ಶನಿವಾರ, ಮೇ 16, 2015

ಮೂಕ ಹಕ್ಕಿಯ ಹಾಡು


ನನ್ನ ಬದುಕಿಗೆ ಬರಸಿಡಿಲಿನಂತೆ ಬಂದರೆಗಿದ ಅತ್ಯಾಚಾರದ ದುರಂತವು ಪಾಕಿಸ್ತಾನದ ಗ್ರಾಮಾಂತರ ಪ್ರದೇಶಗಳ ಸಾಮಾಜಿಕ ವ್ಯವಸ್ಥೆಗಳಲ್ಲಿ ತಳವೂರಿದ್ದ ಅನೇಕ ಅಮಾನವೀಯ ಹಾಗೂ ಅನಿಷ್ಟ ಆಚರಣೆಗಳ ಮೇಲೆ ಕ್ಷ ಕಿರಣಗಳನ್ನು ಬೀರುವುದರ ಮೂಲಕ  ಅವುಗಳನ್ನು ಹೊರಜಗತ್ತಿಗೆ ಅನಾವರಣಗೊಳಿಸಿತು. ನಮ್ಮ ಗ್ರಾಮ ಸಮಾಜದಲ್ಲಿ ಹಣಕಾಸಿನ ವ್ಯವಹಾರವಿರಬಹುದು, ವಿವಾಹ ವಿಚ್ಛೇಧನವಿರಬಹುದು ಅಥವಾ ಭೂ ವಿವಾದ ಹೀಗೆ ವ್ಯಕ್ತಿ- ವ್ಯಕ್ತಿಗಳ ನಡುವಿನ ಯಾವುದೇ ತಂಟೆ ತಕರಾರು ಮತ್ತು ವಿವಾದಗಳಿಗೆ  ಸೇಡು ತೀರಿಸಿಕೊಳ್ಳಲು ಇರುವ ಏಕೈಕ ಗುರಿ ಮತ್ತು ಮಾರ್ಗವೆಂದರೆ ಹೆಣ್ಣು ಜೀವ ಮಾತ್ರ. ಅವಳನ್ನು ಸಾರ್ವಜನಿಕವಾಗಿ ಅಪಮಾನಿಸುವುದು ಇಲ್ಲವೆ ಅತ್ಯಾಚಾರ ಮಾಡುವುದು, ಅವಳ ಕಿವಿ, ಮೂಗು ಇವುಗಳನ್ನು ಕತ್ತರಿಸಿ ವಿರೂಪಗೊಳಿಸುವಂತಹ ಕ್ರೌರ್ಯವು ರೂಢಿಗತ ಸಂಪ್ರದಾಯವಾಗಿ ಬೆಳೆದು ಬಂದಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳಿಗೆ  ಜಿರ್ಗ ಹೆಸರಿನಲ್ಲಿ ನಡೆಯುವ ಪಂಚಾಯಿತಿಗಳಲ್ಲಿ ನೀಡುವ ತೀರ್ಪುಗಳೆಂದರೆ, ಒಂದನೆಯದು,  ಹಣದ ಪರಿಹಾರ. ಎರಡನೆಯದು, ಅತ್ಯಾಚಾರ ಎಸೆಗಿದವನ ಉಪ ಪತ್ನಿಯಾಗಿ ಬಾಳುವುದು. ಇವುಗಳನ್ನು ಮೀರಿ ಯಾರಾದರೂ ಪ್ರತಿಭಟಿಸಿದರೆ ಅವರನ್ನು ಹತ್ಯೆ ಮಾಡುವುದರ ಮೂಲಕ ಸಮಾಜದ ಮತ್ತು ಪಂಚಾಯಿತಿಯ ಗೌರವವನ್ನು ಕಾಪಾಡಿಕೊಳ್ಳಲಾಗುತ್ತದೆ. ಕಾರಣಕ್ಕಾಗಿ  ಪಾಕಿಸ್ತಾನದಲ್ಲಿ ಕೆಳಜಾತಿಗೆ ಸೇರಿದ ಯಾವೊಬ್ಬ ಅಮಾಯಕ ಅಥವಾ ಅಮಾಯಕಳೂ ನ್ಯಾಯಕ್ಕಾಗಿ ಪೋಲಿಸ್ ಠಾಣೆಯ ಮೆಟ್ಟಿಲು ಏರುವುದಿಲ್ಲ. ಅಕಸ್ಮಾತ್ ಮೆಟ್ಟಿಲೇರಿ ಅಪರಾಧಿಗೆ ಶಿಕ್ಷೆ ಕೊಡಿಸಿದರೆ, ಅಂತಹವರ ಮೇಲೆ ಅಪರಾಧಿಗಳ ಹತ್ತಿರದ ಸಂಬಂಧಿಕರು ಹತ್ಯೆ ಮಾಡುವುದರ  ಮೂಲಕ ಸೇಡು ತೀರಿಸಿಕೊಳ್ಳುವ ಅಲಿಖಿತ ನಿಯಮವೊಂದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಜೀವಂತವಾಗಿದೆ. ಏಕೆಂದರೆ ಇದು ಅವರ ಗೌರವದ ಮತ್ತು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ. ಇಂತಹ ಹುಸಿ ಗೌರವ ಮತ್ತು ಪ್ರತಿಷ್ಠೆ ಗಳ ನೆಪದಲ್ಲಿ ಪಾಕಿಸ್ತಾನದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹೆಣ್ಣು ಜೀವಗಳ ಮಾರಣಹೋಮವನ್ನು ಯಾರೂ ಲೆಕ್ಕವಿಟ್ಟವರಿಲ್ಲ.
 ಜಮೀನ್ದಾರನ ಕುಟುಂಬದ ವಿರುದ್ಧ ನ್ಯಾಯಕ್ಕಾಗಿ  ನಾನು ನ್ಯಾಯಾಲಯದ ಮೆಟ್ಟಿಲೇರಿದ ಕ್ಷಣವೆ; ನನ್ನ ಭವಿಷ್ಯ ಮತ್ತು ಹಣೆ ಬರಹವನ್ನು  ಸ್ವತಃ ಬರೆದುಕೊಂಡಿದ್ದೆ. ಅಬ್ದಲ್ ಖಾಲೀಕ್ ಮತ್ತು ಫೈಜಾ ಇಬ್ಬರೂ ಕೆಂಡಾಮಂಡಲವಾಗಿದ್ದರು. ಅವರು ನನ್ನನ್ನು ಜೀವಂತ ಬದುಕಲು ಬಿಡುವುದಿಲ್ಲ ಎಂಬುದು ನನಗೆ ಮನದಟ್ಟಾಗಿತ್ತು. ಆದರೆ, ನನಗಾದ ನೋವಿಗೆ, ಅಪಮಾನಕ್ಕೆ ಜೀವನಪೂರ್ತಿ ಮೌನವಾಗಿ ರೋಧಿಸುತ್ತಾ ಮೂಕ ಪ್ರಾಣಿಯಂತೆ ಜೀವಿಸುವುದರ ಬದಲಾಗಿ, ಜಿಡ್ಡುಗಟ್ಟಿದ ಪಾಕಿಸ್ತಾನದ ಸಾಮಾಜಿಕ ವ್ಯವಸ್ಥೆಗೆ ಪ್ರತಿಭಟನೆಯ ಕಿಚ್ಚನ್ನು ಹೊತ್ತಿಸಿ ಸಾಯುವುದು ನನ್ನ ಗುರಿಯಾಗಿತ್ತು. ಅದೃಷ್ಟವಶಾತ್ ನಾನು ಬದುಕುಳಿದೆ.

( ಪಾಕ್ ಹೆಣ್ಣು ಮಗಳು  ಮುಕ್ತರ್ ಮಾಯಿಯ ಆತ್ಮ ಕಥೆ In The Name of Honour ಕೃತಿಯ  ಅನುವಾದದ ಒಂದು ಭಾಗ)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