ಸೋಮವಾರ, ಏಪ್ರಿಲ್ 14, 2025

ಬಾಬಾ ಸಾಹೇಬ್ ಅಂಬೇಡ್ಕರ್ ಗ್ರಹಿಸಿದ ಬುದ್ಧ ಮತ್ತು ಆತನ ಧರ್ಮ.


ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ನವ ಯಾನ ಹೆಸರಿನಲ್ಲಿ ಬೌದ್ಧ ಧರ್ಮವನ್ನು ವ್ಯಾಖ್ಯಾನಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯನ್ನು ಇಂದು ಪಾಶ್ಚಿಮಾತ್ಯ ರಾಷ್ಟ್ರಗಳ ಚಿಂತಕರು ಮತ್ತು ವಿದ್ವಾಂಸರು ಕೊಂಡಾಡುತ್ತಿದ್ದಾರೆ. ಇಂಗ್ಲೇಂಡಿನ ಖ್ಯಾತ ವಿದ್ವಾಂಸ ಸ್ಟಿಂಗ್ ಎಂಬುವರು ‘’ ನನ್ನ ಆಲೋಚನಾ ವಿಧಾನದ ಪ್ರಕಾರ, ಡಾ. ಬಿ.ಆರ್. ಅಂಬೇಡ್ಕರ್ ಬುದ್ಧನ ಚಿಂತನೆಗಳಿಗೆ ಹೊಸ ತಿರುವು ನೀಡುವ ಅತ್ಯಂತ ಸ್ಪಷ್ಟ ಮತ್ತು .ಆಮೂಲಾಗ್ರ ವಕ್ತಾರರು ಎಂದಿದ್ದಾರೆ. ಜೊತೆಗೆ ಅವರು ಬೌದ್ಧ ಧರ್ಮದ ಸಮಸ್ಯೆಗಳ ಮೂಲಕ್ಕೆ ಇಳಿದು .ಹೊಸ ವ್ಯಾಖ್ಯಾನದೊಂದಿಗೆ ಆಧುನಿಕ ಜಗತ್ತಿಗೆ ಬೌದ್ಧಧರ್ಮದ ಬಗ್ಗೆ ಪ್ರಚೋದನಕಾರಿ ದೃಷ್ಟಿಕೋನವನ್ನು ನಮ್ಮೆಲ್ಲರಿಗೂ ನೀಢಿದ್ದಾರೆ ಎಎಂದು ನಾನು ಭಾವಿಸುತ್ತೇನ’’ ಎಂದು ನುಡಿದಿದ್ದಾರೆ.
ಭಾರತದ ತಳ ಸಮುದಾಯದಲ್ಲಿ ಜನಿಸಿ, ಹಿಂದೂಧರ್ಮದ ಶ್ರೇಣೀಕೃತ ಸಮಾಜದಲ್ಲಿ ಎಲ್ಲಾ ನೋವು ಮತ್ತು ಅಪಮಾನಗಳನ್ನುಅನುಭವಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು 1935 ರಲ್ಲಿ ‘’ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ, ನಾನು ಹಿಂದೂವಾಗಿ ಸಾಯುವುದಿಲ್ಲ ಎಂದು ದೃಢನಿಶ್ಚಯ ಮಾಡಿದ್ದೇನೆ. ನನಗೆ ಮತ್ತು ನನ್ನ ಸಮುದಾಯಕ್ಕೆ ಯಾವ ಧರ್ಮವು ಹೆಚ್ಚು ಘನತೆ ಮತ್ತು ಮಾನವೀಯತೆಯನ್ನು ನೀಡುತ್ತದೆ ಎಂಬುದನ್ನು ನಾನು ಅಧ್ಯಯನ ಮಾಡಲಿದ್ದೇನೆ." ಎಂದು ಘೋಷಿಸಿಕೊಂಡಿದ್ದರು 1936 ರಲ್ಲಿ ಒಮ್ಮೆ ನಾಗಪುರಕ್ಕೆ .ಹೋಗಿದ್ದ ಸಂದರ್ಭದಲ್ಲಿ ಗಾಂಧೀಜಿಯವರ ಸೇವಾಗ್ರಾಮಕ್ಕೆ ಭೇಟಿ ನೀಡಿ, ಹಿಂದೂ ದೇವಾಲಯಗಳಿಗೆ ನಾಯಿ, ಪಶು, ಪಕ್ಷಿಗಳಿಗೆ ಪ್ರವೇಶವಿದೆ ಆದರೆ, ಅಸ್ಪೃಶ್ಯರಿಗೆ ಏಕೆ ಪ್ರವೇಶವಿಲ್ಲ? ಎಂದು ಮಹಾತ್ಮನ ಮರ್ಮಕ್ಕೆ ತಾಗುವಂತೆ ಪ್ರಶ್ನೆ ಕೇಳಿದ್ದರು. ವಾರ್ದಾ ಬಳಿಯ ಸೇವಾಗ್ರಾಮಕ್ಕೆ ಹತ್ತಿರವಿದ್ದ ರೈಲ್ವೆ ನಿಲ್ದಾಣಕ್ಕೆ ಗಾಂಧೀಜಿಯವರು ತಮ್ಮ ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ ಜೊತೆ ಅಂಬೇಡ್ಕರ್ ಅವರನ್ನು ಟಾಂಗಾ ಗಾಡಿಯಲ್ಲಿ ಕಳಿಸಿಕೊಟ್ಟರು.
ಅಂಬೇಡ್ಕರ್ ಅವರನ್ನು ಮುಂಬೈ ರೈಲಿಗೆ ಹತ್ತಿಸಿ ವಾಪಸ್ ಬಂದ ಮಹಾದೇವ ದೇಸಾಯಿ ಅವರನ್ನು ಗಾಂಧೀಜಿಯವರು , ‘ಡಾಕ್ಟರ್ ಅಂಬೇಡ್ಕರ್ ಮತ್ತೇನಾದರೂ ಹೇಳಿದರೆ? ಎಂದು ಪ್ರಶ್ನಿಸಿದಾಗ, ದೇಸಾಯಿಯವರು ‘’ ಹಿಂದೂ ಧರ್ಮದ ಆಚರಣೆ ಬಗ್ಗೆ ತಮ್ಮ ಆಕ್ರೋಶವನ್ನು ದಾರಿಯುದ್ದಕ್ಕೂ ಅಂಬೇಡ್ಕರ್ ಹೊರ ಹಾಕಿದರು’’ ಎಂದು ನುಡಿದರು. ಗಾಂಧೀಜಿಯವರು ತಣ್ಣನೆಯ ಧ್ವನಿಯಲ್ಲಿ ‘’ ಮಹಾದೇವ, ನಾವು ಅಂಬೇಡ್ಕರ್ ಅವರ ಸಿಟ್ಟನ್ನು ಮತ್ತು ನೋವನ್ನು ಶಾಂತವಾದ ಮನಸ್ಸಿನಿಂದ ಗ್ರಹಿಸಬೇಕು ಅವರ ಆಕ್ರೋಶಕ್ಕೆ ಒಂದು ಮೌಲ್ಯವಿದೆ’’ ಎಂದು ನುಡಿದಿದ್ದರು. ಅಷ್ಟು ಮಾತ್ರವಲ್ಲದೆ, ದಲಿತರಿಗೆ ಪ್ರವೇಶವಿಲ್ಲದ ದೇಗುಲಗಳಿಗೆ ನಾನು ಹೋಗುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿಕೊಂಡರು.
ಡಾ.ಅಂಬೇಡ್ಕರ್ ಹಿಂದೂ ಧರ್ಮದಿಂದ ಅನ್ಯ ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದ ಕಾರಣದಿಂದಾಗಿ, ಮುಂದಿನ ಎರಡು ದಶಕಗಳ ಕಾಲ 1935 ರಿಂದ 1955 ರವರೆಗೆ ಭಾರತದಲ್ಲಿ ಹಿಂದೂ ಧರ್ಮಕ್ಕೆ ಪರ್ಯಾಯವಾಗಿ ಸೃಷ್ಟಿಯಾದ ಜೈನ ಧರ್ಮ, ಬೌದ್ಧ ಧರ್ಮ ಮತ್ತು ವಿದೇಶಿ ನೆಲದ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿದ್ದರು. ಎಲ್ಲಾ ಧರ್ಮಗಳಲ್ಲಿಯೂ ಅನೇಕ ಹುಳುಕುಗಳಿದ್ದವು ಜೊತೆಗೆ ಹಲವು ಪಂಗಡಗಳಿದ್ದವು. ಹಿಂದೂ ಧರ್ಮದಲ್ಲಿ ಶೈವ- ವೈಷ್ಣವ ಪಂಗಡಗಳು ಇದ್ದಂತೆ, ಜೈನ ಧರ್ಮದಲ್ಲಿ ಶ್ವೇತಾಂಬರ, ದಿಗಂಬರ ಎಂಬ ಪಂಗಡಗಳು ಇದ್ದವು. ಇಸ್ಲಾಂ ಧರ್ಮದಲ್ಲಿ ಶಿಯಾ ಮತ್ತು ಸುನ್ನಿ ಹಾಗೂ ಕ್ರೈಸ್ತಧರ್ಮದಲ್ಲಿ ಕ್ಯಾಥೋಲಿಕ್ ಮತ್ತು ಪ್ರಟೊಸ್ಟೆಂಟ್ ಪಂಗಡಗಳಿದ್ದವು. ತಮ್ಮ ಚಿಂತನೆ ಮತ್ತು ಆಶಯಗಳಿಗೆ ತೀರಾ ಹತ್ತಿರವಾದ ಬುದ್ಧನ ಬೌದ್ಧಧರ್ಮವನ್ನು ಅವರು ಅಪ್ಪಿಕೊಂಡರೂ ಸಹ, ಹಿನಯಾನ ಮತ್ತು ಮಹಾಯಾನ ಎಂಬ ಪಂಗಡಗಳಿದ್ದ ಬೌದ್ಧ ಧರ್ಮವನ್ನು ನವಯಾನ ಎಂಬ ಪರಿಷ್ಕೃತ ವ್ಯಾಖ್ಯಾನದೊಂದಿಗೆ ಪರಿಚಯಿಸಿ, ತಾವು ಮತಾಂತರಗೊಳ್ಳುವುದರ ಜೊತೆಗೆ ಐದು ಲಕ್ಷ ಮಂದಿ ತಮ್ಮ ಅನುಯಾಯಿಗಳನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸಿದರು.
ಮಗಧ ಸಾಮ್ರಾಜ್ಯದ ದೊರೆ ಅಶೋಕನು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸಾಂಪ್ರದಾಯಕ ದಿನ ಅಂದರೆ, 1956ರ ಅಕ್ಟೋಬರ್ 14 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಡಾ.ಅಂಬೇಡ್ಕರ್ ಅವರು ತಾವು ಬಹಿರಂಗವಾಗಿ ಘೋಷಿಸಿದ್ದ ‘’ ‘ಹಿಂದೂವಾಗಿ ಸಾಯಲಾರೆ’’ ಎಂಬ ಮಾತಿನಂತೆ ನಡೆದುಕೊಂಡರು ಬೌದ್ಧಧರ್ಮವು ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳ ಆಶಯಗಳಿಗೆ ತೀರಾ ಹತ್ತಿರವಾಗಿತ್ತು. ಏಕೆಂದರೆ, ಅದು ಸ್ಥಳೀಯ ಧರ್ಮವಾಗಿತ್ತು; ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂನಂತೆ ಭಾರತದ ನೆಲಕ್ಕೆ ಆಮದು ಮಾಡಿಕೊಂಡ ಧರ್ಮವಾಗಿರಲಿಲ್ಲ. ಯಾವುದೇ ಸ್ಥಿರವಾದ ನಂಬಿಕೆಗಳು ಅಥವಾ ಆಚರಣೆಗಳಿಗೆ ಅಂಟಿಕೊಳ್ಳದೆ .ಸ್ವತಂತ್ರವಾಗಿ ಬದುಕುವ ಅವಕಾಶವನ್ನು ಬೌದ್ಧ ಧರ್ಮವು ನೀಡಿತ್ತು.. ಧರ್ಮದ ನಿಜವಾದ ಉದ್ದೇಶ ಏನು? ಮತ್ತು ಯಾವುದು ಅರ್ಥಪೂರ್ಣವಾಗಿದೆ ಎಂಬುದನ್ನು ನೋಡಲು ಹಾಗೂ ವ್ಯಕ್ತಿಯೊಬ್ಬ ಸ್ವಂತ ಜೀವನದ ಪ್ರಯೋಗಾಲಯದಲ್ಲಿ ತನ್ನನ್ನು ಪ್ರಯೋಗಿಸಿಕೊಳ್ಳಲು ಅವಕಾಶ ನೀಡಿತ್ತು. ಇದು ಅಂಬೇಡ್ಕರ್ ಅವರ ತತ್ವಕ್ಕೆ ಅನುಗುಣವಾಗಿತ್ತು. ಬುದ್ಧನು ತನ್ನ ಅನುಯಾಯಿಗಳಿಗೆ "ಬೋಧನೆಗಳು ಮತ್ತು ಬರಹಗಳನ್ನು ಕುರುಡಾಗಿ ನಂಬಬೇಡಿ, ಆದರೆ ಅವುಗಳನ್ನು ನಿಮ್ಮ ಸ್ವಂತ ಜೀವನದಲ್ಲಿ ಪರೀಕ್ಷಿಸಿ" ಎಂದು ಹೇಳಿದ್ದನು. . ಬುದ್ಧನು ಎಲ್ಲಾ ಮಾನವರು ಹೊಂದಿರುವ ಸಾಮರ್ಥ್ಯವನ್ನು ಪ್ರತಿನಿಧಿಸುವ ಓರ್ವ ಅಪ್ಪಟ ಮನುಷ್ಯ ನಾನು ಎಂದು ಘೋಷಿಸಿಕೊಂಡಿದ್ದನು. ನಾನು ದೇವರ ಪ್ರವಾದಿ ಅಥವಾ ದೇವರ ಪುತ್ರ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

