Wednesday, 25 April 2018

ಹೋರಿ ಸಿದ್ಧನ ಕಥೆನಾನು ಹುಟ್ಟಿ ಬೆಳೆದ ಮಂಡ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಥೆ ಚಾಲ್ತಿಯಲ್ಲಿದೆ. ಅತ್ಯಂತ ಪಟಿಂಗನಾದ ಮತ್ತು ಐನಾತಿ ಕುಳ ಎನ್ನಬಹುದಾದ ವ್ಯಕ್ತಿಯ ಕುರಿತು ಮಾತನಾಡುವಾಗ  ಈ ಹೋರಿ ಸಿದ್ಧನ ಕಥೆಯನ್ನು ರೂಪಕವಾಗಿ ಬಳಸುತ್ತಾರೆ.
ಒಂದೂರಿನಲ್ಲಿ ಸಿದ್ಧ ಎಂಬ ಅನಕ್ಷರಸ್ತನಿದ್ದ. ಅವನು ಹಸು, ಎಮ್ಮೆಗಳನ್ನು ಸಾಕಿಕೊಂಡು ಆರಾಮವಾಗಿದ್ದನು.  ಹಾಲು ಕರೆಯುವ ವಿಷಯದಲ್ಲಿ ಸುತ್ತಮತ್ತಲಿನ ಊರುಗಳಲ್ಲಿ ಅವನನ್ನು ಮೀರಿಸುವವರು ಯಾರೂ ಇರಲಿಲ್ಲ. ಎಲ್ಲಿಯಾದರೂ ಹಾಲು ಹಿಂಡುವ ಸ್ಪರ್ಧೆ ನಡೆದರೆ, ಅಲ್ಲಿಗೆ ಹೋಗಿ ಕೇವಲ ಐದು ನಿಮಿಷದಲ್ಲಿ ಇಪ್ಪತ್ತು ಅಥವಾ ಇಪ್ಪತ್ತೈದು ಲೀಟರ್ ಹಾಲನ್ನು ಹಿಂಡುವುದರ ಮೂಲಕ ಬಹುಮಾನವನ್ನು ಗೆದ್ದು ತರುತ್ತಿದ್ದ. ಸಿದ್ಧ ಎಂದರೆ ಇಡೀ ಊರಿಗೆ ಹೆಮ್ಮೆ. ಅವನನ್ನು ಮೊದಲು ಸ್ಪರ್ಧೆಗೆ ಕಳಿಸಿ, ಆ ನಂತರ ಊರಿನ ಜನ  ಎತ್ತಿನ ಗಾಡಿಯಲ್ಲಿ ನಗಾರಿ, ತಮಟೆ, ಕೊಂಬು, ಕಹಳೆ ತೆಗೆದುಕೊಂಡು ಹೋಗಿ ಅವನನ್ನು ಊರಿಗೆ ಕರೆತರುತ್ತಿದ್ದರು.
