ಶುಕ್ರವಾರ, ಏಪ್ರಿಲ್ 14, 2017

ಉಪಚುನಾವಣೆಯ ಫಲಿತಾಶ: ರಾಜಕೀಯ ಪಕ್ಷಗಳ ಸೋಲು ಮತ್ತು ಮತದಾರರ ಗೆಲುವು



ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ದಿಕ್ಸೂಜಿ ಎಂದು ಪರಿಗಣಿಸಲ್ಪಟ್ಟಿದ್ದ ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪಚುನಾವಣೆಯ ಫಲಿತಾಂಶ ಇದೀಗ ಹೊರಬಿದ್ದಿದೆ. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಜಯಗಳಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಒಂದಿಷ್ಟು ನೈತಿಕ ಬಲವನ್ನು ತಂದುಕೊಟ್ಟಿದೆ. ಮುಂದಿನ ಬಾರಿಯ  ಚುನಾವಣೆಗೆ ನಿಲ್ಲುವುದಿಲ್ಲ,  ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಸಿದ್ಧರಾಮಯ್ಯನವರು ಇದೀಗ ತಮ್ಮ ಮಾತಿನ ವರಸೆಯನ್ನು ಬದಲಿಸಿ, ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿ ನಡೆಯಲಿದೆ ಜೊತೆಗೆ ನಾನು ಸಹ ಚುನಾವಣೆಗೆ ನಿಲ್ಲುತ್ತೇನೆ ಎಂಬ ಉತ್ಸಾಹದ ಮಾತನ್ನಾಡಿದ್ದಾರೆ.
ಕರ್ನಾಟಕದ ಈ ಎರಡು ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವನ್ನು ಕೂಲಂಕುಶವಾಗಿ ಅವಲೋಕನ ಮಾಡಿದರೆ, ಈ ಅಗ್ನಿ ಪರೀಕ್ಷೆಯಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಎರಡೂ ಪಕ್ಷಗಳು ನೈತಿಕವಾಗಿ ಸೋತಿವೆ ಎಂದು ಹೇಳಬಹುದು. ಇಲ್ಲಿ ಗೆದ್ದಿರುವುದು ಮತದಾರ ಮಾತ್ರ. ಏಕೆಂದರೆ,ನಂಜನಗೂಡು ಕ್ಷೇತ್ರದಲ್ಲಿ  ಜಾತಿ ರಾಜಕೀಯದ ಲೆಕ್ಕಾಚಾರವನ್ನು ಮತ್ತು ಗುಂಡುಪೇಟೆ ಕ್ಷೇತ್ರದಲ್ಲಿ ಸಚಿವ ಮಹಾದೇವ ಪ್ರಸಾದ್ ಸಾವಿನ ನಂತರ ಅನುಕಂಪದ ಲೆಕ್ಕಾಚಾರವನ್ನು ಮತದಾರ ಪ್ರಭುಗಳು ತಲೆಕಳಗು ಮಾಡಿ ರಾಜಕೀಯ ಪಕ್ಷಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಈ ಚುನಾವಣೆ ಫಲಿತಾಂಶವು  ರಾಜ್ಯ ಬಿ.ಜೆ.ಪಿ. ನಾಯಕರಿಗೆ ತೀವ್ರ ಮುಖಭಂಗವನ್ನುಂಟು ಮಾಡುವುದರ ಜೊತೆಗೆ  ಸ್ವಾಭಿಮಾನದ ಹೆಸರಿನಲ್ಲಿ, ಸಾರ್ವಜನಿಕ ಬದುಕಿಗೆ ಇರಬೇಕಾದ ಲಜ್ಜೆ, ಘನತೆ ಎಲ್ಲವನ್ನು ತೊರೆದು ಆಹಂಕಾರಿಯಂತೆ ಮೆರೆದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಇತಿಹಾಸದ ಕಸದ ಬುಟ್ಟಿಗೆ ಸೇರುವಂತೆ ಮಾಡಿತು.
