Friday, 26 June 2020

ಮನುಕುಲದ ಹೀನ ಚರಿತ್ರೆಯ ಒಂದು ಕರಾಳ ಅಧ್ಯಾಯ
ಆರು ವರ್ಷಗಳ ಹಿಂದೆ ಒಂದು ದಿನ ತಮಿಳುನಾಡಿನ ತಂಜಾವೂರು ನಗರದಲ್ಲಿದ್ದೆ. ಬೆಂಗಳೂರು ನಾಗರತ್ನಮ್ಮನವರ ಕುರಿತು ಅಧ್ಯಯನ ಮಾಡುತ್ತಿದ್ದ ನಾನು ಅವರು ಸಂಪಾದಿಸಿ, ಟಿಪ್ಪಣಿ ಬರೆದಿದ್ದ ಮುದ್ದುಪಳನಿ ಎಂಬಾಕೆಯ  ರಾಧಿಕಾ ಸಾಂತ್ವನಮು ಎಂಬ ತೆಲಗು ಮೂಲ ಕೃತಿಯ ಹುಡುಕಾಟದಲ್ಲಿ ನಿರತನಾಗಿದ್ದೆ. ಹದಿನೆಂಟನೇ ಶತಮಾನದಲ್ಲಿ ತಂಜಾವೂರನ್ನು ಆಳಿದ ಮರಾಠ ದೊರೆಗಳಲ್ಲಿ ಒಬ್ಬನಾದ ಪ್ರತಾಪಸಿಂಹ ಎಂಬುವನ ಆಸ್ಥಾನದಲ್ಲಿ ನೃತ್ಯಗಾತಿಯಾಗಿದ್ದ ಮುದ್ದುಪಳನಿ ಎಂಬ ದೇವದಾಸಿ ಬರೆದ ತೆಲುಗು ಮೋಡಿ ಅಕ್ಷರದ ಆ ಕೃತಿಯು ಅಲ್ಲಿನ ಅರಮನೆ ಆವರಣದದಲ್ಲಿರುವ ಸಂಗೀತ ಮಹಲ್ ಎಂಬ ಗ್ರಂಥಾಲಯದಲ್ಲಿತ್ತು.
ಬೆಳಿಗ್ಗೆ ತಿರುವಯ್ಯಾರಿನ ನಾಗರತ್ನಮ್ಮನವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಮಧ್ಯಾಹ್ನದ ವೇಳೆಗೆ ಸರಸ್ಪತಿ ಮಹಲ್ ನಲ್ಲಿದ್ದೆ. ಸಂಜೆ ಆರು ಗಂಟೆಗೆ ಅರಮನೆಯ ಕೋಟೆ ಬಾಗಿಲು ಹಾಕುವುದರಿಂದ  ಕೃತಿಯನ್ನು ವೀಕ್ಷಿಸಿ, ಕೋಟೆ ಬಾಗಿಲಿನಿಂದ ಹೊರಬಿದ್ದೆ. ತಕ್ಷಣ ಹಸಿವು ಕಾಡತೊಡಗಿತು. ಮಧ್ಯಾಹ್ನ ಕೇವಲ ಮೊಸರನ್ನ ತಿಂದು ಸರಸ್ಪತಿ ಮಹಲ್ ಗ್ರಂಥಾಲಯಕ್ಕೆ ಬಂದಿದ್ದೆ. ಕೊಟೆ ಮುಖ್ಯ ದ್ವಾರದ ಬಳಿ ಇದ್ದ ತಂಜಾವೂರಿನ ಪ್ರಸಿದ್ಧ ಬೇಕರಿಯಲ್ಲಿ ವೆಜಿಟೇಬಲ್ ಪಪ್ಸ್  ತಿಂದು ಒಂದು ಲೋಟ ಸ್ಟ್ರಾಂಗ್ ಫಿಲ್ಟರ್ ಕಾಫಿ ಕುಡಿದ ನಂತರ  ಮನಸ್ಸಿಗೆ ಸಮಧಾನವಾಯಿತು.
