ತಮಿಳುನಾಡಿನ
ಸಾಂಸ್ಕತಿಕ ನಗರಿ ಮಧುರೈ ಎಂದರೆ,
ಅಲ್ಲಿನ ಮೀನಾಕ್ಷಿ ಬೃಹತ್
ದೇವಾಲಯದ ಮೂಲಕ ಆ
ನಗರ ಇಡೀ ಜಗತ್ತಿಗೆ ಪ್ರಸಿದ್ಧವಾಗಿದೆ.
ಅದೇ ರೀತಿಯಲ್ಲಿ ಮಧುರೈ ನಗರಕ್ಕೆ ತಮ್ಮ
ಕರ್ನಾಟಕ ಸಂಗೀತದ ಮೂಲಕಸಂಗೀತದ
ಲೋಕದಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟವರೆಂದರೆ, ಮೀನಾಕ್ಷಿ
ಅಮ್ಮನ ಹೆಮ್ಮೆಯ ಪುತ್ರಿಯರಂತೆ ಇದ್ದ
ಮಧುರೈ ಷಣ್ಮುಗವಡಿವು ಎಂಬ ಪ್ರಸಿದ್ಧ ವೀಣಾವಾದಕಿ,
ಮತ್ತು ಅವರ ಪುತ್ರಿ ಮಧುರೈ
ಷಣ್ಮುಗವಡಿವು ಸುಬ್ಬುಲಕ್ಷ್ಮಿ( ಎಂ.ಎಸ್. ಸುಬ್ಬುಲಕ್ಷ್ಮಿ)
ಹಾಗೂ ಮಧುರೈ ಪೊನ್ನುತಾಯಿ. ಈ
ಮೂವರು ದೇವದಾಸಿ ಸಮುದಾಯದ ಹಿನ್ನಲೆಯಿಂದ
ಬಂದು ಕರ್ನಾಟಕ ಸಂಗೀತ ಲೋಕದಲ್ಲಿ
ದೇವತೆಯರ ಸ್ಥಾನಮಾನಗಳನ್ನು ಗಳಿಸಿಕೊಂಡ ಅಪ್ರತಿಮ ಕಲಾವಿದೆಯರಾಗಿದ್ದಾರೆ.
ಮಧುರೈ
ಪೊನ್ನುತಾಯಿ ಪುರುಷಲೋಕಕ್ಕೆ ಮಿಸಲಾಗಿದ್ದ ನಾದಸ್ವರ ವಾದನಕ್ಕೆ ಪ್ರವೇಶಿಸಿದ
ಪಥಮ ಮಹಿಳಾ ಕಲಾವಿದೆ. ನಿರಂತರ
ಮುವತ್ತೆರೆಡು ವರ್ಷಗಳ ಕಾಲ, (1940 ರಿಂದ 1972 ರವರೆಗೆ) ದಕ್ಷಿಣದ
ತಮಿಳುನಾಡಿನ ತಂಜಾವೂರು, ತಿರುವರೂರು, ತಿರುಚರಾಪಳ್ಳಿ, ಮಧುರೈ, ಪುದುಕೊಟೈ, ನಾಗರಕೋಯಿಲ್,
ತಿರುನಾನ್ವೇಲಿ, ಥೇಣಿ,ಜಿಲ್ಲೆಗಳು, ಮತ್ತು ಕೇರಳದ
ತಿರುವನಂತಪುರ, ಕೊಲ್ಲಂ, ಪಾಲಕ್ಕಾಡ್, ಎರ್ನಾಕುಲಂ,
ಅಲ್ಲಪುಜ, ತ್ರಿಸೂರು, ಕೊಟ್ಟಾಯಂ ಜಿಲ್ಲೆಗಳ ಪ್ರಮುಖ ದೇವಾಲಯಗಳ ವಾರ್ಷಿಕ
ದೇವರ ಉತ್ಸವಗಳು, ಶ್ರೀಮಂತ ಜಮೀನ್ದಾರರ ಮತ್ತು
ರಾಜಕಾರಣಿಗಳ ಕುಟುಂಬದ ವಿವಾಹಗಳಲ್ಲಿ ನಾದಸ್ವರ ನುಡಿಸುವುದರ
ಮೂಲಕ ಜನಸಾಮಾನ್ಯರ ಎದೆಯಲ್ಲಿ ತಮ್ಮ ಮಧುರವಾದ ವಾದನದ
ನೆನಪುಗಳ ಮೂಲಕ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಭಾರತೀಯ
ಹಿಂದೂ ಸಂಸ್ಕತಿಯಲ್ಲಿ ಶುಭಕಾರ್ಯಗಳಿಗೆ ಮಂಗಳವಾದ್ಯವೆಂದರೆ, ಉತ್ತರಭಾರತದಲ್ಲಿ ಶಹನಾಯಿ ಮತ್ತು ದಕ್ಷಿಣಭಾರತದಲ್ಲಿ
ನಾದಸ್ವರ (ವಾಲಗ) ವಾದ್ಯಗಳು ಪ್ರಸಿದ್ಧಿಯಾಗಿವೆ.
