Friday, 18 December 2015

ಮಂಜುನಾಥ ಚಾಂದ್ ರವರ ಚಂದನೆಯ ಕಥೆಗಳುನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಗೂ ಕಥೆಗಾರ ಮಂಜುನಾಥ್ ಚಾಂದ್ ರವರ ಪ್ರಥಮ ಕಥಾ ಸಂಕಲನವಾದಕದ ತೆರೆದ ಆಕಾಶಕೃತಿಯು ಹಲವು ಕಾರಣಕ್ಕಾಗಿ ವಿಶಿಷ್ಟ ಕಥಾ ಸಂಕಲನವಾಗಿದೆ. ಕುದುರೆಗಿಂತ ಅದರ ಲದ್ದಿ ಬಿರುಸು ಎನ್ನುವ ಗಾದೆಯಂತೆ ಇವೊತ್ತಿನ ಪತ್ರಿಕೋದ್ಯಮದಲ್ಲಿ ಸುದ್ದಿಗಿಂತ ಸದ್ದು ಮಾಡಿದ ಮತ್ತು ಮಾಡುತ್ತಿರುವ ಪತ್ರಕರ್ತರೆ ಹೆಚ್ಚು. ಆದರೆ, ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಚಾಂದ್ ಸದಾ ಎಲೆ ಮರೆಯ ಕಾಯಿಯಂತೆ, ತುಂಬಿದ ಕೊಡದಂತೆ ಬದುಕಿದವರು. ಅವರ ವ್ಯಕ್ತಿತ್ವದ ಗುಣಗಳು   ಕಥಾ ಸಂಕಲ£ದಲ್ಲಿ ಪ್ರತಿಬಿಂಬಿತವಾಗಿವೆ.

ಪತ್ರಕರ್ತನಾದವನಿಗೆ ಬರೆವಣಿಗೆ ಎಂಬುವುದು ವರವೂ ಹೌದು, ಶಾಪವೂ ಹೌದು. ಏಕೆಂದರೆ, ಅವನು ಏನೇ ವಿಷಯವಿದ್ದರೂ ಬರೆದು ಬಿಸಾಡಬಲ್ಲ ಅಕ್ಷರ ಬ್ರಹ್ಮ. ಆದರೆ, ಅವರ ಬರೆವಣಿಗೆಯಲ್ಲಿ ಯಾವುದೇ ಜೀವಂತಿಕೆಯಾಗಲಿ, ಲವಲವಿಕೆಯನ್ನಾಗಲಿ ಕಾಣುವುದು ಕಷ್ಟ. ವಿಷಯದಲ್ಲಿ ಪಿ.ಲಂಕೇಶ್ ಮತ್ತು ರವಿಬೆಳೆಗೆರೆ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಎರಡಲ್ಲೂ ಅಕ್ಷರಗಳಿಗೆ ಜೀವ ತುಂಬಿದವರಲ್ಲಿ ಪ್ರಮುಖರು ಎಂದು ವಿಶೇಷವಾಗಿ ನಾವು ಹೆಸರಿಸಬಹುದು. ಅಂತಹ ಪರಂಪರೆಯ ವಾರಸುದಾರರಂತೆ ಕಾಣುವ ಮಂಜುನಾಥ್ ಚಾಂದ್ ರವರ ಕಥೆಗಳಲ್ಲಿ ತಾವು ಹುಟ್ಟಿ ಬಂದ ಕಡಲ ತಡಿಯ ತಲ್ಲಣಗಳು, ಪಲ್ಲಟಗೊಳ್ಳುತ್ತಿರುವ ಸಾಂಸ್ಕತಿಕ ಚಹರೆಗಳು, ನಶಿಸುತ್ತಿರುವ ಮನುಷ್ಯ ಸಂಬಂಧಗಳು ಓದುಗರ ಎದೆಯ ಕದವನ್ನು ತಟ್ಟುತ್ತವೆ.

ಇತ್ತೀಚಿಗಿನ ದಿನಗಳಲ್ಲಿ ತಮ್ಮ ವಿಶಿಷ್ಟ ಹಾಗೂ ಸೂಕ್ಷ್ಮ ಸಂವೇದನೆಯ ಕಥೆಗಳ ಮೂಲಕ ಕರ್ನಾಟಕದ  ಕರಾವಳಿ ಪ್ರದೇಶದಲ್ಲಿ ಕಾಸರಗೂಡಿನ ಹೆಣ್ಣು ಮಗಳು ಅನುಪಮಾ ಪ್ರಸಾದ್ ತಮ್ಮದೂರತೀರಸಂಕಲನದಿಂದ ಮತ್ತು ಮಂಜುನಾಥ್ ಚಾಂದ್ಕದ ತೆರೆದ ಆಕಾಶ” ಸಂಕಲನದ ಮೂಲಕ  ಕನ್ನಡ ಕಥಾ ಜಗತ್ತು ಕುತೂಹಲದಿಂದ ಗಮನಿಸಲೇ ಬೇಕಾದ ಪ್ರತಿಭಾವಂತರು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಚಾಂದ್ ರವರು ಕಥಾ ಸಂಕಲನದಲ್ಲಿ  ಕೇವಲ ಒಂಬತ್ತು ಕಥೆಗಳಿವೆ. ಅವರೆಂದೂ ಖಯಾಲಿಗಾಗಿ ಕತೆ ಬರೆದವರಲ್ಲ ಹಾಗೂ ಬರೆಯುವವರಲ್ಲ ಎಂಬುದನ್ನು ಇಲ್ಲಿನ ಪ್ರತಿ ಕತೆಗಳು ಸಾಬೀತು ಪಡಿಸಿವೆ. ಏಕೆಂದರೆ, ಕಳೆದ ಒಂಬತ್ತು ವರ್ಷಗಳಲ್ಲಿ ಅವರು ಬರೆದದ್ದು ಕೇವಲ ಒಂಬತ್ತೇ ಕತೆಗಳು. ವರ್ಷವೊಂದಕ್ಕೆ ಒಂಬತ್ತು ಕಥಾ ಸಂಕಲನಗಳನ್ನು ಹೊರ ತಂದು ಮೀಸೆ ತಿರುವುವ ಪತ್ರಕರ್ತರ ನಡುವೆ ಚಾಂದ್ ಮುಖ್ಯವಾಗುವುದು ಕಾರಣಕ್ಕೆ. ಅವರ ಕಥೆಗಳಲ್ಲಿ ನಗರ ಮತ್ತು ನಾಗರೀಕ ಜಗತ್ತಿನ ಅಮಾನವೀಯ ಮತ್ತು ಭಾವಶೂನ್ಯ ಬದುಕು ಕುರಿತಂತೆ ಒಂದೆರಡು ಕತೆಗಳಿದ್ದರೂ ಸಹ ಉಳಿದ ಕಥೆಗಳು ತಾವು ಹುಟ್ಟಿ ಬೆಳೆದ ಕುಂದಾಪುರದ ಪರಿಸರದ  ಸುತ್ತ ಮುತ್ತಲಿನ ಕತೆಗಳಾಗಿವೆ. ಜೊತೆಗೆ ನಾವು ವೈದೇಹಿಯವರ ಕಥೆಗಳಲ್ಲಿ ಓದಿದ್ದ ಕುಂದಾಪುರದ ಸುಂದರ ಕನ್ನಡ ಭಾಷೆಯ ಬನಿಯನ್ನು ಚಾಂದ್ ರವರ ಕಥೆಗಳಲ್ಲಿಯೂ ಸಹ ಸವಿಯಬಹುದು.ನಗರದ ಬದುಕಿನ ಕಥೆಗಳಿಗಿಂತ ಹೆಚ್ಚಾಗಿ ತಮ್ಮ ಪರಿಸರ ಕಥೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವ ಚಾಂದ್ ರವರ ನಿರೂಪಣೆ ಮತ್ತು ಕಥೆಗಳ ಪಾತ್ರಗಳಿಗೆ ಬಳಸಿರುವ ಭಾಷೆಯಲ್ಲಿ ಕವಿಯೊಬ್ಬನ ಪ್ರತಿಭೆ ಅನಾವರಣಗೊಂಡಿದೆ. ಸಂಕಲನದ ತಿಮಿರ, ಸವೆದ ಹಾದಿಯ ಉಸಿರು, ಹೊಳೆ ದಂಡೆಯ ಆಚೆ, ಸಂತೆಯಿಂದ ಬಂದವನು, ಊರಿಗೆ ಬಂದ ದೇವರು ಕಥೆಗಳು ಗಮನ ಸೆಳೆಯುತ್ತವೆ. ಜೊತೆಗೆ ಓದುಗರ ಮನದಲ್ಲಿ ಬಹುಕಾಲ ನಿಲ್ಲುತ್ತವೆ.