ಬೇಕರಿ ಪಕ್ಕದ ಹಾಗೂ ಮುಚ್ಚಲಾಗಿದ್ದ ಅಂಗಡಿಯೊಂದರ ಮೆಟ್ಟಿಲುಗಳ ಮೇಲೆ ಕುಳಿತು ಸಿಗರೇಟ್ ಸೇದುತ್ತಾ, ಅರಮನೆಯ ಕೋಟೆ ಗೋಡೆಗಳ ಮೇಲೆ ಬಿಡಿಸಲಾಗಿದ್ದ ಬೃಹತ್ ವರ್ಣ ಚಿತ್ರಗಳನ್ನು ಗಮನಿಸುತ್ತಿದ್ದೆ. ಕೋಟೆಯ ಗೋಡೆಗಳ ಮೇಲೆ ಸಿನಿಮಾ ಹಾಗೂ ಇತರೆ ಪೋಸ್ಟರ್ ಅಂಟಿಸಬಾರದು ಎಂಬ ಉದ್ದೇಶದಿಂದ ಹತ್ತು ಅಡಿ ಎತ್ತರದ ಗೋಡೆಯ ಮೇಲೆ ಆ ಕಾಲದ ಯುದ್ಧದ ಸನ್ನಿವೇಶಗಳನ್ನು ಚಿತ್ರಿಸಲಾಗಿತ್ತು.
ಎರಡು ಕಡೆ ಸಾವಿರಾರು ಸೈನಿಕರು, ಕತ್ತಿ, ಭರ್ಜಿ ಹಿಡಿದು ಮುನ್ನುಗ್ಗುವ ಚಿತ್ರ, ಮೈ ತುಂಬಾ ಬಾಣ ಹಾಗೂ ಭರ್ಜಿಗಳು ನಾಟಿದ್ದರೂ ಸಹ ವೀರಾವೇಶದಿಂದ ಎದುರಾಳಿ ಪಡೆಯತ್ತ ನುಗ್ಗುತ್ತಿರುವ ಆನೆ ಮತ್ತು ಕುದುರೆಗಳು ಇವುಗಳನ್ನು ಗಂಬೀರವಾಗಿ ಅವಲೋಕಿಸುತ್ತಿದ್ದಾಗ, ಜಗತ್ತಿನ ದೈತ್ಯ ಪ್ರಾಣಿಗಳಲ್ಲಿ ಒಂದಾದ ಆನೆಯನ್ನು ಈ ಮನುಷ್ಯ ಹೇಗೆ ಪಳಗಿಸಿದ? ಎಂಬ ಪ್ರಶ್ನೆ ಎದುರಾಯಿತು. ಸಂಜೆ ಹೋಟೆಲ್ ಕೊಠಡಿಗೆ ಹೋಗಿ ಮಾಡುವ ಕೆಲಸ ಏನೂ ಇರಲಿಲ್ಲ. ಹಾಗಾಗಿ ಅಲ್ಲಿಯೇ ಚಿತ್ರಗಳನ್ನು ನೋಡುತ್ತಾ, ಮನುಷ್ಯನ ಚಾಣಾಕ್ಷತನ ಮತ್ತು ಕ್ರೌರ್ಯದ ಬಗ್ಗೆ ಯೋಚಿಸುತ್ತಾ ಕುಳಿತೆ.
ಈ ಜಗತ್ತಿನ ಇತಿಹಾಸದಲ್ಲಿ ಮನುಷ್ಯನ ಅಧಿಕಾರದ ದಾಹಕ್ಕೆ ಮತ್ತು ಸ್ವಾರ್ಥಕ್ಕೆ ಎಷ್ಟೋಂದು ಮೂಕ ಪ್ರಾಣಿಗಳು ಹಾಗೂ ಮುಗ್ಧ ಸೈನಿಕರು ಬಲಿಯಾದರು ಎಂದು ಲೆಕ್ಕ ಹಾಕತೊಡಗಿದೆ. ಮನುಷ್ಯ ಜಗತ್ತಿನ ಮೇಲಿರುವ ಅತ್ಯಂತ  ಕ್ರೂರ ಪ್ರಾಣಿ ಎಂದು ಆ ಕ್ಷಣಕ್ಕೆ ನನಗೆ ಮನದಟ್ಟಾಯಿತು.

