ಮಂಗಳವಾರ, ಮಾರ್ಚ್ 24, 2015

ಭಾರತದ ಇಬ್ಬರು ಪರಿಸರದ ಸಂತರಿಗೆ ಅಂತರಾಷ್ಟ್ರೀಯ ಮನ್ನಣೆ


ಗಾಂಧೀಜಿ ಚಿಂತನೆಗಳ ವಾರಸುದಾರರು ಮತ್ತು ಈ ದೇಶದ ನೆಲ,ಜಲ ಮತ್ತು ಜೈವಿಕ ವೈವಿಧ್ಯತೆ ಹಾಗೂ ಪರಿಸರವನ್ನು ತಮ್ಮ ಜೀವದ ಉಸಿರಿನಂತೆ ಪ್ರೀತಿಸುತ್ತಾ, ಧ್ಯಾನಿಸುತ್ತಾ  ಬಂದಿರುವ ಭಾರತ ಪರಿಸರದ ಸಂತರಿಬ್ಬರೂ ಈ ವಾರ ಎರಡು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿರುವುದು,ಪರಿಸರ ಪ್ರಿಯರಿಗೆ ಖುಷಿಯ ಸಂಗತಿಯಾಗಿದೆ.
ಪ್ರೊ. ಮಾಧವ ಗಾಡ್ಗಿಲ್ ಅವರಿಗೆ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಜೀವ ವೈವಿಧ್ಯತೆಗಳ ಕಾಳಜಿ ಮತ್ತು ರಕ್ಷಣೆಗಾಗಿ ಸಲ್ಲಿಸಿದ ಸೇವೆಗಾಗಿ ಅಮೇರಿಕಾದ ದಕ್ಷಿಣ ಕ್ಯಾಲಿಪೊರ್ನಿಯಾದ ವಿಶ್ವ ವಿದ್ಯಾಲಯ ಸ್ಥಾಪಿಸಿರುವ “ ಟೈಲರ್ ಪರಿಸರ ಪ್ರಶಸ್ತಿ” ಲಭಿಸಿದೆ.
ಈ ದೇಶದ ಜಲಸಂಪನ್ಮೂಲಗಳು ಮತ್ತು ನದಿಗಳನ್ನು ಪುನಶ್ಚೇತನಗೊಳಿಸುವುದರ ಮೂಲಕ ಜಲಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವ ರಾಜೇಂದ್ರ ಸಿಂಗ್ ಅವರಿಗೆ  ನೀರಿನ ನೊಬೆಲ್ ಎಂದು ಕರೆಯಲಾಗುವ 2015 ರ ಅಮೇರಿಕಾದ ಸ್ಟಾಕ್ ಹೋಮ್ ಪ್ರಶಸ್ತಿ ಲಭ್ಯವಾಗಿದೆ.
