Sunday, 2 August 2020

ರಾಮ ಮತ್ತು ರಹೀಮ ಇಬ್ಬರೂ ಇಲ್ಲದ ಅಯೋದ್ಯೆಯ ನೆಲದಲ್ಲಿ ನಿಂತು
ಕಳೆದ ವರ್ಷ ಜನವರಿಯ ಎರಡನೇ ವಾರದಲ್ಲಿ ಒಂದು ದಿನ ಅಯೋಧ್ಯೆ ನಗರದಲ್ಲಿದ್ದೆ. ಲಕ್ನೋ, ವಾರಣಾಸಿ ನಗರಗಳಿಗೆ  ಒಂದು ವಾರದ ಭೇಟಿ ನೀಡುವ ಮುನ್ನ ಎರಡು ದಿನ ಮುಂಚಿತವಾಗಿ ದೆಹಲಿಯಿಂದ  ನೇರವಾಗಿ ಫೈಜಾಭಾದ್ ಮತ್ತು ಅಯೋಧ್ಯಾ ನಗರಗಳಿಗೆ ತೆರಳಿದ್ದೆ.. ಕಳೆದ 28 ವರ್ಷಳಿಂದ ನಾನು ನೋಡಲು ಹಂಬಲಿಸುತ್ತಿದ್ದ ನಗರ ಇದೆನಾ? ಎನ್ನುವಷ್ಟು ಆಶ್ಚರ್ಯಕರ ರೀರಿತಿಯಲ್ಲಿ ಪುರಾತನ ನಗರವಾದ ಅಯೋಧ್ಯೆ ತಣ್ಣಗೆ ಮಲಗಿತ್ತು. ಪಕ್ಕದ ಸರಯೂ ನದಿ ಕೂಡ ಜಗತ್ತಿನ ಗೊಡವೆಗಳಿಗೂ ನನಗೂ ಏನು ಸಂಬಂಧವಿಲ್ಲ ಎಂಬಂತೆ ತಣ್ಣಗೆ ಹರಿಯುತ್ತಿತ್ತು.
ಜಗತ್ತಿನಾದ್ಯಂತ ಸುದ್ದಿಯಲ್ಲಿರುವ ನಗರವೆಂದು ಕುಖ್ಯಾತಿ ಪಡೆದು, ಹಲವು ಕಾರಣಕ್ಕಾಗಿ ಸದಾ ಉದ್ವಿಗ್ನಗೊಳ್ಳುವ ಅಯೋಧ್ಯೆ ಎಂಬ ಪುರಾತನ ನಗರ ನಾನು ಊಹಿಸಿಕೊಂಡಿದ್ದಕ್ಕಿಂತ ಭಿನ್ನವಾಗಿತ್ತು. ಕಿರಿದಾದ ರಸ್ತೆಗಳ ಎರಡು ಬದಿಯಲ್ಲಿ ಗತ ಇತಿಹಾಸದ ಕಥೆಗಳನ್ನು ಹೇಳುವ ಪುರಾತನ ಕಟ್ಟಡಗಳು, ಪ್ರತಿ ಹೆಜ್ಜೆ ಹೆಜ್ಜೆಗೂ ಎರದೆಗೆ ಬಿಲ್ಲನ್ನು ಏರಿಸಿ ನಿಂತ ರಾಮನ ಭಾವಚಿತ್ರಗಳು, ಭಕ್ತಿಗೆ ಪರಾಕಾಷ್ಟೆಯಂತಿದ್ದ ಹನುಮ ಈಗ ಉಗ್ರ ನರಸಿಂಹನಾಗಿ ಪರಿವರ್ತನೆ ಹೊಂದಿರುವ ಚಿತ್ರಗಳನ್ನು ನೋಡುತ್ತಾ ಆಧುನಿಕ ರಾಮ ಭಕ್ತರು ಕೃಷ್ಣನ ಕೈಯಲ್ಲಿರುವ ಕೊಳಲನ್ನು ಕಿತ್ತು, ಖಡ್ಗ ಕೊಡುವ ದಿನ ದೂರವಿಲ್ಲ ೆನಿಸಿತು.
