Thursday, 2 July 2020

ಬಾಲ್ಯದ ನೆನಪುಗಳು-2 ಆಹಾ ಗಾಳಿಪಟ, ಹಾರೋ ಪಟನಿನ್ನೆ ಉಪವಾಸ ಅಥವಾ ಏಕಾದಶಿ ಹಬ್ಬ ಎಂದು ನನ್ನ ಪತ್ನಿ ನೆನಪಿಸಿದಳು. ನನ್ನ ಮಂಡ್ಯ ಜಿಲ್ಲೆಯಲ್ಲಿ ಉಪವಾಸದ ಹಬ್ಬವೆಂದರೆ, ಗಾಳಪಟದ ಹಬ್ಬ ಎಂದು ಅರ್ಥ.  ಹಬ್ಬದ ದಿನದಂದು ಹೋಳಿಗೆ ಇಲ್ಲವೆ ವಡೆ, ಪಾಯಸ ಮಾಡುತ್ತಿದ್ದರು.  ಮಾರನೇ ದಿನ ಮಾಂಸದೂಟವೂ ಇರುತ್ತದೆ. ಹೊಸದಾಗಿ ಮದುವೆಯಾದ ಅಳಿಯಂದಿರು ಆಷಾಡ ಮಾಸದಲ್ಲಿ ಅತ್ತೆ ಮನೆಗೆ ಹೊಗಬಾರದು ಎಂದು ನಿಯಮವಿದ್ದ ಕಾರಣ ದಿನಗಳಲ್ಲಿ ಮಾವನ ಮನೆಯಿಂದ ಒಂದು ಬುಟ್ಟಿ ತುಂಬಾ ವಡೆ, ಕಜ್ಜಾಯ, ಕೋಡುಬಳೆ, ಚಕ್ಕುಲಿ, ಒಬ್ಬಟ್ಟು ಬಂದರೆ, ಮರುದಿನ ಕೋಳಿ ಮಾಂಸ ಇಲ್ಲವೆ ಕುರಿ ಅಥವಾ ಮೇಕೆ ಮಾಂಸವನ್ನು ಕಳಿಸುವ ಪದ್ಧತಿಯಿತ್ತು. ನಾವು  ವಿವಾಹವಾಗುವ ವೇಳೆಗೆ ಪದ್ಧತಿ ಬಹುತೇಕ ಮರೆಯಾಗಿತ್ತು.
ಬಾಲ್ಯದಲ್ಲಿ ನಮಗೆ ಉಪವಾಸ ಹಬ್ಬದ ಮುಂಚಿನ ದಿನಗಳಲ್ಲಿ ಗಾಳಿಪಟ ಹಾರಿಸುವುದು ಕೇವಲ ಸಂಭ್ರಮ ಮಾತ್ರವಾಗಿರದೆ ಕಾಯಕವೂ ಆಗಿತ್ತು. ಈಗ ಗ್ರಾಮಾಂತರ ಪ್ರದೇಶದ ಬಯಲಿನಲ್ಲಿ ಗಾಳಿಪಟ ಹಾರಿಸುವ ಹುಡುಗರು ಕಾಣಿಸುವುದಿಲ್ಲ. ನಗರದ ಪ್ರದೇಶದಲ್ಲಿ ಮನೆಗಳ ಮೇಲೆ ನಿಂತು ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಒಂದಿಷ್ಟು ಹುಡುಗರು ಮಾತ್ರ ಕಾಣಸಿಗುತ್ತಾರೆ. ನಮ್ಮ ಬಾಲ್ಯದ ಗಾಳಿಪಟಗಳೆಂದರೆ, ಈಗಿನ ಬಾಲಿವುಡ್ ಚಿತ್ರರಂಗದ ಚಮಕ್ ತಾರೆಯರಂತೆ ಇರಲಿಲ್ಲ. ಕಪ್ಪು ಬಿಳಪು ಸಿನಿಮಾ ತಾರೆಯರಾದ ಪದ್ಮಿನಿ, ಸಾವಿತ್ರಿ, ಭಾರತಿ, ಬಿ.ಸರೋಜಾದೇವಿ, ಲೀಲಾವತಿ, ಕೃಷ್ಣವೇಣಿ ತರಹ ಇದ್ದವು.
