ಗುರುವಾರ, ಅಕ್ಟೋಬರ್ 29, 2015

ಆಚಾರ್ಯ ವಿನೋಬಾ ಭಾವೆ, ನೆಹರೂ ಗೆ ಹೇಳಿದ ಮಾತು ಮೋದಿಗೂ ಅನ್ವಯಿಸುತ್ತದೆ



1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ ಏನಾದರೂ ಗ್ರಾಮ ಸುಧಾರಣೆ ಮಾಡಲು ಸಾಧ್ಯವೆ? ಎಂದು ಯೋಚಿಸಿದ ಅವರು ಗ್ರಾಮಭಾರತದ ದರ್ಶನಕ್ಕಾಗಿ ಕಾಲ್ನಡಿಗೆ ಪ್ರವಾಸ ಹೊರಟರು. 1951 ಏಪ್ರಿಲ್ 18 ರಂದು ಆಂಧ್ರದ ತೆಲಂಗಾಣ ಪ್ರಾಂತ್ಯದ ಪೂಚಂಪಲ್ಲಿ ಎಂಬಲ್ಲಿ ಭಾಷಣ ಮಾಡುತ್ತಾ, ಶ್ರೀಮಂತ ಜಮೀನ್ದಾರರು ತಮ್ಮಲ್ಲಿರುವ ಜಮೀನುಗಳನ್ನು ಬಡವರಿಗೆ ದಾನ ಮಾಡಬೇಕು. ಇದು ಯಾವ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಭಿಕ್ಷೆ ಎಂಬ ಭಾವನೆ ಮೂಡಕೂಡದು, ಬಡತನ ಹೋಗಲಾಡಿಸಲು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೀಕ್ಷೆ ಎಂದು ಭಾವಿಸಬೇಕು ಎಂದು ಕರೆಯಿತ್ತರು. ವಿನೋಬಾ ಮಾತುಗಳಿಂದ ಪ್ರಭಾವಿತನಾದ ರಾಮರೆಡ್ಡಿ ಎಂಬ ಜಮೀನ್ದಾರ ಸ್ಥಳದಲ್ಲಿ ನೂರು ಎಕರೆ ಭೂಮಿಯನ್ನು ವಿನೋಬಾರವರಿಗೆ ದಾನ ಮಾಡಿದ. ಈ ಕ್ರಿಯೆಯಿಂದ ವಿನೋಬಾ ತಕ್ಷಣಕ್ಕೆ ವಿಚಲಿತರಾದರು. ಆದರೆ, ಇದು ದೇವರು ತೋರಿದ ದಾರಿ ಎಂದು ತಿಳಿದ ಅವರು ಈ ಕ್ರಿಯೆಗೆ ಭೂದಾನ ಎಂಬ ಹೆಸರಿಟ್ಟು ಜಮೀನುಗಳನ್ನು ಸ್ವೀಕರಿಸುತ್ತಾ ಹೋದರು. ನೀವು ನೀಡುವ ಜಮೀನಿನಲ್ಲಿ ಯಾವ ಕಾರಣಕ್ಕೂ ದೇಗುಲ, ಛತ್ರ, ಅಥವಾ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಿಲ್ಲ. ಹಸಿವು ಮತ್ತು ಬಡತನದಿಂದ ಬಳಲುತ್ತಿರುವ ಭಾರತದ ಬಡವರು ನಮ್ಮ ಪಾಲಿನ ನಿಜವಾದ ದೇವರಾಗಿದ್ದಾರೆ. ನೀವು ದಾನ ನೀಡುವ ಜಮೀನು ಅವರಿಗೆ ಸಲ್ಲುತ್ತದ ಎಂದು ಘೋಷಿಸುತ್ತಾ ಹೋದರು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ, ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂಮಿ ದೊರೆಯಿತು. ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು.



1952 ರಲ್ಲಿ ನೆಹರೂ ರವರು ವಿನೋಬಾ ಅವರನ್ನು ದೆಹಲಿಗೆ ಆಹ್ವಾನಿಸಿ, ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮಾಭಿವೃದ್ಧಿಯ ಕುರಿತು ಯಾವ ರೀತಿಯ ಯೋಜನೆಗಳು ಇರಬೇಕೆಂದು ಕೇಳಿದಾಗ ಆಚಾರ್ಯರು ನೀಡಿದ ಉತ್ತರ ಹೀಗಿತ್ತು. “ ಬಡವರ ಹಸಿವನ್ನು ನೀಗಿಸಿಲಾಗದ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗದ ನಿಮ್ಮ ಪಂಚವಾರ್ಷಿಕ ಯೋಜನೆಗಳನ್ನು ಕಸದ ಬುಟ್ಟಿಗೆ ಬಿಸಾಡಿ. ಮೊದಲು ನೀವು , ನಿಮ್ಮ ಪರಿವಾರ ದೆಹಲಿ ಬಿಟ್ಟು ಹಳ್ಳಿಗಳತ್ತ ಹೊರಡಿ. ಅಲ್ಲಿ ದರ್ಶನವಾಗುವ ನರಕ ಸದೃಶ್ಯ ಬದುಕು ನಿಮಗೆ ದಾರಿ ತೋರಿಸುತ್ತದೆ” ಇಂತಹದ್ದೇ ಮಾತುಗಳನ್ನು ನಾವೀಗ ಮೇಕಿಂಗ್ ಇಂಡಿಯಾ ಮತ್ತು  ಡಿಜಿಟಲ್ ಇಂಡಿಯಾ ಎಂದು ಜಪಿಸುತ್ತಿರುವ ಮೋದಿಗೂ ಹೇಳಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