ಮಂಗಳವಾರ, ಮಾರ್ಚ್ 11, 2014

ಭಾರತದ ಬೌದ್ಧಿಕ ಜಗತ್ತಿನ ಹೊಸಬೆಳಕು- ಪಂಕಜ್ ಮಿಶ್ರ


ಭಾರತೀಯ ಮೂಲದ ಇಂಗ್ಲೀಷ್ ಲೇಖಕ ಹಾಗೂ ಕಳೆದೊಂದು ದಶಕದಿಂದ ಭಾರತದ ಬೌದ್ಧಿಕ ಜಗತ್ತಿನ ಹೊಸ ವಾರಸುದಾರನಂತೆ ಗೋಚರಿಸುತ್ತಿರುವ ಪ್ರತಿಭಾವಂತ ಲೇಖಕ ಪಂಕಜ್ ಮಿಶ್ರಾಗೆ ಮಾರ್ಚ್ ಎಂಟರಂದು ಅಮೇರಿಕಾದ ಪ್ರತಿಷ್ಟಿತ ಸಾಹಿತ್ಯ ಪ್ರಶಸ್ತಿ ದೊರಕಿದೆ. ಅಮೇರಿಕಾದ ವಿಶ್ವವಿದ್ಯಾಲಯ ನೀಡುತ್ತಿರುವ ( Yale university) ಒಂದೂವರೆ ಲಕ್ಷ ಡಾಲರ್ ಮೌಲ್ಯದ ( ಸುಮಾರು 90 ಲಕ್ಷ ರೂಪಾಯಿಗಳು) ಈ ಪ್ರಶಸ್ತಿಗಾಗಿ ಏಳು ರಾಷ್ಟ್ರಗಳ ಎಂಟು ಲೇಖಕರನ್ನು ಮೀರಿಸಿದ ಪಂಕಜ್ ಮಿಶ್ರಾ ಸಾಹಿತ್ಯೇತರ ಕೃತಿಗಳ ವಿಭಾಗದಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಕೃತಿಯಾದ  From The Ruins Of Empire ಎಂಬ ಕೃತಿಗೆ  ಈ ಬಹುಮಾನ ಪಡೆದಿದ್ದಾರೆ. ಕನ್ನಡದಲ್ಲಿ ““ಸಾಮ್ರಾಜ್ಯದ ಅವಶೇಷಗಳಿಂದ” ಎಂದು ಕರೆಯಬಹುದಾದ ಈ ಕೃತಿಯು 2012 ರಲ್ಲಿ ಪ್ರಕಟವಾಗಿದ್ದು, ಈಗಾಗಲೇ ಜಾಗತಿಕ ಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು ಗಳಿಸಿತ್ತು.
ಎಡ್ವರ್ಡ್ ಸಯ್ಯದ್ ನ ‘ಓರಿಯಂಟಲಿಸಂ” ನಂತರ ಜಗತ್ತಿನ ವಿಚಾರವಂತರ ಗಮನ ಸೆಳೆದ ಈ ಕೃತಿಯಲ್ಲಿ ಪಂಕಜ್ ಮಿಶ್ರ , ಪಾಶ್ಚಿಮಾತ್ಯ ಜಗತ್ತಿನ ಆಕ್ರಮಣದ ವೈಖರಿ, ತಣ್ಣನೆಯ ಕ್ರೌರ್ಯ ಮತ್ತು ಇತಿಹಾಸ ಹಾಗೂ ಪೂರ್ವ ಜಗತ್ತಿನ ಸಂಸ್ಕೃತಿಯೂ ಒಳಗೊಂಡಂತೆ  ದೇಸಿಯ ಜ್ಞಾನಪರಂಪರೆ ಮತ್ತು ಸಾಮ್ರಾಜ್ಯಗಳು ಹೇಗೆ ನಶಿಸಿಹೋದವು ಎಂಬುದನ್ನು  ಆರು ಅಧ್ಯಾಯಗಳನ್ನು ಒಳಗೊಂಡ 299 ಪುಟಗಳ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಮತ್ತು  ಎದೆಗೆ ನಾಟುವಂತೆ ರಚಿಸಿದ್ದಾನೆ.
 ಕಳೆದೊಂದು ದಶಕದಿಂದ ಜಾಗತೀಕರಣ ಮತ್ತು  ಅದರ ಪ್ರಭಾವದಿಂದಾದ ಜಾಗತಿಕ ಸಾಂಸ್ಕೃತಿಕ ಪಲ್ಲಟಗಳ ಅದ್ಯಯನವನ್ನು ಒಂದು ವ್ಯೆಸನದಂತೆ ಹಚ್ಚಿಕೊಂಡಿರುವ ನನಗೆ, ಜಾಗತೀಕರಣದ ಇತಿಹಾಸವೆಂದರೆ, ಕೇವಲ ಈಸ್ಟ್ ಇಂಡಿಯ ಕಂಪನಿ ಅಥವಾ ಬಹುರಾಷ್ಟ್ರೀಯ ಕಂಪನಿಗಳ ಇತಿಹಾಸ ಮಾತ್ರವಲ್ಲ ಎನ್ನುವುದು  ಬಲವಾದ ನಂಬಿಕೆ. ಈ ದಿಶೆಯ  ನನ್ನ ಅದ್ಯಯನದ ಹುಡುಕಾಟದಲ್ಲಿ ಕಳೆದ ವರ್ಷ ನನಗೆ ಸಿಕ್ಕ ಒಂದು ಅತ್ಯಮೂಲ್ಯ ಕೃತಿ ಇದಾಗಿತ್ತು.
ಉತ್ತರ ಪ್ರದೇಶದ ಝಾನ್ಸಿ ಪಟ್ಟಣದಲ್ಲಿ 1962 ರಲ್ಲಿ ಜನಿಸಿದ ಪಂಕಜ್ ಮಿಶ್ರಾ ಅಲಹಾಬಾದ್ ನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದು ನಂತರ ದೆಹಲಿಯ ಜವಹರಲಾಲ್ ವಿ.ವಿ.ಯಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತ್ತಕೋತರ ಪದವಿ ಪಡೆದವನು, ಆನಂತರ ಹಿಮಾಲಯ ತಪ್ಪಲಿನ ಮಶ್ರೊಬ ಎಂಬ ಹಳ್ಳಿಯಲ್ಲಿ ವಾಸವಾಗಿದ್ದುಕೊಂಡು, ದೆಹಲಿಯ ಪಯೋನಿರ್ ಇಂಗ್ಲೀಷ್ ದಿನಪತ್ರಿಕೆಗೆ ‘ಇಂಡಿಯನ್ ರಿವ್ಯೂ ಆಫ್ ಬುಕ್ಸ್” ಎಂಬ  ಅಂಕಣ ಬರೆಯುತ್ತಾ, ಲೇಖಕನಾಗಿ, ಅಂಕಣಕಾರನಾಗಿ ರೂಪುಗೊಂಡವನು. ತನ್ನ ಮೊದಲ ಕೃತಿ ಹಾಗೂ ಒಂದು ರೀತಿಯಲ್ಲಿ ಪ್ರವಾಸ ಕಥನದಂತಿರುವ ಲೂಧಿಯಾನ ನಗರ ಕುರಿತಂತೆ ಬರೆದಿರುವ “ ಬಟರ್ ಚಿಕನ್” ಕೃತಿಯಲ್ಲಿ ಜಾಗತೀಕರಣದ ಪ್ರಭಾವದಿಂದ ನಮ್ಮ ಆಹಾರ, ಉಡುಪು, ದೇಸಿ ಸಂಸ್ಕೃತಿಗಳು  ಹೇಗೆ ಪಲ್ಲಟಗೊಳ್ಳಬಲ್ಲವು ಎಂಬುದನ್ನು   ಲವಲವಿಕೆಯ ಭಾಷೆಯ ಮೂಲಕ ದಾಖಲಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದನು. 

ಆನಂತರ ಪಂಕಜ್ ಮಿಶ್ರ ಬರೆದ “ ದ ರೊಮಾಂಟಿಕ್ಸ್” ಎಂಬ ಇಂಗ್ಲೀಷ್ ಕಾದಂಬರಿ ಯುರೋಪಿನ ಒಂಬತ್ತು ಭಾಷೆಗಳಿಗೆ ಅನುವಾದಗೊಂಡು ಜಗತ್ತಿನ ಸಾಹಿತ್ಯಾಸಕ್ತರ ಗಮನ ಸೆಳೆಯಿತು. ಈ ಕೃತಿಗೆ ಅಮೇರಿಕಾದ ಲಾಸ್ ಏಸಂಜಲಿಸ್ ಟೈಮ್ಸ್ ಪತ್ರಿಕೆಯ ಪ್ರಶಸ್ತಿ ಕೂಡ ದೊರೆಯಿತು. ಜೊತೆಗೆ ಇಂಗ್ಲೆಂಡಿನ ಲಂಡನ್ ಯೂನಿವರ್ಸಿಟಿ ಕಾಲೇಜಿನಲ್ಲಿ ಪಂಕಜ್ ಮಿಶ್ರಾಗೆ ಸಂದರ್ಶಕ ಪ್ರಾಧ್ಯಾಪಕ ಹುದ್ದೆ ದೊರೆಯಲು ಈ ಕಾದಂಬರಿ ಪರೋಕ್ಷವಾಗಿ ಕಾರಣವಾಯಿತು. ಲಂಡನ್ ನಗರದ ಸಂಪರ್ಕ ಸಿಕ್ಕ ನಂತರ ನಿರಂತರವಾಗಿ  ಲಂಡನ್ನಿನ “ಗಾರ್ಡಿಯನ್” ಪತ್ರಿಕೆ( ಲಂಡನ್ ರಿವ್ಯೂ ಆಫ್ ಬುಕ್ಸ್) ಹಾಗೂ ಅಮೇರಿಕಾದ ನ್ಯೂಯಾರ್ಕ್ ಟೈಮ್ಸ್ ( ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್)    ಪತ್ರಿಕೆಗಳಿಗೆ ಲೇಖನ, ಹಾಗೂ ಪುಸ್ತಕ ವಿಮರ್ಶೆ ಬರೆಯುತ್ತಾ, ತನ್ನ ಅಗಾಧ ಓದು ಮತ್ತು ಗ್ರಹಿಕೆಯ ಮೂಲಕ  ಬೆಳೆದ ಪಂಕಜ್ ಮಿಶ್ರಾ ನಿರಂತರವಾಗಿ  ಕೃತಿಗಳ ವಿಮರ್ಶೆ ಮಾಡುತ್ತಾ ಜಾಗತಿಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡವನು. ಇದೀಗ ಇಪ್ಪತ್ತೊಂದನೆ  ಶತಮಾನದ ಜಗತ್ತಿನ ನೂರು ಮಂದಿ ಶ್ರೇಷ್ಟ ಚಿಂತಕರಲ್ಲಿ ಪಂಕಜ್ ಮಿಶ್ರ ಕೂಡ ಒಬ್ಬ ಎಂಬ ಪ್ರಶಂಸೆಗೆ ಪಾತ್ರನಾಗಿದ್ದಾನೆ..

