Friday, 2 March 2018

ವಿದರ್ಭದ ವಿಧವೆಯರ ನೋವಿನ ಕಥನಗಳು


ಕಳೆದ  ಹದಿನೈದು ದಿನಗಳ ಅವಧಿಯಲ್ಲಿ ನಾನು ಓದಿದ ಒಂದು ಲೇಖನ ಮತ್ತು ಒಂದು ಕೃತಿ ಇವುಗಳು ನಾವು ಈವರೆಗೆ ಯೋಚಿಸಿದ ಜಗತ್ತನ್ನು ಮತ್ತು ಅದರೊಳಗಿನ ನತದೃಷ್ಟರ ನೋವಿನ ಬದುಕನ್ನು ತೆರೆದಿಡುವ ಮೂಲಕ ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿವೆ. ಕಳೆದ ಪೆಬ್ರವರಿ ಹದಿನೇಳರಂದು ಹಿಂದೂಇಂಗ್ಲೀಷ್ ದಿನಪತ್ರಿಕೆಯಲ್ಲಿ ಜ್ಯೋತಿ ಶೇಲರ್ ಎಂಬ ಹೆಣ್ಣು ಮಗಳು ಬರೆದ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ಮಾನಸಿಕ ಸ್ಥಿತಿಗತಿ ಹಾಗೂ ಮಕ್ಕಳು ಅನುಭವಿಸುತ್ತಿರುವ ತಬ್ಬಲಿತನ ಕುರಿತು ಬರೆದಸೈಲೆಂಟ್ ಸಫರರ್ಸ್” ( ನಿಶಬ್ದವಾಗಿ ನರಳುವವರು ಅಥವಾ ನೋವನ್ನುಣ್ಣುವವರು) ಎಂಬ ಲೇಖನ ಮತ್ತು ಇದೇ ವರ್ಷ ಜನವರಿ ತಿಂಗಳಿನಲ್ಲಿ ಆಕ್ಸ್ಫರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನದಿಂದ ಪ್ರಕಟವಾಗಿರುವ ಹಾಗೂ ಕೋಟ ನೀಲಿಮಾ ಎಂಬ ಆಂಧ್ರ ಮೂಲದ ಲೇಖಕಿ ಹಾಗೂ ಪತ್ರಕರ್ತೆ ಬರೆದಿರುವವಿಡೋಸ್ ಆಫ್ ವಿದರ್ಭ” ( ವಿದರ್ಭದ ವಿಧವೆಯವರು) ಎಂಬ ಕೃತಿಯು ರೈತರ ಆತ್ಮಹತ್ಯೆಯ ನಂತರ ಬದುಕುಳಿದಿರುವ ಕುಟುಂಬದ ಸದಸ್ಯರು ಅನುಭವಿಸುತ್ತಿರುವ ನರಕ ಸದೃಶ್ಯ ಧಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುತ್ತವೆ.
ಭಾರತದ ಸಾಮಾಜಿಕ ಅಥವಾ ರಾಜಕೀಯ ಇಲ್ಲವೆ ಸಾಂಸ್ಕತಿಕ ಬದುಕು ದಿಕ್ಕೆಟ್ಟಾಗ ಅವುಗಳಿಗೆ ಪರಿಹಾರ ಹುಡುಕಿ ಮಾರ್ಗ ತೋರಿಸಬೇಕಾದ ದೇಶದ ವಿಶ್ವ ವಿದ್ಯಾಲಯಗಳು ಕೊಳೆತು ನಾರುವ ತಿಪ್ಪೆಗುಂಡಿಗಳಾಗಿವೆ.  