ಶನಿವಾರ, ಏಪ್ರಿಲ್ 4, 2020

ಉಳ್ಳವರ ಭಾರತದಲ್ಲಿ ನರಳುತ್ತಿರುವ ಬಡ ಭಾರತ


ನಮ್ಮ ನಡುವಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ಮಾನವೀಯ ಮುಖದ ಹೃದಯವಂತ ಅಮಾರ್ತ್ಯ ಸೇನ್ ದಶಕದ ಹಿಂದೆ ಭಾರತದ ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತಾ, ಭಾರತದಲ್ಲಿ ಎರಡು ಭಾರತಗಳಿವೆ, ಒಂದು ಉಳ್ಳವರ ಭಾರತ, ಇನ್ನೊಂದು ನರಳುವವರ ಭಾರತ ಎಂದು ಹೇಳಿದ್ದರು. ಅವರ ಮಾತು ಇಂದಿನ ಭಾರತಕ್ಕೆ ಯಾವುದೇ ಅನುಮಾನವಿಲ್ಲದೆ ಅನ್ವಯಿಸಬಹುದಾಗಿದೆ.
ಜಗತ್ತಿನಾದ್ಯಂತ ಸುನಾಮಿಯಂತೆ ಅಪ್ಪಳಿಸಿರುವ ಕೋವಿಡ್-19 ಅಥವಾ ಕೊರನಾ ವೈರಸ್ ಹಾವಳಿಗೆ ಇದೀಗ ಭಾರತದಲ್ಲಿ ಶ್ರೀಮಂತರು ಅಥವಾ ಮಧ್ಯಮ ವರ್ಗದವರಿಗಿಂತ ಬಡವರನ್ನು ಬಲಿಕೊಡಲಾಗುತ್ತದೆ. ಒಂದು ದೇಶದ ಪ್ರಧಾನಿಯಾದ ವ್ಯಕ್ತಿಗೆ ದೇಶದ ಆರ್ಥಿಕ ಚಟುವಟಿಕೆಗಳ ಬಗ್ಗೆಯಾಗಲಿ, ದೇಶದ ಬಹುದೊಡ್ಡ ಅಸಂಘಟಿತ ವಲಯವಾದ ಕಾರ್ಮಿಕರ ಕುರಿತಂತೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮಧ್ಯ ಚೀನಾದ ವುಹಾನ್ ನಗರದಲ್ಲಿ ಅತಿ ದೊಡ್ಡ ಕಸಾಯಿಖಾನೆ ಕೇಂದ್ರಗಳಿದ್ದು ನಗರದಿಂದ ಪ್ರಥಮ ಬಾರಿಗೆ ಕಳೆದ ವರ್ಷದ ಕೊನೆಯಲ್ಲಿ ವುಹಾನ್ ನಗರದಲ್ಲಿ ಕೊರನಾ ವೈರಸ್ ಹಾವಳಿ ಕಾಣಿಸಿಕೊಂಡಿತು. ಅದನ್ನು ಅಲ್ಲಿಯ ಸರ್ಕಾರ ಸಮರ್ಥವಾಗಿ ಹಿಮ್ಮೆಟ್ಟಿಸಿತು. ಜೊತೆಗೆ ಅಲ್ಲಿದ್ದ ವಿದೇಶಿ ಪ್ರಜೆಗಳ ಮೂಲಕ ಜಗತ್ತಿನ ಇತರೆ ರಾಷ್ಟ್ರಗಳಿಗೂ ಹರಡಿ ಈಗ ಚೀನಾ ಕಣ್ಮುಚ್ಚಿ ಕುಳಿತಿದೆ.
ವೈರಸ್ ಬಗ್ಗೆ ಹಾಗೂ ಅವರ ಗುಣ ಲಕ್ಷಣಗಳ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ವೆಬ್ ಸೈಟ್ ನಲ್ಲಿ ವಿವರವಾಗಿ ಪ್ರಕಟಿಸಿದ್ದರೂ ಕೂಡ ಇಲ್ಲಿನ ಆಳುವ ವರ್ಗ ಪುಂಖಾನುಪುಂಖವಾಗಿ ಕಟ್ಟು ಕಥೆಯನ್ನು ಹುಟ್ಟು ಹಾಕಿ ಜನತೆಯಲ್ಲಿ ಭಯ ಮತ್ತು ಭೀತಿಯನ್ನು ಹುಟ್ಟು ಹಾಕಿತು.
ಬ್ಯಾಕ್ಟಿರಿಯಾಗಿಂತ ಅತಿ ಸಣ್ಣ ಹಾಗೂ ಸೂಕ್ಮವಾಗಿರುವ ವೈರಾಣಣು ಜೀವಕೋಶಗಳ ನೆರವಿಲ್ಲದೆ ವಾತಾವರಣದಲ್ಲಿ ಹೆಚ್ಚು ಕಾಲ ಬದುಕಿರುವುದಿಲ್ಲ. ಯಾವುದೇ ವಸ್ತುವಿನ ಮೇಲೆ ಇದ್ದರೂ ಸಹ ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಇದು ಸಾಯುತ್ತದೆ ಎಂದು ವಿಶ್ಸಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಬೆಂಗಳೂರಿನ ಮಾನಸಿಕ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಗಿರೀಶ್ ಉಪಾಧ್ಯಾಯ ವಿವರಿಸಿದ್ದಾರೆ. ವೈರಾಣು ಬಾಯಿ ಅಥವಾ ಮೂಗಿನ ಉಸಿರಾಟದ ಮೂಲಕ ಮನುಷ್ಯನೊಳಗೆ ಪ್ರವೇಶ ಪಡೆಯುವ ಸಾಧ್ಯತೆ ಇದ್ದು, ನಿರ್ಧಿಷ್ಟ ಅಂತರ ಕಾಪಾಡಿಕೊಳ್ಳಬೇಕು ಮತ್ತು ಕೈಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಮುನ್ನಚ್ಚೆರಿಕೆಯ ಕ್ರಮಗಳನ್ನು ವಿವರಿಸಿದ್ದಾರೆ.
ಭಾರತಕ್ಕೆ ವೈರಾಣು ಪ್ರವೇಶ ಪಡೆದದ್ದು ವಿದೇಶಗಳಲ್ಲಿದ್ದು ಭಾರತಕ್ಕೆ ಹಿಂತಿರುಗಿದ ಭಾರತೀಯರಿಂದ, ಕುರಿತಂತೆ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಯನ್ನು ಕಳೆದ ಜನವರಿಯಲ್ಲಿ ಜಾರಿಗೆ ತರಬಹುದಿತ್ತು. ಆದರೆ, ಹೆದರಿದವರ ಮೇಲೆ ಸತ್ತ ಹಾವನ್ನು ಎಸೆದರು ಎಂಬ ಗಾದೆಯಂತೆ ಸಿರಿವಂತರನ್ನು ನಿಯಂತ್ರಿಸಲಾರದ ಪ್ರಧಾನಿಯೆಂಬ ಮಹಾನ್ ನಟರು ದೇಶದ ಎಲ್ಲಾ ಪ್ರಜೆಗಳ ಮೇಲೆ ಬರೆ ಎಳೆದರು.
ಶ್ರೀಮಂತರು ಮತ್ತು ಅವರ ಮಕ್ಕಳನ್ನು ವಿದೇಶದಿಂದ ಕರೆತರಲು ವಿಮಾನ ಯಾನ, ವಿಶೇಷ ವಿಮಾನ ವ್ಯವಸ್ಥೆ ಮಾಡಿದ ಪ್ರಧಾನಿಗೆ ದೇಶಾದ್ಯಂತ ಜಾರಿಗೆ ತಂದ ಲಾಕ್ ಡೌನ್ ವ್ಯವಸ್ಥೆಗೆ ಮುನ್ನ ದೇಶದ ಮಹಾನ್ ನಗರಗಳಲ್ಲಿ ಕಟ್ಟಡ, ರಸ್ತೆ, ಹೋಟೆಲ್ ಇತ್ಯಾದಿ ವಲಯಗಳಲ್ಲಿ ದುಡಿಯುತ್ತಿರುವ ಸೂರಿಲ್ಲದ ಬಡ ಕಾರ್ಮಿಕರಿಗೆ ಕನಿಷ್ಠ ರೈಲುಗಳ ಮೂಲಕ ಅವರನ್ನು ಊರಿಗೆ ತಲುಪಿಸುವ ಯೋಚನೆ ಹೊಳೆಯಲಿಲ್ಲ.
ಎಂತಹ ಅಯೋಗ್ಯರು ಮತ್ತು ಮುಠಾಳರು ಕೇಂದ್ರ ಸಚಿವ ಸಂಪುಟದಲ್ಲಿ ಇದ್ದಾರೆ ಎಂದರೆ, ಹಳೆಯ ರಾಮಾಯಣ, ಮಹಾಭಾರತ ಧಾರವಾಹಿಗಳನ್ನು ದೂರದರ್ಶನದಲ್ಲಿ ಮರು ಪ್ರಸಾರ ಮಾಡುತ್ತಿದ್ದೇವೆ ನೋಡಿ ಎಂದು ಪ್ರಕಾಶ್ ಜಾವೇದ್ಡ್ಕರ್ ಎಂಬ ಸಚಿವ ಹೇಳಿಕೆ ನೀಡುತ್ತಾನೆ. ಅವಿವೇಕಿಗೆ ವಲಸೆ ಕಾರ್ಮಿಕರು ಬದುಕುವ ಸೂರಿನಡಿ, ವಿದ್ಯುತ್ ಅಥವಾ ಟಿ.ವಿ. ಇಲ್ಲ ಎಂಬ ಕನಿಷ್ಠ ವಿವೇಕವೂ ಇಲ್ಲ.. ದೇಹಲಿಯಲ್ಲೇ ಇರುವ ಪ್ರಧಾನಿ ಮತ್ತು ಅವರ ನಲವತ್ತು ಮಂದಿ ಸಚಿವ ಸಂಪುಟದ ಮೂರ್ಖ ಸಚಿವರು ದೆಹಲಿಯ ಕಾಶ್ಮೀರಿ ಗೇಟ್, ಜಾಮೀಯ ಮಸೀದಿ ಪ್ರದೇಶ, ಕರೋಲ್ ಬಾಗ್ ಹಾಗೂ ಕನಾಟ್ ಸರ್ಕಲ್ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಂಚರಿಸಿದ್ದರೆ, ವಲಸೆ ಕಾರ್ಮಿಕರು ಭೂಮಿಯನ್ನು ಹಾಸಿಗೆ ಮಾಡಿಕೊಂಡು, ಆಕಾಶವನ್ನು ಹೊದಿಕೆಯನ್ನಾಗಿಸಿಕೊಂಡು ಮಲಗಿರುವ ದೃಶ್ಯ ಕಾಣುತ್ತಿತ್ತು. ಬಡವರ ಕಷ್ಟ ಅರಿವಾಗುತ್ತಿತ್ತು. ದೇಶದ ಬಹುತೇಕ ಮಹಾನಗರಗಳಲ್ಲಿ ಲಕ್ಷಾಂತರ ಮಂದಿ ಇಂತಹ ದುಸ್ಥಿತಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.ಇಂತಹವರು, ಹಣ್ಣು, ತರಕಾರಿ, ಸೊಪ್ಪು ಮಾರುವವರು ಮತ್ತು ರೈತರ ಬವಣೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ಪೊಲೀಸರಿಗೆ ಅಧಿಕಾರ ನೀಡಲಾಯಿತು.
ಕೈಯಲ್ಲಿ ಸುತ್ತಿಗೆ ಹಿಡಿದವನಿಗೆ ಜಗತ್ತಿನಲ್ಲಿರುವ ವಸ್ತುಗಳು ಮೊಳೆಯಂತೆ ಕಾಣುತ್ತವೆ ಎಂಬ ಮಾತಿನಂತೆ ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ಎಲ್ಲರ ಮೇಲೆ ಬೀಸುತ್ತಾ, ತಮ್ಮ ರಾಕ್ಷಸತನವನ್ನು ಮೆರೆಯುತ್ತಿದ್ದಾರೆ. ಮೈಸೂರಿನ ಚೆಲುವಾಂಬ ಎಂಬ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆ ಹಾಗೂ ಕೆ.ಆರ್. ಆಸ್ಪತ್ರೆ ಬಳಿ ರೋಗಿಗಳಿಗೆ ತಿನ್ನಲು ಹಣ್ಣುಗಳು ದೊರೆಯುತ್ತಿಲ್ಲ. ಕುಡಿಯಲು ಒಂದು ಲೋಟ ಬಿಸಿ ಹಾಲು ಅಥವಾ ಬಿಸಿ ಬ್ರೆಡ್ ಸಿಗುತ್ತಿಲ್ಲ. ಮೈಸೂರಿನಲ್ಲಿ ಒಂದೂವರೆ ಸಾವಿರ ವಿದೇಶಿ ಪ್ರವಾಸಿಗಳು ಉಳಿದುಕೊಂಡಿದ್ದು ಅವರು ಉಪಯೋಗಿಸುವ ಲಘು ಆಹಾರವಾದ ಹಣ್ಣು, ಬ್ರೆಡ್, ಕೇಕ್, ಬಿಸ್ಕೆಟ್, ಇತ್ಯಾದಿ ವಸ್ತುಗಳಿಗಾಗಿ ಬೀದಿ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ.. ಇದು ವ್ಯಸ್ಥೆಯ ಕ್ರೌರ್ಯವಲ್ಲದೆ ಇನ್ನೇನು?
ರೋಗ ನಿಯಂತ್ರಣಕ್ಕೆ ಸಭೆ, ಸಮಾರಂಭ, ಸಿನಿಮಾ ಹಾಲ್, ಬೃಹತ್ ಮಾಲ್ ಗಳನ್ನು ಮುಚ್ಚಿಸಿ, ನಿಗದಿತ ಮಾರ್ಗದಲ್ಲಿ ತಪಾಸಣೆ ಮಾಡಿ ಸ್ಥಳಿಯರ ಓಡಾಟಕ್ಕೆ ಅನುವು ಮಾಡಿಕೊಡಬಹುದಿತ್ತು. ಅದೇ ರೀತಿ ದಿನಸಿ ಅಂಗಡಿ ವಸ್ತುಗಳನ್ನು ಸರಬರಾಜು ಮಾಡುವ ಮಂಡಿಗಳಿಗೆ ನಿಗದಿತ ಅವಧಿಗೆ ಅವಕಾಶ ನೀಡಬಹುದಿತ್ತು., ಇವೆಲ್ಲವನ್ನೂ ಬದಿಗೆ ಸರಿಸಿ ತರಕಾರಿ, ಮತ್ತು ಹಣ್ಣಿನ ಮಾರುಕಟ್ಟೆಗಳನ್ನು ಮುಚ್ಚಿಸಿ, ಕಾರ್ಮಿಕರ ಜೊತೆಗೆ ರೈತರಿಗೂ ಸರ್ಕಾರ ಬರೆ ಎಳಿಯಿತು.

ಕೇವಲ ಅವದೂತನಂತೆ ಅವತರಿಸಿ ರೇಡಿಯೊ ಮತ್ತು ಟಿ.ವಿಗಳಲ್ಲಿ ಭಾಷಣ ಮಾಡುವ ಪ್ರಧಾನಿಗೆ ರಾಜ್ಯ ಸರ್ಕಾರಗಳಿಗೆ ಯಾವುದೇ ಆರ್ಥಿಕ ನೆರವು ನೀಡುವ ಮನಸ್ಸಿಲ್ಲ, ಕಳೆದ ಆಗಸ್ಟ್ ನಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ 50 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಿದರೆ, ಕೇಂದ್ರದಿಂದ ದೊರೆತ ಪರಿಹಾರ ಎರಡು ಕಂತುಗಳಲ್ಲಿ ( 600+1200) ಬರ ಪರಿಹಾರವೂ ಸೇರಿ ಕೇವಲ 1800 ಕೋಟಿ ರೂಪಾಯಿಗಳು ಮಾತ್ರ. ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಇಪ್ಪತ್ತೈದು ಬಿ.ಜೆ.ಪಿ. ಸಂಸದರು ಬಾಯಿಗೆ ಬಗನಿ ಗೂಟ ಜಡಿದುಕೊಂಡು ಮೌನವಾಗಿದ್ದಾರೆ. ಇಡೀ ದೇಶದಲ್ಲಿ ಕೊರನಾ ಸೊಂಕಿನಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಪರಿಹಾರ ಸಿಕ್ಕಿಲ್ಲ.ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೇಂದ್ರ ಸರ್ಕಾರ ಏನೂ ಕೊಡದಿದ್ದರೂ ಚಿಂತೆ ಇಲ್ಲ, ಅವರನ್ನು ಅಧಿಕಾರದ ಕುರ್ಚಿಯಿಂದ ಕದಲಿಸದಿದ್ದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದಾರೆ. ಇಂತಹವರನ್ನ ಆಯ್ಕೆ ಮಾಡಿಕಳಿಸಿದ ಗೋಮೂತ್ರ, ಸಗಣಿ, ಶಂಖ ಮತ್ತು ಜಾಗಟೆಯ ಗಿರಾಕಿಗಳು ಒಮ್ಮೆ ಎದೆಮುಟ್ಟಿಕೊಂಡು ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳಬೇಕು.
ಬಿ.ಎಲ್. ಸಂತೋಷ್ ಎಂಬ ಅವಿವೇಕಿಯೊಬ್ಬನನ್ನು ಬಿ.ಜೆ.ಪಿ. ಪಕ್ಷದ ರಾಷ್ಟ್ರಮಟ್ಟದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈತ ಎಂತಹ ವಿಕೃತ ಮನಸ್ಥಿತಿಯವನು ಎಂದರೆ, ಬೆಂಗಳೂರು ಬಳಿಯ ಅತ್ತಿಬೆಲೆಯ ಗಡಿಯಿಂದ ತಮಿಳುನಾಡಿನ ಚೆನ್ನೈ ನಗರ ಕೇವಲ ನೂರು ಕಿಲೊಮೀಟರ್ ಗಿಂತಲೂ ಕಡಿಮೆಯಿದೆ, ಕಾರ್ಮಿಕರು ನಡೆದುಕೊಂಡು ಹೋಗಲಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾನೆ. ದುರಂಕಾರಿಗೆ ಬೆಂಗಳೂರು-ಚೆನ್ನೈ ನಡುವಿನ ಅಂತರ 347 ಕಿ.ಮಿ. ಎಂಬ ಕನಿಷ್ಠ ಜ್ಞಾನವೂ ಇಲ್ಲ. ಭೌಗೂಳಿಕ ಜ್ಞಾನವಿಲ್ಲದ ಇಂತಹ ಜಾತಿಯ ಕ್ರಿಮಿಗಳು ಈಗ ರಾಷ್ಟ್ರ ಮಟ್ಟದಲ್ಲಿ ನಾಯಕರಾಗಿ ಬೆಳೆಯುತ್ತಿದ್ದಾರೆ. ಇವುಗಳನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಈಗ ಆರ್.ಎಸ್.ಎಸ್, ಶಾಖಾಮಠಗಳಾಗಿರುವ ಕಾರಣ ದಿವ್ಯ ಮೌನಕ್ಕೆ ಶರಣಾಗಿವೆ.
ಕಾಲ್ನಡಿಗೆಯಲ್ಲಿ ಹುಟ್ಟಿದ ಊರಿನತ್ತ ಪ್ರಯಾಣ ಹೊರಟ ನತದೃಷ್ಟರು, ಆಹಾರ, ನೀರು ಇಲ್ಲದೆ, ನಡುರಸ್ತೆಯಲ್ಲಿ ಬಸವಳಿಯುತ್ತಾ ಸಾಗುತ್ತಿದ್ದಾರೆ. ನಾವು ಮೌನ ಸಾಕ್ಷಿಗಳಾಗಿದ್ದೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