ಅಲ್ಲಿನ ಮುಖ್ಯ ರಸ್ತೆಗಳಲ್ಲಿ ಹಾಗೂ  ರೈಲ್ವೆ ನಿಲ್ದಾಣಗಳಲ್ಲಿ ಜನಗಳಿಗಿಂತ ಹೆಚ್ಚಾಗಿ ತುಂಬಿ ತುಳುಕಾಡುವ ಬಿಡಾಡಿ ದನಗಳು, ಹಾಗೂ  ರಾಮ ಮಂದಿರಕ್ಕಾಗಿ ಶೇಖರಿಸಿದ ಇಟ್ಟಿಗೆಗಳು ಮತ್ತು ಕೆತ್ತಿದ ಕಲ್ಲಿನ ಕಂಬಗಳಿಗೆ ಅರಿಶಿನ ಕುಂಕುಮ ಬಳಿದು ನಮಸ್ಕರಿಸುವ ಜನರು, ಮತ್ತು ಈ ನಗರಕ್ಕೆ ಬರುವ ಪ್ರವಾಸಿಗರು ನೀಡುವ ಭಿಕ್ಷೆಯಿಂದ ಬದುಕು ನೂಕುತ್ತಿರುವ ಹಾಗೂ ಜಗದ ಎಲ್ಲಾ ಜಂಜಡಗಳಿಂದ ಬಿಡುಗಡೆಗೊಂಡಿಂತಿರುವ ಸನ್ಯಾಸಿಗಳು, ಅಲ್ಲಿನ ಸಿಹಿತಿಂಡಿ, ಹಾಗೂ ಇತರೆ ಅಂಗಡಿಯ ಮಾಲೀಕರನ್ನು ನೋಡುವಾಗ ನಗರಕ್ಕೆ ಏನೂ ಆಗಿಲ್ಲವೆಂಬಂತೆ ಬದುಕುತ್ತಿರುವ ಪರಿಯನ್ನು ನೋಡಿ ಆಶ್ಚರ್ಯವಾಯಿತು.
ಜಿಲ್ಲಾ ಕೇಂದ್ರವಾದ ಫೈಜಾಬಾದ್ ನಗರದಿಂದ  ಸುಮಾರು ಎಂಟರಿಂದ ಹತ್ತು ಕಿ.ಮಿ. ದೂರವಿರುವ ಅಯೋಧ್ಯಾ ನಗರಕ್ಕೆ  ಪ್ರತಿ ಐದು ನಿಮಿಷಕ್ಕೆ ಎಂಟು ಮಂದಿ ಕೂರುವ ಆಟೋಗಳು  ಪ್ರವಾಸಿಗರನ್ನು ಕೊಂಡೊಯ್ಯುತ್ತವೆ. ಇಲ್ಲಿನ ಬಹುತೇಕ ಆಟೋ ಚಾಲಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಾನು ಪ್ರಯಾಣಿಸುತ್ತಿದ್ದ ಆಟೋದಲ್ಲಿ ಪ್ರಯಾಣಿಕರು ತುಂಬಿದ್ದರಿಂದ ಆಟೊ ಚಾಲಕ ತನ್ನ ಸೀಟಿನ ಪಕ್ಕದಲ್ಲಿ ನನ್ನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ  ನಾನು ಅವನ್ನು ಮಾತಿಗೆ ಎಳೆದು. “ವಿವಾದದಿಂದ ನಿಮ್ಮ ಸಮುದಾಯಕ್ಕೆ ತೊಂದರೆಯಾಗಿದೆಯಾ?’ ಎಂದು ಪ್ರಶ್ನಿಸಿದೆ. ತಣ್ಣಗೆ ಉತ್ತರಿಸಿದ.ಇಲ್ಲ ಸಾಹೇಬ್, ಪ್ರವಾಸಿಗರು ಜಾಸ್ತಿಯಾಗಿದ್ದಾರೆ, ನಮ್ಮ ಅನ್ನದ ಬಟ್ಟಲಿಗೆ ಯಾವ ತೊಂದರೆಯಾಗಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಬರುವುದಾದರೆ, ಪ್ರವಾಸಿಗರನ್ನು ನಂಬಿಕೊಂಡು ಬದುಕುವ ನಮ್ಮಂತಹವರಿಗೆ ಸಂತೋಷದ ಸಂಗತಿಎಂದು. ಅತ್ಯಂತ ನಿರ್ಲಿಪ್ತೆಯಿಂದ ಕೂಡಿದ ಆತನ ಮಾತುಗಳಲ್ಲಿ ನಮಗೆ ರಾಮ ರಹೀಮರಿಗಿಂತ ಮುಖ್ಯವಾಗಿ ಕೂಡಿ ಬಾಳುವುದು ಹಾಗೂ ನೆಮ್ಮದಿಯಿಂದ ಇರುವುದು ಮುಖ್ಯವಾಗಿತ್ತು.
