ಶುಕ್ರವಾರ, ಸೆಪ್ಟೆಂಬರ್ 15, 2017

ಗಾಂಧಿವಾದಿ ಪ್ರಸನ್ನ ತೆರೆದಿಟ್ಟ ಸರಕು ಮತ್ತು ಸೇವಾ ತೆರಿಗೆಯ ನ್ಯೂನ್ಯತೆಗಳು

ಈ ದೇಶದ ಯಾವುದೇ ಒಬ್ಬ ಜನನಾಯಕ ಎನಿಸಿಕೊಂಡ ವ್ಯಕ್ತಿ;  ಅವನು ಪ್ರಧಾನಿಯಾಗಿರಲಿ ಅಥವಾ ಮುಖ್ಯ ಮಂತ್ರಿಯಾಗಿಲಿ, ಅವನು ರಾಜಕೀಯನೀತಿಯ ತಜ್ಞನಾಗಿರಬೇಕು ಇಲ್ಲವೆ, ಆರ್ಥಿಕ ತಜ್ಞನಾಗಿರಬೇಕು ಎಂದು ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಂತಹ ದೇಶದಲ್ಲಿ ನಿರೀಕ್ಷಿಸುವುದು ಕಷ್ಟ. ಜೊತೆಗೆ ಅಂತಹ ನಿರೀಕ್ಷೆಗಳಿರಬಾರದು. ಆದರೆ, ಅಧಿಕಾರದ ಗದ್ದುಗೆಗೆ ಏರಿದ ಸಂದರ್ಭದಲ್ಲಿ ತನ್ನ ಬಳಿ ಕನಿಷ್ಟ ಒಂದಿಷ್ಟು ಒಳ್ಳೆಯ ಮಂದಿ ತಜ್ಞರನ್ನು ತನ್ನ ಇಟ್ಟುಕೊಳ್ಳಬೇಕಾಗಿರುವುದು ನೈತಿಕ ಕರ್ತವ್ಯ.
ಭಾರತದ ಸಂದರ್ಭದಲ್ಲಿ 2014 ರಿಂದ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಘೋಷಿಸಲಾದ ಬಹುತೇಕ ಯೋಜನೆಗಳುಅದು ನಮಾಮಿ ಗಂಗಾ ಯೋಜನೆ ಇರಬಹುದು, ಸ್ವಚ್ಛ ಭಾರತ್, ಜನಧನ್, ಸ್ಮಾರ್ಟ್ಸಿಟಿ ಹೀಗೆ ಹಲವು ಯೋಜನೆಗಳು ಮಕಾಡೆ ಮಲಗಿದ ಪರಿ ಇವುಗಳನ್ನು ಅವಲೋಕಿಸಿದರೆ, ದೇಶದ ಪ್ರಧಾನಿಗೆ ಯಾವ ರಂಗÀ ತಜ್ಞರೂ ಬೇಕಾಗಿಲ್ಲ ಎನಿಸುತ್ತಿದೆ. ವಿಶೇಷವಾಗಿ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ರಂಗಗಳ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಬಹುತೇಕ ವಿದ್ವಾಂಸರುಗಳು ದೇಶ,ಕಾಲ, ಜಾತಿ ಮತ್ತು ಧರ್ಮದ ಎಲ್ಲೆಯನ್ನು ಮೀರಿ ತಮ್ಮ ಅಧ್ಯಯನದ ಕ್ಷೇತ್ರದ ವಿಷಯಗಳಿಗೆ ಬದ್ಧರಾಗಿರುವುದನ್ನು ನಾವು ಜಗತ್ತಿನೆಲ್ಲೆಡೆ ಕಾಣುತ್ತಿದ್ದೇವೆ. ಇಂತಹ ವ್ಯಕ್ತಿಗಳನ್ನು ಅನೇಕ ರಾಜಕೀಯ ಪಕ್ಷಗಳು, ನಾಯಕರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಲಹೆಗಾರರನ್ನಾಗಿ ಮಾಡಿಕೊಳ್ಳುವುದು ಸಂಪ್ರದಾಯ. ಆದರೆ, ಈಗನ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಇಂತಹ ವಿದ್ವಾಂಸರ ಬದಲಾಗಿ ತಮ್ಮ ಮೂಗಿನ ನೇರಕ್ಕೆ ಸಲಹೆ ಪಡೆಯುವ ಭಟ್ಟಂಗಿ ಮಾತ್ರ ಬೇಕಾಗಿದ್ದಾರೆ. ಆದರೆ, ಅವರ ದುರಾದೃಷ್ಟಕ್ಕೆ ಯಾವೊಬ್ಬ ತಜ್ಞನೂ ಭಟ್ಟಂಗಿಯಾಗಿ ಕಾರ್ಯ ನಿರ್ವಹಿಸಲು ಅವರಿಗೆ ದೊರೆಯುತ್ತಿಲ್ಲ. ಹಾಗಾಗಿ ಇಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪಕ್ಷದ ಅಧ್ಯಕ್ಷನೊಬ್ಬ ದೇಶದ ಆರ್ಥಿಕ ಅಭಿವೃದ್ಧಿ ಬೆಳವಣಿಗೆ ದರದ ಮಾನದಂಡವಾದ ಜಿ.ಡಿ.ಪಿ. ಅರ್ಥಾತ್  ರಾಷ್ಟ್ರದ ಒಟ್ಟು ಆಂತರೀಕ ಉತ್ಪನ್ನದ ದರದ ಕುಸಿತವನ್ನು ಟೆಕ್ನಿಕಲ್ ಎರರ್ ಅಂದರೆ ತಾಂತ್ರಿಕ ದೋಷ ಎಂದು ಹೇಳುವುದರ ಮೂಲಕ ತನ್ನ ಮೂರ್ಖತನವನ್ನು ಪ್ರದರ್ಶಿಸಿ ಜಾಗತಿಕ ಮಟ್ಟದಲ್ಲಿ ನೆಗೆಪಾಟಲಿಗೆ ಈಡಾಗಿದ್ದಾನೆ. ಜಿ.ಡಿ.ಪಿ. ಅಭಿವೃದ್ಧಿಯ ದರವೆಂದರೆ, ಗುಜರಾತಿ ಮಾರ್ವಾಡಿ ಅಂಗಡಿಯ ಲೆಕ್ಕದ ಪುಸ್ತಕದೊಳಗಿನ  ಅಂಕಿ ಅಂಶ ಎಂದು ಅಮೀತ್ ಷಾ ಭಾವಿಸಿದಂತಿದೆ.
ಭಾರತದ ಆರ್ಥಿಕ ಬೆಳವಣಿಗೆ ದರವನ್ನು 1951 ರಿಂದ 2017 ರವರೆಗೆ ಗಮನಿಸಿದಾಗ, ಸರಾಸರಿ ಬೆಳವಣಿಗೆ ದರವು ಶೇಕಡ 6.12 ರಷ್ಟು ಇದೆ. 1979 ರಲ್ಲಿ ಮತ್ತು 2010 ರಲ್ಲಿ ಶೇಕಡ 5.20 ರಷ್ಟು ಇದ್ದುದನ್ನು ಹೊರತು ಪಡಿಸಿದರೆ, 2017 ಮೊದಲ ಅರ್ಧವಾರ್ಷಿಕದಲ್ಲಿ ಶೇಕಡ 6.6 ರಷ್ಟು ಇದ್ದ ಬೆಳವಣಿಗೆ ದರವು ಎರಡನೇ ಅರ್ಧವಾಷಿಕದಲ್ಲಿ ಅಂದರೆ ಜುಲೈ ತಿಂಗಳ ನಂತರ ಶೇಕಡ 5.70 ಕ್ಕೆ ಕುಸಿಯುವುದರ ಮೂಲಕ ಭಾರತದ ಆರ್ಥಿಕತೆಯ ಬುನಾದಿಯು ಭದ್ರವಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. 