( ತಿರುವಯ್ಯಾರ್ ನಲ್ಲಿರುವ ಬೆಂಗಳೂರು ನಾಗರತ್ನಮ್ಮನವರ ಪ್ರತಿಮೆ)
‘ನೋಡೋ
ಎಷ್ಟು ಚೆನ್ನಾಗಿ ಹಾಡ್ತಾಳೆ, ಸ್ವರ ಪ್ರಸ್ತಾರ, ಆಲಾಪನೆ
ಎಲ್ಲ ಎಷ್ಟು ಸುಪರ್ಬ್’ ಎಂದು
ಉದಯೋನ್ಮುಖ ಹಾಡುಗಾರ್ತಿಯೊಬ್ಬಳ ಬಗ್ಗೆ, ಪಿಟೀಲು ಕಲಿಯುತ್ತಿರುವ
ನನ್ನ ಸೋದರಳಿಯನನ್ನು ಕರೆದು ಹೇಳಿದೆ. ‘ಥೂ..ಇದು ಸುಪರ್ಬಾ...ಹೋಗತ್ತೆ.. ಒತ್ತಿ
ಒತ್ತಿ ಆಲಾಪನೆ ಮಾಡ್ತಾಳೆ.. ಅವಳ
ಹಾಡಿನಲ್ಲಿ ಕನ್ನಡ ಆಕ್ಸೆಂಟ್ ಇದೆ.
ಇದು ಚೆನ್ನಾಗಿದೆಯಾ?’ ಎಂದು ಹೇವರಿಕೆಯಿಂದ ಹೇಳಿದ.
ಹಾಡಿನಲ್ಲಿ
ಕನ್ನಡ ಆಕ್ಸೆಂಟ್! ಇದುವರೆಗೂ ಸಂಗೀತಕ್ಕೆ ಭಾಷೆಯೆಂಬುದಿಲ್ಲ ಎಂಬುದನ್ನು ಕೇಳಿಯೇ ಬೆಳದವಳು ನಾನು.
ಈಗ ನನ್ನ ಸೋದರಳಿಯ ಇದಕ್ಕೆ
ಕನ್ನಡ ಆಕ್ಸೆಂಟ್ ಸೇರಿಸುತ್ತಿದ್ದಾನೆ. ಆಲಾಪನೆಯೆನ್ನುವುದು, ತೆಳುವಾದ ಬಳಕುವ ಬಳ್ಳಿಯ
ಮೇಲೆ ಹಕ್ಕಿ ಕೂತು ಜೀಕಿದಂತೆ,
ಇಲ್ಲವೇ ತೆರೆಗಳ ಏರಿಳಿತಗಳ ಮೇಲೆ
ನಾವೆ ಹಾಯುವಂತೆ ಇರಬೇಕು ಎಂದರೆÉ ಒಪ್ಪಬಹುದೇನೋ
ಆದರೆ ಕರ್ನಾಟಕ ಸಂಗೀತದಲ್ಲಿ ಕನ್ನಡದ
ಗಂಧ ಇರುವುದು ಕಳಪೆ ಎಂದರೆ
ಅದನ್ನು ಒಪ್ಪುವುದು ಹೇಗೆ?
ಕಳೆದ
ಎರಡು ವರುಷಗಳ ಹಿಂದಿನ ಈ
ಮಾತು ಥಟ್ಟನೆ ಹೃದಯಕ್ಕೆ ಕೂರಂಬುವಿನಂತೆ
ನಾಟಿದ್ದು ಜಗದೀಶ್ ಕೊಪ್ಪ ಅವರು
ಬರೆದಿರುವ ‘ಗಟ್ಟಿ ದನಿಯ ದಿಟ್ಟ
ಕಲಾವಿದೆ; ಬೆಂಗಳೂರು ನಾಗರತ್ನಮ್ಮ’ನನ್ನು ಓದಿದಾಗಲೇ. ಪುರಂದರ ದಾಸರು ಕರ್ನಾಟಕ
ಸಂಗೀತ ಪಿತಾಮಹರಾದರೂ ಕರ್ನಾಟಕ ಸಂಗೀತದಲ್ಲಿ ಇಂದಿಗೂ
ರಾರಾಜಿಸುತ್ತಿರುವವರು ತ್ಯಾಗರಾಜರು, ಮುತ್ತುಸ್ವಾಮಿದೀಕ್ಷಿತರು ಹಾಗೂ ಶ್ಯಾಮಾಶಾಸ್ತ್ರಿಗಳಂತಹ
ರತ್ನತ್ರಯರೇ. ಸಂಗೀತ ಕಚೇರಿಗಳಲ್ಲಿ ರಾಗ
ತಾನ ಪಲ್ಲವಿಯೆಲ್ಲ ಮುಗಿದ ಮೇಲೆ ಕಚೇರಿಯ
ಕೊನೆಗೆ ಕೇವಲ ಕಾಟಾಚಾರಕ್ಕೆಂಬಂತೆ ಸೇರ್ಪಡೆಯಾಗುತ್ತಿದ್ದ
ದಾಸರ ಪದಗಳನ್ನು, ಅಂದು ಎಂ. ಎಲ್.
ವಸಂತಕುಮಾರಿ, ಮಹಾರಾಜಪುರಂ ಸಂತಾನಂರಂತಹ ಸಂಗೀತ ಕಲಾವಿದರು ಬಹುಶಃ
ಪ್ರಸಿದ್ಧಿಗೆ ತಾರದಿದ್ದರೆ ಕನ್ನಡದ ದಾಸರು ಮರೆತೇ
ಹೋಗುತ್ತಿದ್ದರೇನೋ. (ಸಂತಾನಂ ಅವರ ಬಾಯಲ್ಲಿ
ಶುದ್ಧಧನ್ಯಾಸಿ ರಾಗದ ‘ನಾರಾಯಣ ನಿನ್ನ
ನಾಮದ ಸ್ಮರಣೆಯ’, ಇಲ್ಲವೇ ಜನಸಮ್ಮೋಹಿನಿ ರಾಗದ
‘ಗೋವಿಂದಾ ನಿನ್ನ ನಾಮವೆ ಚೆಂದ’
ಕೃತಿಗಳನ್ನು ಕೇಳಬೇಕು ! ಅದರ ಆಳ ಅಗಲ,
ವಿಲಂಬ ಗತಿ ಇನ್ನಿಲ್ಲದಂತೆ ನಮ್ಮನ್ನು
ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗಿಬಿಡುತ್ತದೆ).