ಕಾಶ್ಮೀರದ ಪಂಡಿತ ಸಮುದಾಯದಿಂದ ಬಂದ ರಾಹುಲ ಪಂಡಿತ್ ಎಂಬ ಪತ್ರಕರ್ತನೊಬ್ಬ  (ಬಹುಶಃ ಈಗ ಆತ  ನಾಗಪುರದಲ್ಲಿ ಹಿಂದೂ ಪತ್ರಿಕೆಯಲ್ಲಿರಬೇಕು.) ಆರೇಳು ವರ್ಷಗಳ ಹಿಂದೆ ತನ್ನ 34 ನೇ ವಯಸ್ಸಿನಲ್ಲಿ “ ಅವರ್ ಮೋನ್ ಹ್ಯಾಸ್ ಬ್ಲಡ್ ಕ್ಲಾಟ್ಸ್”  ಎಂಬ ಹೆಸರಿನಲ್ಲಿ ಕಾಶ್ಮೀರದಲ್ಲಿ ಪಂಡಿತ ಸಮುದಾಯ ಅನುಭವಿಸಿದ ನೋವು,, ಅವರ ವಲಸೆ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ತನ್ನ ಕುಟುಂಬದ ಹಾಗೂ ತನ್ನೊಡಲ ಸಂಕಟವನ್ನು ಕೃತಿಯಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿದ್ದಾನೆ. ಈ ಕೃತಿಯಲ್ಲಿ ಅವನು ಪ್ರಸ್ತಾವನೆಯಲ್ಲಿ ಬರೆದ ಕಾಶ್ಮೀರದ ಇತಿಹಾಸ ಹಾಗೂ ಅಲ್ಲಿನ ಪಂಡಿತರ ಸಾಹಿತ್ಯದ ಪ್ರತಿಭೆ ಇವೆಲ್ಲವೂ ಅತ್ಯಮೂಲ್ಯ ಸಂಗತಿಗಳಾಗಿವೆ. ಇದರ ಜೊತೆಯಲ್ಲಿ ಭಾರತದ ಮೇಲೆ ದಂಡೆತ್ತಿ ಬರುತ್ತಿದ್ದ ಮುಸ್ಲಿಂ ದೊರೆಗಳ ಕ್ರೌರ್ಯವನ್ನೂ ಕುರಿತು ಸಹ  ಅವನು ದಾಖಲಿಸಿದ್ದಾನೆ.
ಭಾರತಕ್ಕೆ ಬರುತ್ತಿದ್ದ ಮುಸ್ಲಿಂ ದೊರೆಗಳು ಆಫ್ಗನ್ ಮತ್ತು ಕಾಶ್ಮೀರದ ಗುಡ್ಡ ಕಣಿವೆಗಳನ್ನು ಹಾಯ್ದು ಬರಬೇಕಿತ್ತು. ಒಮ್ಮೆ ದೊರೆಯೊಬ್ಬ ತನ್ನ ಸೈನ್ಯದೊಂದಿಗೆ ಬರುತ್ತಿದ್ದಾಗ, ಆನೆಯೊಂದು ಗುಡ್ದದ ಮೇಲಿಂದ ಜಾರಿ ಆಳವಾದ ಕಣಿವೆಯೊಳಕ್ಕೆ ಬಿತ್ತು. ಅದು ಉರುಳಿ ಬೀಳುವಾಗ ಘೀಳಿಡುತ್ತಿದ್ದ ಶಬ್ದ ದೊರೆಗೆ ಸಂತೋಷವನ್ನುಂಟು ಮಾಡಿತು. ಆ ಶಬ್ದವನ್ನು ಮತ್ತೇ ಕೇಳುವ ಉದ್ದೇಶದಿಂದ ದೊರೆಯ  ತನ್ನ ಪಡೆಯಲ್ಲಿದ್ದ ಆನೆಗಳನ್ನು ಕಣಿವೆಗೆ ಉರುಳಿಸಿದ ಸಂಗತಿಯನ್ನು ರಾಹುಲ ಪಂಡಿತ ಪರಿಣಾಮಕಾರಿಯಾಗಿ ದಾಖಲಿಸಿದ್ದಾನೆ.
