ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ನವ ಯಾನ ಹೆಸರಿನಲ್ಲಿ ಬೌದ್ಧ ಧರ್ಮವನ್ನು ವ್ಯಾಖ್ಯಾನಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯನ್ನು ಇಂದು ಪಾಶ್ಚಿಮಾತ್ಯ ರಾಷ್ಟ್ರಗಳ ಚಿಂತಕರು ಮತ್ತು ವಿದ್ವಾಂಸರು ಕೊಂಡಾಡುತ್ತಿದ್ದಾರೆ. ಇಂಗ್ಲೇಂಡಿನ ಖ್ಯಾತ ವಿದ್ವಾಂಸ ಸ್ಟಿಂಗ್ ಎಂಬುವರು ‘’ ನನ್ನ ಆಲೋಚನಾ ವಿಧಾನದ ಪ್ರಕಾರ, ಡಾ. ಬಿ.ಆರ್. ಅಂಬೇಡ್ಕರ್ ಬುದ್ಧನ ಚಿಂತನೆಗಳಿಗೆ ಹೊಸ ತಿರುವು ನೀಡುವ ಅತ್ಯಂತ ಸ್ಪಷ್ಟ ಮತ್ತು .ಆಮೂಲಾಗ್ರ ವಕ್ತಾರರು ಎಂದಿದ್ದಾರೆ. ಜೊತೆಗೆ ಅವರು ಬೌದ್ಧ ಧರ್ಮದ ಸಮಸ್ಯೆಗಳ ಮೂಲಕ್ಕೆ ಇಳಿದು .ಹೊಸ ವ್ಯಾಖ್ಯಾನದೊಂದಿಗೆ ಆಧುನಿಕ ಜಗತ್ತಿಗೆ ಬೌದ್ಧಧರ್ಮದ ಬಗ್ಗೆ ಪ್ರಚೋದನಕಾರಿ ದೃಷ್ಟಿಕೋನವನ್ನು ನಮ್ಮೆಲ್ಲರಿಗೂ ನೀಢಿದ್ದಾರೆ ಎಎಂದು ನಾನು ಭಾವಿಸುತ್ತೇನ’’ ಎಂದು ನುಡಿದಿದ್ದಾರೆ.
ಭಾರತದ ತಳ ಸಮುದಾಯದಲ್ಲಿ ಜನಿಸಿ, ಹಿಂದೂಧರ್ಮದ ಶ್ರೇಣೀಕೃತ ಸಮಾಜದಲ್ಲಿ ಎಲ್ಲಾ ನೋವು ಮತ್ತು ಅಪಮಾನಗಳನ್ನುಅನುಭವಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು 1935 ರಲ್ಲಿ ‘’ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ, ನಾನು ಹಿಂದೂವಾಗಿ ಸಾಯುವುದಿಲ್ಲ ಎಂದು ದೃಢನಿಶ್ಚಯ ಮಾಡಿದ್ದೇನೆ. ನನಗೆ ಮತ್ತು ನನ್ನ ಸಮುದಾಯಕ್ಕೆ ಯಾವ ಧರ್ಮವು ಹೆಚ್ಚು ಘನತೆ ಮತ್ತು ಮಾನವೀಯತೆಯನ್ನು ನೀಡುತ್ತದೆ ಎಂಬುದನ್ನು ನಾನು ಅಧ್ಯಯನ ಮಾಡಲಿದ್ದೇನೆ." ಎಂದು ಘೋಷಿಸಿಕೊಂಡಿದ್ದರು 1936 ರಲ್ಲಿ ಒಮ್ಮೆ ನಾಗಪುರಕ್ಕೆ .ಹೋಗಿದ್ದ ಸಂದರ್ಭದಲ್ಲಿ ಗಾಂಧೀಜಿಯವರ ಸೇವಾಗ್ರಾಮಕ್ಕೆ ಭೇಟಿ ನೀಡಿ, ಹಿಂದೂ ದೇವಾಲಯಗಳಿಗೆ ನಾಯಿ, ಪಶು, ಪಕ್ಷಿಗಳಿಗೆ ಪ್ರವೇಶವಿದೆ ಆದರೆ, ಅಸ್ಪೃಶ್ಯರಿಗೆ ಏಕೆ ಪ್ರವೇಶವಿಲ್ಲ? ಎಂದು ಮಹಾತ್ಮನ ಮರ್ಮಕ್ಕೆ ತಾಗುವಂತೆ ಪ್ರಶ್ನೆ ಕೇಳಿದ್ದರು. ವಾರ್ದಾ ಬಳಿಯ ಸೇವಾಗ್ರಾಮಕ್ಕೆ ಹತ್ತಿರವಿದ್ದ ರೈಲ್ವೆ ನಿಲ್ದಾಣಕ್ಕೆ ಗಾಂಧೀಜಿಯವರು ತಮ್ಮ ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ ಜೊತೆ ಅಂಬೇಡ್ಕರ್ ಅವರನ್ನು ಟಾಂಗಾ ಗಾಡಿಯಲ್ಲಿ ಕಳಿಸಿಕೊಟ್ಟರು.