ಇಂದಿನ ದಿನಮಾನಗಳಲ್ಲಿ ಅಭಿವೃದ್ಧಿಯ ವಾಖ್ಯಾನದ ಮೂಲ ಆಶಯ ಪಲ್ಲಟಗೊಂಡ ಪರಿಣಾಮವಾಗಿ ಉಳ್ಳವರ ನೆಮ್ಮೆದಿಯ ಬದುಕಿಗಾಗಿ ಇಲ್ಲದವರ  ಬದುಕನ್ನು ಬಲಿ ಪಡೆಯುವುದೇ ಅಭಿವೃದ್ಧಿ ಎಂಬಾಂತಾಗಿದೆ. ಕೊಳ್ಳುಬಾಕುತನವನ್ನು ಬದುಕಿನ ಮೂಲ ಮಂತ್ರವಾಗಿರಿಸಿಕೊಂಡ ಆಧುನಿಕ ಜಗತ್ತಿಗೆ ಈ ನೆಲದ ನೈಸರ್ಗಿಕ ಕೊಡುಗೆಗಳು ಇರುವುದು, ಯಥೇಚ್ಛವಾದ ಹಾಗೂ  ಮಿತಿ ಮೀರಿದ ಬಳಕೆಗಾಗಿ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ನಾವು ಈ ಭೂಮಿಯ ಹಕ್ಕುದಾರರಲ್ಲ, ಕೇವಲ ವಾರಸುದಾರರು ಮಾತ್ರ,, ನಿಸರ್ಗವನ್ನು ಉಳಿಸಿ ನಮ್ಮ ಮುಂದಿನ ತಲೆಮಾರಿಗೆ ದಾಟಿಸುವ ನೈತಿಕ ಜವಾಬ್ದಾರಿಯೊಂದು ನಮ್ಮ ಮೇಲಿದೆ ಎಂಬ ಪ್ರಜ್ಞೆ ನಮ್ಮ ಸ್ಮೃತಿಯಿಂದ ಅಳಿಸಿಹೋಗಿ ಎಷ್ಟೋ ವರ್ಷಗಳಾಗಿವೆ. ಹಾಗಾಗಿ ಪರಿಸರ ಕುರಿತು ಮಾತನಾಡುವುದು ಸಿನಿಕತನವೇನೋ ಎಂಬ ಧ್ವಂದ್ವದ ಜಗತ್ತಿನಲ್ಲಿ ಮುಳುಗಿ ಏಳುತ್ತಿರುವ ನಮ್ಮಂತಹವರಿಗೆ ಪ್ರೊ. ಮಾಧವ ಗಾಡ್ಗಿಲ್ ಮತ್ತು ರಾಜೇಂದ್ರಸಿಂಗ್ ಆತ್ಮ ವಿಶ್ವಾಸದ ಪ್ರತೀಕವಾಗಿ, ಕಗ್ಗತ್ತಲ ಜಗತ್ತಿನ ಬೆಳಕಿನ ಕಿರಣವಾಗಿ ಗೋಚರಿಸುತ್ತಾರೆ.


 ಪುಣೆ ಎಂದು ಕರೆಸಿಕೊಳ್ಳುವ ಈಗಿನ ಪೂನಾ ನಗರದ ಪ್ರತಿಷ್ಟಿತ ಮನೆತನದಲ್ಲಿ 1942 ರಲ್ಲಿ ಜನಿಸಿದ ಪ್ರೊ .ಗಾಡ್ಗಿಲ್ ಬಾಲ್ಯದಿಂದಲೂ ಒಬ್ಬ ಜೀವಶಾಸ್ತ್ರಜ್ಷನಾಗಬೇಕೆಂದು ಕನಸುಕಂಡವರು. ಅದರಂತೆ ಪೂನಾ. ಫರ್ಗುಸನ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮತ್ತು ಬಾಂಬೆ. ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ  ಅವರು ಅಮೇರಿಕಾದ ಹಾರ್ವಡ್ ವಿ.ವಿ.ಯಲ್ಲಿ ಪರಿಸರ ಮತ್ತು ಜೈವಿಕ ವೈವಿಧ್ಯತೆ ಕುರಿತು ಡಾಕ್ಟರೇಟ್ ಪದವಿ ಪಡೆದರು.
