ಶನಿವಾರ, ನವೆಂಬರ್ 17, 2018

.ಗಾನ ಸರಸ್ವತಿ ಡಿ.ಕೆ.ಪಟ್ಟಮ್ಮಾಳ್


ಕೆ.ಪಟ್ಟಮ್ಮಾಳ್ಭಾರತದ ಬಹುತೇಕ ನಗರಗಳಿಗೆ ಅವುಗಳದೇ ಆದ ಚಾರಿತ್ರಿಕ ಹಿನ್ನಲೆ ಹಾಗೂ ಅಸ್ಮಿತೆಗಳು ಇರುವ ಹಾಗೆ ಕೆಲವು ವಿಶಿಷ್ಟ ಲಕ್ಷಣಗಳು ಅವುಗಳೊಂದಿಗೆ ಮಿಳಿತಗೊಂಡಿರುತ್ತವೆ. ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಒಂದಾದ ಹಾಗೂ ಚೆನ್ನೈ ಎಂದು ಕರೆಸಿಕೊಳ್ಳುವ ಮದ್ರಾಸ್ ನಗರದ ಜೊತೆ ಸಂಗೀತ ಮತ್ತು ನೃತ್ಯಗಳೆರೆಡು ಮಿಳಿತಗೊಂಡಿವೆ. ಬ್ರಿಟೀಷ್ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ಮದ್ರಾಸ್ ಪ್ರೆಸಿಡೆನ್ಸಿಯ ರಾಜಧಾನಿಯಾಗಿದ್ದ ಮದ್ರಾಸ್ ನಗರ ಸಂಗೀತ ಮತ್ತು ನೃತ್ಯ ಕಲೆಗಳ ಪೋಷಕ ಕೇಂದ್ರವಾಗಿ ಬೆಳೆಯಲು ಐತಿಹಾಸಿಕ ಹಿನ್ನಲೆಯೂ ಕೂಡ ಇದೆ.

ಸಂಸ್ಥಾನಗಳ ರಾಜಾಶ್ರಯದಲ್ಲಿ ಬೆಳೆದುಬಂದ ಸಂಗೀತ ಮತ್ತು ನೃತ್ಯಕಲೆಗಳೆರೆಡು ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ರಾಜಮಹಾರಾಜರ ಆಶ್ರಯ ಕಳೆದುಕೊಂಡಾಗ ಶತಮಾನಗಳುದ್ದಕ್ಕೂ  ಇವುಗಳನ್ನು ನಂಬಿಕೊಂಡು ಬಂದಿದ್ದ ಕಲಾವಿದರ ಕುಟುಂಬಗಳು ತಂಜಾವೂರು, ಮಧುರೈ, ರಾಮನಾಡ್, ಹೀಗೆ ಹಲವು ಸಂಸ್ಥಾನಗಳಿಂದ ವಲಸೆ ಬಂದು ಮದ್ರಾಸ್ ನಲ್ಲಿ ನೆಲೆ ನಿಂತರು. ಅಲ್ಲಿಯವರೆಗೆ ಕೇವಲ ಆಡಳಿತ ಹಾಗೂ ಶಿಕ್ಷಣದ ಕೇಂದ್ರವಾಗಿದ್ದ ಮದ್ರಾಸ್ ನಗರ ಸಂಗೀತ ಮತ್ತು ನೃತ್ಯ ಕಲೆಗಳ ಕಾಶಿಯಾಗಿ ಪರಿವರ್ತನೆಗೊಂಡಿತು. ಜನಸಮಾನ್ಯರ ಕಿವಿಯ ಮೇಲೆ ಕರ್ನಾಟಕ ಸಂಗೀತದ ಕೀರ್ತನೆಗಳು, ಕೃತಿಗಳು ವಿವಿಧ ರಾಗಗಳ ಮೂಲಕ ಬೀಳತೊಡಗಿದಂತೆ ಮದ್ರಾಸ್ ನಗರದ ಜನತೆಯ ಬದುಕಿನಲ್ಲಿ ಸಂಗೀತವೆಂಬುದು ಒಂದು ಅವಿಭಾಜ್ಯ ಅಂಗವಾಗಿ ಹೋಯಿತು.
ಇಂದಿಗೂ ಸಹ ಚೆನ್ನೈ ನಗರದ ಮಧ್ಯಮ ವರ್ಗ ಹಾಗೂ ಬ್ರಾಹಣ ಸಮುದಾಯದಲ್ಲಿ  ಹಬೆಯಾಡುª ಸ್ಟ್ರಾಂಗ್À ಫಿಲ್ಟರ್ ಕಾಫಿ, ಹಿಂದೂ ಅಥವಾ ಇಂಡಿಯನ್ ಎಕ್ಸ್ ಪ್ರಸ್ ದಿನಪತ್ರಿಕೆ ಮತ್ತು ತಮ್ಮ ಮನೆಯ ರೇಡಿಯೋದಲ್ಲಿ ಅಲೆ ಅಲೆಯಾಗಿ ಕೇಳಿಬರುವ ಕರ್ನಾಟಕ ಸಂಗೀತ ಇವೆಲ್ಲವೂ ಅವರ ದೈನಂದಿನ ಬದುಕಿನ ಭಾಗವಾಗಿವೆ. ಶತಮಾನದ ಹಿಂದೆ ಮೈಲಾಪುರ್ ಮತ್ತು ಟ್ರಿಪ್ಲಿಕೇನ್ ಹಾಗೂ ಜಾರ್ಜ್ಟೌನ್ ಪ್ರದೇಶದಲ್ಲಿ ಮಾತ್ರ ಸಂಗೀತ ಕಛೇರಿಗಳು ಏರ್ಪಾಡಾಗುತ್ತಿದ್ದವು. ಇತ್ತೀಚೆಗಿನ ವರ್ಷಗಳಲ್ಲಿ ಮದ್ರಾಸ್ ಮ್ಯೂಸಿಕ್, ಅಕಾಡೆಮಿ, ನಾರದ ಗಾನ ಸಭಾ, ಕೃಷ್ಣ ಗಾನ ಸಭಾ, ಮೈಲಾಪುರ್ ರಸಿಕ ರಂಜನಿ ಸಭಾ ಸಂಸ್ಥೆಗಳು ಸೇರಿದಂತೆ ಅನೇಕ ಕಡೆ ಚೆನ್ನೈ ನಗರವೊಂದರಲ್ಲಿ ಪ್ರತಿ ದಿನ ಐವತ್ತಕ್ಕೂ ಹೆಚ್ಚು ಸಂಗೀತ ಕಛೇರಿಗಳು ಜರುಗುತ್ತಿವೆ. ಡಿಸಂಬರ್ ಮತ್ತು ಜನವರಿಯಲ್ಲಿ ಹಗಲ- ಸಂಜೆ ಹೀಗೆ ನಿರಂತರವಾಗಿ ಸಂಗೀತ ಕಛೇರಿಗಳು ಸಂಗೀತೋತ್ಸವದ ಮಾದರಿಯಲ್ಲಿ ನಡೆಯುತ್ತವೆ. ಇದರÀ ಹಿಂದೆ ಸಂಗೀತ ಜ್ಞಾನವುಳ್ಳ ಸಂಗೀತ ರಸಿಕರು ಪರೋಕ್ಷವಾಗಿ ಕಾರಣರಾಗಿದ್ದಾರೆ.
ಇಂತಹ ಸಂಗೀತದ ಅಭಿರುಚಿಗೆ ಕಾರಣರಾದ ಸಂಗೀತ ಮತ್ತು  ನೃತ್ಯಗಳ ಎಲ್ಲಾ ಪ್ರಕಾರಗಳ ಕಲಾವಿದರು ಹಾಗೂ ಕಲಾವಿದೆಯರ ಪಟ್ಟಿ ದೊಡ್ಡದಿದೆ. ಅವರಲ್ಲಿ ಕೆಲವು ವಿದ್ವಾಂಸರು ಮತ್ತು ವಿದುಷಿಯರೂ ಇಂದಿಗೂ ಸಹ ಪ್ರಾತಃಸ್ಮರಣೀಯರಾಗಿದ್ದಾರೆ. ಅಂತಹವರಲ್ಲಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಗಾನಸರಸ್ವತಿ ಎಂದು ಹೆಸರಾಗಿದ್ದ ಡಿ.ಕೆ.ಪಿ. ಎಂದು ತಮಿಳುನಾಡಿನಲ್ಲಿ ಜನಪ್ರಿಯವಾಗಿದ್ದ ದಾಮಲ್ ಕೃಷ್ಣಮೂರ್ತಿ ಪಟ್ಟಮ್ಮಳ್  ಪ್ರಮುಖರು. ಕರ್ನಾಟಕ ಸಂಗೀತ ಲೋಕದಲ್ಲಿ ಸಂಗೀತಕ್ಕೆ ಭದ್ರವಾದ ತಳಹದಿ ಹಾಕಿದ ವಾಗ್ಗೇಯಕಾರರಾದ ತ್ಯಾಜರಾಜರು, ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾಶಾಸ್ತ್ರಿಗಳನ್ನು ತ್ರಿಮೂರ್ತಿಗಳೆಂದು ಕರೆಯಲಾಗುತ್ತದೆ. ಅದೇ ರೀತಿ ಹಾಡುಗಾರಿಕೆಯಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ, ಡಿ.ಕೆ.ಪಟ್ಟಮ್ಮಾಳ್ ಮತ್ತು ಎಂ.ಎಲ್. ವಸಂತಕುಮಾರಿ ಇವರನ್ನು ಕರ್ನಾಟಕ ಸಂಗೀತದ ಮೂರು ರತ್ನಗಳು ಎಂದು ಕರೆಯಲಾಗುತ್ತದೆ.
