ಭಾನುವಾರ, ಜೂನ್ 30, 2024

ಸಾವಿನ ಕುದುರೆಯೇರಿ ಹೊರಟವರ ಕಥನ

 



 ಜೂನ್ ತಿಂಗಳ ಮೊದಲ ವಾರದಲ್ಲಿ ಉತ್ತರಖಂಡದ ಗರ್ವಾಲ್ ಎಂಬ ಪ್ರದೇಶದಲ್ಲಿ ಸಹಸ್ರ ತಾಲ್ ಎಂಬ ಸರೋವರದ ಬಳಿ ಟ್ರಕ್ಕಿಂಗ್ ಎಂಬ ಹೆಸರಿನ ಚಾರಣಕ್ಕೆ  ಹೋಗಿದ್ದ ಕರ್ನಾಟಕದ ಇಪ್ಪತ್ತೆರೆಡು ಮಂದಿ ಸದಸ್ಯರಲ್ಲಿ ಒಂಬತ್ತು ಜನರು  ಹಿಮಕುಸಿತ ಮತ್ತು ಹಿಮಗಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡರು. ಹವಾಮಾನ ವೈಪರಿತ್ಯವೆಂಬುದು ಕಳೆದ ಒಂದು ದಶಕದಿಂದ ಭಾರತದಲ್ಲಿ ಸಾಮಾನ್ಯ ಅಂಶವಾಗಿರುವ ಸಂದರ್ಭದಲ್ಲಿ ಚಂಡಮಾರುತ,  ಅನಿರೀಕ್ಷಿತ ಮಳೆ, ನದಿಗಳ ದಿಡೀರ್ ಪ್ರವಾಹ, ಭೀಕರ ಬರಗಾಲ ಇವುಗಳೆಲ್ಲವೂ ಇಂದಿನ ದಿನಮಾನಗಳಲ್ಲಿ ಭಾರತದ ಭೌಗೂಳಿಕ ಮತ್ತು ಪರಿಸರದ ಲಕ್ಷಣಗಳಾಗಿವೆ. ಇವುಗಳ ಕುರಿತಾಗಿ ಇಂತಹ ಕನಿಷ್ಠ ಜ್ಞಾನವು ಇತ್ತೀಚೆಗೆ ಚಾರಣ ಎಂಬ ಸಾಹಸಕ್ಕೆ ಹೊರಡುವ ಪ್ರವಾಸಿಗರಿಗೆ ಇರಬೇಜಾದ್ದು ಅತ್ಯಾವಶ್ಯಕವಾಗಿದೆ. 

ಇಂತಹ ಪ್ರಾಕೃತಿಕ ದುರಂತಗಳಿಗೆ ಸಿಲುಕುತ್ತಿರುವ ಬಹುತೇಕ ಮಂದಿ ವಿಜ್ಞಾನ ಓದಿಕೊಂಡವರು ಮೇಲಾಗಿ ಟೆಕ್ಕಿಗಳು ಎಂದು ಆಧುನಿಕ ಪರಿಭಾಷೆಯಲ್ಲಿ ಕರೆಸಿಕೊಳ್ಳುವ  ಸಾಪ್ಟ್ ವೇರ್ ಇಂಜಿಯರ್ಗಳಾಗಿರುವುದು ವಿಪರ್ಯಾಸದ ಸಂಗತಿ. ಕಳೆದ ವರ್ಷ ಇದೇ ಪ್ರದೇಶದಲ್ಲಿ ನೆಹರೂ ಟ್ರೆಕ್ಕಿಂಗ್ ಸಂಸ್ಥೆ ನಡೆಸಿದ ಚಾರಣದಲ್ಲಿ ಇಪ್ಪತ್ತೆರೆಡು ಮಂದಿ ಪ್ರಾಣ ಕಳೆದುಕೊಂಡಿದ್ದರು.  ಯಾವುದೇ ಸಂವಹನ ವ್ಯವಸ್ಥೆ ಇಲ್ಲದ ಇಂತಹ ಪ್ರದೇಶದಲ್ಲಿ ಅಪಘಾತಕ್ಕೆ ಸಿಲುಕಿದವರ ಸಹಾಯಕ್ಕೆ ಬರಲು ಯಾವುದೇ ರಸ್ತೆ ಸಂಪರ್ಕಗಳು ಇರುವುದಿಲ್ಲ.  ಹೆಲಿಕಾಪ್ಟ ರ್ ಗಳನ್ನು ಹೊರತು ಪಡಿಸಿ, ಯಾವುದೇ ವಾಹನಗಳು ಅಥವಾ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪುವುದು ಅಸಾಧ್ಯವಾದ  ಪರಿಸ್ಥಿತಿ.

