ಶುಕ್ರವಾರ, ಜೂನ್ 2, 2017

ಭಾರತದ ಕೃಷಿ ಮೇಲಿನ ತೆರಿಗೆ; ಒಂದು ಜಿಜ್ಞಾಸೆ



ಕೃಷಿ ಪ್ರಧಾನವಾದ ಭಾರತದಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ  ಕೃಷಿರಂಗವನ್ನು  ಈವರೆಗೆ ಯಾವ ಸರ್ಕಾರಗಳೂ  ತೆರಿಗೆಗೆ ಒಳಪಡಿಸಿಲ್ಲ. ಆದರೆ, ಇತ್ತೀಚೆಗೆ ಶ್ರೀಮಂತ ರೈತರ ಮೇಲೆ ತೆರಿಗೆ ವಿಧಿಸಬೇಕೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಧಿಕ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿರುವ ಮತ್ತು  ಕೃಷಿಯಿಂದ ಲಾಭ ಪಡೆಯುತ್ತಿರುವ ರೈತರು, ವಾಣಿಜ್ಯ ಬೆಳೆಗಳನ್ನು ಬೆಳೆದು ವಾರ್ಷಿಕವಾಗಿ ಹತ್ತು ಲಕ್ಷ ರೂಪಾಯಿಗಿಂದ ಅದಿಕ ಲಾಭ ಪಡೆಯುತ್ತಿರುವ ರೈತರ ಮೇಲೆ ತೆರಿಗೆ ವಿಧಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ.
ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವ ಶೇಕಡ ತೊಂಬತ್ತರಷ್ಟು ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ.  ಇತ್ತೀಚೆಗಿನ ದಿನಗಳಲ್ಲಿ ನಿರಂತರವಾಗಿ  ಕೃಷಿ ಉತ್ಪಾದನಾ ವೆಚ್ಚವು ಏರಿಕೆಯಾಗುತ್ತಿದೆ. ತಾವು ಬೆಳೆದ ಫಸಲಿಗೆ ಸೂಕ್ತ ಬೆಲೆಯಿಲ್ಲದ ಕಾರಣ ರೈತರು ಆತ್ಮಹತ್ಯೆಯ ಮೂಲಕ ಸಾವಿನ ಮನೆಯ ಕದ ಬಡಿಯುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರು ಮಾಡಿದ್ದ ಕೃಷಿ ಸಾಲವು ಬ್ಯಾಂಕುಗಳಲ್ಲಿ ಬಡ್ಡಿಯೊಂದಿಗೆ ಬೆಳೆದು ಇಡೀ ಕುಟುಂಬವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಇಂತಹ ಧಾರಣ ಸ್ಥಿತಿಯಲ್ಲಿ ಕೃಷಿಯ ಮೇಲೆ ತೆರಿಗೆ ತರವಲ್ಲ ಎಂಬುದು ಬಹುತೇಕ ತಜ್ಞರ ಅಭಿಪ್ರಾಯವಾಗಿದೆ. ಇದು ಒಪ್ಪತಕ್ಕ ಸಂಗತಿಯೂ ಹೌದು. ಆದರೆ. ಕೃಷಿಯ ಮೂಲಕ ತೆರಿಗೆ ತಪ್ಪಿಸಿಕೊಳ್ಳಲು ದೇಶದ ಶ್ರಿಮಂತ ಉದ್ಯಮಿಗಳು, ಸಿನಿಮಾ ನಟರು, ಕ್ರೀಡಾಪಟುಗಳು, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ನೆಪ ಮಾತ್ರಕ್ಕೆ ಒಂದಿಷ್ಟು ಭೂಮಿಯನ್ನು ಹೊಂದುವುದರ ಮೂಲಕ  ಬೇಸಾಯದಲ್ಲಿ   ನಷ್ಟವನ್ನು ತೋರುವುದು ಇಲ್ಲವೆ ಕೃಷಿ ಉತ್ಪನ್ನಗಳ ಮೂಲಕ ಲಕ್ಷಾಂತರ ರೂಪಾಯಿ ಆದಾಯವನ್ನು ತೋರಿಸಿ  ತೆರಿಗೆ ವಿನಾಯಿತಿ ಪಡೆಯುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಇಂತಹವರ ಮೇಲೆ ಕಡಿವಾಣ ಹಾಕುವ ಬಗೆ ಹೇಗೆ? ಇದು ನಮ್ಮ ಮುಂದಿರುವ ಸವಾಲು.