ಜಾಗತೀರಣವೆಂಬುದು ಸದ್ದಿಲ್ಲದೆ, ಅದೃಶ್ಯ ರೂಪದಲ್ಲಿ ನಮ್ಮನ್ನ ಹಿಂಬಾಲಿಸಿಕೊಂಡು ಬರುತ್ತಿರುವ  ಬೆಂಬಿಡದ ಭೂತ.  ನಮಗರಿವಾಗದಂತೆ ಅದು ನಮ್ಮನ್ನು ತಬ್ಬಿಕೊಂಡು  ಹೊಸಕಿ ಹಾಕುತ್ತಿರುವ ವರ್ತಮಾನದ ದುರಂತಗಳು ಚಾಂದ್ ರವರ ಕಥೆಗಳಲ್ಲಿ ರೂಪಕದ ಭಾಷೆಯ ಮೂಲಕ  ಪರಿಣಾಮಕಾರಿಯಾಗಿ ವ್ಯಕ್ತವಾಗಿವೆ. ನಾವು  ಹುಟ್ಟಿ ಬೆಳೆದು ಓಡಾಡಿದ  ನೆಲವೆಂಬುದುಈಗ  ನಮ್ಮದೆರು  ಆದುನಿಕತೆಯ ಕಾಡ್ಗಿಚ್ಚಿಗೆ ಸಿಲುಕಿ, ಇತ್ತ ಒಣಗಲಾರದಅತ್ತ ಬೇರು ಬಿಡಲಾರದ ಅರೆ ಬೆಂದ ಹಸಿರು ಮರದಂತಾಗಿದೆ. ಅಂತಹ ನೋವಿನ, ಸಂಕಟದ ಕ್ಷಣಗಳನ್ನು ಚಾಂದ್ ತಮ್ಮ ಕಥೆಗಳ ಪಾತ್ರಗಳ ಮೂಲಕ ಸಶಕ್ತವಾಗಿ ಅಭಿವ್ಯಕ್ತಿಗೊಳಿಸಿದ್ದಾರೆಜೊತೆಗೆ ಅವರ ಮುಂದಿನ ಕಥೆಗಳ ಕುರಿತು ನಮ್ಮಲ್ಲಿ ಆಸೆ ಮೂಡಿಸಿದ್ದಾರೆ.

Tuesday, 15 December 2015

ನಾವೂ ಕೂಡ ನಿಮ್ಮ ಜೊತೆ..

     


 ಭಾರತದ ಗ್ರಾಮೀಣ ಬದುಕು ಇಂದು ಅತ್ಯಂತವಾಗಿ ಜರ್ಝರಿತಗೊಂಡಿದೆಗ್ರಾಮೀಣ ಜನ ಸಂಕಷ್ಟಗಳ ಭಾರದ ಹೊರೆಯನ್ನು ಹೊರಲಾರದೆ ತತ್ತರಿಸುತ್ತಿದ್ದಾರೆದೇಶಕ್ಕೆ ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಎಪ್ಪತ್ತು ವರ್ಷಗಳಾಗಿದ್ದರೂ ದೇಶದ ಪಿತಾಮಹ ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸು ಕನಸಾಗಿಯೇ ಉಳಿದಿದೆಗ್ರಾಮೀಣ ಬದುಕಿನಲ್ಲಿ ನೆಲೆನಿಂತಿದ್ದ ಸಡಗರ, ಸಂಭ್ರಮ, ಸ್ವಾಭಿಮಾನ, ಸ್ವಾವಲಂಬನೆ, ಸಹಕಾರ, ಪ್ರೀತಿ, ನಂಬಿಕೆ ಮುಂತಾದ ಸಕಾರಾತ್ಮಕ ಲಕ್ಷಣಗಳು ನೆಲಕಚ್ಚಿ ಅವುಗಳ ಸ್ಧಾನದಲ್ಲಿ ಸ್ವಾರ್ಥ, ಕುಟಿಲತೆ, ಸಣ್ಣತನ, ಜಾತೀಯತೆ, ಕುಲಗೆಟ್ಟ ರಾಜಕೀಯ ಇತ್ಯಾದಿ ನಕಾರಾತ್ಮಕ ಗುಣಗಳು ವಿಜೃಂಭಿಸುತ್ತಿವೆಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಆಡಳಿತದಲ್ಲಿ ಮತ್ತು ಸ್ವ್ವಾತಂತ್ರ್ಯ ನಂತರದ ನಮ್ಮದೇ ಆಡಳಿತದಲ್ಲಿ ಯಾವೊತ್ತೂ ಗ್ರಾಮೀಣ ಜಗತ್ತಿನ ಅಭಿವೃಧ್ದಿಗೆ ಮಹತ್ವವನ್ನು ಕೊಡಲೇ ಇಲ್ಲಇಂದಿಗೂ ಭಾರತದ ಲಕ್ಷಾಂತರ ಹಳ್ಳಿಗಳು ಸಾರಿಗೆ, ವಿದ್ಯುತ್, ನೀರಾವರಿ, ಮಾರುಕಟ್ಟೆ, ವಸತಿ, ಕುಡಿಯುವ ನೀರು, ನೈರ್ಮಲ್ಯ ಇತ್ಯಾದಿ ಸೌಲಭ್ಯಗಳಿಂದ ವಂಚಿತಗೊಂಡಿವೆರೈತರು ಬೆಳೆದ ಬೆಳೆಗಳಿಗೆ ನಿರ್ಧಿಷ್ಟ ಬೆಲೆ ಎಂಬುದು  ಕನಸಿನ ಮಾತಾಗಿದೆ.  ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರೂ ಇಲ್ಲಿಯವರೆಗೂ ನಾವು ಸತ್ವಯುತವಾದ ಒಂದು ಕೃಷಿ ನೀತಿಯನ್ನು ರೂಪಿಸಲು ಅಸಮರ್ಥರಾಗಿರುವುದು ನಮ್ಮ ಗ್ರಾಮೀಣ ಬದುಕನ್ನು ಎಷ್ಟು ನಿರ್ಲಕ್ಷಿಸಿದ್ದೇವೆಂಬುದಕ್ಕೆ ಸಾಕ್ಷಿಯಾಗಿದೆ.
    
 

