Monday, 29 April 2013

ಕುಂಭ ಮೇಳದ ಕಸದ ರಾಶಿಉತ್ತರ ಪ್ರದೇಶದ ಅಲಹಾಬಾದ್ ನಗರದ   ಸಂಗಮ ಕ್ರೇತ್ರದಲ್ಲಿ ಮಹಾ ಕುಂಭ ಮೇಳ ನಡೆದು ಎರಡು ತಿಂಗಳಾಗುತ್ತಾ ಬಂತು. ಧಾರ್ಮಿಕ ಆಚರೆಣೆಯ ನೆಪದಲ್ಲಿ ಗಂಗಾ, ಯಮುನಾ, ಹಾಗೂ ಗುಪ್ತನದಿ ಸರಸ್ವತಿ ನದಿಗಳ ಸಂಘಮ ಸ್ಥಳದಲ್ಲಿ ನಿರಂತರ 55ದಿನಗಳ ಕಾಲ ನಡೆದ ಮಹಾಮೇಳದಲ್ಲಿ ಭಾಗವಹಿಸಿದ ಭಕ್ತರ ಸಂಖ್ಯೆ ಬರೋಬ್ಬರಿ 10. ಕೋಟಿ. ಶಾಹಿ ಸ್ನಾನ ಮತ್ತು ಮಹಾ ಸ್ನಾನ ಎನ್ನುವ ವಿಶೇಷ ದಿನಗಳಲ್ಲಿ ಅಲಹಾಬಾದ್ ನಗರಕ್ಕೆ ಬೇಟಿ ನೀಡಿದ ಹಿಂದೂ ಭಕ್ತರ ಸಂಖ್ಯೆ 55 ಲಕ್ಷವನ್ನು ಮೀರಿದೆ.
ಕುಂಬ ಮೇಳ ನಡೆದ 55ದಿನಗಳಲ್ಲಿ ಭಕ್ತರೆನಿಸಿಕೊಂಡವರು ಸೃಷ್ಟಿಸಿ ಹೋದ ಕಸದ ರಾಶಿ  ಮಾತ್ರ  ಇನ್ನೂ ಕರಗಿಲ್ಲ. ಕರಗುವ ಲಕ್ಷಣವೂ ಕಾಣುತ್ತಿಲ್ಲ.

ಉತ್ತರ ಪ್ರದೇಶದ ಸರ್ಕಾರ, ಅಲಹಾಬಾದಿನ ಪೌರ ಕಾರ್ಮಿಕರೂ ಸೇರಿದಂತೆ  ನೆರೆಯ ಜಿಲ್ಲೆಗಳಾದ ಚಿತ್ರಕೂಟ್, ಪತೇಪುರ್, ಬಂಡ್, ಮಿರ್ಜಾಪುರ, ಕುಸುಮಬೂಮಿ ಇವುಗಳಿಂದ  ಎಂಟು ಸಾವಿರ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿದೆ. ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ಹರಡಿರುವ ಕಸದ ರಾಶಿಯನ್ನು ನೋಡಿದರೆ,  ಜಿಗುಪ್ಸೆ ಮೂಡಿಸುತ್ತದೆ.
ಧಾರ್ಮಿಕ  ಕ್ಷೇತ್ರದಲ್ಲಿ ಧರ್ಮ ಕುರಿತಂತೆ ಶ್ರದ್ಧೆಯ ಜೊತೆಗೆ ಪರಿಸರ ಸ್ವಚ್ಛತೆಯನ್ನು ಕಾಪಾಡುವ ಮನೋಭಾವ ಕೂಡ ಬೇಕು ಎಂಬುದನ್ನು ಮಹಾ ಕುಂಭ ಮೇಳದ ನಂತರ ಸೃಷ್ಟಿಯಾಗಿರುವ ಕಸದ ರಾಶಿ ಸಾರಿ, ಸಾರಿ, ಹೇಳುತ್ತಿದೆ.
ನದಿ ತೀರದ ಇಕ್ಕೆಲಗಳಲ್ಲಿ ಬಿದ್ದರಿರುವ ಬಟ್ಟೆಗಳು,  ಪ್ಲಾಸ್ಟಿಕ್ ಬಾಟಲ್ ಗಳು, ಬ್ಯಾಗುಗಳು, ಬಿಸಾಡಿ ಹೋದ ಚಪ್ಪಲಿಗಳು, ಮನುಷ್ಯರ ಮಲ, ಮೂತ್ರದ ತುಣುಕುಗಳು ಇವೆಲ್ಲವೂ  ಕುಂಭ ಮೇಳದ ಬಗ್ಗೆ ಹೇಸಿಗೆ ಮೂಡಿಸುತ್ತವೆ.

ಭಾರತದ ಮಾಧ್ಯಮಗಳಲ್ಲಿ ಹಿಂದೂ ದಿನಪತ್ರಿಕೆ ಹೊರತು ಪಡಿಸಿದರೆ, ಉಳಿದ ಪತ್ರಿಕೆಗಳಲ್ಲಿ ಇಲ್ಲಿನ ಕಲುಷಿತ ಪರಿಸರದ ಬಗ್ಗೆ ವರದಿಯಾಗಲಿಲ್ಲ. ಆದರೇ,  ಅಮೇರಿಕಾದ ವಾಲ್ ಸ್ಟೀಟ್ ಜರ್ನಲ್ ಸೇರಿದಂತೆ ಜಗತ್ತಿನ ಪ್ರಮುಖ ದಿನಪತ್ರಿಕೆಗಳಲ್ಲಿ  ಕುಂಭ ಮೇಳದ ಕಸದ ರಾಶಿ ಬಗ್ಗೆ ವರದಿಯಾಗಿದೆ. ಪ್ರಸಿದ್ದ ಅಂತರಾಷ್ಟ್ರೀಯ ಸುದ್ಧಿ ಸಂಸ್ಥೆ ( ರಾಯಿಟರ್) ತೆಗೆದಿರುವ ಚಿತ್ರಗಳು ಜಗತ್ತಿನಾದ್ಯಂತ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಈ ಕಾರಣಕ್ಕಾಗಿ ಈ ತಿಂಗಳು ಅಮೇರಿಕಾ ಪ್ರವಾಸ ಮಾಡಿ, ಅಲ್ಲಿನ ಹಾರ್ವಡ್ ವಿ.ವಿ.ಯಲ್ಲಿ ವಿದ್ಯಾರ್ಥಿಗಳಂದಿಗೆ ಸಂವಾದ ಮಾಡಬೇಕಿದ್ದ ಉತ್ತರ  ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಯಾದವ್,  ಮುಜುಗರ ತಪ್ಪಿಸಿಕೊಳ್ಳಲು ಪ್ರವಾಸ ರದ್ದು ಮಾಡಿದ್ದಾರೆ.
ಅಲಹಾಬಾದ್ಕ ನಗರದಲ್ಲಿ  ಕಸದ  ವಿಲೆವಾರಿಗಾಗಿ ಹಲವಾರು ಸ್ವಯಂ ಸೇವಾ ಸಂಘಟನೆಗಳು ಕೈ ಜೋಡಿಸಿವೆ. ಮಾನವ ಜೀವಿಗಳ  ಇಂತಹ ಹೇಯ ಕೃತ್ಯಗಳನ್ನು ಬಹಳ ವರ್ಷಗಳಿಂದ ನೋಡಿರುವ ಸ್ಥಳಿಯ ದಾರಾಗಂಜ್ ನ ನಿವಾಸಿ ಮುಜಿರಾ ಬಿಂದ್ ಪ್ರಕಾರ ಮುಂದಿನ ಮುಂಗಾರಿನ ಋತುವಿನಲ್ಲಿ ಬೀಳುವ ಮಳೆ ಮಾತ್ರ  ಈ  ಕಸದ ರಾಶಿಗೆ ಪರಿಹಾರ. ಇಲ್ಲಿನ ಕಲ್ಮಶ  ನದಿಯ ಪ್ರವಾಹದಲ್ಲಿ ಎಲ್ಲವೂ ಕೊಚ್ಚಿ ಹೋಗುತ್ತದೆ ನಿಜ. ಆದರೇ, ನದಿ ನೀರಿನ ಜಲಚರಗಳ ಪಾಡೇನು? 
ಕೇವಲು ಐದು ದಿನ ಬೆಂಗಳೂರಿನ ಪೌರ ಕಾರ್ಮಿಕರು ಮುಷ್ಕರ ಹೂಡಿದ ಪರಿಣಾಮ ಕಸದ ತೊಟ್ಟಿಯಾದ ಬೆಂಗಳೂರು ನಗರವನ್ನು ಸ್ವಚ್ಚ ಮಾಡಲು ಇನ್ನೂ ಸಾಧ್ಯವಿಲ್ಲ.  ಇನ್ನು, ನಿರಂತರ 55 ದಿನಗಳ ಕಾಲ 10 ಕೋಟಿ ಜನ ಸೃಷ್ಟಿ ಮಾಡಿ ಹೋಗಿರುವ ಕಸದ ಪರ್ವತ ಕರಗಲು ಹತ್ತಾರು ವರ್ಷ ಬೇಕು. ಅಷ್ಟರಲ್ಲಿ ಇನ್ನೋದು ಕುಂಭ ಮೇಳ ಬಂದಿರುತ್ತದೆ. ಜೀವ ಸಂಕುಲ ಗಳ ಮೇಲೆ ಕೇಡು ಎಸಗುವ ಇಂತಹ ಧಾರ್ಮಿಕ ಕ್ರಿಯೆ ಗಳು ಯಾವ ಪುರುಷಾರ್ಥಕ್ಕೆ? ಲೋಕ ಕಲ್ಯಾಣ  ಎಂದರೆ ಇದೇನಾ?

No comments:

Post a Comment