ಬುಧವಾರ, ಏಪ್ರಿಲ್ 25, 2018

ಹೋರಿ ಸಿದ್ಧನ ಕಥೆ



ನಾನು ಹುಟ್ಟಿ ಬೆಳೆದ ಮಂಡ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಥೆ ಚಾಲ್ತಿಯಲ್ಲಿದೆ. ಅತ್ಯಂತ ಪಟಿಂಗನಾದ ಮತ್ತು ಐನಾತಿ ಕುಳ ಎನ್ನಬಹುದಾದ ವ್ಯಕ್ತಿಯ ಕುರಿತು ಮಾತನಾಡುವಾಗ  ಈ ಹೋರಿ ಸಿದ್ಧನ ಕಥೆಯನ್ನು ರೂಪಕವಾಗಿ ಬಳಸುತ್ತಾರೆ.
ಒಂದೂರಿನಲ್ಲಿ ಸಿದ್ಧ ಎಂಬ ಅನಕ್ಷರಸ್ತನಿದ್ದ. ಅವನು ಹಸು, ಎಮ್ಮೆಗಳನ್ನು ಸಾಕಿಕೊಂಡು ಆರಾಮವಾಗಿದ್ದನು.  ಹಾಲು ಕರೆಯುವ ವಿಷಯದಲ್ಲಿ ಸುತ್ತಮತ್ತಲಿನ ಊರುಗಳಲ್ಲಿ ಅವನನ್ನು ಮೀರಿಸುವವರು ಯಾರೂ ಇರಲಿಲ್ಲ. ಎಲ್ಲಿಯಾದರೂ ಹಾಲು ಹಿಂಡುವ ಸ್ಪರ್ಧೆ ನಡೆದರೆ, ಅಲ್ಲಿಗೆ ಹೋಗಿ ಕೇವಲ ಐದು ನಿಮಿಷದಲ್ಲಿ ಇಪ್ಪತ್ತು ಅಥವಾ ಇಪ್ಪತ್ತೈದು ಲೀಟರ್ ಹಾಲನ್ನು ಹಿಂಡುವುದರ ಮೂಲಕ ಬಹುಮಾನವನ್ನು ಗೆದ್ದು ತರುತ್ತಿದ್ದ. ಸಿದ್ಧ ಎಂದರೆ ಇಡೀ ಊರಿಗೆ ಹೆಮ್ಮೆ. ಅವನನ್ನು ಮೊದಲು ಸ್ಪರ್ಧೆಗೆ ಕಳಿಸಿ, ಆ ನಂತರ ಊರಿನ ಜನ  ಎತ್ತಿನ ಗಾಡಿಯಲ್ಲಿ ನಗಾರಿ, ತಮಟೆ, ಕೊಂಬು, ಕಹಳೆ ತೆಗೆದುಕೊಂಡು ಹೋಗಿ ಅವನನ್ನು ಊರಿಗೆ ಕರೆತರುತ್ತಿದ್ದರು.
ಒಮ್ಮೆ ನೆರೆಯ ಊರಿನಲ್ಲಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಂದಿನಂತೆ ಊರಿನವರು ಸಿದ್ಧನನ್ನು ಮೊದಲು  ಕಳುಹಿಸಿ, ನಂತರ ಡೋಲು, ತಮಟೆ, ಕಹಳೆಯೊಂದಿಗೆ ಸ್ವರ್ಧಾ ಸ್ಥಳಕ್ಕೆ ಹೋದರು. ಆದರೆ, ಅಲ್ಲಿ ಸಿದ್ಧ ಹಾಲುಕರೆಯುವಲ್ಲಿ ಸೋತು, ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದ. ಊರಿನ ಜನಕ್ಕೆ ಆಶ್ಚರ್ಯವಾಯಿತು. “ ಯಾಕ್ಲಾ ಬಡ್ಡತ್ತದೆ ಸೋತು ಹೋಗಿದ್ದೀಯಾ?” ಎಂದು ಕೇಳುತ್ತಿದ್ದಂತೆ, ದುಃಖ ಉಮ್ಮಳಿಸಿ ಬಂದಂತೆ ಅಳುತ್ತಾ ಸಿದ್ದ ಮಾತನಾಡತೊಡಗಿದ “ ನೀವೆ ನೋಡ್ರುಲಾ, ಆ ಬೋಳಿಮಕ್ಕಳು ಹಾಲ್ ಕರೆಯಾಕೆ  ಎಲ್ಲರಿಗೂ  ಎಮ್ಮೆ ಕಟ್ಟ್ ಬುಟ್ಟು, ನನಗೆ ಮಾತ್ರ ಕೋಣವನ್ನು ಕಟ್ಟಿಬುಟ್ಟಿದ್ದರು. ಅದರಲ್ಲಿ ಇಷ್ಟು ಮಾತ್ರ ಕರೆಯಲಿಕ್ಕೆ ಸಾಧ್ಯವಾಯುತ್ತು” ಎನ್ನುತ್ತಾ, ಬಕೇಟ್ ನಲ್ಲಿದ್ದ ಮೂರು ಲೀಟರ್ ಹಾಲನ್ನು ತೋರಿಸಿದ.  ಆ ಸಂದರ್ಭದಲ್ಲಿ ಊರಿನ ಜನಕ್ಕೆ ಮೂರ್ಚೆ ಬಂದು ಕೆಳಕ್ಕೆ ಬೀಳುವುದು ಮಾತ್ರ ಬಾಕಿ ಇತ್ತು.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಗಮನಿಸಿದಾಗ ಈ ಕಥೆ  ಪುನಃ ಜ್ಞಾಪಕಕ್ಕೆ ಬಂದಿತು. ಇಲ್ಲಿವರೆಗೆ ಸಿದ್ಧನ ವಂಶಸ್ಥರಂತೆ ಕಾಣುತ್ತಿದ್ದ ಜನರಾರ್ಧನ ರೆಡ್ಡಿ ಮತ್ತು ಅಶೋಕ್ ಖೇಣಿ ಮಾತ್ರ ಇದ್ದರು. ಈ ಬಾರಿಯ ಚುನಾವಣೆಯಲ್ಲಿ ಮೂರು ಅಥವಾ ನಾಲ್ಕು ಕ್ಷೇತ್ರಗಳನ್ನು ಹೊರತು ಪಡಿಸಿದರೆ, ಉಳಿದವರೆಲ್ಲರೂ ಹೋರಿ ಸಿದ್ಧನ ಕುಲದವರಂತೆ ಕಾಣುತ್ತಿದ್ದಾರೆ. ಇಂತಹವರನ್ನು ಜಾತಿ, ಪಕ್ಷ ಅಥವಾ ಇಂತಹವರ ನಾಯಕತ್ವದಲ್ಲಿ ಆಯಕಟ್ಟಿನ ಜಾಗದಲ್ಲಿ ಲಾಭದಾಯಕ ಹುದ್ದೆ  ಸಿಕ್ಕಿತು ಎಂಬ ಕಾರಣಕ್ಕೆ  ಹೊಗಳಿ ಬರೆಯುವುದು ಅಥವಾ ಮಾತನಾಡುವುದು  ಬೌದ್ಧಿಕ ವ್ಯಭಿಚಾರವಲ್ಲದೆ ಮತ್ತೇನು ಅಲ್ಲ.
ಹತ್ತು ವರ್ಷಗಳ ಹಿಂದೆ ನನ್ನ ಗುರುಗಳಲ್ಲಿ ಒಬ್ಬರಾದ ವಿಚಾರವಾದಿ ಪ್ರೊ. ಹೆಚ್. ಎಲ್. ಕೇಶವಮೂರ್ತಿಯವರನ್ನು ಮಂಡ್ಯದ ಇಬ್ಬರು ಹಿರಿಯ ರಾಜಕೀಯ ನಾಯಕರ ಕುರಿತು ಅಭಿಪ್ರಾಯ ಕೇಳಿದಾಗ, ನಿಷ್ಟುರ ಮಾತಿಗೆ ಹೆಸರಾಗಿದ್ದ ಅವರು , “ ಒಂದು ಹೇಸಿಗೆಯನ್ನು ಎರಡು ಭಾಗ ಮಾಡಿ ಇದರಲ್ಲಿ ಶ್ರೇಷ್ಟ ಯಾವುದು? ಎಂದು ಕೇಳಿದರೆ, ನಾನೇನು ಉತ್ತರ ಹೇಳಲಿ” ಎಂಬ ಮಾತನ್ನಾಡಿದ್ದರು.  ಅಂದು ಹೆಚ್. ಎಲ್. ಕೆ. ಆಡಿದ್ದ ಮಾತನ್ನು  ಇಂದು ಯಾವುದೇ ಮುಲಾಜಿಲ್ಲದೆ ಇಂದಿನ ರಾಜಕೀಯ ಪಕ್ಷಗಳಗೆ ಮತ್ತು ಅವುಗಳ ನಾಯಕರಿಗೆ ಬಳಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