ತಮಿಳರು
ಎಷ್ಟರ ಮಟ್ಟಿಗೆ ನಮ್ಮ ತಲೆಯನ್ನು
ತಿಕ್ಕಿದ್ದಾರೆಂದರೆ ನಮ್ಮ ಸಂಗೀತಗಾರರ ಬಗ್ಗೆ,
ನಮ್ಮ ಕೃತಿಗಳ ಬಗ್ಗೆ ನಮಗೇ
ಕೀಳರಿಮೆ ಉಂಟಾಗುವಂತೆ ಮಾಡಿದ್ದಾರೆ. ಮದರಾಸಿನಲ್ಲಿ ನಡೆಯುವ ಮಾರ್ಗಳಿ ಮಾಸದ
ಸಂಗೀತೋತ್ಸವದಲ್ಲಿ ಸೈ ಎನಿಸಿಕೊಂಡರೆ ಮಾತ್ರ
ಜನ್ಮ ಸಾರ್ಥಕವಾಗುವುದೆಂದು ಭಾವಿಸುತ್ತಾರೆ. ಭಾಷೆಯನ್ನು ಮೀರಿದ ಸಂಗೀತವನ್ನು ತಮಿಳು
ಕಣ್ಣಿನಿಂದ ಮಾತ್ರ ನೋಡುವ ಭ್ರಮೆಯನ್ನು
ಹರಿಯಬಿಡಲಾಗಿದೆ ಎಂಬ ಸತ್ಯವನ್ನು ಬಹಳ
ಅಧ್ಯಯನ ಪೂರ್ಣವಾಗಿ ಜಗದೀಶ ಕೊಪ್ಪ ತಮ್ಮ
ಕೃತಿಯಲ್ಲಿ ಬಿಚ್ಚಿಡುತ್ತಾರೆ.
(ಪುಟ್ಟ ದೇಗುಲದಂತಿರುವ ನಾಗರತ್ನಮ್ಮನವರ ಸಮಾಧಿ. ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಸಮಾಧಿ ಮುಂದೆ ಪರದೆಯನ್ನು ಹಾಕಿ, ಮುಂದಿರುವ ಎರಡು ವೇದಿಕೆಗಳಲ್ಲಿ ಸಂಗೀತ ಕಛೇರಿಯನ್ನು ನಡೆಸಲಾಗುತ್ತಿದೆ)
ಮಹಾರಾಜಪುರಂ
ಸಂತಾನಂ ಅವರಂತಹ ಹಿರಿಯ
ವಿದ್ವಾಂಸರೂ ಮೈಸೂರು ವಾಸುದೇವಾಚಾರ್ಯರ ಸಿಂಹೇಂದ್ರ
ಮಾಧ್ಯಮದ ಕೃತಿಯನ್ನು ‘ನಿನ್ನೇ ನಮ್ಮಿತಿನಯ್ಯಾ’ (ನಿನ್ನೇ
ನಂಬಿದೆನಯ್ಯಾ) ಎಂದು ಹಾಡುತ್ತಾರೆ. ಅದ್ಭುತ
ಕಲಾವಿದ ಟಿ.ಎಮ್. ಕೃಷ್ಣನ್
ಕೂಡ ‘ಪುಂಗುಳಲನೂದುತಾ ಬಾರಯ್ಯಾ’ (ಪೊಂಗೊಳಲನೂದುತಾ) ಎಂದು ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.
ಹೀಗೆ ಪಟ್ಟಿ ಮಾಡುತ್ತಾ ಹೋದರೆ
ನೂರಾರು ಉದಾಹರಣೆಗಳು ಸಿಗಬಹುದು. ಕ, ಗ, ಚ,
ತ ವ್ಯತ್ಯಾಸಗಳೇ ಇಲ್ಲದ
ತಮಿಳು ನಾಲಗೆಯಲ್ಲಿ ಕನ್ನಡದ ಶಬ್ದಗಳು ಅವು
ಎಷ್ಟೇ ಸುಶ್ರಾವ್ಯವಾದರೂ ಅಪಶಬ್ದಗಳಾಗಿ ಹೊಮ್ಮುವಾಗ, ‘ಸುಖ’ದÀ ತುತ್ತತುದಿಗೆ
ಏರುತ್ತಿರುವ ಹಂತದಲ್ಲಿ ಯಾರೋ ಬಂದು ಹೊರಗೆ
ಬಾಗಿಲು ಬಡಿದಂತೆ ಅನುಭವ ಭಂಗವಾಗುತ್ತದೆ. ಸ್ವರ
ಶುದ್ಧಿ, ರಾಗತಾಳಗಳ ಶುದ್ಧಿ ಇವುಗಳು ಸಂಗೀತದ
ಆತ್ಮವೆಂಬುದು ನಿಜ. ಆದರೆ ಸಾಹಿತ್ಯ
ಶುದ್ಧಿ ಇಲ್ಲದಿದ್ದರೆ ಶಿವಾನುಭವವೆಂಬುದು ಅರ್ಥವನ್ನು ಕಳೆದುಕೊಂಡ ವಾಕ್ಕಿನಂತೆ ಅನಾಥವಾಗಿಬಿಡುವುದಿಲ್ಲವೇ?
ರುದ್ರಪಟ್ಟಣ
ಹಾಸನ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ.
ಆದರೆ ಅದು ಒಂದು ಕಾಲದಲ್ಲಿ
ಸಂಗೀತದ ತವರು ಮನೆಯಾಗಿತ್ತು. ಪ್ರತಿಮನೆಯಲ್ಲಿಯೂ
ಹೆಣ್ಣುಮಕ್ಕಳು ದೋಸೆ, ಇಡ್ಲಿಗೆ ರುಬ್ಬುವಾಗ
ವೀರೀಬೋಣಿಯಂತಹ ಬಹು ಕ್ಲಿಷ್ಟಕರವಾದ, ಸಂಕೀರ್ಣವಾದ
ವರ್ಣವನ್ನು ಹಾಡುತ್ತಿದ್ದರಂತೆ. ಆರ್ ಕೆ. ಪದ್ಮನಾಭ
ಮತ್ತು ಪಂಗಡದವರು ಪ್ರತಿವರ್ಷ ಅನೇಕ ಸಂಗೀತ ವಿದ್ವಾಂಸರನ್ನು
ಆಮಂತ್ರಿಸಿ ಸಂಗೀತ ಸಮ್ಮೇಳನವನ್ನು ಮಾಡುವುದರ
ಮೂಲಕ ಈಗ ಆ ಹಳ್ಳಿಯನ್ನು
ಕರ್ನಾಟಕದ ತಿರುವಯ್ಯಾರಾಗಿ ಮಾರ್ಪಡಿಸುತ್ತಿದ್ದಾರೆ. ಈಗಲೂ ಕೂಡ ಕೇವಲ
ಬ್ರಾಹ್ಮಣ ಪರಿವಾರದವರು ಮಾತ್ರವಲ್ಲದೇ ರೈತಾಪಿ ಜನಗಳೂ ಬಂದು
ಅಲ್ಲಿ ಜರಗುವ ಸಂಗೀತ ಸಮ್ಮೇಳನದಲ್ಲಿ
ಕಿಕ್ಕಿರಿದಿರುತ್ತಾರೆ. ಅಪ್ಪಟ ಹಳ್ಳ್ಳಿಗರಂತೆ ಕಾಣುವ
ಆ ಸ್ತ್ರೀ ಪುರುಷರು
ಕೇಳಲು ಬಯಸುವುದು ದೇವರನಾಮದಂತಹ ಲಘು ಪ್ರಸ್ತುತಿಗಳನ್ನಲ್ಲ ಬದಲಾಗಿ
ವಿದ್ವತ್ ಪೂರ್ಣವಾದ ರಾಗ ತಾಳ ಪಲ್ಲವಿಗಳನ್ನು.
ಕರ್ನಾಟಕದಲ್ಲಿ ನಡೆಯುವ ಸಂಗೀತ ಕಚೇರಿಗಳ,
ಕಲಾವಿದರ ವಾಸ್ತವ ಇದು. ಆದರೆ
ತಮಿಳುನಾಡು ಆ ವಾಸ್ತವವನ್ನು ಮರೆಮಾಚಿದೆ.
ನಾಲ್ವಡಿ ಕೃಷ್ಣರಾಜ ಒಡೆಯರು ಸ್ವತಃ sಸಂಗೀತ
ಕಲಾವಿದರಾಗಿದ್ದು ಕೊಳಲು ಮತ್ತು ಪಿಟೀಲುಗಳೇ
ಅಲ್ಲದೇ ಒಟ್ಟು ಎಂಟು ವಾದ್ಯಗಳನ್ನು
ಬಲ್ಲವರಾಗಿದ್ದರು. ಅವರಿಗೆ ಸಂಗೀತದ ಬಗ್ಗೆ
ಇದ್ದ ಪ್ರೇಮ, ಕಲಾವಿದರನ್ನು ಅವರು
ಪೋಷಿಸುತ್ತಿದ್ದ ರೀತಿ ಎಲ್ಲವೂ ಜನಜನಿತವಾದುದು.
ನಾಚ್ ವಿರೋಧಿ ಚಳವಳಿಯ ಕಾವಿಗೆ
ಸಿಕ್ಕಿ ದೇವದಾಸಿ ಕಲಾವಿದೆಯರೆಲ್ಲಾ ಬೀದಿ
ಪಾಲಾಗುವ ಸ್ಥಿತಿಗೆ ಬಂದಾಗ ಅವರಿಗೆ ತಮ್ಮ
ಅರಮನೆಯಲ್ಲಿ ಹಾಡಲು ಅವಕಾಶ ಕೊಟ್ಟರು.
ಅಷ್ಟೇ ಏಕೆ ಕಲ್ಕತ್ತಾ ಮೂಲದ,
ತನ್ನ ಹಾಡನ್ನು ಮೊತ್ತಮೊದಲು ಧ್ವನಿಮುದ್ರಿಕೆಗೆ
ನೀಡಿದ ಗೌಹರ್ ಜಾನ್ಳಿಗೂ
ಅವರು ಆಶ್ರಯವಿತ್ತವರು.. ಅವಳ
ಸಮಾಧಿ ಇಂದಿಗೂ ಚಾಮುಂಡಿ ಬೆಟ್ಟಕ್ಕೆ
ಹೋಗುವ ಹಾದಿಯಲ್ಲಿದೆ ಎಂದು ಅವಳ ಬಗ್ಗೆ
ಕೃತಿ ಬರೆದ ವಿಕ್ರಮ್ ಸಂಪತ್
ಹೇಳುತ್ತಾರೆ. (ಮೈ ನೇಮ್ ಈಸ್
ಗೌಹರ್ ಜಾನ್) ಮದರಾಸಿನಲ್ಲಿ
ಸಂಗೀತ ಸಭೆಯ ಕಟ್ಟಡವನ್ನು ಕಟ್ಟುವಾಗ
ಒಡೆಯರು ನೀಡಿದ ಸಹಾಯ, ಕೊಡುಗೆಗಳನ್ನಾಗಲೀ,
ತಿರುವಯ್ಯೂರಿನಲ್ಲಿ ನಡೆಯುವ ತ್ಯಾಗರಾಜ ಆರಾಧನೆಗೆ
ಬಿಡಾರಂ ಕೃಷ್ಣಪ್ಪನವರು ಒದಗಿಸಿದ ಸಹಕಾರªನ್ನಾಗಲೀ ತಮಿಳರು ಉಲ್ಲೇಖಿಸುವುದಿಲ್ಲ.
( ನಾಗರತ್ನಮ್ಮನವರು ನಿರ್ಮಿಸಿದ ಶ್ರೀ ತ್ಯಾಗರಾಜರ ಸಮಾಧಿಯ ಮೇಲಿನ ದೇವಸ್ಥಾನ)
ನಾಗರತ್ನಮ್ಮನವರು ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ
ಮುಳ್ಳುಕಂಟಿಗಳಿಂದ ಮುಚ್ಚಿಹೋಗಿದ್ದ ತ್ಯಾಗರಾಜರ ಸಮಾಧಿಯ ಜೀರ್ಣೋದ್ಧಾರಕ್ಕೆ ಕೈ
ಹಾಕಿದಾಗ, ತಮಿಳು ‘ಕಚ್ಚಿ ಕಚ್ಚಿ’
ಗಳ ನಡುವಿನ ಹೋರಾಟದ ನಡುವೆ
ನುಗ್ಗು ನುರಿಯಾದರೂ ಹಟ ಬಿಡದೆ ಅನೇಕ
ಪರ್ಯಾಯಗಳನ್ನು ತಮ್ಮ ಜಾಣತನದಿಂದ ಕಂಡುಕೊಂಡು
ಸಮಾಧಿಯನ್ನು ಕಟ್ಟಿ ಪೂರೈಸಿದ ನಾಗರತ್ನಮ್ಮನವರ
ಎಣೆಯಿಲ್ಲದ ಉತ್ಸಾಹ, ಧೃತಿಗೆಡದ ಸಂಕಲ್ಪ
ಬಲವನ್ನಾಗಲೀ, ಅವರು ನೀಡಿದ ಅನುಪಮ
ಕೊಡುಗೆಯನ್ನಾಗಲೀ ತಮಿಳರು ಸ್ಮರಿಸಿಕೊಳ್ಳುವುದಿಲ್ಲ, ಎಂದು ಲೇಖಕರು
ಬರೆದಿರುವುದು, ಕರ್ನಾಟಕ ಸಂಗೀತÀದ
ಪೇಟೆಂಟನ್ನು ತಾವು ಪಡೆದುಕೊಂಡಿರುವಂತೆ ವರ್ತಿಸುವ
ನೆರೆರಾಜ್ಯದ ಬಗ್ಗೆ ಓದುಗರಲ್ಲಿ ಕ್ರೋಧವನ್ನು
ಉುಂಟುಮಾಡುತ್ತದೆ- ಹಾಗೆ ನಮ್ಮವರ ನಿರಭಿಮಾನ
ಸ್ವಭಾವದ ಬಗ್ಗೆ ವಿಷಾದವನ್ನೂ.