ವಿದೇಶದಿಂದ ಹಿಂತಿರುಗಿದ ನಂತರ ಒಂದಷ್ಟು ವರ್ಷಗಳ ಕಾಲ ಪೂನಾದಲ್ಲಿದ್ದ ಗಾಡ್ಗಿಲ್ ಅವರು 1973 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ 2004 ರವರೆಗೆ ಕರ್ನಾಟಕವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡರು. ಗಾಡ್ಗಿಲ್ ಅವರಿಗಿಂತ ಮೊದಲು ಅವರ ಪತ್ನಿ ಸುಲೋಚನಾ ಅವರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಕೆಲಸಕ್ಕೆ ಸೇರುವಾಗ ಅವರು ತಮ್ಮ ಪತಿಯ ವಿವರಗಳನ್ನು ಜೊತೆಯಲ್ಲಿ ತಂದಿದ್ದ ಕಾರಣ, ಪತ್ನಿಯ ಮೂಲಕ ಮಾಧವ ಗಾಡ್ಗಿಲ್ ರವರಿಗೂ ಸಂಸ್ಥೆಯಲ್ಲಿ  ಉದ್ಯೋಗ ದೊರೆಯಿತು. ಮುಂದಿನ ಸತತ ಮೂರು ದಶಕಗಳ ಕಾಲ ಅವರು ಪಶ್ಚಿಮಘಟ್ಟದ ಪರಿಸರ, ಅಲ್ಲಿರುವ ಜೈವಿಕ ವೈವಿಧ್ಯತೆ ಹಾಗೂ ಅಪರೂಪದ ಜೀವ ಜಾಲಗಳ ಸರಪಳಿ ಕುರಿತಂತೆ ಅಧ್ಯಯನ ನಡೆಸಿ, ಭಾರತೀಯರಿಗೆ ವಿಶೇಷವಾಗಿ  ಶಿಕ್ಷಕರಿಗೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಮತ್ತು ಸ್ವಯಂ ಸೇವಾ ಸಂಘಟನೆಗಳ ಕಾಯಕರ್ತರಿಗೆ ಪರಿಸರದ ಪ್ರಜ್ಞೆ ಮೂಡಿಸಿದರು. ಇಂತಹ ಅಧ್ಯಯನಗಳ ನಡುವೆಯೂ ಸಹ  ಭಾರತೀಯ ವಿಜ್ಞಾನ ಸಂಸ್ಥೆಯ ಇತರೆ ವಿಭಾಗಗಳ ತಜ್ಞರ ಜೊತೆಗೂಡಿ, ಆಸ್ಟ್ರಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಸುಧಾರಿತ ತಂತ್ರಜ್ಞಾನಗಳನ್ನು ಅವಿಷ್ಕರಿಸಿ ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು. ಇವುಗಳಲ್ಲಿ ಸುಧಾರಿತ ಸೌದೆಯ ಒಲೆಗಳು, ಗೋಬರ್ ಅನಿಲ ದಿಂದ ಅಡುಗೆ ಮಾಡುವುದು, ದೀಪ ಉರಿಸುವ ತಂತ್ರಜ್ಞಾನ ಇತ್ಯಾದಿ.
ಈವರೆಗೆ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಟ್ಟದ ಪ್ರಬಂಧಗಳು ಹಾಗೂ ಪರಿಸರ ಅಧ್ಯಯನ ಕುರಿತಂತೆ ಎಂಟು ಕೃತಿಗಳನ್ನು ರಚಿಸಿರುವ ಪ್ರೊ. ಮಾಧವ ಗಾಡ್ಗಿಲ್ ಅವರು ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯದ ವಿಜ್ಞಾನ ಮತ್ತು ಪರಿಸರ ಕುರಿತ ಸಲಹೆಗಾರರಾಗಿ, ಯೋಜನಾ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಗಾಡ್ಗಿಲ್ ನೇತೃತ್ವದಲ್ಲಿ ಒಂದು ಅಧ್ಯಯನ ಸಮಿತಿಯನ್ನು ರಚಿಸಿತ್ತು. ಅತ್ಯಂತ ಆಳವಾದ ಜ್ಞಾನ, ಮತ್ತು ಖಚಿತ ಅಂಕಿ ಅಂಶಗಳ ಆಧಾರಿತ ಇವರ ಅಧ್ಯಯನ ವರದಿಯನ್ನು ಹಿಂದಿನ ಎನ್.ಡಿ.ಎ. ಸರ್ಕಾರವು 2013 ರಲ್ಲಿ  ತಿರಸ್ಕರಿಸಿತು. ನಂತರ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚನೆ ಮಾಡಿ, ಆ ವರದಿಯನ್ನು ಸ್ವೀಕರಿಸಿತು. ಆದರೆ, ಕಸ್ತೂರಿ ರಂಗನ್ ವರದಿ ಕುರಿತು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ.