ಕಳೆದ ಎರಡೂವರೆ ದಶಕಗಳ ಹಿಂದೆ ಜಗತ್ತಿನಾದ್ಯಂತ ತಂತ್ರಜ್ಞಾನದ ಬದಲಾವಣೆಯ ಬಿರುಗಾಳಿ ಎದ್ದ ಪರಿಣಾಮವಾಗಿ ಆಧುನಿಕ ತಲೆಮಾರು ಜೀವಿಸುವ ಪರಿ ಮತ್ತು ಯೋಚಿಸುವ ವಿಧಾನವನ್ನು ಬದಲಾಯಿಸಿದೆ. ಬೆರಳ ತುದಿಗೆ ಇಡೀ ಜಗತ್ತು ಬಂದು ಕುಳಿತಿರುವಾಗ ಇಡೀ ಜಗತ್ತು ಅವರ ಪಾಲಿಗೆ ಹಳ್ಳಿಯಾಗಿದೆ. ಕೈ ತುಂಬಾ ಲಕ್ಷಗಟ್ಟಲೆ ಸಂಬಳ ಪಡೆಯುವ ಅವರಿಗೆ ಜಗತ್ತಿನ ಪ್ರತಿಯೊಂದು ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಹಪಾಹಪಿ ಅವರ ಮಿದುಳನ್ನು ಆಕ್ರಮಿಸಿಕೊಂಡಿದೆ. ಕಾರಣದಿಂದ ಈಜು ಬಾರದಿದ್ದರೂ ಅಪರಿಚಿತ ನದಿ ಮತ್ತು ಸಮುದ್ರಗಳಲ್ಲಿ ಈಜಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿರುವವರಲ್ಲಿ ಸಾಪ್ಟ್ ವೇರ್ ಇಂಜಿನಿಯರ್ಗಳು, ವೈದ್ಯರು ಹಾಗೂ  ಅಂತಿಮ ಹಂತದ ವೈದ್ಯಕೀಯ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

 ಇವುಗಳ ಜೊತೆಗೆ  ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಐರೋಪ್ಯ ರಾಷ್ಟçಗಳಿಗೆ ತಯಾರಾದ ನಾಲ್ಕರಿಂದ ಐದು ಲಕ್ಷ ರೂಪಾಯಿ ಬೆಲೆ ಬಾಳುವ ಮತ್ತು ನೂರೈವತ್ತು ಕಿಲೊಮೀಟರ್ ವೇಗದ ಸಾಮರ್ಥ್ಯವಿರುವ ಮೋಟಾರ್ ಬೈಕ್ ಗಳು ಭಾರತಕ್ಕೆ ಲಗ್ಗೆ ಇಟ್ಟಿವೆ. ಅತ್ಯಂತ ಜನಸಂದಣಿಯ ನಗರಗಳು ಮತ್ತು ಹದಗೆಟ್ಟ ರಸ್ತೆಗಳ ದೇಶದಲ್ಲಿ ಇಂತಹ ದ್ವಿಚಕ್ರಗಳನ್ನು ಓಡಿಸುವುದು ಅಸಾಧ್ಯ ಮತ್ತು ಅಪಾಯಕಾರಿ ಎಂಬ ಜ್ಞಾನವಿದ್ದರೂ ಸಹ ಇಂದು ದೇಶದ ಬಹುತೇಕ ಮೆಟ್ರೋ ನಗರಗಳಲ್ಲಿ ವಾಹನವು ಟೆಕ್ಕಿಗಳ ಅಚ್ಚುಮೆಚ್ಚಿನ ವಾಹನವಾಗಿದೆ.