ಅಯೋಧ್ಯಾ ರಸ್ತೆಗಳಲ್ಲಿ ಓಡಾಡುತ್ತಿರುವಾಗ ಅಲ್ಲಿ ಶರ್ಮಾ ಎಂದು ಕರೆಸಿಕೊಳ್ಳುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಒಂದು ಹುಡುಗ  ನನ್ನ ಬಳಿ ಬಂದು “ಸರ್  ನಾನು ಎಸ್.ಎಸ್.ಎಲ್.ಸಿ. ಓದುತ್ತಿದ್ದೇನೆ. ನಿಮಗೆ ಮಾರ್ಗದರ್ಶಿಯಾಗಿ ನಗರವನ್ನು ಸುತ್ತಾಡಿಸುತ್ತೇನೆ” ಎಂದ. ನಿನ್ನ ಶುಲ್ಕ ಎಷ್ಟು? ಎಂದು ಕೇಳಿದಾಗ ಕೇವಲ ಐವತ್ತು ರೂಪಾಯಿ ಎಂದು ನುಡಿದ. ನನಗೆ ಆಶ್ಚರ್ಯವಾಯಿತು.  ರಜೆಯ ದಿನಗಳಲ್ಲಿ ಮಾತ್ರ ಕೆಲಸ ಮಾಡುತ್ತೇನೆ ಸರ್. ಶಿಕ್ಷಣಕ್ಕೆ ತಂದೆ ತಾಯಿಗೆ ಹೊರೆಯಾಗಿಲ್ಲ ಎಂದು ಆತ ನುಡಿದಾಗ ನನಗೆ ಖುಷಿಯಾಯಿತು.  ನಾನುಬಾಬರಿ ಮಸೀದಿ ಕೆಡವಿದ ಜಾಗಕ್ಕೆ ಕರೆದೊಯ್ದರೆ ಸಾಕುನಿನಗೆ ಐವತ್ತು ರೂ ಕೊಡುತ್ತೇನೆ ಎಂದು ಹುಡುಗನ  ಹೆಗಲ ಮೇಲೆ ಕೈ ಹಾಕಿ, ನನಗೆ ಮೊದಲು ಒಳ್ಳೆಯ ಚಹಾ ಅಂಗಡಿಗೆ ಕರೆದುಕೊಂಡು ಹೋಗು ಎಂದು ನುಡಿದೆ. 