1957 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಿಧಾನಾ ನಂತರ ಅವರ ಕೊನೆಯ ಕೃತಿಯಾದ "ಬುದ್ಧ ಮತ್ತು ಆತನ ಧಮ್ಮ" .ಪ್ರಕಟವಾಯಿತು. ಕೃತಿಯ ಪರಿಚಯದಲ್ಲಿ, ಅಂಬೇಡ್ಕರ್ ಅವರು ಬೌದ್ಧಧರ್ಮದ ಕೆಲವು ಅಂಶಗಳ ಮೇಲೆ ಬೆಳಕು ಚೆಲ್ಲ್ಲಿದ್ದಾರೆ. ಬುದ್ಧನ ಬೋಧನೆಗಳನ್ನು ಸ್ವೀಕರಿಸುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ ಮತ್ತು ನಿಕಾಯಗಳನ್ನು ಅವಲಂಬಿಸಿ, ಬೌದ್ಧೇತರ ವ್ಯಕ್ತಿಗೆ ಬುದ್ಧನ ಜೀವನ ಮತ್ತು ಬೋಧನೆಗಳ ಕುರಿತು ಸ್ಪಷ್ಟ ಮತ್ತು ಎದ್ದುಕಾಣುವ ಹೇಳಿಕೆಯನ್ನು ಪ್ರಸ್ತುತಪಡಿಸುವುದು ಒಂದು ಜವಾಬ್ದಾರಿಯಾಗಿದೆ ಎಂದು ಅವರು ವಾದಿಸುತ್ತಾರೆ. ನಂತರ ಅವರು ಬೌದ್ಧಧರ್ಮದ ಸಮಸ್ಯೆಗಳನ್ನು ಚರ್ಚಿಸಲು ಮುಂದುವರಿಯುತ್ತಾರೆ. ಮೊದಲ ಸಮಸ್ಯೆ ಬುದ್ಧನ ಜೀವನದಲ್ಲಿನ ಮುಖ್ಯ ಘಟನೆಯಾದ ಪರಿವ್ರಾಜಕ್ಕೆ ಅಂದರೆ, ಸನ್ಯಾತ್ವಕ್ಕೆ ಸಂಬಂಧಿಸಿದೆ ಘಟನೆಗಳ ಬಗ್ಗೆ ವೆಳಕು ಚೆಲ್ಲಿದ್ದಾರೆ.. ಬುದ್ಧನು ತನ್ನ ಜೀವನದಲ್ಲಿ ಮೊದಲ ಬಾರಿಗೆ ಮೂರು ದೃಶ್ಯಗಳನ್ನು ( ಸಾವು, ರೋಗಿ, ವೃದ್ಧ) ನೋಡಿದನು ಮತ್ತು ಇಪ್ಪತ್ತೊಂಬತ್ತನೇ . 29 ನೇ ವಯಸ್ಸಿನಲ್ಲಿ. ಬುದ್ಧನು ಪರಿವ್ರಾಜವನ್ನು ಆ ಮೂರು ದೃಷ್ಟಿಕೋನಗಳಿಂದಾಗಿ ತೆಗೆದುಕೊಂಡನು ಎಂಬ ಹೇಳಿಕೆಯನ್ನು ನಂಬುವುದು ಸಮಂಜಸವಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ.
ಬೌದ್ಧಧರ್ಮದ ಎರಡನೇ ಸಮಸ್ಯೆಗೆ ನಾಲ್ಕು ಆರ್ಯ ಸತ್ಯಗಳು ಕಾರಣ. ಬೌದ್ಧಧರ್ಮದ ಸುವಾರ್ತೆಯನ್ನು ನಿರಾಶಾವಾದದ ಸುವಾರ್ತೆಯಾಗಿ ಮಾಡುವ ಮೂಲಕ ನಾಲ್ಕು ಆರ್ಯ ಸತ್ಯಗಳು ಮೂಲತಃ ಬುದ್ಧನ ಬೋಧನೆಗಳ ಭಾಗವಾಗಿದ್ದವೆ? ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ; ನಾಲ್ಕು ಆರ್ಯ ಸತ್ಯಗಳು ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸುತ್ತವೆ. ಈ ನಾಲ್ಕು ಆರ್ಯ ಸತ್ಯಗಳು "ಸನ್ಯಾಸಿಗಳಿಂದ ನಂತರದ ದಿನಗಳಲ್ಲಿ ಸಂಚಯನ" ಆಗಿರಬಹುದು ಎಂದು ಅಂಬೇಡ್ಕರ್ ಅನುಮಾನಿಸುತ್ತಾರೆ.
ಮೂರನೆಯ ಸಮಸ್ಯೆಯು ಸಂದರ್ಭೋಚಿತವಾದದ್ದು, ಅದು ಆತ್ಮ ಮತ್ತು ಕರ್ಮಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬುದ್ಧನು ಆತ್ಮದ ಅಸ್ತಿತ್ವವನ್ನು ನಿರಾಕರಿಸಿದನು ಆದರೆ ಮತ್ತೊಂದೆಡೆ, ಅವನು ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತವನ್ನು ಸಹ ದೃಢಪಡಿಸಿದನು. ಮೊದಲನೆಯದಾಗಿ ಆತ್ಮವಿಲ್ಲದಿದ್ದರೆ ಪುನರ್ಜನ್ಮ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಅಂಬೇಡ್ಕರ್ ಎತ್ತುತ್ತಾರೆ. ಈ ಅಂಶವು ಸ್ವತಃ ವಿರೋಧಾಭಾಸವಾಗಿದೆ ಮತ್ತು ಇದನ್ನು ಪರಿಹರಿಸಬೇಕು ಮತ್ತು ಅದರ ಮೇಲೆ ಬೆಳಕು ಚೆಲ್ಲಬೇಕು ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು.
ನಾಲ್ಕನೆಯದು ಬುದ್ಧನ ಭಿಕ್ಕುವನ್ನು ಸೃಷ್ಟಿಸುವ ಉದ್ದೇಶಕ್ಕೆ ಸಂಬಂಧಿಸಿದ್ದಾಗಿದೆ. ಭಿಕ್ಕುವಿನ ಸೃಷ್ಟಿಯ ಹಿಂದಿನ ಬುದ್ಧನ ಉದ್ದೇಶ ಪರಿಪೂರ್ಣ ಮನುಷ್ಯನನ್ನು ಸೃಷ್ಟಿಸುವುದೋ ಅಥವಾ ಸಮಾಜ ಸೇವಕನನ್ನು ಸೃಷ್ಟಿಸುವುದೋ ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ಒಬ್ಬ ಭಿಕ್ಕುವು ಪರಿಪೂರ್ಣ ಮನುಷ್ಯನಾಗಿದ್ದರೆ, ಅವನಿಂದ ಬೌದ್ಧಧರ್ಮದ ಪ್ರಚಾರಕ್ಕೆ ಯಾವುದೇ ಪ್ರಯೋಜನವಿಲ್ಲ ಏಕೆಂದರೆ ಅವನು ಸ್ವಾರ್ಥಿಯಾಗುತ್ತಾನೆ. ಎಂದು ಅಂಬೇಡ್ಕರ್ ಅವರ ನಿಲುವಾಗಿತ್ತು. ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ. ಇದು ಅಂಬೇಡ್ಕರ್ ಅವರ ದೃಢವಾದ ನಿಲುವಾಗಿತ್ತು. ಈ ಕಾರಣದಿಂದ ಗೌತಮ ಬುದ್ಧನ ಅನುಯಾಯಿಗಳಾಗಿದ್ದ ಬ್ರಾಹ್ಮಣರು ರಚಿಸಿದ್ದ ಬುದ್ಧನ ಚರಿತ್ರೆಯನ್ನು ( ಜಾತಕ ಕಥೆಗಳು) ಅವರು ನಿರಾಕರಿಸಿದರು. ಅಲ್ಲಿಯವರೆಗೆ ಅಶ್ವಘೋಶನ ಬುದ್ಧ ಚರಿತೆ ನಮ್ಮ ಮುಂದಿತ್ತು.
