Monday, 13 January 2014

ತ್ಯಾಗರಾಜರ ಆರಾಧನೆಯಲ್ಲಿ ನೈಪಥ್ಯಕ್ಕೆ ಸರಿದ ನಾಗರತ್ನಮ್ಮನೆಂಬ ನಾದದೇವತೆ.


ತಂಜಾವೂರು ಸಮೀಪದ ತಿರುವಯ್ಯೂರು ಎಂಬ ಪುಟ್ಟ ಗ್ರಾಮವನ್ನು ( ಈಗ ಪಟ್ಟಣವಾಗಿ ಬೆಳದಿದೆ)  ದಕ್ಷಿಣ ಭಾರತದ ಕರ್ನಾಟಕ ಸಂಗೀತದ ತೊಟ್ಟಿಲು ಎಂದು ಕರೆದರೂ ತಪ್ಪಿಲ್ಲ. ಕರ್ನಾಟಕ ಸಂಗೀತದ ಪಿತಾಮಹಾರೆಂದು ಕರೆಯಲಾಗುವ ಕರ್ನಾಟಕದ ಪುರಂದರದಾಸರು ಮತ್ತು ಆಂಧ್ರದ ಅನ್ನಮಯ್ಯ ಇವರನ್ನು ಹೊರತು ಪಡಿಸಿದರೆ, ತ್ರೀಮೂರ್ತಿಗಳೆಂದು ಖ್ಯಾತರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು  ಶ್ಯಾಮಶಾಸ್ತ್ರಿ ಈ ಮೂವರು ತಿರುವಯ್ಯೂರು ಗ್ರಾಮದವರು. ಜೊತೆಗೆ ನಮ್ಮ ಕನ್ನಡದ ಬೈರವಿ ಕೆಂಪೇಗೌಡ ಹಾಗೂ ಮೈಸೂರು ವಾಸುದೇವಾಚಾರ್ಯ ಇವರಿಗೆ ಸಂಗೀತ ಧಾರೆಯೆರೆದ ಪಟ್ಟಣಂ ಸುಬ್ರಮಣ್ಯ ಅಯ್ಯರ್ ಕೂಡ ಇದೇ ಊರಿನವರು.

 ಹೀಗೆ ಕರ್ನಾಟಕ ಸಂಗೀತಕ್ಕೆ ಅನೇಕ ಪಿತಾಮಹಾರನ್ನು ಮತ್ತು ವಿಧ್ವಾಂಸರನ್ನು ಕೊಟ್ಟ ತಿರುವಯ್ಯುರು ಕಾವೇರಿ ನದಿಯ ದಡದಲ್ಲಿದ್ದು, ತಂಜಾವೂರನ್ನು ಆಳಿದ ವಿಜಯನಗರ ಸಾಮಂತರು ಮತ್ತು ಮರಾಠ ದೊರೆಗಳ ಆಳ್ವಿಕೆಯಲ್ಲಿ  ಸಂಗೀತದ ಕಾಶಿಯೆಂದು ಪ್ರಸಿದ್ಧಿ ಪಡೆಯಿತು. ಮರಾಠ ದೊರೆ ಸರ್ಫೊಜಿ ಕಟ್ಟಿಸಿದ ಸಂಗೀತ ಮಹಲ್ ಕಟ್ಟಡ ಈಗಲೂ ಸಹ ಕಾವೇರಿಯ ದಡದಲ್ಲಿದ್ದು ತನ್ನ ಗತ ವೈಭವವನ್ನು ಸಾರುತ್ತಿದೆ.
ಕಳೆದ ಆರು ದಶಕಗಳಿಂದ ಈ ಊರಿನಲ್ಲಿ ಪ್ರತಿ ವರ್ಷ ನಡೆಯುವ ತ್ಯಾಗರಾಜರ ಆರಾಧನೆ ಎಂಬ ಐದು ದಿನಗಳ ಸಂಗೀತ ಉತ್ಸವಕ್ಕೆ ದೇಶ ವಿದೇಶಗಳಿಂದ ಸಂಗೀತ ಪ್ರೇಮಿಗಳು ಆಗಮಿಸುತ್ತಾರೆ. ಈ ಉತ್ಸವದಲ್ಲಿ ಬೆಳಿಗ್ಗೆ ಆರುಗಂಟೆಯಿಂದ ಮಧ್ಯರಾತ್ರಿ ಹನ್ನೆರೆಡು ಗಂಟೆಯವರೆಗೆ ನಿರಂತರ ಕರ್ನಾಟಕ ಸಂಗೀತದ ಗಾಯನ, ಪಿಟಿಲು, ವೀಣಾ ವಾದನ, ನಾದಸ್ವರ ಹೀಗೆ ಸಂಗೀತ ರಸದೌತಣವನ್ನು ಕಲಾವಿದರು ಉಣಬಡಿಸುತ್ತಾರೆ. ಈ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ನೀಡುವುದು ಕರ್ನಾಟಕ ಸಂಗೀತದ ಪ್ರತಿಯೊಬ್ಬ ಕಲಾವಿದನ/ಳ ಜೀವಮಾನದ ಕನಸು ಕೂಡ ಹೌದು
.
ಈ ವರ್ಷ ಜನವರಿ 17 ರಿಂದ 21 ರವರೆಗೆ ತಿರುವಯ್ಯೂರಿನಲ್ಲಿ ತ್ಯಾಗರಾಜರ ಆರಾಧನೆ ನಡೆಯಲಿದ್ದು ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಇಡೀ ದೇಶವೇ ತಿರುಗಿ ನೋಡುವಂತ ಇಂತಹ ಉತ್ಸವದ ಹಿಂದೆ ಕನ್ನಡದ ಹೆಣ್ಣು ಮಗಳೊಬ್ಬಳ ತ್ಯಾಗ ಮತ್ತು ಸಾಧನೆಯ ಇತಿಹಾಸವಿದೆ ಎಂಬುದು ಬಹುತೇಕ ಕನ್ನಡಿಗರಿಗೆ ತಿಳಿಯದಿರುವ ವಿಚಾರ. 1910 ರ ದಶಕದಲ್ಲಿ ತನ್ನ ಗಾಯನ, ನೃತ್ಯದಿಂದ ದಕ್ಷಿಣ ಭಾರತದ  ಕರ್ನಾಟಕ ಸಂಗೀತದಲ್ಲಿ  ಅದ್ವಿತಿಯ ಕಲಾವಿದೆಯೆಂದು ಹೆಸರು ಮಾಡಿದ್ದ ದೇವದಾಸಿ ಕುಟುಂಬದಿಂದ ಬಂದ ಬೆಂಗಳೂರು ನಾಗರತ್ನಮ್ಮ 1904 ರ ಲ್ಲಿ ಬೆಂಗಳೂರಿನಿಂದ ಮದ್ರಾಸಿಗೆ ತೆರಳಿ, ಆ ಕಾಲದಲ್ಲಿ ಅರಸೊತ್ತಿಗೆ ಕಳೆದುಕೊಂಡು (ಈಸ್ಟ್ ಇಂಡಿಯ ಕಂಪನಿಗೆ) ಮದ್ರಾಸ್ ನಗರದಲ್ಲಿ ವಾಸವಾಗಿದ್ದ ದಕ್ಷಿಣ ಭಾರತದ ಅನೇಕ ರಾಜಮನೆತನಗಳು ಮತ್ತು ಶ್ರೀಮಂತ ಮೊದಲಿಯಾರ್ ಹಾಗೂ ಚೆಟ್ಟಿಯಾರರ ಅಚ್ಚು ಮೆಚ್ಚಿನ ಕಲಾವಿದೆಯಾಗಿದ್ದರು. 

1910 ರ ದಶಕಲದಲ್ಲಿ ಬ್ರಿಟೀಷ್ ಸರ್ಕಾರಕ್ಕೆ ವರಮಾನ ತೆರಿಗೆ ಪಾವತಿಸಿದ ದಕ್ಷಿಣ ಭಾರತದ ಏಕೈಕ ಕಲಾವಿದೆ ನಾಗರತ್ನಮ್ಮನವರು ಎಂಬುದು ಇವೊತ್ತಿಗೂ ದಾಖಲೆಯಾಗಿ ಉಳಿದಿದೆ. ಕನ್ನಡ, ತಮಿಳು, ಮತ್ತು ತೆಲುಗು ಹಾಗೂ ಸಂಸ್ಕೃತ ಭಾಷೆಗಳ ಮೇಲೆ  ಪ್ರೌಢಿಮೆ ಸಾಧಿಸಿದ್ದ ನಾಗರತ್ನಮ್ಮ ಕನ್ನಡ ಮತ್ತು ತೆಲುಗು ಸಾಹಿತ್ಯ ಕೃತಿಗಳ ಬಗ್ಗೆ ಅಪಾರವಾದ ಒಳನೋಟಗಳನ್ನು ಒಳಗೊಂಡಿದ್ದರು. ಇವರು ಸಂಪಾದಿಸಿ , ಪ್ರಕಟಿಸಿದ ಹದಿನೆಂಟನೆಯ ಶತಮಾನದ ತೆಲುಗು ಕೃತಿ “ ರಾಧಾ ಸ್ವಾಂತನಮು” ಎಂಬ ಕೃತಿ 1920-30 ರ ದಶಕದಲ್ಲಿ ಆಂಧ್ರ, ತಮಿಳುನಾಡು ಮತ್ತು ದಕ್ಷಿಣ ಕರ್ನಾಟಕ ಹಾಗೂ ಮಂಗಳೂರನ್ನು ಒಳಗೊಂಡ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ದೊಡ್ಡ ಬಿರುಗಾಳಿಯೆಬ್ಬಿಸಿ ನ್ಯಾಯಾಲಯದ ಮೆಟ್ಟಿಲು ಏರುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ತೆಲುಗು ಸಾಹಿತ್ಯ ದಿಗ್ಗಜರೊಂದಿಗೆ ನಾಗರತ್ನಮ್ಮ ನಡೆಸಿದ ವಾಗ್ವಾದ ಅವರಿಗೆ ಅಂತಿಮವಾಗಿ ತೆಲುಗು ಸಾಹಿತ್ಯದಲ್ಲಿ ವಿಧ್ವಾಂಸೆ ಎಂಬ ಬಿರುದು ತಂದು ಕೊಟ್ಟಿತು.
ಮೈಸೂರು ಅರಮನೆಯ ವಿಶೇಷ ಆಹ್ವಾನಿತ ಕಲಾವಿದೆ, ವೀಣೆ ಶೇಷಣ್ಣ, ಸುಬ್ಬಣ್ಣ ಇವರಿಂದ ಪ್ರತಿಭಾವಂತೆ ಹಾಗೂ ಬಿಡಾರಂ ಕೃಷ್ಣಪ್ಪ ಇವರ  ಅಚ್ಚು ಮೆಚ್ಚಿನ ಶಿಷ್ಯೆಯಾಗಿ ಸಂಗೀತವನ್ನು ತಮ್ಮ ಬದುಕಿನುದ್ದಕ್ಕೂ ಧ್ಯಾನಿಸಿದ ನಾಗರತ್ನಮ್ಮ ಎಂಬ ಈ ಮಹಾತಾಯಿ ಇವೊತ್ತಿಗೂ ತಮಿಳುನಾಡು ಮತ್ತು ಆಂಧ್ರದಲ್ಲಿ ಬೆಂಗಳೂರು ನಾಗರತ್ನಮ್ಮಾಳ್ ಎಂದು ಪ್ರಸಿದ್ದರು. ಇವರ ಕುರಿತು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಹಾಗೂ ಇಂಗ್ಲೀಷ್ ನಲ್ಲಿ ಜೀವನ ಚರಿತ್ರೆ ಪ್ರಕಟವಾಗಿದೆ. ಕನ್ನಡದಲ್ಲಿ ಡಿ.ವಿ.ಜಿಯವರು ತಮ್ಮ ನೆನಪಿನ ಚಿತ್ರಗಳು ಕೃತಿಯಲ್ಲಿ ಒಂದು ಲೇಖನ ಮತ್ತು ಮೈಸೂರು ವಾಸುದೇವಾ ಚಾರ್ಯರು ಬರೆದಿರುವ ನಾ ಕಂಡ ಕಲಾವಿದರು ಕೃತಿಯಲ್ಲಿ ಬರೆದಿರುವ ಒಂದಿಷ್ಟು ನೆನಪುಗಳನ್ನು ಹೊರತು ಪಡಿಸಿದರೆ. ಬೇರೆಲ್ಲೂ ಪ್ರಸ್ತಾಪವಿಲ್ಲ.

ಇತಿಹಾಸದ ಗರ್ಭದೊಳಗೆ ಹೂತು ಹೋಗುತ್ತಿರುವ ಈ ಮಹಾತಾಯಿಯ ಹೆಜ್ಜೆಯ ಗುರುತುಗಳನ್ನು ಹುಡುಕಿಕೊಂಡು, ಚೆನ್ನೈ, ತಂಜಾವೂರು, ತಿರುವಯ್ಯೂರು, ಮೈಸೂರು ಹಾಗೂ ಬೆಂಗಳೂರು ನಗರಗಳನ್ನು ತಿರುಗುತ್ತಾ ಕಲೆಹಾಕಿದ ಮಾಹಿತಿಗಳ ಜೊತೆಗೆ ವರ್ತಮಾನದ ಅನೇಕ ಸಂಗತಿಗಳು ನನ್ನಲ್ಲಿ ನೋವುಂಟು ಮಾಡಿವೆ. ಇದನ್ನು ಹೇಗೆ ವಿಶ್ಲೇಷಿಸಬೇಕು ಅರ್ಥವಾಗುತ್ತಿಲ್ಲ ಏಕೆಂದರೆ, ಇತಿಹಾಸ ಹಂಗಿಲ್ಲದೆ ಬದುಕುವುದನ್ನು ರೂಢಿಸಿಕೊಂಡಿರುವ ವರ್ತಮಾನದ ಜಗತ್ತಿಗೆ ಒಬ್ಬ ಕಲಾವಿದೆಗೆ ಚರಿತ್ರೆ ಮತ್ತು ವರ್ತಮಾನ ಎಸಗಿರುವ ದ್ರೋಹ ಇವುಗಳು ವ್ಯರ್ಥ ಪ್ರಲಾಪ ಎಂದು ಅನಿಸಿಬಿಡುವ ಸಾದ್ಯತೆಗಳೇ ಹೆಚ್ಚು. ಏನೇ ಇರಲಿ “ ನಾದ ದೇವತೆ ನಾಗರತ್ನಮ್ಮ” ಎಂಬ ಶಿರ್ಷಿಕೆಯಡಿ ರಚಿಸುತ್ತಿರುವ ಕೃತಿಯಲ್ಲಿ  ನಾನು ಎಲ್ಲವನ್ನೂ ದಾಖಲಿಸಲು ತೀರ್ಮಾನಿಸಿದ್ದೇನೆ.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ದೇವದಾಸಿಯಾಗಿದ್ದ ಹೆಗ್ಗಡದೇವನಕೋಟೆ ಮೂಲದ ಪುಟ್ಟಲಕ್ಮಮ್ಮ ಎಂಬುವರ ಮಗಳಾಗಿ 1878 ರಲ್ಲಿ ಜನಿಸಿದ ನಾಗರತ್ನಮ್ಮ, ಮೈಸೂರಿನಲ್ಲಿ ಗಿರಿಭಟ್ಟರ ತಮ್ಮಯ್ಯ ಮತ್ತು ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತ ವಿದ್ಯಾಭ್ಯಾಸ ಮಾಡಿ, ಆನಂತರ ಬೆಂಗಳೂರಿಗೆ ಬಂದು ತನ್ನ ಸಹೋದರ ಮಾವ ವೆಂಕಟಸ್ವಾಮಪ್ಪನವರ ಬಳಿ ತೆಲುಗು ಕೀರ್ತನೆ ಸೇರಿದಂತೆ, ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ ಕಲಾವಿದೆಯಾಗಿ ರೂಪುಗೊಂಡು,ಬೆಂಗಳೂರಿನ ಜಸ್ಟೀಸ್ ನರಹರಿರಾವ್ ಆಶ್ರಯದಲ್ಲಿ ಬೆಳೆದವರು. ಅವರ ನಿವೃತ್ತಿಯ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಸಂಗೀತದ ಕಾಶಿಯಾಗಿ ರೂಪುಗೊಳ್ಳುತ್ತಿದ್ದ ಮದ್ರಾಸ್ ನಗರಕ್ಕೆ ತೆರಳಿ, ತಮ್ಮ ನೃತ್ಯ, ಸೌಂದರ್ಯ, ಸಂಗೀತದ ಕಂಠಸಿರಿ ಹಾಗೂ ವಿದ್ವತ್ ಗಳಿಂದ ಅಲ್ಲಿನ ಸಂಗೀತ ಪ್ರೇಮಿಗಳ ಮನಗೆದ್ದು, ಆ ಕಾಲಕ್ಕೆ ಮದ್ರಾಸ್ ನಗರದಲ್ಲಿ ಸಂಗೀತ ಲೋಕದ ಅದ್ವಿತೀಯರು ಎನಿಸಿದ ವೀಣಾ ದಾನಮ್ಮಾಳ್ ಮತ್ತು ಲಲಿತಾಂಗಿ ( ಎಂ.ಎಲ್.ವಸಂತ ಕುಮಾರಿ ಇವರ ತಾಯಿ) ಮತ್ತು ಕೊಯಮತ್ತೂರು ತಾಯಿ ಎಂಬುವರ ಸರಿಸಮಾನಕ್ಕೆ ಬೆಳೆದು ನಿಂತವರು.


ಚೆನ್ನೈ ನಗರದ ಮದ್ರಾಸ್ ಹೈಕೋರ್ಟ್ ನ ಉತ್ತರ ಭಾಗಕ್ಕೆ 1840 ರಲ್ಲಿ ರೂಪುಗೊಂಡ ಜಾರ್ಜ್ ಟೌನ್ ಪ್ರದೇಶದಲ್ಲಿ ನೆಲೆಗೊಂಡು, ಆನಂತರ ಅಲ್ಲಿನ ಶ್ರೀನಿವಾಸ್ ಅಯ್ಯರ್ ರಸ್ತೆಯಲ್ಲಿ ಮ್ಯಾನ್ಸನ್ ಹೌಸ್ ಗಳೆಂದು ಕರೆಯಲಾಗುತ್ತಿದ್ದ ಬೃಹತ್ ಬಂಗಲೆಯೊಂದನ್ನು ಕಟ್ಟಿಕೊಂಡು ವಾಸಿಸತೊಡಗಿದರು. ಅಲ್ಲದೆ. ಪಕ್ಕದ ತಾತ ಮುತ್ತಪ್ಪ ಚೆಟ್ಟಿಯಾರ್ ರಸ್ತೆಯಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣ ಮಾಡಿ, ಆ ದೇಗುಲದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ವಿಗ್ರಹಗಳ ಸ್ಥಾಪಿಸಿ ಪೂಜಿಸತೊಡಗಿದರು.

 ತ್ಯಾಗರಾಜರ ಕೀರ್ತನೆಗಳನ್ನು ಅರಂಭದಿಂದಲೂ ಮನದುಂಬಿ ಹಾಡುತ್ತಿದ್ದ ನಾಗರತ್ನಮ್ಮನವರಿಗೆ ಮೊದಲಿನಿಂದಲೂ ತಮ್ಮ ಗುರು ಬಿಡಾರಂ ಕೃಷ್ಣಪ್ಪನವರ ಪ್ರಭಾವದಿಂದ ರಾಮನೆಂದರೆ, ಅಪಾರ ಪ್ರೀತಿ ಮತ್ತು ಗೌರವ. ತ್ಯಾಗರಾಜರ ಆರಾಧ್ಯ ದೈವ ಕೂಡ ಶ್ರೀರಾಮ ಹಾಗಾಗಿ ಭಾರತದ ಪುರಾಣದಲ್ಲಿ ಮರ್ಯಾದ ಪುರುಷೋತ್ತಮ ಎನಿಸಿಕೊಂಡ ಶ್ರೀರಾಮ ಅಂತಿಮವಾಗಿ ಬೆಂಗಳೂರಿನ ನಾಗರತ್ನಮ್ಮನವರನ್ನು ತ್ಯಾಗರಾಜರ ಬಳಿ ಕೊಂಡೊಯ್ದ ನಿಲ್ಲಿಸಿದ.


ಒಮ್ಮೆ ತಿರುವಯ್ಯೂರಿಗೆ ಬೇಟಿ ನೀಡಿದ ನಾಗರತ್ನಮ್ಮನವರಿಗೆ ಅಲ್ಲಿನ ಕಾವೇರಿ ನದಿತೀರದಲ್ಲಿ ಮುಳ್ಳು ಕಂಠಿಗಳಿಂದ ಮುಚ್ಚಿಹೋಗಿದ್ದ ತ್ಯಾಗರಾಜರ ಸಮಾಧಿ ನೋಡಿ ಮನಸ್ಸಿಗೆ ಬೇಸರವಾಯಿತು. ಆ ವೇಳೆಗಾಗಲೇ ಮಕ್ಕಳಿಲ್ಲದ ನಾಗರತ್ನಮ್ಮ ಅಪಾರ ಐಶ್ವರ್ಯವಿದ್ದರೂ ಕೂಡ ವೈರಾಗ್ಯದತ್ತ ವಾಲಿದ್ದರು. ಹಾಗಾಗಿ ತ್ಯಾಗರಾಜರ ಸಮಾಧಿಯನ್ನು ಅಭಿವೃದ್ಧಿಪಡಿಸಿ, ಅವರಿಗೊಂದು ಗುಡಿ ಕಟ್ಟಿಸಿ, ಜೊತೆಗೆ ಸಮಾಧಿಯ ಸುತ್ತ ಮುತ್ತ ಇದ್ದ ಸುಮಾರು ಇಪ್ಪತ್ತು ಎಕರೆ ಪ್ರದೇಶವನ್ನು ಆರ್ಕಾಟ್ ನವಾಬನಿಂದ ಖರೀದಿಸಿ ಅಭಿವೃದ್ಧಿಪಡಿಸಿದರು. ಇದಕ್ಕಾಗಿ ತಮ್ಮ ಮದ್ರಾಸಿನ ಮನೆ ಮತ್ತು ತಮ್ಮ ಬಳಿ ಇದ್ದ ವಜ್ರ ವೈಢೂರ್ಯಗಳನ್ನು ಮಾರಿ ಹಾಕಿ, ಒಬ್ಬ ವಿರಾಗಿಣಿಯಂತೆ, ಬಂದು ತಿರುವಯ್ಯೂರಿನಲ್ಲಿ ನೆಲೆ ನಿಂತರು.

ಆದರೆ, ಅವರು ತಿರುವಯ್ಯೂರಿನಲ್ಲಿ ಎದುರಿಸಿದ ಅವರು ಸವಾಲುಗಳು, ಸಂಕಟಗಳು ಅಷ್ಟಿಷ್ಟಲ್ಲ, ಒಬ್ಬ ದೇವದಾಸಿ ಹೆಣ್ಣು ಮಗಳು ಅಂದಿನ ಜಾತಿಯ ರೋಗದಿಂದ ಬಳಲುತ್ತಿದ್ದ ಸಮಾಜವನ್ನು ಎದುರಿಸಿದ ರೀತಿಯೇ ಒಂದು ಕೃತಿಯಾಗಬಲ್ಲದು. ತ್ಯಾಗರಾಜರ ಆರಾಧನೆ ಆರಂಭಿಸಿದಾಗ, ನಾಗರತ್ನಮ್ಮ ಅನೇಕ ಅಪಮಾನಗಳನ್ನೂ ಸಹ ಎದುರಿಸಬೇಕಾಯಿತು. ಎಲ್ಲವನ್ನೂ ಸಮರ್ಪಕವಾಗಿ ಎದುರಿಸಿ, ಚಿನ್ನ ಮೇಳ ಮತ್ತು ಪೆರಿಯ ಮೇಳ ಎಂಬ ಎರಡು ಪಂಗಡಗಳು ನಡೆಸುತ್ತಿದ್ದ ಎರಡು ಆರಾಧನೆಯ ಕಾರ್ಯಕ್ರಮಗಳನ್ನು ಒಟ್ಟುಗೂಡಿಸಿದರು. ಅಲ್ಲದೆ, ಹೆಣ್ಣು ಮಕ್ಕಳಿಗೆ ಸಂಗೀತಾಧನೆಯಲ್ಲಿ ಸ್ಥಳವಿಲ್ಲ ಎಂಬ ಸವಾಲನ್ನು ಸ್ವೀಕರಿಸಿ, ಪ್ರತ್ಯೇಕವಾಗಿ ಕಲಾವಿದೆಯರ ಸಮ್ಮೆಳನ ನಡೆಸಿ ಎಲ್ಲರ ಬಾಯಿ ಮುಚ್ಚಿಸಿದರು. ಕೊನೆಗೆ ಅದೇ ತಿರುವಯ್ಯೂರು ಗ್ರಾಮದಲ್ಲಿ, ತ್ಯಾಗರಾಜರ ಸ್ಮರಣೆಯಲ್ಲಿ 1952 ರಲ್ಲಿ ನಿಧನಹೊಂದಿದರು. ಇದೀಗ ತ್ಯಾಗರಾಜರ ದೇಗುಲ ಮತ್ತು ಸಮಾಧಿ ಎದುರಿಗೆ ಸುಮಾರು ನೂರು ಅಡಿ ದೂರದಲ್ಲಿ ನಾಗರತ್ನಮ್ಮನವರ ಪುಟ್ಟ ಗುಡಿ ನಿರ್ಮಾಣ ಮಾಡಿ ಅಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ದುರಂತವೆಂದರೆ, ಇಡೀ ತಿರುವಯ್ಯೂರು ತ್ಯಾಗರಾಜಮಯವಾಗಿರುವ ಈ ದಿನಗಳಲ್ಲಿ ಯಾರಿಗೂ ನಾಗರತ್ನಮ್ಮನವರ ನೆನಪು ಬೇಡವಾಗಿದೆ.ತ್ಯಾಗರಾಜರ ಸಮಾಧಿ ಇರುವ ದೇಗುಲದಲ್ಲಿ ನಾಗರತ್ನಮ್ಮನವರ ಒಂದು ಚಿತ್ರ ಮತ್ತು ನಾಗರತ್ನಮ್ಮಾಳ್ ಟ್ರಸ್ಟ್ ಎಂಬ ಫಲಕ ಬಿಟ್ಟರೆ, ಬೇರೇನೂ ಮಾಹಿತಿಯಿಲ್ಲ. ನಾಯಿ ಗೂಡಿನಂತಿರುವ ನಾಗರತ್ನಮ್ಮನವರ ಪುಟ್ಟ ಗುಡಿಗೆ ಬೀಗ ಹಾಕಿ ಜಡಿಯಲಾಗಿದೆ. ಅವರ ಮೂರ್ತಿಗೆ ಉಡಿಸಿದ ಸೀರೆಗೆ ದೂಳು ಆವರಿಸಿಕೊಂಡಿದೆ. ಪ್ರತಿ ಎರಡು ಮೂರು ಗಂಟೆಗೆ ತ್ಯಾಗರಾಜರ ಮೂರ್ತಿಯ ಮೇಲಿನ ವಸ್ತ್ರವನ್ನು, ರುದ್ರಾಕ್ಷಿ ಹಾರವನ್ನು ತೆಗೆದು, ಗಂದ, ವಿಭೂತಿ ಹಚ್ಚಿ, ಹೊಸ ವಸ್ತ್ರ ತೊಡಿಸುವ ಮಂದಿಗೆ ನಾಗರತ್ನಮ್ಮ ನೆನಪಾಗುವುದಿಲ್ಲ. ಅಂದು ನಾಗರತ್ನಮ್ಮ ಮನಸ್ಸು ಮಾಡದಿದ್ದರೆ, ಇಂದು ತಿರುವಯ್ಯೂರಿನಲ್ಲಿ ತ್ಯಾಗರಾಜರೂ ಇರುತ್ತಿರಲಿಲ್ಲ, ತಿರುಪತಿ ತಿಮ್ಮಪ್ಪನೂ ಇರುತ್ತಿರಲಿಲ್ಲ. ಈ ವಾಸ್ತವವನ್ನು ಮರೆತಿರುವ ಇಂದಿನ ಜನಕ್ಕೆ ತ್ಯಾಗರಾಜರ ಆರಾಧನೆ ಒಬ್ಬ ದೇವದಾಸಿ ಹೆಣ್ಣು ಮಗಳಿಂದ ಆರಂಭವಾದ ಆರಾಧನೆ ಎಂದು ಹೇಳಿಕೊಳ್ಳುವುದು ಮುಜುಗರದ ಸಂಗತಿಯಾಗಿದೆ.

ಇತ್ತೀಚೆಗೆ ಆರಂಭಗೊಂಡಿರುವ ಸಮುದಾಯ ಭವನಕ್ಕೆ ಸದ್ಗುರು ತ್ಯಾಗರಾಜರ್ ಭವನ ಎಂದು ಹೆಸರಿಟ್ಟು, ಜನರೆಟರ್ ಕೊಠಡಿಗೆ ಶ್ಯಾಮಶಾಸ್ತ್ರಿ ಹೆಸರಿಟ್ಟಿರುವ ಮನಸ್ಸುಗಳಿಗೆ ಎಲ್ಲಿಯೂ ನಾಗರತ್ನಮ್ಮನವರ ಪ್ರತಿಮೆಯನ್ನು ಬಹಿರಂಗವಾಗಿ ಸ್ಥಾಪಿಸಲು ಮನಸ್ಸು ಇದ್ದಂತಿಲ್ಲ.

 ಅಂದು ನಾಗರತ್ನಮ್ಮ ತ್ಯಾಗರಾಜರ ಸಮಾಧಿಗೆ ಸೇರ್ಪಡೆ ಮಾಡಿದ ಇಪ್ಪತ್ತು ಎಕರೆ ಭೂಮಿಯ ಇಂದಿನ ಮಾರುಕಟ್ಟೆಯ ಮೌಲ್ಯ ಸುಮಾರು ಅರವತ್ತು ಕೋಟಿ ರೂಪಾಯಿಗಳು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಬಂದು ಠಿಕಾಣಿ ಹೂಡಿತು ಎಂಬ ಮಾತು ಕಳೆದ ಈತಿಂಗಳ ಐದು ಮತ್ತು ಆರಂದು ತಿರುವಯ್ಯುರು ಪಟ್ಟಣದಲ್ಲಿ ಸಂಚರಿಸುತ್ತಾ, ಕಾವೇರಿ ನದಿಯ ದಡದಲ್ಲಿ ಕುಳಿತಾಗ ನೆನಪಿಗೆ ಬಂದಿತು. ಅದಕ್ಕೆ ಎರಡು ದಿನಗಳ ಹಿಂದೆ ಮದ್ರಾಸ್ ನಗರದಲ್ಲಿ ಕಷ್ಟಪಟ್ಟು ಹುಡುಕಿದ ಅವರ ಮನೆ, ದೇಗುಲ, ರಸ್ತೆ ಇವುಗಳನ್ನು ನೆನೆಸಿಕೊಂಡಾಗ ಇದನ್ನು ಸಂಶೋಧನೆ ಸುಖ ಎನ್ನಲೋ? ಸಂಕಟವೆನ್ನಲೋ? ಎಂಬುದು ಅರಿಯದಾಯಿತು.


No comments:

Post a Comment