ಎಂದಿಗೂ ತಾನೊಬ್ಬ ಲೇಖಕ, ಅಂಕಣಕಾರ, ಕಾದಂಬರಿಕಾರ ಅಥವಾ ಇತಿಹಾಸಕಾರ ಎಂಬ ಯಾವುದೇ  ಹಣೆಪಟ್ಟಿಯನ್ನು  ಹಚ್ಚಿಕೊಳ್ಳದೆ, ಅತ್ಯಂತ ಗಂಭೀರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿರುವ ಪಂಕಜ್ ಮಿಶ್ರ ಕುರಿತು ಭಾರತದ ಸಾಹಿತ್ಯ ಅಥವಾ ಸಾಂಸ್ಕೃತಿಕ ವಲಯದಲ್ಲಿ ಚಿಂತನೆ ನಡೆದದ್ದಾಗಲಿ, ಅಥವಾ ;ಈತನ ಕೃತಿಗಳ ಕುರಿತು ಚರ್ಚೆಯಾಗಲಿ ಇಲ್ಲವೇ ಇಲ್ಲ ಅಥವಾ ತೀರಾ  ಕಡಿಮೆ ಎಂದೇ ಹೇಳಬಹುದು. ಇದು ನನ್ನ ಗ್ರಹಿಕೆಯ ಮಿತಿ ಇದ್ದರೂ ಇರಬಹುದು ಆದರೆ ಹೇಳಲೇಬೇಕಾದ ಕಟು ಸತ್ಯದ ಮಾತಿದು.. ಕಳೆದ ಮೂರು ದಶಕಗಳಿಂದ ಅಂದರೆ 1978 ರಲ್ಲಿ ಪ್ರಕಟವಾದ  ಎಡ್ವರ್ಡ್ ಸಯ್ಯದ್ ನ “ ಓರಿಯಂಟಲಿಸಂ” ಕೃತಿಯನ್ನು ತಮ್ಮ ಭಾಷಣದಲ್ಲಿ ಅಥವಾ ಲೇಖನದಲ್ಲಿ ಉಲ್ಲೇಖಿಸುವುದು ತಮ್ಮ ಜ್ಞಾನದ ಅಥವಾ ಬುದ್ಧಿವಂತಿಕೆಯ ಸಂಕೇತ ಎಂದು ಭ್ರಮಿಸಿರುವ ನಮ್ಮ ಕನ್ನಡದ ಬೌದ್ದಿಕ ಜಗತ್ತು ಒಳಗೊಂಡಂತೆ ಭಾರತದ  ಬೌದ್ಧಿಕ ಜಗತ್ತಿನ ಲೇಖಕರು ಕೂಡಲೇ  ತಮ್ಮ ಭ್ರಮೆಗಳನ್ನು ಕಳಚಿ, ತಮ್ಮ ತಮ್ಮ  ಗ್ರಹಿಕೆಯ ನೆಲೆಗಳನ್ನು ಮತ್ತಷ್ಟು ವಿಸ್ತರಿಸಕೊಳ್ಳಬೇಕಾಗಿದೆ. 

ಪೌರ್ವಾತ್ಯ ರಾಷ್ಟಗಳ ದೃಷ್ಟಿಕೋನದಿಂದ ಪಾಶ್ಚಿಮಾತ್ಯ ಜಗತನ್ನು ನೋಡುವ ಮತ್ತು ವಿಮರ್ಶಿಸುವ ಎಡ್ವರ್ಡ್ ಸಯ್ಯದ್ ನ “ಓರಿಯಂಟಲಿಸಂ” ಮಹತ್ವ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೂ ಮುನ್ನ 1962 ರಲ್ಲಿ ರಚಿಸಲ್ಪಟ್ಟು, 1964 ರಲ್ಲಿ ಪ್ರಕಟವಾದ ವಿಲಿಯಮ್ ಪಾಫ್ ಮತ್ತು ಎಡ್ವರ್ಡ್ ಸ್ಟಿಲ್ ಮನ್ ( William pfaff and edwerd stilman ) ಬರೆದ “ The politics of Hysterea”  ಎಂಬ ಕೃತಿ ಕುರಿತು ಭಾರತದ ಬೌಧ್ಧಿಕ ಜಗತ್ತು ಏಕೆ  ಇದುವರೆಗೆ ಮೌನವಾಗಿದೆ ಎಂಬುದು ನನಗರ್ಥವಾಗಿಲ್ಲ. ವಸಾಹತುಶಾಹಿಯ ರಕ್ತ ಸಿಕ್ತ ಕೈಗಳ ಅಟ್ಟಹಾಸವನ್ನು ಮತ್ತು ಯೂರೋಪಿನ ಕಪ್ಪು ಇತಿಹಾಸವನ್ನು ದಾಖಲಿಸುವ ಈ ಕೃತಿಯನ್ನಾಗಲಿ ಅಥವಾ  1940 ರ ದಶಕದಲ್ಲಿ ಬಂದ ಆಲ್ಜಿರಿಯಾ ಮೂಲದ ಲೇಖಕ ಪ್ರಾಟ್ಜ್ ಪ್ಯಾನನ್ ಬರೆದ “ ವ್ರೆಚಡ್ ಆಫ್ ದ ಅರ್ಥ್” ( ಭೂಮಿಯ ತಿರಸ್ಕೃತರು) ಕೃತಿಯನ್ನು ಉಲ್ಲೇಖಿಸಿದ್ದು ತೀರಾ ಕಡಿಮೆ ಎಂದು ಹೇಳಬೇಕು. ಹಾಗಾಗಿ ನಾವೀಗ ಎಡ್ವರ್ಡ್ ಸಯ್ಯದ್ ಚಿಂತನೆಗಳಿಂದ ಮುಂದಕ್ಕೆ ಜಗತ್ತು  ಬಹುದೂರ ಸಾಗಿದ್ದು, ವಸಾಹತು ಶಾಹಿಯ ರೂಪವೂ ಸಹ ಜಾಗತೀಕರಣವಾಗಿ ರೂಪುಗೊಂಡಿದೆ ಮತ್ತು , ಅದರ ಸಾಹಿತ್ಯದ ಪರಿಭಾಷೆ ಕೂಡ ಬದಲಾಗಿದೆ ಎಂಬುದನ್ನು ಮನಗಾಣಬೇಕಿದೆ. ಇಂಗ್ಲೀಷ್ ಭಾಷೆಯಲ್ಲಿ “ ಹಿಸ್ಟರಿ ಆಫ್ ವೆಪನ್” ( ಇತಿಹಾಸದ ಆಯುಧ) ಎಂದು ಕರೆಯಲ್ಪಡುತ್ತಿರುವ ಆಧುನಿಕ ಜಗತ್ತಿನ ಪರಿಭಾಷೆಗೆ ನಾವೀಗ ನಮ್ಮ ಕಣ್ಣು, ಕಿವಿಗಳನ್ನು ಮುಕ್ತವಾಗಿ  ತೆರೆದಿಡಬೇಕಾಗಿದೆ.



ಸಧ್ಯದ ಭಾರತದ ಸಮಕಾಲೀನ ಸಮಾಜದ ದುರಂತವೇನೆಂದರೆ, ನಮ್ಮ ಕಣ್ಣೆದುರು ಎರಡು ವಿಭಿನ್ನ ದೃಷ್ಟಿಕೋನದ ಇತಿಹಾಸ ಸೃಷ್ಟಿಯಾಗುತ್ತಿದೆ ಮತ್ತು ವಾಖ್ಯಾನಿಸಲ್ಪಡುತ್ತಿದೆ. ಎಡಪಂಥೀಯ ಚಿಂತನೆಯ ಆಧಾರದ ಮೇಲೆ ರೂಪುಗೊಳ್ಳುತ್ತಿರುವ ಇತಿಹಾಸ ಒಂದು ಭಾಗವಾದರೆ, ಸ್ಥಾಪಿತ ವ್ಯಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಬಲಪಂಥಿಯರಿಂದ ಸೃಷ್ಟಿಯಾಗುತ್ತಿರುವ ಇತಿಹಾಸ ಇನ್ನೊಂದು ಕಡೆ ಇದೆ. ಈ ಎರಡರ ನಡುವಿನ  ನಿಜವಾದ ಇತಿಹಾಸ ಯಾವುದು? ಎಂಬುದನ್ನು ಈ ತಲೆಮಾರಿನ ಎದೆಗೆ ತಲುಪಿಸುವ ನೈತಿಕ ಜವಾಬ್ದಾರಿ ನನ್ನ ತಲೆಮಾರಿನ ಲೇಖಕರ ಮೇಲಿದೆ. ಖ್ಯಾತ ಇತಿಹಾಸ  ತಜ್ಞರಾದ ಅಯ್ಯಪ್ಪ ಫಣಿಕ್ಕರ್,  ರೋಮಿಲಾ ಥಾಪರ್ ಮತ್ತು ಇರ್ಫಾನ್ ಹಬೀಬ್ ನಮ್ಮ ನಡುವೆ ಇರುವುದು ಸಮಾಧಾನಕರ ಸಂಗತಿ.

ಈ ನಿಟ್ಟಿನಲ್ಲಿ ಪಂಕಜ್ ಮಿಶ್ರಾ ನ The Ruins Of Empire ಕೃತಿ ಇಪ್ಪತ್ತೊಂದನೆ ಶತಮಾನದ ಮಹತ್ವದ ಕೃತಿ ಎಂದೇ ನನ್ನ ಭಾವನೆ. ಈಸ್ಟ್ ಇಂಡಿಯಾ ಕಂಪನಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಬೆಳೆದುಕೊಡುತ್ತಿದ್ದ ಇಂಗ್ಲೆಂಡಿನ ವಸಾಹತು ಪ್ರದೇಶವಾಗಿದ್ದ ಈಜಿಪ್ತ್ ರಾಷ್ಟ್ರದ ಮೇಲೆ 1798 ರಲ್ಲಿ ಪ್ರಾನ್ಸಿನ ನಪೋಲಿಯನ್ ಲಗ್ಗೆ ಹಾಕಿದ ಕಥನ ದೊಂದಿಗೆ ಆರಂಭಗೊಳ್ಳುವ ಕಥನ ಮತ್ತು ಇಸ್ಲಾಂ ಜಗತ್ತು ಪಾಶ್ಚಿಮಾತ್ಯ ಜಗತ್ತನ್ನು ದ್ವೇಷಿಸಲು ಇರುವ ಕಾರಣಗಳ ಇತಿಹಾಸದ ಹುಡುಕಾಟವೂ ಸಹ ಈ ಕೃತಿಯಲ್ಲಿದೆ. ಈವರೆಗೆ 2001 ರ ಸೆಪ್ಟಂಬರ್ ಹನ್ನೊಂದರಂದು ಅಮೇರಿಕಾದ ನ್ಯೂಯಾರ್ಕ್ ನಗರದ ವಿಶ್ವ ವಾಣಿಜ್ಯ ಕೇಂದ್ರ ಮೇಲೆ ನಡೆದ ದಾಳಿಯನ್ನು ಮಾತ್ರ ಗುರುತಿಸುವ ನಮ್ಮ ಇತಿಹಾಸಕಾರರು, ಬರಹಗಾರರು, ಮತ್ತು ಪತ್ರಕರ್ತರು ಅವಶ್ಯವಾಗಿ ಓದಲೇ ಬೇಕಾದ ಕೃತಿಯಿದು. ಈ ಕೃತಿಗೆ ಎಡ್ವರ್ಡ್ ಸಯ್ಯದ್ ನೀಡಿರುವ ಒಂದು ಪ್ರತಿಕ್ರಿಯೆ ಕೃತಿಯ ಮಹತ್ವವನ್ನು ದ್ವಿಗುಣಗೊಳಿಸಿದೆ. ಆಸಕ್ತರು ಪಂಕಜ್ ಮಿಶ್ರಾನ ವೆಬ್ ಸೈಟ್ ತಾಣವನ್ನು ಒಮ್ಮೆ ಗಮನಿಸಬಹುದು. ವಿಳಾಸ- www.pankajmishra.com

ಗುರುವಾರ, ಫೆಬ್ರವರಿ 27, 2014

ದೃಶ್ಯ ಬ್ರಹ್ಮನ ಅಗಲಿಕೆಯ ನೋವು



ಕಳೆದ ಪೆಬ್ರವರಿ ಹದಿನೆಂಟರೆಂದು ನಮ್ಮನ್ನು ಅಗಲಿದ ಪ್ರಖ್ಯಾತ ಛಾಯಾಚಿತ್ರಗ್ರಾಹಕ, ಮತ್ತು ಕನ್ನಡಿಗ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದ ಟಿ.ಎಸ್. ನಾಗರಾಜನ್ ಅವರ ಸಾವಿನ ಸುದ್ಧಿ, ರಾಹುಲ್ ಮತ್ತು ನರೇಂದ್ರಮೋದಿಯವರ ಚುನಾವಣಾ ಪ್ರಚಾರದ ನಡುವೆ ಪ್ರಮುಖ ಸುದ್ಧಿಯಾಗಲಿಲ್ಲ. ಇಂದಿನ ತಲೆಮಾರಿನ ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮಕ್ಕೆ ಅಪರಿಚಿತರಾಗಿ ಉಳಿದ ಟಿ.ಎಸ್.ಸತ್ಯನ್ ಮತ್ತು ಟಿ.ಎಸ್.ನಾಗರಾಜನ್ ಎಂಬ ಇಬ್ಬರು ಮೈಸೂರು ಮೂಲದ ಛಾಯಾಗ್ರಾಹಕ ಸಹೋದರರು ತಮ್ಮ ಕಪ್ಪು ಬಿಳುಪಿನ ಚಿತ್ರಗಳ ಮೂಲಕ ಕೇವಲ ಭಾರತ ಮಾತ್ರವಲ್ಲ ಜಗತ್ತಿನ ಪತ್ರಿಕೋದ್ಯಮದಲ್ಲಿ ತಮ್ಮ ಪ್ರತಿಭೆಯ ಛಾಪು ಮೂಡಿಸಿದವರು.
ಛಾಯಾಚಿತ್ರ ಕಲೆಯನ್ನು ಒಂದು ತಪಸ್ಸಿನಂತೆ ಧ್ಯಾನಿಸಿದ ಟಿ.ಎಸ್. ನಾಗರಾಜನ್ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಕೇರಳದ ಅಪರೂಪದ ಮನೆಗಳನ್ನು ಸೆರೆಹಿಡಿದು ಭಾರತದ ಸಂಸ್ಕೃತಿಯನ್ನು ತಮ್ಮ ಚಿತ್ರಗಳ ಮೂಲಕ ದಾಖಲಿಸಿದ ಅಪರೂಪದ ಮಹಾನ್  ಕಲಾವಿದ.

ಮೈಸೂರು ನಗರದಲ್ಲಿ 1932 ರಲ್ಲಿ ಜನಿಸಿದ ನಾಗರಾಜನ್ ತಮ್ಮ ಬಾಲ್ಯದ ವಿದ್ಯಾಭ್ಯಾಸ ಮತ್ತು ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ, ನಂತರ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಚಿತ್ರಗ್ರಾಹಕರಾಗಿ ವೃತ್ತಿ ಆರಂಭಿಸಿದರು. ಕೇಂದ್ರ ವಾರ್ತಾ ಇಲಾಖೆಯು ಪ್ರಕಟಿಸುವ “ ಯೋಜನಾ” ಎಂಬ ಪತ್ರಿಕೆಗೆ ಮುಖ್ಯ ಛಾಯಾಗ್ರಾಹಕರಾಗಿ ನೇಮಕಗೊಂಡ ನಾಗರಾಜನ್ ತಮ್ಮ ನಿಕಾನ್ ಕ್ಯಾಮರಾವನ್ನು ಹೆಗಲಿಗೇರಿಸಿ ಇಡೀ ದೇಶವನ್ನು ಸುತ್ತಿದವರು.
ಭಾರತದ ದೇಗುಲಗಳು, ವಾಸ ಸ್ಥಳವಾದ ಮನೆಗಳು, ಅಲ್ಲಿನ ವಿಶಿಷ್ಟ ಸಂಸ್ಕೃತಿ, ಜನರು ಮತ್ತು ಅವರ ಉಡುಪು ಇವುಗಳನ್ನು ಮುಖ್ಯಗುರಿಯಾಗಿರಿಸಿಕೊಂಡು ತೆಗೆದ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಗರಾಜನ್ ಅವರಿಗೆ ಹೆಸರು ತಂದುಕೊಟ್ಟವು

ಮೈಸೂರಿನಲ್ಲಿ ಪಿ.ಯು.ಸಿ. ಓದುತ್ತಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ ಟಿ.ಎಸ್ ನಾಗರಾಜನ್ ಅವರ ಭವಿಷ್ಯದ ದಿಕ್ಕನ್ನು ಬದಲಿಸಿತು ಅಂದಿನ ಮೈಸೂರು ಮಹಾರಾಜರ ಪ್ರೀತಿಯ ಪಟ್ಟದ ಆನೆ ವೃದ್ಧಾಪ್ಯದಿಂದ ಮೃತಪಟ್ಟಾಗ ಇಡೀ ಮೈಸೂರಿನ ಜನತೆ ಅರಮನೆಯ ಪರಿವಾರದೊಂದಿಗೆ ಶೋಕಸಾಗರದಲ್ಲಿ ಮುಳುಗಿತು. ಈ ಸಂದರ್ಭದಲ್ಲಿ ಸ್ಥಳೀಯ ಸ್ಟುಡಿಯೊ ಛಾಯಾಗ್ರಾಹಕ ತೆಗೆದಿದ್ದ ಆನೆಯ ಚಿತ್ರವನ್ನು ಸಂಗ್ರಹಿಸಿದ ನಾಗರಾಜನ್, ಆನೆಯ ಸಾವಿನ ಸುದ್ಧಿ ಮತ್ತು ಪಟ್ಟದಾನೆಯ ಜೊತೆಗೆ ಮೈಸೂರಿನ ಜನತೆಗೆ ಇದ್ದ ಭಾವನಾತ್ಮಕ ಸಂಬಂಧ ಇವುಗಳನ್ನು ಆಧರಿಸಿ, “ A Mysore Gentlemen Passes Away” ಎಂಬ ಲೇಖನವನ್ನು ಬರೆದರು. ಅದನ್ನು ಅಂದಿನ ಬಾಂಬೆಯಿಂದ ಪ್ರಕಟವಾಗುತ್ತಿದ್ದ ಇಂಗ್ಲೀಷ್ ಪತ್ರಿಕೆಗೆ ಕಲಿಸಿಕೊಟ್ಟರು. ಒಂದು ತಿಂಗಳು ಕಳೆದ ನಂತರ ನಾಗರಾಜನ್ ಅವರ ಸರಸ್ವತಿ ಪುರಂ ಮನೆಯ ವಿಳಾಸಕ್ಕೆ ಲೇಖನ ಪ್ರಕಟವಾದ ಪತ್ರಿಕೆ, ಸಂಪಾದಕರ ಪತ್ರವನ್ನು ಒಳಗೊಂಡ ಹಣದ ಚೆಕ್ ಇವೆಲ್ಲವೂ ತಲುಪಿದವು.  ಇಂಗ್ಲೀಷ್ ಮೂಲದ ಸಂಪಾದಕ ನಾಗರಾಜನ್ ಅವರ ಲೇಖನ ಶೈಲಿಯನ್ನು ಮೆಚ್ಚುವುದರ ಜೊತೆಗೆ ಒಳ್ಳೆಯ ಕ್ಯಾಮರಾ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದ. ಸಂಭಾವನೆಯಾಗಿ ಬಂದ ಹಣದಲ್ಲಿ ಕ್ಯಾಮರಾ ಖರೀದಿಸಿದ ನಾಗರಾಜನ್ ರವರ ಬದುಕಿನ ದಿಶೆಯನ್ನು ಒಂದು ಲೇಖನ ಅನಿರೀಕ್ಷಿತವಾಗಿ ರೂಪಿಸಿತ್ತು,
1978 ರಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ಛಾಯಾಗ್ರಹಣ ಕಲೆಗೆ ತಮ್ಮನ್ನು ಅರ್ಪಿಸಿಕೊಂಡ ನಾಗರಾಜನ್ ತಮ್ಮ ಹಿರಿಯಣ್ಣ ಟಿ.ಎಸ್. ಸತ್ಯನ್ ಅವರಂತೆ ಕಪ್ಪು ಬಿಳುಪು ಚಿತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಇವರು ತೆಗೆದ ಭಾರತದ ಖ್ಯಾತ ನಾಮರ ಚಿತ್ರಗಳು, ಇಂದಿಗೂ ಅಪರೂಪದ ಚಿತ್ರಗಳೆಂದು ಪ್ರಸಿದ್ಧಿಯಾಗಿವೆ, ಇವುಗಳಲ್ಲಿ ಖ್ಯಾತ ಸಂಗೀತ ಕಲಾವಿದೆ ಎಂ.ಎಸ್. ಸುಬ್ಬುಲಕ್ಷ್ಮಿಯವರು ತಮ್ಮ ಮನೆಯ ಮುಂದೆ ಕುಳಿತು ರಂಗೋಲಿ ಬಿಡಿಸುತ್ತಿರುವ ಚಿತ್ರ ಏಕಕಾಲದಲ್ಲಿ ಸುಬ್ಬುಲಕ್ಷ್ಮಿ ಮತ್ತು ನಾಗರಾಜನ್ ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತು.

ಮನುಷ್ಯರು ಕ್ಯಾಮರಾ ಮುಂದೆ ಅಭಿನಯಿಸಬಾರದು, ಅವರ ನಡುವಳಿಕೆ ಸಹಜವಾಗಿರಬೇಕು ಎಂಬ ವಿಷಯದಲ್ಲಿ ಧೃಡನಂಬಿಕೆಯಿಟ್ಟಿದ್ದ ನಾಗರಾಜನ್ ಅವರು, ಈ ನಿಟ್ಟಿನಲ್ಲಿ ತೆಗೆದ  ಸಹಜ ಚಿತ್ರಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡು  ಅವರಿಗೆ ಹೆಸರು ತಂದುಕೊಟ್ಟಿವೆ.

ಕಳೆದ ವರ್ಷ ತಮ್ಮ ಜೀವಮಾನದ ಸಾಧನೆಗೆ ಕೇಂದ್ರ ಸರ್ಕಾರದಿಂದ ಗೌರವಿಸಲ್ಪಟ್ಟ ಟಿ.ಎಸ್. ನಾಗರಾಜನ್ “ ಮದ್ರಾಸ್ ನಗರ ಸಂಸ್ಥೆಯೊಂದರ ಸಹಯೋಗದಲ್ಲಿ ಹೊರ ತಂದಿರುವ “ ವ್ಯಾನಿಶಿಂಗ್ ಹೋಮ್ಸ್ ಆಫ್ ಇಂಡಿಯ” ಎಂಬ ಚಿತ್ರ ಸಂಪುಟ ಅವರ ಸೃಜನಶೀಲತೆಯ ಪ್ರತಿಬಿಂಭವಾಗಿದೆ.


ಚಿತ್ರಗಳ ಜೊತೆ ತಮ್ಮ ನೆನಪುಗಳನ್ನು ಸಹ ಅವರು ದಾಖಲಿಸಿರುವುದು ವಿಶೇಷ. ಇಂದಿರಾಗಾಂಧಿ, ಎಂ.ಎಸ್. ಸುಬ್ಬುಲಕ್ಷ್ಮಿ ಮುಂತಾದವರ ಜೊತೆಗಿನ ತಮ್ಮ ನೆನಪುಗಳನ್ನು ತಾವು ಬರೆಯುತ್ತಿದ್ದ ಆತ್ಮಕಥನದಲ್ಲಿ ದಾಖಲಿಸಿದ್ದಾರೆ. ಆತ್ಮ ಕಥನದ ಹೆಸರು” ಎ ಪರ್ಲ್ ಆಫ್ ವಾಟರ್ ಆನ್ ಎ ಲೋಟಸ್ ಲೀಫ್” ಆದರೆ ಆ ಕೃತಿ ಹೊರಬಂದ ಬಗ್ಗೆ ನನಗೆ ಮಾಹಿತಿ ಇಲ್ಲ.

ಟಿ.ಎಸ್. ನಾಗರಾಜನ್ ಅವರು ಸೆರೆ ಹಿಡಿದ ಕೆಲವು ಚಿತ್ರಗಳು ಇಲ್ಲಿವೆ.




ಭಾನುವಾರ, ಫೆಬ್ರವರಿ 16, 2014

ಭಾರತದ ರಾಜಕಾರಣದ ವೈಫಲ್ಯ ಮತ್ತು ವಿಷಾಧ



ಭಾರತದ ರಾಜಕಾರಣದಲ್ಲಿ ಪ್ರಜ್ಞಾವಂತ ನಾಗರೀಕರ ಆಶಾಕಿರಣದಂತೆ ಗೋಚರಿಸಿದ್ದ ಅರವಿಂದ್ ಕೇಜ್ರಿವಾಲರ ಅಮ್ ಆದ್ಮಿ ಪಕ್ಷ ಕೊನೆಗೂ ಎಲ್ಲರನ್ನೂ ನಿರಾಸೆಗೊಳಿಸಿದೆ. ಅನಿರೀಕ್ಷಿತವಾಗಿ ದೆಹಲಿಯಲ್ಲಿ ಗದ್ದೆಗೆಯೇರಿದ ರೀತಿ ನಮ್ಮನ್ನು ವಿಸ್ಮಯಗೊಳಿಸುವಷ್ಟರಲ್ಲಿ ಅಧಿಕಾರದಿಂದ ನಿರ್ಗಮಿಸುವುದರ ಮೂಲಕ ತನ್ನ ಅಸಹಾಯಕತೆ ಮತ್ತು ಅಸಮರ್ಥತೆಯನ್ನು ಅನಾವರಣಗೊಳಿಸಿದೆ.
ಕಳೆದ ಒಂದು ದಶಕದಿಂದ ಭಾರತದಲ್ಲಿ ವಿಫಲಗೊಂಡಿರುವ ಹಾಗೂ, ರಾಜಕಾರಣದ ಪ್ರಲೋಭನೆ ಮತ್ತು ಹುನ್ನಾರಗಳಿಗೆ ಬಲಿಯಾಗಿ ಘಾಸಿಗೊಂಡ ಸಾಮಾಜಿಕ ಚಳುವಳಿಗಳ ಪಟ್ಟಿಗೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ಅಮ್ ಆದ್ಮಿ ಪಕ್ಷ ಕೂಡ ಸೇರ್ಪಡೆಯಾಗುವುದರ ಮೂಲಕ ಇತಿಹಾಸದ ಕಸದಬುಟ್ಟಿಗೆ ಸೇರಿದೆ.
ಈ ದೇಶದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದುದ್ದಕ್ಕೂ ಸ್ವಯಂಕೃತ ಅಪರಾಧ ಮತ್ತು ಸಂಘಟನೆಗಳ ನಾಯಕರ ಅಹಂ ನಿಂದಾಗಿ ವಿಫಲಗೊಂಡ ಚಳುವಳಿಗಳ ಪಟ್ಟಿ ಸಾಕಷ್ಟು ಉದ್ದವಾಗಿದೆ. ನಮ್ಮ ಕಣ್ಣೆದುರುಗಿನ ಈ ದುರಂತಗಳಿಗೆ ಸಾಕ್ಷಿಯಾದ ನಾವೆಲ್ಲರೂ ಈಗ ಬೇಸರಪಡುವುದರ ಬದಲಾಗಿ, ಯಾವುದೇ ಭಾವನೆಗಳಿಲ್ಲದ  ಸಂತರಾಗುವ ಕಾಲ ಇದಾಗಿದೆ.
ಸ್ವಾತಂತ್ರ್ಯಾನಂತರದ ಭಾರತದ ರಾಜಕಾರಣದಲ್ಲಿ ಆಳವಾಗಿ ಬೇರು ಬಿಟ್ಟ ಭ್ರಷ್ಟಾಚಾರ, ಮತ್ತು ಕುಟುಂಬ ರಾಜಕಾರಣ ಹಾಗೂ ರಾಜಕಾರಣಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳ ಅಪವಿತ್ರ ಮೈತ್ರಿ, ಇವುಗಳನ್ನು ಒಂದು ದಿನ, ವಾರ, ಅಥವಾ ತಿಂಗಳಲ್ಲಿ ತೊಡೆದು ಹಾಕಲು ಹೊರಡುವುದು ಸಾಹಸದ ಕ್ರಿಯೆಯಾಗಲಾರದು, ಬದಲಾಗಿ ಅದು ಹುಂಬುತನದ ಸಾಹಸವಾಗುತ್ತದೆ. ಇದೀಗ ಅರವಿಂದ್ ಕೇಜ್ರಿವಾಲ್ ಮಾಡಿದ್ದು ಇಂತಹ ಸಾಹಸವೇ ಹೊರತು ಬೇರೇನಲ್ಲ.
ಅಮೇರಿಕಾದಲ್ಲಿ ಸಮಾನ ಸ್ವಾತಂತ್ರ್ಯ ಮತ್ತು ನಾಗರೀಕ ಹಕ್ಕುಗಳಿಗಾಗಿ ಅಲ್ಲಿನ ಬಿಳಿಯರ ವಿರುದ್ಧ ಹೋರಾಡಿದ ನಿಗ್ರೋಗಳ ಪರವಾಗಿ ಧ್ವನಿ ಎತ್ತಿದ ಅನೇಕ ಕವಿಗಳು, ಬರಹಗಾರರು 1980 ರ ದಶಕದಲ್ಲಿ ಹೊರತಂದಿದ್ದ “ ಬ್ಲಾಕ್ ಪೊಯಮ್ಸ್” ಎಂಬ ಕವಿತೆಗಳ ಸಂಕಲನದಲ್ಲಿ ಮಾರ್ಗರೇಟ್ ವಾಕಲ್ ಎಂಬಾಕೆ ಬರೆದ ಕವಿತೆಯ ಸಾಲುಗಳಿವು.
              ಗೊತ್ತಿದೆ ನಮಗೆ
              ಸ್ವಾತಂತ್ರ್ಯದ ಹಾಡು
              ಹಾಡುತ್ತಾ ಎದೆಯುಬ್ಬಿಸಿ
              ನಡೆಯುವ ನಮಗೆಲ್ಲಾ
              ಸರಳ ಹಿಂದಿನ ಕ್ರೂರ
              ಕತ್ತಲ ಕರಾಳ ಬದುಕು
              ಕಾದಿದೆ ಎಂದು.
              ಗೊತ್ತಿದೆ ನಮಗೆ
              ಸ್ವಾತಂತ್ಯವೆಂಬುದು
              ಬೀದಿ ಬದಿಯ ಅಗ್ಗದ
              ಸರಕಲ್ಲವೆಂದು
              ಏಕೆಂದರೆ,
              ರೋಮ್ ಸಾಮ್ರಾಜ್ಯವನ್ನು
              ಒಂದೇ ದಿನದಲ್ಲಿ
             ನಿರ್ಮಿಸಲಿಲ್ಲವಲ್ಲಾ?
ನಾವು ಕನಸುವ ಒಂದು ಆದರ್ಶ ಸಮಾಜದ ಬಗ್ಗೆ ಇಂತಹ ತಾಳ್ಮೆ ವಿವೇಕ ಇಲ್ಲದಿದ್ದರೆ, ದುರಂತಗಳು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಅರವಿಂದ್ ಕೇಜ್ರಿವಾಲ್ ಸಾಕ್ಷಿಯಾಗಿದ್ದಾರೆ. ಭ್ರಷ್ಟಾಚಾರವನ್ನು ಗುಡಿಸಿ ಹಾಕುತ್ತೇನೆ ಎಂದು ಪೊರಕೆಯನ್ನು ತನ್ನ ಚುನಾವಣಾ ಚಿಹ್ನೆಯನ್ನಾಗಿ ಮಾಡಿಕೊಂಡ ಅರವಿಂದ್ ಕೇಜ್ರಿವಾಲ್ ತನ್ನ ನಲವತ್ತೆಂಟು ದಿನಗಳ ಅಧಿಕಾರದಲ್ಲಿ ಆಸೆ ಮೂಡಿಸಿದ್ದಕ್ಕಿಂತ ಹೆಚ್ಚಾಗಿ ಅರಾಜಕತೆಯನ್ನು ಸೃಷ್ಟಿ ಮಾಡಿದ್ದೇ ಹೆಚ್ಚು. ಸಮಸ್ಯೆಗಳ ಪರಿಹಾರಕ್ಕೆ ಸಂಘರ್ಷವೊಂದೇ ಪರಿಹಾರವಲ್ಲ, ಸಮಾಲೋಚನೆ ಕೂಡ ಪರ್ಯಾಯ ಮಾರ್ಗ ಎಂಬುದನ್ನು ಈ ಜನನಾಯಕ ಅರಿಯದೇ ಹೋದದ್ದು ನಮ್ಮಗಳ ವರ್ತಮಾನದ ದುರಂತ. ಸ್ವತಃ ಒಬ್ಬ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಚಳುವಳಿಗೆ ದುಮುಕಿದ ಕೇಜ್ರಿವಾಲ್ ಗೆ, ಒಂದು ಸರ್ಕಾರದ ಆಡಳಿತ  ವ್ಯವಸ್ಥೆಯಲ್ಲಿ ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾನು ಕನಸಿದ್ದ ಯೋಜನೆಗಳನ್ನು ಅನುಷ್ಟಾನಗೊಳಿಸುವುದು ಮುಖ್ಯ ಎಂಬುದು ಅರ್ಥವಾಗಲೇ ಇಲ್ಲ. ಅಂತಿಮವಾಗಿ  ಮುಲಯಂಸಿಂಗ್, ಶರದ್ ಪವಾರ್, ಜಯಲಲಿತ, ಚಂದ್ರಬಾಬುನಾಯ್ಡು, ಜಗನ್ ರೆಡ್ಡಿ, ಲಾಲೂ, ದೇವೆಗೌಡ, ಕರುಣಾನಿಧಿ ಮುಂತಾದವರು ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಪಕ್ಷಗಳ ನಡುವೆ ನಡೆಸುವ  ಚೌಕಾಶಿ ರಾಜಕಾರಣವನ್ನು, ಮುಂದಿನ ದಿನಗಳಲ್ಲಿಯೂ ನಾವು ನೋಡಬೇಕಾಗಿದೆ.

ಒಮ್ಮೆ ರೋಮ್ ನಗರದ ಬೀದಿಯ ನಡುವೆ ಏಕಾಂತದಲ್ಲಿ ಕುಳಿತಿದ್ದ ಸಾಕ್ರೇಟಿಸ್ ನ ಬಳಿ ಬಂದ ಶಿಷ್ಯನೊಬ್ಬ “ ಗುರುಗಳೆ, ನಾನು ವಿವಾಹವಾಗುತ್ತಿದ್ದೇನೆ ಹರಸಿ” ಎಂದಾಗ, ಸಾಕ್ರೇಟಿಸ್ ಶಿಷ್ಯನನ್ನು ಹರಸುತ್ತಾ” ಒಳ್ಳೆಯ ಹೆಂಡತಿ ಸಿಕ್ಕರೆ ಒಳ್ಳೆಯ ನಾಗರೀಕನಾಗಿ ಬಾಳುತ್ತಿ, ಕೆಟ್ಟ ಗಯ್ಯಾಳಿ ಹೆಂಡತಿ ಸಿಕ್ಕರೆ ನನ್ನ ಹಾಗೆ ತತ್ವಜ್ಞಾನಿಯಾಗುತ್ತಿ” ಎಂದನಂತೆ. ಈಗ ಭಾರತದ ಯುವಜನತೆ ಮತ್ತು ಪ್ರಜ್ಞಾವಂತ ನಾಗರೀಕರ ಸ್ಥಿತಿ ಕೂಡ ಇದೇ ಆಗಿದೆ. ಭಾರತದ ಪ್ರಸ್ತುತ ರಾಜಕಾರಣ ನಮ್ಮನ್ನು ಸಂತರನ್ನಾಗಿ ರೂಪಿಸುತ್ತಿದೆ. ನಮ್ಮಗಳ ಸಿಟ್ಟು, ಬೇಸರ, ಅಸಹಾಯಕತೆ ಮತ್ತು ಅಸಮರ್ಥತೆಗಳ ನಡುವೆ ತಮ್ಮ ರಾಜಕೀಯ ಚಿಂತನೆ, ದೃಷ್ಟಿಕೋನ ಹಾಗೂ ಆಲೋಚನೆಗಳಲ್ಲಿ ಎರಡು ವಿರುದ್ಧ ದಿಕ್ಕಿನ  ದ್ರುವಗಳಂತಿರುವ ಅರವಿಂದ್ ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಇವರನ್ನು ನಾವು ಆಸೆಗಣ್ಣಿನಿಂದ ನೋಡಬಹುದು. ಇವರುಗಳು ತಮ್ಮ  ಪ್ರಯೋಗ, ಕನಸುಗಳಿಗೆ ಪ್ರಬುಧ್ಧತೆಯನ್ನು ಕಸಿಮಾಡಿಕೊಂಡರೆ, ಭವಿಷ್ಯದ ನಾಯಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ವೃದ್ಧಾಶ್ರಮದಂತೆ ಕಾಣುವ ಕಾಂಗ್ರೇಸ್ ಪಕ್ಷದಲ್ಲಿ ಗುಲಾಮಗಿರಿ ಸಂಸ್ಕೃತಿಯೆಂಬುದು, ಹೈಕಮಾಂಡ್ ಸಂಸ್ಕೃತಿಯ ಹೆಸರಿನಲ್ಲಿ ಚಾಲ್ತಿಯಲ್ಲಿದ್ದು, ಅಲ್ಲಿ ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆಯೆಂಬುದು ನಾಶವಾಗಿದೆ. ಹಾಗಾಗಿ ಅಲ್ಲಿನ ನಾಯಕರು ಉಸಿರು ತೆಗೆದುಕೊಳ್ಳುವುದರಿಂದ ಹಿಡಿದು, ಹೂಸು ಬಿಡುವವರೆಗೂ ಹೈ ಕಮಾಂಡ್ ಅನುಮತಿಗೆ ಕಾಯಬೇಕಿದೆ. ಪಕ್ಷದ ಇಂತಹ ಗೊಡ್ಡು ವ್ಯವಸ್ಥೆಯಿಂದ ಬೇಸತ್ತಿರುವ ರಾಹುಲ್ ಗಾಂಧಿ ಈಗ ನಮ್ಮೆದುರು ಏಳುಸುತ್ತಿನ ಕೋಟೆಯಲ್ಲಿ ಬಂಧಿಯಾಗಿರುವ ಅಸಹಾಯಕ ರಾಜಕುಮಾರನಂತೆ ಕಾಣುತ್ತಾರೆ.


ಕಳೆದ ಅರ್ಧ ಶತಮಾನದಲ್ಲಿ ಭಾರತದಲ್ಲಿ ಬೇರುಬಿಟ್ಟ ಬಡಜನರ ಅಸಹಾಯಕತೆ ಮತ್ತು ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡು, ಆಟವಾಡುತ್ತಿರುವ ರಾಜಕಾರಣಿಗಳನ್ನು ಮತ್ತು ಅಧಿಕಾರಿಶಾಹಿ ಹಾಗೂ ಜಡ್ಡುಗಟ್ಟಿದ ಕೊಳೆ ಮತ್ತು ವ್ಯವಸ್ಥೆಯನ್ನು ಬದಲಾಯಿಸಲು, ಕ್ರಾಂತಿಯೊಂದೇ ಸಾಲದು, ಜೊತೆ ಜೊತೆಗೆ ಬದಲಾಗುತ್ತಿರುವ ಕಾಲ ಮತ್ತು ತಂತ್ರಗಳ ಅನುಗುಣವಾಗಿ ನಮ್ಮ ಕಾರ್ಯತಂತ್ರ ರೂಪುಗೊಳ್ಳಬೇಕಿದೆ. ಈ ಕಾರಣಕ್ಕಾಗಿ ಮಾವೂ ಚೀನಾ ಕ್ರಾಂತಿಯ ಸಂದರ್ಭದಲ್ಲಿ “ ನಮ್ಮ ಪಾದಗಳ ಅಳತೆಗೆ ಅನುಗುಣವಾಗಿ ಪಾದರಕ್ಷೆಗಳು ಇರಬೇಕೇ ಹೊರತು, ಅವುಗಳ ಅಳತೆಗೆ ನಮ್ಮ ಪಾದಗಳನ್ನು ಕತ್ತರಿಸಕೊಳ್ಳಬಾರದು” ಎಂದು ನುಡಿದಿದ್ದ. ಪ್ರಸ್ತತ ಸನ್ನೀವೇಶದಲ್ಲಿ ಅರವಿಂದ್ ಕೇಜ್ರಿವಾಲ್  ಮತ್ತು ರಾಹುಲ್ ಗಾಂಧಿ ಅರಿಯಲೇ ಬೇಕಾದ ಸತ್ಯವಿದು

ಬುಧವಾರ, ಜನವರಿ 29, 2014

ಸೂಫಿ ಪ್ರೇಮ ಕಾವ್ಯ ( ಭಾರತ ಮತ್ತು ಸೂಫಿ ಪರಂಪರೆ)