ಮಾಧ್ಯಮಗಳು ಆಳುವವರ ಮತ್ತು ಉಳ್ಳವರ ತುತ್ತೂರಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ದಯನೀಯ ಸ್ಥಿತಿಯಲ್ಲಿ ವಿದೇಶದ ವಿಶ್ವ ವಿದ್ಯಾಲಯಗಳು ಇಲ್ಲಿನ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿರುವ ಪರಿಯನ್ನು ಗಮನಿಸಿದಾಗ ನಿಜಕ್ಕೂ ನಾವೆಲ್ಲಾ ತಲೆ ತಗ್ಗಿಸಬೇಕು ಎನಿಸುತ್ತದೆ. ಭಾರತದ ಬುಡಕಟ್ಟು ಜನಾಂಗಗಳ ಬವಣೆಗಳ ಕುರಿತು ಐವತ್ತು ವರ್ಷಗಳಿಂದ ಅಮೇರಿಕಾ ಮತ್ತು ಇಂಗ್ಲೇಂಡಿನ ಹತ್ತಕ್ಕೂ ಹೆಚ್ಚು ವಿ.ವಿ.ಗಳು ಅಧ್ಯಯನ ನಡೆಸುತ್ತಿವೆ. ನಕ್ಸಲ್ ಸಮಸ್ಯೆ ಕುರಿತು ಹಾಗೂ ದಕ್ಷಿಣ ಭಾರತದ ದೇವದಾಸಿಯರ ಸಾಂಸ್ಕøತಿಕ ಪಲ್ಲಟಗಳ ಕುರಿತು ಜಪಾನ್ ಮತ್ತು ಅಮೇರಿಕಾದ ನಾಲ್ಕು ವಿ.ವಿ.ಗಳು ಅಧ್ಯಯನ ಪ್ರಕಟಿಸಿವೆ. ಇವುಗಳ ಜೊತೆಗೆ ಅಮೇರಿಕಾದ ಕ್ಯಾಲಿಪೋರ್ನಿಯಾದ ವಿಶ್ವ ವಿದ್ಯಾಲಯವು ಕಳೆದ ಹತ್ತು ವರ್ಷಗಳಿಂದ ಭಾರತದ ರೈತರ ಆತ್ಮ ಹತ್ಯೆ ಕುರಿತಂತೆ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದೆ. ನಮ್ಮ ವಿಶ್ವವಿದ್ಯಾಲಯಗಳು ರಾಜಕಾರಣಿಗಳನ್ನು ಒಳಗೊಂಡಂತೆ ಅಪಾತ್ರರಿಗೆ ಡಜನ್ ಗಟ್ಟಲೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ತೋರುತ್ತಿರುವ ಆಸಕ್ತಿಯನ್ನು ಇಂತಹ ಅಧ್ಯಯನಗಳತ್ತ ತಿರುಗಿಸಿದ್ದರೆ ದೇಶ ಒಂದಿಷ್ಟು ಸುಧಾರಣೆಯಾಗುತ್ತಿತ್ತು.  ವಿದೇಶಿ ವಿ.ವಿ.ಗಳು ನಮ್ಮ ಭಾರತದಲ್ಲಿ ನಡೆಸುತ್ತಿರುವ ಅಧ್ಯಯನದ ಕಾರ್ಯವೈಖರಿ ಈವರೆಗೆ ನಮ್ಮ ಹೃದಯವನ್ನು ತಟ್ಟಿಲ್ಲ. ಇದು ಪರೋಕ್ಷವಾಗಿ ನಮ್ಮಗಳ ಬೌದ್ಧಿಕ ದಾರಿದ್ರ್ಯವಲ್ಲದೆ  ಬೇರೇನೂ ಅಲ್ಲ.
ಭಾರತದಲ್ಲಿ ರೈತರ ಆತ್ಮಹತ್ಯೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಇದಕ್ಕೆ ಸುಮಾರು ಮೂರು ದಶಕಗಳ ಇತಿಹಾಸವಿದೆ. ಕ್ಯಾಲಿಪೋರ್ನಿಯಾ ವಿ.