ಶನಿವಾರ, ಮಾರ್ಚ್ 29, 2014

ಗುಜರಾತ್- ಅಭಿವೃದ್ಧಿಯ ಲೊಳಲೊಟ್ಟೆಗಳು


ನಮ್ಮ ಸಾಮಾಜಿಕ ತಾಣಗಳಲ್ಲಿ ವಿಶೇಷವಾಗಿ ಫೇಸ್ ಬುಕ್ ತಾಣದಲ್ಲಿ ಕೆಲವರು ನಮ್ಮ ನೆರೆಯ ಪಾಕಿಸ್ಥಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 26 ರೂಪಾಯಿ, ಶ್ರೀಲಂಕಾದಲ್ಲಿ 16 ರೂಪಾಯಿ ಹೀಗೆ ಸಿದ್ಧಪಡಿಸಿದ ಕಾರ್ಡ್ ಒಂದನ್ನು ಹಂಚಿಕೊಳ್ಳುವ ಕ್ರಿಯೆ ಇತ್ತೀಚೆಗೆ ಜೋರಾಗಿ ನಡೆದಿದೆ. ಇದರ ಹಿಂದಿರುವ ಹುನ್ನಾರವಿಷ್ಟೆ. ಮೋದಿ ಭಾರತದ ಪ್ರಧಾನಿಯಾದರೆ, ಇದೇ ಬೆಲೆಗೆ ಭಾರತದಲ್ಲಿ ನಮಗೂ ಪೆಟ್ರೋಲ್ ದೊರೆಯಲಿದೆ, ಕಾಂಗ್ರೇಸ್ ಸರ್ಕಾರ ಜನಸಾಮಾನ್ಯರನ್ನು ದೋಚುತ್ತಿದೆ ಎಂಬ ಸಂದೇಶವನ್ನು ಸಾರುವುದು ಇದರ ಹಿಂದಿನ ಉದ್ದೇಶ. ಇದನ್ನು ಬಹಳ ಮಂದಿ ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಹರಡುವ ಮೊದಲು “petrol price in Pakistan  ಅಥವಾ petrol price in Srilanka ಎಂದು ಟೈಪಿಸಿ ಗೂಗ್ಲಿ ಸರ್ಚ್ ಗೆ ಹಾಕಿದ್ದರೆ, ಆಯಾ ದೇಶಗಳ ಪೆಟ್ರೋಲ್ ಬೆಲೆ ದೊರೆಯುತ್ತಿತ್ತು. 16 ರೂಪಾಯಿಗೆ ಒಂದು ಲೀಟರ್ ನೀರು ಸಹ ದೊರೆಯುವುದಿಲ್ಲ ಎಂಬ ಸತ್ಯ ಗೊತ್ತಿಲ್ಲದ ಮೂರ್ಖ ಶಿಖಾಮಣಿಗಳು ಮಾತ್ರ ಮಾಡಬಹುದಾದ ಕೆಲಸ ಇದು. ಇಂತಹದೇ ಕೆಲಸವನ್ನು ಈಗ ಗುಜರಾತ್ ಅಭಿವೃದ್ಧಿಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಕೆಲವರು ಹರಿಯ ಬಿಡುತ್ತಿದ್ದಾರೆ.
ಸ್ವತಃ ನರೇಂದ್ರ ಮೋದಿ ಇಂತಹ ಸುಳ್ಳಿನ ಪಿತಾಮಹಾರಾಗಿದ್ದು, ಅವರು ತಮ್ಮ ಗುಜರಾತ್ ಅಭಿವೃದ್ಧಿ ಕುರಿತು ವೆಬ್ ಸೈಟಿನಲ್ಲಿ ಹೇಳಿಕೊಂಡಿರುವ ಮಾಹಿತಿಗೂ, ವಾಸ್ತವ ರೂಪದಲ್ಲಿ ಇರುವ  ಅಂಕಿ ಅಂಶಗಳಿಗೂ ಅಜಗಜಾಂತರ ವೆತ್ಯಾಸವಿದೆ. ಅವುಗಳನ್ನು ಒಂದೊಂದಾಗಿ ಇಲ್ಲಿ ವಿಶ್ಲೇಷಿಸಲಾಗಿದೆ.
ಗುಜರಾತಿನಲ್ಲಿ ದಿನದ 24 ಗಂಟೆಯೂ ನಿರಂತರ ವಿದ್ಯುತ್ ದೊರೆಯುತ್ತಿದೆ. ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ ನಿಜ. ಮೋದಿಯವರ ಪಾಲಿಗೆ ದಿನಕ್ಕೆ 24 ಗಂಟೆ ಅವಧಿಯಲ್ಲ, 48 ಗಂಟೆ ಇದ್ದರೂ ಸಹ ಅವರು ವಿದ್ಯುತ್ ಪೂರೈಸಬಲ್ಲರು. ಅವರು ಪೂರೈಸುವ ವಿದ್ಯುತ್ ಗುಜರಾತ್ ಸರ್ಕಾರ ಸ್ಥಾಪಿಸಿರುವ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆಯಾದ ವಿದ್ಯುತ್ತಾ? ಅಥವಾ ಖಾಸಾಗಿ   ಕಂಪನಿಗಳಿಂದ ಖರೀದಿಸಿದ ವಿದ್ಯುತ್ತಾ? ಎಂದು ಯಾರೂ ಪ್ರಶ್ನಿಸಲಿಲ್ಲ. ಗುಜರಾತಿನಲ್ಲಿ ಮೋದಿ ಆಳ್ವಿಕೆಯ ಹನ್ನೊಂದು ವರ್ಷಗಳ ಅವಧಿಯಲ್ಲಿ ಸರ್ಕಾರ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದೆ? ಯಾರ ಬಳಿಯೂ ಉತ್ತರವಿಲ್ಲ. 2001 ರಲ್ಲಿ ಕೇವಲ ಮೂರು ಸಾವಿರ ಕೋಟಿ ಬಂಡವಾಳದೊಂದಿಗೆ ಗುಜರಾತಿನಲ್ಲಿ ವಿದ್ಯುತ್ ಉತ್ಪಾದನೆ ಉಳಿದ ಅದಾನಿ  ಕಂಪನಿ ಈಗ ನಲವತ್ತೇಳು ಸಾವಿರ ಕೋಟಿ ಬಂಡವಾಳದ ಕಂಪನಿಯಾಗಿ ಬೆಳದಿದೆ. ಈ ಕಂಪನಿಯ ಮುಖ್ಯ ಉದ್ಯೋಗ  ವಿದ್ಯುತ್ ಉತ್ಪಾದಿಸಿ ಗುಜರಾತ್ ಸರ್ಕಾರಕ್ಕೆ ಮಾರುವುದಷ್ಟೇ ಕೆಲಸ.

ಇತ್ತೀಚೆಗಿನ   ದಿನಗಳಲ್ಲಿ ವರ್ಷ ವರ್ಷ ಬೇಡಿಕೆ ಹೆಚ್ಚಾಗುತ್ತಿರುವ ವಿದ್ಯುತ್ ಅನ್ನು ಸರ್ಕಾರಗಳು ಉತ್ಪಾದನೆ ಮಾಡುವ ಬದಲು ಖಾಸಾಗಿ ಕಂಪನಿಗಳಿಂದ ಖರೀದಿಸುವುದನ್ನು ಉದ್ಯೋಗ ಮಾಡಿಕೊಂಡಿವೆ. ಇದು ನಮ್ಮನ್ನು ಆಳುವ ಸರ್ಕಾರಗಳಿಗೆ, ಜನಪ್ರತಿನಿಧಿಗಳಿಗೆ, ಮತ್ತು ರಾಜಕೀಯ ಪಕ್ಷಗಳಿಗೆ ಲಾಭ ತಂದುಕೊಡುವ ದಂಧೆಯಾಗಿದೆ. ಪ್ರತಿ ಯೂನಿಟ್ ಗೆ ಯಾವ ದರದಲ್ಲಿ ಖರೀದಿಸಬೇಕೆಂಬ ಯಾವುದೇ ಮಾನದಂಡಗಳಾಗಲಿ, ನಿರ್ಭಂಧಗಳಾಗಲಿ ಇಲ್ಲ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಖರೀದಿಗಾಗಿ ವ್ಯಯ ಮಾಡಿರುವ ವೆಚ್ಚ 21 ಸಾವಿರ ಕೋಟಿ ರೂಪಾಯಿ. ಈ ಹಣದಲ್ಲಿ ಮೂರು ವಿದ್ಯುತ್ ಸ್ಥಾವರಗಳನ್ನು ನಾವು ಸ್ಥಾಪಿಸಬಹುದಿತ್ತು. ಆದರೆ ಇದರ ಬಗ್ಗೆ ಯಾರಿಗೂ ಕಳ ಕಳಿಯಿಲ್ಲ. ಇಂತಹ ದಂಧೆಯನ್ನು ಭಾರತದಲ್ಲಿ ಹುಟ್ಟಿಹಾಕಿದವರು ನರೇಂದ್ರಮೋದಿ.
ಇನ್ನು ಎರಡನೆಯದಾಗಿ ಗುಜರಾತ್ ರಾಜ್ಯ ರಸ್ತೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ. ಇದು ಅರ್ಧ ಸತ್ಯ ಮಾತ್ರ. 2010 ರ ವಿಶ್ವ ಬ್ಯಾಂಕ್ ವರದಿಯಲ್ಲಿ ಗುಜರಾತ್ ರಾಜ್ಯದ ರಸ್ತೆಗಳ ಬಗ್ಗೆ ಶ್ಲಾಘನೆ ಮಾಡಲಾಗಿದೆ. ಜೊತೆಗೆ ಶೇಕಡ 90 ರಷ್ಟು ಜನವಸತಿ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಹ ಹೇಳಲಾಗಿದೆ. ಇದೆಲ್ಲವೂ ಸಂಪೂರ್ಣ ನಿಜ. ಆದರೆ, ಭಾರತದಲ್ಲಿ ರಸ್ತೆ ಸಂಪರ್ಕ ಜೋಡಣೆಯಲ್ಲಿ ಪಂಜಾಬ್ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಕೇಂದ್ರ ಸಾರಿಗೆ ಇಲಾಖೆಯ ಹೆದ್ದಾರಿ ಕುರಿತ ವಾರ್ಷಿಕ ವರದಿಯಲ್ಲಿ ಪ್ರತಿ 100 ಚದುರ ಕಿಲೋಮೀಟರ್ ಗೆ ಗುಜರಾತ್ ರಾಜ್ಯದಲ್ಲಿ 80 ಕಿಲೋಮೀಟರ್ ಮಾತ್ರ ರಸ್ತೆಯಿದ್ದು, ಭಾರತದಲ್ಲಿ ಗುಜರಾತಿನ ಸ್ಥಾನ 19 ನೇಯ ಸ್ಥಾನವಾಗಿದೆ. ( ಭಾರತದ ಸರಾಸರಿ100 ಚದುರ ಕಿ.ಮಿ.  ಪ್ರಧೇಶಕ್ಕೆ ಇರುವ ರಸ್ತೆಯ ಉದ್ದ 143 ಕಿಲೋಮೀಟರ್ ಗಳು) ಇನ್ನು ಒಂದು ಲಕ್ಷ ಚದುರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಕೇರಳದಲ್ಲಿ 518 ಕಿಲೋಮೀಟರ್ ರಸ್ತೆಯಿದ್ದರೆ, ಗುಜರಾತಿನಲ್ಲಿ 259 ಕಿಲೊಮೀಟರ್ ರಸ್ತೆಯಿದ್ದು 23 ನೇ ಸ್ಥಾನದಲ್ಲಿ ಗುಜರಾತ್ ನಿಂತಿದೆ. ( ಭಾರತದ ಸರಾಸರಿ 398 ಕಿಲೊಮೀಟರ್)  2009 ರಿಂದ 2011 ರ ವರೆಗೆ ಗುಜರಾತ್ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. 2013 ರ ವರದಿಯ ಪ್ರಕಾರ ಹೆದ್ದಾರಿ ಅಭಿವೃದ್ದಿಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇಯ ಸ್ಥಾನದಲ್ಲಿದೆ, ಗುಜರಾತಿಗೆ ಮೂರನೆಯ ಸ್ಥಾನ ಲಭ್ಯವಾಗಿದೆ.

ಗುಜರಾತ್ ಅಭಿವೃದ್ಧಿಯ ಕುರಿತು ಪುಂಖಾನು ಪುಂಖವಾಗಿ ಮಿಥ್ಯೆ ಹರಡುವ ನರೇಂದ್ರ ಮೋದಿ ಭಜನಾ ಮಂಡಳಿಯ ಭಕ್ತರು, ಒಮ್ಮೆ 2013 ರ ಸೆಪ್ಟಂಬರ್ 12 ರಂದು ಗುಜರಾತ್ ಹೈಕೋರ್ಟ್ ಮೋದಿ ಸರ್ಕಾರಕ್ಕೆ ಯಾವ ರೀತಿ ಚಾಟಿ ಬೀಸಿದೆ ಎಂಬುವುದನ್ನು ಗಮನಿಸುವುದು ಒಳಿತು. ಹತ್ತು ಕಿಲೊಮಿಟರ್ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವುದಕ್ಕೆ ಐದು ಕೋಟಿ ರೂಪಾಯಿ ಹಣ ವ್ಯಯ ಮಾಡಿರುವುದನ್ನು ಪ್ರಶ್ನಿಸಿ, ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮುಖ್ಯನಾಯಮೂರ್ತಿ  ಭಾಸ್ಕರ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ  ಪರ್ಡಿವಾಲ ರವರನ್ನು ಒಳಗೊಂಡಿದ್ದ ದ್ವಿಸದಸ್ಯ ಪೀಠ, ಗುಜರಾತ್ ಸರ್ಕಾರದ ಲೋಕೊಪಯೋಗಿ ಇಲಾಖೆಯನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ಹದಗೆಟ್ಟಿರುವ ಅಹಮದಾಬಾದ್ ನಗರದ ರಸ್ತೆಗಳ ಕುರಿತು ತೀವ್ರ ಅತೃಪ್ತಿ ವ್ಯಕ್ತಪಡಿಸಿತು, ಗುಜರಾತಿನ ಅಭಿವೃದ್ಧಿಯೆಂಬುದು ಬರೀ ಲೊಳಲೊಟ್ಟೆ ಎಂಬುದಕ್ಕೆ ಇದಕ್ಕಿಂತ ಬೇರೇನು ಸಾಕ್ಷಿ ಬೇಕು?
ಗುಜರಾತಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಭಾವನಗರ್ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿಗಳಾದ  ಡಾ. ವಿದ್ಯುತ್ ಜೋಷಿಯವರು ಹೇಳಿದ “ ಮೋದಿ ಅವಧಿಗೆ ಮುನ್ನ ರಾಜ್ಯದ ಜಿ.ಡಿ.ಪಿ. ಬೆಳವಣಿಗೆ ಶೇಕಡ 16% ರಷ್ಟು ಇದ್ದದ್ದು, ಈಗ ಶೋಚನೀಯ ಮಟ್ಟಕ್ಕೆ ಕುಸಿದಿದೆ” ಎಂಬ ಮಾತುಗಳನ್ನು ಆಧಾರವಾಗಿಟ್ಟುಕೊಂಡು ಇತರೆ ರಾಜ್ಯಗಳ ಜಿ.ಡಿ.ಪಿ. ಬೆಳವಣಿಗೆ ಹೋಲಿಸಿದರೆ, ಗುಜರಾತಿನ ಸ್ಥಾನ ಐದನೆಯದಾಗಿದೆ. ಭಾರತದ ರಾಜ್ಯಗಳ ಪೈಕಿ  ಒಟ್ಟು 12 ಲಕ್ಷ 48 ಸಾವಿರ ಕೋಟಿ ಮೌಲ್ಯದ ಉತ್ಪಾದನೆಯಲ್ಲಿ ಮಹಾರಾಷ್ಟ ಪ್ರಥಮ ಸ್ಥಾನದಲ್ಲಿದ್ದು, 6 ಲಕ್ಷ, 84 ಸಾವಿರ ಕೋಟಿ ಮೌಲ್ಯದ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಎರಡನೇಯ ಸ್ಥಾನದಲ್ಲಿದೆ. ಆನಂತರ ಕ್ರಮವಾಗಿ ಆಂದ್ರಪ್ರದೇಶ ( 6ಲಕ್ಷ 55ಸಾವಿರ ಕೋಟಿ) ತಮಿಳುನಾಡು ( 6ಲಕ್ಷ,39ಸಾವಿರಕೋಟಿ) ಹಾಗೂ ಐದನೆಯ ಸ್ಥಾನದಲ್ಲಿ ಗುಜರಾತ್ ರಾಜ್ಯವಿದೆ,( 6ಲಕ್ಷ 12 ಸಾವಿರ ಕೋಟಿ) ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ( 2007-2012) ವರದಿಯ ಪ್ರಕಾರ ಅಭಿವೃದ್ಧಿಯ ಬೆಳವಣಿಯ ಸೂಚ್ಯಂಕ ಈ ರೀತಿ ಇದೆ. ಬಿಹಾರ (11.4) ಮಹಾರಾಷ್ಟ್ರ (10.8) ತಮಿಳುನಾಡು ( 10.3) ಗುಜರಾತ್ ( 8.3)
ನ್ಯಾಷನಲ್ ಸ್ಯಾಂಪಲ್ ಸರ್ವೆ ಇದರ ವರದಿಯ ಪ್ರಕಾರ ಗುಜರಾತಿನಲ್ಲಿ ಕಾರ್ಮಿಕರ ಕೂಲಿದರ ( ನಗರ ಮತ್ತು ಗ್ರಾಮಗಳ ಒಟ್ಟು ಸರಾಸರಿ ಲೆಕ್ಕದಲ್ಲಿ) 145 ರೂಪಾಯಿ ಇದ್ದರೆ, ಕೇರಳದಲ್ಲಿ 310 ರುಪಾಯಿ ಇದೆ. ರಾಜಸ್ಥಾನದಲ್ಲಿ 174 ರುಪಾಯಿ, ಬಿಹಾರದಲ್ಲಿ 157 ರೂಪಾಯಿ ಇದ್ದು ರಾಷ್ಟ್ರದ ಸರಾಸರಿ ಕೂಲಿ ವೇತನ 170 ರೂಪಾಯಿಗಳಷ್ಟಿದೆ.
ಗುಜರಾತಿನಲ್ಲಿ ಮಲಹೊರುವ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಿದ್ದು ಶೇಕಡ ನೂರರಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದು ಮೋದಿ ತಮ್ಮ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದ್ದರು. ( 2004 ರಲ್ಲಿ) ಆದರೆ 2006 ರಲ್ಲಿ ಮುಂಬೈನ  ಟಾಟಾ ಸಮಾಜ ವಿಜ್ಞಾನಗಳ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ 12 ಸಾವಿರ ಮಂದಿ ಮಲ ಹೊರುವವರು ತಮ್ಮ ಕಾಯಕದಲ್ಲಿ ನಿರತರಾಗಿದ್ದರು. 2011ರ ಭಾರತ ಮಾನವ ಅಭಿವೃದ್ಧಿಯ ವರದಿಯ ಪ್ರಕಾರ ಗುಜರಾತಿನಲ್ಲಿ 52 ಲಕ್ಷ ಕುಟುಮಬಗಳಿಗೆ ಶೌಚಾಲಯಗಳಿಲ್ಲ, 64 ಲಕ್ಷ ಕುಟುಂಬಗಳಿಗೆ ಒಳಚರಂಡಿ ವ್ಯವಸ್ಥೆಯಿಲ್ಲ ಮತ್ತು 18 ಸಾವಿರದ 321 ಅಂಗನವಾಡಿಗಳಿಗೆ ( ಅಂದರೆ, ಗುಜರಾತ್ ಅಂಗನವಾಡಿಗಳ ಸಂಖ್ಯೆಯ ಶೇಕಡ 37% ರಷ್ಟು) ಶೌಚಗೃಹಗಳಿಲ್ಲ. ಈಗಿನ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿರುವ ರಘುರಾಂ ರಾಜನ್ ಸಮಿತಿ ನೀಡಿರುವ ಅಭಿವೃದ್ಧಿಯ ಸೂಚ್ಯಂಕದ ವರದಿಯಲ್ಲಿ ಗುಜರಾತ್ ಸ್ಥಾನಮಾನ ಹನ್ನೆರೆಡನೇಯದು. (2000 ದ ಇಸವಿಯಲ್ಲಿ ಗುಜರಾತ್ ಅಭಿವೃದ್ಧಿಯ ಸೂಚ್ಯಂಕ 0,466 ಇದ್ದದ್ದು 2008 ರ ವೇಳೆಗೆ 0.527 ಸೂಚ್ಯಂಕಕ್ಕೆ ಕುಸಿದು ಹತ್ತರಿಂದ ಹನ್ನೊಂದನೇಯ ಸ್ಥಾನ ಅಲಂಕರಿಸಿತ್ತು.)