ಬುದ್ಧ ಮತ್ತು ಅವನ ಧಮ್ಮ ಎಂಬ ಸಂಪುಟವನ್ನು ಎಂಟು ಪುಸ್ತಕಗಳ ವಿಭಾಗಳಾಗಿ ವಿಂಗಡಿಸಲಾಗಿದೆ. ಪುಸ್ತಕ ಒಂದರಲ್ಲಿ ಬುದ್ಧನ ಪ್ರಯಾಣ ಮತ್ತು ಬೋಧಿಸತ್ವ ಬುದ್ಧನಾಗುವ ಗಮನಾರ್ಹ ಪ್ರಯಾಣವನ್ನು ಚರ್ಚಿಸುತ್ತದೆ. ಬುದ್ಧನ ಆರಂಭಿಕ ಜೀವನದ ಸ್ಪಷ್ಟ, ಎದ್ದುಕಾಣುವ ಮತ್ತು ವಿವರವಾದ ವಿವರವನ್ನು ನೀಡುತ್ತದೆ. ಸಿದ್ಧಾರ್ಥ ಗೌತಮ ಆಧುನಿಕ ನೇಪಾಳದ ಲುಂಬಿನಿಯಲ್ಲಿ ಶುದ್ಧೋಧನ ಮತ್ತು ಮಹಾಮಾಯರಿಗೆ ಜನಿಸಿದನು. ಎಂಟನೇ ವಯಸ್ಸಿನಲ್ಲಿ, ಬುದ್ಧನು ತನ್ನ ಶಿಕ್ಷಣವನ್ನು ಪ್ರಾರಂಭಿಸಿದನು. ಅವನು ತನ್ನ ಕಾಲದಲ್ಲಿ ಸಬ್ಬಮಿತನ ಮಾರ್ಗದರ್ಶನದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ತಾತ್ವಿಕ ವ್ಯವಸ್ಥೆಗಳನ್ನು ಕರಗತ ಮಾಡಿಕೊಂಡನು. ಇದಲ್ಲದೆ, ಬುದ್ಧನು ಕಪಿಲವಸ್ತುವಿನಲ್ಲಿ ತನ್ನ ಆಶ್ರಮವನ್ನು ಹೊಂದಿದ್ದ ಭಾರದ್ವಾಜನಿಂದ ಏಕಾಗ್ರತೆ ಮತ್ತು ಧ್ಯಾನದ ವಿಜ್ಞಾನವನ್ನು ಕಲಿತನು. ಹದಿನಾರನೇ ವಯಸ್ಸಿನಲ್ಲಿ, ಸಿದ್ಧಾರ್ಥನು ಯಶೋಧರೆಯನ್ನು ವಿವಾಹವಾದನು ಮತ್ತು ದೀರ್ಘಾವಧಿಯ ದಾಂಪತ್ಯ ಜೀವನದ ನಂತರ ರಾಹುಲ ಎಂಬ ಮಗನನ್ನು ಪಡೆದನು.
ಪುಸ್ತಕದ ಮೊದಲ ಭಾಗವು ಸಿದ್ಧಾರ್ಥನ ಜೀವನದ ಕುತೂಹಲಕಾರಿ ಕಥೆಗಳನ್ನು ಹೇಳುತ್ತದೆ. ಎರಡನೇ ಪುಸ್ತಕದಲ್ಲಿ (ಎಂಟು ಭಾಗಗಳನ್ನು ಹೊಂದಿದೆ) ಬುದ್ಧನ ಮತಾಂತರ ಯೋಜನೆಯ ಸ್ಪಷ್ಟ ವಿವರಣೆಯೊಂದಿಗೆ ಪ್ರಾರಂಭವಾಗುತ್ತದೆ. ಬುದ್ಧನ ವಿಷಯಗಳ ಯೋಜನೆಯಲ್ಲಿ, ಮತಾಂತರಕ್ಕೆ ಎರಡು ಅರ್ಥಗಳಿವೆ - ಉಪಸಮೇತ ಎಂಬ ಸಮಾರಂಭವನ್ನು ಒಳಗೊಂಡಿರುವ ಸಂಘ ಎಂಬ ಭಿಕ್ಕುಗಳ ಕ್ರಮಕ್ಕೆ ಮತಾಂತರ ಮತ್ತು ಯಾವುದೇ ಸಮಾರಂಭವನ್ನು ಒಳಗೊಂಡಿರದ ಗೃಹಸ್ಥನ ಮತಾಂತರ. ಪುಸ್ತಕದ ಎರಡನೇ ಭಾಗವು ಪರಿವ್ರಾಜನ ನಂತರದ ಜೀವನದ ಸ್ಪಷ್ಟ ವಿವರಣೆಯನ್ನು ಹೇಳುತ್ತದೆ, . ಬುದ್ಧನು ಆರಂಭದಲ್ಲಿ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಇಷ್ಟವಿರಲಿಲ್ಲವಾದರೂ, ಆಪ್ತ ಶಿಷ್ಯನಾದ ಆನಂದರ ಮನವೊಲಿಕೆ ಮತ್ತು ಕೋರಿಕೆಯ ಮೇರೆಗೆ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಒಪ್ಪಿಕೊಂಡನು. ಬುದ್ಧನ ತಾಯಿಯಾದ ಮಹಾಪ್ರಜಾಪತಿ ಗೌತಮಿಗೆ ಎಂಟು ಮುಖ್ಯ ನಿಯಮಗಳನ್ನು ಜಾರಿಗೊಳಿಸುವ ಕೆಲಸವನ್ನು ನೀಡಲಾಯಿತು, ಅದು ಅವಳ ಬಿಕ್ಕುಣಿಯ ಜೀವನವನ್ನು ಪ್ರಾರಂಭಿಸಿತು. ಎರಡನೆಯ ಕಥೆಯು ಚಾಂಡಾಲಿಕಾ ಪ್ರಕೃತಿಯ ಕಥೆಯನ್ನು ಮತ್ತು ಅವಳು ಬುದ್ಧನಿಂದ ಜ್ಞಾನೋದಯವನ್ನು ಪಡೆದು ನಂತರ ಬಿಕ್ಕುಣಿ ಸಂಘಕ್ಕೆ ಹೇಗೆ ಸೇರಿಕೊಂಡಳು ಎಂಬುದನ್ನು ಹೇಳುತ್ತದೆ.
ಮೂರನೆಯ ಪಠ್ಯವು ಬುದ್ಧನ ಬೋಧನೆಗಳ ಸಂಪೂರ್ಣ ಮತ್ತು ವಿವರವಾದ ಚಿತ್ರಣವನ್ನು ನೀಡುತ್ತದೆ. ಯಾವುದೇ ಇತರ ಧಾರ್ಮಿಕ ಪ್ರಚಾರಕರಂತೆ ಬುದ್ಧನು ತನ್ನ ಸ್ವಂತ ಧರ್ಮದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರಲಿಲ್ಲ.ಬುದ್ಧನು ತಾನು ಪ್ರವಾದಿ ಅಥವಾ ದೇವರ ಸಂದೇಶವಾಹಕನ ಅಂತಹ ವಿವರಣೆಗಳನ್ನು ನಿರಾಕರಿಸಿದನು. ಮಾನವಕುಲಕ್ಕೆ ಮೋಕ್ಷವನ್ನು ನೀಡಲು ನಾನು 'ದೇವರ ಸಂದೇಶ ವಾಹಕನಲ್ಲ' ' ಮಾರ್ಗ ದಾತ' ಎಂದು ಬುದ್ಧನು ತನ್ನನ್ನು ಕರೆದುಕೊಂಡನು . ಮೂರನೇ ಪುಸ್ತಕದ ಮೂರನೇ ಮತ್ತು ನಾಲ್ಕನೇ ಭಾಗಗಳಲ್ಲಿ, ಬುದ್ಧನ ಪ್ರಕಾರ ಧಮ್ಮ ಎಂದರೇನು ಮತ್ತು ಯಾವುದು ಧಮ್ಮವಲ್ಲ ಎಂಬುದನ್ನು ಸಂಪೂರ್ಣವಾಗಿ ಡಾ. ಅಂಬೇಡ್ಕರ್ ಸ್ಪಷ್ಟಪಡಿಸುತ್ತಾರೆ. .
ಬುದ್ಧನ ಪ್ರಕಾರ ಧಮ್ಮ ಅಥವಾ ಧರ್ಮ ಎಂದರೆ, ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಧಮ್ಮ, ಜೀವನದಲ್ಲಿ ಪರಿಪೂರ್ಣತೆಯನ್ನು ತಲುಪುವುದು ಧಮ್ಮ. ನಿರ್ವಾಣದಲ್ಲಿ ಬದುಕುವುದು ಧಮ್ಮ, ಹಂಬಲವನ್ನು ತ್ಯಜಿಸುವುದು ಧಮ್ಮ, ಎಲ್ಲಾ ಸಂಯುಕ್ತ ವಸ್ತುಗಳು ಅಶಾಶ್ವತ ಎಂದು ನಂಬುವುದು ಧಮ್ಮ, ಕರ್ಮವು ನೈತಿಕ ಕ್ರಮದ ಸಾಧನ ಎಂದು ಒಪ್ಪಿಕೊಳ್ಳುವುದು ಧಮ್ಮ. ಬುದ್ಧನ ಪ್ರಕಾರ ಪ್ರಕಾರ , ಅಲೌಕಿಕದಲ್ಲಿ ನಂಬಿಕೆ ಇಡುವುದು ಧರ್ಮವಲ್ಲ., ದೇವರಲ್ಲಿ ನಂಬಿಕೆ ಮೂಲಭೂತವಾಗಿ ಧಮ್ಮದ ಭಾಗವಲ್ಲ., ಬ್ರಹ್ಮನೊಂದಿಗೆ ಐಕ್ಯತೆಯನ್ನು ಆಧರಿಸಿದ ಧಮ್ಮವು ಸುಳ್ಳು ಧಮ್ಮವಾಗಿದೆ., ಆತ್ಮದಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ, ಯಜ್ಞಗಳಲ್ಲಿ ನಂಬಿಕೆ ಇಡುವುದು ಧರ್ಮವಲ್ಲ.,ಧಮ್ಮದ ಬಗ್ಗೆ ಪುಸ್ತಕಗಳನ್ನು ಓದುವುದು ಧಮ್ಮವಲ್ಲ.
ನಾಲ್ಕನೇ ಪುಸ್ತಕದ ಭಾಗವು ಧರ್ಮದಿಂದ ಬೌದ್ಧ ಧಮ್ಮ ಹೇಗೆ ಭಿನ್ನವಾಗಿದೆ, ಧರ್ಮದ ಉದ್ದೇಶಗಳು ಮತ್ತು ಅವುಗಳಲ್ಲಿ ನೈತಿಕತೆಯ ಸ್ಥಾನದ ಕುರಿತು ವಿಸ್ತಾರವಾದ ವಿವರಗಳನ್ನು ಅಂಬೇಡ್ಕರ್ ಅವರ ಕೃತಿಯು ನಮಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. . ಐದನೇ ಪುಸ್ತಕವು ಸಂಘಕ್ಕೆ ಪ್ರಮುಖ ಮಾರ್ಗಸೂಚಿಗಳು, ಭಿಕ್ಕುಗಳ ಕರ್ತವ್ಯಗಳು ಮತ್ತು ಭಿಕ್ಕುವಿನ ಬಗ್ಗೆ ಬುದ್ಧನ ಪರಿಕಲ್ಪನೆಯನ್ನು ವಿವರಿಸುತ್ತದೆ. ಆರನೇ ಪುಸ್ತಕವು ಬುದ್ಧ ನಸಮಕಾಲೀನರ ಬಗ್ಗೆ ವಿವರ ನೀಡುತ್ತದೆ.
ಏಳನೇ ಪುಸ್ತಕವು ಬುದ್ಧನ ಕೊನೆಯ ದಿನಗಳ ಬಗ್ಗೆ ವಿವರಿಸುತ್ತದೆ. ಬುದ್ಧನು ಸುಮಾರು ಎಂಬತ್ತನೇ ವಯಸ್ಸಿನಲ್ಲಿ ಮಲ್ಲರ ಗಣರಾಜ್ಯದ ಕುಶಿನಗರದಲ್ಲಿ ನಿಧನರಾನು. ಅವನ ಚಿತಾಭಸ್ಮಕ್ಕಾಗಿ ಜಗಳವಾಯಿತು, ನಂತರ ಅದನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಯಿತು. ಎಂಟನೇ ಮತ್ತು ಕೊನೆಯ ಪುಸ್ತಕವು ಬುದ್ಧನ ಬಗ್ಗೆ ಮಾತನಾಡುತ್ತದೆ - ಅವನ ದೈಹಿಕ ನೋಟ, ಅವನ ನಾಯಕತ್ವದ ಸಾಮರ್ಥ್ಯ, ಅವನ ಇಷ್ಟಾನಿಷ್ಟಗಳು, ಅವನ ಮಾನವೀಯತೆ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು. ಬುದ್ಧನು ಜಗತ್ತಿನಾದ್ಯಂತ ಉಲ್ಲೇಖಿಸಿದ ಶ್ರೇಷ್ಠ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಮೂಲಕ ಅಂಬೇಡ್ಕರ್ ಪುಸ್ತಕವನ್ನು ಮುಕ್ತಾಯಗೊಳಿಸುತ್ತಾರೆ. ಬುದ್ಧನ ಜೀವನ ಮತ್ತು ಬೋಧನೆಗಳ ಬಗ್ಗೆ ಶಿಕ್ಷಣ ಪಡೆಯಲು ಬಯಸುವ ಯಾರಿಗಾದರೂ ಅಂಬೇಡ್ಕರ್ ಅವರ ' ಬುದ್ಧ ಮತ್ತು ಅವನ ಧಮ್ಮ' ಪುಸ್ತಕವು ನಿಸ್ಸಂದೇಹವಾಗಿ ಒಳ್ಳೆಯ ಮಾರ್ಗದರ್ಶಿಯಾಗಿದೆ.
ಬುದ್ಧನ ನಿಧನಾನಂತರ ಓರ್ವ ಬ್ರಾಹ್ಮಣನು ಬುದ್ಧನ ಆಪ್ತ ಶಿಷ್ಯ ಆನಂದನನ್ನು ಭೇಟಿಯಾಗಿ ‘’ ಮಿತ್ರಾ, ಬುದ್ಧ ತೀರಿಕೊಂಡನಲ್ಲವೆ? ಆತನ ಸ್ಥಾನವನ್ನು ತುಂಬುವ ವ್ಯಕ್ತಿ ನಿಮ್ಮಲ್ಲಿ ಯಾರಿದ್ದಾರೆ? ಎಂದು ಕೇಳಿದಾಗ, ಆನಂದನ ಉತ್ತರ ಹೀಗಿತ್ತು. ‘’ ಗೆಳೆಯಾ, ಬುದ್ಧನಂತಹ ಮತ್ತೊಬ್ಬ ಮೇರು ವ್ಯಕ್ತಿ ಇರಲು ಸಾಧ್ಯವೆ? ಬುದ್ಧಗುರು ಸತ್ಯವನ್ನು ಶೋಧಿಸಿದರು ಮತ್ತು ಆಚರಣೆಗೆ ತಂದರು, ನಾವು ಈಗ ಆಚರಣೆಗೆ ತರಬೇಕಾಗಿರುವುದು ಬುದ್ಧ ಗುರುವಿನ ಸಿದ್ಧಾಂತಗಳನ್ನು ಮಾತ್ರ. ಇನ್ನೊಬ್ಬ ಬುದ್ಧನ ಹುಡುಕಾಟವಲ್ಲ.’’

