ಸೋಮವಾರ, ಜುಲೈ 6, 2020

ಆತ್ಮ ನಿರ್ಭರತೆಯೆಂಬ ಆತ್ಮವಂಚನೆಯ ಮಾತುಗಳು ಮತ್ತು ಸ್ವದೇಶಿ ಎಂಬ ನೆಲಮೂಲ ಸಂಸ್ಕೃತಿಯು



ಇತ್ತೀಚೆಗೆ ಇಸ್ವ ಗುರು  ಎಂಬ ನಾಯಕ ಬಾಯಿಂದ ಉದುರಿದ ಅಣಿಮುತ್ತುಗಳಲ್ಲಿ ಒಂದಾದ  ಆತ್ಮ ನಿರ್ಭರತೆ ಎಂಬ ಶಬ್ದ ಈಗ ದೇಶ ಭಕ್ತರ ಪಾಲಿಗೆ ಸದಾ ಜಪಿಸುವಂತಾದ ಮಂತ್ರವಾಗಿ ಪರಿವರ್ತನೆಯಾಗಿದೆ.
ಕರ್ನಾಟಕದಲ್ಲಿ ಬಳಾಂಗ್ ಭೂಪತಿ ಎಂದು ಕುಖ್ಯಾತಿ ಪಡೆದ ಚಕ್ರವರ್ತಿ ಸೂಲಿಬೆಲೆ ಎಂಬ ಸುಳ್ಳೇ ನಮ್ಮ ಮನೆದೇವರು ಎಂದು ನಂಬಿರುವ ವ್ಯಕ್ತಿಗೆ  ಆದಾಯದ ಮೂಲ ಕೂಡ ಆಗಿದೆ. ಖಾಲಿ ತಲೆಗಳಿಗೆ ಸುಳ್ಳು ಉಪನ್ಯಾಸ, ಮಕ್ಕಳ ಮುಕುಳಿ ಒರೆಸಲು ಅಯೋಗ್ಯವಾದ ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಾ “ ಆತ್ಮ ನಿರ್ಭರತೆ ಎಂಬ ಯಜ್ಞಕ್ಕೆ ನಾವು ಸಮಿತ್ತುಗಳಾಗೋಣ” ಎಂದು ಅಪ್ಪಣೆ  ಕೊಡಿಸಿದ್ದಾನೆ. ಈಗಾಗಲೇ ಹಲವು ಲೇಖಕರು ಮತ್ತು ಪ್ರಕಾಶಕರು ಪುಸ್ತಕ ಹೊಸೆದು ಬಿಸಾಕಲು ಅಣಿಯಾಗುತ್ತಿದ್ದಾರೆ. ಒಟ್ಟಾರೆ ಈ ಎಲ್ಲಾ ವಿದ್ಯಾಮಾನಗಳು ನಮ್ಮ ಬೌದ್ಧಿಕ ದಾರಿದ್ಯಕ್ಕೆ ಸಾಕ್ಷಿ ಎಂಬಂತಿವೆ.
ಇತ್ತೀಚೆಗೆ ಭಾರತ ಮತ್ತು ಚೀನಾ ನಡುವಿನ  ಗಡಿ ವಿವಾದಕ್ಕೆ ಸಂಬಂಧಿಸಿದಂತೆ  ನಡೆದ ಘರ್ಷಣೆಗೆ ಸಂಬಂಧಿಸಿದಂತೆ  ಭಾರತದ  ಇಸ್ವ ಗುರು ಎಂದು ಪ್ರಸಿದ್ಧರಾದ ಪ್ರಧಾನಿಯಾದ  ಮೋದಿ  ಆತ್ಮ ನಿರ್ಭರ್ ಹೆಸರಿನಲ್ಲಿ ಚೀನಾ ವಸ್ತುಗಳನ್ನು ನಿಷೇಧಿಸಲು ಕರೆ ನೀಡಿದ ಮೇಲೆ ದೇಶ ಭಕ್ತರ ಭರಾಟೆ ಜೋರಾಗಿದೆ. ಇದು ನಮ್ಮ ವಿಸ್ಮೃತಿಗೆ ಒಂದು ಉದಾಹರಣೆ ಮಾತ್ರ.
