ಶನಿವಾರ, ಆಗಸ್ಟ್ 25, 2018

ಮಾರ್ಕ್ಸ್ ರವರ ರಾಜಕೀಯ ಅರ್ಥಶಾಸ್ತ್ರ




ಕಾರ್ಲ್ ಮಾರ್ಕ್ಸ್ ರವರ ಇನ್ನೂರನೆಯ ಜನ್ಮ ಶತಾಬ್ದಿ ಹಾಗೂ  ಅವರು ರಚಿಸಿದ " ದಾಸ್ ಕ್ಯಾಪಿಟಲ್" ಕೃತಿಗೆ ನೂರ ಐವತ್ತು ವರ್ಷ ತುಂಬಿದ ಅಂಗವಾಗಿ ನಾಡಿನ ಪ್ರಸಿದ್ಧ  ನವಕರ್ನಾಟಕ ಪ್ರಕಾಶನ ಸಂಸ್ಥೆಯು "ದಾಸ್ ಕ್ಯಾಪಿಟಲ್" ಸೇರಿದಂತೆ,  ಮಾಕ್ರ್ಸ್ ರವರ ಇನ್ನಿತರೆ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸುವ ಮಹತ್ವದ ಯೋಜನೆಯನ್ನು ಆರಂಭಿಸಿದೆ. ಈಗಾಗಲೆ ಈ ಯೋಜನೆಯ ಅಂಗವಾಗಿ ಮೂರು ಕೃತಿಗಳು ಬಿಡುಗಡೆಯಾಗುವುದರ ಮೂಲಕ ಮಾರ್ಕ್ಸ್ ರವರ ಪ್ರಖರ ಪ್ರತಿಭೆಯ ಜೊತೆಗೆ ಅವರ ಅರ್ಥಶಾಸ್ತ್ರದ ಚಿಂತನೆಗಳು ಕನ್ನಡಿಗರಿಗೆ ಪರಿಚಯವಾಗುತ್ತಿವೆ.
ಕಾರ್ಲ್ ಮಾರ್ಕ್ಸ್ ಕೇವಲ ಪ್ರಸಿದ್ಧ ರಾಜಕೀಯ ಮತ್ತು ತತ್ವಶಾಸ್ತ್ರದ ತಜ್ಞ ಎಂದು ಭಾವಿಸಿರುವ ಬಹುತೇಕ ಮಂದಿಗೆ ಅವರೊಳಗೊಬ್ಬ ಅರ್ಥಶಾಸ್ತ್ರದ ಅದ್ಭುತ ವಿಶ್ಲೇಷಕ ಹಾಗೂ ತಜ್ಞ ಕೂಡ ಜೀವಂತವಾಗಿದ್ದ ಎಂಬುದಕ್ಕೆ ಅವರ " ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ" "ಭಾರತವನ್ನು ಕುರಿತ ಮಾರ್ಕ್ಸ್" ಹಾಗೂ ತತ್ವಶಾಸ್ತ್ರದ ಬಡತನ ಅಥವಾ ದಾರಿದ್ರ್ಯ" ಎಂಬ ಮೂರು ಕೃತಿಗಳು ಸಾಕ್ಷಿಯಾಗಿವೆ. ಮನುಷ್ಯನ ಜಗತ್ತಿನ ಆರ್ಥಿಕ ಚಟುವಟಿಕೆಗಳನ್ನು ವಿಶ್ಲೇಷಿಸುವ ಅರ್ಥಶಾಸ್ತ್ರವು ಮನುಕು¯ದ ನಾಗರೀಕತೆಯ ಕಾಲದಿಂದಲೂ ರಾಜಕೀಯಶಾಸ್ತ್ರದ ಜೊತೆ ಜೊತೆಯಲ್ಲಿ ಒಂದು ಜ್ಞಾನ ಶಿಸ್ತುವಾಗಿ ಬೆಳೆದು ಬಂದಿದೆ. ಬೆಬಿಲೋನಿಯಾ, ಮೆಸಪಟೋಮಿಯಾ, ಗ್ರೀಸ್ ನಾಗರೀಕತೆಗಳ ಜೊತೆಗೆ ಪರ್ಷಿಯಾ, ಚೀನಾ ಮತ್ತು ಭಾರತದಲ್ಲಿ  ಅರ್ಥಶಾಸ್ತವ್ರು  ಹಲವು ರೂಪಗಳಲ್ಲಿ ವಿಸ್ತರಿಸುತ್ತಾ ಬೆಳೆದು ಬಂದಿರುವುದು ಈಗ ಇತಿಹಾಸ.  