Saturday, 25 April 2020

ನರಹತ್ಯೆ ಮತ್ತು ಜಗುಲಿ ಸಂಸ್ಕೃತಿ

ಮೊನ್ನೆ ಮಹಾರಾಷ್ಟ್ರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾಧುಗಳನ್ನು ಹಾಗೂ  ಚಾಲಕನನ್ನು ಮಕ್ಕಳ ಕಳ್ಳರೆಂದು ಭಾವಿಸಿ ಜನರು  ಹತ್ಯೆ ಮಾಡಿದ್ದಾರೆ. ಈ ಸುದ್ದಿ ಪ್ರಸಕ್ತ ಭಾರತದ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಕಳೆದ  ಆರರೇಳು ವರ್ಷಗಳಿಂದ ಮಕ್ಕಳ ಕಳ್ಳರು, ಮಾತಗಾತಿಯರು, ಗೋವುಗಳ ಕಳ್ಳಸಾಗಾಣಿಕೆದಾರರು ಎಂಬ ಹಣೆಪಟ್ಟಿಯೊಂದಿಗೆ ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಮತ್ತು ಅಮಾಯಕರನ್ನು ಗ್ರಾಮ ಭಾರತದಲ್ಲಿ  ನಿರ್ಧಯವಾಗಿ ಕೊಲ್ಲಲಾಗುತ್ತಿದೆ. ಮನುಷ್ಯ ಮನಷ್ಯನನ್ನು ಕೊಲ್ಲುವುದು ಅನಾಗರೀಯಕತೆಯ ಕಾಲದಲ್ಲಿ ಮತ್ತು ಯುದ್ಧದಲ್ಲಿ ಎಂದು ತಿಳಿದುಕೊಂಡಿದ್ದ ನಮಗೆ ಈಗ ನಾವು ಬದುಕುತ್ತಿರುವ ಕಾಲಘಟ್ಟ ಯಾವುದು ಎಂಬ ಪ್ರಶ್ನೆ ಎದುರಾಗಿದೆ.
ಈ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಯಾವೊಬ್ಬ ಅಪರಿಚಿತ ವ್ಯಕ್ತಿಯೂ ಹಳ್ಳಿಗಳಿಗೆ ಕಾಲಿಡದಂತೆ ಅವನನ್ನು ಅಥವಾ ಅವಳನ್ನು ಅಸಹಾಯಕತೆಗೆ ದೂಡಿದೆ. ಭಾರತದ ನಿಜವಾದ ಆತ್ಮದಂತಿರುವ ಹಳ್ಳಿಗಳಿಗೆ ಮತ್ತು ಅಲ್ಲಿನ ಜನರ ಎದೆಯೊಳಕ್ಕೆ ಈ ಕ್ರೌರ್ಯದ ಹಾಗೂ ಅಪನಂಬಿಕೆಯ ವಿಷವನ್ನು ತುಂಬಿದವರು ಯಾರು? ಇದು ಉತ್ತರವಿಲ್ಲದ ಪ್ರಶ್ನೆ. ನಾನು ಹಳ್ಳಿಗಾಡಿನ ಸಂಸ್ಕೃತಿಯಿಂದ ಬಂದವನು ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಕಾಲ ಒಂದಿತ್ತು ಆದರೆ, ಈಗ ಆ ಮಾತನ್ನು ಹೇಳಲು ನನಗೀಗ ಹಿಂಜರಿಕೆಯಾಗುತ್ತಿದೆ. ಇಂದಿನ ಹಳ್ಳಿಗಳು ಅಪನಂಬಿಕೆ, ದ್ವೇಷ ಮತ್ತು ದಳ್ಳುರಿಗಳ ಕೊಂಪೆಯಾಗಿವೆ. ನಗರ ಸಂಸ್ಕೃತಿಯ ಕಾಡ್ಗಿಚ್ಚಿನಿಂದ ಅರಬೆಂದ ನಿತ್ಯ ಹರಿದ್ವರ್ಣದ ಕಾಡಿನಂತೆ ಗೋಚರಿಸುತ್ತಿವೆ.
1981 ರಲ್ಲಿ ತಮಿಳುಭಾಷೆಯಲ್ಲಿ ಬಿಡುಗಡೆಯಾದ ಕೆ.ಬಾಲಚಂದರ್ ರವರ “ ತಣ್ಣೀರ್, ತಣ್ಣೀರ್” ಸಿನಿಮಾವನ್ನು ನಾನು ಪ್ರಥಮವಾಗಿ ನೋಡಿದ್ದು ತಿರುಪತಿಯ ಚಿತ್ರಮಂದಿರದಲ್ಲಿ.ಆ ಚಿತ್ರದ ನಾಯಕಿ ಹೇಳುವ ಒಂದು ಡೈಲಾಗ್ ಇವೊತ್ತಿಗೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡು ಬಿಟ್ಟಿದೆ.
ಒಬ್ಬ ಖೈದಿ ರಾತ್ರೋ ರಾತ್ರಿ ಜೈಲಿನಿಂದ ತಪ್ಪಿಸಿಕೊಂಡು ನಡೆಯುತ್ತಾ ಅನೇಕ ಹಳ್ಳಿಗಳನ್ನು ದಾಟುತ್ತಾ ಹೋಗುತ್ತಿರುತ್ತಾನೆ. ಮಧ್ಯಾಹ್ನದ ವೇಳೆಗೆ ಹಸಿವು ಮತ್ತು ನೀರಡಿಕೆಯಿಂದ ಒಂದು ಹಳ್ಳಿಯನ್ನು ತಲುಪುತ್ತಾನೆ. ಆ ಹಳ್ಳಿ ಒಂದು ಕುಗ್ರಾಮ. ಕುಡಿಯುವ ನೀರಿಗಾಗಿ ಎಂಟತ್ತು ಕಿಲೊಮೀಟರ್ ದೂರ ಹೋಗಿ ಮಹಿಳೆಯರು ನೀರು ಹೊತ್ತು ತರಬೇಕಾದ ಸ್ಥಿತಿ.  ಯಾರೊಬ್ಬರೂ ಅವನಿಗೆ ನೀರು ಕೊಡಲು ನಿರಾಕರಿಸುತ್ತಾರೆ. ನಿರಾಸೆಯಿಂದ ಹಳ್ಳಿಯಿಂದ ಹೋಗುತ್ತಿರುವ  ಸಮಯದಲ್ಲಿ ಖೈದಿಗೆ ಆಗ ತಾನೆ  ಉರಿಬಿಸಿನಲ್ಲಿ ತಲೆಯ ಮೇಲೆ ಹಾಗೂ ಸೊಂಟದಲ್ಲಿ ನೀರು ಹೊತ್ತು ಹಳ್ಳಿಗೆ ಬರುತ್ತಿರುವ ಹೆಣ್ಣುಮಗಳು ಕಾಣುತ್ತಾಳೆ. ಅವಳ ಬಳಿ ತೆರಳಿ ನೀಗಿಗಾಗಿ ಕೈಯೊಡ್ಡಿದ್ದಾಗ ಆಕೆ ಹೇಳುವ ಮಾತಿದು, “ ಅಣ್ಣಯ್ಯಾ, ಈ ಊರಿನಲ್ಲಿ ನೀನು ಹೆಂಗಸರ ಶೀಲ ಬೇಕಾದರೆ ಕೇಳು ಕೊಟ್ಟುಬಿಡುತ್ತಾರೆ ಆದರೆ, ನೀರು ಕೊಡಲಾರರು” ಒಂದು ಹಳ್ಳಿಯ ಕುಡಿಯುವ ನೀರಿನ ಅಭಾವ ಕುರಿತು ಕಟು ವಾಸ್ತವ ಸಂಗತಿಯನ್ನು ಹೀಗೂ ಹೇಳಬಹುದೆ ಎಂದು ನಮಗೆ ಆಶ್ಚರ್ಯವಾಗುತ್ತದೆ. ನಂತರ  ಅನುಕಂಪದಿಂದ ಆತನ ಬೊಗಸೆಗೆ ನೀರು ಸುರಿಯುತ್ತಾಳೆ, ಆತನ ದಾಹವನ್ನು ನೀಗಿಸುತ್ತಾಳೆ.

ಆ ಹೆಣ್ಣುಮಗಳ ಅಂತಃಕರಣ ಮತ್ತು ಪ್ರೀತಿಗೆ ಮನಸೋತ ಖೈದಿ, ನೀರಿನ ಅಭಾವ ಕುರಿತು  ಆಕೆಯನ್ನು ಕೇಳಿದಾಗ, ಎಂಟತ್ತು ಕಿ.ಮಿ.ದೂರದ ನಾಲೆಯನ್ನು ಹಳ್ಳಿಯತ್ತ ತಿರುಗಿಸಲು  ಊರಿನ ಗಂಡಸರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮನಸ್ಸಿಲ್ಲ ಎಂಬ ಸಂಗತಿ ನಾಯಕಿಯಿಂದ ತಿಳಿಯುತ್ತದೆ. ತನ್ನ ಹಿನ್ನಲೆಯನ್ನು ಹೇಳಿಕೊಳ್ಳದ ಖೈದಿ, ಆ ಹೆಣ್ಣುಮಗಳನ್ನು ತಂಗಿಯೆಂದು ಭಾವಿಸಿ, ಆಕೆಯ ಆಶ್ರಯದಲ್ಲಿ ಉಳಿದುಕೊಂಡು ಏಕಾಂಗಿಯಾಗಿ ನಾಲುವೆ ತೋಡಿ ಊರಿಗೆ ನೀರು ಹರಿಸಲು ಪ್ರಯತ್ನಿಸುತ್ತಾನೆ. ಒಂದು ಬೊಗಸೆ ನೀರು ಮತ್ತು ಹೆಣ್ಣಿನ ಅಂತಃಕರಣ ಹೇಗೆ ಒಬ್ಬ ಖೈದಿಯ ಮನಪರಿವರ್ತನೆ ಮಾಡಬಲ್ಲದು ಎಂಬುದಕ್ಕೆ ಹಾಗೂ ಹಳ್ಳಿಗಳ ನಿಜವಾದ ಮಾನವೀಯ ಮುಖಕ್ಕೆ ಈ ಚಿತ್ರ ಇವೊತ್ತಿಗೂ ಸಾಕ್ಷಿಯಾಗಿದೆ. ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸರಿತಾಳ ಪಾತ್ರ ಆಕೆ ನಿಜಕ್ಕೂ ಭಾರತದ ಶ್ರೇಷ್ಠ ಅಭಿನೇತ್ರಿ ಎಂದು ಸಾಬೀತು ಪಡಿಸಿದೆ,
ನಾನು ಮತ್ತು ನನ್ನ ತಲೆಮಾರಿನ ಅನೇಕ ಬರಹಗಾರರು ಹುಟ್ಟಿ ಬೆಳೆದ ಹಳ್ಳಿಗಳು ಹೀಗೆಯೇ ಇದ್ದವು. ಎಲ್ಲರ ಮನೆಯ ಮುಂದೆ ಜಗುಲಿಗಳಿದ್ದವು. ಊರಿಗೆ ಬರುತ್ತಿದ್ದ ಮಡಿಕೆ ಮಾರುವವರುಮ ಕಸಬರಿಕೆ ಮಾರುವವರು, ಪಾತ್ರೆ ಹಾಗೂ ಬಟ್ಟೆಗಳನ್ನು ತಲೆಯ ಮೇಲೆ ಹೊತ್ತು ಮಾರುವವರು ನಮ್ಮ ಜಗುಲಿಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದರು. ಬಾಯಾರಿಯಾದಾಗ ಮಜ್ಜಿಗೆ, ಹಸಿವಾಗಿದ್ದಾಗ ಊಟ ಎಲ್ಲರ ಮನೆಗಳಲ್ಲಿ ಅವರಿಗೆ ದೊರೆಯುತ್ತಿತ್ತು. ಎಂತಹ ಬಡರೈತನ ಮನೆಯಲ್ಲಿಯೂ ಸಹ ಯಾರಾದರೂ ಬಂದರೆ ಇರಲಿ ಎಂದು ಅಗತ್ಯಕ್ಕಿಂತ ಎರಡು ಅಥವಾ ಮೂರು ಮುದ್ದೆಗಳನ್ನು ಹೆಚ್ಚಿಗೆ ಮಾಡಿ ಇಡುತ್ತಿದ್ದರು.
ಇನ್ನು, ಹಳ್ಳಿಗಾಡಿನ ಹೆಣ್ಣು ಮಕ್ಕಳಿಗೆ ಸೂಜಿ, ದಾರ, ಕರಿಮಣಿ, ಹೇರ್ ಪಿನ್, ಪೌಡರ್ ಇತ್ಯಾದಿಗಳನ್ನು  ಸೂಟ್ ಕೇಸ್ ನಂತಹ ಪೆಟ್ಟಿಗೆಯಲ್ಲಿ ಇಟ್ಟುಕೊಂಡು, ಕಂಕುಳಲ್ಲಿ ಮಗು ಇಟ್ಟುಕೊಂಡು ಬರುತ್ತಿದ್ದ ಹೆಣ್ಣುಮಕ್ಕಳಿಗೆ ನಮ್ಮ ಅವ್ವಂದಿರು ಅಥವಾ ಅಕ್ಕ ತಂಗಿಯರು ಮಧ್ಯಾಹ್ನದ ವೇಳೆ ಅವರಿಗೆ ಊಟ ಹಾಕಿ, ಮಗುವಿಗೆ ಕುಡಿಯಲು ಹಾಲು ಒದಗಿಸುತ್ತಿದ್ದರು.
ಎಂತಹ ಬಡತನದ ನಡುವೆಯೂ ಸಹ ಬಡವರು ತಮ್ಮ ವೃತ್ತಿಯನ್ನು ಬಿಡುತ್ತಿರಲಿಲ್ಲ. ಹಳ್ಳಿಗೆ ಹೋದರೆ, ಊಟಕ್ಕೆ ತೊಂದರೆಯಿಲ್ಲ ಎಂಬ ಭರವಸೆ ಅವರ ಬದುಕಿಗೆ ಬೆಳಕಿನ ದಾರಿಯಂತೆ ತೋರುತ್ತಿತ್ತು. ಹುಣಸೆ ಬೀಜ, ಬೇವು ಮತ್ತು ಹೊಂಗೆ ಬೀಜ ಕಲೆ ಹಾಕಲು ಬರುತ್ತಿದ್ದ ಮುಸ್ಲಿಂ ಮಂದಿ ಊರಿನ ಜನತೆಗೆಲಾ ಸಾಬಣ್ಣ ಆಗಿರುತ್ತಿದ್ದರು.ಅವರ ಹೆಣ್ಣು ಮಕ್ಕಳ ಮದುವೆಗೆ ಅಕ್ಕಿ, ತೆಂಗಿನ ಕಾಯಿ, ಬಾಳೆಹಣ್ಣು, ಆರ್ಥಕ ಸಹಾಯ ಇವೆಲ್ಲವೂ  ಹಳ್ಳಿಗಳಿಂದ ಧಾರಾಳವಾಗಿ ಸಿಗುತ್ತಿತ್ತು. ಅಲ್ಲಿನ ಜಾತಿ, ಧರ್ಮಕ್ಕಿಂತ ಮಿಗಿಲಾಗಿ ಅವರೂ ಸಹ  ನಮ್ಮಂತೆ ಮನನುಷ್ಯರು ಎಂಬ ಉದಾತ್ತ ಮಾನವೀಯ ಪ್ರಜ್ಞೆ ಅಶಿಕ್ಷಿತರಾದ ಹಳ್ಳಿಗರಲ್ಲಿ ಮನೆ ಮಾಡಿತ್ತು.

ಈಗ ಅಂತಹ ಪ್ರಜ್ಞೆಯನ್ನು ಮತ್ತು ಮನುಷ್ಯ ಸಂಬಂಧ ಕುರಿತಾದ ನಂಬಿಕೆಯನ್ನು ಎಲ್ಲಿ ಹುಡುಕಿ ತರೋಣ. ಊರುಗಳಲ್ಲಿದ್ದ ಜಗುಲಿ ಮನೆ ಮಾಯವಾಗಿವೆ, ಆರ್.ಸಿ.ಸಿ. ಮನೆ ಎದ್ದು ನಿಂತಿವೆ. ಅಪರಿಚತರು, ಭಿಕ್ಷುಕರು, ವ್ಯಾಪಾರಿಗಳು ರಾತ್ರಿಯ ವೇಳೆ ತಂಗುತ್ತಿದ್ದ ದೇವಸ್ಥಾನದ ಆವರಣ, ಶಾಲೆಗಳ ಹೊರಜಗುಲಿ ಇವುಗಳಿಗೆ ಕಾಂಪೌಂಡ್ ನಿರ್ಮಿಸಿ ಬೀಗ ಜಡಿಯಲಾಗಿದೆ. ಈ ಬೀಗ ಒಂದರ್ಥದಲ್ಲಿ ನಮ್ಮ ಮನಸ್ಸಿಗೆ ನಾವು ಹಾಕಿಕೊಂಡಿರುವ ಬೀಗಗಳಲ್ಲದೆ ಬೇರೇನೂ ಅಲ್ಲ,

No comments:

Post a Comment