1990 ರ ದಶಕದಲ್ಲಿ ಜಾಗತಿಕರಣದ ಹೆಸರಿನಲ್ಲಿ ಸರಕು ಮತ್ತು ಸೇವೆಗಳಿಗೆ  ಜಗತ್ತಿನಾದ್ಯಂತ ದೇಶಗಳು ತಮ್ಮ ತಮ್ಮ ಗಡಿ ಬಾಗಿಲುಗಳನ್ನು ತೆರೆದಿಟ್ಟ ನಂತರ  ನಿಷೇಧ  ಎನ್ನುವ ಮಾತು ಹಾಸ್ಯದ ಮಾತಿನಂತೆ ಕೇಳಿಬರುತ್ತದೆ. ಇತಿಹಾಸದ ಪ್ರಜ್ಞೆ ಇದ್ದವರಿಗೆ ಈ ಸಂಗತಿಯನ್ನು ನಾನು ಹೊಸದಾಗಿ ಹೇಳಬೇಕಾಗಿಲ್ಲ. ಸ್ವಾವಲಂಬಿತನ ಎಂಬ ನಮ್ಮ ಬದುಕಿನ ಪ್ರಕ್ರಿಯೆಗೆ  ಶತಮಾನಗಳ ಹಿಂದೆಯೇ ಗಾಂಧೀಜಿಯವರು ಚಾಲನೆ ನೀಡಿದ್ದರು. ಅದಕ್ಕೆ ಅವರು ಸ್ವದೇಶಿ ಎಂದು ಹೆಸರು ನೀಡಿದ್ದರು. ಇದೀಗ ಗಾಂಧೀಜಿಯವರ ಚಿಂತನೆಗೆ ಸಂಸ್ಕೃತದ ಲೇಪನ ಬಳಿದು ಆತ್ಮ ನಿರ್ಭರ್ ಎಂದು ಪ್ರಧಾನಿಯವರು  ಚಲಾವಣೆಗೆ ಬಿಟ್ಟಿದ್ದಾರೆ.
ಕೇವಲ ಶಬ್ದಗಳನ್ನು ಚಲಾವಣೆಗೆ ಬಿಡುವುದು ಮುಖ್ಯವಲ್ಲ, ಅದನ್ನು ಸ್ವತಃ ಗಾಂಧೀಜಿ ಕಾಯಾ, ವಾಚಾ, ಮನಸಾ ಆಚರಣೆಗೆ ತರುತ್ತಿದ್ದರು.  ವಿದೇಶಿ ವಸ್ತ್ರಗಳನ್ನು ತ್ಯೆಜಿಸುವಂತೆ ಗಾಂಧೀಜಿ ಕರೆ ನೀಡಿದಾಗ ಅವರಿಗಿಂತ ಎಂಟು ವರ್ಷ ದೊಡ್ಡವರಾದ ರವೀಂದ್ರ ನಾಥ ಟ್ಯಾಗೂರ್ ಇದನ್ನು ವಿರೋಧಿಸಿದ್ದರು. ಆನಂತರ ಆ ಇಬ್ಬರ ನಡುವೆ ಅನೇಕ ಚರ್ಚೆಗಳು ಮತ್ತು ಪತ್ರ ವ್ಯವಹಾರಗಳು ನಡೆದವು. ಗಾಂಧೀಜಿಯವರಿಗೆ ತಾವು ಹಮ್ಮಿಕೊಳ್ಳುತ್ತಿದ್ದ ಸತ್ಯಾಗ್ರಹ ಅಥವಾ ಚಳುವಳಿಗಳ ಕುರಿತಾಗಿ ಸ್ಪಷ್ಟವಾದ  ಕಲ್ಪನೆಗಳಿರುತ್ತಿದ್ದವು. ಅದನ್ನು ಅವರು ಸಮರ್ಥಿಸುತ್ತಿದ್ದರು. ಜೊತೆಗೆ ಸ್ವತಃ ಪಾಲಿಸುತ್ತಿದ್ದರು. ಏಕೆಂದರೆ, ಅವರು ಎಲ್ಲವನ್ನೂ ನಮ್ಮ ನೆಲಮೂಲ ಸಂಸ್ಕೃತಿಯಾದ ದೇಸಿ ಚಿಂತನೆಗಳಿಂದ ಆಯ್ದುಕೊಳ್ಳುತ್ತಿದ್ದರು. ಅವುಗಳ ಕುರಿತು ಹೇಳಿಕೆ ನೀಡುವುದರ ಜೊತೆಗೆ ವೈಯಕ್ತಿಕ ಬದುಕಿನಲ್ಲಿ ಮೊದಲು ಆಚರಣೆಗೆ ತರುತ್ತಿದ್ದರು. ನಿಸರ್ಗದ ಕೊಡುಗೆಗಳು ಮತ್ತು ಮನುಷ್ಯನ ಮಿತಿ ಮೀರಿದ ಲಾಲಸೆಗಳನ್ನು ಚೆನ್ನಾಗಿ ಅರಿತಿದ್ದ ಅವರು ಮಿತಿಯಾದ  ಹಾಗೂ ಸರಳವಾದ ಜೀವನಕ್ಕೆ ಒತ್ತು ನೀಡುತ್ತಿದ್ದರು. ನಾವು ಬಳಸುವ  ಅಗತ್ಯ ವಸ್ತುಗಳು ನಾವಿರುವ ಸ್ಥಳದ  ಐದು ಅಥವಾ ಹತ್ತು ಕಿಲೊಮೀಟರ್ ವ್ಯಾಪ್ತಿಯಲ್ಲಿ ದೊರೆಯುವಂತಿರಬೇಕು. ಅವುಗಳನ್ನು ಬಳಸಬೇಕು ಎಂದು ಅವರು ಮನೆಗಳ ನಿರ್ಮಾಣದ ವಿಷಯದಲ್ಲಿ ಒತ್ತಿ ಹೆಳುತ್ತಿದ್ದರು.
ಯಂತ್ರ ನಾಗರೀತೆಯ ಕುರಿತು ಅವರು  ಹೇಳುತ್ತಿದ್ದ ಮಾತುಗಳಲ್ಲಿ ಸ್ಪಷ್ಟತೆ ಇತ್ತು. ಬೃಹತ್ ಯಂತ್ರಗಳಿಂದ ಮನುಷ್ಯನ ಉದ್ಯೋಗ  ಕಿತ್ತುಕೊಳ್ಳದ ಹಾಗೂ ಅವನ ಶ್ರಮವನ್ನು ಕಡಿಮೆ ಮಾಡುವ , ಹೆಚ್ಚು ಉತ್ಪಾದನೆಗೆ ಮಹತ್ವ ನೀಡುವ ಯಂತ್ರಗಳನ್ನು ಅವರೆಂದೂ ವಿರೋಧಿಸಲಿಲ್ಲ
ಸ್ಥಳಿಯ ಉತ್ಪಾದನೆ, ಸ್ಥಳಿಯ ಮಾರುಕಟ್ಟೆ ಇವುಗಳಿಗೆ ಆದ್ಯತೆ ನೀಡಿದರೆ, ದೇಶದ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿದಂತೆ ಎಂಬ ಅವರ ಮಾತುಗಳನ್ನು ಅವರ ಸಾವಿನ ಜೊತೆ ಅವರೊಂದಗೆ ಚಿತೆಗೆ ಇಟ್ಟು ಬೆಂಕಿ ಹಚ್ಚಿದವರು ನಾವು. ಅತಿಯಾದ ಭೋಗಲಾಲಸೆ ಮತ್ತು ಭಕಾಸುರತನದಿಂದ  ಇಡಿ ಜಗತ್ತನ್ನು ಕಬಳಿಸಲು ಹೊರಟ ಜನಕ್ಕೆ ಈಗ ಬೇಕಿರುವುದು ಮಂತ್ರದಂತಹ  ಚಾಲಕಿತನದ ಮಾತುಗಳಲ್ಲ. ಸ್ವಯಂ ಆಚರಣೆಯ ಬದ್ಧತೆ.  ಭಾರತದದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯ ಅಂಕಿ ಅಂಶಗಳನ್ನು ಗಮನಿಸಿದಾಗ  ಆತ್ಮ ನಿರ್ಭರ್ ಎನ್ನುವ ಮಾತು ಪೊಳ್ಳು ಘೋಷಣೆ ಎಂದು ನಮಗೆ ಮನದಟ್ಟಾಗುತ್ತದೆ.