ಅಯೋಧ್ಯೆಯ ನಗರವು ನಮ್ಮ ಧಾರವಾಡದ ಪೇಡಾ ರೀತಿಯಲ್ಲಿ ಸಿಹಿ ತಿಂಡಿಗೆ ಪ್ರಸಿದ್ಧಿಯಾಗಿದೆ. ತನ್ನ ಗೆಳೆಯನ ಅಂಗಡಿಗೆ ಕರೆದೊಯ್ಯವ ಮಾರ್ಗದಲ್ಲಿ ಹುಡುಗ ನನ್ನ ವಿವರಗಳನ್ನು ಕೇಳುತ್ತಾ ಹೋದ. ತಕ್ಷಣ ನೆನಪಾದವನಂತೆಸರ್ ಒಬ್ಬ ಯುವಕ ನಿಮ್ಮ ಕರ್ನಾಟಕದವನು ನಮಗೆಲ್ಲಾ ತೀರಾ ಪರಿಚಿತ ಗೆಳೆಯನಾಗಿದ್ದಾನೆ. ಕಳೆದ ಆರು ತಿಂಗಳಿನಿಂದ ಇಲ್ಲಿನ ಹನುಮಾನ್ ಮಂದಿರದಲ್ಲಿ ನೀಡುವ ಪ್ರಸಾದ ತಿಂದು ಬದುಕುತ್ತಿದ್ದಾನೆ ಎಂದು ಹೇಳುತ್ತಾ, ನನ್ನನ್ನು ಸಿಹಿ ಮತ್ತು  ಚಹಾ ಮಾರಾಟದ  ಅಂಗಡಿಯಲ್ಲಿ ಕೂರಿಸಿ ಆತನನ್ನು ಕರೆತರಲು ಹೋದ. ನಾನು ಚಹಾ ಕುಡಿಯುತ್ತಿದ್ದಂತೆ ಯುವಕನನ್ನು ಕರೆತಂದು ನನ್ನ ಮುಂದೆ ನಿಲ್ಲಿಸಿದ. ಬಾಗಲಕೋಟೆಯ ಸುಮಾರು ಮುವತ್ತೈದು ವಯಸ್ಸಿನ ಬ್ರಾಹ್ಮಣ ಯುವಕ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಚಿಕ್ಕಪ್ಪನ ಜೊತೆ ಹೊಡೆದಾಡಿಕೊಂಡಿದ್ದ. ಪೋಲಿಸ್ ಠಾಣೆಯಲ್ಲಿ ಆತನ ವಿರುದ್ಧ ಮೊಕದ್ದಮೆ ದಾಖಲಾದ ಹಿನ್ನಲೆಯಲ್ಲಿ  ಪೊಲೀಸರಿಗೆ ಹೆದರಿಕೊಂಡು ಊರು ಬಿಟ್ಟಿದ್ದ. ನಂತರ ಪತ್ನಿಯು ಈತನನ್ನು ತ್ಯೆಜಿಸಿ, ತನ್ನ ಮಗುವಿನೊಂದಿಗೆ ತಮ್ಮನ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಬದುಕುತ್ತಿದ್ದಾಳೆ.  ಸಾಪ್ಟ್ ವೇರ್ ಇಂಜಿನಿಯರ್ ಆಗಿರುವ ಆಕೆಯ ಸಹೋದರ ಈತನನ್ನು ತನ್ನ ಮನೆಗೆ ಸೇರಿಸುತ್ತಿಲ್ಲ. ಮಗವನ್ನು ನೋಡಲು ಬಿಡುತ್ತಿಲ್ಲ. ಕಥೆಯನ್ನೆಲ್ಲಾ ನನ್ನ ಬಳಿ ಕನ್ನಡದಲ್ಲಿ ಹೆಳಿಕೊಂಡು ತಾನು ಹೊದ್ದಿದ್ದ ಕಾವಿ ವಸ್ತ್ರದಲ್ಲಿ ಮುಖ ಮುಚ್ಚಿಕೊಂಡು ಅಳತೊಡಗಿದ. “ ಸಾರ್ ನನ್ನ ಆರು ವರ್ಷದ ಮಗಳು ನೋಡಬೇಕು ಅಂತಾ ಆಸೆಯಾಗ್ತಿದೆ. ಜೀವನದಲ್ಲಿ ಇದು ಬಿಟ್ಟರೆ ನನಗೆ ಬೇರೆ ಆಸೆಯಿಲ್ಲಎಂದು ಆತ ಬಿಕ್ಕಳಿಸುವಾಗ  ಅಂಗಡಿಯಲ್ಲಿ ನಾವು ಮೌನವಾಗಿ ಅವನ ದುರಂತ ಕಥೆಗೆ ಸಾಕ್ಷಿಯಾದೆವು. ನನಗೆ ಗೈಡ್ ಆಗಿದ್ದ ಶರ್ಮ ಮತ್ತು ಆತನ ಅಂಗಡಿಯ ಗೆಳಯನಿಗೆ ಕನ್ನಡ ಅರ್ಥವಾಗದಿದ್ದರೂ ಇದೊಂದು ಕೌಟುಂಬಿಕ ದುರಂತ ಎಂಬುದು ಅವರಿಗೆ ಅರ್ಥವಾಗಿತ್ತು. ನಾಲ್ಕು ತಿಂಗಳ ಕಾಲ ಮಂತ್ರಾಲಯದಲ್ಲಿದ್ದ ಯುವಕ, ನಂತರ ಎರಡು ತಿಂಗಳು ಕಾಲ ಕಾಶಿಯಲ್ಲಿದ್ದು ಅಂತಿಮವಾಗಿ ಅಯೋಧ್ಯೆಯನ್ನು ತಲುಪಿದ್ದ. ತಲೆ ಕೂದಲು, ಗಡ್ಡವನ್ನು ಬೆಳೆಸಿಕೊಂಡು ಸಂಪೂರ್ಣವಾಗಿ ಸನ್ಯಾಸಿಯಾಗಿ ರೂಪಾಂತರಗೊಂಡಿದ್ದ.