ತಮ್ಮನ್ನು ಹೆತ್ತು ಸಲುಹಿದ ಅಪ್ಪ ಅಮ್ಮಂದಿರ ಕಣ್ಗಾವಲಿನಿಂದ ದೂರವಿರುವ ಗಂಡು-ಹೆಣ್ಣುಗಳೆಂಬ  ಈಗಿನ ಯುವ ತಲೆಮಾರಿಗೆ ಮಾಹಿತಿ ತಂತ್ರಜ್ಞಾನದ ಕುಲುಮೆಯಲ್ಲಿ ಬೇಯುತ್ತಿರುವ ಪರಿಣಾಮವಾಗಿ ತಮ್ಮ ದುಡಿಮೆಯ ದೈಹಿಕ ಹಾಗೂ ಮಾನಸಿಕ ದಣಿವನ್ನು ನೀಗಿಸಿಕೊಳ್ಳಲು ಬಿಯರ್ ಅಥವಾ ಮಾದಕ ವಸ್ತಗಳ ಮೊರೆ ಹೋಗಿದ್ದಾರೆ. ಇವರ ಪಾಲಿಗೆ ಹಣವೆಂಬುದು ತೃಣ ಎಂಬAತಾಗಿದೆ. ವಾರಾಂತ್ಯದ ದಿನಗಳಲ್ಲಿ ನಗರಗಳ ಹೊರವಲಯದ ತೋಟಗಳಲ್ಲಿ ಇಡೀ ರಾತ್ರಿ ನಡೆಯುವ ಮೋಜು ಮಸ್ತಿಗೆ ಲೆಕ್ಕವಿಲ್ಲ. ಅದೇ ರೀತಿ ದ್ವಿಚಕ್ರ ವಾಹನ ಓಡಿಸಿ ನಡುರಾತ್ರಿಯಲ್ಲಿ ಸಾವಿನ ಕುದುರೆಯೇರಿ ಹೊರಟವರ ಕುರಿತಾಗಿ ಲೆಕ್ಕವಿಟ್ಟವರಿಲ್ಲ.

ಬೆಂಗಳೂರು, ಪುಣೆ, ಹೈದರಾಬಾದ್ ಮತ್ತು ಚೆನ್ನೆöÊ ನಗರಗಳ ರಸ್ತೆ ಅಫಘಾತಗಳಲ್ಲಿ ಮೃತಪಟ್ಟವರ ಹಿನ್ನಲೆಯನ್ನು ಸೂಕ್ಷö್ಮವಾಗಿ ಗಮನಿಸಿದಾಗ ಇಂದಿನ ಯುವತಲೆಮಾರು ಹಿಡಿದಿರುವ ಸಾವಿನಹಾದಿಯ ವಿವರ ನಮಗೆ ಮನವರಿಕೆಯಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಇಂತಹ ಸಾವಿನ ಸಂಖ್ಯೆಯು ಶೇಕಡಾ 14 ರಷ್ಟು ಹೆಚ್ಚಾಗಿದ್ದು, ಇವುಗಳಲ್ಲಿ ಶೇಕಡಾ 34 ರಷ್ಟು ಮಂದಿ ಅತಿವೇಗದ ಚಾಲನೆಯಿಂದ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಂಕಿ ಅಂಶಗಳು ಹೇಳುತ್ತವೆ.