ಅಂಬೇಡ್ಕರ್ ಅವರನ್ನು ಮುಂಬೈ ರೈಲಿಗೆ ಹತ್ತಿಸಿ ವಾಪಸ್ ಬಂದ ಮಹಾದೇವ ದೇಸಾಯಿ ಅವರನ್ನು ಗಾಂಧೀಜಿಯವರು , ‘ಡಾಕ್ಟರ್ ಅಂಬೇಡ್ಕರ್ ಮತ್ತೇನಾದರೂ ಹೇಳಿದರೆ? ಎಂದು ಪ್ರಶ್ನಿಸಿದಾಗ, ದೇಸಾಯಿಯವರು ‘’ ಹಿಂದೂ ಧರ್ಮದ ಆಚರಣೆ ಬಗ್ಗೆ ತಮ್ಮ ಆಕ್ರೋಶವನ್ನು ದಾರಿಯುದ್ದಕ್ಕೂ ಅಂಬೇಡ್ಕರ್ ಹೊರ ಹಾಕಿದರು’’ ಎಂದು ನುಡಿದರು. ಗಾಂಧೀಜಿಯವರು ತಣ್ಣನೆಯ ಧ್ವನಿಯಲ್ಲಿ ‘’ ಮಹಾದೇವ, ನಾವು ಅಂಬೇಡ್ಕರ್ ಅವರ ಸಿಟ್ಟನ್ನು ಮತ್ತು ನೋವನ್ನು ಶಾಂತವಾದ ಮನಸ್ಸಿನಿಂದ ಗ್ರಹಿಸಬೇಕು ಅವರ ಆಕ್ರೋಶಕ್ಕೆ ಒಂದು ಮೌಲ್ಯವಿದೆ’’ ಎಂದು ನುಡಿದಿದ್ದರು. ಅಷ್ಟು ಮಾತ್ರವಲ್ಲದೆ, ದಲಿತರಿಗೆ ಪ್ರವೇಶವಿಲ್ಲದ ದೇಗುಲಗಳಿಗೆ ನಾನು ಹೋಗುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿಕೊಂಡರು.
ಡಾ.ಅಂಬೇಡ್ಕರ್ ಹಿಂದೂ ಧರ್ಮದಿಂದ ಅನ್ಯ ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದ ಕಾರಣದಿಂದಾಗಿ, ಮುಂದಿನ ಎರಡು ದಶಕಗಳ ಕಾಲ 1935 ರಿಂದ 1955 ರವರೆಗೆ ಭಾರತದಲ್ಲಿ ಹಿಂದೂ ಧರ್ಮಕ್ಕೆ ಪರ್ಯಾಯವಾಗಿ ಸೃಷ್ಟಿಯಾದ ಜೈನ ಧರ್ಮ, ಬೌದ್ಧ ಧರ್ಮ ಮತ್ತು ವಿದೇಶಿ ನೆಲದ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿದ್ದರು. ಎಲ್ಲಾ ಧರ್ಮಗಳಲ್ಲಿಯೂ ಅನೇಕ ಹುಳುಕುಗಳಿದ್ದವು ಜೊತೆಗೆ ಹಲವು ಪಂಗಡಗಳಿದ್ದವು. ಹಿಂದೂ ಧರ್ಮದಲ್ಲಿ ಶೈವ- ವೈಷ್ಣವ ಪಂಗಡಗಳು ಇದ್ದಂತೆ, ಜೈನ ಧರ್ಮದಲ್ಲಿ ಶ್ವೇತಾಂಬರ, ದಿಗಂಬರ ಎಂಬ ಪಂಗಡಗಳು ಇದ್ದವು. ಇಸ್ಲಾಂ ಧರ್ಮದಲ್ಲಿ ಶಿಯಾ ಮತ್ತು ಸುನ್ನಿ ಹಾಗೂ ಕ್ರೈಸ್ತಧರ್ಮದಲ್ಲಿ ಕ್ಯಾಥೋಲಿಕ್ ಮತ್ತು ಪ್ರಟೊಸ್ಟೆಂಟ್ ಪಂಗಡಗಳಿದ್ದವು. ತಮ್ಮ ಚಿಂತನೆ ಮತ್ತು ಆಶಯಗಳಿಗೆ ತೀರಾ ಹತ್ತಿರವಾದ ಬುದ್ಧನ ಬೌದ್ಧಧರ್ಮವನ್ನು ಅವರು ಅಪ್ಪಿಕೊಂಡರೂ ಸಹ, ಹಿನಯಾನ ಮತ್ತು ಮಹಾಯಾನ ಎಂಬ ಪಂಗಡಗಳಿದ್ದ ಬೌದ್ಧ ಧರ್ಮವನ್ನು ನವಯಾನ ಎಂಬ ಪರಿಷ್ಕೃತ ವ್ಯಾಖ್ಯಾನದೊಂದಿಗೆ ಪರಿಚಯಿಸಿ, ತಾವು ಮತಾಂತರಗೊಳ್ಳುವುದರ ಜೊತೆಗೆ ಐದು ಲಕ್ಷ ಮಂದಿ ತಮ್ಮ ಅನುಯಾಯಿಗಳನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸಿದರು.