“ತಮ್ಮಾ ನೀನು ಬಾಗಲಕೋಟೆಗೆ ಬರುವುದಾದರೆ, ನಿನ್ನ ಕೇಸ್ ಪರಿಹರಿಸಿಕೊಡುತ್ತೇನೆ ಎಂದು ಆತನಿಗೆ ಸಮಾಧಾನ ಹೇಳಿ, ಚಹಾ ಕುಡಿಸಿ, ಕೈಗೆ ಐನೂರು ರೂಪಾಯಿ ಕೊಡಲು ಹೋದಾಗ ಆತ ನೀರಾಕರಿಸಿದ. “”ನನಗೆ ಹಣದ ಅವಶ್ಯಕತೆ ಇಲ್ಲ ಸರ್ಎನ್ನುತ್ತಾ ಕೈ ಮುಗಿದು ನಿರಾಕರಿಸಿದ. ಕೊನೆಗೆ ನಾನೇ ಒತ್ತಾಯ ಮಾಡಿ ಆತನ ಖಾವಿ ಜುಬ್ಬಾದ ಜೇಬಿಗೆ ಇಟ್ಟು, ನನ್ನ ದೂರವಾಣಿ ನಂಬರ್ ನೀಡಿ ಸಮಾಧಾನ ಹೇಳಿದೆ. ನಂತರ ರಾಮ ಜನ್ಮ ಭೂಮಿ ವಿವಾದಿತ ಸ್ಥಳಕ್ಕೆ ನನ್ನ ಜೊತೆ ಬಂದ. ಅಲ್ಲಿನ ಪೋಲಿಸ್ ಸರ್ಪಗಾವಲು, ಹಾಗೂ ರಾಮ ಭಕ್ತರ ಉದ್ದನೆಯ ಸಾಲು ನೋಡಿ, ನನಗೆ ಒಳಗೆ ಹೋಗಿ ಅಲ್ಲಿ ಇಟ್ಟಿರುವ ರಾಮಲಲ್ಲಾ ಎಂಬ ಪ್ರತಿಮೆಗಳನ್ನು ನೋಡಲು ಆಸಕ್ತಿ ಬರಲಿಲ್ಲ. ನನಗೆ ಕ್ಷಣದಲ್ಲಿ ಈ ಅಯೋಧ್ಯಾ ನಗರವು ನನಗೆ ದೇವರ ಅಂದರೆ, ರಾಮ ಅಥವಾ ರಹಿಮರ ಪವಿತ್ರ ಕ್ಷೇತ್ರ ಎನಿಸುವುದಕ್ಕೆ ಬದಲಾಗಿ, ಜಗತ್ತಿನಿಂದ, ಸಮಾಜದಿಂದ ಮತ್ತು ಕುಟುಂಬದಿಂದ ತ್ಯೆಜಿಸಲ್ಪಟ್ಟವರ ಹಾಗೂ ಪ್ರೀತಿ ವಂಚಿತರ ಪಾಲಿಗೆ ತಾಯಿಯ ಮಡಿಲು ಎನಿಸಿತು.