 ಕಳೆದ ಮೂರೂವರೆ ದಶಕಗಳಿಂದ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಹಲವಾರರು ಬಾರಿ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದ ಶ್ರೀನಿವಾಸ್ ಪ್ರಸಾದ್  ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ಸಂಪುಟದಲ್ಲಿ ಒಮ್ಮೆ ಸಚಿವರಾಗಿದ್ದರು.  ಕರ್ನಾಟಕ ಕಂಡ ಸಜ್ಜನ ರಾಜಕಾರಣಿಗಳಲ್ಲಿ ಶ್ರೀನಿವಾಸ್ ಪ್ರಸಾದ್ ಒಬ್ಬರಾಗಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ನಂಜನಗೂಡು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರನ್ನು ಹಿರಿಯ ಹಾಗೂ ನುರಿತ ರಾಜಕಾರಣಿ ಎಂಬ ಏಕೈಕ ಕಾರಣಕ್ಕಾಗಿ ಸಿದ್ಧರಾಮಯ್ಯನವರು ತಮ್ಮ ಸಚಿವ ಸಂಪುಟದಲ್ಲಿ ಮಂತ್ರಿಯನ್ನಾಗಿ ಅತ್ಯಂತ ಪ್ರಮುಖ ಖಾತೆಗಳಲ್ಲಿ ಒಂದಾಗಿದ್ದ ಕಂದಾಯ ಖಾತೆಯನ್ನು ನೀಡಿದ್ದರು. ಆದರೆ,  ತಮ್ಮ ಅನಾರೋಗ್ಯದ ಜೊತೆಗೆ  ವಯಸ್ಸು ಮತ್ತು ಹಿರಿತನವನ್ನು ಬಂಡವಾಳ ಮಾಡಿಕೊಂಡ ಶ್ರೀನಿವಾಸ್ ಪ್ರಸಾದ್ ಖಾತೆಯ ನಿರ್ವಹಣೆಗಿಂತ ತಮಗೆ  ಅಧಿಕಾರದ ಖುರ್ಚಿ ಮುಖ್ಯ ಎಂಬಂತೆ ನಡೆದುಕೊಂಡರು.
ತಮ್ಮ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಮೈಸೂರು ಮತ್ತು ಬೆಂಗಳೂರು ನಗರಗಳನ್ನು ಹೊರತು ಪಡಿಸಿದರೆ, ಇವರು  ಕರ್ನಾಟಕದ ಯಾವೊಂದು ಜಿಲ್ಲೆಗೂ ಭೇಟಿ ನೀಡಲಿಲ್ಲ.  ಕಂದಾಯ ಇಲಾಖೆಯಿಂದ ರೈತರೂ ಸೇರಿದಂತೆ ಜನಸಾಮಾನ್ಯರ ಬವಣೆಗಳಿಗೆ ಕಿವಿಕೊಡಲಾರದೆ, ಅಧಿಕಾರಿಗಳನ್ನು ನಿಯಂತ್ರಿಸಲಾರದೆ  ಅಧಿಕಾರವನ್ನು ಅನುಭವಿಸಿದರು. ವಯಸ್ಸು ಮತ್ತು ಅನಾರೋಗ್ಯ ಅವರ ನಿಷ್ಕ್ರಿಯತೆಗೆ ಮೂಲಕಾರಣವಾಗಿದ್ದವು.  ಅವರೊಳಗೆ ಆತ್ಮ ಸಾಕ್ಷಿ ಎಂಬುದು  ಇದ್ದಿದ್ದರೆ ಸಚಿವ ಸ್ಥಾನವನ್ನು ತೊರೆದು ಬೇರೊಬ್ಬ ದಲಿತ ರಾಜಕಾರಣಿಗೆ ಅವಕಾಶ ಮಾಡಿಕೊಡಬಹುದಿತ್ತು. ಆದರೆ ನಾನು ದಲಿತ ರಾಜಕಾರಣಿಯಾಗಿ ಅಧಿಕಾರದ  ಸವಲತ್ತುಗಳನ್ನು ಪಡೆಯುವುದು ತನ್ನ ಜನ್ಮ ಸಿದ್ಧ ಹಕ್ಕು ಎಂಬಂತೆ  ಶ್ರೀನಿವಾಸ್ ಪ್ರಸಾದ್ ನಡೆದುಕೊಂಡರು.
ಮುಖ್ಯ ಮಂತ್ರಿ ಸಿದ್ಧರಾಮಯ್ಯನವರಿಗೆ ತಮ್ಮ ನೇತೃತ್ವದ ಸರ್ಕಾರ ಆಮೆ ವೇಗದಲ್ಲಿ ಚಲಿಸುತ್ತಿರುವುದು ಗೊತ್ತಿದ್ದರೂ ಸಹ ಜಾತಿ ಹಾಗೂ ಇನ್ನಿತರೆ ಕಾರಣದಿಂದ ಒಕ್ಕಲಿಗ ಸಮುದಾಯದ ಅಂಬರೀಶ್, ಲಿಂಗಾಯುತ ಸಮುದಾಯದ ಶ್ಯಾಮನೂರು ಶಿವಶಂಕರಪ್ಪ, ಮುಸ್ಲಿಂ ಸಮುದಾಯದ ಕಮರುಲ್ ಇಸ್ಲಾಂ, ಹಾಗೂ ದಲಿತ ಸಮುದಾಯದ ವಿ.ಶ್ರೀನಿವಾಸ ಪ್ರಸಾದ್ ಇಂತಹ ನಿಷ್ಕ್ರಿಯ ಸಚಿವರನ್ನು  ಮೂರು ವರ್ಷಗಳ ಕಾಲ ಸಹಿಸಿಕೊಂಡಿದ್ದರು. ಆದರೆ, ತಮ್ಮದೇ ಪಕ್ಷದ ಭಿನ್ನಮತೀಯ ನಾಯಕರ ಟೀಕೆಯಿಂದ  ಮುಖ್ಯ ಮಂತ್ರಿಯ ಕುರ್ಚಿ  ಕಳೆದು ಕೊಳ್ಳುವ ಭೀತಿ ಎದುರಾದಾಗ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದು ಅವರಿಗೆ ಅನಿವಾರ್ಯವಾಯಿತು. ಈ ಕಾರಣಕ್ಕಾಗಿ  ವಯಸ್ಸು, ಹಿರಿತನ, ಜಾತಿ ಇವುಗಳನ್ನು ಲೆಕ್ಕಿಸದೆ, ಈ ನಾಲ್ವರನ್ನು ಸಚಿವ ಸಂಪುಟದಿಂದ ಕಳೆದ ವರ್ಷ ಕೈ ಬಿಟ್ಟರು. ಶ್ರೀನಿವಾಸ್ ಪ್ರಸಾದ್ ಹೊರತು ಪಡಿಸಿ, ಇತರೆ ಮೂರು ಮಂದಿ ಸಚಿವರು ಒಂದಿಷ್ಟು ಅಸಮಾಧಾನ ಹೊರಹಾಕಿ  ನಂತರ ಮೌನಕ್ಕೆ ಶರಣಾದರು. ಆದರೆ ಶ್ರೀನಿವಾಸ್ ಪ್ರಸಾದ್ ಮಂತ್ರಿ ಸ್ಥಾನ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಮಾನಸಿಕ ಸ್ಥಿಮಿತವನ್ನು ಸಹ ಕಳೆದುಕೊಂಡರು. ಸಿದ್ಧರಾಮಯ್ಯನವರ ಲೋಪದೋಷಗಳು ಏನೇ ಇರಲಿ ಅವರೊಬ್ಬ ಈ ನಾಡಿನ ಮುಖ್ಯಮಂತ್ರಿ ಮತ್ತು ಪ್ರಥಮ ಪ್ರಜೆ ಎಂಬ ಕನಿಷ್ಠ ವಿವೇಕವಿಲ್ಲದೆ ಏಕವಚನದಲ್ಲಿ ಅವರನ್ನು ಸಾರ್ವಜನಿಕವಾಗಿ ನಿಂದಿಸುತ್ತಾ ಬಂದರು. ಇದೂ ಸಾಲದೆಂಬಂತೆ ತಮ್ಮನ್ನು ಆಯ್ಕೆ ಮಾಡಿದ  ನಂಜನಗೂಡು ಕ್ಷೇತ್ರದ ಮತದಾರರ ಸಲಹೆ ಅಥವಾ ಅಭಿಪ್ರಾಯ ಪಡೆಯದೆ ಶಾಸಕರ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಜೊತೆಗೆ ಕಾಂಗ್ರೇಸ್ ಪಕ್ಷವನ್ನೂ ಸಹ ತೊರೆದರು.
ನಿವೃತ್ತಿ ಹೊಂದಿ ಮನೆಯಲ್ಲಿ ಇರಬೇಕಾದ ವ್ಯಕ್ತಿಯನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಸಿ, ಕಸದಂತೆ ಹೊರ ಬಿಸಾಡಿತು. ಕಾಂಗ್ರೇಸ್ ಪಕ್ಷಕ್ಕೆ ಕಸವಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರನ್ನು ಮುತ್ತು ರತ್ನದಂತೆ ಬಿ.ಜೆ.ಪಿ. ಪಕ್ಷ ಅಪ್ಪಿಕೊಂಡಿದ್ದು ಮಾತ್ರ  ಅದರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಯಿತು. ಜೊತೆಗೆ ಮರು ಚುನಾವಣೆಗೆ  ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿ ದಲಿತರ ಮತ ಬ್ಯಾಂಕ್ ತಮ್ಮದಾಗುವುದೆಂದು ಬಿ.ಜೆ.ಪಿ. ಪಕ್ಷದ ನಾಯಕ ಯಡಿಯೂರಪ್ಪ ಕನಸು ಕಂಡರು. ಚುನಾವಣೆಯ ಪ್ರಚಾರಕ್ಕೂ ಸಹ ಆಗಮಿಸದೆ ಮನೆಯಲ್ಲಿ ಕುಳಿತ ಶ್ರೀನಿವಾಸ್ ಪ್ರಸಾದ್ ರವರ ವರ್ತನೆ ಬಿ.ಜೆ.ಪಿ. ಪಾಲಿಗೆ ಹಗ್ಗವನ್ನು ಕೊಟ್ಟಿ ಕೈ ಕಟ್ಟಿಸಿಕೋಡಂತಾಯಿತು. ಸತತ ಮೂರು ವಾರಗಳ ಕಾಲ ಯಡಿಯೂರಪ್ಪ ಬಿ.ಜೆ.ಪಿ. ನಾಯಕರ ದಂಡನ್ನು ಕಟ್ಟಿಕೊಂಡು ರಣ ಬಿಸಿಲಿನಲ್ಲಿ ಬೀದಿ ಬೀದಿ ಅಲೆದು ಹಣ್ಣಾಗುವುದರ ಜೊತೆಗೆ ಹೈರಾಣಾದರು. ಪಕ್ಷದ ಪ್ರತಿಷ್ಟೆಗಾಗಿ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನೀರಿನಂತೆ ಹಣ ಸುರಿದರೂ ಸಹ ಮತದಾರ ಬಿ.ಜೆ.ಪಿ. ಗೆ ಒಲಿಯಲಿಲ್ಲ. ಅತ್ತ ಶ್ರೀನಿವಾಸ್ ಪ್ರಸಾದ್ ರಾಜಿನಾಮೆ ನೀಡಿದ ವಾರದಲ್ಲಿ ನಂಜನಗೂಡು ಕ್ಷೇತ್ರಕ್ಕೆ 525 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಶ್ರೀನಿವಾಸ್ ಪ್ರಸಾದ್ ರವರ ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದರು. ಅವರ ವಿರುದ್ಧ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ ಅವರು ಜೆ.ಡಿ.ಎಸ್. ಪಕ್ಷದಿಂದ ಎರಡು ಬಾರಿ ಸ್ಪರ್ಧಿಸಿ ಸೋಲುಂಡಿದ್ದ ಕಳಲೆ ಕೇಶವವಮೂರ್ತಿಯನ್ನು ಕಾಂಗ್ರೇಸ್ ಗೆ ಕರೆತಂದು ಅಭ್ಯರ್ಥಿಯನ್ನಾಗಿ ಮಾಡಿದರು. ಜೆ.ಡಿ.ಎಸ್. ಪಕ್ಷವು ಸೂಕ್ತ ಅಭ್ಯರ್ಥಿಗಳ ಕೊರತೆಯಿಂದಾಗಿ ಚುನಾವಣೆಯಿಂದ ದೂರ ಸರಿದದ್ದು ಕಾಂಗ್ರೇಸ್ ಪಕ್ಷಕ್ಕೆ ಪರೋಕ್ಷವಾಗಿ ವರದಾನವಾಯಿತು. ಹಾಗಾಗಿ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ರೇತ್ರಗಳ ಗೆಲುವನ್ನು ಕಾಂಗ್ರೇಸ್ ಗೆಲುವು ಎನ್ನುವುದರ ಬದಲಾಗಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ಮೈತ್ರಿ ಕೂಟದ ಗೆಲುವು ಎಂದು ಕರೆಯಬಹುದು
ಅದೇ ರೀತಿ ಗುಂದ್ಲುಪೇಟೆಯ ಕ್ರೇತ್ರದ ಚುನಾವಣೆಯಲ್ಲಿ ಸಚಿವ ಮಹಾದೇವ್ ಪ್ರಸಾದ್ ಅವರ ಪತ್ನಿ ಮೋಹನ್ ಕುಮಾರಿ ಯವರು ಅನುಕಂಪದ ಆಧಾರದ ಮೇಲೆ ಅಲ್ಪ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಚುನಾವಣೆಗೆ ಮುನ್ನ ಬಿ.ಜೆ.ಪಿ. ಸಂಸದ ಪ್ರತಾಪ ಸಿಂಹ ಆಡಿದ ತುಟಿ ಮೀರಿದ ಮಾತುಗಳು ಬಿ.ಜೆ.ಪಿ. ಪಕ್ಷಕ್ಕೆ ಮುಳುವಾಗಿ ಪರಿಣಮಿಸಿದವು. ಜೊತೆಗೆ ಕಾಂಗ್ರೇಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲ್ಲಲಾರದು ಎಂಬ ಸೂಚನೆಯನ್ನೂ ಸಹ  ಈ ಬಾರಿಯ ಗುಂಡ್ಲುಪೇಟೆ ಕ್ರೇತ್ರದ ಫಲಿತಾಂಶ ನೀಡಿದೆ.

ಈ ಉಪಚುನಾವಣೆಗಳ ಸೋಲು ಒಂದು ರೀತಿಯಲ್ಲಿ ಬಿ.ಜೆ.ಪಿ ಪಕ್ದ ಹಲವು .ನಾಯಕರಿಗೆ ಸಮಾಧಾನ ತಂದಿದೆ, ಏಕೆಂದರೆ, ಯಡಿಯೂರಪ್ಪನವರಿಗಿಂತ ಅವರ ಹಿಂದಿರುವ ಶೋಭಾ ಕರಂದ್ಲಾಜೆಯವರ ಭಯ ಬಿ.ಜೆ.ಪಿ. ನಾಯಕರನ್ನು ಕಾಡುತ್ತಿರುವುದನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಯಾರ ಮಾತಿಗೂ ಸೊಪ್ಪು ಹಾಕದೆ, ಏಕಾಏಕಿ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದ ಯಡಿಯೂರಪ್ಪನವರಿಗೆ, ನಾನು ಮುಂದಿನ ಮುಖ್ಯ ಮಂತ್ರಿ ಎಂದು ಎದೆ ತಟ್ಟಿ ಹೇಳಿಕೊಳ್ಳಲಾರದಷ್ಟು ಅಧೈರ್ಯವನ್ನು ಈ ಚುನಾವಣೆಯ ಫಲಿತಾಶ ತಂದೊಡ್ಡಿದೆ. ಜಾತಿಯ ಲೆಕ್ಕಾಚಾರ  ಕೂಡ ಬದಲಾಗಿದೆ. ಪ್ರತಿ ಐದು ವರ್ಷಕ್ಕೆ ಹೊಸ ತಲೆ ಮಾರು ಮತದಾರರಾಗಿ ಸೇರ್ಪಡೆಯಾಗುತ್ತಿರುವುದು ಮತ್ತು ಜನತೆ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಬದಿಗೊತ್ತಿ ತಮಗೆ ಸೂಕ್ತ ಅನಿಸಿದ  ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವುದು ರಾಜಕೀಯ ಪಕ್ಷಗಳಿಗೆ ಸವಾಲಾಗಿದೆ.  ನಿಜಕ್ಕೂ ಇದನ್ನು ಪ್ರಜಾ ಪ್ರಭುತ್ವದ ಸೌಂಧರ್ಯ ಎಂದು ಕರೆಯಬಹುದು.

ಕೊನೆಯ ಮಾತು- ದೇಶದ ರಾಜಧಾನಿ ದೆಹಲಿಯಲ್ಲಿ ಪೊರಕೆ ಗುರುತಿನ ಚಿಹ್ನೆಯ ಮೂಲಕ ಅಧಿಕಾರಕ್ಕೆ ಬಂದ ಅರವಿಂದ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷವನ್ನು ಅದೇ ಪೊರಕೆಯಿಂದ ಗುಡಿಸಿ ಹಾಕುವ ಮುನ್ಸೂಚನೆಯನ್ನು ದಿಲ್ಲಿಯ ಮತದಾರರು ಈ ಉಪ ಚುನಾವಣೆಯಲ್ಲಿ ನೀಡಿದ್ದಾರೆ. ಅಪ್ ಆದ್ಮಿ ಪಕ್ಷ ಅಭ್ಯರ್ಥಿ ಕಾಂಗ್ರೇಸ್ ಅಭ್ಯರ್ಥಿಯ ವಿರುದ್ಧ  ಠೇವಣಿ ಕಳೆದು ಕೊಂಡಿರುವುದು  ಅಲ್ಲಿನ ಮತದಾರರ ಸೂಕ್ಷ್ಮತೆಗೆ ಸಾಕ್ಷಿ ಎಂಬಂತಿದೆ.
(ಕರಾವಳಿ ಮುಂಜಾವು ದಿನಪತ್ರಿಕೆಯ ""ಜಗದಗಲ " ಅಂಕಣಕ್ಕೆ ಬರೆದ ಲೇಖನ)

1 ಕಾಮೆಂಟ್‌: