ಶುಕ್ರವಾರ, ಜುಲೈ 17, 2015

ಮಂಡ್ಯ ನೆಲದ ಗಾಂಧಿ ಕೆ.ವಿ.ಶಂಕರಗೌಡ- ಒಂದು ನೆನಪು



ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ ಹಾಗೂ ನಿತ್ಯ ಸಚಿವ ಎಂಬ ಬಿರುದಿಗೆ ಪಾತ್ರರಾಗಿದ್ದÀ ಕೆ.ವಿ. ಶಂಕರಗೌಡರು ಬದುಕಿದ್ದರೆ ಈಗ ಶತಾಯುಷಿಯಾಗಿರುತ್ತಿದ್ದರು. 1970 ಮತ್ತು 80 ದಶಕದಲ್ಲಿ ನಮ್ಮೊಡನಿದ್ದ ಗಾಂಧಿವಾದಿ ಶಂಕರಗೌಡರಿಗಿಂತ, ಈಗ ನಮ್ಮೊಡನಿಲ್ಲದ ಜನಾನುರಾಗಿ ಶಂಕರಗೌಡರು ನನ್ನ ತಲೆಮಾರಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದಾರೆಅವರ ಸಾಧನೆಗಳು ಮತ್ತು  ನಿಷ್ಕಳಂಕ ಬದುಕಿನ ಮಾದರಿಗಳು ಇವೊತ್ತಿನ ಅಯೋಮಯ ವರ್ತಮಾನದ ಜಗತ್ತಿಗೆ ಹೆಚ್ಚು ಪ್ರಸ್ತುತ ಎಂದು ತೀವ್ರವಾಗಿ ಅನಿಸತೊಡಗಿದೆ.
ಷೆಕ್ಸ್ಪಿಯರ್ ಜೂಲಿಯಸ್ ಸೀಸರ್ ನಾಟಕದಲ್ಲಿ ಬ್ರೂಟಸ್ ಒಂದು ಮಾತಿದೆ. “ ಬದುಕಿದ್ದ ಸೀಸರ್ ಗಿಂತ, ಸತ್ತು  ಹೋಗಿರುವ ಸೀಸರ್ ಈಗ ಹೆಚ್ಚು ಪ್ರಭಾವಶಾಲಿಯಾಗಿದ್ದಾನೆ.” ಇದೇ ಮಾತನ್ನು ನಾವು ಶಂಕರಗೌಡರಿಗೂ ಅನ್ವಯಿಸಿ ಹೇಳಬಹುದು. ಇಪ್ಪತ್ತನೆಯ ಶತಮಾನದ ಕಾಲಘಟ್ಟದಲ್ಲಿ ಮಂಡ್ಯದ ನೆಲದಲ್ಲಿ, ತನ್ನ ಪ್ರಖರ ವ್ಯಕ್ತಿತ್ವ, ವಿಚಾರಧಾರಗಳ ಮೂಲಕ  ಸಮುದಾಯವನ್ನು ಪ್ರಭಾವಿಸಿ ಹೋರಾಡಿದ ಜನಪ್ರತಿನಿಧಿಯೆಂದರೆ ಕೆ.ವಿ.ಶಂಕರಗೌಡರು ಮಾತ್ರ ಎಂದು ನಿಸ್ಸಂಕೋಚವಾಗಿ ಹೇಳಬಹುದು.

ವರ್ತಮಾನದ ರಾಜಕಾರಣದಲ್ಲಿ ಜಾತಿ, ಧರ್ಮದ ಹಿನ್ನಲೆ ಹಾಗೂ ಹಣ ಬಲ ಮತ್ತು ತೋಳ್ಬಲ ಇವುಗಳು ಜನಪ್ರತಿನಿಧಿಗಳ ಅರ್ಹತೆಗಳಾಗಿವೆ. ಜೊತೆಗೆ ಜನಪ್ರತಿನಿಧಿಗಳೆನಿಸಿಕೊಂಡವರು ಮಾಡುವ ಅಥವಾ ಮಾಡಬಹುದಾದ ಅನೈತಿಕ ದಂಧೆಗಳಿಗೆ ಗುರಾಣಿಯಾಗಿ ತಮ್ಮ ಅಧಿಕಾರದ ಕುರ್ಚಿಯನ್ನು ಬಳಸಿಕೊಳ್ಳುತ್ತಿರುವುದಕ್ಕೆ ನಾವು ಮೂಕ ಸಾಕ್ಷಿಗಳಾಗುತ್ತಿದ್ದೇವೆ. ಆದರೆ ಇವುಗಳಿಗಿಂತ ಭಿನ್ನವಾಗಿ ಒಬ್ಬ ಜನಪ್ರತಿನಿಧಿಗೆ ಹಣ, ಜಾತಿಯ ಬಲಕ್ಕಿಂತ ಹೆಚ್ಚಾಗಿ ಸಮೂಹ ಪ್ರಜ್ಞೆ, ಸಹಕಾರ ತತ್ವಗಳ ಅಡಿಯಲ್ಲಿ ದುಡಿಯುವ ಬದ್ಧತೆ ಮತ್ತು ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕಗಳ ಕುರಿತ ಅಪಾರ ಒಳನೋಟ ಮತ್ತು ಪ್ರೀತಿ ಇರಬೇಕೆಂಬುದನ್ನು ಕರ್ನಾಟಕದ ರಾಜಕೀಯಕ್ಕೆ ತೋರಿಸಿಕೊಟ್ಟವರು ಕೆ.ವಿ.ಶಂಕರಗೌಡರು. ಕಾರಣಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡರು ಕೆ.ವಿ.ಶಂಕರಗೌಡರನ್ನು ತಮಗೆ ರಾಜಕೀಯ ಮೌಲ್ಯಗಳನ್ನು ಕಲಿಸಿಕೊಟ್ಟ ಗುರು ಎಂದು ಬಣ್ಣಿಸಿದ್ದಾರೆ.