ಮಗಧ ಸಾಮ್ರಾಜ್ಯದ ದೊರೆ ಅಶೋಕನು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸಾಂಪ್ರದಾಯಕ ದಿನ ಅಂದರೆ, 1956ರ ಅಕ್ಟೋಬರ್ 14 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಡಾ.ಅಂಬೇಡ್ಕರ್ ಅವರು ತಾವು ಬಹಿರಂಗವಾಗಿ ಘೋಷಿಸಿದ್ದ ‘’ ‘ಹಿಂದೂವಾಗಿ ಸಾಯಲಾರೆ’’ ಎಂಬ ಮಾತಿನಂತೆ ನಡೆದುಕೊಂಡರು ಬೌದ್ಧಧರ್ಮವು ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳ ಆಶಯಗಳಿಗೆ ತೀರಾ ಹತ್ತಿರವಾಗಿತ್ತು. ಏಕೆಂದರೆ, ಅದು ಸ್ಥಳೀಯ ಧರ್ಮವಾಗಿತ್ತು; ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂನಂತೆ ಭಾರತದ ನೆಲಕ್ಕೆ ಆಮದು ಮಾಡಿಕೊಂಡ ಧರ್ಮವಾಗಿರಲಿಲ್ಲ. ಯಾವುದೇ ಸ್ಥಿರವಾದ ನಂಬಿಕೆಗಳು ಅಥವಾ ಆಚರಣೆಗಳಿಗೆ ಅಂಟಿಕೊಳ್ಳದೆ .ಸ್ವತಂತ್ರವಾಗಿ ಬದುಕುವ ಅವಕಾಶವನ್ನು ಬೌದ್ಧ ಧರ್ಮವು ನೀಡಿತ್ತು.. ಧರ್ಮದ ನಿಜವಾದ ಉದ್ದೇಶ ಏನು? ಮತ್ತು ಯಾವುದು ಅರ್ಥಪೂರ್ಣವಾಗಿದೆ ಎಂಬುದನ್ನು ನೋಡಲು ಹಾಗೂ ವ್ಯಕ್ತಿಯೊಬ್ಬ ಸ್ವಂತ ಜೀವನದ ಪ್ರಯೋಗಾಲಯದಲ್ಲಿ ತನ್ನನ್ನು ಪ್ರಯೋಗಿಸಿಕೊಳ್ಳಲು ಅವಕಾಶ ನೀಡಿತ್ತು. ಇದು ಅಂಬೇಡ್ಕರ್ ಅವರ ತತ್ವಕ್ಕೆ ಅನುಗುಣವಾಗಿತ್ತು. ಬುದ್ಧನು ತನ್ನ ಅನುಯಾಯಿಗಳಿಗೆ "ಬೋಧನೆಗಳು ಮತ್ತು ಬರಹಗಳನ್ನು ಕುರುಡಾಗಿ ನಂಬಬೇಡಿ, ಆದರೆ ಅವುಗಳನ್ನು ನಿಮ್ಮ ಸ್ವಂತ ಜೀವನದಲ್ಲಿ ಪರೀಕ್ಷಿಸಿ" ಎಂದು ಹೇಳಿದ್ದನು. . ಬುದ್ಧನು ಎಲ್ಲಾ ಮಾನವರು ಹೊಂದಿರುವ ಸಾಮರ್ಥ್ಯವನ್ನು ಪ್ರತಿನಿಧಿಸುವ ಓರ್ವ ಅಪ್ಪಟ ಮನುಷ್ಯ ನಾನು ಎಂದು ಘೋಷಿಸಿಕೊಂಡಿದ್ದನು. ನಾನು ದೇವರ ಪ್ರವಾದಿ ಅಥವಾ ದೇವರ ಪುತ್ರ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ.
1957 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಿಧಾನಾ ನಂತರ ಅವರ ಕೊನೆಯ ಕೃತಿಯಾದ "ಬುದ್ಧ ಮತ್ತು ಆತನ ಧಮ್ಮ" .ಪ್ರಕಟವಾಯಿತು. ಕೃತಿಯ ಪರಿಚಯದಲ್ಲಿ, ಅಂಬೇಡ್ಕರ್ ಅವರು ಬೌದ್ಧಧರ್ಮದ ಕೆಲವು ಅಂಶಗಳ ಮೇಲೆ ಬೆಳಕು ಚೆಲ್ಲ್ಲಿದ್ದಾರೆ. ಬುದ್ಧನ ಬೋಧನೆಗಳನ್ನು ಸ್ವೀಕರಿಸುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ ಮತ್ತು ನಿಕಾಯಗಳನ್ನು ಅವಲಂಬಿಸಿ, ಬೌದ್ಧೇತರ ವ್ಯಕ್ತಿಗೆ ಬುದ್ಧನ ಜೀವನ ಮತ್ತು ಬೋಧನೆಗಳ ಕುರಿತು ಸ್ಪಷ್ಟ ಮತ್ತು ಎದ್ದುಕಾಣುವ ಹೇಳಿಕೆಯನ್ನು ಪ್ರಸ್ತುತಪಡಿಸುವುದು ಒಂದು ಜವಾಬ್ದಾರಿಯಾಗಿದೆ ಎಂದು ಅವರು ವಾದಿಸುತ್ತಾರೆ. ನಂತರ ಅವರು ಬೌದ್ಧಧರ್ಮದ ಸಮಸ್ಯೆಗಳನ್ನು ಚರ್ಚಿಸಲು ಮುಂದುವರಿಯುತ್ತಾರೆ. ಮೊದಲ ಸಮಸ್ಯೆ ಬುದ್ಧನ ಜೀವನದಲ್ಲಿನ ಮುಖ್ಯ ಘಟನೆಯಾದ ಪರಿವ್ರಾಜಕ್ಕೆ ಅಂದರೆ, ಸನ್ಯಾತ್ವಕ್ಕೆ ಸಂಬಂಧಿಸಿದೆ ಘಟನೆಗಳ ಬಗ್ಗೆ ವೆಳಕು ಚೆಲ್ಲಿದ್ದಾರೆ.. ಬುದ್ಧನು ತನ್ನ ಜೀವನದಲ್ಲಿ ಮೊದಲ ಬಾರಿಗೆ ಮೂರು ದೃಶ್ಯಗಳನ್ನು ( ಸಾವು, ರೋಗಿ, ವೃದ್ಧ) ನೋಡಿದನು ಮತ್ತು ಇಪ್ಪತ್ತೊಂಬತ್ತನೇ . 29 ನೇ ವಯಸ್ಸಿನಲ್ಲಿ. ಬುದ್ಧನು ಪರಿವ್ರಾಜವನ್ನು ಆ ಮೂರು ದೃಷ್ಟಿಕೋನಗಳಿಂದಾಗಿ ತೆಗೆದುಕೊಂಡನು ಎಂಬ ಹೇಳಿಕೆಯನ್ನು ನಂಬುವುದು ಸಮಂಜಸವಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ.
ಬೌದ್ಧಧರ್ಮದ ಎರಡನೇ ಸಮಸ್ಯೆಗೆ ನಾಲ್ಕು ಆರ್ಯ ಸತ್ಯಗಳು ಕಾರಣ. ಬೌದ್ಧಧರ್ಮದ ಸುವಾರ್ತೆಯನ್ನು ನಿರಾಶಾವಾದದ ಸುವಾರ್ತೆಯಾಗಿ ಮಾಡುವ ಮೂಲಕ ನಾಲ್ಕು ಆರ್ಯ ಸತ್ಯಗಳು ಮೂಲತಃ ಬುದ್ಧನ ಬೋಧನೆಗಳ ಭಾಗವಾಗಿದ್ದವೆ? ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ; ನಾಲ್ಕು ಆರ್ಯ ಸತ್ಯಗಳು ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸುತ್ತವೆ. ಈ ನಾಲ್ಕು ಆರ್ಯ ಸತ್ಯಗಳು "ಸನ್ಯಾಸಿಗಳಿಂದ ನಂತರದ ದಿನಗಳಲ್ಲಿ ಸಂಚಯನ" ಆಗಿರಬಹುದು ಎಂದು ಅಂಬೇಡ್ಕರ್ ಅನುಮಾನಿಸುತ್ತಾರೆ.
ಮೂರನೆಯ ಸಮಸ್ಯೆಯು ಸಂದರ್ಭೋಚಿತವಾದದ್ದು, ಅದು ಆತ್ಮ ಮತ್ತು ಕರ್ಮಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬುದ್ಧನು ಆತ್ಮದ ಅಸ್ತಿತ್ವವನ್ನು ನಿರಾಕರಿಸಿದನು ಆದರೆ ಮತ್ತೊಂದೆಡೆ, ಅವನು ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತವನ್ನು ಸಹ ದೃಢಪಡಿಸಿದನು. ಮೊದಲನೆಯದಾಗಿ ಆತ್ಮವಿಲ್ಲದಿದ್ದರೆ ಪುನರ್ಜನ್ಮ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಅಂಬೇಡ್ಕರ್ ಎತ್ತುತ್ತಾರೆ. ಈ ಅಂಶವು ಸ್ವತಃ ವಿರೋಧಾಭಾಸವಾಗಿದೆ ಮತ್ತು ಇದನ್ನು ಪರಿಹರಿಸಬೇಕು ಮತ್ತು ಅದರ ಮೇಲೆ ಬೆಳಕು ಚೆಲ್ಲಬೇಕು ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು.
ನಾಲ್ಕನೆಯದು ಬುದ್ಧನ ಭಿಕ್ಕುವನ್ನು ಸೃಷ್ಟಿಸುವ ಉದ್ದೇಶಕ್ಕೆ ಸಂಬಂಧಿಸಿದ್ದಾಗಿದೆ. ಭಿಕ್ಕುವಿನ ಸೃಷ್ಟಿಯ ಹಿಂದಿನ ಬುದ್ಧನ ಉದ್ದೇಶ ಪರಿಪೂರ್ಣ ಮನುಷ್ಯನನ್ನು ಸೃಷ್ಟಿಸುವುದೋ ಅಥವಾ ಸಮಾಜ ಸೇವಕನನ್ನು ಸೃಷ್ಟಿಸುವುದೋ ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ಒಬ್ಬ ಭಿಕ್ಕುವು ಪರಿಪೂರ್ಣ ಮನುಷ್ಯನಾಗಿದ್ದರೆ, ಅವನಿಂದ ಬೌದ್ಧಧರ್ಮದ ಪ್ರಚಾರಕ್ಕೆ ಯಾವುದೇ ಪ್ರಯೋಜನವಿಲ್ಲ ಏಕೆಂದರೆ ಅವನು ಸ್ವಾರ್ಥಿಯಾಗುತ್ತಾನೆ. ಎಂದು ಅಂಬೇಡ್ಕರ್ ಅವರ ನಿಲುವಾಗಿತ್ತು. ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ. ಇದು ಅಂಬೇಡ್ಕರ್ ಅವರ ದೃಢವಾದ ನಿಲುವಾಗಿತ್ತು. ಈ ಕಾರಣದಿಂದ ಗೌತಮ ಬುದ್ಧನ ಅನುಯಾಯಿಗಳಾಗಿದ್ದ ಬ್ರಾಹ್ಮಣರು ರಚಿಸಿದ್ದ ಬುದ್ಧನ ಚರಿತ್ರೆಯನ್ನು ( ಜಾತಕ ಕಥೆಗಳು) ಅವರು ನಿರಾಕರಿಸಿದರು. ಅಲ್ಲಿಯವರೆಗೆ ಅಶ್ವಘೋಶನ ಬುದ್ಧ ಚರಿತೆ ನಮ್ಮ ಮುಂದಿತ್ತು.
ಬುದ್ಧ ಮತ್ತು ಅವನ ಧಮ್ಮ ಎಂಬ ಸಂಪುಟವನ್ನು ಎಂಟು ಪುಸ್ತಕಗಳ ವಿಭಾಗಳಾಗಿ ವಿಂಗಡಿಸಲಾಗಿದೆ. ಪುಸ್ತಕ ಒಂದರಲ್ಲಿ ಬುದ್ಧನ ಪ್ರಯಾಣ ಮತ್ತು ಬೋಧಿಸತ್ವ ಬುದ್ಧನಾಗುವ ಗಮನಾರ್ಹ ಪ್ರಯಾಣವನ್ನು ಚರ್ಚಿಸುತ್ತದೆ. ಬುದ್ಧನ ಆರಂಭಿಕ ಜೀವನದ ಸ್ಪಷ್ಟ, ಎದ್ದುಕಾಣುವ ಮತ್ತು ವಿವರವಾದ ವಿವರವನ್ನು ನೀಡುತ್ತದೆ. ಸಿದ್ಧಾರ್ಥ ಗೌತಮ ಆಧುನಿಕ ನೇಪಾಳದ ಲುಂಬಿನಿಯಲ್ಲಿ ಶುದ್ಧೋಧನ ಮತ್ತು ಮಹಾಮಾಯರಿಗೆ ಜನಿಸಿದನು. ಎಂಟನೇ ವಯಸ್ಸಿನಲ್ಲಿ, ಬುದ್ಧನು ತನ್ನ ಶಿಕ್ಷಣವನ್ನು ಪ್ರಾರಂಭಿಸಿದನು. ಅವನು ತನ್ನ ಕಾಲದಲ್ಲಿ ಸಬ್ಬಮಿತನ ಮಾರ್ಗದರ್ಶನದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ತಾತ್ವಿಕ ವ್ಯವಸ್ಥೆಗಳನ್ನು ಕರಗತ ಮಾಡಿಕೊಂಡನು. ಇದಲ್ಲದೆ, ಬುದ್ಧನು ಕಪಿಲವಸ್ತುವಿನಲ್ಲಿ ತನ್ನ ಆಶ್ರಮವನ್ನು ಹೊಂದಿದ್ದ ಭಾರದ್ವಾಜನಿಂದ ಏಕಾಗ್ರತೆ ಮತ್ತು ಧ್ಯಾನದ ವಿಜ್ಞಾನವನ್ನು ಕಲಿತನು. ಹದಿನಾರನೇ ವಯಸ್ಸಿನಲ್ಲಿ, ಸಿದ್ಧಾರ್ಥನು ಯಶೋಧರೆಯನ್ನು ವಿವಾಹವಾದನು ಮತ್ತು ದೀರ್ಘಾವಧಿಯ ದಾಂಪತ್ಯ ಜೀವನದ ನಂತರ ರಾಹುಲ ಎಂಬ ಮಗನನ್ನು ಪಡೆದನು.
