ಬುಧವಾರ, ಮೇ 2, 2018

ಹರಿಲಾಲ್ ಗಾಂಧಿ ಕಥನ-ಎರಡು



ಹರಿಲಾಲ್ ಜನಿಸಿದಾಗ ಮಹಾತ್ಮ ಗಾಂಧಿ ಮತ್ತು ಕಸ್ತೂರಬಾ ದಂಪತಿಗಳಿಗೆ ಕೇವಲ ಹತ್ತೊಂಬತ್ತು ವರ್ಷಗಳಾಗಿತ್ತು. ಇದಕ್ಕೂ ಮುನ್ನ ಕಸ್ತೂರಬಾ ಗೆ ಒಂದು ಮಗು ಜನಿಸಿ ಹುಟ್ಟಿದ ಮೂರು ದಿನಗಳಲ್ಲಿ ಅಸು ನೀಗಿತ್ತು. ಆದರೆ, ಅದು ಹೆಣ್ಣು ಅಥವಾ ಗಂಡು ಮಗು ಎಂಬುದು ಎಲ್ಲಿಯೂ ದಾಖಲಾಗಿಲ್ಲ. ಹಾಗಾಗಿ ಹರಿಲಾಲ್ ಗಾಂಧಿ ದಂಪತಿಗಳಿಗೆ ಮೊದಲನೆಯ ಪುತ್ರ. ಹರಿಲಾಲ್ ಅವರ ನಿಖರವಾದ ಜನ್ಮ ದಿನದ ದಾಖಲೆಗಳು ಎಲ್ಲಿಯೂ ನಮೂದಾಗಿಲ್ಲ. ಆದರೆ, 1888 ಆಗಸ್ಟ್ 10 ರಂದು ಇಂಗ್ಲೆಂಡಿಗೆ ಉನ್ನತ ಅಧ್ಯಯನಕ್ಕಾಗಿ ಗಾಂಧೀಜಿ ಪ್ರಯಾಣಿಸುವ ಮುನ್ನ ಹರಿಲಾಲ್ ಜನಿಸಿದ್ದರು. ರಾಜ್ ಕೋಟ್ ನಗರದಿಂದ ಗಾಂಧೀಜಿ ಮುಂಬೈ ಮಾರ್ಗವಾಗಿ ಇಂಗ್ಲೆಡಿಗೆ ಹೋಗುವಾಗ ಮಗುವಿಗೆ ಎರಡು ಅಥವಾ ಮೂರು ತಿಂಗಳಾಗಿತ್ತು.
1925 ಜೂನ್ 18 ರಂದು ಗಾಂಧೀಜಿಯವರು ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ತಮ್ಮ ಪುತ್ರನ ಬಗ್ಗೆ ಪ್ರಸ್ತಾಪಿಸುತ್ತಾನನ್ನ ಪುತ್ರ ಹರಿಲಾಲ್ ಗೆ ಮುವತ್ತು ವರ್ಷ ತುಂಬಿತುಎಂದು ದಾಖಲಿಸಿರುವುದನ್ನು ಗಮನಿಸಿದರೆ, ಹರಿಲಾಲ್ ಗಾಂಧಿ 1888 ಜೂನ್ ತಿಂಗಳಿನಲ್ಲಿ ಜನಿಸಿರಬೇಕು ಎಂದು ಊಹಿಸಬಹುದಾಗಿದೆ.  ಹರಿಲಾಲ್ ರಾಜ್ ಕೋಟ್ ನಗರದ ಕಸ್ತೂರಬಾ ರವರ ತವರು ಮನೆಯಲ್ಲಿ ಜನಿಸಿದರು. ಗಾಂಧೀಜಿಯವರು  1888 ರಲ್ಲಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪಡೆದು 1891 ಜುಲೈ ತಿಂಗಳಿನಲ್ಲಿ ಮುಂಬೈ ನಗರಕ್ಕೆ ಆಗಮಿಸಿದರು. ಗಾಂಧೀಜಿಯವರು ವಿದೇಶದಿಂದ ವಾಪಸ್ ಬರುವ ವೇಳೆಗೆ ಅವರ ತಾಯಿ ಪುತ್ಲಿಬಾಯಿಯವರು ನಿಧನ ಹೊಂದಿದ್ದರು. ಮುಂಬೈ ಹಡಗು ಕಟ್ಟೆಯನ್ನು ಗಾಂಧೀಜಿ ತಲುಪಿದ ನಂತರವಷ್ಟೇ ಅವರಿಗೆ ತಾಯಿಯ ನಿಧನ ವಾರ್ತೆಯನ್ನು ತಿಳಿಸಲಾಯಿತು.