ನಾನು ಸರಯೂ ನದಿ ತೀರಕ್ಕೆ ಹೋಗಿ, ಅಲ್ಲಿಂದ ಪೈಜಾಬಾದ್ ಗೆ ಬಸ್ ಅಥವಾ ಆಟೊ ಹಿಡಿಯಬೇಕಿತ್ತು. ಮತ್ತೊಮ್ಮೆ ಅಯೋಧ್ಯೆಗೆ ಬರುತ್ತೇನೆ ಎಂದು ಹೇಳುತ್ತಾ, ಅವರಿಗೆ ವಿದಾಯ ಹೇಳಿದಾಗ ಸಂಜೆ ಆರು ಗಂಟೆಯಾಗಿತ್ತು. ಚಳಿ ಆರಂಭವಾಗತೊಡಗಿತು. ಸರಯೂ ನದಿ ತೀರಕ್ಕೆ ಬಂದಾಗ, ಮುಂಖ್ಯ ಮಂತ್ರಿ ಆದಿತ್ಯನಾಥ ಯೋಗಿ  ಇಡೀ ಅಯೋಧ್ಯೆ ನಗರಿಗೆ ಹೊಸ ರೂಪು ಕೊಡಲು ತಯಾರಿ ನಡೆಸಿದ ಕಾರ್ಯಕ್ರಮಗಳು ಎದ್ದು ಕಾಣುತ್ತಿದ್ದವು. ನದಿಗೆ ಬ್ಯಾರೆಜ್ ಮಾದರಿಯಲ್ಲಿ ಅಡ್ಡಕಟ್ಟೆಯನ್ನು ಕಟ್ಟಿ ನದಿಯ ನೀರನ್ನು ಪುರಾತನ ಕಟ್ಟದ ಸುತ್ತಮುತ್ತಲಿನ ಸರೋವರಗಳಿಗೆ ತುಂಬಿಸುವ ಕಾಮಗಾರಿ ನಡೆಯುತ್ತಿತ್ತು. ದಡೆಯಲ್ಲಿ ಕುಳಿತು ಅಯೋಧ್ಯೆಯ ಪುರಾತನ ಕಟ್ಟಡಗಳನ್ನು ನೋಡುತ್ತಾ, ಅಲಿನ ನೂರೆಂಟು ಧರ್ಮಛತ್ರಗಳನ್ನು ವೀಕ್ಷಿಸುತ್ತಿದ್ದಾಗ ನಗರದ ಧರ್ಮಗಳಾಚೆಗಿನ ನೆಲೆಯಲ್ಲಿ ನಿಂತು ಎಲ್ಲಾ ತಬ್ಬಲಿಗಳನ್ನು ಪೋಷಿಸುತ್ತಿದೆ ಎನಿಸಿತು.
ನಾಡಿದ್ದು ಅಂದರೆ, ಆಗಸ್ಟ್ ಐದರಂದು ಅಯೋಧ್ಯೆ ನಗರದಲ್ಲಿ ರಾಮ ಮಂದಿರ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ.  ಇದು ದೇಶಭಕ್ತರ ಪಾಲಿಗೆ ಇದು ದಿಗ್ವಿಜಯ. ಆದರೆ, ಪ್ರಜ್ಞಾವಂತ ನಾಗರೀಕರ ಪಾಲಿಗೆ ಇದು ಕೇವಲ ಧರ್ಮದ ಉನ್ಮಾದ. ಏಕೆಂದರೆ, ಧರ್ಮದ ಹೆಸರಿನಲ್ಲಿ ರಕ್ತಸಿಕ್ತವಾಗಿರುವ ಭಾರತಕ್ಕೆ  ಈಗ  ಬೇಕಾಗಿರುವುದು ಮಂದಿರ ಮಸೀದಿಗಳಲ್ಲ, ಇಂತಹ ನಿರ್ಮಾಣಕ್ಕಿಂತ ಮುಖ್ಯವಾಗಿ ಮುರಿದು ಬಿದ್ದ ಮನಸ್ಸುಗಳನ್ನು ಕಟ್ಟಬೇಕಿದೆ.

ಜಗದೀಶ್ ಕೊಪ್ಪ