ಭಾರತಕ್ಕೆ ಸೂಪಿಗಳು ಆಗಮಿಸಿದ ಕುರಿತಂತೆ ಚರಿತ್ರೆಯ ಪುಟಗಳಲ್ಲಿ ಹಾಗೂ ಯಾರು ಸೂಫಿಗಳು ಎಂಬ ವಾಖ್ಯಾನಗಳಲ್ಲಿ  ಹಲವಾರು ಗೊಂದಲಗಳಿವೆ. ಎಂಟನೆಯ  ಶತಮಾನದಲ್ಲಿ ಕಡಲ ಮೇಲೆ ಭಾರತದ ಕರಾವಳಿ ಪ್ರದೇಶಕ್ಕೆ ವಿಶೇಷವಾಗಿ ಕೇರಳಕ್ಕೆ (ಸುಲೇಮನ್ ಆಳ್ವಿಕೆ ಅವಧಿಯಲ್ಲಿ) ಬಂದ ಹಲವು ಸಂತರನ್ನು ಸೂಫಿಗಳು ಎಂದು ಭಾರತದ ಕಟ್ಟಾ ಸಂಪ್ರದಾಯ ಮನಸ್ಸಿನ ಮುಸ್ಲಿಂ ಇತಿಹಾಸಕಾರರು ವಾದಿಸುವುದುಂಟು. ವಾಸ್ತವವಾಗಿ ಅರಬ್ ನಿಂದ ಬಂದ ಧರ್ಮಪ್ರಚಾರಕರಲ್ಲ್ಲಿ ಯಾವ ಸೂಫಿ ಲಕ್ಷಣಗಳು ಕಂಡುಬರುವುದಿಲ್ಲ.
ಸೂಫಿಸಂ ವಿಚಾರಧಾರೆಯ ಅಂತಃಸತ್ವ ಎಂದು ನಾವು ಕರೆಯಬಹುದಾದ ತಸ್ವುಪ್ ಅಂದರೆ, ಅನುಭಾವ ಅಂಶವನ್ನು ಆಧಾರವಾಗಿಟ್ಟುಕೊಂಡು ಗಮನಿಸಿದರೆ ಇವರುಗಳನ್ನು ಸೂಫಿ ಸಂತರು ಎಂದು ಕರೆಯಲು ಮನಸ್ಸು ಒಪ್ಪುವುದಿಲ್ಲ. ಕಡಲಮೇಲೆ ಭಾರತಕ್ಕೆ ಬಂದ ಸೂಫಿಗಳು ಎಂದು ಕರೆಯುವವರೆಲ್ಲಾ ಕ್ರೈಸ್ತ ಮಿಷನರಿಗಳಂತೆ ಧರ್ಮಪ್ರಚಾರ ಮಾಡಿದವರು, ಪ್ರಾರ್ಥನಾ ಮಂದಿರ ನಿಮಿಸಿದವರು ಮತ್ತು ಸ್ಥಳೀಯ ಜನರನ್ನು ಮತಾಂತರಗೊಳಿಸಿದವರು. ಇವೊತ್ತಿನ ಕೇರಳ, ಕಾಸರಗೂಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹಳಷ್ಟು ಮುಸ್ಲಿಂರು  ಇವರಿಂದ ಮತಾಂತಗೊಂಡವರು.
ಅಧಿಕೃತವಾಗಿ ಪರ್ಷಿಯಾದಿಂದ ಕಾಲ್ನಡಿಗೆಯಲ್ಲಿ ಮತ್ತು ಭಾರತಕ್ಕೆ ಲಗ್ಗೆ ಇಟ್ಟ ಇಸ್ಲಾಂ ದೊರೆಗಳ ಜೊತೆ ಬಂದ ಸೂಫಿಗಳು ನಿಜವಾದ ಸೂಪಿ ಸಂತರು. ಇವರ ಆಗಮನವನ್ನು ನಮ್ಮ ನಡುವಿನ ಸಾಂಸ್ಕತಿಕ ಚಿಂತಕ ಡಾ. ರಹಮತ್ ತರೀಕೆರೆಭಾರತಕ್ಕೆ ಕುದುರೆ ಗೊರಸುಗಳ( ಹೆಜ್ಜೆ ಶಬ್ಧ) ಜೊತೆಗೆ ಕಂಬಳಿ ಮತ್ತು ಭಿಕ್ಷಾಪಾತ್ರೆಗಳು ಸಹ ಬಂದವುಎಂದು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.
ಭಾರತಕ್ಕೆ ಆಗಮಮಿಸಿದ ಸೂಫಿಗಳಲ್ಲಿ ಹಲವರು ರಾಜಾಶ್ರಯದಲ್ಲಿ ಬದುಕಿದರು, ಮತ್ತೇ  ಹಲವರು ದರ್ವೆಶಿಗಳಂತೆ, ಫಕೀರರಂತೆ ರಾಜಾಶ್ರಯ ಮತ್ತು ಪ್ರಭತ್ವವನ್ನು ಧಿಕ್ಕರಿಸಿ ಜನರ ನಡುವೆ ಭಾವಕ್ಯತೆಯ ಸಂಗಮದಂತೆ ಬದುಕಿದರು. ಕಾರಣಕ್ಕಾಗಿ  ಇವರೆಲ್ಲರೂ ಭಾರತದ ಜನ ಮಾನಸದಲ್ಲಿ ಧರ್ಮ ಮತ್ತು ಜಾತಿಯ ಗಡಿಗಳನ್ನೂ ಮೀರಿ ಜೀವಂತವಾಗಿದ್ದಾರೆಜೊತೆಗೆ ಭಾರತದ ನಾಥರು, ಸಿದ್ದರು, ಬೌದ್ದರು ಇವರುಗಳ ಜೊತೆ ಅನುಸಂಧಾನ ನಡೆಸಿ, ಭಾರತದ ಸಂಸ್ಕತಿಯ ಬಹು ಮುಖ್ಯ ಕೊಡುಗೆಗಳಾದ ಧ್ಯಾನ, ಯೋಗ, ಭಕ್ತಿಯ ಪರಾಕಾಷ್ಟೆ, ಸಿದ್ಧ ಔಷದ ಇವುಗಳನ್ನು ತಮ್ಮ ಸೂಫಿ ವಿಚಾರಧಾರೆ ಒಳಪಡಿಸಿಕೊಂಡರು.
                                                                    ಬಂದೆಲ್ ಶಾ

ಭಾರತದಲ್ಲಿ ಸೂಫಿಸಂ ವಿಚಾರ ಧಾರೆಯ ಅತಿ ಮುಖ್ಯ ಕೊಡುಗೆಯೆಂದರೆ, ಇಸ್ಲಾಂ ಧರ್ಮ ಎಂದರೆ, ಖಡ್ಗ, ಹಿಂಸೆ ಮತ್ತು  ಆಕ್ರಮಣ ಎಂಬ ನಂಬಿಕೆಯನ್ನು ಹೋಗಲಾಡಿಸಿ, ಜನರ ಮಧ್ಯೆ ಭಾವಕ್ಯತೆಯ ಸೇತುವೆಯನ್ನು ನಿರ್ಮಾಣ ಮಾಡಿದ್ದು. ದೆಹಲಿಯಲ್ಲಿ ಮೊಗಲ್ ದೊರೆಗಳು ಮತ್ತು ಸಿಖ್ಖರ ನಡುವೆ ಯುದ್ಧಗಳು ನಡೆಯುತ್ತಿದ್ದಾಗ, ಪಂಜಾಬಿನಲ್ಲಿ ಅನೇಕ ಸೂಫಿ ಸಂತರು ಮಾನವೀಯತೆಯ ಬೀಜ ಬಿತ್ತಿದರು. ದಿಶೆಯಲ್ಲಿ ಪಂಜಾಬಿನ ಬಂದೆಲ್ ಅತಿದೊಡ್ಡ ಸೂಫಿ ಸಂತ. 1680 ರಲ್ಲಿ ಇಂದಿನ ಲಾಹೋರ್ ಪ್ರಾಂತ್ಯದ ಕೌಸೂರ್ ಜಿಲ್ಲೆಯ ಪಂಡಕಿ ಎಂಬಲ್ಲಿ ಜನಿಸಿದ ಸಂತನ ಕುರಿತಂತೆ ಹಾಡುವ ಖವ್ವಾಲಿಗಳಲ್ಲಿ ಈತನ ಜೀವನ ಸಾಧನೆಯ ಅಂಶಗಳಿವೆಬುಲ್ಲೆ ಶಾ ಪಂಜಾಬಿ ಭಾಷೆಯಲ್ಲಿ ಬರೆದ ಅನೇಕ ಸೂಫಿ ಕಾವ್ಯಗಳು ಇವೊತ್ತಿಗೂ ಜನಪ್ರಿಯವಾಗಿವೆ. ಸಿಖ್ಖರ ಪರಮಗುರು ಗುರುನಾನಕ್ ಕೂಡ ಸೂಫಿ ವಿಚಾರಧಾರೆಯಿಂದ ಪ್ರಭಾವಿತರಾಗಿ ಸೂಫಿ ಸಂತರಂತೆ ತಮ್ಮ ಉಡುಪು ಧರಿಸುತ್ತಿದ್ದರು. ಮೊಗಲ್ ದೊರೆ ಹಾಗೂ ಔರಂಗಜೇಬನ ಸಹೋದರ ದಾರಾಶಿಕೊ(1615-1659) ತನ್ನ ಸಹೋದರನಿಂದ ಕೊಲೆಯಾಗುವ ಮುನ್ನ, ಅಮೃತಸರದ ಸ್ವರ್ಣದೇಗುಲಕ್ಕೆ ಅಸ್ತಿಭಾರ ಹಾಕಿದ್ದನುಸಿಖ್ಖರ ಗುರುವಾಣಿಯಲ್ಲಿ ಸೂಫಿ ಕಾವ್ಯದ ಲಕ್ಷಣಗಳನ್ನು ಮತ್ತು ಚಹರೆಗಳನ್ನು ನಾವು ಕಾಣಬಹುದು,
ಭಾರತದ ಸೂಫಿ ಗುರುಗಳು ಅಥವಾ ಸಂತರಲ್ಲಿ ಅತಿ ಮುಖ್ಯರಾದವರೆಂದರೆ,, ಖ್ವಾಜಾ ಮೊಹಿದ್ದೀನ್ ಚಿಸ್ತಿ, ಕುತ್ಬುದ್ದೀನ್, ನಿಜಾಮುದ್ದೀನ್ ಹಾಗೂ  ಫರೀದ್ದೀನ್ ಪ್ರಮುಖರು. ಇವರೆಲ್ಲರೂ ಆಫ್ಘಾನಿಸ್ಥಾನದ ಮೂಲದವರು. ಖ್ವಾಜಾ ಮೊಹಿದ್ದೀನ್, 1142 ರಲ್ಲಿ ಶಹಿಬುದ್ದೀನ್ ಘೋರಿ ಎಂಬ ಮುಸ್ಲಿಂ ದೊರೆಯ ಜೊತೆ ಭಾರತಕ್ಕೆ ಬಂದು ಅಂತಿಮವಾಗಿ 1192ರಲ್ಲಿ  ಅಜ್ಮೀರ್ ನಲ್ಲಿ ನೆಲೆ ನಿಂತು ಅಲ್ಲಿಯೆ ಮರಣಹೊಂದಿದರು. ಮೊಗಲ್ ದೊರೆ ಅಕ್ಬರ್ ಸಂತನ ಪರಮ ಅನುಯಾಯಿಯಾಗಿದ್ದ. ಕುತ್ಬುದ್ದೀನ್ 1265 ರಲ್ಲಿ ಭಾರತಕ್ಕೆ ಬಂದರೆ, 1335 ರಲ್ಲಿ ನಿಜಾಮುದ್ದಿನ್ (ಹಜರತ್ ನಿಜಾಮುದ್ದಿನ್ ಔಲಿಯ) ಭಾರತಕ್ಕೆ ಬಂದರು. ಇಬ್ಬರು ಸಂತರು ಹಿಂದೂ-ಮುಸ್ಲಿಂ ಭಾವ್ಯಕತೆಗೆ ಶ್ರಮಿಸುತ್ತಾ ದೆಹಲಿಯಲ್ಲಿ ನೆಲೆ ನಿಂತರು
                                             ದೆಹಲಿಯ ನಿಜಾಮುದ್ದೀನ್ ದರ್ಗಾ

                                                       ಅಜ್ಮೀರ್ ದರ್ಗಾ
ಫರೀದ್ದೀನ್ ಈಗಿನ ಪಾಕಿಸ್ಥಾನಕ್ಕೆ ಸೇರಿದ ಪಠಾನ್ ನಲ್ಲಿ ನೆಲೆ ನಿಂತರು. ಇವರೆಲ್ಲರೂ ಸೂಫಿ ವಿಚಾರಧಾರೆಯ ಶಾಖೆಗಳಾದ ಚಿಸ್ತಿಯಾ ಗುಂಪಿಗೆ ಸೇರಿರುವುದು ವಿಶೇಷ, ( ಇತರೆ ಗುಂಪುಗಳೆಂದರೆ, ನಶ್ಕ್ ಬಂದಿಯಾ, ಸುಹಾರ್ ವಾರ್ಡಿ ಮತ್ತು ಖ್ವಾದ್ರಿಯ) ಆದರೆ ಭಾರತದಲ್ಲಿ ಬಲವಾಗಿ ಬೇರುಬಿಟ್ಟಿದ್ದು ಚಿಸ್ತಿಯಾ ಗುಂಪಿನ ಸೂಫಿಗಳು ಮಾತ್ರ. ಭಾರತದ ಭಕ್ತಿ ಪರಂಪರೆಯನ್ನು ಅಳವಡಿಸಿಕೊಂಡು, ಎಲ್ಲೆಡೆ ಇವರು ಪ್ರಸಿದ್ಧರಾದರು. ದೆಹಲಿಯ ದೊರೆ ಮಹಮ್ಮದ್ ಬಿನ್ ತೊಘಲಕ್ ದೆಹಲಿಯಿಂದ ದೇವಗಿರಿಗೆ ( ಇಂದಿನ ಮಹಾರಾಷ್ಟ್ರದ ಔರಂಗಾಬಾದ್) ರಾಜಧಾನಿಯನ್ನು ವರ್ಗಾಯಿಸಿದಾಗ ಅವನ ಜೊತೆ ದಕ್ಷಿಣ ಭಾರತಕ್ಕೆ ಆಗಮಿಸಿದ ಬಂದೇ ನವಾಜ್ ಎಂಬ ಸಂತ ( ಈತ ದೆಹಲಿಯ ಹಜರತ್ ನಿಜಾಮುದ್ದೀನ್ ಅವರ ಶಿಷ್ಯ) ಕರ್ನಾಟಕದ ಗುಲ್ಬರ್ಗಾದಲ್ಲಿ ನೆಲೆಸಿದನು. ಹೀಗೆ ಭಾರತದ ಭಕ್ತಿ ಪರಂಪರೆ ಹಾಗೂ ಸ್ಥಳಿಯ ಸಂಸ್ಕತಿಯನ್ನು ಒಳಗೊಳ್ಳುತ್ತಾ ಬೇರೂರಿದ ಸೂಫಿ ಪರಂಪರೆ ಇಂದು ಇಡೀ ಭಾರತದ ನೆಲದಲ್ಲಿ ಇಲ್ಲಿನ ಜನರ ಬದುಕಿನಲ್ಲಿ ಧರ್ಮ, ಭಾಷೆ, ಜಾತಿಗಳನ್ನು ಮೀರಿ ಮಿಳಿತಗೊಂಡಿದೆ ಇದಕ್ಕೆ ಉದಾಹರಣೆಯಾಗಿ ಅನೇಕ ಸೂಫಿ ಸಂತರ ಗೋರಿಗಳಿಗೆ ( ದರ್ಗಾ) ನಮ್ಮ ಹಿಂದುಗಳು ಭಕ್ತಿಯಿಂದ ನಡೆದುಕೊಳ್ಳುವುದನ್ನು ನಾವು ಗಮನಿಸಬಹುದು.
ಭಾರತದ ಸೂಫಿ ಪರಂಪರೆಯ ನೆಲೆಯಲ್ಲಿ ಸುಂದರ ಸೂಫಿ ಕಾವ್ಯ ರಚಿಸಿದ ಕವಿಗಳಲ್ಲಿ ಅಮೀರ್ ಖುಷ್ರು ಮತ್ತು ಮಹಾತ್ಮ ಕಭೀರ್ ಅತಿ ಮುಖ್ಯರಾದವರು.

                                                                    ಅಮೀರ್ ಖುಷ್ರೂ

14 ನೆ ಶತಮಾನದಲ್ಲಿ ಬದುಕಿದ್ದ ಅಮೀರ್ ಖುಷ್ರು ಭಾರತದ ಅತಿ ದೊಡ್ಡ ಸೂಪಿ ಕವಿ ಮತ್ತು ಸಂಗೀತಗಾರ. (1253-1325) ಟರ್ಕ್ ಮೂಲದ ಯೋಧ ಮತ್ತು ಭಾರತದ ರಜಪೂತ ಮಹಿಳೆ ದಂಪತಿಗಳಿಗೆ ಜನಿಸಿದ ಅಮೀರ್ ಖುಷ್ಟು ತನ್ನ ಜೀವಿತಾವಧಿಯಲ್ಲಿ ಮೂರು ರಾಜಮನೆತಗಳಲ್ಲಿ ಅಸ್ಥಾನದ ಕವಿಯಾಗಿ, ಸಂಗೀತಗಾರನಾಗಿ ಸೇವೆ ಸಲ್ಲಿಸಿದವನು. ದೆಹಲಿಯ ಹಜರತ್ ನಿಜಾಮುದ್ದೀನ್ ಅವರ ಪರಮ ಆರಾಧಕ ಮತ್ತು ಶಿಷ್ಯನಾಗಿದ್ದ ಅಮೀರ್ಖುಷ್ರು ತಾನು ನಿಧನಾನಂತರ ನಿಜಾಮುದ್ದೀನ್ ಸಮಾಧಿ ಬಳಿ ಮಣ್ಣು ಮಾಡಬೇಕೆಂದು ವಿನಂತಿಸಿಕೊಂಡಿದ್ದ. ಅದರಂತೆ ಅವರ ಕಾಲು ಬಳಿ ಖುಷ್ರು ಸಮಾಧಿಯನ್ನು ನಿರ್ಮಿಸಲಾಗಿದೆ.
ದೆಹಲಿಯ ನಿಜಾಮುದ್ದೀನ್ ದರ್ಗಾದ ಬಳಿ ಅವನ ಸೂಫಿ ಪ್ರೇಮ ಕಾವ್ಯಗಳನ್ನು ಇಂದಿಗೂ ಹಾಡಲಾಗುತ್ತಿದೆ.

       ಧರೆಯ ಮೇಲೆ
       ಸ್ವರ್ಗವೆನ್ನುವುದು
       ಇರುವುದಾದರೆ,
       ಅದು ಇಲ್ಲೆ, ಇಲ್ಲೆ, ಇಲ್ಲೆ,

          ಹಾಗೂ
    ಖುಷ್ರು, ಪ್ರೇಮ ನದಿಯ
    ಹರಿವು ತಿರುವು-ಮುರುವಾಗಿದೆ
    ಇದರೊಳೆಗೆ ಇಳಿದವನು
    ಮುಳುಗುತ್ತಾನೆ, ಆದರೆ
    ಮುಳುಗಿದವನು ಭವಸಾಗರವ
    ದಾಟುತ್ತಾನೆ.  
   ಇವುಗಳು ಅಮೀರ್ ಖುಷ್ರು ವಿನ ಕಾವ್ಯದ ತುಣುಕುಗಳು.

                                                     ಮಹಾತ್ಮ ಕಭೀರ್
ಇನ್ನೂ ಮಹಾತ್ಮ ಕಭೀರನದು ಈತ ಸೃಷ್ಟಿಸಿದ  ಭಕ್ತಿ ಮತ್ತು ಸೂಫಿ ಕಾವ್ಯಗಳು ಹಿಂದು-ಇಸ್ಲಾಂ ಧರ್ಮಗಳ ಭಾವಕ್ಯತೆ ಕೊಂಡಿಯ ಪ್ರತೀಕಗಳಾಗಿವೆ. ವಾರಾಣಿಸಿಯಲ್ಲಿ ಹಿಂದೂ ಬ್ರಾಹ್ಮಣ ವಿಧವೆಗೆ ಜನಿಸಿದ ಕಭಿರ್ ನನ್ನು ಅವನ ತಾಯಿ ಗಂಗಾ ನದಿಯ ತಟದಲ್ಲಿ ಮಲಗಿ ಹೋದಾಗ  ನೇಯ್ಗೆ ಕಸುಬಿನ ಮುಸ್ಲಿಂ ಕುಟುಂಬವೊಂದು ಈತನನ್ನು ಸಾಕಿ ಸಲುಹಿತು. ಹಾಗಾಗಿ ಕಭೀರ್ ಎರಡು ಧರ್ಮಗಳ ಸಂಗಮದಂತೆ ಬದುಕಿ ಬಾಳಿದ.( 1440-1518) ಅವನ ಭಕ್ತಿ ಪರವಶತೆಯ ಕಾವ್ಯ ಮತ್ತು ಪರಧರ್ಮ ಸಹಿಷ್ಟುತೆಯ ಕಾವ್ಯ  ಇವುಗಳು ದೋಹಾ  ಎಂಬ ಹೆಸರಿನಲ್ಲಿ ಉತ್ತರ ಭಾರತದಲ್ಲಿ ಇಂದಿಗೂ ಜನಪ್ರಿಯವಾಗಿವೆ.
         ಹೂ ಅರಸುತ್ತಾ
         ಉದ್ಯಾನವನಕ್ಕೆ
         ತೆರಳಬೇಡ
         ನಿನ್ನ ಶರಿರವೇ
         ಹೂ ಗಿಡವಾಗಿರುವಾಗ
         ಹೂವನೇತೆಕೆ ಅರಸುವೆ?
         ಬಾ ಇಲ್ಲಿ ಕುಳಿತಿಕೊ
         ನಿನ್ನ ದೇಹದಲ್ಲಿ ಸಾವಿರ
         ಕಮಲಗಳು ಅರಳುವುದ
        ನೀನು ಗಮನಿಸು.


                                                                        ಆದಿಲ್ ಶಾ
ಭಾರತದಲ್ಲಿ ಸೂಫಿ ವಿಚಾರಧಾರೆ ಯಾವ ಯಾವ  ರೂಪಗಳಲ್ಲಿ ನಮ್ಮ ಸಂಸ್ಕತಿಯಲ್ಲಿ ಮಿಳಿತವಾಗಿದೆ. ಎಂಬುದನ್ನು ಗುರುತಿಸುವುದು ನಿಜಕ್ಕೂ ಕಷ್ಟದ ಕೆಲಸ. ಬಿಜಾಪುರದ ಎರಡನೇಯ ಇಬ್ರಾಹಿಂ ಕಿತಾಬ್ ನವರಸ್ ಕೃತಿ ರಚಿಸಿ, ಅದರಲ್ಲಿ ಸರಸ್ವತಿ ದೇವರರನ್ನು ಸ್ತುತಿಸಿದ್ದಾನೆ. ಇವನ ಭಾವಕ್ಯಕದ ಬೇರುಗಳನ್ನು ಹುಡುಕುತ್ತಾ ಹೊರಟರೆ, ಈತನ ಅಜ್ಜ  ಬಿಜಾಪುರದ ಆದಿಲ್ ಶಾಹಿ ಮೂಲತಃ ಪಷಿಯಾ ದೇಶದಿಂದ ಬಂದವನು. ಅಲ್ಲಿನ ದೊರೆ ಮುರಾದ್ ಎರಡನೇ ಪುತ್ರನಾಗಿ ಜನಿಸಿದ್ದ್ದ ಆದಿಲ್ ಶಾಹಿತಂದೆಯಿಂದ ರೂಪಿತವಾಗಿದ್ದ ಕೊಲೆಯ ಸಂಚನ್ನು ತಾಯಿಯಿಂದ ತಿಳಿದು, ಅರಮನೆಯಿಂದ ತಪ್ಪಿಸಿಕೊಂಡು ವ್ಯಾಪಾರಸ್ಥರೊಡನೆ ಭಾರತಕ್ಕೆ ಬಂದವನು, ನಂತರ ಗುಲ್ಬರ್ಗಾದ ಬಹುಮನಿ ಸುಲ್ತಾನನ ಬಳಿ ಸಿಪಾಯಿಯಾಗಿ ನೇಮಕಗೊಂಡವನು. ಅವನ ಸೇವೆಯನ್ನು ಮೆಚ್ಚಿ ಬಹಮನಿ ಸುಲ್ತಾನರು ಆದಿಲ್ ಶಾಹಿಯನ್ನು ತಮ್ಮ ಅಧೀನದಲ್ಲಿದ್ದ ಬಿಜಾಪುರದ ಮಾಂಡಲೀಕನನ್ನಾಗಿ ಮಾಡಿದರು. ವಿಜಯನಗರ ಅರಸರ ಜೊತೆ ನಡೆದ ಯುದ್ದದಲ್ಲಿ ಬಹುಮನಿ ಸುಲ್ತಾನರ ಅಡಳಿತ ಪತನಗೊಂಡಾಗ ಆದಿಲ್ ಶಾಹಿ ಬಿಜಾಪುರದ ಸ್ವತಂತ್ರ ದೊರೆಯಾಗಿ ರೂಪುಗೊಂಡ, ತಾನು ಬಿಜಾಪುರದ  ದೊರೆಯಾದರೂ ತಾನು ಹುಟ್ಟಿ ಬೆಳೆದ ನಾಡಾದ ಪಷಿಯಾ ದೇಶದ ಸೂಫಿ ಸಂಸ್ಕøತಿಯ ಅಂತಃಸತ್ವವಾದ ಭಾವಕ್ಯತೆಯನ್ನು ತನ್ನ ಆಡಳಿತಕ್ಕೆ ರೂಢಿಸಿಕೊಳ್ಳುವುದರ ಜೊತೆಗೆ ತನ್ನ ಮಗ ಎರಡನೇ ಆದಿಲ್ ಶಾಹಿ ಹಾಗೂ ಮೊಮ್ಮಗ  ಇಬ್ರಾಹಿಂಗೂ  ಇದನ್ನು ಧಾರೆಯೆರೆದ. ಹಾಗಾಗಿ ಬಿಜಾಪುರದಲ್ಲಿ ಆದಿಲ್ ಶಾಹಿ ಆಳ್ವಿಕೆಯಲ್ಲಿ ನೂರಾರು ಸೂಫಿ ಸಂತರು ಬಂದು ನೆಲೆ ನಿಂತರು
                                                     ಎರಡನೇ ಇಬ್ರಾಹಿಂ
ಈಗಲೂ ಸಹ ಬಿಜಾಪುರ ನಗರವೊಂದರಲ್ಲಿ ಮುವತ್ತಕ್ಕೂ ಹೆಚ್ಚು ಸೂಫಿ ಸಂತರ ಗೋರಿಗಳಿವೆ. ಕಾರಣದಿಂದಾಗಿ ಬಿಜಾಪುರ ಮತ್ತು ಗುಲ್ಬರ್ಗ ದಲ್ಲಿ  ತೀಕ್ಷ್ಣವಾಗಿ ಪ್ರಭಾವ ಬೀರಿದ ಸೂಫಿ ವಿಚಾರಧಾರೆ ಹೈದರಾಬಾದ್  ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಹಲವು ತತ್ವ ಪದಕಾರರಮೇಲೆ ದಟ್ಟ ಪ್ರಭಾವ ಬೀರಿದೆ, ಇವರಲ್ಲಿ ಶಿಶುನಾಳ ಷರೀಪ, ಸಾವಳಗಿ ಶಿವಲಿಂಗ, ತಿಂತಿಣಿ ಮೋನಪ್ಪ, ಶಿರಹಟ್ಟಿ ಫಕೀರೇಶ್ವರ, ಕೊಡೇಕಲ್ ಬಸವಣ್ಣ ಮುಖ್ಯರಾದವರು.
ಗೆಳೆಯರೇ
ಖಲೀಲ್ ಗಿಬ್ರಾನ್ ಒಂದು ಪ್ರಸಿದ್ಧ ಮಾತಿದೆ. “ನನ್ನಮ್ಮ ಕವಿಯಾಗಿರಲಿಲ್ಲ, ಆದರೆ ಕವಿತೆಯಾಗಿ ಬದುಕಿದಳುಅಂತಾಬಹು ಮುಖಿ ಸಂಸ್ಕøತಿಯ ನೆಲವಾದ ಭಾರತದಲ್ಲಿ ಎಲ್ಲರೂ ಸೂಫಿ ಸಂತರಂತೆ ಅಥವಾ ಕವಿಗಳಂತೆ ಬದುಕದಿದ್ದರೂ ಈ ನೆಲದ  ಹಲವರ ಮಾತುಗಳಲ್ಲಿ ಸೂಫಿ ಸಂತರ ಗುಣವಿದೆ. ಎರಡು ದಶಕಗಳ ಹಿಂದೆ ಲಂಕೇಶರು ಹೇಳಿದಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರಎಂಬ ಮಾತಾಗಲಿ ಅಥವಾ  ಭಾರತ ವಿಭಜನೆಯ ಸಂದರ್ಭದಲ್ಲಿ ನಮ್ಮ ಪಂಡಿತ ರಾಜಗುರುಗಳಿಗೆ ( ಹಿಂದೂಸ್ಥಾನಿ ಗಾಯಕ) ಗುರುವಾಗಿದ್ದ ಬಡೆ ಮಿಯಾ ಖಾನ್ ಅವರು  ಹೇಳಿದಇಲ್ಲಿನ ಜನಕ್ಕೆ ಸಂಗೀತ ಅರ್ಥವಾಗಿದ್ದರೆ, ಭಾರತ ವಿಭಜನೆಯಾಗುತ್ತಿರಲಿಲ್ಲ ಎಂಬ ಮಾತು ಮತ್ತು ಶಹನಾಯ್ ವಾದಕ ಬಿಸ್ಮಿಲ್ಲಾ ಖಾನರನ್ನು ಅಮೇರಿಕಾದಲ್ಲಿ ವಾಸ ಮಾಡಲು ಆಹ್ವಾನಿಸಿದಾಗ, “ ನನ್ನ ಜೊತೆ ಗಂಗಾ ನದಿಯನ್ನು ಮತ್ತು ಕಾಶಿ ವಿಶ್ವನಾಥನನ್ನು ತಂದು ಕೊಟ್ಟರೆ ನಾನು ಅಮೇರಿಕಾಕ್ಕೆ ಬರಲು ಸಿದ್ಧಎಂದು ಹೇಳಿದ ಮಾತುಗಳು ಇವೆಲ್ಲವೂ ನನಗೆ ಸೂಫಿ ಸಂತರ ಮಾತಿನಂತೆ ತೋರಿವೆ,
ನಾವು ಬದುಕುತ್ತಿರುವ ವರ್ತಮಾನದ ಬದುಕಿನಲ್ಲಿ ಹಲವು ರೂಪಗಳಲ್ಲಿ ನಮ್ಮನ್ನು ಆವರಿಸಿಕೊಂಡಿರುವ ಸೂಫಿ ತತ್ವ ಇವೊತ್ತಿನ ಸಮಾಜದ ಎಲ್ಲಾ ವಿಕಾರಗಳಿಗೆ ಮತ್ತು ಮನುಷ್ಯನ ವಿಕೃತಿಗಳಿಗೆ ಮದ್ದಾಗಬಲ್ಲದು ಎಂಬುದು ನನ್ನ ಧೃಢವಾದ ನಂಬಿಕೆ.
             (ಮೈಸೂರು ರಂಗಾಯಣದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಭಂಧ)
                                                                                              ಮುಗಿಯಿತು.