ಇದಕ್ಕೆ ಭಿನ್ನವಾದ ಮತ್ತೊಂದು ಘಟನೆಯನ್ನು ಖ್ಯಾತ ಲೇಖಕ ಹಾಗೂ ಇತಿಹಾಸಕಾರ ವಿಲಿಯಂ ಡಾಲಿಂಪ್ರೆಲ್ ತನ್ನ “ ಲಾಸ್ಟ್ ಮೊಗಲ್ ”  ಎಂಬ ಕೃತಿಯಲ್ಲಿ ದಾಖಲಿಸಿದ್ದಾನೆ. 1857 ರಲ್ಲಿ ನಡೆದ ಸಿಪಾಯಿ ದಂಗೆ ಯುದ್ಧಕ್ಕೆ  ಕೊನೆಯ ಮೊಗಲ್ ದೊರೆ ಬಹುದ್ದೂರ್ ಶಾ ಬೆಂಬಲ ನೀಡಿದನು ಎಂಬ ಕಾರಣಕ್ಕೆ ಆತನ ನಾಲ್ವರು ಪುತ್ರರನ್ನು ಬಹಿರಂಗವಾಗಿ ನೇಣಿಗೇರಿಸಿದ ಬ್ರಿಟೀಷ್ ಸರ್ಕಾರ, ಹುಮಾಯನ್ ಸಮಾಧಿಯ ಬಳಿ ಜೀವ ಭಯದಿಂದ ತನ್ನ ಇಬ್ಬರು ರಾಣಿಯರು ಮತ್ತು ಪುತ್ರರೊಂದಿಗೆ  ಅವಿತುಕೊಂಡಿದ್ದ ದೊರೆಯನ್ನು ಬಂಧಿಸಿ, ಕೆಂಪುಕೋಟೆಯ ನೆಲಮಹಡಿಯಲ್ಲಿ ಇರಿಸಿತು.
ದೊರೆ ಕಾಣೆಯಾದ ದಿನದಿಂದ ಆತನ ಮೆಚ್ಚಿನ ಒಂದು ಕುದುರೆ ಹಾಗೂ ಹನ್ನೊಂದು ಅಡಿ ಎತ್ತರದ ಆನೆ ಈ ಎರಡು ಪ್ರಾಣಿಗಳು ಲಾಯದಲ್ಲಿ ಆಹಾರ, ನೀರು ತ್ಯೆಜಿಸಿ ಮೌನವಾಗಿ ನರಳತೊಡಗಿದವು. ಹತ್ತು ದಿನಗಳ ನಂತರ  ಈ ಪ್ರಾಣಿಗಳ ವಿಷಯ ತಿಳಿದ ಬ್ರಿಟಿಷರು ಅವುಗಳನ್ನು ನಾನೂರು ರೂಪಾಯಿಗಳಿಗೆ ( ಆನೆಗೆ 250 ರೂ. ಕುದುರೆಗೆ 150 ರೂಪಾಯಿ) ಪಾಟಿಯಾಲ ದ ಸಿಕ್ ದೊರೆಗೆ ಮಾರಾಟ ಮಾಡಿದರು. ಹದಿನೇಳನೆಯ ದಿನ ಸಿಖ್ ದೊರೆ ಅವುಗಳನ್ನು ತನ್ನ ವಶಕ್ಕೆ ಪಡೆಯಲು  ದೆಹಲಿಗೆ ಬಂದಾಗ, ಲಾಯದಲ್ಲಿ ಅವರೆಡೂ ಪ್ರಾಣಿಗಳು ತನ್ನ ದೊರೆಗಾಗಿ ಹಂಬಲಿಸುತ್ತಾ ಅಸು ನೀಗಿದ್ದವು.

ಬಹುದ್ದೂರ್ ಶಾ ನನ್ನು ವಿಚಾರಣೆಗೆ ಒಳಪಡಿಸಿದ ಬ್ರಿಟೀಸ್ ಸರ್ಕಾರ, ನಂತರ ಅವನನ್ನು ಹಾಗೂ ಅವನ ಇಬ್ಬರು  ಪತ್ನಿಯರು, ಪುತ್ರರು ಮತ್ತು ಆರು ಮಂದಿ ಸೇವಕರನ್ನು ಬರ್ಮಾ ದೇಶದ ರಂಗೂನ್ ಗೆ ಗಡಿ ಪಾರು  ಮಾಡಿ ಜೀವಂತ ಗೃಹ ಬಂಧನದಲ್ಲಿ ಇರಿಸಲಾಗಿತ್ತು.