ಕರ್ನಾಟಕ ಸಂಗೀತವೆಂದರೆ, ಪುರುಷಲೋಕದ ಸ್ವಾಮ್ಯ ಅಥವಾ ಜಗತ್ತು ಎಂದು ನಂಬಿಕೊಂಡಿದ್ದ ಕಾಲದಲ್ಲಿ ಅಂದರೆ, ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ವೀಣಾ ಧನಮ್ಮಾಳ್, ಬೆಂಗಳೂರು ನಾಗರತ್ನಮ್ಮ, ಮದ್ರಾಸ್ ಲಲಿತಾಂಗಿ,  ಮುಂತಾದವರು ಸೃಷ್ಟಿಸಿದ ಕಿರುದಾರಿಯನ್ನು ಹೆದ್ದಾರಿಯನ್ನಾಗಿ ಮಾರ್ಪಡಿಸಿದ ಕೀರ್ತಿ ಮೂವರು ಸಂಗೀತ ಲೋಕದ ತ್ರಿದೇವತೆಗಳಾದ ಎಂ.ಎಸ್. ಸುಬ್ಬುಲಕ್ಷ್ಮಿ, ಡಿ.ಕೆ.ಪಟ್ಟಮ್ಮಾಳ್ ಮತ್ತು ಎಂ.ಎಲ್.ವಸಂತಕುಮಾರಿಯವರಿಗೆ ಸಲ್ಲುತ್ತದೆ. ಇವರ ಜೊತೆಗೆ ತಾರುಣ್ಯದಲ್ಲಿ ಅಕಾಲಿಕ ಮೃತ್ಯುವಿಗೆ ತುತ್ತಾದ ಎಂ.ಎನ್. ವಸಂತಕೋಕಿಲ, ಕೊಯಮತ್ತೂರು ತಾಯಿ ಮುಂತಾದವರ ಸಾಧನೆಯನ್ನು ನಾವು ಮರೆಯುವಂತಿಲ್ಲ.

ಕಾಂಚಿಪುರಂ ಪಟ್ಟಣದ ಸಂಪ್ರದಾಯಸ್ಥ ಹಾಗೂ ಸಂಗೀತದಲ್ಲಿ ಅಭಿರುಚಿಯಿದ್ದ ಬ್ರಾಹ್ಮಣ ಕುಟುಂಬದಲ್ಲಿ1919 ಮಾರ್ಚ್ 28 ರಂದು ಜನಿಸಿದ ಪಟ್ಟಮ್ಮಾಳ್ ಅಮ್ಮನವರು ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಮೂರು ವಿಶಿಷ್ಟ ಕಾರಣಕ್ಕೆ ಮುಖ್ಯರಾಗಿ ನಿಲ್ಲುತ್ತಾರೆ. ಮೊದಲನೆಯದಾಗಿ ಸಂಗೀತ ಮತ್ತು ನೃತ್ಯವೆಂದರೆ, ಅವುಗಳು ದೇವದಾಸಿ ಸಮುದಾಯದಿಂದ ಬಂದ ಕಲಾವಿದರ ವೃತ್ತಿ ಅಥವಾ ಹವ್ಯಾಸ ಎಂಬ ನಂಬಿಕೆಯಿದ್ದ ಕಾಲಘಟ್ಟದಲ್ಲಿ ಪ್ರಪಥಮವಾಗಿ ಸಾರ್ವಜನಿಕ ಸಂಗೀತ ಕಛೇರಿ ನಡೆಸಿಕೊಟ್ಟ ಬ್ರಾಹ್ಮಣ ಹೆಣ್ಣು ಮಗಳು ಅವರಾದರು. ಎರೆಡನೆಯದಾಗಿ ಅತ್ಯಂತ ಕ್ಲಿಷ್ಟಕರವಾದ ಹಾಗೂ ಪುರುಷ ಕಲಾವಿದರಿಗೆ ಸೀಮಿತವಾಗಿದ್ದ ರಾಗಂ.ತಾಳಂ ಪಲ್ಲವಿಯನ್ನು ಸಂಗೀತ ಕಛೇರಿಯಲ್ಲಿ ಹಾಡತೊಡಗಿದ ಮಹಿಳಾ ಕಲಾವಿದೆ ಎನಿಸಿಕೊಂಡರು. ಮೂರನೆಯದಾಗಿ ಭೈರವಿ ರಾಗದಲ್ಲಿ ನಿಷ್ಣಾತ ಕಲಾವಿದೆ ಎಂಬ ಗೌರವಕ್ಕೆ ಪಾತ್ರರಾದುದಲ್ಲದೆ, ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಿಗೆ ಹೆಚ್ಚಿನ ಪಾಧಾನ್ಯತೆಯನ್ನು ತಂದುಕೊಟ್ಟರು. ಡಿ.ಕೆ.ಪಟ್ಟಮ್ಮಾಳ್ ಅವರ ನಿಜನಾಮಧೇಯ ಅಲಮೇಲು ಎಂಬುದಾಗಿತ್ತು. ಇವರ ಗಾಯನದ ಮೋಡಿಗೆ ಒಳಗಾದ ತಮಿಳಿನ ಪ್ರಸಿದ್ಧ ಕವಿ ಹಾಗೂ ಗೀತರಚನಕಾರ ವೈರಮುತ್ತು ಇವರನ್ನು ಪಾಟ್ಟು ಅಮ್ಮಾಳ್ ( ಹಾಡುಗಳ ದೇವತೆ) ಎಂದು ಕರೆದರು. ಅದು ಸಂಗೀತ ರಸಿಕರ ಮನದಲ್ಲಿ ಶಾಸ್ವತವಾಗಿ ಉಳಿದು ನಿಜಕ್ಕೂ ಹಾಡಿನ ದೇವತೆಯಂತೆ ಸುಧೀರ್ಘ ತೊಂಬತ್ತು ವರ್ಷದ ಅವಧಿಯಲ್ಲಿ ತಮ್ಮ ಎಂಬತ್ತು ವರ್ಷಗಳನ್ನು ಹಾಡುತ್ತಾ ಬದುಕಿದ ಗಾನಸರಸ್ವತಿ ಇವರಾಗಿದ್ದಾರೆ.
ಪಟ್ಟಮ್ಮಾಳ್ ಅವರ ತಾಯಿ ಕಾಂತಾಮತಿ (ಶ್ರೀಮತಿ ರಾಜಮ್ಮಾಳ್) ಸ್ವತಃ ಒಬ್ಬ ಒಳ್ಳೆಯ ಗಾಯಕಿಯಾಗಿದ್ದರು. ಆದರೆ, ಅವರ ಹಾಡುಗಾರಿಕೆ ನಾಲ್ಕು ಗೋಡೆಯ ನಡುವೆ ಸೀಮಿತವಾಗಿತ್ತು. ಬ್ರಾಹ್ಣ ಹೆಣ್ಣುಮಕ್ಕಳು ಬಹಿರಂಗವಾಗಿ ಹಾಡುವ ಪದ್ಧತಿಯಿಲ್ಲದ ಕಾಲಘಟ್ಟದಲ್ಲಿ ಅವರು ಪ್ರತಿ ನಿತ್ಯ ತುಳಸಿ ಪೂಜೆ, ದೇವರ ಪೂಜೆ ಹಾಗೂ ಹೂ ಮಾಲೆ ಕಟ್ಟುವಾಗ, ಹಸುಗಳಿಂದ ಹಾಲು ಕರೆಯುವಾಗ ಹಾಡುತ್ತಿದ್ದ ಶ್ಲೋಕಗಳು, ದೇವರನಾಮಗಳು, ಭಜನೆ ಇವೆಲ್ಲವೂ ಮಕ್ಕಳಾದ ಡಿ.ಕೆ.ಪಟ್ಟಮ್ಮಾಳ್, ಡಿ.ಕೆ.ಜಯರಾಮನ್, ಡಿ.ಕೆ.ರಂಗನಾಥನ್ ಮತ್ತು ಡಿ.ಕೆ.ನಾಗರಾಜನ್ ಇವರ ಕಿವಿಯ ಮೇಲೆ ಬೀಳುತ್ತಿದ್ದವು. ಸಹಜವಾಗಿ ತಾಯಿ ಹಾಡುತ್ತಿದ್ದ ಹಾಡುಗಳನ್ನು ಮಕ್ಕಳೂ ಸಹ ಗುನುಗುತ್ತಾ ಸುಶ್ರಾವ್ಯವಾಗಿ ಹಾಡುವುದನ್ನು ಕಲಿತರು. ಪಟ್ಟಮ್ಮಾಳ್ ರವರ ಪ್ರತಿಭೆ ಬೆಳಕಿಗೆ ಬಂದಾಗ ಅವರಿಗೆ ಕೇವಲ ಹತ್ತು ವರ್ಷ ವಯಸ್ಸಾಗಿತ್ತು. ಶಾಲೆಯ ವಾರ್ಷಿಕೋತ್ಸವದ ನಾಟಕವೊಂದರಲ್ಲಿ ಹಾಡುವ ಪಾತ್ರ ಮಾಡಿದ್ದ ಪಟ್ಟಮ್ಮಾಳ್ ರವರ ಹಾಡಿದ ಒಂದು ಗೀತೆಯನ್ನು ಮೆಚ್ಚಿಕೊಂಡ ಸಭಿಕರೊಬ್ಬರು ಸ್ಥಳದಲ್ಲಿ ಅವರಿಗೆ ಚಿನ್ನದ ಪದಕದ ಬಹುಮಾನವನ್ನು ಘೋಷಿಸಿದರು. ಘಟನೆ ಹಿಂದೂ ಪತ್ರಿಕೆಯಲ್ಲಿ ಬಾಲಕಿಯಾಗಿದ್ದ ಪಟ್ಟಮ್ಮಾಳ್ ಚಿತ್ರ ಸಮೇತ ಹಾಗೂ ಅವರ ಹಾಡುಗಾರಿಕೆಯ ಪ್ರಬುದ್ಧತೆ ಮತ್ತು ಕೋಮಲ ಕಂಠ ಸಿರಿ ಕುರಿತಂತೆ ಸುದ್ದಿ ಪ್ರಕಟವಾಯಿತು.