ಈ ಪ್ರಕಾರಗಳೆರೆಡೂ
ಉತ್ತರ-ದಕ್ಷಿಣ ಎಂಬ ಭೇದ-ಭಾವವಿಲ್ಲದೆ ತಳಸುಮುದಾಯದಿಂದ ಬಂದ ಕಲಾವಿದರ ಆಸ್ತಿಯಾಗಿರುವುದು ವಿಶೇಷವಾಗಿದೆ.. ಪ್ರಾಚೀನ ಕಾಲದಿಂದಲೂ ದೇವಸ್ಥಾನ,
ರಾಜರುಗಳ ದರ್ಭಾರಿನಲ್ಲಿ, ಗೃಹ ಪ್ರವೇಶ, ವಿವಾಹ,
ಪೂಜೆ ಇತ್ಯಾದಿ ಶುಭಕಾರ್ಯಗಳಲ್ಲಿ ಅತ್ಯಗತ್ಯವಾದ
ಸಂಗೀತ ಪ್ರಕಾರವಾಗಿದ್ದರೂ ಸಹ ಇವುಗಳನ್ನು ನುಡಿಸುವ
ಕಲಾವಿದರನ್ನು ಮಾತ್ರ ದೇಗುಲಗಳ
ಬಾಗಿಲುಗಳಾಚೆ, ವಿವಾಹ ಮಂಟಪಗಳ ಮೂಲೆಯಲ್ಲಿ
ಕೂರಿಸಿ ದೂರವಿರಿಸಲಾಗಿತ್ತು.. ನೀವು ನುಡಿಸುವ ಸಂಗೀತ
ನಮಗೆ ಅಸ್ಪೃಶ್ಯವಲ್ಲ ಆದರೆ, ನೀವು ಮಾತ್ರ
ನಮಗೆ ಅಸ್ಪೃಶ್ಯರು ಎಂಬ ಸಂದೇಶವನ್ನು ಶತಮಾನಗಳುದ್ದಕ್ಕೂ
ಕಲಾವಿದರ ಎದೆಗೆ ನಮ್ಮ ಸಮಾಜ
ದಾಟಿಸುತ್ತಾ ಬಂದಿತ್ತು. ಈ ಅಸ್ಪೃಶ್ಯತೆಯ ಗಡಿರೇಖೆಯನ್ನು
ಉತ್ತರಭಾರತದಲ್ಲಿ ಶಹನಾಯ್ ವಾದಕ ಬಿಸ್ಮಿಲ್ಲಾ
ಖಾನ್ ಅಳಿಸಿ ಹಾಕಿದರೆ, ದಕ್ಷಿಣಭಾರತದಲ್ಲಿ
ನಾದಸ್ವರದ ಮಾಂತ್ರಿಕ ಟಿ.ಎನ್. ರಾಜರತ್ನಂಪಿಳ್ಳೈ ಅಳಿಸಿಹಾಕಿದರು.
