Saturday, 30 November 2013

ಕನ್ನಡ ರಂಗಭೂಮಿಯ ಭೀಷ್ಮ- ಕಂದಗಲ್ ಹನುಮಂತರಾಯರು


1993 ರಲ್ಲಿ ಬಿಜಾಪುರದಲ್ಲಿ ನಡೆದ ನವರಸಪುರ ಉತ್ಸವ ದ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದೆ. ಕಂದಗಲ್ ಹನುಮಂತರಾವ್ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಟಿಗಾಗಿ ರಂಗಮಂದಿರಕ್ಕೆ ತೆರಳಿದ ನನಗೆ ಅಲ್ಲಿ ಹಾಕಲಾಗಿದ್ದ ಆಳೆತ್ತರದ ಭಾವಚಿತ್ರ ಗಮನೆಳೆಯಿತು. ಚಿತ್ರದ ಕೆಳೆಗೆ ಬರೆಯಲಾಗಿದ್ದ “ ಕನ್ನಡದ ಷೆಕ್ಸ್ ಪಿಯರ್ ಕಂದಗಲ್ ಹನುಮಂತರಾವ್ “ ಎಂಬ ಶಿರ್ಷಿಕೆ ನನ್ನಲ್ಲಿ ಕುತೂಹಲ ಉಂಟು ಮಾಡಿತು. ಏಕೆಂದರೆ, 1905 ಮತ್ತು 1910 ರ ನಡುವೆ ಕನ್ನಡದಲ್ಲಿ ಪ್ರಥಮವಾಗಿ ಷೆಕ್ಸ್ ಪಿಯರನ ನಾಟಕಗಳನ್ನು ಕನ್ನಡಕ್ಕೆ ತಂದವರು,ಮಂಡ್ಯ ಜಿಲ್ಲೆಯ ಎಂ.ಎಲ್. ಶ್ರೀಕಂಠೇಗೌಡರು. ಹಾಗಾಗಿ ನಾವು ಅವರನ್ನು ಕನ್ನಡದ ಷೆಕ್ಸ್ ಪಿಯರ್ ಎಂದು ಕರೆಯುತ್ತಿದ್ದೆವು. ಅಲ್ಲಿನ ಗೆಳೆಯರನ್ನು ಈ ಕುರಿತು ವಿಚಾರಿಸಿದಾಗ, ಷೆಕ್ಸ್ ಪಿಯರನ ನಾಟಕಗಳನ್ನು ಹನುಮಂತರಾಯರು ತಮ್ಮ ಕಂಪನಿಯಲ್ಲಿ ಪ್ರದರ್ಶನ ಮಾಡುತ್ತಿದ್ದರು. ಅದಕ್ಕಾಗಿ ಉತ್ತರ ಕರ್ನಾಟಕದ ಜನ ಪ್ರೀತಿಯಂದ ಅವರನ್ನು ಕನ್ನಡದ ಷೆಕ್ಸ್ ಪಿಯರ್ ಎಂದು ಕರೆಯುತ್ತಾರೆ ಎಂದು ಉತ್ತರಿಸಿದರು. ಅಲ್ಲಿಯವರೆ ಅವರ ಹೆಸರನ್ನು ಕೇಳದ ನನಗೆ, ಅವರ ಬದುಕನ್ನು ಗಮನಿಸಿದಾಗ. ರಂಗಭೂಮಿಗೆ ಅವರು ತೆತ್ತುಕೊಂಡ ಬಗೆ, ಅವರ ತ್ಯಾಗ ಇವುಗಳನ್ನು ಗಮನಿಸಿದಾಗ ನಿಜಕ್ಕೂ ಈ ಹೆಸರು ಸಾರ್ಥಕ ಎನಿಸಿತು.

