ಶುಕ್ರವಾರ, ಡಿಸೆಂಬರ್ 26, 2014

ಗಾಂಧೀಜಿ ಚಿಂತನೆಗಳ ವಾರಸುದಾರ ಬಾಬಾ ಅಮ್ಟೆ ಒಂದು ನೆನಪು




ತಮ್ಮ ಚಿಂತನೆ, ತ್ಯಾಗ, ಬಲಿದಾನ ಮತ್ತು ದೂರದರ್ಶಿತ್ವ  ಮುಂತಾದದ ಒಳನೋಟಗಳಿಂದ ಭಾರತವನ್ನೂ ಒಳಗೊಂಡಂತೆ ಇಪ್ಪತ್ತನೆಯ ಶತಮಾನದ ಜಗತ್ತನ್ನು ಇನ್ನಿಲ್ಲದಂತೆ ಕಾಡಿದವರು ಮಹಾತ್ಮ ಗಾಂಧೀಜಿ. ಇಂದು ಗಾಂಧಿ ನಮ್ಮೊಡನೆ ಇಲ್ಲದಿದ್ದರೂ ಸಹ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಅವರು ಹೊತ್ತಿಸಿದ ಜ್ಞಾನದ ಕಿಡಿಯನ್ನು ಹಲವು ಬಗೆಯಲ್ಲಿ, ಹಲವು ರೂಪದಲ್ಲಿ ಜೀವಂತ ಹಲವು ಮಹನೀಯರು ನಮ್ಮೊಡನೆ ಇದ್ದರೆ, ಇನ್ನು ಕೆಲವು ತಮ್ಮ ಹೆಜ್ಜೆಯ ಗುರುತುಗಳನ್ನು ದಾಖಲಿಸಿ ಹೋಗಿದ್ದಾರೆ. ಅಂತಹವರಲ್ಲಿ ನಮ್ಮ ನೆರೆಯ ಮಹಾರಾಷ್ಟ್ರದ ಚಂದ್ರಪುರ್ ಜಿಲ್ಲೆಯ ಬಾಬಾ ಅಮ್ಟೆ ಒಬ್ಬರು. ಅವರು ಬದುಕಿದ್ದರೆ 26-12-14 ಕ್ಕೆ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಅವರ  ಸಾಧನೆ ಮತ್ತು ಆಧರ್ಶೀನಿಯವಾದ ಬದುಕು  ಈಗ ಯಾರಿಗೂ ನೆನಪಾಗುತ್ತಿಲ್ಲ.


ಗಾಂಧಿಗಿರಿಯ ಫಸಲುಗಳು ಎಂದು ಕರೆಯಬಹುದಾದ ಶೂ ಮಾಕರ್, ಲೂಯಿಫಿಶರ್, ರೋನಾಲ್ಡ್ ಡಂಕನ್, ಜೆ.ಸಿ.ಕುಮಾರಪ್ಪ, ಮಹದೇವದೇಸಾಯಿ, ಮೆಡಲಿನ್ ಸ್ಲೆಡ್, (ಮೀರಾ ಬೆಹನ್) ಕರುಣಾಕರನ್, ರವೀಂದ್ರ ಶರ್ಮ, ಸಿ.ವಿ.ಶೇಷಾದ್ರಿ, ಸುರೇಂದ್ರಕೌಲಗಿ ಹೀಗೆ ಅನೇಕ ಸಾಧಕರ ನಡುವೆ ಬಾಬಾ ಅಮ್ಟೆ ಕೂಡ ಪ್ರಮುಖರು.
ಬಾಬಾ ರವರು 1914 ಡಿಸಂಬರ್ 26 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗನ್ ಘಾಟ್ ಎಂಬಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ( ಮೂಲ ಹೆಸರು ಮುರುಳಿದಾಸ್, ಬಾಬಾ ಎಂಬುದು ತಂದೆ ತಾಯಿ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ಇವರ ತಂದೆ ದೇವಿಲಾಲ್ ಸಿಂಗ್ ಬ್ರಿಟೀಷ್ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿದ್ದರು ( ತಾಯಿ ಶ್ರೀಮತಿ ಲಕ್ಷ್ಮಿ ಬಾಯಿ ಅಮ್ಟೆ)  ಬಾಬಾ ಅಮ್ಟೆ ನಾಗಪುರದಲ್ಲಿ ಕಾನೂನು ಪದವಿ ಮುಗಿಸಿ, ಒಂದಷ್ಟು ವರ್ಷಗಳ ಕಾಲ ವಕೀಲ ವೃತ್ತಿಯನ್ನು ಕೈಗೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟೀಷ್ ಸರ್ಕಾರದಿಂದ ಬಂಧಿತರಾಗುತ್ತಿದ್ದ ಹೋರಾಟಗಾರರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು.  ಆನಂತರ 1942 ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರ ಸಂಪರ್ಕಕ್ಕೆ ಬಂದರು. ಆ ವೇಳೆಗಾಗಲೆ ಅವರೊಳಗಿನ ಆತ್ಮಸಾಕ್ಷಿಯ ಪ್ರಜ್ಞೆ ಜಾಗೃತವಾಗಿತ್ತು. ಒಂದೇ ಒಂದು ಗಿಡ ನೆಡದ ನಾನು, ಬಿಸಿಲಿನ ತಾಪ ತಾಳಲಾರದೆ ಮರದ ನೆರಳನ್ನು ಆಶ್ರಯಿಸಲು ಯಾವ ನೈತಿಕ ಹಕ್ಕಿದೆ? ನ್ಯಾಯಾಲಯದಲ್ಲಿ ಕೇವಲ ಹದಿನೈದು ನಿಮಿಷದ ವಾದಕ್ಕೆ ಐವತ್ತು ರೂಪಾಯಿ ಶುಲ್ಕ ಪಡೆಯುವ ನಾನು ಮತ್ತು  ಎರಡು ರೂಪಾಯಿ ಕೂಲಿಗೆ ದಿನವಿಡಿ ಬಿಸಿಲಿನಲ್ಲಿ ದುಡಿಯುವ ಕೂಲಿಗಾರ ಇವುಗಳ ನಡುವೆ ಇಷ್ಟೊಂದು ಅಂತರವೇಕೆ? ಇಂತಹ ಅನೇಕ ಪ್ರಶ್ನೆಗಳಿಗೆ ಅವರು ಗಾಂಧಿಯವರ ಚಿಂತನೆಗಳಲ್ಲಿ ಉತ್ತರ ಕಂಡುಕೊಂಡರು. ಗಾಂಧೀಜಿವರು ವಾರ್ಧ ಬಳಿ ಸೇವಾಗ್ರಾಮ ಆರಂಭಿಸಿದಾಗ  ವಕೀಲಿ ವೃತ್ತಿ ತ್ಯಜಿಸಿ ಸೇವಾಗ್ರಾಮ ಸೇರಿಕೊಂಡರು. ಒಮ್ಮೆ ಬ್ರಿಟೀಷ್ ಯೋಧನಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಬಾಲಕಿಯನ್ನು ಅಮ್ಟೆಯವರು ರಕ್ಷಿಸಿದ್ದರು. ಈ ವಿಷಯ ತಿಳಿದ ಗಾಂಧೀಜಿಯವರು ಬಾಬಾ ಅಮ್ಟೆಯವರಿಗೆ “ ಅಭಯ್ ರಕ್ಷಕ್” ಎಂಬ ಬಿರುದು ನೀಡಿ, ಪ್ರೀತಿಯಿಂದ ಅವರನ್ನು ಅದೇ ಹೆಸರಿನಿಂದ ಕರೆಯುತ್ತಿದ್ದರು.

ಗಾಂಧೀಜಿಯವರ ಸನೀಹದಲ್ಲಿ ಗ್ರಾಮಭಾರತದ ಬಗ್ಗೆ ಮತ್ತು ದೀನ ದಲಿತರ ಬಗ್ಗೆ ಸೃಷ್ಟ ಆಲೋಚನೆಗಳನ್ನು ಕಂಡುಕೊಂಡ ಬಾಬಾ ಆಮ್ಟೆಯವರು, ಸ್ವಾತಂತ್ರ್ಯಾ ನಂತರ ಅಂದರೆ 1949 ರ ಆಗಸ್ಟ್ ಹದಿನೈದರಂದು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಆನಂದವನ ಎಂಬ ಹೆಸರಿನಲ್ಲಿ ಆಶ್ರಮ ತೆರೆದು, ಕುಷ್ಟರೋಗಿಗಳ ಹಾರೈಕೆ, ಬಡವರ ವೃತ್ತಿ ನೈಪುಣ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಗುಡಿಕೈಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಿದರು. ಆಶ್ರಮ ಸ್ಥಾಪನೆಗೆ ಪ್ರೇರಣೆಯಾದ ಸಂಗತಿಯೊಂದನ್ನು ಬಾಬಾ ಅಮ್ಟೆ ಈ ರೀತಿ ಹೇಳಿಕೊಂಡಿದ್ದಾರೆ. “ ಒಂದು ದಿನ ರಸ್ತೆ ಬದಿಯಲ್ಲಿ ಮುದುಡಿ ಬಿಸಾಡಿದ ಕಂಬಳಿಯೊಂದರಲ್ಲಿ ಜೀವವೊಂದು ಉಸಿರಾಡುತ್ತಿತ್ತು. ಹೋಗಿ ನೋಡಿದಾಗ, ಕುಷ್ಟ ರೋಗದಿಂದ ಕೈ ಕಾಲಿನ ಬೆರಳುಗಳನ್ನು ಕಳೆದುಕೊಂಡು, ಕೇವಲ ಮೂಗಿನ ಒಳ್ಳೆಗಳಷ್ಟೇ ಕಾಣುತ್ತಿದ್ದ ಪುರುಷ ಜೀವವೊಂದು ಬಿಸಿಲು-ಮಳೆ- ಚಳಿಯ ನಡುವೆ ಉಸಿರಾಡುತ್ತಿತ್ತು. ಆ ಜೀವ ಮಲಗಿದ್ದ ಜಾಗದಲ್ಲಿ ಬಿದಿರಿನ ಗಳಗಳನ್ನು ನೆಟ್ಟು ಹೊದಿಕೆ ಹೊದಿಸಿ ನೆರಳು ಕಲ್ಪಿಸಿಕೊಟ್ಟೆ. ತಿನ್ನಲು ಆಹಾರ, ಕುಡಿಯಲು ನೀರು ಕೊಟ್ಟು, ಆತನನ್ನು ಉಪಚರಿಸಲು ಪ್ರಯತ್ನಿಸಿದೆ. ಆದರೆ, ತುಳಸಿರಾಂ ಎನ್ನುವ ಆ ಜೀವ ನನ್ನ ತೋಳಿನಲ್ಲಿ ಪ್ರಾಣ ಬಿಟ್ಟಿತು. ಆತನ ಸಾವು ಹಲವು ತಿಂಗಳ ಕಾಲ ನನ್ನನ್ನು ಎಡಬಿಡದೆ ಕಾಡಿತು. ಅಂತಿಮವಾಗಿ ಕುಷ್ಟ ರೋಗಿಗಳ ಶುಶ್ರೂಷೆಗೆ ನನ್ನ ಬದುಕನ್ನು ಮುಡಿಪಾಗಿಟ್ಟೆ” ಬಾಬಾ ಅಮ್ಟೆಯವರ ಈ ಮಾತುಗಳು ನನಗೆ ಮನುಕುಲಕ್ಕೆ ಬರೆದ ಭಾಷ್ಯವೇನೋ ಎಂಬಂತೆ ತೋರುತ್ತವೆ.
ಇಂದು ಆನಂದ ವನ ಬೃಹತ್ ಸೇವಾ ಕೇಂದ್ರವಾಗಿ ಬೆಳೆದು ನಿಂತಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಡ, ಈ ಮೂರು ರಾಜ್ಯಗಳ ನಡುವಿನ ಗಡಿ ಪ್ರದೇಶದಲ್ಲಿರುವ ಆನಂದವನ, ಮಹಾರಾಷ್ಟರದ ಚಂದ್ರಾಪುರ, ಗೊಂಡಿಯ, ಭಂಡಾರ ಜಿಲ್ಲೆಗಳು, ಮಧ್ಯಪ್ರದೇಶದ ಬಾಳ್ ಗಾಟ್, ಛತ್ತೀಸ್ ಗಡದ ರಾಯ್ ಪುರ್, ಬಿಲಾಸ್ ಪುರ್ ಜಿಲ್ಲೆಗಳ ಅರಣ್ಯದಲ್ಲಿ ಬದುಕುತ್ತಿರುವ ಲಕ್ಷಾಂತರ ಅರಣ್ಯವಾಸಿಗಳ ಪಾಲಿಗೆ ಸಂಜೀವಿನಿಯಾಗಿದೆ. ಅವರ ಪತ್ನಿ ಸಾಧನಾ ಅಮ್ಟೆಯವರ ಬೆಂಬಲದಿಂದ ಬೃಹತ್ ಸಂಸ್ಥೆಯಾಗಿ ಬೆಳೆದ ಆನಂದವನ ಈಗ  ಅವರ ಮಕ್ಕಳಾದ ಡಾ.ವಿಕಾಸ್ ಮತ್ತು ಡಾ.ಪ್ರಕಾಶ್ ಅಮ್ಟೆ ಹಾಗೂ ಸೊಸೆಯಂದಿರಾದ ಡಾ. ಮಂದಾಕಿನಿ, ಡಾ.ಭಾರತಿ ಇವರ ತ್ಯಾಗಮಯ ಜೀವನದಿಂದ ದಂಡಕಾರಣ್ಯದಲ್ಲಿ ಬಡವರ ಮತ್ತು ಆದಿವಾಸಿಗಳ ಪಾಲಿಗೆ ಬದುಕಿನ ದಾರಿದೀಪವಾಗಿದೆ.


ಮೂರು ವರ್ಷದ ಹಿಂದೆ ನಕ್ಸಲ್ ಕಥನದ ಅಧ್ಯಯನಕ್ಕಾಗಿ ಈ ಪ್ರದೇಶದಲ್ಲಿ ಓಡಾಡುತ್ತಿದ್ದಾಗ, ನಾಗಪುರದ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯ ವರದಿಗಾರ ಮಿತ್ರನ ಜೊತೆ ಆನಂದವನಕ್ಕೆ ಬೇಟಿ ನೀಡಿ ಗಾಂಧೀಜಿಯ ಚಿಂತನೆ ಜೀವಂತವಾಗಿರುವುದನ್ನು ಕಂಡು ಮೂಕನಾಗಿದ್ದೆ. ಒಬ್ಬ ವ್ಯಕ್ತಿಯಲ್ಲಿ ನಿರ್ಧಿಷ್ಟ ಗುರಿ ಮತ್ತು ಛಲಗಳಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಬಾಬಾ ಅಮ್ಟೆಯವರ ಸಾಧನೆಗಳನ್ನು ನಮ್ಮ ಮುಂದಿವೆ. ಈ ದೇಶದ ಭಾರತ ರತ್ನ ಪ್ರಶಸ್ತಿಯನ್ನು ಹೊರತು ಪಡಿಸಿ, ಬಹುತೇಕ ಪ್ರಶಸ್ತಿಗಳು, ಎಂಟು ವಿಶ್ವ ವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿ, ರಾಮನ್ ಮ್ಯಾಗ್ಸಸೆ, ಹಾಗೂ ವಿಶ್ವಸಂಸ್ಥೆಯ ಪ್ರಶಸ್ತಿಗಳನ್ನು ಪಡೆದ ಬಾಬಾ ರವರು ತಮ್ಮ ಇಳಿವಯಸ್ಸಿನಲ್ಲಿ ಬೆನ್ನುಮೂಳೆ ಮುರಿತದಿಂದ  ಹಿನ್ನಡೆ ಅನುಭವಿಸಿದರು. ಆನಂದವನದಲ್ಲಿ ಸದಾ ಕೂಲಿಕಾರರ ಮಕ್ಕಳ ಜೊತೆ ಆಟವಾಡುವುದು, ಅರಣ್ಯದ ಪ್ರಾಣಿಗಳನ್ನು ಸಾಕಿ ಅವುಗಳ ಶುಶ್ರೂಷೆ ಮಾಡುವುದು ಅವರ ಮೆಚ್ಚಿನ ಹವ್ಯಾಸವಾಗಿತ್ತು. 2008 ರ ಪೆಬ್ರವರಿ 9 ರಂದು ಭಾಬಾ ಅಮ್ಟೆ ನಿಧನರಾದರು. ಆದರೆ ಅವರ ಕನಸುಗಳು ಇಂದಿಗೂ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮೂಲಕ ಮುಂದುವರಿದು ಸಾಕಾರಗೊಳ್ಳುತ್ತಿವೆ. 


ಬಾಬಾ ಅಮ್ಟೆಯವರ ಮೊಮ್ಮಗ ಕೌಸ್ತುಭ ಎಂಬ ಯುವಕ ಗುಡಿಕೈಗಾರಿಕೆಗಳ ಚಟುವಟಿಕೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಿದ್ದರೆ. ಪ್ರಕಾಶ್ ಅಮ್ಟೆ ಮತ್ತು ವಿಕಾಸ್ ಅಮ್ಟೆ ಹಾಗೂ ಅವರ ಪತ್ನಿಯರು ಆಸ್ಪತ್ರೆ ಮತ್ತು ಆಶ್ರಮಗಳ ಹೊಣೆ ಹೊತ್ತಿದ್ದಾರೆ. ಇತ್ತೀಚೆಗೆ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಮರಾಠಿ ಭಾಷೆಯಲ್ಲಿ ಬಾಬಾ ಅವರ ಪುತ್ರ ಪ್ರಕಾಶ್ ಅಮ್ಟೆಯವರ ಜೀವನ ಕುರಿತು ಸಿನಿಮಾ ತೆರೆಕಂಡಿದೆ. ನಾನಾಪಾಟೇಕರ್ ಪ್ರಕಾಶ್ ಅಮ್ಟೆ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈ ವರ್ಷದ ಯಶಸ್ವಿ ಮರಾಠಿ ಸಿನಿಮಾಗಳಲ್ಲಿ ಒಂದಾಗಿದ್ದು ಇದರಲ್ಲಿ ಬಾಬಾ ಅಮ್ಟೆಯವರ ಜೀವನ ಸಂದೇಶಗಳನ್ನೂ ಸಹ ನಾವು ಕಾಣಬಹುದಾಗಿದೆ.

1 ಕಾಮೆಂಟ್‌:

  1. ಬಾಬಾ ಆಮ್ಟೆಯವರ ಜೀವನ ಚರಿತ್ರೆಯು ಅವರ ನಿಸ್ವಾರ್ಥ ಸೇವೆಯ ಅನಾವರಣವಾಗಿದ್ದು, ಅವರ ಮಕ್ಕಳು ಮತ್ತು ಸೊಸೆಯಂದಿರು ವೈದ್ಯಕೀಯ ವಿದ್ಯಾಬ್ಯಾಸ ಮಾಡಿಕೊಂಡು ಅನೇಕರಂತೆ ಹೊರದೇಶಕ್ಕೆ ಹೋಗಿ ಸ್ವಾರ್ಥಿಗಳಾಗದೆ, ಸ್ವದೇಶದಲ್ಲೆ ಬಡಜನಗಳಿಗಾಗಿ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಇವರ ಈ ಕಾರ್ಯ ಬಾಬಾ ಆಮ್ಟೆಯವರಿಗೆ ಸಿಕ್ಕ ಎಲ್ಲಾ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳಿಗಿಂತ ಶ್ರೇಷ್ಟವಾದದ್ದು ಎನ್ನ ಬಹುದು. ನಿಮ್ಮ ಈ ಲೇಖನಕ್ಕಾಗಿ ನಿಮಗೊಂದು ನನ್ನದೊಂದು ಸೆಲ್ಯುಟ್.

    ಪ್ರತ್ಯುತ್ತರಅಳಿಸಿ