ಗುರುವಾರ, ಫೆಬ್ರವರಿ 22, 2018

ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಒಂದಿಷ್ಟು ನೆನಪುಗಳು


ಕರ್ನಾಟಕ ಕಂಡ ಅಪರೂಪದ ಜನಪ್ರತಿನಿಧಿರೈತ ನಾಯಕ ಹಾಗೂ ಸಜ್ಜನ ವ್ಯಕ್ತಿತ್ವದ ಹೋರಾಟಗಾರ ಕೆ.ಎಸ್. ಪುಟ್ಟಣ್ಣಯ್ಯನವರ ನಿಧನದೊಂದಿಗೆ ರಾಜ್ಯದಲ್ಲಿ ರೈತ ಸಂಘದ ಚಳುವಳಿಯ ಸೈದ್ಧಾಂತಿಕ ಹೋರಾಟವು ಒಂದು ರೀತಿಯಲ್ಲಿ ತಾರ್ಕಿಕ ಅಂತ್ಯ ಕಂಡಂತಾಗಿದೆ. ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ನಂತರ ಮುಂದುವರಿದಿದ್ದ ರೈತಸಂಘಟನೆಯ ಹೋರಾಟವು ಕೆ.ಎಸ್. ಪುಟ್ಟಣ್ಣಯ್ಯನಂತಹ ನಾಯಕರ ನಿರ್ಗಮನದ ನಂತರವೂ ರಾಜ್ಯದಲ್ಲಿ ಮುಂದುವರಿಯಬಹುದು ಅಥವಾ ಸಂಘಟನೆಗೆ ಹೊಸ ನಾಯಕರೂ  ಹುಟ್ಟಿ ಬರಬಹುದು. ಆದರೆ, ಇವೆಲ್ಲವೂ ನಿಸ್ವಾರ್ಥದಿಂದ ಕೂಡಿದ ಹಾಗೂ ರೈತ ಸಮುದಾಯದ ಸುಖ ದುಃಖಗಳಿಗೆ ಸ್ಪಂದಿಸಬಲ್ಲ ಹೋರಾಟಗಳಾಗುತ್ತವೆ ಎಂಬುದರ ಕುರಿತು ನನಗೆ ಯಾವುದೇ ರೀತಿಯ ನಂಬಿಕೆಯಿಲ್ಲ.  1980 ರಲ್ಲಿ ಆರಂಭವಾದ ರೈತ ಹೋರಾಟದ ದಿನಗಳಿಂದ ಹಿಡಿದು  2004 ರವರೆಗೆ ಅಂದರೆ, ಪ್ರೊ.ಎಂ.ಡಿ ನಂಜುಂಡಸ್ವಾಮಿಯವರು ನಿಧನರಾಗುವವರೆಗೆ ರೈತ ಸಂಘÀಟನೆಯ ಅನೇಕ ನಾಯಕರ ಜೊತೆ ಒಡನಾಡುತ್ತಾ, ಚಳುವಳಿಯಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳುತ್ತಾ ಬಂದವರಲ್ಲಿ ನಾನೂ ಒಬ್ಬನಾಗಿದ್ದೆ. . ಅದೇ ರೀತಿ   ನಂತರದ ದಿನಗಳಲ್ಲಿ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಎರಡು ಸಂಘಟನೆಗಳ ನಾಯಕರ ಸ್ವಾರ್ಥ, ಕಪಟತನ ಇವುಗಳನ್ನು ನೋಡಿ ಬೇಸತ್ತು ಅವುಗಳ ಜೊತೆಗಿನ ಎಲ್ಲಾ ಭಾವನಾತ್ಮಕ ಸಂಬಂಧಗಳನ್ನು ಕಳೆದು ಕೊಂಡವರಲ್ಲಿ ಸಹ ನಾನೂ ಒಬ್ಬನಾಗಿದ್ದೇನೆ.
ಕರ್ನಾಟಕ ರಾಜ್ಯ ರೈತ ಸಂಘಟನೆಗೆ  ಆರಂಭದ ದಿನಗಳಿಂದಲೂ, ಆರ್ಥಿಕವಾಗಿ, ನೈತಿಕವಾಗಿ ಹೋರಾಟದ ಬಲ ತುಂಬಿದ್ದು ಮಾತ್ರವಲ್ಲದೆಇಡೀ ನಾಡು ರೈತ ಸಂಘದತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಮಂಡ್ಯ ಜಿಲ್ಲೆಯ ರೈತನಾಯಕರು ವಹಿಸಿದ ಪಾತ್ರ ನಿರ್ಣಾಯಕವಾದುದು. ಮಂಡ್ಯ ಜಿಲ್ಲೆಗೆ ರೈತ ಹೋರಾಟವನ್ನು ವಿಸ್ತರಿಸುವಲ್ಲಿ ಶ್ರಮಿಸಿದವರೆಂದರೆ, ವಕೀಲರಾದ ಹನಕೆರೆಯ  ಹೆಚ್. ಶ್ರೀನಿವಾಸ್ಹೊಸ ಬೂದನೂರು ಗ್ರಾಮದ ಎಂ.ಶ್ರೀನಿವಾಸ್, ಕೊಪ್ಪಗ್ರಾಮದ ಕೆ.ಕೃಷ್ಣ, ಕೋಣಸಾಲೆ ಗ್ರಾಮದ ನರಸರಾಜು, ವರಗೇರಳ್ಳಿಯ ಅಶೋಕ್ ಮತ್ತು  ಬೂತನ ಹೊಸೂರು ಗ್ರಾಮದ ಎಸ್.ಡಿ. ಜಯರಾಂ ಇವರು ಪ್ರಮುಖರುಆದರೆ, ರೈತಸಂಘದ ದುರಂತವೆಂಬಂತೆ ಕಳೆದ ಮೂರೂವರೆ ದಶಕಗಳ ಕಾಲ ನಿರಂತರವಾಗಿ ದುಡಿದ ಮಂಡ್ಯ ಜಿಲ್ಲೆಯ ರೈತ ಸಂಘಟನೆಯ ಬಹುತೇಕ ನಾಯಕರು ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ. 1981 ಡಿಸಂಬರ್ ತಿಂಗಳಿನಲ್ಲಿ ಪ್ರಥಮವಾಗಿ ನೆರೆಯ ಹಾಸನ ಮತ್ತು ಶಿವಮೊಗ್ಗ ಮೂಲಕ ರೈತ ಸಂಘದ ಹೋರಾಟವನ್ನು ಬರಮಾಡಿಕೊಂಡು ಅದರ ಸಂಘಟನಾ ಕಾರ್ಯದರ್ಶಿಯಾಗಿ ದುಡಿದ ಎಸ್.ಡಿ. ಜಯರಾಂ ಎಂಬ ನಾಯಕ ತನ್ನ 44 ನೇಯ ವಯಸ್ಸಿಗೆ ಇಪ್ಪತ್ತು ವರ್ಷಗಳ ಹಿಂದೆ ನಿಧನರಾದರು. ( ಕೆ.ಎಸ್.ಪುಟ್ಟಣ್ಣಯ್ಯನವರನ್ನು 1983 ರಲ್ಲಿ ರೈತ ಸಂಘಕ್ಕೆ ಕರೆದುಕೊಂಡು ಬಂದವರಲ್ಲಿ ಎಸ್.ಡಿ.ಜಯರಾಂ ಪ್ರಮುಖರು) ನಂತರ ಏಳೆಂಟು ವರ್ಷಗಳ ಹಿಂದೆ 1981 ರಿಂದ ಮನೆ, ಮಠವನ್ನು ತೊರೆದು ನಿರಂತರವಾಗಿ ರೈತಸಂಘದ ಚಳುವಳಿ ಹಾಗೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಮದ್ದೂರು ತಾಲ್ಲೂಕು ವರೆಗೇರಳ್ಳಿ ಅಶೋಕ ಎಂಬ ಗೆಳೆಯ ಮೃತಪಟ್ಟನು.
ಇವೆರೆಡು ಸಾವುಗಳನ್ನು ಮಂಡ್ಯ ಹಾಗೂ ರಾಜ್ಯ ರೈತ ಸಂಘಟನೆಗಳು ಜೀರ್ಣಿಸಿಕೊಳ್ಳುವ ಮೊದಲೇ ಕಳೆದ ಜನವರಿ ತಿಂಗಳು 24 ರಂದು ಬೆಸಗರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದು, ರೈತ ಹೋರಾಟಕ್ಕಾಗಿ ಅವಿವಾಹಿತನಾಗಿ ಉಳಿದು ದುಡಿಯುತ್ತಿದ್ದ ಹಾಗೂ ರಾಜ್ಯ ರೈತಸಂಘದ ಉಪಾಧ್ಯಕ್ಷನಾಗಿದ್ದ ಕೋಣಸಾಲೆ ನರಸರಾಜು ಹೃದಯಾಫಘಾತದಿಂದ ನಿಧನನಾದನು. ಇದಕ್ಕೂ ಮುನ್ನ ನನ್ನೂರಿನ ಕೆ.ಕೃಷ್ಣ ಕೊಪ್ಪ ಅವರು ಕಳೆದ ನವಂಬರ್ ತಿಂಗಳಲ್ಲಿ ನಿಧನರಾದರು.. ಕೆ.ಎಸ್. ಪ್ಮಟ್ಟಣ್ಣಯ್ಯನವರ ಆಪ್ತ ಬಳಗದಲ್ಲಿ ಒಬ್ಬನಾಗಿದ್ದ ನರಸರಾಜು ನಿಧನದಿಂದ ತೀರಾ ನೊಂದಿದ್ದ ಕೆ.ಎಸ್.ಪ್ಮಟ್ಟಣ್ಣಯ್ಯ ಒಂದು ರೀತಿಯಲ್ಲಿ ಏಕಾಂಗಿತನದ ನೋವನ್ನು ಅನುಭವಿಸುತ್ತಿದ್ದರು. ಕೆ.ಎಸ್. ಪುಟ್ಟಣ್ಣಯ್ಯನವರು ರೈತ ಸಂಘಕ್ಕೆ ಬರುವ ಮುಂಚಿನ ದಿನಗಳಿಂದಲೂ ನನಗೆ ಪರಿಚಿತರು.  “ಅಣ್ಣಯ್ಯಾಎಂದು ಅವರು ನನ್ನನ್ನು ಸಂಬೋಧಿಸುತ್ತಿದ್ದರೆ, ನಾನು ಅವರನ್ನು ಪುಟ್ಟಣ್ಣ ಎಂದು ಸಂಬೋಧಿಸುತ್ತಿದ್ದೆಕಳೆದ ಮೂರು ದಶಕಗಳ ಕಾಲ ತಮ್ಮ ಜೊತೆ ಹೋರಾಟದಲ್ಲಿ ಕೈಜೋಡಿಸಿದ್ದ  ಶ್ರೀರಂಗಪಟ್ಟಣ ತಾಲ್ಲೂಕು ರೈತ ಸಂಘಟನೆಯ ನಾಯಕ ನಂಜುಂಡೇಗೌಡಇತ್ತೀಚೆಗೆ ರಾಜಕೀಯ ಆಕಾಂಕ್ಷೆಯಿಂದ ಏಕಾಏಕಿ ರೈತಸಂಘವನ್ನು ತೊರೆದು ಬಿ.ಜೆ.ಪಿ. ಪಕ್ಷವನ್ನು ಸೇರಿದ್ದು ಅವರಿಗೆ ನೋವು ತಂದಿತ್ತು. ಜೊತೆಗೆ ಗೆಳೆಯ ನರಸರಾಜುವಿನ ಅಗಲಿಕೆ ಹಾಗೂ ಇತ್ತೀಚೆಗೆ ಪದೇ ಪದೇ ಕೈ ಕೊಡುತ್ತಿದ್ದ ಅವರ ಆರೋಗ್ಯ ಇವೆಲ್ಲವೂ ಪುಟ್ಟಣ್ಣಯ್ಯನವರನ್ನು ಚಿಂತೆಗೀಡು ಮಾಡಿದ್ದವು. ಮೈಸೂರು ನಗರದ ವಿಜಯನಗರದ ಮೂರನೆಯ ಹಂತದಲ್ಲಿ ಬಸವರಾಜು ಸರ್ಕಲ್ ಹತ್ತಿರ ಅವರ ಮನೆಯ ಸಮೀಪ ಕೇವಲ ಕೂಗಳತೆಯಲ್ಲಿ ನನ್ನ ಮಗನ ಮನೆ ಇರುವುದರಿಂದ ಮೈಸೂರಿಗೆ ಹೋದ ಸಂದರ್ಭದಲ್ಲಿ  ಖಾಸಾಗಿ ಭೇಟಿಯಾಗಿ ಮಾತನಾಡುತ್ತಿದ್ದೆ. ಸಂದರ್ಭಗಳಲ್ಲಿ ಯಾವುದೇ ಮುಚ್ಚು ಮರೆಯಿಲ್ಲದೆ ತಮ್ಮ ನೋವು, ಕಷ್ಟ ಸುಖಗಳನ್ನು ಪುಟ್ಟಣ್ಣಯ್ಯನವರು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಇಂತಹ  ಸಹೃದಯರ ಅನಿರೀಕ್ಷಿತ ನಿರ್ಗಮನ ನನ್ನಂತಹವರ ಪಾಲಿಗೆ ತುಂಬಲಾರದ ಶೂನ್ಯ ಎನಿಸತೊಡಗಿದೆ. ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ನಂತರ ಅವರಷ್ಟೇ ಪ್ರಭಾವಶಾಲಿಯಾಗಿ ರೈತಸಂಘವನ್ನು ಮುನ್ನಡೆಸಿದ ಕೀರ್ತಿ ಕೆ.ಎಸ್.ಪುಟ್ಟಣ್ಣಯ್ಯನವರದು.
ಮಂಡ್ಯ ಜಿಲ್ಲೆಯಜನರೆಂದರೆ. ಒರಟುತನಕ್ಕೆ ಮತ್ತು ನೇರಾವಾದ ನಡೆ ಮತ್ತು ನುಡಿಗೆ ಹೆಸರುವಾಸಿ ನಿಜ. ಆದರೆ, ಇದರ ಜೊತೆಗೆ  ಅವರು ಅದ್ದೂರಿಯ ಆತಿಥ್ಯಕ್ಕೆ ಅದರಲ್ಲೂ ವಿಶೇಷವಾಗಿ ಮಾಂಸಹಾರದ ಭೋಜನಕ್ಕೆ ಪ್ರಸಿದ್ಧಿಯಾದವರು. ಅದರಲ್ಲೂ ವಿಶೇಷವಾಗಿ ಪಾಂಡುವಪುರದ ರೈತರು ಆತಿಥ್ಯ ನೀಡುವುದರಲ್ಲಿ ಎತ್ತಿದ ಕೈ. ನಾನು ಮಂಡ್ಯದಲ್ಲಿ ಇದ್ದ ದಿನಗಳಲ್ಲಿ ಪ್ರತಿಭಾನವಾರ ಪುಟ್ಟಣ್ಣಯ್ಯನವರ ಊರಾದ ಕ್ಯಾತನಹಳ್ಳಿ ಅಥವಾ ಪಾಂಡುವಪುರಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಜನತಾ ಕ್ಲಿನಿಕ್ ನಡೆಸುತ್ತಿದ್ದ ಕ್ಯಾತನಹಳ್ಳಿಯ ನನ್ನ ಆತ್ಮೀಯ ಮಿತ್ರರಾದ ಡಾ.ಕೆ.ಶ್ರೀನಿವಾಸ್ ಅಥವಾ ಅದೇ ಊರಿನ ಪುಟ್ಟಣ್ಣಯ್ಯನವರ ಕೈಗೆ ಸಿಕ್ಕರೆ ಭರ್ಜರಿ ಭೋಜನ ಕಟ್ಟಿಟ್ಟ ಬುತ್ತಿ ಎನ್ನುವ ಹಾಗಿತ್ತು.  ಭಾರತದ ಎಲ್ಲಾ ಪ್ರದೇಶಗಳಲ್ಲಿ ಅನ್ನ, ಚಪಾತಿಯ ಮುಖ್ಯ ಆಹಾರವಾಗಿದ್ದು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಪಲ್ಯ ಇವುಗಳು ಸೈಡ್ ಐಟಂ ಗಳಾದರೆ, ಮಂಡ್ಯ ಗೌಡರ ಮಾಂಸಹಾರದ ಭೋಜನದಲ್ಲಿ ಅನ್ನ ಮತ್ತು ಮುದೆ ಇತ್ಯಾದ್ದಿ ಸೈಡ್ ಐಟಂಗಳಾಗಿ,  ಮಾಂಸವು ಮುಖ್ಯ ಆಹಾರವಾಗಿರುವುದು ವಿಶೇಷ. ಇಂತಹ ಪದ್ಧತಿಯ ಆತಿಥ್ಯವನ್ನು ನಿರಂತರವಾಗಿ ನೀಡುತ್ತಾ ಬಂದವರಲ್ಲಿ ಪುಟ್ಟಣ್ಣಯ್ಯ ಮತ್ತು ಗೆಳೆಯರನ್ನು ಮರೆಯಲಾಗದು. ಕ್ಯಾತನಹಳ್ಳಿಗೆ ಹೋದಾಗ ಯಾವುದೋ ಅರಳಿಕಟ್ಟೆಯ ಮೇಲೆ ಅಥವಾ ಕಾಲುವೇ ಏರಿಯ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತಾ ಕೂರುತ್ತಿದ್ದ ಪುಟ್ಟಣ್ಣಯ್ಯನವರನ್ನು ನಾವು ಕಾಣಬಹುದಿತ್ತು.
ಕೆ.ಎಸ್. ಪ್ಮಟ್ಟಣ್ಣಯ್ಯನವರು ಕ್ಯಾತನಹಳ್ಳಿಯ ಸಾಕಷ್ಟು ಸಿರಿವಂತವಾದ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಮಂಡ್ಯ ನಗರಕ್ಕಿಂತ ಮೈಸೂರು ನಗರಕ್ಕೆ ಅವರ ಹುಟ್ಟೂರು ಕ್ಯಾತನಹಳ್ಳಿ ಹತ್ತಿgವಿದ್ದುದರಿಂದ ಅವರು ಪ್ರೌಢಶಾಲೆಯ ಶಿಕ್ಷಣದ  ನಂತರ ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಡಿ.ಬನುಮಯ್ಯ ಕಾಲೇಜಿನಲ್ಲಿ ಬಿ.. ಪದವಿ ಗಳಿಸಿ, ವಾಪಸ್ ಊರಿಗೆ ತೆರಳಿ ವ್ಯವಸಾಯದಲ್ಲಿ ನಿರತರಾಗಿದ್ದರು.   ಪೌರಾಣಿಕ ನಾಟಕ, ಜಾನಪದ ಕಲೆಗಳು ಮತ್ತು ಕಬಡ್ಡಿ ಕ್ರೀಡೆಯ ಕುರಿತು ಅಪಾರ ಆಸಕ್ತಿ ಇದ್ದ ಪುಟ್ಟಣ್ಣಯ್ಯನವರ ತನ್ನೂರಿನಲ್ಲಿ ಯುವ ರೈತ ಸಂಘವನ್ನು ಕಟ್ಟಿಕೊಂಡು  ಸದಾ ಕ್ರಿಯಾಶೀಲರಾಗಿದ್ದರು. (ಕುರುಕ್ಷೇತ್ರ ನಾಟಕದಲ್ಲಿ ಪುಟ್ಟಣ್ಣಯ್ಯ ಅಭಿನಯಿಸುತ್ತಿದ್ದ ದುರ್ರೋಧನನ ಪಾತ್ರವನ್ನು ನಾವ್ಯಾರೂ ಮರೆಯುವಂತಿಲ್ಲ) 1970 ದಶಕದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಯುವಕರು ಸಾಮಾಜಿಕ ನಾಟಕಗಳ ಪ್ರದರ್ಶನದ ನೆಪದಲ್ಲಿ ಮಂಡ್ಯ ನಗರದಿಂದ ರಂಗಭೂಮಿಯ ನಟಿಯರನ್ನು ಕರೆತಂದು, ಸಿನಿಮಾ ಹಾಡುಗಳ ಕ್ಯಾಸೆಟ್ ಹಾಕಿಕೊಂಡು ಕುಣಿಯುತ್ತಿದ್ದ ದಿನಗಳಲ್ಲಿ ಕೆಟ್ಟ ಪರಂಪರೆಗೆ ಅಂತ್ಯ ಹಾಡಬೇಕೆಂದು ನಿರ್ಧರಿಸಿ, 1976 ರಲ್ಲಿ ನನ್ನೂರು ಕೊಪ್ಪದಲ್ಲಿ ನಾವು ಒಂದಿಷ್ಟು ಸಮಾನ ಮನಸ್ಕ ಗೆಳೆಯರು ಪ್ರತಿ ವರ್ಷ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದೆವುಪುಟ್ಟಣ್ಣಯ್ಯನವರು ತನ್ನೂರಿನ ನಾಟಕ ತಂಡವನ್ನು ಕರೆತಂದುಅಲ್ಲೇ ಕುಂತವ್ರೆಎಂಬ ಹೆಸರಿನ ಅಸ್ಪøಶ್ಯತೆಯ ಕುರಿತು ಜಾಗೃತಿ ಮೂಡಿಸುವ ನಾಟಕವೊಂದನ್ನು ಪ್ರದರ್ಶಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಇಂತಹ ಕ್ರಿಯಾಶೀಲ ಹಾಗೂ ಸದಾ ಜನಪರವಾಗಿ ಆಲೋಚಿಸುತ್ತಿದ್ದ ಕೆ.ಎಸ್. ಪುಟ್ಟಣ್ಣ ಎರಡು ಬಾರಿ ಶಾಸಕರಾಗಿ ವಿಧಾನ ಸಭೆಯಲ್ಲಿ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಮತ್ತು  ಹೇಗೆ ಮಾತನಾಡಬೇಕು ಎಂಬುದರ ಕುರಿತು ಎಲ್ಲರಿಗೂ ಮಾದರಿಯಾಗಿದ್ದರು.
ನಾನು ಬಲ್ಲಂತೆ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರಲ್ಲಿ ಒಬ್ಬ ಅದ್ಭುತ ಆಲೋಚನಾಗಾರ ಮತ್ತು ಸಂಘಟನಕಾರನಿದ್ದ. ಅದೇ ರೀತಿಯಲ್ಲಿ ಅವರೊಳಗೆ ವಿಧ್ವಂಸಕನೂ ಇದ್ದ. ಒಂದು ಸಂಘಟನೆಯಲ್ಲಿ ನಾಯಕನಾದವನಿಗೆ ಇರಬೇಕಾದ ತಾಳ್ಮೆ ಅಥವಾ ವಿವೇಚನೆ ಅವರಲ್ಲಿ ಇರಲಿಲ್ಲ. ಆರಂಭದ ದಿನಗಳಲ್ಲಿ ಎಂ.ಡಿ. ಸುಂದರೇಶ್, ಹಾಸನದ ಮಂಜುನಾಥ ದತ್ತ ಮತ್ತು ಶಿವಮೊಗ್ಗದ ಕೆ.ಟಿ.ಗಂಗಾಧರ್ ಇವರ ಮಾತಿಗೆ ಮನ್ನಣೆ ನೀಡುತ್ತಿದ್ದ ನಂಜುಂಡಸ್ವಾಮಿಯವರು ನಂತರ ದಿನಗಳಲ್ಲಿ ಸುಂದರೇಶ್ ಅವರ ನಿಧನ ಮತ್ತು ದತ್ತ ಹಾಗೂ ಗಂಗಾಧರ್ ಇವರು ರೈತ ಸಂಘದಿಂದ ನಿರ್ಗಮಿಸಿದ ನಂತರ ಒಂದು ರೀತಿಯಲ್ಲಿ ಸರ್ವಾಧಿಕಾರಿ ಮನೋಭಾವ ಬೆಳಸಿಕೊಂಡಿದ್ದರು. ಚುನಾವಣೆ ವಿಷಯದಲ್ಲಿ ಹಾಗೂ ಹಣಕಾಸು ಹಾಗೂ ಇನ್ನಿತರೆ ವಿಷಯಗಳಲ್ಲಿ ಉಂಟಾದ ಬಿರುಕು ರೈತ ಸಂಘ ಒಡೆಯಲು ಕಾರಣವಾಯಿತು. ಇಂತಹ ಸ್ಥಿತಿಯಲ್ಲಿ ನಂಜುಂಡಸ್ವಾಮಿಯವರಿಂದ ಸಿಡಿದು, ಅವರಷ್ಟೇ ಪ್ರಬಲವಾಗಿ ರೈತ ಸಂಘಟನೆಯನ್ನು ಕಟ್ಟಿ ಮುನ್ನಡೆಸಿದವರಲ್ಲಿ ಪುಟ್ಟಣ್ಣಯ್ಯನವರು ಪ್ರಮುಖರು.

ಕೆ.ಎಸ್. ಪುಟ್ಟಣ್ಣಯ್ಯ ತಮ್ಮ ಗುರು ಪ್ರೊ. ನಂಜುಂಡಸ್ವಾಮಿಯವರಿಂದ ವೈಚಾರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರೂ ಸಹ ಎಂದಿಗೂ ಅವರ ಕುರಿತು ಖಾಸಾಗಿ, ಸಾರ್ವಜನಿಕವಾಗಿ ಕೆಟ್ಟ ಮಾತುಗಳನ್ನಾಡಿದವರಲ್ಲ. ನಂಜುಂಡಸ್ವಾಮಿ ನಿಧನರಾದ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಪುಟ್ಟಣ್ಣಯ್ಯನವರು ರಾಜರಾಜೆಶ್ವರಿ ನಗರದ ಅವರ ಮನೆಗೆ ಹೋದಾಗ, ನಂಜುಂಡಸ್ವಾಮಿಯವರ ಮಕ್ಕಳು ಮತ್ತು ಅವರ ಪತ್ನಿ ನಡೆದುಕೊಂಡ ರೀತಿಯನ್ನು ಯಾವೊಬ್ಬ ರೈತ ಸಂಘದ ಕಾರ್ಯಕರ್ತ ಇವೊತ್ತಿಗೂ ಕ್ಷಮಿಸಲಾರ. ಆದರೆ, ಪುಟ್ಟಣ್ಣಯ್ಯನವರು ಅಂತಹ ಅಪಮಾನಗಳನ್ನು ಮರೆತಿದ್ದರುಪ್ರೊಪೆಸರ್  ನಿಧನಾನಂತರ ರೈತ ಸಂಘಟನೆಗಳು ಒಗ್ಗೂಡಬೇಕು, ರೈತ ಸಮುದಾಯಕ್ಕೆ ಒಳಿತಾಗಬೇಕು ಎಂದು ಹಂಬಲಿಸಿದ ಅವರು, ಎಲ್ಲಾ ಪ್ರಗತಿ ಪರ ಸಂಘಟನೆಗಳ ಜೊತೆ ಕೈ ಜೋಡಿಸುತ್ತಾ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕೆಟ್ಟು ಕೆರ ಹಿಡಿದಿರುವ ಇವೊತ್ತಿನ ಸಾರ್ವಜನಿಕ ಬದುಕು, ರಾಜಕೀಯ ಅಥವಾ ಸಾಮಾಜಿಕ ಹೋರಾಟದಲ್ಲಿ ಪುಟ್ಟಣ್ಣಯ್ಯನಂತಹ ಅಸಾಮಾನ್ಯ ಹೋರಾಟಗಾರನನ್ನು ಹುಡುಕಿ ತರುವುದು ನಿಜಕ್ಕೂ ಕಷ್ಟದ ಸಂಗತಿ. ಇನ್ನು ಮುಂದೆ ಕನಾಟಕದ ಸಾಮಾಜಿಕ ಹೋರಾಟದ ಇತಿಹಾಸದಲ್ಲಿ ಪ್ರೊ.ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯನಂತಹ ಹೋರಾಟಗಾರರು ದಂತೆ ಕಥೆಗಳಾಗಿ  ಉಳಿದುಕೊಳ್ಳಬಲ್ಲರು.
( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣ ಬರಹ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