ಭಾರತಕ್ಕೆ ಬಂದ ನಂತರ ಗಾಂಧಿಯವರಿಗೆ ಸ್ವಾತಂತ್ರ್ಯ ಅಥವಾ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಬೇಕೆಂಬ ಯಾವುದೇ ಪರಿಕಲ್ಪನೆ ಇರಲಿಲ್ಲ. ತಾನೊಬ್ಬ ಪ್ರಸಿದ್ಧ ನ್ಯಾಯವಾದಿಯಾಗಬೇಕೆಂದು ಅವರು ಕನಸು ಕಂಡಿದ್ದರು. ದಕ್ಷಿಣ ಆಫ್ರಿಕಾ ಮತ್ತು ಭಾರತದ ಜನತೆಯ ಅದೃಷ್ಟವೆಂಬಂತೆ ಅವರು ಗುಜರಾತಿನ ಕಾಥೆವಾಡದಲ್ಲಿ ಆರಂಭಿಸಿದ್ದ ತಮ್ಮ ವಕೀಲ ವೃತ್ತಿಯಲ್ಲಿ ಯಶಸ್ವಿಯಾಗಲಿಲ್ಲ. ಯಾವುದೇ ಕಕ್ಷಿದಾರರು ಸಿಗದ ಕಾರಣ ಅವರು ಹೆಚ್ಚಿನ ಸಮಯವನ್ನು ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದರು. ಸ್ವತಂತ್ರವಾಗಿ ಕೌಟುಂಬಿಕ ನಿರ್ವಹಣೆ ಮಾಡುವುದು ದುಸ್ತರವಾದ ಪರಿಣಾಮವಾಗಿ ದುಡಿಯುವುದು ಅವರ ಪಾಲಿಗೆ ಅನಿವಾರ್ಯವಾಗಿತ್ತು. ಕಾಥೆವಾಡದಲ್ಲಿ ಸಾಧ್ಯವಾಗದ ಪ್ರಯುಕ್ತ  ತಮ್ಮ ಕುಟುಂಬವನ್ನು ರಾಜ್ ಕೋಟ್ ಕಸ್ತೂರಬಾ ಅವರ ತವರು ಮನೆಗೆ ಕಳುಹಿಸಿ ಅದೃಷ್ಟ ಅರೆಸಿಕೊಂಡು ಗಾಂಧಿ  ಅಂದಿನ ಬಾಂಬೆ ಹಾಗೂ ಈಗಿನ ಮುಂಬೈ ನಗರದತ್ತ ಹೊರಟರು.
ಮುಂಬೈ ನಗರದಲ್ಲಿಯೂ ಸಹ ಅವರ ಆಸೆ ಈಡೇರಲಿಲ್ಲ. ಅದೇ ವೇಳೆಗೆ ಗಾಮಧೀಜಿಯವರ ಊರಾದ ಪೋರ್ ಬಂದರಿನ ಮೆಮನ್ ಎಂಬ ವ್ಯಾಪಾರಿಯೊಬ್ಬರು ತಮ್ಮ ವಿದೇಶ ವ್ಯಾಪಾರದ ಕಾನೂನು ಸಲಹೆಗಾರರನ್ನಾಗಿ ಗಾಂಧೀಜಿಯವರನ್ನು ನೇಮಕ ಮಾಡಿಕೊಂಡು ಅವರನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಿಕೊಟ್ಟರು. ವೇಳೆಗಾಗಲೇ ಗಾಂಧಿಜಿಯವರಿಗೆ ಮಣಿಲಾಲ್ ಎಂಬ ಮತ್ತೊಬ್ಬ ಪುತ್ರನೂ ಜನಿಸಿದ್ದನು. ತಮ್ಮ ಕುಟುಂಬವನ್ನು ರಾಜ್ ಕೋಟ್ ಮಾವನ ಮನೆಯಲ್ಲಿರಿಸಿದ ಗಾಂಧಿಯವರು ದಕ್ಷಿಣ ಅಫ್ರಿಕಾಕ್ಕೆ ತೆರಳಿದರು. ವಾಸ್ತವವಾಗಿ ಗಾಂಧೀಜಿಯವರನ್ನು ಮೆಮನ್ ವ್ಯಾಪಾರದ ಕೆಲವು ವಿವಾದಗಳನ್ನು ನ್ಯಾಯಾಲಯದಲ್ಲಿ ಬಗೆಹರಿಸಲು ಒಂದು ವರ್ಷದ ಅವಧಿಗೆ ಮಾತ್ರ ಕಳುಹಿಸಲಾಗಿತ್ತು. ಆದರೆ, ಅವರು ದಕ್ಷಿಣಾ ಆಫ್ರಿಕಾಕ್ಕೆ ತೆರಳಿದ ನಂತರ; ಅವರ ಜೀವನದ ಪಥವಷ್ಟೇ ಅಲ್ಲದೆ, ಆಲೋಚನಾ ಕ್ರಮವೂ ಸಹ ಬದಲಾಯಿತು. ಅವರು ದಕ್ಷಿಣಾ ಆಫ್ರಿಕಾದಿಂದ ತಮ್ಮ ಪತ್ನಿ ಕಸ್ತೂರಬಾ ಗೆ ಬರೆದಿರುವ ಪತ್ರಗಳಲ್ಲಿ ದಕ್ಷಿಣಾ ಆಫ್ರಿಕಾದ ತಮ್ಮ ಅನುಭವಗಳನ್ನು ಹೊರತು ಪಡಿಸಿದರೆ ಮಕ್ಕಳ ಕುರಿತಾಗಿ ಯಾವುದೇ ವಿಷಯಗಳನ್ನು ಪ್ರಸ್ತಾಪ ಮಾಡಿಲ್ಲ.