 ತಮ್ಮ ವರದಿ ತಿರಸ್ಕೃತವಾದ ನಂತರ ಕೇಂದ್ರ ಸರ್ಕಾರದ ಎಲ್ಲಾ ಸಲಹಾ ಸಮಿತಿಗಳಿಗೆ ರಾಜಿನಾಮೆ ನೀಡಿದ ಪ್ರೊ. ಮಾಧವ ಗಾಡ್ಗೀಲ್ ಇದೀಗ ತಮ್ಮ ನಿವೃತ್ತಿಯ ವಯಸ್ಸನ್ನು ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಓಡಾಡುತ್ತಾ ಕಳೆಯುತ್ತಿದ್ದಾರೆ. ಗೋವಾ ರಾಜ್ಯದಲ್ಲಿ ಗಣಿಗಾರಿಕೆಯಿಂದಾಗಿ ಅಲ್ಲಿನ ಅರಣ್ಯ ಮತ್ತು ಸಮುದ್ರ ಮತ್ತು ಕಡಲಜೀವಿಗಳ ಮೇಲಾಗುತ್ತಿರುವ ಪರಿಣಾಮವನ್ನು ಸ್ಥಳಿಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಸಾಮಾನ್ಯರಿಗೆ ವಿವರಿಸುತ್ತಾ ಜನರನ್ನು ಸಂಘಟಿಸುತ್ತಿದ್ದಾರೆ. ಅದೇ ರೀತಿ ಕೇರಳ ರಾಜ್ಯದಲ್ಲಿಯೂ ಕೂಡ ಅಣೆಕಟ್ಟುಗಳ ನಿರ್ಮಾಣ, ಹೆದ್ದಾರಿಯ ಅಗಲೀಕರಣ, ವಿದ್ಯುತ್ ಯೋಜನೆಗಳು, ಟೌನ್ ಶಿಪ್ ಗಳಿಂದ ಪಶ್ಚಿಮ ಘಟ್ಟಕ್ಕೆ ಆಗಿರುವ ದುರಂತವನ್ನು ವಿವರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸರ್ಕಾರದಿಂದ ಪದ್ಮಶ್ರಿ, ಪದ್ಮಭೂಷಣ ಪ್ರಶಸ್ತಿ,  ಹಾಗೂ ಶಾಂತಿ ಸ್ವರೂಪ್ ಭಟ್ನಾಗರ್  ವಿಜ್ಞಾನಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಗಾಡ್ಗಿಲ್ ಅವರಿಗೆ 2003 ರಲ್ಲಿ ಪರಿಸರ ಕ್ಷೇತ್ರದಲ್ಲಿನ ಅಧ್ಯಯನ ಮತ್ತು ಸೇವೆಗಾಗಿ “ ವೋಲ್ವೊ ಪರಿಸರ ಅಂತರಾಷ್ಟ್ರೀಯ ಪ್ರಶಸ್ತಿ” ಲಭ್ಯವಾಗಿತ್ತು. ಇದೀಗ  ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಅಂತರಾಷ್ಟ್ರಿಯ ಪ್ರಶಸ್ತಿಯ ಗರಿಯೊಂದು ದೊರಕಿದಂತಾಗಿದೆ.
ಇನ್ನು, ಕಳೆದ ಮೂರು ದಶಕಗಳಿಂದ ( 1984) ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದುದ್ದಕ್ಕೂ ಓಡಾಡುತ್ತಾ, ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವ ಉತ್ತರ ಪ್ರದೇಶದ ಮೂಲದ ರಾಜೇಂದ್ರ ಸಿಂಗ್ ರವರ ಬದುಕು ಮತ್ತು ಸಾಧನೆ ಈ ತಲೆಮಾರಿಗೆ ಆದರ್ಶನೀಯವಾದುದು.