ಅರಿಸ್ಟಾಟಲ್, ಚೀನಾದ ಚೀನ್ ಶಿ ಹ್ಯಾಂಗ್, ಮತ್ತು ಇಬೆನ್ ಕಾಲ್ಡನ್, ಭಾರತದ  ಕೌಟಿಲ್ಯ ಇವರುಗಳು ಅರ್ಥಶಾಸ್ತ್ರಕ್ಕೆ ಭದ್ರವಾದ ಅಡಿಪಾಯ ಹಾಕಿದವರಲ್ಲಿ ಪ್ರಮುಖರು.  ಆದರೆ, 1776 ರಲ್ಲಿ ಇಂಗ್ಲೇಂಡಿನ ಆಡಂ ಸ್ಮಿತ್ ಎಂಬುವನು ತನ್ನ " ವೆಲ್ತ್ ಆಫ್ ನೇಷನ್" ಕೃತಿಯಲ್ಲಿ ಪ್ರಕೃತಿ ನಿಯಮದ ದೃಷ್ಟಿಕೋನದಲ್ಲಿ ಅರ್ಥಶಾಸ್ತ್ರವನ್ನು ವಿಶ್ಲೇಷಿಸುವುದರ ಮೂಲಕ  ಭೂಮಿ, ಬಂಡವಾಳ ಮತ್ತು ಕಾರ್ಮಿಕರು ಇವರನ್ನು ಒಂದು ರಾಷ್ಟ್ರದ ಸಂಪತ್ತು ಎಂದು ಕರೆದನು. ಒಂದು ರಾಷ್ಟ್ರದ ಸಂಪತ್ತಿನ ಹಂಚಿಕೆ ಮತ್ತು ವಿನಿಯೋU,ಸರಕುಗಳ ವಿನಿಮಯ, ನಾಣ್ಯ ಪದ್ಧತಿ ಮತ್ತು ಚಲಾವಣೆÀ  ಕುರಿತು ವ್ಯವಸ್ಥಿತ ರೀತಿಯಲ್ಲಿ ಆರ್ಥಿಕ ಚಿಂತನೆಗೆ ಹೊಸ ರೂಪ ಕೊಟ್ಟು ಇವುಗಳನ್ನು ವಾಣಿಜ್ಯ, ವ್ಯಾಪಾರಗಳ ಸಿದ್ಧಾಂತ ಎಂದು ವ್ಯಾಖ್ಯಾನಿಸಿದನು, ಹಾಗಾಗಿ  ಆತನನ್ನು ಅರ್ಥಶಾಸ್ತ್ರದ ಪಿತಾಮಹಾ ಎಂದು ಗುರುತಿಸಲಾಗಿದೆ. ನಂತರದ ದಿನಗಳಲ್ಲಿ ಥಾಮಸ್ ಮಾಲ್ತಸ್, ಡೆವಿಡ್ ರಿಕಾರ್ಡೊ ಮುಂತಾದವರು ಅರ್ಥಶಾಸ್ತ್ರದ ಚಿಂತನೆಗಳನ್ನು ಮತ್ತಷ್ಟು ವಿಸ್ತರಿಸಿದರು. ಮಾಲ್ತಸ್ ನ ಜನಸಂಖ್ಯಾ ಸಿದ್ಧಾಂತ, ಡೆವಿಡ್ ರಿಕಾರ್ಡೊವಿನ ಗೇಣಿ ಸಿದ್ಧಾಂತಗಳು ಭೂಮಿ, ಬಂಡವಾಳ, ಕಾರ್ಮಿಕರು, ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆ, ಕೆಳವರ್ಗದ ಜನರ ಜೀವನ ಮಟ್ಟದ ಸುಧಾರಣೆ ಇಂತಹ ಅಂಶಗಳು ಇವರುಗಳ ಸಿದ್ಧಾಂತದಲ್ಲಿ ಒಳಗೊಂಡಿದ್ದವು.

