ಭಾನುವಾರ, ಆಗಸ್ಟ್ 25, 2013

ಸಾವಿನ ಕುದುರೆಯೇರಿ ಹೊರಟವರ ಕಥನ



ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಸಂಭವಿಸುತ್ತಿರುವ ರಸ್ತೆಗಳಲ್ಲಿನ ಅಪಘಾತಗಳನ್ನು ಗಮನಿಸಿದರೆ, ಭಾರತ ಜಗತ್ತಿನ ವಾಹನ ಅಪಘಾತಗಳ ರಾಜಧಾನಿಯೇನೊ ಎಂದು ಅನಿಸತೊಡಗಿದೆ.  ಪ್ರತಿ ದಿನ ರಸ್ತೆಗಿಳಿಯುತ್ತಿರುವ ದ್ವಿಚಕ್ರವಾಹನಗಳು ಸೇರಿದಂತೆ ವಿವಿಧ ಬಗೆಯ ವಾಹನಗಳಿಂದ ದೇಶದ ರಸ್ತೆಗಳು ತುಂಬಿ ತುಳುಕುತ್ತಿವೆ.  ಇವುಗಳ ಜೊತೆಗೆ ವಾಹನ ಚಲಾಯಿಸುವಾಗ ಚಾಲಕರಿಗೆ ಇರಬೇಕಾದ ಶ್ರದ್ಧೆ ಮತ್ತು ಜವಾಬ್ದಾರಿಯ ಕೊರತೆಯಿಂದಾಗಿ ಅಪಘಾತಗಳ ಪ್ರಮಾಣ ಸಹ ಪ್ರತಿ ವರ್ಷ ಹೆಚ್ಚಾಗುತ್ತಲೆ ಇದೆ. ಜಗತ್ತಿನಲ್ಲಿ ನಡೆಯುವ ಅಪಘಾತಗಳ ಒಟ್ಟು ಸಂಖ್ಯೆಯ ಶೇಕಡ ಹತ್ತರಷ್ಟು ವಾಹನ ಅಪಘಾತಗಳು  ಭಾರತದಲ್ಲಿ ಸಂಭವಿಸುತ್ತಿವೆ.

ಭಾರತದಲ್ಲಿ ಉತ್ತರಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳು ಅತಿ ಹೆಚ್ಚು ವಾಹನ ಅಪಘಾತ ಸಂಭವಿಸುವ ರಾಜ್ಯಗಳೆಂದು ಕುಖ್ಯಾತಿ ಗಳಿಸಿವೆ. ಕಳೆದ ಹತ್ತು ವರ್ಷಗಳಿಂದ ತಮಿಳುನಾಡು ರಾಜ್ಯ ಅಪಘಾತದ ಪ್ರಮಾಣದಲ್ಲಿ ಮುಂಚೂಣಿಯಲ್ಲಿದೆ, ಉತ್ತರ ಪ್ರದೇಶದಲ್ಲಿ ಸರಾಸರಿ ವರ್ಷಕ್ಕೆ 12ರಿಂದ 13 ಸಾವಿರ ಅಪಘಾತಗಳು ಸಂಭವಿಸದರೆ, ತಮಿಳುನಾಡಿನಲ್ಲಿ ಸರಾಸರಿ ವರ್ಷವೊಂದಕ್ಕೆ 13 ರಿಂದ 15 ಸಾವಿರ ವಾಹನ ಅಪಘಾತಗಳು ಸಂಭವಿಸುತ್ತಿವೆ. ಕರ್ನಾಟಕದಲ್ಲಿ ಈ ಪ್ರಮಾಣ 8.5 ಸಾವಿರದಿಂದ 9 ಸಾವಿರದ ವರೆಗೆ ಇದೆ.
ಭಾರತದಲ್ಲಿ ಸಂಭವಿಸುತ್ತಿರುವ ವಾಹನ ಅಪಘಾತಗಳಲ್ಲಿ ಶೇಕಡ 93 ರಷ್ಟು ಅಪಘಾತಗಳು ವಾಹನ ಚಾಲಕರ ಸ್ವಯಂಕೃತ ಅಪರಾಧಗಳಿಂದ ಸಂಭವಿಸಿದರೆ, ಉಳಿದ ಕೇವಲ 7 ರಷ್ಟು ಪ್ರಮಾಣದಲ್ಲಿ ವಾಹನಗಳ ತಾಂತ್ರಿಕ ವೈಫಲ್ಯಗಳಿಂದ ಜರುಗುತ್ತಿವೆ. ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದ ಶೇಕಡ 30 ರಷ್ಟು, ಮದ್ಯಪಾನ ಸೇವನೆಯಿಂದಾಗಿ ಶೇಕಡ 33 ರಷ್ಟು ಅಪಘಾತಗಳು ಹಾಗೂ  ಉಳಿದ ಶೇಕಡ 30 ರಷ್ಟು ಅಪಘಾತಗಳು ಚಾಲಕರ ಮಿತಿಮೀರಿದ ವೇಗದಿಂದಾಗಿ ಸಂಭವಿಸುತ್ತಿವೆ.

ಕೇವಲ ಐದು ವರ್ಷಗಳ ಹಿಂದೆ ಪ್ರತಿ ಹತ್ತು ನಿಮಿಷಕ್ಕೆ ಭಾರತದಲ್ಲಿ  ಒಂದು ವಾಹನಗಳ ದುರಂತ ಸಂಭವಿಸುತ್ತಿತ್ತು. ಈಗ ಕೇವಲ ನಾಲ್ಕು ನಿಮಿಷಕ್ಕೆ ಒಂದರಂತೆ ದುರಂತ ಸಂಭವಿಸುತ್ತಿದ್ದು, ಪ್ರತಿ ಹತ್ತು ನಿಮಿಷಕ್ಕೆ ಒಂದು ಜೀವ ಬಲಿಯಾಗುತ್ತಿದೆ ಎಂದು ದೆಹಲಿ ಗಂಗಾರಾಂ ಆಸ್ಪತ್ರೆಯ ವೈದ್ಯ ತಜ್ಙ ಡಾ. ಬಿ.ಕೆ. ರಾವ್ ತಿಳಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಹದಿಮೂರು ಲಕ್ಷ ಜನತೆ ವಾಹನಗಳ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ವಾಹನ ಚಲಾಯಿಸುವಾಗ ಚಾಲಕರು ಮೊಬೈಲ್ ಬಳಕೆ ಮಾಡುತ್ತಿರುವುದು, ಇತ್ತೀಚೆಗೆ ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಕೇಂದ್ರ ಸಾರಿಗೆ ಸ್ಪೃಷ್ಟ ಪಡಿಸಿದೆ. ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ಬಳಿಯ ವಿಷ್ಣು ಸಮುದ್ರದ ಬಳಿ ಸರ್ಕಾರಿ ಬಸ್ ಕೆರೆಗೆ ಉರುಳಲು ಕಾರಣವಾದದ್ದು ಕೂಡ ಇಂತಹ ಕಾರಣದಿಂದಾಗಿ.

ಆಶ್ಚರ್ಯಕರ ಸಂಗತಿಯೆಂದರೆ, ದ್ವಿಚಕ್ರ ವಾಹನಗಳ ಅಪಘಾತ ಶೇಕಡ ಹದಿನಾರರ ಪ್ರಮಾಣದಲ್ಲಿ ಇದ್ದು, ಇವೆಲ್ಲವೂ ಮಿತಿ ಮೀರಿದ ವೇಗ ಮತ್ತು ಮೊಬೈಲ್ ಬಳಕೆಯಿಂದ ಸಂಭವಿಸುತ್ತಿವೆ. ವಿಶೇಷವಾಗಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಕನಿಷ್ಟ ತಿಂಗಳಿಗೆ ಹತ್ತು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರರು ಮರಣಹೊಂದುತ್ತಿದ್ದಾರೆ. ಸುಮಾರು ಮುವತ್ತರಿಂದ ಅರವತ್ತು ಅಡಿಗಳ ರಸ್ತೆಯ ವಿಸ್ತೀರ್ಣದಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸುತ್ತದೆ ಎಂದರೆ, ದ್ವಿಚಕ್ರ ಸವಾರರ ನಿರ್ಲಕ್ಷ್ಯ ಯಾವ ಪ್ರಮಾಣದಲ್ಲಿರಬಹುದು ನೀವೇ ಊಹಿಸಿಕೊಳ್ಳಿ.
ವಾಹನಗಳ ಚಾಲನೆ ಕುರಿತಂತೆ ಇರುವ ಅನನಭವ ಮತ್ತು ದಿವ್ಯ ನಿರ್ಲಕ್ಷ್ಯ ಹಾಗೂ ಪ್ರತಿ ಹಳ್ಳಿಗಳಲ್ಲಿ ಸೈಕಲ್ಗಳ ಸ್ಥಾನವನ್ನು ಆಕ್ರಮಿಸಿಕೊಂಡ ದ್ವಿಚಕ್ರವಾಹನಗಳು ಮತ್ತು ಬ್ಯಾಂಕ್ ನಿಂದ ಸುಲಭವಾಗಿ ಸಿಗುತ್ತಿರುವ ಸಾಲದ ಸೌಲಭ್ಯಗಳಿಂದಾಗಿ ಮಧ್ಯಮ ವರ್ಗಕ್ಕೆ ನಿಲುಕಿದ ಕಾರುಗಳಿಂದಾಗಿ ಇಡೀ ದೇಶವೇ ವಾಹನಗಳಿಂದ ಕಿಕ್ಕಿರಿಯುತ್ತಿದೆ. ಈವರೆಗೆ ಎಲ್ಲೆಂದರಲ್ಲಿ ಜನಜಂಗುಳಿ ಕಾಣುತ್ತಿದ್ದ ನಾವು ಈಗ ವಾಹನಗಳ ದಟ್ಟಣೆಯನ್ನೂ ಕಾಣುತ್ತಿದ್ದೇವೆ. ಇದು ಭಾರತದ ಸಮಸ್ಯೆಯೊಂದೇ ಅಲ್ಲ, ಬದಲಾಗಿ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ನಗರಗಳಲ್ಲಿ  ನಗರಗಳಲ್ಲಿ ಸುರಂಗ ರಸ್ತೆಗಳಾದವು, ಮೇಲಿನ ರಸ್ತೆಗಳಾದವೂ, ನಂತರ  ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ಅಸಹಾಯಕತೆಯಿಂದ ಕೈ ಚೆಲ್ಲಿ ಕುಳಿತಿರುವ ಸರ್ಕಾರಗಳು ಸಂಚಾರ ದಟ್ಟಣೆಯ ಸಮಸ್ಯೆಯನ್ನು ಜನರ ತಲೆಗೆ ವರ್ಗಾಯಿಸಿವೆ.

2012 ರಲ್ಲಿ 48 ಲಕ್ಷ ಕಾರುಗಳು ಭಾರತದಲ್ಲಿವೆ ಎಂದು ಅಂದಾಜಿಸಲಾಗಿದ್ದು, 2025 ರ ಇಸವಿ ವೇಳೆಗೆ ಭಾರತದಲ್ಲಿ ಕಾರುಗಳ ಸಂಖ್ಯೆ 4 ಕೊಟಿ, 60 ಲಕ್ಷ ಕ್ಕೆ ಏರಬಹುದೆಂದು ನಿರಿಕ್ಷಿಸಲಾಗಿದೆ.  ಈಗಿನ ವಾಹನಗಳ ಮಾರಾಟದ ಬೆಳವಣಿಗೆಯ  ವೇಗವನ್ನು ಮಾನದಂಡವನ್ನಾಗಿಟ್ಟುಕೊಂಡು ಇದನ್ನು ಅಂದಾಜಿಸಲಾಗಿದೆ. ಇವೊತ್ತಿನ ಭಾರತದ ರಸ್ತೆಗಳ ಪರಿಸ್ಥಿಯನ್ನು ಗಮನಿಸಿದರೆ, ಮುಂದಿನ ದಶಕಗಳಲ್ಲಿ ಜನ ಸಾಮಾನ್ಯರಿಗೆ ಭಾರತದ ರಸ್ತೆಗಳಲ್ಲಿ ನಡೆದಾಡಲು ಪ್ರವೇಶವಿಲ್ಲ ಎಂದಂತಾಯಿತು.
ರಸ್ತೆ ಸಂಚಾರದ ಸುರಕ್ಷತೆಯ ಕ್ರಮ ಕುರಿತಂತೆ ದೇಶದ ಎಲ್ಲಾ ರಾಜ್ಯಗಳ ಸಂಚಾರಿ ವಿಭಾಗದ ಪೊಲೀಸರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ, ಆದರೆ, ನಾವುಗಳು, ಅವಿವೇಕಿಗಳಂತೆ, ಅನಾಗರೀಕರಂತೆ ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು, ಇಲ್ಲವೆ, ಮಿತಿ ಮೀರಿದ ವೇಗದಲ್ಲಿ ಸಾವನ್ನು ಬೆನ್ನಟ್ಟಿ ಹೊರಟವರಂತೆ ವಾಹನ ಚಲಾಯಿಸಿದರೆ, ಇದಕ್ಕೆ ಪೊಲೀಸರ ಬಳಿ ಅಷ್ಟೇ ಅಲ್ಲ, ನಮ್ಮ ಬಳಿ ಕೂಡ ಯಾವ ಪರಿಹಾರ ತಾನೆ ಇದೆ?  ಅದನ್ನು ಎಲ್ಲಿ ಹುಡುಕುವುದು? ತಿಳಿಯುತ್ತಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