ಈಗ ಬಗೆ ಬಗೆಯ ಪಕ್ಷಿಗಳು, ದೇವತೆಯ ಚಿತ್ರಗಳು, ಪ್ರಾಣಿಗಳನ್ನು ಹೋಲುವ ಅಥವಾ ಬಾಲಗೋಂಚಿ ಇಲ್ಲದ, ಬಣ್ಣ ಬಣ್ಣದ ಹಾಗೂ ಹರಿಯದ ಪ್ಲಾಸ್ಟಿಕ್ ನಿಂದ ತಯಾರಾದ ಗಾಳಿಪಟಗಳು ಎಲ್ಲಾ ಅಂಗಡಿಗಳಲ್ಲಿ ದೊರೆಯುತ್ತವೆ. ಆದರೆ, ನಾವು ಗಾಳಿಪಟ ಹಾರಿಸುವುದು ಮಾತ್ರವಲ್ಲ, ಅವುಗಳನ್ನು ತಯಾರಿಸುವುದರಲ್ಲೂ ನಿಪುಣರಾಗಿದ್ದೆವು. ಒಂದಿಷ್ಟು, ತೆಂಗಿನ ಕಡ್ಡಿ, ಬಳಸಿ ಬಿಸಾಡಿದ ದಿನಪತ್ರಿಕೆಯ ಕಾಗದ, ಅವ್ವನ ಹಳೆಯ ಸೀರೆ ಅಥವಾ ಅಪ್ಪನ ಹಳೆಯ ಪಂಚೆ ಅಥವಾ ಟವಲ್ ಸಿಕ್ಕರೆ ಸಾಕು. ನಮ್ಮ ಜನಸಿನ ಕನಕ ಎಂಬ ಸರಳವಾದ ಗಾಳಿಪಟ ಚಿತ್ರದಲ್ಲಿರುವಂತಹದ್ದು ಮತ್ತು ಬೋರಂಟಿ ಎಂಬ ಚೌಕಕಾರದ ದೊಡ್ಡದಾದ ಗಾಳಿ ತಯಾರು ಮಾಡುತ್ತಿದ್ದೆವು. ಅವ್ವ, ಅಪ್ಪಂದಿರ ಹಳೆಯ ವಸ್ತ್ರಗಳನ್ನು  ಟೇಪುಗಳಂತೆ ಉದ್ದಕ್ಕೆ  ಹರಿದು ಬಾಲಗೊಂಚಿಗೆ ಬಳಸುತ್ತಿದ್ದೆವು. ದಾರದ ಉಂಡೆಗೆ ಮಾತ್ರ ನಾವು ಬಂಡವಾಳ ಉಪಯೋಗಿಸಬೇಕಿತ್ತು. ಎಲ್ಲರ ಮನೆಯಲ್ಲಿ ನಾವು ಹಳೇ ಮಿಷನ್ ಗಳೆಂದು ಕರೆಯುತ್ತಿದ್ದ ನಮ್ಮ ಅಜ್ಜ, ಅಜ್ಜಿಯರು ಇರುತ್ತಿದ್ದರಿಂದ ಅವರನ್ನು ಬೇತಾಳದಂತೆ ಬೆನ್ನು ಹತ್ತಿ ಒಂದಾಣೆ, ಎರಡಾಣೆ ಸಂಪಾದಿಸುತ್ತಿದ್ದೆವು.