೧೮೬೬ ಜನವರಿ ೧೧ರಂದು ಕಂದಗಲ್ ಗ್ರಾಮದ ಭೀಮರಾಯ ಮತ್ತು ಗಂಗೂಬಾಯಿ ದಂಪತಿಗಳ ಮೊದಲ ಪುತ್ರನಾಗಿ ಜನಿಸಿದ ಹನುಮಂತರಾಯರು ಪ್ರಾಥಮಿಕ ಶಿಕ್ಷಣವನ್ನು ತನ್ನ ಹಳ್ಳಿಯಲ್ಲೇ ಪಡೆದರು. ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹನುಮಂತರಾಯರಿಗೆ ಪಕ್ಕದ ಓಣಿಯ ಶರಣ ಸಂಪ್ರದಾಯದ ಗಿರಿಮಲ್ಲಯ್ಯ ಎಂಬುವವರ ಮನೆಯಲ್ಲಿ ಜರುಗುತ್ತಿದ್ದ ಭಜನೆ ಶರಣರ ಪ್ರವಚನಗಳ ಬಗ್ಗೆ ಬಾಲ್ಯದಿಂದಲೂ ಎಲ್ಲಿಲ್ಲದ ಆಸಕ್ತಿ. ಈ ಕಾರ್ಯಕ್ರಮ ಗಳಿಗೆ ಕದ್ದು ಮುಚ್ಚಿ ಹಾಜರಾಗುತ್ತಿದ್ದ ಬಾಲಕ ಹನುಮಂತರಾಯ ಭಜನೆ ಹಾಡುವುದು, ಹಾರ್ಮೊನಿಯಂ ನುಡಿಸುವುದು ಇವುಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ.

ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಂದೆ ಭೀಮರಾಯರು ಹನುಮಂತರಾಯ ಹಾಗೂ ತಮ್ಮ ಶ್ರೀನಿವಾಸರಾಯನನ್ನು ಬಿಜಾಪುರದಲ್ಲಿ ಮನೆಮಾಡಿ ಇರಿಸಿದಾಗ ಆ ವೇಳೆಗಾಗಲೆ ಬಿಜಾಪುರಕ್ಕೆ ಗಣೇಶೋತ್ಸವ ಕಾಲಿಟ್ಟಿತ್ತು. ಪುಣೆಯಲ್ಲಿ ತಿಲಕರು ಗಣೇಶೋತ್ಸವವನ್ನು ವಿಜೃಂಬಣೆಯಿಂದ ಆಚರಿಸುವ ಸಂಪ್ರದಾಯವನ್ನು ಹುಟ್ಟು ಹಾಕಿದ್ದರಿಂದ ಬಿಜಾಪುರದಲ್ಲೂ ಸಹ ಈ ಉತ್ಸವದಲ್ಲಿ ನಾಟಕ ಸಂಗೀತ ಕಾರ್ಯಕ್ರಮಗಳು ಜರುಗುತ್ತಿದ್ದವು. ಈ ಕಾರ್ಯಕ್ರಮಗಳು ಹನುಮಂತರಾಯರ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿದವು.

ಪ್ರೌಢಶಾಲೆ ಶಿಕ್ಷಣದ ಅವಧಿಯಲ್ಲಿ ವಿದ್ಯಾಭ್ಯಾಸಕ್ಕಿಂತ ನಾಟಕಗಳತ್ತ ಒಲವು ತೋರಿದ ಹನುಮಂತರಾಯರು ಅನೇಕ ಏಕಾಂಕ ನಾಟಕಗಳನ್ನು ಬರೆದು ಗೆಳೆರೊಡಗೂಡಿ ಪ್ರದರ್ಶಿಸಿದರು. ಬಿಜಾಪುರದ ಪ್ರತಿಷ್ಟಿತ ವ್ಯಕ್ತಿಗಳಾದ ಫ.ಗು. ಹಳಕಟ್ಟಿ, ಶ್ರೀನಿವಾಸ ಕೌಜಲಗಿ ಮುಂತಾದವರ ಪ್ರಶಂಸೆಗೆ ಪಾತ್ರರಾಗಿದ್ದರು. ನಾಟಕದ ಆಸಕ್ತಿಯಿಂದಾಗಿ ಮುಲ್ಕಿ ಪರೀಕ್ಷೆಯಲ್ಲಿ ಫೇಲಾದ ಹನುಮಂತರಾಯರು ಮನೆಯವರ ವಿರೋಧ ಎದುರಿಸಲಾರದೆ ೧೯೧೮ರಲ್ಲಿ ಪುಣೆಗೆ ತೆರಳಿ ಮಿಲಿಟರಿ ಉದ್ಯೋಗಕ್ಕೆ ಸೇರ್ಪಡೆಯಾದರು.


ನಾಟಕ ಕಂಪನಿಗಳ ತವರೂರು ಎನಿಸಿದ್ದ ಪುಣೆ ನಗರ ಹನುಮಂತರಾಯರ ನಾಟಕದ ಆಸಕ್ತಿಗೆ ಮತ್ತಷ್ಟು ನೀರೆರೆದು ಪೋಷಿಸಿತು. ಪುಣೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಮರಾಠಿ ನಾಟಕಗಳನ್ನು ನೋಡುತ್ತಾ ಅಲ್ಲಿನ ನಾಟಕಕಾರ ರೊಂದಿಗೆ ಸಂಬಂಧ ಬೆಳೆಸುತ್ತಾ ನಾಟಕ ರಚನೆಯ ತಂತ್ರಗಳನ್ನು, ನಟನೆಯ ಗುಟ್ಟುಗಳನ್ನು ಕಲಿತರು. ಕೇವಲ ಮೂರು ವರ್ಷಗಳ ಕಾಲ ಪುಣೆಯಲ್ಲಿದ್ದ ಹನುಮಂತರಾಯರು ತಾಯಿಯ ಅನಾರೋಗ್ಯದಿಂದಾಗಿ ಮಿಲಿಟರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ತನ್ನ ಹುಟ್ಟೂರಿಗೆ ಮರಳಬೇಕಾಯಿತು. ಚಿಕ್ಕ ಹಳ್ಳಿಯಾಗಿದ್ದ ಕಂದಗಲ್ ಗ್ರಾಮದಲ್ಲಿ ಹನುಮಂತರಾಯರ ಬದುಕು ಅಸಹನೀಯ ಎನಿಸಿದಾಗ ಮತ್ತೆ ಅವರು ತಾಯಿಯೊಂದಿಗೆ ಬಿಜಾಪುರಕ್ಕೆ ತೆರಳಿ ತಮ್ಮನ ಮನೆಯಲ್ಲಿ ವಾಸಿಸತೊಡಗಿದರು. ಜೊತೆಗೆ ಹಳೆಯ ಗೆಳೆಯರ ನೆರವಿನಿಂದ ಋದನಾಪುರ ಎಂಬುವವರ ಶಿಂಗಾರಿ ಎಂಬ ಕಂಪನಿಯಲ್ಲಿ ಹೊಲಿಗೆ ಕೆಲಸಕ್ಕೆ  ಸೇರ್ಪಡೆಯಾದರು.

ಹನುಮಂತರಾಯರಿಗೆ ಉದ್ಯೋಗವೆಂಬುದು ಕೇವಲ ನಿಮಿತ್ತವಾಗಿತ್ತು. ಅವರ ಆಸಕ್ತಿಯೆಲ್ಲಾ ನಾಟಕಗಳತ್ತಲೇ ಇತ್ತು. ಹಾಗಾಗಿ ೧೯೨೧ರಲ್ಲಿ ‘ಸಂಧ್ಯಾರಾಗ’ ಎಂಬ ಐತಿಹಾಸಿಕ ನಾಟಕವನ್ನು ಬರೆದು, ಸ್ನೇಹಿತರೊಡಗೂಡಿ ‘ಶ್ರೀಕೃಷ್ಣ ನಾಟಕ ಕಂಪನಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನಾಟಕದ ಪರಿಕರಗಳನ್ನು ಬಾಡಿಗೆಗೆ ತಂದು ನಾಟಕ ಪ್ರದರ್ಶಿಸತೊಡಗಿದರು. ಆ ವೇಳೆಗಾಗಲೇ ಬಿಜಾಪುರದ ಸಿವಿಲ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ತಮ್ಮ ಶ್ರೀನಿವಾಸರಾಯ ಅಣ್ಣನ ಹವ್ಯಾಸಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದಾಗ ವಿಧಿ ಇಲ್ಲದೆ ಹನುಮಂತರಾಯರು ತಮ್ಮನ ಮನೆಯನ್ನು ಹಾಗೂ ಬಿಜಾಪುರವನ್ನು ತೊರೆಯಬೇಕಾಯಿತು.

ನಿರುದ್ಯೋಗಿಯಾಗಿದ್ದ ಹನುಮಂತರಾಯರಿಗೆ ಅವರ ಚಿಕ್ಕಪ್ಪ ಬಾಗಲಕೋಟೆಯಲ್ಲಿ ಸೊಲ್ಲಾಪುರ ಮೂಲದ ಅಶೋಕ ಸಹಕಾರಿ ಬ್ಯಾಂಕ್‌ನಲ್ಲಿ ಗುಮಾಸ್ತೆಯ ಹುದ್ದೆಯೊಂದನ್ನು ಕೊಡಿಸಿದರು. ಬಾಗಲಕೋಟೆಗೆ ಬಂದು ನೆಲೆಸಿದ ಹನುಮಂತರಾಯರಿಗೆ ಸಮೀಪದ ಗುಳೇದಗುಡ್ಡ ಎಂಬ ಚಿಕ್ಕ ಪಟ್ಟಣ ಆಕರ್ಷಣೆಯ ಕೇಂದ್ರವಾಯತು.

ಅಂದಿನ ಬಿಜಾಪುರ ಜಿಲ್ಲೆಯ ದಕ್ಷಿಣ ಭಾಗದ ಇಲಕಲ್, ಗುಳೇದಗುಡ್ಡ, ಕಮತಗಿ, ಗಜೇಂದ್ರಗಢ, ರಬಕವಿ, ಬನಹಟ್ಟಿ, ಬಾದಾಮಿ ಇವೆಲ್ಲವೂ ನಾಟಕಕಾರರ, ನಾಟಕ ಕಂಪನಿಗಳ, ಕಲಾವಿದರ ಕಾಶಿ ಎನಿಸಿದ್ದವು. ಅಲ್ಲದೆ ಪುರುಷರೇ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಸಂಪ್ರದಾಯವನ್ನು ಮುರಿದು ಹಾಕಿದ ಕೀರ್ತಿ ಈ ಪ್ರದೇಶಕ್ಕೆ ಸಲ್ಲುತ್ತದೆ. ಗುಳೇದಗುಡ್ಡದ ಯಮುನಾಬಾಯಿ ಮತ್ತು ಗಂಗೂಬಾಯಿ ಕಂಪನಿ ನಾಟಕಗಳಲ್ಲಿ ಪ್ರಥಮ ಬಾರಿಗೆ ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿ ದಾಖಲೆ ಸ್ಥಾಪಿಸಿದರು.


ನಾಟಕಗಳಿಗಾಗಿ ಪ್ರತಿವಾರ ಗುಳೇದಗುಡ್ಡಕ್ಕೆ ಹೋಗುತ್ತಿದ್ದ ಹನುಮಂತರಾಯರು ನಟಿಯಾಗಿ ಹೆಸರುವಾಸಿಯಾಗಿದ್ದ ಯಮುನಾಬಾಯಿಯನ್ನು ಭೇಟಿಮಾಡಿ ಬರುತ್ತಿದ್ದರು. ಆಕೆಯ ಮೂಲಕ ಗುಳೇದಗುಡ್ಡದ ಭೀಮರಾಯರ ಪುತ್ರಿ ಅಂಬಾಬಾಯಿಯನ್ನು ೧೯೨೫ರಲ್ಲಿ ವಿವಾಹವಾಗಿ ಗುಳೇದಗುಡ್ಡದ ಜೊತೆ ಸಂಬಂಧವನ್ನು ಶಾಶ್ವತವಾಗಿರಿಸಿಕೊಂಡರು.

ರಾಯರ ನಾಟಕಗಳ ಬಗೆಗಿನ ಆಸಕ್ತಿಯನ್ನು ಗಮನಿಸಿದ ಯಮುನಾಬಾಯಿಯ ‘ನೀವೇಕೆ ನಾಟಕ ಕಂಪನಿ ಸೇರಿ ನಾಟಕಗಳನ್ನು ಬರೆದುಕೊಡಬಾರದು’ ಎಂಬ ಪ್ರಶ್ನೆಗೆ ಉತ್ತರವಾಗಿ ಪತ್ನಿ ಹಾಗೂ ಮಾವನವರ ವಿರೋಧವನ್ನು ಲೆಕ್ಕಿಸದೆ ಬ್ಯಾಂಕ್ ಉದ್ಯೋಗಕ್ಕೆ ತಿಲಾಂಜಲಿಯಿತ್ತು ನಾಟಕ ಕಂಪನಿಗೆ ಸೇರ್ಪಡೆಗೊಂಡರು.

ಯಮುನಾಬಾಯಿಯ ನಾಟಕ ಕಂಪನಿಗೆ ನಾಟಕಗಳನ್ನು ಬರೆಯುತ್ತಾ, ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಾ ಸುಮಾರು ೬ ವರ್ಷಗಳ ಕಾಲ ಕರ್ನಾಟಕವನ್ನೆಲ್ಲಾ ಸುತ್ತಿದ ರಾಯರು ಉಡುಪಿಯಲ್ಲಿದ್ದಾಗ ನಾಟಕ ಕಂಪನಿಯ ನಟರೆಲ್ಲಾ ಕೈಕೊಟ್ಟು ಕಂಪನಿ ಮುಚ್ಚಿದ ಕಾರಣ ಮತ್ತೆ ಗುಳೇದಗುಡ್ಡಕ್ಕೆ ಬರಿಗೈಯ್ಯಲ್ಲಿ ವಾಪಸಾದರು. ಈ ವೇಳೆಗೆ ಯರಾಸಿ ಬರಮಪ್ಪ ಗದುಗಿನಲ್ಲಿ ಪ್ರಾರಂಭಿಸಿದ ವಾಣಿವಿಲಾಸ ನಾಟಕ ಕಂಪನಿಗೆ ನಾಟಕಕಾರರಾಗಿ ಸೇರಿಕೊಂಡರು. ಈ ಕಂಪನಿಯಲ್ಲಿ ಹಿಂದೂಸ್ಥಾನಿ ಗಾಯಕರಾಗಿ ಹೆಸರುಮಾಡಿದ್ದ ಮಲ್ಲಿಕಾರ್ಜುನ ಮನ್ಸೂರ್, ಹೆಸರಾಂತ ನಟರಾಗಿದ್ದ ಹಂದಿಗನೂರು ಸಿದ್ದರಾಮಪ್ಪ ಮುಂತಾದವರು ನಟಿಸುತ್ತಿದ್ದರಿಂದ ರಾಯರು ಬರೆದ ವರಪ್ರಧಾನ, ಅಕ್ಷಯಾಂಭರ ನಾಟಕಗಳು ಕಂಪನಿಗೆ ಹೆಸರು ತಂದುಕೊಟ್ಟವು. ಕಂಪನಿಗೆ ಹಣ ಬರತೊಡಗಿದಂತೆ ಮಾಲೀಕ ಬರಮಪ್ಪ ಮದ್ಯ, ಮದಿರೆಯ ದಾಸನಾಗಿದ್ದರಿಂದ ಈ ಕಂಪನಿಯಲ್ಲೂ ಕೂಡ ಹನುಮಂತರಾಯರು ಬದುಕಿನ ರಥವನ್ನು ನೆಮ್ಮದಿಯಿಂದ ಎಳೆಯಲು ಸಾಧ್ಯವಾಗಲಿಲ್ಲ.

ಈಗಾಗಲೇ ಎರಡು ಕಂಪನಿಗಳಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ಅನುಭವಗಳಿಸಿದ್ದರಿಂದ ತಾನೇ ಏಕೆ ನಾಟಕ ಕಂಪನಿಯೊಂದನ್ನು ಪ್ರಾರಂಭಿಸಬಾರದು ಎಂದು ಕೊಂಡು ಎರಡನೇ ಬಾರಿಗೆ ಹೂಗಾರ ಭೀಮರಾಯರ ಜೊತೆ ‘ಭಾಗ್ಯೋದಯ ನಾಟಕ ಕಂಪನಿ’ ಯನ್ನು ಆರಂಭಿಸಿದರು. ರಾಯರ ಹೊಸ ಕಂಪನಿಗೆ ಅಮೀರ್‌ಬಾಯಿ ಕರ್ನಾಟಕಿ, ಹಂದಿಗನೂರು ಸಿದ್ದರಾಮಪ್ಪ ಮುಂತಾದವರು ಕಲಾವಿದರಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಅವರು ಬರೆದ ‘ಜ್ವಾಲೆ’, ‘ಬಡತನದ ಭೂತ’ ಎಂಬ ಸಾಮಾಜಿಕ ಹಾಗೂ ಅವರ ಹೆಸರನ್ನು ರಂಗಭೂಮಿಯಲ್ಲಿ ಚಿರಸ್ಥಾಯಿಗೊಳಿಸಿದ ‘ರಕ್ತರಾತ್ರಿ’ ಎಂಬ ಐತಿಹಾಸಿಕ ನಾಟಕಗಳನ್ನು ತಮ್ಮ ಕಂಪನಿಯ ಮೂಲಕ ಕರ್ನಾಟಕದೆಲ್ಲೆಡೆ ಪ್ರದರ್ಶಿಸಿದರು. ಹೈದರಾಬಾದಿನಲ್ಲಿ ನಾಟಕ ಕಂಪನಿ ಕ್ಯಾಂಪ್ ಹಾಕಿದ್ದ ಸಮಯದಲ್ಲಿ ಹೆಚ್ಚಿನ ಸಂಭಾವನೆ ಆಸೆಗಾಗಿ ಕಲಾವಿದರೆಲ್ಲ ರಾತ್ರೋರಾತ್ರಿ ಬೇರೊಂದು ಕಂಪನಿಗೆ ಹೋದಾಗ ಕಂಪನಿ ಮುಚ್ಚಿದ ರಾಯರು ಯಥಾಸ್ಥಿತಿಯಲ್ಲಿ ಗುಳೇದಗುಡ್ಡಕ್ಕೆ ಮರಳಿದರು.
ಕಂಪನಿ ಸ್ಥಗಿತಗೊಳಿಸಿ ಹಿಂತಿರುಗಿ ಬಂದ ರಾಯರು, ಯಾವುದೇ ನಾಟಕ ಕಂಪನಿಗೆ ಸೇರದೆ ನಾಟಕ ಕಲಿಸುವ ವೃತ್ತಿಯನ್ನು ಮುಖ್ಯವಾಗಿರಿಸಿಕೊಂಡು ಜೀವಿಸತೊಡಗಿದರು. ಇದೇ ವೇಳೆ ಜಾತ್ರೆ ಸಂದರ್ಭಗಳಲ್ಲಿ ಮಾತ್ರ ನಾಟಕವಾಡುತ್ತಿದ್ದ ಕೆರೂರಿನ ಶಾರದಾ ನಾಟಕ ಮಂಡಳಿಗೆ ‘ಬಾಣಸಿಗಭೀಮ’ ಎಂಬ ನಾಟಕವನ್ನುಬರೆದುಕೊಟ್ಟರು. ಈ ನಾಟಕ ಉತ್ತರ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿ ನಾಟಕಗಳಲ್ಲಿ ಒಂದಾಯಿತು.

ನಾಟಕ ಕಂಪನಿ ಹುಟ್ಟುಹಾಕಿ ಕೈ ಸುಟ್ಟುಕೊಂಡಿದ್ದರೂ, ಹಳೇ ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಬೇಕೆಂಬ ಆಸೆ ರಾಯರನ್ನು ಕಾಡುತ್ತಲೇ ಇತ್ತು. ಅದರಂತೆ ಮೂರನೇ ಬಾರಿಗೆ ತನ್ನ ಪತ್ನಿ ಮತ್ತು ನಾದಿನಿಯ ಮೈಮೇಲಿನ ಒಡವೆ ಒತ್ತೆ ಇಟ್ಟು ಅರವಿಂದ ಸಂಗೀತ ನಾಟಕ ಮಂಡಳಿ ಕಟ್ಟಿಕೊಂಡು ದಾವಣಗೆರೆ, ಹಾವೇರಿಯಲ್ಲಿ ಯಶಸ್ವಿ ಕ್ಯಾಂಪ್ ಮುಗಿಸಿ, ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಕ್ಯಾಂಪ್ ಹಾಕಿದರು. ಬೆಂಗಳೂರಿನಲ್ಲಿ ರಾಯರ ನಾಟಕಗಳಿಗೆ ಒಳ್ಳೆಯ ಹೆಸರು ಬಂದರೂ ಹಣ ಮಾತ್ರ ದಕ್ಕಲಿಲ್ಲ. ಇದೇ ಸಂದರ್ಭದಲ್ಲಿ ಮೈಸೂರು ಮಹಾರಾಜರ ಎದುರು ‘ಅದ್ಭುತ ರಾಮಾಯಣ’ ನಾಟಕ ಪ್ರದರ್ಶಿಸುವ ಅವಕಾಶ ರಾಯರಿಗೆ ದೊರೆಯಿತು.

ಮೈಸೂರು ಕ್ಯಾಂಪ್‌ನಲ್ಲಿ ರಾಯರ ನಾಟಕಗಳಿಗೆ ಜನರ ಪ್ರತಿಕ್ರಿಯೆ ಚೆನ್ನಾಗಿದ್ದರೂ, ಪೌರಾಣಿಕ ನಾಟಕಗಳಿಗೆ ಹಣ ನೀರಿನಂತೆ ಖರ್ಚಾಗುತ್ತಿದ್ದರಿಂದ ಕಂಪನಿಯ ಆರ್ಥಿಕ ಸ್ಥಿತಿ ಸುಧಾರಿಸಲೇ ಇಲ್ಲ. ಜೊತೆಗೆ ಮೈಸೂರು ಮಹಾರಾಜರ ಮುಂದೆ ನಾಟಕ ಪ್ರದರ್ಶಿಸುವ ಅವಕಾಶ ಕೈ ತಪ್ಪಿದ್ದರಿಂದ, ನಾಟಕದ ಪರಿಕರಗಳನ್ನೆಲ್ಲಾ ಹಾವೇರಿಯಲ್ಲಿ ಒತ್ತೆ ಇಟ್ಟು, ಕಲಾವಿದರಿಗೆ ಸಂಭಾವನೆ ಕೊಟ್ಟು, ಇನ್ನೆಂದೂ ನಾಟಕ ಕಂಪನಿ ಕಟ್ಟುವ ಕಾರ್ಯ ಮಾಡಬಾರದೆಂದು ತೀರ್ಮಾನಿಸಿ, ನಿರಾಸೆಯಿಂದ ಬಸವಳಿದ ರಾಯರು ಬರಿಗೈಲಿ ಮನೆಗೆ ಬಂದು ಹೆಂಡತಿ, ಮಕ್ಕಳೆದುರು ತಲೆತಗ್ಗಿಸಿ ನಿಂತರು.
ಹೀಗೆ ಸುದೀರ್ಘ ೩೦ ವರ್ಷಗಳ ಕಾಲ ನಾಟಕ ರಂಗದಲ್ಲಿ ತೇಲಿ ಮುಳುಗಿ ಕನ್ನಡದ ನಾಟಕ ಪ್ರಕಾರದಲ್ಲಿ ‘ರಕ್ತರಾತ್ರಿ’ ಎಂಬ ಶ್ರೇಷ್ಠ ಕೃತಿ ರಚಿಸಿದ ರಾಯರಿಗೆ ಅಂತಿಮವಾಗಿ ದೊರೆತಿದ್ದು, ಬಡತನ ಮತ್ತು ಸಾಲ ಹಾಗೂ ಎದೆಯುದ್ದ ಬೆಳೆದು ನಿಂತ ಹೆಣ್ಣುಮಕ್ಕಳು.


ಇಂತಹ ಸ್ಥಿತಿಯಲ್ಲೂ ಸಹ ಗುಳೇದಗುಡ್ಡ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಯುವಕ ಸಂಘಗಳು ಹಬ್ಬ, ಜಾತ್ರೆ ಇತ್ಯಾದಿ ಸಂದರ್ಭಗಳಲ್ಲಿ ನಾಟಕ ಕಲಿಸಲು ಆಹ್ವಾನಿಸಿದರೆ, ಯಾವುದೇ ಆಡಂಬರವಿಲ್ಲದೆ ಒಪ್ಪಿಕೊಂಡು, ಒಂದು ಕಟ್ಟು ಬೀಡಿ, ಎರಡು ಕಪ್ ಚಹಾ, ಎರಡು ಹೊತ್ತಿನ ಊಟಕ್ಕೆ ನಾಟಕ ಕಲಿಸುತ್ತಿದ್ದರು. ನಾಟಕದ ದಿನ ಕಲಾವಿದರು ಉಡುಗೊರೆಯಾಗಿ ನೀಡುತ್ತಿದ್ದ ಅಂಗಿ, ಟವೆಲ್, ಪಂಚೆ ಇವುಗಳನ್ನು ಸ್ವೀಕರಿಸಿ, ನಿರ್ಲಿಪ್ತರಾಗಿ ಕೊಡೆ ಹಿಡಿದು ತನ್ನ ಮನೆಗೆ ನಡೆದು ಬರುತ್ತಿದ್ದರು.

ತಮ್ಮ ಜೀವಿತಾವಧಿಯಲ್ಲಿ ೭ ಏಕಾಂಕ ನಾಟಕಗಳು, ೧೪ ಪೌರಾಣಿಕ ನಾಟಕಗಳು, ೪ ಐತಿಹಾಸಿಕ ನಾಟಕಗಳು ಹಾಗೂ ೧೨ ಸಾಮಾಜಿಕ ನಾಟಕಗಳನ್ನು ಬರೆದು, ಕನ್ನಡದ ಪ್ರಮುಖ ನಾಟಕಕಾರರ ಜೊತೆ ಗುರುತಿಸಿಕೊಂಡಿದ್ದ ಕಂದಗಲ್ ಹನುಮಂತರಾಯರ ಕಡೆಯ ದಿನಗಳು ಅತ್ಯಂತ ಶೋಚನೀಯವಾಗಿದ್ದವು.

ನಾಟಕ ಕಲಾವಿದರು ತಂದುಕೊಡುತ್ತಿದ್ದ ದವಸ-ದಾನ್ಯಗಳಲ್ಲಿ ಜೀವನ ಸಾಗಿಸುತ್ತಿದ್ದ ರಾಯರಿಗೆ ಕೊನೆಯ ದಿನಗಳಲ್ಲಿ ಸರ್ಕಾರ ನೀಡುತ್ತಿದ್ದ ೧೦೦ರೂ ಮಾಸಾಶನ ಏಕೈಕ ಆಸರೆಯಾಗಿತ್ತು. ಬೆಳೆದ ಹೆಣ್ಣು ಮಕ್ಕಳ ವಿವಾಹ ಮಾಡಲಾಗದೆ ಅಸಹಾಯಕರಾಗಿ ನಿಂತಾಗ, ಸುಳ್ಯದ ದೇಸಾಯಿಯವರು ತಾವೇ ಮುಂದೆ ನಿಂತು ವಿವಾಹ ಮಾಡುವುದರ ಮೂಲಕ ರಾಯರಿಗೆ ನೆರವಾದರು.

ಹೀಗೆ ತಾವು ಪ್ರೀತಿಸಿದ, ಆರಾಧಿಸಿದ ನಾಟಕ ಕ್ಷೇತ್ರಕ್ಕೆ ತಮ್ಮದೆಲ್ಲವನ್ನೂ ಧಾರೆ ಎರೆದು ಬರಿಗೈ ದಾಸರಾದ ಹನುಮಂತರಾಯರು ತಮ್ಮ ಕೊನೆಯ ದಿನಗಳಲ್ಲಿ ಬಡತನದ ಬೇಗೆಯಿಂದ ನಲುಗಿಹೋದರು. ನಾಟಕ ರಂಗದಲ್ಲಿ ಅವರಿಗೆ ಸಿಕ್ಕ ಬಳುವಳಿ ಭಿನ್ನವತ್ತಳೆಗಳು ಹಾಗೂ ಕನ್ನಡದ ಷೇಕ್ಸ್‌ಪಿಯರ್ ಎಂಬ ಬಿರುದು ಮಾತ್ರ. ಆದರೆ ಈ ಬಿರುದು ಬಾವಲಿಗಳು ಅವರ ಹೊಟ್ಟೆ ತುಂಬಿಸಲಿಲ್ಲ. ಅವರ ಕುಟುಂಬದ ಕಷ್ಟ ತೀರಿಸಲಿಲ್ಲ. ಇದು ಇತಿಹಾಸದ ವ್ಯಂಗ್ಯ ದುರಂತಗಳಲ್ಲಿ ಒಂದು.

ಇಂದಿಗೂ ಕೂಡ ಉತ್ತರ ಕರ್ನಾಟಕದ ಜನತೆ ರಾಯರನ್ನು ತುಂಬು ಹೃದಯದಿಂದ ನೆನಪಿಸಿಕೊಂಡು ಅವರ ಪ್ರತಿಭೆಯ ಬಗ್ಗೆ ಮಾತನಾಡುತ್ತಾರೆ. ಬಿಜಾಪುರದ ಕಲಾಮಂದಿರಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಕಂದಗಲ್ ಹನುಮಂತರಾಯ ಕಲಾಮಂದಿರ ಎಂದು ನಾಮಕರಣ ಮಾಡಿ ರಾಯರಿಗೆ ಗೌರವ ಸೂಚಿಸಿದೆ. ಅದೊಂದು ಸಮಾಧಾನಕರ ಸಂಗತಿ.     
                                 ( ಗುಮ್ಮಟನಾಡಿನ ಕಥನ ಲೇಖನ ಸರಣಿಯಿಂದ)     

1 comment:

  1. ಭೂಮಿಗೀತೆ ಬ್ಲಾಗಲ್ಲಿ " ನಾಟ್ಯ ಕವಿ ಕೇಸರಿ ”ಕಂದಗಲ್ಲ ಹನುಮಂತರಾಯರ ಬಗ್ಗೆ ಓದಿ ಅತ್ಯಂತ ಆನಂದವಾಯಿತು.
    ಅವರ ನಾಟಕದಲ್ಲಿನ ಸಂಭಾಷಣೆಗಳನ್ನು ಓದಿಯೆ ಸಂತೋಷಿಸಬೇಕು.ಭಾಷಾ ಸೌಂದರ್ಯದ ವೈಖರಿ ಅದ್ಭುತವಾದದ್ದು.

    ReplyDelete