2016 ರಲ್ಲಿ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರವ್ಮಣ್ಯಂ ಇದು ವಾಸ್ತವವಾಗಿ ದೇಶದ ಆರ್ಥಿಕತೆ ಪರೋಕ್ಷವಾಗಿ ಹೊಡೆತ ಬೀಳುವ ಕಾಯ್ದೆ ಎಂದು ಎಚ್ಚರಿಸಿದ್ದರು. ಅವರ ಮಾತನ್ನು ಮೀರಿ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರಕೆ ಸುಪ್ರೀಂ ಕೋರ್ಟ್ ತಪರಾಕಿ ಬಿದ್ದ ಮೇಲೆ ಸುಮ್ಮನಾಗಬೇಕಾಯಿತು. ನೋಟು ನಿಷೇಧ ವಿಷಯದಲ್ಲಿ ಇದೊಂದು ಮೂರ್ಖತನದ ಕ್ರಮ ಎಂದು ಎಚ್ಚರಿಸಿದ್ದ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಅವರನ್ನು ಅಪಮಾನಿಸಿ ಹುದ್ದೆ ತೊರೆಯುವಂತೆ  ಮಾಡಲಾಯಿತು. ದೇಶದ ಆರ್ಥಿಕತೆಗೆ ಸರಿಸುಮಾರು ಎಂಟು ಕೋಟಿ ಲಕ್ಷ ನಷ್ಟವನ್ಮ್ನಂಟು ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ನರೇಂದ್ರ ಮೋದಿಯವರು ಇದರಲ್ಲಿ ತಪ್ಪಿದ್ದರೆ ನನ್ನ ಸುಟ್ಟು ಹಾಕಿ ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದರು. ಇವತ್ತಿನ ಆರ್ಥಿಕತೆಯ ಹಿಂಜರಿತಕ್ಕೆ  ನೋಟು ನಿಷೇಧದ ಯೋಜನೆ ಪ್ರಮುಖ ಕಾರಣ ಎಂದು ಎಲ್ಲಾ ಆರ್ಥಿಕ ಅಧ್ಯಯನ ವರದಿಗಳು ಮತ್ತು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ತೊಘಲಕ್ ದರ್ಬಾರಿಗೆ ಬೇಸತ್ತು ದೇಶದ ಪ್ರಥಮ ನೀತಿ ಆಯೋಗ ( ಹಿಂದಿನ ಯೋಜನಾ ಆಯೋಗದ ಹೆಸರು) ಅಧ್ಯಕ್ಷ ಹಾಗೂ ಹೆಸರಾಂತ ಆರ್ಥಿಕ ತಜ್ಞ ಅವರಿಂದ್ ಪನಾಗ್ರಿಯ ತಮ್ಮ ಹುದ್ದೆ ತೊರೆದು ವಾಪಸ್ ಅಮೇರಿಕಾಕ್ಕೆ ತೆರಳಿದರು. ಜಾಗತಿಕ ಮಟ್ಟದಲ್ಲಿ ಅತಿಶ್ರೇಷ್ಠ ಅರ್ಥ ಶಾಸ್ತ್ರಜ್ಞರು ಎನಿಸಿಕೊಂಡ, ಅಮಾರ್ಥ್ಯ ಸೇನ್ ರಿಂದ ಹಿಡಿದು, ರಘುರಾಂ ರಾಜನ್, ಅರವಿಂದ ಪನಾಗ್ರಿಯ ಇಂತಹ ಭಾರತೀಯರ ಸೇವೆಯನ್ನು ಪಡೆಯಲಾದ ಮೋದಿ ಸರ್ಕಾರ ಇಂದು ಊರ್ಜಿತ್ ಪಟೇಲ್ ಎಂಬ ಭಟ್ಟಂಗಿ ಒಬ್ಬನನ್ನು ರಿಸರ್ವ್ ಗೌರ್ನರ್ ಸ್ಥಾನಕ್ಕೆ ತಂದು ಕೂರಿಸಿದೆ. ಈತ ಎಂತಹ ಎಡವಟ್ಟು ಗಿರಾಕಿಯೆಂದರೆ, ನೋಟು ನಿಷೇಧ ಯೋಜನೆಯಿಂದ ಬ್ಯಾಂಕಿಗೆ ವಾಪಸ್ ಬಂದ ಸಾವಿರ ಮತ್ತು ಐನೂರು ರೂಪಾಯಿ ಮೌಲ್ಯದ ನೋಟುಗಳ ಎಣಿಕೆ ಕಾರ್ಯ ನಡೆಯುತ್ತಿದೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ತಾನೊಬ್ಬ ಅಸಮರ್ಥ ಮತ್ತು ಅಯೋಗ್ಯ ಎಂಬುದನ್ನು ತೋರಿಸಿಕೊಂಡಿದ್ದಾನೆ. ರಿಸರ್ವ್ ಬ್ಯಾಂಕ್ ತಿರುಪತಿ ತಿಮ್ಮಪ್ಪನ ಹುಂಡಿ ಎಂದು ಈತ ಭಾವಿಸಿದಂತಿದೆ. ಹಾಗಾದರೆ ದೇಶದ ಜನತೆ ಹಳೆಯ ನೋಟುಗಳ ಬದಲಾಗಿ ಹೊಸನೊಟುಗಳನ್ನು ವಿನಿಮಯ ಮಾಡಿಕೊಂಡ ಅಂಕಿ ಅಂಶ ರಿಸರ್ವ್ಬ್ಯಾಂಕಿನ ಬಳಿ ಇಲ್ಲ ಎಂದರ್ಥ. ಹಾಗಾದರೆ, ಬ್ಯಾಂಕ್ ಸಾರ್ವಜನಿರ್ಕರಿಗೆ ಬಿಡುಗಡೆ ಮಾಡಿದ ಎರಡು ಸಾವಿರ ಮತ್ತು ಐನೂರು ಹೊಸ ನೋಟುಗಳ ಒಟ್ಟು ಮೌಲ್ಯವೆಷ್ಟು? ಇಂತಹ  ಪ್ರಹಸನಗಳನ್ನು ನೋಡುತ್ತಿದ್ದರೆ, ಇವರೆಲ್ಲರೂ ದೇಶವನ್ನು ದಿವಾಳಿ ಎಬ್ಬಿಸಲು ಪಣತೊಟ್ಟವರಂತೆ ಕಾಣುತ್ತಾರೆ.
ಇತ್ತೀಚೆಗೆ ಜಾರಿಗೆ ಬಂದ ಏಕರೂಪದ ತೆರಿಗೆ ಪದ್ಧತಿಯಲ್ಲಿ ಅಂದರೆ ಜಿ.ಎಸ್.ಟಿ. ಪದ್ದತಿಯಲ್ಲಿ ಇರುವ ನ್ಯೂನ್ಯತೆಗಳನ್ನು ಗಮನಿಸಿದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಗುಡಿ ಕೈಗಾರಿಕೆಗಳ ಮೇಲೆ ಮತ್ತು ಅಸಂಖ್ಯಾತ ಕುಶಲ ಕರ್ಮಿಗಳ ತಲೆಯ ಮೇಲೆ ಶಾಶ್ವತವಾಗಿ ಚಪ್ಪಡಿ ಕಲ್ಲು ಎಳೆಯಲು ನಿರ್ಧರಿಸಿದಂತೆ ಕಾಣುತ್ತಿದೆ. ವಾಸ್ತವವಾಗಿ ಸಮಾಜದಲ್ಲಿನ ಅಸಮಾನತೆಯನ್ನು  ಹೋಗಲಾಡಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ತೆರಿಗೆ ನಿಯಮದ ಆಯುಧವು ಈಗ  ಸರಕು ಮತ್ತು ಸೇವಾ ತೆರಿಗೆ ಹೆಸರಿನಲ್ಲಿ ರೂಪಾಂತರಗೊಂಡು ಬಡವ ಮತ್ತು ಬಲ್ಲಿದ ಎಂಬ ಭೇದ ಭಾವವಿಲ್ಲದೆ ಇಬ್ಬರಿಗೂ ಸಮಾನವಾಗಿ ಬಳಕೆಯಾಗುತ್ತಿದೆ. ರಸ್ತೆಯ ಬದಿಯ ಮರದ ನೆರಳಿನಲ್ಲಿ ಕುಳಿತು ಚರ್ಮದ ಚಪ್ಪಲಿ ತಯಾರಿಸುವ ಚಮ್ಮಾರನಿಗೆ ವಿಧಿಸುವ ತೆರಿಗೆಯನ್ನುಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚರ್ಮದ ಚಪ್ಪಲಿ ತಯಾರಿಸು ಬಾಟಾ ದಂತಹ ಬೃಹತ್ ಕಂಪನಿಗೂ ವಿಧಿಸಲಾಗುತ್ತಿದೆ. ಉತ್ಪಾದನಾ ವೆಚ್ಚದಲ್ಲಿ ಕಡಿಮೆಯಾಗುವ ಕಂಪನಿಯ ಜೊತೆ ಬಡ ಚಮ್ಮಾರನು ತನ್ನ ಉತ್ಪನ್ನಗಳ ಜೊತೆ ಸ್ಪರ್ಧಿಸುವ ಬಗೆ ಹೇಗೆ? ಕೈ ಉತ್ಪನ್ನಗಳಿಗೆ ಮತ್ತು ಗುಡಿ ಕೈಗಾರಿಕೆಗಳಿಗೂ ಹಾಗೂ ಬಹು ರಾಷ್ಟ್ರೀಯ ಕಂಪನಿಗಳ ಉತ್ಪಾದನೆಗಳಿಗೂ ಸಮಾನ ರೀತಿಯಲ್ಲಿ ತೆರಿಗೆ ವಿಧಿಸುವುದಾದರೆ, ಬಡವರು ಬದುಕು ಮಾರ್ಗ ಯಾವುದು?
ಕಳೆದ ಮಂಗಳ ವಾರ ಧಾರವಾಡಕ್ಕೆ ಆಗಮಿಸಿದ್ದ ಪ್ರಸನ್ನರವರು ನೂತನ ತೆರಿಗೆ ಪದ್ಧತಿಯಲ್ಲಿ ಬಡವರನ್ನು ಮತ್ತು ಕುಶಲ ಕರ್ಮಿಗಳನ್ನು ಹಾಗೂ ಅವರ ಕೈ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಹೇಗೆ ಜಾಣ್ಮೆಯಿಂದ ದೂರವಿಟ್ಟಿದೆ ಎಂಬುದನ್ನು ಸಮಾನ ಮನಸ್ಕ ಗೆಳೆಯರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ 20 ಲಕ್ಷದ ರೂಪಾಯಿನ ವಹಿವಾಟಿನವರೆಗೆ ವಿನಾಯಿತಿ ಘೋಷಿಸಿದೆ. ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಕ್ರಮ ಎನಿಸಿದರೂ, ಅದರೊಳಗೆ ಗುಡಿಕೈಗಾರಿಕೆಗಳನ್ನು ನಾಶಗೊಳಿಸುವ ಹುನ್ನಾರ ಅಡಗಿದೆ. ತಾನಿರುವ ಸ್ಥಳದಲ್ಲಿ ಚಪ್ಪಲಿ, ಅಗರಬತ್ತಿ, ಸಾಬೂನು, ಅಥವಾ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಉತ್ಪಾದಕ 20 ಲಕ್ಷ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಅವನು ಅವುಗಳನ್ನು ನೆರೆಯ ಜಿಲ್ಲೆಗಳಿಗೆ ಅಥವಾ ರಾಜ್ಯಗಳಿಗೆ ತೆರಳಿ ಮಾರಾಟ ಮಾಡಬೇಕು. ಆದರೆ, ನೂತನ ತೆರಿಗೆ ನಿಯಮದ ಪ್ರಕಾರ ಜಿ.ಎಸ್.ಟಿ. ತೆರಿಗೆ ನೊಂದಣಿ ಸಂಖ್ಯೆಯಿಲ್ಲದೆ, ಯಾವುದೇ ರೀತಿಯ  ವಸ್ತುಗಳನ್ನು ರೈಲು ಅಥವಾ ಲಾರಿಗಳಲ್ಲಿ ಪಾರ್ಸಲ್ ಮೂಲಕ ಕಳಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸರಕು ಸಾಗಾಣಿಕೆ ಸಂಸ್ಥೆಗಳು ಇಂತಹ ವಸ್ತುಗಳನ್ನು ಸ್ವೀಕರಿಸುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಸಣ್ಣ ಉತ್ಪಾದಕ ತನ್ನ ವಸ್ತುಗಳನ್ನು ಮಾರಾಟ ಮಾಡುವ ಬಗೆ ಹೇಗೆ?

ಮಹಾತ್ಮ ಗಾಂಧೀಜಿಯವರ ಆಶಯಕ್ಕೆ ತಕ್ಕಂತೆ ಭಾರತದ ಗುಡಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸಂವಿಧಾನ ಬದ್ಧವಾಗಿ ದೇಶದ ವಿವಿಧೆಡೆ ಖಾದಿ ಗ್ರಾಮೋದ್ಯೋಗ ಕೇಂದ್ರಗಳನ್ನು ತೆರಲಾಯಿತು. ಇವುಗಳ ಮೂಲಕ ತರಭೇತಿ, ಆರ್ಥಿಕ ಸಹಾಯ ನೀಡುವುದರ ಮೂಲಕ ಕೋಟ್ಯಾಂತರ ಸಾಮಾನ್ಯ ಜನರಿಗೆ ಖಾದಿ ಹಾಗೂ ಇತರೆ ಸಣ್ಣ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಯಿತು. ಇದೀಗ  ಜಿ.ಎಸ್.ಟಿ. ತೆರಿಗೆಯಲ್ಲಿ ಖಾದಿಯನ್ನು ಹೊರತು ಪಡಿಸಿ, ಇತರೆ ಉತ್ಪನ್ನಗಳಿಗೆ ಜೇನುತುಪ್ಪ, ಹಪ್ಪಳ, ಉಪ್ಪಿನಕಾಯಿ, ಅಗರಬತ್ತಿ, ಸೋಪು, ಚರ್ಮ ಮತ್ತು ಸೆಣಬು, ತೆಂಗಿನ ನಾರು ಇಂತಹ ವಸ್ತುಗಳಿಂದ ತಯಾರಿಸಿದ ಗೃಹ ಉತ್ಪನ್ನಗಳಿಗೆ ತೆರಿಗೆ ವಿಧಿಸಲಾಗಿದೆ. ಈವರೆಗೆ ಚರಕದ ಹಿಂದೆ ಕುಳಿತು ನೂಲು ನೇಯುವ ಗಾಂಧಿಯ ಚಿತ್ರವನ್ನು ನೋಡಿಕೊಂಡು ಬಂದಿದ್ದ ಭಾರತೀಯರಿಗೆ, ವರ್ಷ ಇದೇ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕ್ಯಾಲೆಂಡರ್ ಮತ್ತು ದಿನಚರಿ ಪುಸ್ತಕಗಳಲ್ಲಿ ಚರಕದ ಜೊತೆ ಮೋದಿಯ ಚಿತ್ರವನ್ನು ನೋಡುವಂತಾಯಿತು. ದೇಶದ ಪ್ರಧಾನಿಗೆ  ಚರಕದ ಜೊತೆ ಕುಳಿತು ಚಿತ್ರ ತೆಗೆಸಿಕೊಳ್ಳುವಾಗ ಇರುವ ಕಾಳಜಿ, ಅದರ ಉತ್ನನ್ನಗಳ ಕುರಿತು ಏಕಿಲ್ಲ? ಚರಕ ಎನ್ನುವುದು  ಕೇವಲ ಒಂದು ಒಂದು ಕಟ್ಟಿಗೆಯ ಸಾಧನ ಮಾತ್ರವಲ್ಲ, ಅದು ದೇಶದ ಶ್ರಮಿಕರ ಮತ್ತು ಅವರ ಕಾಯಕ ಹಾಗೂ ಅವರ ಬೆವರ ಹನಿಗಳ ಪ್ರತಿಮೆ ಕೂಡ ಹೌದು ಜೊತೆಗೆ ಸ್ವಾಭಿಮನ ಮತ್ತು ಸ್ವತಂತ್ರದ ಸಂಕೇತವೂ ಕೂಡ ಹೌದು.
( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣ ಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