ದೊರೆಯ ಪರಿವಾರವನ್ನು ನಾಲ್ಕು ಜೊತೆ  ಎತ್ತಿನ ಗಾಡಿಯಲ್ಲಿ ದೆಹಲಿಯಿಂದ ರಂಗೂನ್ ಗೆ ಕಳಿಸಲಾಯಿತು. ದೆಹಲಿಯಿಂದ ರಂಗೂನ್ ವರೆಗೆ  ಸಾವಿರಾರು ಕಿ.ಮಿ. ದೂರವನ್ನು ಸತತ ನಾಲ್ಕು ತಿಂಗಳ ಕಾಲ ಮೂಕ ಪ್ರಾಣಿಗಳಾದ ಎತ್ತುಗಳು  ಗಾಡಿಗಳನ್ನು ಎಳೆದು ಸಾಗಿಸಿದ್ದವು.
ಇದು ಎಲ್ಲಕ್ಕಿಂದ ಭಿನ್ನವಾದ ಮತ್ತೋಂದು ಕಥೆ. ಇತ್ತೀಚೆಗೆ ಸಭವಿಸಿತು.  2017 ರ ಕೊನೆಯಲ್ಲಿ ಲಾರೆನ್ಸ್ ಆಂತೋಣಿ ಎಂಬ ಆನೆಗಳ ಸಂರಕ್ಷಕ  ದಕ್ಷಿಣ ಆಫ್ರಿಕಾದ ತನ್ನ ಅಭಯಾರಣ್ಯದಲ್ಲಿ ನಿಧನ ಹೊಂದಿದಾಗ ಮುವತ್ತಕ್ಕೂ ಹೆಚ್ಚು ಆನೆಗಳು ಅವನ ಮನೆಯ ಸಮೀಪ ಧಾವಿಸಿ ಮೂರುದಿನಗಳ ಕಾಲ ಮೌನವಾಗಿ ನಿಂತು ಕಣ್ಣೀರು ಹಾಕುತ್ತಾ ಅಗಲಿದ ಒಡೆಯನಿಗೆ ಶ್ರದ್ಧಾಂಜಲಿ ಸಲ್ಲಿಸಿದವು. ಈ ಘಟನೆ ಜಗತ್ತಿನಾದ್ಯಂತ ಸುದ್ದಿಯಾಯಿತು. ಲಾರೆನ್ಸ್ ಆಂತೋಣಿ  ಮೂಲತಃ ಇಂಗ್ಲೇಂಡಿನ ಆಗರ್ಭ ಶ್ರೀಮಂತ ವ್ಯಕ್ತಿಯಾಗಿದ್ದ. ದಕ್ಷಿಣ ಆಫ್ರಿಕಾ ಸರ್ಕಾರ 25 ಸಾವಿರ ಹೆಕ್ಟೇರ್ ಪ್ರದೇಶದ ಅರಣ್ಯವನ್ನು ಹಾಗೂ ಅಲ್ಲಿನ ವನ್ಯ ಮೃಗಗಳನನ್ನು  ಸಂರಕ್ಷಿಸಲು ಸಾಧ್ಯವಾಗದೆ ಮಾರಾಟ ಮಾಡಲು ನಿರ್ಧರಿಸಿದಾಗ, ಬೇಟೆಗಾರರಿಂದ ಪ್ರಾಣಿಗಳನ್ನು ರಕ್ಷಿಸುವ ಉದ್ದೇಶದಿಂದ  ಲಾರೆನ್ಸ್ ಅಭಯಾರಣ್ಯವನ್ನು ಖರೀದಿಸಿದ. ಜೊತೆಗೆ ತನ್ನ ಕುಟುಂಬವನ್ನು ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಿ, ಅರಣ್ಯದೊಳಗೆ ನಿವಾಸ ನಿರ್ಮಿಸಿಕೊಂಡು ವಾಸಿಸತೊಡಗಿದ. ನೂರಾರು ಮಂದಿ ಸಹಾಯಕರನ್ನು ನೇಮಿಸಿಕೊಂಡು, ಹಗಲು, ರಾತ್ರಿ ಓಡಾಡುತ್ತಾ ಕಾಡು ಪ್ರಾಣಿಗಳನ್ನು ರಕ್ಷಿಸುತ್ತಾ ಸತತ ಮುವತ್ತು ವರ್ಷಗಳ ಅಲ್ಲಿಯೇ ಕಾಲ ಕಳೆದ.