ಕಾವೇರಿಗೆ ಎಲ್ಲೆಗಳಿಲ್ಲ ಪ್ರವಾಹ ಉಕ್ಕಿ ಹರಿದರೆ
ಅವಳನ್ನು ಯಾವ ಒಡ್ಡುಗಳು ತಡೆದಾವು?
ಹಾಗೆಯೇ ಸಂಗೀತಕ್ಕೂ. ಇಂತಹ ಎಲ್ಲೆಗಳನ್ನು ಮೀರಿದ,
ಭಾಷೆಯ ಗೋಡೆಗಳನ್ನು ಒಡೆದು ವಿಸ್ತರಿಸಬಲ್ಲ ಸಂಗೀತದ
ವಿಸ್ತಾರಗತಿಗೆ ಬೇಲಿ ಹಾಕುವ ಹುಂಬ
ಪ್ರಯತ್ನಕ್ಕೆ ವಿಷಾದವೂ ಉಂಟಾಗುತ್ತದೆ. ಇದು
ಕೇವಲ ಭೌಗೋಳಿಕ ಗೆರೆಗಳಿಗೆ ಕಟ್ಟುವ
ಗೋಡೆ ಮಾತ್ರವಲ್ಲ, ಶ್ರೇಣೀಕರಣದಿಂದ ಸಾಮಾಜವನ್ನು ಛಿದ್ರಗೊಳಿಸುವ, ಹೆಣ್ಣು ಗಂಡೆಂಬ ಕುರುಹಗಳೇ
ಇಲ್ಲದ ಆತ್ಮಗಳ ನಡುವೆ ಭೇದ
ಕಲ್ಪಿಸುವ ಗೋಡೆ ಕೂಡ ಹೌದು.
ಮೇಲಿನ
ಎಲ್ಲ ಕಾರಣಕ್ಕಾಗಿಯೇ ‘ಬೆಂಗಳೂರು ನಾಗರತ್ನಮ್ಮ’ ಬಹಳ ಮಹತ್ವದ ಕೃತಿ.
ಬೆಂಗಳೂರು ನಾಗರತ್ನಮ್ಮ ಎಂದ ಕೂಡಲೇ ನನಗೆ
ನೆನಪಿಗೆ ಬರುವುದು ಮುಂಬಯಿನ ಮೈಸೂರು
ಪ್ರಿಂಟರ್ಸ್‍ನ ಮಾಲೀಕರಾದ ಜಿ.ವಿ. ರಂಗಸ್ವಾಮಿಯವರು. ಅವರು
ಹುಡುಗನಾಗಿದ್ದಾಗ ಡಿ.ವಿ.ಜಿ.ಯವರ ಮನೆಗೆ ಹೋಗುತ್ತಿದ್ದರಂತೆ. ಡಿ.ವಿ.ಜಿ.ಯವರ
ಒಡನಾಟದ ಅನೇಕ ನೆನಪುಗಳು ಅವರ
ಬಳಿ ಇದ್ದವು. ಅವುಗಳನ್ನೆಲ್ಲಾ ದಾಖಲು
ಮಾಡಿಕೊಳ್ಳಬೇಕೆನ್ನುವಷ್ಟರಲ್ಲೇ
ಅವರು ತೀರಿಕೊಂಡರು. ನಾಗರತ್ನಮ್ಮನವರ ಮಾತು ಬಂದಾಗಲೆಲ್ಲಾ “ಆಹಾ...ಮುಂಡೆ ಹ್ಯಾಗಿದ್ಲೂಂತೀಯಾ” ಎಂದು
ರಂಗಸ್ವ್ವಾಮಿಯವರ ಬಳಿ ಡಿ.ವಿ.ಜಿಯವರು ಹೇಳುತ್ತಿದ್ದರಂತೆ. (ಮುಂಡೆ,
ಮುಂಡೇದು ಅನ್ನುವ ಶಬ್ದಗಳು ಮುದ್ದು
ಉಕ್ಕಿ ಬಂದಂತಹ ಸಂದರ್ಭಗಳಲ್ಲಿ, ಬ್ರಾಹ್ಮಣರ
ಮನೆಗಳಲ್ಲಿ ಬಳಸುವ ಶಬ್ದಗಳು ಎನ್ನುವ
ಗ್ರಹಿಕೆಯಿಂದ ಮಾತ್ರ ಇದನ್ನು ಗಮನಿಸಬೇಕು).
ನಾಗರತ್ನಮ್ಮ ಮೈತುಂಬಾ ವಜ್ರ ವೈಢೂರ್ಯಗಳನ್ನು
ಧರಿಸಿಕೊಂಡು, ಕಂಚಿ ಸೀರೆಯನ್ನು ಉಟ್ಟು,
ಸಾಕ್ಷಾತ್ ಸರಸ್ವತಿ, ಲಕ್ಷ್ಮಿಯರನ್ನೇ ಆವಾಹಿಸಿಕೊಂಡು ಕುದುರೆ ಸಾರೋಟಿನಿಂದ ರಾಜಮಾತೆಯಂತೆ
ಸಂಗೀತ ಕಚೇರಿಗಳಿಗೆ ಬಂದಿಳಿಯುತ್ತಿದ್ದ ದೃಶ್ಯವನ್ನು ಜಗದೀಶ ಕೊಪ್ಪ ಅವರು
ಕೊಡುವಾಗ ಡಿ.ವಿ.ಜಿ
ಯವರ ಮಾತು ಕಣ್ಣಮುಂದೆ ಕುಣಿಯುತ್ತದೆ.