ರಾಜೇಂದ್ರ ಸಿಂಗ್ ರು 1959 ರಲ್ಲಿ ಉತ್ತರ ಪ್ರದೇಶದ ಭಾಗಪತ್ ಜಿಲ್ಲೆಯ ದೌಲ ಎಂಬ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದವರು. ಗಾಂಧೀಜಿ ಅನುಯಾಯಿ ರಮೇಶ್ ಶರ್ಮ ಎಂಬುವರು  ಮೀರತ್ ನಗರಕ್ಕೆ ಆಗಮಿಸಿ, ಸುತ್ತ ಮುತ್ತಲಿ ಹಳ್ಳಿಗನ್ನು ಗಾಂಧೀಜಿಯ “ ಗ್ರಾಮ ಸ್ವರಾಜ್ಯ” ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದನ್ನು ಕಣ್ಣಾರೆ ಕಂಡ ರಾಜೇಂದ್ರ ಸಿಂಗರು ಭಾಲ್ಯದಲ್ಲಿಯೆ ಗಾಂಧೀಜಿ ಪರಿಕಲ್ಪನೆಯ ಮಾದರಿಯಲ್ಲಿ ಅಭಿವೃದ್ಧಿಯ ಕನಸು ಕಂಡವರು. ಹಿಂದಿ ಸಾಹಿತ್ಯದಲ್ಲಿ ಅಲಹಬಾದ್ ವಿ.ವಿ.ಯಿಂದ ಸ್ನಾತಕೋತ್ತರ ಪದವಿ ಮತ್ತು ಆರ್ಯುವೇದ ವಿಜ್ಞಾನದಲ್ಲಿ ಪದವಿ ಪಡೆದ ರಾಜೇಂದ್ರ ಸಿಂಗ್ ರವರು ಕೇಂದ್ರ ಸರ್ಕಾರದ ಉದ್ಯೋಗಿಯಾಗಿ ನೇಮಕಗೊಂಡು, ರಾಜಸ್ಥಾನದ ಜೈ ಪುರಕ್ಕೆ ಬಂದರು. ರಾಜಸ್ಥಾನದ ನೀರಿನ ಬವಣೆ, ಅಲ್ಲಿನ ರೈತರ ಗೋಳು,  ಪಡಿಪಾಟಲು ಇವುಗಳಿಗೆ ಸಾಕ್ಷಿಯಾದ ಅವರು 1984 ರಲ್ಲಿ ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿ, ತಮ್ಮಲ್ಲಿದ್ದ ಗೃಹಪಯೋಗಿ ವಸ್ತುಗಳನ್ನು 23 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ, ಖಾದಿ ಜುಬ್ಬ, ಪೈಜಾಮ ಮತ್ತು ಹೆಗಲ ಮೇಲಿನ ಒಂದು ಕೈ ಚೀಲದೊಂದಿಗೆ ಆಳ್ವಾರ್ ಜಿಲ್ಲೆಗೆ ಆಗಮಿಸಿ ಬದುಕ ತೊಡಗಿದರು. ಜೀವನ ನಿರ್ವಹಣೆಗೆ ಆರ್ಯುವೇದ ವೈದ್ಯರಾಗಿ ಕೆಲಸ ಮಾಡತ್ತಾ,  ರಾಜಸ್ಥಾನದ ಹಳ್ಳಿಗಳಲ್ಲಿ ಓಡಾಡುತ್ತಾ, “ ತರುಣ್ ಭಾರತ್” ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿದರು. ಅದರ ಮೂಲಕ ನದಿ ಮತ್ತು ಕಾಲುವೆಗಳಿಗೆ ಒಡ್ಡುಗಳನ್ನು ನಿರ್ಮಾಣ ಮಾಡುವುದರ ಮೂಲಕ ಅಲ್ಲಿನ ಹಳ್ಳಿಗಳಲ್ಲಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದರ ಮೂಲಕ ಯಶಸ್ಸು ಸಾಧಿಸಿದರು.  