ಇದು
ದಶಕದ ಹಿಂದಿನ ಘಟನೆ. ಮೂಲತಃ
ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನಾನು ಜಾಗತೀಕರಣ ಕುರಿತಂತೆ
ಡಾಕ್ಟರೇಟ್ ಪದವಿಗಾಗಿ ಅಧ್ಯಯನ ಕೈಗೊಂಡಿದ್ದ ಸಂದರ್ಭದಲ್ಲಿ
ದೆಹಲಿಯ “ಡೆಲ್ಲಿ ಸ್ಕೂಲ್ ಆಫ್
ಎಕನಾಮಿಕ್ಸ್” ಸಂಸ್ಥೆಗೆ
ಬೇಟಿ ನೀಡಿ ಅಲ್ಲಿನ ಗ್ರಂಥಾಲಯದಲ್ಲಿ
ಮಾಹಿತಿ ಸಂಗ್ರಹಿಸುತ್ತಿದ್ದೆ. ಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳು ಕಾಶ್ಮೀರದ
ಭಯೋತ್ಪಾದನೆ ಕುರಿತು ಎಂ.ಫಿಲ್
ಪದವಿಗಾಗಿ ಅಧ್ಯಯನ ಕೈಗೊಂಡು ಪ್ರಬಂಧವೊಂದನ್ನು
ಪ್ರಕಟಿಸಿದ್ದಳು. ಆಕೆಯ ಪ್ರಬಂಧ ಭಯೋತ್ಪಾದನೆ
ಮತ್ತು ಬಡತನ ಕುರಿತು ನಡೆಸಿದ್ದ ಸಂಶೋಧನೆಯಾಗಿತ್ತು. ಅದು ನನ್ನ ಗಮನ
ಸೆಳೆಯಿತು.
ಕಾಶ್ಮೀರದ
ಬಡ ಮುಸ್ಲಿಂ ಕುಟುಂಬಗಳಿಗೆ ಆರ್ಥಿಕ
ನೆರವು ನೀಡಿ, ಕುಟುಂಬದ ಯುವಕರನ್ನು
ಜೆಹಾದ್ ಹೆಸರಿನಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಪಾಕಿಸ್ಥಾನದ ಬೇಹುಗಾರಿಕೆ ಸಂಸ್ಥೆಯಾದ ಐ.ಎಸ್.ಐ.
ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ತನ್ನ ಪ್ರಬಂಧದಲ್ಲಿ ಎಳೆ
ಎಳೆಯಾಗಿ ಬಿಡಿಸಿ ವಿವರಿಸಿದ್ದಳು. ಇದಕ್ಕಾಗಿ
ಭಾರತದ ಸೇನಾಪಡೆಯಿಂದ ಬಂಧಿತರಾಗಿದ್ದ ಹಲವರು ಯುವಕರನ್ನು ಸಂದರ್ಶಿಸುವುದರ
ಮೂಲಕ ಅವರ ಕುಟುಂಬದ ಮಾಹಿತಿಯನ್ನೂ
ಸಹ ಆಕೆ ಕಲೆ ಹಾಕಿದ್ದಳು.
ಮನೆಯಲ್ಲಿ
ಬೆಳೆದು ನಿಂತ ತನ್ನ ಸಹೋದರಿಯರ
ವಿವಾಹಕ್ಕಾಗಿ, ಐ.ಎಸ್.ಐ.
ಸಂಸ್ಥೆ ನೀಡುತ್ತಿದ್ದ ಎರಡು ಅಥವಾ ಮೂರು
ಲಕ್ಷ ರೂಪಾಯಿಗಳ ಆಮಿಷಕ್ಕೆ ಬಲಿಯಾದ ಯುವಕರು, ಪಾಕ್
ಆಕ್ರಮಿತ ಕಾಶ್ಮೀರಕ್ಕೆ ತೆರಳಿ, ಅಲ್ಲಿ ತರಬೇತಿ
ಪಡೆದು, ಭಯೋತ್ಪಾದಕರಾಗಿ ಮರಳುತ್ತಿದ್ದರು. ಅಕಸ್ಮಾತ್ ಪೊಲೀಸರು ಅಥವಾ ಭದ್ರತಾ
ಪಡೆಯ ಗುಂಡಿಗೆ ಬಲಿಯಾದರೆ, ಹತ್ತು
ಲಕ್ಷ ರೂಪಾಯಿಗಳನ್ನು ಮೃತರ ಕುಟುಂಬಗಳಿಗೆ ಪಾಕ್
ಮೂಲದ ಭಯೋತ್ಪಾದನಾ ಸಂಘಟನೆಗಳು ಸಂದಾಯ ಮಾಡುತ್ತಾ ಬಂದಿದ್ದವು.
ಇಂತಹ ಧರ್ಮದ ಉನ್ಮಾದ ಮತ್ತು
ಹಣದ ಆಮಿಷಕ್ಕೆ ಬಲಿ ಬಿದ್ದ ಯುವಕರು
ತಾಯ್ನಾಡಿನ ವಿರುದ್ಧ ಬಂದೂಕು ಮತ್ತು
ಬಾಂಬ್ ಬಳಸುವ ಸ್ಥಿತಿಗೆ ದೂಡಲ್ಪಟ್ಟ
ಸಂಗತಿಗಳನ್ನು ಕರಾರುವಕ್ಕಾದ ಅಂಕಿ ಅಂಶಗಳೊಂದಿಗೆ ಪ್ರಬಂಧದಲ್ಲಿ
ದಾಖಲಾಗಿದ್ದ ಮಾಹಿತಿ ನನ್ನನ್ನು ಬೆಚ್ಚಿ ಬೀಳಿಸಿತು. ಅಲ್ಲಿಯವರೆಗೂ
ಭಯೋತ್ಪಾದನೆ, ಹಿಂಸೆ ಹಾಗೂ ಬಡತನದ
ನಡುವೆ ಹೀಗೊಂದು ಸಾವಯವ ಸಂಬಂಧ
ಇರಲು ಸಾಧ್ಯ ಎಂದು ನಾನು
ಊಹಿಸಿರಲಿಲ್ಲ.
ಬಾಲ್ಯದಿಂದಲೂ
ದೇವರು, ಧರ್ಮ, ಜಾತಿ, ಇವುಗಳ
ಪರಿಧಿಯಾಚೆ ನಿಂತು ಬೆಳೆದ ನಾನು,
ಕಾಲೇಜು ದಿನಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತನಾದವನು.
ಆದರೆ, ಅತಿಯಾದ ಎಡಪಂಥೀಯ ಅಥವಾ
ಬಲಪಂಥೀಯ ವಿಚಾರವಾದಗಳು ಮತೀಯವಾದದಷ್ಟೇ ಅಪಾಯಕಾರಿ ಎಂದು ನಂಬಿಕೊಂಡವನು. ಗಾಂಧಿ,
ಬಸವಣ್ಣ, ಅಲ್ಲಮ, ಲೋಹಿಯಾ, ಅಂಬೇಡ್ಕರ್
ವಿಚಾರಗಳಲ್ಲಿ ನಂಬಿಕೆಯಿಟ್ಟುಕೊಂಡು, ವರ್ತಮಾನದ ಎಲ್ಲಾ ಸಂಗತಿಗಳನ್ನು ಓರ್ವ
ಪತ್ರಕರ್ತನಾಗಿ, ಅರ್ಥಶಾಸ್ತ್ರದ ಸಂಶೋಧಕನಾಗಿ ಯಾವುದೇ ಪ್ರೀತಿ
ಅಥವಾ ದ್ವೇಷವಿಲ್ಲದೆ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದವನು.
ಕಾಶ್ಮೀರದ
ಸಮಸ್ಯೆಯ ರೀತಿಯಲ್ಲಿ ಭಾರತವನ್ನು
ಇತ್ತೀಚೆಗಿನ ದಿನಗಳಲ್ಲಿ ಬಲವಾಗಿ ಕಾಡುತ್ತಿರುವ ನಕ್ಸಲ್
ಹಿಂಸಾತ್ಮಕ ಚಳವಳಿಯಲ್ಲಿ ಬಡತನ ಮತ್ತು ಹಿಂಸೆಯ
ನಡುವೆ ಹೀಗೊಂದು ಸಂಬಂಧವಿರಬಹುದೆ? ಎಂಬ
ಪ್ರಶ್ನೆ ಮತ್ತು ಕುತೂಹಲ ನನ್ನನ್ನು
ಬಹಳ ದಿನಗಳಿಂದ ಕಾಡುತ್ತಿತ್ತು. ಬಹು ಮುಖ್ಯವಾಗಿ ದೆಹಲಿಯ
ಜವಹರಲಾಲ್ ನೆಹರೂ ವಿ.ವಿ.
ಮತ್ತು ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನ
ವಿದ್ಯಾರ್ಥಿಗಳು, ಇವರಲ್ಲಿ ವಿಶೇಷವಾಗಿ ಸ್ನಾತಕೋತ್ತರ
ಪದವೀಧರರು ನಕ್ಸಲ್ ಸಂಘಟನೆಗಳಿಗೆ ಸೇರಿ
ಕೈಗೆ ಬಂದೂಕ ಎತ್ತಿಕೊಂಡಿದ್ದು ನನ್ನ
ಪಾಲಿಗೆ ಬಿಡಿಸಲಾರದ ಒಗಟಾಗಿತ್ತು. ಏಕೆಂದರೆ, ನಕ್ಸಲ್ ಸಂಘಟನೆ ಧಾರ್ಮಿಕ
ಸಂಸ್ಥೆಯಾಗಿರಲಿಲ್ಲ. ಜೊತೆಗೆ ಧರ್ಮದ ಅಮಲಾಗಲಿ
ಅಥವಾ ಭಕ್ತಿಯ ಉನ್ಮಾದವಾಗಲಿ ಸಿಗುವ
ತಾಣವೂ ಅದಾಗಿರಲಿಲ್ಲ. ನಕ್ಸಲ್ ಸಂಘಟನೆಗೆ ಐ.ಎ.ಎಸ್ ಮತ್ತು
ಐ.ಪಿ.ಎಸ್
ನಂತಹ ಉನ್ನತ ಮಟ್ಟದ ಅಧಿಕಾರಿಗಳ
ಮಕ್ಕಳು ಕೂಡ ಸೇರ್ಪಡೆಯಾಗಿದ್ದರು. ಇದು
ನನ್ನಲ್ಲಿ ಆತಂಕ ಮತ್ತು ಕುತೂಹಲಕ್ಕೆ
ಕಾರಣವಾಗಿ ಕಳೆದ ಐದಾರು ವರ್ಷಗಳಿಂದ
ಭಾರತದಲ್ಲಿನ ಈ
ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೆ.
2011 ರ ನವಂಬರ್
23 ಮತ್ತು 24 ರ ನಡುವಿನ ಮಧ್ಯರಾತ್ರಿ
ಪಶ್ಚಿಮ ಬಂಗಾಳದ ಪೊಲೀಸರು ಮಿಡ್ನಾಪುರ
ಜಿಲ್ಲೆಯ ಅರಣ್ಯದಲ್ಲಿ ನಕ್ಸಲ್ ಸಂಘಟನೆಯ ಅತ್ಯಂತ
ಪ್ರಭಾವಿ ನಾಯಕ ಕಿಶನ್ಜಿಯನ್ನು
ಬಲೆಗೆ ಕೆಡವಿ, ಎನ್ ಕೌಂಟರ್
ಮೂಲಕ ಕೊಂದು ಹಾಕುವುದರಲ್ಲಿ ಯಶಸ್ವಿಯಾದರು.
ಆತನ ಹತ್ಯೆ ಮತ್ತು ನಂತರದ
ಬೆಳವಣಿಗೆಗಳು ನನ್ನ ಈ ಕಥನದ
ಅಧ್ಯಯನಕ್ಕೆ ಪ್ರೇರಣೆಯಾದವು.
ಕಿಶನ್ಜಿ ಮೂಲತಃ ಆಂಧ್ರಪ್ರದೇಶದÀ
ಕರೀಂ ನಗರ ಜಿಲ್ಲೆಯಿಂದ ಬಂದವನು.
ಗಣಿತವಿಜ್ಞಾನದಲ್ಲಿ ಪದವೀಧರ ನಾಗಿದ್ದ ಈತನ
ಮೂಲ ಹೆಸರು ಮಲ್ಲೊಜಲ ಕೋಟೇಶ್ವರ
ರಾವ್. 1973 ರಲ್ಲಿ ತನ್ನ ಹುಟ್ಟೂರನ್ನು
(ಪೆದ್ದಂಪಲ್ಲಿ) ತೊರೆದು ಕಾನೂನು ಪದವಿ
ಅಧ್ಯಯನಕ್ಕೆ ಕರೀಂನಗರಕ್ಕೆ ಬಂದ ಈತ, 1974 ರಲ್ಲಿ
ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡು ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯ ನಾಯಕನಾದವನು. ನಕ್ಸಲ್
ಚಳವಳಿ ಜೊತೆ ಗುರುತಿಸಿಕೊಂಡ
ನಂತರ ಕಿಶನ್ಜಿ, ಒಮ್ಮೆಯೂ
ತನ್ನೂರಿಗೆ ಬಂದು ತನ್ನ ಹೆತ್ತ
ತಾಯಿ ಅಥವಾ
ಕುಟುಂಬದ ಸದಸ್ಯರ ಮುಖವನ್ನು ನೋಡಿರಲಿಲ್ಲ.