ಆದರೆ ನಾಗರತ್ನಮ್ಮ ಎಲ್ಲಾ ಸಂಪತ್ತನ್ನು ತಮ್ಮ
ಆರಾಧ್ಯ ದೈವವಾದ ತ್ಯಾಗರಾಜರ ಸೇವೆಗೆ
ತ್ಯಾಗಮಾಡಿದರು ಎಂಬುದು ಬಹಳ ದೊಡ್ಡ
ಮಾತು.
( ನಾಗರತ್ನಮ್ಮ ಮತ್ತು ತ್ಯಾಗರಾಜರ ಸಮಾಧಿಯ ಪಕ್ಕ ಹರಿಯುವ ಕಾವೇರಿ ನದಿ)
ಸ್ವಾತಂತ್ರ್ಯ
ಪೂರ್ವದ ಸುಧಾರಣೆಯ ಗಾಳಿ ಒಂದು ಕಡೆಗೆ
ಮಹಿಳೆಯರ ಸ್ಥಿತಿಗತಿಯ ಪುನರುತ್ಥಾನದ ಕಡೆಗೆ ಬೀಸಿದರೆ, ಇನ್ನೊಂದು
ಕಡೆ ವಿಕ್ಟೋರಿಯನ್ ಹುಸಿ ಮೌಲ್ಯಗಳಿಗೆ ಪಕ್ಕಾಗಿ
ಅವರ ಅಸ್ಮಿತೆಯ ಹುಟ್ಟನ್ನಡಗಿಸಲು ಪ್ರಯತ್ನಿಸಿತು. ಅದಕ್ಕೆ
ಬಲಿಯಾದವರು ಪ್ರತಿಭಾವಂತ ಕಲಾವಂತೆಯರು. ಶ್ರೀಮಂತರ, ರಾಜರ ಉಪಪತ್ನಿಯರಾಗಿ ಘನತೆಯಿಂದ
ಬಾಳುತ್ತಾ ತಮ್ಮ ನೃತ್ಯ ಹಾಗೂ
ಸಂಗೀತ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಗೈದ ಈ
ಕಲಾವಿದರು, ವಿಕ್ಟೋರಿಯನ್ ಹುಸಿಮೌಲ್ಯಗಳ ಬ್ರಿಟಿಷ್ ಕಾಯಿದೆಯಿಂದಾಗಿ ಹೇಗೆ ಬೀದಿ ಸೂಳೆಯರಾದರು
ಎಂಬುದನ್ನು ರಾಧಾಕುಮಾರ್ ಅವರು ತಮ್ಮ ‘ಹಿಸ್ಟರಿ
ಆಫ್ ಡೂಯಿಂಗ್’ ಎಂಬ ಪುಸ್ತಕದಲ್ಲಿ ಬಹಳ
ಕೂಲಂಕಷವಾಗಿ ಚರ್ಚಿಸಿದ್ದಾರೆ. ಹೀಗೆ ಪಿತೃಪ್ರಧಾನ ವ್ಯವಸ್ಥೆಯ
ಗದಾ ಪ್ರಹಾರದ ಬೀಸಿಗೆ ನಲುಗಿ
ಹೋದ, ಅದರ ವಿರುದ್ಧ ಬಂಡೆದ್ದು
ತಮ್ಮ ಅಸ್ಮಿತೆಯನ್ನು ಸ್ಥಾಪಿಸಿದ ಮಹಿಳೆಯರ ಚರಿತ್ರೆಯನ್ನು ಸೂಸಿ
ಥಾರು ಮತ್ತು ಕೆ. ಲಲಿತ
ಅವರು ಸಂಪಾದಿಸಿರುವ ತಮ್ಮ “ವಿಮೆನ್ ರೈಟಿಂಗ್
ಇನ್ ಇಂಡಿಯಾ’ ಎಂಬ ಉದ್ಗ್ರಂಥದಲ್ಲಿ
ಉಲ್ಲೇಖಿಸುತ್ತಾರೆ. ಇದು ಒಂದು ವಿಶಿಷ್ಟವಾದ
ಮಹಿಳಾ ಚರಿತ್ರೆಯ ಗಾಥೆ. ಮಹಿಳಾ ಅಧ್ಯಯನದ
ಬಗ್ಗೆ ಆಸಕ್ತಿ ಉಳ್ಳವರು ಇದನ್ನು
ಅಲಕ್ಷಿಸಿ ಮುಂದೆ ಹೋಗುವ ಹಾಗೇ
ಇಲ್ಲ. ಈ ಕೃತಿ ಪ್ರಾರಂಭವಾಗುವುದೇ
ಬೆಂಗಳೂರು ನಾಗರತ್ನಮ್ಮನವರಿಂದ. ದೇವದಾಸಿ ಕುಟುಂಬದಿಂದ ಬಂದ
ಇವರು ತಮ್ಮ ಹುಟ್ಟೂರಾದ ಮೈಸೂರಿನಲ್ಲಿ
ತಮ್ಮ ಪ್ರತಿಭೆ ಬೆಳಕಿಗೆ ಬರಲು
ಯಾವುದೇ ಅವಕಾಶ ದೊರೆಯದೇ ಹೋದ
ಕಾರಣ ತಮಿಳು ನಾಡಿಗೆ ವಲಸೆ
ಹೋದವರು. ತಮ್ಮ ಪ್ರತಿಭೆ ಪರಿಶ್ರಮಗಳಿಂದ
ಹಲವಾರು ಅಡ್ಡಿ ಆತಂಕಗಳ ನಡುವೆಯೂ
ಶ್ರೇóಷ್ಠ ಸಂಗೀತ ಕಲಾವಿದೆಯಾಗಿ
ಪ್ರವರ್ಧಮಾನಕ್ಕೆ ಬಂದವರು. ಆಂಧ್ರದ ಮುದ್ದುಪಳನಿ
ಎಂಬ ರಾಜದಾಸಿ (1739-63)ಯೊಬ್ಬಳು ಬರೆದ ‘ರಾಧಿಕಾಸಾಂತ್ವನಮು’ ಎಂಬ ಶೃಂಗಾರ ಭರಿತ
ಕಾವ್ಯಕ್ಕೆ ವೀರೇಶಲಿಂಗಂ ರವರಂತಹ ಪ್ರಬಲ, ಪ್ರಭಾವೀ
ಸಮಾಜಸುಧಾರಕರ ವಿರೋಧದ ನಡುವೆಯೂ, ತೆಲಗು
ಮನೆಮಾತಿನವರಾದ ತೆಲಗು ಸಾಹಿತ್ಯದಲ್ಲಿ ಆಸಕ್ತರಾದ
ನಾಗರತ್ನಮ್ಮನವರು ಅದರ ಮರು ಮುದ್ರಣವನ್ನು
ಕೈಗೊಂಡರು. ದೇವದಾಸಿ ಪದ್ಧತಿಯ ನಿರ್ಮೂಲನದ
ಗಾಳಿ ಬೀಸುತ್ತಿರುವ ಸಂದರ್ಭದಲ್ಲಿ ಇಂತಹ ಕೃತಿಗಳು ಬೆಳಕಿಗೆ
ಬರುವುದು ಅಕ್ಷಮ್ಯ ಅಪರಾಧವೆಂದೇ
ಸಮಾಜಸುಧಾರಕರು ಪರಿಗಣಿಸಿದ್ದರು. ನಾಗರತ್ನಮ್ಮ ದೇವದಾಸಿಯಾಗಿರುವುದರಿಂದ ಅಂತಹ ಅಶ್ಲೀಲ ಕೃತಿಯ
ಮುದ್ರಣಕ್ಕೆ ಮನಸ್ಸು ಮಾಡಿರುವುದು ಸಹಜವೆಂಬಂತೆ
ವಿರೇಶಲಿಂಗಂ ಅವರು ನಾಗರತ್ನಮ್ಮನವರ ದೇವದಾಸಿ
ಮೂಲವನ್ನು ಹಿಡಿದು ಅವರ ಚಾರಿತ್ರ್ಯವಧೆಯನ್ನು
ಮಾಡುವ ಹಂತಕ್ಕೂ ಮುಟ್ಟಿದರು. ಪಂಡಿತಾ
ರಮಾಬಾಯಿಯವರು ತಿಲಕರ ವಿರೋಧವನ್ನು ಕಟ್ಟಿಕೊಂಡು
ಹೋರಾಡಿದಂತೆ, ನಾಗರತ್ನಮ್ಮನವರು
ವೀರೇಶಲಿಂಗಂ ಪಂತಲು ಅವರ ವಿರೋಧವನ್ನು
ಕಟ್ಟಿಕೊಂಡು ಹೋರಾಡಿದರು. ನಾಗರತ್ನಮ್ಮನವರು, ಸ್ವತಃ ವೀರೇಶಲಿಂಗಂ ಅವರ
ಕಾವ್ಯಗಳಲ್ಲಿ ಮುದ್ದುಪಳನಿಯ ಕಾವ್ಯದಲ್ಲಿರುವುದಕ್ಕಿಂತಲೂ ಹೆಚ್ಚಿನ ಅಶ್ಲೀಲ ಭಾಗಗಳು
ಇರುವುದನ್ನು ದಿಟ್ಟತನದಿಂದ ಲೋಕಕ್ಕೆ ತೋರಿಸಿದರು. ಹೆಣ್ಣು ಮಗಳೊಬ್ಬಳು, ಅದೂ
ದೇವದಾಸಿ ಕುಟುಂಬದಿಂದ ಬಂದ ಹೆಣ್ಣು ಸಮಾಜ
ಸುಧಾರಣೆಯ ಮುಂಚೂಣಿಯಲ್ಲಿದ್ದ, ಸಾಮಾಜಿಕ ವರ್ಚಸ್ಸನ್ನು ಬೆಳೆಸಿಕೊಂಡಿದ್ದ
ವೀರೇಶಲಿಂಗಂ ಪಂತಲು ಅವರನ್ನು ಎದುರು
ಹಾಕಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಅಲ್ಲದೇ
ವಿಕ್ಟೋರಿಯನ್ ಹುಸಿ ಮೌಲ್ಯಗಳ ಬೆನ್ನುಹತ್ತಿದ
ಬ್ರಿಟಿಷ್ ಸರ್ಕಾರವನ್ನೂ ಅವರು ಎದುರು ಹಾಕಿಕೊಳ್ಳಬೇಕಾಗಿತ್ತು. ಇದಕ್ಕಾಗಿ
ಕೋರ್ಟು ಕಛೇೀರಿ ಅಲೆದರು, ಅಪಮಾನಗಳನ್ನು
ಸಹಿಸಿಕೊಂಡರು. ಸರ್ಕಾರ ಮುದ್ದುಪಳನಿಯ ಕೃತಿಯನ್ನು
ಮುಟ್ಟುಗೋಲು ಹಾಕಿಕೊಂಡರೂ ಅದು ಅನೇಕ ಕಾವ್ಯಾಸಕ್ತರಿಗೆ
ತಲಪಿದ್ದು ನಾಗರತ್ನಮ್ಮನವರ ಹೋರಾಟಕ್ಕೆ ಸಿಕ್ಕ ಜಯವೆಂದೇ ಹೇಳಬೇಕು.
ಹೀಗೆ ತಮ್ಮ ಅಸ್ಮಿತೆಯನ್ನು ಸ್ಥಾಪಿಸಲು,
ಪುರುಷ ಪ್ರಧಾನ ವ್ಯವಸ್ಥೆ ಒಡ್ಡುವ
ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳುಲು ಮತ್ತು ಅದನ್ನು ಸಮಾಜಮುಖಿಯನ್ನಾಗಿಸಲು
ಸಂಗೀತ ನೃತ್ಯಗಳನ್ನು ತಮ್ಮ ಸಾಧನವನ್ನಾಗಿ ಅವರು
ಮಾಡಿಕೊಂಡರು. ತಾವೂ ಬೆಳೆದರು ಇತರರನ್ನೂ
ಬೆಳೆಸಿದರು.
ಒಮ್ಮೆ
ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನಾಗರತ್ನಮ್ಮನವರನ್ನು
ನೋಡಲು ಬಂದ
ಡಿ.ವಿ.ಜಿ.ಯವರ
ಬಳಿ, ನಾನು ಈಗ ಭೋಗರತ್ನ ರೋಗರತ್ನ
ಆಗಿದ್ದೇನೆ ಎಂದು ದುಃಖದಿಂದ
ಅಲವತ್ತುಕೊಂಡಾಗ ‘ಅಲ್ಲ ನೀನು ರಾಗರತ್ನ,
ತ್ಯಾಗರತ್ನ’ ಎಂದು ಡಿ.ವಿ.ಜಿ. ಯವರು ನಾಗರತ್ನಮ್ಮನವರನ್ನು
ಕೊಂಡಾಡುತ್ತಾರೆ. ಆ ಕೊಂಡಾಟಕ್ಕೆ ‘ಸಮಾಜರತ್ನ’
ಎನ್ನುವ ಮತ್ತೊಂದು ವಿಶೇಷಣವನ್ನೂ ಸೇರಿಸಬೇಕಾಗಿದೆ. ಅನೇಕ ಪ್ರತಿಭಾವಂತ ಮಹಿಳೆಯರನ್ನು
ತಮ್ಮ ಮನೆಯಲ್ಲಿ ಇಟ್ಟುಕೊಂಡು ಸಂಗೀತ ನೃತ್ಯ ಪಾಠ
ಹೇಳಿಕೊಟ್ಟು ಅವರಿಗೆ ಒಂದು ವೇದಿಕೆಯನ್ನು
ನಾಗರತ್ನಮ್ಮನವರು ಕಲ್ಪಿಸಿ ಕೊಟ್ಟಿದ್ದು ಅವರ
ಸ್ತ್ರೀಪರ ಕಾಳಜಿಯ ದ್ಯೋತಕವಾಗಿದೆ. ಹೊರವಲಯದಲ್ಲಿ
ಅಸ್ಪøಶ್ಯರಾಗಿ ನಾದಸ್ವರ ನುಡಿಸುತ್ತಿದ್ದ ಕಲಾವಿದರನ್ನೂ ವೇದಿಕೆ ಹತ್ತಿಸಿದರು.