ನಂತರದ ದಿನಗಳಲ್ಲಿ  ಕಾರ್ಲ್ ಮಾರ್ಕ್ಸ್ ರವರ "ಮೂಲಕ  ನಿಯೊ ಕ್ಲಾಸಿಕಲ್ ಸಿದ್ಧಾಂತ" ಎಂಬ ಹೊಸ ಚಿಂತನೆಯೊಂದು ಬೆಳೆದು ಬಂದಿತು. ಕಾರ್ಮಿಕರ ಶ್ರಮ ಕುರಿತ ಚಿಂತನೆಯನ್ನು ಇದು ಒಳಗೊಂಡಿತ್ತು. ಕೈಗಾರಿಕಾ ಕ್ರಾಂತಿಯ ಪರಿಣಾಮವನ್ನು ಬಲ್ಲವರಾಗಿದ್ದ ಮಾರ್ಕ್ಸ್ ರವರು ತಮ್ಮ ಚಿಂತನೆಗನ್ನು ಪ್ರಕೃತಿ ವಿಜ್ಞಾನದಲ್ಲಿ ಬಳಸಲಾಗುವ ಗಣಿತ ಶಾಸ್ತ್ರದ ವಿಧಾನಗಳನ್ನು ಬಳಸಿ ಸಿದ್ಧಾಂತವನ್ನು ಮಂಡಿಸಿದ್ದರು. ನವಶಾಸ್ತ್ರೀಯ ಅರ್ಥಶಾಸ್ತ್ರ ಎಂದು ಕರೆಯಲಾದ ಈ ಸಿದ್ಧಾಂತದಲ್ಲಿ ಬೇಡಿಕೆ, ಪೂರೈಕೆಯ ಜೊತೆಗೆ ಮಾರುಕಟ್ಟೆಯ ಪ್ರಭಾವ ಕುರಿತು ಅವರು ವಿಶ್ಲೇಷಣೆ ಮಾಡಿದ್ದರು. 1930 ರಲ್ಲಿ ಇಡೀ ವಿಶ್ವವು ಆರ್ಥಿಕ ಹಿಂಜರಿತಕ್ಕೆ ಒಳಗಾದ ನಂತರ ಅರ್ಥಶಾಸ್ತ್ರದಲ್ಲಿ ಹೊಸಮಾದರಿಯ ಚಿಂತನೆಗಳು ಆರಂಭಗೊಂಡವು. ಜಾನ್ ಮೇನಾರ್ಡ್ ಕೇನ್ಸ್ ಅವರ ಸಿದ್ಧಾಂತದ ಜೊತೆಗೆ ಹಲವು ಚಿಂತನೆಯ ಶಾಖೆಗಳು ಹುಟ್ಟಿಕೊಂಡವು. ಸ್ಕೂಲ್ ಆಫ್ ಥಾಟ್ಸ್ ಎಂದು ಕರೆಯಲಾಗುವ ವಿವಿಧ ಜ್ಞಾನಶಾಖೆಗಳಲ್ಲಿ ಮಾರುಕಟ್ಟೆಯ ಪ್ರಭಾವ, ಪ್ರಭುತ್ವದ ಪಾತ್ರ, ಹಣಕಾಸು ನಿರ್ವಹಣೆಯಲ್ಲಿ ಸರ್ಕಾರಗಳು ಕೈಗೊಳ್ಳಬೇಕಾದ ಜವಬ್ದಾರಿಯ ಅಂಶಗಳು ಒಳಗೊಂಡಿದ್ದವು. 1990 ರವರೆಗೆ ಬೆಳೆದು ಬಂದ ಈ ರೀತಿಯ ಚಿಂತನೆಗಳು 1990 ರ  ವೇಳೆಗೆ ಹಿನ್ನಲೆಗೆ ಸರಿದವು. ಜಾಗತೀಕರಣವೆಂಬ ಹೊಸ ಪರಿಕಲ್ಪನೆ  ಮತ್ತು ಮಾರುಕಟ್ಟೆಯ ವ್ಯವಸ್ಥೆ ಹುಟ್ಟಿಕೊಂಡ ಪರಿಣಾಮವಾಗಿ ತಮ್ಮ ಮಹತ್ವವನ್ನು ಕಳೆದುಕೊಂಡವು. ಜೊತೆಗೆ ಅರ್ಥಶಾಸ್ತ್ರದ ವಾಖ್ಯಾನವೂ ಕೂಡ ಬದಲಾಯಿತು. ಅಭಿವೃದ್ಧಿ ಅರ್ಥಶಾಸ್ತ್ರ, ಗ್ರಾಹಕರ ನಡುವಳಿಕೆಯ ಅರ್ಥಶಾಸ್ತ್ರ ( ಬಿಹೇವಿಯರ್ ಎಕನಾಮಿಕ್ಸ್) ಕೃಷಿ ಅರ್ಥಶಾಸ್ತ್ರ, ಮಾರುಕಟ್ಟೆಯ ಅರ್ಥಶಾಸ್ತ್ರ ಹೀಗೆ ಹಲವು ಶಾಖೆಗಳು ಜನ್ಮ ತಾಳಿದವು. ಇವುಗಳಲ್ಲಿ ಅಭಿವೃದ್ಧಿ ಶಾಸ್ತ್ರದಲ್ಲಿ ಬಡತನ, ಹಸಿವು, ನಿರುದ್ಯೋಗ, ಆರೋಗ್ಯ, ಶಿಕ್ಷಣ ಇವುಗಳಿಗೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ಸ್ವೀಡನ್ನಿನ ಗುನ್ನಾರ್ ಮಿರ್ಡಲ್, ಅಮೇರಿಕಾದ ಜೋಸೆಫ್ ಸ್ಲಿಗ್ಲಿಟ್ಜ್ ಭಾರತದ ಅಮಾತ್ರ್ಯಸೇನ್, ಬಂಗ್ಲಾ ದೇಶದ ಮಹಮ್ಮದ್ ಯೂನಸ್ ಮುಂತಾದ ಮಾನವೀಯ ಮುಖವಳ್ಳ ಅರ್ಥಶಾಸ್ತ್ರಜ್ಞರಾಗಿ ಹೊರಹೊಮ್ಮಿದರು.  ಈ ಎಲ್ಲಾ ಮಹಾನುಭಾವರ ಚಿಂತನೆ ಹಾಗೂ ಕೃತಿಗಳಲ್ಲಿ ಜೀವಪರವಾದ  ನಿಲುವುಗಳು ಮಾರ್ಕ್ಸ್ ರವರ ಚಿಂತನೆಗಳಿಂದ ಪ್ರಭಾವಿತವಾಗಿವೆ. ಗುನ್ನಾರ್ ಮಿರ್ಡಲ್ ರವರ " ದ ಏಷಿಯನ್ ಡ್ರಾಮ" ಜೋಸೆಫ್ ಸ್ಲಿಗ್ಲಿಟ್ಜ್ ರವರ " ದ ಗ್ಲೋಬಲೇಜಷನ್ ಅಂಡ್ ಇಟ್ಸ್  ಡಿಸ್‍ಕಂಟೆಂಟ್ಸ್" ಅಮಾತ್ರ್ಯ ಸೇನ್ ರವರ " ಐಡಿಯಾ ವಿತ್ ಜಸ್ಟೀಸ್" ಮಹಮ್ಮದ್ ಯೂನಸ್ ರವರ " ಬ್ಯಾಂಕರ್ ಆಫ್ ಪೂರ್" ಈ ಎಲ್ಲಾ ಕೃತಿಗಳು ಮಾರ್ಕ್ಸ್  ಪ್ರತಿಪಾದಿಸಿದ ಮನುಷ್ಯಪರವಾದ ನಿಲುವುಗಳನ್ನು ಪುಷ್ಟೀಕರಿಸುತ್ತವೆ. ಈ ಕಾರಣಕ್ಕಾಗಿ ಇವರೆಲ್ಲರೂ ಅರ್ಥಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಂದಿನ ಜಗತ್ತು ಮಾರ್ಕ್ಸ್ ರವರ " ನವಶಾಸ್ತ್ರೀಯ ಅರ್ಥಶಾಸ್ತ್ರವನ್ನು" ಪಕ್ಕಕ್ಕೆ ಸರಿಸಿ ಮುಂದೆ ಚಲಿಸಲು ಸಾಧ್ಯವಾಗದ ರೀತಿಯಲ್ಲಿ ಅವರು ಒಬ್ಬ ಪ್ರಭಾವಿ ಅರ್ಥಶಾಸ್ತ್ರಜ್ಞರಾಗಿರುವುದು ವಿಶೇಷವಾಗಿದೆ. ವಿಸ್ಮಯದ ಸಂಗತಿಯೆಂದರೆ, ಮಾರ್ಕ್ಸ್ರರವರು ಜರ್ಮನಿಯನ್ನು ತ್ಯೆಜಿಸಿದ ನಂತರ ಜೀವನ ನಿರ್ವಹಣೆಗಾಗಿ ಲಂಡನ್ ನಗರದಲ್ಲಿ ಅವರು ಪತ್ರಿಕೆಗಾಗಿ ಬರೆದ ಲೇಖನಗಳು ಅರ್ಥಶಾಸ್ತ್ರದ ಚಿಂತನೆಗಳಾಗಿ ರೂಪ ಪಡೆದಿವೆ. ಅವರ ಭಾರತವನ್ನು ಕುರಿತ  ಬರೆದ ಕೃತಿಯಲ್ಲಿ " ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರ, ಇಲ್ಲಿನ ತೆರಿಗೆ ಪದ್ಧತಿ ಕುರಿತಂತೆ  ಚಿಂತನೆಗಳಿದ್ದರೆ, ತತ್ವಶಾಸ್ತ್ರದ ಬಡತನ ಕುರಿತ ಕೃತಿಯು ಪ್ರೊಧಾನ್ ಎಂಬುವರ ಬಡತನ ತತ್ವಶಾಸ್ತ್ರ ಎಂಬ ಕೃತಿಗೆ ಪತ್ರದ ರೂಪದಲ್ಲಿ ಬರೆದ ಚಿಂತನೆಗಳಾಗಿವೆ. ಹಣದ ವಿನಿಮಯ ಮೌಲ್ಯ, ಹಣ, ದುಡಿಮೆಯಿಂದ ಉಳಿತಾಯವಾಗುವ ಹಣ, ಶ್ರಮ ಮತ್ತು ವಿಭಜನೆ, ಯಂತ್ರಗಳು ಹಾಗೂ ಆಸ್ತಿ ಮತ್ತು ಗೇಣಿ, ಪೈಪೋಟಿ ಮತ್ತು ಏಕಸ್ವಾಮ್ಯತೆ ಹೀಗೆ ಹಲವಾರು ವಿಷಯಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಎರಡು ಕೃತಿಗಳ ಮುಂದುವರಿದ ಚಿಂತನೆಗಳು ಎನ್ನುವ ಹಾಗೆ ಅವರು ತಮ್ಮ " ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ" ಕೃತಿಯಲ್ಲಿ ಬಂಡವಾಳ, ಸರಕು, ಹಣದ ಚಲಾವಣೆ, ವಿನಿಮಯದ ಮೌಲ್ಯ, ನಾಣ್ಯಗಳು ಹಾಗೂ ಅವುಗಳ ಮೌಲ್ಯದ ಸಂಕೇತ ಇವುಗಳು ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ.