ಒಮ್ಮೆ ನೆರೆಯ ಊರಿನಲ್ಲಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಂದಿನಂತೆ ಊರಿನವರು ಸಿದ್ಧನನ್ನು ಮೊದಲು  ಕಳುಹಿಸಿ, ನಂತರ ಡೋಲು, ತಮಟೆ, ಕಹಳೆಯೊಂದಿಗೆ ಸ್ವರ್ಧಾ ಸ್ಥಳಕ್ಕೆ ಹೋದರು. ಆದರೆ, ಅಲ್ಲಿ ಸಿದ್ಧ ಹಾಲುಕರೆಯುವಲ್ಲಿ ಸೋತು, ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದ. ಊರಿನ ಜನಕ್ಕೆ ಆಶ್ಚರ್ಯವಾಯಿತು. “ ಯಾಕ್ಲಾ ಬಡ್ಡತ್ತದೆ ಸೋತು ಹೋಗಿದ್ದೀಯಾ?” ಎಂದು ಕೇಳುತ್ತಿದ್ದಂತೆ, ದುಃಖ ಉಮ್ಮಳಿಸಿ ಬಂದಂತೆ ಅಳುತ್ತಾ ಸಿದ್ದ ಮಾತನಾಡತೊಡಗಿದ “ ನೀವೆ ನೋಡ್ರುಲಾ, ಆ ಬೋಳಿಮಕ್ಕಳು ಹಾಲ್ ಕರೆಯಾಕೆ  ಎಲ್ಲರಿಗೂ  ಎಮ್ಮೆ ಕಟ್ಟ್ ಬುಟ್ಟು, ನನಗೆ ಮಾತ್ರ ಕೋಣವನ್ನು ಕಟ್ಟಿಬುಟ್ಟಿದ್ದರು. ಅದರಲ್ಲಿ ಇಷ್ಟು ಮಾತ್ರ ಕರೆಯಲಿಕ್ಕೆ ಸಾಧ್ಯವಾಯುತ್ತು” ಎನ್ನುತ್ತಾ, ಬಕೇಟ್ ನಲ್ಲಿದ್ದ ಮೂರು ಲೀಟರ್ ಹಾಲನ್ನು ತೋರಿಸಿದ.  ಆ ಸಂದರ್ಭದಲ್ಲಿ ಊರಿನ ಜನಕ್ಕೆ ಮೂರ್ಚೆ ಬಂದು ಕೆಳಕ್ಕೆ ಬೀಳುವುದು ಮಾತ್ರ ಬಾಕಿ ಇತ್ತು.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಗಮನಿಸಿದಾಗ ಈ ಕಥೆ  ಪುನಃ ಜ್ಞಾಪಕಕ್ಕೆ ಬಂದಿತು. ಇಲ್ಲಿವರೆಗೆ ಸಿದ್ಧನ ವಂಶಸ್ಥರಂತೆ ಕಾಣುತ್ತಿದ್ದ ಜನರಾರ್ಧನ ರೆಡ್ಡಿ ಮತ್ತು ಅಶೋಕ್ ಖೇಣಿ ಮಾತ್ರ ಇದ್ದರು. ಈ ಬಾರಿಯ ಚುನಾವಣೆಯಲ್ಲಿ ಮೂರು ಅಥವಾ ನಾಲ್ಕು ಕ್ಷೇತ್ರಗಳನ್ನು ಹೊರತು ಪಡಿಸಿದರೆ, ಉಳಿದವರೆಲ್ಲರೂ ಹೋರಿ ಸಿದ್ಧನ ಕುಲದವರಂತೆ ಕಾಣುತ್ತಿದ್ದಾರೆ. ಇಂತಹವರನ್ನು ಜಾತಿ, ಪಕ್ಷ ಅಥವಾ ಇಂತಹವರ ನಾಯಕತ್ವದಲ್ಲಿ ಆಯಕಟ್ಟಿನ ಜಾಗದಲ್ಲಿ ಲಾಭದಾಯಕ ಹುದ್ದೆ  ಸಿಕ್ಕಿತು ಎಂಬ ಕಾರಣಕ್ಕೆ  ಹೊಗಳಿ ಬರೆಯುವುದು ಅಥವಾ ಮಾತನಾಡುವುದು  ಬೌದ್ಧಿಕ ವ್ಯಭಿಚಾರವಲ್ಲದೆ ಮತ್ತೇನು ಅಲ್ಲ.