ಕ್ರಿಸ್ತಪೂರ್ವದಲ್ಲಿ ಆನಂದನು ಆಚರಣೆಗೆ ತಂದ ತಥಾಗತ ಬುದ್ಧನ ಸಿದ್ಧಾಂತಗಳನ್ನು ಇಪ್ಪತ್ತನೇ ಶತಮಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಆಚರಣೆಗೆ ತಂದರು ಎಂಬ ಮಾತು ಅತಿಶಯದ ಮಾತಾಗಲಾರದು. 

ಸೋಮವಾರ, ಮಾರ್ಚ್ 31, 2025

ಬುದ್ದಿ ಮಾಂದ್ಯರ ಭಾರತದಲ್ಲಿ ನಕಲಿ ದೇವಮಾನವರ ಸುಗ್ಗಿ ಕುಣಿತ

 


 ದೇವರು, ಧರ್ಮ, ಧ್ಯಾನ ಮತ್ತು ಯೋಗ ಹಾಗೂ ಧಾರ್ಮಿಕ ಉಪನ್ಯಾಸಗಳು ಮಾರುಕಟ್ಟೆಯ ಸರಕುಗಳಂತೆ ಬಿಕರಿಯಾಗುತ್ತಿರುವ ಭಾರತದಲ್ಲಿ ಈಗ ನಕಲಿ ದೇವಮಾನರು ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ಮೀರಿ ನಿಲ್ಲುವ ಅತೀತ ಮಾನವರಾಗಿದ್ದಾರೆ. ಪ್ರಧಾನಿ, ರಾಷ್ಟçಪತಿ, ಉಚ್ಛ ಮತ್ತು ಸವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಅವರ ಮುಂದೆ ನಡುಬಗ್ಗಿಸಿ ನಿಲ್ಲುವ ದಿನಗಳಲ್ಲಿ ಜನಸಾಮಾನ್ಯರನ್ನು ರಕ್ಷಿಸುವವರು ಯಾರು? ಇದು ದೇಶದ ಪ್ರಜ್ಞಾವಂತ ನಾಗರೀಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಕ್ರಿಸ್ತಪೂರ್ವ ಭಾರತದಲ್ಲಿ ಮನುಷ್ಯನ ಅಮಾನುಷ ಹಾಗೂ ಅವಿವೇಕದ ನಡೆಗಳನ್ನು ನಿಯಂತ್ರಿಸಲು ಸೃಷ್ಠಿಯಾದ ಧರ್ಮ ಮತ್ತು ದೇವರುೆಂಬ ಪರಿಕಲ್ಪನೆ ಇಪ್ಪತ್ತೊಂದನೇ ಶತಮಾನದಲ್ಲಿ ನಾಗರೀಕರನ್ನು ಮತ್ತು ಜನ ಸಾಮಾನ್ಯರನ್ನು ಶೋಷಿಸುವ ಅಸ್ತ್ರಗಳಾಗಿವೆ. ಕಳೆದ ಒಂದು ದಶಕದಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಸಂವಿಧಾನಕ್ಕಿಂತ ಮುಖ್ಯವಾಗಿ ಶ್ರೀ ರಾಮ ಮತ್ತು ಕುಂಭಮೇಳ ಮುಖ್ಯವಾಗಿವೆ. ವೈಚಾರಿಕತೆ ಮತ್ತು ಆಧುನಿಕತೆಯತ್ತ ಸಾಗಬೇಕಿದ್ದ ಭಾರತವು ಈಗ ಕ್ರಿಸ್ತಪೂರ್ವದ ಕತ್ತಲೆಯ ಯುಗದತ್ತ ಮುನ್ನುಗ್ಗುತ್ತಿದೆ. ಎಲ್ಲೆಡೆ ನಕಲಿ ದೇವಮಾನವರು ತಾಂಡವ ನೃತ್ಯವನ್ನು ಪ್ರದರ್ಶಿಸಿತ್ತಿದ್ದಾರೆ. ಬಹುಸಂಸ್ಕೃತಿಯ ಭಾರತವು ಈಗ ಬುದ್ದಿಮಾಂದ್ಯರ ದೇಶವಾಗಿ ಪರಿವರ್ತನೆಗೊಂಡಿದೆ.

 

0ತಹ ಚಾರಿತ್ರ್ಯಹೀನ ಇತಿಹಾಸವು ದಕ್ಷಿಣ  ಭಾರತದಲ್ಲಿ  ಪುಟ್ಟಪರ್ತಿ ಸಾಯಿಬಾಬಾನಿಂದ ಶಂಕುಸ್ಥಾಪನೆಗೊಂಡು, ಉತ್ತರ ಭಾರತದಲ್ಲಿ  1970 ದಶಕದಲ್ಲಿ ಇಂದಿರಾಗಾಂಧಿಯವರ ಆಡಳಿತದ ಅವಧಿಯಲ್ಲಿ ಧೀರೆಂದ್ರ ಬ್ರಹ್ಮಚಾರಿ ಎಂಬ ಯೋಗ ಗುರುವಿನಿಂದ ಆರಂಭವಾಯಿತು. ತುರ್ತುಪರಿಸ್ಥಿತಿಯ ಕಾಲದಲ್ಲಿ ಈತ ಇಡೀ ದೇಶವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದನು. 1924 ರಲ್ಲಿ ಉತ್ತರ ಪ್ರದೇಶದ ಮೈಥಿಲಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ ಧೀರೇಂದ್ರ ಬ್ರಹ್ಮಚಾರಿ ಬಾಲ್ಯದಲ್ಲಿ ಮನೆ ತ್ಯೆಜಿಸಿ ವಾರಣಾಸಿಗೆ ಹೋಗಿ ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಯೋಗ ಗುರುವಾಗಿ ಜಗತ್ತಿಗೆ ಗುರುತಿಸಿಕೊಂಡವನು. ದೆಹಲಿ, ಗುರುಗಾಂವ್ ( ಗುರುಗ್ರಾಮಮತ್ತು ಜಮ್ಮು ಕಾಶ್ಮೀರದಲ್ಲಿ ಯೋಗಾಶ್ರಮಗಳನ್ನು ತೆರೆದು ಪಾಶ್ಚಿಮಾತ್ಯರನ್ನು ಯೋಗದತ್ತ ಸೆಳೆದÀನು. ಅಂದಿನ ರಷ್ಯಾದ ಗಗನ ಯಾತ್ರಿಗಳಿಗೆ ಯೋಗ ಕಲಿಸಲು 1960 ದಶಕದಲ್ಲಿ ಸೋವಿಯತ್ ರಷ್ಯಾಕ್ಕೆ ಹೋಗಿ ಬಂದ ಧೀರೆಂದ್ರ ಬ್ರಹ್ಮಚಾರಿಯ ಆಶ್ರಮಕ್ಕೆ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಪುತ್ರಿ ಇಂದಿರಾ ಗಾಂಧಿಗೆ ಯೋಗ ಕಲಿಸಲು ಕಳಿಸಿಕೊಟ್ಟ ನಂತರ ಆತನ ಬದುಕು ಹೊಸ ಆಯಾಮದತ್ತ ಹೊರಳಿತು. 1970 ದಶಕದ ಉತ್ತರಾರ್ಧದಲ್ಲಿ ಧೀರೇಂದ್ರ ಬ್ರಹ್ಮಚಾರಿ  ಸರ್ಕಾರಿ ಸ್ವಾಮ್ಯದ  ದೂರದರ್ಶನದಲ್ಲಿ ಪ್ರಸಾರವಾದ ಯೋಗಾಭ್ಯಾಸ ಎಂಬ ಕಾರ್ಯಕ್ರಮಗಳ ಮೂಲಕ ದೇಶವ್ಯಾಪಿ ಪ್ರಸಿದ್ಧಿ ಪಡೆದನು.

ಧೀರೆಂದ್ರ ಬ್ರಹ್ಮಚಾರಿ ಆಶ್ರಮಗಳು ಹವಾ ನಿಯಂತ್ರಿತ ವ್ಯವಸ್ಥೆಯ ಆಶ್ರಮಗಳಾಗಿದ್ದವು. ಆತನ ಬಳಿ ಹೆಲಿಕಾಪ್ಟರ್ ಹಾಗೂ ಲಘು ವಿಮಾನಗಳಿದ್ದವು. ಪ್ರಧಾನಿಯಾಗಿದ್ದ ಇಂದಿರಾಗಾಂದಿಯವರು ವಾರಕ್ಕೊಮ್ಮೆ ಆತನ ಆಶ್ರಮಕ್ಕೆ ತೆರಳಿ ಯೋಗಾಭ್ಯಾಸ ಮಾಡುತ್ತಿದ್ದರು. ದೇಶದ ರಾಜಕಾರಣಿಗಳು, ಅಧಿಕಾರಿಗಳು ಇಂದಿರಾಗಾಂಧಿಯ ಮೇಲೆ ಪ್ರಭಾವ ಬೀರಲು ಆತನ ಮುಂದೆ ಮಂಡಿಯೂರಿ ಕೂರುತ್ತಿದ್ದರು. ಬ್ರಹ್ಮಚಾರಿ ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಆಶ್ರಮ ಮತ್ತು ವಿಮಾನ ನಿಲ್ದಾಣಕ್ಕಾಗಿ ಸರ್ಕಾರಿ ಭೂಮಿಯನ್ನು ಉಚಿತವಾಗಿ ಪಡೆದಿದ್ದನು ಜೊತೆಗೆ ಭಾರತೀಯ ಸೇನೆಗೆ ವಿಮಾನ ಖರೀದಿಸಲು ರಷ್ಯಾದ ದಲ್ಲಾಳಿಯಾಗಿ ಕಾರ್ಯನಿರ್ವಹಿಸಿದ್ದನು. ಈತನ ಭೂಮಿ ವಿವಾದ, ದಲ್ಲಾಳಿ ವ್ಯªಹಾರಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಧೀರೆಂದ್ರ ಬ್ರಹ್ಮಚಾರಿ  1994   ಜೂನ್ ತಿಂಗಳಲ್ಲಿ  ಜಮ್ಮು ಮತ್ತು ಕಾಶ್ಮೀರದ ಉಧಮ್ಪುರ ಬಳಿ ನಡೆದ ತನ್ನ ಲಘು ವಿಮಾನ ಅಪಘಾತದಲ್ಲಿ ಮರಣ ಹೊಂದಿದನು.