 ಈ ಕ್ಷಣದಲ್ಲಿ ಗಾಂಧಿ ಚಿಂತನೆಗಳನ್ನು ಇಂದಿಗೂ ಆಚರಣೆಗೆ ತರುತ್ತಿರುವ ಹಾಗೂ ನಮ್ಮ ನಡುವೆ ಸಾಕ್ಷಿಪ್ರಜ್ಞೆಯಂತೆ ಬದುಕುತ್ತಿರುವ  ದೀದಿ ಕಂಟ್ರಾಕ್ಟರ್ ಎಂಬ ತೊಂಬತ್ತು ವಯಸ್ಸಿನ ತಾಯಿ ಹಾಗೂ ಭಾರತ ಕಂಡ ನೆಲಮೂಲ ಸಂಸ್ಕೃತಿಯ ವಾಸ್ತು ಶಿಲ್ಪಿ ನಮಗೆ ಮಾದರಿಯಾಗಿದ್ದಾರೆ. . ನಿನ್ನೆ ಭಾನುವಾರ ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಅವರ ಸಂದರ್ಶನ ಪ್ರಕಟವಾಗಿದ್ದು “ ಸ್ವಾತಂತ್ರ್ಯಾನಂತರದ ಭಾರತದ ನಗರಗಳು ವಿಕೃತಿಗಳಾಗಿವೆ” ಎನ್ನುವ ಅವರ ಮಾತುಗಳು  ನಮ್ಮ ಬದುಕಿನ ವಿಕಾರಕ್ಕೆ ಹಿಡಿದ ಕೈಗನ್ನಡಿಯಂತಿವೆ. ಜೊತೆಗೆ  ನಾವು ಬದುಕುತ್ತಿರುವ ಬದುಕು ಎಷ್ಟು ಲಡಾಸು ಎದ್ದಿಹೋಗಿದೆ ಎಂಬುದು ತಿಳಿಯುತ್ತದೆ.

ಭಾರತದ ಅತ್ಯುನ್ನುತ ಪ್ರಶಸ್ತಿಯಾದ “ ನಾರಿ ಪುರಸ್ಕಾರ್” ಗೌರವಕ್ಕೆ ಪಾತ್ರರಾಗಿರುವ ಅವರು ಅಮೇರಿಕನ್ ಪ್ರಜೆ ಹಾಗೂ ಮೆಕ್ಷಿಕೊ ಮಹಿಳೆ  ಈ ದಂಪತಿಗಳಿಗೆ ಜನಿಸಿದ ಹೆಣ್ಣು ಮಗಳು . ಮೆಕ್ಷಿಕೊ ನಗರದಲ್ಲಿ ಆರ್ಕಿಟೆಕ್ ಓದುತ್ತಿರುವಾಗ ನಾರಾಯಣ್ ಕಂಟ್ರಾಕ್ಟರ್ ಎಂಬ ಮಹಾರಾಷ್ಟ್ರ ಮೂಲದ ಯುವಕನ್ನು ಪ್ರೀತಿಸಿ, ವಿವಾಹವಾಗಿ ಭಾರತಕ್ಕೆ ಬಂದವರು. 