ಆಂಧ್ರ, ಒರಿಸ್ಸಾ, ಛತ್ತೀಸ್ಗಡ, ಮಧ್ಯಪ್ರದೇಶ,
ಮಹಾರಾಷ್ಟ್ರ, ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯಗಳ
16 ಸಾವಿರ ಹಳ್ಳಿಗಳ ಆದಿವಾಸಿ ಮತ್ತು
ಕೃಷಿ ಕೂಲಿ ಕಾರ್ಮಿಕರ ಪಾಲಿಗೆ
ಆಪತ್ಭಾಂಧವನಾಗಿದ್ದ ಈತ, ಪೊಲೀಸರಿಗೆ ಮತ್ತು
ಭದ್ರತಾ ಪಡೆಗಳಿಗೆ ತನ್ನ ಮೊಬೈಲ್ ನಂಬರ್
ನೀಡಿ ತನ್ನನ್ನು ಬಂಧಿಸುವಂತೆ ಸವಾಲೆಸೆಯುತ್ತಿದ್ದ. ಇದು ಸಾಲದೆಂಬಂತೆ ತನ್ನ
ಅಡಗುತಾಣಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಕರೆಸಿಕೊಂಡು
ಪತ್ರಿಕಾಗೋಷ್ಟಿ ನಡೆಸಿ ಆಳುವ ಸರ್ಕಾರಗಳ
ನೀತಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ.
ಪಶ್ಚಿಮ
ಬಂಗಾಳ ಸರ್ಕಾರ ಲಾಲ್ಘರ್
ಪ್ರದೇಶವನ್ನು ವಿಶೇಷ ಕೈಗಾರಿಕಾ ವಲಯವೆಂದು
ಘೋಷಿಸಿ, ನಂದಿಗ್ರಾಮದಲ್ಲಿ ಟಾಟಾ ಕಂಪನಿಗೆ ನ್ಯಾನೊ
ಕಾರು ತಯಾರಿಕೆಗಾಗಿ ಭೂಮಿ
ನೀಡಿದಾಗ ಸರ್ಕಾರದ ವಿರುದ್ಧ ಯುದ್ಧ
ಸಾರಿದ ಅಪ್ರತಿಮ ಸಾಹಸಿ ಈತ.
ಚಳವಳಿಗೆ ಅಡ್ಡ ಬಂದ ಆಡಳಿತಾರೂಢ
ಮಾಕ್ರ್ಸ್ವಾದಿ ಕಮ್ಯೂನಿಷ್ಟ್ ಪಕ್ಷದ
ಎಂಬತ್ತು ಕಾರ್ಯಕರ್ತರನ್ನು ನಿರ್ಧಯವಾಗಿ ಹೊಸಕಿ ಹಾಕುವುದರ ಮೂಲಕ
ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಡುಕವನ್ನುಂಟು
ಮಾಡಿದ್ದ. ನಂತರ ನಡೆದ ವಿಧಾನ
ಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ
ಬೆಂಬಲ ಸೂಚಿಸಿ ಮಮತಾ ಬ್ಯಾನರ್ಜಿ
ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ
ಅಧಿಕಾರದ ಗದ್ದುಗೆಯೇರಲು ಪರೋಕ್ಷವಾಗಿ ಕಾರಣನಾಗಿದ್ದ. ಪಶ್ಚಿಮ ಬಂಗಾಳದಲ್ಲಿ ಮೂರೂವರೆ
ದಶಕಗಳ ಕಾಲ ಆಡಳಿತ ನಡೆಸಿದ್ದ
ತನ್ನದೇ ಸಂಘಟನೆಯ ಮೂಲ ಪಕ್ಷವಾದ
ಸಿ.ಪಿ.ಐ.(ಎಂ)
ಪಕ್ಷವನ್ನು ನೆಲ ಕಚ್ಚುವಂತೆ ಮಾಡಿದ್ದ.
ಪಶ್ಚಿಮ
ಬಂಗಾಳ ಸೇರಿದಂತೆ ಮಧ್ಯ ಭಾರತದ ರಾಜ್ಯಗಳ
ಪಾಲಿಗೆ ಅಪಾಯಕಾರಿ ವ್ಯಕ್ತಿಯಾಗಿ ಪರಿಣಮಿಸಿದ್ದ ಕಿಶನ್ ಜಿ ಯನ್ನು
ಮಣಿಸಲು ಅಲ್ಲಿನ ಸರ್ಕಾರಗಳು ಅಂತಿಮವಾಗಿ
ವಾಮಮಾರ್ಗವನ್ನು ಬಳಸಿದ್ದವು. ಆತನ ಕೆಲವು ಸಂಗಡಿಗರಿಗೆ
ಅಪಾರ ಹಣದ ಆಮಿಷ ತೋರಿದ
ನಕ್ಸಲ್ ನಿಗ್ರಹ ಪಡೆ, ಅವರಿಂದ
ಮಾಹಿತಿ ಪಡೆಯುವಲ್ಲಿ ಯಶಸ್ವಿಯಾಯಿತು. ಆತನ ಚಲನ ವಲನಗಳ
ಮೇಲೆ ಕಣ್ಣಿಟ್ಟು ಅಂತಿಮವಾಗಿ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ
ಗಡಿಭಾಗದ ಬಿನಾಪುರ್ ಅರಣ್ಯದಲ್ಲಿ ಕಿಶನ್ಜಿಯನ್ನು ಸೆರೆ
ಹಿಡಿದ ನಕ್ಸಲ್ ನಿಗ್ರಹ ಪಡೆ,
ಪಶ್ಚಿಮ ಮಿಡ್ನಾಪುರ್
ಜಿಲ್ಲೆಯ ಅರಣ್ಯಕ್ಕೆ ತಂದು ಹತ್ಯೆಯ ಮೂಲಕ
ಆತನನ್ನು ಮುಗಿಸಿತು.
ಆಳುವ
ಸರ್ಕಾರಗಳಿಗೆ ಚಾರು ಮುಜಂದಾರ್ ಮತ್ತು
ಕೊಂಡಪಲ್ಲಿ ಸೀತಾರಾಮಯ್ಯನವರ ನಂತರ ಸಿಂಹ ಸ್ವಪ್ನವಾಗಿದ್ದ
ಕಿಶನ್ಜಿಯ ಹತ್ಯೆಯ ನಂತರವೂ
ಈ ವ್ಯಕ್ತಿ ಕಿಶನ್ಜಿ ಅಲ್ಲವೊ ಏನೋ
ಎಂಬ ಸಂಶಯ ನಕ್ಸಲ್ ನಿಗ್ರಹ
ಪಡೆಗೆ ಕಾಡಿತ್ತು. ನಾಲ್ಕು ದಿನಗಳ ಕಾಲ
ಕೊಲ್ಕತ್ತ ಆಸ್ಪತ್ರೆಯಲ್ಲಿದ್ದ ಆತನ ಶವವನ್ನು ಆಂಧ್ರದಿಂದ
ಬಂದಿದ್ದ ಆತನ ಸಹೋದರನ ಮಗಳು
ಗುರುತಿಸಿದಳು. ಮುಖ್ಯ
ಮಂತ್ರಿ ಮಮತಾ ಬ್ಯಾನರ್ಜಿ ತಾನು
ಅಧಿಕಾರಕ್ಕೆ ಬರಲು ನೇಪಥ್ಯದಲ್ಲಿ ಸಹಕರಿಸಿದ್ದ
ಕಿಶನ್ಜಿಯ ಋಣ ತೀರಿಸುವ
ಸಲುವಾಗಿ ಸರ್ಕಾರಿ ವೆಚ್ಚದಲ್ಲಿ ಆತನ
ಶವವನ್ನು ಆಂಧ್ರದ ಹುಟ್ಟೂರಿಗೆ ಕಳಿಸಿಕೊಟ್ಟರು.
ಕರೀಂನಗರ
ಜಿಲ್ಲೆಯ ಆತನ ಹುಟ್ಟೂರಾದ ಪೆದ್ದಂಪಲ್ಲಿಯನ್ನು
1973 ರಲ್ಲಿ ತೊರೆದು ಹೋಗಿದ್ದ ಕಿಶನ್ಜಿ 38 ವರ್ಷಗಳ ನಂತರ
ಶವವಾಗಿ ಮನೆಗೆ
ಮರಳಿದ್ದ. ಮಗನ ಶವವನ್ನು ನೋಡಿದ
ಆತನ ವೃದ್ಧ ತಾಯಿ ಮೌನವಾಗಿ
ರೋಧಿಸಿದಳು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ
ನೀಡಿದ ಆಕೆ “ನನ್ನ ಮಗ
ಸತ್ತರೇನಂತೆ? ನನಗೆ ಆಂಧ್ರದಲ್ಲಿ ಅವನಂತಹ ಸಾವಿರಾರು ಮಕ್ಕಳಿದ್ದಾರೆ” ಎಂಬ ಹೇಳಿಕೆ ನೀಡಿ ಅಚ್ಚರಿ
ಮೂಡಿಸಿದಳು. ಆಂಧ್ರದ
ನಕ್ಸಲ್ ಇತಿಹಾಸದಲ್ಲಿ ಅಪರೂಪವೆಂಬಂತೆ ಆತನ ಅಂತ್ಯಕ್ರಿಯೆಗೆ 15 ಸಾವಿರ
ಜನ ಸೇರಿದ್ದರು. ಆಂಧ್ರದ ಏಳು ಸುದ್ಧಿ
ಛಾನಲ್ಗಳು ಕಿಶನ್ಜಿಯ
ಅಂತ್ಯಕ್ರಿಯೆ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಿದವು. ಈ ಎಲ್ಲಾ ಬೆಳವಣಿಗೆಗಳು
ನನಗೆ ಆತನ ಹುಟ್ಟೂರಾದ ಪೆದ್ದಂಪಲ್ಲಿಯಿಂದ
ಅಧ್ಯಯನಕ್ಕೆ ಪ್ರೇರಣೆ ನೀಡಿದವು.
ಅಧಿಕೃತವಾಗಿ
45 ವರ್ಷಗಳನ್ನು ಪೂರೈಸಿ 46ನೇ ವಸಂತಕ್ಕೆ ಕಾಲಿಟ್ಟಿರುವ
ಮಾವೋವಾದಿ ಕಮ್ಯೂನಿಷ್ಟರ ನಕ್ಸಲ್ ಸಂಘಟನೆಗಳ ಇತಿಹಾಸವನ್ನು
ಗಮನಿಸಿದರೆ, ಹೋರಾಟದ ನಾಯಕತ್ವ ವಹಿಸಿದವರು
ಸಾಮಾನ್ಯ ವ್ಯಕ್ತಿಗಳೇನಲ್ಲ, ಚಾರು ಮುಜಂದಾರ್, ಕೊಂಡಪಲ್ಲಿ
ಸೀತಾರಾಮಯ್ಯ, ನಮ್ಮ ಕರ್ನಾಟಕದ ಸಾಕೇತ್
ರಾಜನ್ , ಅಸೀಮ್ ಚಟರ್ಜಿ, ಸುನೀತಿಘೋಷ್,
ಕನುಸನ್ಯಾಲ್ ಚುರುಕುರಿರಾಜ್ಕುಮಾರ್, ರಾಮಕೃಷ್ಣ, ಗಣಪತಿ,
ವೇಣು, ನಾಗಭೂಷಣ್ ಪಟ್ನಾಯಕ್, ಸತ್ಯನಾರಾಯಣ, ಸರೋಜ್ ದತ್ತ, ಇವರೆಲ್ಲಾ
ಪದವೀಧರರು, ಇವರುಗಳಲ್ಲಿ ಕೆಲವರು ಇಂಜಿನಿಯರ್ಗಳು,
ಮತ್ತು ಸ್ನಾತಕೋತ್ತರ ಪದವಿಧರರು ಈ ಪ್ರತಿಭೆಗಳು ಸಮಾಜದ
ಮುಖ್ಯವಾಹಿನಿಯಲ್ಲಿದ್ದರೆ, ಈ ನೆಲಕ್ಕೆ ಆಸ್ತಿಯಾಗಬಲ್ಲ
ಗುಣ ವನ್ನು ಹೊಂದಿದ್ದವರು.
ಇಂತಹವರನ್ನು
ನಕ್ಸಲ್ ಹೋರಾಟಕ್ಕೆ ಸೂಜಿಗಲ್ಲಿನಂತೆ ಸೆಳೆದ ಸಂಗತಿ ಯಾವುದೆಂದು
ಹುಡುಕುತ್ತಾ ಹೊರಟರೆ, ಅದು ನಮ್ಮನ್ನು
ಅರಣ್ಯವಾಸಿಗಳ ಬವಣೆಯ ಬದುಕಿನ ಬಳಿ
ತಂದು ನಿಲ್ಲಿಸುತ್ತದೆ. ಅರಣ್ಯದಲ್ಲಿ ಮೂಕ ಪ್ರಾಣಿಗಳಂತೆ ಬದುಕುತ್ತಾ
ಅರಣ್ಯಾಧಿಕಾರಿ, ಪೊಲೀಸರು, ಜಮೀನ್ದಾರರು ಮತ್ತು ಅರಣ್ಯ ಗುತ್ತಿಗೆದಾರರಿಂದ
ನಿರಂತರ ಶೋಷಣೆಗಳಿಗೆ ಒಳಗಾದ ಅನಕ್ಷರಸ್ತ ಆದಿವಾಸಿಗಳ
ಬದುಕನ್ನು ಹಸನು ಮಾಡಲು ಹೋದ
ಇವರು, ತಮ್ಮ ಬದುಕನ್ನು ತಮಗರಿವಿಲ್ಲದಂತೆ
ಬೀದಿಗೆ ಚೆಲ್ಲಿಕೊಂಡ ನತದೃಷ್ಟರು.
ಭಾರತದ
ನಕ್ಸಲ್ವಾದಿಗಳು ವಿಶೇಷವಾಗಿ ಮಾವೋ
ಮತ್ತು ಲೆನಿನ್ ಚಿಂತನೆಗಳನ್ನು ಆರಾಧಿಸುವವರು
ಚರಿತ್ರೆಯ ಭೂತಕಾಲ ಮತ್ತು ವರ್ತಮಾನದ
ಬೆಳವಣಿಗೆಗಳ ಹಂಗಿಲ್ಲದೆ ಬದುಕುತ್ತಿದ್ದಾರೆ ಎಂದು ನಿಸ್ಸಂಕೋಚವಾಗಿ ಹೇಳಬಹುದು.
ಯಾವುದೋ ಒಂದು ಕಾಲಘಟ್ಟದಲ್ಲಿ ಮುಖ್ಯವಾಗಿದ್ದ
ವಿಚಾರಗಳು ಅಥವಾ ಸಿದ್ಧಾಂತಗಳು ಇವೊತ್ತಿಗೂ
ಪ್ರಸ್ತುತÉಂದು ನಂಬುವುದು ಮುಗ್ಧತನ
ಎಂದು ಕರೆಯಲಾಗದು. ಜಾಗತೀಕರಣಕ್ಕೆ ತನ್ನ ಹೆಬ್ಬಾಗಿಲನ್ನು ತೆರೆದು
ಲಾಭಕೋರತನದ ಎಲ್ಲಾ ಅವಕಾಶಗಳನ್ನು ಬಾಚುತ್ತಾ
ಕೂತಿರುವ ಚೀನಾ ದೇಶಕ್ಕೆ ಮಾವೋ
ಅಪ್ರಸ್ತುತನಾಗಿ ಎಷ್ಟೋ ವರ್ಷಗಳು ಕಳೆದುಹೋಗಿವೆ.
ಅದೇ ರೀತಿ ಜಗತ್ತಿನಲ್ಲಿ ಅಮೇರಿಕಾದ
ಎದುರು ಬಲಿಷ್ಠ ಶಕ್ತಿಯ ರಾಷ್ಟ್ರವಾಗಿದ್ದ
ಸೋವಿಯತ್ ಒಕ್ಕೂಟ ಪತನವಾಗಿ ದಶಕವೇ
ಕಳೆದು ಹೋಗಿದೆ ಆದರೆ, ಇನ್ನೂ
ಮಾವೋ, ಲೆನಿನ್ ವಿಚಾರಧಾರೆಗಳ ಕುರಿತು
ಕ್ರೈಸ್ತ ಪಾದ್ರಿಗಳ ಉಪನ್ಯಾಸದಂತೆ ಮಾತನಾಡುವ ನಕ್ಸಲ್
ಹೋರಾಟದ ಸಂಘಟನೆಗಳ ನಾಯಕರಿಗೆ ವರ್ತಮಾನದಲ್ಲಿ ಕ್ಷಿಪ್ರ ಗತಿಯಲ್ಲಿ ಜರಗುತ್ತಿರುವ
ಜಾಗತಿಕ ಬದಲಾವಣೆಗಳ ಬಗ್ಗೆ ಸ್ಪಷ್ಟವಾದ ಅರಿವಿಲ್ಲ
ಹಾಗಾಗಿ ಇವರುಗಳ ಸೈದ್ಧಾಂತಿಕ ವಿಚಾರಗಳ
ಕೊರತೆಯಿಂದಾಗಿ ಕಣ್ಣೆದುರುಗಿನ ಹಿಂಸೆಗೆ
ನಾವು ಪರೋಕ್ಷ ಸಾಕ್ಷಿಯಾಗುತ್ತಿದ್ದೇವೆ.
ಸ್ವತಃ
ಲೆನಿನ್ ಕ್ರಾಂತಿ
ಕುರಿತು ಮಾತನಾಡುತ್ತಾ, “ಕ್ರಾಂತಿಕಾರಿ ಭಾವನೆ ಎನ್ನುವುದು ಜನಸಮುದಾಯದ
ನಡುವೆ ಬಲವಂತವಾಗಿ ಹುಟ್ಟು ಹಾಕುವಂತಹದ್ದಲ್ಲ, ಅದು
ಜನರ ಎದೆಯೊಳಗೆ ತಾನಾಗಿ ಹುಟ್ಟಬೇಕು., ಅಂತಹ
ವಾತಾವರಣವನ್ನು ಸೃಷ್ಟಿಸಬೇಕಾದ ಜವಾಬ್ದಾರಿ ಮಾತ್ರ ನಮ್ಮದು” ಎಂದಿದ್ದ. ಅಲ್ಲದೆ, ನಾವು ವ್ಯವಸ್ಥೆಯ
ವಿರುದ್ಧ ರೂಪಿಸಬಹುದಾದ ತಂತ್ರಗಳು ಹೋರಾಟವನ್ನು ಮುನ್ನಡೆಸಬಹುದೇ ಹೊರತು, ಆಲೋಚನೆಗಳನ್ನು ಬೆಳಸಲಾರವು
ಎಂದು ಅಭಿಪ್ರಾಯಪಟ್ಟಿದ್ದ. ಆದರೆ, ಭಾರತದ ನಕ್ಸಲ್ವಾದಿಗಳಿಗೆ ಕ್ರಾಂತಿಯೆಂದರೆ ಶಸ್ತ್ರಾಸ್ತ್ರಗಳೊಂದಿಗೆ ವ್ಯವಸ್ಥೆಯ ವಿರುದ್ಧ ಮಾಡುವ ಯುದ್ಧ ಎಂಬ ಪರಿಕಲ್ಪನೆಯಿದೆ.
ಈ ಕಾರಣಕ್ಕಾಗಿ ಆದಿವಾಸಿಗಳು,
ಭೂರಹಿತ ಕೃಷಿ ಕೂಲಿ ಕಾರ್ಮಿಕರನ್ನು
ಸಂಘಟಿಸಿ ಬಂಡವಾಳಶಾಹಿಗಳ ವಿರುದ್ಧ ಹೋರಾಡುತ್ತಾ ಹಿಂಸೆಯ
ಹಾದಿಯನ್ನು ಕ್ರಾಂತಿ ಪಥ ಎಂದು
ನಂಬಿದ್ದಾರೆ. ಮನು ಕುಲದ ಶತ್ರುವೆಂದು
ಪರಿಗಣಿಸಲ್ಪಟ್ಟ ಹಿಂಸೆ ಇವರೊಳಗಿನ ಮನುಷ್ಯತ್ವದ
ಭಾವನೆಯನ್ನು ಹೊಸಕಿಹಾಕಿದೆ. ಈ ಕಾರಣಕ್ಕಾಗಿ ತಮ್ಮನ್ನು
ವಿರೋಧಿಸುವವರನ್ನು ಹತ್ಯೆ ಮಾಡುವುದು ಸಹ ತಮ್ಮ ಕಾಯಕ
ಎಂದು ನಕ್ಸಲ್ ಕಾರ್ಯಕರ್ತರು ನಂಬಿದ್ದಾರೆ.
ಮಾತೃಪಕ್ಷವಾದ
ಕಮ್ಯೂನಿಷ್ಟ್ ಪಕ್ಷದಿಂದ ಸಿಡಿದು ಪ್ರತ್ಯೇಕ ಬಣವನ್ನು
ರೂಪಿಸಿಕೊಂಡ ಚಾರು ಮುಜಂದಾರ್ ತನ್ನ
ಸಿ.ಪಿ.ಐ. (ಎಂ.ಎಲ್.) ಪಕ್ಷಕ್ಕೆ “ಐತಿಹಾಸಿಕ ಎಂಟು ದಾಖಲೆಗಳು” ಎಂಬ ಕರಡು ನೀತಿಯನ್ನು
ರೂಪಿಸಿದ ಸಂದರ್ಭದಲ್ಲಿ ಶತೃಗಳನ್ನು ಸದೆ ಬಡಿಯುವಾಗ ಹಿಂಸೆ
ಅನಿವಾರ್ಯ ಎಂದು ಪ್ರತಿಪಾದಿಸಿದ್ದ. ಈ
ಸಿದ್ಧಾಂತವನ್ನು ನಕ್ಸಲ್ಬಾರಿಯ ಘಟನೆ ಮತ್ತು ನಂತರ
ಸರ್ಕಾರದ ಜೊತೆ ನಡೆದ ಅನೇಕ
ಸಂಘರ್ಷಗಳಲ್ಲಿ ಜಾರಿಗೆ ತಂದಿದ್ದ.
ಆದರೆ, ಚಾರು ಕೊಲ್ಕತ್ತ ಪೊಲೀಸರಿಂದ
ಬಂಧನಕ್ಕೊಳಾಗುವ ಮುನ್ನ ತನ್ನ ದಶಕದ
ಹೋರಾಟದ ಅನುಭವದಲ್ಲಿ ಅನೇಕ ತಪ್ಪುಗಳಾಗಿವೆ. ಇದನ್ನು
ಸರಿಪಡಿಸಿಕೊಂಡು ಕ್ರಾಂತಿಯನ್ನು ಮುನ್ನಡೆಸಬೇಕಾಗಿದೆ ಎಂಬ ನಿರ್ಧಾರಕ್ಕೆ ಬಂದಿದ್ದ.
ತಾನು ಸಾಯುವ ಕೆಲವು ದಿನಗಳ
ಹಿಂದೆ ಕೊಲ್ಕತ್ತದ ಪೊಲೀಸ್ ಠಾಣೆಯಿಂದ ತನ್ನ
ಪತ್ನಿಗೆ ಈ ಕುರಿತು ಒಂದು
ಸುಧೀರ್ಘ ಪತ್ರವನ್ನೂಸ ಸಹ ಚಾರು ಮುಜಂದಾರ್
ಬರೆದಿದ್ದ.
ಚಾರು
ನಿಧನಾನಂತರ ನಕ್ಸಲ್ ಸಂಘಟನೆಗಳು ಛಿದ್ರಗೊಂಡು
ಅನೇಕ ಬಣಗಳಾಗಿ ರೂಪುಗೊಂಡ ಪರಿಣಾಮ
ಹಿಂಸಾತ್ಮಕ ಹೋರಾಟವೊಂದೇ ಕ್ರಾಂತಿಯ ಪಥ ಎಂಬಂತಾಯಿತು. ಇದರಿಂದಾಗಿ
ಭಾರತದ ನಕ್ಸಲ್ವಾದಿಗಳು ಮಾಕ್ರ್ಸ್,
ಲೆನಿನ್, ಮಾವೋ ಇವರ ವಿಚಾರಧಾರೆಗಳನ್ನು,
ಚಿಂತನೆಗಳನ್ನು ಸರಿಯಾದ ನೆಲೆಗಟ್ಟಿನಲ್ಲಿ ಗ್ರಹಿಸುವಲ್ಲಿ
ವಿಫಲರಾದರು. ಜಗತ್ತಿನ
ಯಾವುದೋ ರಾಷ್ಟ್ರದಲ್ಲಿ ನಡೆದ ಕ್ರಾಂತಿಯನ್ನು ಯಥಾವತ್ತಾಗಿ
ಭಾರತದಲ್ಲಿ ಆಚರಣೆಗೆ ತರಲು ಪ್ರಯತ್ನಿಸಿದರು.
ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಸಾಮಾಜಿಕ
ಮತ್ತು ರಾಜಕೀಯ ಹಿನ್ನೆಲೆಗಳಿರುತ್ತವೆ. ಎಲ್ಲಕ್ಕಿಂತ
ಮುಖ್ಯವಾಗಿ ಸಾಂಸ್ಕøತಿಕವಾಗಿ ಭಿನ್ನವಾದ ಆಯಾಮಗಳಿರುತ್ತವೆ.
ಚೀನಾದಲ್ಲಿ ಯಶಸ್ವಿಯಾದ ಹೋರಾಟ ಅಥವಾ ಇವೊತ್ತಿಗೂ
ಕ್ಯೂಬಾ ದೇಶದಲ್ಲಿರುವ ಕಮ್ಯೂನಿಷ್ಟ್ ವ್ಯವಸ್ಥೆಯ ಬಗ್ಗೆ ಭಾರತದಲ್ಲಿ ಕನಸು
ಕಾಣುವುದು ವಿವೇಕತನವಾಗಲಾರದು. ಬಹು ಸಂಸ್ಕøತಿಯ
ನೆಲವಾದ ಭಾರತದಲ್ಲಿ ಪ್ರತಿ ಐವತ್ತು ಕಿಲೋಮೀಟರ್ಗೆ ಭಾಷೆ ಮತ್ತು
ಆಹಾರ ಸಂಸ್ಕತಿಗಳು ಬದಲಾಗುವ ಸನ್ನಿವೇಶದಲ್ಲಿ ಅಥವಾ
ಜಗತ್ತಿನ ಯಾವುದೋ ಒಂದು ನೆಲದಲ್ಲಿ
ಯಶಸ್ವಿಯಾದ ಕ್ರಾಂತಿ ಭಾರತದಂತಹ ಹೆಚ್ಚು
ಅನಕ್ಷರಸ್ಥ ಸಮುದಾಯ ಇರುವ ನೆಲದಲ್ಲಿ
ಯಶಸ್ವಿಯಾಗಲು ಸಾಧ್ಯವೆ? ಎಂಬ ಪ್ರಶ್ನೆ ನಕ್ಸಲ್
ಹೋರಾಟಗಾರರನ್ನು ಕಾಡಬೇಕಿತ್ತು. ಇಂತಹ
ದೂರದೃಷ್ಟಿಯ ಆಲೋಚನೆಗಳ ಕೊರತೆ ನಕ್ಸಲ್ ಹೋರಾಟದ
ಇತಿಹಾಸದ ಉದ್ದಕ್ಕೂ ನಮಗೆ ಕಾಣಸಿಗುತ್ತವೆ.
ಕಾರ್ಲ್ಸ್ ಮಾರ್ಕ್ಸ್ ಚಿಂತನೆಗಳನ್ನು ಅತ್ಯುತ್ತಮವಾಗಿ ವಿಶ್ಲೇಷಣೆಗೆ ಒಳಪಡಿಸಿರುವ ಸ್ಟಾಲಿನ್, “ಮಾರ್ಕ್ಸನ ಚಿಂತನಾಧಾರೆ, ಕ್ರಾಂತಿಕಾರಕ ಆಲೋಚನೆಗಳ ಜೊತೆಗೆ
ವೈಜ್ಞಾನಿಕವಾಗಿತ್ತು, ಹಾಗಾಗಿ ಅದು ಬೆಳೆಯತ್ತಾ
ಜಗತ್ತಿನ ಇತರೆ ಪ್ರದೇಶಗಳಿಗೆ ಹರಡಲು
ಸಾಧ್ಯವಾಯಿತು ಎಂದಿದ್ದಾನೆ. ಮುಂದುವರಿದು, ಸಮಾಜ ಅಥವಾ ಸಾಮಾಜಿಕ
ಬದಲಾವಣೆಗಳನ್ನು ಕೇವಲ ಕ್ರಾಂತಿಕಾರಕ ಆಲೋಚನೆಗಳಿಂದ
ಮುನ್ನಡೆಸಲು ಸಾಧ್ಯವಿಲ್ಲ, ಆಯಾ ಕಾಲಘಟ್ಟದ ಸಾಮಾಜಿಕ
ಬದಲಾವಣೆ ಮತ್ತು ಬೆಳವಣಿಗೆಗೆ ಅನುಗುಣವಾಗಿ
ನಮ್ಮ ಕ್ರಾಂತಿಯ ವಿಚಾರಗಳು ಸಹ ಸ್ಪಂದಿಸುವಂತಿರಬೇಕು” ಎಂದಿದ್ದಾನೆ. ತಮ್ಮ ಸಂಘಟನೆಯ ಜೊತೆ
ಜೊತೆಯಲ್ಲಿ ಲೆನಿನ್ ಮತ್ತು ಮಾವೋ
ಹೆಸರನ್ನು ಹೊತ್ತು ಬಹುದೂರ ಸಾಗಿರುವ
ಭಾರತದ ನಕ್ಸಲ್ ಜಗತ್ತಿಗೆ ಈ
ವಾಸ್ತವ ಅರ್ಥವಾಗಲೇ ಇಲ್ಲ. ಈ ಕಾರಣಕ್ಕಾಗಿ
ಅವರ ಆವೇಶ ಮತ್ತು ಉನ್ಮಾದಗಳು
“ಭಾರತದ ಸ್ವಾತಂತ್ರ್ಯವೆಂಬುದು ಸುಳ್ಳು”
“ಭಾರತ ಅರೆ ವಸಾಹಾತು ಶಾಹಿಗಳ
ನಾಡು” ಮತ್ತು “ಚೀನಾ ದಾರಿ
ನಮ್ಮದು”
“ಚೀನಾ ಅಧ್ಯಕ್ಷ ನಮ್ಮ ಅಧ್ಯಕ್ಷ” ಎಂಬ ಹುಂಬುತನದ ಘೋಷಣೆ ಕೂಗುವತನಕ ಕರೆದೊಯ್ದವು.
ಚೀನಾದ ಮಹಾನ್ ಹೋರಾಟಗಾರ ಮಾವೋತ್ಸೆ
ತುಂಗನ ವಿಚಾರಗಳು ಕೇವಲ ಒಂದು ನೆಲಕ್ಕೆ
ಅಥವಾ ಒಂದು ಸಂಸ್ಕತಿಗೆ ಸೀಮಿತವಾಗಿರದೆ,
ಮನುಕುಲಕ್ಕೆ ನೆರವಾಗಬಲ್ಲ ಸಂಗತಿಗಳನ್ನು ಒಳಗೊಂಡಿದ್ದವು. ಆದರೆ, ಅಂತಹವುಗಳಲ್ಲಿ ಭಾರತದ
ಸಂದರ್ಭಕ್ಕೆ ಅನುಗುಣವಾಗುವ ಸಿದ್ಧಾಂತಗಳನ್ನು ಹೆಕ್ಕಿ ಆಯ್ದುಕೊಳ್ಳವಲ್ಲಿ ಭಾರತದ
ಮಾವೋವಾದಿಗಳು ವಿಫಲರಾದರು.
ಇದು
ಮಾವೋವಾದಿಗಳ ದುರಂತವಾದರೆ, ದೇಶದ ಪ್ರಮುಖ ಎಡಪಕ್ಷಗಳಾದ
ಸಿ.ಪಿ.ಐ ಮತ್ತು
ಸಿ.ಪಿ.ಐ.(ಎಂ.)
ಪಕ್ಷಗಳು ತಮ್ಮ ಸಿದ್ಧಾಂತ ಅಥವಾ
ಧೋರಣೆಗಳಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಗೊಂದಲದಲ್ಲಿವೆ.
ವರ್ತಮಾನದ ಜಗತ್ತಿನಲ್ಲಿ ಜಾಗತೀಕರಣದ ಬಗ್ಗೆ ನಮ್ಮ ಪ್ರತಿರೋಧಗಳು
ಏನೇ ಇದ್ದರೂ ಅದೊಂದು ಅನಿವಾರ್ಯವಾಗಿ
ಜಾಗರೂಕತೆಯಿಂದ ಒಪ್ಪಿಕೊಳ್ಳಬೇಕಾದ ಪ್ರಕ್ರಿಯೆಯಂತಾಗಿದೆ. ಇದು ನಮ್ಮ ಮುಂದಿರುವ
ವಾಸ್ತವ ಸಂಗತಿ. ಬಂಡವಾಳಶಾಹಿ ಜಗತ್ತಿನ
ಬಗ್ಗೆ ನಾವು ಮಾತನಾಡುತ್ತಲೇ, ಆಧುನಿಕ
ಅಭಿವೃದ್ಧಿಯ ತಂತ್ರಗಳನ್ನು ಒಪ್ಪಿಕೊಂಡಿದ್ದೇವೆ. ಭಾರತದಲ್ಲಿ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ರೈಲ್ವೆ,
ದೂರಸಂಪರ್ಕ ಕ್ಷೇತ್ರ, ಜೈವಿಕ ತಂತ್ರಜ್ಞಾನ ಮತ್ತು ಬಾಹ್ಯಾಕಾಶ
ಇಲಾಖೆಯಲ್ಲಾಗಿರುವ ಬೆಳವಣಿಗೆಯನ್ನು ನಾವು ನಿರಾಕರಿಸುವಂತಿಲ್ಲ. ಒಂದು
ಕಡೆ ಬಂಡವಾಳಶಾಹಿ ಜಗತ್ತು ಕುರಿತು ಮಾತನಾಡುತ್ತಾ,
ಇನ್ನೊಂದೆಡೆ ಆಧುನಿಕ ಅಭಿವೃದ್ಧಿಯನ್ನು ಸಹಿಸಕೊಳ್ಳಬೇಕಾದ
ಕವಲು ಹಾದಿಯಲ್ಲಿ ಎಡಪಕ್ಷಗಳು ಸಾಗಿವೆ ಎಂದರೆ ಅತಿಶಯವಾಗಲಾರದು.
ಪಶ್ಚಿಮ ಬಂಗಾಳದ ಎಡರಂಗದ ಬುದ್ಧದೇವ್
ಭಟ್ಟಾಚಾರ್ಯರ ನೇತೃತ್ವದ ಸರ್ಕಾರ ಟಾಟಾ ಕಂಪನಿಗೆ
ನಂದಿಗ್ರಾಮದಲ್ಲಿ ಎಂಟನೂರು ಎಕರೆ ಪುಕ್ಕಟೆ
ಭೂಮಿ ಮತ್ತು ಇಪ್ಪತ್ತು ವರ್ಷಗಳ
ತೆರಿಗೆ ವಿನಾಯಿತಿ ಘೋಷಿಸಿದ ಕ್ರಮ ಎಡರಂಗದ
ದ್ವಂದ್ವಕ್ಕೆ ಸಾಕ್ಷಿಯಾಗಿದೆ.(ತೃಣಮೂಲ ಕಾಂಗ್ರೆಸ್ ಮತ್ತು
ಮಾವೋವಾದಿಗಳ ಪ್ರತಿಭಟನೆಯಿಂದಾಗಿ ಈ ಯೋಜನೆ ರದ್ದಾಯಿತು.)
ಮಾವೋವಾದಿ
ಕಮ್ಯೂನಿಷ್ಟರ ಮಿಲಿಟರೀಕರಣವನ್ನು ಎಡಪಕ್ಷಗಳು ಸ್ಪಷ್ಟವಾಗಿ ನಿರಾಕರಿಸಿದ್ದರೂ ಸಹ ತಮ್ಮ ಮೂಲ
ಪಕ್ಷದಿಂದ ಸಿಡಿದು ಹೋಗಿರುವ ಉಗ್ರವಾದಿಗಳಿಗೆ
ವೈಚಾರಿಕತೆಯ ಮಾರ್ಗ
ತೋರುವಲ್ಲಿ ಎಡವಿ ಬಿಟ್ಟವಾ? ಇದು
ಈ ನೆಲದ ಪ್ರಜ್ಞಾವಂತರನ್ನು
ಸದಾ ಕಾಡುವ ಪ್ರಶ್ನೆ. ಪ್ರಜಾಪ್ರಭುತ್ವ
ವ್ಯವಸ್ಥೆಯ ಕುರಿಂತಂತೆ ನಮ್ಮ ತಕರಾರುಗಳು, ಅಸಮಾಧಾನಗಳು
ಏನೇ ಇರಲಿ, ಇವುಗಳ ವಿರುದ್ಧ
ಹೋರಾಡಲು ಬಂದೂಕು ಅಥವಾ ಬಾಂಬ್ಗಳು ಪರ್ಯಾಯವಲ್ಲ.
ಇಂತಹ ನೈಜಸಂಗತಿಗಳನ್ನು ನಕ್ಸಲ್ ಸಂಘಟನೆಗಳ ನಾಯಕರಿಗೆ
ಮತ್ತು ಕಾರ್ಯಕರ್ತರಿಗೆ ಮನದಟ್ಟು ಮಾಡಿಕೊಡುವಲ್ಲಿ ಎಡಪಕ್ಷಗಳು
ವಿಫಲವಾದವೆ? ಇದು ಮಿಲಿಯನ್ ಡಾಲರ್
ಪ್ರಶ್ನೆ. ಈ ಕಾರಣಕ್ಕಾಗಿ ಸಿ.ಪಿ.ಐ.
ಮತ್ತು ಸಿ.ಪಿ.ಐ(ಎಂ) ಪಕ್ಷಗಳನ್ನು ಸಹ ಸಾಮಾನ್ಯ ಜನತೆ
ನಕ್ಸಲ್ ಸಂಘಟನೆಗಳಂತೆ ಸಂಶಯದಿಂದ ನೋಡತೊಡಗಿದ್ದಾರೆ.
ಜಗತ್ತಿನ
ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತಂತೆ ನಂಬಿಕೆ ಕಳೆದುಕೊಂಡು, ಜನಸಾಮಾನ್ಯರ
ಉದ್ಧಾರಕ್ಕೆ ಕಮ್ಯೂನಿಷ್ಟ್ ಸರ್ಕಾರವೊಂದೇ ಅಂತಿಮ
ಪರ್ಯಾಯ ಎಂದು ನಂಬಿರುವ ಮಾವೋವಾದಿ
ಕಮ್ಯೂನಿಷ್ಟರಿಗೆ ನಮ್ಮ ನೆರೆಯ ನೇಪಾಳದಲ್ಲಿ
ಮಾವೋವಾದಿಗಳು ಅಧಿಕಾರದ ಗದ್ದುಗೆಯನ್ನೇರಿ
ವಿಫಲವಾಗಿರುವ ಉದಾಹರಣೆ ನಮ್ಮ ಕಣ್ಮುಂದೆ
ಇದೆ. ಆದರೆ, ವಾಸ್ತವವನ್ನು ಗಣನೆಗೆ
ತೆಗೆದುಕೊಳ್ಳಲಾರದಷ್ಟು ಜಡತ್ವವನ್ನು ನಕ್ಸಲರು ಮೈಗೂಡಿಸಿಕೊಂಡಿದ್ದಾರೆ. ಜಗತ್ತಿನ ಏಕೈಕ
ಹಿಂದೂ ರಾಷ್ಟ್ರವೆನಿಸಿಕೊಂಡಿದ್ದ ನೇಪಾಳದಲ್ಲಿ ಅರಸೊತ್ತಿಗೆಯ ಪ್ರಭುತ್ವವನ್ನು ಕಿತ್ತೊಗೆದು ಅಧಿಕಾರಕ್ಕೇರಿದ ಅಲ್ಲಿನ ಕಮ್ಯೂನಿಷ್ಟ್ ಪಾರ್ಟಿ
ಆಫ್ ನೇಪಾಳ (ಎಂ) ಕೇವಲ
ಐದು ವರ್ಷಗಳಲ್ಲಿ ವಿಫಲವಾಗಿ ಸಮುದಾಯದ ನಂಬಿಕೆ ಕಳೆದುಕೊಂಡಿರುವುದನ್ನು
ನಾಯಕ ಪ್ರಚಂಡ ಸ್ವತಃ ಒಪ್ಪಿಕೊಂಡಿದ್ದಾರೆ.
ನೇಪಾಳದ
ಬಾಬುರಾಮ ಭಟ್ಟಾರಿ ಎಂಬ ಹಿರಿಯ
ಧುರೀಣ ಬರೆದಿರುವ “The
Development of Demacrasy in the 21st Century”
ಎಂಬ ಪ್ರಬಂಧ ಕೃತಿಯಲ್ಲಿ “ಆಧುನಿಕ
ಬದುಕಿನ ಕಾಲಘಟ್ಟಕ್ಕೆ ತಕ್ಕಂತೆ ಕ್ರಾಂತಿಯ ಸಿದ್ಧಾಂತಗಳನ್ನು
ಬದಲಿಸಿಕೊಂಡು, ಬಹುಪಕ್ಷೀಯ ವಿಚಾರಗಳಿಗೆ ಮನಸ್ಸನ್ನು ತೆರೆದಿಡುವ ಮೂಲಕ ಸಮುದಾಯದ ಅಭಿವೃದ್ದಿ
ಮತ್ತು ಪಕ್ಷದ ಏಳಿಗೆಯನ್ನು ಸಾಧಿಸಲು
ಇರುವ ಏಕೈಕ ಮಾರ್ಗ, ಇದು
ಇಪ್ಪತ್ತೊಂದನೆಯ ಶತಮಾನ ನಮಗೆ ಕಲಿಸಿರುವ
ಪಾಠ” ಎಂದಿದ್ದಾರೆ.
ಭಾರತದ
ಮಾವೋವಾದಿಗಳಿಗೆ ಇಂತಹ ಆಲೋಚನೆಗಳಲ್ಲಿ ನಂಬಿಕೆಯಿಲ್ಲ.
ಪರ್ಯಾಯ ವ್ಯವಸ್ಥೆ ಎಂಬ ಪದವನ್ನು ತಮ್ಮ
ಶಬ್ಧಕೋಶದಿಂದ ತೆಗೆದು ಹಾಕಿರುವ ಅವರಲ್ಲಿ
ನಾಗರೀಕ ಹಕ್ಕುಗಳ ಬಗ್ಗೆಯಾಗಲಿ, ಮಾನವ
ಜೀವಗಳ ಬಗೆಗಿನ ಗೌರವವಾಗಲಿ ಇದ್ದಂತಿಲ್ಲ.
ಈ ಇಪ್ಪತ್ತೊಂದನೆ ಶತಮಾನದಲ್ಲಿ
ಕೂಡ ಅವರು ನ್ಯಾಯಪಂಚಾಯಿತಿ, ಮರಣ
ದಂಡನೆಯಂತಹ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿರುವ ಅರಣ್ಯಪ್ರದೇಶಗಳಲ್ಲಿ
ಜಾರಿಯಲ್ಲಿಟ್ಟಿದ್ದಾರೆ. ಅವರ ವಿರೋಧಿಗಳ ಪಟ್ಟಿಯಲ್ಲಿ ಪೊಲೀಸರು,
ನಕ್ಸಲ್ ನಿಗ್ರಹ ಪಡೆಯ ಸೈನಿಕರು,
ಅರಣ್ಯಾಧಿಕಾರಿಗಳು, ಜಮೀನ್ದಾರರು ಹಾಗೂ ಪೊಲೀಸರಿಗೆ ಮಾಹಿತಿ ನೀಡುವ ಮಾಹಿತಿದಾರರಿದ್ದಾರೆ.
ಹಲವಾರು
ದಶಕಗಳ ಕಾಲ ಆಂಧ್ರ ಪ್ರದೇಶದಲ್ಲಿ ಮಾನವ
ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಿದ್ದ ಹೆಸರಾಂತ
ವಕೀಲ ಹಾಗೂ ಹೋರಾಟಗಾರ ಡಾ.
ಕೆ. ಬಾಲಗೋಪಾಲ್ ಬರೆದಿರುವ “ಡಾರ್ಕ್ ಏಂಜೆಲಸ್” ಎಂಬ ಕೃತಿಯಲ್ಲಿ ಆಂಧ್ರದಲ್ಲಿ
ಪ್ರಜಾಸಮರಂ ದಳ ( Peoples War Group) ನಡೆಸಿದ ಅನೇಕ ಪೈಶಾಚಿಕ ಕೃತ್ಯಗಳನ್ನು
ದಾಖಲಿಸಿದ್ದಾರೆ. ಅಲ್ಲದೆ ಅನೇಕ ನಕ್ಸಲ್
ಸಂಘಟನೆಯ ನಾಯಕರು ಬೆದರಿಕೆಯ ತಂತ್ರಗಳ
ಮೂಲಕ ಜಮೀನ್ದಾರರು ಮತ್ತು ಅರಣ್ಯ ಅಧಿಕಾರಿಗಳ
ಜೊತೆ ಅನೈತಿಕ ಮೈತ್ರಿ ಹೊಂದಿರುವುದನ್ನು
ಸಹ ತಿಳಿಸಿದ್ದಾರೆ. 1983 ರಿಂದ 1997 ರವರೆಗೆ ಕೊಂಡಪಲ್ಲಿ ಸೀತಾರಾಮಯ್ಯ
ನೇತೃತ್ವದ ಪೀಪಲ್ಸ್ ವಾರ್ ಗ್ರೂಪ್
ಸಂಘಟನೆಯ ಬೆಂಬಲಿಗರಲ್ಲಿ ಒಬ್ಬರಾಗಿದ್ದ ಅವರು, 2009 ರಲ್ಲಿ ನಿಧನರಾದರು. ಇವೊತ್ತಿಗೂ
ಅಂಧ್ರದ ಅನೇಕ ಜಿಲ್ಲೆಗಳಲ್ಲಿ ಅಬಕಾರಿ
ಗುತ್ತಿಗೆ ನಕ್ಸಲ್ ಸಂಘಟನೆಗಳ ಕೈಯಲ್ಲಿದೆ.
ಇವೆಲ್ಲವುಗಳ
ಒಟ್ಟು ಪರಿಣಾಮದಿಂದ ಆದಿವಾಸಿಗಳು ಅತಂತ್ರರಾಗಿದ್ದಾರೆ. ಇತ್ತ ಸರ್ಕಾರದ ಅಭಿವೃದ್ಧಿ
ಯೋಜನೆಗೆ ತೆರೆದುಕೊಳ್ಳಲಾರದೆ, ಅತ್ತ ನಕ್ಸಲ್ ಸಂಘಟನೆಗಳಿಂದ
ಬಿಡಿಸಿಕೊಳ್ಳಲಾರದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಇಂದಿನ ಅರಣ್ಯವಾಸಿಗಳ ದಾರುಣವಾದ
ನೋವಿನ ಬದುಕಿನಲ್ಲಿ
ನಮ್ಮ ಕೇಂದ್ರ ಸರ್ಕಾರದ ಪಾತ್ರವನ್ನು
ಅಲ್ಲಗೆಳೆಯಲಾಗದು. ಸರ್ಕಾರದ ಕಪಟತನ, ಆದಿವಾಸಿಗಳ
ಕುರಿತು ಜನಪ್ರತಿನಿಧಿಗಳ ತುಟಿಯಂಚಿನ ಕರುಣೆ, ಅಧಿಕಾರಿಗಳ ಮುಖವಾಡದ
ಹಿಂದಿನ ಪೈಶಾಚಿಕ ವರ್ತನೆ ಇವೆಲ್ಲವೂ
ನಾವು ಮಧ್ಯಭಾರತಕ್ಕೆ ಪ್ರವೇಶ ಮಾಡಿದರೆ, ನಮ್ಮದೆರು
ತಂತಾನೆ ಅನಾವರಣಗೊಳ್ಳುತ್ತವೆ. ಈ
ದಿನ ಅರಣ್ಯವಾಸಿಗಳು ಆತಂಕದ ನಡುವೆಯೂ ಒಂದಿಷ್ಟು
ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದg,É ಅದಕ್ಕೆ ನಕ್ಸಲರು ಪರೋಕ್ಷವಾಗಿ
ಕಾರಣರಾಗಿದ್ದಾರೆ. ಈ ಮಾತು ಉತ್ಪ್ರೇಕ್ಷೆಯಂತೆ
ತೋರಿದರೂ ಮಧ್ಯಭಾರತದ ದಂಡಕಾರಣ್ಯದ ನಾಲ್ಕು ರಾಜ್ಯಗಳ ನಡುವಿನ
ಅರಣ್ಯ ಪ್ರದೇಶದಲ್ಲಿ ನಾನು ಕಂಡುಕೊಂಡ ವಾಸ್ತವ
ಸತ್ಯ.
2006 ರ ವರೆಗೆ
ದೇಶದ ನಕ್ಸಲರ ಹಿಂಸಾತ್ಮಕ ಘಟನೆಗಳ
ಕುರಿತಂತೆ ಒಂದಿನಿತು ತುಟಿ ಬಿಚ್ಚದ ಪ್ರಧಾನಿ
ಡಾ. ಮನಮೋಹನ್ ಸಿಂಗ್ ಪ್ರಥಮ
ಬಾರಿಗೆ “ನಕ್ಸಲ್ ಸಂಘಟನೆಗಳು ಶಸ್ತ್ರಾಸ್ತ್ರಗಳ
ಮೂಲಕ ಒಡ್ಡುತ್ತಿರುವ ಪ್ರತಿರೋಧ
ಭಾರತದ ಭದ್ರತೆಗೆ ಅತಿ ದೊಡ್ಡ ಅಪಾಯಕಾರಿ
ಬೆಳವಣಿಗೆಯಾಗಿದೆ” ಎಂದು ಅಭಿಪ್ರಾಯಪಟ್ಟರು. ಈ ಮಾತು ಹೇಳಿದ
ಐದು ವರ್ಷಗಳ ನಂತರ ನಕ್ಸಲರ
ಹಿಂಸೆಗೆ ಕಾರಣವಾದ ಅಂಶಗಳನ್ನು ಗುರುತಿಸಿದಂತೆ
ಮಾತನಾಡಿದ ಅವರು,
“ಈವರೆಗೆ ಅಭಿವೃದ್ಧಿ ಕಾಣದ ಪ್ರದೇಶಗಳಿಗೆ ಮೂಲಭೂತ
ಸೌಕರ್ಯವನ್ನು ಒದಗಿಸಿ ಅಲ್ಲಿನ ಜನತೆಯ
ಆಶೋತ್ತರಗಳನ್ನು ಈಡೇರಿಸುವ ಮಾರ್ಗವೊಂದೇ ನಮ್ಮ ಮುಂದೆ ಇರುವ
ಏಕೈಕ ಪರಿಹಾರ” ಎಂದರು. ಪ್ರಧಾನಿಯವರಿಂದ ಇಂತಹ
ಮಾತುಗಳು ಬರಲು ಗುಪ್ತಚರ ಇಲಾಖೆ
ಕಲೆಹಾಕಿದ್ದ ಮಾಹಿತಿಗಳು ಕಾರಣವಾಗಿದ್ದವು. ಇತೀಚೆಗಿನ ವರ್ಷಗಳಲ್ಲಿ ಭಾರತದ ನಕ್ಸಲ್ ಸಂಘಟನೆಗಳಿಗೆ
ನೇಪಾಳದ ಮೂಲಕ ಅಪಾರ ಪ್ರಮಾಣದಲ್ಲಿ
ಶಸ್ತ್ರಾಸ್ತ್ರ ಮತ್ತು ಹಣವನ್ನು ಚೀನಾ
ಸರ್ಕಾರ ಮತ್ತು ನೇಪಾಳದ ಮಾವೋವಾದಿ
ಸಂಘಟನೆಗಳು ಪೂರೈಸುತ್ತಿರುವುದನ್ನು ಗುಪ್ತಚರ ಇಲಾಖೆ ಕಲೆ
ಹಾಕಿತ್ತು. ಪಾಕಿಸ್ಥಾನದ ಬೇಹುಗಾರಿಕೆ ಇಲಾಖೆ ಈಗಾಗಲೇ ಅನೇಕ
ಮುಸ್ಲಿಂ ಉಗ್ರ ಸಂಘಟನೆಗಳಿಗೆ ಹಣ ಮತ್ತು
ಸ್ಪೋಟಕಗಳು ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು
ನೀಡಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ನೆರವಾಗಿದೆ. ಅದೇ ರೀತಿಯಲ್ಲಿ ತನ್ನ
ನೆರವಿನ ಹಸ್ತವನ್ನು ಭಾರತದ ನಕ್ಸಲ್ ಸಂಘಟನೆಗಳಿಗೂ
ಸಹ ಚಾಚಿತ್ತು. ಆದರೆ ಇದನ್ನು ಭಾರತದ
ನಕ್ಸಲ್ ಸಂಘಟನೆಗಳು ತಿರಸ್ಕರಿಸಿವೆ. ಆದರೂ ಸಹ ಅಪಾರ ಪ್ರಮಾಣದಲ್ಲಿ ಹಣ
ಸಹಾಯದ ಹರಿದು ಬಂದಿದೆ ಎಂದು
ಗುಪ್ತಚರ ಇಲಾಖೆಯ ಅಧಿಕಾರಿಗಳು ಸಂಶಯ
ಪಟ್ಟಿದ್ದಾರೆ. ಈ ಸಂಶಯಕ್ಕೆ ಯಾವುದೇ
ಆಧಾರವಿಲ್ಲ ಏಕೆಂದರೆ, ಈಗ ನಕ್ಸಲ್ ಸಂಘಟನೆಗಳಿಗೆ
ಒರಿಸ್ಸಾ, ಛತ್ತೀಸ್ಗಡ, ಜಾರ್ಖಂಡ್
ರಾಜ್ಯಗಳಲ್ಲಿ ಗಣಿಗಾರಿಕೆ ಕಂಪನಿಗಳು, ಮತ್ತು ಉಕ್ಕು, ವಿದ್ಯುತ್
ಉತ್ಪಾದನಾ ಘಟಕಗಳಿಂದ ಅಪಾರ ಪ್ರಮಾಣದಲ್ಲಿ ಹಣ
ಹರಿದು ಬರುತ್ತಿದೆ.
ಇಂತಹ
ಬೆಳವಣಿಗಳಿಂದ ಆತಂಕಗೊಂಡ ಕೇಂದ್ರ ಸರ್ಕಾರ 2009 ರಲ್ಲಿ
“ Intergated Acted Action Plan ಎಂಬ
ಹೆಸರಿನಲ್ಲಿ ನಕ್ಸಲರ ಜೊತೆ ಸಂವಾದ
ಮತ್ತು ಮಾತುಕತೆಯ ಜೊತೆಗೆ ಹಿಂದುಳಿದ ಆದಿವಾಸಿಗಳ
ಪ್ರದೇಶಗಳ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡಿತು. ಇದರಲ್ಲಿ ಅಲ್ಪ ಪ್ರಮಾಣದ
ಯಶಸ್ಸು ಕಂಡ ಸರ್ಕಾರ ಈ
ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮನಸ್ಸು
ಮಾಡಲಿಲ್ಲ. ಇದನ್ನು ಅರಿತಿದ್ದ ಕೇಂದ್ರ
ಗೃಹ ಸಚಿವಾಲಯದ ಕಾರ್ಯದರ್ಶಿ ಜಿ.ಕೆ. ಪಿಳ್ಳೈ
2011 ರಲ್ಲಿ “ಕೇಂದ್ರ ಸರ್ಕಾರ ಆದಿವಾಸಿಗಳಿಗೆ
ಅರಣ್ಯ ಭೂಮಿ ಮತ್ತು ಅರಣ್ಯದ
ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ವರ್ಗಾಯಿಸಿ,
ಆದಿವಾಸಿ ಸಮುದಾಯದ ಮೇಲಿರುವ ನಕ್ಸಲ್
ಸಂಘಟನೆಗಳ ಹಿಡಿತವನ್ನು ತಪ್ಪಿಸಬೇಕು” ಎಂದು ಅಭಿಪ್ರಾಯ ಪಟ್ಟಿದ್ದರು.
ಏಕೆಂದರೆ 2004 ರಿಂದ 2008 ರವರೆಗೆ ದೇಶದಲ್ಲಿ ಸಂಭವಸಿದ
7806 ನಕ್ಸಲ್ ಹಿಂಸಾಚಾರದ ಘಟನೆಗಳಲ್ಲಿ 3338 ಜನ ಪ್ರಾಣ ಕಳೆದುಕೊಂಡಿದ್ದರು.
ಇಷ್ಟೆಲ್ಲಾ
ಮಾಹಿತಿ ಮತ್ತು ಘಟನೆಗಳು ಕಣ್ಮುಂದೆ
ಇದ್ದರೂ ಕೂಡ ಇತಿಹಾಸದಿಂದಾಗಲಿ ಅಥವಾ
ವರ್ತಮಾನದಲ್ಲಿ ಸಂಭವಿಸುತ್ತಿರುವ ಘಟನೆಗಳಿಂದಾಗಲಿ ಕೇಂದ್ರ ಸರ್ಕಾರ ಮತ್ತು
ರಾಜ್ಯ ಸರ್ಕಾರಗಳು ಪಾಠ ಕಲಿಯುವ ಬದಲು
ಆದಿವಾಸಿ ಮತ್ತು ಮುಗ್ಧ ಜನರನ್ನು
ಶೋಷಿಸಲು ಹೊಸ ಹೊಸ ಮಾರ್ಗೋಪಾಯಗಳನ್ನು
ಹುಡುಕಿಕೊಂಡವು. ಪರೋಕ್ಷವಾಗಿ ಇದು ನಕ್ಸಲ್ ಹಿಂಸಾತ್ಮಕ
ಚಟುವಟಿಕೆಗಳಿಗೆ ಕಾರಣವಾಯಿತು.
1894 ರಲ್ಲಿ
ಬ್ರಿಟೀಷರು ಜಾರಿಗೆ ತಂದಿದ್ದ ಅರಣ್ಯ
ಕಾಯ್ದೆ ಅಂದರೆ ಅರಣ್ಯ ಭೂಮಿಯ
ಮೇಲಿನ ಹಕ್ಕು ಕುರಿತ ಕಾಯ್ದೆಯನ್ನು
ಸ್ವಾತಂತ್ರ್ಯಾನಂತರ ಅಲ್ಪ ಸ್ವಲ್ಪ ಬದಲಾವಣೆ
ಮಾಡಿದ ಕೇಂದ್ರ ಸರ್ಕಾರ, ಅದನ್ನು
ತನ್ನ ಸಾರ್ವಬೌಮ ಹಕ್ಕಿನಂತೆ ಇಲ್ಲಿಯವರೆಗೂ ಕಾಯ್ದಿರಿಸಿಕೊಂಡು ಬಂದಿದೆ. ಈ ದೇಶದಲ್ಲಿ
ದೊರೆಯವ ಶೇಕಡ 90 ರಷ್ಟು ಕಲ್ಲಿದ್ದಲು
ಮತ್ತು ಶೇಕಡ 55 ರಷ್ಟು ಇತರೆ
ಖನಿಜಗಳು ಅದಿವಾಸಿಗಳು ವಾಸಿಸುತ್ತಿರುವ ಅರಣ್ಯ ಪ್ರದೇಶÀದಲ್ಲಿ
ದೊರೆಯುತ್ತಿವೆ. 1991 ರ ಭಾರತದ ಜನ
ಸಂಖ್ಯೆಯ ಶೇಕಡ ಎಂಟರಷ್ಟು ಭಾಗ
ಎಂದು ಲೆಕ್ಕ ಹಾಕಿದರೆ, ಈಗಿನ
ಜನಸಂಖ್ಯೆ 120 ಕೋಟಿಯಲ್ಲಿ ಸುಮಾರು 9.60 ಕೋಟಿ ಆದಿವಾಸಿಗಳು ಭಾರತದಲ್ಲಿ
ಇದ್ದಾರೆ. ಇವರಲ್ಲಿ ಈಗಾಗಲೆ ನಾಲ್ಕು
ಕೋಟಿ ಜನ ಅಣೆಕಟ್ಟು, ಗಣಿಗಾರಿಕೆ
,ರಾಷ್ಟ್ರಿಯ ಹೆದ್ದಾರಿ, ಕಡಲ ತೀರದ ಬಂದರುಗಳು
ಮತ್ತು ಕೈಗಾರಿಕೆಗಳ ನೆಪದಲ್ಲಿ ಅರಣ್ಯದಿಂದ ಹೊರಬಿದ್ದು ಅತಂತ್ರರಾಗಿದ್ದಾರೆ. ಇವರುಗಳಲ್ಲಿ ಕೆಲವು ಕುಟುಂಬಗಳು ಮಹಾನಗರಗಳ
ಕೊಳಚೆಗೇರಿಗಳ ಪಾಲಾಗಿವೆ.
1996 ರಲ್ಲಿ ಬುಡಕಟ್ಟು
ಜನಾಂಗದ ಅಭಿವೃದ್ದಿಗಾಗಿ “ Trible Welfare Law” ಎಂಬ ಕಾನೂನನ್ನು ಕೇಂದ್ರ
ಸರ್ಕಾರ ಜಾರಿಗೆ ತಂದಿತು. 2006 ರಲ್ಲಿ
ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ
ಅರಣ್ಯವಾಸಿ ಆದಿವಾಸಿಗಳ ಸಮುದಾಯಕ್ಕೆ ಅರಣ್ಯ ಕಿರು ಉತ್ಪನ್ನಗಳ
ಮೇಲಿನ ಹಕ್ಕನ್ನು ವರ್ಗಾಯಿಸುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ
ನೀಡಿತು. ಆದರೆ, ಈ ಕಾನೂನು
ಈವರೆಗೆ ಭಾರತದ ಯಾವುದೇ ರಾಜ್ಯದಲ್ಲಿ
ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ.
2008 ರ ಆಗಸ್ಟ್
ಎಂಟರಂದು ಒರಿಸ್ಸಾ ಸರ್ಕಾರ ಪೊಸ್ಕೊ
ಕಂಪನಿಯೊಂದಿಗೆ 51 ಸಾವಿರ ಕೋಟಿ ರೂ.ಗಳ ಯೋಜನೆಯ ಉಕ್ಕಿನ
ಕಾರ್ಖಾನೆಗೆ ಒಪ್ಪಂದ ಮಾಡಿಕೊಂಡಿತು. ಅದೇ
ದಿನ ಇಂಗ್ಲೆಂಡ್ ಮೂಲದ ವೇದಾಂತ ಕಂಪನಿಯ
ಅಂಗ ಸಂಸ್ಥೆಯಾದ ಸ್ಟರ್ಲೈಟ್ ಕಂಪನಿಯೊಂದಿಗೆ
ಬಾಕ್ಷೈಟ್ ಅದಿರು ಗಣಿಗಾರಿಕೆಗೆ ಕಾಲಹಂದಿ
ಜಿಲ್ಲೆಯ ನಿಯಾಮಗಿರಿ ಬೆಟ್ಟದ ಶ್ರೇಣಿಗಳನ್ನು ನೀಡಲು
ಒಪ್ಪಂದ ಮಾಡಿಕೊಂಡಿತು. ಭಾರತದಲ್ಲಿ
698 ಆದಿವಾಸಿ ಬುಡಕಟ್ಟು ಸಮುದಾಯಗಳಿವೆ ಎಂದು ಅಂದಾಜಿಸಲಾಗಿದ್ದು, ಒರಿಸ್ಸಾ
ರಾಜ್ಯದಲ್ಲಿ 68 ಪಂಗಡಗಳಿವೆ. ಇವರಲ್ಲಿ ಶೇಕಡ 90 ರಷ್ಟು
ಆದಿವಾಸಿಗಳು ಆರಣ್ಯದಲ್ಲಿದ್ದಾರೆ. ಬಹುತೇಕ
ಮಂದಿ ಆದಿವಾಸಿಗಳು ಕೃಷಿ, ನೀರು ನಿರ್ವಹಣೆ,
ಹೈನುಗಾರಿಕೆ, ಗಿಡಮೂಲಿಕೆ ಔಷಧಿಗಳ ನಿರ್ವಹಣೆ ರಸ್ತೆ,
ಸೇತುವೆ ಇವೆಲ್ಲವನ್ನು ತಮ್ಮದೇ ಆದ ದೇಸಿ
ಪಾರಂಪರಿಕ ಜ್ಞಾನದಿಂದ ನಿರ್ಮಿಸಿಕೊಂಡಿದ್ದು ಪರಿಸರಕ್ಕೆ ಧಕ್ಕೆಯಾಗದಂತೆ ಬದುಕಿದ್ದರು. ಪೊಸ್ಕೊ, ಟಾಟಾ, ಮತ್ತು
ಸ್ಟರ್ಲೈಟ್ ಕಂಪನಿಗಳಿಗೆ
901 ಕೋಟಿ ರೂಪಾಯಿ ಮೌಲ್ಯದ 4967 ಎಕರೆ
ಅರಣ್ಯ ಭೂಮಿಯನ್ನು ಒರಿಸ್ಸಾ ಸರ್ಕಾರ ಕೇವಲ
165 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದೆ. ಸರ್ಕಾರ
ಖಾಸಾಗಿ ಕಂಪನಿಗಳಿಗೆ ಬೇಕಾಬಿಟ್ಟಿ ಭೂಮಿ ಹಂಚಿರುವುದನ್ನು 2012 ರ
ಏಪ್ರಿಲ್ ತಿಂಗಳಿನಲ್ಲಿ ಪ್ರಕಟವಾದ ಸಿ.ಎ.ಜಿ.
ವರದಿಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ.
ಇಂದಿನ
ರಾಜ್ಯ ಸರ್ಕಾರಗಳು ಅಭಿವೃದ್ಧಿಯ ನೆಪದಲ್ಲಿ ನಡೆಸುತ್ತಿರುವ ಅವಿವೇಕದ ಆಡಳಿತಕ್ಕೆ ನಮ್ಮ
ಮಾಜಿ ಪ್ರಧಾನಿ ನೆಹರೂ ಕೂಡ
ಮಾದರಿಯಾಗಿದ್ದಾರೆ. ಹಿಂದೊಮ್ಮೆ ಅಣೆಕಟ್ಟಿಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ
“ನೀವು ಕಷ್ಟದಲ್ಲಿದ್ದರೆ, ರಾಷ್ಟ್ರದ ಹಿತಾಸಕ್ತಿಗಾಗಿ ಇನ್ನಷ್ಟು ಕಷ್ಟ ಅನುಭವಿಸಬೇಕು” ಎಂದಿದ್ದರು. ನೆಹರೂರವರ ವಾರಸುದಾರರಂತೆ ನಮ್ಮ ಜನಪ್ರತಿನಿಧಿಗಳು
ವರ್ತಿಸುತ್ತಿದ್ದಾರೆ.
ಸಾರ್ವಜನಿಕ
ಉದ್ದೇಶಕ್ಕಾಗಿ ಅವಶ್ಯಕತೆ ಇದ್ದಾಗ, ವೈಯುಕ್ತಿಕ ಒಳಿತಿಗಿಂತ
ಸಮುದಾಯದ ಏಳಿಗೆಯನ್ನು ಬಯಸಿ, ತನ್ನ ಆಸ್ತಿ
ಅಥವಾ ಕೃಷಿ ಭೂಮಿಯನ್ನು ತ್ಯಾಗ
ಮಾಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಮತ್ತು
ಅನಿವಾರ್ಯ ಪ್ರಕ್ರಿಯೆ ನಿಜ. ಆದರೆ, ತ್ಯಾಗ
ಮಾಡಿದ ಕುಟುಂಬಗಳಿಗೆ ಈ ಸರ್ಕಾರಗಳು ಏನು
ಪರಿಹಾರ ನೀಡಿವೆ? ಅಥವಾ ಯಾವ
ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸಿವೆ
ಎಂಬುದನ್ನು ಗಮನಿಸಿದಾಗ ನಿರಾಸೆ ಮೂಡುತ್ತದೆ.
ಆದಿವಾಸಿಗಳ
ಭೂಮಿ ಖರೀದಿ ಕುರಿತಂತೆ 1970 ರಲ್ಲಿ
ಜಾರಿಗೆ ಬಂದ ನೂತನ ಕಾಯ್ದೆ
ಪ್ರಕಾರ ಬುಡಕಟ್ಟು ಜನಾಂಗ ಅಥವಾ ಸಮುದಾಯಕ್ಕೆ
ಸಂಬಂಧವಿಲ್ಲದ ವ್ಯಕ್ತಿ ಅರಣ್ಯವಾಸಿಗಳ
ಭೂಮಿಯನ್ನು ಖರೀದಿಸುವಂತಿಲ್ಲ. ಆದರೆ, ಸ್ವತಃ ನಾನು
ಗಮನಿಸಿದ ಹಾಗೆ, ಮಧ್ಯಪ್ರದೇಶ, ಛತ್ತೀಸ್ಗಡ ಮತ್ತು ಒರಿಸ್ಸಾದಲ್ಲಿ
ಅನೇಕಮಂದಿ ಸರ್ಕಾರದ ಮೇಲ್ಮಟ್ಟದ ಅಧಿಕಾರಿಗಳು,
ರಾಜಕಾರಣಿಗಳು, ಆದಿವಾಸಿಗಳ ಹೆಸರಿನಲ್ಲಿ ಭೂಮಿ ಖರೀದಿಸಿ, ಎಸ್ಟೇಟ್,
ಕೃಷಿಫಾರಂ ನಿರ್ಮಿಸಿಕೊಂಡಿದ್ದಾರೆ. ತಾವು ಯಾರ ಹೆಸರಿನಲ್ಲಿ
ಭೂಮಿ ಖರೀದಿಸಿದ್ದಾರೊ, ಅದೇ ಆದಿವಾಸಿ ಕುಟುಂಬಗಳನ್ನು
ತಮ್ಮ ಜಮೀನುಗಳಲ್ಲಿ ಕೂಲಿಯಾಳಾಗಿ ಇರಿಸಿಕೊಂಡಿದ್ದಾರೆ.
ಇನ್ನೂ
ಹಲವಡೆ ಖಾಸಗಿ ಕಂಪನಿಗಳು ನಡೆಸುತ್ತಿರುವ
ಇಂತಹ ಬೇನಾಮಿ ಅವ್ಯವಹಾರಗಳಿಗೆ ಸರ್ಕಾರಗಳು
ಕೈ ಜೋಡಿಸಿವೆ. ಛತ್ತೀಸ್ಗಡದಲ್ಲಿ ಅಲ್ಲಿನ
ಸರ್ಕಾರ ಅನಂತ
ಗ್ರೂಪ್ ಎಂಬ ಖಾಸಾಗಿ ಕಂಪನಿಯ
ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ
ಘಟಕಕ್ಕೆ 358 ಹೆಕ್ಟೇರ್ ಜಮೀನು ನೀಡಿದೆ (ಒಂದು
ಹೆಕ್ಟೇರ್ ಅಂದರೆ, ಎರಡೂವರೆ ಎಕರೆ
ಭೂಮಿ) ಇದರಲ್ಲಿ ಆದಿವಾಸಿಗಳ 50 ಹೆಕ್ಟೇರ್
ಭೂಮಿ ಸಹ ಸೇರಿದೆ. ಛತ್ತೀಸ್ಗಡ ರಾಜ್ಯಕ್ಕೆ ಇಂತಹ
70 ಖಾಸಗಿ ಕಂಪನಿಗಳು ವಿದ್ಯುತ್ ಉತ್ಪಾದನೆಯ ನೆಪದಲ್ಲಿ ಕಾಲಿರಿಸಿದ್ದು, ಏಜೆಂಟರ ಮೂಲಕ ಯಾವುದೇ
ಅಂಜಿಕೆಯಿಲ್ಲದೆ ಆರಣ್ಯ ನಿವಾಸಿಗಳ ಭೂಮಿಯನ್ನು
ಕಬಳಿಸುತ್ತಿವೆ. ಜಹಂಗೀರ್-ಚಂಪಾ ಜಿಲ್ಲೆಯಲ್ಲಿ
ಶಾರದ ಎನರ್ಜಿ ಮಿನರಲ್ಸ್ ಲಿಮಿಟೆಡ್
ಎಂಬ ಕಂಪನಿ 24 ಹೆಕ್ಟೇರ್ ಭೂಮಿಯನ್ನು ಮೂವರು ಆದಿವಾಸಿಗಳ ಹೆಸರಿನಲ್ಲಿ
ಖರೀದಿಸಿದೆ. ಇದೇ
ಜಿಲ್ಲೆಯಲ್ಲಿ ಆದಿವಾಸಿ ಮುಖಂಡನೊಬ್ಬ ಹಣದಾಸೆಗಾಗಿ
ತನ್ನ ಹಳ್ಳಿಯ ಹನ್ನೆರೆಡು ಕುಟುಂಬಗಳ
160 ಹೆಕ್ಟೇರ್ ಭೂಮಿಯನ್ನು ವಿಡಿಯೊಕೋನ್ ಕಂಪನಿಗೆ ವರ್ಗಾಯಿಸಿದ್ದಾನೆ. ಇಂತಹ
ಅವ್ಯವಹಾರಗಳಿಗೆ ಅನಕ್ಷರಸ್ತ ಆದಿವಾಸಿಗಳು ದಾಳಗಳಾದರೆ, ಅಲ್ಲಿನ ಸರ್ಕಾರ ದಲ್ಲಾಳಿಯಂತೆ
ವರ್ತಿಸುತ್ತಿದೆ.
ಒರಿಸ್ಸಾದಲ್ಲಿ
ಜಗತ್ಸಿಂಗ್ಪುರ್ ಜಿಲ್ಲೆಯಲ್ಲಿ
ಎಸ್ಸಾರ್ ಶಿಪ್ಪಿಂಗ್ ಕಂಪನಿಗೆ ಎರಡು ಸಾವಿರ
ಎಕರೆ ಭೂಮಿಯನ್ನು ಸರ್ಕಾರ ನೀಡಿದೆ. ಇದರಲ್ಲಿ
1663 ಎಕರೆ ಪ್ರದೇಶವನ್ನು ಒರಿಸ್ಸಾ ಸರ್ಕಾರ 1962 - 63ರಲ್ಲಿ
ಎಕರೆಯೊಂದಕ್ಕೆ 300 ರೂಪಾಯಿ ಕೊಟ್ಟು ಆದಿವಾಸಿಗಳಿಂದ
ಖರೀದಿಸಿತ್ತು ಈಗ ಇದೇ ಭೂಮಿಯನ್ನು
ಸರ್ಕಾರ ಎಕರೆಗೆ ನಾಲ್ಕು ಲಕ್ಷ
ರೂಪಾಯಿಯಂತೆ ಕಂಪನಿಗೆ ಮಾರಾಟ ಮಾಡಿದೆ.
ಭೂಮಿ ಕಳೆದು ಕೊಂಡು ಬೀದಿಗೆ
ಬಿದ್ದ ಆದಿವಾಸಿಗಳು ವಿಳಾಸ ಸಿಗದಂತೆ ಚದುರಿ
ಹೋಗಿದ್ದಾರೆ. 1995 ರಲ್ಲಿ ಒರಿಸ್ಸಾ ಸರ್ಕಾರ
ಗಂಜಾಂ ಜಿಲ್ಲೆಯ ಗೋಪಾಲ್ಪುರ್
ಎಂಬಲ್ಲಿ 2,296 ಎಕರೆ ಭೂಮಿಯನ್ನು ಟಾಟಾ ಕಂಪನಿಗೆ ಉಕ್ಕಿನ
ಕಾರ್ಖಾನೆ ಸ್ಥಾಪನೆಗಾಗಿ ನೀಡಿತ್ತು. ಆದರೆ ಈವರೆಗೆ ಅಲ್ಲಿ ಕಾರ್ಖಾನೆ
ತಲೆ ಎತ್ತಲಿಲ್ಲ ಬದಲಾಗಿ ಹತ್ತು ಎಕರೆ
ಪ್ರದೇಶದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಿದೆ. ಟಾಟಾ
ಕಂಪನಿಗಾಗಿ ಭೂಮಿ ಕಳೆದುಕೊಂಡ 1500 ಆದಿವಾಸಿ
ಕುಟುಂಬಗಳು ಚಿಲ್ಕಾ
ಸರೋವರದ ಹಿನ್ನೀರಿನಲ್ಲಿ ಮೀನು ಹಿಡಿಯುವ ಕಾಯಕದಲ್ಲಿ
ತೊಡಗಿಸಿಕೊಂಡಿದ್ದಾರೆ. ಟಾಟಾ ಕಂಪನಿ ತನ್ನ
ಭೂಮಿಗೆ ರಕ್ಷಣಾ ಗೋಡೆ ಎಬ್ಬಿಸಿದೆ.
ಇಂತಹ ಕವರ್iಕಾಂಡಗಳ ಜೊತೆಗೆ
ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಜಾರ್ಖಂಡ್ ರಾಜ್ಯದಲ್ಲಿ ಏಳು ಲಕ್ಷ, ಒರಿಸ್ಸಾದಲ್ಲಿ
ಹದಿನೈದು ಲಕ್ಷ ಆದಿವಾಸಿಗಳು ನೆಲೆ
ಕಳೆದುಕೊಂಡಿದ್ದಾರೆ. ಇವರುಗಳಲ್ಲಿ ಜಾರ್ಖಂಡ್ ರಾಜ್ಯದಲ್ಲಿ ತೀರಾ ಹಿಂದುಳಿದ ಹಾಗೂ
ಹೊರ ಜಗತ್ತಿನ ಪರಿಚಯವಿಲ್ಲದ, ಅಬುಜ್ಮರಿಯ, ಖಿರೂರ್, ಬೈಗ,
ಎಂಬ ಬುಡಕಟ್ಟು ಜನಾಂಗದ ಒಂದೂವರೆ ಲಕ್ಷ
ಆದಿವಾಸಿ ಜನರಿದ್ದಾರೆ.
ಮಧ್ಯಭಾರತದ
ನಾಲ್ಕು ರಾಜ್ಯಗಳ ಅರಣ್ಯವನ್ನು ಒಳಗೊಂಡ
ದಂಡಕಾರಣ್ಯದಲ್ಲಿ ನಕ್ಸಲ್ ಸಂಘಟನೆಗಳು ಅತ್ಯಂತ
ಪ್ರಭಾವಶಾಲಿಯಾಗಿದ್ದು ಸರ್ಕಾರದ
ಪೊಲೀಸ್ ಪಡೆಗಳೂ ಕಾಲಿಡಲು ಅಂಜುವಷ್ಟು
ಬಲಶಾಲಿಯಾಗಿ ಬೆಳೆದು ನಿಂತಿವೆ.(ಈ
ಕುರಿತು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ)
ಈ ಪ್ರದೇಶವನ್ನು ಸ್ವತಃ
ಕೇಂದ್ರ ಸರ್ಕಾರ “ರೆಡ್ಏರಿಯಾ” ಎಂದು ಅಧಿಕೃತವಾಗಿ ಘೋಷಿಸಿದೆ. ನಕ್ಸಲೀಯರ ಹಿಂಸೆಗೆ ಮೂಲಕಾರಣವನ್ನು ಹುಡುಕುತ್ತಾ
ಹೊರಟಾಗ ವ್ಯವಸ್ಥೆಯ ಅನೇಕ ಕ್ರೂರ ನಡವಳಿಕೆಗಳು
ನಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತವೆ.
ಹಾದಿ
ತಪ್ಪಿರುವ ಕೇಂದ್ರ ಮತ್ತು ರಾಜ್ಯ
ಸರ್ಕಾರಗಳ ಮತ್ತು ವ್ಯವಸ್ಥೆಯನ್ನು ಸರಿದಾರಿಗೆ
ತರಲು ಪ್ರಜಾ ಪ್ರಭುತ್ವದಲ್ಲಿ ಹಲವು
ಮಾರ್ಗಗಳಿರುವಾಗ ನಕ್ಸಲೀಯರು ಹಿಂಸೆಯನ್ನು ಜಾರಿಗೊಳಿಸುವುದು, ಅಥವಾ ಅದನ್ನು ಸಿದ್ಧಾಂತಗಳ
ಮೂಲಕ ಪ್ರೋತ್ಸಾಹಿಸುವುದು ನಾಗರೀಕ ಜಗತ್ತಿನ ಲಕ್ಷಣವಾಗಲಾರದು.
ರಷ್ಯಾದಲ್ಲಿ
ಝಾರ್ ದೊರೆಗಳ ವಿರುದ್ಧ ಯಶಸ್ವಿಯಾದ
ಹೋರಾಟವಾಗಲಿ, ಚೀನಾದ ಅರಸೊತ್ತಿಗೆಯ ವಿರುದ್ಧ
ಮಾವೋ ಹುಟ್ಟುಹಾಕಿದ ತಂತ್ರಗಳಾಗಳಲಿ. ಹಿಂಸೆಯಿಂದ ಹೊರತಾಗಿರಲಿಲ್ಲ ನಿಜ ಆದರೆ, ಆವೊತ್ತಿನ
ಆ ಕ್ಷಣಕ್ಕೆ ಹಿಂಸೆ
ಅನಿವಾರ್ಯವಾಗಿತ್ತು. ಈಗಿನ ಕಾಲಮಾನಕ್ಕೆ ಏನೆಲ್ಲಾ ನ್ಯೂನತೆಗಳ ನಡುವೆಯೂ
ಮನುಷ್ಯನ ಹಕ್ಕನ್ನು ಸಾರ್ವಭೌಮ ಹಕ್ಕೆಂದು ಪರಿಗಣಿಸುವ ಭಾರತದಂತಹ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹಿಂಸಾತ್ಮಕ ನಕ್ಸಲ್ ಹೋರಾಟ ಅನಿವಾರ್ಯವೆ?
ಇದು ಎಲ್ಲಾ ಪ್ರಜ್ಞಾವಂತರು ತಮ್ಮ
ಆತ್ಮ ಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ. ತಮ್ಮದಲ್ಲದ ಸಂಕಟಕ್ಕೆ ತಮ್ಮ ಬದುಕನ್ನು ಹಾಗೂ
ಪ್ರಾಣವನ್ನು ತ್ಯಾಗ ಮಾಡಿರುವ ಭಾರತದ
ನಕ್ಸಲ್ ನಾಯಕರ ಬಲಿದಾನವನ್ನು ಯಾರೂ
ಅಲ್ಲಗೆಳಯಲಾರರು ಅಂದ ಮಾತ್ರಕ್ಕೆ ಹಿಂಸೆಯನ್ನು ಒಪ್ಪಿಕೊಳ್ಳಲಾಗದು. ಅದನ್ನು ಮುಂದುವರೆಸುವುದು ಸಹ
ತರವಲ್ಲ. ಚಾರು ಮುಜಂದಾರ್, ವೆಂಪಟಾಪು
ಸತ್ಯನಾರಾಯಣ, ಅದಿಬಟ್ಲ ಕೈಲಾಸಂ, ಕನುಸನ್ಯಾಲ್,
ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಪೆದ್ದಿಶಂಕರ, ಪಟೇಲ್ ಸುಧಾಕರರೆಡ್ಡಿ, ಚುರುಕುರಿ
ರಾಜಕುಮಾರ್, ಕಿಶನ್ಜಿ. ಸಾಕೇತ್ರಾಜನ್, ಕೊಬದ್ ಗಾಂಡಿ,
ಅನುರಾಧ ಶ್ಯಾನುಭೋಗ್, ರಾಜೇಶ್ವರಿ, ಹೀಗೆ ನೂರಾರು ಜನರ
ಬಲಿದಾನ ಸಾರ್ಥಕವಾಗ ಬೇಕಾದರೆ ಅಥವಾ ತಾವು
ಕನಸಿರುವ ಆದಿವಾಸಿಗಳ
ಬದುಕು ಹಸನಾಗಬೇಕಾದರೆ, ನಕ್ಸಲರು ಇನ್ನಾದರೂ ಬಂದೂಕು
ಕೆಳಗಿಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು
ತಮ್ಮ ಸಿದ್ಧಾಂತಗಳೊಂದಿಗೆ ಪ್ರಜಾ ಸತ್ತಾತ್ಮಕ ಮಾರ್ಗದಲ್ಲಿ
ಹೋರಾಡುವುದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇತಿಹಾಸವೆಂದರೆ
ಅದು ನಮ್ಮ ಮುಂದಿನ ಹೋರಾಟಕ್ಕೆ
ಸ್ಪೂರ್ತಿಯ ನೆಲೆ ಮಾತ್ರವಲ್ಲ, ಆಗಿರುವ
ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಿ ನಡೆಯಬೇಕಾದ ದಿಕ್ಷೂಚಿ
ಕೂಡ ಹೌದು. ಯಾವುದೇ ಹೋರಾಟ
ಜನ ಸಮುದಾಯದ ಬೆಂಬಲವಿಲ್ಲದೆ ಬಹುದೂರ
ಸಾಗಲಾರದು ಮತ್ತು ಬಹುಕಾಲ ಬದುಕಲಾರದು.
ಸದಾ ಕಾರ್ಲ್ಮಾಕ್ರ್ಸ್ನ
ಚಿಂತನೆಗಳ ಕುರಿತು ಮಾತನಾಡುವ ನಕ್ಸಲರು
ಮತ್ತು ಅವರ ಬೆಂಬಲಿಗರಿಗೆ ಆತನ
ಜೀವನದ ನೋವಿನ ಕ್ಷಣದ ಈ
ಮಾತುಗಳು ನೆನಪಾದರೆ ಸಾಕು.
ಕಾರ್ಲ್
ಮಾಕ್ರ್ಸ್, ಕಾರ್ಮಿಕರ ಏಳಿಗೆಗಾಗಿ ತನ್ನ ಕುಟುಂಬದ ಯೋಗಕ್ಷೇಮವನ್ನು
ಕಡೆಗಣಿಸಿ ಹೋರಾಡುತ್ತಿದ್ದ ಸಮಯದಲ್ಲಿ ಒಂದು ದಿನ ಆತನ
ಪುತ್ರನೊಬ್ಬ ಅನಾರೋಗ್ಯದಿಂದ ಮೃತಪಟ್ಟ. ಕೇವಲ ಎರಡು ರೂಪಾಯಿ
ಮೌಲ್ಯದ ಔಷಧಿಯನ್ನು ಕೊಳ್ಳಲಾಗದ ಮಾಕ್ರ್ಸ್ನ ಅಸಹಾಯಕತೆಯಿಂದ ಮಗ
ಅಸುನೀಗಿದ. ಮಾಕ್ರ್ಸ್ನಿಗೆ ಜೀವನದಲ್ಲಿ ಪ್ರಥಮಬಾರಿಗೆ
ವಾಸ್ತವ ಅರಿವಾಗತೊಡಗುತ್ತದೆ. ರಾತ್ರಿ ಸತ್ತು ಹೋದ
ಮಗನ ಶವವನ್ನು ಮನೆಯಲ್ಲಿಟ್ಟುಕೊಂಡು ಬೆಳಗಿನ
ಜಾವ ಮೂರು ಗಂಟೆಯ ಸಮಯದಲ್ಲಿ
ದೀಪದ ಬೆಳಕಿನಲ್ಲಿ ತನ್ನ ಜೀವದ ಗೆಳೆಯ
ಏಂಜೆಲ್ಸ್ಗೆ ಕಾರ್ಲ್ ಮಾಕ್ರ್ಸ್
ಕಾಗದ ಬರೆಯುತ್ತಾನೆ. “ಮಿತ್ರ, ಈ ದಿನ
ನಾನು ಬದುಕಿರಬಾರದು ಎನ್ನುವಷ್ಟು ಜೀವನದಲ್ಲಿ ಜಿಗುಪ್ಸೆ ಮೂಡಿದೆ. ಮಗನ ಶವದ
ಎದುರು ಕುಳಿತು ಈ ಕಾಗದ
ಬರೆಯುತ್ತಿದ್ದೇನೆ, ಸಮುದಾಯದ ಒಳಿತಿನ ಜೊತೆ
ಜೊತೆಗೆ ನಂಬಿದ ಜೀವಗಳ ಹಿತ
ಕೂಡ ಮುಖ್ಯವೆಂಬುದು ಈ ದಿನ ನನಗೆ
ಅರಿವಾಯಿತು. ಕಾರ್ಮಿಕರ ಕಣ್ಣುಗಳಲ್ಲಿ ಬೆಳಕು ನೋಡುವ ಆಸೆಯಿಂದ
ಆತ್ಮಹತ್ಯೆಯ ಪ್ರಯತ್ನವನ್ನು ಕೈ ಬಿಡುತ್ತಿದ್ದೇನೆ” ತನ್ನ
ಜೀವವನ್ನು ಕುಕ್ಕಿ ತಿನ್ನುವ ಅಸಹಾಯಕತೆಯ
ನಡುವೆ ಕೂಡ ಮಾಕ್ರ್ಸ್ ಕಂಡುಕೊಂಡ
ತಾಳ್ಮೆಯ ದಾರಿ ಎಲ್ಲಾ ನಕ್ಸಲ್
ಸಂಘಟನೆಗಳಿಗೆ ಸಿದ್ಧಾಂತ ಮತ್ತು ಪಠ್ಯವಾಗಬೇಕಾಗಿದೆ. ಈ
ದಿನ ಭಾರತದಲ್ಲಿ ಅಸಹಾಯಕ ಸ್ಥಿತಿಯಲ್ಲಿ ನರಳುತ್ತಿದ್ದ
ಕೋಟ್ಯಾಂತರ ಅದಿವಾಸಿಗಳು, ಭೂರಹಿತ ಕೃಷಿ ಕಾರ್ಮಿಕರು
ನಕ್ಸಲೀಯರ ಹೋರಾಟದ ಫಲವಾಗಿ ನೆಮ್ಮದಿಯ
ಬದುಕು ಕಂಡುಕೊಂಡಿದ್ದಾರೆ. ಈ ಬಗ್ಗೆ ಎರಡು
ಮಾತಿಲ್ಲ ಆದರೆ, ಈ ಕೀರ್ತಿಯ
ಜೊತೆಗೆ ನಕ್ಸಲರ ಕೈಗೆ ಮತ್ತು
ಹೋರಾಟಕ್ಕೆ ಹತ್ತಿಕೊಂಡ ರಕ್ತದ ಕಲೆಗಳು ಷೇಕ್ಸ್ಪಿಯರನ “ಮ್ಯಾಕ್ಬೆತ್” ನಾಟಕದಲ್ಲಿ
ತನ್ನ ಪತಿಯ ಅಧಿಕಾರಕ್ಕಾಗಿ ಕೊಲೆ
ಮಾಡಿಸಿ, ನಂತರ ಪಾಪ ಪ್ರಜ್ಞೆಯಿಂದ
ನರಳುವ ಲೇಡಿ ಮ್ಯಾಕ್ಬೆತ್,
“ಈ ಕೈಗಳಿಗೆ ಅಂಟಿಕೊಂಡಿರುವ ರಕ್ತದ
ಕಲೆಯನ್ನು ಜಗತ್ತಿನ ಯಾವ ನದಿಗಳೂ
ತೊಳೆಯಲಾರವು, ಇವುಗಳ ವಾಸನೆಯನ್ನು ಅರೆಬಿಯಾದ
ಯಾವ ಅತ್ತರು ಹೋಗಲಾಡಿಸದು” ಎಂದು ಗೋಳಾಡುತ್ತಾಳೆ ಇಂತಹ
ಸ್ಥಿತಿ ಅಥವಾ ಪಾಪಪ್ರಜ್ಞೆ ಯಾವ
ನಕ್ಸಲ್ ನಾಯಕನಿಗೂ ಕಾಡಬಾರದು. ಇದು ನನ್ನ ಕಾಳಜಿ.
ಮತ್ತು ಆಸೆ ಕೂಡ ಹೌದು.
ಏಕೆಂದರೆ, ನಮ್ಮ ನಡುವೆ ಬದುಕುತ್ತಾ,
ಹಸಿವು, ಬಡತನ, ಅಸಮಾನತೆಯಿಲ್ಲದ
ನಾಗರೀಕ ಜಗತ್ತಿನ ನಿರ್ಮಾಣಕ್ಕೆ ಹೋರಾಡಬೇಕಾಗಿದ್ದ
ಜೀವಗಳು ಅರಣ್ಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿ,
ಅನಾಥ ಶವಗಳಾಗಿ ಬಿದ್ದು ಪೊಲೀಸರಿಂದ
ಅಂತ್ಯಕ್ರಿಯೆಗೆ ಒಳಪಡುವ ಸಂಗತಿ ನನ್ನೊಳಗೆ
ಶಾಶ್ವತವಾಗಿ ದುಗುಡವನ್ನು ಮತ್ತು ವಿಷಾಧವನ್ನು ದಾಖಲಿಸಿಬಿಟ್ಟಿದೆ.
( 20013 ರಲ್ಲಿ ಪ್ರಕಟವಾದ ನನ್ನ ಕೃತಿ, ಭಾರತದ ನಕ್ಸಲ್ ಇತಿಹಾಸದ ಕಥನ"ಎಂದೂ ಮುಗಿಯದ ಯುದ್ಧ " ಕೃತಿಗೆ ನೆತ್ತರಿನ ನದಿಯ ಮೂಲವನ್ನರಸಿ" ಎಂಬ ಶೀರ್ಷಿಕೆಯಡಿ ಬರೆದ ಪ್ರಸ್ತಾವನೆ" )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