ತ್ಯಾಗರಾಜ ಆರಾಧನೆಯ ಸಂದರ್ಭದಲ್ಲಿ
ಮಹಿಳೆಯರ ಸಂಗೀತ ಕಚೇರಿಗಳಿಗೆ ತೀವ್ರ
ವಿರೋಧ ಬಂದಾಗ, ಪರ್ಯಾಯ ಸಂಗೀತ
ಸಮ್ಮೇಳನವನ್ನು ನಡೆಸಿ ತಮ್ಮ ಅಮೋಘ
ಸಂಗೀತ ಕಚೇರಿಗಳ ಪ್ರಭಾವದಿಂದ ಶ್ರೋರ್ತಗಳನ್ನು
ತಮ್ಮಡೆಗೆ ಸೆಳೆದುಕೊಂಡು ವಿರೋಧಿಗಳ ಬಾಯಿಮುಚ್ಚಿಸಿದರು. ಹೀಗೆ ಸಮಾಜದಿಂದ ತಿರಸ್ಕøತರಾದ ದೇವದಾಸಿ ಮಹಿಳೆಯರನ್ನಾಗಲೀ,
ನಾದಸ್ವರ ನುಡಿಸುತ್ತಿದ್ದ ಕೆಳವರ್ಗದ ಕಲಾವಿದರನ್ನಾಗಲೀ ಮೇಲೆತ್ತುವಲ್ಲಿ ಅವರಿಗೆ ಒಂದು ಸ್ಥಾನಮಾನ
ಕಲ್ಪಿಸಿಕೊಡುವಲ್ಲಿ, ಯಾವ ಸಾಮಾಜಿಕ, ರಾಜಕೀಯ
ವರ್ಚಸ್ಸು ಇಲ್ಲದೆಯೂ ನಾಗರತ್ನಮ್ಮನವರು ಮೆರೆದ ಸಾಹಸ, ತಂದ ಸುಧಾರಣೆÀಗಳು ಯಾವ ಸಮಾಜ
ಸುಧಾರಕರಿಗೂ ಕಡಿಮೆಯೇನಲ್ಲ. ಸರ್ವತ್ರ ಪುರುಷ ಪ್ರಹಾರ
ಬೀಸುತ್ತಿರುವ ಎಡೆಯಲ್ಲಿಯೇ, ಬಿಡಾರಂ ಕೃಷ್ಣಪ್ಪನವರು, ಮೈಸೂರು
ವಾಸುದೇವಾಚಾರ್ಯರು ಹಾಗೂ ರಾಜಾಜಿಯಂತಹವರು ನಾಗರತ್ನಮ್ಮನವರಿಗೆ
ಒದಗಿಸಿದ ನೈತಿಕ ಬಲದ ಬಗ್ಗೆ
ಹೆಮ್ಮೆಯೂ ಉಂಟಾಗದೇ ಹೋಗದು. ಒಬ್ಬ
ಮಹಿಳೆಯಾಗಿ ಮದ್ರಾಸ್ ಶಾಸಕಾಂಗದಲ್ಲಿದ್ದ ದೇವದಾಸಿ
ಕುಲದಿಂದ ಬಂದ ಮುತ್ತುಲಕ್ಷ್ಮಿ ರೆಡ್ಡಿಯವರೂ
ಪುರುಷ ಪ್ರಹಾರದ ಜೊತೆಗೆ ತಮ್ಮ
ಪ್ರಹಾರವನ್ನೂ ಸೇರಿಸುವಾಗ ಧನಲಕ್ಷ್ಮಿ ಅಮ್ಮಾಳ್
ಅಂತಹವರ ಬೆಂಬಲದಿಂದ ಮೇಲೇರಿದ ನಾಗರತ್ನಮ್ಮನವರ ಚೈತನ್ಯ
ಬೆರಗುಗೊಳಿಸುವಂತಹದು. ಮೈಸೂರಿನಿಂದ ತಮಿಳು ನಾಡಿಗೆ ತೆರಳಿದರೂ
ನಾಗರತ್ನಮ್ಮನವರಿಗೆ ತವರಿನ ಮೋಹ ಬಿಡದಾಗ
ಮೈಸೂರಿನ ಹೆಸರಿನಲ್ಲಿ ತಿರುವಯ್ಯಾರಿನಲ್ಲಿ ಒಂದು ಸಂಗೀತ ಭವನ
ಕಟ್ಟಿಸುವ ಅವರ ಆಸೆಗೆ ಕನ್ನಡಿಗರ್ಯಾರೂ
ನೀರೆರೆಯದೇ ಹೋದದ್ದು ವಿಷಾದದ ಸಂಗತಿ.
‘ನಿನ್ನ
ಮಗಳು ಸಗಣಿ ಬಾಚುವುದಕ್ಕೇ ಲಾಯಕ್ಕು’
ಎಂದ ಮೈಸೂರಿನ ತನ್ನ ಗುರು,
ತಂದೆಯ ಮಾತನ್ನು ಸವಾಲಾಗಿ ಸ್ವೀಕರಿಸಿ,
ಛಲದಿಂದ ಬದುಕಿನ ಅವಘಡಗಳನ್ನು ಎದುರಿಸಿ
ಸಂಗೀತದ ಮೇಲಿನ ನಿಷ್ಠೆ ಪ್ರೀತಿ,
ಪ್ರಾಮಾಣಿಕತೆಯಿಂದ ಕೆಸರಿನಲ್ಲಿ ಕಮಲದಂತೆ ಅರಳಿದ ನಾಗರತ್ನಮ್ಮ,
ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಿದ ಮೊದಲ
ಮಹಿಳೆ. ಅವರ ಈ ಪ್ರಾಮಾಣಿಕತೆಯನ್ನು
ಸ್ಮರಿಸುವವರು ಬಹಳ ಕಡಿಮೆ. ವೇಶ್ಯೆಯೆಂದು
ಅವರನ್ನು ಕಾಣಿಸಿದ ಸಮಾಜಕ್ಕೆ, ತಮ್ಮ
ಬದುಕಿನಲ್ಲಿ ಅತ್ಯುನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ತಮ್ಮ ಕುಲಕ್ಕೆ
ಅಂಟಿಕೊಂಡಿದ್ದ ಪೂರ್ವಗ್ರಹಗÀಳನ್ನು ಕಳೆದರು.