ತಾನು ಅರಣ್ಯಕ್ಕೆ ಬಂದ ಹೊಸತರಲ್ಲಿ ತನ್ನ ಮನೆಯ  ತಂತಿ ಬೇಲಿಯ ಬಳಿ ಬಂದ  ಹೆಣ್ಣಾನೆಯ ಜೊತೆ ಸ್ನೇಹ ಬೆಳಸತೊಗಿದ. ಬೇಲಿಯೊಳಗೆ ಕೈ ತೂರಿ ಅವರ ಸೊಂಡಿಲು ಮುಟ್ಟುವುದು, ಅದಕ್ಕೆ ಆಹಾರ ನೀಡುವುದರ ಮೂಲಕ ಬಾಂಧ್ಯವ್ಯ ಬೆಳಿಸಿದ. ಒಂದು ದಿನ ಆನೆ ತನ್ನ ಮರಿಯೊಂದಿಗೆ ಲಾರೆನ್ಸ್ ಮನೆಗೆ ಬಂದು ಆತನ ಕುಟುಂಬದ ಸದಸ್ಯರಲ್ಲಿ ಒಂದಾಯಿತು. ನಂತರದ ದಿನಗಳಲ್ಲಿ ಅದರ ಸಂತತಿ ಹಾಗೂ ಇತರೆ ಆನೆಗಳು ಮುವತ್ತು ವರ್ಷಗಳ ಕಾಲ ಅವನ ಒಡನಾಡಿಗಳಾಗಿ ಬದುಕಿದವು. ಈ ಎಲ್ಲಾ ನೈಜ ಘಟನೆಗಳನ್ನು ನೋಡಿದಾಗ ಮೂಕ ಪ್ರಾಣಿಗಳ ನಿಷ್ಟೆ ಮತ್ತು ವಿಶ್ವಾಸ  ಆಶ್ಚರ್ಯ ಮೂಡಿಸುತ್ತವೆ.
ಮನುಷ್ಯ ನಾಗರೀಕತೆಯ ಆರಂಭವಾದ ದಿನಗಳಿಂದ  ನಾಯಿ, ಹಸು ಮತ್ತು ದನ, ಕುದುರೆ ಹಾಗೂ ಆನೆ ಮನುಷ್ಯ ಜೀವಿಯ ಸಂಗಾತಿಗಳಾಗಿರುವುದನ್ನು ನಾವು ಗಮನಿಸಬಹುದು. ಅವುಗಳ ಮೂಲಕ ಮನುಷ್ಯ ಬದುಕು ಕಟ್ಟಿಕೊಂಡಿದ್ದಾನೆ.  ಆದರೆ,ಇದಕ್ಕೆ ಪ್ರತಿಯಾಗಿ ಆಧುನಿಕ ನಾಗರೀಕತೆಯ ಕಾಲದಲ್ಲಿ ಮನುಷ್ಯ ಈ ಮೂಕ ಪ್ರಾಣಿಗಳಿಗೆ ಏನು ನೀಡಿದ್ದಾನೆ? ಅಥವಾ ಹೇಗೆ ನೋಡತ್ತಿದ್ದಾನೆ?
ಇತ್ತೀಚೆಗೆ ಕೇರಳದಲ್ಲಿ ಸಿಡಿಮದ್ದು ಇಟ್ಟು ಆನೆ ಬಾಯಿಯನ್ನು ಸ್ಟೋಟಿಸಿದ  ಹಾಗೂ ಜೈಪುರದಲ್ಲಿ ಹಣ್ಣಿನೊಳಗೆ ಇದೇ ರೀತಿ ಸಿಡಿಮದ್ದು ಇರಿಸಿ, ಬೀದಿಯ ಅಡ್ಡಾಡುತ್ತಿದ್ದ ಹಸುವನ್ನು ಕೊಂದ ನಾಗರೀಕರ ಕ್ರೌರ್ಯವನ್ನು ನೆನೆದಾಗ ನನಗೆ ಈ ಕಥನಗಳು ನೆನಪಾದವು. ಇದು ಮನುಷ್ಯ ನಾಗರೀಕತೆಯ ಅವಸಾನಸದ ಕಾಲ ಎಂದು ಅನಿಸತೊಡಗಿದೆ.

No comments:

Post a Comment