ವಿ. ಅಧ್ಯಯನದ ಪ್ರಕಾರ ಮುವತ್ತು ವರ್ಷಗಳಲ್ಲಿ ಮಹಾರಾಷ್ಟ್ರ, ಆಂಧ್ರ, ಕರ್ನಾಟಕ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಒಟು 59 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು. ಸಾವುಗಳಲ್ಲಿ ಶೇಕಡ 79 ರಷ್ಟು ಬರಗಾಲ, ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಮೆಣಸಿನಕಾಯಿ ಬೆಳೆಗಳಿಂದ, ವಿಫಲವಾದ ಕೊಳವೆ ಬಾವಿಗಳಿಂದ, ದುಬಾರಿಯಾದ ಬಿತ್ತನೆ ಬೀಜ ಮತ್ತು ರಸಾಯನಿಕ ಗೊಬ್ಬರದಿಂದಾಗಿ ಸಂಭವಿಸಿವೆ ಎಂದು ವರದಿಯಿಂದ ದೃಢಪಟ್ಟಿದೆ. ಮುಂಬೈನ ಇಂದಿರಾಗಾಂಧಿ ಇನ್ಸಿಟ್ಯುಟ್ ಆಫ್ ಡೆವಲಪ್ ಮೆಂಟ್ ಎಂಬ ಸಂಸ್ಥೆ ದಕ್ಷಿಣ ಭಾರತದ ರೈತರ ಆತ್ಮಹತ್ಯೆ ಕುರಿತು ಅಧ್ಯಯನ ಮಾಡಿ ಇದೇ ಫಲಿತಾಂಶವನ್ನು ಪ್ರಕಟಿಸಿದೆ. ಆಶ್ಚರ್ಯಕರ ಸಂಗತಿ ಎಂದರೆ, ಭಾರತದ ಅತಿ ಹೆಚ್ಚು ಜನಸಂಖ್ಯೆ ಮತ್ತು ಜನ ಸಾಂದ್ರತೆ ಇರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಸೇರಿದಂತೆ ಉತ್ತರ ಭಾರತದಲ್ಲಿ ರೈತರ ಆತ್ಮಹತ್ಯೆಯ ಪ್ರಮಾಣ ದಕ್ಷಿಣ ಭಾರತಕ್ಕೆ ಹೋಲಿಸಿದರೆ ತೀರಾ ಕಡಿಮೆ ಇದೆ. 2009 ರಿಂದ 2016 ರರವರೆಗೆ ಮಹಾರಾಷ್ಟ್ರ ರಾಜ್ಯದಲ್ಲಿ 23 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಅಲ್ಲಿನ ಸರ್ಕಾರವು ರೈತರಿಗಾಗಿ 34 ಸಾವಿರ ಕೋಟಿ ರೂಪಾಯಿಗಳ ವಿಶೆಷ ಪ್ಯಾಕೇಜ್ ಘೋಷಿಸಿದ ನಂತರವೂ 1520 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಸರ್ಕಾರ ನೀಡುವ ಪರಿಹಾರದಿಂದ ರೈತರ ಬದುಕು ಎಂದಿಗೂ ಹಸನಾಗುವುದಿಲ್ಲ ಎಂಬುದನ್ನು ಹದಿನೈದು ವರ್ಷಗಳ ಹಿಂದೆ ನಮ್ಮ ನಡುವಿನ ಮಾನವೀಯ ಮುಖವುಳ್ಳ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ತಮ್ಮ ಸುಧೀರ್ಘ ಓಡಾಟ ಮತ್ತು ಅಧ್ಯಯನದ ಮುಖಾಂತರ ನಮಗೆ  ತೋರಿಸಿಕೊಟ್ಟರು. ಆದರೆ, ಆಳುವ ಸರ್ಕಾರಗಳಿಗೆ ಮತ್ತು ನಮ್ಮ ನಡುವಿನ ಕೂಗುಮಾರಿ ಸಂಸ್ಸøತಿಯ ಮಾಧ್ಯಮಗಳಿಗೆ ಕುರಿತು ಅಧ್ಯಯನ ಮಾಡುವ ಅಥವಾ ಅಂತಹ ಹಿರಿಯ ಜೀವವೊಂದರ ಮಾರ್ಗದರ್ಶನ ಪಡೆಯುವ ಮನಸ್ಸಿಲ್ಲ.
2002 ಜುಲೈ ತಿಂಗಳಿನ ಒಂದು ಶನಿವಾರ ಪಿ.ಸಾಯಿನಾಥ್ ಬೆಂಗಳೂರು ನಗರದಲ್ಲಿದ್ದರು. ದಿನ ಮದ್ದೂರು ತಾಲ್ಲೂಕು ಕೇಂದ್ರದಿಂದ ಮೂರು ಅಥವಾ ನಾಲ್ಕು ಕಿ.ಮಿ. ದೂರವಿರುವ ವರಗೇರಹಳ್ಳಿ ಎಂಬ ಗ್ರಾಮದಲ್ಲಿ ಶಂಕರೇಗೌಡ ಎಂಬ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾಯಿನಾಥ್ ಅವರು ಬೆಂಗಳೂರಿನ  ಹಿರಿಯ ಪತ್ರಕರ್ತಮಿತ್ರ ಕೆ.ಜಿ.ವಾಸುಕಿ ಮೂಲಕ ಮಂಡ್ಯದಲ್ಲಿದ್ದ ನನ್ನ ಮಿತ್ರ ಹಾಗೂ ಟಿವಿ ಯಲ್ಲಿ ಮಂಡ್ಯ ಜಿಲ್ಲಾ ವರದಿಗಾರರಾಗಿದ್ದ ದಿವಂಗತ ಇಳೆಕಾನ್ ಶ್ರೀಕಂಠ ಅವರನ್ನು ಸಂಪರ್ಕಿಸಿ, ಮಧ್ಯಾಹ್ನದ ವೇಳೆಗೆ ವರಗೇರಹಳ್ಳಿಗೆ ಭೇಟಿ ನೀಡಿದ್ದರು. ಘಟನೆ ಸಂಭವಿಸಿ ಎರಡು ವರ್ಷದ ನಂತರ ಒಮ್ಮೆ ಸಾಯಿನಾಥ್ ಮದ್ದೂರು ನಗರದ ಮೂಲಕ ಬೆಂಗಳೂರಿನಿಂದ ಮೈಸೂರು ನಗರಕ್ಕೆ ಪ್ರಯಾಣಿಸುವಾಗ, ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಶಂಕರೇಗೌಡ ನೆನಪಾಗಿ ಮತ್ತೇ ವರಗೇರಹಳ್ಳಿಗೆ ಭೇಟಿ ನೀಡಿದರು. ಅವರು ಶಂಕರೇಗೌಡನ ಮನೆಗೆ ಹೋದ ವೇಳೆಯಲ್ಲಿ ಆತನ ವಿಧವಾ ಪತ್ನಿ ಬಯಲಿನಲ್ಲಿ ಎಮ್ಮೆ ಮೇಯಿಸುತ್ತಾ ಕುಳಿತಿದ್ದಳು. ಆಕೆಯನ್ನು ಭೇಟಿ ಮಾಡಿ  ಯೋಗಕ್ಷೇಮ ವಿಚಾರಿಸಿದ ಸಾಯಿನಾಥ್ ಅವರು, ಸರ್ಕಾರ ನೀಡುತ್ತಿರುವ ಪಡಿತರದ ಬಗ್ಗೆ ವಿವರ ಪಡೆದುಕೊಂಡರು. ಸರ್ಕಾರದ ವರದಿಯ ವಿಳಂಬದಿಂದಾಗಿ ಆಕೆಗೆ ಪರಿಹಾರದ ಹಣ ದೊರಕಿರಲಿಲ್ಲ.
ಭೇಟಿಯ ನಂತರ ಸಾಯಿನಾಥ್ ಅವರು ಹಿಂದೂ ಇಂಗ್ಲೀಷ್ ದಿನ ಪತ್ರಿಕೆಯಲ್ಲಿ ಲೇಖನ ಬರೆದು, ಆತ್ಮಹತ್ಯೆ ಮಾಡಿಕೊಂಡ ಅನ್ನದಾತನೊಬ್ಬನ ಪತ್ನಿಗೆ ಸರ್ಕಾರವು ಪ್ರತಿ ದಿನ ನೂರು ಗ್ರಾಂ ಅಕ್ಕಿ ( ತಿಂಗಳಿಗೆ ಮೂರು ಕೇ,ಜಿ.) 67 ಗ್ರಾಂ ಗೋಧಿ( 2 ಕೆ.ಜಿ. ಗೋಧಿ) ಮತ್ತು 33 ಗ್ರಾಂ ಸಕ್ಕರೆ ( ಒಂದು ಕೆ.ಜಿ.ಸಕ್ಕರೆ) ನಿಗದಿ ಪಡಿಸಿದೆ. ಆದರೆ, ಭಾರತದ ಜೈಲುಗಳಲ್ಲಿರುವ ಕೊಲೆಗಡುಕರಿಗೆ, ದರೋಡೆಕೋರರಿಗೆ ಪ್ರತಿ ದಿನ ಊಟಕ್ಕೆ 200 ಗ್ರಾಂ ಅನ್ನ 80 ಗ್ರಾಂ ತರಕಾರಿ ಮತ್ತು ಬೇಳೆ, ಎರಡು ಚಪಾತಿ, ವಾರಕ್ಕೆ ಒಮ್ಮೆ 120 ಗ್ರಾಂ ಮಾಂಸ, ತಲೆಗೆ 30 ಮಿ.ಲಿ.ಕೊಬ್ಬರಿ ಎಣ್ಣೆ ಇತ್ಯಾದಿ ವಿವರಗಳ ಪಟ್ಟಿಯನ್ನು ನೀಡಿ ದೇಶದಲ್ಲಿ ಆಳುವ ಸರ್ಕಾರಗಳು ಅನ್ನದಾತನಿಗೆ ನೀಡುತ್ತಿರುವ ಸವಲತ್ತುಗಳ ಕುರಿತು ನಮ್ಮೆಲ್ಲರ ಕಣ್ಣು ತೆರೆಸಿದ್ದರು. ಆದರೆ, ಇಂತಹ ಮಾದರಿಗಳು ನಮ್ಮ ಮಾಧ್ಯಮಗಳಿಗೆ ಮತ್ತು ವಿ.ವಿ.ಗಳಿಗೆ ಎಂದೂ ಮಾರ್ಗದರ್ಶನವಾಗಲಿಲ್ಲ.
ಇದೀಗ ಪಿ.ಸಾಯಿನಾಥ್ ಜನಿಸಿದ ನೆಲದಿಂದ ಬಂದಿರುವ ಆಂಧ್ರದ ವಿಜಯವಾಡದ ಹಿರಿಯ ಪತ್ರಕರ್ತಕೆ.ವಿ.ಎಸ್. ರಮಾಶರ್ಮ ಎಂಬುವರ ಪುತ್ರಿ ಕೋಟ ನೀಲಿಮಾ ಅವರು ಸಾಯಿನಾಥ್ ಮಾದರಿಯಲ್ಲಿ ಅಧ್ಯಯನ ನಡೆಸಿ ವಿದರ್ಭದ ವಿಧವೆಯರು ಕೃತಿಯ ಮೂಲಕ ರೈತರ ಆತ್ಮಹತ್ಯೆಯ ನಂತರ ಅವರ ಪತ್ನಿಯರು ಮತ್ತು ಮಕ್ಕಳು ಅನುಭವಿಸುತ್ತಿರುವ ನೋವಿನ ಕಥನವನ್ನು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಕಳೆದ ಇಪ್ಪತ್ತೆರೆಡು ವರ್ಷದಿಂದ ದೆಹಲಿಯಲ್ಲಿ ವಾಸವಾಗಿರುವ ನೀಲಿಮಾ, ಪತ್ರಕರ್ತೆ, ಲೇಖಕಿ ಹಾಗೂ ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.  2013 ರಲ್ಲಿ ಈಕೆ ಬರೆದಶೂಸ್ ಆಫ್ ಡೆಡ್” ( ಸತ್ತವನ ಪಾದರಕ್ಷೆ) ಎಂಬ ಕಾದಂಬರಿಯು   ಅತ್ಯಂತ ಜನಪ್ರಿಯವಾಗಿದ್ದು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬವೊಂದರ ಕಥನವನ್ನು ಒಳಗೊಂಡಿತ್ತು. ತಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ ಹಾಗೂ ಆಡು ಕುಳಂ ಮತ್ತು ವಿಸಾರಣೈ ಎಂಬ ರಾಷ್ಟ್ರ ಪ್ರಶಸ್ತಿ ಗಳಿಸಿದ ಚಿತ್ರಗಳನ್ನು ನಿರ್ಮಿಸಿದ ವೆಟ್ರಿಮಾರನ್ ಇದೀಗ ಕಾದಂಬರಿಯನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ.

