Thursday, 23 March 2017

ಮಾನಿನಿಯರ ಹೋರಾಟದ ಮುಂದೆ ಬೆತ್ತಲಾದ ಕರ್ನಾಟಕದ ಜನಪರ ಚಳುವಳಿಗಳುಈ ವಾರ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಕರ್ನಾಟಕದ  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗೂಡಿ  ತಮ್ಮ   ವೇತನದ  ಹೆಚ್ಚಳಕ್ಕಾಗಿ ನಡೆಸಿದ ಹೋರಾಟ ಹಲವು ರೀತಿಯಲ್ಲಿ ಸಾಮಾಜಿಕ ಚಳುವಳಿಗಳ ಅಧ್ಯಯನಕ್ಕೆ ಮತ್ತು ನಮ್ಮ ಸಾಮಾಜಿಕ ಚಳುವಳಿಗೆ ಬಡಿದಿರುವ ಶಾಪವನ್ನು ಮರು ವಿಮರ್ಶೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
ಕಳೆದ ವರ್ಷ ಬೆಂಗಳೂರು ನಗರದಲ್ಲಿರುವ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಅಸಂಘಟಿತ ಮಹಿಳಾ ಕಾರ್ಮಿಕರು  ಇಂತಹದ್ದೇ ಹೋರಾಟವನ್ನು ನಡೆಸಿದ್ದರು. ಎಂಪ್ಲಾಯ್ ಮೆಂಟ್ ಪ್ರಾವಿಡೆಮಟ್ ಫಂಡ್  ಹಣವನ್ನು ಹಿಂತೆಗೆಯದಂತೆ ಕೇಂದ್ರ ಸರ್ಕಾರ ನಿಯಮಾವಳಿ ರೂಪಿಸಿದೆ ಎಂಬ ಸುದ್ಧಿ ಹರಡಿದ ಪರಿಣಾಮವಾಗಿ  ಧಿಡೀರನೆ ಬೀದಿಗಿಳಿದು ಅಕ್ಷರಶಃ ಬೆಂಗಳೂರು ನಗರವನ್ನು ನಡುಗಿಸಿದ್ದರು. ಎರಡು ದಿನಗಳ ಕಾಲ ನಡೆದ  ಈ ಹೋರಾಟಕ್ಕೆ ಬೆಚ್ಚಿ ಬಿದ್ದ ಕೇಂದ್ರ ಸರ್ಕಾರ ತನ್ನ ಯೋಜನೆಯನ್ನು ಕೈ ಬಿಟ್ಟಿತು. ಜೊತೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮಗಳ ಮುಂದೆ ಈ ಕುರಿತು ಸೃಷ್ಟೀಕರಣ ನೀಡ ಬೇಕಾಯಿತು.
ಅಂದು ಬೀದಿಗಿಳಿದ್ದಿದ್ದ ಸಿದ್ಧ ಉಡುಪುಗಳ ಕಾರ್ಖಾನೆಯ ಮಹಿಳಾ ನೌಕರರಿಗೆ ಯಾವೊಬ್ಬ ನಾಯಕನಿರಲಿಲ್ಲ. ಅವರೆಂದೂ ತಮ್ಮ ಏಳಿಗೆಗಾಗಿ ಸಂಘಟನೆಯ ನಾಯಕರನ್ನು ಆಶ್ರಯಿಸಲಿಲ್ಲ, ಅವಲಿಂಬಿಸಲಿಲ್ಲ. ತಮಗೆ ಅನ್ಯಾಯವಾದಾಗ ಪ್ರತಿಭಟಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂಬುದು ಮಾತ್ರ ಅವರೆಲ್ಲರ ಧೋರಣೆಯಾಗಿತ್ತು. ಇವೆಲ್ಲಕ್ಕಿಂತ ಮಿಗಿಲಾಗಿ ಈ ಮಹಿಳಾ ಕಾರ್ಮಿಕರು ಹೆಚ್ಚಿನ ವಿದ್ಯಾವಂತರಲ್ಲ. ಪಿ.