ನಮ್ಮ ಶಾಲಾ ದಿನಗಳಲ್ಲಿ  ಮನೆಗೆ  ಸಂತೆಯಲ್ಲಿ ಸಾಮಾನು ತರಬಹುದಾದ ಅಥವಾ ನಮ್ಮ ಸ್ಲೇಟು, ಬಳಪ ಕ್ಕಾಗಿ ಶಾಲೆಗೆ ಬಳಸಬಹುದಾದ ಉದ್ದನೆಯ ಖಾಕಿಯ ಕೈ ಚೀಲದಲ್ಲಿ ಸ್ಲೇಟು ಬಳಪದ ಜೊತೆಗೆ ತೆಂಗಿನ ಕಟ್ಟಿ, ಹಳೆಯ ಪೇಪರು, ಬಾಲಂಗೋಚಿ, ಮತ್ತು ಪಟವನ್ನು ಸಿದ್ಧಪಡಿಸುವುದಾಗಿ ಮನೆಯಲ್ಲಿ ಅವ್ವಂದಿರಿಗೆ ಕಾಣದಂತೆ ಅಡುಗೆ ಮನೆಯಲ್ಲಿ ಕದ್ದ ಹೆಬ್ಬೆಟ್ಟು ಗಾತ್ರದ ಮುದ್ದೆಯ ಚೂರು ಇಲ್ಲವೆ ಅನ್ನದ ಅಗುಳಿನ ಉಂಡೆ ಇವೆಲ್ಲವೂ ಇರುತ್ತಿದ್ದವು. ಅನ್ನ ಮತ್ತು ಮದ್ದೆಯ ಚೂರುಗಳನ್ನು ಗೊಂದು ರೀತಿಯಲ್ಲಿ ಪಟಗಳನ್ನು ಅಂಟಿಸುವುದಕ್ಕೆ ಬಳಕೆ ಮಾಡುತ್ತಿದ್ದವು.
ಶಾಲೆಗೆ ತೆರಳುವ ಮುನ್ನ ಹಾಗೂ ಶಾಲೆ ಬಿಟ್ಟ ನಂತರ ನಮಗೆ ಗಾಳಿಪಟದ ಲೋಕವಲ್ಲದೆ ಬೇರೇನೂ ಇರಲ್ಲಿಲ್ಲ. ನಿಜ ಹೇಳಬೇಕೆಂದರೆ, ನಮಗೆ ಬೇಕಾಗಿಯೂ ಇರಲಿಲ್ಲ. ಅತಿ ಹೆಚ್ಚು ಗಾಳಿ ಬೀಸುವ ಊರ ಹಿಂದಿನ ಕೆರೆ ಸಮೀಪದ ಕಲ್ಲು ಮಟ್ಟಿ ಎಂಬ ಜಾಗ, ಕೆರೆಯ ಏರಿ ಇಲ್ಲವೇ ಶಾಲಾ ಮೈದಾನ ಕಾಲದಲ್ಲಿ ನಮ್ಮ ಗಾಳಿಪಟಗಳ ಕರ್ಮ ಭೂಮಿಯಾಗಿತ್ತು.
ಶಾಲೆಯ ರಜಾ ದಿನಗಳಲ್ಲಿ ಬೆಳಿಗ್ಗೆ ಮನೆ ಬಿಟ್ಟರೆ ಸಂಜೆ ಮನೆಗೆ ಹಿಂತಿರುಗುತ್ತಿದ್ದೆವು. ಹಸಿವು, ನೀರಡಿಕೆ ಯಾವುವೂ ನಮ್ಮನ್ನ ಬಾಧಿಸುತ್ತಿರಲಿಲ್ಲ. ಅತಿ ಎತ್ತರಕ್ಕೆ ಪಟ ಹಾರಿಸುವುದು ಮಾತ್ರ ನಮ್ಮ ಏಕೈಕ ಗುರಿಯಾಗಿತ್ತು. ಕನಕ ಪಟದ ತಯಾರಿಕೆ ಸುಲಭವಾಗಿತ್ತು. ಬಿಲ್ಲಿನ ಆಕಾರದಲ್ಲಿ ತೆಂಗಿನ ಕಡ್ಡಿಯನ್ನು ಬಾಗಿಸಿ ಅದಕ್ಕೆ ದಾರದಿಂದ ಕಟ್ಟುತ್ತಿದ್ದೆವು. ನಂತರ ಬಿಲ್ಲಿನ ಮಧ್ಯ ಒಂದು ಕಡ್ಡಿಯನ್ನು ನೇರವಾಗಿ ನಿಲ್ಲಿಸಿ, ಅವುಗಳನ್ನು ತ್ರಿಕೋನಾಕಾರದ ಕಾಗದಕ್ಕೆ ಅನ್ನ ಅಥವಾ ಮುದ್ದೆಯಿಂದ ಅಂಟಿಸಿದರೆ ಗಾಳಿಪಟ ಸಿದ್ಧವಾಗುತ್ತಿತ್ತು. ಆದರೆ, ಬೋರಂಟಿ ಪಟದ ಸಿದ್ಧತೆಗೆ ಒಂದಿಷ್ಟು ಕಸುಬುದಾರಿಕೆ ಬೇಕಿತ್ತು. ಚೌಕಾಕಾರದಲ್ಲಿ ಗಟ್ಟಿಯಾದ ಕಡ್ಡಿಗಳನ್ನು ದಾರದಲ್ಲಿ ಕಟ್ಟಿ ನಂತರ ಒಳಭಾಗದಲ್ಲಿ ಅಡ್ಡಡ್ಡ ಮತ್ತು ಉದ್ದವಾಗಿ ಕಡ್ಡಿಗಳನ್ನು ಇರಿಸಿ, ತಡಿಕೆಯ ರೂಪದಲ್ಲಿ ಸಿದ್ಧಪಡಿಸಿಕೊಂಡು ನಂತರ ಗಟ್ಟಿಯಾದ ಕಾಗದದ ಮೇಲೆ ಕಡ್ಡಿಗಳ ತಡಿಕೆ ಇಟ್ಟು ಅಂಟಿಸಲಾಗುತ್ತಿತ್ತು.