ಈ ದಿನ ಅಭಿವೃದ್ದಿ ಕುರಿತಂತೆ ಹಲವು ರೀತಿಯ ಮಾನದಂಡಗಳನ್ನು ಮತ್ತು ವಿಶ್ಲೇಷಣೆಯ ಮಾದರಿಗಳನ್ನು ಬಂಡವಾಳಶಾಹಿ ಜಗತ್ತಿನಿಂದ ಪ್ರೇರಿತವಾದ ಜಾಗತೀಕರಣ ನಮ್ಮ ಮುಂದೆ ಹರಡುತ್ತಿದೆ. ಅಭಿವೃದ್ಧಿ ಕುರಿತ ವಿವೇಚನೆಗೆ ಕೇವಲ ಆರ್ಥಿಕ ದೃಷ್ಟಿಕೋನ ಮಾತ್ರ ಸಾಲದು. ಇದರ ಜೊತೆ ಸಾಮಾಜಿಕ ನ್ಯಾಯದ ಮಾನದಂಡಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಇದನ್ನು ಅಭಿವೃದ್ದಿ ಕುರಿತಂತೆ 20 ನೇ ಶತಮಾನದಲ್ಲಿ ಜಗತ್ತಿಗೆ ಮನವರಿಕೆ ಮಾಡಿಕೊಟ್ಟವರು ನಮ್ಮವರೇ ಆದ ನೊಬಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್. ( ಅವರ ಐಡಿಯ ಆಫ್ ಜಸ್ಟೀಸ್ ಕೃತಿಯನ್ನು ಆಸಕ್ತರು ಗಮನಿಸಬಹುದು)
ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಸಂಪತ್ತು ಕೆಳಗಿನಿಂದ ಮೇಲ್ಮುಖವಾಗಿ ಚಲಿಸಬೇಕು ಎಂಬುದು ಅಮಾರ್ತ್ಯ ಸೇನರ ವಾದ. ಅಂದರೆ, ಕೈಗಾರಿಕೆ, ರಸ್ತೆ, ಉದ್ಯೋಗ ಸೃಷ್ಟಿ ಇವುಗಳ ಜೊತೆಗೆ ಜನಸಾಮಾನ್ಯರಿಗೆ ವಸತಿ, ಆರೋಗ್ಯ, ಶಿಕ್ಷಣ ಇವೆಲ್ಲವು ಸುಲಭವಾಗಿ ದೊರಕುವಂತಿರಬೇಕು. ಇದರಿಂದಾಗಿ ಅವರ ಜೀವನಮಟ್ಟ ಸುಧಾರಣೆಯಾಗಿ ಅವರಿಗೆ  ಕೊಳ್ಳುವ ಶಕ್ತಿ ಲಭಿಸುತ್ತದೆ. ಈ ಮೂಲಕ ಆರ್ಥಿಕ ಚಟುವಟಿಕೆ ಗರಿಗೆದರುತ್ತದೆ ಎಂಬುದು ಅಮಾರ್ತ್ಯ ಸೇನರ ನಂಬಿಕೆ. ಇದಕ್ಕೆ ವಿರುಧ್ದವಾಗಿ ಬಂಡವಾಳಶಾಹಿ ಜಗತ್ತು ಮತ್ತೊಬ್ಬ ಅರ್ಥಶಾಸ್ತ್ರಜ್ಞ ಹಾಗೂ ಭಾರತದವರೇ ಆದ ಈಗ ಅಮೇರಿಕಾದಲ್ಲಿ ನೆಲೆಸಿರುವ ಜಗದೀಶ್ ಚಂದ್ರ ಭಗವತಿ ಮೂಲಕ ಮತ್ತೊಂದು ವಾದವನ್ನು ನಮ್ಮ ಮುಂದಿಟ್ಟಿದೆ. ಭಗವತಿಯವರ ವಾದದ ಪ್ರಕಾರ, ಸರ್ಕಾರಗಳು, ಉದ್ಯಮಿಗಳಿಗೆ ವಿಶೇಷ ಸವಲತ್ತು ಅಂದರೆ, ರಿಯಾಯತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ನೀಡಿ, ಅವರುಗಳು ಕೈಗಾರಿಕೆ ಸ್ಥಾಪಿಸಲು ಉತ್ತೇಜಿಸಬೇಕು. ಇದರಿಂದ ಉದ್ಯೊಗಗಳು ಸೃಷ್ಟಿಯಾಗುತ್ತವೆ. ಲಾಭ ಪಡೆದ ಕೈಗಾರಿಕೋದ್ಯಮಿಗಳು ಬಂದ ಲಾಭವನ್ನು ಮತ್ತೇ ಉದ್ಯಮದಲ್ಲಿ ತೊಡಗಿಸುತ್ತಾರೆ. ಹೀಗೆ ಸಂಪತ್ತು ಮೇಲಿಂದ ಕೆಳಮುಖವಾಗಿ ಚಲಿಸಿದಾಗ ಅಭಿವೃದ್ಧಿಯಾಗುತ್ತದೆ. ಇದು ಭಗವತಿಯವರ ನಂಬಿಕೆ.


ಜಗದೀಶ್ ಚಂದ್ರ ಭಗವತಿಯವರ ಅಭಿವೃದ್ದಿ ಕುರಿತ ವಾದವನ್ನು ನಾವು ಒಪ್ಪುವುದಾದರೆ, 2008 ರಲ್ಲಿ ನೂರು ಕೋಟಿ ಡಾಲರ್ ( ಡಾಲರ್ ಮೌಲ್ಯವನ್ನು 60 ರುಪಾಯಿ ದರದಲ್ಲಿ ಲೆಕ್ಕ ಹಾಕಿದರೆ, 5 ಸಾವಿರ ಕೋಟಿ ಎಂದುಕೊಳ್ಳೋಣ) ಆಸ್ತಿ ಹೊಂದಿದ್ದ ಭಾರತದ ಶ್ರೀಮಂತರ ಕೇವಲ ನಾಲ್ಕು ಇದ್ದದ್ದು, 2011 ರ ವೇಳೆಗೆ 247 ಕ್ಕೆ ಏರಿಕೆಯಾಗಿದೆ. ಈ ಸಿರಿವಂತರು ತಾವು ಸಂಪಾದಿಸಿದ ಲಾಭವನ್ನು ಬಂಡವಾಳ ರೂಪದಲ್ಲಿ ಎಲ್ಲಿ ತೊಡಗಿಸಿದ್ದಾರೆ.?ತಾವು ಮಂಡಿಸಿರುವ ಅಭಿವೃದ್ಧಿಯ ಸಿದ್ಧಾಂತ ಭಾರತದಲ್ಲಿ ಹೇಗೆ ಮಕಾಡೆ ಮಲಗಿದೆ ಎಂಬುದನ್ನು ಬಗವತಿಯವರು ಒಮ್ಮೆ ಭಾರತಕ್ಕೆ ಬಂದು ನೋಡುವುದು ಒಳಿತು.

ಬುಧವಾರ, ಮಾರ್ಚ್ 26, 2014

ನರೇಂದ್ರಮೋದಿ ಮತ್ತು ಕಾರ್ಪೊರೇಟ್ ಜಗತ್ತು




ಗುಜರಾತಿನ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರಮೋದಿ ಜಯಗಳಿಸಿ ಮುಖ್ಯ ಮಂತ್ರಿ ಗದ್ದುಗೆ ಏರಿರುವುದು ಅವರ ಭಕ್ತರ ಪಾಲಿಗೆ ರೋಮಾಂಚಕಾರಿಯಾದ ವಿಷಯ ನಿಜ ಆದರೆ, ಭಾರತದ ಇತಿಹಾಸದಲ್ಲಿ ಪಶ್ಚಿಮ ಬಂಗಾಳದ ಜ್ಯೋತಿ ಬಸುರವರು ಆರು ಬಾರಿ ಚುನಾವಣೆಯಲ್ಲಿ ತಮ್ಮ ಸಿ.ಪಿ.ಐ.(ಎಂ) ಪಕ್ಷವನ್ನು ಮುನ್ನಡೆಸಿ ಸತತ 23 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿದ್ದರು. ಅಸ್ಸಾಮಿನ ತರುಣ್ ಗೋಗಯ್ ನಾಲ್ಕು ಬಾರಿ ಮತ್ತು ಅದೇ ಬಿ.ಜೆ.ಪಿ. ಪಕ್ಷದ ವತಿಯಿಂದ ಮದ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸ್ ಗಡದಿಂದ ಡಾ.ರಮಣ್ ಸಿಂಗ್ ತಲಾ ಮೂರು ಬಾರಿ ಮುಖ್ಯ ಮಂತ್ರಿಯಾಗಿ ಮುಂದುವರೆದಿದ್ದಾರೆ, ಇವರ ಜೊತೆಗೆ ಮಣಿಪುರದಲ್ಲಿ ಮಣಿಸರ್ಕಾರ್ ಎಂಬ ಸಜ್ಜನ ಹಾಗೂ ಅತ್ಯಂತ ಸರಳ ವ್ಯಕ್ತಿಯೊಬ್ಬರು ನಾಲ್ಕು ಬಾರಿ ಸಿ.ಪಿ.ಐ.(ಎಂ.) ಸರ್ಕಾರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೆಹಲಿಯ ಶೀಲಾದಿಕ್ಷೀತ್ ಕೂಡ ಮೂರು ಬಾರಿ ಸತತವಾಗಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದವರು.
ಮೋದಿಯವರ ಗುಜರಾತ್ ರಾಜ್ಯದ ಇತಿಹಾಸದಲ್ಲಿ ಮಾಧವಸಿಂಗ್ ಸೋಳಂಕಿ ನಾಲ್ಕು ಬಾರಿ ಮುಖ್ಯ ಮಂತ್ರಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಇಂತಹ ದಾಖಲೆಗಳಿದ್ದರೂ ಸಹ  ತಮ್ಮ ಚುನಾವಣೆಯ ಗೆಲುವುಗಳನ್ನು ಶತಮಾನದ ಸಾಧನೆ ಯೆಂಬಂತೆ ಪ್ರತಿಬಿಂಬಿಸಿಕೊಳ್ಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ.
ಇಪ್ಪತ್ತೊಂದನೆ ಶತಮಾನದ ಭಾರತದ ಯುಗಪುರುಷ ಎಂಬಂತೆ ಸ್ವಯಂ ಬಿಂಬಿಸಿಕೊಳ್ಳುತ್ತಿರುವ ನರೇಂದ್ರಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗುವ ಮುನ್ನ ಇದ್ದ ಅಲ್ಲಿನ ಬೆಳವಣಿಗೆ ಮತ್ತು ಮುಖ್ಯಮಂತ್ರಿಯಾದ ನಂತರ ಆಗಿರುವ ಬೆಳವಣಿಯ ವರದಿ ಈ ಕೆಳಗಿನಂತಿದೆ. ಗಮನಿಸಿ.
ವಿಷಯ                       ಮೋದಿ ಆಳ್ವಿಕೆಗೆ ಮುನ್ನ                ಮೋದಿ ಆಳ್ವಿಕೆಯಲ್ಲಿ
ಮಾನವ ಅಭಿವೃದ್ಧಿ            10 ನೇ ಸ್ಥಾನ (ಭಾರತದಲ್ಲಿ)           11 ನೇ ಸ್ಥಾನ ( 2008 ರಲ್ಲಿ)
ಸಾಕ್ಷರತೆ                      17 ನೇ ಸ್ಥಾನ (20001)                 18 ನೇ ಸ್ಥಾನ ( 2011)
ಕುಡಿಯುವ ನೀರಿನ ಲಭ್ಯತೆ   14 ನೇ ಸ್ಥಾನ                            15ನೇ ಸ್ಥಾನ (2011)
ಕೃಷಿರಂಗದ ಬೆಳವಣಿಗೆ        ಶೇಕಡ 10%                             ಶೇಕಡ 4 %   ( 2011)
ಆರೋಗ್ಯಕ್ಕೆ ವೆಚ್ಚ              6ನೇ ಸ್ಥಾನ (ಭಾರತದಲ್ಲಿ)              17 ನೇ ಸ್ಥಾನ ( 2011ರಲ್ಲಿ)
ಕೃಷಿ ಉತ್ಪಾದನೆ               ಶೇಕಡ 4.7 %                           ಶೆಕಡ 3.4%
ಶಿಕ್ಷಣಕ್ಕೆ ಮಾಡಿದ ವೆಚ್ಚ        6ನೇ ಸ್ಥಾನ (ಭಾರತದಲ್ಲಿ)               16 ನೇ ಸ್ಥಾನ ( 2011ರಲ್ಲಿ)

ಗುಜರಾತಿನ ಬೆಳವಣಿಗೆಯ ಈ ಅಂಕಿ ಅಂಶಗಳು ಮೋದಿಯ ವಿರೋಧಿಗಳು ಸೃಷ್ಟಿ ಮಾಡಿದ ಅಂಕಿ ಅಂಶಗಳಲ್ಲ ಬದಲಾಗಿ ಕಳೆದ ಒಂದು ದಶಕದ ಭಾರತದ ವಿವಿಧ ಇಲಾಖೆಯ ಹಾಗೂ ಸಂಸ್ಥೆಗಳ ವರದಿಗಳು ಹೇಳಿರುವ ಅಂಕಿ ಅಂಶಗಳು.

