ಗೆಳೆಯರೇ,
ನಮ್ಮ ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ ಹಾಗೂ ನಿತ್ಯ ಸಚಿವ ಎಂದು ಹೆಸರಾಗಿದ್ದ ದಿ.ಕೆ.ವಿ.ಶಂಕರಗೌಡರು
ಬದುಕಿದ್ದರೆ ಈಗ ಶತಾಯುಷಿ ಆಗಿರುತ್ತಿದ್ದರು. ಮಂಡ್ಯದ ಕರ್ನಾಟಕ ಸಂಘ ದ ಆಶ್ರಯದಲ್ಲಿ ನನ್ನ ಅನೇಕ
ಹಿರಿಯ ಮಿತ್ರರು ಶಂಕರಗೌಡರ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ಸ್ಮರಾಣಾರ್ಥ ವಿಶೇಷ
ಕೃತಿಯೊಂದನ್ನು ಇದೇ ಜುಲೈ 15 ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ.
ಕಳೆದ ವಾರ ಒಂದು ಲೇಖನ ಬರೆದುಕೊಡುವಂತೆ ನನಗೆ ಗೆಳೆಯ
ಜಯಪ್ರಕಾಶ್ ಗೌಡರಿಂದ ಮನವಿ ಪತ್ರ ಬಂತು. ಮೂರು ಅಥವಾ ನಾಲ್ಕು ಪುಟದ ಲೇಖನ ಬರೆಯಲು ಹೊರಟ ನನಗೆ, ಅದು
ಎಂಟು ಪುಟವಾದರೂ ಮುಗಿಯಲಿಲ್ಲ.ಏಕೆಂದರೇ ಅವರ ವ್ಯಕ್ತಿತ್ವವೇ ಅಂತಹದ್ದು.
ಕಳೆದ
ಹತ್ತು ವರ್ಷಗಳ ಹಿಂದೆ ವಿಧಾನ ಸಭಾ ಸಚಿವಾಲಯದ ಉಸ್ತುವಾರಿಯಲ್ಲಿ “ ಸಂಸದೀಯ ಪಟುಗಳು” ಮಾಲಿಕೆಯ ಅಡಿ ಶಂಕರಗೌಡರ ಕುರಿತು ನಾನು
ಕೃತಿ ರಚನೆ ಮಾಡಿದ್ದೆ. ನನ್ನ ಆತ್ಮೀಯ ಮಿತ್ರ ಎಲ್.ಎನ್.ಮುಕಂದರಾಜ್ ಸಂಪಾದಕರಾಗಿದ್ದ ಆ ಯೋಜನೆಯಲ್ಲಿ ನನ್ನ ಕೃತಿ ಪ್ರಕಟಗೊಂಡು ಈವರೆಗೆ ಆರು ಮುದ್ರಣಗಳನ್ನು
ಕಂಡಿದೆ.. “ ಮಂಡ್ಯದ ಗಾಂಧಿ” ಎಂಬ ಹೆಸರಿನಲ್ಲಿ ಬರೆದ ಲೇಖನದಲ್ಲಿ ಶಂಕರಗೌಡರ ಮೇಲೆ 1940 ರ ದಶಕದಲ್ಲಿ
ಗಾಂಧೀಜಿಯವರು ಬೀರಿದ ಪ್ರಭಾವ ಕುರಿತು ಪ್ರಸ್ತಾಪಿಸುತ್ತಿದ್ದಾಗ, ಗಾಂಧಿ ಮತ್ತೇ ನನ್ನನ್ನು ಕಾಡತೊಡಗಿದರು.
ಭಾರತದಲ್ಲಿ
ಅತ್ಯಂತ ಕಟು ವಿಮರ್ಶೆಗೆ ಮತ್ತು ಟೀಕೆಗೆ ಒಳಗಾದವರಲ್ಲಿ ಗಾಂಧಿ ಮೊದಲಿಗರು. ನಾವು ಗಾಂಧೀಜಿಯನ್ನು
1930 ರ ದಶಕದ ಒಳಗಿನ ಅವರ ಅನುಭವಗಳಿಗೆ ಮತ್ತು ಪ್ರಯೋಗಗಳಿಗೆ ಕೂಡಿ ಹಾಕಿ ವಿಮರ್ಶೆಯ ಹೆಸರಿನಲ್ಲಿ
ನಮ್ಮೊಳಗಿನ ವಿಕಾರಗಳನ್ನು ಹೊರಹಾಕುತ್ತಿದ್ದೇವೆ. ನಮಗೆ ನಿಜವಾದ ಗಾಂಧಿ ದಕ್ಕುವುದು 1942 ರ ನಂತರದಲ್ಲಿ
ಮಾತ್ರ.
1930ರ ದುಂಡು ಮೇಜಿನ ಪರಿಷತ್ತು, ನಂತರದ 1931 ರ ಪೂನಾ ಒಪ್ಪಂಧ
ಕುರಿತಂತೆ ಗಾಂಧಿ ಕುರಿತು ಅಪಸ್ವರ ಎತ್ತುವ ನನ್ನ ಅನೇಕ ಅಂಬೇಡ್ಕರ್ ವಾದಿ ಕಿರಿಯ ಮಿತ್ರರಲ್ಲಿ ಒಂದು
ವಿನಂತಿ. ಆವೇಶದ ಮಾತು ಮತ್ತು ಬರೆವಣಿಗೆಗೆ ಗಾಂಧೀಜಿ
ಎಂದಿಗೂ ನಿಮಗೆ ದಕ್ಕುವುದಿಲ್ಲ., ಗಾಂಧಿ ದಕ್ಷಿಣ ಆಫ್ರಿಕಾದಿಂದ ಬಂದಾಗ ಅವರಿಗೆ 43 ವರ್ಷ ವಯಸ್ಸು.
( 1915) ಅವರು ಹತ್ಯೆಯಾದಾಗ ಅಂದರೆ, ಜನವರಿ 30,
1948 ರಲ್ಲಿ ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ
ಅನುಭವಿಸಿದ ಸೆರೆಮನೆ ವಾಸದ ಒಟ್ಟು ಅವಧಿಯನ್ನು ಲೆಕ್ಕ ಹಾಕಿ ನೋಡಿದಾಗ ಅವರ ಬದುಕು ನಮ್ಮಲ್ಲಿ ವಿಸ್ಮಯ ಮೂಡಿಸುತ್ತದೆ. ಒಬ್ಬ ಖೈದಿಗೆ ಜೈಲು ವಾಸದಲ್ಲಿ ಅನೇಕ ವೃತ್ತಿಗಳನ್ನು ಆಯ್ಕೆ
ಮಾಡಿಕೊಳ್ಳುವ ಅವಕಾಶವಿದೆ. ಆದರೆ ಗಾಂಧೀಜಿಯವರು ತಮ್ಮ ಬದುಕಿನ ಸೆರೆಮನೆ ವಾಸದ ಅವಧಿಯಲ್ಲಿ ಬಹುತೇಕ ಆಯ್ಕೆ ಮಾಡಿಕೊಂಡಿದ್ದು ಚಪ್ಪಲಿ ಹೊಲಿಯುವ ಕಾಯಕವನ್ನು
ಮಾತ್ರ. ಕುಲಸುಬುಗಳ ಜೊತೆ ಅಂಟಿಕೊಂಡಿದ್ದ ಜಾತಿಯ ಸೂತಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅವರು ಈ ಕಾಯಕಕ್ಕೆ ಘನತೆ ತರುವುದರ ಮೂಲಕ ಬಸವಣ್ಣ ಪ್ರತಿಪಾದಿಸಿದ್ದ
ಕಾಯಕದ ಮಹತ್ವವನ್ನು ಎತ್ತಿ ಹಿಡಿದರು. ಪೂನಾದ ಯರವಾಡ ಜೈಲಿನಿಂದ ಒಮ್ಮೆ ಬಿಡುಗಡೆಯಾದ ಸಂದರ್ಭದಲ್ಲಿ
ಗಾಂಧಿಯವರು ತಾವು ಹೊಲಿದು ಸಿದ್ಧಪಡಿಸಿದ್ದ ಚಪ್ಪಲಿಗಳನ್ನು ಬ್ರಿಟೀಷ್ ಮೂಲದ ಜೈಲು ಅಧಿಕಾರಿಯೊಬ್ಬನಿಗೆ
ಉಡುಗೊರೆಯಾಗಿ ನೀಡಿದರು.. ಆತ ಈ ವಿಷಯವನ್ನು ತನ್ನ ಆತ್ಮ ಚರಿತ್ರೆಯಲ್ಲಿ ಹೀಗೆ ದಾಖಲಿಸಿದ್ದಾನೆ.
“ ಆ ಮಹಾತ್ಮ ಕೊಟ್ಟು ಹೋದ ಚಪ್ಪಲಿಗಳನ್ನು ಧರಿಸಲು ನನ್ನ ಅಂತರಾತ್ಮ ಒಪ್ಪಲಿಲ್ಲ. ಹಾಗಾಗಿ ಅವುಗಳನ್ನು
ಮಹಾತ್ಮನೊಬ್ಬನ ಕೊಡುಗೆ ಎಂದು ನನ್ನ ಷೋ ಕೇಸ್ ನಲ್ಲಿ ಇಟ್ಟುಕೊಂಡು ಜತನದಿಂದ ಕಾಯುತ್ತಿದ್ದೇನೆ”
ಶೌಚಾಲಯ
ತೊಳೆಯುವುದು ಹೀನ ಕೃತ್ಯ ಎಂದು ನಂಬಿದ್ದ ಕಾಲಘಟ್ಟದಲ್ಲಿ, ತನ್ನ ಪತ್ನಿ ಕಸ್ತೂರ ಬಾ ಅವರಿಂದ ತೊಳೆಸಿದ,
ಹಾಗೂ ತಾನೂ ತೊಳೆದ ಗಾಂಧೀಜಿ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಮಲವನ್ನು ಕೈಯಿಂದ ಬಾಚುವವರ ಮತ್ತು
ಅವರ ಕುರಿತು ಅನುಕಂಪ ವ್ಯಕ್ತ ಪಡಿಸುವವರ ಎದೆಯ ಕದವನ್ನೇಕೆ ತಟ್ಟಲಿಲ್ಲ? ಇದು ನನ್ನ ಪಾಲಿಗೆ ಇಂದಿಗೂಒಗಟು.
ಗಾಂಧೀಜಿಯವರ
ಆತ್ಮ ಕಥೆ ಬರೆದು, ಅವರನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಣಾಮಕಾರಿಯಾಗಿ ಪರಿಚಯಿಸಿದ ಖ್ಯಾತ ಪತ್ರಕರ್ತ ಲೂಯಿಫಿಶರ್ ಗಾಂಧೀಜಿಯವರನ್ನು ಬೇಟಿ ಮಾಡುವ ಮುನ್ನ 30 ವರ್ಷಗಳ ಕಾಲ
ಸೋವಿಯತ್ ರಷ್ಯಾದಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸಿದ್ದ. ಜೊತೆಗೆ ಸ್ಟಾಲಿನ್ ನ ಪರಮ ಆರಾಧಕನಾಗಿದ್ದ.
1940 ರ ದಶಕದಲ್ಲಿ ಕೇವಲ ಒಂಬತ್ತು ದಿನಗಳ ದಿನಗಳ ಗಾಂಧಿಜಿಯವರ ಸಹವಾಸದಲ್ಲಿ( ವಾರ್ಧಾ ಆಶ್ರಮದಲ್ಲಿ)
ಆತ ಸಂಪೂರ್ಣ ಬದಲಾಗಿದ್ದ. ಇದಕ್ಕೆ ಲೂಯಿ ಫಿಶರ್ ನೀಡಿದ ಉತ್ತರ ಇದಾಗಿತ್ತು.
“
ಒಂದು ಸಾಮಾಜ್ಯವನ್ನು ಅಥವಾ ಒಂದು ರಾಷ್ಟ್ರವನ್ನು ಮಣಿಸಲು ಮದ್ದು ಗುಂಡು, ಫಿರಂಗಿ, ಯುದ್ಧ, ರಕ್ತಪಾತ
ಇವುಗಳು ಅನಿವಾರ್ಯ ಎಂದು ನಂಬಿಕೊಂಡಿದ್ದ ಪಾಶ್ಚಿಮಾತ್ಯ ಜಗತ್ತಿಗೆ ಇವೆಲ್ಲಕ್ಕಿಂತ ಅಹಿಂಸೆ ಎಂಬ ಅಸ್ಟ್ರ
ಪರಿಣಾಮಕಾರಿ ಎಂದು ತೋರಿಸಕೊಟ್ಟ ಈ ಮಹಾತ್ಮನ ಚಿಂತನೆಗೆ ಈ ಜಗತ್ತಿನಲ್ಲಿ ಯಾವ ಬೆಲೆ ಕಟ್ಟಲು ಸಾಧ್ಯ?
ಹೌದು
ನಾವೀಗ ಲೂಯಿ ಫಿಶರ್ ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಾಗ ಮಾತ್ರ ಗಾಂಧೀಜಿ ನಮಗೆ ದಕ್ಕುತ್ತಾರೆ.
ಕೊನೆಯ ಮಾತು- ರಿಚರ್ಡ್ ಆಟನ್
ಬರೊ ನಿರ್ಮಿಸಿದ ಗಾಂಧಿ ಸಿನಿಮಾ ಲೂಯಿ ಫಿಶರ್ ಬರೆದ ಕಥೆಯಾಧಾರಿತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