1955 ರಲ್ಲಿ ಅವರು ಮುಂಬೈ ನಗರಕ್ಕೆ ಬಂದಾಗ ಗಾಂಧೀಜಿ ನಿಧನರಾಗಿ ಎಂಟು ವರ್ಷಗಳಾಗಿದ್ದವು. ದೀದಿಯವರು ಗಾಂಧೀಜಿ ಚಿಂತನೆಗಳಿಂದ ಪ್ರಭಾವಿತರಾಗಿ ತಾವು ನಿರ್ಮಿಸುವ ಮನೆಗಳಿಗೆ ಸ್ಥಳೀಯ ಕಲ್ಲು, ಮಣ್ಣುಮ ಮರಗಳನ್ನು  ಬಳಸತೊಡಗಿದರು. ನನಗೆ ಮಣ್ಣಿನೊಂದಿಗೆ ವಿವಾಹವಾಗಿದೆ. ಅದರೊಂದಿಗೆ ಸಹಬಾಳ್ವೆ ಅನಿವಾರ್ಯ  ಎಂದು ಹೇಳುತ್ತಿದ್ದ ದೀದಿಯವರು ಇದೀಗ ಹಿಮಾಲಯದ ಕಾಂಗ್ರಾ ಕಣಿವೆಯಲ್ಲಿ ವಾಸಿಸುತ್ತಾ ತಮ್ಮ ನೆನಪುಗಳನ್ನು ದಾಖಲಿಸುತ್ತಿದ್ದಾರೆ. ಅವರ ಕುರಿತ ಸಾಕ್ಷ್ಯ ಚಿತ್ರವನ್ನು ಆಸಕ್ತರು ಯೂಟ್ಯುಬ್ ನಲ್ಲಿ ಗಮನಿಸಬಹುದು. ಗಾಂಧಿ ಚಿಂತನೆಗಳಿಗೆ ಇದೇ ರೀತಿಯಲ್ಲಿ ಮಾರು ಹೋದವರೆಂದರೆ, ಇಂಗ್ಲೇಂಡ್ ಮೂಲದ ಲಾರಿ ಬೇಕರ್. (ಅವರ ಕುರಿತು ನನ್ನ ಗಾಂಧಿಗಿರಿಯ ಫಸಲುಗಳು ಕೃತಿಯಲ್ಲಿ ದಾಖಲಿಸಿದ್ದೇನೆ. ಭೂಮಿಗೀತ ಬ್ಲಾಗ್ ನಲ್ಲಿ ಲೇಖನ ದೊರೆಯುತ್ತದೆ. ಲಾರಿಬೇಕರ್ ಎಂದು ಕನ್ನಡದಲ್ಲಿ ಟೈಪಿಸಿ, ಗೂಗಲ್ ಸರ್ಚ್ ಗೆ ಹಾಕಿದರೆ ಲೇಖನ ದೊರೆಯುತ್ತದೆ)
ಈ ನೆಲಕ್ಕೆ ಸಂಬಂಧವಿಲ್ಲದ  ಎರಡು ಜೀವಗಳು ಗಾಂಧೀಜಿ ಚಿಂತನೆಗಳ ವಾರಸುದಾರರೆಂಬಂತೆ ಬದುಕಿ ತೋರಿಸಿರುವಾಗ  ಮಹಾತ್ಮನನ್ನು ಕೊಂದ ದುಷ್ಟನಿಗೆ ಹುತಾತ್ಮ ಎಂದು ಕರೆಯುವ ಜನಕ್ಕೆ ಸ್ವಾವಲಂಬನೆ ಎಂಬುವುದು ಕೇವಲ  ರಸ್ತೆ ಪ್ರದರ್ಶನ ಅಂದರೆ, ರೋಡ್ ಷೋ ಅಥವಾ ತುಟಿ ಸೇವೆ ಆಗಬಲ್ಲದೇ ಹೊರತು, ಬದುಕಿನ ಭಾವಗೀತೆಯಾಗಲಾರದು.
ಜಗದೀಶ್ ಕೊಪ್ಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