ಯು.ಸಿ. ಅಥವಾ ಪದವಿ ಓದಿರುವ ಹೆಣ್ಣು ಮಕ್ಕಳು ಕೇವಲ ಬೆರಳೆಣಿಕೆಯಷ್ಟು ಇರಬಹುದು. ಇಂದು ಬೆಂಗಳೂರೆಂಬ ಮಾಯಾ ನಗರಿಯಲ್ಲಿ ಸುಮಾರು ಹದಿನಾಲ್ಕು ಲಕ್ಷ ಮಂದಿ ಬಡ ಹೆಣ್ಣು ಮಕ್ಕಳು ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಅಸಂಘಟಿತರಾಗಿ ದುಡಿಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರೆಲ್ಲರೂ ತಮಗೆ ಅನ್ಯಾಯವಾದಾಗ ವ್ಯವಸ್ಥೆಯ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಸಂಘಟಿತರಾಗಿ ಸಿಡಿದೇಳುವ ಸಾತ್ವಿಕ ಸಿಟ್ಟನ್ನು ಒಮ್ಮ ಒಡಲೊಳಗೆ ಕಾಪಿಟ್ಟುಕೊಂಡಿದ್ದಾರೆ,
ಈ ರೀತಿಯ ಸಾತ್ವಿಕ ಸಿಟ್ಟು ಇದೀಗ ಕರ್ನಾಟಕದ ಅಸಂಖ್ಯಾತ  ಅಂಗನವಾಡಿ ಕಾರ್ಯಕರ್ತೆಯರಿಂದ ವ್ಯೆಕ್ತವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ  ನೇತೃತ್ವದ ಕಾಂಗ್ರೇಸ್ ಸರ್ಕಾರ  ನಡುಗಿ ಹೋಗುವಂತೆ ಗರ್ಜಿಸಿದ್ದಾರೆ. ದೂರದ ಊರು ಕೇರಿಗಳಿಂದ ತಮ್ಮ ಹಸಗೂಸುಗಳು ಮತ್ತು ಕಂದಮ್ಮಗಳ  ಜೊತೆ ಬಂದ ಈ ತಾಯಂದಿರು ಹಗಲು, ರಾತ್ರಿ ಎನ್ನದೆ, ಚಳಿ, ಮಳೆ ಬಿಸಿಲು ಎನ್ನದೆ ನಾಲ್ಕು ದಿನಗಳ ಕಾಲ ಬೀದಿಯಲ್ಲಿ ಕುಳಿತು ಅಲ್ಲಿಯೇ ಮಲಗಿ ಪ್ರತಿಭಟಿಸಿದರು. ಇವರ ನೋವು ಸಂಕಟ ನೋಡಲಾರದೆ, ಇವರಿಗೆ ನೀರು, ಮಜ್ಜಿಗೆ ನೀಡಲು ಬಂದ ಸಂಘಟನೆಗಳ ನೆರವನ್ನು ನಿರಾಕರಿಸಿದರು. “ನಮಗೆ ನಿಮ್ಮ ಅನುಕಂಪವಾಗಲಿ, ಸಹಾಯ ಹಸ್ತವಾಗಲಿ ಬೇಕಿಲ್ಲ. ವೇತನ ಹೆಚ್ಚು ಮಾಡಲಾಗದ ಈ ಕುರುಡು ಸರ್ಕಾರಕ್ಕೆ ಬುದ್ಧಿ ಹೇಳಿ, ಸಾಧ್ಯವಾದರೆ ಹೋರಾಟಕ್ಕೆ  ನಮ್ಮ ಜೊತೆ ಕೈ ಜೊಡಿಸಿ” ಎಂಬ ನಿಷ್ಟುರ ನಿಲುವು ಇವರದಾಗಿತ್ತು. ಇವರ ಜತೆ ಹಲವು ಮಹಿಳಾ ಪರ ಸಂಘಟನೆಗಳು ಮತ್ತು ಎಡಪಂಥೀಯ ಸಂಘಟನೆಗಳು ಕೈ ಜೋಡಿಸಿದವು.