ಧೀರೆಂದ್ರ ಭಹ್ಮಚಾರಿಯ ನಂತರ ದೆಹಲಿಯ ರಾಜಕೀಯದಲ್ಲಿ 1990 ದಶಕದಲ್ಲಿ ಅಂದಿನ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರ ಅವಧಿಯಲ್ಲಿ ಪ್ರಸಿದ್ಧಿಗೆ ಬಂದವನು   ಜ್ಯೋತಿಷಿ ಮತ್ತು ತಾಂತ್ರಿಕ ಜಗದ್ಗುರು ಎಂದು ಹೆಸರಾದ ಚಂದ್ರಸ್ವಾಮಿ. ಈತ ಮೂಲತಃ ರಾಜಸ್ಥಾನದ ಆಲ್ವಾರ್ ಸಮೀಪದ ಬೆಹ್ರೂರ್ ಎಂಬ ಪಟ್ಟಣದ ಜೈನ ಕುಟುಂಬದಲ್ಲಿ ಜನಿಸಿದವನು. ಈತನ ಕುಟುಂಬವು ಹೈದರಾಬಾದಿಗೆ ಸ್ಥಳಾಂತರಗೊಂಡಿದ್ದ ಕಾರಣ, ನೇಮಿಚಂದ್ ಜೈನ್ ಹೆಸರಿನ ಈತನು ಕಾಳಿಯ ಆರಾಧಕನಾಗಿ ಚಂದ್ರಸ್ವಾಮಿ ಎಂದು ತನ್ನ ಹೆಸರನ್ನು ಬದಲಿಸಿಕೊಂಡನು. ಹೈದರಾಬಾದ್ ಮೂಲದ ಪಿ.ವಿ.ನರಸಿಂಹರಾವ್ ಅವರ ಸಂಬA ಬಳಸಿಕೊಂಡು ದೆಹಲಿಗೆ ಸ್ಥಳಾಂತರಗೊಂಡ ಈತ ಪ್ರಭಾವ ಜ್ಯೋತಿಷಿಯಾಗಿ, ರಾಜಕಾರಣದ ಕೇಂದ್ರ ಬಿಂದುವಾಗಿ ಬೆಳೆದನುದೆಹಲಿಯ ಕುತುಬ್ ಸಾಂಸ್ಥಿಕ ಪ್ರದೇಶದಲ್ಲಿ ವಿಶ್ವ ಧರ್ಮಾಯತನ್ ಸಂಸತ್ತು ಎಂದು ಕರೆಯಲ್ಪಡುವ ಆಶ್ರಮವನ್ನು ನಿರ್ಮಿಸಿದನು. ಆಶ್ರಮಕ್ಕಾಗಿ ಭೂಮಿಯನ್ನು ಇಂದಿರಾ ಗಾಂಧಿಯವರು ಮಂಜೂರು ಮಾಡಿದ್ದರು. ದೇಶವಿದೇಶದ ಸಿನಿಮಾ ತಾರೆಯರು, ಶಸ್ತಾçಸ್ತç ಮಾರಾಟದ ದಲ್ಲಾಳಿಗಳು, ರಾಜಕೀಯ ನಾಯಕರು ಚಂದ್ರಸ್ವಾಮಿಯ ಭಕ್ತರಾಗಿ ಮಾgರ್ಪಟ್ಟರು. ಅಮೇರಿಕಾದ ಅಧ್ಯಕ್ಷ ರಿಚರ್ಡ್ ನಿಕ್ಸನ್, ಇಂಗ್ಲೇಂಡಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರಿಂದ ಹಿಡಿದುಮ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಚಂದ್ರಶೇಖರ್, ವಿ.ಪಿ.ಸಿಂಗ್ ಮೊದಲಾದ ರಾಜಕಾರಣಿಗಳ ಜೊತೆ ಈತನ ಸಂಪರ್ಕವಿತ್ತು. ಬಾಲಿವುಡ್ ತಾರೆ ಎಲಿಜಬೆತ್ ಟೇಲರ್, ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ, ಉದ್ಯಮಿಗಳಾದ ಟೈನಿ ರೋಲ್ಯಾಂಡ್ ಮತ್ತು ಮೊಹಮ್ಮದ್ ಅಲ್-ಫಾಯದ್ ಮತ್ತು ಅಪರಾಧ ಜಗತ್ತಿನ ದೊರೆ ದಾವೂದ್ ಇಬ್ರಾಹಿಂ ಮುಂತಾದವರಿಗೆ ಚಂದ್ರಸ್ವಾಮಿ ಆಧ್ಯಾತ್ಮಿಕ ಸಲಹೆಯನ್ನು ನೀಡುತ್ತಿದ್ದನು ಎಂಬ ಸುದ್ದಿಯು ಕಾಲದಲ್ಲಿ ಮುಂಚೂಣಿಯಲ್ಲಿತ್ತು.

 ಚಂದ್ರಸ್ವಾಮಿಯ  ಮೇಲೆ  ಆರ್ಥಿಕ ಅಕ್ರಮ ಚಟುವಟಿಕೆಗಳ ಆರೋಪಗಳಿದ್ದವು. 1996 ರಲ್ಲಿ ಲಂಡನ್ ಮೂಲದ ಉದ್ಯಮಿಯೊಬ್ಬರಿಗೆ ಒಂದು ಲಕ್ಷ ಡಾಲರ್ ವಂಚನೆ ಮಾಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತುವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯನ್ನು  ಉಲ್ಲಂಘಿಸಿದ ಆರೋಪವನ್ನು ಸಹ ಆತ ಎದುರಿಸಬೇಕಾಯಿತು2011 ಜೂನ್ ತಿಂಗಳಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಚಂದ್ರಸ್ವಾಮಿಗೆ ಒಂಬತ್ತು ಕೋಟಿ ರೂಪಾಯಿ ದಂqವನ್ನುÀ ವಿಧಿಸಿತು.   ಚಂದ್ರಸ್ವಾಮಿ  2017ರ  ಮೇ 23 ರಂದು ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದನು.

 ಇದೀಗ ಧೀರೆಂದ್ರ ಬ್ರಹ್ಮಚಾರಿ ಮತ್ತು ಚಂದ್ರಸ್ವಾಮಿ ಸ್ಥಾನವನ್ನು ಯೋಗಾ ಗುರು ಬಾಬಾ ರಾಮದೇವ್ ಆಕ್ರಮಿಸಿದ್ದಾನೆ1965 ರಲ್ಲಿ ಚಂಡಿಗಡ ಬಳಿಯ ಗ್ರಾಮವೊಂದರಲ್ಲಿ ಯಾದವ ಸಮುದಾಯದಲ್ಲಿ ಜನಿಸಿ, ಯೋಗಭ್ಯಾಸ ಮತ್ತು ತರಬೇತಿಯನ್ನು ವೃತ್ತಿಯಾಗಿಸಿಕೊಂಡು ರಾಮದೇವ್ ರಾಷ್ಟçಮಟ್ಟದಲ್ಲಿ ಬೆಳೆದವನು. 2003 ರಿಂದ ಖಾಸಾಗಿ ಚಾನಲ್ ಗಳ ಮೂಲಕ ಯೋಗ ತರಬೇತಿ  ಪ್ರದರ್ಶನ ಮತ್ತು ದೇಶದ ವಿವಿಧ ನಗರಗಳಲ್ಲಿ ಒಂದು ವಾರದ ಶೀಬಿರ ಹೀಗೆ ಜನಸಾಮಾನ್ಯರಲ್ಲಿ ಯೋಗದ ಆಸಕ್ತಿ ಬೆಳೆಸುತ್ತಾ, ರಾಜಕೀಯ ನಾಯಕರ ನಂಟು ಗಿಟ್ಟಿಸಿಕೊಂಡ ರಾಮದೇವ್ ಉತ್ತರಕಾಂಡ ಹರಿದ್ವಾರದ ಬಳಿ ರೂರ್ಕಿ ರಸ್ತೆಯಲ್ಲಿ ಬೃಹತ್ ಆಸ್ಪತ್ರೆ ಮತ್ತು ಆಶ್ರಮವನ್ನು ತೆರೆದನುಪತಾಂಜಲಿ ಹೆಸರಿನ ಮೂಲಕ ಆಯುರ್ವೇದ ಉತ್ಪಾದನೆಗಳನ್ನು ಮಾರಾಟ ಮಾಡಲು ತೊಡಗಿದ ಈತ ಇಂದು ಬಹುರಾಷ್ಟ್ರೀಯ ಕಂಪನಿಗಳು ತಯಾರಿಸುವ ಎಲ್ಲಾ ದೈನಂದಿನ ಬಳಕೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾನೆ. ಸಧ್ಯಕ್ಕೆ ಪತಾಂಜಲಿ ಹೆಸರಿನ ಗುಟ್ಕಾ, ವಿಸ್ಕಿ, ಮತ್ತು ಸಿಗರೇಟ್ ಉತ್ಪನ್ನಗಳು   ಮಾತ್ರ ಬಾಕಿ ಉಳಿದಿವೆ. ಪತಾಂಜಲಿ ಉತ್ಪನ್ನಗಳು ಶ್ರೇಷ್ಠ ಎಂಬ ಸುಳ್ಳು ಜಾಹಿರಾತುಗಳ ಮೂಲಕ ಸುಪ್ರೀಂಕೋರ್ಟ್ ನಿಂದ ನಾಲ್ಕೈದು ಬಾರಿ ಛೀಮಾರಿ ಹಾಕಿಸಿಕೊಂಡ ರಾಮದೇವ್ ದಂಡವನ್ನು ಸಹ ತೆತ್ತಿದ್ದಾನೆ. ಉತ್ತರಪ್ರದೇಶ, ಚಂಡಿಗಡ, ಮಹಾರಾಷ್ಟç ರಾಜ್ಯಗಳ ಬಿ.ಜೆ.ಪಿ. ಸರ್ಕಾರಗಳಿಂದ  ಸಾವಿರಾರು ಎಕರೆ ಭೂಮಿಯನ್ನು ರಿಯಾಯಿತಿ ಬೆಲೆಯಲ್ಲಿ ಪಡೆದಿದ್ದಾನೆ