   ನಾವು ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ಕಲ್ಯಾಣ ರಾಷ್ಟ್ರವೆಂದು ಜಂಭ ಕೊಚ್ಚಿಕೊಳ್ಳುತ್ತಿದ್ದರೂ ನಮ್ಮ ಜನರಿಗೆ ಉಚಿತವಾಗಿ ವಿದ್ಯಾಭ್ಯಾಸ, ವೈದ್ಯಕೀಯ ಮುಂತಾದ ಅಗತ್ಯ ಸೌಲಭ್ಯ ಗಳನ್ನು ನೀಡಲು ಸಾಧ್ಯವಾಗಿಲ್ಲಪ್ರಸ್ತುತ ಭಾರತದ ಹಳ್ಳಿಗಳು ಸ್ಮಶಾನ ಸದೃಶ್ಯವಾಗಿವೆಗ್ರಾಮೀಣ ಆಟ, ಕಲೆ, ಸಂಸ್ಕತಿಗಳು ನಾಶದ ಅಂಚಿನಲ್ಲಿವೆಗ್ರಾಮೀಣ ಜನರಲ್ಲಿ ಉಸಿರಾಡುವ ಆತ್ಮವಿಶ್ವಾಸವೇ ಇಲ್ಲದಂತಾಗಿದೆ. ಹಿಂದೆಂದೂ ಕಾಣದಷ್ಟು ಆತ್ಮಹತ್ಯೆ ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲಿ ದಾಖಲಾಗುತ್ತಿವೆದಾಖಲಾಗದ ಆತ್ಮಹತ್ಯೆ ಪ್ರಕರಣಗಳು ಲೆಕ್ಕಕ್ಕೆ ಸಿಗದಷ್ಟುರೈತರ, ಕೂಲಿಕಾರರ, ಬಡವರ ಹೆಸರಿನಲ್ಲಿ ಪ್ರಾರಂಭಿಸುವ ಆನೇಕ ಜನಪರ ಯೋಜನೆಗಳು ಅವರಿಗೆ ದಕ್ಕುತ್ತಿಲ್ಲ. ಗ್ರಾಮೀಣ ಜನರ ಬದುಕಿನಲ್ಲಿ ಹಿಂದೆಂದೂ ಕಾಣದ ಹಾಹಾಕಾರ, ಹತಾಶೆ ಶುರುವಾಗಿ ಇಡೀ ಗ್ರಾಮೀಣ ಜಗತ್ತು ವಾಸಿಯಾಗಲಾರದ ವ್ರಣದಿಂದ ನರಳುವ ರೋಗಿಯಂತೆ ನೆಮ್ಮದಿಯನ್ನು ಕಳೆದುಕೊಂಡಿದೆ.
  ಇಂಥ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ನಾವು ನಮ್ಮ ಗ್ರಾಮ ಸಮಾಜವನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆಗ್ರಾಮೀಣ ಜಗತ್ತಿನಲ್ಲಿ ಕಳೆದು ಹೋಗಿರುವ ಸಡಗರ, ಸಂಭ್ರಮ, ಸ್ವಾಭಿಮಾನ, ಆತ್ಮ ವಿಶ್ವಾಸ, ಕಲೆ, ಜನಪದ ಸಂಸ್ಕತಿಗಳ ಪುನಶ್ಚೇತಗೊಳಿಸಬೇಕಾಗಿದೆ. ಜಗತ್ತಿನ ನಾಗರೀಕತೆಗೆ, ಕೈಗಾರಿಕಾ ಕ್ರಾಂತಿಗೆ ನಾಂದಿಯಾದ, ಸೇತುವೆಯಾದ ಕೃಷಿ ಪರಂಪರೆಯ ಸತ್ವಗಳನ್ನು, ಸಂವೇದನೆಗಳನ್ನು, ದಾರ್ಶನಿಕ ಗುಣಗಳನ್ನು ನಾವು ಸಂರಕ್ಷಿಸಲು ಪ್ರಯತ್ನಿಸಬೇಕಾಗಿದೆಗ್ರಾಮೀಣ ಜನತೆಯಲ್ಲಿ ಬದುಕಿನ ಚೈತನ್ಯವನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವೇಗ್ರಾಮ ಸಮಾಜವೆಂಬ ಗ್ರಾಮೀಣ ಆರ್ಥಿಕ-ವಿಜ್ಞಾನ-ಸಂಸ್ಕøತಿ ಪರಿಷತ್ತನ್ನು ಸ್ಥಾಪಿಸುವ ಯೋಚನೆ. ಇದು ಸ್ವಾರ್ಥ, ಜಾತಿ, ರಾಜಕೀಯಗಳಿಂದ ಮುಕ್ತವಾದ ಒಂದು ಸಂಘಟನೆಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸಿನ ಬೆನ್ನು ಹತ್ತಿ ಓಡುವುದು ಗ್ರಾಮ ಸಮಾಜ ಗುರಿ. ಮೂಗುದಾರವಿಲ್ಲದ ಗೂಳಿಯಂತೆ ಮುನ್ನುಗ್ಗುತ್ತಿರುವ ಜಾಗತೀಕರಣದ ಸಂದರ್ಭದಲ್ಲಿ ಹಳ್ಳಿಗರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ನಮ್ಮ ಧರ್ಮವೆಂದು ತಿಳಿದಿದ್ದೇವೆ. ಗುರಿ ತಲುಪುವಲ್ಲಿ, ಧರ್ಮ ಪಾಲಿಸುವಲ್ಲಿ ನೀವೂ ನಮ್ಮೊಡನೆ ಬನ್ನಿನಿಮ್ಮ ಪ್ರೀತಿ, ನಂಬಿಕೆ, ಸಹಕಾರಗಳನ್ನು ದಯವಿಟ್ಟು ತನ್ನಿ. ಅನೇಕ ಸಂಕಷ್ಟಗಳಿಂದ ವಿಲವಿಲನೆ ಒದ್ದಾಡುತ್ತಿರುವ ಗ್ರಾಮೀಣ ಬದುಕಿಗೆ ನಾವು ನೀಡುವ ಭರವಸೆಯೆಂದರೆನಾವು ಕೂಡ ನಿಮ್ಮ ಜೊತೆ.......” ಎಂಬುದುದಯಮಾಡಿ ಸಹಕರಿಸಿ ನಮ್ಮ ಪರಂಪರೆಯ ಬೇರುಗಳನ್ನು ಉಳಿಸಿಕೊಳ್ಳುವಂಥ ತವಕದ ಕಾಯಕದಲ್ಲಿ.1.    ಡಾ. ಸಿದ್ದಲಿಂಗಯ್ಯ                      12. ಆರ್. ಟಿ. ರಮೇಶ್ಗೌಡ
                                    2.   ಸ್ವಾಮಿ ಆನಂದ್. ಆರ್.                13. ಲಿಂಗಣ್ಣ ಗುಂಡಳ್ಳಿ
3.   ಡಾ. ಎಚ್.ಆರ್. ಸ್ವಾಮಿ                14. ಡಾ. ಡಿ. ಕೆ. ಕುಲಕರ್ಣಿ
4.   ಡಾ. ಎನ್. ಜಗದೀಶ್ ಕೊಪ್ಪ            15. ಡಿ. ಎಸ್. ಲಿಂಗರಾಜು
                                      5.   ನರ್ತಕಿ ರಾಜಗೋಪಾಲ್               16. ಆನಂದ, ಕೆ.ಸಿ.
                                       6.   ರಾಜಶೇಖರ ಅಬ್ಬೂರು                 17.  ಶ್ರೀನಿವಾಸ
                                     7.   ವಿಶುಕುಮಾರ್                           18.  ಸುರೇಂದ್ರ
                                     8.   ಸಿ.ಜಿ. ಶ್ರೀನಿವಾಸನ್                    19. ದೊಡ್ಡೇಗೌಡ
                                   9.   ಮಂಜುನಾಥ. ಎಂ. ಅದ್ದೆ               20. ಕೃಷ್ಣಾರೆಡ್ಡಿ ಎಸ್. ವಿ.
10.  ಪ್ರೊಫೆಸರ್ ಎಂ.ಎಸ್.ಜಯರಾಮ್       21. ಕೇಶವರೆಡ್ಡಿ ಹಂದ್ರಾಳ
                                11.  ಕ್ರಾಂತಿ.ಕೆ.ಆರ್.                            22. ಎನ್. ಸಿ. ಮಂಜುನಾಥ
Sunday, 13 December 2015

ಯಸ್. ತಿರುಪತಿ ತಿಮ್ಮಪ್ಪ ಹೀಜ್ ಅವರ್ ಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮಾಸ್ ಹಜ್ ಬೆಂಡ್.
ಕಳೆದ ತಿಂಗಳು ನನ್ನ ಭೂಮಿಗೀತ ಭ್ಲಾಗ್ ನಲ್ಲಿ  “ಇಬ್ಬರ `ಹೆಂಡಿರ ಮುದ್ದಿನ ಗಂಡ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗ; ಎಂಬ ಶೀರ್ಷಿಕೆಯಡಿ ತಮಿಳು ನಾಡಿನ ನಾಚ್ಚಿಯಾರ್ ಎಂಬ ದೇವತೆ ಕುರಿತು  ಲೇಖನ ಬರೆದಿದ್ದೆ. ಈ ಸಂದರ್ಭದಲ್ಲಿ ಪಲ್ಲವಿ ಇದೂರ್ ಎಂಬ ಹೆಣ್ಣು ಮಗಳು “ ಹಾಗಾದರೆ, ತಿಮ್ಮಪ್ಪನಿಗೆ ಎಷ್ಟು ಜನ ಹೆಂಡತಿಯರು? “ ಎಂಬ ಪ್ರಶ್ನೆ ಕೇಳಿದ್ದರು. ನನಗೆ ಉತ್ತರ ಗೊತ್ತಿಲ್ಲದ ಕಾರಣ  ನಕ್ಕು ಸುಮ್ಮನಾಗಿದ್ದೆ. ಆ ರೀತಿ ಮೌನ ವಹಿಸುದ್ದು ಒಳ್ಳೆಯದಾಯಿತು. ಏಕೆಂದರೆ, ತಿಮ್ಮಪ್ಪನ ಪ್ರಣಯ ಪ್ರಸಂಗ ಕೇವಲ ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಅದು ನಮ್ಮ ನೆರೆಯ ಮಹಾರಾಷ್ಟ್ರದವರೆಗೂ ಹಬ್ಬಿದೆ. ಹೌದು ಇದನ್ನು ನೀವು ನಂಬಲೇಬೇಕು. ಅದಕ್ಕೆ ಪುರಾವೆಗಳಿವೆ. ಕೊಲ್ಲಾಪುರದ ಮಹಾಲಕ್ಷ್ಮಿ ಕೂಡ ತಿಮ್ಮಪ್ಪನ ಪತ್ನಿ ಎಂಬ ವಿಷಯ  ನಿನ್ನೆ ಶನಿವಾರ  ನನಗೆ ತಿಳಿಯಿತು.