ಕರ್ನಾಟಕದ  ಹಳ್ಳಿಗಳಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳಿಗೆ ಬಿಸಿಯೂಟ, ಹಾಲು ಸಿದ್ಧಪಡಿಸಿಕೊಡುವ ಸಹಾಯಕಿಯರು ಇವರೆಲ್ಲಾ ಸೇರಿ ಒಂದು ಲಕ್ಷದ ಇಪ್ಪತ್ತು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತೆಯರಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಇವರೆಲ್ಲರ ಏಕೈಕ ಬೇಡಿಕೆ ಎಂದರೆ ವೇತನ ಹೆಚ್ಚು ಮಾಡಿ ಎಂಬುದಾಗಿದೆ. ಈ ಬಾರಿ  ಅಂಗನವಾಡಿಯ ಶಿಕ್ಷಕಿಯರಿಗೆ ಒಂದು ಸಾವಿರ ಮತ್ತು ಸಹಾಯಕಿಯರಿಗೆ ಐನೂರು ರೂಪಾಯಿ ಹೆಚ್ಚಳ ಮಾಡುವುದಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.  ಸಧ್ಯಕ್ಕೆ ಶಿಕ್ಷಕಿಯರು ಆರು ಸಾವಿರ ಹಾಗೂ ಸಹಾಯಕಿಯರು ಮೂರು ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಆದರೆ ಶಿಕ್ಷಕಿಯರಿಗೆ ಹತ್ತು ಸಾವಿರ ಹಾಗೂ ಸಹಾಯಕಿಯರಿಗೆ ಏಳೂವರೆ ಸಾವಿರ ರೂಪಾಯಿ ವೇತನ ನಿಗದಿ ಪಡಿಸಿ ಎಂಬುದು ಇವರೆಲ್ಲರ ಬೇಡಿಕೆಯಾಗಿದೆ. ಪಂಜಾಬ್ ರಾಜ್ಯದಲ್ಲಿ ಹದಿನಾಲ್ಕು ಸಾವಿರ ಹಾಗೂ ನೆರೆಯ ತಮಿಳುನಾಡಿನಲ್ಲಿ ಹತ್ತೂವರೆ ಸಾವಿರ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಒಂದು ತಿಂಗಳ ಬೋನಸ್ ನೀಡಲಾಗುತ್ತಿದೆ. ಇವುಗಳನ್ನು ಗಮನಿಸಿದಾಗ ಮುಷ್ಕರ ನಡೆಸಿದ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರ ಬೇಡಿಕೆ ನ್ಯಾಯ ಸಮ್ಮತವಾಗಿದೆ ಎಂದು ಹೇಳಲೇಬೇಕು. ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವಾಗ ಕನಿಷ್ಟ ಗೌರವಯುತವಾದ ವೇತನ ನೀಡುವುದು ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ. ಪಕ್ಷ ಬೇಧವಿಲ್ಲದೆ ಎಲ್ಲಾ ಶಾಸಕರು, ಸಚಿವರು ತಮ್ಮ ವೇತನ ಹಾಗೂ ಭತ್ಯೆಯನ್ನು ಶೇಕಡ ನೂರರಷ್ಟು ಹೆಚ್ಚು ಮಾಡಿಕೊಳ್ಳುವಾಗ ತೋರುವ ಕಾಳಜಿಯನ್ನು ಈ ಹೆಣ್ಣು ಮಕ್ಕಳ ಬಗ್ಗೆಯೂ ತೋರಬೇಕಿದೆ. ಈಗಾಗಲೇ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಇವರುಗಳ ಬೇಡಿಕೆಯನ್ನು ಪೂರೈಸುವುದಾಗಿ ವಾಗ್ದಾನ ನೀಡಿದ್ದಾರೆ.