ಗಾಂಧೀಜಿಯವರು ದಕ್ಷಿಣಾ ಆಫ್ರಿಕಾದಲ್ಲಿ ಧೀರ್ಘ ಕಾಲದವರೆಗೆ ನೆಲೆ ನಿಲ್ಲಲು ನಿರ್ಧರಿಸಿದ ನಂತರ ತಮ್ಮ ಕುಟುಂವನ್ನು ಅಲ್ಲಿಗೆ ಕರೆಸಿಕೊಳ್ಳಲು ನಿಶ್ಚಯಿಸಿದರು. ಅವರಿಗೆ ದಕ್ಷಿಣಾ ಆಫ್ರಿಕಾದಲ್ಲಿ ಅಲ್ಲಿನ ಕರಿಯರೂ ಸೇರಿದಂತೆ ಭಾರತದ ಮೂಲದ ಅನೇಕ ನಾಗರೀಕರು ಕಕ್ಷಿದಾರರಾದ್ದರಿಂದ ಅವರ ಕಾನೂನು ಸೇವಾ ವೃತ್ತಿಯುಲ್ಲಿ ಸುಧಾರಣೆ ಕಂಡು ಬಂದ ಫಲವಾಗಿ ನೆಮ್ಮದಿಯಿಂದ ಕುಟುಂಬವನ್ನು ಸಲಹಬಹುದು ಎಂಬ ವಿಶ್ವಾಸ ಅವರಲ್ಲಿ ಮೂಡಿತು.
ಐದು ತಿಂಗಳ ನಂತರ ಅವರು ತಮ್ಮ ಪತ್ನಿ, ಇಬ್ಬರು ಪುತ್ರರು ( ಹರಿಲಾಲ್ ಮತ್ತು ಮಣಿಲಾಲ್) ಹಾಗೂ ತಮ್ಮ ಸಹೋದರ ಸಂಬಂಧಿ ಗೋಕುಲ್ ದಾಸ್ ಅವರನ್ನು ದಕ್ಷಿಣ ಆಫ್ರಿಕಾಕ್ಕೆ ಕರೆಸಿಕೊಂಡರು. ಆಫ್ರಿಕಾದಲ್ಲಿ ಕಾನೂನು ಸಲಹೆಗಾರರಾಗಿದ್ದ ಗಾಂಧೀಜಿಯವರ ವೇಷಭೂಷಣಗಳಲ್ಲಿ ಆಧುನಿಕತೆಯ ಛಾಯೆ ಎದ್ದು ಕಾಣುತ್ತಿತ್ತು. ಸದಾ ಸೂಟುದಾರಿಯಾಗಿದ್ದ ಅವರು ತಮ್ಮ ಮಕ್ಕಳಿಗೆ ಕೋಟು, ಪ್ಯಾಂಟ್ ಮತ್ತು ಶೂ ಗಳನ್ನು ತೆಗೆದುಕೊಟ್ಟಿದ್ದರು.
ಗಾಂಧೀಜಿಯವರು ಭಾರತಕ್ಕೆ ಬಂದಿದ್ದ ಸಂದರ್ಭದಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ವಾಸವಾಗಿರುವ ಬಿಳಿಯರು ಅಲ್ಲಿನ ಮೂಲನಿವಾಸಿಗಳು ಸೇರಿದಂತೆ, ಭಾರತೀಯರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಆತ್ಮೀಯರ ಜೊತೆ ಹೇಳಿಕೊಂಡಿದ್ದರು. ಜೊತೆಗೆ ತಾವು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ಅಲ್ಲಿ ಜಾರಿಯಲ್ಲಿದ್ದ ವರ್ಣ ಬೇಧ ನೀತಿಯಿಂದಾಗಿ ಅಪಮಾನ ಮತ್ತು ನೋವು ಎರಡನ್ನೂ ಸ್ವತಃ ಅನುಭವಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ವರ್ಣ ಬೇಧ ನೀತಿಯ ವಿರುದ್ಧದ ಹೋರಾಟದಿಂದಾಗಿ ಜನಪ್ರಿಯರಾದುದಲ್ಲದೆ, ಕರಿಯರ ಮತ್ತು ಭಾರತೀಯರ ಪಾಲಿಗೆ ಆಪತ್ಬಾಂಧವರಾಗಿ ವಕೀಲಿ ವೃತ್ತಿಯಲ್ಲಿ ಯಶಸ್ಸು ಸಾಧಿಸಿದರು. ಇದೇ ವೇಳೆಯಲ್ಲಿ ಗಾಂಧಿ ಮತ್ತು ಕಸ್ತೂರಬಾ ದಂಪತಿಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ರಾಮದಾಸ್ ಮತ್ತು ದೇವದಾಸ್ ಎಂಬ ಮತ್ತಿಬ್ಬರು ಪುತ್ರರು ಜನಿಸಿದರು. 1901 ವೇಳೆಗೆ ಗಾಂಧೀಜಿಯವರು ಭಾರತಕ್ಕೆ ಹಿಂತಿರುಗಲು ನಿರ್ಧರಿಸಿದರು. ಅದರಂತೆ 1901 ಅಕ್ಟೋಬರ್ 19 ರಂದು ಆಫ್ರಿಕಾದ ಡರ್ಬಾನ್ ನಗರವನ್ನು ತೊರೆದು ತನ್ನ ಕುಟುಂಬದೊಂದಿಗೆ ಭಾರತಕ್ಕೆ ವಾಪಸ್ಸಾದರು.
ದಕ್ಷಿಣ ಆಫ್ರಿಕಾದಲ್ಲಿದ್ದ ಒಂದು ದಶಕದ ಅವಧಿಯಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆಗಾಗಿ ಅಲ್ಲಿನ ಭಾರತೀಯರು ಗಾಂಧೀಜಿ ಕುಟುಂಬಕ್ಕೆ ಗೌರವ ನಿಧಿಯನ್ನು ಒಳಗೊಂಡಂತೆ ಒಂದಿಷ್ಟು ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದರು. ಆದರೆ, ಗಾಂಧೀಜಿಯವರು ಉಡುಗೊರೆಯನ್ನು ತೆಗೆದುಕೊಳ್ಳಲು ನಿರಾಕರಿಸಿ ಅವುಗಳನ್ನು ವಾಪಸ್ ಮಾಡುವ ಸಂದರ್ಭದಲ್ಲಿ ಕಸ್ತೂರಬಾ ಮತ್ತು ಗಾಂಧೀಜಿ ನಡುವೆ ದೊಡ್ಡ ವಾಗ್ವುದ್ಧ ನಡೆದು ಹೋಯಿತು. ಗಾಂಧೀಜಿಯವರಿಗೆ ಕಾಥೆವಾಡ ಮತ್ತು ಬಾಂಬೆ ನಗರಗಳಲ್ಲಿ ಯಾವುದೇ ಕಕ್ಷಿದಾರರು ದೊರಕದೆ ಖಾಲಿ ಕೈಲಿ ಕುಳಿತಿದ್ದ ಸಂದರ್ಭದಲ್ಲಿ ಕಸ್ತೂರಬಾ ಅವರು ತಮ್ಮ ಮೈಮೇಲಿನ ಆಭರಣಗಳನ್ನು ಕಳಚಿಕೊಟ್ಟು ಕುಟುಂಬ ನಿರ್ವಹಣೆಗೆ ಕೈ ಜೋಡಿಸಿದ್ದರು. ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ದೃಷ್ಟಿಯಿಂದ ಗೌರವ ನಿಧಿಯನ್ನು ಸ್ವೀಕರಿಸೋಣ ಎಂಬ ಕಸ್ತೂರಬಾ ನಿಲುವಿಗೆ ಗಾಂಧೀಜಿ ಸಹಮತ ವ್ಯಕ್ತಪಡಿಸಲಿಲ್ಲ. ಅಂತಿಮವಾಗಿ ಗಾಂಧೀಜಿಯವರ ಹಠಮಾರಿತನ ಗೆದ್ದಿತು. ಆಶ್ಚರ್ಯಕರ ಸಂಗತಿಯೆಂದರೆ, ತಂದೆಯ ಧೋರಣೆಗೆ ಹರಿಲಾಲ್ ಮತ್ತು ಮಣಿಲಾಲ್ ಬೆಂಬಲ ವ್ಯಕ್ತಪಡಿಸಿದರು. ರಾಮದಾಸ್ ಮತ್ತು ದೇವದಾಸ್ ಚಿಕ್ಕ ಮಕ್ಕಳಾದ್ದರಿಂದ ತಮ್ಮ ಕುಟುಂಬದಲ್ಲಿ ನಡೆಯುತ್ತಿದ್ದ ಘಟನೆಗಳಿಗೆ ಮೌನವಾಗಿ ಸಾಕ್ಷಿಯಾದರು.
ಭಾರತಕ್ಕೆ ಹಿಂತಿರುಗಿ ಬಂದ ನಂತರ ಗಾಂಧೀಜಿಯವರು ತಮ್ಮ ಕುಟುಂಬದೊಂದಿಗೆ ಬಾಂಬೆ ನಗರದಲ್ಲಿ ನೆಲೆ ನಿಂತು ವಕೀಲಿ ವೃತ್ತಿಯಲ್ಲಿ ನಿರತರಾದರು. ಮಕ್ಕಳು ಬೆಳೆಯುತ್ತಿದ್ದಂತೆ ಅವರ ಶಿಕ್ಷಣ ಕುರಿತಂತೆ ಗಾಂಧಿಯವರಲ್ಲಿ ಜಿಜ್ಞಾಸೆ ಆರಂಭವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರಲ್ಲದ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿತ್ತು. ಗಾಂಧೀಜಿಯಂತಹ ಪ್ರತಿಷ್ಠಿತ ವ್ಯಕ್ತಿಗಳ ಮಕ್ಕಳಿಗೆ ಪ್ರವೇಶ ದೊರಕುತ್ತಿತ್ತಾದರೂ, ಅಂತಹ ಮಕ್ಕಳು ಅಸ್ಪøಶ್ಯರಂತೆ ಉಳಿದ ಮಕ್ಕಳಿಂದ ದೂರವಾಗಿ ಉಳಿದು ಪಾಠ ಕಲಿಯುವ ವಾತಾವರಣವಿತ್ತು. ಕಾರಣಕ್ಕಾಗಿ ಗಾಂಧೀಜಿಯವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ತಾವೇ ಸ್ವತಃ ಮನೆಯಲ್ಲಿ ಪಾಠ ಹೇಳಲು ನಿರ್ಧರಿಸಿದ್ದರು. ಆದರೆ ಅವರ ಕಾರ್ಯಭಾರದ ಒತ್ತಡದಿಂದ ಸಾಧ್ಯವಾಗುತ್ತಿರಲಿಲ್ಲ. ಅಲ್ಲಿದ್ದ ಬಹುತೇಕ ಭಾರತೀಯರು ವ್ಯಾಪಾರಿಗಳು ಇಲ್ಲವೆ, ಗುಮಾಸ್ತರಾಗಿದ್ದ ಕಾರಣ ಮಕ್ಕಳಿಗೆ ಶಿಕ್ಷಣ ನೀಡುವಂತಹ ಶಿಕ್ಷಕರು ದೊರಕಲಿಲ್ಲ. ಪತ್ಮಿ ಕಸ್ತೂರಬಾ ಅನಕ್ಷರಸ್ತೆಯಾಗಿದ್ದರು. ( ನಂತರದ ದಿನಗಳಲ್ಲಿ ಓದು,ಬರಹ ಕಲಿತರು) ಇದೇ ಪರಿಸ್ಥಿತಿ ಗಾಂಧೀಜಿಯವರಿಗೆ ಭಾರತಕ್ಕೆ ಬಂದ ನಂತರವೂ ಎದುರಾಯಿತು. ಸಂದರ್ಭದಲ್ಲಿ ತನ್ನ ಸೋದರ ಸಂಬಂಧಿ ಗೋಕುಲ್ ದಾಸ್ ಹಾಗೂ ಹಿರಿಯ ಪುತ್ರ ಹರಿಲಾಲ್ ಇಬ್ಬರನ್ನು ಬನಾರಸ್ ಮತ್ತು ಗೊಂಡಾಲ್ ವಸತಿ ಶಾಲೆಗೆ ಹಾಕಿದರು. ಹರಿಲಾಲ್ ವ್ಯಾಸಂಗ ಮಾಡುತ್ತಿದ್ದ ವಸತಿ ಶಾಲೆಯ ಗುಣಮಟ್ಟದ ಬಗ್ಗೆ ಅತೃಪ್ತಗೊಂಡ ಗಾಂಧೀಜಿಯವರು ತಮ್ಮ ಪುತ್ರನನ್ನ ವಾಪಸ್ ಮುಂಬೈಗೆ ವಾಪಸ್ ಕರೆತಂದರು. ಅದೇ ವೇಳೆಗೆ ಮುಂಬೈ ನಗರಕ್ಕೆ ಆಗಮಿಸಿದ ಅವರ ಸಂಬಂಧಿ ಛಗನ್ ಲಾಲ್ ಮುಂಬೈ ನಗರಕ್ಕೆ ಆಗಮಿಸಿ ಗಾಂಧಿ ಕುಟುಂಬದೊಂದಿಗೆ ವಾಸವಾಗಿದ್ದುಕೊಂಡು, ಅವರ ಎಲ್ಲಾ ಪುತ್ರರಿಗೂ ಪಾಠ ಹೇಳಿಕೊಡುತ್ತಿದ್ದರು.
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿ ಬರುವಾಗ ಅವಶ್ಯಕತೆ ಬಿದ್ದರೆ, ನಿಮ್ಮ ಸೇವೆಗಾಗಿ ಮರಳಿ ಬರಲು ಸಿದ್ಧ ಎಂಬ ಆಶ್ವಾಸನೆಯನ್ನು ಅಲ್ಲಿನ ಭಾರತೀಯರಿಗೆ ನೀಡಿಬಂದಿದ್ದರು. ಅದರಂತೆ ಅವರಿಗೆ ಒಂದಿಷ್ಟು ಪ್ರಯಾಣದ ವೆಚ್ಚದ ಹಣದ ಜೊತೆಗೆ ಕೂಡಲೇ ಬರಬೇಕೆಂಬ ಟೆಲಿಗ್ರಾಂ ಬಂದಿತು. ಗಾಂಧೀಜಿಯವರು 1992 ನವಂಬರ್ ತಿಂಗಳಿನಲ್ಲಿ ಪುನಃ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು.  ಗಾಂಧೀಜಿಯವರ ಕುಟುಂಬವು ಮಕ್ಕಳ ವಿದ್ಯಾಭ್ಯಾಸದ ಕಾರಣಗಳಿಂದ ಮುಂಬೈ ನಗರದಲ್ಲೇ ವಾಸವಾಗಿತ್ತು. ಅಂತಿಮವಾಗಿ ಗಾಂಧೀಜಿಯವರು ಕಸ್ತೂರಬಾ ಮತ್ತು ಮಕ್ಕಳನ್ನು ದಕ್ಷಿಣಾ ಆಫ್ರಿಕಾಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದರು. ಹರಿಲಾಲ್ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಆತನನ್ನು ಮುಂಬೈ ನಲ್ಲಿ ಉಳಿಸಿ, ಕಸ್ತೂರಬಾ ಮತ್ತು ಮಕ್ಕಳಾದ ಮಣಿಲಾಲ್, ರಾಮದಾಸ್ ಹಾಗೂ ದೇವದಾಸ್ ಇವರನ್ನು 1904 ರಲ್ಲಿ ದಕ್ಷಿಣ ಆಫ್ರಿಕಾ ದೇಶಕ್ಕೆ ಕರೆಸಿಕೊಂಡರು. ಜೋಹಾನ್ಸ್ ಬರ್ಗ್ ನಗರದಲ್ಲಿ ಮನೆ ಮಾಡಿದ ಅವರು ತಮ್ಮ ವಕೀಲಿ ವೃತ್ತಿ ಹಾಗೂ ಕಪ್ಪು ವರ್ಣಿಯರ ಪರ ಹೋರಾಟದ ನಡುವೆಯೂ ಸಹ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು.  (ಮುಂಬೈ ನಗರದಲ್ಲಿ ಗಾಂಧೀಜಿಯವರ ಹಿರಿಯ ಸಹೋದರ ಲಕ್ಷ್ಮಿದಾಸ್ ಅವರ ಗೆಳೆಯರಾಗಿದ್ದ ಡಾ.ಪ್ರೇಮ್ ಜೀವನದಾಸ್ ಅವರಿಗೆ ಆತ್ಮೀಯರಾಗಿದ್ದ ರೇವಾಶಂಕರ್ ಜಗ್ ಜೀವನ್ ಜವೇರಿ ಅವರ ಮಾಣಿಕ್ ಭವನ್ ಕಟ್ಟಡದಲ್ಲಿ ಗಾಂಧೀಜಿ ವಾಸವಾvದ್ದರಿಂದ ತಮ್ಮ ಪುತ್ರ ಹರಿಲಾಲ್ ನನ್ನು ಅಲ್ಲಿಯೇ ಇರಿಸಿ, ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದರು.)
ಇತ್ತ ಹರಿಲಾಲ್ ಮುಂಬೈ ನಗರದಲ್ಲಿದ್ದುಕೊಂಡು ತನ್ನ ಶಿಕ್ಷಣವನ್ನು ಮುಂದುವರಿಸಿದ್ದರು. ಗುಜರಾತಿನ ರಾಜ್ ಕೋಟ್ ನಗರದಲ್ಲಿ ಬನಿಯಾ ಸಮುದಾಯಕ್ಕೆ ಸೇರಿದ ಎರಡು ಕುಟುಂಬಗಳು ಪ್ರಸಿದ್ಧವಾಗಿದ್ದವು. ಅವುಗಳಲ್ಲಿ ಒಂದು ಮಹಾತ್ಮ ಗಾಂಧಿಯವರ ಕುಟುಂಬವಾದರೆ, ಮತ್ತೊಂದು ವೋರಾ ಕುಟುಂಬವಾಗಿತ್ತು. ಹರಿದಾಸ್ ಬಾಯ್ ಎಂದು ಪ್ರಸಿದ್ಧರಾಗಿದ್ದ ಹರಿದಾಸ್ ವೆಂಕಟಚಂದ್ ವೋರಾ ಅವರು ರಾಜ್ ಕೋಟ್ ನಗರದಲ್ಲಿ ಸಾಮಾಜಿಕ ಸುಧಾರಕರಾಗಿ ಹೆಸರುವಾಸಿಯಾಗಿದ್ದರು. ಗಾಂಧಿಯವರು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳಿದ ಸಂದರ್ಭದಲ್ಲಿ ಅವರನ್ನು ಜಾತಿ ಭ್ರಷರೆಂದು ಘೋಷಿಸಿ ಬಹಿಷ್ಕಾರ ಹಾಕಿದ್ದ ಸಂದರ್ಭದಲ್ಲಿ ತಮ್ಮ ಸಮುದಾಯದ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸಿದ್ದರು. ಅಷ್ಟೇ ಅಲ್ಲದೆ ಗಾಂಧೀಜಿ ಶಿಕ್ಷಣ ಮುಗಿಸಿ ಅವರು ವಿದೇಶದಿಂದ ವಾಪಸ್ ಬಂದ ಸಂದರ್ಭದಲ್ಲಿ ಅವರನ್ನು ತಮ್ಮ ಪುತ್ರ ಛಗನ್ ಲಾಲ್ ಜೊತೆಗೂಡಿ ವಿಶೇಷ ಗೌರವದೊಂದಿಗೆ ಬರಮಾಡಿಕೊಂಡಿದ್ದರಲ್ಲದೆ, ಮತ್ತೇ ಶುದ್ಧೀಕರಣದೊಂದಿಗೆ ಅವರನ್ನು ಪುನಃ ಬನಿಯಾ ಸಮುದಾಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಕಾರಣದಿಂದಾಗಿ ಹರಿದಾಸ್ ಬಾಯ್ï ಮತ್ತು ಗಾಂಧೀಜಿ ನಡುವೆ ಅನ್ಯೋನ್ಯತೆ ಬೆಳೆದಿತ್ತು.

ಹರಿದಾಸ್ ಬಾಯ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಅವರಲ್ಲಿ ಎರಡನೆಯ ಪ್ಮತ್ರಿಯಾದ ಗುಲಾಬ್ ಬೆಹನ್ ಎಂಬಾಕೆಯನ್ನು ಗಾಂಧಿ ಪುತ್ರ ಹರಿಲಾಲ್ ಗೆ ಏಕೆ ವಿವಾಹ ಮಾಡಬಾರದು? ಎಂಬ ಚರ್ಚೆ ಅವರ ಕುಟುಂಬದಲ್ಲಿ ಆರಂಭವಾಯಿತು. ಪ್ರಸ್ತಾಪವನ್ನು ಹರಿದಾಸ್ ಅವರು ಗಾಂಧಿಯವರ ಹಿರಿಯ ಸಹೋದರ ಲಕ್ಷ್ಮಿದಾಸ್ ಅವರಲ್ಲಿ ಪ್ರಸ್ತಾಪ ಮಾಡಿದರು. ಪ್ರಸ್ತಾಪಕ್ಕೆ ಸಹಮತ ವ್ಯಕ್ತಪಡಿಸಿದ ಲಕ್ಷ್ಮಿದಾಸ್ ಅವರು ತಮ್ಮ ಸಹೋದರನ ಅಭಿಪ್ರಾಯ ಕೇಳಿ ಗಾಂಧೀಜಿಯವರಿಗೆ ಪತ್ರ ಬರೆದರು. ನನ್ನ ತೊಡೆಯ ಮೇಲೆ ಆಡಿ ಬೆಳೆದಿದ್ದ ಗುಲಾಬ್ ಬೆಹನ್ ನನ್ನ ಕುಟುಂಬದ ಸೊಸೆಯಾಗುವುದು ಸಂತೋಷದ ವಿಷಯ ಎಂದು  ಗಾಂಧೀಜಿಯವರು ಸಮ್ಮತಿ ಸೂಚಿಸಿದರು. ನಂತರ ಹರಿಲಾಲ್ ಮತ್ತು ಗುಲಾಬ್ ಬೆಹನ್ ವಿವಾಹ ನಿಶ್ಚಿತಾರ್ಥವೂ ಕೂಡ ಗಾಂಧೀಜಿಯವರ ಅನುಪಸ್ಥಿತಿಯಲ್ಲಿ ಅವರ ಸಹೋದರನ ನೇತೃತ್ವದಲ್ಲಿ ನಡೆದು ಹೋಯಿತು.
1903 ಏಪ್ರಿಲ್ ತಿಂಗಳ ಬೇಸಿಗೆ ರಜೆಯಲ್ಲಿ ಹರಿಲಾಲ್ ರಾಜ್ ಕೋಟ್ ನಗರದ ತನ್ನ ಸೋದರತ್ತೆಯ ಮನೆಗೆ ( ಗಾಂಧೀಜಿಯ ಸಹೋದರಿ ರಲಿಯಾತ್ ಬೆಹನ್) ಹೋದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದರು. ಪುರುಷರಿಲ್ಲದ ಮನೆಯಲ್ಲಿ ಹರಿಲಾಲ್ ನನ್ನು ಶುಶ್ರೂಶೆ ಮಾಡುವುದು ಕಷ್ಟ ಎಂದು ಅರಿತ ಹರಿಲಾಲ್ ಭಾವಿ ಮಾವನವರಾದ ಹರಿದಾಸ್ ಬಾಯ್ ಅವರು ಹರಿಲಾಲ್ ನನ್ನು ತಮ್ಮ ಮನೆಗೆ ಕರೆದೊಯ್ದು ಎರಡು ತಿಂಗಳ ಕಾಲ ಶುಶ್ರೂಸೆ ಮಾಡಿದರು. ವಿಷಯ ತಿಳಿದ ಗಾಂಧೀಜಿಯವರು ಹರಿದಾಸ್ ಗೆ ಕೃತಜ್ಞತೆಯ ಪತ್ರವನ್ನು ಸಹ ಬರೆದರು.
ಗಾಂಧೀಜಿಯವರು ತಮ್ಮ ಪುತ್ರ ಹರಿಲಾಲ್ ನನ್ನು ಒಂಟಿ ಬಿಡುವುದು ಬೇಡ ಎಂದು ನಿರ್ಧರಿಸಿ, ದಕ್ಷಿಣ ಆಫ್ರಿಕಾಕ್ಕೆ ಬರಬೇಕೆಂದು ಒತ್ತಾಯಿಸಿದಾಗ, ಗುಲಾಬ್ ಬೆಹನ್ರವರ ತಂದೆ ಹರಿದಾಸ್ ಒತ್ತಡಕ್ಕೆ ಒಳಗಾದರು. ಏಕೆಂದರೆ, ತಮ್ಮ ಭಾವಿ ಅಳಿಯ ಹರಿಲಾಲ್ ಕ್ಷಿಣ ಆಫ್ರಿಕಾಕ್ಕೆ ತೆರಳಿದರೆ, ವಾಪಸ್ ಬರುವುದು ಐದು ವರ್ಷಗಳ ನಂತರ ಎಂಬುದು ತಿಳಿದಿತ್ತು. ಅಲ್ಲಿಯವರೆಗೆ ಬೆಳೆದ ಹೆಣ್ಣು ಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಷ್ಟ ಎಂದು ಭಾವಿಸಿದ ಅವರು,ಗಾಂಧೀಜಿಯವರ ಸಹೋದರ ಲಕ್ಷ್ಮಿದಾಸ್ ಅವರನ್ನು ಒತ್ತಾಯಿಸಿ ವಿವಾಹ ನೆರವೇರಿಸಿದರು. ಹರಿಲಾಲ್ ಗೆ ವಿವಾಹವಾದಾಗ ಕೇವಲ ಹದಿನಾರು ವರ್ಷವಾಗಿತ್ತು. ಕಾರಣಕ್ಕೆ ಗಾಂಧೀಜಿಯವರು ತಮ್ಮ ಪುತ್ರನ ಬಾಲ್ಯ ವಿವಾಹವನ್ನು ಪ್ರಬಲವಾಗಿ ವಿರೋಧಿಸಿದ್ದರು. ಆನಂತರ ತಮ್ಮ ಕುಟುಂಬ ಹಾಗೂ ಹರಿದಾಸ್ ಸ್ನೇಹದ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದ ಫಲವಾಗಿ ಗಾಂಧಿಯವರ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ 1907 ಮೇ 2 ರಂದು ಹರಿಲಾಲ್ ಮತ್ತು ಗುಲಾಬ್ ಬೆಹನ್ ವಿವಾಹ ನೆರವೇರಿತು.
(ಮುಂದುವರಿಯುವುದು)             
( ಜನಪದ ವಿಚಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಲೇಖನ ಸರಣಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