ಪುಸ್ತಕದ ಮೊದಲ ಭಾಗವು ಸಿದ್ಧಾರ್ಥನ ಜೀವನದ ಕುತೂಹಲಕಾರಿ ಕಥೆಗಳನ್ನು ಹೇಳುತ್ತದೆ. ಎರಡನೇ ಪುಸ್ತಕದಲ್ಲಿ (ಎಂಟು ಭಾಗಗಳನ್ನು ಹೊಂದಿದೆ) ಬುದ್ಧನ ಮತಾಂತರ ಯೋಜನೆಯ ಸ್ಪಷ್ಟ ವಿವರಣೆಯೊಂದಿಗೆ ಪ್ರಾರಂಭವಾಗುತ್ತದೆ. ಬುದ್ಧನ ವಿಷಯಗಳ ಯೋಜನೆಯಲ್ಲಿ, ಮತಾಂತರಕ್ಕೆ ಎರಡು ಅರ್ಥಗಳಿವೆ - ಉಪಸಮೇತ ಎಂಬ ಸಮಾರಂಭವನ್ನು ಒಳಗೊಂಡಿರುವ ಸಂಘ ಎಂಬ ಭಿಕ್ಕುಗಳ ಕ್ರಮಕ್ಕೆ ಮತಾಂತರ ಮತ್ತು ಯಾವುದೇ ಸಮಾರಂಭವನ್ನು ಒಳಗೊಂಡಿರದ ಗೃಹಸ್ಥನ ಮತಾಂತರ. ಪುಸ್ತಕದ ಎರಡನೇ ಭಾಗವು ಪರಿವ್ರಾಜನ ನಂತರದ ಜೀವನದ ಸ್ಪಷ್ಟ ವಿವರಣೆಯನ್ನು ಹೇಳುತ್ತದೆ, . ಬುದ್ಧನು ಆರಂಭದಲ್ಲಿ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಇಷ್ಟವಿರಲಿಲ್ಲವಾದರೂ, ಆಪ್ತ ಶಿಷ್ಯನಾದ ಆನಂದರ ಮನವೊಲಿಕೆ ಮತ್ತು ಕೋರಿಕೆಯ ಮೇರೆಗೆ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಒಪ್ಪಿಕೊಂಡನು. ಬುದ್ಧನ ತಾಯಿಯಾದ ಮಹಾಪ್ರಜಾಪತಿ ಗೌತಮಿಗೆ ಎಂಟು ಮುಖ್ಯ ನಿಯಮಗಳನ್ನು ಜಾರಿಗೊಳಿಸುವ ಕೆಲಸವನ್ನು ನೀಡಲಾಯಿತು, ಅದು ಅವಳ ಬಿಕ್ಕುಣಿಯ ಜೀವನವನ್ನು ಪ್ರಾರಂಭಿಸಿತು. ಎರಡನೆಯ ಕಥೆಯು ಚಾಂಡಾಲಿಕಾ ಪ್ರಕೃತಿಯ ಕಥೆಯನ್ನು ಮತ್ತು ಅವಳು ಬುದ್ಧನಿಂದ ಜ್ಞಾನೋದಯವನ್ನು ಪಡೆದು ನಂತರ ಬಿಕ್ಕುಣಿ ಸಂಘಕ್ಕೆ ಹೇಗೆ ಸೇರಿಕೊಂಡಳು ಎಂಬುದನ್ನು ಹೇಳುತ್ತದೆ.