ಇಂತಹ ವಿಫಲತೆಯನ್ನು ಬೆನ್ನಿಗಿಟ್ಟುಕೊಂಡು, ಕಾರ್ಪೊರೇಟ್ ಸಂಸ್ಥೆಗಳ ಲಾಭಿಯ ಮೂಲಕ ಕಳೆದ ಒಂದು ವರ್ಷದಲ್ಲಿ ಜಾಹಿರಾತಿಗಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೋದಿ ವ್ಯಯ ಮಾಡಿದ್ದಾರೆ. ಗುಜರಾತಿನ ಅಭಿವೃದ್ಧಿ ಕುರಿತು ದೇಶಾದ್ಯಂತ ಪತ್ರಿಕೆಗಳಿಗೆ ಪೂರ್ಣ ಮುಖಪುಟದ ಜಾಹಿರಾತು ನೀಡುವ ಅವಶ್ಯಕತೆ ಏನಿತ್ತು? ಕಳದ ವರ್ಷ ಗೋವಾದಲ್ಲಿ ನಡೆದ ಬಿ.ಜೆ.ಪಿ. ಕಾರ್ಯಕಾರಿಣಿ ಸಭೆಯಲ್ಲಿ ಬಿ.ಜೆ.ಪಿ. ಪ್ರಚಾರ ಸಮಿತಿಯ ಅಧ್ಯಕ್ಷರಾದ ನಂತರ ಸೂರಜ್ ಕುಂಡ್ ನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಮೇಲೆ ನರೇಂದ್ರ ಮೋದಿಯವರು, ದೃಶ್ಯ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹಿರಾತುಗಳ ಮತ್ತು ಮುದ್ರಣ ಮಾಧ್ಯಮಗಳ ಜಾಹಿರಾತಿನ ವೆಚ್ಚ ಎಷ್ಟು?  ಗುಜರಾತಿನ ಜನ ನೀಡಿದ ತೆರಿಗೆ ಹಣವನ್ನು ಹೀಗೆ ತನ್ನ ವೈಯಕ್ತಿಕ ಹಿತಾಸಕ್ತಿ ಮತ್ತು ಸಾಧನೆಗೆ ಖರ್ಚು ಮಾಡುವ ನರೇಂದ್ರ ಮೋದಿ, ಇಟಲಿ ಮೂಲದ ಕನ್ನಡಕ, ಸ್ವಿಟ್ಜರ್ ಲ್ಯಾಂಡಿನ ಗಡಿಯಾರ, ಇಂಗ್ಲೆಂಡಿನ ಹತ್ತು ಸಾವಿರ ಮೌಲ್ಯದ ಪೆನ್ ಇಟ್ಟುಕೊಂಡು ಓಡಾಡುತ್ತಾ ರಾಷ್ರಪ್ರೇಮದ ಬಗ್ಗೆ ಸ್ವದೇಶಿ ಜಾಗರಣ್ ಕುರಿತು ಮಾತನಾಡುತ್ತಾರೆ.  ( ಗಮನಿಸಿ-26-3-14 ರ ಕನ್ನಡಪ್ರಭದ ಬೈಟು ಕಾಫಿ ವಿಭಾಗದಲ್ಲಿ ಮೋದಿ ಉಡುಪು ಮತ್ತು ಹವ್ಯಾಸಗಳ ಕುರಿತು ಲೇಖನ ಪ್ರಕಟವಾಗಿದೆ)
ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳು ಈಗಾಗಲೇ ಕಾರ್ಪೊರೇಟ್ ಕುಳಗಳ ಹಿಡಿತಲ್ಲಿರುವುದರಿಂದ ನರೆಂದ್ರಮೋದಿಯವರು ಅವುಗಳ ಮೂಲಕ ತಮ್ಮ ಇಮೇಜ್ ವೃದ್ಧಿಸಿಕೊಳ್ಳುತ್ತಿರುವ ಜೊತೆ ಯಾವುದೇ ರೀತಿಯ ವಿರೋಧಿ ನೆಲೆಯ ಲೇಖನಗಳು ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮೊದಿಯ ವಿರುದ್ಧ ಧ್ವನಿ ಎತ್ತಿದ ಸಂಪಾದಕರು, ಸುದ್ಧಿ ವಿಶ್ಲೇಷಕರು ಮಾಧ್ಯಮ ಸಂಸ್ಥೆಗಳಲ್ಲಿ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ಈ ಕುರಿತು ಔಟ್ ಲುಕ್ ವಾರಪತ್ರಿಕೆ ಲೇಖನ ಪ್ರಕಟವಾಗಿದ್ದು ಹುದ್ದೆ ಕಳೆದು ಕೊಂಡ ಪತ್ರಕರ್ತರ ವಿವರಗಳಿವೆ.( ಪೆಬ್ರವರಿ 3 2014 ರ ಔಟ್ ಲುಕ್ ಇಂಗ್ಲೀಷ್ ವಾರಪತ್ರಿಕೆ ಗಮನಿಸಿ)
ಮೋದಿ ನೀಡುವ ಜಾಹಿರಾತಿಗಾಗಿ ಮಾಧ್ಯಮಗಳ ಭಟ್ಟಂಗಿತನ ಯಾವ ಹಂತ ತಲುಪಿದೆ ಎಂದರೆ, ಕಳೆದ ಅಕ್ಟೋಬರ್ 27 ರಂದು ಹಿಂದಿ ಭಾಷೆಯ “ದಿವ್ಯ ಬಾಸ್ಕರ”  ಎಂಬ ದಿನಪತ್ರಿಕೆ “ಸರ್ದಾರ್ ವಲ್ಲಬಾಯ್ ಪಟೇಲರ ಅಂತ್ಯಕ್ರಿಯೆಗೆ ನೆಹರೂ ಭಾಗವಹಿಸಿರಲಿಲ್ಲ’ ಎಂಬ ಮುಖಪುಟದ ಲೇಖನವನ್ನು ದಪ್ಪ ಶಿರೋನಾಮೆಯಡಿ  ಪ್ರಕಟಿಸಿತ್ತು. ಪ್ರಜ್ಞಾವಂತ ಓದುಗರು ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡಾಗ ಎರಡು ದಿನಗಳ ನಂತರ ಪತ್ರಿಕೆಯ ಮೂಲೆಯೊಂದರಲ್ಲಿ ತನ್ನ ತಪ್ಪಿಗಾಗಿ ಸಂಪಾದಕ ಮಂಡಳಿ ವಿಷಾದ ವ್ಯಕ್ತಪಡಿಸಿತು. ಸರ್ದಾರ್ ಪ್ರತಿಮೆಗಾಗಿ ಉಕ್ಕು ಮತ್ತು ಕಬ್ಬಿಣ ಸಂಗ್ರಹಿಸುವ ಮೋದಿಯವರ ಪೂರ್ಣ ಪುಟದ ಬಣ್ಣದ ಜಾಹಿರಾತಿನ ಆಸೆಗಾಗಿ ಪತ್ರಿಕೆ ಓದುಗರೆದುರು ಹೀಗೆ  ಬೆತ್ತಲಾಯಿತು.
ಈ ಹಿಂದೆ  ಅಂದರೆ, 2003 ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವರ್ಲ್ಡ್ ಗ್ರೆ ಎಂಬ ಜಾಗತಿಕ ಮಟ್ಟದ ಜಾಹಿರಾತು ಕಂಪನಿಯ ಮೂಲಕ  800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಭಾರತ ಬೆಳಗುತ್ತಿದೆ ( India Shining) ಎಂಬ ಜಾಹಿರಾತು ಬಿಡುಗಡೆ ಮಾಡಿದ್ದರು. ಆದರೆ 2004ರ ಚುನಾವಣೆಯಲ್ಲಿ  ಅವರ ನೇತೃತ್ವದ ಎನ್.ಡಿ.ಎ. ಸರ್ಕಾರ ಭಾರತದ ಮತದಾರರ ಮನಗೆಲ್ಲುವಲ್ಲಿ ವಿಫಲವಾಗಿ ಮಕಾಡೆ ಮಲಗಿತು. ಈ ಇತಿಹಾಸವನ್ನು ಮೋದಿಯವರು ಒಮ್ಮೆ ಓದುವುದು ಒಳಿತು. ಹಾಗಾದರೆ, ಗುಜರಾತಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲವೆ? ಹೌದು ಆಗಿದೆ. ಆದರೆ, ಅದು  ಬಂಡವಾಳಶಾಹಿಗಳ ಜಗತ್ತು ಮಾತ್ರ.
ನಮ್ಮ ಉತ್ತರ ಕರ್ನಾಟಕದ ಪ್ರಸಿದ್ಧ ರಂಗ ಕಲಾವಿದ ರಾಜು ತಾಳಿಕೋಟೆಯ ಕಂಪನಿಯ ನಾಟಕವೊಂದರಲ್ಲಿ ಹಾಸ್ಯ ಪಾತ್ರಧಾರಿಯೊಬ್ಬನ ನಾಟಕದ ಡೈಲಾಗ್ ಈ ರೀತಿ ಇದೆ. “ ನೋಡ್ರಿ ಯವ್ವಾ ನಾನು ಹೆಂಗಸರ ಕೂಡಿ (ಜೊತೆ) ಕುಸ್ತಿ ಹಿಡಿಯಕ ಹಿಂದು ಮುಂದು ನೋಡಾಂಗಿಲ್ಲ, ಯಾಕಂದ್ರ ನನಗ  ಕೆಳಕ್ಕೆ ಬಿದ್ರೂ ಲಾಭ ಆಗತೈತಿ, ಮೇಲು ಬಿದ್ದರೂ ಲಾಭ ಆಗತೈತಿ” ಇದೇ ಸೂತ್ರವನ್ನು ಅಳವಡಿಸಿಕೊಂಡಿರುವ ನಮ್ಮ ಭಾರತದ ಟಾಟಾ, ಅಂಬಾನಿ, ಅದಾನಿ ಮುಂತಾದವರು ಗುಜರಾತಿನ ಮೋದಿ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಿದ್ದಾರೆ. ಗುಜರಾತಿನಲ್ಲಿ ಉದ್ದಿಮೆ ಸ್ಥಾಪನೆಯಾಗಲಿ, ಅಥವಾ ಬಿಡಲಿ, ಬಿಸಾಡುವ ಬೆಲೆಗೆ ಸಿಗುವ ಭೂಮಿ, ಪುಕ್ಕಟೆ ನೀರು, ವಿದ್ಯುತ್ ಅವರಿಗೆ ಮುಖ್ಯವಾಗಿದೆ. ಇದರ ಪರಿಣಾಮವಾಗಿ ಗುಜರಾತಿನ ರೈತರ ಫಲವತ್ತಾದ ಭೂಮಿ ಗಳ ಮೇಲೆ ಬಂಡವಾಳ ಶಾಹಿ ಸಾಮ್ರಾಜ್ಯವೊಂದು ತಲೆ ಎತ್ತಿದೆ. ಇದಕ್ಕೆ ಗುಜರಾತಿನ ಜನ ತೆತ್ತಿರುವ ಬೆಲೆ ಮಾತ್ರ ಅಪಾರವಾದುದು. ಈ ಕುರಿತ ಕೆಲವು ವರದಿಗಳು ಹಾಗೂ  ಮೋದಿಯ ಅಧ್ವಾನಗಳು ಈ ಕೆಳಗಿನಂತಿವೆ…


2008 ರಲ್ಲಿ ಟಾಟಾ ಕಂಪನಿಯು ಪಶ್ಚಿಮ ಬಂಗಾಳದ ಸಿಂಗೂರ್ ಎಂಬಲ್ಲಿ ನ್ಯಾನೊ ಕಾರು ತಯಾರಿಕಾ ಘಟಕಕ್ಕೆ ರಿಯಾಯಿತಿ ದರದಲ್ಲಿ ಭೂಮಿ, ಹಾಗೂ ಅಲ್ಲಿನ ಸರ್ಕಾರದಿಂದ ಬಡ್ಡಿರಹಿತ ಸಾಲ ಮತ್ತು  ಇತರೆ ಸಾಲವನ್ನು ಪಡೆದಾಗ, ಅಲ್ಲಿನ ಜನರ ಆಕ್ರೋಶಕ್ಕೆ ಗುರಿಯಾಯಿತು.   ಅಂತಿಮವಾಗಿ ಟಾಟಾ ಕಂಪನಿ ಅಲ್ಲಿಂದ ಕಾಲ್ತೆಗೆಯಿತು. ಇಂತಹ ಅವಕಾಶಕ್ಕಾಗಿ ಕಾದಿದ್ದ ನರೇಂದ್ರ ಮೋದಿಯವರು ತಾನು ಮತ್ತು ತನ್ನ ಸರ್ಕಾರ ಉದ್ಯಮಸ್ನೇಹಿ ಎಂಬುದನ್ನು ತೋರ್ಪಡಿಸಿಕೊಳ್ಳಲು 2009ರಲ್ಲಿ ಗುಜರಾತಿಗೆ ಟಾಟಾ ಕಂಪನಿಯನ್ನು ಆಹ್ವಾನಿಸಿದರು. ಅಹಮದಾಬಾದ್ ಜಿಲ್ಲೆಯ ಸನದ್ ಎಂಬಲ್ಲಿ 725 ಎಕರೆ ಉತ್ಪಾದನಾ ಘಟಕಕ್ಕೆ ಮತ್ತು ಇತರೆ ವ್ಯವಸ್ಥೆಗೆ( ಕಾರ್ಮಿಕರ ಟೌನ್ ಶಿಪ್) 375 ಒಟ್ಟು 1100 ಎಕರೆ ಪ್ರದೇಶವನ್ನು ಕೇವಲ 400 ಕೋಟಿ 65 ಲಕ್ಷಕ್ಕೆ ಎಂಟು ವರ್ಷಗಳ ಅವಧಿಯಲ್ಲಿ ಕಂತಿನ ರೂಪದಲ್ಲಿ ಪಾವತಿಸುವ ಷರತ್ತಿನಡಿ ನೀಡಿದರು. ಅಲ್ಲದೆ 9,750 ಕೋಟಿ ರುಪಾಯಿ ಸಾಲವನ್ನು 20 ವರ್ಷದ ಅವಧಿಗೆ ವಾರ್ಷಿಕವಾಗಿ ಒಂದು ಕೋಟಿ ರೂಪಾಯಿಗೆ  ಕೇವಲ ನೂರು ರೂಪಾಯಿ ಬಡ್ಡಿದರದಲ್ಲಿ ನೀಡಿದರು.  ಸಿಂಗೂರ್ ನಿಂದ ಯಂತ್ರ ಸಾಮಾಗ್ರಿಗಳನ್ನು ಸಾಗಿಸಲು 700 ಕೋಟಿ ಹಣ ನೀಡಿದ್ದಲ್ಲದೆ, ರಿಯಾಯಿತಿ ದರದಲ್ಲಿ ವಿದ್ಯುತ್ ಮತ್ತು ನೀರು ಒದಗಿಸಿದರು.
ತಿಂಗಳಿಗೆ 30 ಸಾವಿರ ನ್ಯಾನೊ ಕಾರುಗಳು ಉತ್ಪಾದನೆಯಾಗುತ್ತವೆ ಮತ್ತು ಸಾವಿರಾರು ಕುಟುಂಬಗಳಿಗೆ ಉದ್ಯೋಗ ಸಿಗಲಿದೆ ಎಂದು ರತನ್ ಟಾಟ ಘೊಷಿಸಿದ್ದರು. ಆದರೆ, ಇತ್ತೀಚೆಗೆ ನ್ಯಾನೊ ಕಾರುಗಳಿಗೆ ಬೇಡಿಕೆ ಇಲ್ಲವಾದ ಪರಿಣಾಮ ತಿಂಗಳಿಗೆ  ಕೇವಲ 2400 ಕಾರುಗಳು ಮಾತ್ರ ತಯಾರಾಗುತ್ತಿವೆ. ಅವುಗಳಿಗೂ ಸಹ ಬೇಡಿಕೆ ಇಲ್ಲವಾಗಿ ಮುಂದಿನ ದಿನಗಳಲ್ಲಿ ನಾವು ಈ ಕಾರುಗಳನ್ನು ಮಕ್ಕಳ ಆಟಿಕೆ ಸಾಮಾನು ಅಂಗಡಿಗಳಲ್ಲಿ ಕಾಣಬಹುದು. ಇಂತಹ ಒಂದು ವಿಫಲ ಉದ್ದಿಮೆಗಾಗಿ ಗುಜರಾತ್ ಸರ್ಕಾರ ಕಳೆದುಕೊಂಡಿದ್ದು ಬರೋಬ್ಬರಿ 30 ಸಾವಿರ ಕೋಟಿ ರೂಪಾಯಿಗಳು.
ಇದು ನಷ್ಟದ ಕತೆಯಾದರೆ, ಮತ್ತೊಂದು ಕಂಪನಿ ಅದಾನಿ ಗ್ರೂಪ್ ಗೆ ಮೋದಿ ಮಾಡಿಕೊಟ್ಟಿರುವ ಸವಲತ್ತುಗಳು ಎಂತಹವರನ್ನು ದಂಗು ಬಡಿಸುತ್ತವೆ.


ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗಾಗಿ, ಗುಜರಾತಿನಲ್ಲಿ ಒಂದು ಚದುರ ಮೀಟರ್ ಅಂದರೆ ಮೂರು ಚದುರ ಅಡಿಯ ಭೂಮಿಯನ್ನು ಒಂದು ರೂಪಾಯಿನಿಂದ ಮುವತ್ತೆರೆಡು ರೂಪಾಯಿ ಬೆಲೆಯಲ್ಲಿ ವಿದ್ಯುತ್ ಘಟಕ ಮತ್ತು ಮುಂಡ್ರಾ ಎಂಬಲ್ಲಿ ಖಾಸಾಗಿ ಬಂದರು ಸ್ಥಾಪನೆಗೆ ನೀಡಲಾಗಿದೆ. 2011 ಮತ್ತು 2012 ರಲ್ಲಿ ಈ ಕಂಪನಿಯಿಂದ ಮೋದಿಯ ಸರ್ಕಾರ ಪ್ರತಿ ಯೂನಿಟ್ ಗೆ 63 ಪೈಸೆ ಹೆಚ್ಚಿನ ದರ ನೀಡಿ 20 ದಶಲಕ್ಷ್ ಯೂನಿಟ್ ಖರೀದಿಸಿದ ಫಲವಾಗಿ ಸರ್ಕಾರದ ಬೊಕ್ಕಸಕ್ಕೆ 1347 ಕೋಟಿ ರೂಪಾಯಿ ನಷ್ಟು ನಷ್ಟ ಉಂಟಾಗಿದೆ ಎಂದು ಸಿ.ಎ.ಜಿ. (Controler and Auditor General of India) ವರದಿಯಲ್ಲಿ ದಾಖಲಾಗಿದೆ. 2002 ರಲ್ಲಿ ಕೇವಲ ಮೂರು ಸಾವಿರ ಕೋಟಿ ರೂಪಾಯಿ ಒಡೆತನದ ಅದಾನಿ ಗ್ರೂಪ್ ಸಂಸ್ಥೆಯ ಆಸ್ತಿ 2013 ರ ವೇಳೆಗೆ 47 ಸಾವಿರ ಕೋಟಿ ರೂಪಾಯಿ ತಲುಪಿದೆ. ಈ ದಿನ ಮೋದಿಯ ಪ್ರಚಾರದ  ವೆಚ್ಚವನ್ನು ಈ ಕಂಪನಿಯು ಭರಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಮೇರಿಕಾದ ಅನಿವಾಸಿ ಭಾರತೀಯರ ಜೊತೆ ಮೋದಿ ನಡೆಸಲು ಉದ್ದೇಶಿಸಿದ್ದ ವಿಡಿಯೋ ಕಾನ್ಪರೆನ್ಸ್ ಸಮಾವೇಶಕ್ಕೆ ಅದಾನಿ ಕಂಪನಿ ಪ್ರಾಯೊಜಕತ್ವ ವಹಿಸಿರುವುದು ಪತ್ತೆಯಾದ, ನಂತರ ನಡೆದ ಪ್ರತಿಭಟನೆಯ ಫಲವಾಗಿ ಕಾರ್ಯಕ್ರಮ ರದ್ದಾಯಿತು.

ಇದೀಗ ದೆಹಲಿ- ಮುಂಬೈ ನಡುವಿನ ಇಂಡಸ್ಟ್ರೀಯಲ್ ಕಾರಿಡಾರ್ ಮಾರ್ಗ ಗುಜರಾತನ್ನು ಹಾಯ್ದು ಹೋಗುವುದರಿಂದ ಅಹಮದಾಬಾದಿನಿಂದ ನೂರು ಕಿಲೊಮೀಟರ್ ದೂರದಲ್ಲಿ ದೊಲಿರಾ ಎಂಬ ಪ್ರದೇಶದಲ್ಲಿ 925 ಚದುರ ಕಿ.ಮಿ. ವ್ಯಾಪ್ತಿಯ 22 ಹಳ್ಳಿಗಳ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ( ವಿವರಗಳಿಗೆ ನೋಡಿ- ಸಿಮೆಂಟ್ ಪಾರ್ ಗ್ರೈನ್? ಲೇಖನ- ಫ್ರಂಟ್ ಲೈನ್ ಪಾಕ್ಷಿಕ ಏಪ್ರಿಲ್ 4-2014) ನರ್ಮದಾ ನದಿಯ ಅಚ್ಚುಕಟ್ಟು ಪ್ರದೇಶಕ್ಕೆ ಓಳಪಡುವ ಈ ಪ್ರದೇಶದ 9.225 ಹೆಕ್ಟೇರ್ ಪ್ರದೇಶದಲ್ಲಿ ರೈತರು ಜೋಳ, ಗೋಧಿ, ಸಾಸಿವೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇತ್ತೀಚೆಗೆ ರೈತರ ಪ್ರತಿಭಟನೆ ತೀವ್ರಗೊಂಡ ಪರಿಣಾಮವಾಗಿ ಗುಜರಾತ್ ಸರ್ಕಾರ ರೈತರಿಗೆ ಹೊಸ ಆದೇಶ ನೀಡಿದೆ. ಸರ್ಕಾರ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ. ಬದಲಾಗಿ ತಮ್ಮ ಬಳಿ ಇರುವ ಅರ್ಧದಷ್ಟು ಭೂಮಿಯನ್ನು ರೈತರು ತಾವಾಗಿಯೇ ಸರ್ಕಾರಕ್ಕೆ ಒಪ್ಪಿಸಬೇಕು.

ಇಂತಹ ಅಭದ್ರತೆಯ ನಡುವೆ ಗುಜರಾತ್ ರಾಜ್ಯದಲ್ಲಿ ರೈತರ ಮತ್ತು ಜನಸಾಮಾನ್ಯರ ಬದುಕು ದುಸ್ತರವಾಗಿದ್ದು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ನ್ಯಾಷನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೊ ಸಂಸ್ಥೆಯ 2012 ರ ಅಂಕಿ ಅಂಶಗಳ ಪ್ರಕಾರ, ಆತ್ಮಹತ್ಯೆಯ ಪ್ರಮಾಣ ರಾಷ್ರಮಟ್ಟದಲ್ಲಿ ಸರಾಸಿ 11.2% ಇದ್ದರೆ, ಗುಜರಾತ್ ರಾಜ್ಯದಲ್ಲಿ 11.8% ಇದೆ. ಕಳೆದ ಮೂರು ವರ್ಷಗಳಿಂದ  ಗುಜರಾತಿನಲ್ಲಿ ಪ್ರತಿದಿನ 12 ಆತ್ಮಹತ್ಯೆಗಳು ಜರುಗುತ್ತಿವೆ. ಭಾರತದ ಪ್ರಮುಖ ಮೂರು ನಗರಗಳಲ್ಲಿ ಗುಜರಾತಿನ ರಾಜ್ ಕೋಟ್ ನಗರ ಕೂಡ ಒಂದು.
ಕಳೆದ ಒಂದು ದಶಕದಲ್ಲಿ 641 ರೈತರ ಆತ್ಮಹತ್ಯೆಗಳು ನಡೆದಿವೆ. ಆದರೆ. ಗುಜರಾತಿನ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಮಗನ್ ಪಟೇಲ್ ಹೇಳುವ ಪ್ರಕಾರ ಗುಜರಾತ್ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪೊಲೀಸರು ದಾಖಲೆ ಮಾಡಿಕೊಳ್ಳುತ್ತಿಲ್ಲ.
ಗುಜರಾತ್ ರಾಜ್ಯದ ವಾಸ್ತವ ಅಭಿವೃದ್ಧಿಯ ಚಿತ್ರಣ ಈ ರೀತಿ ಇರುವಾಗ ಅಭಿವೃದ್ಧಿ ಕುರಿತಂತೆ  ಗುಜರಾತ್ ಮಾದರಿ ಎಂದು ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಇದು ಪ್ರಜ್ಞಾವಂತರನ್ನು ಕಾಡುವ ಪ್ರಶ್ನೆ. 


                 

ಮಂಗಳವಾರ, ಮಾರ್ಚ್ 25, 2014

ಗುಜರಾತ್ ಅಭಿವೃದ್ಧಿಯೆಂಬ ಹುಸಿ ಬಸಿರಿನ ಸಂಬ್ರಮ- ಒಂದು


ಕಳೆದ ಒಂದು ವರ್ಷದಿಂದ ಭಾರತವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಚರ್ಚೆಗೆ ಒಳಪಟ್ಟ ರಾಜಕೀಯ ವ್ಯಕ್ತಿ ಎಂದರೆ, ನರೇಂದ್ರಮೋದಿಯವರು. ಈಗಾಗಲೇ ಭಾರತದ ಭಾವಿ ಪ್ರಧಾನಿ ಎಂದು ಮಾಧ್ಯಮಗಳಲ್ಲಿ ಗುರುತಿಸಿಕೊಮಡಿದ್ದಾರೆ. ಇದಲ್ಲದೆ ವ್ಯವಸ್ಥಿತವಾಗಿ ಸೃಷ್ಟಿಯಾಗಿರುವ ಮೋದಿಯ ಭಜನಾ ಮಂಡಳಿಯಲ್ಲಿ ಏಕಮುಖವಾಗಿ ಹರಿದು ಬರುತ್ತಿರುವ ವಾಕ್ ಪ್ರವಾಹವೆಂದರೆ, ಗುಜರಾತಿನ ಅಭಿವೃದ್ಧಿಯ ಮಂತ್ರ. ಕಳೆದ ಒಂದು ದಶಕದಲ್ಲಿ ಪ್ರಕಟವಾಗಿರುವ ದೇಶದ ಹಾಗೂ ಜಾಗತಿಕ ಮಟ್ಟದ ಅಭಿವೃದ್ಧಿಯ ಸಮೀಕ್ಷಾ ವರದಿಗಳಲ್ಲಾಗಲಿ, ವಿಶ್ವಬ್ಯಾಂಕ್ ಮತ್ತು ಭಾರತದ ಯೋಜನಾ ಮಂಡಳಿಯ ಪರಾಮರ್ಶನ ವರದಿಗಳಲ್ಲಿ ಅಥವಾ ಭಾರತದ ಆರ್ಥಿಕ ಸಮೀಕ್ಷಾ ವರದಿ, ಮಾನವ ಅಭಿವೃಧ್ಧಿಯ ವರದಿಗಳು, ಇವುಗಳಲ್ಲದೆ, ವಿಶ್ವಸಂಸ್ಥೆಯ ಮಕ್ಕಳ ಅಥವಾ ಮಹಿಳಾ ವಿಭಾಗದ ಯಾವ ವರದಿಗಳಲ್ಲೂ ಗುಜರಾತ್ ಅಭಿವೃದ್ಧಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಜೊತೆಗೆ ಸಾಕ್ಷರತೆ, ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ , ಬಡತನ ನಿವಾರಣೆ, ಗ್ರಾಮೀಣಾಭಿವೃದ್ಧಿ ಇವುಗಳಲ್ಲಿ ಗುಜರಾತ್ ರಾಜ್ಯವು ಎಲ್ಲಿಯೂ ಮೊದಲನೆಯ ಸ್ಥಾನ ಪಡೆದಿಲ್ಲ ಬದಲಾಗಿ 2001 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯ ಹದಿಮೂರು ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ಗುಜರಾತಿನ ಬಹುತೇಕ ರಂಗಗಳ ಅಭಿವೃದ್ದಿಯ ಸೂಚ್ಯಂಕ ಕುಸಿದಿದೆ, ಇಲ್ಲವೆ, ಇವರಿಗೂ ಮುನ್ನ ಮುಖ್ಯಮಂತ್ರಿಯಾಗಿದ್ದ ಕೇಶುಪಟೇಲ್ ಆಳ್ವಿಕೆಯಲ್ಲಿ ಸಾಧಿಸಲಾಗಿದ್ದ ಅಭಿವೃದ್ಧಿ ಸೂಚ್ಯಂಕದ ಹಂತಕ್ಕೆ ಸ್ಥಗಿತಗೊಂಡಿವೆ.
ಹಾಗಾದರೆ, ಗುಜರಾತಿನಲ್ಲಿ ಅಭಿವೃದ್ಧಿಯಾಗಿರುವುದು ಏನು? ಮೋದಿಯ ಭಜನಾ ಮಂಡಳಿಯ ಅಥವಾ ಈ ದಿನಗಳಲ್ಲಿ ಸಂಘಪರಿವಾರದ ಭಕ್ತರು ಜಪಿಸುತ್ತಿರುವ “ಗುಜರಾತ್ ಅಭಿವೃದ್ಧಿಯೊಂದೇ ದೇಶಕ್ಕೆ ಮಾದರಿ, ಅದೇ ಆದಿ, ಅದೇ ಅಂತ್ಯ” ಎನ್ನುವ ಮಾತುಗಳು ಸುಳ್ಳಿನ ಕತೆಗಳೆ? ಹೌದು ಇದು ಸುಳ್ಳು ಸೃಷ್ಟಿಗಳ ಸರಮಾಲೆಯ ಕಥನ. ಗುಜರಾತಿನಲ್ಲಿ ಅಭಿವೃದ್ಧಿ ಎಂಬುದು ಸಾಕಾರಗೊಂಡಿದ್ದರೆ, ಅದು ರೈತರ ಫಲವತ್ತಾದ ಭೂಮಿಯ ಮೇಲೆ ವಿಶೇಷ ಬಂಡವಾಳ ಹೂಡಿಕೆ ವಲಯ( Special Investment Region) ಖಾಸಾಗಿರಂಗದ ಕೈಗಾರಿಕೆಗಳು, ಮತ್ತು ಬಂಡವಾಳಶಾಹಿಗಳ ಸಾಮ್ರಾಜ್ಯದ ವಿಸ್ತರಣೆ ಮಾತ್ರ.
2011-12 ರ ಭಾರತದ ಆರ್ಥಿಕ ಸಮೀಕ್ಷಾ ವರದಿಯ ಪ್ರಕಾರ, ದೇಶದಲ್ಲಿ ಬಡತನ ನಿವಾರಣೆಯಲ್ಲಿ ತಮಿಳುನಾಡು ಎಲ್ಲಾ ರಾಜ್ಯಗಳಿಗಿಂತ ಮುಂದಿದೆ. ಸಾಕ್ಷರತೆ ಮತ್ತು ಸಾಮಾಜಿಕ ನ್ಯಾಯ , ಪ್ರವಾಸೊದ್ಯಮ ಅಭಿವೃದ್ಧಿ ಇವುಗಳಲ್ಲಿ ಕೇರಳ ಪ್ರಥಮಸ್ಥಾನದಲ್ಲಿದೆ. ಸಮಗ್ರ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಪಂಜಾಬ್ ಪ್ರಥಮ ಸ್ಥಾನದಲ್ಲಿದೆ. ನಂತರ ಗೋವಾ ರಾಜ್ಯವಿದೆ. 2005 ರಲ್ಲಿ ಬಿಹಾರದ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ತನ್ನ ಎಂಟು ವರ್ಷಗಳ ಆಳ್ವಿಕೆಯಲ್ಲಿ ಸಾಧಿಸಿರುವ ಅಭಿವೃದ್ಧಿಯ ಯೋಜನೆಗಳು ಪಂಚವಾರ್ಷಿಕ ಯೋಜನೆಯ ಪರಾಮರ್ಶನ ವರದಿಯಲ್ಲಿ ಪ್ರಶಂಸೆಗೆ ಒಳಪಟ್ಟಿವೆ. ರಾಜ್ಯದ ಒಟ್ಟು ಆಂತರೀಕ ಉತ್ಪಾದನಾ ಬೆಳವಣಿಗೆಯಲ್ಲಿ ಶೇಕಡ 12 ರಷ್ಟು ಬೆಳವಣಿಗೆ ಸಾಧಿಸಿ ದೇಶದ ಪ್ರಗತಿಯ ರಾಜ್ಯಗಳಲ್ಲಿ  ಮುಂಚೂಣಿಯಲ್ಲಿದೆ. 2005 ರಿಂದ 2013 ರ ಅವಧಿಯಲ್ಲಿ ತ್ವರಿತಗತಿಯ ನ್ಯಾಯಾಲಯ ಮತ್ತು ತೀರ್ಪು ಗಳ ಮೂಲಕ ಬಿಹಾರ ರಾಜ್ಯದಲ್ಲಿ 83 ಸಾವಿರ ಗೂಂಡಾಗಳು, ಕ್ರಿಮಿನಲ್ ಗಳು ಸೆರೆಮನೆಗೆ ನೂಕಲ್ಪಟ್ಟಿದ್ದಾರೆ. ಇದು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜ್ಯವೊಂದರ ನೂತನ ದಾಖಲೆ. ಅಷ್ಟೇ ಅಲ್ಲ, ಅಲ್ಲಿನ ಜಮೀನ್ದಾರಿ ಪದ್ಧತಿ, ಮತ್ತು ಪಂಚಾಯಿತಿ ಮಟ್ಟದ ಅಮಾನವೀಯ ನೆಲೆಯ ನ್ಯಾಯ ತೀರ್ಪುಗಳನ್ನು ನಿಷೇಧಿಸಿದ್ದಲ್ಲದೆ, ಅಧಿಕಾರ ವಿಕೇಂದ್ರಿಕರಣವನ್ನು ಸ್ಥಾಪಿಸುವ ಸಲುವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಿಂದಾಗಿ ತಳಮಟ್ಟದ ದೀನ ದಲಿತರಿಗೆ ಅಧಿಕಾರದಲ್ಲಿ ಪಾಲ್ಗೊಳ್ಳುವ ಹಕ್ಕು ದೊರೆತಿದೆ. ಇವೆಲ್ಲವೂ ಜಾಗತಿಕ ಮಟ್ಟದ ಸಮೀಕ್ಷಾ ವರದಿಯಲ್ಲಿ ದಾಖಲಾಗಿವೆ.( ಈ ಕುರಿತು ಮುಂದೆ ಚರ್ಚಿಸಲಾಗುವುದು.) ಯಾವುದೇ ಒಂದು ಅಭಿವೃದ್ಧಿ ಯೋಜನೆ ಅಥವಾ ಸಾಧನೆ ಕಣ್ಣಿಗೆ ಕಾಣುವಂತಿರಬೇಕು. ನಾನು ಈ ಮೇಲೆ ಪ್ರಸ್ತಾಪಿಸಿರುವ ಸಂಗತಿಗಳು ನಮ್ಮ ಕಣ್ಣ ಮುಂದೆ ವಾಸ್ತವ ರೂಪದಲ್ಲಿ ಇವೆ. ಹಾಗಾದರೆ, ಮೋದಿ ಸಾಧಿಸಿದ ಅಭಿವೃದ್ಧಿಯೋಜನೆಗಳು ಯಾವುವು? ಅವು ಎಲ್ಲಿವೆ? ಗುಜರಾತ್ ರಾಜ್ಯದಲ್ಲಿ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಸಂಪರ್ಕ ಇದೆ ನಿಜ. ಅದೇ ರೀತಿ ಅಲ್ಲಿನ ರಸ್ತೆಗಳು ಇತರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಗುಣಮಟ್ಟದಲ್ಲಿವೆ. ಆದರೆ ಇದನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕೇಶುಬಾಯ್ ಪಟೇಲ್ ಅವಧಿಯಲ್ಲಿ ಅವರು ಸಾಧಿಸಿದ್ದ ಯಶೋಗಾಥೆಯ ಯೋಜನೆಗಳು. ಈಗ  ಗುಜರಾತಿನ ಅಭಿವೃದ್ಧಿಯ ಕುರಿತು  ತುತ್ತೂರಿ ಊದುತ್ತಿರುವುದನ್ನು ನೋಡಿದರೆ,ಯಾರದೋ ಬಸಿರಿನ ಮೂಲವನ್ನು ತನ್ನದೆಂದು ಹೇಳಿಕೊಳ್ಳುವ ಹುಂಬುತನಕ್ಕೆ ನರೇಂದ್ರ ಮೋದಿ ಇಳಿದಿದ್ದಾರೆ ಎಂದು ಅನಿಸತೊಡಗಿದೆ. ಕೇಂದ್ರ ಸರ್ಕಾರದ ನೆಹರೂ ನಗರೀಕರಣ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಅಹಮದಾಬಾದ್ ನಗರದ ಸಾರಿಗೆ. ರಸ್ತೆ, ಮೇಲ್ ಸೇತುವೆ ಇವುಗಳನ್ನು ಧರೆಯ ಮೇಲಿನ ಸ್ವರ್ಗದಂತೆ ಪ್ರತಿಬಿಂಬಿಸಲಾಗುತ್ತಿದೆ. ಅಲ್ಲಿನ ಚೌಕಗಳು, ಮತ್ತು ಸೀಮೆಂಟ್ ರಸ್ತೆ ಇವುಗಳನ್ನು ತಮ್ಮ ತಮ್ಮ ಸಾಮಾಜಿಕ ತಾಣಗಳಲ್ಲಿ ಪ್ರದರ್ಶಿಕೊಂಡು ಹೆಮ್ಮೆ ಪಡುವ ನ.ಮೊ. ಬ್ರಿಗೇಡ್ ಎಂಬ ಭಜನಾ ಮಂಡಳಿಯ ಭಕ್ತರು ಒಮ್ಮೆ ಅಹಮದಾಬಾದಿನ ಲಾಲ್ ಪುರ್, ಜುಹಾ ಪುರ್ ಹಾಗೂ ಇತರೆ ಪ್ರದೇಶಗಳಲ್ಲಿ ಮುಸ್ಲಿಂ ಜನಾಂಗ ಯಾವ ರೀತಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ ಎಂಬುದನ್ನು ನೋಡಬೇಕಿದೆ.



ಒಂದು ಸುಳ್ಳನ್ನು ನೂರು ಬಾರಿ ಪುನರುಚ್ಛರಿಸಿದರೆ, ಅದು ವಾಸ್ತವವಾಗುತ್ತದೆ ಮತ್ತು ಸತ್ಯವಾಗುತ್ತದೆ ಎಂಬ ಗೊಬೆಲ್ ನ ಸಿದ್ಧಾಂತವನ್ನು ಮಾಧ್ಯಮಗಳ ಮೂಲಕ ಮತ್ತು ಜಾಹಿರಾತಿನಲ್ಲಿ ಬಿತ್ತುವ ಭ್ರಮೆಗಳ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿರುವವರಲ್ಲಿ ನರೇಂದ್ರಮೋದಿ ಅಗ್ರ ಗಣ್ಯರು.
ಜಾಹಿರಾತಿನ ಪಿತಾಮಹಾ ಎಂದು ಕರೆಸಿಕೊಳ್ಳುವ ಎಡ್ವರ್ಡ್ ಬೆರ್ನೆಸ್ ( ಈತ ಸಿಗ್ಮಂಡ್ ಪ್ರಾಯ್ಡ್ ನ ಸಂಬಂಧಿ) 1925 ರಲ್ಲಿ Propaganda ಎಂಬ ಕೃತಿಯನ್ನು ರಚಿಸಿದ. ಇದರ ಅರ್ಥ ವ್ಯವಸ್ಥಿತ ಪ್ರಚಾರ ಎನ್ನಬಹುದು. ಈ ಕೃತಿಯ ಕುರಿತು 1997 ರಲ್ಲಿ ಮಾತನಾಡಿರುವ ನಮ್ಮ ನಡುವಿನ ಮನುಕುಲದ ಚಿಂತಕರಲ್ಲಿ ಒಬ್ಬರಾಗಿರುವ ನೋಮ್ ಚೊಮ್ ಸ್ಕಿ  ಈ ಕೃತಿಯ ಮೂಲ ಪಠ್ಯವನ್ನು History Of wepon  ಎಂದು ಕರೆದಿದ್ದಾರೆ. ಈ ಕೃತಿಯ ನಂತರ ಇದೇ ಮಾದರಿಯಲ್ಲಿ ಅನೇಕ ಹೊಸ ಹೊಸ ಚಿಂತನೆಗಳು ಹುಟ್ಟಿಕೊಂಡಿವೆ. ಲೇಖಕ ಎಡ್ವರ್ಡ್ ತನ್ನ ಕೃತಿಯ ಮೊದಲ ಅಧ್ಯಾಯದ ಮೊದಲ ಪ್ಯಾರದಲ್ಲಿ ವ್ಯವಸ್ಥಿತ ಪ್ರಚಾರ ಎಂದರೆ ಏನು? ಅದರ ಪರಿಣಾಮವೇನು? ಎಂಬುದನ್ನು ಹೀಗೆ ವಿವರಿಸುತ್ತಾನೆ.
The conscious and intelligent manipulation of the organized habits and opinions of the masses is an important element in democratic society. Those who manipulate this unseen mechanism of society constitute an invisible government which is the true ruling power of our country.
We are governed, our minds are molded, our tastes formed, our ideas suggested, largely by men we never heard of.  This is a logical result of the way in which our  democratic society is organized.  Vast numbers of human beings must cooperate in this manner if they are to live together as a smoothly functioning society.
Our invisible governer are , in many cases, unaware of the identity of their fellow members in the inner cabinet’


ಈ ವ್ಯವಸ್ಥಿತ ಪ್ರಚಾರದ ಮೂಲ ಮಂತ್ರಗಳನ್ನು ಅರೆದು ಕುಡಿದಂತೆ ಕಾಣುತ್ತಿರುವ ನರೇಂದ್ರ ಮೋದಿ. ತಮ್ಮ ಕುರಿತು ಮತ್ತು ತಮ್ಮ ಅಗೋಚರ ಅಭಿವೃದ್ಧಿ ಕುರಿತು ಸಾಮಾಜಿಕ ತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇವರ ನಡೆಗಳು, ಇವರು ಸೃಷ್ಟಿಸಿರುವ ನಕಲಿ ಫೆಸ್ ಬುಕ್ ಖಾತೆಗಳು, ಇ-ಮೈಲ್ ಖಾತೆಗಳು, ಟ್ವಿಟ್ಟರ್ ಫಾಲೊಹರ್ಸ್ ಎಂಬ ಅದೃಶ್ಯ ಹಿಂಬಾಲಕರು ಎಲ್ಲವೂ ಗೋಲ್ ಮಾಲ್ ಎಂಬುದನ್ನು ಕೊಲ್ಕತ್ತ ನಗರದ ಪ್ರಕಾಶನ ಸಂಸ್ಥೆಯ ಶಂಕರ್ ಘೋಸ್ ಎಂಬುವರು ಪ್ರಕಟಿಸಿರುವ “ ಗುಜರಾತ್ ಡೆವಲಪ್ ಮೆಂಟ್ ಮಾಡೆಲ್  ಎ ರಿಯಾಲಿಟಿ ಚೆಕ್” ಎಂಬ ಕೃತಿಯಲ್ಲಿ ಲೇಖಕ ಸಂತೋಷ್ ಕುಮಾರ್ ನೀಡಿರುವ ವಿವರಗಳು ಇವು.
ಗುಜರಾತ್ ಸರ್ಕಾರದ ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥೆ ರಾಜೀಖ ಕಚೀರಿಯ ಎಂಬಾಕೆ. ನರೇಂದ್ರ ಮೋದಿಯವರಿಗೆ ದೇಶ್ಯಾದ್ಯಂತ 25ಲಕ್ಷ ಟ್ವಿಟ್ಟರ್ ನಲ್ಲಿ ಹಿಂಬಾಲಕರಿದ್ದಾರೆ ಜೊತೆಗೆ ಮೋದಿ ಹೇಳಿಕೆಗಳನ್ನು ಸುಮಾರು ನಾಲ್ಕರಿಂದ ಐದು ಸಾವಿರ ಮಂದಿ ಪುನಃ ಟ್ವಿಟ್ಟರ್ ನಲ್ಲಿ ಪ್ರಕಟಿಸುತ್ತಾರೆ ಎಂದು ಹೇಳಿದ್ದಾರೆ.( ಅಕ್ಟೋಬರ್ 2013ರ ವೇಳೆಗೆ) ಆದರೆ, ಅದೇ ವಿಭಾಗದ ಹೆಸರು ಬಹಿರಂಗ ಪಡಿಸಿದ ಉದ್ಯೋಗಿಯೊಬ್ಬರ ಪ್ರಕಾರ ಶೇಕಡ 40 ರಷ್ಟು ಹಿಂಬಾಲಕರು ನಕಲಿರೂಪದಲ್ಲಿ  ಸೃಷ್ಟಿಯಾದವರು. ಇದನ್ನು ಆಧಾರವಾಗಿ ಇಟ್ಟುಕೊಂಡು, ಅದೇ ತಿಂಗಳಿನಲ್ಲಿ  twitteraudit.com, socialbakers.com, statuspeople.com ಮುಂತಾದ ಸಂಸ್ಥೆಗಳ ಮೂಲಕ ತನಿಖೆಗೆ ಒಳಪಡಿಸಿದಾಗ, ಶೇಕಡ 76 ರಷ್ಟು ನಕಲಿ ಅಕೌಂಟ್ ಗಳೆಂದು , ಶೇಕಡ 18 ರಷ್ಟು ಚಾಲ್ತಿಯಲ್ಲಿ ಇಲ್ಲದ ಅಕೌಂಟ್ ಗಳು ಮತ್ತು ಶೇಕಡ 6 ರಷ್ಟು ಮಾತ್ರ ನಿಜವಾದ ಅಕೌಂಟ್ ಎಂಬುದು ಸಾಭೀತಾಯಿತು.
ಈದಿನಗಳಲ್ಲಿ ಭಾರತದಲ್ಲಿ ನಕಲಿ ಹಿಂಬಾಲಕರು, ನಕಲಿ ಲೈಕ್ ಒತ್ತುವವರು, ಇವುಗಳ ಸೃಷ್ಟಿ ಮತ್ತು ಮಾರಾಟ 18 ಲಕ್ಷ ಡಾಲರ್ ಗಳ ವ್ಯವಹಾರವಾಗಿ ಪರಿವರ್ತನೆ ಹೊಂದಿದೆ. ಉದಾಹರಣೆಗೆ fiverr.com  ಎಂಬ ಕಂಪನಿಯು 300 ರೂಪಾಯಿಗಳಿಗೆ ಒಂದು ಸಾವಿರ ಟ್ವಿಟ್ಟರ್ ನಕಲಿ ಹಿಂಬಾಲಕರನ್ನು ಮಾರಾಟ ಮಾಡುತ್ತಿದೆ.firststeppromotions.com ಎಂಬ ಸಂಸ್ಥೆಯೊಂದು 900 ರುಪಾಯಿಗಳಿಗೆ 500 ಫೇಸ್ ಬುಕ್ ಲೈಕ್ ಗಳನ್ನು ಅಥವಾ ಒಂದು ಸಾವಿರ ಯೂಟ್ಯೂಬ್ ನಕಲಿ ವೀಕ್ಷಕರನ್ನು ಸೃಷ್ಟಿ ಮಾಡಿಕೊಡುತ್ತದೆ. ಭಾರತದ ಕೆಲವು ಕಂಪನಿಗಳು ಸಹ 650 ರೂಪಾಯಿಗೆ ಒಂದು ಸಾವಿರ ಫೇಸ್ ಬುಕ್ ಲೈಕ್ ಗಳು, ಅಥವಾ ಹತ್ತು ಸಾವಿರ ಟ್ವಿಟ್ಟರ್ ಹಿಂಬಾಲಕರನ್ನು ಸೃಷ್ಟಿಸಿ ಕೊಡುತ್ತಿವೆ.ನರೇಂದ್ರ ಮೋದಿಯ ಜನಪ್ರಿಯತೆಯ ರಹಸ್ಯ ಅಡಗಿರುವುದು ಇಂತಹ ಕಾರ್ಯಾಚರಣೆಯಲ್ಲಿ.



ಮೋದಿಯ ಜನಪ್ರಿಯತೆಯನ್ನು ವೃದ್ಧಿಸಲು ಆಪ್ಕೊ ಎಂಬ ಅಂತರಾಷ್ಟ್ರೀಯ ಮಟ್ಟದ ಜಾಹಿರಾತು ಏಜನ್ಸಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ ಜಾಹಿರಾತು ದರದ ಶೇಕಡ ಹತ್ತರಿಂದ ಹದಿನೈದರಷ್ಟು ಕಮೀಷನ್ ಹಣವಲ್ಲದೆ, ಸಲಹಾ ಶುಲ್ಕವಾಗಿ ಗುಜರಾತ್ ಸರ್ಕಾರ ಪ್ರತಿ ತಿಂಗಳು ಹದಿನೈದು ಲಕ್ಷ ಹಣವನ್ನು ಪಾವತಿಸುತ್ತಿದೆ. ಈ ಸಂಸ್ಥೆ ಮತ್ತು ಮೋದಿ ಜನಪ್ರಿಯತೆ ಕುಸಿಯದಂತೆ ನಿಗಾ ವಹಿಸಲು ನೇಮಕವಾಗಿರುವ ಸದಸ್ಯರ ಸಮಿತಿ, ಅದರ ಕಾರ್ಯವೈಖರಿ ಇವುಗಳನ್ನು ಗಮನಿಸಿದಾಗ, ಮೋದಿಗೆ ಇಷ್ಟೊಂದು ಕಾಣದ ಕೈಗಳಿವೆಯಾ? ಎಂದು ಆಶ್ಚರ್ಯವಾಗುತ್ತದೆ.

                                                                    (ಮುಂದುವರಿಯುವುದು)

ಗುರುವಾರ, ಮಾರ್ಚ್ 20, 2014

ಖುಷ್ವಂತ್ ಸಿಂಗ್ ಎಂಬ ರಸಿಕ ಖುಷಿಯ ಸಾವು


ಇದು ಕಾಕತಾಳೀಯ ಘಟನೆ ಎಂದು ಕೊಳ್ಳುತ್ತೇನೆ. ದೆಹಲಿಯಲ್ಲಿರುವ ಧಾರವಾಡದ ಹೆಣ್ಣುಮಗಳು, ಸಹೋದರಿ ರೇಣುಕಾ ನಿಡುಗುಂದಿಯವರ ‘ ದಿಲ್ಲಿಯ ದಿನಚರಿ” ಎಂಬ  ಕೃತಿ ಮುಂದಿನ ಮಾರ್ಚ್ 30 ರ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅವರಿಗೆ ನಿನ್ನೆ ಬೆಳಿಗ್ಗೆ ಪ್ರತಿಕ್ರಿಯುಸುತ್ತಾ, ಖಷ್ವಂತ್ ಸಿಂಗರ ದಿಲ್ಲಿ ಕಾದಂಬರಿಯ ಬಗ್ಗೆ ಪ್ರಸ್ತಾಪಿಸಿದ್ದೆ. ರಾತ್ರಿ ಮಲಗುವಾಗ  ಖಷ್ವಂತರ ದಿಲ್ಲಿ ಕಾದಂಬರಿ ಮತ್ತು ಅವರು ಅನುವಾದಿಸಿರುವ  ಉಮ್ರಾವೊ ಜಾನ್ ಳ ಆತ್ಮ ಕಥೆ “ ಉಮ್ರಾವೊ ಜಾನ್ ಅದ”  ಕೃತಿಗಳನ್ನು ಮತ್ತೆ ಒಂದು ಬಾರಿ ತಿರುವಿ ಹಾಕಿದೆ.
ಈ ದಿನ ಬೆಳಿಗ್ಗೆ ನನ್ನ ಮೆಚ್ಚಿನ ಪತ್ರಕರ್ತ ಹಾಗೂ ಲೇಖಕ ಖುಷ್ವಂತ್ ಸಿಂಗ್ ದೆಹಲಿಯಲ್ಲಿ ತಮ್ಮ 99 ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಡೀ ಬದುಕಿನುದ್ದಕ್ಕೂ  ಪ್ರತಿಯೊಂದು ಕ್ಷಣವನ್ನು ಬಿಡದೆ, ವ್ಯರ್ಥ ಮಾಡದೆ, ಇಂಚು ಇಂಚಾಗಿ ಅನುಭವಿಸಿದ ಜೀವೊವೊಂದು ಭಾರತದಲ್ಲಿ ಇದ್ದರೆ, ಅದು ಖುಷ್ವಂತ್ ಸಿಂಗ್ ಮಾತ್ರ ಎಂಬ ಪ್ರಶಂಸೆಗೆ ಪಾತ್ರರಾಗಿದ್ದ ಈ ರಸಿಕ ವೃದ್ಧ ತಮ್ಮ ಲೇಖನಿಯಲ್ಲೂ ಅದೇ ರಸಿಕತೆ, ರೋಚಕತೆಯನ್ನು ಉಳಿಸಿಕೊಂಡಿದ್ದರು.


ತಮ್ಮ ಬದುಕಿನ ಕೊನೆಯ ದಿನಗಳವರೆಗೂ ಬರೆಯುತ್ತಲೇ ಬದುಕಿದ ಖುಷ್ವಂತ್ ಸಿಂಗ್ ತಮ್ಮ ಕೊನೆಯ ಕೃತಿಯಾದ ಆತ್ಮ ಚರಿತ್ರೆ” ಖುಷ್ವಂತ್ ನಾಮ” ಕೃತಿಯಲ್ಲಿ ಮಾತ್ರ ಆತ್ಮಾವಲೋಕನದ ಮಾತುಗಳನ್ನಾಡಿದ್ದರು. ಸಂದರ್ಭಕ್ಕೆ ತಕ್ಕಂತೆ ಅವರು ನೀಡುತ್ತಿದ್ದ ಗಾಲಿಬ್ ನ ಕವಿತೆಗಳು ಅವರ ಕೃತಿಗಳ, ಲೇಖನದ, ಮಾತುಗಳ ಮೌಲ್ಯವನ್ನು ಹೆಚ್ಚಿಸುತ್ತಿದ್ದವು. ತಮ್ಮ ಜೀವಿತದ ಕೊನೆಯ ಕ್ಷಣಗಳ ಸಂದರ್ಭದಲ್ಲೂ ಸಹ ಅವರು ಗಾಲಿಬ್ ನನ್ನು, ಅವನ ಕವಿತೆಗಳನ್ನು  ಪ್ರಸ್ತಾಪಿಸಿದ್ದಾರೆ.


ಭಾರತದ ಅತ್ಯಂತ ಹಿರಿಯ ಪತ್ರಕರ್ತರು ಹಾಗೂ ನಿರಂತರವಾಗಿ ಬರೆವಣಿಗೆಯನ್ನು ಕಾಯ್ದುಕೊಂಡು ಬಂದವರಲ್ಲಿ ಕುಲದಿಪ್ ನಯ್ಯರ್ ಮತ್ತು ಖುಷ್ವಂತ್ ಸಿಂಗ್ ಪ್ರಮುಖರು. ಈ ಇಬ್ಬರ ಲೇಖನಗಳು ಅಂಕಣಗಳ ರೂಪದಲ್ಲಿ ಭಾರತದ ಹನ್ನೊಂದು ಭಾಷೆಗಳ  ಐವತ್ತಕ್ಕು ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಭಾರತದ ಹೃದಯವೆಂದು ಪರಿಗಣಿಸುವ ದೆಹಲಿ ನಗರದಲ್ಲಿ ಇದ್ದುಕೊಂಡು ಸ್ವಾತಂತ್ರ್ಯಾ ನಂತರದ ಭಾರತ ಮತ್ತು ಅದಕ್ಕೂ ಮುಂಚಿನ ಭಾರತದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗೆ ಇಬ್ಬರೂ ಸಾಕ್ಷಿಯಾದವರು. ಕುಲದಿಪ್ ನಯ್ಯರ್ ಅವರದು ಗಂಭೀರ ಅಧ್ಯಯನ ಮತ್ತು ಕರಾರುವಕ್ಕಾದ ಮಾಹಿತಿಗಳಿಂದ ಕೂಡಿದ ತೂಕದ ಬರೆವಣಿಗೆಯಾದರೆ, ಖುಷ್ವಂತ್ ಸಿಂಗ್ ಗಂಭೀರ ಸಂಗತಿಗಳನ್ನು ಸಹ ತಮಾಷೆ, ವ್ಯಂಗ್ಯ ಮತ್ತು ರೋಚಕತೆಯಿಂದ ಹೇಳುವ ಸ್ವಭಾದವರು. 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂದಿ ತುರ್ತು ಪರಿಸ್ತಿತಿಯನ್ನು ಜಾರಿಗೆ ತಂದ ಸಂದರ್ಭದಲ್ಲಿ ಇಂದಿರಾ ಗಾಂದಿಯವರನ್ನು ಸಮರ್ಥಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ಖುಷ್ವಂತ್ ಸಿಂಗ್, 1984ರ ಅಕ್ಟೋಬರ್ 30 ರಂದು ಇಂದಿರಾ ಕೊಲೆಯಾದ ಸಂದರ್ಭದಲ್ಲಿ, ದೆಹಲಿಯಲ್ಲಿ ನಡೆದ ಸಿಖ್ ಜನಾಂಗದ ನರಮೇಧಕ್ಕೆ ಸಾಕ್ಷಿಯಾದವರು. ಇದಕ್ಕಿಂತ ಹೆಚ್ಚಾಗಿ ಸ್ವತಃ ತಾವೇ ತಮ್ಮ ಕುಟುಂಬದ ಹಾಗೂ ತಮ್ಮ ಜೀವ ಉಳಿಸಿಕೊಳ್ಳಲು ದೆಹಲಿ ನಗರದಲ್ಲಿ   ಕಾಡಿಗೆ ಬಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಪರದಾಡುವ ಮೂಕ ಪ್ರಾಣಿಗಳಂತೆ ಒದ್ದಾಡಿದವರು. ಈ ಕುರಿತು ಅವರು ಬರೆದಿರುವ ಒಂದು ಲೇಖನ ಅತ್ತುತ್ಯುಮ ಬರೆವಣಿಗೆಗಳಲ್ಲಿ ಒಂದು.


1915 ರ ಪೆಬ್ರವರಿಯಲ್ಲಿ ಇಂದಿನ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ ಖುಷ್ವಂತ್ ಸಿಂಗ್ ಭಾರತದ  ವಿಭಜನೆಯನ್ನು ಕಣ್ಣಾರೆ ನೋಡಿದವರು ಮತ್ತು  ಅದರ ದುರಂತಕ್ಕೆ ಹಾಗೂ ಕ್ರೌರ್ಯಕ್ಕೆ ಸ್ವತಃ ಬಲಿಯಾದವರು. ಈ ನಿಟ್ಟಿನಲ್ಲಿ ಅವರು ಬರೆದ “ ಟ್ರೈನ್ ಟು ಪಾಕಿಸ್ಥಾನ್” ಎಂಬ ಕೃತಿ, ಭಾರತ ವಿಭಜನೆ ಕುರಿತು ಸಾದತ್ ಹಸನ್ ಮಂಟೋ ಸೃಷ್ಟಿಸಿದ ಕಥೆಗಳ ನಂತರದ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
1970 ರ ದಶಕದಲ್ಲಿ ಟೈಮ್ಸ್ ಅಫ್ ಇಂಡಿಯ ಹೊರತರುತ್ತಿದ್ದ “ ಇಲ್ ಸ್ಟ್ರಡ್ ವೀಕ್ಲಿ ಆಫ್ ಇಂಡಿಯ” ಎಂಬ ವಾರಪತ್ರಿಕೆ ನಮ್ಮ ಕನ್ನಡದವರೇ ಆದ ಎಂ.ವಿ. ಕಾಮತ್ ಸಂಪಾದಕತ್ವದಲ್ಲಿ ನಲುಗಿ ಹೋಗಿತ್ತು. ನನ್ನ ಕಾಲೇಜು ದಿನಗಳಲ್ಲಿ ಆ ಪತ್ರಿಕೆಯನ್ನು ನಾವು ಗೆಳೆಯರು ‘ವೃದ್ದರ ಪಂಚಾಂಗ’ ಎಂದು ಗೇಲಿ ಮಾಡುತ್ತಿದ್ದೆವು. ಆ ಪತ್ರಿಕೆ ನೇತೃತ್ವ ಖುಷ್ವಂತ್ ಸಿಂಗ್ ರ ಕೈಗೆ ಸಿಕ್ಕ ಮೇಲೆ ಅದರ ಸ್ವರೂಪ ಸಂಪೂರ್ಣ ಬದಲಾಗಿ ಭಾರತದ ಶ್ರೇಷ್ಠ ವಾರ ಪತ್ರಿಕೆಯಾಗಿ ರೂಪುಗೊಂಡಿತು. ಅಲ್ಲದೆ ಇಂಡಿಯ ಟುಡೆ, ಸಂಡೆ, ದ ವೀಕ್ ಮುಂತಾದ ವಾರ ಮತ್ತು ಪಾಕ್ಷಿಕ ಪತ್ರಿಕೆಗಳ ಹುಟ್ಟಿಗೆ ಪರೋಕ್ಷವಾಗಿ ಕಾರಣವಾಯಿತು.


ದಿಲ್ಲಿ ನಗರವನ್ನು ನಾಯಕಸಾನಿಗೆ ಹೋಲಿಸಿದ್ದ ಖುಷ್ವಂತ್ ಸಿಂಗ್ ಸ್ವತಃ ಮದಿರೆ ಮತ್ತು ಮಾನಿನಿ ಇವರೆಡರ ಪರಮ ಆರಾಧಕರಾಗಿದ್ದರು. ಇವುಗಳ ಕುರಿತು ಯಾವ ಸೋಗು ಹಾಕದೆ ಬರೆಯುತ್ತಿದ್ದರು. ಅವರ ಲೇಖನಿಯಿಂದ ದೆಹಲಿ ನಗರದ ಅವರ ಅಪಾರ್ಟ್ ಮೆಂಟಿನ ಸಹವಾಸಿಗಳು, ಜವಾನ, ಕಸಗುಡಿಸುವವರು, ಕೊನೆಗೆ ಹಿಜಡಾಗಳು ಹೀಗೆ ಯಾವ ಜನ ಸಾಮಾನ್ಯರು ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ತಾವು ಬೆತ್ತಲಾಗುತ್ತಾ ಎಲ್ಲರ ಬಾಯಲ್ಲಿ ‘ ರಸಿಕತೆಯ ಮತ್ತು ಕೀಟಲೆಯ ಮುದುಕ” ಎಂದು ರೇಗಿಸಿಕೊಳ್ಳುತ್ತಿದ್ದರು. ಎಲ್ಲವನ್ನು ಲವ ಲವಿಕೆಯಿಂದ ಹಾಸ್ಯ ಪ್ರಜ್ಞೆಯಿಂದ ಬರೆಯುತ್ತಿದ್ದರು. “ ವಯಸ್ಸಾಗುತ್ತಿದ್ದಂತೆ ಸೊಂಟದಲ್ಲಿದ್ದ ಶಕ್ತಿ ನನ್ನ ನಾಲಿಗೆಗೆ ಮತ್ತು ಲೇಖನಿಗೆ ಹರಿದು ಬಂದಿದೆ’ ಎನ್ನುತ್ತಿದ್ದರು. ಕಳೆದ ವರ್ಷ ಅವರಿಗೆ ಹೊಟ್ಟೆ ಕೆಟ್ಟ ಸಂದರ್ಭದಲ್ಲಿ ಅವರ ಪುತ್ರ ರಾಹುಲ್ ( ಇವರು ಹಿಂದೆ ರೀಡರ್ ಡೈಜೆಸ್ಟ್ ಪತ್ರಿಕೆಯ ಸಂಪಾದಕರಾಗಿದ್ದರು) ವೈದರ ಬಳಿ ಕರೆದುಕೊಂಡು ಹೋದಾಗ, ವೈದ್ಯರು ಸಿಂಗ್ ರ ಗುದ ದ್ವಾರ ದ ಮೂಲಕ ಪೈಪ್ ತೂರಿಸಿ ಪರೀಕ್ಷಿದ ಸಂದರ್ಭದಲ್ಲಿ “ ವೈದ್ಯರು ನನ್ನ ಹೊಟ್ಟೆಯೊಳಗಿರುವ ದೆಹಲಿಯ ಕಕ್ಕಸು ಗುಂಡಿಯನ್ನು ಪೈಪ್ ಮೂಲಕ ಕ್ಯಾಮರಾ ತೂರಿಸಿ ವೀಕ್ಷಿಸಿದರು’ ಎಂದು ಬರೆದುಕೊಂಡಿದ್ದರು. ತಮ್ಮ 98 ನೇ ವಯಸ್ಸಿನಲ್ಲಿ  ಇಂತಹ ಹಾಸ್ಯ ಪ್ರಜ್ಞೆಯನ್ನು  ಕಾಪಾಡಿಕೊಂಡು ಬರಲು ಖುಷ್ವಂತರಿಗೆ ಮಾತ್ರ ಸಾಧ್ಯವಿತ್ತು.


ದೇಶ ವಿದೇಶಗಳಲ್ಲಿ ಅಪಾರ ಓದುಗ ಬಳಗವನ್ನು ಹೊಂದಿದ್ದ ಖುಷ್ವಂತ ಸಿಂಗರ  ಕೃತಿಗಳು ಲಕ್ಷ ಗಟ್ಟಲೆ ಮಾರಾಟವಾಗುತ್ತಿದ್ದವು. ಅವರ ‘ ವುಮನ್ ಇನ್ ಮೈ ಲೈಪ್’ ಮತ್ತು ದಿ ಕಂಪನಿ ಆಫ್ ವುಮನ್” ಜನಪ್ರಿಯ ಕೃತಿಗಳಾದರೂ ಅವರ ದಿಲ್ಲಿ, ಟ್ರೈ ನ್ ಟು ಪಾಕಿಸ್ಥಾನ್” ಕೃತಿಗಳು ಮಾತ್ರ  ಅವರ ಹೆಸರನ್ನು ಶಾಶ್ವತವಾಗಿ ಉಳಿಸಬಲ್ಲ ಕೃತಿಗಳಾಗಿವೆ. ಇಂದು ಖುಷ್ವಂತ್ ಸಿಂಗ್ ನಮ್ಮೊಡನಿಲ್ಲ ಆದರೆ. ವಿದ್ಯುತ್ ಬಲ್ಪಿನೊಳಗೆ ಕುಳಿತು ಬರೆಯುತ್ತಿದ್ದ ಸರ್ದಾಜಿಯ ಚಿತ್ರದ ನೆನಪು ಮಾತ್ರ ನಮ್ಮೆದೆಯೊಳಗೆ ಸದಾ ಕಾಲ ಉಳಿಯುತ್ತದೆ.

ಭಾನುವಾರ, ಮಾರ್ಚ್ 16, 2014

ನೀರೆಂಬ ನೀಲಿ ಚಿನ್ನ


ಇಡೀ ಜಗತ್ತನ್ನು ಗೆಲ್ಲಲು ಹೊರಟ ಮಹತ್ವಾಕಾಂಕ್ಷಿ ಗ್ರೀಸ್ ಅಲೆಕ್ಷಾಂಡರ್ ಕ್ರಿಸ್ತಪೂರ್ವ 326 ರಲ್ಲಿ ಭಾರತದ ನೆಲದಲ್ಲಿದ್ದನಿರಂತರ ಯುದ್ಧದಿಂದ ಬಸವಳಿದ ಅವನ ಸೈನಿಕರ ಅಸಹಾಕಾರಕ್ಕೆ ಮಣಿದು ಅಂತಿಮವಾಗಿ 323 ರಲ್ಲಿ ಅಂದಿನ ಪರ್ಷಿಯಾ ಮೂಲಕ ( ಇಂದಿನ ಇರಾಕ್, ಇರಾನ್ ಮತ್ತು ಟರ್ಕಿ) ಗ್ರೀಸ್ ದೇಶಕ್ಕೆ ಭೂಮಾರ್ಗದಲ್ಲಿ ಪ್ರಯಾಣ ಹೊರಟ ಆದರೆ ಕೇವಲ ಮುವತ್ತೇರಡರ ಅಲೆಕ್ಷಾಂಡರ್ ಮಾರ್ಗ ಮಧ್ಯದಲ್ಲಿ ನಿಗೂಡ ಕಾಯಿಲೆ ತುತ್ತಾಗಿ ಮರಣವನ್ನಪ್ಪಬೇಕಾಯಿತು. ಅರ್ಧ ಜಗತ್ತನ್ನು ಗೆದ್ದಿದ್ದ ಅಲೆಕ್ಷಾಂಡರ್ ತಾನು ಸಾಯುವ ಕೊನೆಯ ಗಳಿಗೆಯಲ್ಲಿ ಬಯಸಿದ್ದು  ಕೇವಲ ಒಂದು ಬೊಗಸೆ ನೀರನ್ನು ಮಾತ್ರ. ಅವನ ದುರಾದೃಷ್ಟಕ್ಕೆ ಮರುಭೂಮಿಯಲ್ಲಿ  ಅದೂ ಸಹ ದಕ್ಕಲಿಲ್ಲ. ತನ್ನ ದೈನೇಸಿ ಸ್ಥಿತಿಯಲ್ಲಿ ತನ್ನ ಶವವನ್ನು ಹೂಳುವಾಗ ನನ್ನ ಹಸ್ತಗಳೆರೆಡು  ಭೂಮಿಯ ಮೇಲೆ ಎಲ್ಲರಿಗೂ ಕಾಣುವಂತಿರಲಿ ಎಂದು ತನ್ನ ಸೈನಿಕರಿಗೆ ದೊರೆ ಅಲೆಕ್ಷಾಂಡರ್ ಆದೇಶಿಸಿದ್ದ. ಬರಿಗೈಲಿ ಭೂಮಿಗೆ ಬಂದ ಅಲೆಕ್ಷಾಂಡರ್ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲಿಲ್ಲಎಂಬ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶ ಅವನದಾಗಿತ್ತು. ಇಂತಹ ಚರಿತ್ರೆಯ ಕಟು ವಾಸ್ತವ ಸಂಗತಿಗಳು ಮತ್ತು ಕಹಿ ಸತ್ಯಗಳು ಜಗತ್ತಿಗೆ ಅರಿವಾದಾಗ ಮಾತ್ರ ನಮಗೆ ನೀರಿನ ಮಹತ್ವವೂ ಅರಿವಾಗಬಲ್ಲದು.

ಆಧುನಿಕತೆ ಮತ್ತು ಅಭಿವೃದ್ಧಿಯ ನೆಪದಲ್ಲಿ ದಾಪುಗಾಲು ಹಾಕುತ್ತಿರುವ ವರ್ತಮಾನದ ಜಗತ್ತಿಗೆ ತನ್ನ ನಿಶ್ಚಿತ ಗುರಿ ಏನೆಂಬುದರ ಬಗ್ಗೆ ಕಾಳಜಿಯಿದ್ದಂತೆ ಕಾಣುವುದಿಲ್ಲ. ಮನುಷ್ಯನ ಜ್ಞಾನ ವಿಕಾಸವಾದಂತೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅವಿಷ್ಕಾರ ಮತ್ತು ಪ್ರಯೋಗಗಳು ಯಶಸ್ವಿಯಾಗುತ್ತಿದ್ದಂತೆ, ಆಧುನಿಕ ಜಗತ್ತಿನ ಮನುಷ್ಯನಲ್ಲಿ ಪ್ರಕೃತಿಯನ್ನು ಮಣಿಸುವ, ಶೋಷಿಸುವ ಅಹಂಕಾರ ತಲೆಯೆತ್ತತೊಡಗಿದೆ. ನೆಲದ ನೀರು, ಗಾಳಿ, ಗಿಡ, ಮರ, ಪ್ರಾಣಿ, ಬೆಟ್ಟ, ಗುಡ್ಡ ಏನೊಂದು ಅವನ ವಕ್ರದೃಷ್ಟಿಯಿಂದ ಪಾರಾಗಲು ಅವಕಾಶವಿಲ್ಲದಂತಾಗಿದೆ, ನಾವು ಭೂಮಿಯ ಒಡೆಯರಲ್ಲ, ಕೇವಲ ವಾರಸುದಾರರು ಮಾತ್ರ, ಇಲ್ಲಿಯ ಪರಿಸರವನ್ನು ಉಳಿಸಿ, ಬೆಳಸಿ, ಮುಂದಿನ ತಲೆಮಾರಿಗೆ ವರ್ಗಾಯಿಸುವ ನೈತಿಕ ಜವಾಬ್ದಾರಿಯೊಂದು ನಮ್ಮ ಮೇಲಿದೆ ಎಂಬ ಪ್ರಜೆÐ ಇದೀಗ ವಿಸ್ಮøತಿಗೆ ಜಾರಿದೆ. ಹಾಗಾಗಿ  ನೈಸರ್ಗಿಕ ಕೊಡುಗೆಯಾದ  ನೀರು ಕೂಡ ಇಂದಿನ ದಿನಗಳಲ್ಲಿ ಮಾರಾಟದ ಸರಕಾಗಿ ಬಿಕರಿಯಾಗುತ್ತಿದೆ. ಉಳ್ಳವರಿಗಷ್ಟೇ ಜಗತ್ತು ಎಂಬ ಅಘೋಷಿತ ನಿಯಮವೊಂದು  ಯಾವುದೇ ಗಡಿರೇಖೆಗಳು ಮತ್ತು ಭಾಷೆಯÀ ಹಂಗಿಲ್ಲದೆ  ವರ್ತಮಾನದಲ್ಲಿ ಜಾರಿಯಲ್ಲಿದೆ.
ಹರಿಯವ ನೀರಿಗೆ ಗಂಗೆಯೆಂದು ಪೂಜಿಸಿ ಕೈಯೆತ್ತಿ ಮುಗಿದವರ ಕಣ್ಣೆದುರು ನೆಲದ ಮೇಲಿನ ನೀರು, ಕಲುಷಿತಗೊಂಡು ಕುಡಿಯಲು ಆಗದೆ, ಬಳಸಲೂ ಆಗದ ಸ್ಥಿತಿಯಲ್ಲಿ ನಿಷ್ಪ್ರಯೋಜಕವಾಗಿದೆ. ಅಭಿವೃದ್ದಿಯೆಂದರೆ, ನಿಸರ್ಗದ ಮೇಲಿನ ಅಘೋಷಿತ ಯುದ್ಧ ಎಂಬ ಸ್ಥಿತಿಯಲ್ಲಿರುವ ಇಪ್ಪತ್ತೊಂದನೆಯ ಶತಮಾನದಲ್ಲಿ ಇದರ ನೇರ ಪರಿಣಾಮಕ್ಕೆ ಒಳಗಾದವರು ಮಾತ್ರ ಕಡು ಬಡವರುಅಮೃತ ಎಂದು ಕರೆಸಿಕೊಳ್ಳುವ ಹಾಲಿಗೂ, ನೀರಿಗೂ ಬೆಲೆಯಲ್ಲಿ ಈಗ  ಯಾವ ವೆತ್ಯಾಸವೂ ಉಳಿದಿಲ್ಲ.


ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಯುದ್ಧವೆಂಬುದು ನಡೆಯುವುದಾದರೆ, ಅದು ನೀರಿಗಾಗಿ ಮಾತ್ರಎಂಬ ಮಾತು  ಕಳೆದ ಎರಡು ದಶಕಗಳಿಂದ ಕ್ಲೀಷೆಯ ಮಾತಿನಂತೆ ತೋರತೊಡಗಿದೆ. ಅತ್ಯಾಧುನಿಕತೆ ಮತ್ತು ನಾಗರೀಕತೆಯ ಪರಿಣಾಮದಿಂದ ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಮನುಷ್ಯನ ಅನುಭೋಗ ಪ್ರವೃತ್ತಿಯಿಂದಾಗಿ ನಿಸರ್ಗದ ಕೊಡುಗೆಗಳಾದ ಗಾಳಿ, ನೀರು ಇನ್ನಿಲ್ಲದಂತೆ ಕಲುಷಿತಗೊಂಡವು. ಕಾರಣಕ್ಕಾಗಿ ಖ್ಯಾತ ನಾಟಕಕಾರ ಬರ್ನಾಡ್ ಷಾ, “ ವಿಜ್ಞಾನ ಅಥವಾ ತಂತ್ರಜ್ಞಾನದಿಂದ ಒಂದು ಸಮಸ್ಯೆ ಪರಿಹಾರವಾಯಿತು ಎಂದರೆ, ಹತ್ತು ಸಮಸ್ಯೆಗಳು ಹೊಸದಾಗಿ ಸೃಷ್ಟಿಯಾದವು ಎಂದರ್ಥಎಂಬ ಅರ್ಥಗರ್ಭಿತ ಮಾತುಗಳನ್ನಾಡಿದ್ದನು. ಕಳೆದ ಇಪ್ಪತ್ತು ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆದ ನಷ್ಟ, ಈಗ ಕೇವಲ ಐವತ್ತು ವರ್ಷಗಳಲ್ಲಿ ಜರುಗಿದೆ ಎಂದರೆ, ಮನುಷ್ಯನ ಭವಿಷ್ಯದ ಹಾದಿ ಯಾವುದು? ಎಂಬುದು ಸಧ್ಯÀ ನಮ್ಮ ಮುಂದಿರುವ ಪ್ರಶ್ನೆ. ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಪರಿಸರದ ರಕ್ಷಣೆಗಾಗಿ ಹಲವಾರು ಆಚರಣೆಗಳು ಜಾರಿಯಲ್ಲಿವೆ. ವಿಶ್ವ ಸಂಸ್ಥೆಯು ಶುದ್ಧ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರ್ಚ್ 22 ದಿನಾಂಕವನ್ನು ವಿಶ್ವ ಜಲಾ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಇಂತಹ ಆಚರಣೆಗಳ ನೆಪದಲ್ಲಿ  ನಡೆಯುವ ಕಾರ್ಯಕ್ರಮಗಳು ನೀರಿನ ಮಹತ್ವದ ಬಗ್ಗೆ ಒಂದಿಷ್ಟು ಅರಿವು ಮೂಡಿಸಿದಾಗ ಮಾತ್ರ ಆಚರಣೆಗೆ ಒಂದಿಷ್ಟು  ಅರ್ಥ ಬರಲು ಸಾಧ್ಯ.
ಸಧ್ಯ ಭೂಮಿಯುನ್ನು ಶೇಕಡ 70 ಭಾಗ ನೀರು ಆವರಿಸಿಕೊಂಡಿದ್ದರೂ ಸಹ ಇದರಲ್ಲಿ ಶೇಕಡ 97.5 ರಷ್ಟು ನೀರು ಸಮುದ್ರದಲ್ಲಿ ಶೇಖರವಾಗಿದೆ. ಉಳಿಕೆ ಭಾಗದ ನೀರಾದ 35 ಚದುರ ಘನ ಕಿಲೋಮೀಟರ್Àನಷ್ಟು ನೀರಿನಲ್ಲಿ ಶೇಕಡ 68.7 ರಷ್ಟು ನೀರು ಹಿಮಗೆಡ್ಡೆಯ ರೂಪದಲ್ಲಿದೆ. ಶೇಕಡ 30 ರಷ್ಟು ನೀರು ಅಂತರ್ಜಲ ರೂಪದಲ್ಲಿದ್ದು, ಭೂಮಿಯ ಮೇಲ್ಪದರಿನಲ್ಲಿ 0.03 ರಷ್ಟು ನೀರಿದೆ. ನೀರಿನ ಪ್ರಮಾಣದಲ್ಲಿ ಶೇಕಡ 87 ರಷ್ಟು ಕೊಳಗಳಲ್ಲಿ, ಶೇಕಡ 11 ರಷ್ಟು ಭಾಗ ಜೌಗು ಪ್ರದೇಶದಲ್ಲಿ ಮತ್ತು ಶೇಕಡ 2ರಷ್ಟು ನೀರು ನದಿಗಳಲ್ಲಿ ಶೇಖರವಾಗಿದೆ ಎಂದು ಅಂದಾಜಿಸಲಾಗಿದೆ.



ಇದು ಜಾಗತಿಕ ಮಟ್ಟದ ನೀರಿನ ಅಂಕಿ ಅಂಶವಾದರೆ, ನೀರಿನ ಲಭ್ಯತೆಯ ಅಂಕಿ ಅಂಶಗಳತ್ತ ಗಮನ ಹರಿಸಿದರೆ, ನಿಜಕ್ಕೂ ಭವಿಷ್ಯದ ಬಗ್ಗೆ ಆತಂಕ ಮುಡುತ್ತದೆ. ಜಗತ್ತಿನ ಜನಸಂಖ್ಯೆಯಲ್ಲಿ ( ಅಂದಾಜು 700 ಕೋಟಿ) ಶೇಕಡ 60 ರಷ್ಟು ಜನತೆ ವಾಸಿಸುತ್ತಿರುವ ಏಷ್ಯಾ ಖಂಡದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೇವಲ ಶೇಕಡ 37 ರಷ್ಟು ಶುದ್ಧ ಕುಡಿಯುವ ನೀರು ಮಾತ್ರ ಲಭ್ಯವಾಗುತ್ತಿದೆ. ಜಗತ್ತಿನ ಶೇಕಡ 13 ರಷ್ಟು ಇರುವ ಆಫ್ರಿಕಾ ಖಂಡಕ್ಕೆ ಶೇಕಡ 11 ರಷ್ಟು, ಶೇಕಡ ಒಂದರಷ್ಟು ಜನಸಂಖ್ಯೆ ಇರುವ ಆಸ್ಟ್ರೇಲಿಯಾ ಖಂಡದಲ್ಲಿ ಶೇಕಡ 6 ರಷ್ಟು ನೀರು ದೊರೆಯುತ್ತಿದೆ. ದಕ್ಷಿಣ ಅಮೇರಿಕಾ ಖಂಡದ ಜನಸಂಖ್ಯೆ ಜಗತ್ತಿನ ಶೇಕಡ 6 ರಷ್ಟು ಇದ್ದು, ಶೇಕಡ 26 ರಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆಯಿದೆ. ಉತ್ತರ ಅಮೇರಿಕಾದ ಜನಸಂಖ್ಯೆ  ಜಾಗತಿಕ ಮಟ್ಟದ ಶೇಕಡ 8 ರಷ್ಟಿದ್ದು, ನೀರಿನ ಲಭ್ಯತೆಯ ಪ್ರಮಾಣ ಶೇಕಡ 15 ರಷ್ಟಿದೆ.
ಜಗತ್ತಿನ ತೃತೀಯ ಜಗತ್ತಿನ ರಾಷ್ಟ್ರಗಳಾದ ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಕಳೆದ ಎರಡು ದಶಕಗಳಲ್ಲಿ ನೀರಿನ ಕೊರತೆ ಎಲ್ಲಾ ರಾಷ್ಟ್ರಗಳ ಸರ್ಕಾರಗಳ ಪಾಲಿಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆ 2000 ದಲ್ಲಿ ಶತಮಾನದ ಅಭಿವೃದ್ದಿಯ ಗುರಿಗಳು (Milleniam Devlopment Goals) ಎಂಬ 15 ವರ್ಷಗಳ ಅವಧಿಯ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿತ್ತು. ಯೋಜನೆ ಮುಂದಿನ ವರ್ಷ ಅಂತ್ಯ ಗೊಳ್ಳಲಿದ್ದು, ಇದರ ಮುಖ್ಯ ಗುರಿಗಳಾಗಿದ್ದ ಜಾಗತಿಕ ಮಟ್ಟದ ಆರೋಗ್ಯ, ಹಸಿವು ಮತ್ತು ಬಡತನ ನಿವಾರಣೆ ಹಾಗೂ ಶುದ್ಧ  ಕುಡಿಯುವ ನೀರಿನ ಯೋಜನೆಗಳಲ್ಲಿ ಆರೋಗ್ಯ ಮತ್ತು ಬಡತನ ಒಂದಿಷ್ಟು ಸುಧಾರಿಸಿದ್ದು, ಶೌಚಾಲಯ ಮತ್ತು ಕುಡಿಯುವ ನೀರು ಇವುಗಳು ಸಮಸ್ಯೆಗಳಾಗಿ ಉಳಿದಿವೆ ಎಂದು ಅರ್ಥಶಾಸ್ತ್ರಜ್ಞರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಎರಡು ದಶಕದಲ್ಲಿ ತೀವ್ರಗೊಂಡ ಜಾಗತೀಕರಣ ಮತ್ತು ಉದಾರೀಕರಣದ ಫಲವಾಗಿ ಜಗತ್ತಿನ ನಗರಗಳು ಅಸ್ವಾಭಾವಿಕವಾಗಿ  ಬೆಳಯತೊಡಗಿರುವುದು ಯೊಜನೆಯ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.


ಇತ್ತೀಚೆಗಿನ ದಿನಗಳಲ್ಲಿ ತೀವ್ರಗೊಂಡ ನಗರೀಕರಣದಿಂದಾಗಿ ಗ್ರಾಮಾಂತರ ಪ್ರದೇಶಗಳಿಂದ ನಗರಗಳಿಗೆ ವಲಸೆ ಬರುವ ಜನರು ವಸತಿ, ಶೌಚಾಲಯ ಮತ್ತು ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಅಬಿವೃಧ್ಧಿಯ ವಿಕೃತಿಗಳ ಫಲವೆನೊ? ಎಂಬಂತಿರುವ ಹಾಗೂ  ಯಾವುದೇ ಮಾನವೀಯ ಮುಖವಿಲ್ಲದೆÀ ಜಾಗತೀಕರಣದ ಪ್ರತಿನಿಧಿಗಳಂತೆ ಕಾಣುವ ವಿಶ್ವಬ್ಯಾಂಕ್,( World Bank) ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ,(International monetory Found) ಮತ್ತು ವಿಶ್ವ ವಾಣಿಜ್ಯ ಸಂಘಟನೆ (World Trade organizationಇವುಗಳು, ಇಂಗ್ಲೆಂಡ್, ಅಮೇರಿಕಾ, ಮತ್ತು ಪ್ರಾನ್ಸ್ ಹಾಗೂ ಕೆನಡಾ ಮೂಲದ  ಬಹುರಾಷ್ಟ್ರೀಯ ಕಂಪನಿಗಳ ಮೂಲಕ ನೀರಿನ ಖಾಸಾಗಿಕರಣ ಯೋಜನೆಗಳನ್ನು ತೃತೀಯ ಜಗತ್ತಿನ ಅಭಿವೃದ್ಧಿಶೀಲ ಹಾಗೂ ಬಡ ರಾಷ್ಟ್ರಗಳಲ್ಲಿ ಜಾರಿಯಲ್ಲಿಟ್ಟಿವ್ದೆ, ಇದರ ಪರಿಣಾಮವಾಗಿ  ನೈಸರ್ಗಿಕವಾಗಿ ಪುಕ್ಕಟೆ ದೊರೆಯುತ್ತಿದ್ದ ನೀರು ಇಂದು ಬಡಜನತೆಯ ಪಾಲಿಗೆ ಕೈಗೆಟುಕದ ನೀಲಿ ಚಿನ್ನವೆಂಬಂತಾಗಿದೆ. ನೀರಿನ ಖಾಸಾಗಿಕರಣ ಬಹುರಾಷ್ರೀಯ ಕಂಪನಿಗಳ ಪಾಲಿಗೆ ಬಂಡವಾಳವಿಲ್ಲದ ಲಾಭದ ದಂಧೆಯಾಗಿದೆ. ಆಮೀಷಕ್ಕೆ ಬಲಿಯಾದ ಜಗತ್ತಿನ ಹಲವು ರಾಷ್ರಗಳ ಸರ್ಕಾರಗಳು ತಮ್ಮ ನೆಲದ ನದಿಗಳನ್ನು ಬಹುರಾಷ್ರೀಯ ಕಂಪನಿಗಳಿಗೆ ಗುತ್ತಿಗೆ ನೀಡಿವೆ. “ಹೊಳೆ ನೀರಿಗೆ ದೊಣೆ ನಾಯಕನ ಅಪ್ಪಣೆಯಾ?” ಎಂಬ ಮಾತು ಇಪ್ಪೊಂದನೆಯ  ಶತಮಾನದಲ್ಲಿ ತನ್ನ ಅರ್ಥ ಕಳೆದುಕೊಂಡಿದೆ.


2050 ವೇಳೆಗೆ ಜಗತ್ತಿನ ಜನಸಂಖ್ಯೆ ಈಗಿನ 700 ಕೋಟಿಯಿಂದ 1000 ಕೋಟಿಗೆ ತಲುಪುವ ಸಾದ್ಯತೆಯಿದ್ದು ಇವರಿಗೆ ಕುಡಿಯುವ ನೀರು ಒದಗಿಸುವ ಬಗೆ ಹೇಗೆ? ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಸದ್ಯದ ಬೇಡಿಕೆಗಿಂತ ಶೇಕಡ 80 ರಷ್ಟು ಹೆಚ್ಚಿನ ನೀರಿನ ಅವಶ್ಯಕತೆ ಇದೆ ಎಂದು ಜಲತಜ್ಞರು ಅಂದಾಜಿಸಿದ್ದಾರೆ. ಉತ್ತರ ಚೀನಾ, ಮಧ್ಯಪ್ರಾಚ್ಯ, ಭಾರತ ಮತ್ತು ದಕ್ಷಿಣ ಅಮೇರಿಕಾ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ನೀರಿನ ಕೊರತೆ ಅನುಭವಿಸುವ ರಾಷ್ಟ್ರಗಳು ಎಂದು ಗುರುತಿಸಲಾಗಿದೆ. 2030 ವೇಳೆಗೆ ಭಾರತವೂ ಸೇÉರಿದಂತೆ  ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುವ ಕಾರಣ ಅರ್ಧದಷ್ಟು ಜನಸಂಖ್ಯೆ ಕೊಳಗೇರಿ ನಿವಾಸಿಗಳಾಗುತ್ತಾರೆ ಎಂಬುದು ತಜ್ಞರ ಲೆಕ್ಕಾಚಾರ. ಭಾರತದಲ್ಲಿ ಸರಾಸರಿ ಒಬ್ಬ ವ್ಯೆಕ್ತಿಗೆ 70 ರಿಂದ 90 ಲೀಟರ್ ನೀರಿನ ಅವಶ್ಯಕತೆ ಇದ್ದು, ನಗರಗಳ ಕೊಳಗೇರಿಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯೆಕ್ತಿಗೆ ಲಭ್ಯವಾಗುತ್ತಿರುವ ನೀರಿನ ಪ್ರಮಾಣ ಕೇವಲ 8 ಲೀಟರ್ ಮಾತ್ರ. ಮುಂಬೈ ನಗರದ ಕೊಳಗೇರಿಯಲ್ಲಿ ಪ್ರತಿ 5040 ಜನಸಂಖ್ಯೆಗೆ ಒಂದು ಶೌಚಾಲಯವಿದೆ ಎಂದರೆ, ಅಲ್ಲಿನ ನಿವಾಸಿಗಳ ಬದುಕು ಹೇಗಿರಬಹುದು ಊಹಿಸಿ.
ಭಾರತದ 32 ಪ್ರಮುಖ ನಗರಗಳ ಪೈಕಿ 22 ನಗರಗಳು ಕುಡಿಯುವ ನೀರಿನ ಅಭಾವ ಎದುರಿಸುತ್ತಿವೆ, ಇವುಗಳಲ್ಲಿ ಜೆಮ್ಶೆಡ್ಪುರ, ಬೇಡಿಕೆಯ  ಶೇಕಡ 70 ರಷ್ಟು ಕೊರತೆ ಎದುರಿಸುತ್ತಿದ್ದು ಮೊದಲನೆಯ ಸ್ಥಾನದಲ್ಲಿದೆ. ನಂತರ ಕಾನ್ಪುರ, Àನಾಬಾದ್, ಮೀರತ್, ಫರಿದಾಬಾದ್, ವಿಶಾಖಪಟ್ಟಣ, ಮಧುರೈ, ಹೈದರಾಬಾದ್ ನಗರಗಳು ಶೇಕಡ 30 ರಷ್ಟು ನೀರಿನ ಕೊರತೆ ಎದುರಿಸುತ್ತಿವೆ. ಮುಂಬೈ ನಗರ ಶೇಕಡ 24 ಮತ್ತು  ದೆಹಲಿ ನಗರದಲ್ಲಿ ಶೆಕಡ 17 ರಷ್ಟು ನೀರಿನ ಕೊರತೆಯಿದೆ. ಕುಡಿಯುವ ನೀರಿಗಾಗಿ ಕಂಡು ಹಿಡಿದ ಕೊಳವೆ ಬಾವಿಯ ತಂತ್ರಜ್ಞಾನ ಈಗ ಬಹುತೇಕ ಬೇಸಾಯಕ್ಕೆ ಮೀಸಲಾಗಿದೆ. ಅನಾವಶ್ಯಕವಾಗಿ ವಾಣಿಜ್ಯ ಬೆಳೆಗಳಿಗೆ ಕೊಳವೆ ಬಾವಿ ಮೂಲಕ ನೀರು ಉಣಿಸುತ್ತಿರುವ ಪರಿಣಾಮ ದೇಶದೆಲ್ಲೆಡೆ, ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ.


1951 ರಲ್ಲಿ ಭಾರತದಲ್ಲಿ 36 ಕೋಟಿ ಜನಸಂಖ್ಯೆ ಇದ್ದ ಸಮಯದಲ್ಲಿ ನೀರಿನ ಲಭ್ಯತೆಯ ಪ್ರಮಾಣ ಪ್ರತಿ ವ್ಯಕ್ತಿಗೆ ವರ್ಷವೊಂದಕ್ಕೆ 5ಲಕ್ಷದ 77 ಸಾವಿರ ಲೀಟರ್ ನೀರು ಇತ್ತು. ಇದು 2010 ವೇಳೆಗೆ ಒಂದು ಲಕ್ಷದ 82 ಸಾವಿರ ಲೀಟರ್ ಪ್ರಮಾಣಕ್ಕೆ ಕುಸಿದಿದ್ದು, ಮುಂದಿನ 2050 ವೇಳೆಗೆ 1ಲಕ್ಷದ 14 ಸಾವಿರಕ್ಕೆ ಕುಸಿಯಬಹುದೆಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಪ್ರತಿ ದಿನ 1620 ಮಕ್ಕಳು ನೀರಿಗೆ ಸಂಬಂಧಿಸಿದ ಕಾಯಿಲೆಗಳಿಂದ ಅಸುನೀಗುತ್ತಿದ್ದಾರೆ. ಇದು ದೇಶದಲ್ಲಿ ಸಂಭವಿಸುತ್ತಿರುವ ವಾಹನ ಅಪಘಾತ, ಏಡ್ಸ್, ಮತ್ತು ಮಲೇರಿಯಾ ಕಾಯಿಲೆಗಳ ಕಾರಣದಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಿದೆ.
ಅಭಿವೃದ್ಧಿ ಕುರಿತು ಪುಂಖಾನುಪುಂಖವಾಗಿ  ಭಾಷಣ ಬಿಗಿಯುವ ನಮ್ಮ ನಾಯಕರಿಗೆ ಭಾರತದಲ್ಲಿರುವ ಸುಮಾರು 120 ಕೋಟಿ ಜನಸಂಖ್ಯೆಯಲ್ಲಿ 90 ಕೋಟಿ 70 ಲಕ್ಷ ಜನಸಂಖ್ಯೆಗೆ ಶೌಚಾಲಯವಿಲ್ಲ ಮತ್ತು ಕುಡಿಯುವ ಶುದ್ದ ನೀರಿನ ವ್ಯೆವಸ್ಥೆಯಿಲ್ಲ ಎಂಬ ವಾಸ್ತವದ ಬಗ್ಗೆ ಅರಿವಿಲ್ಲ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇಕಡ 14 ರಷ್ಟು ಮಾತ್ರ ಶೌಚಾಲಯಗಳಿವೆ. ಭಾರತದ 100 ಕೋಟಿ ಜನರ ಕೈಯಲ್ಲಿ ಮೊಬೈಲ್ಗಳಿವೆ ಆದರೆ. ಮುಕ್ಕಾಲು ಮಂದಿಗೆ ಶೌಚಾಯಲವಿಲ್ಲವೆಂಬುದು ನಮಗೆ ಅಪಮಾನದ ಸಂಗತಿಯಾಗಿ ಉಳಿದಿಲ್ಲ ಅಭಿವೃದ್ಧಿ ಎಂಬುದು ಹೇಗೆ ವಿಕೃತ ರೂಪ ತಾಳಬಹುದೆಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಕೇವಲ ಕಣ್ಣಿಗೆ ಗೋಚರಿಸುವ ರಸ್ತೆ, ಸೇತುವೆ, ಬೃಹತ್ತಾದ ಕಟ್ಟಡಗಳು, ಅಣೆಕಟ್ಟುಗಳು ಇಂತಹುಗಳನ್ನು ನಾವು ಅಭಿವೃದ್ದಿಯ ಸಂಕೇತಗಳೆಂದು  ವ್ಯಾಖ್ಯಾನಿಸುತ್ತೇವೆ. ದಿಕ್ಕಿನಲ್ಲಿ ನಿಜಕ್ಕೂ  ನಮ್ಮ ಅಲೋಚನಾ ಕ್ರಮಗಳು ಬದಲಾಗಬೇಕಿದೆ. ಮನುಷ್ಯನೊಬ್ಬನ ಘನÀತೆಯ ಬದುಕಿಗೆ ತೀರಾ ಅವಶ್ಯಕವಾದ ಮೂಲಭೂತ ಸೌಕರ್ಯಗಳೆನಿಸುವ ನೀರು, ವಸತಿ, ಆರೋಗ್ಯ ಮತ್ತು ಶಿಕ್ಷಣ ಇವುಗಳಿಗೆ ಆದ್ಯತೆ ನೀqಬೇಕಿÀದೆ, ಕೇವಲ ರಾಜಕೀಯ ಪ್ರೇರಿತ ರಿಯಾಯಿತಿ ಯೋಜನೆ ಮೂಲಕ ಬಡವರನ್ನು ಬಡವರನ್ನಾಗಿ ಇಡುವ ಹುನ್ನಾರಗಳು ಯಾವೊತ್ತಿಗೂ ಸಾಮಾನ್ಯ ಜನರನ್ನು ಉದ್ಧಾರಮಾಡಲಾರವು. ಅವೆಲ್ಲವೂ ಕ್ಷಣಿಕದ ಆಮೀಷಗಳು ಮಾತ್ರ.



ತಾವು ಬದುಕುವುದರ ಜೊತೆಗೆ ತಮ್ಮ ಪರಿಸರಕ್ಕೆ ಒಂದಿನಿತೂ ಧಕ್ಕೆಯಾಗದಂತೆ, ಎರವಾಗದಂತೆ ಸರಳವಾಗಿ ಬದುಕಿ ಬಾಳಿಹೋದ ನಮ್ಮ ಪೂರ್ವಿಕರ ಜೀವನಕ್ರಮ ಮತ್ತು ಅವರ ಜ್ಞಾನಶಿಸ್ತು ನಮಗೆ  ಮಾರ್ಗದರ್ಶನವಾಗಬೇಕಿದೆ. ಬಡತನ ನಿವಾರಣೆಗಿಂತ ಬಡವರ ನಿರ್ಮೂಲನೆ ಮುಖ್ಯವೆಂಬಂತೆ ತೋರುತ್ತಿರುವ ಆಧುನಿಕ ಅಭಿವೃದ್ಧಿಯ ರಕ್ಕಸನ ಕೈಯಲ್ಲಿ ಸಿಲುಕಿರುವÀ ನಮ್ಮ ಹಳ್ಳಿಗಳು ನಾಶವಾಗುತ್ತಿರುವ ಪರಿಣಾಮ, ನಮ್ಮ ಜಲ ಸಂಪನ್ಮೂಲಗಳಾದ ಕೆರೆ, ಕೊಳ್ಳ, ಹಳ್ಳಗಳು ನಾಶವಾಗುತ್ತಿವೆ, ಇಲ್ಲವೇ ಬತ್ತುತ್ತಿವೆ. ನದಿಗಳು ದೇಶದ ಮಹಾನ್ ನಗರಗಳ ಕೊಳಚೆಯ ನೀರನ್ನು ಸಮುದ್ರಕ್ಕೆ ಸಾಗಿಸುವ ರಾಜಕಾಲುವೆಗಳಾಗಿ ಪರಿವರ್ತನೆ ಹೊಂದಿವೆ. ಇದೊಂದು ರೀತಿಯಲ್ಲಿ ಅಧುನಿಕ ಮನುಷ್ಯನ ಮೋಹಿನಿ ಭಸ್ಮಾಸೂರನ ಕಥನವೆಂದರೆ ತಪ್ಪಾಗಲಾರದು.
ಡೋನಾಲ್ಡ್ ವರ್ನರ್ ಎಂಬ ಲೇಖಕ ತನ್ನರಿವರ್ಸ್ ಆಫ್ ಎಂಪೈರ್ಕೃತಿಯಲ್ಲಿ ಯಾವುದೇ ಮನುಕುಲದ ಇತಿಹಾಸ ನೀರು ಅಥವಾ ನದಿಯ ಇತಿಹಾಸವಿಲ್ಲದೆ ಪೂರ್ಣವಾಗಲಾರದು ಎಂದಿದ್ದಾನೆ. ಆದರೆ ನಾವೀಗ ನೀರಿನ ಮಹತ್ವ ಮತ್ತು ಅದರ ಹಂಗು ತೊರೆದು ಟೊಳ್ಳು ಇತಿಹಾಸ ಸೃಷ್ಟಿಸಲು ಹೊರಟಿದ್ದೀವಿ.

                                       ( ದಿನಾಂಕ 16-3-2014ರ ವಿಜಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ)