲ್ಲಿ ದಾಸ್ತಾನು ಇಟ್ಟಿದ್ದ ಅಕ್ಕಿ ಮತ್ತು ಗೋಧಿಯನ್ನು ಬಿಡುಗಡೆ ಮಾಡದೆ, ಬ್ರಿಟಿಷ್ ಸೈನಿಕರಿಗೆ ಮೀಸಲಿಟ್ಟನು.  ಅಲ್ಲಿನ ಜನತೆ ಒಣಗಿದ ತರಗೆಲೆಗಳಂತೆ ಭೂಮಿಗೆ ಉದುರಿ ಹೋದರು. ಇಂತಹ ಅನೇಕ ಸಂಕಷ್ಟಗಳನ್ನು, ಕಾಲರಾ, ಸಿಡುಬು, ಮಲೇರಿಯಾ, ಏಡ್ಸ್ ನಂತಹ ಮಹಾಮಾರಿ ಕಾಯಿಲೆಗಳನ್ನು ಎದುರುಸಿರುವ ಭಾರತದ ಜನತೆಗೆ ಕೋವಿಡ್-19 ವೈರಸ್ ಕುರಿತಂತೆ ಈ ರೀತಿ ಅನಗತ್ಯ ಭಯ ಉಂಟು ಮಾಡುವ ಅಗತ್ಯವಿರಲಿಲ್ಲ.
ಸರ್ಕಾರದ ವತಿಯಿಂದ ಏನು ವ್ಯವಸ್ಥೆಯಾಗಿದೆ ಮತ್ತು ಸರ್ಕಾರ ಸೋಂಕನ್ನು ತಡೆಗಟ್ಟಲು ಯಾವ ರೀತಿ ಸಜ್ಜಾಗಿದೆ ಎಂದು ನೋಡಿದರೆ, ಎಲ್ಲವೂ ಶೂನ್ಯ.ಹೋಬಳಿ ಮಟ್ಟದಲ್ಲಿ ಮತ್ತು ನಗರದ ಬಡಾವಣೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಳೆದ ಐದಾರು ವರ್ಷಗಳಿಂದ ವೈದ್ಯರಿಲ್ಲ. ಕೊರನಾ ವೈರಸ್ ಕುರಿತು ಸ್ಪೃಷ್ಟ ಮಾಹಿಯಿಲ್ಲ. ಜನರನ್ನು ಗೃಹ ಬಂಧನದಲ್ಲಿ ಇರಿಸಿದರೆ. ಮಾತ್ರ. ರೋಗ ನಿಯಂತ್ರಿಸಬಹುದು ಎಂಬ ನಂಬಿಕೆ ಇಲ್ಲಿ ಚಾಲ್ತಿಯಲ್ಲಿದೆ. ಈ ದೇಶದ ಶೇಕಡ 52 ಮಂದಿ ದಿನ ನಿತ್ಯದ ದುಡಿಮೆಯ ಮೇಲೆ ಬೀದಿ ಬದಿಯ ಸೊಪ್ಪು, ತರಕಾರಿ, ಹಣ್ಣು, ಮಾರುವವರು, ಕೃಷಿ ಮತ್ತು ಕೂಲಿ ಕಾರ್ಮಿಕರು, ಸೈಕಲ್ ರಿಕ್ಷಾ, ಆಟೋರಿಕ್ಷಾ, ಕೈಗಾಡಿ ತಳ್ಳುವವರು ಇವರ ಕುರಿತು ನಮ್ಮನ್ನಾಳುವ ಸರ್ಕಾರಗಳು ಯೋಚಿಸಲೇ ಇಲ್ಲ.
ಇಂತಹ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾದ ನಮ್ಮ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಸಿನಿಮಾ ನಟ, ನಟಿಯರ ಬೆನ್ನು ಹತ್ತಿವೆ. ಯಾವ ನಟ ಅಥವಾ ನಟಿ ಏನು ತಿಂದರು? ಹೇಗೆ ವಿಸರ್ಜಿಸಿದರು. ಮನೆಯಲ್ಲಿ ಹೇಗೆ ವ್ಯಾಯಾಮ ಮಾಡುತ್ತಿದ್ದಾರೆ ಇಂತಹ ಸುದ್ದಿಯನ್ನು ಲದ್ದಿಯ ರೂಪದಲ್ಲಿ ನಮ್ಮ ಮನೆ ಬಾಗಿಲಿಗೆ ತಲುಪಿಸುವಲ್ಲಿ ನಿರತವಾಗಿವೆ. ರಾಜಕೀಯ ಪಕ್ಷಗಳು ಮತ್ತು ಕಾರ್ಪೋರೇಟ್ ಜಗತ್ತಿನ ಎದುರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು  ಬೆತ್ತಲೆಯಾಗಿ ಕುಣಿಯುತ್ತಿರುವ ಮಾಧ್ಯಮ ಸಂಸ್ಥೆಗಳಲ್ಲಿ ದುಡಿಯುವ ಜೀತದಾಳುಗಳಿಗೆ ಕನಿಷ್ಟ ಮಾನವೀಯತೆ ಇದ್ದರೆ, ಬಡವರ ಕೇರಿಗಳಿಗೆ ಮತ್ತು ಬಡಾವಣೆಗಳಿಗೆ ಹೋಗಬಹುದಿತ್ತು. ಆದರೆ, ಸಿನಿಮಾ ನಟ, ನಟಿ ಮತ್ತು ಕ್ರಿಕೇಟ್ ತಾರೆಯರಿಂದ ಈ ಜಗತ್ತು ಬದುಕಿದೆ ಮತ್ತು ಬೆಳಕಾಗುತ್ತಿದೆ ಎಂದು ನಂಬಿರುವ ಬೃಹಸ್ಪತಿಗಳಿಗೆ ಜ್ಞಾನೋದಯವಾಗುವ ಸಂಭವ ತೀರಾ ಕಡಿಮೆ.

ಇನ್ನು ಹೊಟ್ಟೆ ತುಂಬಿದ ನಮ್ಮ ಕೆಲವು ಬುದ್ದಿ ಜೀವಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಿನಕ್ಕೊಂದು ಉಪದೇಶ ಹೊರಡಿಸುತ್ತಿದ್ದಾರೆ. ತಣ್ಣನೆಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು, ಸ್ಕಾಚ್ ವಿಸ್ಕಿ ಹೀರುತ್ತಾ, ಗೋಡಂಬಿ ಮೆಲ್ಲುತ್ತಾ  ಪ್ರಧಾನಿಯವರ ಆದೇಶವನ್ನು ಪಾಲಿಸೋಣ ಎನ್ನುವ ಮಹನೀಯರಿಗೆ ನನ್ನದೊಂದು ಕಿವಿಮಾತು.
ದಯವಿಟ್ಟು ನಿಮ್ಮ ಎ.ಸಿ.ಯನ್ನು ಸ್ವಿಚ್ ಆಫ್ ಮಾಡಿ. ಮನೆಯ ಕಿಟಕಿ, ಬಾಗಿಲು ತೆರೆದು ಹೊರ ಜಗತ್ತನ್ನು ನೋಡಿ, ನಿಮ್ಮ ಮನೆಯಾಚೆಯ ಗುಡಿಸಲಿನಲ್ಲಿ ಹೊಲೆ ಉರಿಯದೆ ಇರುವುದು, ದೀಪ ಬೆಳಗದೆ ಇರುವುದನ್ನು ಗಮನಿಸಿ. ಹಸಿವಿನಿಂದ ಅಳುತ್ತಿರುವ ಕಂದಮ್ಮಗಳ ಆಕ್ರಂದನ ನಿಮಗೆ ಕೇಳಿಸದಿದ್ದರೆ, ಆ ಕ್ಷಣದಲ್ಲಿ ನೀವು ಮನುಷ್ಯರಲ್ಲ ಎಂದು ತೀರ್ಮಾನಿಸಿಕೊಳ್ಳಿ, ಏಕೆಂದರೆ, ನೀವು ನಮ್ಮ ನಡುವಿನ ನಕಲಿ ದೇವ ಮಾನವರಂತೆ ಒಣ ವೇದಾಂತದ ಉಪದೇಶ ಮಾಡುವುದಕ್ಕೆ ಮಾತ್ರ ಲಾಯಕ್ಕು. ಇದರಾಚೆಗೆ ನಿಮ್ಮಿಂದ ಏನನ್ನು ನಿರೀಕ್ಷಿಸಲಾಗದು. “ನೊಂದವರ ನೋವ ನೋಯದವರೆತ್ತ ಬಲ್ಲರೋ?” ಎಂದು ಅಕ್ಕ ಮಾಹಾದೇವಿ ಹಾಡಿರುವುದು ನಿಮಗಾಗಿ ಎಂದು ಈಗಲಾದರೂ ಅರ್ಥ ಮಾಡಿಕೊಳ್ಳಿ. ನಮಸ್ತೆ.