ತ್ಯಾಗರಾಜರು
ಒಮ್ಮೆ ನದಿ ದಾಟುತ್ತಿದ್ದಾಗ ಅವರ
ಕೈಯಲ್ಲಿದ್ದ ರಾಮನ ವಿಗ್ರಹ ನೀರಿನಲ್ಲಿ
ಬಿದ್ದುಹೋಯಿತೆಂತೆ. ಆಗ ಚಿಂತಾಕ್ರಾಂತರಾಗಿ ಹಲುಬುತ್ತಾ
ಚಡಪಡಿಸುತ್ತಾ ಹುಡುಕುತ್ತಿದ್ದಾಗ ವಿಗ್ರಹ ಸಿಕ್ಕಿತಂತೆ . ರಾಮ
ಸಿಕ್ಕ ಹರ್ಷಾತಿರೇಕದಲ್ಲಿ ‘ಎಂತ ಮುದ್ದೋ ಎಂತ
ಸೊಗಸೋ’ ಎನ್ನುವ ಕೃತಿಯನ್ನು ರಚಿಸುತ್ತಾರೆಂದು
ಕಥೆಯಿದೆ. ಈ ಕೀರ್ತನೆಯನ್ನು ಅವರು
ರಚಿಸಿದ್ದು ಬಿಂದುಮಾಲಿನಿ ರಾಗದಲ್ಲಿ. ಬಿಂದು ಮಾಲಿನಿ! ಅಂತಹ
ಅದ್ಭುತ ಹೆಸರು! ತ್ಯಾಗರಾಜರು ರಾಮನಿಗೆ
ತಮ್ಮ ಕಣ್ಣೀರಿನಿಂದಲೇ ಮಾಲೆ ಹೆಣೆದು ಅಲಂಕರಿಸಿದರು.
ಬಾಂಬೆ ಜಯಶ್ರೀಯವರ ಕಂಠದಲ್ಲಿ ಇದನ್ನು ಕೇಳಿದರೆ ಹೃದಯ
ಕರಗಿ ನೀರಾಗಿ ಹರಿಯುತ್ತದೆ. (ತ್ಯಾಗರಾಜರು
ಅಭೇರಿ ರಾಗದಲ್ಲಿ ರಚಿಸಿದ ‘ನಗುಮೊಮೊ’ ಕೃತಿಯ ಬಗ್ಗೆಯೂ
ಇದೇ ಪ್ರತೀತಿ ಇದೆ). ಅಂತಹ
ತ್ಯಾಗರಾಜರ ಭಕ್ತೆಯಾದ ನಾಗರತ್ನಮ್ಮ, ತ್ಯಾಗರಾಜರ ಸಮಾಧಿಯ ಜೀರ್ಣೋದ್ಧಾರಕ್ಕೆ, ದೇವಸ್ಥಾನ
ಕಟ್ಟಿಸುವುದಕ್ಕೆ ಅವರ ಇಡೀ ಜೀವನದ
ಗಳಿಕೆಯನ್ನಲ್ಲಾ ದಾನಮಾಡಿದರು. ತ್ಯಾಗರಾಜರು ರಾಮನಿಗೆ ಕಣ್ಣೀರಿನ ಕಾಣಿಕೆ
ಇತ್ತರೆ, ನಾಗರತ್ನಮ್ಮನವರೂ ತ್ಯಾಗರಾಜರಿಗೆ ಅದನ್ನೇ ತೊಡಿಸಿದರು. ಸಂಗೀತವೆಂದರೇನೇ
ಮಾರ್ದವತೆ, ಆಧ್ರ್ರತೆ. ಅದು ನಮ್ಮೆಲ್ಲ ಗೋಡೆಗಳನ್ನೂ
ಮಿತಿಗಳನ್ನೂ ಕೆಡವಿ ಹಾಕಿಬಿಡುತ್ತದೆ. ಅದು
ಹೊರಗಿನ ಸಂಗೀತವಲ್ಲ ನಮ್ಮೊಳಗೇ ತರಂಗಗಳನೆಬ್ಬಿಸುವ ‘ಮನುಷ್ಯಜಾತಿ ತಾನೊಂದೇ ವಲಂ’ ಎನ್ನುವ
ಹಾಡು. ಅದನ್ನು ಆತ್ಮಸಾತ್ ಮಾಡಿಕೊಂಡವರಿಗೆ
ಮಾತ್ರ ನಾಗರತ್ನಮ್ಮನವರಂತೆ ಎಲ್ಲ ಪರಿಧಿಗಳನ್ನೂ ದಾಟಲು
ಸಾಧ್ಯ. ಸಂಗೀತವೆಂದರೆ ತೋಯುವುದು ಎಂದೆ, ಆದುದರಿಂದಲೇ ನಾಗರತ್ನಮ್ಮನವರ
ಈ ಪುಸ್ತಕವನ್ನು ಓದಿದರೆ
ಯಾರಿಗಾದರೂ ಕಣ್ಣ ಕಟ್ಟೆ ಒಡೆಯದೇ
ಹೋಗದು. ಮಣ್ಣೊಳಗೆ ಹುದುಗಿ ಹೋಗಿದ್ದ ಇಂತಹ
ಚಿನ್ನದ ಗಟ್ಟಿಯನ್ನು ಹೊರತೆಗೆದು ಥಳ ಥಳ ಉಜ್ಜಿ
ಲೋಕಕ್ಕೆ ಅನಾವರಣ ಮಾಡಿದ ಜಗದೀಶ್
ಕೊಪ್ಪ ಅವರಿಗೆ ಅಭಿನಂದನೆಗಳು. ಈ
ಪುಸ್ತಕವನ್ನು ಪ್ರೀತಿಯಿಂದ ನನ್ನ ಕೈಗಿತ್ತ ಡಾ.
ಪೂರ್ಣಿಮಾ ಅವರಿಗೆ ವಂದನೆಗಳು.
ಡಾ.
ಗಿರಿಜಾ ಶಾಸ್ತ್ರಿ, ಮುಂಬೈ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