ಉತ್ಪಾದನೆ, ಬಳಕೆ, ವಿತರಣೆ ಕುರಿತು ದಾಖಲಿಸಿರುವ ಮಾಕ್ರ್ಸ್ ರವರು, ಬಂಡವಾಳವು ಕೆಲವೇ ಮಂದಿಯ ಕೈಯಲ್ಲಿ ಶೇಖರಗೊಳ್ಳುವುದರ ಮೂಲಕ ಒಂದೆಡೆ ಕೇಂದ್ರೀಕೃತಗೊಂಡು ಉತ್ಪಾದನೆಯ ಸಾಮಾಥ್ರ್ಯದ ಪರಿಣಾಮ ಬೀರುತ್ತದೆ. ಇಂತಹ ಬಂಡವಾಳವು ರೈತರು ಮತ್ತು ಕಾರ್ಮಿಕರಿಂದ ಬಂಡವಾಳಶಾಹಿ ಜಗತ್ತು ಕಸಿದುಕೊಂಡ ಸಂಪತ್ತು ಎಂದು ವಿಶ್ಲೇಷಿಸುತ್ತಾರೆ.  ಮಾನವ ಶ್ರಮವನ್ನು ಸಾರ್ವಜನಿಕ ಶ್ರಮ ಎಂದು ಕರೆದ ಮಾರ್ಕ್ಸ್. ಅದಕ್ಕೆ ಬಂಡವಾಳದಷ್ಟೇ ಮಾನ್ಯತೆಯನ್ನು ತಂದುಕೊಟ್ಟು ಮಹಾನ್ ಮಾನತಾವಾದಿ ಎಂದು ಬಣ್ಣಿಸಬಹುದು.ಈ ಮೂರು ಕೃತಿಗಳು ಉತ್ತಮವಾದ ಭಾಷೆಯಲ್ಲಿ ಕನ್ನಡಕ್ಕೆ ಅನುವಾದಗೊಂಡಿದ್ದರೂ ಸಹ ಇಲ್ಲಿನ ವಿಷಯಗಳು ಮಾಕ್ಸ್ ್ ರವರ ಚಿಂತನೆಗಳ ಆಸಕ್ತರಿಗೆ ಮತ್ತು ಅರ್ಥಶಾಸ್ತ್ರದ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಹೆಚ್ಚಿನ ಉಪಯೋಗವಾಗುವದರಲ್ಲಿ ಸಂಶಯವಿಲ್ಲ. ಆದರೆ, ಸಾಮಾನ್ಯ ಓದುಗರಿಗೆ ಇಂತಹ ವಿಷಯಗಳನ್ನು ಓದಿ ಜೀರ್ಣಿಸಿಕೊಳ್ಳುವುದು ಕೊಂಚ ಮಟ್ಟಿಗೆ ತ್ರಾಸದಾಯಕ. ಆದರೆ, ಕನ್ನಡದ ಸಾಹಿತ್ಯ ಮತ್ತು ಸಾಂಸ್ಕøತಿಕ ಜಗತ್ತಿಗೆ ಕನ್ನಡದ ಭಾಷೆಯಲ್ಲಿ ಮಾರ್ಕ್ಸ್ ರವರ ಚಿಂತನೆಗಳು ಕೃತಿಯ ರೂಪದಲ್ಲಿ ಪ್ರಕಟವಾಗುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಹಾಗೂ ಸ್ತುತಾರ್ಹ ಕಾರ್ಯವಾಗಿದೆ.
( ಹೊಸತು ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