ಗುರುವಾರ, ಜೂನ್ 25, 2015

ಬಡತನ-ಹಸಿವು ಮತ್ತು ಕ್ರೌರ್ಯ




ಇದು ಸುಮಾರು ಏಳೆಂಟು ವರ್ಷಗಳ ಹಿಂದಿನ ಘಟನೆ. ಎಸ್.ಎಂ. ಕೃಷ್ಣ ರವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಮುಂಬೈ ರಾಜಭವನದಲ್ಲಿ ಏಕಾಂಗಿಯಾಗಿದ್ದ ಅವರ ಪಾಲಿಗೆ ರಾಜಕೀಯ ಮತ್ತು ಸಾರ್ವಜನಿಕ ಚಟುವಟಿಕೆಯಿಂದ ದೂರವಿರುವುದು ಅಸಹನೀಯವಾಗಿತ್ತು. ಬಾಲ್ಯದಿಂದಲೂ ನನ್ನನ್ನು ಬಲ್ಲ ಅವರಿಗೆ ನಾನು ಪುಸ್ತಕದ ಹುಳು ಎಂಬುದು ಸಹ ಗೊತ್ತಿತ್ತು. ಹಾಗಾಗಿ ಪ್ರತಿ ಹದಿನೈದು ದಿನಕ್ಕೆ ಮುಂಬೈ ಗೆ ಹೋಗಿ ಅವರಿಗೆ ನಾನು ಓದಿದ ಹೊಸ ಇಂಗ್ಲೀಷ್ ಕೃತಿಗಳನ್ನು ಕೊಟ್ಟು ಓದಿಸಿ ಬರುತ್ತಿದ್ದೆ. ರಾಜಭವನದಲ್ಲಿ ಆರಾಮವಾಗಿ ಅವರೊಂದಿಗೆ ಹರಟಬಹುದಾಗಿತ್ತು. ಒಮ್ಮೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಲೆಗಳಲ್ಲಿ ಪರಿಚಯಿಸಿದ ಬಿಸಿಯೂಟದ ಬಗ್ಗೆ ಕೇಳಿದ್ದೆ. ಅವರು ನೀಡಿದ್ದ ಉತ್ತರ ಹೀಗಿತ್ತು
" ಒಮ್ಮೆ ನಾನು ರಾಯಚೂರಿನಲ್ಲಿ ಕಾರ್ಯಕ್ರಮ ಮುಗಿಸಿ, ಯಾದಗಿರಿ ಮೂಲಕ ಗುಲ್ಬರ್ಗಾಕ್ಕೆ ಹಿಂತಿರುಗುತ್ತಿದ್ದೆ. ಅದು ಸಂಜೆ ಐದರ ಸಮಯ. ಹಳ್ಳಿಯ ಮಕ್ಕಳು ಬರಿಗಾಲಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದರು. ನನ್ನ ಕಾರಿನಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಮಕ್ಕಳು ಮಧ್ಯಾಹ್ನ ಊಟ ಹೇಗೆ ಮಾಡ್ತಾರೆ? ಎಂದು ಕೇಳಿದೆ. ಅದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದ. "ಇಲ್ಲಾ ಸಾರ್, ಇವರೆಲ್ಲಾ ಬೆಳಿಗ್ಗೆ ಮನೆಯಿಂದ ಊಟ ಮಾಡಿ ಬಂದರೆ, ಮತ್ತೆ ಸಂಜೆ ಮನೆಗೆ ಹೋಗಿ ಊಟ ಮಾಡುವುದು". ನನಗೆ ಸಂಕಟವಾಯಿತು. ಎಂದೂ ನಾನು ಬಾಲ್ಯದಲ್ಲಿ ಬಡತನವನ್ನಾಗಲಿ, ಹಸಿವನ್ನಾಗಲಿ ಅನುಭವಿಸಿದವನಲ್ಲ. ಆದರೆ, ದಿನ ಮಕ್ಕಳು ನನಗೆ ಹಸಿವನ ವಿರಾಟ್ ದರ್ಶನವನ್ನು ಮನವರಿಕೆ ಮಾಡಿಕೊಟ್ಟರು. ಇದರಿಂದ ಪ್ರೇರಿತನಾಗಿ ಏನೇ ಬರಲಿ, ಎಷ್ಟೇ ಖರ್ಚು ಬರಲಿ, ಶಾಲೆಗಳಲ್ಲಿ ಮಕ್ಕಳಿಗೆ ಊಟ ಸಿಗಬೇಕೆಂದು ನಿರ್ಧರಿಸಿ, ಬಿಸಿಯೂಟ ಯೋಜನೆ ಆರಂಭಿಸಿದೆ" ಎಂದರು.


ನನಗೆ ಕ್ಷಣಕ್ಕೆ ತಮಿಳು ನಾಡಿನ ಕಾಮರಾಜ್ ನೆನಪಾದರು. ಅವರ ಸಾಹಸಗಾಥೆಯನ್ನು ಅವರಿಗೆ ವಿವರಿಸಿದೆ. ಒಮ್ಮೆ ಕಾಮರಾಜ್ ತಿರುನಾನ್ವೇಲಿ ಎಂಬ ಹಿಂದುಳಿದ ಜಿಲ್ಲೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಕ್ಕಳು ತಂದೆ ತಾಯಿಯರೊಂದಿಗೆ ಕೂಲಿ ಮಾಡುವುದನ್ನು ಕಂಡು ಆಶ್ಚರ್ಯ ಪಟ್ಟರು. ಶಾಲೆಗೆ ಏಕೆ ಕಳಿಸಿಲ್ಲ ಎಂದು ಫೋಷಕರನ್ನು ಕೇಳಿದಾಗ ಬಡತನದ ಅರಿವು ಅವರಿಗಾಯಿತು. ತಕ್ಷಣ ಇಡಿ ತಮಿಳುನಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಶಿಕ್ಷಣ, ಪಠ್ಯ ಮತ್ತು ಸಮವಸ್ತ್ರ ಯೋಜನೆಯನ್ನು ಜಾರಿಗೆ ತಂದರು. ಇದಕ್ಕಾಗಿ ಬ್ರಹ್ಮಚಾರಿಯಾಗಿದ್ದ ಅವರು ತಮ್ಮ ನಿವಾಸದಲ್ಲಿದ್ದ ಅಡುಗೆ ಭಟ್ಟನಿಗೆ ಇನ್ನು ಮುಂದೆ ನನಗೆ ಅಥವಾ ಅತಿಥಿಗಳಿಗೆ ಊಟದಲ್ಲಿ ಮೊಟ್ಟೆ ಇರಕೂಡದು. ಅದರ ಖರ್ಚಿನ ಹಣವನ್ನು ವಿದ್ಯಾ ಇಲಾಖೆಗೆ ರವಾನಿಸು ಎಂದು ಆದೇಶ ನೀಡಿದ್ದರು. ಹಾಗಾಗಿ ಇಂದು ತಮಿಳುನಾಡಿನಾದ್ಯಂತ ಮಕ್ಕಳ ಹೆಗಲ ಮೇಲೆ ಕೈ ಇಟ್ಟ ಕಾಮರಾಜರ ಪ್ರತಿಮೆಯನ್ನು ಕಾಣಬಹುದಾಗಿದೆ
ಒಂದು ಉದಾತ್ತ ಚಿಂತನೆಯೊಂದು ಹೇಗೆ ಎದೆಯಿಂದ ಎದೆಗೆ ಹರಿಯಬಲ್ಲದು ಎಂಬುದಕ್ಕೆ ಮೇಲಿನ ಎರಡು ಘಟನೆಗಳು ಸಾಕ್ಷಿಯಾಗಿವೆ. ಇಂದು ಅನ್ನ ಭಾಗ್ಯದ ಯೋಜನೆಯ ಕುರಿತು ತಮ್ಮ ನವರಂಧ್ರಗಳನ್ನು ತೆರದು ಬಡಿದುಕೊಳ್ಳುತ್ತಿರುವ ಪ್ರಕಾರ ಪಂಡಿತರು ಮತ್ತು ಪುರುಷೋತ್ತಮರಿಗೆ ನನ್ನ ಪ್ರಶ್ನೆ ಇಷ್ಟೇ.


ಹೌದು, ಅನ್ನ ಭಾಗ್ಯ ಆರ್ಥಿಕವಾಗಿ ಹೊರೆ ನಿಜ. ಆದರೆ, ನಮ್ಮ ದೇಶದದ ಸಂಸತ್ತನ್ನು ಪ್ರತಿನಿಧಿಸುತ್ತಿರುವ ಸಂಸದರು ಸದ್ದಿಲ್ಲದೆ ತಮ್ಮ ವೇತನವನ್ನು 50 ಸಾವಿರದಿಂದ ಒಂದು ಲಕ್ಷ ರೂಪಾಯಿಗೆ ಏರಿಸಿಕೊಂಡರಲ್ಲ ಅದು ಹೊರೆಯಲ್ಲವೆ? ಜನಪ್ರತಿನಿಧಿಗಳು ವೇತನ ಮತ್ತು ಇತರೆ ಭತ್ಯೆಗಳು ಸೇರಿ ಮಾಸಿಕ ಎರಡು ಲಕ್ಷ ರೂಪಾಯಿ ಪಡೆಯುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದುಂಟೆ? 35 ವರ್ಷ ಸರ್ಕಾರದಲ್ಲಿ ಸೇವೆ ಸಲ್ಲಿಸಿ, ನಿವೃತ್ತನಾಗುವ ನೌಕರಿಗೆ 2006 ರಿಂದ ನಿವೃತ್ತಿ ವೇತನವನ್ನು ನಿಲ್ಲಿಸಿದ ನಮ್ಮನ್ನು ಆಳುವ ಸರ್ಕಾರಗಳು, ಕೇವಲ ಐದು ವರ್ಷಗಳ ಕಾಲ ಸಂಸದರಾಗಿ, ಶಾಸಕರಾಗಿ ಮಣ್ಣು ಹೊರುವ ಜನಪ್ರತಿನಿಧಿಗಳಿಗೆ ಜೀವನಪೂರ್ತಿ 50 ಸಾವಿರ ಮತ್ತು 25 ಸಾವಿರ (ಶಾಸಕರಿಗೆ) ನಿವೃತ್ತಿ ವೇತನ, ಆರೋಗ್ಯ ಭಾಗ್ಯ ಕರುಣಿಸಿದೆಯಲ್ಲಾ, ಇದು ದೇಶಕ್ಕೆ ಆರ್ಥಿಕ ಹೊರೆಯಲ್ಲವೆ? ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಅನುತ್ಪಾದಾನಾ ಆಸ್ತಿ ಅಂದರೆ ವಸೂಲಿಯಾಗದ ಸಾಲದ ಮೊತ್ತ ಎಷ್ಟು ನಿಮಗೆ ಗೊತ್ತೆ? ಸಾಲ ಪಡೆದ ವಿಜಯ ಮಲ್ಯ ನಂತಹ ಬಡವನ ಕುರಿತು ನಿಮಗೆ ಅನುಕಂಪವೆ? ಬಡತನ, ಹಸಿವು ಎಂಬ ಕ್ರೌರ್ಯಕ್ಕಿಂತ ನಿಮ್ಮ ವಿಕೃತಿಯ ಮನೋಭಾವ ನನಗೆ ಅತ್ಯಂತ ಕ್ರೌರ್ಯದಂತೆ ತೋರುತ್ತಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