ಗ್ರಾಮ ಮಟ್ಟದಲ್ಲಿ ರೈತರ ಸಮಿತಿಗಳನ್ನು ನಿರ್ಮಿಸಿ, ಅವುಗಳ ಮೂಲಕ ನೀರಿನ ಹಂಚಿಕೆ ಮತ್ತು ಬೆಳೆಯ ಬಹುದಾದ ಬೆಳೆಗಳ ಕುರಿತು ಸಹಕಾರ ತತ್ವದಡಿಯ ಜ್ಞಾನವನ್ನು ಮೂಡಿಸಿದರು.  ಒಂದೆಡೆ ಜಲಮೂಲಗಳ ಸಂರಕ್ಷಣೆಗೆ ಒತ್ತು ಕೊಡುತ್ತಾ, ಇನ್ನೊಂದು ಕಡೆ ಅರಣ್ಯ ಅಭಿವೃದ್ಧಿಗೂ ಒತ್ತು ನೀಡತೊಡಗಿದರು. ಇದರ ಫಲವಾಗಿ ರಾಜಸ್ಥಾನದ ರೈತರ ಬದುಕು ಹಸನಾಯಿತು. ರಾಜೇಂದ್ರಸಿಂಗರ  ಈ ಜಲ ಸಂರಕ್ಷಣೆಯ ಅಭಿಯಾನ ಭಾರತದ ಇತರೆ ರಾಜ್ಯಗಳ ರೈತರಿಗೂ ಮಾದರಿಯಾಯಿತು.



ಭಾರತದ ಸ್ಥಳಿಯ ಸಂಘ ಸಂಸ್ಥೆಗಳಿಂದ ನೂರಕ್ಕೂ ಹೆಚ್ಚು ಪ್ರಶಸ್ತಿಗೆ ಪಾತ್ರರಾಗಿರುವ ರಾಜೇಂದ್ರ ಸಿಂಗ್ ಅವರಿಗೆ ಭಾರತದ ಪ್ರತಿಷ್ಟಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ( 2005 ರಲ್ಲಿ) ಮತ್ತು 2001 ರಲ್ಲಿ ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕರೆಯುವ ಮ್ಯಾಗ್ಸಸೆ ಪ್ರಶಸ್ತಿಗಳು ದೊರಕಿವೆ. ಇದೀಗ  “ ನೀರಿನ ನೊಬೆಲ್ ಪ್ರಶಸ್ತಿ” ಎಂದು ಕರೆಯಲಾಗುವ “ಸ್ಟಾಕ್ ಹೊಂ ವಾಟರ್ ಪ್ರೈಜ್” ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಲಭ್ಯವಾಗಿದೆ. ಈ ಇಬ್ಬರು ಭಾರತದ ಪರಿಸರ ಸಂತರಿಗೆ ದೊರೆತಿರುವ ಮನ್ನಣೆಗಳು, ಈ ನೆಲದಲ್ಲಿ ಇನ್ನೂ ಜೀವಪರ ಕಾಳಜಿಗೆ ಮಹತ್ವವಿದೆ ಎಂಬುದನ್ನು ದೃಢ ಪಡಿಸುತ್ತಿದೆ.


ಕೊನೆಯ ಮಾತು- ಪಶ್ಚಿಮ ಘಟ್ಟ ಗಳ ಇತಿಹಾಸ ಮತ್ತು ಪ್ರೊ. ಮಾಧವ ಗಾಡ್ಗೀಲ್ ಹಾಗೂ ಕಸ್ತೂರಿ ರಂಗನ್ ರವರ ವರದಿಯ ಬಗ್ಗೆ  ಹೆಚ್ಚಿನ ಮಾಹಿತಿಗಾಗಿ ಇದೇ ಬ್ಲಾಗಿನ 2013 ರ ಮೇ ತಿಂಗಳಿನಲ್ಲಿ ಪ್ರಕಟವಾದ  ಲೇಖನಗಳ ಮೇಲೆ ಕ್ಲಿಕ್ ಮಾಡಿದರೆ, ಮೂರು ಲೇಖನಗಳು ದೊರೆಯುತ್ತವೆ.

1 ಕಾಮೆಂಟ್‌: