ಮಂಗಳವಾರ, ಡಿಸೆಂಬರ್ 23, 2014

ಆಂಧ್ರ ದಲಿತ ಸಾಹಿತ್ಯದ ಹೊಸಬೆಳಕು- ಸತ್ಯನಾರಾಯಣ




ಭಾರತೀಯ ಸಾಹಿತ್ಯಕ್ಕೆ ಆತ್ಮ ಕಥನಗಳ ಮೂಲಕ ಹೊಸ ಸಂವೇದನೆ ಮತ್ತು ದೃಷ್ಟಿಕೋನವನ್ನು ನೀಡಿದ ಮರಾಠಿ ಭಾಷೆಯ ದಲಿತ ಮತ್ತು ಹಿಂದುಳಿದ ಜನಾಂಗದ ಆತ್ಮ ಕಥೆಗಳು ಇತರೆ ಭಾಷೆ ಮತ್ತು ಲೇಖಕರ ಮೇಲೆ ಅಗಾಧ ಪರಿಣಾಮವನ್ನು ಬೀರಿರುವುದನ್ನು ನಾವು ತಳ್ಳಿ ಹಾಕುವಂತಿಲ್ಲ. ಜೊತೆಗೆ ಆಯಾ ಭಾಷೆಯಲ್ಲಿನ ಹೊಸ ಸಾಹಿತ್ಯದ ಸೃಷ್ಟಿ ಮತ್ತು ಸೃಜನಶೀಲತೆಗೆ ಪರೋಕ್ಷವಾಗಿ ಕಾರಣವಾದವು. ಹಾಗಾಗಿ ಕಳೆದೊಂದು ದಶಕದಿಂದ ಕನ್ನಡ, ತೆಲುಗು, ತಮಿಳು ಸಾಹಿತ್ಯದಲ್ಲಿ ದಮನಿತರ ಲೋಕದ ಅನುಭವಗಳು ಆತ್ಮಕಥಾನಕದ ಮೂಲಕ ಅನಾವರಣಗೊಂಡು  ಈವರೆಗೆ ನಾವು ಕಾಣದ, ಕೇಳಿರದ ನರಕ ಸದೃಶ್ಯ ಲೋಕವೊಂದು ನಮ್ಮೆದುರು ಬಿಚ್ಚಿಕೊಳ್ಳುವುದರ ಜೊತೆಗೆ, ನಾವು ಬದುಕುತ್ತಿರುವ ವರ್ತಮಾನದ ಜಗತ್ತಿನಲ್ಲಿ ಇಂತಹದ್ದೊಂದು ಅಮಾನವೀಯ ಮತ್ತು ಕ್ರೌರ್ಯದ ಲೋಕ ಕೂಡ ಇತ್ತೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿವೆ. ಅಂತಹದೊಂದು ಆತ್ಮ ಕಥೆಯನ್ನು ಆಂಧ್ರದ ದಲಿತ ಕುಟುಂಬದಿಂದ ಬಂದ ನನ್ನ ಆತ್ಮೀಯ ಗೆಳಯರೂ ಆಗಿರುವ  ವೈ.ಬಿ. ಸತ್ಯನಾರಾಯಣರವರು ಇಂಗ್ಲೀಷ್ ಭಾಷೆಯಲ್ಲಿ ಬರೆದಿರುವಮೈ ಪಾದರ್ ಬಾಲಯ್ಯಆತ್ಮ ಕಥೆ ಈಗಾಗಲೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ.



                                                         (ಲೇಖಕರ ತಂದೆ ಬಾಲಯ್ಯ)

ಹೈದರಾಬಾದ್ ಉಸ್ಮಾನಿಯ ವಿಶ್ವ ವಿದ್ಯಾಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ. ಪದವಿ ಪಡೆದು ಮೂರು ದಶಕಗಳ ಕಾಲ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿರುವ ವೈ.ಬಿ.ಸತ್ಯನಾರಾಯಣ ಅವರು ಡಾ. ಅಂಬೇಡ್ಕರ್ ಅವರ ಕಟ್ಟಾ ಹಿಂಬಾಲಕರು ಮತ್ತು ಅವರ ಚಿಂತನೆಗಳ ಆರಾಧಕರು. ಕಳೆದ ಇಪ್ಪತ್ತೈದು ವರ್ಷಗಳಿಂದ ತೆಲುಗು ದಲಿತ ಸಾಹಿತ್ಯ  ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡವರಲ್ಲಿ ಪ್ರಮುಖರು. 2006 ರಲ್ಲಿ ಸಾವಿರಾರು ದಲಿತರ ಜೊತೆಗೂಡಿ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ಅಪ್ಪಿಕೊಂಡ ಸತ್ಯನಾರಾಯಣರು ಸಿಕಂದರಾಬಾದ್ ನಗರದಲ್ಲಿ ವಾಸವಾಗಿದ್ದು, ಹೈದರಾಬಾದ್ ನಗರದಲ್ಲಿರುವದಲಿತ ಅಧ್ಯಯನ ಕೇಂದ್ರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನನ್ನಪ್ಪ ಬಾಲಯ್ಯಎಂಬ ವೈ.ಬಿ.ಸತ್ಯನಾರಾಯಣರ ಆತ್ಮ ಕಥನ ಆಂಧ್ರದ ಮಾದಿಗ ಜನಾಂಗದ ಮೂರು ತಲೆಮಾರುಗಳ ಹೋರಾಟದ ಕಥೆಯನ್ನು ಒಳಗೊಂಡಿರುವ ಅಪರೂಪದ ಕೃತಿ. ಐದು ವರ್ಷಗಳ ಹಿಂದೆ ಅಮೇರಿಕಾದಲ್ಲಿರುವ ತನ್ನ ಪುತ್ರಿಯ ಮನೆಗೆ ಹೋದಾಗ, ಮುದ್ದಾದ  ಮೊಮ್ಮಗಳನ್ನು ನೋಡಿ ಸ್ಪೂರ್ತಿಗೊಂಡ ಲೇಖಕರು, ಮುಂದಿನ ದಿನಗಳಲ್ಲಿ ನನ್ನ ಮೊಮ್ಮಗಳು ಅಮೇರಿಕಾದ ಇತಿಹಾಸ ಮತ್ತು  ಕರಿಯರ ಹೋರಾಟದ ಕಥನವನ್ನು ಓದುತ್ತಾಳೆ. ಅವಳು ಕಥೆಯ ಜೊತೆಗೆ ಕರಿಯರಿಗಿಂತ ಕೀಳಾಗಿ ಬದುಕಿದ  ತನ್ನ ಕುಟುಂಬದ ಹಿರಿಯರ ಬಲಿದಾನದ ಕಥನವನ್ನು ಓದಲಿ ಎಂಬ ಆಸೆಯಿಂದ ಕೃತಿಯನ್ನು ರಚಿಸಿದೆ ಎಂದು ದಾಖಲಿಸಿದ್ದಾರೆ. (ಇಂಡಿಯ ಟುಡೆ ಪತ್ರಿಕಾ ಬಳಗದ ಹಾರ್ಪರ್ಸ್ ಕಾಲಿನ್ ಲಿಮಿಟೆಡ್ ನವದೆಹಲಿ ಸಂಸ್ಥೆಯು 2011ರಲ್ಲಿ ಕೃತಿಯನ್ನು   ಪ್ರಕಟಿಸಿದೆಬಡತನ, ಹಸಿವು, ಅಪಮಾನ, ಕ್ರೌರ್ಯ ಇವುಗಳಿಗೆ ಭಾಷೆ, ಜಾತಿ ಅಥವಾ ಪ್ರಾದೇಶಿಕತೆಯ ಹಂಗಿಲ್ಲ ಎಂಬ ಸಂದೇಶವನ್ನು ಸಾರುವ ಕೃತಿಯಲ್ಲಿ  ಲೇಖಕರ ತಾತ ನರಸಯ್ಯ ಎಂಬಾತ ಬಾಲಕನಾಗಿದ್ದ ತನ್ನ ಪುತ್ರ ಬಾಲಯ್ಯನೊಂದಿಗೆ(ಲೇಖಕರ ತಂದೆ) ಹುಟ್ಟಿದ ಊರಾದ ಕರೀಂ ನಗರ ಜಿಲ್ಲೆಯ ವೆಂಗಪಲ್ಲಿಯನ್ನು ತೊರೆಯುವ ಹೃದಯ ವಿದ್ರಾವಕ ಸನ್ನಿವೇಶದೊಂದಿಗೆ  ಕಥೆ  ಆರಂಭವಾಗುತ್ತದೆ