ಸ್ವಾತಂತ್ರ್ಯಾನಂತರದ ಕರ್ನಾಟಕದಲ್ಲಿ ಸಾಹಿತ್ಯ, ಸಂಗೀತ, ನಾಟಕ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ಅಪಾರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದ ರಾಜಕಾರಣಿಯೆಂದರೆ, ಅದು ಕೆ.ವಿ.ಶಂಕರಗೌಡರು ಮಾತ್ರ. ಇವರನ್ನು ಹೊರತು ಪಡಿಸಿದರೆ; ದಿವಂಗತ ಎಂ.ಪಿ. ಪ್ರಕಾಶ್ ರವರನ್ನು ನಾವಿಲ್ಲಿ ಸ್ಮರಿಸಬಹುದು. ಪ್ರಕಾಶ್ ಕೂಡ ಹಲವಾರು ಬಾರಿ ಸಾರ್ವಜನಿಕ ವೇದಿಕೆಗಳಲ್ಲಿ ತಮಗೆ ಸ್ಪೂರ್ತಿಯಾದ ಶಂಕರಗೌಡರ ಬಗ್ಗೆ ಹೇಳಿಕೊಂಡಿದ್ದಾರೆ.

 1968 ರಲ್ಲಿ  ಮುಖ್ಯಮಂತ್ರಿಯಾಗಿದ್ದ ಶ್ರೀ ವೀರೇಂದ್ರ ಪಾಟೀಲರ ಸಚಿವ ಸಂಪುಟದಲ್ಲಿ   ಕೆ.ವಿ.ಶಂಕರಗೌಡರು ಶಿಕ್ಷಣ ಸಚಿವರಾಗಿದ್ದರು. ಅವಧಿಯಲ್ಲಿ ಅವರು ಕೈಗೊಂಡ ಅನೇಕ ಕ್ರಾಂತಿಕಾರಕ ನಿಲುವುಗಳು ಇಂದಿಗೂ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿವೆ. ರಾಜ್ಯ ಶಿಕ್ಷಣ ಇಲಾಖೆಯಲ್ಲಿ ಅಭೂತ ಪೂರ್ವ ಬದಲಾಣೆಗಳನ್ನು ಚಾಲ್ತಿಗೆ ತಂದ ಗೌಡರು, ಖಾಸಾಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿದ್ದ ಶಿಕ್ಷಕರಿಗೆ ಚೆಕ್ ಮೂಲಕ ವೇತನ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರುವುದರ ಮೂಲಕ ಆಡಳಿತ ಮಂಡಳಿಯ ಕಪಿಮುಷ್ಠಿಯಲ್ಲಿ ನಲುಗಿ ಹೋಗಿದ್ದ ಲಕ್ಷಾಂತರ ಶಿಕ್ಷಕರಿಗೆ ಬಿಡುಗಡೆಯ ಹಾದಿ ತೋರಿದರು. ಒಂದು ನಾಡು ಕೇವಲ ಭೌತಿಕವಾಗಿ ಸಂಪತ್ಭರಿತವಾಗಿದ್ದರೆ ಸಾಲದು, ಸಾಹಿತ್ಯಿಕವಾಗಿ ಮತ್ತು ಸಾಂಸ್ಕøತಿಕವಾಗಿ ಶ್ರೀಮಂತಿಕೆಯಿಂದ ಕೂಡಿರಬೇಕು ಎಂಬುದು ಶಂಕರಗೌಡರ ನಿಲುವಾಗಿತ್ತು. ಕಾರಣಕ್ಕಾಗಿ ಅನುದಾನದ ಕೊರತೆಯಿಂದ ಮೂಲೆ ಗುಂಪಾಗಿದ್ದ ಕನ್ನಡ ವಿಶ್ವ ಕೋಶ ಪ್ರಕಟಣೆ ಮತ್ತು ಕರ್ನಾಟಕದ ಸಮಗ್ರ ಇತಿಹಾಸವನ್ನು ಒಳಗೊಂಡ ಹಾಗೂ ಮೈಸೂರು ವಿಶ್ವ ವಿದ್ಯಾಲಯದ ಮಹತ್ವದ ಯೋಜನೆಯಾದಎಫಿಗ್ರಾಪಿಯಾ ಆಫ್ ಕರ್ನಾಟಕಸಂಪುಟಗಳ ಮುದ್ರಣಕ್ಕೆ ಉಧಾರವಾಗಿ ಆರ್ಥಿಕ ನೆರವನ್ನು ನೀಡುವುದರ ಮೂಲಕ ಕನ್ನಡಿಗರ ಜ್ಞಾನ ಭಂಡಾರವನ್ನು ಹೆಚ್ಚಿಸುವಲ್ಲಿ  ನೆರವಾದರು. ಇವುಗಳ ಜೊತೆಗೆ ಕಿರಿಯರ ವಿಶ್ವಕೋಶ, ಪ್ರಕಟಣೆಗೆ ಮುಂದಾದರಲ್ಲದೆ, ಕನ್ನಡದ ಶಕ್ತಿಕೇಂದ್ರವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುದಾನವನ್ನು ಹೆಚ್ಚು ಮಾಡಿದರು. ಅನೇಕ ಸ್ಮಾರಕಗಳ ಕುರುಹು, ಶಿಲಾ ಶಾಸನಗಳು, ಅಪರೂಪದ ಇತಿಹಾಸ ಚಿತ್ರಗಳು ಮತ್ತು ಪಳೆಯುಳಿಕೆಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಪಾಳು ಕೊಂಪೆಯಾಗಿದ್ದ ಬೆಂಗಳೂರಿನ ವೆಂಕಟಪ್ಪ ಚಿತ್ರ ಕಲಾ ಮಂದಿರದ ಕಟ್ಟಡವನ್ನು ನವೀಕರಿಸಿ ಅದಕ್ಕೊಂದು ಹೊಸ ರೂಪ ಕೊಟ್ಟರು. ಕೆ.ವಿ.ಶಂಕರಗೌಡರ ಇಂತಹ ಸಾಂಸ್ಕೃತಿಕ ಅಭಿರುಚಿ ಮತ್ತು ಕಾಳಜಿಗಳಿಗೆ ಸಾಕ್ಷಿಯಾಗಿದ್ದ ನಮ್ಮ ಕನ್ನಡದ ಹಿರಿಯ ಜಾನಪದ ವಿದ್ವಾಂಸ ಡಾ. ಹಾ.ಮಾ. ನಾಯಕರು ಗೌಡರನ್ನು ರೀತಿಯಲ್ಲಿ ಎದೆ ತುಂಬಿ ಬಣ್ಣಿಸಿದ್ದಾರೆ. “ ಗೌಡರ ಹೆಸರನ್ನು ಅನೇಕ ವರ್ಷಗಳಿಂದ ಬಲ್ಲವನಾಗಿದ್ದರೂ, ಅವರನ್ನು ಮುಖತಃ ನೊಡುವ ಅವಕಾಶಗಳು  ಅವರು ಶಿಕ್ಷಣ ಸಚಿವರಾಗಿದ್ದಾಗ ನನಗೆ ದೊರೆತವು. ಅವರನ್ನು ಬೇಟಿಯಾದ ಹಲವಾರು ಸಂದರ್ಭಗಳು ನನ್ನ ನೆನಪಿನ ಹೊಲದಲ್ಲಿ ಇನ್ನೂ ಹಸಿರಾಗಿವೆ. ಅಪರಿಚಿತ, ಅಮಹತ್ವದ ತರುಣನೊಬ್ಬನನ್ನು ಅವರು ಕಂಡ ಬಗೆ, ಅವನ ಅಭಿಪ್ರಾಯಗಳಿಗೆ ಅವರು ನೀಡಿದ ಮಹತ್ವ ಇವು ನನ್ನಲ್ಲಿ ಅವರ ವಿಷಯಕ್ಕೆ ಹೆಚ್ಚಿನ ಗೌರವವನ್ನು ಮೂಡಿಸಿದವುಮುಂದೆ ಅನೇಕ ಸಂದರ್ಭಗಳಲ್ಲಿ ಅವರನ್ನು ಕಾಣಬೇಕಾಯಿತು. ಆದರೆ, ಮೊದಲ ಬಾರಿ ಅವರ ಬಗ್ಗೆ ಮೂಡಿದ ಭಾವನೆ ಯಾವ ಕಾರಣದಿಂದಲೂ ಬದಲಾಗಿಲ್ಲ. ಅವರ ವಿನಯ, ಸೌಜನ್ಯ, ಅಭಿಮಾನ, ಅಂತಃಕರಣ, ಅನಿಸಿದ್ದನ್ನು ನೇರವಾಗಿ ಹೇಳುವ ಎದೆಗಾರಿಕೆ ಯಾರನ್ನೂ ಆಕರ್ಷಿಸುತ್ತದೆ. ಸಂಸ್ಕತಿ ಸಂಪನ್ನ ಯಾರು ಎನ್ನುವುದರ ಮೇಲೆ ಕೆಲವು ಸಂಪುಟಗಳನ್ನು ಬರೆಯಬಹುದು.. ಕೆ.ವಿ. ಶಂಕರಗೌಡರಂತಹ ವ್ಯಕ್ತಿಗಳು ಅದಕ್ಕೆ ಜೀವಂತ ಉದಾಹರಣೆಯಾಗಿ ನಿಲ್ಲುತ್ತಾರೆ. ಅಂತಹ ಚೇತನಗಳು ಸಮಾಜ ಜೀವನದಲ್ಲಿ, ರಾಷ್ಟ್ರಜೀವನದಲ್ಲಿ ಮಾದರಿಯಾಗಿ ನಿಲ್ಲುತ್ತವೆ.

                                        ( ಶಂಕರಗೌಡರ ಜೊತೆ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣ)

2005 ಲ್ಲಿ ಕರ್ನಾಟಕ ವಿಧಾನ ಸಭೆ ಸಚಿವಾಲಯವು ಸಂಸದೀಯ ಪಟುಗಳು ಮಾಲಿಕೆಯಡಿ ಕೆ.ವಿ.ಶಂಕರಗೌಡರ ಕೃತಿಯನ್ನು ಹೊರ ತರಲು ನಿರ್ಧರಿಸಿದಾಗ ಕೃತಿ ರಚನೆಯ ಹೊಣೆಗಾರಿಕೆಯನ್ನು ನನಗೆ ವಹಿಸಿತ್ತು. ಗೌಡರು ವಿಧಾನ ಸಭೆಯಲ್ಲಿ ಜನಪ್ರತಿನಿಧಿಯಾಗಿ, ಸಚಿವರಾಗಿ, ಹಾಗೂ ಲೋಕ ಸಭೆಯ ಸದಸ್ಯರಾಗಿ ಅವರು ಶಾಸನ ಸಭೆಗಳಲ್ಲಿ ಮಾಡಿರುವ ಭಾಷಣಗಳ ದಾಖಲೆಯನ್ನು ನೋಡುವ ಅವಕಾಶ ನನಗೆ ದೊರೆಯಿತು. ಅವುಗಳನ್ನು ಪರಿಶೀಲಿಸುವಾಗ ಒಬ್ಬ ಜನಪ್ರತಿನಿಧಿಗೆ ನಾಡು, ನೆಲದ ನತದೃಷ್ಟರಾದ ರೈತರು ಮತ್ತು ಕೂಲಿ ಕಾರ್ಮಿಕರು, ಬಡ ಕಲಾವಿದರ ಕುರಿತು ಹಾಗೂ  ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಇಷ್ಟೊಂದು ಆಳವಾದ ಒಳನೋಟಗಳು ಮತ್ತು ಪ್ರೀತಿ  ಇರಲು ಸಾದ್ಯವೆ? ಎಂದು ಅಚ್ಚರಿ ಪಟ್ಟಿದ್ದೀನಿ.
ದಿನಾಂಕ 9-7-1952 ರಂದು ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಕುರಿತು ಕೆ.ವಿ,ಶಂಕರಗೌಡರು ಮಾಡಿರುವ ಭಾಷಣ, ಅರ್ಧಶತಮಾನ ಕಳೆದರೂ ಸಹ  ಪ್ರಸ್ತುತವೆನಿಸುತ್ತದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ ಹಿನ್ನಲೆಯಲ್ಲಿ ನಮ್ಮ ಗ್ರಾಮಗಳನ್ನು ಹೇಗೆ ಸುಧಾರಿಸಬೇಕು? ಎಂಬ ಹಿನ್ನಲೆಯಲ್ಲಿ ಗೌಡರು ಮಾಡಿರುವ ಸುಧೀರ್ಘ ಭಾಷಣದಲ್ಲಿ ಹಳ್ಳಿಗೆ ಅವಶ್ಯಕವಾದ ವಿದ್ಯುತ್, ಕುಡಿಯುವ ನೀರು, ರಸ್ತೆ ಸಂಪರ್ಕ, ಶಿಕ್ಷಣ ಸೇರಿದಂತೆ ಇವುಗಳ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

ದಿನಾಂಕ 17-7 1952 ರಂದು ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡುತ್ತಾ, “ ನಮ್ಮ ಮಕ್ಕಳಿಗೆ ಯಾವ ವಿದ್ಯಾಭ್ಯಾಸ ದೊರಕಬೇಕೋ ಅದು ನಮ್ಮ ಉಚ್ಛ ಸಂಸ್ಕøತಿಯನ್ನು ಎತ್ತಿ ಹಿಡಿಯುವಂತದ್ದಾಗಿರಬೇಕು, ನಾವು ಕೊಡತಕ್ಕ ವಿದ್ಯಾಭ್ಯಾಸ ಕ್ರಮದಿಂದ ಮಕ್ಕಳಿಗೆ ಸಶ್ರಮ ಕೆಲಸವೆಂದು ನಾವೇನು ಹೇಳುತ್ತೇವೆಯೊ ಅಂದರೆ, ಮನುಷ್ಯ ತಾನೇ ಮೈ ಬಗ್ಗಿ ಮಾಡುವ ಕೆಲಸ ಅದರ ಬಗ್ಗೆ ಗೌರವ ಭಾವನೆ ಬರುವಂತಾಗಬೇಕು. ಇಂದು ನಾವು ಕೊಡುತ್ತಿರುವ ವಿದ್ಯೆಯಿಂದ ಶಾರೀರಕ ಶ್ರಮದ ವಿಷಯದಲ್ಲಿ ತಿರಸ್ಕಾರ ಭಾವನೆ ಬೆಳೆಯುತ್ತಿದೆ. ಇದು ಸನ್ನೀವೇಶದ ಪ್ರಭಾವವೊ, ಅಥವಾ ಪಾಶ್ಚಿಮಾತ್ಯರ ಸಂಪರ್ಕ ಮತ್ತು ಅನುಕರಣೆಯಿಂದಲೋ ಏನೋ ಮಕ್ಕಳಿಗೆ ಶಾರೀರದ ಶ್ರಮದ ಕೆಲಸಗಳಲ್ಲಿ ಉಂಟಾಗಿರುವ ತಿರಸ್ಕಾರ ಹೋಗಿ ಪುರಸ್ಕಾರ ಬುದ್ದಿ ಬರಬೇಕಾದರೆ, ಪಾಠಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಾಗಲೆ ದೈಹಿಕ ಶ್ರಮ ವಹಿಸುವ ಮನೋಭಾವವನ್ನು ಬೆಳಸಬೇಕುಎಂದಿದ್ದಾರೆ. ( ಅವರ ಮಾತುಗಳನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ.) ಶ್ರಮ ಸಂಸ್ಕøತಿಯ ಕುರಿತು ಗೌಡರು ಪ್ರಸ್ತಾಪಿಸುವ ಮಾತಿನ ಹಿನ್ನಲೆಯನ್ನು ಇಟ್ಟುಕೊಂಡು ಪರಾಮರ್ಶಿದರೆ, ಇವೊತ್ತಿಗೂ ದೈಹಿಕ ಮತ್ತು ಬೌದ್ಧಿಕ ಶ್ರಮಗಳ ನಡುವೆ ಇರುವ ಅಂತರ ಮತ್ತು ವಾಸ್ತವ ನಮಗೆ ಮನದಟ್ಟಾಗುತ್ತದೆ.
ನಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಅವಕಾಶಗಳು ಯಾವ ಮಾಧ್ಯಮದಲ್ಲಿ ಇರಬೇಕು ಎಂಬುದರ ಕುರಿತು ನಮ್ಮನ್ನಾಳುವ ಸರ್ಕಾರಗಳಿಗೆ ಮತ್ತು ಮಕ್ಕಳ ಪೋಷಕರಿಗೆ ಸ್ಪಷ್ಟವಾದ , ಖಚಿತವಾದ ಅಭಿಪ್ರಾಯಗಳಿಲ್ಲ. ಇಂಗ್ಲೀಷ್ ಮಾಧ್ಯಮವೊಂದೇ ಆದಿ ಮತ್ತು ಅಂತ್ಯ ಎಂದು ನಂಬಿಕೊಂಡು ಭ್ರಮೆಯ ಜಗತ್ತಿನಲ್ಲಿ ತೊಳಲಾಡುತ್ತಿರುವವರ ನಡುವೆ  ನಮ್ಮ ಮಾತೃ ಭಾಷೆಯೂ ಸೇರಿದಂತೆ  ಭಾರತದ ಅನೇಕ ಸ್ಥಳೀಯ ಭಾಷೆಗಳು ಅವನತಿಯ ಅಂಚಿನಲ್ಲಿವೆ. ಆದರೆ, ಕೆ.ವಿ.ಶಂಕರಗೌಡರು ನಮ್ಮ ಶಿಕ್ಷಣ ಮಾಧ್ಯಮದಲ್ಲಿ ತ್ರಿಭಾಷ ಸೂತ್ರ ಹೇಗಿರಬೇಕೆಂದು ದಿನಾಂಕ 6-4-1968 ರಲ್ಲಿ ಅವರು ಶಿಕ್ಷಣ ¸ಚಿವರಾಗಿದ್ದ ಸಂದರ್ಭದಲ್ಲಿ ಮಂಡಿಸಿರುವ ವಿಚಾರಗಳು ಇಂದಿಗೂ ಮನನ ಯೋಗ್ಯವಾಗಿವೆ. “ ಜಾತಿ, ಭಾಷೆ, ಪ್ರಾಂತ್ಯ ಮೂರು ಅತಿ ಸೂಕ್ಷ್ಮವಾದ ವಿಷಯಗಳು. ಮೂರೂ ಕೂಡ ನಮ್ಮ ಭಾವನೆಗಳನ್ನು ಉದ್ರೇಕಗೊಳಿಸಬಲ್ಲ ವಿಷಯಗಳು. ಆದ್ದರಿಂದ ಇವುಗಳ ಕುರಿತು ಮಾತನಾಡುವಾಗ ಬಹಳ ದೀರ್ಘವಾಗಿ ಆಲೋಚಿಸಿ ಮಾತನಾಡಬೇಕು. ನಾವು ವಿಚಾರಪರರಾಗಿರಬೇಕೇ ಹೊರತು, ವಿಕಾರವಶರಾಗಬಾರದು. ಸಧ್ಯದ ಸ್ಥಿತಿಯಲ್ಲಿ ನಮ್ಮ ರಾಷ್ಟ್ರಕ್ಕೆ ಬೇಕಾಗಿರುವುದು ತ್ರಿಭಾಷಾ ಸೂತ್ರ. ಯಾವ ರಾಜ್ಯವೇ ಆಗಿರಲಿ ಇದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ಇದನ್ನು ಅನೇಕ ರಾಜ್ಯದವರು ಒಪ್ಪಿಕೊಂಡಿದ್ದಾರೆ. ದಿನ ನಮ್ಮ ನಡುವೆ ಭಾಷೆಯ ಕುರಿತು ಗೊಂದಲ ಏರ್ಪಡಲು ಕಾರಣ ಹಿಂದಿ ಭಾಷೆಯ ಹೇರಿಕೆ ಕಾರಣವಾಗಿದೆ. ಕೇಂದ್ರ ಸರ್ಕಾರÀ ಹುದ್ದೆಗಳಿಗೆ ಸೇರುವ ಮಂದಿಗೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನು ಕಡ್ಡಾಯ ಮಾಡಿ, ಪಾರ್ಲಿಮೆಂಟಿನಲ್ಲಿ ಠರಾವು ಪಾಸು ಮಾಡಲಾಗಿದೆ. ಇದು ತಪ್ಪು ನಿರ್ಧಾರ. ಇಂಗ್ಲೀಷ್ ಮತ್ತು ಹಿಂದಿಯ ಜೊತೆಗೆ ಆಯಾ ರಾಜ್ಯಗಳ ಸ್ಥಳಿಯ ಮಾತೃ ಭಾಷೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು.” ಇದು ಭಾಷೆ ಕುರಿತಂತೆ ಗೌಡರ ಸ್ಪಷ್ಟ ನಿಲುವು.

ಕೆ.ವಿ.ಶಂಕರಗೌಡರು ಕೇವಲ ಒಬ್ಬ ರಾಜಕಾರಣಿ ಅಥವಾ ಜನಪ್ರತಿನಿಧಿ ಮಾತ್ರ ಆಗಿರಲಿಲ್ಲ. ಅವರೊಳಗೆ ಒಬ್ಬ ಗಾಂಧಿಯಿದ್ದರು, ನುರಿತ ಶಿಕ್ಷಣ ತಜ್ಞನಿದ್ದ, ಭಾಷೆ ಮತ್ತು ಸಂಸ್ಕøತಿಗಳ ಕುರಿತು ಅಪಾರ ಒಳನೋಟಗಳುಳ್ಳ ವಿದ್ವಾಂಸನಿದ್ದ ಇವೆಲ್ಲವುಗಳಿಗಿಂತ ಹೆಚ್ಚಾಗಿ ಒಬ್ಬ ಅಪ್ಪಟ ರೈತನಿದ್ದ. ಇವೆಲ್ಲವೂಗಳ ಪರಿಣಾಮವಾಗಿ ಒಂದು ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಪರಿಭಾವಿಸುವ ಮಾತೃ ಹೃದಯ ಗೌಡರಲ್ಲಿತ್ತು. ಇದು ಅವರಿಗೆ ಮಹಾತ್ಮ ಗಾಂಧಿಯವರಿಂದ ಬಂದ ಬಳುವಳಿಯಾಗಿತ್ತು. ಗೌಡರು ಯಾವುದೇ ವಿಷಯ ಕೈಗೆತ್ತಿಕೊಳ್ಳಲಿ, ಅವುಗಳಲ್ಲಿ ಖಚಿತತೆ ಮತ್ತು ಪರಿಪೂರ್ಣತೆಗಳಿಂದ ಕೂಡಿರುತ್ತಿದ್ದವು. ಒಮ್ಮೆ ಅಂದರೆ 18-7-1967 ಬಜೆಟ್ ಅಧಿವೇಶನದಲ್ಲಿ ಗೌಡರು ಮಾತನಾಡುತ್ತಾ, ಆತ್ಮ ಶೋಧನೆ ಎಂಬ ಮಾತನ್ನು ಪ್ರಸ್ತಾಪಿಸಿದ್ದರು. ಇದನ್ನು ಚರ್ಚೆಗೆ ಎತ್ತಿಕೊಂಡ ಹಿರಿಯ ಸಮಾಜವಾದಿ ಶಾಂತವೇರಿ ಗೋಪಾಲಗೌಡರುಆತ್ಮ ಶೋಧನೆಗೆ ಟೈಮ್ ಲಿಮಿಟ್ ಏನಾದರೂ ಇದೆಯೆ?” ಎಂದು ಗೌಡರನ್ನು ಕೆಣಕಿದರು. ಆಗ ಶಂಕರಗೌಡರುಆತ್ಮ ಸಂಶೋಧನೆ ಎಂಬುದು ಹುಟ್ಟಿನಿಂದ ಸಾಯುವವರೆಗೂ ಮನುಷ್ಯನಲ್ಲಿ ಇರಬೇಕು ಮತ್ತು ಸ್ವಪ್ನ ಜಾಗ್ರತೆ ಸುಸ್ಥಿತಿಯಲ್ಲಿಯೂ ಇರಬೇಕು.” ಎಂದು ಅರ್ಥಪೂರ್ಣವಾಗಿ ಆತ್ಮಶೋಧನೆ ಕುರಿತು ವಿಧಾನಸಭೆಯಲ್ಲಿ ವಾಖ್ಯಾನಿಸಿದ್ದರು.
ಶಂಕರಗೌಡರು ಮಾತು ಮತ್ತು ಕೃತಿಗಳ ನಡುವೆ ಅಂತರವಿಲ್ಲದಂತೆ ಬದುಕಿ ಬಾಳಿದವರು. ಅವರು ಹೇಳಬೇಕಾದ ವಿಚಾರಗಳಲ್ಲಿ ಗೊಂದಲಕ್ಕೆ ಆಸ್ಪದವಿರುತ್ತಿರಲಿಲ್ಲ. ನೇರ ಮತ್ತು ನಿಷ್ಟುರ ನುಡಿಗಳಿಗೆ ಹೆಸರಾಗಿದ್ದ ಗೌಡರು ಎಂದೂ ಅಧಿಕಾರಕ್ಕೆ ಅಂಟಿಕೊಂಡವರಲ್ಲ. 1954 ರಲ್ಲಿ ವಿಧಾನಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ರೈತರನ್ನು ನಿರ್ಲಕ್ಷಿಸಿದ್ದ ಸರ್ಕಾರವನ್ನು ಗೌಡರು ಕಟು ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಸಂದರ್ಭದಲ್ಲಿ  “ಕೆ.ವಿ.ಶಂಕರಗೌಡರಿಗೆ ರೈತರ ಮೇಲಿರುವುದು ಹುಸಿ ಕಾಳಜಿಎಂದು ಹೆಚ್.ಕೆ.ವೀರಣ್ಣಗೌಡರು ಟೀಕಿಸಿದಾಗ, ಮನನೊಂದ ಗೌಡರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮಂಡ್ಯ ನಗರಕ್ಕೆ ಬಂದು ರೈತರ ಜೊತೆ ಬದುಕುತ್ತಾ ಅಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಎಂದೂ ಅಧಿಕಾರಕ್ಕಾಗಿ ಹಪಾಹಪಿತನ ತೋರದ ಶಂಕರಗೌಡರ ಘನತೆಯ ಬದುಕಿನ ಬಗ್ಗೆ ಅವರ ಆತ್ಮೀಯರಲ್ಲಿ ಒಬ್ಬರಾಗಿದ್ದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಹೀಗೆ ಹೇಳಿಕೊಂಡಿದ್ದಾರೆ.” ಶಂಕರಗೌಡರದು ನನ್ನದು ಹಲವು ದಶಕಗಳ ಆತ್ಮೀಯತೆ. ಅವರದು ಸ್ವಾಭಿಮಾನದ ವ್ಯಕ್ತಿತ್ವ. ನಾನೇ ಖುದ್ದಾಗಿ ಅವರ ಮನೆಗೆ ತೆರಳಿ ಹಲವಾರು ಬಾರಿ ವಿಧಾನ ಪರಿಷತ್ ಸ್ಥಾನವನ್ನು ಒಪ್ಪಿಕೊಳ್ಳಿ ಎಂದು ಒತ್ತಾಯಿಸಿದ್ದೀನಿ. ಆದರೆ ಗೌಡರುನನಗೆ ಹಿಂಬಾಗಿಲ ರಾಜಕಾರಣ ಬೇಡಎಂದು ಸ್ಪಷ್ಟವಾಗಿ ನಿರಾಕರಿಸಿದರು
ಗೌಡರ ಸಾರ್ವಜನಿಕ ಬದುಕು ಕೇವಲ ರಾಜಕಾರಣಕ್ಕೆ ಸೀಮಿತವಾಗಿರಲಿಲ್ಲ. ಜನಪರ ಚಳುವಳಿ, ಸಾಂಸ್ಕøತಿಕ ಚಳುವಳಿಗಳಲ್ಲಿ ಅವರು ಮುಂಚೂಣಿಯಲ್ಲಿರುತ್ತಿದ್ದರು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದಿಂದ ದೊಡ್ಡದಾಗಿ ಧ್ವನಿಯೆತ್ತಿ ಬೆಂಬಲಿಸಿದವರು ಶಂಕರಗೌಡರು ಎಂದು ಉತ್ತರ ಕರ್ನಾಟಕದ ಹಲವಾರು ಹಿರಿಯ ಸಾಹಿತಿಗಳು, ಹೋರಾÀಟಗಾರರು ಗೌರವದಿಂದ ಅವರನ್ನು ಸ್ಮರಿಸುತ್ತಾರೆ.
ಗೌಡರ ಕ್ರಿಯಾಶೀಲ ಮತ್ತು ಸೃಜನಶೀಲ ನೆಲೆಗಳನ್ನು ಹುಡುಕುತ್ತಾ ಹೋದರೆ, ಅವುಗಳು ಗಾಂಧೀಜಿ ಮತ್ತು ಅವರ ವಿಚಾರಧಾರೆಗಳತ್ತ ನಮ್ಮನ್ನು ಕರೆದೊಯ್ಯುತ್ತವೆ. ಗೌಡರಿಗೆ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆ ಮತ್ತು ಕುವೆಂಪುರವರ ವೈಚಾರಿಕತೆ ಹಾಗೂ ದೇಶ, ಧರ್ಮ, ಜಾತಿಯ ಗಡಿಗಳನ್ನು ಮೀರಿದ ವಿಶ್ವ ಮಾನವ ಪ್ರಜ್ಞೆ ಇವುಗಳ ಕುರಿತು ಅಪಾರ ಅಭಿಮಾನವಿತ್ತು.ಅವುಗಳನ್ನು ತಮ್ಮ ಬದುಕಿನ ಮೂಲ ಮಂತ್ರಗಳಾಗಿ ಅಳವಡಿಸಿಕೊಂಡಿದ್ದರು. ತಮ್ಮ ಕಿರಿಯ ಪುತ್ರನ ವಿವಾಹವನ್ನು ಕುವೆಂಪುರವರ ಮಂತ್ರ ಮಾಂಗ್ಯಲ್ಯ ಪರಿಕಲ್ಪನೆಯಲ್ಲಿ ನೆರವೇರಿಸಿದ ಗೌಡರು, 1971 ರಲ್ಲಿ ಮಹಾತ್ಮ ಗಾಂಧಿಜಿಯವರ ಆಪ್ತ ಕಾರ್ಯದರ್ಶಿ ಪ್ಯಾರಾಲಾಲ್ ಬರೆದಿದ್ದಮಹಾತ್ಮನ ಕೊನೆಯ ದಿನಗಳುಇಂಗ್ಲೀಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರು. ಅಷ್ಟೇ ಅಲ್ಲದೆ, 1980 ಗಾಂಧಿಜಯಂತಿಯಂದು ಲೋಕಸೇವಾಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಖಾದಿ ಮತ್ತು ಚರಕದ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಲು ಮುಂದಾದರು. ಖಾದಿ ಗ್ರಾಮೋದ್ಯೋಗದ ಕೈಗಾರಿಕೆಗಾಗಿ ಯಾರೋಬ್ಬರಿಂದಲೂ ಹಣ ಪಡೆಯದೆ, ಮಂಡ್ಯ ನಗರದ ತಮ್ಮ ನಿವಾಸವನ್ನು ಬ್ಯಾಂಕಿಗೆ ಒತ್ತೆ ಇಟ್ಟು ಸಾಲ ಪಡೆದಿದ್ದರು.ತಮ್ಮ ವ್ಯಯಕ್ತಿಕ ಬದುಕಿನಲ್ಲಿ ಶುದ್ಧ ಚಾರಿತ್ರ್ಯ ಅಥವಾ ಶೀಲವನ್ನು ತಮ್ಮ ಜೀವದ ಉಸಿರಿನಂತೆ ಕಾಪಾಡಿಕೊಂಡು ಬಂದಿದ್ದ ಗೌಡರು ತಮ್ಮ ಬದುಕು, ಮಾತು ಕೃತಿಗಳ ನಡುವೆ ಅಂತರವಿಲ್ಲದಂತೆ ಜೀವಿಸುವುದರ ಮೂಲಕ ತಮ್ಮ ಹಲವಾರು ಮಿತ್ರರು ಹಾಗೂ ಕಿರಿಯ ಅನುಯಾಯಿಗಳಿಗೆ ಮಾದರಿಯಾಗಿದ್ದರು. ಇವರಲ್ಲಿ ಕೆ.ಸಿಂಗಾರಿಗೌಡರು, ಜಿ.ಮಾದೇಗವಡರು ಮತ್ತು ಹೆಚ್.ಡಿ.ಚೌಡಯ್ಯನವರು ಪ್ರಮುಖರು.
   ( ಶಂಕರಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿರುವ ಮಾಜಿ ಮುಖ್ಯ ಮಂತ್ರಿ ವಿರೇಂದ್ರ ಪಾಟೀಲರು)

ತಮ್ಮ ಮುಪ್ಪಿನ ಹಾಗೂ ಕೊನೆಯ ದಿನಗಳಲ್ಲೂ ಸಹ ಗೌಡರು ತಾವು ನಂಬಿದ್ದ ತತ್ವ ಸಿದ್ಧಾಂತಗಳನ್ನು ಬಿಟ್ಟುಕೊಟ್ಟವರಲ್ಲ. 1984 ಅಕ್ಟೋಬರ್ ತಿಂಗಳಿನಲ್ಲಿ ನಡೆದ ಇಂದಿರಾಗಾಂಧಿಯವರ ಹತ್ಯೆಯ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದ ಗೌಡರು ಲೋಕಸಭಾ ಕಲಾಪಗಳಿಂದ ದೂರವಿರಲು ಬಯಸುತ್ತಿದ್ದರು. ನನಗೆ ದಿಲ್ಲಿಗಿಂತ ಹಳ್ಳಿಗಳೇ ನನಗೆ ಪ್ರಾಣ, ಹಳ್ಳಿಗರ ಸುಖ ದುಃಖಗಳು ನನ್ನ ಸುಖ ದುಃಖಗಳು ಎನ್ನುತ್ತಿದ್ದರು. 18-4 1985 ರಲ್ಲಿ ಲೋಕಸಬೆಯಲ್ಲಿ ಕೈಗಾರಿಕಾ ಇಲಾಖೆಯ ಬೇಡಿಕೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಗೌಡರುಬೃಹತ್ ಕೈಗಾರಿಕೆಗಳು ನನ್ನ ದೃಷ್ಟಿಯಲ್ಲಿ ಪೆಡಂಭೂತಗಳು. ಪೆಡಂಭೂತಗಳು ಮಾನವ ಭಕ್ಷಕರೆಂದು ಕೇಳಿದ್ದೀನಿ. ಅವು ವಾಸ್ತವದಲ್ಲಿ ಅಸ್ತಿತ್ವದಲ್ಲಿದ್ದವೊ ಅಥವಾ ಕವಿ ಕಲ್ಪನೆಯ ಪ್ರಾಣಿಗಳೊ ಗೊತ್ತಿಲ್ಲ. ಅದೇನೇ ಇರಲಿ ಅವು ಇಪ್ಪತ್ತನೆ ಶತಮಾನದಲ್ಲಿ ಅಸ್ತಿತ್ವದಲ್ಲಿವೆ. ಬೃಹತ್ ಕೈಗಾರಿಕೆಗಳ ರೂಪದಲ್ಲಿವೆ ಎಂದು ನಾವು ಬಲ್ಲವರಾಗಿದ್ದೀವಿ.” ಎಂದು ಹೇಳುತ್ತಾ, ಗಾಂಧೀಜಿಯವರ ಗುಡಿ ಕೈಗಾರಿಕೆಗಳ ಮಹತ್ವವನ್ನು ಅಂದು ಸಂಸತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಸಂಸತ್ತಿನ ಸದಸ್ಯರು ಪ್ರಶ್ನೆ ಕೇಳುವಾಗ ಅಥವಾ ಚರ್ಚೆಯಲ್ಲಿ ಪಾಲ್ಗೊಳ್ಳುವಾಗ ಕಾಗದದ ಮೇಲೆ ಬರೆದುಕೊಂಡು ಓದುವುದನ್ನು ನೋಡಿ ಸಿಟ್ಟಿಗೆದ್ದ ಗೌಡರು, “ ಮಾತನಾಡಲು ಬಾರದ, ತಾವು ಪ್ರತಿನಿಧಿಸುವ ಕ್ರೇತ್ರದ ಸಮಸ್ಯೆಗಳ ಬಗ್ಗೆ ಚಕಾರವೆತ್ತದ ಮಂದಿ ಲೋಕಸಭೆಗೆ ಆಯ್ಕೆಯಾಗಲು ಅಯೋಗ್ಯರುಎಂದು ಚಾಟಿಯೇಟು ಬೀಸಿದ್ದರು.ಕರ್ನಾಟಕದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕøತಿಕ ವಲಯಗಳಲ್ಲಿ ತನ್ನದೇ ಆದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿರುವ ಮಂಡ್ಯ ಜಿಲ್ಲೆಗೆ ಇಂತಹ ವಿಶಿಷ್ಟ ಸ್ಥಾನ ಮಾನ ದೊರಕಿಸಿಕೊಡುವಲ್ಲಿ ಅನೇಕ ಪ್ರಾತಃಸ್ಮರಣಿಯರ ಪಾತ್ರವಿದೆ. ಅಂತಹ ಮಹನೀಯರ ನಡುವೆ ಕೆ.ವಿ. ಶಂಕರಗೌಡರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಎಂದರೆ, ಅದು ಅತಿಶಯದ ಮಾತಾಗಲಾರದು.

( ಇದೇ ಜುಲೈ 25 ರಂದು ನಡೆಯುವ ಕೆ.ವಿ.ಶಂಕರಗೌಡರ ನೂರನೇ ಜನ್ಮದಿನಾ ಚರಣೆಯಂದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಂದ ಬಿಡುಗಡೆಯಾಗುತ್ತಿರುವ ಶಂಕರಗೌಡರ ಕೃತಿಗೆ ಬರೆದ ಲೇಖನ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