ಹತ್ತು ವರ್ಷಗಳ ಹಿಂದೆ ನನ್ನ ಗುರುಗಳಲ್ಲಿ ಒಬ್ಬರಾದ ವಿಚಾರವಾದಿ ಪ್ರೊ. ಹೆಚ್. ಎಲ್. ಕೇಶವಮೂರ್ತಿಯವರನ್ನು ಮಂಡ್ಯದ ಇಬ್ಬರು ಹಿರಿಯ ರಾಜಕೀಯ ನಾಯಕರ ಕುರಿತು ಅಭಿಪ್ರಾಯ ಕೇಳಿದಾಗ, ನಿಷ್ಟುರ ಮಾತಿಗೆ ಹೆಸರಾಗಿದ್ದ ಅವರು , “ ಒಂದು ಹೇಸಿಗೆಯನ್ನು ಎರಡು ಭಾಗ ಮಾಡಿ ಇದರಲ್ಲಿ ಶ್ರೇಷ್ಟ ಯಾವುದು? ಎಂದು ಕೇಳಿದರೆ, ನಾನೇನು ಉತ್ತರ ಹೇಳಲಿ” ಎಂಬ ಮಾತನ್ನಾಡಿದ್ದರು.  ಅಂದು ಹೆಚ್. ಎಲ್. ಕೆ. ಆಡಿದ್ದ ಮಾತನ್ನು  ಇಂದು ಯಾವುದೇ ಮುಲಾಜಿಲ್ಲದೆ ಇಂದಿನ ರಾಜಕೀಯ ಪಕ್ಷಗಳಗೆ ಮತ್ತು ಅವುಗಳ ನಾಯಕರಿಗೆ ಬಳಸಬಹುದು.

Sunday, 8 April 2018

ಕನ್ನಡದ ಚಿತ್ರರಂಗದ ಅನನ್ಯ ಪ್ರತಿಭೆ ಟಿ.ಎಸ್.ರಂಗಾ ಇನ್ನಿಲ್ಲ.

ಕಳೆದ ಎರಡು ದಶಕಗಳಿಂದ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದಿಂದ  ದೂರ ಉಳಿದುಕೊಂಡು  ಈ ಎರಡೂ ಕ್ಷೇತ್ರಗಳಿಗೆ ಅಪರಿಚತರಂತೆ, ಹಾಗೂ ಅನಾಮಿಕರಂತೆ ಕಾಣುತ್ತಿದ್ದ ಕನ್ನಡದ  ಅತ್ಯಂತ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಟಿ.ಎಸ್. ರಂಗಾ  ಇಂದು ನಮ್ಮನೆಲ್ಲಾ ಅಗಲಿದ್ದಾರೆ.
ಅಪಾರ ಓದು ಮತ್ತು ತಿಳುವಳಿಕೆಯ ಅಗರವಾಗಿದ್ದ ಟಿ.ಎಸ್.ರಂಗಾ ರವರು ಕನ್ನಡದಲ್ಲಿ ನಿರ್ದೇಶನ ಮಾಡಿದ ಕೃಷ್ಣ ಆಲನಹಳ್ಳಿಯವರ ಗಿಜಗನ ಗೂಡು, ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ತಂದುಕೊಟ್ಟ ಕನ್ನಡದ ಸಾವಿತ್ರಿ ಸಿನಿಮಾ ಹಾಗೂ ಹಿಂದಿಯಲ್ಲಿ ಸ್ಮಿತಾಪಾಟಿಲ್, ಓಂಪುರಿ ಅಭಿನಯದ “ ಗಿದ್” ಸಿನಿಮಾ ಇವುಗಳು 1980 ರ ದಶಕದಲ್ಲಿ ಟಿ.ಎಸ್. ರಂಗಾ ಅವರನ್ನು ಭಾರತದ ಪ್ರಖ್ಯಾತ ನಿರ್ದೇಶಕರ ಸಾಲಿನಲ್ಲಿ ನಿಲ್ಲಿಸಿದ್ದವು.
ಖಚಿತವಾದ ನಿಲುವು ಮತ್ತು ನಡೆ ಹಾಗೂ ನುಡಿಗಳಿಗೆ ಹೆಸರಾಗಿದ್ದ ಟಿ.ಎಸ್. ರಂಗಾ ನಮ್ಮಂತಹ ಗೆಳೆಯರ ಪಾಲಿಗೆ ನಡೆದಾಡುವ ವಿಶ್ವ ವಿದ್ಯಾಲಯವಾಗಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಹಾಗೂ ಅಪ್ಪಟ ಗಾಂಧಿವಾದಿಯಂತೆ ಬದುಕಿದ್ದ ಟಿ.ಆರ್. ಶಾಮಣ್ಣ  ಅವರ ಪುತ್ರರಾಗಿದ್ದ ರಂಗಾ ಅವರು ಎಂದಿಗೂ ತಾನೊಬ್ಬ ಸಂಸದರ ಪುತ್ರ ಎಂದು ಗುರುತಿಸಿಕೊಳ್ಳಲಿಲ್ಲ. ಏಕೆಂದರೆ, ಅವರ ತಂದೆಯವರೂ ಸಹ ಸದಾ ಆಟೊದಲ್ಲಿ ಓಡಾಡುತ್ತಾ ಜನಸಾಮಾನ್ಯರಂತೆ ಬದುಕಿದರು.
1970 ರ ದಶಕದಲ್ಲಿ ಬಿ.ವಿ.ಕಾರಂತರು ಬೆಂಗಳೂರು ನಗರದಲ್ಲಿ ಕಟ್ಟಿದ ಬೆನಕ ನಾಟಕ ತಂಡದ ಸದಸ್ಯರಾಗಿದ್ದ ರಂಗಾ ಅವರು ತಮ್ಮ ಒಡನಾಡಿಗಳಾದ ಟಿ.ಎಸ್.ನಾಗಾಭರಣ, ಸುಂದರರಾಜ್, ಕೋಕಿಲಾ ಮೋಹನ್ ( ತಮಿಳು ಸಿನಿಮಾದ ಪ್ರಖ್ಯಾತ ನಾಯಕ ನಟನಾಗಿ ಪ್ರಸಿದ್ಧಿ ಪಡೆದವರು) ಹಾಗೂ ಗಿರೀಶ್ ಕಾಸರವಳ್ಳಿ ಅವರ ಪತ್ನಿ ವೈಶಾಲಿ ಇವರ ಜೊತೆಗೂಡಿ ಬೆನಕ ತಂಡಕ್ಕೆ ಜೀವ ತುಂಬಿದರು. ಹಾಗಾಗಿ ಅವರು ಚಲನಚಿತ್ರಗಳು, ಧಾರವಾಹಿ, ಹಾಗೂ ಸಾಕ್ಷ್ಯ ಚಿತ್ರ ಇವುಗಳ  ನಿರ್ಮಾಣದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದರೂ ಸಹ ರಂಗಭೂಮಿ ಅವರ ಆದ್ಯತೆಯ ಕ್ಷೇತ್ರವಾಗಿತ್ತು.
ಬೆಂಗಳೂರಿನ ತ್ಯಾಗರಾಜನಗರದ ಕಟ್ಟೆ ಬಳಗದ ಹತ್ತಿರ ಇದ್ದ  ಅವರ ನಿವಾಸದ ಮುಂದಿನ ಅಂಗಡಿ ಮಳಿಗೆಗಳ ಮೇಲಿನ ಕಛೇರಿ ಹಾಗೂ ಅತಿಥಿ ಗೃಹ ನನ್ನಂತಹ ಗೆಳೆಯರಿಗೆ ಆಶ್ರಯತಾಣ ಮತ್ತು ಚರ್ಚೆಯ ಅಡ್ಡೆಯಾಗಿತ್ತು. ಶುದ್ಧ ಸಸ್ಯಹಾರಿಯಾಗಿದ್ದ ರಂಗಾ ಅವರ ಜೊತೆ ಅವರ ನೆಚ್ಚಿನ ಪಾನಿಯವಾಗಿದ್ದ ಡೈರಕ್ಟರ್ ಸ್ಪೆಷಲ್ ಬ್ಲಾಕ್, ವಿಸ್ಕಿ, ಬಿಸಿ ಇಡ್ಲಿ, ಚಟ್ನಿ, ಕಾಂಗ್ರೇಸ್ ಕಡ್ಲೆ ಬೀಜದ ಜೊತೆ ಕುಳಿತು ಅವರ ಮಾತುಗಳನ್ನು ಕೇಳುತ್ತಾ ಕುಳಿತರೆ ಅಲ್ಲೊಂದು ಹೊಸ ಲೋಕ ತೆರೆದುಕೊಳ್ಳುತ್ತಿತ್ತು.  ಕುಡಿಯು ಗ್ಲಾಸ್, ಸಿಗರೇಟ್ ಹಾಕುವ ಆಶ್ ಟ್ರೆ, ತಿಂಡಿಯ ಪ್ಲೆಟ್ ಗಳು, ಕೂರುವ ಕುರ್ಚಿಗಳು ಇವುಗಳಲ್ಲಿ ತೀರಾ ಮಡಿವಂತಿಕೆ  ಎನಬಹುದಾದ ಅಚ್ಚುಕಟ್ಟುತನವನ್ನು ತೋರುತ್ತಿದ್ದ ರಂಗಾರವರು ತಮ್ಮ ಮಾತು ಮತ್ತು ಚಿಂತನೆಯಲ್ಲಿ ಎಲ್ಲಾ ಕಟ್ಟು ಪಾಡುಗಳನ್ನು ಮೀರಿದ ಸಂತನಂತೆ ಕಾಣುತ್ತಿದ್ದರು. ಅವರ ಪರಮ ಶಿಷ್ಯನಾದ  ಹಾಗೂ ಈಗಿನ ಪ್ರಸಿದ್ಧ ಸಹ ಕಲಾವಿದ ಮತ್ತು ನಿರ್ಮಾಪಕರಲ್ಲಿ  ಒಬ್ಬನಾಗಿರುವ ಗೆಳೆಯ ಕರಿಸುಬ್ಬು, ನಿರ್ದೇಶಕ ಟಿ.ಎಸ್ ನಾಗಾಭರಣ ಮತ್ತು ಕಲಾವಿದೆ ಹಾಗೂ ಸಚಿವೆಯಾಗಿರುವ ಉಮಾಶ್ರೀ ಇವರೆಲ್ಲರೂ ಸದಾ ರಂಗಾ ಅವರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡವರಾಗಿದ್ದರು. ಅಲ್ಲಿ ಹಳೆಯ ರಂಗಗೀತೆಗಳು ಸಾಮೂಹಿಕ ಗಾನದಲ್ಲಿ ಅನುರಣಿಸುತ್ತಿದ್ದವು.
ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳದರೂ ಸಹ  ಟಿ.ಎಸ್, ರಂಗಾ ಅವರು ತಮ್ಮ ಬದುಕಿನುದ್ದಕ್ಕೂ ಉತ್ತರ ಕರ್ನಾಟಕದ ಗ್ರಾಮೀಣ ಬದುಕನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಹಾಗಾಗಿ ಅವರ ಸಾವಿತ್ರಿ ಹಾಗೂ ಗಿದ್ ಸಿನಿಮಾಗಳನ್ನು ಒಳಗೊಂಡಂತೆ, ಅವರು ದೂರದರ್ಶನಕ್ಕಾಗಿ ನಿರ್ಮಿಸಿದ ಬಹುತೇಕ ಧಾರವಾಹಿಗಳು ಉತ್ತರ ಕರ್ನಾಟಕದ ಕಥೆಗಳನ್ನು ಒಳಗೊಳ್ಳುತ್ತಿದ್ದವು.  ರಂಗಾ ಅವರು ಧಾರವಾಹಿ ನೆಪದಲ್ಲಿ ಧಾರವಾಡ, ಜಮಖಂಡಿ, ಬಾಗಲಕೋಟೆ, ಬಿಜಾಪುರದಲ್ಲಿ ಹೆಚ್ಚು ಕಾಲಕಳೆಯುತ್ತಿದ್ದರು.
ಟಿ.ಎಸ್.ರಂಗಾ ಎಂತಹ ಸೃಜನಶೀಲ ನಿರ್ದೇಶಕ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕನ್ನಡ ವಾರ್ತಾ ಇಲಾಖೆಗೆ ಶಂಬಾ ಜೋಶಿಯವರ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣ ಮಾಡುತ್ತಿದ್ದರು. ಜೋಶಿಯವರು ಹುಟ್ಟಿ ಬೆಳೆದ ಊರು ಅಣೆಕಟ್ಟಿನ ಹಿನ್ನಿರಿನಲ್ಲಿ ಮುಳುಗಿ ಹೋಗಿತ್ತು. ಅವರ ಊರನ್ನು ಚಿತ್ರಿಸುವುದು ಹೇಗೆ ಎಂಬ ಕುತೂಹಲದ ಪ್ರಶ್ನೆಯನ್ನು ನಮ್ಮೆಲ್ಲಾ ಗೆಳೆಯರ ಮುಂದಿಟ್ಟಿದ್ದರು. ಅಂತಿಮವಾಗಿ ಶಂಬಾ ಅವರ ಊರಿನ ನಕಾಶೆಯನ್ನು ಬಣ್ಣ ಬಣ್ಣದ ಪೆನ್ಸಿಲ್ ನಲ್ಲಿ ಸಿದ್ಧಪಡಿಸಿಕೊಂಡು, ಅದನ್ನು ನೀರಿನಲ್ಲಿ ಮುಳುಗಿಸಿ, ಊರಿನ ಮುಳುಗಡೆಯ ಕಥೆಯನ್ನು ಹೇಳಿದ್ದರು.

ರಂಗಾ ಅವರಿಗೆ ರಾವ್ ಬಹುದ್ದೂರ್ ಅವರ ಗ್ರಾಮಾಯಣ ಮತ್ತು ಚೀನಾದ ಪ್ರಸಿದ್ಧ ಕಾದಂಬರಿ  ಪರ್ಲ್. ಎಸ್. ಬರ್ಕ್ ಅವರ “ ಗುಡ್ ಅರ್ಥ್” ಕಾದಂಬರಿಗಳನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಬೇಕೆಂದು ಅಪಾರವಾದ ಕನಸಿತ್ತು. ಈ ಕಾರಣಕ್ಕಾಗಿ ಅವರು ಧಾರವಾಡಕ್ಕೆ ಬಂದರೆ, ಹೋಟೆಲ್ ಧಾರವಾಡದಲ್ಲಿ, ಬಿಜಾಪುರಕ್ಕೆ ಬಂದರೆ, ಗೋಳ ಗುಮ್ಮಟದ ಎದುರಿಗಿನ ಹೋಟೆಲ್ ಸ್ವಾಗತ್ ನಲ್ಲಿ ವಾರಗಟ್ಟಲೆ  ಉಳಿದುಕೊಂಡು ರಾತ್ರಿಯ ಮೆಹಪಿಲ್ ಗಳಲ್ಲಿ ಚರ್ಚೆ ಮಾಡುತ್ತಿದ್ದರು. ಧಾರವಾಡದಲ್ಲಿ ಅಶೋಕ್ ಶೆಟ್ಟರ್, ಗಣೇಶ ಜೋಶಿ, ಅನಿಲ್ ದೇಸಾಯಿ, ಅಶೋಕ್ ಮೊಕಾಶಿ, ನರೇಂದ್ರ ಹಾಗೂ ಬಿಜಾಪುರದಲ್ಲಿ ಬಸವರಾಜು ಯಂಕಚಿ, ಬಸವರಾಜ ಮೇಲುಪ್ಪರಿಗೆ ಮಠ ಹಾಗೂ ದೇಶಪಾಂಡೆ  ಇವರಲ್ಲರೂ ರಂಗಾ ಅವರ ಖಾಯಂ ಸಂಗಾತಿಗಳಾಗಿದ್ದರು.
ನೋವಿನ ಸಂಗತಿಯೆದರೆ, ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಿರೀಶ್ ಕಾರ್ನಾಡ್, ಕಾರಂತ ಹಾಗೂ ಕಾಸರವಳ್ಳಿಯವರ ಜೊತೆಯಲ್ಲಿ ಮಾನ್ಯತೆ ತಂದುಕೊಟ್ಟ ಇಂತಹ ಅಪರೂಪದ ನಿರ್ದೇಶಕನ ನಿಧನ ಸುದ್ದಿಯನ್ನು ಪ್ರಕಟಿಸುವ ಕನಿಷ್ಠ ಸೌಜನ್ಯವೂ ನಮ್ಮ ದೃಶ್ಯ ಮಾಧ್ಯಮಗಳಿಗೆ ಇಲ್ಲವಾಗಿದೆ.