ನರಸಯ್ಯ ಸತ್ತು ಹೋದ ತನ್ನ ಪತ್ನಿಯ ಶವವನ್ನು ಹೆಗಲಿಗೆ ಬಟ್ಟೆಯೊಂದರಲ್ಲಿ ಗಂಟಿನಂತೆ ಕಟ್ಟಿಕೊಂಡು, ತನ್ನ ಮಗ ಬಾಲಕ  ಬಾಲಯ್ಯನನ್ನು ( ಲೇಖಕರ ತಂದೆ) ಕೈ ಹಿಡಿದು ಕೊಂಡು ಇಳಿ ಸಂಜೆಯಲ್ಲಿ  ಊರು ತೊರೆದು ನದಿ ತೀರದಲ್ಲಿ ನಡುರಾತ್ರಿಯಲ್ಲಿ  ಏಕಾಂಗಿಯಾಗಿ ಪತ್ನಿಯ ಶವಸಂಸ್ಕಾರ ಮಾಡುತ್ತಾನೆ. ನಂತರ ತಾಯಿಯಿಲ್ಲದ ತಬ್ಬಲಿ ಮಗನ ಜೊತೆ ರಘುನಾಥಪಲ್ಲಿ ಎಂಬ ಊರಿನಲ್ಲಿದ್ದ ರೈಲ್ವೆ ನಿಲ್ದಾಣಕ್ಕೆ ಬಂದು ಪರಿಚಿತ ಗೆಳೆಯನ ಮೂಲಕ ಕೂಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಗೂಡ್ಸ್ ಗಾಡಿಗಳಿಗೆ ಧವಸ ಧಾನ್ಯಗಳು ಮತ್ತು ಕಲ್ಲಿದ್ದಲು ತುಂಬುವ ದಿನಗೂಲಿಯಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ಕಾಲದ ಬ್ರಿಟೀಷ್ ಅಧಿಕಾರಿಗಳ ಕೈ ಕೆಳೆಗೆ ದುಡಿದ ನರಸಯ್ಯ, ಪ್ರಥಮ ಬಾರಿಗೆ  ಅಸ್ಪøಶ್ಯತೆಯ ಬೇಡಿಯಿಂದ  ಕಳಚಿಕೊಳ್ಳುತ್ತಾನೆ. ಹೀಗೆ ಸಾಗುವ ಕಥೆಯಲ್ಲಿ ಸ್ವಾತಂತ್ರ್ಯ ಪೂರ್ವದ ಆಂಧ್ರ ಪ್ರದೇಶದ ತೆಲಂಗಾಣ ಪ್ರಾಂತ್ಯದಲ್ಲಿ ಇದ್ದ ಆಚರಣೆಗಳು, ಹಳ್ಳಿಗಳ ರಚನೆ, ಗ್ರಾಮದೇವತೆಯ ಹಬ್ಬಗಳು, ಹೊಲೆ ಮಾದಿಗರೆನಿಸಿಕೊಂಡ ಮನುಷ್ಯರು ಕಮ್ಮ ಜಾತಿಯ ಜಮೀನ್ದಾರರರ ಕೈಯಲ್ಲಿ ನರಳಿದ ಹೃದಯ ವಿದ್ರಾವಕ ಘಟನೆಗಳು ಆತ್ಮ ಕಥನದಲ್ಲಿ ಪರಿಣಾಮಕಾರಿಯಾಗಿ ದಾಖಲಾಗಿವೆ.
ಲೇಖಕರ ಮುತ್ತಾತ ಚಮ್ಮಾರ ನರಸಯ್ಯ ಇಡೀ ಹಳ್ಳಿಯಲ್ಲಿ ದಲಿತರ ನಡುವೆ ತನ್ನ ನಡೆ ನುಡಿಗಳಿಂದ ಹೆಸರಾಗಿದ್ದವನು. ಒಮ್ಮೆ ಹೈದರಾಬಾದಿನ ನಿಜಾಮ ತನ್ನ ಕುದುರೆ ಸಾರೋಟಿನಲ್ಲಿ ವೆಂಗಪಲ್ಲಿ ಹಳ್ಳಿಯನ್ನು ಹಾಯ್ದು ಹೋಗುವ ಕಾರ್ಯಕ್ರಮದ ವಿಷಯ ತಿಳಿದ ನರಸಯ್ಯ, ನಿಜಾಮನಿಗಾಗಿ ಆಗ ತಾನೆ ಹುಟ್ಟಿ ಸತ್ತು ಹೋಗಿದ್ದ ಕರುವಿನ ಮೃದುವಾದ  ಚರ್ಮದಿಂದ ಒಂದು ಜೊತೆ ಸುಂದರ ವಾದ ಚಪ್ಪಲಿಗಳನ್ನು  ತಯಾರಿಸಿ, ತನ್ನ ಹೆಗಲ ಮೇಲಿನ ಕರವಸ್ತ್ರದಲ್ಲಿ ಇಟ್ಟುಕೊಂಡು ಕೊಂಡೊಯ್ದು ನಿಜಾಮನಿಗೆ ಉಡುಗೊರೆ ಯಾಗಿ ಅರ್ಪಿಸುತ್ತಾನೆ. ಚಪ್ಪಲಿಯನ್ನು ಕಾಲಿಗೆ ಧರಿಸಿ ನೋಡಿದ ನಿಜಾಮನಿಗೆ ಅವುಗಳ ನಿಖರವಾದ ಳತೆ ಮತ್ತು ಕಲಾತ್ಮಕತೆಯಿಂದ ಕೂಡಿದ ತಯಾರಿಕೆಯನ್ನು ಖುಷಿಯಾಗುತ್ತದೆಸಂತಸಗೊಂಡ ನಿಜಾಮನು ಸ್ಥಳದಲ್ಲೇ ಅಧಿಕಾರಿಗಳಿಗೆ ತಾಕೀತು ಮಾಡಿ ಚಮ್ಮಾರ ನರಸಯ್ಯನಿಗೆ  ಐವತ್ತು ಎಕರೆ ಜಮೀನನ್ನು ಉಡುಗೊರೆಯಾಗಿ ಮಂಜೂರು ಮಾಡುತ್ತಾನೆ.


ವಿಷಯ ತಿಳಿದ ಊರಿನ ಜಮೀನ್ದಾರ ನರಸಯ್ಯನನ್ನು ಮನೆಗೆ ಕರೆಸಿಮಾದಿಗ ಸೂಳೆ ಮಗನೆ ಜಮೀನು ಪಡೆಯಲು ನಿನಗೆ ಯಾವ ಹಕ್ಕು ಕೊಟ್ಟವರು ಯಾರು? ಎಂದು ಬೆದರಿಕೆ ಹಾಕಿ ಐವತ್ತು ಎಕರೆ ಜಮೀನಿನಲ್ಲಿ ಎರಡು ಎಕರೆ ಹೊರತು ಪಡಿಸಿ ಉಳಿದ ನಲವತ್ತೆಂಟು ಎಕರೆ ಜಮೀನಿಗೆ ನರಸಯ್ಯನಿಂದ ಹೆಬ್ಬೆಟ್ಟಿನ ಸಹಿ ಪಡೆದು ತನ್ನದಾಗಿಸಿಕೊಳ್ಳುತ್ತಾನೆ. ನರಸಯ್ಯನಿಗೆ ಜಮೀನು ಕಳೆದುಕೊಂಡ ಬಗ್ಗೆ ಯಾವುದೇ ನೋವಾಗಲಿಲ್ಲ ಬದಲಾಗಿ, ದಿನ ನನ್ನನ್ನು ಕಂಬಕ್ಕೆ ಕಟ್ಟಿ ಜಮೀನ್ದಾರ ಹೊಡೆಯಲಿಲ್ಲ ಎಂಬ ಖುಷಿಯೇ ಹೆಚ್ಚಾಯಿತು. ವೇಳೆಗಾಗಲೇ ಚಮ್ಮಾರ ನರಸಯ್ಯನ ಮಗ ನರಸಯ್ಯ ( ಲೇಖಕರ ತಾತನ ಹೆಸರು ಕೂಡ ನರಸಯ್ಯ) ಜಮೀನ್ದಾರನ ಮನೆಯಲ್ಲಿ ಜೀತದಾಳು ಆಗಿ ಕೆಲಸ ಮಾಡುತ್ತಿರುತ್ತಾನೆ. ಮೇಲ್ಜಾತಿಯವರನ್ನು ಹೊರತು ಪಡಿಸಿ ದಲಿತರು, ಹಿಂದುಳಿದವರು ಜಮೀನು ಹೊಂದುವುದು, ವ್ಯವಸಾಯ ಮಾಡುವುದು ಕಾಲದ ತೆಲಂಗಾಣ ಪ್ರಾಂತ್ಯದಲ್ಲಿ  ಅಪರಾಧ ಎಂಬ ಅಲಿಖಿತ ಕಾನೂನು ಜಾರಿಯಲ್ಲಿತ್ತು. ಇಂತಹ ಅಸಹನೀಯ ವಾತಾವರಣದಲ್ಲಿ ಚಮ್ಮಾರ ನರಸಯ್ಯ ಮತ್ತು ಆತನ ಪತ್ನಿ ಪೋಚಮ್ಮ ಧಣಿಯ ಮನೆಯಲ್ಲಿ ಮಗ ನರಸಯ್ಯನನ್ನು ಜೀತದಾಳು ಕೆಲಸಕ್ಕೆ ಇರಿಸಿ, ತಾವು ಹೊಲದಲ್ಲಿ ಪುಕ್ಕಟೆಯಾಗಿ ದುಡಿಯುತ್ತಿದ್ದರು. ಫಸಲು ಬಂದ ಸಮಯದಲ್ಲಿ ಧಣಿ ನೀಡುತ್ತಿದ್ದ ಕೆಲವು ಬುಟ್ಟಿಗಳಷ್ಟು ಬತ್ತ ಮತ್ತು ಜೋಳ ಅವರ ಪಾಲಿಗೆ ಆಹಾರ ಮತ್ತು ಕೂಲಿಯ ಪ್ರತಿಫಲವಾಗಿತ್ತು.
ಇಂತಹ ನರಕದ ಬದುಕಿನಿಂದ ಪಾರಾಗಲು ಜೀತದಾಳಾಗಿ ದುಡಿಯುತ್ತಿದ್ದ ಲೇಖಕರ ತಾತ ನರಸಯ್ಯ, ಮುಂದಿನ ದಿನಗಳಲ್ಲಿ ತನ್ನ ತಂದೆ ಮತ್ತು ತಾಯಿ ನಿಧಾನಾನಂತರ ಊರು ತೊರೆಯಲು ಯೋಚಿಸುತ್ತಾ ಇರುತ್ತಾನೆ. ಆಕಸ್ಮಿಕವೆಂಬಂತೆ ನಂತರದ ದಿನಗಳಗಳಲ್ಲಿ ತನ್ನ ಪತ್ನಿ ಅಬ್ಬಮ್ಮನ ಅಕಾಲಿಕ ಸಾವಿನ ನಂತರ, ಇದ್ದ ಎರಡು ಎಕರೆ ಜಮೀನನ್ನು ಹಾಗೇ ಬಿಟ್ಟು ಮಗನ ಜೊತೆ  ಊರು ತೊರೆಯುತ್ತಾನೆ.