ಕೋಟ ನೀಲಿಮಾ ಅವರು 2014 ರಿಂದ 2016 ವರೆಗೆ ಸತತ ಎರಡು ವರ್ಷಗಳ ಕಾಲ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಜಿಲ್ಲೆಗಳಲ್ಲಿ ( ಅಮರಾವತಿ, ಅಕೋಲ, ಯವತ್ಮಾಳ್, ವಾರ್ಧಾ, ಭಂಡಾರ, ಗೋಂಡಿಯ, ಚಂದ್ರಾಪುರ್, ಬುಲ್ಡನಾ ಜಿಲ್ಲೆಗಳು) ಸಂಚರಿಸಿ, ಅಲ್ಲಿನ ಜನ್ ಆಂಧೋಲನ್ ಸಮಿತಿಯ ಕಿಶೋರ್ ತಿವಾರಿ ನೆರವಿನಿಂದ ರೈತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕೃತಿಯಲ್ಲಿ ಅಮರವಾತಿ ಹಾಗೂ ಯವತ್ನಾಳ್ ಎಂದು ಎರಡು ಭಾಗಗಳನ್ನಾಗಿ ಮಾಡಿಕೊಂಡಿರುವ ಲೇಖಕಿ ತಲಾ ಒಂಬತ್ತು ಅಧ್ಯಾಯಗಳುಳ್ಳ ಒಟ್ಟು ಹದಿನೆಂಟು ಅಧ್ಯಾಯಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಹದಿನೆಂಟು  ರೈತರ ಕುಟುಂಬಗಳ ದಾರುಣ ಸ್ಥಿತಿಯನ್ನು ವಿವರಿಸಿದ್ದಾರೆ.   ರೈತ ವಿಧವೆಯರು ತಮ್ಮ ಗಂಡಂದಿರುವ ಮಾಡಿದ ಸಾಲವನ್ನು ತೀರಿಸಲು ಹೋರಾಡುತ್ತಿರುವ ಪರಿ ಹಾಗೂ ಕೆಲವು ವಿಧವೆಯವರು ಪ್ರತಿ ದಿನ ಕೇವಲ ನೂರು ರೂಪಾಯಿಗೆ ಕೃಷಿ ಕೂಲಿ ಕಾರ್ಮಿಕರಾಗಿ ದುಡಿದು ಮಕ್ಕಳನ್ನು ಸಾಕುತ್ತಿರುವ ಜೀವನ, ಅವಿಭಕ್ತ ಕುಟುಂಬಗಳಲ್ಲಿ ಅತ್ತೆ-ಮಾವ ಮತ್ತು ಮೈದುನರಿಂದ ಅನುಭವಿಸುತ್ತಿರುವ ಕಿರುಕುಳ ಎಲ್ಲವನ್ನೂ ಸವಿವರವಾಗಿ ದಾಖಲಿಸಿದ್ದಾರೆ. ಕೃತಿಯಲ್ಲಿನ ನೋವಿನ ಅನುಭವಗಳೆಲ್ಲವೂ ರೈತ ವಿಧವೆಯರಾದರೆ, ಜ್ಯೋತಿ ಶೇಲರ್ ಬರೆದ ಲೇಖನದಲ್ಲಿ ಕಣ್ಣಾರೆ ಕಂಡ ತಮ್ಮ ತಂದೆಯವರ ಆತ್ಮಹತ್ಯೆಯ ಚಿತ್ರವನ್ನು ಮರೆಯಲಾಗದೆ ಬಳಲುತ್ತಿರುವ ಮಕ್ಕಳ ನೋವಿನ ಚಿತ್ರಣವಿದೆ. ಅಪ್ಪನ ಸಾವಿನ ನಂತರ ತನ್ನ ಹದಿನಾಲ್ಕನೆಯ ವಯಸ್ಸಿಗೆ ಕುಟುಂಬದ ಜವಬ್ದಾರಿ ಹೊತ್ತು ದುಡಿಯುತ್ತಿರುವ ಹಾಗೂ  ಬಾಲ್ಯ ಮತ್ತು ಹರೆಯ ಏನೆಂದು ತಿಳಿಯದ ಪವನ್ ಪರ್ವೆ ಎಂಬ ಯುವಕನ ಬದುಕಿನ ಹೋರಾಟ ಮತ್ತು ಮನೆಯ ಮಧ್ಯಭಾಗದಲ್ಲಿ ನೇಣು ಬಿಗಿದುಕೊಂಡ ಅಪ್ಪನ ಚಿತ್ರವನ್ನು ಮರೆಯಲಾಗದೆ ಇಂದಿಗೂ ಶೋಕಿಸುತ್ತಿರುವ ಬಾಲಕಿ ನಿಕಿಯ ಎಂಬಾಕೆಯ ಮಾನಸಿಕ ತುಮಲಗಳು ಓದುಗರನ್ನು ನಿರಂತರ ಕಾಡುತ್ತವೆ.  

(ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣ ಬರಹ)

No comments:

Post a Comment