ಈ ಅಂಗನವಾಡಿ ಮತ್ತು ಸಿದ್ಧ ುಡುಪುಗಳ ಕಾರ್ಖಾನೆಯ ಮಹಿಳಾ ನೌಕರರ ಹೋರಾಟವನ್ನು ಚರ್ಚೆಗೆ  ಹಿನ್ನಲೆಯಾಗಿ ಇಟ್ಟುಕೊಂಡು, ರಾಜ್ಯದಲ್ಲಿ ಮಕಾಡೆ ಮಲಗಿರುವ ಅಥವಾ ತುಕ್ಕು ಹಿಡಿದು ನೈತಿಕವಾಗಿ ದಿವಾಳಿ ಎದ್ದು ಹೋಗಿರುವ ರೈತ ಹೋರಾಟ, ದಲಿತ ಪರ ಹೋರಾಟ ಮತ್ತು ಕನ್ನಡ ಪರ ಹೋರಾಟಗಳಂತಹ ಸಾಮಾಜಿಕ ಚಳುವಳಿಗಳನ್ನು ಪರಾಮರ್ಶೆಗೆ ಒಡ್ಡಿದಾಗ  ನಿರಾಸೆಯಾಗುತ್ತದೆ. ಈ ದಿನ ಕರ್ನಾಟಕದಲ್ಲಿ ಜಿಲ್ಲೆಗೊಬ್ಬ, ಪ್ರಾಂತ್ಯಕ್ಕೊಬ್ಬ ಮತ್ತು ಪ್ರತಿ ಬೆಳೆಗೊಬ್ಬ ರೈತನಾಯಕನಿದ್ದಾನೆ. ಜೊತೆಗೆ ಒಂದು ಡಜನ್ ಗೂ ಹೆಚ್ಚು ರೈತ ಸಂಘಟನೆಗಳಿವೆ. ಮೂರೂ ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ 2.400 ಕ್ಕೂ ಹೆಚ್ಚು ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ರೈತ ಬೆಳೆದ ಬೆಳೆಗೆ ಇವೊತ್ತಿಗೂ ಸೂಕ್ತ ಬೆಲೆಯಿಲ್ಲ. ಬರಗಾಲದ ನಡುವೆ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿಲ್ಲದೆ ಕಟುಕರಿಗೆ ಜಾನುವಾರುಗಳನ್ನು ಮಾರುತ್ತಿದ್ದಾನೆ. ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ವಿರೋಧ ಪಕ್ಷಗಳಿಗೆ ರೈತರ ಹಿತಕ್ಕಿಂತ ಉಪಚುನಾವಣೆಯು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಇನ್ನು, ರಾಜ್ಯದಲ್ಲಿ ಇಪ್ಪತ್ತೊಂದಕ್ಕೂ ಹೆಚ್ಚು ಅಂಬೇಡ್ಕರ್ ಹೆಸರಿನಲ್ಲಿ ದಲಿತ ಸಂಘಟನೆಗಳಿವೆ. ಇವುಗಳಲ್ಲಿ ಬಹುತೇಕ ಲೆಟರ್ ಹೆಡ್ ಸಂಘಟನೆಗಳಾಗಿವೆ. ದಲಿತರ ಮೇಲೆ ದೌರ್ಜನ್ಯ ಮಾತ್ರ ನಿರಂತರವಾಗಿ ಸಾಗಿದೆ. ನಾಯಕರೆನಿಸಿಕೊಂಡವರು ಜಿಲ್ಲಾ ಮಟ್ಟದ ಕಛೇರಿಗಳಲ್ಲಿ ಚಂದಾ ವಸೂಲಿಯಲ್ಲಿ ನಿರತರಾಗಿದ್ದಾರೆ.  ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ನಾಯಿಕೊಡೆ ಅಣಬೆಯ ರೀತಿಯಲ್ಲಿ ಹುಟ್ಟಿಕೊಂಡ ನಂತರ ರಾಜ್ಯದಲ್ಲಿ ಕನ್ನಡ ಭಾಷೆ ಎಲ್ಲಿ ತಲೆ ಎತ್ತಿದೆ ಎಂಬುದನ್ನು ದೀಪ ಹಾಕಿಕೊಂಡು ಹುಡುಕಬೇಕಿದೆ. ಕನ್ನಡ ಮಾಧ್ಯಮದ ಶಾಲೆಗಳು  ಪ್ಪ್ರತಿ ಹಳ್ಳಿಗಳಲ್ಲಿ ಮುಚ್ಚುತ್ತಾ ಸಾಗಿವೆ.