ಪಟಗಳ ನಿರ್ಮಾಣಕ್ಕಿಂತ ಅವುಗಳಿಗೆ ಕಟ್ಟುತ್ತಿದ್ದ ಸೂತ್ರ ಎನ್ನುವ ಮೂರು ದಾರಗಳ ಗಂಟು ನಿಜಕ್ಕೂ ಸವಾಲಿನ ಕ್ರಿಯೆಯಾಗಿತ್ತು. ಕನಕ ಪಟಕ್ಕೆ ಮೇಲಿನ ತುದಿ ಹಾಗೂ ಪಟದ ಮಧ್ಯ ಬಾಗದಲ್ಲಿ ಅರ್ಧ ಅಡಿ ಉದ್ದ ದಾರದಲ್ಲಿ ಕಡ್ಡಿಗಳಿಗೆ ಸೂತ್ರವನ್ನು ಅಳವಡಿಸಿದರೆ, ಬೋರಂಟಿ ಪಟಕ್ಕೆ ಮೇಲಿನ ಎರಡು ಬದಿ ಹಾಗೂ ಮಧ್ಯ ಬಾಗದಲ್ಲಿ ಸೂತ್ರದ ದಾರವನ್ನು ಅಳವಡಿಸಲಾಗುತ್ತಿತ್ತು. ದಾರವು ಗಟ್ಟಿಯಾಗಿರಬೇಕು ಮತ್ತು ಒಂದು ಕಿಲಿಮೀಟರ್ ವೆತ್ಯಾಸವಿರದೆ ಸಮಾನವಾಗಿರಬೇಕಿತ್ತು. ಏಕೆಂದರೆ ಎಡಬದಿ ಚಿಕ್ಕದಾದರೆ, ಎಡಭಾಗಕ್ಕೆ. ಬಲಬದಿ ಚಿಕ್ಕದಾದರೆ ಬಲಬದಿಗೆ ಪಟವು ವಾಲುತ್ತಿತ್ತು. ಇದಾದ ನಂತರ ಪಟಕ್ಕೆ ಎಷ್ಟು ಉದ್ದದ ಬಾಲಂಗೋಚಿ ಬೇಕು ಎಂಬುದನ್ನು ಅದನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸಿ, ನಿಧ್ರಿಸುತ್ತಿದ್ದೆವು. ಉದ್ದ ಜಾಸ್ತಿyAdaದರೆ, ಹಾರುತ್ತಿರಲಿಲ್ಲ. ಕಡಿಮೆಯಾದರೆ ಲಾಗ ಹೊಡೆಯುತ್ತಿತ್ತು. ಒಟ್ಟಾರೆ, ನಮ್ಮಗಳ ಪಟಗಳ ತಯಾರಿಕೆ ಮತ್ತು ಹಾರಾಟದ ತಂತ್ರಜ್ಞಾನ ಇವೆಲ್ಲವೂ ಈಗಿನ ವಿಮಾನ, ಹೆಲಿಕಾಪ್ಟರ್, ದ್ರೋಣ್ ಗಳ ತಯಾರಿಕೆಗೆ ಆಧಾರವಾಗಿರಬೇಕೆಂದು ನಮ್ಮಗಳ ಬಲವಾದ ನಂಬಿಕೆ.