ಕೆಲವು ಉದ್ಯಮಿಗಳು ಮತ್ತು ಅಧಿಕಾರಿಗಳು ತಾವು ಹೊಂದಿರುವ ಹತ್ತು ಎಕರೆ ಭೂಮಿಯಲ್ಲಿ ವಾರ್ಷಿಕ  ಐವತ್ತು ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿವರೆಗೂ ಆದಾಯ ತೋರಿಸಿರುವ ಉದಾಹರಣೆಗಳುಂಟು. ಈ ನಕಲಿ ರೈತರು ಭೂಮಿಗೆ ನೋಟುಗಳನ್ನು ಬಿತ್ತಿ ನೋಟುಗಳನ್ನೇ ಫಸಲುಗಳಾಗಿ ಪಡೆದಿರುವಂತೆ ಕಾಣುತ್ತದೆ. ಅತ್ಯಂತ ಶೋಚನೀಯ ಹಾಗೂ ನಿರಾಶಾದಾಯಕವಾಗಿರುವ ಭಾರತದ ಕೃಷಿಯನ್ನು ಉತ್ತೇಜನಗೊಳಿಸಲು ನೀಡಿರುವ ತೆರಿಗೆ ವಿನಾಯಿತಿಯು ಈ ರೀತಿಯಲ್ಲಿ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ಪಾಲಾಗುತ್ತಿರುವುದು ದುರಂತವೇ ಸರಿ.. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.

ಭಾರತದ ಕೃಷಿ ರಂಗದ ಮೇಲೆ ತೆರಿಗೆ ವಿದಿಸಬೇಕೆ? ಬೇಡವೆ? ಈ ಕುರಿತ ಜಿಜ್ಞಾಸೆ ಇಂದು ನಿನ್ನೆಯದಲ್ಲ. ಬಹಳ ವರ್ಷಗಳಿಂದ ಇದು ಚಾಲ್ತಿಯಲ್ಲಿದೆ.  ಇದಕ್ಕೊಂದು ತಾರ್ಕಿಕ ಅಂತ್ಯವನ್ನು ಕಾಣಿಸಬೇಕಾದ ಅಗತ್ಯವಿದೆ..ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಹಲವಾರು ಸಂಸ್ಥಾನಗಳ ದೊರೆಗಳು ಜಮೀನ್ದಾರರ ಮೇಲೆ ತೆರಿಗೆ ಹಾಕುವ ಪದ್ಧತಿಯನ್ನು ಜಾರಿಗೆ ತಂದಿದ್ದರು.. ಸಾವಿರಾರು ಎಕರೆ ಭೂಮಿಯನ್ನು ಹೊಂದಿದ್ದ ಶ್ರೀಮಂತ ಜಮೀನ್ದಾರರು ಸಣ್ಣ ರೈತರಿಗೆ ಗೇಣಿ ಪದ್ಧತಿಯಲ್ಲಿ ಅಥವಾ ನಿರ್ಧಿಷ್ಟ ಪ್ರಮಾಣದ ಪಾಲು ಪಡೆಯುವ ಷರತ್ತಿನ ಮೇಲೆ ಭೂಮಿಯನ್ನು ನೀಡಿ, ಅದರಿಂದ ಬರುತ್ತಿದ್ದ ಲಾಭದಲ್ಲಿ ಸಂಸ್ಥಾನದ ದೊರೆಗಳಿಗೆ ತೆರಿಗೆ ಪಾವತಿ ಮಾಡುತ್ತಿದ್ದರು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಕೂಡ ಇದೇ ಪದ್ಧತಿಯನ್ನು ಅನುಸರಿಸುತ್ತಿತ್ತು. ಆನಂತರ 1925 ರಲ್ಲಿ ಕೃಷಿ ಮೇಲೆ ತೆರಿಗೆ ವಿದಿಸುವ ಸಲುವಾಗಿ ಒಂದು ಸಮಿತಿಯನ್ನು ಸಹ ನೇಮಕ ಮಾಡಿತ್ತು.
ಭಾರತದಲ್ಲಿ 1891 ರಿಂದ 1947 ರ ಅವಧಿಯಲ್ಲಿ ಕೃಷಿಯ ಬೆಳವಣಿಗೆಯನ್ನು ಗಮನಿಸಿದರೆ ಆಶಾದಾಯಕವಾಗಿಲ್ಲ. ವಾರ್ಷಿಕವಾಗಿ ಶೇಕಡ 0.37% ಪ್ರಮಾಣದಲ್ಲಿ ಬೆಳೆದಿದೆ.ಇದರಲ್ಲಿ ಆಹಾರ ಧಾನ್ಯಗಳ ಪ್ರಮಾಣ ಶೇಕಡ 0.11% ರಷ್ಟು ಇದ್ದರೆ, ವಾಣಿಜ್ಯ ಬೆಳೆಗಳ ಪ್ರಮಾಣ ಶೇಕಡ 1.31% ಪ್ರಮಾಣದಲ್ಲಿ ವೃದ್ಧಿಯಾಗಿದೆ.ಇವುಗಳ ನಡುವೆ ದೇಶದ ಜನಸಂಖ್ಯೆಯ ಪ್ರಮಾಣ ಶೇಕಡ 0.67% ರಷ್ಟು ಪ್ರಮಾನದಲ್ಲಿ ಬೆಳದಿದೆ. ಇವೊತ್ತಿಗೂ ಭಾರತದಲ್ಲಿನ ಜನಸಂಖ್ಯೆಯ  ಶೇಕಡ 49.7% ರಷ್ಟು ಮಂದಿ ಕೃಷಿ ರಂಗವನ್ನು ಅವಲಂಬಿಸಿದ್ದಾರೆ.
ಭಾರತದಲ್ಲಿ ಜಾಗತೀಕರಣ ವ್ಯವಸ್ಥೆಯು ಕಾಲಿಟ್ಟ ನಂತರ ನವ ಉದಾರಿಕರಣದ ಯುಗದಲ್ಲಿ  ದೇಶದ ಒಟ್ಟು ಆಂತರೀಕ ಉತ್ಪಾದನೆಯ ( ಜಿ.ಡಿ.ಪಿ.) ಪ್ರಮಾಣದಲ್ಲಿ ಕೃಷಿಯ ಪಾತ್ರ ಗಣನೀಯವಾಗಿ ಕುಸಿಯುತ್ತಾ ಬಂದಿದೆ. 1991 ರಲ್ಲಿ ಕೃಷಿಯ ಪಾತ್ರವು  ಜಿ.ಡಿ.ಪಿ.ಯಲ್ಲಿ ಶೇಕಡ 32% ರಷ್ಟು ಇದ್ದದ್ದು 2016 ರ ವೇಳೆಗೆ ಕೇವಲ ಶೇಕಡ 15% ಕ್ಕೆ ಕುಸಿದಿದೆ. ಈ ಅಂಕಿ ಅಂಶಗಳು ಭಾರತದಲ್ಲಿ ಕೃಷಿ ಲೋಕವು ಶೋಚನೀಯ ಸ್ಥಿತಿಯಲ್ಲಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಈ ಕಾರಣಕ್ಕಾಗಿ  ಕೃಷಿ ಮೇಲಿನ ತೆರಿಗೆ ಎಷ್ಟರ ಮಟ್ಟಿಗೆ ಸೂಕ್ತ ಎಂಬ ಪ್ರಶ್ನೆ ಉದ್ಭವವಾಗುತ್ತದೆ.  ಪ್ರಖ್ಯಾತ ಆರ್ಥಿಕ ವಿದ್ವಾಂಸರಾಗಿದ್ದ ಡಾ.ಅಂಬೆಡ್ಕರ್ ರವರೂ ಸಹ ಕೃಷಿ ಮೇಲೆ ತೆರಿಗೆ ವಿಧಿಸಬೇಕೆಂದು ಸಲಹೆ ನೀಡಿದ್ದರು. ಎರಡರಿಂದ ಐದು ಹೆಕ್ಟೇರ್ ಭೂಮಿ  ( ಒಂದು ಹೆಕ್ಟೇರ್ ಅಂದರೆ ಎರಡೂವರೆ ಎಕರೆ ಭೂಮಿ ಅಥವಾ 100 ಗುಂಟೆ ಜಮೀನು) ಹೊಂದಿರುವ ರೈತರನ್ನು ತೆರಿಗೆಯಿಂದ ಹೊರತು ಪಡಿಸಿ, ಶ್ರೀಮಂತ ಜಮೀನ್ದಾರರ ಮೇಲೆ ತೆರಿಗೆ ವಿಧಿಸಬಹುದು ಎಂಬುವುದು ಅವರ ನಿಲುವಾಗಿತ್ತು.
ಸ್ವಾತಂತ್ರ್ಯಾನಂತರ 1972 ರಲ್ಲಿ ಕೇಂದ್ರ ಸರ್ಕಾರವು ನೇಮಿಸಿದ್ದ ಕೆ.ಎನ್. ರಾಜಾ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ, ಅಂಬೇಡ್ಕರ್ ಮಾದರಿಯಲ್ಲಿ ಸಲಹೆಯನ್ನು ನೀಡಿತ್ತು. ಆನಂತರ 2002 ರಲ್ಲಿ ನೇಮಕವಾಗಿದ್ದ ಕೇಲ್ಕರ್ ಸಮಿತಿಯು ಶೇಕಡ 95 ರಷ್ಟು ಮಂದಿ ರೈತರು ಪಾರಂಪರಿಕವಾಗಿ ಕೃಷಿಯನ್ನು ಅವಲಬಿಸಿದ್ದು ತೆರಿಗೆಗೆ ಒಳಪಡಲಾರದಷ್ಟು ಕನಿಷ್ಟ ಆದಾಯ ಪಡೆಯುತ್ತಿದ್ದಾರೆ ಎಂಬ ವರದಿಯನ್ನು ನೀಡಿತ್ತು. 2012 ರಲ್ಲಿ ಭಾರತದಲ್ಲಿ ಪ್ರತಿಯಂದು ರೈತ ಕುಟುಂಬದ ಮಾಸಿಕ ಸರಾಸರಿ ಆದಾಯ ಕೇವಲ 6.491 ರುಪಾಯಿ ಇತ್ತು. ಅಂದರೆ ವರ್ಷಕ್ಕೆ ರೈತನೊಬ್ಬನ ಆದಾಯ 75 ಸಾವಿರ ರೂಪಾಯಿ ದಾಟಲಾರದಷ್ಟು ಶೋಚನೀಯ ಸ್ಥಿತಿಯಲ್ಲಿದೆ.
ಈಗ ಕೇಂದ್ರ ಸರ್ಕಾರವು ಗುರುತಿಸಿರುವ ದೊಡ್ಡ ಪ್ರಮಾಣದ ರೈತರು ಮತ್ತು ಶ್ರೀಮಂತ ಪ್ಲಾಂಟೇಶನ್  ಮಾಲೀಕರು  ಇವರುಗಳ  ಸಂಖ್ಯೆ  9 ಲಕ್ಷದ 73 ಸಾವಿರ ಎಂದು ಅಂದಾಜಿಸಲಾಗಿದೆ. ಇವರೆಲ್ಲರೂ ವಾರ್ಷಿಕವಾಗಿ ಐದು ಲಕ್ಷ ರೂಪಾಯಿಗೂ ಮೇಲ್ಪಟ್ಟು ಆದಾಯ ಪಡೆಯುತ್ತಿದ್ದಾರೆ. ಇವರಿಗೆ ತೆರಿಗೆ ವಿಧಿಸಿದರೆ,  ಕೇಂದ್ರ ಸರ್ಕಾರಕ್ಕೆ ಸಿಗಬಹುದಾದ ವಾರ್ಷಿಕ ಆದಾಯ 1.200 ಕೊಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಲ್ಲಿ ತೆರಿಗೆ ವಿಧಿಸುವ ಮುನ್ನ ಸರ್ಕಾರವು ಮಳೆಯಾಶ್ರಿತ ಒಣ ಭೂಮಿಯ ರೈತರಿಗೆ ರಿಯಾಯಿತಿಯನ್ನು ನೀಡಲೇ ಬೇಕಾಗುತ್ತದೆ. ಕೇವಲ ಮಳೆಯನ್ನು ನಂಬಿ ಬದುಕುವ ಇಂತಹ ರೈತರು ಒಮ್ಮೊಮ್ಮೆ ಎರಡು ಮೂರು ವರ್ಷಗಳ ಕಾಲ ಮಳೆ ಇಲ್ಲದೆ ಬದುಕುವ ಸ್ಥಿತಿ ಇರುತ್ತದೆ. ಜೊತೆಗೆ ನೀರಾವರಿ ಅಥವಾ ವಾಣಿಜ್ಯ ಬೆಳೆ ಬೆಳೆದು ಲಾಬ ತೋರಿಸುತ್ತಿರುವ ರೈತರಲ್ಲಿ ಪಾರಂಪರಿಕವಾಗಿ  ಕೃಷಿಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ರೈತರು ಮತ್ತು ಬೇರೆ ವೃತ್ತಿ ಅಥವಾ ಉದ್ಯೋಗದಲ್ಲಿ ಇದ್ದುಕೊಂಡು ಇತ್ತೀಚೆಗಿನ ವರ್ಷಗಳಲ್ಲಿ ಭೂಮಿಯನ್ನು ಖರೀದಿಸಿ  ರೈತರೆಂಬ ಮುಖವಾಡ ಹಾಕಿಕೊಂಡಿರುವ ಖದೀಮರನ್ನು ಸರ್ಕಾರವು ನಿಖರವಾಗಿ ಗುರುತಿಸಬೇಕು. ಪಾರಂಪರಿಕ ಕೃಷಿಕರಿಗೆ ಐದರ ಬದಲು ಹತ್ತು ಲಕ್ಷ ರೂಪಾಯಿವರೆಗೆ ವರೆಗೆ ವಿನಾಯಿತಿ ನೀಡುವುದು ಒಳಿತು.
ಇವೆಲ್ಲಕ್ಕಿಂತ ಮಿಗಿಲಾಗಿ ಸರ್ಕಾರಗಳು ಕೃಷಿ ರಂಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲು ತಮ್ಮ ಯೋಜನೆಗಳಲ್ಲಿ ಆದ್ಯತೆ ನೀಡಬೆಕು. ಭಾರತದ ಯಾವುದೇ ಭಾಗದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಲೆಯನ್ನು ನಿಗದಿ ಪಡಿಸುವುದರ ಮೂಲಕ  ಎಂತಹದ್ದೇ ಸಮಯದಲ್ಲೂ  ನಿಗದಿ ಪಡಿಸಿದ ಬೆಲೆಗಿಂತ ಕಡಿಮೆ ದರದಲ್ಲಿ ದಲ್ಲಾಳಿಗಳು ಅಥವಾ ಸಗಟು ಮಾರಾಟಗಾರರು ಕೊಳ್ಳುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತರಬೇಕಿದೆ.
ನಾವು ಬದುಕುತ್ತಿರುವ  ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಎಂತಹ ವಿಸ್ಮೃತಿಗೆ ದೂಡಲ್ಪಟ್ಟಿದ್ದೀವಿ ಎಂದರೆ, ಮಲ್ಟಿಪ್ಲೆಕ್ಸ್ ಥಿಯಟರ್ ಗಳಲ್ಲಿ  ಅಥವಾ ಮಾಲ್ ಗಳಲ್ಲಿ ಒಂದು ಲೀಟರ್ ನೀರಿಗೆ 50 ರೂಪಾಯಿ ನೀಡಲು ಸಿದ್ದರಿದ್ದೀವಿ. ಆದರೆ, ರೈತನಿಗೆ ಒಂದು ಲೀಟರ್ ಹಾಲಿಗೆ 30 ರೂಪಾಯಿ ನೀಡಲು ಸಿಡಿಮಿಡಿಗೊಳ್ಳುತ್ತೇವೆ. ಹೋಟೆಲ್ ಗಳಲ್ಲಿ ಒಂದು ಬಟ್ಟಲು ಟಮೊಟೊ ಸೂಪ್ ಕುಡಿದು  ಸದ್ದಿಲ್ಲದೆ 60 ರೂಪಾಯಿ ಪಾವತಿಸುತ್ತೇವೆ. ಆದರೆ, ರೈತ ಬೆಳೆದ ಒಂದು  ಕೆ.ಜಿ. ಟಮೋಟೊ ಗೆ ಹತ್ತು ರೂಪಾಯಿ  ದರ ನೀಡಲು ಹೊಟ್ಟೆಯಲ್ಲಿ ಮಗು ಸತ್ತವರಂತೆ ವರ್ತಿಸುತ್ತೇವೆ. ಕೃಷಿ ಮತ್ತು ಕೃಷಿಕರ ಕುರಿತು ನಮ್ಮ ಧೋರಣೆಗಳು ಎಲ್ಲಿಯವರೆಗೆ ಬದಲಾಗುವುದಿಲ್ಲವೋ, ಅಲ್ಲಿಯವರೆಗೆ  ಈ ದೇಶದ ಕೃಷಿರಂಗಕ್ಕೆ ಭವಿಷ್ಯವಿಲ್ಲ ಎಂಬುವುದು ಸಾರ್ವಕಾಲಿಕ ಸತ್ಯವಾಗಿದೆ. ಈ ಕಾರಣಕ್ಕಾಗಿ ರೈತನ ಮಗ ರೈತನಾಗುವ ಕಾಲ ದೂರ ಸರಿದು ಹಲವು ವರ್ಷಗಳಾದವು. ಎಲ್ಲರೂ ಕೃಷಿಯಿಂದ ವಿಮುಖರಾಗುತ್ತಿರುವ ಈ ದಿನಮಾನಗಳಲ್ಲಿ  ಕೃಷಿಯ ತೆರಿಗೆ ಹಾಕುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದುರ ಕುರುತು ಗಂಬೀರ ಆಲೋಚನೆಯ ಜೊತೆಗೆ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ.
( ಮಾಹಿತಿ ಸೌಜನ್ಯ- ಹಿಂದೂ.ದಿನಪತ್ರಿಕೆ, ಚಿತ್ಗಳು-ಸೌಜನ್ಯ-  ಇಂಡಿಯನ್ ಎಕ್ಸ್ ಪ್ರಸ್ ಮತ್ತು ಟೈಮ್ಸ್ ಆಫ್ ಇಂಡಿಯಾ)


( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣಕ್ಕೆ ನರೆದ ಲೇಖನ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