ಅಷ್ಟೇ ಅಲ್ಲದೆ, ತಮ್ಮ ಪ್ರಖರ
ಪ್ರತಿಭೆಯ ಮೂಲಕ ಹಿಂದುಸ್ತಾನಿ ಸಂಗೀತ
ಮತ್ತು ಕರ್ನಾಟಕ ಸಂಗೀತದ ಎರಡೂ
ಪ್ರಕಾರಗಳಿಗೆ ಸಂಗೀತದ ಕಛೇರಿಯ ಸ್ಥಾನಮಾನಗಳನ್ನು
ಗಳಿಸಿಕೊಡುವುದರ ಮೂಲಕ ಕಲಾವಿದರನ್ನು ಈ
ಸಮಾಜ ಗೌರವದಿಂದ ನೋಡುವಂತೆ, ಆರಾಧಿಸುವಂತೆ ಮಾಡಿದರು.
ಸಂಗೀತದ
ವಾದ್ಯ ಪ್ರಕಾರಗಳಲ್ಲಿ ಕೊಳಲು, ಶಹನಾಯ್ ಮತ್ತು
ನಾದಸ್ವರ ಈ ಮೂರು ಕಲಾವಿದರ
ಪಾಲಿಗೆ ಕ್ಲಿಷ್ಟಕರ ವಾದ್ಯಗಳು. ಏಕೆಂದರೆ, ತಮ್ಮ ಎದೆಯ ತಿದಿಯೊತ್ತಿ
ಅವುಗಳಿಗೆ ಉಸಿರು ತುಂಬಿ, ವಾದ್ಯಗಳಿಗೆ
ಕೊರೆದಿರುವ ಹತ್ತು ರಂಧ್ರಗಳ ಮೇಲೆ
ತಮ್ಮ ಹತ್ತು ಬೆರಳುಗಳನ್ನಾಡಿಸುತ್ತಾ ಅಗತ್ಯಕ್ಕೆ
ತಕ್ಕಂತೆ ಧ್ವನಿ ಹೊರಡಿಸುವುದು ಸಾಮಾನ್ಯವಾದ
ಸಂಗತಿಯಲ್ಲ. ಕೊಳಲು ಮತ್ತು ಶಹನಾಯ್
ಕೇವಲ ಅರ್ಧ ಇಂಚು ಅಥವಾ
ಮುಕ್ಕಾಲು ಇಂಚು ವ್ಯಾಸವಿದ್ದು, ಒಂದು
ಅಡಿಯಿಂದ ಒಂದೂವರೆ ಅಡಿ ಉದ್ದವಿದ್ದರೆ,
ನಾದಸ್ವರ ವಾದನವು ಎರಡರಿಂದ ಎರಡೂವರೆ
ಅಡಿ ಉದ್ದವಿದ್ದು, ಅದರ ವ್ಯಾಸವು ಒಂದು
ಇಂಚಿನಿಂದ ಎರಡು ಇಂಚಿನಷ್ಟು ಇರುತ್ತದೆ.
ಏಕಕಾಲಕ್ಕೆ ದೈಹಿಕ ಮತ್ತು ಬೌದ್ಧಿಕ
ಶ್ರಮವನ್ನು ಬೇಡುತ್ತವೆ. ಈ ಕಾರಣಕ್ಕೆ ಈ ವಾದನಗಳು ಬಹಳಷ್ಟು
ಕಾಲ ಪುರುಷ ಸಾಮ್ರಾಜ್ಯದ ಕಲಾ
ಪ್ರಕಾರಗಳಾಗಿದ್ದವು. ಅದರಲ್ಲೂ ನಾದಸ್ವರ ನುಡಿಸುವುದು
ನಿಜಕ್ಕೂ ಸವಾಲಿನ ವಿಷಯ. ದೇವರ
ಉತ್ಸವ ಅಥವಾ ಮೆರವಣೆಗೆಯಲ್ಲಿ ಇಡೀ
ರಾತ್ರಿ ಹತ್ತರಿಂದ ಹನ್ನೆರೆಡು ಗಂಟೆಗಳ ಕಾಲ ನಿಂತುಕೊಂಡು
ಅಥವಾ ದೇವರ ಪಲ್ಲಕ್ಕಿಯ ಮುಂದೆ
ಸಾಗುತ್ತಾ ನುಡಿಸುವುದು ಅಪಾರ ದೈಹಿಕ ಶಕ್ತಿಯನ್ನು
ಅಪೇಕ್ಷಿಸುತ್ತದೆ. ಇಂತಹ ಕ್ಲಿಷ್ಟಕರವಾದ ನಾದಸ್ವರ
ವಾದನಕ್ಕೆ 1940 ರಲ್ಲಿ ಮಧುರೈ ಪೊನ್ನುತಾಯಿ
ತಮ್ಮ ಹನ್ನೆರೆಡನೇ ವಯಸ್ಸಿನಲ್ಲಿ ಪ್ರವೇಶಿಸುವುದರ ಮೂಲಕ ಪ್ರಪಥಮ ನಾದಸ್ವರ
ಮಹಿಳಾ ಕಲಾವಿದೆ ಎಂಬ ಕೀರ್ತಿಗೆ
ಪಾತ್ರರಾದರು.
ತಮಿಳುನಾಡಿನ
ಪಳನಿ ಬೆಟ್ಟಗಳ ಗಿರಿಸಾಲಿನ ನಡುವಿನ
ಅರಿಯಕುಡಿ ಎಂಬಲ್ಲಿ ಇಸೈವೆಲ್ಲಲಾರ್ ಎಂಬ
ಸಂಗೀತ. (ವಾಸ್ತವವಾಗಿ ಈ ಸಮುದಾಯವು 1920 ರಿಂದ
ಈಚೆಗೆ ತಮಿಳುನಾಡಿನಲ್ಲಿ ದೇವದಾಸಿ ಸಮುದಾಯದಿಂದ ಪ್ರತ್ಯೇಕವಾಗಿ
ಗುರುತಿಸಿಕೊಂಡಿದೆ.) ನುಡಿಸುವ ಸಮುದಾಯಕ್ಕೆ ಸೇರಿದ
ಕುಟುಂಬದಲ್ಲಿ ಜನಿಸಿದ ಪೊನ್ನುತಾಯಿ ತಮ್ಮ
ಆರನೆಯ ವಯಸ್ಸಿನಲ್ಲಿ ನಾದಸ್ವರ ಕಲೆಗೆ ಒಲಿದರು,
ಸತತ
ಆರು ವರ್ಷಗಳ ಕಾಲ ಮಧುರೈ
ನಗರದ ನಾದಸ್ವರ ವಿದ್ವಾನ್ ನಟೇಶ
ಪಿಳ್ಳೈ ಅವರಲ್ಲಿ ಅಭ್ಯಾಸ ಮಾಡಿ
1940 ರಲ್ಲಿ ತಮ್ಮ ಹನ್ನೆರೆಡನೆಯ ವಯಸ್ಸಿಗೆ
ಮಧುರೈ ಮೀನಾಕ್ಷಿ ಅಮ್ಮನ ಉತ್ಸವದಲ್ಲಿ ನಾದಸ್ವರ
ನುಡಿಸುವುದರ ಮೂಲಕ ಕಲಾಪ್ರಪಂಚಕ್ಕೆ ಕಾಲಿಟ್ಟರು.
ಜೊತೆಗೆ ಆ ಕಾಲದ ಪ್ರಸಿದ್ಧ
ಮಹಾನ್ ಕಲಾವಿದರುಗಳಾದ ಟಿ.ಎನ್, .ರಾಜರತ್ನಂ
ಪಿಳ್ಳೈ, ತಿರುವೆಂಕಟಾರ್, ತಿರುವೆಳಿಮಿಳ್ಳೈಯಾರ್ ಮುಂತಾದವರ ಕಛೇರಿಗಳಲ್ಲಿ ಸಹಕಲಾವಿದೆಯಾಗಿ ತಮಿಳುನಾಡು, ಕೇರಳದಲ್ಲಿ ಸಂಗೀತಾಸಕ್ತರ ಗಮನ ಸೆಳೆದರು. ಅವರ
ಈ ಸಾಧನೆಯು ನಂತರದ
ದಿನಗಳಲ್ಲಿ ಪೊನ್ನುತಾಯಿಯವರಿಗೆ ಆಸ್ಥಾನ ವಿದ್ವಾನ್ ಪದವಿಯನ್ನು
ತಂದುಕೊಡುವುದರ ಜೊತೆಗೆ ಮಧುರೈ ಮೀನಾಕ್ಷಿ
ದೇವಸ್ಥಾನ ಮತ್ತು ಶಬರಿಮಲೈ ಅಯ್ಯಪ್ಪನ
ದೇವಸ್ಥಾನ, ತಿರುವಂತಪುರದ ಅನಂತಪದ್ಮನಾಭನ ದೇವಸ್ಥಾನದ ಪ್ರಮುಖ ಕಲಾವಿದೆಯನ್ನಾಗಿ ಮಾಡಿತು.