ಹುಟ್ಟಿದ ಊರು  ತೊರೆದ ನರಸಯ್ಯ, ತನ್ನ ಮಗ ಬಾಲಕ ಬಾಲಯ್ಯನನ್ನು ರೈಲು ನಿಲ್ದಾಣಗಳಲ್ಲಿ ಬೆಳಸುತ್ತಾ, ಮುಂದೆ ಆತನಿಗೂ ಬ್ರಿಟೀಷ್ ಅಧಿಕಾರಿಗಳ ಕೈ  ಕಾಲು ಹಿಡಿದು  ರೈಲ್ವೆ ಇಲಾಖೆಯಲ್ಲಿ ಕೂಲಿ ಕೆಲಸ ಕೊಡಿಸುತ್ತಾನೆ. ಹೀಗೆ ಆಂಧ್ರ ಪ್ರದೇಶದಲ್ಲಿ ಹಲವಾರು ನಿಲ್ದಾಣಗಳಲ್ಲಿ ಕೂಲಿಯಾಳಾಗಿ ದುಡಿದು ಅಂತಿಮವಾಗಿ ಸಿಕಂದರಬಾದ್ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವ ಬಾಲಯ್ಯ ಕೂಲಿ ಕಾರ್ಮಿಕರ ಗುಡಿಸಲಿನಲ್ಲಿ ಬದುಕುತ್ತಾ, ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾನೆ.
ಲೇಖಕರು ತಮ್ಮ ಆತ್ಮ ಕಥನದಲ್ಲಿ ತನ್ನ ತಂದೆಯ ಆದರ್ಶಗಳನ್ನು ಹೀಗೆ ಬಣ್ಣಿಸುತ್ತಾರೆ. “ ನನ್ನ ಅಪ್ಪ ಬಾಲÀಯ್ಯ ಅಂಬೇಡ್ಕರ್ ಅವರನ್ನು ಓದಿಕೊಂಡಿರಲಿಲ್ಲ, ಅನಕ್ಷರಸ್ತನಾಗಿದ್ದ ಅಪ್ಪನಿಗೆ ಅಂಬೇಡ್ಕರ್ ಪ್ರತಿಪಾದಿಸಿದ್ದಶಿಕ್ಷಣವೊಂದೇ ಅಸ್ಪøಶ್ಯತೆ ಮತ್ತು ಅಪಮಾನ, ಬಡತನಗಳಿಂದ ಪಾರಾಗಲು ದಲಿತರಿಗೆ ಇರುವ ಏಕೈಕ ಮಾರ್ಗಎಂಬ ವಿಚಾರವೂ ತಿಳಿದಿರಲಿಲ್ಲ. ಆದರೆ, ನನ್ನ ಮಕ್ಕಳು ರೈಲ್ವೆ ಅಧಿಕಾರಿಗಳ ಮಕ್ಕಳಂತೆ ಒಳ್ಳೆಯ ಶಾಲೆಗಳಲ್ಲಿ ಓದಬೇಕು ಮತ್ತು ರೈಲ್ವೆ ಇಲಾಖೆಯಲ್ಲಿ ಗುಮಾಸ್ತರಾಗಿ, ಇಲ್ಲವೆ ಸ್ಟೇಶನ್ ಮಾಸ್ಟರ್ ಗಳಾಗಿ ದುಡಿಯಬೇಕು. ಇವಿಷ್ಟೇ ಆತನ ಕನಸುಗಳಾಗಿದ್ದವು. ರೈಲ್ವೆ ಇಲಾಖೆಯೇ ಪ್ರಪಂಚವಾಗಿದ್ದ ನನ್ನಪ್ಪ ಎಂದೂ ನನ್ನ ಮಕ್ಕಳು ..ಎಸ್. ಅಥವಾ ಡಾಕ್ಟರ್ ಇಲ್ಲವೆ ಇಂಜಿನಿಯರ್ ಆಗಬೇಕೆಂದು ಕನಸು ಕಂಡವನಲ್ಲ.





ಜೀತದ ಬದುಕಿನಿಂದ ಬಸವಳಿದು, ಭಾರತೀಯ ರೈಲ್ವೆ ಇಲಾಖೆಯಲ್ಲಿ  ಕೂಲಿ ಮಾಡುತ್ತಾ, ಊರಿಂದ ಊರಿಗೆ ಅಲೆದು, ಸ್ವಾತಂತ್ರ್ಯ ಪಡೆಯುವ ಹಾಗೂ ಆಧುನಿಕ ಶಿಕ್ಷಣದಿಂದ ಜಾತಿ, ಅಪಮಾನಗಳನ್ನು ಮೀರಿ ಬೆಳೆಯುವ ಒಂದು ದಲಿತ ಕುಟುಂಬದ ಮೂರು ತಲೆಮಾರುಗಳ ಆತ್ಮ ಕಥನದಲ್ಲಿ ಮೊದಲ ಭಾಗದಲ್ಲಿ ತನ್ನ ತಂದೆ, ತಾತ, ಮುತ್ತಾತ ಇವರ ಕಥೆಯಿದ್ದರೆ, ಎರಡನೆಯ ಭಾಗದಲ್ಲಿ ಸಿಕಂದರಬಾದ್ ನಗರದಲ್ಲಿ ನಾಲ್ಕನೆಯ ತರಗತಿಗೆ ಶಾಲೆಗೆ ದಾಖಲಾಗುವ ಘಟನೆಯ ಮೂಲಕ ಲೇಖಕರ ಆತ್ಮ ಕಥೆ ಸ್ವಗತ ಶೈಲಿಯಲ್ಲಿ ಆರಂಭವಾಗುತ್ತದೆ.

 ಇತ್ತೀಚೆಗಿನ ದಿನಗಳಲ್ಲಿ ಆತ್ಮಕಥೆಗಳು ಅತಿಯಾದ ಆತ್ಮರತಿ ಇಲ್ಲವೆ ಓದುಗರ ಅನುಕಂಪ ಗಿಟ್ಟಿಸುವ ಶೈಲಿಯಲ್ಲಿ ಸೃಷ್ಟಿಯಾಗುತ್ತಿರುವುದು ವಿಪರ್ಯಾಸ. ಆದರೆ, ಎರಡು ಶೈಲಿಯನ್ನು ತೊರೆದು ಅತ್ಯಂತ ನಿರ್ಭಾವುಕ ಶೈಲಿಯಲ್ಲಿ ಕಥನವನ್ನು ಕಟ್ಟಿಕೊಟ್ಟಿರುವ ಲೇಖಕ ವೈ.ಬಿ. ಸತ್ಯನಾರಾಯಣ ಅವರು, ಆತ್ಮ ಕಥನ ಕುರಿತು ಬರೆಯುತ್ತಾ, ಇನ್ನು ಮುಂದೆ ನಾವು ಒಂದಾನೊಂದು ಊರಿನಲ್ಲಿ ಒಬ್ಬ ಬಡ ಬ್ರಾಹಣನಿದ್ದ ಎಂಬ ಕಥೆಯನ್ನು ಓದುವುದನ್ನು ನಿಲ್ಲಿಸೊಣ, ನಮ್ಮದೇ ಆದ ನೋವಿನ ಅಪಮಾನದ ಚರಿತ್ರೆಯನ್ನು  ಬರೆಯೋಣಎಂದಿರುವ ಮಾತುಗಳು ಪ್ರತಿಯೊಂದು  ಶೋಷಿತ ಸಮುದಾಯದಿಂದ ಬಂದು  ಅಕ್ಷರ ಲೋಕಕ್ಕೆ ತೆರೆದುಕೊಂಡ ದಲಿತರಿಗೆ ಮತ್ತು ದಮನಿತರಿಗೆ  ಆತ್ಮವಿಶ್ವಾಸ ತುಂಬುವ ಮಾತುಗಳಂತೆ ತೋರುತ್ತವೆ.

ಶುಕ್ರವಾರ, ನವೆಂಬರ್ 14, 2014

ಅನುವಾದದ ಸಂಕಟ ಮತ್ತು ಸಂಭ್ರಮಗಳು



ಅನುವಾದ ಕುರಿತಂತೆ ಇದು ನನ್ನ ವೈಯಕ್ತಿಕ ಅನಿಸಿಕೆ ಮಾತ್ರವೇ ಹೊರತು ಇಂದು ಅಂತಿಮ ಸತ್ಯವೇನಲ್ಲ. ಏಕೆಂದರೆ, ಅನುವಾದ ಕುರಿತಂತೆ ಎದ್ದಿರುವ ವಾದ ವಿವಾದಗಳಿಗೆ ಶತಮಾನಗಳ ಇತಿಹಾಸವಿದೆ. ಪ್ರಖ್ಯಾತ ಬರಹಗಾರ ಶೆಲ್ಲಿ ,,,, ಹೇಳಿರುವಂತೆಅನುವಾದವೆಂಬುದು ಒಂದು ಭಾಷೆಯ ಸಾಹಿತ್ಯ ಮತ್ತು ಸಂಸ್ಕತಿ ಮತ್ತೊಂದು ಭಾಷೆ ಮತ್ತು ಸಂಸ್ಕತಿಗೆ ನದಿಯಂತೆ ನಿರಂತರ ಹರಿಯುವ ಪ್ರವಾಹ ಮಾತಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿರುವ ಕವಿ ರಾಬರ್ಟ್ ಪ್ರಾಸ್ಟ್ಕವಿತೆಯೆಂದರೆ, ಅನುವಾದದಲ್ಲಿ ಕಳೆದುಹೋದ ನಂತರ ಸೃಷ್ಟಿಯಾಗುವ ಸಾಹಿತ್ಯಎಂದು ವ್ಯಂಗ್ಯವಾಗಿ ಪ್ರತಿಕ್ರಿಯಸಿದ್ದಾನೆ. ಅನುವಾದ ಕುರಿತಂತೆ ಇರುವ ಇಂತಹ ವೈರುಧ್ಯಗಳನ್ನು ಗಮನಿಸಿರುವ ನಮ್ಮ ನಡುವಿನ ಶ್ರೇಷ್ಠ ಚಿಂತಕ ಹಾಗೂ ಭಾಷಾ ತಜ್ಞ ನೋಂ ಚಾಮ್ಸ್ಕಿಅನುವಾದವೆಂಬುವುದು ವೃತ್ತವನ್ನು ಚೌಕ ಮಾಡುವುದು ಇಲ್ಲವೆ, ಚೌಕವನ್ನು ವೃತ್ತ ಮಾಡುವ ಪ್ರಕ್ರಿಯೆಎಂದು ಅರ್ಥಪೂರ್ಣವಾಗಿ ವಾಖ್ಯಾನಿಸಿದ್ದಾರೆ.
ಹಾಗಾದರೆ ಅನುವಾದ ಎಂದರೆ ಏನು? ಶಬ್ಧಾನುವಾದವೆ? ಭಾವಾನುವಾದವೆ? ಅಥವಾ ಮೂಲ ಭಾಷೆಯಿಂದ ಅನುವಾದ ಮಾಡಿದರೆ ಮಾತ್ರ ಅದು ಶ್ರೇಷ್ಠ ಅನುವಾದವಾಗಬಲ್ಲುದೆ? ಮೂಲ ಭಾಷೆಯಿಂದ ಜಗತ್ತಿನ ಸಂಪರ್ಕ ಮತ್ತು ಸಂವಹನ ಭಾಷೆಯಾಗಿರುವ ಇಂಗ್ಲೀಷ್ ಭಾಷೆಯ ಮೂಲಕ ಅನುವಾದಗೊಂಡಿರುವ ಕೃತಿಗಳನ್ನು ಆಯಾ ಪ್ರದೇಶಗಳ ಮಾತೃ ಭಾಷೆಗೆ ಅನುವಾದ ಮಾಡಿದರೆ, ಮೂಲ ಕೃತಿಯ ಭಾಷೆಯ ಸೊಗಡು ಮತ್ತು ಸಂಸ್ಕøತಿ ಅನುವಾದ ಕ್ರಿಯೆಯಲ್ಲಿ ಸೋರಿ ಹೋಗಬಲ್ಲದೆ? ಇಂತಹ ಪ್ರಶ್ನೆಗಳಿಗೆ ಇಂದಿಗೂ ನಿಖರವಾದ ಉತ್ತರ ದೊರೆತಿಲ್ಲ.

ನನ್ನ ದೃಷ್ಟಿಯಲ್ಲಿ ಅನುವಾದವೆಂಬುವುದು ಆಯಾ ಲೇಖಕನ ಮನೋಧರ್ಮ ಮತ್ತು ಸೃಜನಶೀಲ ಕ್ರಿಯೆಗೆ ಒಳಪಟ್ಟ ಸಂಗತಿ. ತನ್ನಲ್ಲದ ಭಾಷೆಯ ಒಂದು ಶ್ರೇಷ್ಠ ಕೃತಿ, ಅದು ಕವಿತೆಯಾಗಿರಬಹುದು, ಕಥೆಯಾಗಿರಬಹುದು, ಇಲ್ಲವೆ ಕಾದಂಬರಿಯಾಗಿರಬಹುದು ಅವನ ಎದೆ ತಟ್ಟಿ, ಇದನ್ನು ತನ್ನ ಮಾತೃ ಭಾಷೆಯ ಓದುಗರೊಡನೆ ಹಂಚಿಕೊಳ್ಳುವ ಅವನ ಅಭಿಲಾಷೆಗೆ ಪೂರಕವಾಗಿ ನೇರವಾಗಿ ಮೂಲ ಭಾಷೆಯಿಂದ ಅಥವಾ ಇನ್ನೊಂದು ಭಾಷೆಯ ಮೂಲಕ ನೆರವೇರುವ ಕ್ರಿಯೆ. ಅನುವಾದದಲ್ಲಿ ಮೂಲ ಭಾಷೆಯ ಸೊಗಡು ಮತ್ತು ಸಾಮಥ್ರ್ಯ ಅನುವಾದಕನ ಸೃಜನಶೀಲತೆಯ ಮೇಲೆ ಅವಲಂಬಿತವಾಗಿರುತ್ತದೆ. ದೇವನೂರು ಮಹಾದೇವ ಅವರಸಂಬಂಜ ಅನ್ನೋದು ದೊಡ್ದು ಕನಎಂಬ ಕನ್ನಡದ ಪರಿಣಾಮಕಾರಿಯಾದ ಶಬ್ದವನ್ನು ಬೇರೊಂದು ಭಾಷೆಯಲ್ಲಿ ಪರಿಣಾಮಕಾರಿಯಾಗಿ ಹಿಡಿದಿಡಲು ಸಾಧ್ಯವೆ?

ಮೂಲ ಭಾಷೆಯಿಂದ ಅನುವಾದಗೊಂಡ ಕೃತಿಗಳು ಮಾತ್ರ ಶ್ರೇಷ್ಠ್ರ ಅನುವಾದದ ಕೃತಿಯಾಗಬಲ್ಲವು ಎಂಬ ಮಾತು ನನ್ನ ದೃಷ್ಟಿಯಲ್ಲಿ ಒಂದು ಅತಾರ್ಕಿಕ ಚಿಂತನೆ. ಇದನ್ನು ನಂಬಿಕೊಂಡಿದ್ದರೆ ನಮಗೆ ಗ್ರೀಕ್ ದುರಂತ ನಾಟಕಗಳಾಗಲಿ, ಮಹಾ ಕಾವ್ಯಗಳಾಗಲಿಅರಬ್ ಭಾಷೆಯಲ್ಲಿ ಸೃಷ್ಟಿಯಾದ ಸೂಫಿ ಸಂತರ ಕಾವ್ಯ, ಪರ್ಷಿಯನ್ ಭಾಷೆಯಲ್ಲಿ ರಚಿತವಾಗಿದ್ದ ಉಮರಖಯಾನ ರುಬಾಯಿಗಳು, ಮಿರ್ಜಾ ಗಾಲಿಬನ ಘಜಲ್ ಗಳು, ಅಷ್ಟೇ ಏಕೆ? ರಷ್ಯಾದ ಗಾರ್ಕಿ , ಟಾಲ್ಸ್ಟಾಯ್ ನಂತಹ ಮಹಾನುಭಾವರು ಜಗತ್ತಿಗೆ ದಕ್ಕುತ್ತಿರಲಿಲ್ಲ.

ನನ್ನ ಅನುವಾದಕ್ಕೆ ಯಾವತ್ತೂ .ಕೆ. ರಾಮಾನುಜನ್ ಆದರ್ಶವಾಗಿದ್ದಾರೆ. ಅನುವಾದ ಕುರಿತ ಎಲ್ಲಾ ಕಟ್ಟು ಪಾಡುಗಳನ್ನು ಮೀರಿ ಅದು ಇಂಗ್ಲೀಷ್ ಭಾಷೆಯಾಗಿರಲಿ, ಕನ್ನಡವಾಗಿರಲಿ, ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಸರಳವಾಗಿ ಅನುವಾದ ಮಾಡುವುದು ಅವರ ವಿಶಿಷ್ಠ ವಿಧಾನಗಳಲ್ಲಿ ಒಂದು. ಅವರು ದಕ್ಷಿಣ ಭಾರತದ ಜಾನಪದ ಕಥೆಗಳನ್ನು, ಕನ್ನಡದ ವಚನಗಳನ್ನು ಮತ್ತು ದಕ್ಷಿಣ ಏಷ್ಯಾದಲ್ಲಿ ಪ್ರಚಲಿತದಲ್ಲಿರುವ ವಿವಿಧ ಬಗೆಯ ರಾಮಾಯಣಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸುವಾಗ, ವಿಕ್ಟೋರಿಯಾ ಕಾಲದ ಕ್ಲಾಸಿಕ್ ಇಂಗ್ಲೀಷ್ ಭಾಷೆಯನ್ನು ಪ್ರಜ್ಞಾ ಪೂರ್ವಕವಾಗಿ ನಿರಾಕರಿಸಿದರು. ವಚನ ಗಳ ಇಂಗ್ಲೀಷ್ ಅನುವಾದಕ್ಕೆ ಅವರು ಇಟ್ಟಿರುವ ಶೀರ್ಷಿಕೆಸ್ಪೀಕಿಂಗ್ ವಿತ್ ಸಿವ (ಗಮನಿಸಿಶಿವಅಲ್ಲ.) ಕಾರಣಕ್ಕಾಗಿಯೇ ಅವರ ಕನ್ನಡದ ಕವಿತೆಗಳು ತಮ್ಮ ಸರಳತೆಯಿಂದಾಗಿ ಇಂದಿಗೂ ಕಾವ್ಯ ಪ್ರೇಮಿಗಳ ಎದೆಯಲ್ಲಿ ಜೀವಂತವಾಗಿವೆ.
ಭಾರತದ ಸಂದರ್ಭದಲ್ಲಿ ಭಾಷೆ, ಜಾತಿ, ಧರ್ಮ ಎಂಬ ಭೇದ ಭಾವವಿಲ್ಲದೆ ತಮ್ಮ ಕಣ್ಣೆದುರು ಕಂಡ ಮನ ಕಲಕುವ ಸಂಗತಿಗಳನ್ನು ಪರಿಣಾಮಕಾರಿಯಾಗಿ ಅಕ್ಷರದಲ್ಲಿ  ಹಿಡಿದಿಟ್ಟಿರುವ  ಎಲ್ಲಾ ಪ್ರಕಾರದ ಸಾಹಿತ್ಯ ಅನುವಾದಕ್ಕಾಗಿ ನನ್ನನ್ನು ಸದಾ ಉದ್ದೀಪಿಸುತ್ತದೆ. ನನಗೆ ಕವಿ, ಕಥೆಗಾರ ಅಥವಾ ಕಾದಂಬರಿಕಾರ ಯಾವ ಧರ್ಮದವನು, ಯಾವ ಜಾತಿಯವನು, ಅಥವಾ ಯಾವ ಭಾಷೆಯವನು ಎಂಬುದು ಮುಖ್ಯವಲ್ಲ. ಅವನ ಕೃತಿಯಷ್ಟೇ ಮುಖ್ಯ.
( ಕುವೆಂಪು ಭಾಷಾ ಭಾರತಿ( ಅನುವಾದ ಅಕಾಡೆಮಿ) ಪರವಾಗಿ ಡಾ.ಅನುಪಮ ಕೇಳಿದ ಪ್ರತಿಕ್ರಿಯೆಗೆ ನೀಡಿದ ಲಿಖಿತ ಉತ್ತರ)