ಶನಿವಾರ ವಾರದ ರಜೆ ಇದ್ದ ಕಾರಣ ನಾನು ಮತ್ತು ನನ್ನ ಲೇಖಕ ಮಿತ್ರರಾದ ವೆಂಕಟೇಶ ಮಾಚಕನೂರು ಧಾರವಾಡದಿಂದ 200 ಕಿಲೋಮಿಟರ್ ದೂರವಿರುವ ಕೊಲ್ಲಾಪುರ ನಗರದ ವೀಕ್ಷಣೆಗೆ ಹೊರಟಿದ್ದವು. ವೀಕ್ಷಣೆಯ ಜೊತೆಗೆ ಅಲ್ಲಿನ ಶಿವಾಜಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ರೈತರ ಕಾರ್ಯಾಗಾರದಲ್ಲಿ ಮಾಹಿತಿ ಕಲೆ ಹಾಕುವುದು ನನಗೆ ಮುಖ್ಯವಾಗಿತ್ತು. ಮೀರಜ್, ಸಾಂಗ್ಲಿ, ಕೊಲ್ಲಾಪುರ, ಸತಾರ ಜಿಲ್ಲೆಗಳ ಸುತ್ತ ಮುತ್ತ 43 ಸಕ್ಕರೆ ಕಾರ್ಖಾನೆಗಳು ಮತ್ತು ಒಂದು ಸಾವಿರದ ನೂರ ಹತ್ತು ಬೆಲ್ಲ ತಯಾರಿಸುವ ಆಲೆ ಮನೆಗಳಿವೆ ಎಂಬ ಮಾಹಿತಿ ಶಿವಾಜಿ ವಿ.ವಿ. ವಾಣಿಜ್ಯ ವಿಭಾಗದ ಡಾ. ಅಪ್ಪರಾವ್ ಸಾಹೇಬ್ ಗುರುವ ಎಂಬುವರಿಂದ ನನಗೆ ಸಿಕ್ಕಿತ್ತು.  ಹಾಗಾಗಿ ಅಲ್ಲಿನ ಅತಿಥಿ ಗೃಹದಲ್ಲಿ ಉಳಿದುಕೊಂಡು,  ಅವರಿಂದ ಮಾಹಿತಿ ಸಂಗ್ರಹಿಸಿದೆ. ನಂತರ ಛತ್ರಪತಿ ಸಾಹು ಮಹಾರಾಜ್ ಅರಮನೆ ನೋಡಿಕೊಂಡು, ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋದಾಗ ನಮಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದ ಆಡಳಿತಾಧಿಕಾರಿಯವ ಕಛೇರಿಯಲ್ಲಿ ಕುಳಿತಿದ್ದೆ. ಅವರ ಕುರ್ಚಿಯ ಹಿಂಭಾಗ ಗೋಡೆಯಲ್ಲಿ ಮಹಾಲಕ್ಷ್ಮಿ ಮತ್ತು ವೆಂಕಟೇಶ್ವರ ಪ್ರತಿಮೆಗಳನ್ನು ಇಡಲಾಗಿತ್ತು. ನಾನು ಈ ಬಗ್ಗೆ ಅವರನ್ನು ಕೇಳಿದೆ. ಅವರು ಮರಾಠಿ ಮಿಶ್ರಿತ ಇಂಗ್ಲೀಷ್ ಭಾಷೆಯಲ್ಲಿ “ ಹಿ ಹೀಜ್ ಅವರ್ ಮಹಾಲಕ್ಷ್ಮಿ ಅಮ್ಮಾಸ್  ಹಜ್ ಬೆಂಡ್” ಎಂದರು. ನನಗೆ ತಲೆ ತಿರುಗಿ ಕುಳಿತಿದ್ದ ಕುರ್ಚಿಯಿಂದ ಕೆಳಕ್ಕೆ ಬೀಳುವಂತಾಯಿತು. ನಂತರ ಅವರು ಕಥೆ ಹೇಳಿದರು.
ಪ್ರತಿ ವರ್ಷ ತಿರುಪತಿ ವೇಂಕಟೇಶ್ವರ ದೇವಸ್ಥಾನದಿಂದ ಒಂದು ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ ರೇಷ್ಮೆ ಸೀರೆಯನ್ನು ತಿರುಪತಿ ದೇವಸ್ಥಾನದ ಪ್ರತಿನಿಧಿಯೊಬ್ಬರು  ಕೊಲ್ಲಾಪುರಕ್ಕೆ ಬಂದು ನೀಡಿ ಹೂಗುವ ವಿಚಾರವನ್ನು ತಿಳಿಸಿದರು. ಜೊತೆಗೆ ಮಹಾರಾಷ್ಟ್ರದಿಂದ ವೆಂಕಟೇಶ್ವರನ ದರ್ಶನಕ್ಕೆ ಹೂಗುವ ಭಕ್ತರು ಅಲ್ಲಿಂದ ನೇರವಾಗಿ ಕೊಲ್ಲಾಪುರಕ್ಕೆ ಬಂದು ಮಹಾಲಕ್ಷ್ಮಿ ಅಮ್ಮನ ದರ್ಶನ ಪಡೆದು ಮನೆಗೆ ಹೋಗುತ್ತಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಹೇಳಿದರು. ಈ ಕಾರಣಕ್ಕಾಗಿ ಕೊಲ್ಲಾಪುರದಿಂದ ತಿರುಪತಿಗೆ ಪ್ರತಿ ದಿನ ಹರಿಪ್ರಿಯ ಎಕ್ಸ್ ಪ್ರಸ್ ರೈಲು ಸಂಚರಿಸುತ್ತದೆ.

ದೇವಾಸ್ಥಾನದ ಗರ್ಭಗುಡಿಗೆ ಕರೆದು ಕೊಂಡು ಹೋಗುವ ಮುನ್ನ ಮಹಾಲಕ್ಷ್ಮಿ ದೇವಾಲದ ಕಟ್ಟಡಕ್ಕೆ ಹೊಂದಿಕೊಂಡತೆ ವೆಂಕಟೇಶ್ವರನ ಪುಟ್ಟ ದೇವಾಲಯವಿದೆ. ಭಕ್ತರು ಗರ್ಭಗುಡಿ ಪ್ರವೇಶಿಸುವ ಮುನ್ನ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ಆಡಳಿತಾದಿಕಾರಿಗೆ ನಾನು ತಮಿಳುನಾಡಿನ ಕಥೆಯನ್ನು ವಿವರಿಸಿದೆ. ಅವರು “ಎಸ್.ಎಸ್. ಹೀ ಹೀಜ್ ಗ್ರೇಟೆಸ್ಟ್ ಮಜನೂ ಆಫ್ ಅವರ್ ಇಂಡಿಯಾ” ಎಂದು ಹೇಳಿ ನಕ್ಕರು.
ಈಗ ತಿರುಪತಿಗೆ ಹೋಗಿ ನಿಮ್ಮ ದೇವಸ್ಥಾನದಿಂದ ಯಾವ್ಯಾವ ಊರುಗಳಿಗೆ ಪ್ರತಿ ವರ್ಷ ರೇಷ್ಮೆ ಸೀರೆ ಉಡುಗೊರೆಯಾಗಿ ಹೋಗುತ್ತೆ ಎಂಬ ಪ್ರಶ್ನೆಯನ್ನು ಕೇಳಿ ,  ಆ ಮೂಲಕ ದಕ್ಷಿಣ ಭಾರತದ ಊರುಗಳಲ್ಲಿರುವ ತಿಮ್ಮಪ್ಪನ ಪ್ರೇಯಸಿಯರನ್ನು ಲೆಕ್ಕ ಹಾಕಬೇಕು ಎಂದು ನಿರ್ಧರಿಸಿದ್ದೀ

Wednesday, 2 December 2015

ಮೂಕ ಹಕ್ಕಿಯ ಹಾಡು
ಮುಖ್ತರ್ ಮಾಯಿ ಸಿದ್ಧವಾಗು ಹೊರಡೋಣಎನ್ನುವ  ಅಪ್ಪನ ಮಾತು ಕಿವಿಗೆ ಬೀಳುತ್ತಿದ್ದಂತೆ ಹೊರಡಲು ಸಿದ್ಧವಾದೆ. ರಾತ್ರಿ ಮನೆಯಿಂದ  ನಾನಿಡುವ ಹೆಜ್ಜೆಗಳ ಪಯಣ ನನ್ನನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಕಲ್ಪನೆ ನನಗಿರಲಿಲ್ಲ. ನನ್ನ ಪುಟ್ಟ ಗುಡಿಸಲಿನಂತಹ ಮನೆಯಿಂದ ಶ್ರೀಮಂತ ಜಮೀನ್ದಾರನ ವಾಡೆ ಯಂತಹ ಬಂಗಲೆಯಲ್ಲಿರುವ  ಜನ ಅಥವಾ ಅವನ ಸೇವಕರಿಂದ ನನ್ನ ಮೇಲೆ ಏನಾದರೂ ನಡೆಯುತ್ತದೆ ಎಂಬ ಭಯವೂ ಇರಲಿಲ್ಲ. ನನ್ನ ಕಿರಿಯ ಸಹೋದರ ಶಕೂರ್ ಪರವಾಗಿ ನಾನು ಯಾಚಿಸುವ ಕ್ಷಮೆಯನ್ನು ಅವರು ಮನ್ನಿಸಿದರೆ, ಪಯಣ ಅಲ್ಲಿಗೆ ಕೊನೆಯಾಗುತ್ತದೆ. ಇಲ್ಲದಿದ್ದರೆ, ಮುಂದಿನ ದಾರಿ? ಕುರಿತು ಯಾವುದೇ ಕಲ್ಪನೆಯಿರಲಿಲ್ಲಆದರೆ, ಕುರಾನ್ ಧರ್ಮ ಗ್ರಂಥವು ನನ್ನನ್ನು ರಕ್ಷಿಸುತ್ತದೆ ಎಂದು ಆತ್ಮವಿಶ್ವಾಸವಿತ್ತು. ಕಾರಣಕ್ಕಾಗಿ ಕುರಾನ್ ಧರ್ಮ ಗ್ರಂಥವನ್ನು ಕೈಯಲ್ಲಿಡಿದು, ಬಿಗಿಯಾಗಿ ಎದೆಗೆ ಅಪ್ಪಿಕೊಂಡು ಮನೆಯಿಂದ ಹೊರಕ್ಕೆ ಹೆಜ್ಜೆ ಇಟ್ಟೆ.
ನಾನು ಕುರಾನ್ ಶ್ಲೋಕಗಳನ್ನು ಕಂಠಪಾಠ ಮಾಡಿ ಅವುಗಳನ್ನು ಹಳ್ಳಿಯ ಮಕ್ಕಳಿಗೆ ಬೋಧಿಸುತ್ತಿದ್ದೆ ಕಾರಣಕ್ಕಾಗಿ ಅಪ್ಪ  ನನ್ನನ್ನು ಜಮೀನ್ದಾರನ ಮನೆಗೆ ಕರೆದೊಯ್ಯಲು ಒಪ್ಪಿಗೆ ಸೂಚಿಸಿದ್ದ. ಘಟನೆ ನಡೆದ ದಿನ ನನ್ನ ವಯಸ್ಸು 28 ವರ್ಷ. ನಾನು ಬಾಲ್ಯದಿಂದಲೂ ಅನಕ್ಷರಸ್ತೆ. ನನ್ನ ಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗೆ ಶಾಲೆ ಇಲ್ಲದಿರುವ ಕಾರಣ ನನಗೆ   ಓದು, ಬರಹ  ಏನೇನೂ ಗೊತ್ತಿರಲಿಲ್ಲ. ಹದಿನೆಂಟನೆಯ ವಯಸ್ಸಿಗೆ ವಿವಾಹವಾಗಿ, ಮರು ವರ್ಷ ವಿಚ್ಛೇಧಿತಳಾಗಿ ಅಪ್ಪನ ಮನೆ ಸೇರಿದ್ದೆ. ನನ್ನೂರಿನ ಮೌಲ್ವಿಗಳ ಮೂಲಕ ಕುರಾನ್ ಗ್ರಂಥವನ್ನು ಸಂಪೂರ್ಣವಾಗಿ ಬಾಯಿ ಪಾಠ ಮಾಡಿದ್ದೆ. ಬೆಳಿಗ್ಗೆಯಿಂದ  ಸಂಜೆಯವರೆಗೆ ಅಪ್ಪನ ಹೊಲದಲ್ಲಿ ದುಡಿದ ನಂತರ ಸಂಜೆ ವೇಳೆ ಊರಿನ ಹೆಣ್ಣು ಮಕ್ಕಳಿಗೆ ಸೇವಾರ್ಥದ ರೂಪದಲ್ಲಿ ಕುರಾನ್ ಪಾಠ ಹೇಳಿಕೊಡುತ್ತಿದ್ದೆ. ಹೀಗಾಗಿ ನನ್ನೂರಿನ ಬಹುತೇಕ ಮಂದಿಗೆ ನನ್ನ ಕುರಿತು ಅಪಾರ ಗೌರವವಿತ್ತು. ಯಾರೊಬ್ಬರೂ  ನನ್ನನ್ನು ಕೀಳಾಗಿ ಕಾಣಲಿಲ್ಲ ಅಥವಾ ಕೆಟ್ಟದಾಗಿ ಮಾತನಾಡಲಿಲ್ಲ. ಬಡತನದ ನಡುವೆ ಅಂತಹದ್ದೊಂದು ಗೌರವಯುತ ಬದುಕನ್ನು ನಾನು  ಬಾಳಿದ್ದೆ.
ರಸ್ತೆಯಲ್ಲಿ ಹರಿಯುತ್ತಿದ್ದ ಕೊಳಚೆ ನೀರನ್ನು ದಾಟುತ್ತಾ, ಅಪ್ಪ ಹಾಗೂ ಚಿಕ್ಕಪ್ಪಂದಿರಾದ ಹಾಜಿ ಅಲಾಫ್, ಗುಲಾಂ ಬಾಯಿ  ಮತ್ತು ಮೌಲ್ವಿ ಅಬ್ದುಲ್ ರಜಾಕ್ ಸೇರಿದಂತೆ ಊರಿನ ಇತರೆ ಜಾತಿಯ ಅಪ್ಪನ ಗೆಳಯರೊಂದಿಗೆ ಜಮೀನ್ದಾರನ ಮನೆಯತ್ತ ಹೆಜ್ಜೆ ಹಾಕಿದ್ದೆಅವರೆಲ್ಲರ ಮನದೊಳಗೆ ಒಂದು ರೀತಿಯ ಭಯ ಆವರಿಸಿತ್ತು. ಕಾರಣಕ್ಕಾಗಿ ನಮ್ಮೊಂದಿಗೆ ಬರಲು ಚಿಕ್ಕಪ್ಪ ಹಿಂದೆ ಮುಂದೆ ನೋಡಿದ್ದ. ಆದರೆ, ನಾನು  ಮಾತ್ರ ಎದೆಯೊಳಗೆ ಯಾವುದೇ ರೀತಿಯ ಕಲ್ಮಶವಿಲ್ಲದ ಮಗುವಿನಂತೆ ಆತ್ಮ ವಿಶ್ವಾಸದಲ್ಲಿ ಹೆಜ್ಜೆ ಹಾಕುತ್ತಿದ್ದೆ. ನಾನು ವೈಯಕ್ತಿವಾಗಿ ಯಾವ ತಪ್ಪನ್ನೂ  ಎಸಗಿರಲಿಲ್ಲ. ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆಯಿತ್ತು. ಅತ್ಯಂತ ಬಡತನದ ಕುಟುಂಬದಲ್ಲಿ ಬೆಳೆದ ನಾನು ಮನೆಯಲ್ಲಿನ ಎಲ್ಲಾ ರೀತಿಯ ಕಷ್ಟ ಸುಖಗಳಿಗೆ ಸಾಕ್ಷಿಯಾಗಿದ್ದೆ. ನನ್ನ ಸಹೋದರನ ಕೃತ್ಯದಿಂದಾಗಿ ಕುಟುಂಬದ ಸದಸ್ಯರು ಅತ್ಯಂತ ಅಪಾಯದ ಅಂಚಿನಲ್ಲಿದ್ದುಕೊಂಡು ಆತಂಕ ಪಡುತ್ತಿರುವಾಗ, ನಾನು ಹುಟ್ಟಿ ಬೆಳೆದ ಮನೆಗೆ ನನ್ನಿಂದಾಗಬಹುದಾದ ಸಹಾಯವನ್ನು ಮಾಡುವುದು ನನ್ನ ನೈತಿಕ ಜವಾಬ್ದಾರಿಯಾಗಿತ್ತು.

ನನ್ನ ಸಹೋದರನ ಮೇಲೆ ಆರೋಪ ಹೊರಿಸಿರುವ ಜಮೀನ್ದಾರನ ಮಗಳು ಸಲ್ಮಾ ಕುರಿತು ನನ್ನೂರು ಮೀರ್ ವಾಲ ಗ್ರಾಮದಲ್ಲಿ ಯಾರಿಗೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅತ್ಯಂತ ನಿರ್ಭಿಡೆಯ ವ್ಯಕ್ತಿತ್ವ ಹಾಗೂ ಸಡಿಲ ನಾಲಿಗೆಯ ಆಕೆ ತಾನು ಇಷ್ಟ ಪಟ್ಟಂತೆ ಊರೊಳಗೆ ಮತ್ತು  ಊರಾಚೆ ತಿರುಗುತ್ತಿದ್ದಳು. ಇಂತಹ ಒಂದು ಅವಕಾಶವನ್ನು ಬಳಸಿಕೊಂಡ ಜಮೀನ್ದಾರನ ಕುಟುಂಬದವರು ನನ್ನ ತಮ್ಮ ಅವರ ಹೆಣ್ಣು ಮಗಳನ್ನು ಮಾತನಾಡಿಸಿದ ಎಂಬ ಏಕೈಕ ಕಾರಣಕ್ಕಾಗಿ   ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸಿದ್ದರು.
2002 ಜೂನ್ 22 ಕರಾಳ ರಾತ್ರಿಯ ನೆನಪುಗಳು ಮನಸ್ಸಿನೊಳಗೆ ಇಂದಿಗೂ  ಅಗ್ನಿ ಜ್ವಾಲೆಯ ಹಾಗೆ ಉರಿಯುತ್ತಿವೆ. ದಿನ ರಾತ್ರಿ ಪಕ್ಷಿಗಳೆಲ್ಲಾ ತಮ್ಮ ತಮ್ಮ ಗೂಡುಗಳನ್ನು ಸೇರಿಕೊಂಡು ಮೌನಕ್ಕೆ ಶರಣಾಗಿದ್ದವು. ದನಕರುಗಳು ಮತ್ತು ಕುರಿ, ಮೇಕೆಗಳು ಮೆಲಕು ಹಾಕುತ್ತಾ ನಮಗೂ ವರ್ತಮಾನದ ಜಗತ್ತಿಗೂ ಏನೇನೂ ಸಂಬಂಧವಿಲ್ಲದಂತೆ ಕೊಟ್ಟಿಗೆಗಳಲ್ಲಿ  ಕಟ್ಟಿ ಹಾಕಿದ್ದ ಗೂಟಕ್ಕೆ ಒರಗಿ ತೂಕಡಿಸುತ್ತಿದ್ದವುಊರಿನ ನಡು ಬೀದಿಯಲ್ಲಿ ಮಾತ್ರ ನಾಯಿಗಳು ಏನೋ ದುರಂತ ನಡೆಯಲಿದೆ  ಎಂಬ ಮುನ್ಸೂಚನೆ ನೀಡುವಂತೆ ಆಕಾಶದತ್ತ ಮುಖಮಾಡಿ ಘೀಳಿಡುತ್ತಿದ್ದವು. ರಾತ್ರಿಯ ನೀರವತೆಯ ಮೌನ ನಿಧಾನವಾಗಿ ನನ್ನ ಆತ್ಮ ವಿಶ್ವಾಸವನ್ನು ಅಲುಗಾಡಿಸುವಂತಿತ್ತು. ಭಯದಿಂದ ಜಮೀನ್ದಾರನ ಮನೆಯ ಅಂಗಳಕ್ಕೆ ನಾನೂ ಸೇರಿದಂತೆ  ಅಪ್ಪ, ಚಿಕ್ಕಪ್ಪಂದಿರು, ಮುಲ್ಲಾ ಎಲ್ಲರೂ ಕಾಲಿಟ್ಟವು. ಮನೆಯ ಗೇಟ್ ನಲ್ಲಿ ಒಂದೇ ಒಂದು ವಿದ್ಯುತ್ ದೀಪವು ಉರಿಯುತ್ತಿತ್ತುಮನೆಯ ಅಂಗಳದಲ್ಲಿ ನೂರಾರು ಮಂದಿ ಗ್ರಾಮಸ್ಥರು ನೆರದಿದ್ದರು. ಅವರಲ್ಲಿ ಬಹುತೇಕ ಮಂದಿ ಮಸ್ತೊಯ್ ಜನಾಂಗಕ್ಕೆ ಸೇರಿದವರಾಗಿದ್ದರುಜಿರ್ಗ ಎಂಬ ಹೆಸರಿನಲ್ಲಿ ನ್ಯಾಯಪಂಚಾಯಿತಿಗಳನ್ನು ನಡೆಸುವ ಮುಖಂಡರು  ಸಹ ಸೇರಿದ್ದರುಗ್ರಾಮಸ್ಥರು ಮತ್ತು ಪಂಚಾಯಿತಿ ನಡೆಸುವ ಸದಸ್ಯರ ನಡುವೆ ಸಮನ್ವಯಕಾರನಂತೆ ಕಾರ್ಯ ನಿರ್ವಹಿಸುತ್ತಿದ್ದ ಮುಲ್ಲಾ ಅಬ್ದುಲ್ ರಜಾಕ್  ದಿನ ಸಂಪೂರ್ಣ ಅಸಹಾಯಕರಾಗಿದ್ದರುಗುಂಪಿನಲ್ಲಿ ಒಬ್ಬಾತ ಮಾತ್ರ ಕೋಪದಿಂದ ಕುದಿಯುತ್ತಾ ಧ್ವನಿಯೆತ್ತರಿಸಿ ಮಾತನಾಡುತ್ತಿದ್ದ. ನಮ್ಮನ್ನು ನೋಡುತ್ತಿದ್ದಂತೆ ನನ್ನೆದುರು ಬಂದು ನಿಂತ. ನಿಧಾನವಾಗಿ ತಲೆಯೆತ್ತಿ ನೋಡಿದೆ. ಫೈಜಾ ಎಂದು ಕರೆಯುವ ಫಯಾಜ್ ಮಹಮ್ಮದ್ ನಿಂತಿದ್ದಅವನ ಜೊತೆ ಅಬ್ದುಲ್ ಖಾಲಿಕ್, ಗುಲಾಂ ಫರಿದ್, ಅಲ್ಲಾದಿತ, ಮತ್ತು ಮಹಮ್ಮದ್ ಫಯಾಜ್ ಎಂಬುವರು ಬಂದೂಕುಧಾರಿಗಳಾಗಿ ಆತನ  ಹಿಂದೆ ನಿಂತಿದ್ದರು. ಅಧೀರಳಾಗಿ ನಿಂತಿದ್ದ ನನ್ನ  ಬೆನ್ನ ಹಿಂದೆ  ಅಪ್ಪ ಮತ್ತು ಚಿಕ್ಕಪ್ಪಂದಿರು ಊರಿನ ಗ್ರಾಮಸ್ಥರ ಎದುರು ತಲೆ ತಗ್ಗಿಸಿ ನಿಂತಿದ್ದರು.
ನಾನು ಮೈ ತುಂಬಾ ಶಾಲನ್ನು ಹೊದ್ದಿದ್ದೆ. ನನಗೆ ನೆನಪಿರುವಂತೆ ರಾತ್ರಿ ಕ್ಷಣದಲ್ಲಿ ಕುರಾನಿನ ಶ್ಲೋಕವೊಂದನ್ನು ಮನಸ್ಸಿನಲ್ಲಿ ಪಠಿಸುತ್ತಿದ್ದೆ. ಕೈ ಹಿಡಿದಿದ್ದ ಧರ್ಮ ಗ್ರಂಥವನ್ನು ಮತ್ತಷ್ಟು ಬಿಗಿಯಾಗಿ ಎದೆಗೆ ಅಪ್ಪಿಕೊಂಡು ಕುರಾನ್ ಪಠಿಸುತ್ತಿದ್ದೆ. ಕುರಾನ್ ಗ್ರಂಥದ ಶ್ಲೋಕಗಳನ್ನು ನಾನು ಓದಿ ತಿಳಿದವಳಲ್ಲ. ಬಾಲ್ಯದಿಂದಲೂ ನನ್ನ ಕಿವಿಯ ಮೇಲೆ ಬಿದ್ದ ಅವುಗಳನ್ನು ಕಂಠ ಪಾಠ ಮಾಡಿದ್ದೆ. ಮಸ್ತೋಯ್ ಜನಾಂಗದ ದಬ್ಬಾಳಿಕೆಯಲ್ಲಿ ಅಥವಾ ದಾಳಿಯಲ್ಲಿ ಅದು ನನ್ನನ್ನು ಪವಿತ್ರಳಾಗಿ ಇರಿಸುತ್ತದೆ ಎಂಬ ನಂಬಿಕೆಯಿತ್ತು. ನಾನು ಹುಟ್ಟಿ ಬೆಳೆದ ನೆಲ ಪಂಜಾಬ್ ಪ್ರಾಂತ್ಯವೊಂದರ ಅಂಗವಾಗಿತ್ತು. ಪಂಜಾಬ್ ನೆಲವನ್ನು ಪಂಚನದಿಗಳಿಂದ ಪಾವನವಾದ ಭೂಮಿ ಎಂದು ಕರೆಯಲಾಗುತ್ತದೆ.
ಅಬ್ದುಲ್ ಖಾಲಿಕ್ ಎಂಬಾತ ತನ್ನ ಪಿಸ್ತೂಲನ್ನು ನನ್ನ ಹಣೆಗೆ ಹಿಡಿಯುತ್ತಾ ಹತ್ತಿರ ಬಂದ. ಸೇಡು ತೀರಿಸಿಕೊಳ್ಳುವ ತವಕದಲ್ಲಿ ಉನ್ಮತ್ತನಾಗಿದ್ದ ಅವನ ಕಣ್ಣುಗಳಲ್ಲಿ ಸೇಡಿನ ಜ್ವಾಲೆ ಉರಿಯುತ್ತಿದ್ದವು. ನಾನು ಕ್ಷಣಕ್ಕೆ ಅಸಹಾಯಕಳಾಗಿದ್ದೆ. ನಾನು ಹುಟ್ಟಿದ ಗುಜಾರ್ ಸಮುದಾಯ ನನ್ನೂರಿನಲ್ಲಿ ಹಿಂದುಳಿದ ಜಾತಿಗೆ ಸೇರಿದ್ದಾಗಿತ್ತು. ಬೇಸಾಯವನ್ನು ನಂಬಿ ಶತ ಶತ ಮಾನಗಳ ಕಾಲ ಬದುಕಿದ್ದರೂ ಸಹ ಮೇಲ್ವರ್ಗದ ಜನರ ತೂಗು ಕತ್ತಿಯ ಕೆಳೆಗೆ ನಮ್ಮ ಸಮುದಾಯದ ಬದುಕು-ಭವಿಷ್ಯ ಇವೆಲ್ಲವೂ ನಿರ್ಧಾರವಾಗುತ್ತಿದ್ದವು.
ನಾನು ಸನ್ನಿವೇಶವನ್ನು ಎದುರಿಸಲು ಸನ್ನದ್ಧಳಾಗಿ ತಲೆ ಎತ್ತಿ ಫೈಜಾ ಮುಖ ನೋಡುತ್ತಿದ್ದಂತೆ, ಆತ ತನ್ನ ತಲೆಯನ್ನು ಅಲುಗಾಡಿಸಿ ನೇರವಾಗಿ ನನ್ನನ್ನು ನೋಡಲು ಆರಂಭಿಸಿದ. ಕೆಲ ಹೊತ್ತು ಮೌನ ಆವರಿಸಿತು. ನಾನು ಮನದೊಳಗೆ ದೇವರನ್ನು ಪ್ರಾರ್ಥಿಸುತ್ತಿದ್ದೆ. ಇದ್ದಕ್ಕಿದ್ದಂತೆ ಮುಂಗಾರಿನ ಮಳೆ ಮತ್ತು ಸಿಡಿಲು ಒಮ್ಮೆಲೆ ಅಪ್ಪಳಿಸಿದಂತೆ ಆಯಿತು.
ನಾನು ಆತನ ಕಣ್ಣುಗಳನ್ನೇ ದಿಟ್ಟಿಸುತ್ತಿದ್ದೆ. ಮಸ್ತೋಯ್ ಸಮುದಾಯದ ತೀರ್ಪಿನಂತೆ (ಜಿರ್ಗ) ಅವನು ಇಡೀ ಊರಿನ ಗ್ರಾಮಸ್ಥರ ಎದುರು ಗುಜಾರ್ ಬುಡಕಟ್ಟಿನ ಹೆಣ್ಣು ಮಗಳಾದ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಅಲ್ಲಿನ ಜನತೆ ನನ್ನ ಸಹೋದರ ಶಕೂರ್, ಅವನ ಪುತ್ರಿ ಸಲ್ಮಾಳನ್ನು ಮಾತನಾಡಿಸಿದ ತಪ್ಪಿಗಾಗಿ ಬಹಿರಂಗವಾಗಿ ನನ್ನ ಮೇಲೆ ಅತ್ಯಾಚಾರವೆಸಗಲು ತೀರ್ಪು ನೀಡಿತ್ತು. ಆದರೆ, ನಿರ್ಧಾರವನ್ನು ಅವರು ನಮ್ಮನ್ನು ಮನೆಯಿಂದ ಕರೆ ತರುವಾಗ ಮುಚ್ಚಿ ಹಾಕಿದ್ದರು.