ಪಟವನ್ನು ಆಗಸದಲ್ಲಿ ಅತಿ ಎತ್ತರಕ್ಕೆ ಹಾರಿಸುವುದು ನಮ್ಮಗಳ ಗುರಿಯಾಗಿತ್ತು. ಏಕೆಂದರೆ, ಹಬ್ಬದ ಸಮಯದಲ್ಲಿ ನನ್ನೂರಿನ ಆಕಾಶವು ಹಕ್ಕಿಗಳ ಚಿತ್ತಾರದಂತೆ ಪಟಗಳಿಂದ ಗೋಚರಿಸುತ್ತಿತ್ತು. ಒಮ್ಮೊಮ್ಮೆ ಗೆಳೆಯರ ದಾರದ ಉಂಡೆಗಳನ್ನು ಒಟ್ಟುಗೂಡಿಸಿ ಒಂದೇ ಪಟವನ್ನು ಎತ್ತರಕ್ಕೆ, ಬಹುದೂರಕ್ಕೆ ಹಾರಿಸುತ್ತಿದ್ದೆವು. ಒಮ್ಮೊಮ್ಮೆ ಸೂತ್ರ ಹರಿದುಕೊಂಡು ಗಾಳಿಪಟವು ಊರಾಚೆಗಿನ ತೆಂಗಿನತೋಟ ಅಥವಾ ಕಬ್ಬಿನ ಗದ್ದೆಯಲ್ಲಿ ಹೋಗಿ ಬೀಳುತ್ತಿತ್ತು. ಪತನವಾದ ವಿಮಾನವನ್ನು ವಾಯುಪಡೆ ಪತ್ತೆ ಹಚ್ಚುವ ಮಾದರಿಯಲ್ಲಿ ಹುಡುಕಿ ತರುತ್ತಿದ್ದೆವು. ಹರಿದು ಹೋದ ಗಾಳಿಪಟವನ್ನು ಕಂಡು ದಿನ ನಾವು ಶೋಕಾಚರಣೆ ಆಚರಿಸುತ್ತಿದ್ದೆವು. ಮರುದಿನ ಮತ್ತೇ ಹೊಸ ಗಾಳಿಪಟಕ್ಕೆ ಸಿದ್ಧವಾಗುತ್ತಿದ್ದೆವು.
ಸ್ವೀಡಿಷ್ ನೋಬಲ್ ಪ್ರಶಸ್ತಿ ಸಮಿತಿಯು ಗಾಳಿಪಟ ತಂತ್ರಜ್ಞಾನಕ್ಕೆ ಪ್ರಶಸ್ತಿಯನ್ನು ಇಟ್ಟರೆ, ಅದನ್ನು ಮೊದಲು ನನ್ನ ತಲೆಮಾರಿಗೆ ನೀಡಬೇಕು. ನಂತರ ಇತರರಿಗೆ ನೀಡಬೇಕು. ಏಕೆಂದರೆ, ನಮ್ಮ ಬಾಲ್ಯದ ಆಯಷ್ಯವನ್ನು ನಾವು ಅದಕ್ಕಾಗಿ ತ್ಯಾಗ ಮಾಡಿದ್ದೇವೆ. ( ವಿ.ಸೂ.- ಮಂಡ್ಯ ಜಿಲ್ಲೆಯಲ್ಲಿ ಅತಿಯಾಗಿ ಸುಳ್ಳು ಹೇಳುವ ವ್ಯಕ್ತಿಗೆ ಬೋರಂಟಿ ಬುಡ್ತಾ ಅವ್ನೆ ಎಂದು ರೇಗಿಸುವ ಶಬ್ದ ಈಗಲೂ ಚಾಲ್ತಿಯಲ್ಲಿದೆ)
ಚಿತ್ರ ಸೌಜನ್ಯ- ಪ್ರತಿಲಿಪಿ


No comments:

Post a Comment