ಮೂರನೆಯ ಪಠ್ಯವು ಬುದ್ಧನ ಬೋಧನೆಗಳ ಸಂಪೂರ್ಣ ಮತ್ತು ವಿವರವಾದ ಚಿತ್ರಣವನ್ನು ನೀಡುತ್ತದೆ. ಯಾವುದೇ ಇತರ ಧಾರ್ಮಿಕ ಪ್ರಚಾರಕರಂತೆ ಬುದ್ಧನು ತನ್ನ ಸ್ವಂತ ಧರ್ಮದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರಲಿಲ್ಲ.ಬುದ್ಧನು ತಾನು ಪ್ರವಾದಿ ಅಥವಾ ದೇವರ ಸಂದೇಶವಾಹಕನ ಅಂತಹ ವಿವರಣೆಗಳನ್ನು ನಿರಾಕರಿಸಿದನು. ಮಾನವಕುಲಕ್ಕೆ ಮೋಕ್ಷವನ್ನು ನೀಡಲು ನಾನು 'ದೇವರ ಸಂದೇಶ ವಾಹಕನಲ್ಲ' ' ಮಾರ್ಗ ದಾತ' ಎಂದು ಬುದ್ಧನು ತನ್ನನ್ನು ಕರೆದುಕೊಂಡನು . ಮೂರನೇ ಪುಸ್ತಕದ ಮೂರನೇ ಮತ್ತು ನಾಲ್ಕನೇ ಭಾಗಗಳಲ್ಲಿ, ಬುದ್ಧನ ಪ್ರಕಾರ ಧಮ್ಮ ಎಂದರೇನು ಮತ್ತು ಯಾವುದು ಧಮ್ಮವಲ್ಲ ಎಂಬುದನ್ನು ಸಂಪೂರ್ಣವಾಗಿ ಡಾ. ಅಂಬೇಡ್ಕರ್ ಸ್ಪಷ್ಟಪಡಿಸುತ್ತಾರೆ. .
ಬುದ್ಧನ ಪ್ರಕಾರ ಧಮ್ಮ ಅಥವಾ ಧರ್ಮ ಎಂದರೆ, ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಧಮ್ಮ, ಜೀವನದಲ್ಲಿ ಪರಿಪೂರ್ಣತೆಯನ್ನು ತಲುಪುವುದು ಧಮ್ಮ. ನಿರ್ವಾಣದಲ್ಲಿ ಬದುಕುವುದು ಧಮ್ಮ, ಹಂಬಲವನ್ನು ತ್ಯಜಿಸುವುದು ಧಮ್ಮ, ಎಲ್ಲಾ ಸಂಯುಕ್ತ ವಸ್ತುಗಳು ಅಶಾಶ್ವತ ಎಂದು ನಂಬುವುದು ಧಮ್ಮ, ಕರ್ಮವು ನೈತಿಕ ಕ್ರಮದ ಸಾಧನ ಎಂದು ಒಪ್ಪಿಕೊಳ್ಳುವುದು ಧಮ್ಮ. ಬುದ್ಧನ ಪ್ರಕಾರ ಪ್ರಕಾರ , ಅಲೌಕಿಕದಲ್ಲಿ ನಂಬಿಕೆ ಇಡುವುದು ಧರ್ಮವಲ್ಲ., ದೇವರಲ್ಲಿ ನಂಬಿಕೆ ಮೂಲಭೂತವಾಗಿ ಧಮ್ಮದ ಭಾಗವಲ್ಲ., ಬ್ರಹ್ಮನೊಂದಿಗೆ ಐಕ್ಯತೆಯನ್ನು ಆಧರಿಸಿದ ಧಮ್ಮವು ಸುಳ್ಳು ಧಮ್ಮವಾಗಿದೆ., ಆತ್ಮದಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ, ಯಜ್ಞಗಳಲ್ಲಿ ನಂಬಿಕೆ ಇಡುವುದು ಧರ್ಮವಲ್ಲ.,ಧಮ್ಮದ ಬಗ್ಗೆ ಪುಸ್ತಕಗಳನ್ನು ಓದುವುದು ಧಮ್ಮವಲ್ಲ.
ನಾಲ್ಕನೇ ಪುಸ್ತಕದ ಭಾಗವು ಧರ್ಮದಿಂದ ಬೌದ್ಧ ಧಮ್ಮ ಹೇಗೆ ಭಿನ್ನವಾಗಿದೆ, ಧರ್ಮದ ಉದ್ದೇಶಗಳು ಮತ್ತು ಅವುಗಳಲ್ಲಿ ನೈತಿಕತೆಯ ಸ್ಥಾನದ ಕುರಿತು ವಿಸ್ತಾರವಾದ ವಿವರಗಳನ್ನು ಅಂಬೇಡ್ಕರ್ ಅವರ ಕೃತಿಯು ನಮಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. . ಐದನೇ ಪುಸ್ತಕವು ಸಂಘಕ್ಕೆ ಪ್ರಮುಖ ಮಾರ್ಗಸೂಚಿಗಳು, ಭಿಕ್ಕುಗಳ ಕರ್ತವ್ಯಗಳು ಮತ್ತು ಭಿಕ್ಕುವಿನ ಬಗ್ಗೆ ಬುದ್ಧನ ಪರಿಕಲ್ಪನೆಯನ್ನು ವಿವರಿಸುತ್ತದೆ. ಆರನೇ ಪುಸ್ತಕವು ಬುದ್ಧ ನಸಮಕಾಲೀನರ ಬಗ್ಗೆ ವಿವರ ನೀಡುತ್ತದೆ.