ಅಬ್ದುಲ್ ಖಾಲಿಕ್ ತನ್ನ ರಕ್ಷಣಾ ಸಿಬ್ಬಂದಿಯತ್ತ ತಿರುಗಿ  ನನ್ನನ್ನು ಹಿಡಿದು ಕೊಳ್ಳುವಂತೆ ಕಣ್ಸನ್ನೆ ಮಾಡಿದ. ಆದಷ್ಟು ಬೇಗ ತೀರ್ಪನ್ನು ಜಾರಿಗೆ ತರುವ ದಾವಂತ ಅವರೆಲ್ಲರಲ್ಲೂ ಎದ್ದು ಕಾಣುತ್ತಿತ್ತು. ಅಬ್ದುಲ್ ಖಾಲಿಕ್ ನನ್ನನ್ನು ಹಿಂಬದಿಯಿಂದ ತಬ್ಬಿ ಹಿಡಿದುಕೊಂಡ ನಂತರ ಗುಲಾಂ ಫರೀದ್, ಅಲ್ಲಾದಿತ, ಮಹಮ್ಮದ್ ಫಯಾಜ್ ನನ್ನ ಮೇಲೆ ಬಹಿರಂಗವಾಗಿ ಸರದಿಯಂತೆ ಅತ್ಯಾಚಾರವೆಸಗಿದರು.

ನಾನು ಕ್ಷಣದಲ್ಲಿ ಎಲ್ಲವನ್ನೂ ಅನಿರೀಕ್ಷಿತ ಆಘಾತಗಳೊಂದಿಗೆ ಅನುಭವಿಸಿದೆ. ಜರ್ಜರಿತವಾದ ದೇಹ ನೆಲದ ಮೇಲೆ ಕೆಳಕ್ಕೆ ಕುಸಿಯುತ್ತಿದ್ದಂತೆ  ಕಾಲುಗಳಾಗಲಿ ಅಥವಾ  ದೇಹವಾಗಲಿ ನನ್ನದಾಗಿರಲಿಲ್ಲ. ನನ್ನ ಸ್ಥಿತಿ ಕಟುಕನೊಬ್ಬ ಕಸಾಯಿಖಾನೆಯಲ್ಲಿ  ಗೂಟಕ್ಕೆ ಕಟ್ಟಿ ಹಾಕಿದ ಮೇಕೆಯಂತಾಗಿತ್ತು. ಅವರು ನನ್ನ ಉಡುಪು, ಶಾಲು, ಎಲ್ಲವನ್ನು ಕಳಚಿ ಬಿಸಾಡಿ, ನನ್ನ ತಲೆಗೂದಲನ್ನು ಹಿಡಿದು ಅತ್ತಿತ್ತ ನೀರಿನಲ್ಲಿ ಬಟ್ಟೆಗಳನ್ನು ಜಾಲಾಡಿಸುವಂತೆ ನನ್ನನ್ನು ನೆಲದ ಮೇಲೆ ಜಾಲಾಡಿಸುತ್ತಿದ್ದರು.
ಕುರಾನ್ ಧರ್ಮಗ್ರಂಥ ಹೆಸರಿನಲ್ಲಾದರೂ ನನ್ನನ್ನು ಕ್ಷಮಿಸಿಬಿಡಿ, ಬಿಡುಗಡೆ ಮಾಡಿ ಎಂದು ಅಂಗಲಾಚಿ ಬೇಡಿಕೊಂಡೆ. ನನ್ನ ನಿವೇದನೆ ಅಲ್ಲಿ ಅರಣ್ಯ ರೋಧನವಾಯಿತು. ನನ್ನನ್ನು ಜೂನ್ 22 ರಾತ್ರಿಯಿಂದ 23 ರಾತ್ರಿಯವರೆಗೂ ಅಲ್ಲಿಯೆ ಕೂಡಿಹಾಕಿದರು. 23 ಬೆಳಿಗ್ಗೆ ಬೆಳಕರಿಯುತ್ತಿದ್ದಂತೆ ನನ್ನನ್ನು ಸತ್ತ ನಾಯಿಯನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುವಂತೆ ಮನೆಯ ಅಂಗಳದಿಂದ ಕತ್ತಲು ಆವರಿಸಿದ್ದ ಕುದುರೆ ಲಾಯದೊಳಕ್ಕೆ ಜುಟ್ಟು ಹಿಡಿದು ದರ ದರೆನೆ  ಎಳೆದುಕೊಂಡು ಹೋಗಿ ಕೂಡಿ ಹಾಕಲಾಯಿತು. ಮತ್ತೆ ನಾಲ್ವರಿಂದ ನಿರಂತರ ಅತ್ಯಾಚಾರ ನಡೆಯಿತು. ಎಷ್ಟು ಎತ್ತು? ಎಷ್ಟು ಬಾರಿ? ಯಾವುದೂ ನನಗೆ ನೆನಪಿಲ್ಲ. ನಾನು ಪ್ರಜ್ಞಾಹೀನಳಾಗಿದ್ದೆ. ಜಮೀನ್ದಾನರನ ಮನೆಯ ಕಾಂಪೌಂಡಿನಿಂದ ಹಿಡಿದು, ಗೇಟಿನವರೆಗೆ ಎಲ್ಲಡೆ ಕಾವಲುಭಟರು ಬಂದೂಕಗಳನ್ನು ಹಿಡಿದು ನಿಂತಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಅಂತಹ ಸಮಯದಲ್ಲಿ ಬಿಡುಗಡೆಗಾಗಿ ನಾನು ಮಾಡಿಕೊಳ್ಳಬಹುದಾಗಿದ್ದ ಪ್ರಾರ್ಥನೆಗೂ ಅಲ್ಲಿ ಬೆಲೆಯಿರಲಿಲ್ಲ.
ಮುಖ್ತರನ್ ಬೀಬಿ ಅಥವಾ ಮುಖ್ತರ್ ಮಾಯಿ ಎಂದು ಜಗತ್ತಿನಿಂದ ಗುರುತಿಸಲ್ಪಟ್ಟಿದ್ದ  ನಾನು, ಗುಲಾಂ ಫರಿದ್ ಜಾಟ್ ಎಂಬ ಹೆಸರಿನ ನನ್ನ ತಂದೆಗೆ ಹಿರಿಯ ಮಗಳಾಗಿದ್ದೆ. ದುರಾದೃಷ್ಟದ ಕ್ಷಣದಲ್ಲಿ ನಾನೂ ಪ್ರಜ್ಞಾ ಹೀನಳಾಗಿದ್ದರೂ ಸಹ ಹರಿಣಿಯ ಮೇಲೆ ಹಸಿದ ಹೆಬ್ಬುಲಿಯಂತೆ ಎರಗುತಿದ್ದ ನಾಲ್ವರು ವ್ಯಕ್ತಿಗಳ ಮುಖಚರ್ಯೆಯನ್ನು ಮಾತ್ರ ನಾನು ಮರೆತಿರಲಿಲ್ಲ. ಅವರ ಪಾಲಿಗೆ ಹೆಣ್ಣು ಜೀವವೆಂದರೆ, ಹರಿದು ತಿನ್ನಬಹುದಾದ ಹಣ್ಣು ಎಂಬಂತಾಗಿತ್ತು. ಇದು ಪಾಕಿಸ್ತಾನದ ಪುರುಷ ಜಗತ್ತಿನಲ್ಲಿ ಜಾರಿಯಲ್ಲಿರುವ ಒಂದು ಅಲಿಖಿತ ನಿಯಮ. ಮರ್ಯಾದೆಯ ಹೆಸರಿನಲ್ಲಿ ತನ್ನ ಕುಟುಂಬಕ್ಕೆ ಅಥವಾ ಸಮುದಾಯಕ್ಕೆ ಕಳಂಕ ತರುವ ಹೆಣ್ಣೆದಂರೆ, ಕೋಳಿಯನ್ನು ತರಿದು ಹಾಕಿದಂತೆ ಮರ್ಯಾದೆ ಹತ್ಯೆಯ ಹೆಸರಿನಲ್ಲಿ ಕೊಲ್ಲಬಲ್ಲರು. ತಮ್ಮ ಕೈ ಕೆಳಗಿನ ಜಾತಿಯ ಜನರಿಂದ  ಮೇಲ್ವರ್ಗದ  ಜನರ ಅಂತಸ್ತಿಗೆ ಅಥವಾ ಗೌರವಕ್ಕೆ ಧಕ್ಕೆಯುಂಟಾದರೆ, ನೇರವಾಗಿ ಅವರ ಮನೆಗೆ ನುಗ್ಗಿ ರಾಜಾ ರೋಷವಾಗಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಬಲ್ಲರು. ನನ್ನ ನೆಲದಲ್ಲಿ ಹೆಣ್ಣನ್ನು ಕೊಲ್ಲಲು ಯಾವುದೇ ರೀತಿಯ ಆಯುಧಗಳು ಬೇಕಿಲ್ಲ. ಸರಳವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದರೆ ಸಾಕು. ಆಕೆ ತಂತಾನೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇಂತಹ ಸಾವಿರಾರು, ಲಕ್ಷಾಂತರ ಘಟನೆಗಳು ಹೊರಜಗತ್ತಿಗೆ ಬೆಳಕಿಗೆ ಬಾರದಂತೆ ಪಾಕಿಸ್ತಾನದಲ್ಲಿ ನಡೆದಿವೆ, ನಡೆಯುತ್ತಲೇ ಇವೆ.
ಅವರು ನನ್ನನ್ನು ತೀವ್ರವಾಗಿ ಥಳಿಸಿದ್ದರೆ ನಾನು ಯೋಚಿಸುತ್ತಿರಲಿಲ್ಲ ಏಕೆಂದರೆ, ನಾನು ಅವರ ಅಧೀನದಲ್ಲಿದ್ದೆಆದರೆ, ಅವರು ನನ್ನ ಸಹೋದರ, ಅಪ್ಪ ಮತ್ತು ಆತನ ಬಂಧುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವುದರ ಮೂಲಕ ತಮ್ಮೊಳಗಿನ ವಿಕೃತ ಕಾಮಕ್ಕೆ ಮತ್ತು ಕ್ರೌರ್ಯಕ್ಕೆ ನನ್ನನ್ನು ದಾಳವಾಗಿ ಬಳಸಿಕೊಂಡಿದ್ದರು.


ಸತತ ಇಪ್ಪತ್ತುನಾಲ್ಕು ಗಂಟೆಗಳ ಬಂಧನ ಮತ್ತು ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ನಂತರ ಮರುದಿನ ರಾತ್ರಿ ಕುದುರೆ ಲಾಯದ ಬಾಗಿಲು ತೆರೆದು ನನ್ನನ್ನು ಹೊರಹೋಗಲು ಹೇಳಿದ್ದರು. ಮೈ ಮೇಲೆ ಅಂಗೈ ಅಗಲದಷ್ಟು ಬಟ್ಟೆಯಿರಲಿಲ್ಲ. ಮಣ್ಣಿನಲ್ಲಿ ದೂಳಾಗಿ ಹರಿದು ಚಿಂದಿಯಾಗಿದ್ದ ನನ್ನ ಸೆಲ್ವಾರ್ ತುಂಡೊಂದನ್ನು ನನ್ನತ್ತ ಎಸೆದರುಜಮೀನ್ದಾರನ ಮನೆಯಾಚೆ ಅಪ್ಪ, ಚಿಕ್ಕಪ್ಪ, ಹಾಗೂ ಮುಲ್ಲಾ ಇವರುಗಳು  ಆಸ್ಪತ್ರೆಯ ಶವಾಗಾರದ ಮುಂದೆ ಕಾಯುವ ಬಂಧುಗಳಂತೆ ನನಗಾಗಿ ಕಾಯುತ್ತಿದ್ದರು. ನಾನು ಜಮೀನ್ದಾರನ ಮನೆಯ ಗೇಟಿನಿಂದ ನಿಧಾನವಾಗಿ ಹೆಜ್ಜೆ ಊರುತ್ತಾ ಹೊರಬಂದಾಗ ಆಗಸದಲ್ಲಿ ಚಂದ್ರನ ಬೆಳಕಿತ್ತು. ನನ್ನ ದೈನೇಸಿ ಸ್ಥಿತಿಯನ್ನು ನೋಡಲು ನನ್ನಿಂದ ಸಾಧ್ಯವಿಲ್ಲವೆಂಬಂತೆ ಚಂದ್ರನೂ ಕೂಡ ಮುಖಮುಚ್ಚಿಕೊಂಡವನಂತೆ ಮೋಡಗಳ ಹಿಂದೆ ಮರೆಯಾಗಿ ಹೋದ. ಅಪ್ಪ ತನ್ನ ಹೆಗಲ ಮೇಲಿದ್ದ ಶಾಲನ್ನು ನನಗೆ ನೀಡಿದ ನಂತರ ಅದನ್ನು ನನ್ನ ಸೊಂಟಕ್ಕೆ ಸುತ್ತಿಕೊಳ್ಳುವುದರ ಮೂಲಕ ಮಾನವನ್ನು ಮುಚ್ಚಿಕೊಂಡೆಎದೆಯನ್ನು ನನ್ನರೆಡು ಅಂಗೈಗಳಲ್ಲಿ ಮುಚ್ಚಿಕೊಂಡು ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕತೊಡಗಿದೆ. ಅಪ್ಪ ಮತ್ತು ಬಂಧುಗಳು ನನ್ನ ಹಿಂದೆ ಅನತಿ ದೂರದಲ್ಲಿ ತಲೆ ತಗ್ಗಿಸಿ ಹೆಜ್ಜೆ ಹಾಕುತ್ತಿದ್ದರು. ಇಡೀ ಊರಿಗೆ ಗರ ಬಡಿದಂತಾಗಿತ್ತು. ನನಗೊದಗಿದ ದುರಂತವನ್ನು ನೋಡಬಾರದು ಮತ್ತು ಕೇಳಬಾರದು ಎಂದು ತೀರ್ಮಾನಿಸಿದಂತೆ ನನ್ನೂರಿನ ಜನರು ತಮ್ಮ ಮನೆಯ ದೀಪಗಳನ್ನು ಆರಿಸಿ, ಕಿಟಿಕಿ ಬಾಗಿಲು ಮುಚ್ಚುವುದರ ಮೂಲಕ, ನಿದ್ದೆಯ ನೆಪದಲ್ಲಿ ಮೌನಕ್ಕೆ ಶರಣಾಗಿದ್ದರು. ರಾತ್ರಿ ಮೌನವೆಂಬುದು ಇಡೀ ಮೀರ್ವಾಲ ಎಂಬ ನನ್ನ ಊರನ್ನು  ಆಳುತ್ತಿತ್ತು.
( ದಿನಾಂಕ 5-12-2015 ರ ಶನಿವಾರ ದಂದು ಬಿಡುಗಡೆಯಾಗುತ್ತಿರುವ ಮೂಕ ಹಕ್ಕಿಯ ಹಾಡು ಕೃತಿಯಿಂದ)