ಕಳೆದ ಎರಡು ದಶಕಗಳಲ್ಲಿ ಇಂತಹ ಅನಿರೀಕ್ಷಿತ ಅಪಘಾತಗಳಿಗೆ ಸಾವನ್ನಪ್ಪುತ್ತಿರುವ ಬಹುತೇಕ ಯುವಕ/ಯುವತಿಯರು ಶ್ರೀಮಂತ ಅಥವಾ ದೊಡ್ಡ ದೊಡ್ಡ ಅಧಿಕಾರಿಗಳ ಕುಟುಂಬದಿA ಬಂದವರಲ್ಲ. ಶೇಕಡಾ ೭೫ ರಷ್ಟು ಮಂದಿಯ ಕೌಟುಂಬಿಕ ಹಿನ್ನಲೆಯು ಮಧ್ಯಮ ವರ್ಗ ಅಥವಾ ಬಡಕುಟುಂಬದಿA ಬಂದ ಇತಿಹಾಸ ನಮ್ಮ ಕಣ್ಣೆದೆರು ತರದ ಪುಸ್ತಕದಂತೆ ಇದೆ. ಇವರ ಪೋಷಕರಲ್ಲಿ ಬಹುತೇಕ ಮಂದಿ ಶಾಲಾ ಶಿಕ್ಷಕರು, ಸರ್ಕಾರಿ ಕಚೇರಿಯ ಗುಮಾಸ್ತರು, ರೈತರು, ಕೃಷಿ ಮತ್ತು ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಹಾಗೂ  ಆಟೋ ಚಾಲಕರು, ರಸ್ತೆ ಬದಿ ಹಣ್ಣು, ತರಕಾರಿ ಮಾರಾಟ ಮಾಡಿದ ಬಡವರಿದ್ದಾರೆ. ಇಂತಹ ಪೋಷಕರ ಕನಸುಗಳಲ್ಲಿ ತಾವು ಸಂಪತ್ತನ್ನು ಗಳಿಸಬೇಕು ಅಥವಾ ಸಾಮ್ರಾಜ್ಯವನ್ನು ವಿಸ್ತರಿಸಬೇಕು ಎಂಬ ಯಾವುದೇ ಕನಸುಗಳಿರುವುದಿಲ್ಲ. ನಮ್ಮಂತೆ ನಮ್ಮ ಮಕ್ಕಳು ಬದುಕಬಾರದು, ಕಷ್ಠ ಪಡಪಾರದು ಎಂಬ ಏಕೈಕ ಕಾರಣಕ್ಕಾಗಿ ತಾವು ಸಂಪಾದಿಸಿದ ಹಣವನ್ನು ಕೂಡಿಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿರುತ್ತಾರೆ. ತಾವು ಒಂದು ಹೊತ್ತಿನ ಊಟ ಮಾಡಿ ತಮ್ಮ ಮಕ್ಕಳಿಗೆ ಎರಡು ಹೊತ್ತಿನ ಊಟ ಮತ್ತು ಒಂದು ತಿಂಡಿಗಾಗಿ ತಮ್ಮ ಮೈ ಬೆವರನ್ನು ನೆತ್ತರಾಗಿ ಬಸಿದಿದ್ದಾರೆ.

ಇಂದಿನ ಯುವ ಮನಸ್ಸುಗಳಿಗೆ ಇವುಗಳ ಕುರಿತು ಕನಿಷ್ಠ ಕಾಳಜಿ ಬೇಕು. ತಾವು ತಿನ್ನುವ ಆಹಾರದ ಜೊತೆ, ಕುಡಿಯುವ ನೀರಿನ ಜೊತೆ ಹಾಗೂ ಧರಿಸುವ ಆಧುನಿಕ ಥರಾವರಿ ವಸ್ತçಗಳ ಜೊತೆ ತಮ್ಮ ತಂದೆ, ತಾಯಿ ಮತ್ತು ತಮ್ಮನ್ನು ನಂಬಿರುವ ಅಕ್ಕ ತಂಗಿ ಹಾಗೂ ಅಣ್ಣ ತಮ್ಮಂದಿರ ನೆನಪು ಬಂದರೆ ಸಾಕು ಇಂತಹ ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವುದಿಲ್ಲ. ಯಾವೊಬ್ಬ ತಂದೆ ತಾಯಿಯೂ,  ನಮ್ಮಂತೆ  ಮದ್ದೆ ಊಟ ಮಾಡಬೇಕು ಅಥವಾ ರೊಟ್ಟಿ ಊಟ ಮಾಡಬೇಕು ಎಂದು ಬಯಸುವುದಿಲ್ಲ. ಮಕ್ಕಳು ಪಿಜ್ಜಾ, ಬರ್ಗರ್ ಇವುಗಳನ್ನೇ ತಿನ್ನಲಿ ಅಥವಾ ನೀರಿನ ಬದಲು ಪೆಪ್ಸಿ ಕೋಲಾ ಪಾನೀಯಗಳನ್ನು ಕುಡಿಯಲಿಅಭ್ಯಂತವಿಲ್ಲ. ಆದರೆ, ತಮ್ಮ ಮಕ್ಕಳ  ಭವಿಷ್ಯಕ್ಕಾಗಿ ದುಡಿದು ತಮ್ಮ ಯವ್ವನವನ್ನು ತ್ಯಾಗ ಮಾಡಿದ ಇವರ ಕುಟುಂಬದ ಸದಸ್ಯರು ನಿವೃತ್ತಿಯ ಜೀವನದಲ್ಲಿ ನೆಮ್ಮದಿಯಾಗಿ ಊಟ ಮಾಡಿ, ತಮ್ಮದೇ ನಿವಾಸದಲ್ಲಿ ಸುಖವಾಗಿ ನಿದ್ರೆ ಮಾಡುವ ಹಾಗೆ ಅವರ ಜೀವನ ರೂಪಿಸುವುದು ಇಂದಿನ ಮಕ್ಕಳ ನೈತಿಕ ಜವಾಬ್ದಾರಿಯಾಗಿದೆ.

ಇಂದಿನ ಯುವ ಮನಸ್ಸುಗಳಿಗೆ  ಪರ್ವತಗಳನ್ನು ಹತ್ತಿ ಇಳಿಯುವುದಕ್ಕೆ ಹಿಮಾಲಯದ ಪರ್ವತಗಳೇ ಬೇಕಾಗಿಲ್ಲ. ನಮ್ಮ ಕರ್ನಾಟದಲ್ಲಿ ಕೆಮ್ಮಣ್ಣು ಗುಂಡಿಯಿದೆ, ಕುಮಾರ ಪರ್ವತವಿದೆ, ಚಾಮುಂಡಿ ಮತ್ತು ನಂದಿ ಬೆಟ್ಟಗಳಿವೆ. ನೆರೆಯ ತಮಿಳುನಾಡಿನ ಊಟಿ ಬಳಿ ನೀಲಿಗಿರ ಪರ್ವತವು ಆನೆ ಮಲೈ ಎಂದು ಹೆಸರಾಗಿದೆ. ಬೆಂಗಳೂರಿಗೆ 130 ಕಿಲೊಮೀಟರ್ ದೂರದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಬಳಿ ಹಾರ್ಸ್ಲಿ ಹಿಲ್ ಹೆಸರಿನ ಗಿರಿಧಾಮವಿದೆ. ಇವರೆಲ್ಲಾ ಬಹುತೇಕ ಮಂದಿ ವಿಜ್ಞಾನದ ವಿದ್ಯಾರ್ಥಿಗಳು ಇವರಿಗೆ ಭಾರತದಲ್ಲಿ ಅತ್ಯಂತ ಅಪಾಯಕಾರಿ ಭೂಕಂಪ ಪ್ರದೇಶಗಳು ಯಾವುವು ಎಂಬುದರ ಬಗ್ಗೆ ಕನಿಷ್ಠ ಜ್ಞಾನವಿರಬೇಕು. ಭಾರತದಲ್ಲಿ ಪ್ರಥಮ ಸ್ಥಾನದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಗಳು ಇದ್ದರೆ, ಎರಡನೇ ಸ್ಥಾನದಲ್ಲಿ ಹಿಮಾಲಯ ಪರ್ವತದ ತೆಹ್ರಿ, ಗರ್ವಾಲ್ ಪ್ರದೇಶ ಸೇರಿದಂತೆ ನೆರೆಯ ನೇಪಾಳ ದೇಶ ಇದೆ.  ಅಂಡಮಾನ್ ನಲ್ಲಿ ಸಂಭವಿಸುವ  ಭೂಕಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ ಐದರಿಂದ ಏಳರಷ್ಟು ಇದ್ದರೆ, ಹಿಮಾಲಯದ ಪರ್ವತ ಪ್ರದೇಶದಲ್ಲಿ ನಾಲ್ಕರಿಂದ ಆರರಷ್ಟು ಇದೆ. ರಿಕ್ಟರ್ ಮಾಪಕದಲ್ಲಿ ನಾಲ್ಕನ್ನು ದಾಟಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಇವರುಗಳಿಗೆ ವಿವರಿಸಬೇಕಾಗಿಲ್ಲ. ಆಫ್ಘನಿಸ್ಥಾನವು ಕೂಡಾ ಇದೇ ಅಪಾಯದ ಅಂಚಿನಲ್ಲಿದೆ.

ಗ್ರಾಮೀಣ ಹಿನ್ನಲೆಯಿಂದ ಬಂದ ನನ್ನನ್ನೂ ಒಳಗೊಂಡAತೆ ನನ್ನ ತಲೆಮಾರಿನ ಬಹುತೇಕ ಮಂದಿ ಬಾಲ್ಯದಲ್ಲಿ ನಮ್ಮೂರಿನ ಕೆರೆ, ಕಾಲುವೆ, ನದಿಗಳಲ್ಲಿ ಈಜುತ್ತಾ ಬೆಳೆದವರು. ಬೇಸಿಗೆಯ ದಿನಗಳಲ್ಲಿ ನಮ್ಮ ಹಗಲಿನ ಬಹುತೇಕ ಸಮಯವು ಕೆರೆ ಮತ್ತು ಕಾಲುವೆ ಹಾಗೂ ಊರಿನ ಸಮೀಪವಿರುವ ನದಿಗಳಲ್ಲಿ ಕಳೆದು ಹೋಗುತ್ತಿತ್ತು. ಆದರೆ, ನಾವೆಂದೂ ಅಪರಿಚಿತ ಸ್ಥಳಗಳಲ್ಲಿ ಕೆರೆ ಅಥವಾ ನದಿಗಳಿಗೆ ಇಳಿದು ಈಜುವುದಕ್ಕೆ ಈಗಲೂ ಸಂಹ ಅಂಜುತ್ತೇವೆ. ಏಕೆಂದರೆ, ಅಪರಿಚಿತ ಕೆರೆಗಳ ಆಳ ಮತ್ತು ಹರಿಯುವ ನದಿಗಳಲ್ಲಿ ಇರುವ ಸುಳಿಗಳು ನಮಗೆ ಗೊತ್ತಿರುವುದಿಲ್ಲ. ಇದು ನಾವು ದಕ್ಕಿಸಿಕೊಂಡ ಜ್ಞಾನವಲ್ಲ, ನಮ್ಮ ಅಪ್ಪಂದಿರು ಮತ್ತು ತಾತಂದಿರು ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ ಜ್ಞಾನಪರಂಪರೆ ಇದಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಙಾನದ ಜೊತೆಗೆ ದೇಶಿ ಜ್ಞಾನಪರಂಪರೆಯನ್ನೂ ಯುವ ತಲೆಮಾರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು  ತೀರಾ ಅಗತ್ಯವಾಗಿದೆ.

( ಜುಲೈ ತಿಂಗಳ ಸಮಾಜಮುಖಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಡಾ.ಎನ್.ಜಗದೀಶ್ ಕೊಪ್ಪ