ಭಾರತದ
ಪ್ರಧಾನಿ ಜವಹರಲಾಲ್ ನೆಹರೂ, ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ರವರ
ಸಮಾರಂಭಗಳಲ್ಲಿ ನಾದಸ್ವರ ಕಛೇರಿಯನ್ನು ನೀಡಿ
ಗಮನ ಸೆಳೆದ ಪೊನ್ನುತಾಯಿ, ಭಾರತದ
ಪ್ರಮುಖ ನಗರಗಳು, ಮಲೇಷಿಯಾ, ಶ್ರೀಲಂಕಾ
ರಾಷ್ಟ್ರಗಳಲ್ಲಿಯೂ ಸಹ ಕಛೇರಿಯನ್ನು ನೀಡುವುದರ
ಮೂಲಕ ಸಂಗೀತಾಸಕ್ತರ ಪಾಲಿಗೆ ಮೆಚ್ಚಿನ ಕಲಾವಿದೆಯಾಗಿದ್ದರು.
1953 ರಲ್ಲಿ ಪೊನ್ನುತಾಯಿ ಹಾಗೂ ಅವರ ಹಿರಿಯ
ಸಹೋದರಿ ತಂಗಂ ಅವರನ್ನು ವಿವಾಹದ
ಮೂಲಕ ತಮ್ಮ
ಉಪಪತ್ನಿಂiÀiರನ್ನಾಗಿ ಸ್ವೀಕರಿಸಿದ ಮಧುರೈ
ನಗರದ ಚಿದಂಬರಂ ಮೊದಲಿಯಾರ್ ಎಂಬುವರು
ಪೊನ್ನುತಾಯಿಯ ಕಲೆಗೆ ಎಲ್ಲಾ ವಿಧವಾದ
ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಮಧುರೈ ಪುರಭೆಯ ಅಧ್ಯಕ್ಷರಾಗಿ,
ಒಂದು ಬಾರಿ ಕಾಂಗ್ರೇಸ್ ಪಕ್ಷದ
ಪರವಾಗಿ ತಮಿಳುನಾಡು ವಿಧಾನ ಪರಿಷತ್ತಿನ ಸದಸ್ಯರಾಗಿ
ಸೇವೆ ಸಲ್ಲಿಸಿದ್ದ ಚಿದಂಬರಂ ಮೊದಲಿಯಾರ್ 1972 ರಲ್ಲಿ
ನಿಧನರಾದಾಗ ಮಹಾನ್ ಕಲಾವಿದೆ ಪೊನ್ನುತಾಯಿಯವರ
ನಾದಸ್ವರ ಲೋಕಕ್ಕೆ ಕತ್ತಲು ಕವಿಯಿತು.
ಚಿದಂಬರಂ ಅವರಿಂದ ದಾಂಪತ್ಯದ ಸುಖವನ್ನು
ಹೊರತು ಪಡಿಸಿ, ಬೇರೆ ಯಾವ
ಸಂಪತ್ತು ಅವರಿಗೆ ಸಿಗದಿದ್ದರೂ ಸಹ,
ಅವರಿಗೆ ಅನಿರೀಕಿತವಾಗಿ ದಕ್ಕಿದ ವಿಧವೆಯ ಪಟ್ಟವು
ಅವರನ್ನು ಎಲ್ಲಾ ಶುಭ ಕಾರ್ಯಗಳಿಂದ
ದೂರವಿರುವಂತೆ ಮಾಡಿತು. ಮಂಗಳಕರ ವಾದ್ಯ
ಎನಿಸುವ ನಾದಸ್ವರವನ್ನು ವಿಧವೆಯ ಮೂಲಕ ನುಡಿಸುವುದು
ಅಮಂಗಳಕರ ಎನಿಸುವಂತೆ ಮಾಡಿತು. ಇದರ ಫಲವಾಗಿ
ಪೊನ್ನುತಾಯಿಯವರು ಅನಿವಾರ್ಯವಾಗಿ, ದೇವಸ್ಥಾನ ಮತ್ತು ವಿವಾಹ ಹಾಗೂ
ಶುಭ ಸಮಾರಂಭಗಳಿಂದ ವಂಚಿತರಾಗಿ ನೈಪಥ್ಯಕ್ಕೆ
ಸರಿದರು. 1946 ರಿಂದ 1989 ರವರೆಗೆ ತಿರುಚ್ಚಿಯ ಆಕಾಶವಾಣಿಗೆ
ನೀಡುತ್ತಿದ್ದ ಕಾರ್ಯಕ್ರಮದಲ್ಲಿ ದೊರೆಯುತ್ತಿದ್ದ ಅಲ್ಪ ಮಟ್ಟದ ಸಂಭಾವನೆ
ಮತ್ತು ಮಾಸಿಕ ಒಂದು ಸಾವಿರ
ರೂಪಾಯಿ ಕಲಾವಿದರ ಪಿಂಚಣಿ ಈ
ಮಹಾನ್ ಕಲಾವಿದೆ ಬದುಕಿರುವವರೆಗೂ ಜೀವನಕ್ಕೆ
ಆಸರೆಯಾದವು. ತಮ್ಮ ಕಲಾ ಜೀವನದಲ್ಲಿ
ಪಡೆದಿದ್ದ ಇಪ್ಪತ್ಮೂರು ಚಿನ್ನದ ಪದಕಗಳನ್ನು ಮಾರುತ್ತಾ,
ತಮ್ಮ ಇಬ್ಬರು ಪುತ್ರಿಯರನ್ನು ವಿವಾಹ
ಮಾಡಿದ ಪೊನ್ನುತಾಯಿ ಇದ್ದ ಒಬ್ಬ ಮಗನೊಂದಿಗೆ
ಕರ್ನಾಟಕ ಸಂಗೀತ ಲೋಕಕ್ಕೆ ಅನಾಮಿಕಳಂತೆ,
ಅನಾಥಳಂತೆ ಬದುಕಿದರು.
ಮಾಹಿತಿ
ತಂತ್ರಜ್ಞಾನದ ದೈತ್ಯ ಸಂಸ್ಥೆಯಾದ ಮೈಕ್ರೋಸಾಪ್ಟ್
ಕಂಪನಿಯು ಅಮೇರಿಕಾದ ತನ್ನ ಕೇಂದ್ರ ಕಛೇರಿಯಲ್ಲಿ
ಸ್ಥಾಪಿಸಿರುವ ಭಾರತೀಯ ಸಂಗೀತ ಕಲೆಗಳ
ದಾಖಲೆಗಳ ಸಂಗ್ರಹಕ್ಕಾಗಿ ಭಾರತದ ನಾದಸ್ವರ ಲೋಕದ
ಪ್ರಥಮ ಮಹಿಳಾ ಕಲಾವಿದೆಯಾದ ಪೊನ್ನುತಾಯಿಯವರ
ನಾದಸ್ವರವನ್ನು ದಾಖಲಿಸಿಕೊಂಡಿದೆ. ಜಪಾನ್ ರಾಜಧಾನಿ ಟೋಕಿಯೋ
ನಗರದಲ್ಲಿರುವ ಭಾರತದ ಸಂಗಿತ ಮತ್ತು
ನೃತ್ಯ ಕುರಿತ ಸಂಗ್ರಹಾಲಯದಲ್ಲಿ ಎಂಎಸ್.ಸುಬ್ಬುಲಕ್ಷ್ಮಿಯ ಗಾಯನ, ಮತ್ತು ಪೊನ್ನುತಾಯಿವರ
ನಾದಸ್ವರ ವಾದನ ಎರಡೂ ಸ್ಥಾನ
ಪಡೆದಿವೆ.
ತಮಿಳುನಾಡಿನಲ್ಲಿ
ನಾದಗಾನ ಅರಸಿ, ಮತ್ತು ಕಲೈ
ಮಾಮಣಿ ಎಂಬ ಬಿರುದು ಸನ್ಮಾನಗಳನ್ನು
ಹೊರತು ಪಡಿಸಿದರೆ, 1972 ರಿಂದ 2012 ರವರೆಗೆ ಸಾರ್ವಜನಿಕ ಲೋಕದ
ಗಮನಕ್ಕೆ ಬಾರದ ರೀತಿಯಲ್ಲಿ ಬದುಕಿದ
ನಾದಸ್ವರ ಲೊಕದ ನಾದ
ದೇವತೆ ಪೊನ್ನುತಾಯಿ 2012 ರಲ್ಲಿ ಮಧುರೈ ನಗರದ
ತಮ್ಮ ಪುತ್ರನ ನಿವಾಸದಲ್ಲಿ ಇಹಲೋಕವನ್ನು
ತ್ಯೆಜಿಸಿದರು. ಇದೀಗ ಅವರ ಮೊಮ್ಮಗ
ಹಾಗೂ ಮೃದಂಗ ಕಲಾವಿದರಾದ ವಿಘ್ನೇಶ್ವರನ್
ಅವರು ತನ್ನ ಅಜ್ಜಿಯ ಸ್ಮರಣೆಗಾಗಿ
“ ಪೊನ್ನುತಾಯಿ ಇಸೈ ಆಲಯಂ” ( ಪೊನ್ನುತಾಯಿ
ಸಂಗೀತ ನಿಲಯ) ಎಂಬ ಸಂಗೀತ
ಶಾಲೆಯನ್ನು ಆರಂಭಿಸಿ, ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತದ ಎಲ್ಲಾ
ಪ್ರಕಾರಗಳಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ. ಕಳೆದ ವಾರ 1960 ರ
ಪ್ರಸಿಧ್ಧ ತಮಿಳು ಗೀತೆಯಾದ “ ಸಿಂಗಾರ
ವೇಲನೆ ನೀ ವಾ” ಎಂಬ
ಹಾಡನ್ನು ನಾದಸ್ವರದ ಮೂಲಕ ಕೇಳುವಾಗ ಈ
ಮಹಾತಾಯಿ ನೆನಪಾದರು. ದಕ್ಷಿಣ ಭಾರತದ ದೇವದಾಸಿಯರ
ಇತಿಹಾಸ ಕುರಿತಂತೆ ಕಳೆದ ಐದು ವರ್ಷಗಳಿಂದ
ನಾನು ಕೈಗೊಂಡಿರುವ ಅಧ್ಯಯನ ಮತ್ತು ಕ್ಷೇತ್ರಕಾರ್ಯದಲ್ಲಿ ಬರೆದು ಇಟ್ಟುಕೊಂಡಿದ್ದ
ಟಿಪ್ಪಣಿಗಳಿಂದ
ಹೊರೆ ತೆಗೆದ ಲೇಖನಗಳಲ್ಲಿ ಇದು
ಒಂದು.
(ಪೊನ್ನುತಾಯಿ
ಅವರ ಚಿತ್ರ ಕೃಪೆ- “ಹಿಂದೂ”
ಇಂಗ್ಲೀಷ್ ದಿನಪತ್ರಿಕೆ, ಚೆನ್ನೈ. ಮತ್ತು ಮಾಹಿತಿ
ಸೌಜನ್ಯ- “ಆನಂದ ವಿಕಟನ್”, ತಮಿಳು
ವಾರಪತ್ರಿಕೆ, ಚೆನ್ನೈ)
( ಕರಾವಳಿ ಮುಂಜಾವು ದಿನಪತ್ರಿಕೆಯ “ಜಗದಗಲ” ಅಂಕಣ
ಬರಹ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