ತಮ್ಮ ಮಗಳ ಕುರಿತು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದಾಗ ತಂದೆ ದಾಮಲ್ ಕೃಷ್ಣಮೂರ್ತಿ ದೀಕ್ಷಿತರು ತನ್ನ ಮಗಳ ಭವಿಷ್ಯದ ಬಗ್ಗೆ ಬೆಚ್ಚಿದರು. ಜೊತೆಗೆ ಮದ್ರಾಸ್ ನಗರದ ಕೊಲಂಬಿಯಾ ಗ್ರಾಮಾಫೋನ್ ಕಂಪನಿ ಪಟ್ಟಮ್ಮಾಳ್ ರವರ ಧ್ವನಿ ಮುದ್ರಿಕೆ ಹೊರತರಲು ಅಪೇಕ್ಷೆ ಪಟ್ಟಾಗ ಅದನ್ನು ನಿರಾಕರಿಸಿದರು. ಆದರೆ, ಕಾಂಚಿಪುರಂನಲ್ಲಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ.ಡಿ.ಶ್ರೀನಿವಾಸನ್ ರವರು ನಿನ್ನ ಪುತ್ರಿಯನ್ನು ಯಾರೂ ವಿವಾಹವಾಗದಿದ್ದರೆ ನನ್ನ ಕುಟುಂಬಕ್ಕೆ ಸೊಸೆಯಾಗಿ ತಂದುಕೊಳ್ಳುತ್ತೇನೆ. ಅಲಮೇಲುವಿನ ಪ್ರತಿಭೆಯನ್ನು ಮೊಟಕುಗೊಳಿಸಬೇಡ ಎಂದು ಧೈರ್ಯ ತುಂಬಿದರು.( ಅದರಂತೆ ಮುಂದಿನ ವರ್ಷಗಳಲ್ಲಿ ಪಟ್ಟಮ್ಮಾಳ್ ಅವರನ್ನು ತನ್ನ ಸಹೋದರಿಯ ಪುತ್ರ ಈಶ್ವರನ್ ತಂದು ತಮ್ಮ ಕುಟುಂಬದ ಸೊಸೆಂiÀiನ್ನಾಗಿ ಮಾಡಿಕೊಂಡರು)  ಶ್ರೀನಿವಾಸನ್ ಜೊತೆ ಪಟ್ಟಮ್ಮಾಳ್ ಓದುತ್ತಿದ್ದ ಶಾಲೆಯ ಮುಖ್ಯೊಪಧ್ಯಾಯಿನಿ ಶ್ರೀಮತಿ ಅಮ್ಮುಕುಟ್ಟಿ ನೀಡಿದ ನೈತಿಕ ಬೆಂಬಲದಿಂದಾಗಿ ಪಟ್ಟಮ್ಮಾಳ್ ರವರ ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿತು.

ಪಟ್ಟಮ್ಮಾಳ್ ರವರದು ಬ್ರಾಹ್ಮಣ ಕುಟುಂಬವಾದುದರಿಂದ ಕರ್ನಾಟಕ ಸಂಗೀತಕ್ಕೆ ಬೇಕಾದ ಗುರುಕುಲ ಪದ್ಧತಿಯ ಶಿಕ್ಷಣದ ಅಭ್ಯಾಸ ಅವರಿಗೆ ದೊರೆಯಲಿಲ್ಲ. ಗ್ರಾಮೋಫೋನ್ ಧ್ವನಿಮುದ್ರಿಕೆ ಕಂಪನಿಯಿಂದ ತನ್ನ ಹತ್ತು ವರ್ಷದ ಪುತ್ರಿಗೆ ಆಹ್ವಾನವನ್ನು ಬಂದುದನ್ನು ಗಮನಿಸಿದ ತಂದೆ ಕೃಷ್ಣಮೂರ್ತಿಯವರು ಪಟ್ಟಮ್ಮಾಳ್ ಅವರನ್ನು ಬೆಳಗಿನ ಜಾವ ಮೂರೂವರೆ ಗಂಟೆಗೆ ಎಬ್ಬಿಸಿ ಸಂಸ್ಕø ಶ್ಲೋಕಗಳು, ತಮಿಳು ತಿರುಪ್ಪಾವೈಗಳನ್ನು ಅಭ್ಯಾಸ ಮಾಡಿಸುತ್ತಿದ್ದರು.ಇವುಗಳ ಜೊತೆಗೆ ತ್ಯಾಗರಾಜರು, ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳ ಆಯ್ದ ಹತ್ತು ಸಂಗೀತ ಕೃತಿಗಳನ್ನು ವಿವಿಧ ರಾಗಗಳಲ್ಲಿ ಅಭ್ಯಾಸ ಮಾಡಿಸಿದರು. ಸ್ವರ ಶುದ್ಧತೆ, ಮತ್ತು ಸಾಹಿತ್ಯ ಶುದ್ಧತೆ ಹಾಗೂ ರಾಗಗಳ ಲಯ ಮತ್ತು ಶ್ರುತಿ ಇವುಗಳಲ್ಲಿ ಪರಿಣಿತಿ ಸಾಧಿಸಲು ಒಂದೊಂದು ರಾಗದಲ್ಲಿ ಕನಿಷ್ಟ ಐವತ್ತು ಬಾರಿ ಪಟ್ಟಮ್ಮಾಳ್ ಅಭ್ಯಾಸ ಮಾಡಬೇಕಿತ್ತು. ಕೌಟುಂಬಿಕ ವಾತಾವರಣದಲ್ಲಿ ತಂದೆ ತಾಯಿಯರ ಶ್ರದ್ಧೆ ಮತ್ತು ಕಾಳಜಿಯಿಂದ ಸಂಗೀತದಲ್ಲಿ ಪರಿಣಿತಿ ಸಾಧಿಸುತ್ತಾ ಬಂದ ಬಾಲಕಿ ಪಟ್ಟಮ್ಮಾಳ್ ರವರು ಕಾಂಚಿಪುರಂ ನಲ್ಲಿ ನಡೆಯುತ್ತಿದ್ದ ಸಂಗೀತೋತ್ಸವಗಳಲ್ಲಿ ತಂದೆಯ ಜೊತೆ ಪಾಲ್ಗೊಳ್ಳುತ್ತಿದ್ದರು. ಅಲ್ಲಿನ ಸಂಗೀತ ಕಛೇರಿಯಲ್ಲಿ ಅರಿಯಕುಡಿ ರಾಮಾನುಜಾ ಅಯ್ಯಂಗಾರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್, ಮಹಾರಾಜಪುರಂ ವಿಶ್ವನಾಥ್ ಅಯ್ಯರ್ ರಂತಹ ಕರ್ನಾಟಕ ಸಂಗೀತದ ದಿಗ್ಗಜರು ಹಾಡುವಾಗ ಅವರ ಹಾಡುಗಾರಿಕೆ, ಆಲಾಪನೆ, ಸ್ವರ ವಿಸ್ತಾರ, ನೆರವೆಲ್, ಷಡ್ಜ ಹಾಗೂ ಮಂದ್ರ ಸ್ವರದಲ್ಲಿ ಹಾಡುವ ವಿದಾನವನ್ನು ಗಮನಿಸಿಕೊಂಡು ಬರುತ್ತಿದ್ದ ಅವರು ಅವುಗಳನ್ನು ಏಕಲವ್ಯನಂತೆ ಅಭ್ಯಾಸ ಮಾಡುತ್ತಿದ್ದರು.
ಕಾಂಚಿಪುರಂನಲ್ಲಿದ್ದ ಸಂಗೀತ ವಿದ್ವಾಂಸ ನೈನಾಪಿಳ್ಳೆಯವರು ಪ್ರತಿ ವರ್ಷ ತ್ಯಾಗರಾಜರ ಸಂಗೀತೋತ್ಸವ ನಡೆಸುತ್ತಿದ್ದರು.ಜೊತೆಗೆ ಯುವಕಲಾವಿದರಿಗೆ ಹಾಡುಗಾರಿಕೆಯ ಸ್ಪರ್ಧೆ ಏರ್ಪಡಿಸುತ್ತಿದ್ದರು. ಪಟ್ಟಮ್ಮಾಳ್ ಭೈರವಿ ರಾಗದಲ್ಲಿ ಒಂದು ಸಂಗೀತ ಕೃತಿಯನ್ನು ಪ್ರಸ್ತುತ ಪಡಿಸಿ ಪ್ರಥಮ ಬಹುಮಾನ ಪಡೆದು ನೈನಾಪಿಳ್ಳೆಯವರಿಂದ ಮೆಚ್ಚುಗೆ ಪಡೆದ ನಂತರ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿತು. ತನ್ನ ಮನೆಗೆ ತೆಲುಗು ವಿದ್ವಾಂಸರನ್ನು ಕರೆಸಿಕೊಂಡು, ಅವರಿಂದ ತೆಲಗು ಕೀರ್ತನೆಗಳು ಮತ್ತು ಕೃತಿಗಳನ್ನು ಅಭ್ಯಾಸ ಮಾಡುವುದರ ಜೊತೆಗೆ ನೈನಾಪಿಳ್ಳೆಯವರ ಸಂಗೀತ ಕಛೇರಿಯನ್ನು ಆಲಿಸುತ್ತಾ ಅವರಿಂದ ಭೈರವಿರಾಗವನ್ನು ಮತ್ತು ರಾಗಂ ತಾಳಂ ಪಲ್ಲವಿ ಯನ್ನು ಪ್ರಸ್ತುತಪಡಿಸುವುದನ್ನು ಕಲಿತರು. ಇವುಗಳನ್ನು ಹೊರತು ಪಡಿಸಿದರೆ ಮದ್ರಾಸ್ ನಗರದಲ್ಲಿ ಕೊಂಚ ಸಮಯ ಅಪ್ಪಾದೊರೈ ಆಚಾರಿ ಎಂಬುವರ ಬಳಿ ಅಭ್ಯಾಸ ಮಾಡಿದರು. ಪಟ್ಟಮ್ಮಾಳ್ ರವರ ಗಾಯನದ ಪ್ರತಿಭೆಯನ್ನು ಗಮನಿಸಿದ ಹಾಗೂ ಸ್ವತಃ ಉತ್ತಮ ಸಂಗೀತ ವಿದ್ವಾಂಸರಾಗಿದ್ದ ಜಸ್ಟೀಸ್ ಎಲ್.ವೆಂಕಟರಮಣಯ್ಯರ್ ಎಂಬುವರು ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಸಾಹಿತ್ಯ ,ಮತ್ತು ರಾಗಗಳ ಲಕ್ಷಣವನ್ನು ಅವರಿಗೆ ಧಾರೆಯೆರೆದರು. ಇವರ ಜೊತೆಗೆ ಮದ್ರಾಸ್ ನಗರದಲ್ಲಿದ್ದ ಅಂಬಿ ದೀಕ್ಷಿತರ್ ಎಂಬುವರು ಪಟ್ಟಮ್ಮಾಳ್ ಹಾಡುಗಾರಿಕೆಗೆ ಮನಸೋತು ಹದಿನೈದು ದಿನಗಳ ಕಾಲ ದೀಕ್ಷಿತರ ರಚನೆಗಳನ್ನು ಹಾಡುವ ಶೈಲಿಯನ್ನು ಹೇಳಿಕೊಟ್ಟರು.  ಹೀಗೆ ಸ್ವತಂತ್ರವಾಗಿ ಸಂಪ್ರದಾಯ ನಿಷ್ಟ ಕುಟುಂಬದೊಳಗಿದ್ದುಕೊಂಡು ಶುದ್ಧ ಹಾಗೂ ಸಂಪ್ರದಾಯ ನಿಷ್ಠ ಕರ್ನಾಟಕ ಸಂಗೀತವನ್ನು ಕಲಿತ  ಡಿ.ಕೆ.ಪಟ್ಟಮ್ಮಾಳ್ ರವರು ಅವರ ಅದೃಷ್ಟವೆಂಬಂತೆ ಸಂಗೀತದ ಬಗ್ಗೆ ಅಪಾರ ಪ್ರೀತಿ ಇದ್ದ ಕುಟುಂಬಕ್ಕೆ ಸೊಸೆಯಾಗಿ ಕಾಲಿಟ್ಟರು.
ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ (1939 ರಲ್ಲಿ) ಈಶ್ವರನ್ ಅವರನ್ನು ಕೈ ಹಿಡಿದ ನಂತರ ಅವರ ಪ್ರೋತ್ಸಾಹದಿಂದ ಸಂಗೀತ ಕ್ಷೇತ್ರದಲ್ಲಿ ತಮ್ಮ ಸಮಕಾಲೀನ ಕಲಾವಿದೆಯರಾದ ಎಂ.ಎಸ್.ಸುಬ್ಬುಲಕ್ಷ್ಮಿಯವರ ಜೊತೆ ದ್ರುವತಾರೆಯಂತೆ ಬೆಳಗಿದರು. ಇದಕ್ಕೂ ಏಳು ವರ್ಷಗಳ ಮುಂಚೆ ( 1932 ರಲ್ಲಿ) ಸಂಪ್ರದಾಯನಿಷ್ಟ ಬ್ರಾಹಣ ಸಂಗೀತ ರಸಿಕರ ಆಕ್ಷೇಪಣೆಯನ್ನು ಲೆಕ್ಕಿಸದೆ ಮದ್ರಾಸ್ ರಸಿಕ ರಂಜನಿ ಸಭಾಂಗಣದಲ್ಲಿ ಪ್ರಥಮ ಕಛೇರಿ ನಡೆಸಿಕೊಟ್ಟು ಸಂಗೀತ ಲೋಕಕ್ಕೆ ಕಾಲಿರಿಸಿದ ಪ್ರಥಮ ಬ್ರಾಹ್ಮಣ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಪಟ್ಟಮ್ಮಾಳ್ ರೀತಿಯಲ್ಲಿ ಶ್ರೀಮತಿ ರುಕ್ಮಿಣಿ ದೇವಿಯವರೂ ಸಹ ಎಲ್ಲಾ ಕಟ್ಟುಪಾಡುಗಳನ್ನು ಧಿಕ್ಕರಿಸಿ ಭರತನಾಟ್ಯ ಕಲೆಗೆ ಪಾದಾರ್ಪಣೆ ಮಾಡಿದ ಮೊದಲ ಬ್ರಾಹ್ಮಣ ಮಹಿಳೆಯಾದರು.
ಮದ್ರಾಸ್ ನ್ರದಲ್ಲಿ ವೀಣಾ ಧನಮ್ಮಾಳ್ ಕುಟುಂಬದ ಜೊತೆ ಆತ್ಮೀಯ ಸಂಬಂಧವಿರಿಸಿಕೊಂಡು, ಅವರ ಮಕ್ಕಳಾದ ಟಿ.ಮುಕ್ತಾ ಮತ್ತು ಟಿ.ಬೃಂದಾ ಅವರಿಂದ ಪದಂ ಮತ್ತು ಜಾವಳಿಗಳನ್ನು ಕಲಿತರಲ್ಲದೆ, ಖ್ಯಾತ ಸಂಗೀತ ಸಂಯೋಜಕ ಮತ್ತು ಗೀತರಚನೆಕಾರರಾದ ಪಾಪನಾಶಂ ಶಿವಂ ಬಳಿ ಅರುಣಾಚಲ ಕವಿ, ಗೋಪಾಲಕೃಷ್ಣ ಭಾರತಿ, ಸುಬ್ರಮಣ್ಯ ಭಾರತಿ ಮುಂತಾದವರ ದೇಶಭಕ್ತಿ ಗೀತೆಗಳನ್ನು ಅಭ್ಯಾಸ ಮಾಡಿದರು. ಹೀಗೆ ತ್ರಿಮೂರ್ತಿ ವಾಗ್ಗೇಯಕಾರರ ಕೃತಿಗಳು, ತಮಿಳು ತಿರುಪ್ಪಾವೈಗಳು, ದೇಶಭಕ್ತಿ ಹಾಡುಗಳು, ಸಂಸ್ಕø ಶ್ಲೋಕ, ರಾಗತಾನಂ ಪಲ್ಲವಿ, ಭೈರವಿ ರಾಗಗಳಲ್ಲಿ ಪ್ರವೀಣರಾದ ಡಿ.ಕೆ.ಪಟ್ಟಮ್ಮಾಳ್ ತಮ್ಮ ಸಂಗೀತದ ಸಾಧನೆಯಲ್ಲಿ ಉತ್ತುಂಗ ಶಿಖರವನ್ನೇರಿದರು. ಅವರ ತುಂಬ ಕಂಠದಿಂದ ಹೊರಡುತ್ತಿದ್ದ ಧ್ವನಿ ಮಂದ್ರ, ಮಧ್ಯಮ ಮತ್ತು ತಾರಸಕ ಸ್ಥಾಯಿಗಳಲ್ಲಿ ಹಾಡುವಾಗಲೂ ಸಹ ಸುಮಧುರವಾಗಿರುತ್ತಿತ್ತು. ಅವರು ಕೆಲವು ತಮಿಳು ಸಿನಿಮಾಗಳಿಗೆ ಹಿನ್ನಲೆ ಗಾಯಕಿಯಾಗಿ ಹಾಡಿದರೂ ಸಹ ಅವೆಲ್ಲವೂ ಸ್ವಾತಂತ್ರ್ಯ ಗೀತೆ ಅಥವಾ ದೇಶಭಕ್ತಿ ಗೀತೆಗಳಾಗಿದ್ದವು. 2007 ರಲ್ಲಿ ತಮ್ಮ 88 ನೇ ವಯಸ್ಸಿನಲ್ಲಿ ಕಮಲ್ ಹಾಸನ್ ಅವರ " ಹೇರಾಮ್" ಚಲನ ಚಿತ್ರಕ್ಕೆ ಗಾಂಧೀಜಿಯವರ ಮೆಚ್ಚಿನ " ವೈಷ್ಣವ ಜನತೋ" ಕೀರ್ತನೆಯನ್ನು ಹಾಡಿದರು.
ಸಂಗೀತದ ಆರಂಭದ ದಿನಗಳಲ್ಲಿ ಸ್ವರ, ಮತ್ತು ರಾಗಗಳ ಶ್ರುತಿ, ಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಪಟ್ಟಮ್ಮಾಳ್ ರವರು ತಮ್ಮ ಐವತ್ತನೆಯ ವಯಸ್ಸಿನಿಂದ ಶ್ರುತಿ, ಲಯಗಳ ಜೊತೆ ಭಾವಕ್ಕೂ ಹೆಚ್ಚಿನ ಪ್ರಾಧಾನ್ತೆ ನೀಡತೊಡಗಿದರು. ಸಂಗೀತ ಕೃತಿಯೊಂದರ ಸಾಹಿತ್ಯವನ್ನು ಮನಸ್ಸಿನೊಳಕ್ಕೆ ಇಳಿಸಿಕೊಂಡು ಭಾವಪೂರ್ಣವಾಗಿ ಹಾಡತೊಡಗಿದ ನಂತರ ಅವರ ಸಂಗೀತವು ಇನ್ನೊಂದು ಮಜಲನ್ನು ಮುಟ್ಟಿತು. ಪ್ರತಿ ತಿಂಗಳು ಇಪ್ಪತ್ತಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡುತ್ತಿದ್ದ ಅವರು 1970 ರಲ್ಲಿ ಪ್ರಥಮವಾಗಿ ಅಮೇರಿಕಾ ಪ್ರವಾಸ ಮಾಡಿ ಸಂಗೀತ ಕಛೇರಿ ನಡೆಸಿಕೊಟ್ಟರು. ಆನಂತರ ಪ್ರಾನ್ಸ್ ನಲ್ಲಿ ಜರುಗಿದ ಭಾರತ ಉತ್ಸವ ಸಂದರ್ಭದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಇವುಗಳಲ್ಲದೆ ಇಂಗ್ಲೇಂಡ್,ಕೆನಡಾ  ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ತಮ್ಮ ಸಹೋದರ ಡಿ.ಕೆ.ಜಯರಾಮನ್ ಜೊತೆಗೂಡಿ  ಪ್ರವಾಸ ಮಾಡಿ ಕರ್ನಾಟಕ ಸಂಗೀತದ ರಸಿಕರಿಗೆ ಸಂಗೀತದ ರಸದೌತಣವನ್ನು ಉಣ ಬಡಿಸಿದರು. ಇವರ ಸಾಧನೆಯನ್ನು ಮೆಚ್ಚಿಕೊಂಡಾಡಿದ ಟೈಗರ್ ವರದಾಚಾರ್ಯರು ಪಟ್ಟಮ್ಮಾಳ್ ಅವರನ್ನು ಗಾನ ಸರಸ್ವತಿ ಎಂದು ಕರೆದರೆ, ರಾಗಂ ತಾಳಂ. ಪಲ್ಲವಿಯನ್ನು ಸಂಗೀತ ಕಛೇರಿಯಲ್ಲಿ ಪ್ರಸ್ತುತ ಪಡಿಸುವುದನ್ನು ನೋಡಿ ದಂಗಾದ ಆಧುನಿಕ ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕ ಅರಿಯಕುಡಿ ರಾಮಾನುಜಾ ಅಯ್ಯಂಗಾರ್ಪಾಟ್ಟು ಪಾಡುವ  ಪಲ್ಲವಿ ಪಟ್ಟಮ್ಮಾಳ್” ( ಹಾಡು ಹಾಡುವ ಪಲ್ಲವಿ ಪಟ್ಟಮ್ಮಾಳ್) ಎಂದು ಕರೆದರು.

1947 ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ಮದ್ರಾಸ್ ಆಕಾಶವಾಣಿಯವರು ಪಟ್ಟಮ್ಮಾಳ್ ಅವರನ್ನು ನಿಲಯಕ್ಕೆ ಆಹ್ವಾನಿಸಿ, ಅವರಿಂದ ಸುಬ್ರಮಣ್ಯ ಭಾರತಿಯವರ ದೇಶ ಭಕ್ತಿ ಗೀತೆಗಳನ್ನು ಹಾಡಿಸಿ ಪ್ರಸಾರ ಮಾಡಿತು. ಅವರಿಗೆ ಸಂಭಾವನೆಯನ್ನು ನೀಡಲು ಹೋದಾಗ, ನಿರಾಕರಿಸಿದ ಅವರು ದೇಶ ಸೇವೆಗೆ ಗಾಯಕಿಯಾಗಿ ನನ್ನದೂ ಒಂದು ಕಾಣಿಕೆ ಇರಲಿ ಎಂದಿದ್ದರು. ಕಳೆದ ಅಕ್ಟೋಬರ್ ತಿಂಗಳಿನಿಂದ ಮದ್ರಾಸ್ ಆಕಾಶವಾಣಿಯು ಪಟ್ಟಮ್ಮಾಳ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಪ್ರತಿ ವಾರ ಅರ್ಧ ಗಂಟೆಯ ಸಂಗೀತ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಕಾರ್ಯಕ್ರಮಲ್ಲಿ ಪಟ್ಟಮ್ಮಾಳ್ ಅವರ ಸಾಧನೆ, ಅವರ ಸಂಗೀತ ಮತ್ತು ವ್ಯಕ್ತಿತ್ವ ಕುರಿತು ಹಿರಿಯ ವಿದ್ವಾಮಸರ ಜೊತೆ ಚರ್ಚೆ ಹಾಗೂ ಪಟ್ಟಮ್ಮಾಳ್ ಅವರ ಕಂಠಸಿರಿಯಲ್ಲಿ ದಾಖಲಾಗಿರುವ ಕೃತಿಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಕರ್ನಾಟಕ ಸಂಗೀತಕ್ಕೆ ಡಿ.ಕೆ.ಪಟ್ಟಮ್ಮಾಳ್ ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಂಗೀತ ಕಲಾ ನಿಧಿ ನೀಡಿ ಗೌರವಿಸಿದೆ. ಇದಕ್ಕೂ ಮುನ್ನ 1960 ದಶಕದಲ್ಲಿ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ನಂತರ 1971 ರಲ್ಲಿ ಪದ್ಮಭೂಷಣ, 1998 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಕೂಡ ಕೊಡಮಾಡಲ್ಪಟ್ಟಿತು. ಮದ್ರಾಸ್ ಫೈನ್ ಆರ್ಟ್ ಸೊಸ್ಶೆಟಿಯ ಕಲಾಶಿಖಾಮಣಿ ಸೇರಿದಂತೆ ನೂರಾರು ಪ್ರಶಸ್ತಿಯ ಗೌರವಗಳು ಅವರ ಮುಡಿಗೇರಿದವು. ಎಲ್ಲವನ್ನು ಸವ್ಮಚಿತ್ತದಿಂದ ಕೂಡಿದ ಸ್ಥಿತಿ ಪ್ರಜ್ಞತೆಯ ಭಾವದಲ್ಲಿ ಸ್ವೀಕಾರ ಮಾಡಿದ ಪಟ್ಟಮ್ಮಾಳ್ ತಮ್ಮ ಕೊನೆಯ ಉಸಿರು ಇರುವವರೆಗೂ ಸಂಗೀತವನ್ನೇ ಉಸಿರಾಡಿದರು. ತಮ್ಮ ತೊಂಬತ್ತನೆಯ ತುಂಬು ವಯಸ್ಸಿನಲ್ಲಿ 2006 ಜುಲೈ 16 ರಂದು ಚೆನ್ನೈ ನಗರದ ಕೊಟ್ಟೂರ್ ಪುರಂನ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ಎತ್ತಿ ಹಿಡಿದ ಸಂಗೀತ ಪರಂಪರೆಯನ್ನು ಅವರ ಮೊವ್ಮ್ಮಗಳಾದ ನಿತ್ಯಶ್ರೀ ಮಹಾದೇವನ್ ಮತ್ತು ಶಿಷುರಾದ ಲೀಲಾ ಶಿವಕುಮಾರ್, ಗೀತಾ ರಾಜಶೇಖರನ್, ಭವತಾರಿಣಿ ಅನಚಂತರಾಮನ್, ನೃತ್ಯಪಟು, ಕಲಾವಿದೆ ವೈಜಯಂತಿಮಾಲಾ ಬಾಲಿ ಮುಂತಾದವರು ಮುಂದುವರಿಸಿಕೊಂಡು ಹೋಗುವುದರ ಮೂಲಕ ಡಿ.ಕೆ.ಪಟ್ಟಮ್ಮಾಳ್ ಹೆಸರನ್ನು ಜೀವಂತವಿರಿಸಿದ್ದಾರೆ.
.(ಹಿತೈಷಿಣಿ ಅಂತರ್ಜಾಲ ಮಹಿಳಾ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಶುಕ್ರವಾರ, ನವೆಂಬರ್ 16, 2018

.ಮಲ್ಲಿಕಾರ್ಜುನ ಖರ್ಗೆ ಎಂಬ ಧೀಮಂತ ದಲಿತ ನಾಯಕನ ಅಪೂರ್ವ ಕಥನ



1972 ರಲ್ಲಿ ಗುಲ್ಬರ್ಗಾ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಶಾಸಕನಾಗಿ ವಿಧಾನ ಸಭೆ ಪ್ರವೇಶಿಸುವುದರ ಮೂಲಕ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆಯವರು 46 ವರ್ಷಗಳ ತಮ್ಮ ಸುಧೀರ್ಘ ರಾಜಕಾರಣದಲ್ಲಿ ನಲವತ್ತು ವರ್ಷಗಳ ಕಾಲ ರಾಜ್ಯ ಸಚಿವ ಸಂಪುಟದಲ್ಲಿ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ , ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಸುವುದರ ಮೂಲಕ ರಾಷ್ಟ್ರದ ಗಮನ ಸ ಳೆದ ಹಿರಿಯ ಮುತ್ಸದಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.
ಹೈದರಾಬಾದ್ ಕರ್ನಾಟಕದಲ್ಲಿ ಸುದೀರ್ಘ ರಾಜಕಾರಣದಲ್ಲಿದ್ದುಕೊಂಡು ಒಂಬತ್ತು ಬಾರಿ ರಾಜ್ಯ ವಿಧಾನಸಭೆಗೆ ಹಾಗೂ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗುವುದರ ಮೂಲಕ ಖರ್ಗೆಯವರು ಸೋಲಿಲ್ಲದ ಸರದಾರರಾಗಿ ದಾಖಲೆ ನಿರ್ಮಿಸಿರುವುದು ಸುಲಭದ ಸಂಗತಿಯಲ್ಲ. . ರಾಜಕಾರಣವೆಂದರೆ, ಅಧಿಕಾರವನ್ನು ಅನುಭವಿಸುವುದು ಎನ್ನುವ ಮಾತು ಚಾಲ್ತಿಯಲ್ಲಿರುವ  ಈ ಕಾಲಘಟ್ಟದಲ್ಲಿ ಜನರ ಸೇವೆಯನ್ನು ಮತ್ತು ತನ್ನ ಕ್ಷೇತ್ರದ ಅಭಿವೃದ್ಧಿಯನ್ನು ಕಾಯಕವೆಂದು ಭಾವಿಸಿ, ಅದನ್ನು ಒಂದು ತಪಸ್ಸಿನಂತೆ ಧ್ಯಾನಿಸಿದ ಖರ್ಗೆಯ ಕರ್ತೃತ್ವ ಶಕ್ತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು.
ಸದಾ ಸುದ್ದಿಜಗತ್ತು ಮತ್ತು ಪ್ರಚಾರದಿಂದ ದೂರವಿರುವ ಮಲ್ಲಿಕಾರ್ಜುನ ಖರ್ಗೆಯವರು ಮೇಲುನೋಟಕ್ಕೆ ತೀರಾ ಗಂಭೀರವಾದ ವ್ಯಕ್ತಿತ್ವದವರು ನಿಜ.  ಆದರೆ, ಅಧಿಕಾರದ ಹಪಾಹಪಿತನವಿಲ್ಲದ, ಎಂದಿಗೂ ಗುಂಪುಗಾರಿಕೆಯನ್ನು ಮಾಡದ ಅಥವಾ ತನ್ನ ಜಾತಿಯ ಹಿನ್ನಲೆಯಲ್ಲಿ ಅಧಿಕಾರಕ್ಕಾಗಿ ಲಾಬಿ ಮಾಡದ ಖರ್ಗೆಯವರ ಸ್ವಾಭಿಮಾನದ .ಗುಣಗಳ ಹಿಂದೆ ಅವರ ಅಪಾರ ಓದು, ತಿಳುವಳಿಕೆ, ವಿದ್ವತ್ತು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಗೌತಮ ಬುದ್ಧನ ಪ್ರಭಾವಗಳಿವೆ. ಅತ್ಯಂತ ಮಾಗಿದ ಹಾಗೂ ಪ್ರಬುದ್ಧ ಚಿಂತನೆಗಳ ವ್ಯಕ್ತಿತ್ವದ ಖರ್ಗೆಯವರ ಬಳಿ ಅರ್ಧ ಗಂಟೆ ಕುಳಿತು ಮಾತನಾಡಿದರೆ ಸಾಕು, ಅವರು ಎಂತಹ ಧೀಮಂತ ರಾಜಕಾರಣಿ ಎಂಬುವುದು ನಮ್ಮ ಅನುಭವಕ್ಕೆ ಬರುತ್ತದೆ.
ಇದೀಗ ಎಪ್ಪತ್ತೈದು ವರ್ಷಕ್ಕೆ ಕಾಲಿಟ್ಟಿರುವ ಮಲ್ಲಿಕಾರ್ಜುನ ಖರ್ಗೆಯವರ ಕುರಿತಾಗಿ ಗುಲ್ಬರ್ಗಾ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಹೆಚ್.ಟಿ. ಪೋತೆಯವರು ಬರೆದಿರುವ “ ಬಾಬಾ ಸಾಹೇಬರೆಡೆಗೆ” ಎಂಬ  ಜೀವನ ಕಥನ ನಮಗೆ ಮಲ್ಲಿಕಾರ್ಜುನ ಖರ್ಗೆಯವರು ಬದುಕಿನ ಎಲ್ಲಾ ಮಗ್ಗುಲುಗಳನ್ನು ಸಮರ್ಥವಾಗಿ ಪರಿಚಯಿಸಿಕೊಡುವ ಮಹತ್ವದ ಕೃತಿಯಾಗಿದೆ.  ಹಲವು ವರ್ಷಗಳಿಂದ ಖರ್ಗೆಯರು ಮತ್ತು ಅವರ ಕುಟುಂಬದ ಜೊತೆ ಒಡನಾಡುತ್ತಾ ಬಂದಿರುವ ಪೋತೆಯವರು ಖರ್ಗೆಯವರ ಬಾಲ್ಯದ ಬಡತನ. ಅವರ ಅವರ ಓದಿನ ಆಕಾಂಕ್ಷೆ ಮತ್ತು ತನ್ನ ಪುತ್ರನನನ್ನು ಓದಿಸಿ ಸಾಹೇಬನನ್ನಾಗಿ ಮಾಡಬೇಕೆಂಬ ಏಕೈಕ ಆಸೆಯಿಂದ ಬೀದರ್ ಜಿಲ್ಲೆಯ ಹಳ್ಳಿಯಿಂದ ಇಟ್ಟಿಗೆ ತಯಾರಿಸುವವರ ಬಳಿ ಕೂಲಿ ಕಾರ್ಮಿಕರಾಗಿದ್ದ ಖರ್ಗೆಯವರ ತಂದೆ ಮಾಪಣ್ಣ ಖರ್ಗೆಯವರು ಗುಲ್ಬರ್ಗ ನಗರಕ್ಕೆ ಬಂದು ಅಲ್ಲಿನ ಜವಳಿ ಮಿಲ್ ನಲ್ಲಿ ಕೂಲಿ ಕಾರ್ಮಿಕನಾಗಿ ಸೇರಿ ಇಡೀ ಬದುಕನ್ನು ಗಂಧದ ಕೊರಡಿನಂತೆ ತೇಯ್ದ ಕಥೆಯನ್ನು ಲೇಖಕರು ಹೃದಯಂಗಮವಾಗಿ ಚಿತ್ರಿಸಿದ್ದಾರೆ.

ಖರ್ಗೆಯವರ ಬಡವರ ಹಾಗೂ ಹಿಂದುಳಿದವರ ಮೇಲಿನ ಪ್ರೀತಿ ಮತ್ತು  ನಿಷ್ಕಳಂಕ ಕಾಳಜಿಯ ಹಿಂದೆ ಅವರ ತಂದೆಯವರ ಪ್ರಭಾವವಿದೆ. ತಾನು ಮತ್ತು ತನ್ನ ತಂದೆ ಒಂದೆ ತಟ್ಟೆಯಲ್ಲಿ ಕುಳಿತು ಊಟ ಮಾಡುತ್ತಿದ್ದನ್ನು ಹಾಗೂ ತನ್ನನ್ನು ಅಪ್ಪ ಬೆಳಿಗ್ಗೆ ಹೆಗಲ ಮೇಲೆ ಕೂರಿಸಿಕೊಂಡು ಹೋಗಿ ಶಾಲೆಗೆ ಬಿಟ್ಟು, ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಘಟನೆ ಮತ್ತು ಆನಂತರ ಕೂಲಿ ಕೆಲಸ ಮುಗಿಸಿ ಬಂದು  ಸಂಜೆ ಶಾಲೆಯಿಂದ ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಿದ್ದದನ್ನು ಭಾವುಕರಾಗಿ ನೆನೆಯುವಾಗ ಮಲ್ಲಿಕಾರ್ಜುನ ಖರ್ಗೆಯವರ ಕಣ್ಣಾಲಿಗಳು ಒದ್ದೆಯಾಗುತ್ತವೆ. 1972 ರಲ್ಲಿ ಪ್ರಥಮವಾಗಿ ವಿಧಾನ ಸಭೆಗೆ ಶಾಸಕರಾಗಿ ಪ್ರವೇಶ ಮಾಡಿದ ದಿನದಿಂದ ಇಂದಿನವರೆಗೂ ಖರ್ಗೆಯವರು ಶಾಸಕರಾಗಿ, ಸಚಿವರಾಗಿ ಮತ್ತು ಲೋಕಸಭೆಯ ಸದಸ್ಯರಾಗಿ ಮಾಡಿರುವ ಕೆಲಸಗಳನ್ನು ಲೇಖಕರು ಈ ಕೃತಿಯಲ್ಲಿ ಸವಿವರಾಗಿ ಅಂಕಿ ಅಂಶಗಳ ಸಮೇತ ದಾಖಲಿಸಿದ್ದಾರೆ. ಜೊತೆಗೆ ಕಳೆದ ಒಂದು ದಶಕದಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯಲ್ಲಿ ಅದರಲ್ಲೂ ವಿಶೇಷವಾಗಿ ಗುಲ್ಬರ್ಗಾ ನಗರವನ್ನು ಅವರು ಪರಿವರ್ತಿಸಿರುವ ರೀತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು.
ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಸ್ತರಿಸಿದ ರೈಲ್ವೆ ಯೋಜನೆಗಳು, ಅಲ್ಲಿಗೆ ತಂದ ಕಛೇರಿಗಳು ಮತ್ತು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಗುಲ್ಬರ್ಗಾ ನಗರಕ್ಕೆ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು, ಅವುಗಳ ಭವ್ಯ ಕಟ್ಟಡ, ಬೆಂಗಳೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿ ಮೇಲ್ದರ್ಜೆಗೆ ಏರಿಸಲ್ಪಟ್ಟ ಆಸ್ಪತ್ರೆಗಳು, ಗುಲ್ಬರ್ಗಾ ನಗರದಲ್ಲಿ ನಿರ್ಮಾಣವಾಗಿರುವ ರಿಂಗ್ ರಸ್ತೆ ಹಾಗೂ ಅಲ್ಲಿನ  ವಿಶಾಲವಾದ ಮುಖ್ಯ ರಸ್ತೆಗಳು ಇವೆಲ್ಲವೂ ಖರ್ಗೆಯವರ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಸ್ವತವಾಗಿ ದಾಖಲಾಗುವಂತೆ ಮಾಡಿವೆ. ಜೊತೆಗೆ ಹೈದರಾಬಾದ್ ಕರ್ನಾಟಕದ ಹರಿಕಾರನನ್ನಾಗಿ ಮಾಡಿವೆ.
ಗುಲ್ಬರ್ಗಾ ನಗರವನ್ನು ಪ್ರಸಿದ್ಧ ಪ್ರವಾಸಿ ತಾಣ ಮಾಡುವುದಲ್ಲಿ ಖರ್ಗೆಯವರ ಸಾಧನೆ ಅಪ್ರತಿಮವಾದುದು. ಸೇಡಂ ರಸ್ತೆಯಲ್ಲಿ ಗುಲ್ಬರ್ಗಾ ವಿ.ವಿ. ಗೆ ಹೊಂದಿಕೊಂಡಿರುವ ಹದಿನೆಂಟು ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸಿದ್ಧಾರ್ಥ ವಿಹಾರ ಎಂಬ ಬುದ್ಧ ದೇಗುಲವನ್ನು ನಿರ್ಮಿಸಿ, ಅದನ್ನು ದಕ್ಷಿಣ ಭಾರತ ಮಾತ್ರವಲ್ಲದೆ, ದಕ್ಷಿಣ ಏಷ್ಯಾದ ಅತ್ಯುತ್ತಮ ಬುದ್ಧ ದೇಗುಲವನ್ನಾಗಿ ಮಾಡಿದ್ದಾರೆ. ಅಲ್ಲಿನ ಪ್ರಶಾಂತ ಮೌನ, ಸ್ವಚ್ಛತೆ ಮತ್ತು ಗಿಡಮರಗಳ ಹಸಿರು, ಎಲ್ಲವೂ ಮನಸ್ಸಿಗೆ ಮುದನೀಡುತ್ತವೆ. ಒಂದು ಸಂಸ್ಥೆ ಅಥವಾ ಒಂದು ಸರ್ಕಾರ ಮಾಡಬಹುದಾದ ಕೆಲಸವನ್ನು ಇಚ್ಛಾ ಶಕ್ತಿ ಇರುವ ಒಬ್ಬ ವ್ಯಕ್ತಿ ಕೂಡ ಮಾಡಬಲ್ಲ ಎಂಬುದನ್ನು ಈ ದೇಗುಲದ ಮೂಲಕ ಮಲ್ಲಿಕಾರ್ಜುನ ಖರ್ಗೆಯವರು ತಮ್ಮೊಳಗಿನ ದೈತ್ಯ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಬುದ್ಧನ ಕುರಿತಾಗಿ ಹಾಗೂ ಅಲ್ಲಿನ ದೇಗುಲ ಕುರಿತಾಗಿ ಅವರು ಎಷ್ಟು ಆಳವಾಗಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆಂದರೆ, ಈ ವರ್ಷದ ಬುದ್ಧ ಪೂರ್ಣಿಮೆಯ ದಿನದಂದು ಬೆಳಗಿನ ವೇಳೆ ಅವರೊಂದಿಗೆ ದೇಗುಲದ ಆವರಣದಲ್ಲಿ ನಾನು ಸುತ್ತಾಡುತ್ತಿದ್ದೆ. ನೆಲಕ್ಕೆ ಹಾಸಿರುವ ಕಲ್ಲುಚಪ್ಪಡಿಯ ಮೇಲೆ ಬಿದ್ದಿದ್ದ ಒಣಗಿದ ಬೇವಿನ ಮರದ ಎಲೆಗಳನ್ನು ಒಂದೊಂದಾಗಿ ಆಯ್ದು  ಅವುಗಳನ್ನು ಕಸದ ಬುಟ್ಟಿಗೆ ಹಾಕುತ್ತಾ ಅವರು ನಡೆಯುತ್ತಿದ್ದರು. ಬೇಸಿಗೆಯಲ್ಲಿ  ನಲವತ್ತೈದು  ಡಿಗ್ರಿ ಉಷ್ಣಾಂಶ ಇರುವ ಗುಲ್ಬರ್ಗಾ ನಗರದಲ್ಲಿ ಬೌದ್ಧ ವಿಹಾರದ ಬಳಿ ಸೆಕೆ ಅಥವಾ ಬಿಸಿಲು ಎನಿಸುವುದಿಲ್ಲ.ಅಷ್ಟೊಂದು ಬೇವಿನ ಮರಗಳನ್ನು ಅವರು ಮಕ್ಕಳ ಹಾಗೆ ಜೋಪಾನ ಮಾಡಿ ಬೆಳಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರನ್ನು  ಕಳೆದ ಐದು ವರ್ಷದಿಂದೀಚೆಗೆ  ಬಹಳ ಆಸಕ್ತಿಯಿಂದ ನಾನು  ಗಮನಿಸುತ್ತಾ ಬಂದಿದ್ದೀನಿ. ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮೋದಿ ಸರ್ಕಾರವನ್ನು ವಿಮರ್ಶೆಗೆ ಒಳಪಡಿಸುವ ರೀತಿಗೆ ಮತ್ತು ಅವರ ವಾಕ್ ಚಾತುರ್ಯಕ್ಕೆ  ನಾನು  ವಿಸ್ಮಯಗೊಂಡಿದ್ದೇನೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದ ನಂತರ, ಲೋಕಸಭೆಯಲ್ಲಿ ಖರ್ಗೆಯವರು ಸರ್ಕಾರದ ಸಾಧನೆಯನ್ನು ಬಣ್ಣಿಸುತ್ತಾ “ ನಿಮ್ಮದು ಚಾರ್ ಆಣೆ ಕಾ ಮುರ್ಗಾ, ಬಾರ್ ಆಣೆ ಕಾ ಮಸಾಲ” ಎಂಬ ಉರ್ದು ಗಾದೆಯಂತೆ ನಾಲ್ಕಾಣೆ ಕೋಳಿಗೆ ಹನ್ನೆರೆಡಾಣೆ ಮಸಾಲೆ ಅರೆಯುವ ಸರ್ಕಾರ ಎಂದು ಜರಿದಿದ್ದರು.ವಿಧಾನ ಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ ಎಂದಿಗೂ ಅಸಂಸದೀಯ ಪದ ಬಳಕೆ ಮಾಡದ,  ತುಟಿ ಮೀರಿ ಮಾತನಾಡದ ಖರ್ಗೆಯವರು ಚರ್ಚೆಗೆ ಮುನ್ನ ನಿಖರವಾದ ಅಂಕಿ ಅಂಶಗಳನ್ನು ಎದುರಿಗೆ ಇಟ್ಟುಕೊಂಡು ವಾದ ಮಂಡಿಸುವ ಪರಿಗೆ ಆಡಳಿತಾ ರೂಡ ಬಿ.ಜೆ.ಪಿ. ಪಕ್ಷದ ಎಲ್ಲಾ ನಾಯಕರಲ್ಲಿ ಖರ್ಗೆಯವರ ಕುರಿತಾಗಿ ಒಂದು ರೀತಿ ನೈತಿಕ ಭಯವಿದೆ.. ಇದು ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ  ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ಖರ್ಗೆಯವರ ನಾಯಕತ್ವ ಮತ್ತು ಅವರ ನಡುವಳಿಕೆ ಹಾಗೂ ಮಾತುಗಾರಿಕೆಯಿಂದ ಒಂದಿಷ್ಟು ಘನತೆ ಮತ್ತು ಮೌಲ್ಯ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು.

ಇಂತಹ ಹಿರಿಯ ಧೀಮಂತ ರಾಜಕಾರಣಿ ಮತ್ತು ರಾಜಕೀಯ ಮುತ್ಸದಿಗೆ ರಾಜ್ಯದ ಮುಖ್ಯಮಂತ್ರಿ ಪದವಿ ಇದುವರೆಗೆ  ಏಕೆ ದಕ್ಕಲಿಲ್ಲ ಎಂಬುದು ನಿಜಕ್ಕೂ ಸೋಜಿಗದ ಸಂಗತಿ. ಎಂದಿಗೂ ಕೆಳಮಟ್ಟದ ರಾಜಕಾರಣಕ್ಕೆ ಇಳಿಯಲಾರದ ಅವರ ಘನತೆಯ ರಾಜಕಾರಣ ಇದಕ್ಕೆ ಕಾರಣವಿರಬಹುದು. ಇದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಅವರು  ತನ್ನ ನೆಲ ಹಾಗೂ ಜನರ ಪರವಾಗಿ ಅವರು ಸೇವೆ ಸಲ್ಲಿಸುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ. ಇಂದಿಗೂ ಕೂಡ ತಾನು ಹುಟ್ಟಿ ಬೆಳೆದ ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮವನ್ನು ಅವರು ಮರೆತಿಲ್ಲ. ತಾವು ಪ್ರತಿನಿಧಿಸುವ ಲೋಕ ಸಭಾ ಕ್ಷೇತ್ರಕ್ಕೆ ಅದು ಒಳಪಡದಿದ್ದರೂ ಸಹ, ಆ ಗ್ರಾಮವನ್ನು ಅವರು ಅಭಿವೃದ್ಧಿ ಪಡಿಸುರುವ ರೀತಿ ಪ್ರತಿಯೊಬ್ಬ ಜನಪ್ರತಿನಿಧಿಗೆ ಮಾದರಿಯಾಗಿದೆ. ಹೈಸ್ಕೂಲು, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆ, ಕೃಷಿ ಸಲಹಾ ಕೇಂದ್ರ, ಕುಡಿಯುವ ನೀರು, ರಸ್ತೆ ಇವೆಲ್ಲವನ್ನು ಒಳಗೊಂಡಿರುವ ವರವಟ್ಟಿ ಗ್ರಾಮದ ಜನತೆ ನಿಜಕ್ಕೂ ಪುಣ್ಯವಂತರು.ಏಕೆಂದರೆ, ಅವರು ಈ ನಾಡಿಗೆ ಒಬ್ಬ ಶ್ರೇಷ್ಠ ಜನಪ್ರತಿನಿಧಿಯನ್ನು ಹಾಗೂ , ಸ್ವಾಭಿಮಾನದ ರಾಜಕೀಯ ನಾಯಕನನ್ನು ನಾಡಿಗೆ ನೀಡಿದ ಕೀರ್ತಿ ಆ ನೆಲಕ್ಕೆ ಸಲ್ಲುತ್ತದೆ.
ಹೆಚ್.ಟಿ. ಪೋತೆಯವರು ಖರ್ಗೆಯವರ ಕುರಿತಾಗಿ ಮತ್ತು ಅವರ ಶ್ರೀಮತಿಯವರಾದ ರಾಧಾ ಬಾಯಿ ಯವರ ಮಾತೃವಾತ್ಸಲ್ಯ ಕುರಿತಾಗಿ ತುಂಬು ಹೃದಯದಿಂದ  ಈ ಕೃತಿಯಲ್ಲಿ ಎಲ್ಲವನ್ನೂ ದಾಖಲಿಸಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದಕ್ಕೆ ರಾಧಾಬಾಯಿ ಅಮ್ಮ ನಮ್ಮೆದುರು ಸಾಕ್ಷಿಯಾಗಿದ್ದಾರೆ. ತಮ್ಮ ಪತ್ನಿಯ ಸಹಕಾರವನ್ನು ಖರ್ಗೆಯವರು ಪ್ರತಿ ಸಂದರ್ಭದಲ್ಲಿಯೂ ಕೃತಜ್ಞತೆಯಿಂಸ ಸ್ಮರಿಸುತ್ತಾರೆ. ಈ ಕೃತಿಯನ್ನು ಓದುತ್ತಿದ್ದಂತೆ   ನಮಗೆ ಮಲ್ಲಿಕಾರ್ಜುನ ಖರ್ಗೆಯವರ ಮೇಲಿನ ಗೌರವ ಹೆಚ್ಚಾಗಿ ಅವರು ಮತ್ತಷ್ಟು ಹತ್ತಿರವಾಗುತ್ತಾರೆ. ನಾಡಿನ ಧೀಮಂತ ರಾಜಕಾರಣಿಯೊಬ್ಬರ ಈ ಜೀವನಗಾಥೆಯ ಕೃತಿಯನ್ನು  ಕರ್ನಾಟಕ ಸರ್ಕಾರದ ವಿಧಾನಸಭಾ ಸಚಿವಾಲಯವು  ಖರೀದಿಸಿ, ಪ್ರತಿಯೊಬ್ಬ ಶಾಸಕನಿಗೂ ಉಡುಗೊರಯಾಗಿ ನೀಡಬೇಕಿದೆ.  ಏಕೆಂದರೆ, ಮಲ್ಲಿಕಾರ್ಜುನ ಖರ್ಗೆಯ ಜೀವನದ ಹೋರಾಟದ ಕಥನ  ಒಬ್ಬ ಜನಪ್ರತಿನಿಧಿ ಹೇಗಿರಬೇಕೆಂದು ತೋರಿಸಿಕೊಡುವುದರ ಜೊತೆಗೆ ಜನಪ್ರತಿಗಳು ಒಂದಿಷ್ಟು ಸುಧಾರಿಸಬಹುದು .ಅಂತಹ ಮಹತ್ವದ ಕೃತಿ ಇದಾಗಿದೆ.