 ಯಾವುದೇ ಬಂಡವಾಳ, ಭೂಮಿ, ಯಂತ್ರ ಅಥವಾ ನೌಕರರಿಲ್ಲದೆ ಬೃಹತ್ ಉದ್ಯಮಿಗಳಾಗುವ ಅವಕಾಶವನ್ನು ಭಾರತದ ಧಾರ್ಮಿಕ ಜಗತ್ತು ಈಗ ಎಲ್ಲರಿಗೂ ತೆರೆದಿಟ್ಟಿದೆ. ಯೋಗ, ಧ್ಯಾನ ಮತ್ತು ಆಕರ್ಷಕವಾಗಿ ಮಾತನಾಡುವ ಶಕ್ತಿ ಇದ್ದು ವಿದೇಶಿ ಭಕ್ರನ್ನು ಸೆಳೆಯುವ ಪ್ರತಿಭೆ  ಇದ್ದರೆ ಸಾಕು ಕೆಲವೇ ದಿನಗಳಲ್ಲಿ  ಕೋಟ್ಯಾಧೀಶರಾಗಿ ಬದಲಾಗಬಹುದು. ಇದಕ್ಕೆ ನಿತ್ಯಾನಂದ, ರವಿಶಂಕರ್ ಗುರೂಜಿ, ಜಗ್ಗಿ ವಾಸುದೇವ್  ಮುಂತಾದವರು ಇಂದು ನಮ್ಮೆದುರು ಸಾಕ್ಷಿಯಾಗಿದ್ದಾರೆ. ಇವರು ಮಾತ್ರವಲ್ಲದೆ ಒಂದು ಡಜನ್ಗೂ ಹೆಚ್ಚು ನಕಲಿ ದೇವಮಾನವರು ಕೊಲೆ, ಅತ್ಯಾಚಾರ ಆರೋಪದಡಿಯಲ್ಲಿ ಸೆರೆಮನೆಯ ಕಂಬಿಗಳನ್ನು ಎಣಿಸುತ್ತಿದ್ದಾರೆ. ಇವರಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮತ್ತು  ಅಸರಾಮ್ ಬಾಪು ಹಾಗೂ ಬಿಡದಿ ಬಳಿಯ ನಿತ್ಯಾನಂದ ಪ್ರಮುಖರಾದವರು. ಸಧ್ಯಕ್ಕೆ  ನಿತ್ಯಾನಂದನು ದೇಶದಿಂದ ಪರಾರಿಯಾಗಿ ಈಕ್ವೆಡಾರ್ ದ್ವೀಪದಲ್ಲಿ ತನ್ನದೇ ಆದ ಕೈಲಾಸ ಆಶ್ರಮ ನಿರ್ಮಿಸಿಕೊಂಡು ವಾಸವಾಗಿದ್ದಾನೆ.

 ಇತ್ತೀಚೆಗಿನ ದಿನಗಳಲ್ಲಿ ಕೊಲೆ ಮತ್ತು ಅತ್ಯಾಚಾರದಂತಹ ಅಮಾನುಷ ಕೃತ್ಯಗಳಲ್ಲಿ ಭಾಗಿಯಾಗಿ ಭಾರತದಲ್ಲಿ ಏಳು ಮಂದಿ ಸೆರೆಮನೆ ವಾಸ ಅನುಭವಿಸುತ್ತಿದ್ದರೆ, ಕರ್ನಾಟಕದ ಸ್ವಾಮೀಜಿಯೊಬ್ಬನು  ‘’ಒಪ್ಪಿತ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ’’ ಎಂಬ ನ್ಯಾಯಾಲಯದ ತೀರ್ಪಿನ ಅನ್ವಯ  ಮಠಾಧೀಶನಾಗಿ ಕಾವಿ ಧರಿಸಿ, ಶುದ್ಧ ಸನ್ಯಾಸಿ ಹಾಗೂ ಬ್ರಹ್ಮಚಾರಿಯ ವೇಷದಲ್ಲಿ ವಿಜೃಂಭಿಸುತ್ತಿದ್ದಾನೆ. ಇಂತಹವನ ಪಾದಪೂಜೆಯಲ್ಲಿ ನಮ್ಮ ಜನ ನಿರತರಾಗಿದ್ದಾರೆ. ಬುದ್ದಿಮಾಂದ್ಯ ಅಯೋಗ್ಯರಿಗೆ ಸನ್ಯಾಸಿ ಪದದ ಅರ್ಥ ಗೊತ್ತಿಲ್ಲ ಎಂದು ಹೇಳಲಾಗದು. ಧರ್ಮದ ಅಪೀಮು ಅವರನ್ನು ಆವರಿಸಿಕೊಂಡಿದೆ. ನಮ್ಮನ್ನಾಳುವ ಸರ್ಕಾರಗಳು ಪಂಚೇಂದ್ರಿಯಗಳನ್ನು ಕಳೆದುಕೊಂಡು ನಿಷ್ಕಿçಯವಾಗಿವೆ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ, 2024 ಜುಲೈ ತಿಂಗಳಿನಲ್ಲಿ ಉತ್ತರ ಪ್ರದೇಶದ ಲಕ್ನೋ ಬಳಿಯ ಹತ್ರಾಸ್ ಎಂಬ ಸ್ಥಳದಲ್ಲಿ ಬೋಲೆ ಬಾಬಾ ಎಂಬ ನಕಲಿ ದೇವ ಮಾನವನ ದರ್ಶನಕ್ಕೆ ಹೋದ ಭಕ್ರರ ನಡುವೆ ಕಾಲ್ತುಳಿತ ಉಂಟಾಗಿ ಒಟ್ಟು 121 ಮಂದಿ ಮೃತ ಪಟ್ಟರು. ಸೂರಜ್ ಪಾಲ್ ಸಿಂಗ್ ಎಂಬ ಹೆಸರಿನ ಈತ ದಶಕದ ಹಿಂದೆ ಓರ್ವ ಪೊಲೀಸ್ ಪೇದೆ ಆಗಿದ್ದವನು ದೇವಮಾನವನಾಗಿದ್ದ. ಘಟನೆ ಕುರಿತು ತನಿಖೆ ನಡೆಸಿದ ಉತ್ತರ ಪ್ರದೇಶದ ಸರ್ಕಾರವು ದುರಂತಕ್ಕೆ ಜಿಲ್ಲಾಡಳಿತದ ವೈಫಲ್ಯ ಎಂದು ಹೇಳಿ, ಬೋಲೆ ಬಾಬನನ್ನು ರಕ್ಷಿಸಿತು.

ಇವೆಲ್ಲಕ್ಕಿಂತ ಹೆಚ್ಚು ಆತಂಕವನ್ನುಂಟು ಮಾಡುವ ವಿಚಾರವೆಂದರೆ, ಪಂಜಾಬಿನ ಆಧ್ಯಾತ್ಮಿಕ ಪಂಥವಾದ  ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಎಂಬಾತನದು. ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಈತ ಚಂಡಿಗಡದ ಹಿಸ್ಸಾರ್ ಬಳಿ ಆಶ್ರಮ ನಿರ್ಮಿಸಿಕೊಂಡು ಪಂಜಾಬಿಗಳ ಪಾಲಿಗೆ ನಡೆದಾಡುವ ದೇವನಾಗಿದ್ದನು. ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಿಗೆ 2010 ರಿಂದ 2014 ನಡುವೆ ಒಟ್ಟು  42 ಬಾರಿ  ನ್ಯಾಯಾಲಯದ ಸಮನ್ಸ್ ಅನ್ನು ತಿರಸ್ಕರಿಸಿದ್ದನು. 2014 ರಲ್ಲಿ ಪೊಲೀಸರು ಈತನ ಆಶ್ರಮದ ಮೇಲೆ ದಾಳಿಮಾಡಿ ಶೋಧನೆ ನಡೆಸಿದಾಗಐವರು ಮಹಿಳೆಯರು ಮತ್ತು ಹದಿನೆಂಟು ತಿಂಗಳ ಮಗುವಿನ ಅಸ್ತಿಪಂಜರಗಳು ಪತ್ತೆಯಾಗಿದ್ದವು. ಮಹಿಳೆಯೊಬ್ಬಳು ಸಲ್ಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಈತನಿಗೆ ನ್ಯಾಯಾಲಯವು ಇಪ್ಪತ್ತು ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ. ಚುನಾವಣೆಯ ಸಂದರ್ಭದಲ್ಲಿ ವಿಶೇಷ ಪೆರೋಲ್ ಮೇಲೆ ಹೊರಬರುವ ಈತನು ತನ್ನ ಅನುಯಾಯಿಗಳಿಗೆ ಬಿ.ಜೆ.ಪಿ.ಗೆ ಮತ ನೀಡುವಂತೆ ಕರೆ ನೀಡುತ್ತಾನೆ.

 

ಇಂದಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬೆಹರಾನಿ ಎಂಬಲ್ಲಿ ಜನಿಸಿದ ಅಸರಾಂ ಬಾಪು ಎಂಬ ದೇವ ಮಾನವನೊಬ್ಬನು ಶ್ರೀ ಯೋಗಾ ವೇದಾಂತ ಸೇವಾ ಸಮಿತಿ ಹೆಸರಿನಲ್ಲಿ ಗುಜರಾತ್, ರಾಜಸ್ತಾನ ಸೇರಿದಂತೆ ಉತ್ತರ ಭಾರತದಲ್ಲಿ ನಾಲ್ಕನೂರಕ್ಕೂ ಹೆಚ್ಚು  ಆಶ್ರಮಗಳನ್ನು ತೆರೆದಿದ್ದನು. ಮಹಿಳೆಯೊಬ್ಬಳಿಗೆ ಹಿಡಿದಿರುವ ದುಷ್ಠ ಶಕ್ತಿಯನ್ನು ಬಿಡಿಸುತ್ತೇನೆ ಎಂದು ಹೇಳುವುದರ ಮೂಲಕ ನಿರಂತರ ಅತ್ಯಾಚಾರ   ಎಸಗುವುದರ ಜೊತೆಗೆ ತನ್ನ ಆಶ್ರಮದ ಅಪ್ರಾಪ್ತ ಬಾಲಕಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದನು. ಈತನಿಗೆ ಸ್ಥಳೀಯ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ನಂತರ ಸರ್ವೋಚ್ಚ ನ್ಯಾಯಾಲಯವು ೮೩ ವರ್ಷದ ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇಂತಹ ಪ್ರಕರಣಗಳು ಮತ್ತು ವ್ಯಕ್ತಿಗಳ ಕರಾಳ ಇತಿಹಾಸವು ದೇಶದುದ್ದಕ್ಕೂ ಇರುವುದು ಸುಳ್ಳಲ್ಲ.  ಇತ್ತೀಚೆಗಿನ ಪ್ರಸಿದ್ಧ ದೇವ ಮಾನವರಾದ ರವಿಶಂಕರ್ ಗುರೂಜಿ ಮತ್ತು ಜಗ್ಗಿ ವಾಸುದೇವ್ ಕುರಿತಾಗಿ ಇಂತಹ ಗಂಭಿರ ಪ್ರಕರಣಗಳು ಇಲ್ಲ. ಆದರೆ, ದಲಿತರ ಭೂಮಿ ಕಬಳಿಸಿದ ಹಾಗೂ ಅರಣ್ಯದಂಚಿನ ಆದಿವಾಸಿಗಳ ಭೂಮಿ ಆಕ್ರಮಿಸಿದ ಆರೋಪಗಳು ಇಬ್ಬರು ನಕಲಿ ದೇವಮಾನವರ ಮೇಲಿವೆ. ೨೦೨೨ ರಲ್ಲಿ ಶಭಶ್ರೀ ಎಂಬ ಮಹಿಳೆಯು ಜಗ್ಗಿ ವಾಸುದೇವ ಆಶ್ರಮಕ್ಕೆ ಯೋಗ ಕಲಿಯಲು ಹೋಗಿ, ಬೆಳಗಿನ ಜಾವ ಆಶ್ರಮದಿಂದ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮರಾದಲ್ಲಿ ದಾಖಲಾಗಿದ್ದವು. ಆದರೆ, ಆಶ್ರಮದ ಹೊರಗೆ ಆಕೆ ಹತ್ಯೆಯಾಗಿದ್ದಳು.

 ತಮಿಳುನಾಡಿನ ತಂಜಾವೂರು ಮತ್ತು ಕುಂಬಕೋಣಂ ನಡುವೆ ಇರುವ ಪಾಪನಾಶಂ ನಲ್ಲಿ 1956 ರಲ್ಲಿ ಜನಿಸಿದ ರವಿಶಂಕರ್, ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜಿನ ವಿಜ್ಞಾನ ಪದವೀಧರ. ನಂತರ ಆದ್ಮಾತ್ಮಕ್ಕೆ ಒಲಿದು ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲಿವಿಂಗ್ ಎಂಬ ಆಶ್ರಮ ನಿರ್ಮಿಸಿಕೊಂಡು ಅಂತರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಗುರು ಎಂದು ಪ್ರಸಿದ್ಧಿಯಾಗಿದ್ದಾನೆ. ದಲಿತರ ಭೂಮಿಯನ್ನು ಕಬಳಿಸಿದ ಆರೋಪವು ಈತನ ಮೇಲಿದೆ. ತೆಲುಗು ಮಾತೃಭಾಷೆಯ ಮೈಸೂರು ಮೂಲದ ಜಗ್ಗಿ ವಾಸುದೇವ್ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ಸ್ನಾತಕೋತ್ತರ ಪದವೀಧರ.   ಕೌಟುಂಬಿಕ  ಕಲಹ  ಮತ್ತು ಪತ್ನಿಯ ಸಾವಿನಿಂದ  ಬೇಸತ್ತು ಕೊಯಮತ್ತೂರು ಬಳಿ ಅರಣ್ಯದಂಚಿನ ಬಳಿ ಶಿವಗಿರಿ ಎಂಬಲ್ಲಿ ಆಶ್ರಮ ನಿರ್ಮಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಈತನ ಕುರಿತಾಗಿ ಆದಿವಾಸಿಗಳ ಭೂಮಿಯನ್ನು ಆಕ್ರಮಿಸಿರುವ ದೂರುಗಳು ಹಾಗೂ ಕೆಲವು ಹೆಣ್ಣುಮಕ್ಕಳನ್ನು ಆಶ್ರಮದಲ್ಲಿ ಬಲವಂತವಾಗಿ ಇರಿಸಿಕೊಂಡಿದ್ದಾನೆ ಎಂಬ ಆರೋಪಗಳಿವೆ. ಆದರೆ. ದೇಶದ ಪ್ರಧಾನಿಯಂತಹ ಪ್ರಭಾವಿ ವ್ಯಕ್ತಿಗಳು  ಇಂತಹ ವ್ಯಕ್ತಿಗಳ ಮುಂದೆ ನಡು ಬಗ್ಗಿಸಿ ನಿಲ್ಲುವಾಗ ಕಾನೂನು ಮತ್ತು ಸಂವಿಧಾನಗಳು ಇಂತಹವರ ಮುಂದೆ ಸೊಂಟ ಮುರಿದುಕೊಂಡು ಬಿದ್ದಿವೆ.

  ಕಾರಣದಿಂದಾಗಿ ಧರ್ಮಸ್ಥಳ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ದಶಕದಲ್ಲಿ ಸೌಜನ್ಯ, ಸುಚೇತಾ, ಭಾರತಿ, ನಂದಿತಾ, ಸೌಮ್ಯ ಭಟ್ ಹಾಗೂ ಅಕ್ಷತಾ ಎಂಬ ಯುವತಿಯರು ಅಮಾನುಷವಾಗಿ ಹತ್ಯೆಯಾದರೂ ಸಹ ಈವರೆಗೆ ಸಮಗ್ರವಾಗಿ  ತನಿಖೆಯಾಗಿಲ್ಲ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಾಗಿಲ್ಲಕರ್ನಾಟಕ ಸರ್ಕಾರ ಕಣ್ಣು ಮತ್ತು ಕಿವಿ ಮುಚ್ಚಿಕೊಂಡು ದೇವರು ಮತ್ತು ದೇವಮಾನವರ ಮುಂದೆ ಮಂಡಿಯೂರಿ ಕುಳಿತಿದೆ. ಇಂತಹ ನರಹೇಡಿಗಳ ಸರ್ಕಾರಗಳನ್ನು  ಹೊಗಳಲು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ವಂದಿಮಾಗಧರು ಟೊಕ ಕಟ್ಟಿಕೊಂಡು ಸರತಿ ಸಾಲಿನಲ್ಲಿ ನಿಂತಿದ್ದಾರೆ.

 (ಏಪ್ರಿಲ್ ತಿಂಗಳ ಹೊಸತು ಮಾಸಪತ್ರಿಕೆಯಲ್ಲಿ ಪ್ರಕಟವಾದ ‘’ಬಹುಸಂಸ್ಕೃತಿ’’ ಅಂಕಣ ಬರಹ)

ಚಿತ್ರಗಳು- ಕ್ರಮವಾಗಿ, 1- ಧೀರೆಂದ್ರಬ್ರಹ್ಮಚಾರಿ, 2- ಚಂದ್ರಸ್ವಾಮಿ 3- ರಾಮ್ ರಹೀಮ್ ಸಿಂಗ್, 5- ಅಸರಾಂ ಬಾಪು.

ಡಾ. ಎನ್.ಜಗದೀಶ್ ಕೊಪ್ಪ