ಈ ಮೂರು ಸಂಘಟನೆಗಳ  ನಾಯಕರನ್ನು ಎದುರು ನಿಲ್ಲಿಸಿಕೊಂಡು ನಿಮ್ಮ ಸಾಧನೆ ಏನು? ಎಂದು  ಒಮ್ಮೆ ಕೇಳಿ ನೋಡಿ? ದಶಕದ ಪ್ರೊ. ನಂಜುಂಡಸ್ವಾಮಿಯಂತಹವರು, ದಲಿತ ಸಂಘರ್ಷ ಸಮಿತಿಯ ಬಿ.ಕೃಷ್ಣಪ್ಪನಂತಹವರು ಮತ್ತು ಕನ್ನಡದ ಪರವಾಗಿ ಡಾ. ರಾಜ್ ಕುಮಾರ್ ನಂತಹ ಸಮುದಾಯದ ನಾಯಕರು  ಒಂದು ಕರೆ ನೀಡಿದರೆ, ಸಭೆಗೆ ಅಥವಾ ಪ್ರತಿಭಟನೆಗೆ ಸಾವಿರಾರು ಮಂದಿ ನೆರೆಯುತ್ತಿದ್ದರು. ಈಗಿನ ಸಂಘಟನೆಗಳ ನಾಯಕರು ನೂರು ಜನರನ್ನು ಸೇರಿಸಲು ಅಸಮರ್ಥರಾಗಿದ್ದಾರೆ. ಈ ನಾಯಕರ ಸಾಮರ್ಥ್ಯವೆಲ್ಲಾ  ಕೇವಲ ಮಾಧ್ಯಮಗಳ ಮುಂದೆ ಗಾಳಿಯಲ್ಲಿ ಕತ್ತಿ ತಿರುಗುವ ಸಾಹಸಕ್ಕೆ ಮಾತ್ರ ಸೀಮಿತವಾಗಿದೆ.  ಇಂತಹ ನೋವಿನ ಸ್ಥಿತಿಯಲ್ಲಿ ಯಾವೊಂದು ಚಳುವಳಿಯೂ ಯಶಸ್ವಿಯಾಗುತ್ತಿಲ್ಲ. ಈ ನಾಡಿನ ದಲಿತರು, ಹಿಂದುಳಿದವರು, ರೈತರು ಇಂತಹ ನಕಲಿ  ನಾಯಕರನ್ನು ಹಾಳು ಬಾವಿಗೆ ದೂಡಿ, ನಾಯಕತ್ವವಿಲ್ಲದ ಹಾಗೂ ಸಾಮೂಹಿಕ ನಾಯಕತ್ವದಡಿ ಹೊಸ ಹೊಸ ಹೋರಾಟಗಳನ್ನು ರೂಪಿಸಬೇಕಿದೆ. ಇಂತಹ ಹೋರಾಟಕ್ಕೆ ನಮ್ಮ ಕನ್ನಡದ ಹೆಣ್ಣು ಮಕ್ಕಳು ಮತ್ತು ತಾಯಂದಿರು  ಇದೀಗ ನಮಗೆ ಮಾದರಿಯಾಗಿದ್ದಾರೆ.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕಾಗಿ ಬರೆದ ಲೇಖನ)

No comments:

Post a Comment