ಏಳನೇ ಪುಸ್ತಕವು ಬುದ್ಧನ ಕೊನೆಯ ದಿನಗಳ ಬಗ್ಗೆ ವಿವರಿಸುತ್ತದೆ. ಬುದ್ಧನು ಸುಮಾರು ಎಂಬತ್ತನೇ ವಯಸ್ಸಿನಲ್ಲಿ ಮಲ್ಲರ ಗಣರಾಜ್ಯದ ಕುಶಿನಗರದಲ್ಲಿ ನಿಧನರಾನು. ಅವನ ಚಿತಾಭಸ್ಮಕ್ಕಾಗಿ ಜಗಳವಾಯಿತು, ನಂತರ ಅದನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಯಿತು. ಎಂಟನೇ ಮತ್ತು ಕೊನೆಯ ಪುಸ್ತಕವು ಬುದ್ಧನ ಬಗ್ಗೆ ಮಾತನಾಡುತ್ತದೆ - ಅವನ ದೈಹಿಕ ನೋಟ, ಅವನ ನಾಯಕತ್ವದ ಸಾಮರ್ಥ್ಯ, ಅವನ ಇಷ್ಟಾನಿಷ್ಟಗಳು, ಅವನ ಮಾನವೀಯತೆ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು. ಬುದ್ಧನು ಜಗತ್ತಿನಾದ್ಯಂತ ಉಲ್ಲೇಖಿಸಿದ ಶ್ರೇಷ್ಠ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಮೂಲಕ ಅಂಬೇಡ್ಕರ್ ಪುಸ್ತಕವನ್ನು ಮುಕ್ತಾಯಗೊಳಿಸುತ್ತಾರೆ. ಬುದ್ಧನ ಜೀವನ ಮತ್ತು ಬೋಧನೆಗಳ ಬಗ್ಗೆ ಶಿಕ್ಷಣ ಪಡೆಯಲು ಬಯಸುವ ಯಾರಿಗಾದರೂ ಅಂಬೇಡ್ಕರ್ ಅವರ ' ಬುದ್ಧ ಮತ್ತು ಅವನ ಧಮ್ಮ' ಪುಸ್ತಕವು ನಿಸ್ಸಂದೇಹವಾಗಿ ಒಳ್ಳೆಯ ಮಾರ್ಗದರ್ಶಿಯಾಗಿದೆ.
ಬುದ್ಧನ ನಿಧನಾನಂತರ ಓರ್ವ ಬ್ರಾಹ್ಮಣನು ಬುದ್ಧನ ಆಪ್ತ ಶಿಷ್ಯ ಆನಂದನನ್ನು ಭೇಟಿಯಾಗಿ ‘’ ಮಿತ್ರಾ, ಬುದ್ಧ ತೀರಿಕೊಂಡನಲ್ಲವೆ? ಆತನ ಸ್ಥಾನವನ್ನು ತುಂಬುವ ವ್ಯಕ್ತಿ ನಿಮ್ಮಲ್ಲಿ ಯಾರಿದ್ದಾರೆ? ಎಂದು ಕೇಳಿದಾಗ, ಆನಂದನ ಉತ್ತರ ಹೀಗಿತ್ತು. ‘’ ಗೆಳೆಯಾ, ಬುದ್ಧನಂತಹ ಮತ್ತೊಬ್ಬ ಮೇರು ವ್ಯಕ್ತಿ ಇರಲು ಸಾಧ್ಯವೆ? ಬುದ್ಧಗುರು ಸತ್ಯವನ್ನು ಶೋಧಿಸಿದರು ಮತ್ತು ಆಚರಣೆಗೆ ತಂದರು, ನಾವು ಈಗ ಆಚರಣೆಗೆ ತರಬೇಕಾಗಿರುವುದು ಬುದ್ಧ ಗುರುವಿನ ಸಿದ್ಧಾಂತಗಳನ್ನು ಮಾತ್ರ. ಇನ್ನೊಬ್ಬ ಬುದ್ಧನ ಹುಡುಕಾಟವಲ್ಲ.’’
ಕ್ರಿಸ್ತಪೂರ್ವದಲ್ಲಿ ಆನಂದನು ಆಚರಣೆಗೆ ತಂದ ತಥಾಗತ ಬುದ್ಧನ ಸಿದ್ಧಾಂತಗಳನ್ನು ಇಪ್ಪತ್ತನೇ ಶತಮಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಆಚರಣೆಗೆ ತಂದರು ಎಂಬ ಮಾತು ಅತಿಶಯದ ಮಾತಾಗಲಾರದು.